ಇದು 1916ರ ಮೇ 9 ರಂದು ಅಮೆರಿಕೆಯ ನ್ಯೂರ್ಯಾಕಿನ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ನಡೆದ ಡಾ. ಎ. ಎ. ಗೋಲ್ಡನ್ ವೀಜರ್ ಸಂಸ್ಮರಣಾರ್ಥಕ, ಮಾನವಕುಲಶಾಸ್ತ್ರ ವಿಚಾರ ಸಂಕಿರಣದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಮಂಡಿಸಿದ ಪ್ರಬಂಧ
ಪ್ರಕಟಣೆ: ಇಂಡಿಯನ್ ಆ್ಯಂಟಿಕ್ಟರಿ, ಮೇ ೧೯೧೭, ಸಂಪುಟ: XLI
ಭಾರತದಲ್ಲಿ ಜಾತಿಗಳು
ಮಾನವನ ನಾಗರಿಕತೆಯ ಒಟ್ಟು ಮೊತ್ತವನ್ನು ಗ್ರಹಿಸಲು ಭೌತಿಕ ವಸ್ತುಗಳನ್ನು ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯವಾಗಿ ಅರ್ಥ ವಿವರಣೆಗಳಿಗೆ ಬಳಸಿಕೊಂಡಿರುವುದನ್ನು ನಮ್ಮಲ್ಲಿ ಹೆಚ್ಚಿನ ಮಂದಿ ಗಮನಿಸಿದ್ದೇವೆಂದು ಧೈರ್ಯದಿಂದ ಹೇಳಬಲ್ಲೆ. ಮಾನವ ನಿರ್ಮಿತ ಸಾಮಾಜಿಕ ಏರ್ಪಾಡುಗಳನ್ನು (institutions. ಇದನ್ನು ಕನ್ನಡದ ಸಮಾಜಶಾಸ್ತ್ರ ಪಠ್ಯಗಳಲ್ಲಿ ‘ಸಂಸ್ಥೆ’ ಎನ್ನಲಾಗುತ್ತಿದೆ – ಅನುವಾದಕ) ಈ ತರಹದ ವಿಶ್ಲೇಷಣೆಗೆ ಉಪಯೋಗಿಸಲು ಸಾಧ್ಯವೆಂಬ ವಿಚಾರವನ್ನು ಸ್ವೀಕರಿಸುವವರು ಇಲ್ಲವೆಂದೇ ಹೇಳಬಹುದು. ಮನುಕುಲದ ಸಾಮಾಜಿಕ ಏರ್ಪಾಡುಗಳನ್ನು ಈ ನಿಟ್ಟಿನಲ್ಲಿ ಮುಂದಿಡುವುದು ಒಂದು ವಿಚಿತ್ರ ಆಲೋಚನೆ: ಕೆಲವರು ಇದನ್ನು ಕ್ರೂರಾತಿಕ್ರೂರ ಪರಿಕಲ್ಪನೆಯೆಂದು ಕರೆಯಬಹುದು. ಆದರೆ ಮನುಕುಲಶಾಸ್ತ್ರದ ವಿದ್ಯಾರ್ಥಿಗಳಾದ ನೀವು ಈ ವಿಧಾನದ ಆವಿಷ್ಕಾರದ ಬಗ್ಗೆ ಕಠಿಣ ನಿಲುವನ್ನು ತಳೆಯಲಾರಿರಿ. ಯಾಕೆಂದರೆ ಅದು ಕಠಿಣಕರವಾದುದಲ್ಲ, ಮತ್ತು ನಿಮಗಂತೂ ಅದು ಕಷ್ಟಕರವಾಗಿ ಗೋಚರಿಸದು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಪಾಂಪೇಯಿಯ ಭಗ್ನಾವಶೇಷ ತರಹದ ಕೆಲವು ಚಾರಿತ್ರಿಕ ಸ್ಥಳವನ್ನು ನೀವೆಲ್ಲ ಸಂದರ್ಶಿಸಿರಬೇಕೆಂದು ಮತ್ತು ಮಾರ್ಗದರ್ಶಿಯ ನುಣುಪು ನಾಲಗೆಯಿಂದ ಪ್ರವಹಿಸಿದ ರೀತಿಯಲ್ಲಿ ಆ ಅವಶೇಷಗಳ ಇತಿಹಾಸವನ್ನು ಕೇಳಿರಬೇಕೆಂದು ನನ್ನ ನಂಬಿಕೆ. ಮನುಕುಲಶಾಸ್ತ್ರದ ವಿದ್ಯಾರ್ಥಿಯೂ ಒಂದರ್ಥದಲ್ಲಿ ಮಾರ್ಗದರ್ಶಿ ಇದ್ದಂತೆ. ತನ್ನ ಮೂಲ ಸ್ವರೂಪದಂತೆ (ಬಹುಶಃ ಇನ್ನೂ ಹೆಚ್ಚು ಹೊಣೆಗಾರಿಕೆಯಿಂದ ಮತ್ತು ಸ್ವಯಂ ಕಲಿಕೆಯ ಆಸಕ್ತಿಯಿಂದ) ಆತ ಸಾಮಾಜಿಕ ಏರ್ಪಾಡುಗಳನ್ನು ಮಾನವಸಾಧ್ಯ ವಸ್ತುನಿಷ್ಠತೆಯಿಂದ ಗ್ರಹಿಸಲು ಮತ್ತು ಅದರ ಉಗಮ ಹಾಗೂ ಕಾರ್ಯವಿಧಾನಗಳನ್ನು ಪರಿಶೀಲಿಸಲು ಎತ್ತಿಕೊಳ್ಳುತ್ತಾನೆ.
ಆದಿಮ ಮತ್ತು ಆಧುನಿಕ ಸಮಾಜ ಮುಖಾಮುಖಿಯಾಗುವ ಸಂಬಂಧದ ಈ ವಿಚಾರ ಸಂಕಿರಣದ ಬಹುತೇಕ ನಮ್ಮ ಸಂಗಾತಿ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವಾದ, ಪ್ರಾಚೀನ ಅಥವಾ ಇಂದಿನ, ವಿವಿಧ ವ್ಯವಸ್ಥೆಗಳ ಬಗ್ಗೆ ಸ್ವಚ್ಛವಾದ ವ್ಯಾಖ್ಯಾನವನ್ನು ಕೊಡುವ ಮೂಲಕ ಈ ದಿಶೆಯಲ್ಲಿ ಯಶಸ್ವಿಯಾಗಿದ್ದಾರೆ. ‘ಭಾರತದಲ್ಲಿ ಜಾತಿಗಳು: ಅವುಗಳ ರಚನಾಕ್ರಮ, ಹುಟ್ಟು ಮತ್ತು ಬೆಳವಣಿಗೆ’ ಎನ್ನುವ ಪ್ರಬಂಧವನ್ನು ಈ ಸಂಜೆ ನಿಮ್ಮ ಮುಂದಿಟ್ಟು ಕೈಲಾದ ಮಟ್ಟಿಗೆ ರಂಜಿಸುವ ಸರದಿ ಇದೀಗ ನನ್ನದು.

ನಾನೀಗ ನಿರ್ವಹಿಸಬೇಕಿರುವ ವಿಷಯದ ಸಂಕೀರ್ಣತೆಯ ಬಗ್ಗೆ ನಿಮಗೆ ನೆನಪಿಸಬೇಕಾದ ಅಗತ್ಯವಿಲ್ಲ. ಜಾತಿಯ ನಿಗೂಢತೆಯ ಸಿಕ್ಕುಗಳನ್ನು ಬಿಡಿಸಲು ನನಗಿಂತಲೂ ಸೂಕ್ಷ್ಮ ಮನಸ್ಸುಗಳನ್ನು, ಸಮರ್ಥ ಲೇಖನಿಗಳನ್ನು ಕರೆತರಲಾಗಿತ್ತು. ಆದರೆ ದುರದೃಷ್ಟವಶಾತ್ ಅದು ಇನ್ನೂ ‘ವ್ಯಾಖ್ಯಾನಿಸದ’ ಸಾಮ್ರಾಜ್ಯದಲ್ಲಿದೆ. ‘ಅರ್ಥವಾಗದ’ ಸಾಮ್ರಾಜ್ಯ ಎನ್ನುವುದನ್ನು ಮತ್ತೆ ಹೇಳಬೇಕಿಲ್ಲ. ಜಾತಿಯಂಥ ಒಂದು ಮುದಿ ಪದ್ಧತಿಯ ಸಂಕೀರ್ಣ ತೊಡಕುಗಳ ಬಗ್ಗೆ ನಾನು ಸಾಕಷ್ಟು ಎಚ್ಚರದಿಂದಿದ್ದೇನೆ. ಆದರೆ ಅದನ್ನು ತಿಳಿದುಕೊಳ್ಳಲಸಾಧ್ಯವಾದ ಲೋಕಕ್ಕೆ ದಾಟಿಸುವಷ್ಟು ನಿರಾಶಾವಾದಿ ನಾನಲ್ಲ. ಯಾಕೆಂದರೆ ಅದನ್ನು ಅರ್ಥ ಮಾಡಿಕೊಳ್ಳಬಹುದೆಂದು ನಾನು ನಂಬುತ್ತೇನೆ. ಸೈದ್ಧಾಂತಿಕವಾಗಿಯೂ, ಪ್ರಾಯೋಗಿಕವಾಗಿಯೂ ಜಾತಿ ಸಮಸ್ಯೆಯು ಅಗಾಧವಾದುದು. (ಪು.5)

ವಸ್ತುಶಃ ಅದು ಭಯಾನಕ ಪರಿಣಾಮಗಳ ಬಗ್ಗೆ ಮುಂದಾಗಿ ಎಚ್ಚರಿಕೆ ಕೊಡುವ ಒಂದು ವ್ಯವಸ್ಥೆಯಾಗಿದೆ. ಅದು ಸ್ಥಳೀಯ ಸಮಸ್ಯೆಯಾದರೂ ವ್ಯಾಪಕವಾದ ಕೇಡು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಯಾಕೆಂದರೆ ಭಾರತದಲ್ಲಿ ಜಾತಿ ಇರುವವರೆಗೂ ಹಿಂದೂಗಳು ಅಂತರ್ಜಾತೀಯ ವಿವಾಹವಾಗಲಾರರು ಅಥವಾ ಹೊರಗಿನವರೊಂದಿಗೆ ಸಾಮಾಜಿಕ ಸಂಬಂಧ ಮಾಡಲಾರರು; ಹಿಂದೂಗಳು ಪ್ರಪಂಚದ ಬೇರೆ ಭಾಗಗಳಿಗೆ ವಲಸೆ ಹೋದರೆ ಭಾರತದ ಜಾತಿಯು ಒಂದು ಜಾಗತಿಕ ಸಮಸ್ಯೆಯಾಗಿ ಪರಿಣಮಿಸುತ್ತದೆ. (ಕೇತ್ಕರ್, ಕ್ಯಾಸ್ಟ್, ಪುಟ 4) ವಾಸ್ತವದಲ್ಲಿ, ಜಾತಿಯ ಹುಟ್ಟಿನ ಬಗ್ಗೆ ಅದೊಂದು ಪ್ರೀತಿಯ ಕೆಲಸವೆಂದು ತಿಳಿದು ಬಗೆದು ನೋಡಲು ಪ್ರಯತ್ನಿಸಿದ ಬಹುಮಂದಿ ವಿದ್ವಾಂಸರನ್ನು ಅದು ತುಚ್ಛೀಕರಿಸಿದೆ. ಪರಿಸ್ಥಿತಿಯು ಹೀಗಿರುವುದರಿಂದ. ನಾನು ಈ ಸಮಸ್ಯೆಯನ್ನು ಸಮಗ್ರವಾಗಿ ಪರಿಶೀಲಿಸಲಾರೆ. ಹಾಗೆ ಮಾಡುವುದಕ್ಕೆ ಹೊರಟರೆ ಕಾಲ, ಸ್ಥಳಾವಕಾಶ ಮತ್ತು ಪ್ರತಿಭೆ ಇವೆಲ್ಲಾ ನನ್ನನ್ನು ನಿಷ್ಪಲಗೊಳಿಸುತ್ತವೆಂಬ ಆತಂಕ ನನಗಿದೆ. ಆದುದರಿಂದ ನನ್ನ ವಿವರಣೆಯನ್ನು ಸಮಸ್ಯೆಯ ಒಂದು ವಲಯವಾದ ಜಾತಿ ವ್ಯವಸ್ಥೆಯ ಉಗಮ, ಕಾರ್ಯವಿಧಾನ ಮತ್ತು ಹರಹು ಇದಷ್ಟಕ್ಕೇ ಸೀಮಿತಗೊಳಿಸುತ್ತೇನೆ. ಈ ಪ್ರಬಂಧದಲ್ಲಿ ಯಾವುದಾದರೂ ಒಂದು ಅಂಶವನ್ನು ಸ್ಪಷ್ಟೀಕರಿಸಬೇಕಾದರೆ ಅಥವಾ ಪುಷ್ಟೀಕರಿಸಬೇಕಾದರೆ ಮಾತ್ರ ಹೊರಗಿನ ಸಂಗತಿಗಳನ್ನು ಕುರಿತು ಪ್ರಸ್ತಾಪಿಸುತ್ತೇನೆಯೇ ಹೊರತು ಉಳಿದಂತೆ ಈ ನಿಯಮವನ್ನು ನಾನು ಕಟ್ಟುನಿಟ್ಟಾಗಿ ಪಾಲಿಸುತ್ತೇನೆ.
ವಿಷಯದೊಂದಿಗೆ ಮುಂದಕ್ಕೆ ಸಾಗೋಣ. ಪ್ರಸಿದ್ಧ ಮಾನವಕುಲಶಾಸ್ತ್ರಜ್ಞರ ಪ್ರಕಾರ ಭಾರತದ ಜನತೆ ಆರ್ಯ, ಡ್ರಾವಿಡ, ಮಂಗೋಲ ಮತ್ತು ಸಿಥಿಯನ್ನರ ಸಂಮಿಶ್ರಣವಾಗಿದೆ. ಈ ಜನಾಂಗದವರೆಲ್ಲ ಬುಡಕಟ್ಟು ಸ್ಥಿತಿಯಲ್ಲಿದ್ದಾಗಲೇ ತಮ್ಮೆಲ್ಲ ವೈವಿಧ್ಯಮಯ ಸಂಸ್ಕೃತಿಗಳೊಂದಿಗೆ ಹಲವು ಶತಮಾನಗಳ ಹಿಂದೆ ಭಾರತಕ್ಕೆ ನಾನಾ ದಿಕ್ಕುಗಳಿಂದ ಬಂದರು. ಮುಂಚಿನಿಂದ ಇಲ್ಲಿದ್ದ ಜನರೊಂದಿಗೆ ಹೋರಾಡುತ್ತ ಅವರನ್ನು ತಳ್ಳಿಕೊಂಡು ಭಾರತ ದೇಶದೊಳಕ್ಕೆ ಪ್ರವೇಶಿಸಿದರು. ಮತ್ತು ನಂತರದ ದಿನ ಅವರು ಸೌಹಾರ್ದಯುತ ನೆರೆಹೊರೆಯವರಂತೆ ಶಾಶ್ವತವಾಗಿ ನೆಲಸಿದರು. ನಿರಂತರ ಸಂಪರ್ಕದಿಂದಲೂ ಪರಸ್ಪರ ವ್ಯವಹಾರ ಸಂಬಂಧದಿಂದಲೂ ಅವರು ತಮ್ಮ ಸಂಸ್ಕೃತಿಗಳ ಅನನ್ಯತೆಯಿಂದ ಕಳಚಿಕೊಂಡು ಸಮಾನ ಸಂಸ್ಕೃತಿಯೊಂದನ್ನು ರೂಪಿಸಿಕೊಂಡರು. ಆದರೆ ಭಾರತದ ಜನಸಮುದಾಯ ಇಂತಹ ವಿವಿಧ ಕುಲಗಳ ಪರಿಪೂರ್ಣ ಮಿಶ್ರಣವಲ್ಲವೆಂಬುದನ್ನು ಒಪ್ಪಬಹುದು. ಭಾರತದ ಪೂರ್ವದವನಿಗೂ, ಪಶ್ಚಿಮದವನಿಗೂ ಮತ್ತು ದಕ್ಷಿಣದವನಿಗೂ, ಉತ್ತರದವನಿಗೂ ದೈಹಿಕ ಲಕ್ಷಣ ಹಾಗೂ ಮೈ ಬಣ್ಣದಲ್ಲಿ ಎದ್ದು ಕಾಣುವ ವೈದೃಶ್ಯಗಳಿವೆ ಎಂಬುದು ಭಾರತದ ಪ್ರವಾಸಿಗೆ ಕಾಣಿಸುತ್ತದೆ. ನಿರೀಕ್ಷೆಗೆ ಅನುಗುಣವಾಗಿ ಸಮುದಾಯವೊಂದರ ಏಕಸ್ವರೂಪಕ್ಕೆ ಸಂಮಿಶ್ರಣಗೊಳ್ಳುವಿಕೆಯೊಂದೇ ಅಳತೆಗೋಲು ಆಗಲಾರದು. ಜನಾಂಗೀಯವಾಗಿ ಎಲ್ಲರೂ ವಿಭಿನ್ನ ಸ್ವರೂಪಕ್ಕೆ ಸೇರಿದವರು. ಸಮಾನತೆಯ ಮಾಪನವೆಂದರೆ ಸಾಂಸ್ಕೃತಿಕ ಒಗ್ಗಟ್ಟು. ಇದನ್ನು ಒಪ್ಪಿಕೊಂಡಲ್ಲಿ, ಸಾಂಸ್ಕೃತಿಕ ಅಖಂಡತೆಯ ವಿಚಾರದಲ್ಲಿ ಭಾರತ ದ್ವೀಪಕಲ್ಪವನ್ನು ಮೀರಿಸುವ ಮತ್ತೊಂದು ದೇಶವಿಲ್ಲವೆಂದು ಹೇಳುವ ಧೈರ್ಯವನ್ನು ಮಾಡುತ್ತೇನೆ. ಭಾರತದಲ್ಲಿರುವುದು ಭೌಗೋಳಿಕವಾದ ಏಕರೂಪತೆ ಮಾತ್ರವಲ್ಲ. ಇದೆಲ್ಲಕ್ಕೂ ಮೀರಿ, ಆಳವೂ ಮೂಲಭೂತವೂ ಆದ ಒಂದು ಒಗ್ಗಟ್ಟಿದೆ. ಅದೆಂದರೆ ದೇಶವನ್ನು ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಅಚ್ಛಾದಿಸಿರುವ ಸಾಂಸ್ಕೃತಿಕ ಅಖಂಡತೆ. ಆದರೆ ಈ ಏಕರೂಪತೆಯಿಂದಾಗಿಯೇ ಜಾತಿ ಎಂಬುದು ವಿವರಿಸಲು ತುಂಬ ಕ್ಲಿಷ್ಟವಾದ ಒಂದು ಸಮಸ್ಯೆಯಾಗಿರುವುದು. (ಪುಟ 6)
ಹಿಂದೂ ಸಮಾಜವೆಂಬುದು ಕೇವಲ ಪರಸ್ಪರ ಪ್ರತ್ಯೇಕವಾಗಿರುವ ಘಟಕಗಳ ಒಂದು ಒಕ್ಕೂಟವಾಗಿದ್ದಲ್ಲಿ ಈ ವಿಷಯ ಸರಳವಾಗಿರುತ್ತಿತ್ತು. ಆದರೆ ಜಾತಿಯೆಂಬುದು ಆಗಲೇ ಸಮರೂಪಧಾರಣೆ ಮಾಡಿರುವ ಘಟಕಗಳ ವಿಂಗಡಣೆಯಾಗಿದೆ. ಜಾತಿ ಮೂಲದ ಕುರಿತ ವಿವರಣೆಯೆಂಬುದು ಈ ವಿಂಗಡಣೆಯ ಪ್ರಕ್ರಿಯೆಯ ವಿವರಣೆಯೂ ಆಗಿದೆ.
ನಮ್ಮ ಈ ಅಧ್ಯಯನ ಕ್ಷೇತ್ರದ ಪರಿಶೀಲನೆಗೆ ತೊಡಗುವ ಮೊದಲು ಜಾತಿಯ ಸ್ವರೂಪದ ಕುರಿತು ನಾವು ತಿಳಿದುಕೊಳ್ಳುವುದು ಒಳ್ಳೆಯದು. ಆದುದರಿಂದ ನಾನು ಜಾತಿಯ ಕೆಲವು ಅತ್ಯುತ್ತಮ ಅಭ್ಯಾಸಿಗಳ ಮಾತುಗಳನ್ನು ಇಲ್ಲಿ ನಿರೂಪಿಸುತ್ತೇನೆ:
(೧) ಸೆನಾರ್ಟ್ ಎಂಬೊಬ್ಬ ಫ್ರೆಂಚ್ ಅಧಿಕಾರಿಯು ಮಾಡಿದ ಜಾತಿಯ ವ್ಯಾಖ್ಯಾನದ ಪ್ರಕಾರ, “ಅದು ಒಂದು ಒಟ್ಟಾಗಿ ಹೆಣೆದ ಸಂಸ್ಥೆ, ಸೈದ್ಧಾಂತಿಕವಾಗಿ ಯಾವುದೇ ಕಾರಣಕ್ಕೂ ಕಠಿಣವಾದ ಅನುವಂಶೀಯತೆಯನ್ನು ಪಡೆದಿರುವಂಥದ್ದು: ಸಮಗ್ರ ಅಧಿಕಾರ ಹೊಂದಿರುವ ಒಬ್ಬ ಮುಖ್ಯಸ್ಥ ಮತ್ತು ಮಂಡಳಿಯನ್ನು ಹೊಂದಿರುವ ಸಾಂಪ್ರದಾಯಿಕವಾದ ಮತ್ತು ಪ್ರತ್ಯೇಕವಾದ ಸಂಘಟನೆಯಾಗಿದ್ದು ಹಬ್ಬಹರಿದಿನಗಳಲ್ಲಿ ಒಟ್ಟಿಗೆ ಸೇರುವ, ಒಂದೇ ಬಗೆಯ ಕುಲಕಸುಬಿಗೆ ಸಂಬಂಧಿಸಿದ, ಅದೂ ಮದುವೆ, ಆಹಾರ ಮತ್ತು ಆಚರಣೆಗೆ ಸಂಬಂಧಿಸಿದ ನಿಷೇಧಗಳನ್ನು ಒಳಗೊಂಡಂಥ, ಮತ್ತು ಒಂದು ಕಾರ್ಯಪ್ರದೇಶದೊಳಗೆ ಇರುವ ಜನರ ಮೇಲೆ ದಂಡ ಅಥವಾ ಬಹಿಷ್ಕಾರ ಹಾಕುವ ಪರಮಾಧಿಕಾರವುಳ್ಳ ಒಂದು ವ್ಯವಸ್ಥೆ”.
(೨) ನೆಸ್ ಫೀಲ್ಡರ ಪ್ರಕಾರ ಜಾತಿ ಎಂದರೆ, “ಸಮಾಜದ ಒಂದು ಗುಂಪು. ಇದು ಯಾವುದೇ ಇನ್ನೊಂದು ಗುಂಪಿನೊಂದಿಗೆ ಯಾವುದೇ ಸಂಬಂಧವನ್ನು ನಿರಾಕರಿಸುತ್ತದೆ. ತಮ್ಮದೇ ಆದ ಒಂದು ಸಮಾಜಕ್ಕೆ ಸೇರಿದ ವ್ಯಕ್ತಿಗಳ ಹೊರತಾಗಿ ಬೇರೆಯವರೊಂದಿಗೆ ಮದುವೆಯಾಗುವಂತಿಲ್ಲ, ತಿನ್ನುವಂತಿಲ್ಲ. ಕುಡಿಯುವಂತಿಲ್ಲ.”
(೩) ಸರ್.ಎಚ್.ರಿಸ್ಲೆಯವರ ಪ್ರಕಾರ, “ಜಾತಿಯನ್ನು ಸಮಾನ ಹೆಸರುಗಳಿರುವ ಕುಟುಂಬಗಳ ಸಮೂಹ ಅಥವಾ ಹಲವು ಕುಟುಂಬಗಳಿರುವ ಒಕ್ಕೂಟವೆಂದು ವ್ಯಾಖ್ಯಾನಿಸಬಹುದು. ಈ ಸಮಾನ ಹೆಸರುಗಳು ಸಾಮಾನ್ಯವಾಗಿ ಕುಲಕಸುಬನ್ನು ಸೂಚಿಸುತ್ತವೆ. ಈ ಹೆಸರುಗಳು ಮಾನವ ಅಥವಾ ದೈವಿಕ ಪುರುಷನಾದ ಪೌರಾಣಿಕ ಪೂರ್ವಜರಿಂದ ಬಂದಿರುವುದಾಗಿ ಹೇಳಿಕೊಳ್ಳುತ್ತಾರೆ. ಈ ಬಗ್ಗೆ ಅಭಿಪ್ರಾಯ ಕೊಡಬಲ್ಲ ಅರ್ಹತೆಯಿರುವವರು ಕೂಡ ಈ ಹೆಸರುಗಳನ್ನು ಒಂದು ಏಕರೂಪ ಸಮಾಜಕ್ಕೆ ಸೇರಿದ್ದೆಂದು ಗ್ರಹಿಸುತ್ತಾರೆ.”
(೪) ಡಾ. ಕೇತ್ಕರ್ ಅವರು ಜಾತಿಯನ್ನು ವಿವರಿಸಿರುವುದು ಹೀಗೆ, “ಅದು ಎರಡು ಲಕ್ಷಣಗಳನ್ನು ಪಡೆದಿರುವ ಒಂದು ಸಾಮಾಜಿಕ ಗುಂಪು : (i) ಸದಸ್ಯತ್ವವು ಸದಸ್ಯರಿಂದ ಹುಟ್ಟಿದವರಿಗಷ್ಟೇ ಸೀಮಿತವಾಗಿದ್ದು, ಹಾಗೆ ಹುಟ್ಟಿದವರನ್ನೆಲ್ಲ ಒಳಗೊಂಡಿರುತ್ತದೆ. (ii) ಸದಸ್ಯರು ತಮ್ಮ ಗುಂಪಿನಿಂದ ಹೊರಗಿನವರನ್ನು ಮದುವೆಯಾಗುವುದನ್ನು ಉಲ್ಲಂಘಿಸಲಸಾಧ್ಯವಾದ ಸಾಮಾಜಿಕ ಕಟ್ಟಳೆಯಿಂದ ನಿಷೇಧಿಸಲಾಗಿದೆ.”
ಈ ವ್ಯಾಖ್ಯಾನಗಳನ್ನು ಸಮೀಕ್ಷಿಸುವುದು ನಮ್ಮ ಉದ್ದೇಶಕ್ಕೆ ಮಹತ್ವದ್ದಾಗಿದೆ. ಒಂದೊಂದಾಗಿ ತೆಗೆದುಕೊಂಡಾಗ ಮೂವರು ಲೇಖಕರ ವ್ಯಾಖ್ಯಾನಗಳು ಒಂದೋ ಹೆಚ್ಚು ಇಲ್ಲವೆ ಕಡಿಮೆ ಅಂಶಗಳನ್ನೊಳಗೊಂಡಿವೆಯೆಂಬುದನ್ನು ನೋಡಬಹುದಾಗಿದೆ. ಯಾವೊಂದು ವಿವರಣೆಯೂ ಪರಿಪೂರ್ಣ ಅಥವಾ ಸಮರ್ಪಕವಾಗಿಲ್ಲ, ಮತ್ತು ವ್ಯಾಖ್ಯಾನಕಾರರೆಲ್ಲ ಜಾತಿ ವ್ಯವಸ್ಥೆಯ ಕಾಯವಿಧಾನದ ಕೇಂದ್ರಬಿಂದುವನ್ನು (ಪುಟ 7)
ಗುರುತಿಸುವಲ್ಲಿ ವಿಫಲರಾಗಿದ್ದಾರೆ. ಜಾತಿಯ ವ್ಯವಸ್ಥೆಯನ್ನು ಅಖಂಡವಾಗಿ ನೋಡದೆ, ಮತ್ತು ಜಾತಿಗಳನ್ನು ಇದರೊಳಗಿನ ಒಂದು ಗುಂಪಾಗಿ ಗಮನಿಸದೆ, ಜಾತಿಯನ್ನು ಒಂದು ಪ್ರತ್ಯೇಕ ಘಟಕವೆಂದು ವ್ಯಾಖ್ಯಾನಿಸಲು ಪ್ರಯತ್ನಿಸಿದ್ದು ಅವರು ಮಾಡಿದ ತಪ್ಪು. ಆದರೂ ಒಟ್ಟಾರೆ ತೆಗೆದುಕೊಂಡಾಗ ಅವರೆಲ್ಲರೂ ಪರಸ್ಪರ ಪೂರಕವಾಗಿಯೇ ಇದ್ದಾರೆ. ಒಬ್ಬೊಬ್ಬರೂ ಇನ್ನೊಬ್ಬರು ಬಿಟ್ಟಿರುವುದನ್ನು ಒತ್ತಿ ಹೇಳಿದ್ದಾರೆ. ಆದ್ದರಿಂದ ನಾನು ಮೇಲಿನ ವ್ಯಾಖ್ಯಾನಗಳಲ್ಲಿ ಜಾತಿಯ ವೈಶಿಷ್ಟ್ಯಗಳೆಂದು ಪರಿಗಣಿತವಾಗಿರುವ, ಎಲ್ಲಾ ಜಾತಿಗಳಿಗೂ ಸಮಾನವಾಗಿರುವ, ಅಂಶಗಳನ್ನಷ್ಟು ಮಾತ್ರ ತೆಗೆದುಕೊಂಡು ಹಾಗೆಯೇ ಮೌಲ್ಯಮಾಪನ ಮಾಡುತ್ತೇನೆ.
ಮೊದಲು ಸೆನರ್ಟ್ ಅವರಿಂದ ಆರಂಭಿಸುತ್ತೇನೆ. ಅವರು ಜಾತಿಯ ಒಂದು ಮುಖ್ಯ ಲಕ್ಷಣವೆಂದು ‘ಮಾಲಿನ್ಯದ ಪರಿಕಲ್ಪನೆ’ಯತ್ತ ಗಮನ ಸೆಳೆಯುತ್ತಾರೆ. ಯಾವುದೇ ರೀತಿಯಲ್ಲೂ ಇದು ಜಾತಿಯ ವೈಶಿಷ್ಟ್ಯವಲ್ಲವೆಂದು ಈ ಅಂಶದ ಬಗ್ಗೆ ನಾನು ಧಾರಾಳವಾಗಿ ಹೇಳಬಹುದು. ಸಾಮಾನ್ಯವಾಗಿ ಇದು ಪುರೋಹಿತಶಾಹಿ ವಿಧಿವಿಧಾನಗಳಲ್ಲಿ ಹುಟ್ಟಿಕೊಳ್ಳುತ್ತದೆ. ಅಲ್ಲದೆ ನಿರ್ದಿಷ್ಟವಾದ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಪಾವಿತ್ರ್ಯದ ಬಗೆಗಿನ ಸಾಮಾನ್ಯ ನಂಬಿಕೆಯ ಭಾಗ ಇದು. ಆದ ಕಾರಣ ಜಾತಿಯೊಡನಿರುವ ಇಂತಹ ಸಂಬಂಧವನ್ನು ಜಾತಿಯ ಕಾರ್ಯವಿಧಾನವನ್ನು ಘಾಸಿಗೊಳಿಸದೇ ಪೂರ್ಣವಾಗಿ ನಿರಾಕರಿಸಬಹುದು. ‘ಮಾಲಿನ್ಯದ ಪರಿಕಲ್ಪನೆ’ಯನ್ನು ಜಾತಿಪದ್ಧತಿಗೆ ಜೋಡಿಸಲಾಗಿದೆ. ಯಾಕೆಂದರೆ ಈ ಪದ್ಧತಿಯಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿ ಅದರ ಫಲವನ್ನು ಉಣ್ಣುವ ಜಾತಿಯೆಂಬುದು ಪೌರೋಹಿತ್ಯ ನಡೆಸುವ ಜಾತಿ : ಪುರೋಹಿತ ಮತ್ತು ಪಾವಿತ್ರ್ಯ ಹಳೆಯ ಒಡನಾಡಿಗಳೆಂದು ನಮಗೆ ಗೊತ್ತಿದೆ. ಆದ್ದರಿಂದ ಜಾತಿಗೆ ಧಾರ್ಮಿಕ ಸ್ಪರ್ಶವಿದ್ದಲ್ಲಿ ಮಾತ್ರ ‘ಮಾಲಿನ್ಯದ ಪರಿಕಲ್ಪನೆ’ಯು ಜಾತಿಯ ಒಂದು ಲಕ್ಷಣವಾಗಿರುತ್ತದೆ ಎಂಬ ತೀರ್ಮಾನಕ್ಕೆ ನಾವು ಬರಬಹುದು.
ಜಾತಿಯ ಹೊರಗಿನವರೊಂದಿಗೆ ಕುಳಿತು ಊಟ ಮಾಡದಿರುವಿಕೆಯನ್ನು ಜಾತಿಯ ವಿಶೇಷಗಳಲ್ಲೊಂದೆಂದು ನೆಸ್ ಫೀಲ್ಡರು ತಮ್ಮದೇ ಆದ ಧಾಟಿಯಲ್ಲಿ ವಿವೇಚಿಸಿದ್ದಾರೆ. ಅವರ ವಿವರಣೆಯಲ್ಲಿ ಹೊಸ ಅಂಶವಿದ್ದರೂ ನೆಸ್ ಫೀಲ್ಡರು ಪರಿಣಾಮವನ್ನೇ ಕಾರಣವೆಂದು ತಪ್ಪಾಗಿ ತಿಳಿದರೆಂದು ನಾವು ಹೇಳಬೇಕಾಗುತ್ತದೆ. ತನಗೆ ತಾನೆ ಸುತ್ತಲೂ ಬೇಲಿ ಹಾಕಿಕೊಂಡಿರುವುದರಿಂದ ಜಾತಿಯು ಸಹಜವಾಗಿಯೇ ಆಹಾರ ಸ್ವೀಕಾರದಂತಹ ಸಾಮಾಜಿಕ ಒಳಗೊಳ್ಳುವಿಕೆಯನ್ನು ತನ್ನೊಳಗಿನ ಸದಸ್ಯರಿಗಷ್ಟೇ ಸೀಮಿತಗೊಳಿಸುತ್ತದೆ. ಅದರಿಂದಾಗಿ ಹೀಗೆ ಹೊರಗಿನವರೊಂದಿಗೆ ಊಟ ಮಾಡದಿರುವುದು ನಿಜಕ್ಕೂ ನಿಷೇಧದಂಥ ಕಾರಣದಿಂದ ಆದುದಲ್ಲ; ಪ್ರತ್ಯೇಕತೆಯೆಂಬುದು ಜಾತಿಯ ಒಂದು ಸ್ವಾಭಾವಿಕ ಲಕ್ಷಣವೇ ಆಗಿದೆ. ಈ ಊಟ ಮಾಡದಿರುವಿಕೆಯು ಮೂಲತಃ ಜಾತಿ ಹೊಂದಿರುವ ಪ್ರತ್ಯೇಕತಾ ಮನೋಭಾವನೆಯಿಂದ ಬಂದದ್ದು, ನಂತರ ನಿಷೇಧದ ಗುಣವುಳ್ಳ ಒಂದು ಧಾರ್ಮಿಕ ನಿರ್ಬಂಧದ ಸ್ವರೂಪವನ್ನು ಪಡೆದುಕೊಂಡಿತು. ಆದರೆ ಇದನ್ನು ತರುವಾಯದ ಒಂದು ಬೆಳವಣಿಗೆಯೆಂದು ತಿಳಿಯಬಹುದು. ಸರ್ ಎಚ್.ರಿಸ್ಥೆಯವರು ವಿಶೇಷ ಗಮನಿಸುವಿಕೆಗೆ ಅರ್ಹವಾದ ಯಾವ ಹೊಸ ಸಂಗತಿಯನ್ನೂ ಹೇಳಿಲ್ಲ.
ಈಗ ನಾವು ಡಾ. ಕೇತ್ಕರ್ ಅವರ ವ್ಯಾಖ್ಯಾನಕ್ಕೆ ಬರೋಣ. ಅವರು ಈ ವಿಷಯವನ್ನು ಸ್ಪಷ್ಟಗೊಳಿಸುವಲ್ಲಿ ಹೆಚ್ಚಿನ ಕೃಷಿ ಮಾಡಿದ್ದಾರೆ. ಕೇತ್ಕರ್ ಅವರು ದೇಶೀಯರೂ ಆಗಿರುವುದಲ್ಲದೆ, ಜಾತಿಯನ್ನು ಕುರಿತ ತಮ್ಮ ಅಧ್ಯಯನದಲ್ಲಿ ಅವರು ವಿಮರ್ಶಾತ್ಮಕವಾದ ಸೂಕ್ಷ್ಮತೆಯನ್ನೂ, ತೆರೆದ ಮನಸ್ಸನ್ನೂ ಹೊಂದಿದ್ದಾರೆ. ಅವರ ವ್ಯಾಖ್ಯಾನವು ಗಂಭೀರ ಪರಿಶೀಲನೆಗೆ ಅರ್ಹವಾದದ್ದು. ಏಕೆಂದರೆ ಅವರು ಜಾತಿ ಎನ್ನುವುದನ್ನು ಜಾತಿಪದ್ಧತಿಯ ಹಿನ್ನೆಲೆಯಲ್ಲೇ ವ್ಯಾಖ್ಯಾನಿಸಿದ್ದಾರೆ. ಜಾತಿ ವ್ಯವಸ್ಥೆಯೊಳಗೆ ಜಾತಿಯ ಅಸ್ತಿತ್ವಕ್ಕಾಗಿ ತೀರ ಅನಿವಾರ್ಯವಾದಂಥ (ಪುಟ 8)
ಗುಣಲಕ್ಷಣಗಳನ್ನು ಕುರಿತು ಮಾತ್ರ ಅವರು ತಮ್ಮ ಗಮನವನ್ನು ಕೇಂದ್ರಿಕರಿಸಿದ್ದಾರೆ. ಉಳಿದವುಗಳನ್ನೆಲ್ಲ ಪ್ರಾಥಮಿಕವಲ್ಲದ ಸ್ವರೂಪದವುಗಳು ಅಥವಾ ಉಪ ಉತ್ಪನ್ನ ಗುಣದವುಗಳೆಂದು ವರ್ಗೀಕರಿಸಿ ಹೊರಗಿಟ್ಟಿರುವುದು ಸಮಂಜಸವಾಗಿದೆ. ಆದರೂ ಅವರ ಈ ವ್ಯಾಖ್ಯಾನದ ಬಗ್ಗೆ ಒಂದು ಮಾತನ್ನು ಹೇಳಬಹುದೇನೆಂದರೆ ಅದರಲ್ಲಿ ಕಿಂಚಿತ್ತಾದ ವೈಚಾರಿಕ ಗೊಂದಲವಿದೆ. ಅದನ್ನು ಬಿಟ್ಟರೆ ಅವರ ಈ ನಿರೂಪಣೆಯು ಸ್ವಚ್ಛ ಹಾಗೂ ಸ್ಪುಟ. ಅಂತರ್ಜಾತೀಯ ವಿವಾಹ ನಿಷೇಧ ಮತ್ತು ಸ್ವಕುಲಜರಿಗೇ ಸದಸ್ಯತ್ವ ಎಂಬೆರಡು ಜಾತಿ ಲಕ್ಷಣಗಳನ್ನು ಕುರಿತು ಅವರು ಪ್ರಸ್ತಾಪಿಸುತ್ತಾರೆ. ಆದರೆ ಈ ಲಕ್ಷಣಗಳು, ಡಾ.ಕೇತ್ಕರ್ ಅವರು ಭಾವಿಸುವಂತೆ ಎರಡು ಪ್ರತ್ಯೇಕ ಸಂಗತಿಗಳಲ್ಲವೆಂದೂ, ಇವು ಒಂದೇ ಒಂದು ಸಂಗತಿಯ ಎರಡು ಪ್ರತ್ಯೇಕ ಅಂಶಗಳಷ್ಟೇ ಎಂಬುದನ್ನು ನಿವೇದಿಸಬಯಸುತ್ತೇನೆ. ಅಂತರ್ಜಾತೀಯ ವಿವಾಹವನ್ನು ನೀವು ನಿಷೇಧಿಸಿದಿರೆಂದರೆ ಅದರ ಪರಿಣಾಮವಾಗಿ ನೀವು ಗುಂಪಿನಲ್ಲಿರುವವರಿಗಷ್ಟೇ ಸದಸ್ಯತ್ವವನ್ನು ಮಿತಿಗೊಳಿಸಿದಂತಾಗುತ್ತದೆ. ಹೀಗಾಗಿ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು.
ಜಾತಿಯನ್ನು ಸರಿಯಾದ ರೀತಿ ಅರ್ಥ ಮಾಡಿಕೊಂಡಾಗ ಸ್ವಕುಲದಲ್ಲಿನ ಮದುವೆ. ಅಥವಾ ಅಂತರ್ಜಾತೀಯ ವಿವಾಹದ ನಿಷೇಧ, ಅದರ ಏಕೈಕ ಸಾರವೆಂದು ಕರೆಯಬಹುದು. ಆದರೆ ಅಮೂರ್ತವಾದ ಮಾನವಕುಲಶಾಸ್ತ್ರದ ಆಧಾರದಿಂದ ಕೆಲವರು ಇದನ್ನು ನಿರಾಕರಿಸಬಹುದು. ಏಕೆಂದರೆ ಜಾತಿಯ ಸಮಸ್ಯೆ ಹುಟ್ಟಲು ಅವಕಾಶ ಕೊಡದಂತಹ ಸ್ವಜಾತಿ ವಿವಾಹವಿರುವ ಗುಂಪುಗಳೂ ಇವೆ. ಸಾಮಾನ್ಯ ರೀತಿಯಲ್ಲಿ ಇದು ಸರಿಯಿರಬಹುದು. ಸಾಂಸ್ಕೃತಿಕವಾಗಿ ಭಿನ್ನವಾದ ಗುಣಲಕ್ಷಣಗಳಿರುವ, ಹೆಚ್ಚು ಕಡಿಮೆ ಬೇರೆ ಬೇರೆಯಾದ ಸ್ಥಳಗಳಲ್ಲಿ ವಾಸಿಸುತ್ತಿರುವ ಮತ್ತು ಪರಸ್ಪರ ವ್ಯವಹಾರದ ಅಗತ್ಯವಿಲ್ಲದಿರುವ ಸ್ವಜಾತಿ ವಿವಾಹ ನಡೆಸುವ ಸಮಾಜಗಳು ಇವೆ ಎನ್ನುವುದು ವಾಸ್ತವ. ಈ ಹೇಳಿಕೆಯನ್ನು ಪುಷ್ಟೀಕರಿಸಲು ಸಂಯುಕ್ತ ಸಂಸ್ಥಾನಗಳಲ್ಲಿರುವ ನೀಗ್ರೋಗಳು, ಬಿಳಿಯರು ಮತ್ತು ಅಮೆರಿಕನ್ ಇಂಡಿಯನ್ಸ್ ಎಂಬ ಹೆಸರಿನಿಂದ ಕರೆಯಲಾಗುವ ವಿವಿಧ ಬುಡಗಟ್ಟು ಗುಂಪುಗಳನ್ನು ಹೆಚ್ಚು ಕಡಿಮೆ ಸೂಕ್ತವಾದ ದೃಷ್ಟಾಂತವಾಗಿ ಹೆಸರಿಸಬಹುದು. ಆದರೆ ಭಾರತದಲ್ಲಿನ ಪರಿಸ್ಥಿತಿಯೇ ಬೇರೆ. ಆದ್ದರಿಂದ ನಾವು ವಿಷಯಗಳನ್ನು ಗೊಂದಲಮಯವಾಗಿಸಬಾರದು. ಆಗಲೇ ಹೇಳಿರುವಂತೆ ಭಾರತದ ಜನರು ಒಟ್ಟಾರೆಯಾಗಿ ಒಂದೇ ಬಗೆಯವರು. ಖಚಿತ ವಲಯಗಳನ್ನು ಹೊಂದಿಕೊಂಡಿರುವ ಭಾರತದ ವಿವಿಧ ಜನಾಂಗಗಳು ಬಹುಮಟ್ಟಿಗೆ ಒಬ್ಬರೊಡನೊಬ್ಬರು ಮಿಳಿತವಾಗಿದ್ದಾರೆ. ಸಾಂಸ್ಕೃತಿಕ ಏಕತೆಯನ್ನೂ ಪಡೆದಿದ್ದಾರೆ. ಇದೊಂದೇ ಏಕರೂಪ ಜನಸಮುದಾಯದ ಅಳತೆಗೋಲು. ಈ ತರಹದ ಸಮರೂಪತೆಯ ಆಧಾರದ ಮೇಲೆ ಹೇಳುವುದಿದ್ದರೆ, ಸ್ವಜಾತಿ ವಿವಾಹದ ಸಮಾಜಗಳಲ್ಲಿ ಅಥವಾ ಹತ್ತಿರದ ರಕ್ತ ಸಂಬಂಧ ಮಾತ್ರದಿಂದ ರಚಿತವಾದ ಸಾಂಸ್ಕೃತಿಕ ಅಥವಾ ಬುಡಕಟ್ಟು ಗುಂಪುಗಳ ಸಂದರ್ಭದಲ್ಲಿ ಕಾಣದಿರುವ ಗುಣಲಕ್ಷಣಗಳು ಜಾತಿಯನ್ನು ಒಂದು ಹೊಸ ಸ್ವರೂಪದ ಸಮಸ್ಯೆಯನ್ನಾಗಿಸುತ್ತವೆ. ಭಾರತದಲ್ಲಿ ಜಾತಿಯೆಂದರೆ ಸ್ವಜಾತಿ ಮದುವೆಯ ಆಚರಣೆಯೊಂದಿಗೆ, ಅಂತರ್ಜಾತಿ ವಿವಾಹವನ್ನು ನಿಷೇಧಿಸುತ್ತಾ, ಒಂದು ಗುಂಪು ಇನ್ನೊಂದರೊಡನೆ ಸಮ್ಮಿಳಿತವಾಗದಂತೆ ತಡೆಯುವ ಮೂಲಕ ಒಟ್ಟು ಜನಸಂಖ್ಯೆಯನ್ನು ಸ್ಥಿರ ಮತ್ತು ನಿರ್ದಿಷ್ಟ ಘಟಕಗಳ ನಡುವೆ ಕೃತಕವಾಗಿ ಕತ್ತರಿಸಿ ಹಂಚುವ ಪ್ರಕ್ರಿಯೆ. ಹೀಗಾಗಿ ಸ್ವಜಾತಿ ವಿವಾಹವು ಜಾತಿಗೇ ವಿಶಿಷ್ಟವಾದ ಏಕೈಕ ಗುಣವೆಂದು ತೀರ್ಮಾನಿಸುವುದು ಅನಿವಾರ್ಯ. ಸ್ವಜಾತಿ ವಿವಾಹವನ್ನು ಹೇಗೆ ಕಾಪಾಡಲಾಗಿದೆಯೆಂಬುದನ್ನು ತೋರಿಸುವುದರಲ್ಲಿ ನಾವು ಯಶಸ್ವಿಯಾದರೆ ಅಲ್ಲಿಗೆ ಜಾತಿಯ ಉತ್ಪತ್ತಿ ಮತ್ತು ರಚನಾಕ್ರಮವನ್ನು ವಾಸ್ತವವಾಗಿ ಸಾಧಿಸಿದಂತೆಯೇ. (ಪುಟ 9)
ಜಾತಿವ್ಯವಸ್ಥೆಯ ರಹಸ್ಯ ಸ್ಫೋಟಕ್ಕೆ ಸ್ವಜಾತಿ ವಿವಾಹವನ್ನು ಒಂದು ಕೀಲಿಕೈಯೆಂದು ನಾನು ಪರಿಗಣಿಸುವುದೇಕೆಂದು ನಿರೀಕ್ಷಿಸುವುದು ನಿಮಗೆ ಅಷ್ಟು ಸುಲಭವಾಗದಿರಬಹುದು. ನಿಮ್ಮ ಕಲ್ಪನೆಯನ್ನು ತುಂಬ ದಣಿಸದೆ ನನ್ನ ಕಾರಣಗಳನ್ನು ಮೊದಲು ತಿಳಿಸತೊಡಗುತ್ತೇನೆ.
ಭಾರತದ ಸಮಾಜಕ್ಕಿಂತ ಮಿಗಿಲಾಗಿ ಇಂದಿನ ಯಾವ ನಾಗರಿಕ ಸಮಾಜವೂ ಪ್ರಾಚೀನ ಕಾಲದ ಅವಶೇಷಗಳನ್ನು ತೋರ್ಪಡಿಸದೆಂದು ಈ ಸಂದರ್ಭದಲ್ಲಿ ಒತ್ತು ಕೊಟ್ಟು ಹೇಳುವುದು ವಿಷಯಕ್ಕೆ ಹೊರತಾಗಲಾರದು. ಭಾರತದ ಧರ್ಮವು ಮೂಲಭೂತವಾಗಿ ಪುರಾತನವಾದದ್ದು. ಕಾಲ ಮತ್ತು ನಾಗರಿಕತೆಯಲ್ಲಿ ಪ್ರಗತಿಯಾಗಿದ್ದೂ ಅದರ ಪ್ರಾಚೀನ ನಿಯಮಗಳು ತನ್ನೆಲ್ಲ ಆದಿಸ್ಥಿತಿಯ ಬಲದೊಂದಿಗೆ ಇಂದಿಗೂ ಜಾರಿಯಲ್ಲಿವೆ. ನಾನು ನಿಮ್ಮ ಗಮನ ಸೆಳೆಯಬೇಕೆಂದಿರುವುದು ಈ ಪುರಾತನ ಪಳೆಯುಳಿಕೆಗಳಲ್ಲಿ ಒಂದಾದ ಭಿನ್ನಗೋತ್ರ ವಿವಾಹ ಪದ್ಧತಿ ಕುರಿತು. ಪ್ರಾಚೀನ ಜಗತ್ತಿನಲ್ಲಿ ಭಿನ್ನಗೋತ್ರ ವಿವಾಹ ಚಾಲ್ತಿಯಿದ್ದುದು ಯಾವುದೇ ವಿವರಣೆ ಬಯಸದಷ್ಟು ಚೆನ್ನಾಗಿ ಗೊತ್ತಿರುವ ಸಂಗತಿಯಾಗಿದೆ. ಆದರೂ ಚರಿತ್ರೆಯ ಬೆಳವಣಿಗೆಯೊಂದಿಗೆ ಭಿನ್ನಗೋತ್ರ ವಿವಾಹವು ತನ್ನ ಪ್ರಭಾವವನ್ನು ಕಳೆದುಕೊಂಡಿದೆ. ತೀರ ಹತ್ತಿರದ ರಕ್ತಸಂಬಂಧಿಗಳನ್ನು ಬಿಟ್ಟರೆ ಸಾಮಾನ್ಯವಾಗಿ ವಿವಾಹ ಕ್ಷೇತ್ರವನ್ನು ತಡೆಹಿಡಿಯುವ ಸಾಮಾಜಿಕ ನಿರ್ಬಂಧಗಳಿಲ್ಲ. ಆದರೆ ಭಾರತೀಯರ ವಿಚಾರದಲ್ಲಿ ಭಿನ್ನಗೋತ್ರ ವಿವಾಹ ನಿಯಮವು ಇಂದಿಗೂ ಸ್ಪಷ್ಟವಾದ ಕಟ್ಟಳೆಯಾಗಿದೆ. ಈಗ ಕುಲಗಳಿಲ್ಲದಿದ್ದರೂ ಭಾರತೀಯ ಸಮಾಜವು ಇನ್ನೂ ಕುಲ ವ್ಯವಸ್ಥೆಯ ಛಾಯೆಯನ್ನು ಹೊಂದಿದೆ. ಭಿನ್ನಗೋತ್ರ ವಿವಾಹ ಕಟ್ಟಳೆಯ ಸುತ್ತ ಕೇಂದ್ರೀಕೃತವಾಗಿರುವ ಮದುವೆಯ ನಿಯಮದಲ್ಲಿ ಇದನ್ನು ಸುಲಭವಾಗಿ ಗಮನಿಸಬಹುದು, ಏಕೆಂದರೆ ಸಪಿಂಡರು (ರಕ್ತಸಂಬಂಧಿಗಳು) ಮದುವೆಯಾಗಬಾರದೆಂದು ಮಾತ್ರವಲ್ಲ, ಸಗೋತ್ರರ (ಒಂದೇ ವರ್ಗದ) ನಡುವಣ ಮದುವೆಯೊಂದನ್ನು ಕೂಡ ದೈವದ್ರೋಹವೆಂದು ಪರಿಗಣಿಸಲಾಗಿದೆ.
ಆದುದರಿಂದ, ಸ್ವಗೋತ್ರ ವಿವಾಹವು ಭಾರತೀಯರಿಗೆ ಹೊರಗಿನದೆಂಬ ಸಂಗತಿಗಿಂತ ಪ್ರಮುಖವಾಗಿ ನೀವು ನೆನಪಿಡಬೇಕಾದ್ದು ಬೇರಾವುದೂ ಇಲ್ಲ. ಭಾರತದ ಬೇರೆ ಬೇರೆ ಗೋತ್ರಗಳು ಭಿನ್ನಗೋತ್ರ ವಿವಾಹಪದ್ಧತಿಯನ್ನು ಅನುಸರಿಸುವವೇ ಆಗಿವೆ; ಕುಲದೇವತಾರಾಧನಾ ಪದ್ಧತಿಯ ಇತರ ಗುಂಪುಗಳೂ ಹೀಗೆಯೇ ಇವೆ. ಭಾರತೀಯರಲ್ಲಿ ಭಿನ್ನಗೋತ್ರ ವಿವಾಹವೆಂಬುದು ಯಾರೂ ಉಲ್ಲಂಘಿಸಲು ಧೈರ್ಯ ತೋರದ ಒಂದು ನಂಬಿಕೆಯೆಂದು ಹೇಳುವುದರಲ್ಲಿ ಯಾವ ಉತ್ತೇಕ್ಷೆಯೂ ಇಲ್ಲ. ಹೀಗಾಗಿ ಜಾತಿಗಳೊಳಗೆ ಸ್ವಜಾತಿ ವಿವಾಹವು ಇದ್ದರೂ ಕೂಡ ಭಿನ್ನಗೋತ್ರ ವಿವಾಹವನ್ನು ಕಟ್ಟುನಿಟ್ಟಾಗಿ ಪರಿಪಾಲಿಸಲಾಗುತ್ತಿದೆ. ಭಿನ್ನಗೋತ್ರ ವಿವಾಹದ ಕಟ್ಟಳೆಯನ್ನು ಮೀರಿದವರಿಗೆ ಸ್ವಜಾತಿ ವಿವಾಹದ ನಿಯಮವನ್ನು ಮುರಿದವರಿಗಿಂಥ ಕಠಿಣತರವಾದ ದಂಡವನ್ನು ವಿಧಿಸಲಾಗುವುದು. ಅಂತರ್ಜಾತಿ ವಿವಾಹಪದ್ಧತಿ ಇದ್ದಲ್ಲಿ ಜಾತಿ ಇರಲು ಸಾಧ್ಯವಿಲ್ಲ ಎನ್ನುವುದನ್ನು ನೀವು ನೋಡಬಹುದು, ನಿಜಕ್ಕೂ ಅಂತರ್ಜಾತಿ ವಿವಾಹವೆಂದರೆ ಜಾತಿಗಳ ಬೆಸುಗೆ ಎಂದರ್ಥ. ಆದರೆ ನಮ್ಮಲ್ಲಿ ಜಾತಿಗಳಿವೆ. ಭಾರತಕ್ಕೆ ಸಂಬಂಧಿಸಿದಂತೆ. ಜಾತಿಗಳ ಸೃಷ್ಟಿಯೆಂದರೆ ಅಂತರ್ಜಾತಿ ವಿವಾಹದ ಮೇಲೆ ಸ್ವಜಾತಿ ವಿವಾಹದ ಮೇಲ್ತರದ ಪ್ರಾಬಲ್ಯ ಎಂಬುದು ಅಂತಿಮ ವಿಶ್ಲೇಷಣೆಯಾಗಿದೆ. ಹಾಗಿದ್ದೂ ಮೂಲದಲ್ಲಿ ಅಂರ್ತಜಾತಿ ವಿವಾಹಪದ್ಧತಿ ಇರುವ ಜನಸಮುದಾಯಗಳ ಸಂದರ್ಭ ಸ್ವಜಾತಿ ಮದುವೆ (ಅದು ಮತ್ತೆ ಜಾತಿ ಸೃಷ್ಟಿಗೆ ಸಮನಾಗಿರುತ್ತದೆ) ವಿಷಯವನ್ನು ನಿರ್ವಹಿಸುವುದು ಒಂದು ಗಂಭೀರ ಸಮಸ್ಯೆಯೇ ಆಗಿದೆ. ಅಂತರ್ಜಾತಿ ವಿವಾಹಪದ್ಧತಿಯ ವಿರುದ್ದವಾಗಿ ಸ್ವಜಾತಿ ವಿವಾಹಪದ್ಧತಿಯ (ಪುಟ 10)
ಸಂರಕ್ಷಣೆಗಾಗಿ ಬಳಸುವ ವಿಧಾನಗಳ ಪರಿಶೀಲನೆಯಲ್ಲಿಯೇ ನಾವು ನಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿರೀಕ್ಷೆಯಿಟ್ಟುಕೊಳ್ಳಬಹುದು.
ಈ ರೀತಿಯಲ್ಲಿ ಅಂತರ್ಜಾತಿ ವಿವಾಹದ ಮೇಲೆ ಸ್ವಜಾತಿ ವಿವಾಹದ ಮೇಲ್ತರದ ಪ್ರಾಬಲ್ಯವೆಂದರೆ ಅದು ಜಾತಿಯ ಸೃಷ್ಟಿ ಎಂದರ್ಥ. ಆದರೆ ಇದು ಅಷ್ಟು ಸುಲಭದ ವ್ಯವಹಾರವಲ್ಲ. ಈಗ ಉದಾಹರಣೆಯಾಗಿ, ತನ್ನನ್ನೇ ತಾನು ಜಾತಿಯನ್ನಾಗಿಸಲು ಇಚ್ಛಿಸುವ ಒಂದು ಕಾಲ್ಪನಿಕ ಗುಂಪನ್ನು ತೆಗೆದುಕೊಂಡು ಅದು ಸ್ವಜಾತಿ ವಿವಾಹಪದ್ಧತಿಯನ್ನು ಜಾರಿಗೆ ತರಲು ಯಾವ ವಿಧಾನಗಳನ್ನು ಅನುಸರಿಸಬೇಕಾದೀತೆಂಬುದನ್ನು ವಿಶ್ಲೇಷಿಸೋಣ. ಒಂದು ಗುಂಪು ತನ್ನ ಜಾತಿಯಲ್ಲೇ ಮದುವೆ ಮಾಡಿಕೊಳ್ಳಲು ನಿರ್ಧರಿಸಿದಾಗ, ಅದರಲ್ಲಿಯೂ ವೈವಾಹಿಕ ಸಂಬಂಧಗಳು ಭಿನ್ನ ಸಮುದಾಯಗಳೊಂದಿಗೆ ನಡೆಯಲೇಬೇಕೆಂಬ ಕಟ್ಟಳೆ ಈ ಹಿಂದೆ ಇದ್ದಾಗಲಂತೂ, ಹೊರಗಿನ ಗುಂಪುಗಳೊಂದಿಗೆ ಅಂತರ್ಜಾತೀಯ ಮದುವೆ ಮಾಡಿಕೊಳ್ಳುವುದರ ವಿರುದ್ಧ ಕೇವಲ ಒಂದು ಔಪಚಾರಿಕ ನಿಷೇಧ ಮಾತ್ರ ಪ್ರಯೋಜನಕಾರಿಯಾಗುವುದಿಲ್ಲ. ಅದೂ ಅಲ್ಲದೆ, ಪರಸ್ಪರ ನಿಕಟ ಸಂಪರ್ಕದಲ್ಲಿರುವ ಎಲ್ಲ ಗುಂಪುಗಳಲ್ಲೂ ಚೆನ್ನಾಗಿ ಬೆರೆಯುವಿಕೆ ಹಾಗೂ ಸಂಕರಗೊಳ್ಳುವಿಕೆಯಿಂದಾಗಿ ಏಕರೂಪ ಹೊಂದಿದ ಸಮಾಜವಾಗಿ ಬಲಗೊಳ್ಳುವ ಪ್ರವೃತ್ತಿಯೊಂದು ಇದ್ದೇ ಇರುತ್ತದೆ. ಜಾತಿರಚನೆಯಲ್ಲಿರುವ ಆಸಕ್ತಿಯಿಂದ ಈ ಬಗೆಯ ಪ್ರವೃತ್ತಿಯನ್ನು ಬಲವಾಗಿ ನಿಷ್ಪಲಗೊಳಿಸಬೇಕಾದರೆ ವರ್ತುಲದ ಹೊರಗೆ ಒಂದು ಗೆರೆಯೆಳೆದು ಅದರಾಚೆಗೆ ಜನರು ಮದುವೆ ಮಾಡಕೂಡದೆಂದು ಹದ್ದುಬಸ್ತಿನಲ್ಲಿಡುವುದು ಅನಿವಾರ್ಯವಾಗುತ್ತದೆ.
ಅಷ್ಟಾದರೂ, ಹೊರಗಿನವರೊಂದಿಗೆ ಮದುವೆಗಳನ್ನು ತಡೆಹಿಡಿಯುವ ಈ ನಿರ್ಬಂಧವು ತನ್ನೊಳಗಿನಿಂದಲೇ ಸಮಸ್ಯೆಗಳನ್ನು ಹುಟ್ಟಿಸುತ್ತದೆ, ಮತ್ತು ಅವುಗಳಿಗೆ ಪರಿಹಾರ ಅಷ್ಟು ಸುಲಭವಾಗಿರುವುದಿಲ್ಲ. ಸ್ಥೂಲವಾಗಿ ಹೇಳುವುದಾದರೆ, ಸಾಮಾನ್ಯವಾಗಿ ಒಂದು ಗುಂಪಿನಲ್ಲಿ ಹೆಂಗಸರೂ ಗಂಡಸರೂ ಹೆಚ್ಚು ಕಡಿಮೆ ಸಮನಾದ ಸಂಖ್ಯೆಯನ್ನು ಹೊಂದಿರುತ್ತಾರೆ. ಮತ್ತು ಸಮವಯಸ್ಕರಲ್ಲಿ ಸಮಾನತೆಯೊಂದು ಇದ್ದೇ ಇರುತ್ತದೆ. ಆದರೂ ವಾಸ್ತವ ಸಮಾಜಗಳಲ್ಲಿ ಯಾವಾಗಲೂ ಈ ಸಮಾನತೆಯು ಪರಿಗಣನೆಗೆ ಬರುವುದೇ ಇಲ್ಲ. ಅದೇ ಕಾಲದಲ್ಲಿ ತಾನೊಂದು ಜಾತಿಯಾಗಲು ಬಯಸುವ ಗುಂಪಿಗೆ ಲಿಂಗಗಳ ನಡುವೆ ಸಮಾನ ಸಂಖ್ಯೆಯನ್ನು ಕಾಪಾಡುವುದು ಅಂತಿಮ ಗುರಿಯಾಗಿರುತ್ತದೆ. ಯಾಕೆಂದರೆ ಅದಿಲ್ಲದೆ ಸ್ವಜಾತಿ ವಿವಾಹ ಅಸ್ತಿತ್ವದಲ್ಲಿರುವುದು ಹಿಂದಿನಂತೆ ಸಾಧ್ಯವಾಗುವುದಿಲ್ಲ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಸ್ವಜಾತಿ ವಿವಾಹ ಪದ್ಧತಿಯನ್ನು ಸಂರಕ್ಷಿಸಬೇಕಾದಲ್ಲಿ ತಮ್ಮೊಳಗಿನವರೊಂದಿಗೆ ಲೈಂಗಿಕ ಸಂಪರ್ಕದ ಹಕ್ಕನ್ನು ಕಲ್ಪಿಸಿಕೊಡಬೇಕು. ಇದಕ್ಕೆ ಸಮ್ಮತಿಸದ ಗುಂಪಿನ ಸದಸ್ಯರನ್ನು ತಮಗಿಷ್ಟ ಬಂದ ರೀತಿಯಲ್ಲಿ ತಾವು ಬದುಕುವಂತೆ ಪರಿಧಿಯಿಂದಾಚೆಗೆ ಅಟ್ಟಿಬಿಡಲಾಗುವುದು. ಆದರೆ ಲೈಂಗಿಕ ಹಕ್ಕುಗಳನ್ನು ತಮ್ಮೊಳಗೇ ದೊರಕಿಸುವುದಕ್ಕಾಗಿ ತಾನೊಂದು ಜಾತಿಯಾಗಿ ಉಳಿಯಬೇಕೆಂದು ಬಯಸುವ ಗುಂಪಿನೊಳಗೆ ಮದುವೆಯಾಗಬಲ್ಲ ಘಟಕಗಳಲ್ಲಿ ಸ್ತ್ರೀಯರ ಮತ್ತು ಪುರುಷರ ಸಂಖ್ಯೆಯಲ್ಲಿ ಸಮಾನತೆಯನ್ನು ಉಳಿಸಿಕೊಂಡು ಬರುವುದು ತೀರಾ ಅಗತ್ಯ. ಅಂತಹದೊಂದು ಸಮಾನತೆಯ ಸಂರಕ್ಷಣೆಯಿಂದಲೇ ಗುಂಪಿನ ಆವಶ್ಯಕತೆಯಾದ ಸ್ವಜಾತಿ ವಿವಾಹಪದ್ಧತಿಯನ್ನು ಸುಭದ್ರವಾಗಿಡುವುದು ಸಾಧ್ಯ. ಮತ್ತು ಇದರಲ್ಲಿ ತುಂಬ ಅಸಮತೆ ಇದ್ದಲ್ಲಿ ಅದು ಗುಂಪನ್ನು ಮುರಿಯುವುದು ನಿಶ್ಚಿತ.
ಹೀಗಾಗಿ ಜಾತಿ ಸಮಸ್ಯೆಯು ಅಂತಿಮವಾಗಿ ಮದುವೆಗೆ ಪ್ರಾಪ್ತ ವಯಸ್ಕರಾದ ಸ್ತ್ರೀ ಮತ್ತು ಪುರುಷರ ನಡುವಣ ಸಂಖ್ಯೆಯ ಅಸಮತೆಗಳನ್ನು ಸರಿಪಡಿಸುವ ಒಂದು ಅಂಶವಾಗಿ ಮಾರ್ಪಡುತ್ತದೆ. (ಪುಟ 11)
ನಿಸರ್ಗದ ಆಗುಹೋಗುಗಳಿಗೆ ಬಿಟ್ಟಾಗಲೂ ಸಂಖ್ಯೆಯ ಅನುರೂಪತೆ ಕಾಣುವುದು ಗಂಡ ಮತ್ತು ಹೆಂಡತಿ ಒಟ್ಟಿಗೆ ಸತ್ತಾಗ ಮಾತ್ರ. ಆದರೆ ಇದೊಂದು ಅಪರೂಪದ ಸಂಗತಿ. ಹೆಂಡತಿಗಿಂತ ಮುಂಚೆಯೇ ಗಂಡ ಸತ್ತು ಒಬ್ಬ ಹೆಚ್ಚುವರಿ ಹೆಣ್ಣನ್ನು ಉಳಿಸಿಹೋಗಬಹುದು; ಅಂಥ ಪ್ರಸಂಗದಲ್ಲಿ ಗಂಡನಿಲ್ಲದ ಆಕೆಯನ್ನು ಹರಣ ಮಾಡಬೇಕಾಗುತ್ತದೆ. ಹಾಗೆ ಮಾಡದಿದ್ದರೆ ಆಕೆ ಅಂತರ್ಜಾತೀಯ ವಿವಾಹದ ಮೂಲಕ ಆ ಗುಂಪಿನ ಸ್ವಜಾತಿ ವಿವಾಹಪದ್ಧತಿಯನ್ನು ಮುರಿಯುತ್ತಾಳೆ. ಇದೇ ರೀತಿಯಲ್ಲಿ ಹೆಂಡತಿ ಸತ್ತು ಗಂಡ ಉಳಿದು ಹೆಚ್ಚುವರಿ ಮನುಷ್ಯನಾಗಲೂಬಹುದು; ಆಗ ಆ ಗುಂಪು ಅವನ ಮಡದಿಯ ದಾರುಣ ಸಾವಿಗೆ ಕನಿಕರಿಸಲೂಬಹುದು. ಆದರೆ ಅವನನ್ನೂ ನಿವಾರಿಸಲೇಬೇಕು. ಇಲ್ಲವಾದರೆ ಅವನೂ ಗುಂಪಿನ ಹೊರಗಿನಿಂದ ಮದುವೆಯಾಗಿ ಸ್ವಜಾತಿ ವಿವಾಹ ನಿಯಮವನ್ನು ನುಚ್ಚುನೂರುಗೊಳಿಸುತ್ತಾನೆ. ಹೀಗೆ ಹೆಚ್ಚುವರಿಯಾದ ಹೆಣ್ಣು ಮತ್ತು ಹೆಚ್ಚುವರಿಯಾದ ಗಂಡು ಜಾತಿಗೆ ಕಂಟಕವಾಗುತ್ತಾರೆ. ಹಾಗಾಗದಂತೆ ನೋಡಿಕೊಳ್ಳಬೇಕು. ಅದೇ ಗುಂಪಿನ ನಿಗದಿತ ವಲಯದೊಳಗೇ ಸರಿಯಾದ ಸಂಗಾತಿಗಳನ್ನು ಹುಡುಕದಿದ್ದರೆ (ಅವರ ಪಾಡಿಗೇ ಅವರನ್ನು ಬಿಟ್ಟಲ್ಲಿ ಅವರು ಯಾರನ್ನೂ ಹುಡುಕಲಾರರು, ಮತ್ತು ಇದನ್ನು ನಿಯಂತ್ರಿಸದಿದ್ದಲ್ಲಿ ನಿಯಮಬಾಹಿರವಾಗಿ ಜತೆಗಿರುವ ಜೋಡಿಗಳಾಗಿ ಪರಿವರ್ತಿತವಾಗಬಹುದು) ಅವರು ಎಲ್ಲೆ ಮೀರುವ, ಹೊರಗಡೆ ಮದುವೆಯಾಗುವ, ಮತ್ತು ಜಾತಿಗೆ ಹೊರತಾದ ಸಂತಾನ ಕೊಡುವ ಸಂಭವವಿದೆ.
ಮೇಲೆ ಹೇಳಿದ ಹೆಚ್ಚುವರಿ ಗಂಡು ಮತ್ತು ಹೆಚ್ಚುವರಿ ಹೆಣ್ಣು ವಿಚಾರದ ಕುರಿತು ನಮ್ಮ ಕಾಲ್ಪನಿಕ ಗುಂಪು ಏನು ಮಾಡಬಹುದೆಂಬುದನ್ನೀಗ ನೋಡೋಣ. ಮೊದಲು ಹೆಚ್ಚುವರಿ ಹೆಣ್ಣಿನ ವಿಷಯವನ್ನು ಪರಿಶೀಲಿಸೋಣ. ಜಾತಿಯ ಸ್ವಜಾತಿ ವಿವಾಹ ಪದ್ಧತಿಯನ್ನು ಕಾಪಾಡುವ ಸಲುವಾಗಿ ಎರಡು ರೀತಿಯಲ್ಲಿ ಆಕೆಯ ವಿಷಯವನ್ನು ಇತ್ಯರ್ಥ ಮಾಡಬಹುದಾಗಿದೆ.
ಪ್ರಥಮ : ಅವಳ ಮೃತ ಗಂಡನ ಚಿತೆಯಲ್ಲೇ ಅವಳನ್ನೂ ಸುಟ್ಟು ಅವಳನ್ನು ನಿವಾರಿಸಬಹುದು. ಆದರೆ ಲಿಂಗ ಅಸಮಾನತೆಯ ಸಮಸ್ಯೆಯನ್ನು ನಿವಾರಿಸುವಲ್ಲಿ ಇದೊಂದು ಅಪ್ರಾಯೋಗಿಕ ವಿಧಾನವಾದೀತು. ಕೆಲವು ಕಡೆಗಳಲ್ಲಿ ಇದು ಸರಿಹೋಗಬಹುದು. ಅದರಿಂದಾಗಿ ಪ್ರತಿಯೊಬ್ಬ ಹೆಚ್ಚುವರಿ ಸ್ತ್ರೀಯನ್ನೂ ಹೀಗೆ ನಿವಾರಿಸಲಾಗದು; ಇದು ಸುಲಭ ಪರಿಹಾರವಾದರೂ ಕಷ್ಟಸಾಧ್ಯವಾಗಿದೆ. ಈ ರೀತಿಯಲ್ಲಿ ಹೆಚ್ಚುವರಿ ಸ್ತ್ರೀಯನ್ನು (ವಿಧವೆಯನ್ನು) ನಿವಾರಿಸದಿದ್ದಲ್ಲಿ ಆಕೆ ಗುಂಪಿನಲ್ಲೇ ಉಳಿಯುತ್ತಾಳೆ. ಆದರೆ ಅವಳ ಇರುವಿಕೆಯಲ್ಲೇ ಎರಡು ಅಪಾಯಗಳಿವೆ. ಆಕೆ ಜಾತಿಯ ಹೊರಗೆ ಮದುವೆಯಾಗಿ ಸ್ವಜಾತಿ ಮದುವೆ ಪದ್ಧತಿಯನ್ನು ಉಲ್ಲಂಘಿಸಬಹುದು. ಇಲ್ಲವೆ ಆಕೆ ಜಾತಿಯೊಳಗೇ ಮದುವೆಯಾಗಲೂಬಹುದು ಮತ್ತು ಅದರಿಂದ ಜಾತಿಯೊಳಗೆ ಸಮರ್ಥ ವಧುವಿಗೆ ಮೀಸಲಿದ್ದ ಗಂಡೊಬ್ಬನ ವಿವಾಹದ ಅವಕಾಶಕ್ಕೆ ಲಗ್ಗೆ ಹಾಕಬಹುದು. ಆದುದರಿಂದ, ಯಾವುದೇ ರೀತಿಯಲ್ಲೂ ಆಕೆಯೊಂದು ಪಿಡುಗು; ಆಕೆಯನ್ನು ಸತ್ತ ಗಂಡನೊಂದಿಗೆ ದಹಿಸಲಾಗದಿದ್ದರೆ ಈ ಸಮಸ್ಯೆಯ ಪರಿಹಾರಕ್ಕಾಗಿ ಬೇರಿನ್ನೇನಾದರೂ ಮಾಡಲೇಬೇಕು.
ಎರಡನೆಯ ಪರಿಹಾರೋಪಾಯವೆಂದರೆ ಅವಳಿಗೆ ಜೀವನಪರ್ಯಂತ ವೈಧವ್ಯವನ್ನು ವಿಧಿಸುವುದು. ವಸ್ತುನಿಷ್ಠ ಪರಿಣಾಮದ ದೃಷ್ಟಿಯಿಂದಲಂತೂ ವೈಧವ್ಯವನ್ನು ಹೇರುವುದಕ್ಕಿಂತ ಸುಡುವುದೇ ಉತ್ತಮ ಪರಿಹಾರ. ವಿಧವೆಯನ್ನು ಸುಡುವುದರಿಂದ ಒಬ್ಬ ಹೆಚ್ಚುವರಿ ಹೆಣ್ಣಿಗೆ ಸಂಭವಿಸಬಹುದಾದ ಎಲ್ಲ ಮೂರು ಕೇಡುಗಳನ್ನು ನಿವಾರಿಸಿದಂತೆ ಆಗುತ್ತದೆ. ಸತ್ತು ಇಲ್ಲವಾಗುವುದರ ಮೂಲಕ ಆಕೆ ಜಾತಿಯ ಒಳಗಾಗಲೀ ಹೊರಗಾಗಲಿ ಮದುವೆಯಾಗುವ ಸಮಸ್ಯೆಯಿರುವುದಿಲ್ಲ. ಆದರೆ ಹೀಗೆ ಸುಡುವುದಕ್ಕಿಂತಲೂ ಕಡ್ಡಾಯದ ವೈಧವ್ಯ ಉತ್ತಮವೇಕೆಂದರೆ ಅದು ಹೆಚ್ಚು ಪ್ರಾಯೋಗಿಕವಾಗಿದೆ. ತೌಲನಿಕವಾಗಿಯೂ ಇದು (ಪುಟ 12)
ಮಾನವೀಯವಾಗಿರುವುದಲ್ಲದೆ ದಹನದಂತೆ ಇದೂ ಪುನರ್ವಿವಾಹದ ಕೇಡಿನಿಂದ ಕಾಪಾಡುತ್ತದೆ; ಆದರೆ ಗುಂಪಿನ ನೈತಿಕತೆಯನ್ನು ರಕ್ಷಿಸುವಲ್ಲಿ ಇದು ಸೋಲುತ್ತದೆ. ಕಡ್ಡಾಯ ವೈಧವ್ಯದಲ್ಲಿ ಸ್ತ್ರೀ ಇರುತ್ತಾಳೆಂಬುದರಲ್ಲಿ ಸಂಶಯವಿಲ್ಲ; ವಿಧಿಬದ್ಧ ಪತ್ನಿಗಿರುವ ಸಹಜ ಹಕ್ಕುಗಳಿಂದ ಆಕೆಯನ್ನು ಭವಿಷ್ಯ ಜೀವನದಲ್ಲಿ ವಂಚಿತಗೊಳಿಸುವುದರಿಂದಾಗಿ ಅನೈತಿಕ ನಡತೆಗೆ ಆಕರ್ಷಣೆ ಹೆಚ್ಚಾಗುತ್ತದೆ. ಆದರೆ ಇದು ಯಾವುದೇ ರೀತಿಯಲ್ಲೂ ಒಂದು ದುಸ್ತರವಾದ ಕಷ್ಟವಲ್ಲ. ಇನ್ನು ಆಕೆಯನ್ನು ಆಕರ್ಷಣೀಯವಲ್ಲದ ದುಸ್ಥಿತಿಗೂ ಕೆಳಗಿಳಿಸಬಹುದು.
ತನ್ನನ್ನು ಒಂದು ಜಾತಿಗೆ ಒಳಪಡಿಸುವ ಇಚ್ಛೆಯ ಗುಂಪಿನಲ್ಲಿ ಹೆಚ್ಚುವರಿ ಹೆಣ್ಣಿನದ್ದೆಕ್ಕಿಂತ ಹೆಚ್ಚುವರಿ ಗಂಡಸಿನ (ವಿಧುರನ) ಸಮಸ್ಯೆ ಇನ್ನೂ ಗಂಭೀರವಾದುದು ಮತ್ತು ಸಮಸ್ಯಾತ್ಮಕವಾದುದಾಗಿದೆ. ಅನಾದಿಕಾಲದಿಂದಲೂ ಹೆಣ್ಣಿಗೆ ಹೋಲಿಸಿದಾಗ ಗಂಡು ಮೇಲುಗೈ ಪಡೆದಿದ್ದಾನೆ. ಎಲ್ಲ ಗುಂಪಿನಲ್ಲೂ ಆತ ಪ್ರಧಾನ ವ್ಯಕ್ತಿ, ಎರಡು ಲಿಂಗಗಳಲ್ಲಿ ಆತನಿಗೇ ಅಧಿಕತರವಾದ ಪ್ರತಿಷ್ಠೆಯಿದೆ. ಸ್ತ್ರೀಯ ಮೇಲಿನ ಅವನ ಈ ಸಾಂಪ್ರದಾಯಿಕವಾದ ಶ್ರೇಷ್ಠತೆಯಿಂದಾಗಿ ಆತನ ಅಪೇಕ್ಷೆಗಳನ್ನು ಯಾವಾಗಲೂ ಪರಿಶೀಲಿಸಲಾಗುತ್ತಿದೆ. ಇನ್ನೊಂದು ಕಡೆ ಧಾರ್ಮಿಕ, ಸಾಮಾಜಿಕ ಅಥವಾ ಆರ್ಥಿಕ ಎಲ್ಲ ಬಗೆಯ ಪಕ್ಷಪಾತ ಕಟ್ಟಳೆಗಳಿಗೂ ಸ್ತ್ರೀ ಸುಲಭವಾಗಿ ಬಲಿಯಾಗುತ್ತಾಳೆ. ಆದರೆ ಗಂಡಸು ತಾನೇ ಕಟ್ಟಳೆಗಳನ್ನು ಮಾಡುವ ವ್ಯಕ್ತಿಯಾಗಿ ಅನೇಕ ಬಾರಿ ಅವುಗಳಿಗೆ ಅತೀತನಾಗಿದ್ದಾನೆ. ಪರಿಸ್ಥಿತಿ ಹೀಗಿರುವುದರಿಂದಾಗಿ, ಒಂದು ಜಾತಿಯಲ್ಲಿ ಹೆಚ್ಚುವರಿ ಹೆಣ್ಣಿಗೆ ನೀವು ತೋರುವಂತಹ ವರ್ತನೆಯನ್ನು ಗಂಡಿಗೂ ತೋರಲಾರಿರಿ.
ವಿಧುರನನ್ನು ಆತನ ಸತ್ತ ಹೆಂಡತಿಯೊಂದಿಗೆ ಸುಡುವುದು ಎರಡು ರೀತಿಗಳಲ್ಲಿ ಕಷ್ಟಸಾಧ್ಯವಾದುದು: ಎಲ್ಲಕ್ಕಿಂತಲೂ ಮೊದಲನೆಯದೆಂದರೆ ಆತ ಗಂಡಸು ಎಂಬುದೊಂದೇ ಸರಳ ಕಾರಣಕ್ಕಾಗಿ ಆತನನ್ನು ಚಿತೆಯೇರಿಸಲು ಸಾಧ್ಯವಾಗುವುದಿಲ್ಲ. ಎರಡನೆಯದಾಗಿ, ಹಾಗೆ ಮಾಡಿದರೂ ಆ ಜಾತಿಗೆ ಒಬ್ಬ ಬಲಿಷ್ಠ ವ್ಯಕ್ತಿ ನಷ್ಟವಾಗುತ್ತಾನೆ. ಆದುದರಿಂದ ಅವನನ್ನು ಪ್ರಶಸ್ತವಾಗಿಯೇ ನಿವಾರಿಸಿಕೊಳ್ಳಲು ಇನ್ನೆರಡು. ಪರಿಹಾರಗಳುಳಿಯುತ್ತವೆ. ಪ್ರಶಸ್ತವಾಗಿಯೇ ಎಂದು ನಾನು ಹೇಳುತ್ತಿರುವುದು ಏಕೆಂದರೆ ಆತ ಗುಂಪಿಗೊಂದು ಆಸ್ತಿ.
ಆತ ಗುಂಪಿಗೆ ಮುಖ್ಯನಾದುದರಿಂದಲೂ, ಸ್ವಜಾತಿ ವಿವಾಹ ಪದ್ಧತಿ ಇನ್ನೂ ಮುಖ್ಯವಾಗಿರುವುದರಿಂದಲೂ, ಈ ಸಮಸ್ಯೆಯ ಪರಿಹಾರ ಎರಡು ಗುರಿಗಳಿಗೂ ಸಲ್ಲುವಂತಿರಬೇಕು. ಇಂಥ ಪರಿಸ್ಥಿತಿಗಳಲ್ಲಿ, ನಾನು ತಿಳಿದಂತೆ, ವಿಧವೆಗೆ ಇರುವ ರೀತಿಯಲ್ಲಿ ಆಜೀವ ಪಠ್ಯಂತ ವಿಧುರನಾಗಿರುವಂತೆ ಆತನನ್ನು ಬಲಾತ್ಕರಿಸಬಹುದು ಅಥವಾ ಪ್ರೇರೇಪಿಸಲೂಬಹುದು. ಒಟ್ಟಾರೆ, ಈ ಪರಿಹಾರ ಅಷ್ಟೇನೂ ಕಷ್ಟವಲ್ಲ. ಏಕೆಂದರೆ ಯಾವುದೇ ಒತ್ತಾಯಗಳಿಲ್ಲದೆಯೂ ಕೆಲವರು ಸ್ವ ಇಚ್ಛೆಯಿಂದಲೇ ಬ್ರಹ್ಮಚರ್ಯವನ್ನು ಆನಂದಿಸಬಲ್ಲರು; ಅಥವಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರು ತಾವಾಗಿಯೇ ಜಗತ್ತನ್ನೂ, ಅದರ ಸಂತೋಷವನ್ನೂ ತ್ಯಜಿಸಬಲ್ಲರು. ಆದರೆ ಮನುಷ್ಯ ಸ್ವಭಾವದಿಂದಾಗಿ ಈ ಪರಿಹಾರವನ್ನು ನಿರೀಕ್ಷಿಸುವುದು ಕಷ್ಟಸಾಧ್ಯವೇ ಸರಿ. ವ್ಯತಿರಿಕ್ತವಾಗಿ, ಹೆಚ್ಚುವರಿ ಮನುಷ್ಯ ಗುಂಪಿನಲ್ಲೇ ಉಳಿದು ಸಾಮೂಹಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲುಗೊಳ್ಳುವುದಾದರೆ ಆತ ಗುಂಪಿನ ನೀತಿಗಳಿಗೆ ಅಪಾಯವಾಗುತ್ತಾನೆ. ಭಿನ್ನ ದೃಷ್ಟಿಕೋನದಿಂದ ನೋಡಿದ್ದಾದರೆ, ಬ್ರಹ್ಮಚರ್ಯ ಅದು ಯಶಸ್ವಿಯಾಗುವೆಡೆಗಳಲ್ಲಿ ಸುಲಭವೇ ಆದರೂ, ಜಾತಿಯ ಭೌತಿಕ ಭವಿಷ್ಯಕ್ಕೆ ಅದು ಅನುಕೂಲಕರವಾದುದಲ್ಲ. ಆತ ನಿಷ್ಟುರ ಬ್ರಹ್ಮಚರ್ಯವನ್ನು ಪಾಲಿಸಿ ಪ್ರಪಂಚವನ್ನು ತ್ಯಜಿಸಿದಲ್ಲಿ ಜಾತಿಪದ್ಧತಿ ಅಥವಾ ಜಾತಿಗಳ, ನೀತಿಗಳ ಸಂರಕ್ಷಣೆಗೆ ಅಡ್ಡಿಯಾಗಲಾರ: ಒಂದು ವೇಳೆ ಆತ (ಪುಟ 13)
ಜಾತ್ಯತೀತ ವ್ಯಕ್ತಿಯಾಗಿ ಉಳಿದದ್ದೇ ಆದರೆ, ಆಗ ಆತ ಒಂದು ಪಿಡುಗಾಗುತ್ತಾನೆ. ಆದರೆ ತನ್ನ ಜಾತಿಯ ಲೌಕಿಕ ಸಂರಕ್ಷಣೆಯ ದೃಷ್ಟಿಯಿಂದ ಆತ ಎಲ್ಲವನ್ನೂ ತ್ಯಜಿಸಿದ ವ್ಯಕ್ತಿಯಾಗಿ ಪರಿವರ್ತನೆಗೊಂಡಲ್ಲಿ ಆತ ಹೆಚ್ಚುಕಡಿಮೆ ಸುಡಲ್ಪಟ್ಟ ವ್ಯಕ್ತಿಯೇ. ಒಂದು ಜಾತಿ ಕಠಿಣವಾದ ಸಮುದಾಯವ್ಯವಸ್ಥೆ ಸಾಧ್ಯವಾಗುವಂತೆ ದೊಡ್ಡದಾಗಿರುವ ಒಂದು ಸಂಖ್ಯಾಬಲವನ್ನೂ ಉಳಿಸಿಕೊಂಡಿರಬೇಕಾಗುತ್ತದೆ. ಆದರೆ ಈ ಸಂಖ್ಯಾಬಲವನ್ನು ನಿರೀಕ್ಷಿಸುತ್ತಾ ಬ್ರಹ್ಮಚರ್ಯವನ್ನು ಸಾರುವುದು, ಕ್ಷಯರೋಗವನ್ನು ರಕ್ತಸ್ರಾವದಿಂದ ಗುಣಪಡಿಸಿದಂತಾಗುತ್ತದೆ.
ಆದುದರಿಂದ. ಒಂದು ಗುಂಪಿನಲ್ಲಿ ಹೆಚ್ಚುವರಿ ಗಂಡಸಿನ ಮೇಲೆ ಬ್ರಹ್ಮಚರ್ಯನ್ನು ಹೇರುವಿಕೆ ತಾತ್ವಿಕವಾಗಿಯೂ, ಪ್ರಾಯೋಗಿಕವಾಗಿಯೂ ವಿಫಲಗೊಳ್ಳುತ್ತದೆ. ಬದಲಿಗೆ ಅವನನ್ನು ಒಬ್ಬ ಗೃಹಸ್ಥ (ಒಂದು ಕುಟುಂಬ ಪಾಲಕ)ನನ್ನಾಗಿ ಇಡುವುದು ಜಾತಿಯ ಹಿತದೃಷ್ಟಿಯಿಂದಲೇ. ಆದರೆ ಜಾತಿಯೊಳಗೆ ಒಬ್ಬ ಹೆಂಡತಿಯನ್ನು ಅವನಿಗೆ ಒದಗಿಸುವುದೇ ಸಮಸ್ಯೆಯಾಗಿದೆ. ಹೊರನೋಟಕ್ಕೆ ಇದು ಅಸಾಧ್ಯ. ಏಕೆಂದರೆ ಒಂದು ಜಾತಿಯಲ್ಲಿರಬೇಕಾದ ಪ್ರಮಾಣವೆಂದರೆ ಒಂದು ಗಂಡಿಗೆ ಒಂದು ಹೆಣ್ಣು. ಎರಡು ಬಾರಿ ಮದುವೆ ಆಗುವ ಅವಕಾಶವನ್ನು ಯಾರೂ ಹೊಂದಲಾಗದು. ಬಿಗಿಯಾಗಿ ತಾನೇ ಬೇಲಿ ಹಾಕಿರುವ ಒಂದು ಜಾತಿಯೊಳಗೆ ಮದುವಣಿಗರ ಬಳಿಗೆ ಹೋಗುವ ಮದುವಣಗಿತ್ತಿಯರು ಯಾವಾಗಲೂ, ಸಂಖ್ಯೆ ಆಧಾರಿತವಾಗಿ, ತಕ್ಕಷ್ಟೇ ಇರುತ್ತಾರೆ. ಇಂಥ ಸಂದರ್ಭಗಳಲ್ಲಿ ಹೆಚ್ಚುವರಿ ಗಂಡಸಿಗೆ, ಆತನನ್ನು ಒಂದು ಗುಂಪಿಗೇ ಕಟ್ಟಿಹಾಕುವ ಸಲುವಾಗಿ. ಮದುವೆಯಾಗಬಲ್ಲ ಹಂತವನ್ನು ಇನ್ನೂ ತಲುಪಿರದ ವಧುವನ್ನು ಹೆಂಡತಿಯಾಗಿ ತುಂಬಿಸಬಹುದು. ಹೆಚ್ಚುವರಿ ಗಂಡಸಿನ ವಿಚಾರದಲ್ಲಿ ನಿಶ್ಚಯವಾಗಿಯೂ ಇದು ಅತ್ಯುತ್ತಮವಾದ ಸಾಧ್ಯತೆ. ಇದರಿಂದ ಆತನನ್ನು ಜಾತಿಯಲ್ಲೇ ಉಳಿಸಿದಂತಾಗುತ್ತದೆ. ಜಾತಿಯಿಂದ ನಿರಂತರವಾಗಿ ಹೊರಗೆ ಹರಿಯುವ ಸಂಖ್ಯಾಬಲವನ್ನು ಈ ವಿಧಾನದಿಂದ ಸಂರಕ್ಷಿಸಿದಂತಾಗುವುದಲ್ಲದೆ ಸ್ವಜಾತಿಪದ್ಧತಿ ಮತ್ತು ನೀತಿಗಳನ್ನೂ ಕಾಪಾಡಿದಂತಾಗುತ್ತದೆ.
ಸ್ತ್ರೀ ಪುರುಷರ ನಡುವೆ ಇರುವ ಸಾಂಖ್ಯಿಕ ತಾರತಮ್ಯವನ್ನು ನಾಲ್ಕು ರೀತಿಗಳಿಂದ ಹೇಗೆ ಅನುಕೂಲಕರವಾಗಿ ಪಾಲಿಸಲಾಗುತ್ತಿದೆಯೆಂಬುದನ್ನು ಈಗ ನೋಡಬಹುದು : (೧) ತನ್ನ ಸತ್ತ ಗಂಡನೊಂದಿಗೆ ವಿಧವೆಯನ್ನು ಸುಡುವುದು, (೨) ಕಡ್ಡಾಯ ವೈಧವ್ಯ – ಸತಿ ಪದ್ಧತಿಗಿಂತ ಸೌಮ್ಯರೂಪ, (೩) ವಿಧುರನ ಮೇಲೆ ಬ್ರಹ್ಮಚರ್ಯವನ್ನು ಹೇರುವುದು. ಮತ್ತು (೪) ಅಪ್ರಾಪ್ತ ವಯಸ್ಕಳೊಂದಿಗೆ ಅವನ ವಿವಾಹ. ನಾನು ಮೇಲೆ ಹೇಳಿದಂತೆ, ಸಾಮಾಜಿಕ ವಿಧಾನಗಳಾಗಿ ಆಚರಣೆಯಲ್ಲಿದ್ದರೂ ವಿಧವೆಯನ್ನು ಸುಡುವುದು ಮತ್ತು ವಿಧುರನಿಗೆ ಬ್ರಹ್ಮಚರ್ಯ ಹೇರುವುದು ಇವು ಗುಂಪಿನ ಸ್ವಜಾತಿ ವಿವಾಹಪದ್ಧತಿ ಪರಿಪಾಲನೆಗೆ ನೇರವಾದ ಸೇವೆಯನ್ನು ಸಲ್ಲಿಸುತ್ತವೆ ಎಂಬುದು ಸಂದೇಹ. ಆದರೆ ವಿಧಾನಗಳನ್ನು ಕಡ್ಡಾಯಗೊಳಿಸಿದಾಗ ಅಂತಿಮ ಗುರಿ ತಲುಪಲು ಶಕ್ತವಾಗುತ್ತವೆ. ಹಾಗಾದರೆ ಈ ವಿಧಾನಗಳು ಸೃಷ್ಟಿಸುವ ಗುರಿಯಾದರೂ ಯಾವುದು? ಅವು ಸ್ವಜಾತಿ ಮದುವೆ ಪದ್ಧತಿಯನ್ನು ಸೃಷ್ಟಿಸುತ್ತವೆ ಮತ್ತು ಮುಂದುವರಿಸುತ್ತವೆ. ಜಾತಿ ಕುರಿತ ವಿವಿಧ ವ್ಯಾಖ್ಯೆಗಳಿಗೆ ಮಾಡಿದ ನಮ್ಮ ವಿಶ್ಲೇಷಣೆಯಂತೆ ಜಾತಿ ಮತ್ತು ಸ್ವಜಾತಿ ವಿವಾಹಪದ್ಧತಿ ವಿಭಿನ್ನವಾಗಿವೆ. ಈ ವಿಧಾನಗಳ ಅಸ್ತಿತ್ವವು ಜಾತಿಗೆ ಸರಿಸಮಾನವಾಗಿದೆ. ಮತ್ತು ಜಾತಿ ಈ ವಿಧಾನಗಳನ್ನು ಒಳಗೊಂಡಿದೆ.
ನನ್ನ ಅಭಿಪ್ರಾಯದ ಪ್ರಕಾರ, ಜಾತಿಗಳ ಒಂದು ವ್ಯವಸ್ಥೆಯಲ್ಲಿ ಇದು ಜಾತಿಯೊಂದರ ಸಾಮಾನ್ಯ ಕ್ರಿಯಾವಿಧಾನ. ಈಗ ನಾವು ಹೆಚ್ಚು ಸಮಾನವಾಗಿ ಕಾಣುವ ಅಂಶಗಳಿಂದ ಹೊರಳಿ ಜಾತಿ ಮತ್ತು ಅದರ ಕಾರ್ಯವಿಧಾನಗಳ ಕಡೆ ನೋಡೋಣ. ಭಾರತದಲ್ಲಿ ಜಾತಿ ಅತ್ಯಂತ ಪ್ರಾಚೀನ ಏರ್ಪಾಡು ಆಗಿತ್ತು (ಪುಟ 14)
ಎನ್ನುವುದು ನಿಜವಾದರೂ ಜಾತಿವ್ಯವಸ್ಥೆಯ ಇತಿಹಾಸವನ್ನು ಅನಾವರಣಗೊಳಿಸಲು ಹೊರಡುವವರ ಹಾದಿಯಲ್ಲಿ ಅನೇಕಾನೇಕ ಹಳ್ಳತಗ್ಗುಗಳಿವೆಯೆಂಬುದನ್ನು ನಾನು ಬೇರೆ ಹೇಳಬೇಕಾಗಿಲ್ಲ. ಅದರಲ್ಲಿಯೂ ವಿಶೇಷವಾಗಿ, ವಿಶ್ವಾಸಾರ್ಹವಾದ ಅಥವಾ ಲಿಖಿತ ದಾಖಲೆಗಳು ಲಭ್ಯವಿಲ್ಲದಾಗ ಅಥವಾ ಇಲ್ಲಿನ ಹಿಂದೂಗಳ ತರಹದ ಜನ ಜಗತ್ತೊಂದು ಭ್ರಮೆಯೆಂದು ಭಾವಿಸಿ ಅಂತೆಯೇ ಚರಿತ್ರೆಯನ್ನು ದಾಖಲಿಸುವುದು ಒಂದು ಅವಿವೇಕದ ಕೆಲಸ ಎಂದು ಬಗೆದಿದ್ದಾಗ ಇದು ಅತ್ಯಂತ ನಿಜವೆನ್ನಿಸಿದೆ.
ಆದರೆ ಜಾತಿ ಬಹುಕಾಲದಿಂದ ಜೀವಂತವಾಗಿದೆ. ಅಂತೆಯೇ ರೀತಿರಿವಾಜುಗಳು ಮತ್ತು ನೀತಿನಡವಳಿಕೆಗಳು ಅನೇಕ ವೇಳೆ ಈ ದಾಖಲಿಸದ ಇತಿಹಾಸವನ್ನು ತೆರೆದಿಡುವ ಪಳೆಯುಳಿಕೆಗಳಾಗಿರುತ್ತವೆ. ಇದು ನಿಜವಾದರೆ, ಹೆಚ್ಚುವರಿ ಗಂಡಸು ಮತ್ತು ಹೆಚ್ಚುವರಿ ಹೆಂಗಸಿನ ಸಮಸ್ಯೆಗಳನ್ನು ಎದುರಿಸಲು ಹಿಂದೂಗಳು ಕಂಡುಕೊಂಡ ಪರಿಹಾರವನ್ನು ನಾವು ಪರಿಶೀಲಿಸಿದರೆ ಅಲ್ಲಿಗೆ ನಮ್ಮ ಪ್ರಯತ್ನಕ್ಕೆ ಸಾಕಷ್ಟು ಪ್ರತಿಫಲ ಸಿಕ್ಕಿದಂತಾಗುತ್ತದೆ.
ಹಿಂದೂ ಸಮಾಜವು ತನ್ನ ನಡವಳಿಕೆಯಲ್ಲಿ ಸಂಕೀರ್ಣವೆನಿಸಿದರೂ ಮೇಲುನೋಟಕ್ಕೇ ಮೂರು ಅತಿರೇಕದ ಸಂಪ್ರದಾಯಗಳು ಎದ್ದು ಕಾಣಿಸುತ್ತವೆ. ಅವುಗಳೆಂದರೆ :
(೧) ಸತಿ ಪದ್ಧತಿ ಅಥವಾ ಮೃತ ಗಂಡನ ಚಿತೆಯಲ್ಲೇ ಜೀವಂತವಾಗಿ ಪತ್ನಿಯನ್ನು ಸುಡುವುದು.
(೨) ವಿಧವೆಗೆ ಮದುವೆಯಾಗಲು ಬಿಡದಂತೆ ವೈಧವ್ಯವನ್ನು ಹೇರುವುದು.
(೩) ಹೆಣ್ಣುಮಕ್ಕಳ ಬಾಲ್ಯವಿವಾಹ.
ಇದರೊಂದಿಗೆ, ವಿಧುರನು ಸನ್ಯಾಸ (ಪರಿತ್ಯಜನೆ) ಕೈಗೊಳ್ಳಬೇಕೆಂಬ ಒಂದು ಬಲವಾದ ಒತ್ತಾಸೆಯನ್ನು ಪ್ರತಿಪಾದಿಸುವುದುಂಟು; ಆದರೆ ಇದು ಕೇವಲ ಮಾನಸಿಕ ಪ್ರವೃತ್ತಿಗೆ ಸಂಬಂಧಿಸಿದುದಾಗಿದೆ.
ನಾನು ತಿಳಿದ ಮಟ್ಟಿಗೆ, ಈ ಸಂಪ್ರದಾಯಗಳ ಹುಟ್ಟಿಗೆ ಯಾವ ವೈಜ್ಞಾನಿಕ ವಿವರಣೆಯೂ ಇಂದಿನ ತನಕ ಸಾಧ್ಯವಾಗಿಲ್ಲ. ಈ ಸಂಪ್ರದಾಯಗಳನ್ನು ಗೌರವಿಸಿದ್ದೇಕೆಂದು ತಿಳಿಸಲು ನಮಗೆ ಸಮೃದ್ಧ ಸಿದ್ಧಾಂತಗಳಿದ್ದರೂ ಅವುಗಳ ಉಗಮ ಮತ್ತು ಅಸ್ತಿತ್ವದ ಕುರಿತಾಗಿ ಹೇಳಲು ಏನೂ ಇಲ್ಲ. ಗಂಡ ಹೆಂಡತಿಯರ “ದೇಹ ಮತ್ತು ಆತ್ಮಗಳ ಪರಿಪೂರ್ಣ ಮಿಲನದ ಸಾಕ್ಷ್ಯ”ವೆಂದು ‘ಸತಿ’ ಪದ್ಧತಿಯನ್ನು ಪುರಸ್ಕರಿಸಲಾಗಿದೆ: ಅದು “ಸಮಾಧಿಯ ಆಚೆಗೂ ಇರುವ ಭಕ್ತಿ”, ಯಾಕೆಂದರೆ ಪತ್ನಿತ್ವದ ಆದರ್ಶವನ್ನು ಇದು ಆವಿರ್ಭವಿಸಿದೆ. ಉಮೆ ಹೇಳುವ ಈ ಮಾತುಗಳಲ್ಲಿ ಇದು ಚೆನ್ನಾಗಿ ಒಡಮೂಡಿದೆ: “ತನ್ನ ಈಶ್ವರನಿಗೆ ನಿಷ್ಠಳಾಗಿರುವುದು ಹೆಣ್ಣಿನ ಗೌರವ, ಅದು ಅವಳ ಅನಂತ ಸ್ವರ್ಗ.” ಆಕೆ ಅತ್ಯಂತ ಹೃದಯಸ್ಪರ್ಶಿಯಾದ ಮಾನವೀಯ ದನಿಯಿಂದ ಕೂಗಿ ಹೇಳುತ್ತಾಳೆ: “ಓ ಮಹೇಶ್ವರ, ನೀನು ನನ್ನಿಂದ ತೃಪ್ತಿ ಪಡೆಯದಿದ್ದಲ್ಲಿ ನಾನು ಸ್ವರ್ಗವನ್ನು ಕೂಡ ಆಸೆ ಪಡುವುದಿಲ್ಲ”, (ನೋಡಿ: ಎ. ಕೆ. ಕುಮಾರಸ್ವಾಮಿ, ಎ ಡಿಫೆನ್ಸ್ ಆಫ್ ದಿ ಈಸ್ಟರ್ನ್ ವುಮನ್ ಇನ್ ದಿ ಬ್ರಿಟಿಷ್ ಸೋಶಿಯಲಾಜಿಕಲ್ ರಿವ್ಯೂ, ವಾಲ್ಯೂಮ್ IV, ೧೯೧೩), ಕಡ್ಡಾಯ ವೈಧವ್ಯವನ್ನು ಗೌರವಿಸಿದ್ದೇಕೆಂಬುದು ನನಗೆ ಗೊತ್ತಿಲ್ಲ; ಅದಕ್ಕೆ ಬದ್ಧರಾದವರು ಅನೇಕ ಜನರಿದ್ದರೂ ಅದನ್ನು ಹಾಡಿ ಹೊಗಳಿದ ಒಬ್ಬನನ್ನಾದರೂ ನಾನು ಭೇಟಿಯಾಗಿಲ್ಲ. ಡಾ. ಕೇತ್ಕರ್ ಅವರು ಬಾಲ್ಯವಿವಾಹದ ಗೌರವಾರ್ಥವಾಗಿರುವ ಸ್ತೋತ್ರವನ್ನು ಮುಂದೆ ಈ ರೀತಿ ವರದಿ ಮಾಡಿದ್ದಾರೆ. “ಆಕೆ ಅಥವಾ ಆತ ತಾನು ಲಗ್ನವಾದವನೊಂದಿಗಲ್ಲದೆ ಇತರ ಪುರುಷ ಅಥವಾ ಸ್ತ್ರೀಯೊಂದಿಗೆ ಅನುರಾಗವನ್ನು ಹೊಂದಬಾರದು. ಅಂಥ ಪರಿಶುದ್ಧತೆ ವಿವಾಹೋತ್ತರದಲ್ಲಿ ಅಲ್ಲದೆ ವಿವಾಹಪೂರ್ವದಲ್ಲೂ ಕಡ್ಡಾಯವಾಗಿರುತ್ತದೆ; ಏಕೆಂದರೆ ಅದೊಂದೇ ಆದರ್ಶ ಶೀಲವಂತಿಕೆ. ತಾನು ಮದುವೆಯಾಗಲಿರುವ ಗಂಡಸಿನ ಹೊರತು ಬೇರೆ (ಪುಟ 15)
ಪುರುಷನಲ್ಲಿ ಪ್ರೀತಿ ಪಡುವ ಯಾವ ಕನೈಯನ್ನೂ ಪರಿಶುದ್ದಳೆಂದು ಪರಿಗಣಿಸಲಾಗುವುದಿಲ್ಲ. ತಾನು ಯಾರನ್ನು ಮದುವೆಯಾಗಲಿದ್ದೇನೆಂಬುದು ಆಕೆಗೆ ಗೊತ್ತಿಲ್ಲವಾದ್ದರಿಂದ ಮದುವೆಗೆ ಮೊದಲು ಆಕೆ ಯಾವ ವ್ಯಕ್ತಿಯಲ್ಲೂ ಅನುರಕ್ತಳಾಗಕೂಡದು. ಹಾಗೆ ಮಾಡಿದ್ದೇ ಆದರೆ ಅದೊಂದು ಪಾಪ. ಆದುದರಿಂದ ಕನ್ಯೆಯು ಲೈಂಗಿಕ ಪ್ರಜ್ಞೆ ಜಾಗೃತಗೊಳ್ಳುವ ಮೊದಲೇ ತಾನು ಯಾರನ್ನು ಪ್ರೀತಿಸಬೇಕೆಂಬುದನ್ನು ತಿಳಿಯುವುದು ಒಳ್ಳೆಯದು (ಹಿಸ್ಟರಿ ಆಫ್ ಕ್ಯಾಸ್ಟ್ ಸಿಸ್ಟಮ್ ಇನ್ ಇಂಡಿಯ, 1909 ಪುಟಗಳು 32, 33) ಅದಕ್ಕೆಂದೇ ಬಾಲ್ಯವಿವಾಹ.
ಈ ವಾಗಾಡಂಬರದ ಮತ್ತು ಚಮತ್ಕಾರದ ತರ್ಕಸರಣಿಯು ಈ ಸಂಪ್ರದಾಯಗಳನ್ನು ಗೌರವಿಸಿದ್ದೇಕೆಂಬುದನ್ನು ಸೂಚಿಸುತ್ತವೆಯಾದರೂ ಅವನ್ನು ಪರಿಪಾಲಿಸುತ್ತಿರುವುದೇಕೆಂಬುದನ್ನು ಮಾತ್ರ ಹೇಳುವುದಿಲ್ಲ. ಪಾಲಿಸಲ್ಪಟ್ಟಿರುವುದರಿಂದಲೇ ಅವುಗಳು ಗೌರವಿಸಲ್ಪಟ್ಟಿವೆ ಎಂಬುದು ನನ್ನ ಸ್ವಂತ ವ್ಯಾಖ್ಯಾನವಾಗಿದೆ. ೧೮ನೆಯ ಶತಮಾನದ ವ್ಯಕ್ತಿಸ್ವಾತಂತ್ಯ ಪ್ರಜ್ಞೆಯ ಉದಯದ ಬಗೆಗೆ ಸ್ವಲ್ಪ ಪರಿಚಯ ಇರುವ ಯಾರೇ ಆದರೂ ನನ್ನ ಹೇಳಿಕೆಯನ್ನು ಪರಿಗಣಿಸುತ್ತಾರೆ. ಎಲ್ಲ ಕಾಲದಲ್ಲಿಯೂ ಬದಲಾವಣೆಯೇ ಅತ್ಯಂತ ಮುಖ್ಯವಾದದ್ದು; ಅದು ಘಟಿಸಿ ಅದೆಷ್ಟೋ ಕಾಲಾನಂತರ ಅದಕ್ಕೊಂದು ಸಮರ್ಥನೆ ಕೊಡಲು ಮತ್ತು ನೈತಿಕ ಬೆಂಬಲ ನೀಡಲು ಅದರ ಸುತ್ತ ಸಿದ್ಧಾಂತಗಳು ಹುಟ್ಟಿಕೊಳ್ಳುತ್ತವೆ. ಈ ಸಂಪ್ರದಾಯಗಳನ್ನು ಉಜ್ವಲವಾಗಿಸುವ ವಾಸ್ತವಾಂಶವೇ ಆ ವೈಭವೀಕರಣ. ಅವುಗಳ ಉಳಿವಿಗೋಸ್ಕರವಾಗಿ ಈ ವೈಭವೀಕರಣ ಅನಿವಾರ್ಯವಾಗಿತ್ತೆಂಬುದನ್ನು ಇದು ಸಾಬೀತುಪಡಿಸುತ್ತದೆಂದು ನಾನು ಒತ್ತಿ ಹೇಳುತ್ತೇನೆ. ಇಂತಹ ಸಂಪ್ರದಾಯಗಳು ಮೊಳಕೆಯೊಡೆದದ್ದೇಕೆಂಬ ಪ್ರಶ್ನೆಗೆ ನನ್ನ ಉತ್ತರವೇನೆಂದರೆ ಜಾತಿಯ ರಚನೆಗಾಗಿ ಅವುಗಳ ಅಗತ್ಯವಿತ್ತು. ಅವುಗಳ ಗೌರವಾರ್ಥಕವಾಗಿ ಸಿದ್ಧಾಂತಗಳು ಹುಟ್ಟಿಕೊಂಡಿರುವುದೂ ಅವುಗಳನ್ನು ಜನಪ್ರಿಯಗೊಳಿಸಲು ಅಥವಾ ಕಹಿಮಾತ್ರೆಗೆ ಸಿಹಿಲೇಪ ಬಳಿಯಲೆಂದೇ ಎಂದು ನಾವು ಹೇಳಬಹುದು. ಏಕೆಂದರೆ ನಯನಾಜೂಕಿನದಲ್ಲದ ಅಂದಿನ ಜನಸಮುದಾಯದ ನೈತಿಕಪ್ರಜ್ಞೆಗೆ ಅವು ಅಸಹ್ಯಕರವೂ ತಲ್ಲಣಕಾರಿಯೂ ಆಗಿದ್ದಿರಬೇಕು. ಈ ಸಂಪ್ರದಾಯಗಳನ್ನು ಆದರ್ಶವೆಂದು ಪ್ರತಿನಿಧಿಸಲಾಗಿದ್ದರೂ ಅವುಗಳು ಸಾಮಾಜಿಕ ವಿಧಿವಿಧಾನಗಳ ಸ್ವರೂಪದಲ್ಲಿದ್ದವು. ಆದರೆ ಇದು ನಮ್ಮನ್ನು ಅವುಗಳಿಂದ ಪ್ರವಹಿಸುವ ಫಲಿತಾಂಶಗಳನ್ನು ಅರ್ಥ ಮಾಡಿಕೊಳ್ಳದಂತೆ ಕುರುಡಾಗಿಸಬಾರದು. ವಿಧಾನಗಳ ಆದರ್ಶೀಕರಣವು ಅಗತ್ಯವೆಂದೂ ಮತ್ತು ಪ್ರಾಯಶಃ ಈ ನಿರ್ದಿಷ್ಟ ವಿಚಾರದಲ್ಲಿ ಅವನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗುವಂತೆ ಉದ್ದೀಪನಗೊಳಿಸಿರಬಹುದೆಂದೂ ಯಾರು ಬೇಕಾದರೂ ಧಾರಾಳವಾಗಿ ಹೇಳಬಹುದು. ವಿಧಾನವನ್ನೇ ಗುರಿಯೆಂದು ಹೇಳುವುದರಿಂದ ಅದು ಅದರ ನಿಜಸ್ವರೂಪವನ್ನು ಮರೆಮಾಚುವುದರ ಹೊರತು ಬೇರೆ ತೊಂದರೆಯೇನೂ ಇಲ್ಲ; ವಿಧಾನದ ನಿಜಸ್ವಭಾವವನ್ನೇನೂ ಇದರಿಂದ ಕಿತ್ತು ಹಾಕಲಾಗುವುದಿಲ್ಲ. ವಿಧಾನವನ್ನೇ ಗುರಿಯೆಂದು ಕರೆಯುವಂತೆ ಎಲ್ಲ ಬೆಕ್ಕುಗಳೂ ನಾಯಿಗಳೇ ಎಂದು ನೀವು ಒಂದು ಕಾನೂನನ್ನು ಬೇಕಿದ್ದರೆ ಹೊರಡಿಸಬಹುದು. ಇದರಿಂದ ಬೆಕ್ಕುಗಳನ್ನು ನಾಯಿಗಳನ್ನಾಗಿಸದಂತೆ, ವಿಧಾನಗಳ ಸ್ವಭಾವವನ್ನೇನೂ ನೀವು ಮಾರ್ಪಡಿಸಲಾರಿರಿ. ಇದರ ಪರಿಣಾಮವಾಗಿ ಸತಿ, ಒತ್ತಾಯದ ವೈಧವ್ಯ ಮತ್ತು ಹೆಣ್ಣುಮಕ್ಕಳ ಬಾಲ್ಯವಿವಾಹ ಇವುಗಳು ಒಂದು ಜಾತಿಯಲ್ಲಿ ಅದರ ಹೆಚ್ಚುವರಿ ಗಂಡಸು ಹಾಗೂ ಹೆಚ್ಚುವರಿ ಹೆಂಗಸರ ಸಮಸ್ಯೆಯನ್ನು ಪರಿಹರಿಸಲೂ ಮತ್ತು ಸ್ವಜಾತಿ ವಿವಾಹ ಪದ್ಧತಿಯನ್ನು ಪಾಲಿಸಲೂ ಮುಖ್ಯವಾಗಿ ಹುಟ್ಟಿಕೊಂಡ ಸಂಪ್ರದಾಯಗಳೆಂದು ನಾನು ಭಾವಿಸಿರುವುದು (ಪುಟ 16)
ಸಮರ್ಥನೀಯವಾಗಿದೆ. ಈ ಸಂಪ್ರದಾಯಗಳ ಹೊರತು ಕಟ್ಟುನಿಟ್ಟಾದ ಸ್ವಜಾತಿ ವಿವಾಹಪದ್ಧತಿಯನ್ನು ಕಾಪಾಡಲು ಆಗದು; ಸ್ವಜಾತಿ ವಿವಾಹಪದ್ಧತಿಯಿರದ ಜಾತಿಯೊಂದು ಅಪ್ಪಟ ನಕಲಿ.
ಭಾರತದಲ್ಲಿ ಜಾತಿಯ ಸೃಷ್ಟಿ ಮತ್ತು ಸಂರಕ್ಷಣೆಯ ವಿಧಾನವನ್ನು ವಿವರಿಸಿದ ಮೇಲೆ ಸಹಜವಾಗಿಯೇ ಹುಟ್ಟಿಕೊಳ್ಳುವ ಮುಂದಿನ ಪ್ರಶ್ನೆಯೆಂದರೆ ಅದರ ಮೂಲದ ಕುರಿತಾದದ್ದು. ಹುಟ್ಟಿನ ಬಗೆಗಿನ ಪ್ರಶ್ನೆ ಯಾವಾಗಲೂ ನೋವನ್ನುಂಟುಮಾಡುವಂತಹದ್ದು, ದುರ್ದೈವವೆಂದರೆ ಜಾತಿಯ ಅಧ್ಯಯನದಲ್ಲಿ ಅದನ್ನು ಕಡೆಗಣಿಸಲಾಗಿದೆ. ಕೆಲವರು ಅದನ್ನು ಕಂಡೂ ಕಾಣದಂತೆ ಇದ್ದರೆ ಇನ್ನು ಕೆಲವರು ನುಸುಳಿಕೊಂಡಿದ್ದಾರೆ. ಜಾತಿಯ ಉಗಮ ಎಂಬುದೊಂದುಂಟೇ ಎಂದು ಮತ್ತೆ ಕೆಲವರು ಕಕ್ಕಾಬಿಕ್ಕಿಯಾಗಿದ್ದಾರಲ್ಲದೆ. “ನಾವು ‘ಹುಟ್ಟು’ ಎಂಬ ಶಬ್ದದ ಮೋಹವನ್ನು ನಿಯಂತ್ರಿಸಕೊಳ್ಳಲು ಆಗದಿದ್ದಲ್ಲಿ ‘ಜಾತಿಯ ಹುಟ್ಟುಗಳು’ ಎಂಬ ಬಹುವಚನ ರೂಪವನ್ನು ಉಪಯೋಗಿಸುವುದೇ ಕ್ಷೇಮ” ಎಂದೂ ಸೂಚಿಸಿದ್ದಾರೆ. ನನ್ನ ಬಗ್ಗೆ ಹೇಳುವುದಾದರೆ, ಭಾರತದಲ್ಲಿ ಜಾತಿಯ ಉಗಮದ ವಿಚಾರದಲ್ಲಿ ನಾನು ತಬ್ಬಿಬ್ಬಾಗುವುದಿಲ್ಲ. ನಾನು ಮೊದಲೇ ಸಾಬೀತುಪಡಿಸಿರುವಂತೆ ಜಾತಿಯ ಏಕೈಕ ಲಕ್ಷಣ ಸ್ವಜಾತಿ ವಿವಾಹಪದ್ಧತಿ. ಜಾತಿಯ ಹುಟ್ಟು ಎಂದು ನಾನು ಹೇಳುವಾಗ ಸ್ವಜಾತಿ ವಿವಾಹಪದ್ಧತಿಗಾಗಿ ಕಾರ್ಯವಿಧಾನದ ಉಗಮ ಎಂದೇ ನನ್ನ ಅರ್ಥ.
ಒಂದು ಸಮಾಜದಲ್ಲಿನ ವ್ಯಕ್ತಿಗಳು ತಮ್ಮನ್ನು ತಾವು ತುಚ್ಛೀಕರಿಸಿಕೊಳ್ಳುವ ಕಲ್ಪನೆಯನ್ನು ಎಷ್ಟು ದೊಡ್ಡದಾಗಿ ಜನಪ್ರಿಯಗೊಳಿಸಲಾಗಿದೆಯೆಂದರೆ – ಅಶ್ಲೀಲಗೊಳಿಸಲಾಗಿದೆ ಎಂದೂ ಹೇಳುವವನಿದ್ದೆ- ರಾಜಕೀಯ ಪ್ರವಚನಗಳಲ್ಲಿ ಅದೊಂದು ಬೃಹತ್ತಾದ ನಯವಂಚನೆಯೇ ಆಗಿದೆ. ವ್ಯಕ್ತಿಗಳ ಒಟ್ಟು ಮೊತ್ತ ಸಮಾಜವಾಗುತ್ತದೆಂದು ಹೇಳುವುದು ಅಸಮರ್ಪಕವಾಗಿದೆ. ಸಮಾಜವು ಯಾವಾಗಲೂ ವರ್ಗಗಳಿಂದ ಕೂಡಿದ್ದಾಗಿದೆ. ವರ್ಗವೈಷಮ್ಯ ಸಿದ್ಧಾಂತವನ್ನು ದೃಢವಾಗಿ ಹೇಳುವುದು ಉತ್ರೇಯಾಗಬಹುದು. ಆದರೆ ಒಂದು ಸಮಾಜದಲ್ಲಿ ಖಚಿತವಾದ ವರ್ಗಗಳ ಅಸ್ತಿತ್ವ ಮಾತ್ರ ಸತ್ಯವಾದುದು. ಅವುಗಳ ಮೂಲ ಬೇರೆಬೇರೆ ಆಗಿರಬಹುದು. ಅವು ಆರ್ಥಿಕ ಅಥವಾ ಬೌದ್ಧಿಕ ಅಥವಾ ಸಾಮಾಜಿಕವಾಗಿರಬಹುದು. ಆದರೆ ಒಂದು ಸಮಾಜದಲ್ಲಿ ಒಬ್ಬ ವ್ಯಕ್ತಿ ಯಾವಾಗಲೂ ಒಂದು ವರ್ಗದ ಸದಸ್ಯ. ಇದು ವಿಶ್ವವ್ಯಾಪಕವಾದ ಸಂಗತಿ. ಆರಂಭದ ಹಿಂದೂ ಸಮಾಜ ಕೂಡ ಈ ನಿಯಮಕ್ಕೊಂದು ಅಪವಾದವಾಗಿರಲಾರದು. ವಾಸ್ತವವಾಗಿ ಹಿಂದೂ ಸಮಾಜವು ಸಮಯಕ್ಕೆ ಅತೀತವಾಗಿ ಇರಲಿಲ್ಲವೆಂಬ ಸಂಗತಿಯೂ ನಮಗೆ ಗೊತ್ತಿದೆ. ಈ ಸರಳೀಕರಣವನ್ನು ನಾವು ನೆನಪಿನಲ್ಲಿಟ್ಟರೆ ಜಾತಿಯ ಉಗಮ ಕುರಿತ ನಮ್ಮ ಅಧ್ಯಯನವು ಬಹುವಾಗಿ ಸುಲಭವಾಗುತ್ತದೆ. ಯಾಕೆಂದರೆ ತನ್ನನ್ನು ತಾನು ಜಾತಿಯಾಗಿಸಿಕೊಂಡ ವರ್ಗ ಮೊದಲು ಯಾವುದಿತ್ತು ಎಂಬುದನ್ನಷ್ಟೇ ಈಗ ನಾವು ನಿರ್ಧರಿಸಬೇಕಾಗಿದೆ. ಹಾಗೆ ಹೇಳುವುದಾದರೆ ವರ್ಗ ಮತ್ತು ಜಾತಿಗಳು ನಮ್ಮ ಪಕ್ಕದ ಬಾಗಿಲಿನ ನೆರೆಹೊರೆಗಳು. ಇವೆರಡನ್ನು ಬೇರೆಯಾಗಿಸಿರುವುದು ಒಂದು ಗೇಣು ಮಾತ್ರ; ಜಾತಿಯೆಂಬುದು ಸುತ್ತಲೂ ಗೋಡೆ ನಿರ್ಮಿಸಿಕೊಂಡಿರುವ ಒಂದು ವರ್ಗ.
ಜಾತಿಯ ಹುಟ್ಟನ್ನು ಕುರಿತ ಅಧ್ಯಯನವು ತನ್ನ ಸುತ್ತ ಈ ‘ಗೋಡೆ’ ಎಬ್ಬಿಸಿದ ವರ್ಗ ಯಾವುದು ಎಂಬ ಪ್ರಶ್ನೆಗೆ ಉತ್ತರವನ್ನು ಒದಗಿಸಬೇಕು. ಪ್ರಶ್ನೆಯು ತೀರ ಅನ್ವೇಷಣಾಶೀಲವೆನಿಸಬಹುದು. ಆದರೆ ಅದು ಪ್ರಸ್ತುತವಾಗಿದೆ. ಇಡೀ ಭಾರತದ ಜಾತಿಗಳ ಜನನ ಮತ್ತು ವಿಕಾಸದ ರಹಸ್ಯವನ್ನು ವಿಶದಪಡಿಸಲು ಈ ಪ್ರಶ್ನೆಗೆ ಸಿಗುವ ಉತ್ತರ ಸಹಾಯಕವಾಗುತ್ತದೆ. ದುರದೃಷ್ಟವೆಂದರೆ ಈ ಪ್ರಶ್ನೆಗೆ ನೇರವಾದ ಉತ್ತರ ನನ್ನ ಅಳವಿನಲ್ಲಿಲ್ಲ. ನಾನೇನಿದ್ದರೂ ಇದಕ್ಕೆ ಪರೋಕ್ಷವಾಗಿ ಉತ್ತರಿಸಬಲ್ಲೆನಷ್ಟೆ. ಹಿಂದೂ ಸಮಾಜದಲ್ಲಿ ಈಗ ಉಲ್ಲೇಖಿಸಿರುವ ಸಂಪ್ರದಾಯಗಳು ರೂಢಿಯಲ್ಲಿದ್ದವೆಂದು ನಾನು ಈ ಮೇಲೆ ಹೇಳಿದ್ದೇನೆ. ಅವುಗಳ (ಪುಟ 17)
ಅಸ್ತಿತ್ವದ ವ್ಯಾಪಕತೆಯನ್ನು ಸಿದ್ಧಪಡಿಸುವ ಸಲುವಾಗಿ ಈ ಹೇಳಿಕೆಯನ್ನು ಪುರಾವೆಗಳ ಸಹಿತ ಪುಷ್ಟೀಕರಿಸಬೇಕಾಗಿದೆ. ಈಗ ಹೇಳಿರುವ ಸಂಪ್ರದಾಯಗಳು ಕಟ್ಟುನಿಟ್ಟಾಗಿ ಒಂದು ಜಾತಿಯಲ್ಲಿ ಅಂದರೆ ಬ್ರಾಹ್ಮಣರಲ್ಲಿ ಮಾತ್ರ ದೊರೆಯುತ್ತವೆ. ಹಿಂದೂ ಸಮಾಜದ ಸಾಮಾಜಿಕ ಶ್ರೇಣಿಯಲ್ಲಿ ಅವರು ಅತ್ಯುನ್ನತ ಸ್ಥಾನವನ್ನು ಆಕ್ರಮಿಸಿದ್ದಾರೆ. ಬ್ರಾಹ್ಮಣೇತರ ಜಾತಿಗಳಲ್ಲಿ ಅವುಗಳ ಅಸ್ತಿತ್ವವು ಉಪ ಉತ್ಪನ್ನದ ರೂಪದಲ್ಲಿದ್ದು ಅದರ ಆಚರಣೆಯು ಕಟ್ಟುನಿಟ್ಟಾಗಿಯೂ ಇಲ್ಲ, ಪೂರ್ಣವಾಗಿಯೂ ಇಲ್ಲ. ಪ್ರಮುಖವಾದ ಈ ಸಂಗತಿಯು ಬಹುಮುಖ್ಯವೆನಿಸುವ ಅವಲೋಕನಕ್ಕೆ ಬುನಾದಿಯಾಗಿ ನೆರವಾಗಲಿದೆ. ಬ್ರಾಹ್ಮಣೇತರ ಜಾತಿಗಳಲ್ಲಿ ಈ ಸಂಪ್ರದಾಯಗಳಿರುವುದು ನಿಷ್ಪನ್ನವೆಂಬುದಾದರೆ ಯಾವ ವರ್ಗವು ಜಾತಿವ್ಯವಸ್ಥೆಯ ತಂದೆ ಎನ್ನುವುದನ್ನು ಸಾಬೀತುಪಡಿಸಲು ವಾದ ಮಾಡುವ ಅಗತ್ಯವೇ ಇಲ್ಲ. ಬ್ರಾಹ್ಮಣ ವರ್ಗ ಏಕೆ ತನ್ನನ್ನು ಒಂದು ಜಾತಿಯಾಗಿ ಬೇಲಿ ಹಾಕಿಕೊಂಡಿತು ಎಂಬುದು ಬೇರೆಯೇ ಪ್ರಶ್ನೆ, ಅದನ್ನು ಇನ್ನೊಂದು ಸಂದರ್ಭದ ವಿಶ್ಲೇಷಣೆಗೆ ಬಿಡಬಹುದು. ಆದರೆ ಈ ಸಂಪ್ರದಾಯಗಳ ಕಟ್ಟುನಿಟ್ಟಿನ ಪಾಲನೆಯಿಂದ, ಮತ್ತು ಎಲ್ಲ ಪ್ರಾಚೀನ ನಾಗರಿಕತೆಗಳಲ್ಲೂ ಪುರೋಹಿತ ವರ್ಗ ಸಾಮಾಜಿಕ ಶ್ರೇಷ್ಠತೆಯನ್ನು ಸೊಕ್ಕಿನಿಂದ ಪ್ರತಿಪಾದಿಸಿರುವುದರಿಂದ, ಅವರೇ ಈ ‘ಅನೈಸರ್ಗಿಕ ಏರ್ಪಾಡಿಗೆ’ ಜನ್ಮದಾತರು ಮತ್ತು ಅದನ್ನು ಅನೈಸರ್ಗಿಕ ಮಾರ್ಗಗಳಿಂದ ಸ್ಥಾಪಿಸಿ ಪರಿಪಾಲಿಸಿದವರು ಎಂಬುದು ಅರಿವಾಗುತ್ತದೆ.
ಈಗ ನಾನು ಪ್ರಬಂಧದ ಮೂರನೆಯ ಭಾಗಕ್ಕೆ ಬರುತ್ತೇನೆ. ಇದು ಭಾರತದ ಉದ್ದಗಲಗಳಲ್ಲಿ ಜಾತಿಪದ್ಧತಿಯ ಬೆಳವಣಿಗೆ ಮತ್ತು ಪ್ರಸಾರದ ಪ್ರಶ್ನೆಯನ್ನು ಕುರಿತಾದದ್ದು. ನಾನು ಉತ್ತರಿಸಬೇಕಾದ ಪ್ರಶ್ನೆಯಿದು : ದೇಶದ ಉಳಿದ ಬ್ರಾಹ್ಮಣೇತರರಲ್ಲಿ ಜಾತಿಯೆಂಬ ವ್ಯವಸ್ಥೆ ಹೇಗೆ ಪಸರಿಸಿತು? ಭಾರತದಾದ್ಯಂತ ಜಾತಿಗಳು ದಾಂಗುಡಿಯಿಟ್ಟ ಪ್ರಶ್ನೆಯು ಅದರ ಉಗಮದ ಪ್ರಶ್ನೆಗಿಂತ ನಿಕೃಷ್ಟ ಗತಿಯನ್ನು ಅನುಭವಿಸಿದೆ. ನನಗೆ ಕಾಣುವಂತೆ ಅದಕ್ಕೆ ಮುಖ್ಯ ಕಾರಣವೆಂದರೆ ಪ್ರಸಾರದ ಮತ್ತು ಉಗಮದ ಎರಡು ಪ್ರಶ್ನೆಗಳನ್ನು ಪ್ರತ್ಯೇಕಿಸದಿರುವುದು. ಜಾತಿಪದ್ಧತಿಯು ದೈವ ನಿಯಾಮಕವಾದ ಒಂದು ನ್ಯಾಯ ನಿಬಂಧನೆಯಾಗಿ ಭಾರತದ ಮುಗ್ಧ ಜನರ ಮೇಲೆ ಹೇರಲ್ಪಟ್ಟಿದೆಯೆಂದೋ ಅಥವಾ ಭಾರತೀಯರಿಗೆ ವಿಶಿಷ್ಟವಾದ ಸಾಮಾಜಿಕ ಬೆಳವಣಿಗೆಯ ಯಾವುದೋ ಒಂದು ಕಾನೂನಿನಂತೆ ಇದು ಹುಟ್ಟಿಕೊಂಡಿದೆಯೆಂದೋ ವಿದ್ವಾಂಸರಲ್ಲಿ ರೂಢಿಯಲ್ಲಿರುವ ನಂಬಿಕೆ ಈ ಸ್ಥಿತಿಗೆ ಕಾರಣ.
ನಾನು ಮೊದಲು ಭಾರತದ ಕಾನೂನು ಕಟ್ಟಳೆಗಳನ್ನು ಕೊಟ್ಟವನ ವಿಚಾರ ಪರಿಶೀಲಿಸಲು ಉದ್ದೇಶಿಸಿದ್ದೇನೆ. ಪ್ರತಿಯೊಂದು ರಾಷ್ಟ್ರವೂ ತನ್ನ ನ್ಯಾಯ ನಿಬಂಧನಕಾರರನ್ನು ಪಡೆದಿರುತ್ತದೆ, ಆತ ಆ ದೇಶದ ಸಂಕಷ್ಟದ ಕಾಲದಲ್ಲಿ ಅವತಾರವಾಗಿ ಉದ್ಭವಿಸುತ್ತಾನೆ. ಪಾಪಪೂರಿತ ಮಾನವ ಸಮುದಾಯವನ್ನು ಸರಿಮಾರ್ಗದಲ್ಲಿ ಕರೆದೊಯ್ಯುತ್ತಾನೆ. ಅವರಿಗೆ ನ್ಯಾಯ ಮತ್ತು ನೈತಿಕತೆಯ ಕಾನೂನುಗಳನ್ನು ಕೊಡುತ್ತಾನೆ. ಭಾರತದ ಕಾನೂನು ಜನಕನಾದ ಮನು, ಆ ವ್ಯಕ್ತಿ ಬದುಕಿದ್ದು ನಿಜವೇ ಆದರೆ, ನಿಶ್ಚಯವಾಗಿಯೂ ಆತ ಒಬ್ಬ ನಿರ್ಲಜ್ಜ ವ್ಯಕ್ತಿಯೇ ಸರಿ. ಜಾತಿಯ ಕಾನೂನುಗಳನ್ನು ಕೊಟ್ಟವನು ಆತನೇ ಎಂಬ ಕಥೆಯನ್ನು ಪುರಸ್ಕರಿಸುವುದಾದರೆ ಮನು ಒಬ್ಬ ಹುಚ್ಚು ಸಾಹಸದ ವ್ಯಕ್ತಿಯೇ ಇರಬೇಕು. ಆತನ ಕಾನೂನಿನ ಹಂಚಿಕೆಯನ್ನು ಒಪ್ಪಿಕೊಂಡ ಜನರ ಮಾನವೀಯತೆಯು ಇಂದು ನಮಗೆ ಪರಿಚಿತವಿರುವ ಮಾನವೀಯತೆಗಿಂತ ತೀರ ಭಿನ್ನವಾದುದು ಆಗಿದ್ದಿರಬೇಕು. ಜಾತಿಯ ಕಾನೂನು ಕೊಡಲ್ಪಟ್ಟಿತ್ತು ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಾಗದು. ಮನು ಕೂಡ ತನ್ನ ಕಾನೂನನ್ನು ಮೀರಿ ಬದುಕಿರಲಾರನೆಂದು ಹೇಳುವುದು ಉತ್ಪೇಕ್ಷೆಯಾಗಲಾರದು; ಒಬ್ಬ ಮಾನವನ ಲೇಖನಿಯಿಂದಾಗಿ ಒಂದು ವರ್ಗವನ್ನು ಅಧೋಗತಿಗೆ ಇಳಿಸುವ (ಪುಟ 18)
ಹಾಗೂ ಇನ್ನೊಂದು ವರ್ಗವನ್ನು ಶಿಖರ ಸ್ಥಿತಿಗೇರಿಸುವ ವರ್ಗ ಯಾವುದಿದ್ದೀತು? ಆತ ಎಲ್ಲ ಜನರನ್ನೂ ತನ್ನ ಸ್ವಾಧೀನಪಡಿಸಿಕೊಂಡ ಒಬ್ಬ ಪ್ರಜಾಪೀಡಕನಾಗಿರಬೇಕು. ಇಲ್ಲವಾದರೆ ಈ ರೀತಿಯ ಅನ್ಯಾಯದ ವಿಧಾನದಲ್ಲಿ ತನ್ನ ಪೋಷಕತನವನ್ನು ನಿರ್ವಹಿಸಲು ಆತನನ್ನು ಬಿಡಲಾಯಿತೆಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆತ ನೀಡಿದ ಏರ್ಪಾಡುಗಳತ್ತ ಸುಮ್ಮನೆ ಕಣ್ಣಾಡಿಸಿದರೂ ಸಾಕು ಈ ಅನ್ಯಾಯ ಎದ್ದು ಕಾಣುತ್ತದೆ. ಮನುವಿನ ವಿಚಾರದಲ್ಲಿ ನಾನು ಕಠೋರವಾಗಿರುವಂತೆ ತೋರಬಹುದು. ಆದರೆ ನನ್ನ ಶಕ್ತಿ ಆತನ ಪ್ರೇತಾತ್ಮವನ್ನು ಕೊಲ್ಲುವಷ್ಟು ಸಶಕ್ತವಾಗಿಲ್ಲವೆಂಬುದು ನನಗೆ ಖಚಿತವಿದೆ. ಆತ ಶರೀರರಹಿತ ಅಮೂರ್ತ ವ್ಯಕ್ತಿಯಂತೆ ಇಂದೂ ಜೀವಿಸಿದ್ದು ಕಾಡುತ್ತಿದ್ದಾನೆ. ಮತ್ತು ಆತ ಇನ್ನೂ ದಿರ್ಘಕಾಲ ಬದುಕಿರಬಲ್ಲನೆಂಬ ಭಯ ಕೂಡ ನನಗಿದೆ. ನಿಮ್ಮ ಮನಸ್ಸಿಗೆ ನಾಟುವಂತೆ ಹೇಳಬೇಕಾದ ಒಂದು ವಿಷಯವೆಂದರೆ ಜಾತಿಯ ಕಟ್ಟಳೆಗಳನ್ನು ಮನು ಕೊಡಲಿಲ್ಲ. ಆತ ಹಾಗೆ ಮಾಡುವುದು ಸಾಧ್ಯವೂ ಇಲ್ಲ. ಮನುವಿಗಿಂತ ತುಂಬ ಹಿಂದಿನಿಂದಲೂ ಜಾತಿ ಇತ್ತು. ಆತ ಅದನ್ನು ಎತ್ತಿ ಹಿಡಿದಿದ್ದಾನೆ. ಅದನ್ನು ಸೈದ್ಧಾಂತಿಕಗೊಳಿಸಿದ್ದಾನೆ. ಆದರೆ ನಿಶ್ಚಯವಾಗಿಯೂ ಹಿಂದೂ ಸಮಾಜದ ಇಂದಿನ ವ್ಯವಸ್ಥೆಯನ್ನು ಆತ ಕಟ್ಟಳೆಗೊಳಿಸಿದವನಲ್ಲ ಮತ್ತು ಹಾಗೆ ಮಾಡಲು ಸಾಧ್ಯವೂ ಇರಲಿಲ್ಲ. ಅಸ್ತಿತ್ವದಲ್ಲಿದ್ದ ಜಾತಿಯ ಕಟ್ಟಳೆಗಳನ್ನು ಕ್ರೋಢೀಕರಿಸುವುದರೊಂದಿಗೆ ಮತ್ತು ಜಾತಿ ಧರ್ಮವನ್ನು ಬೋಧಿಸುವುದರೊಂದಿಗೆ ಆತನ ಕೆಲಸ ಮುಗಿಯಿತು. ಜಾತಿವ್ಯವಸ್ಥೆಯ ಪ್ರಸಾರ ಮತ್ತು ಬೆಳವಣಿಗೆಯು ಅತಿ ಬೃಹತ್ತಾದುದು; ಅದನ್ನು ಸಾಧಿಸಬೇಕಾದರೆ ಒಬ್ಬ ವ್ಯಕ್ತಿ ಅಥವಾ ಒಂದು ವರ್ಗದ ಶಕ್ತಿ ಅಥವಾ ಕಪಟತನ ಇರಬೇಕು. ಇದಕ್ಕೆ ಸಮಾನವಾದ ವಾದವೆಂದರೆ ಬ್ರಾಹ್ಮಣರು ಜಾತಿಯನ್ನು ಸೃಷ್ಟಿ ಮಾಡಿದರೆಂಬ ಸಿದ್ಧಾಂತ ಮನುವಿನ ವೈಚಾರಿಕತೆ ತಪ್ಪು ಆಲೋಚನೆಯದ್ದು. ಅಸೂಯೆಯದ್ದು ಹಾಗೂ ದುರುದ್ದೇಶಪೂರಿತವಾದದ್ದು ಎನ್ನುವುದನ್ನು ಬಿಟ್ಟರೆ ಆಗಲೇ ನಾನು ಮನುವಿನ ಬಗ್ಗೆ ಏನನ್ನು ಹೇಳಿದ್ದೇನೊ ಅದಕ್ಕಿಂತ ಹೆಚ್ಚಾಗಿ ಹೇಳಬೇಕಾಗಿಲ್ಲ. ಈ ಬ್ರಾಹ್ಮಣರು ಅನೇಕ ಸಂಗತಿಗಳಲ್ಲಿ ಅಪರಾಧಿಗಳಾಗಿರಬಹುದು, ಇದು ನಿಜವೂ ಹೌದೆಂದು ನಾನು ಧೈರ್ಯವಾಗಿ ಹೇಳಬಲ್ಲೆ. ಆದರೆ ಜಾತಿಪದ್ಧತಿಯನ್ನು ಬ್ರಾಹ್ಮಣೇತರರ ಮೇಲೆ ಹೇರುವ ಕೆಲಸ ಅವರ ಸಾಮರ್ಥ್ಯಕ್ಕೆ ಮೀರಿದ್ದು. ಜಾತಿಯ ಪ್ರಕ್ರಿಯೆಗೆ ಬ್ರಾಹ್ಮಣರು ತಮ್ಮ ನಯವಾದ ಸಿದ್ಧಾಂತದ ಮೂಲಕ ಸಹಾಯ ಮಾಡಿರಬಹುದು. ಆದರೆ ಅವರು ನಿಶ್ಚಯವಾಗಿಯೂ ಅವರ ಸ್ವಂತ ನೆಲೆಯ ಆಚೆಗೆ ತಮ್ಮ ಯೋಜನೆಯನ್ನು ದಾಟಿಸಿರಲಾರರು. ತಮ್ಮ ಸ್ವಂತ ಮಾದರಿಗಳಿಗೆ ಅನುಗುಣವಾಗಿ ಸಮಾಜವನ್ನು ರೂಪಿಸುವುದು! ಎಷ್ಟೊಂದು ಅದ್ಭುತ! ಎಷ್ಟು ಕಠಿಣ! ಅದರ ಮುಂದುವರಿಸುವಿಕೆಯನ್ನು ಯಾರಾದರೂ ವೈಭವೀಕರಿಸಬಹುದಷ್ಟೇ, ಆದರೆ ಅದನ್ನು ದೀರ್ಘವಾಗಿ ಚಾಚುವುದು ನಿಜಕ್ಕೂ ಸಾಧ್ಯವಿಲ್ಲ. ನನ್ನ ಆಕ್ರಮಣಶೀಲತೆಯ ಭಾವಾವೇಶ ಅನಗತ್ಯವೆಂದು ತೋರಬಹುದು, ಆದರೆ ಇದು ಅಪ್ರಸ್ತುತವಾದುದಲ್ಲವೆಂದು ನಾನು ನಿಮಗೆ ಭರವಸೆ ಕೊಡಬಲ್ಲೆ.
ಹಿಂದೂ ಸಮಾಜದಲ್ಲಿ ಜಾತಿವ್ಯವಸ್ಥೆಯು ಶಾಸ್ತ್ರ ಸಮ್ಮತಿಯಿಂದ ಪ್ರಜ್ಞಾಪೂರ್ವಕವಾಗಿ ಸೃಷ್ಟಿಯಾಗಿದೆಯೆಂದು ಸಂಪ್ರದಾಯನಿಷ್ಠರಾದ ಹಿಂದೂಗಳ ಮನಸ್ಸಿನಲ್ಲಿ ಬಲವಾದ ಒಂದು ನಂಬಿಕೆಯಿದೆ. ಈ ನಂಬಿಕೆ ಇರುವುದಷ್ಟೇ ಅಲ್ಲ, ಶಾಸ್ತ್ರಗಳು ತಪ್ಪಾಗಿರಲು ಸಾಧ್ಯವಿಲ್ಲದ್ದರಿಂದ ಜಾತಿಪದ್ಧತಿ ಒಳ್ಳೆಯದೇ ಹೊರತು ಮತ್ತೇನೂ ಅಲ್ಲವೆಂಬ ಆಧಾರಗಳನ್ನಿತ್ತು ಈ ನಂಬಿಕೆಯನ್ನು ಸಮರ್ಥಿಸಲಾಗುತ್ತಿದೆ. ಈ ಧೋರಣೆಯ ಪ್ರತಿಕೂಲ ವಿಚಾರ ಕುರಿತು ನಾನು ಸಾಕಷ್ಟು ವಾದಿಸಿರುವುದು ಇಲ್ಲಿ ನೀಡಲಾದ ಧಾರ್ಮಿಕ ಪರವಾನಿಗೆಯನ್ನು ವೈಜ್ಞಾನಿಕ ಪಾತಳಿಯ ವಾದದ ಮೂಲಕ ಮಣ್ಣುಪಾಲಾಗಿಸಲಾಗಿದೆ ಎಂಬುದಾಗಲೀ ಅಥವಾ ಅದರ ವಿರುದ್ಧವಾಗಿ ಬೋಧಿಸುತ್ತಿರುವ ಸುಧಾರಣಾವಾದಿಗಳಿಗೆ ನೆರವಾಗಲಿ ಎಂಬುದಾಗಲೀ (ಪುಟ 19)
ಅಲ್ಲ. ಉಪದೇಶವು ಜಾತಿವ್ಯವಸ್ಥೆಯನ್ನು ನಿರ್ಮಿಸಲಿಲ್ಲ; ಉಪದೇಶದಿಂದ ಜಾತಿವ್ಯವಸ್ಥೆಯನ್ನು ನಿರ್ನಾಮ ಮಾಡುವುದೂ ಸಾಧ್ಯವಿಲ್ಲ. ಧಾರ್ಮಿಕ ಶಾಸನವನ್ನು ಒಂದು ವೈಜ್ಞಾನಿಕ ವಿವರಣೆಯ ಸ್ಥಾನಕ್ಕೇರಿಸಿ ಸ್ತುತಿಸುವ ಧೋರಣೆಯು ಎಷ್ಟು ಕೃತಕವಾದದ್ದೆಂಬುದನ್ನು ತೋರಿಸುವುದು ನನ್ನ ಗುರಿ.
ಹೀಗೆ ಭಾರತದಲ್ಲಿ ಜಾತಿಗಳ ಪ್ರಸಾರದ ಒಗಟನ್ನು ಬಿಡಿಸುವುದರಲ್ಲಿ ಶ್ರೇಷ್ಠವ್ಯಕ್ತಿ ವಾದವು ತುಂಬ ದೂರದವರೆಗೆ ನಮ್ಮ ನೆರವಿಗೆ ಒದಗಿ ಬರಲಾರದು. ಬಹುಶಃ ನಾಯಕೋಪಾಸನೆ ಹೆಚ್ಚು ಬಳಕೆಯಿರದ ಪಾಶ್ಚಾತ್ಯ ವಿದ್ವಾಂಸರು ಬೇರೆ ಬೇರೆ ಅರ್ಥ ವಿವರಣೆ ಕೊಡಲೆತ್ನಿಸಿದ್ದಾರೆ. ಅವರ ಪ್ರಕಾರ, ಭಾರತದಲ್ಲಿ ವಿವಿಧ ಜಾತಿಗಳು ‘ರೂಪಿತ’ವಾಗಿರುವ ಕೇಂದ್ರ ಬಿಂದುಗಳೆಂದರೆ : ೧. ಕಸುಬು: ೨. ಬುಡಕಟ್ಟು ವ್ಯವಸ್ಥೆಯ ಪಳೆಯುಳಿಕೆಗಳು, ೩. ಹೊಸ ನಂಬಿಕೆಯ ಉದಯ, ೪. ಅಂತರ್ಜಾತೀಯ ಸಂತಾನ, ಮತ್ತು ೫. ವಲಸೆ.
ಈ ಕೇಂದ್ರಬಿಂದುಗಳು ಬೇರೆ ಸಮಾಜಗಳಲ್ಲಿ ಇರಲಿಲ್ಲವೆ ಮತ್ತು ಇವು ಭಾರತಕ್ಕೆ ಮಾತ್ರ ವಿಶಿಷ್ಟವಾದವುಗಳೆ ಎಂಬ ಪ್ರಶ್ನೆಯನ್ನು ಕೇಳಬಹುದು. ಇವು ಭಾರತಕ್ಕಷ್ಟೇ ವಿಶಿಷ್ಟವಾಗಿರದಿದ್ದರೆ ಮತ್ತು ಜಗತ್ತಿಗೇ ಸಮಾನವಾಗಿದ್ದರೆ, ಈ ಪ್ರಪಂಚದ ಇತರ ಭಾಗಗಳಲ್ಲಿ ಅವುಗಳು ಜಾತಿಯಾಗಿ ‘ರೂಪಿತ’ಗೊಳ್ಳಲಿಲ್ಲವೇಕೆ? ವೇದಗಳ ನಾಡಾದ ಭಾರತಕ್ಕಿಂತಲೂ ಆ ಭಾಗಗಳು ಇನ್ನೂ ಪವಿತ್ರತಮವಾಗಿದ್ದುವೆಂದೇ, ಅಥವಾ ಪ್ರಾಧ್ಯಾಪಕರು ತಪ್ಪು ತಿಳಿದಿರಬಹುದೇ? ಈ ಉತ್ತರಾರ್ಧವೇ ನಿಜವಿರಬೇಕೆನಿಸುತ್ತದೆ.
ಮೇಲೆ ಹೇಳಿದ ಕೇಂದ್ರಬಿಂದುಗಳಲ್ಲಿ ಒಂದಲ್ಲೊಂದನ್ನು ಆಧರಿಸಿ ರಚಿಸಿದ ತಮ್ಮ ತಮ್ಮ ಸಿದ್ಧಾಂತಗಳಿಗೆ ಅನೇಕ ಲೇಖಕರು ಅತ್ಯುನ್ನತ ತಾತ್ವಿಕ ಮೌಲ್ಯವನ್ನು ಪ್ರತಿಪಾದಿಸಲು ಪ್ರಯತ್ನಿಸಿದ್ದಾರೆ. ಸೂಕ್ಷ್ಮ ಪರೀಕ್ಷೆಯಿಂದ ನೋಡಿದಾಗ ಆ ಪ್ರಯತ್ನಗಳೆಲ್ಲಾ ಖಾಲಿ ಸ್ಥಳವನ್ನು ತುಂಬುವ ನಿರೂಪಣಾ ಚಿತ್ರಗಳಿಗಿಂತ ಹೆಚ್ಚಲ್ಲವೆಂದು ಹೇಳಲು ವಿಷಾದವಾಗುತ್ತದೆ; ಮ್ಯಾಥ್ಯೂ ಆರ್ನಾಲ್ಡರು ಹೇಳುವಂತೆ, “ತನ್ನೊಳಗೆ ಭವ್ಯತೆಯೇ ಇರದ ಭವ್ಯವಾದ ಹೆಸರು” ಅಷ್ಟೆ. ಸರ್ ಡೆನ್ ಜಿಲ್ ಇಬ್ಬೆಟ್ಟಿನ್, ಶ್ರೀ ನೆಸ್‌ಫೀಲ್ಡ್, ಶ್ರೀ ಸೆನರ್ಟ್ ಹಾಗೂ ಸರ್ ಎಚ್.ರಿಸ್ಲೆ ಇವರುಗಳು ಜಾತಿಯನ್ನು ಕುರಿತು ಪ್ರತಿಪಾದಿಸಿರುವ ವಿವಿಧ ಸಿದ್ಧಾಂತಗಳೂ ಹಾಗೇ ಇವೆ. ಅವುಗಳನ್ನು ಒಟ್ಟಾಗಿ ವಿಮರ್ಶಿಸುವುದಾದರೆ ಅವೆಲ್ಲ ತರ್ಕಶಾಸ್ತ್ರದಲ್ಲಿ ಹೇಳುವ ‘ಸಾಧಿಸಬೇಕಾದ ವಿಷಯವನ್ನೇ ಫಲಿತಾಂಶ ಎಂದಿಟ್ಟುಕೊಳ್ಳುವಂತೆ’ ಮಾರುವೇಷದ ರೂಪಗಳು, ‘ಭಾರತದಲ್ಲಿ ಇಡೀ ಜಾತಿವ್ಯವಸ್ಥೆ ರಚನೆಯಾಗಿರುವುದು ಅದು ನಿರ್ವಹಿಸುವ ಕಾರ್ಯದ ಮೇಲೆ ಮತ್ತು ಕಾರ್ಯದ ಮೇಲೆ ಮಾತ್ರ’ ಎಂದು ನೆಸ್ ಫೀಲ್ಡರು ಹೇಳುತ್ತಾರೆ. ಮೇಲಿನ ಈ ಹೇಳಿಕೆಯನ್ನು ಕೊಡುವುದರ ಮೂಲಕ ಅವರು ನಮ್ಮ ಆಲೋಚನೆಯನ್ನು ಅಷ್ಟೇನೂ ಹೆಚ್ಚು ದೂರ ಕೊಂಡೊಯ್ಯುವುದಿಲ್ಲವೆಂದು ಸರಿಯಾಗಿ ನೆನಪಿಸಬೇಕಾಗುತ್ತದೆ; ಭಾರತದಲ್ಲಿ ಜಾತಿಗಳು ಕ್ರಿಯಾತ್ಮಕ ಅಥವಾ ವೃತ್ತಿಪರವೆಂದೇ ಹೇಳಿದಂತಾಗುವ ಅವರ ಈ ಹೇಳಿಕೆ ತುಂಬ ಸಪ್ಪೆಯಾದ ಸಂಶೋಧನೆ; ವೃತ್ತಿಪರ ಗುಂಪು ವೃತ್ತಿಪರ ಜಾತಿಯಾದದ್ದು ಏಕೆ ಎಂಬುದಕ್ಕೆ ನೆಸ್ ಫೀಲ್ಡರಿಂದ ಇನ್ನೂ ಅರಿಯಬೇಕಾಗಿದೆ. ನೆಸ್ ಫೀಲ್ಡರ ಹೇಳಿಕೆ ಒಂದು ನಮೂನೆಯದ್ದು ಮಾತ್ರ ಎಂಬುದು ನಿಜಸ್ಥಿತಿಯಲ್ಲದಿರುತ್ತಿದ್ದರೆ ನಾನು ತುಂಬ ಉಲ್ಲಾಸದಿಂದ ಇತರ ಮಾನವಕುಲಶಾಸ್ತ್ರಜ್ಞರ ಸಿದ್ಧಾಂತಗಳನ್ನು ಆಶ್ರಯಿಸುವ ಪ್ರಯತ್ನಕ್ಕೆ ತೊಡಗುತ್ತಿದ್ದೆ.
ವಿಘಟನೆಗೊಳ್ಳುತ್ತಾ ಹೋಗುವ ನಿಯಮಕ್ಕೆ ಬದ್ಧವಾಗಿರುವ ಜಾತಿವ್ಯವಸ್ಥೆಯು ಒಂದು ಸ್ವಾಭಾವಿಕ ಘಟನೆಯೆಂದು ಹರ್ಬರ್ಟ್ ಸ್ಪೆನ್ಸರ್ ಅವರು ತಮ್ಮ ವಿಕಾಸ ನಿಯಮದಲ್ಲಿ ವಿವರಿಸಿರುವುದನ್ನು ಅಥವಾ ಸಂಪ್ರದಾಯಶರಣ ಧರ್ಮಪ್ರಚಾರಕನೊಬ್ಬನ ವಾಕ್ಸರಣಿಯ ರೀತಿಯಲ್ಲಿ, “ಪರಸ್ಪರ ಅವಲಂಬಿತ ಭಾಗಗಳುಳ್ಳ (ಪುಟ 20)
ಒಂದು ಜೀವರಚನೆಯೊಳಗೆ ರಾಚನಿಕ ವ್ಯತ್ಯಾಸಗಳಂತೆ” ಎನ್ನುವುದನ್ನು – ಅಥವಾ ಜನಾಂಗಶಾಸ್ತ್ರದ ನಿಯಮಗಳ ಅಡಿಯಲ್ಲಿ ಜಾತಿಪದ್ಧತಿಯ ಪರಿಶೀಲನೆಯ ಪ್ರಯತ್ನ ನಡೆಸಿರುವುದನ್ನು ಈ ರೀತಿ ತರ್ಕದೋಷದ ವಿಚಾರವನ್ನು ಆಸಹಾಯಕ ಮತ್ತು ವಿನಯಶೀಲ ಜನರ ಮೇಲೆ ಹೇರುತ್ತಿರುವುದರ ವಿರುದ್ಧ ಟೀಕಿಸುವುದನ್ನು ಮುಂದುವರಿಸುತ್ತಾ ಈಗ ನಾನು ನಿಮ್ಮ ಮುಂದೆ ಈ ವಿಷಯದ ಕುರಿತ ನನ್ನ ಸ್ವಂತ ದೃಷ್ಟಿಕೋನವನ್ನು ಮಂಡಿಸುತ್ತೇನೆ.
ಹಿಂದೂ ಸಮಾಜವು ಇತರ ಸಮಾಜಗಳ ರೀತಿಯಲ್ಲಿಯೇ ವರ್ಗಗಳಿಂದ ಕೂಡಿದ್ದಾಗಿತ್ತು ಎಂಬುದನ್ನು ಪ್ರಾರಂಭದಲ್ಲೇ ನೆನಪಿಗೆ ತಂದುಕೊಳ್ಳುವುದು ಒಳ್ಳೆಯದು. ನಮಗೆ ತಿಳಿದು ಬಂದಿರುವ ಪ್ರಾರಂಭದ ವರ್ಗಗಳು: ೧. ಬ್ರಾಹ್ಮಣರು ಅಥವಾ ಪುರೋಹಿತ ವರ್ಗ, ೨. ಕ್ಷತ್ರಿಯರು ಅಥವಾ ಸೈನಿಕ ವರ್ಗ, ೩. ವೈಶ್ಯರು ಅಥವಾ ವರ್ತಕ ವರ್ಗ, ಮತ್ತು ೪. ಶೂದ್ರರು ಅಥವಾ ಕುಶಲಕರ್ಮಿಗಳು ಹಾಗೂ ದಾಸ್ಯವೃತ್ತಿಯವರು. ಇದು ಮೂಲಭೂತವಾಗಿ ಒಂದು ವರ್ಗವ್ಯವಸ್ಥೆಯಾಗಿತ್ತು, ಅಂತೆಯೇ ಈ ವರ್ಗದಲ್ಲಿರುವ ವ್ಯಕ್ತಿಗಳು ಅರ್ಹತೆಗನುಸಾರವಾಗಿ ತಮ್ಮ ವರ್ಗವನ್ನು ಬದಲಾಯಿಸಲು ಮತ್ತು ವರ್ಗಗಳು ಸಿಬ್ಬಂದಿಗಳನ್ನು ಬದಲಾಯಿಸಿಕೊಳ್ಳಲು ಅವಕಾಶವಿತ್ತು ಎಂಬ ಅಂಶಕ್ಕೆ ನಿರ್ದಿಷ್ಟವಾದ ಗಮನವನ್ನು ಹರಿಸಬೇಕು. ಹಿಂದೂಗಳ ಇತಿಹಾಸದ ಯಾವುದೋ ಒಂದು ಹಂತದಲ್ಲಿ ಪುರೋಹಿತವರ್ಗ ಸಾಮಾಜಿಕವಾಗಿ ಉಳಿದ ಜನರಿಂದ ತಾನಾಗಿ ಬೇರ್ಪಟ್ಟಿತು ಮತ್ತು ತನ್ನ ಬಾಗಿಲು ಮುಚ್ಚುವ ವರ್ತನೆಯಿಂದಾಗಿ ತಾನೇ ಒಂದು ಜಾತಿಯಾಗಿ ಪರಿವರ್ತನೆಗೊಂಡಿತು. ಸಾಮಾಜಿಕ ಶ್ರಮವಿಭಜನೆಯ ಕಟ್ಟಳೆಗೆ ಒಳಪಟ್ಟು ಉಳಿದ ವರ್ಗಗಳು ತಾರತಮ್ಯಗಳಿಗೆ ಒಳಗಾದವು: ಕೆಲವು ದೊಡ್ಡ ಗುಂಪುಗಳಾದರೆ ಉಳಿದವುಗಳು ಸಣ್ಣಪುಟ್ಟ ಗುಂಪುಗಳಾದುವು. ವೈಶ್ಯ ಮತ್ತು ಶೂದ್ರ ವರ್ಗಗಳು ಮೂಲ ಜೀವದ್ರವ್ಯವಾಗಿದ್ದು ಇಂದಿನ ಅಸಂಖ್ಯಾತ ಜಾತಿಗಳಿಗೆ ಆಕರವಾದವು. ಸೈನಿಕ ವೃತ್ತಿಯು ಅಷ್ಟು ಸುಲಭವಾಗಿ ತನ್ನನ್ನು ತಾನು ಅತಿ ಚಿಕ್ಕದಾಗಿ ಉಪವಿಭಜನೆಗೊಳ್ಳಲು ಅವಕಾಶ ಕೊಡುವುದಿಲ್ಲವಾದ್ದರಿಂದ ಕ್ಷತ್ರಿಯ ವರ್ಗವು ಸೈನಿಕರು ಮತ್ತು ಆಡಳಿತಗಾರರು ಎಂದು ವ್ಯತ್ಯಾಸಗೊಂಡಿರಬಹುದು.
ಒಂದು ಸಮಾಜದ ಈ ಉಪವಿಭಜನೆಯು ತೀರ ಸ್ವಾಭಾವಿಕವಾದುದು. ಈ ಉಪವಿಭಜನೆಗಳ ಅನೈಸರ್ಗಿಕ ಸಂಗತಿಯೆಂದರೆ ಅವು ವರ್ಗವ್ಯವಸ್ಥೆಯ ಮುಕ್ತದ್ವಾರ ಲಕ್ಷಣವನ್ನು ಕಳೆದುಕೊಂಡಿರುವುದು ಮತ್ತು ತನ್ನ ಸುತ್ತ ಬೇಲಿ ಕಟ್ಟಿಕೊಂಡ ಘಟಕಗಳಾಗಿ ಅಂದರೆ ಜಾತಿಗಳಾಗಿ ಬದಲಾಗಿರುವುದು. ಈಗ ಪ್ರಶ್ನೆ ಏನೆಂದರೆ : ಅವರನ್ನು ತಮ್ಮ ಬಾಗಿಲುಗಳನ್ನು ಮುಚ್ಚುವಂತೆ ಮತ್ತು ಸ್ವಜಾತಿ ವಿವಾಹ ಪದ್ಧತಿಯವರಾಗುವಂತೆ ಒತ್ತಾಯಿಸಲಾಯಿತೆ? ಅಥವಾ ಅವರೇ ಸ್ವ ಇಚ್ಛೆಯಿಂದ ಬಾಗಿಲುಗಳನ್ನು ಮುಚ್ಚಿದರೋ? ಇದಕ್ಕೆ ಎರಡು ವಿಧವಾದ ಉತ್ತರವಿದೆಯೆಂದು ನಾನು ನಿವೇದಿಸುತ್ತೇನೆ. ಕೆಲವರು ಬಾಗಿಲುಗಳನ್ನು ಮುಚ್ಚಿದರು, ಉಳಿದವರು ತಮ್ಮ ಪಾಲಿಗೆ ಬಾಗಿಲುಗಳನ್ನು ಮುಚ್ಚಲಾಗಿದೆಯೆಂದು ಕಂಡುಕೊಂಡರು. ಒಂದು ಮನಃಶಾಸ್ತ್ರೀಯವಾದ ವಿವರಣೆಯಾಗಿದ್ದರೆ ಇನ್ನೊಂದು ಯಾಂತ್ರಿಕವಾದುದು. ಆದರೆ ಇವೆರಡೂ ಪರಸ್ಪರ ಪೂರಕವಾಗಿವೆ ಮತ್ತು ಜಾತಿವ್ಯವಸ್ಥೆಯ ಸಂಗತಿಯನ್ನು ಅದರ ಸಮಗ್ರತೆಯಲ್ಲಿ ವಿವರಿಸಲು ಇವೆರಡೂ ಅಗತ್ಯ.
ನಾನು ಮೊದಲು ಮನಃಶಾಸ್ತ್ರೀಯ ವ್ಯಾಖ್ಯಾನಗಳನ್ನು ತೆಗೆದುಕೊಳ್ಳುತ್ತೇನೆ. ಈ ಸಂಬಂಧವಾಗಿ ಉತ್ತರಿಸಬೇಕಾದ ಪ್ರಶ್ನೆ ಇದು: ಈ ಕೈಗಾರಿಕಾ, ಧಾರ್ಮಿಕ ಅಥವಾ ಬೇರೆಯೇ ಆದ ಉಪವಿಭಾಗಗಳು ಅಥವಾ ವರ್ಗಗಳು ತಮ್ಮ ಬಾಗಿಲುಗಳನ್ನು ತಾವೇ ಮುಚ್ಚಿದ್ದು ಅಥವಾ ಸ್ವಜಾತಿ ಮದುವೆಯ ಘಟಕಗಳಾದದ್ದು ಯಾಕೆ? ಯಾಕೆಂದರೆ ಬ್ರಾಹ್ಮಣರು ಹಾಗಿದ್ದರು ಎಂಬುದೇ ನನ್ನ ಉತ್ತರ. ಸ್ವಜಾತಿ ವಿವಾಹಪದ್ಧತಿ ಅಥವಾ (ಪುಟ 21)
ಬಾಗಿಲು ಮುಚ್ಚಿದ ವ್ಯವಸ್ಥೆಯು ಹಿಂದೂ ಸಮಾಜದಲ್ಲಿ ಒಂದು ಶೈಲಿಯಾಗಿತ್ತು ಮತ್ತು ಅದು ಬ್ರಾಹ್ಮಣ ಜಾತಿಯಿಂದ ಹುಟ್ಟಿದ ರೂಢಿಯಾಗಿದ್ದುದರಿಂದಾಗಿ ಅದನ್ನು ಎಲ್ಲ ಬ್ರಾಹ್ಮಣೇತರ ಉಪವಿಭಾಗ ಅಥವಾ ವರ್ಗಗಳವರೂ ಹೃದಯಪೂರ್ವಕವಾಗಿ ಅನುಕರಿಸಿದರು; ಮುಂದೆ ಅವರುಗಳೇ ಸ್ವಜಾತಿ ಮದುವೆ ಪದ್ಧತಿ ಪಾಲಿಸುವ ಜಾತಿಗಳಾದರು. ಈ ಎಲ್ಲ ಉಪವಿಭಜನೆಗಳನ್ನೂ ‘ಅನುಕರಣೆಯ ಅಂಟುಜಾಡ್ಯ’ ಬೆನ್ನು ಹತ್ತಿ ತಾರತಮ್ಯದ ಮುನ್ನಡೆಯೊಂದಿಗೆ ಅವುಗಳು ಜಾತಿಗಳಾಗುವಂತೆ ಮಾಡಿತು.
ಅನುಕರಣೆಯ ಪ್ರವೃತ್ತಿ ಜನಮನದಲ್ಲಿ ಆಳವಾಗಿ ಬೇರೂರಿದೆ; ಭಾರತದಲ್ಲಿ ನಾನಾ ಜಾತಿಗಳು ರಚಿತವಾಗಲು ಈ ಅನುಕರಣೆಯ ಒಲವು ಕಾರಣವೆಂಬುದನ್ನು ಅಸಮರ್ಪಕ ವಿವರಣೆಯೆಂದು ಗ್ರಹಿಸಬಾರದು. ಅನುಕರಣಾ ಚಾಳಿ ಎಷ್ಟು ಆಳವಾಗಿ ಬೇರೂರಿದೆಯೆಂದರೆ ವಾಲ್ಟರ್ ಬೇಗ್ಹಾಟ್ ಹೀಗೆ ವಾದಿಸಿದ್ದಾರೆ, “ಅನುಕರಣೆಯು ಅಪ್ರೇರಿತವೆಂದು ಅಥವಾ ಪ್ರಜ್ಞಾಪೂರ್ವಕವಾದುದೆಂದು ನಾವು ಆಲೋಚಿಸಕೂಡದು. ಇದಕ್ಕೆ ತದ್ವಿರುದ್ಧವಾಗಿ ಮನಸ್ಸಿನ ಅಜ್ಞಾತ ಭಾಗಗಳಲ್ಲಿ ಅದು ತನ್ನ ಸ್ಥಳವನ್ನು ಪಡೆದಿದೆ, ಅದರ ಭಾವನೆಗಳು, ಪ್ರಜ್ಞಾಪೂರ್ವಕವಾಗಿ ಮೂಡುವುದಕ್ಕಿಂತ ದೂರದಲ್ಲಿದ್ದು, ಇವೆಯೆಂಬುದೇ ಅರಿವಿಗೆ ಬರಲಾರದು; ಅವು ಬರುವುದರ ಸುಳಿವೂ ತಿಳಿಯುವುದಿಲ್ಲ, ಅವು ಬಂದಾಗಲೂ ಗೊತ್ತಾಗುವುದಿಲ್ಲ. ನಮ್ಮ ಸ್ವಾಭಾವದಲ್ಲಿರುವ ಅನುಕರಣಾ ಪ್ರವೃತ್ತಿಯ ಮುಖ್ಯವಾದ ನೆಲೆಯೆಂದರೆ ನಮ್ಮ ನಂಬಿಕೆ. ಇದನ್ನು ನಂಬು ಅಥವಾ ಅದನ್ನು ನಂಬಬಾರದು ಎಂದು ನಮ್ಮನ್ನು ಮೊದಲೇ ನಿಯಂತ್ರಿಸುವ ಕಾರಣಗಳೆಂದರೆ ನಮ್ಮ ಸ್ವಭಾವದಲ್ಲಿರುವ ತೀರ ಅಜ್ಞಾತ ನೆಲೆಗಳು. ಆದರೆ ವಿಚಾರ ಮಾಡದೆಯೇ ಸುಮ್ಮನೆ ನಂಬಿಬಿಡುವ ಅನುಕರಣಶೀಲ ಪ್ರವೃತ್ತಿಯ ವಿಚಾರದಲ್ಲಿ ಯಾವ ಅನುಮಾನವೂ ಇಲ್ಲ.” (ಫಿಸಿಕ್ಸ್ ಆ್ಯಂಡ್ ಪಾಲಿಟಿಕ್, ೧೯೧೫ ಪುಟ ೬೦) ಗೇಬ್ರಿಯಲ್ ಟರ್ಡೆ ಅವರು ಈ ಅನುಕರಣಾ ಪ್ರವೃತ್ತಿಯನ್ನು ವೈಜ್ಞಾನಿಕವಾಗಿ ಅಭ್ಯಸಿಸಿದ್ದಾರೆ. ಅವರು ಮೂರು ಅನುಕರಣೆಯ ನಿಯಮಗಳನ್ನು ಪ್ರತಿಪಾದಿಸಿದ್ದಾರೆ. ಈ ಮೂರು ನಿಯಮಗಳಲ್ಲಿ ಒಂದೆಂದರೆ, ಅನುಕರಣೆಯೆಂಬುದು ಮೇಲಿನಿಂದ ಕೆಳಕ್ಕೆ ಹರಿಯುತ್ತದೆ ಎನ್ನುವುದು. ಅವರ ಮಾತುಗಳನ್ನೇ ಉದಾಹರಿಸುವುದಾದರೆ, “ಅವಕಾಶ ಕೊಟ್ಟಲ್ಲಿ, ಉತ್ತಮ ವರ್ಗ ಯಾವಾಗಲೂ ಮತ್ತು ಎಲ್ಲೆಡೆಗಳಲ್ಲೂ ತನ್ನ ಮುಂದಾಳುಗಳು, ರಾಜರು ಅಥವಾ ಸಾರ್ವಭೌಮರನ್ನು ಅನುಕರಿಸುತ್ತದೆ; ಅದರಂತೆ ಅವಕಾಶ ದೊರೆತಾಗ ಜನತೆ ತನ್ನ ಶ್ರೀಮಂತ ವರ್ಗಗಳನ್ನು ಅನುಕರಿಸುತ್ತದೆ.” (ಲಾಸ್ ಆಫ್ ಇಮಿಟೇಶನ್, ಇ.ಸಿ.ಪಾರ್ಸನ್ಸ್, ೨ನೇ ಆವೃತ್ತಿ, ಪುಟ ೨೧೭) ಟರ್ಡೆ ಅವರು ಹೇಳುವ ಅನುಕರಣೆಯ ನಿಯಮಗಳಲ್ಲಿ ಇನ್ನೊಂದೆಂದರೆ, ಅನುಕರಣೆಯ ವ್ಯಾಪ್ತಿ ಅಥವಾ ತೀವ್ರತೆಯು ದೂರದ ಅಂತರವನ್ನು ಅವಲಂಬಿಸಿ ವ್ಯತ್ಯಾಸಗೊಳ್ಳುತ್ತದೆ. ಅವರ ಮಾತುಗಳಲ್ಲೇ ಹೇಳುವುದಾದರೆ, “ಸಮೀಪವಿರುವ ವಸ್ತುಗಳಲ್ಲಿ ಅತ್ಯಂತ ಶ್ರೇಷ್ಠವಾದುದನ್ನು ಅತ್ಯಧಿಕವಾಗಿ ಅನುಕರಣೆ ಮಾಡಲಾಗುತ್ತದೆ. ಶ್ರೇಷ್ಠ ಮಾದರಿಯು ದೂರವಿದ್ದಷ್ಟೂ ಪ್ರಭಾವ ಕಡಿಮೆಯಾಗುತ್ತಾ ಹೋಗುತ್ತದೆ. ಇಲ್ಲಿ ದೂರವೆಂಬುದನ್ನು ಅದರ ಸಾಮಾಜಿಕ ಅರ್ಥದಲ್ಲಿ ಗ್ರಹಿಸಲಾಗಿದೆ. ಈ ದೃಷ್ಟಿಕೋನದಿಂದ ಒಬ್ಬ ಪರಿಸರದಿಂದ ಅದೆಷ್ಟೋ ದೂರವಿದ್ದರೂ ಕೂಡ ಅವನೊಂದಿಗೆ ನಾವು ದಿನನಿತ್ಯದ ಸಂಪರ್ಕ ಮತ್ತು ಸಂಬಂಧವನ್ನು ಹೊಂದಿದ್ದರೆ ಆತನನ್ನು ಅನುಕರಿಸುವ ನಮ್ಮ ಅಪೇಕ್ಷೆಯನ್ನು ತೃಪ್ತಿಗೊಳಿಸುವ ಎಲ್ಲ ಅನುಕೂಲವೂ ನಮಗಿರುತ್ತದೆ. ಹತ್ತಿರದವರನ್ನು, ಅತ್ಯಂತ ಕಡಿಮೆ ದೂರದಲ್ಲಿರುವವರನ್ನು, ನಿಧಾನವಾಗಿ ಮತ್ತು ನಿರಂತರವಾಗಿ ಅನುಕರಿಸುವ ಈ ನಿಯಮವು ಉನ್ನತ ಸಾಮಾಜಿಕ ಸ್ತರಗಳವರು ಹಾಕಿರುವ ಮೇಲ್ಪಂಕ್ತಿ ಬುನಾದಿಯ ಮೇಲೆಯೇ ನಿಂತಿದೆ.”(ಅದೇ ಪುಟ 224) (ಪುಟ 22)
ಕೆಲವು ಜಾತಿಗಳು ಅನುಕರಣೆಯಿಂದ ಹುಟ್ಟಿಕೊಂಡಿವೆಯೆಂಬ ನನ್ನ ಈ ವಾದದ ಸಮರ್ಥನೆಗೆ ಬೇರೆ ಪುರಾವೆಗಳ ಅಗತ್ಯವಿಲ್ಲವಾದರೂ ಅತ್ಯುತ್ತಮ ಮಾರ್ಗವೆಂದರೆ ಹಿಂದೂ ಸಮಾಜದಲ್ಲಿ ಅನುಕರಣೆಯಿಂದಾದ ಜಾತಿಗಳ ರಚನೆಗೆ ಜೀವಂತ ಸ್ಥಿತಿಗತಿಗಳು ಇದ್ದುವೆ ಇಲ್ಲವೆ ಎಂಬುದನ್ನು ಕಂಡುಕೊಳ್ಳುವುದೇ ಆಗಿದೆಯೆಂದು ನನಗೆ ತೋರುತ್ತದೆ. ಈ ಪ್ರಾಮಾಣಿತ ಆಧಾರದ ಪ್ರಕಾರ ಅನುಕರಣೆಗೆ ಇರುವ ಪರಿಸ್ಥಿತಿಗಳು : (೧) ಅನುಕರಣೆಗಿರುವ ಮೂಲ ಆಕರವು ಗುಂಪಿನಲ್ಲಿ ಪ್ರತಿಷ್ಠಿತವೆನಿಸಿರಬೇಕು. ಮತ್ತು (೨) ಒಂದು ಗುಂಪಿನ ಸದಸ್ಯರೊಳಗೆ ಅನೇಕ ಮತ್ತು ದಿನನಿತ್ಯದ ಸಂಬಂಧಗಳು ಇರಲೇಬೇಕು. ಈ ಪರಿಸ್ಥಿತಿ ಭಾರತದಲ್ಲಿ ಇತ್ತೆ ಎಂಬುದನ್ನು ಸಂದೇಹಿಸಲು ಸ್ವಲ್ಪವೂ ಕಾರಣವಿಲ್ಲ. ಬ್ರಾಹ್ಮಣನು ಅರೆ ದೇವತೆ ಹಾಗೂ ಬಹುಮಟ್ಟಿಗೆ ದೈವಾಂಶ ಸಂಭೂತ. ಆತ ಒಂದು ಮಾದರಿಯನ್ನು ತಯಾರಿಸಿ ಉಳಿದವುಗಳನ್ನು ಅದರ ಪಡಿಯಚ್ಚಿನಂತೆ ರೂಪಿಸುತ್ತಾನೆ. ಆತನ ಪ್ರತಿಷ್ಠೆ ಪ್ರಶ್ನಾತೀತವಾದುದು. ಆತ ಪರಮಸುಖದ ಮತ್ತು ಉತ್ತಮವಾದುದರ ಉಗಮಸ್ಥಾನ. ಶಾಸ್ತ್ರಗಳಿಂದ ದೈವಮೂರ್ತಿಯೆಂದು ಪುರಸ್ಕೃತನಾದ ಮತ್ತು ಪುರೋಹಿತರಿಂದ ತುಂಬಿ ಹೋದ ಜನ ಸಮುದಾಯದಿಂದ ಪೂಜಿತನಾದ ಆತ ತನ್ನ ಘನ ವ್ಯಕ್ತಿತ್ವವನ್ನು ಉಳಿದ ಯಃಕಶ್ಚಿತ್ ಮಾನವ ಸಮುದಾಯದ ಮೇಲೆ ಹರಿಸದೆ ಬಿಡುತ್ತಾನೆಯೇ? ಅಷ್ಟೇ ಏಕೆ. ಈ ಕಥೆ ನಿಜವೇ ಆದರೆ, ಆತನೇ ಸೃಷ್ಟಿಯ ತುತ್ತತುದಿಯೆಂದೂ ನಂಬಲಾಗಿದೆ. ಅಂಥ ಜೀವಿಯೊಂದು ಕೇವಲ ಅನುಕರಣೆಗಿಂತ ಹೆಚ್ಚಿನದಕ್ಕೆ ಯೋಗ್ಯತೆ ಪಡೆದಿದ್ದರೂ, ಕನಿಷ್ಠ ಅನುಕರಣಯೋಗ್ಯವಂತೂ ಹೌದು: ಆತ ಸ್ವಜಾತಿ ವಿವಾಹಪದ್ಧತಿಯ ಪರಿಧಿಯೊಳಗೆ ವಾಸಿಸಿದರೆ ಉಳಿದವರೂ ಕೂಡ ಆತನ ಮಾದರಿಯನ್ನು ಅನುಕರಿಸಬೇಡವೆ? ದುರ್ಬಲ ಮಾನವ ಕುಲವೇ! ಇಂಥದೊಂದು ವಿಚಾರ ತುಂಬಿಕೊಂಡ ಮಹತ್ವದ ತತ್ವಜ್ಞಾನಿಯಾಗಲಿ, ಸಾಧಾರಣ ಮನೆಗೆಲಸದವಳಾಗಲಿ ಅದಕ್ಕೆ ಬಲಿಪಶುವಾಗುತ್ತಾರೆ. ಅದು ಬೇರೆ ರೀತಿ ಇರಲು ಸಾಧ್ಯವೇ ಇಲ್ಲ. ಅನುಕರಣೆ ಸುಲಭ, ಆವಿಷ್ಕಾರ ಕಷ್ಟ.
ಜಾತಿಗಳು ರೂಪುಗೊಳ್ಳುವುದರಲ್ಲಿ ಅನುಕರಣೆಯ ಪಾತ್ರವನ್ನು ದೃಷ್ಟಾಂತ ಸಹಿತ ಪ್ರತಿಪಾದಿಸಲು ಇನ್ನೂ ಒಂದು ಮಾರ್ಗವಿದೆ. ಅದಕ್ಕೆ ಬ್ರಾಹ್ಮಣೇತರ ವರ್ಗಗಳ ಧೋರಣೆಯನ್ನು ಅರ್ಥ ಮಾಡಿಕೊಳ್ಳಬೇಕು. ಇತಿಹಾಸದ ಬೆಳವಣಿಗೆಯಲ್ಲಿ ಸಂಪ್ರದಾಯಗಳು ಹಿಂದೂ ಬುದ್ಧಿಯಲ್ಲಿ ಗಟ್ಟಿಯಾಗಿ ಕುಳಿತುಬಿಟ್ಟವು. ಮತ್ತು ಇಂದಿಗೂ ಅವು ಕೆರೆಯ ನೀರಿನ ಮೇಲೆ ಕಳೆಗಿಡ ತೇಲುತ್ತಿರುವಂತೆ ಯಾವ ಸಹಾಯವೂ ಇಲ್ಲದೆ ಅಲ್ಲಿಯೇ ನೇತಾಡುತ್ತಿವೆ. ಅವಕ್ಕೆ ಯಾವ ಆಸರೆಯೂ ಬೇಕಾಗಿಲ್ಲ, ನಂಬಿಕೆಯೇ ಸಾಕು. ಆದರೆ ಒಂದು ರೀತಿಯಲ್ಲಿ ಮಾತ್ರ, ಅದೊಂದೇ ರೀತಿ ಮಾತ್ರ, ಹಿಂದೂ ಸಮಾಜದಲ್ಲಿ ಜಾತಿಯ ಪ್ರತಿಷ್ಠೆಯು ಸತಿ, ಒತ್ತಾಯದ ವೈಧವ್ಯ ಮತ್ತು ಹೆಣ್ಣುಮಕ್ಕಳ ಬಾಲ್ಯವಿವಾಹ ಈ ಪದ್ಧತಿಗಳ ಆಚರಣೆಯೊಂದಿಗೆ ನೇರವಾಗಿ ಬದಲಾಗುತ್ತದೆ. ಆದರೆ ಈ ಸಂಪ್ರದಾಯಗಳ ಆಚರಣೆ ಕೂಡ ನೇರವಾಗಿ ಜಾತಿಯನ್ನು ಬೇರ್ಪಡಿಸುವ ಅಂತರಕ್ಕೆ (ನಾನು ಟರ್ಡೆಯವರ ಅರ್ಥದಲ್ಲಿ ಈ ಶಬ್ದವನ್ನು ಬಳಸುತ್ತಿದ್ದೇನೆ) ಅನುಗುಣವಾಗಿ ವ್ಯತ್ಯಾಸಗೊಳ್ಳುತ್ತದೆ. ಬ್ರಾಹ್ಮಣರಿಗೆ ಸಮೀಪವಿರುವ ಜಾತಿಗಳು ಮೂರೂ ಸಂಪ್ರದಾಯಗಳನ್ನು ಅನುಕರಿಸಿವೆ ಮತ್ತು ಅವುಗಳ ಕಟ್ಟುನಿಟ್ಟಾದ ಆಚರಣೆಗೆ ಒತ್ತಾಯಿಸಿವೆ. ಕಡಿಮೆ ಅಂತರದಲ್ಲಿರುವ ಜಾತಿಗಳು ಕಡ್ಡಾಯ ವೈಧವ್ಯ ಮತ್ತು ಬಾಲ್ಯ ವಿವಾಹವನ್ನು ಅನುಕರಿಸಿವೆ. ಉಳಿದವರು, ಇನ್ನೂ ಸ್ವಲ್ಪ ದೂರದಲ್ಲಿರುವವರು, ಬಾಲ್ಯವಿವಾಹವನ್ನಷ್ಟೇ ಅನುಕರಿಸಿದ್ದಾರೆ. ಅದಕ್ಕೂ ಹೆಚ್ಚು ದೂರದಲ್ಲಿ ಇರುವವರು ಜಾತಿ ನಿಯಮದ ನಂಬಿಕೆಯನ್ನಷ್ಟೇ ಅನುಕರಿಸಿದ್ದಾರೆ. ಈ ಅಪೂರ್ಣ ಅನುಕರಣೆಗೆ, ಭಾಗಶಃ ಟರ್ಡೆಯವರು ಹೇಳುವಂತೆ (ಪುಟ 23)
‘ಅಂತರ’ವೂ, ಭಾಗಶಃ ಈ ಸಂಪ್ರದಾಯಗಳ ಅನಾಗರಿಕ ಲಕ್ಷಣವೂ ಕಾರಣವಾಗಿವೆಯೆಂದು ನಾನು ಧೈರ್ಯವಾಗಿ ಹೇಳಬಲ್ಲೆ. ಈ ಸಂಗತಿಯು ಟರ್ಡೆಯವರು ಹೇಳುವ ನಿಯಮಕ್ಕೆ ಸಂಪೂರ್ಣವಾಗಿ ಅನ್ವಯವಾಗುವ ನಿದರ್ಶನವಾಗಿದೆ. ಭಾರತದಲ್ಲಿ ಜಾತಿ ರಚನೆಯು ಮೇಲುವರ್ಗದವರನ್ನು ಕೆಳವರ್ಗದವರು ಅನುಕರಿಸುವ ಪ್ರಕ್ರಿಯೆಯೇ ಆಗಿದೆಯೆಂಬುದರಲ್ಲಿ ಸಂಶಯ ಉಳಿಯುವುದಿಲ್ಲ. ಈ ಹಂತದಲ್ಲಿ ನಾನು ಹಿಂದಿನ ತೀರ್ಮಾನವೊಂದನ್ನು ಬೆಂಬಲಿಸುವ ಸಲುವಾಗಿ ಅತ್ತ ಹೊರಳುತ್ತೇನೆ. ನಿಮಗೆ ನನ್ನ ಹಿಂದಿನ ತೀರ್ಮಾನವು ತೀರ ದುಡುಕಿನದೆಂದೂ ಅಥವಾ ಆಧಾರರಹಿತವೆಂದೂ ತೋರಿರಬಹುದು. ಇಲ್ಲಿ ಪ್ರಶ್ನಿಸಲಾಗುತ್ತಿರುವ ಮೂರು ಸಂಪ್ರದಾಯಗಳ ಸಹಾಯದಿಂದ ಬ್ರಾಹ್ಮಣವರ್ಗವು ಮೊದಲು ಜಾತಿಯ ರಚನೆಯನ್ನು ನಿರ್ಮಿಸಿತೆಂದು ನಾನು ಹೇಳಿದ್ದೇನೆ. ಆ ತೀರ್ಮಾನಕ್ಕೆ ನನ್ನ ತರ್ಕ ಯಾವುದೆಂದರೆ ಉಳಿದ ವರ್ಗಗಳಲ್ಲಿ ಅವುಗಳ ಅಸ್ತಿತ್ವ ನಿಷ್ಪನ್ನವಾದುದೆಂದು. ಅಂತೆಯೇ ಬ್ರಾಹ್ಮಣೇತರ ಜಾತಿಗಳಲ್ಲಿ ಈ ಸಂಪ್ರದಾಯಗಳು ಅನುಕರಣೆಗೆ ಪಾತ್ರವಾಗಿರುವ ಬಗ್ಗೆ ನಾನು ಹೇಳಿದ್ದೇನೆಂದರೆ ಅನುಕರಣೆಯು ಒಂದು ವಿಧಾನ ಅಥವಾ ಆದರ್ಶವೆಂದು. ಅನುಕರಿಸುವವರಿಗೆ ಅದರ ಅರಿವೇ ಇರುವುದಿಲ್ಲವಾದರೂ ಅವು ಅನುಕರಣೆಯ ಹಂತದ ಉಪ ಉತ್ಪನ್ನವಾಗಿ ಅವರಲ್ಲಿ ರೂಢಿಯಲ್ಲಿವೆ. ಹೀಗೆ ಅವು ಇನ್ನೊಂದರಿಂದ ಉತ್ಪತ್ತಿಯಾದುದು ಎಂದಾದರೆ, ಅವರಿಗೆ ಮಾದರಿಯಾಗಿ ನಿಲ್ಲುವಷ್ಟು ಉನ್ನತವಾದ ಮೂಲ ಜಾತಿಯೊಂದು ಇದ್ದಿರಲೇಬೇಕು. ಆದರೆ ಅರ್ಚಕರೇ ಆಳುವ ಸಮಾಜದಲ್ಲಿ ದೇವರ ಸೇವಕನ ಹೊರತು ಬೇರೆ ಯಾರು ತಾನೇ ಮಾದರಿಯಾಗಿರಲು ಸಾಧ್ಯವಿದೆ?
ತಮ್ಮ ಕದಗಳನ್ನು ಮುಚ್ಚುವಷ್ಟು ದುರ್ಬಲರಾದವರ ಕಥೆ ಇಲ್ಲಿಗೆ ಮುಗಿಯುತ್ತದೆ. ತಮಗೆ ಒಳಗೆ ಬಿಡದಂತೆ ಬಾಗಿಲು ಹಾಕಿಕೊಂಡ ಕಾರಣದಿಂದ ಹೊರಗೆ ಉಳಿದೇ ಇತರರೂ ಹೇಗೆ ಕದ ಮುಚ್ಚಿಕೊಂಡರೆಂಬುದನ್ನು ಈಗ ನಾವು ನೋಡೋಣ. ಇದನ್ನು ನಾನು ಜಾತಿ ರಚನೆಯ ಒಂದು ಯಾಂತ್ರಿಕ ಪ್ರಕ್ರಿಯೆಯೆನ್ನುತ್ತೇನೆ. ಅದು ಯಾಂತ್ರಿಕವಾದುದು. ಏಕೆಂದರೆ ಅದು ಅನಿವಾರ್ಯವಾಗಿತ್ತು. ವಿಷಯವನ್ನು ವಿವರಿಸುವುದರಲ್ಲಿ ಈ ಧಾಟಿಯ ವಿಶ್ಲೇಷಣೆ ಹಾಗೂ ಮಾನಸಿಕ ವಿವರಣೆ ನನಗಿಂತ ಹಿಂದಿನವರ ಹಿಡಿತದಿಂದ ಜಾರಿಹೋಗಿದೆ. ಅದಕ್ಕೆ ಕಾರಣವೆಂದರೆ ಅವರು ಜಾತಿಯನ್ನು ಜಾತಿವ್ಯವಸ್ಥೆಯೊಳಗಿನದ್ದೇ ಆಗಿರುವ ಒಂದು ಘಟಕವೆಂದು ಗ್ರಹಿಸದೆ ಅದು ತನಗೆ ತಾನೆ ಅನನ್ಯವಾಗಿ ಇರುವ ಘಟಕವೆಂದು ಭಾವಿಸಿದ್ದು. ಈ ಬಗೆಯ ಅಜಾಗರೂಕತೆ ಅಥವಾ ದೃಷ್ಟಿದೋಷದ ಪರಿಣಾಮವಾಗಿ ಜಾತಿ ವಿಷಯವನ್ನು ಸಮಂಜಸವಾಗಿ ಅರ್ಥೈಸಲೂ ಮತ್ತು ಆ ಮೂಲಕ ಜಾತಿಯನ್ನು ಸರಿಯಾಗಿ ವಿವರಿಸಲೂ ಅಡ್ಡಿಯಾಗಿ ಪರಿಣಮಿಸಿದೆ. ಈಗ ನನ್ನದೇ ವಿವರಣೆಯನ್ನು ಕೊಡತೊಡಗುತ್ತೇನೆ. ಇದರ ಸಂಬಂಧದಲ್ಲಿ ನನ್ನ ಒಂದು ಹೇಳಿಕೆಯನ್ನು ನಿರಂತರವಾಗಿ ನೆನಪಿಡಬೇಕೆಂದು ಆಗ್ರಹಪಡಿಸುತ್ತೇನೆ. ಅದೆಂದರೆ : ಏಕಾಂಗಿ ಜಾತಿ ಎಂಬುದು ಅವಾಸ್ತವ. ಜಾತಿಗಳು ಯಾವಾಗಲೂ ಹೆಚ್ಚಿನ ಸಂಖ್ಯೆಯಲ್ಲೇ ಬದುಕಿರುತ್ತವೆ. ಒಂದು ಜಾತಿ ಎಂಬುದು ಇಲ್ಲ. ಯಾವಾಗಲೂ ಜಾತಿಗಳು ಇರುತ್ತವೆ. ನನ್ನ ಅರ್ಥವೇನೆಂಬುದಕ್ಕೆ ಉದಾಹರಣೆ ನೀಡುತ್ತೇನೆ. ತಮ್ಮನ್ನೇ ಒಂದು ಜಾತಿಯಾಗಿಸಿಕೊಂಡ ಬ್ರಾಹ್ಮಣರು ತನ್ಮೂಲಕ ಬ್ರಾಹ್ಮಣೇತರ ಜಾತಿಗಳನ್ನು ಸೃಷ್ಟಿ ಮಾಡಿದರು; ಅಥವಾ ಇದನ್ನು ನನ್ನದೇ ಆದ ವಿಧಾನದಲ್ಲಿ ವ್ಯಕ್ತಪಡಿಸುವುದಾದರೆ, ಬ್ರಾಹ್ಮಣರು ತಾವು ಒಳಗೆ ಸೇರಿ ಬಾಗಿಲು ಮುಚ್ಚಿಕೊಳ್ಳುವುದರ ಮೂಲಕ ಉಳಿದವರನ್ನು ಹೊರಕ್ಕೆ ದಬ್ಬಿದರು. ಇನ್ನೊಂದು ದೃಷ್ಟಾಂತದೊಂದಿಗೆ ನನ್ನ ಅಭಿಪ್ರಾಯವನ್ನು ಸ್ಪಷ್ಟ ಪಡಿಸುತ್ತೇನೆ. ಭಾರತ ದೇಶವನ್ನು ಅದರ ವಿವಿಧ ಸಮುದಾಯಗಳೊಂದಿಗೆ ಒಟ್ಟಿಗೆ ನೋಡೋಣ. ಇಲ್ಲಿನ ಬೇರೆಬೇರೆ ಸಮುದಾಯಗಳು (ಪುಟ 24)
ವಿವಿಧ ಕೋಮುಗಳಿಗೆ ನಿಷ್ಠೆಯನ್ನು ಹೊಂದಿವೆ. ಅವುಗಳೆಂದರೆ ಹಿಂದೂಗಳು, ಮಹಮ್ಮದೀಯರು, ಯಹೂದ್ಯರು, ಕ್ರಿಶ್ಚಿಯನ್ನರು ಮತ್ತು ಪಾರಸಿಗಳು. ಇವರಲ್ಲಿ ಹಿಂದೂಗಳನ್ನು ಬಿಟ್ಟರೆ ಉಳಿದವರು ಅವರವರೊಳಗೆ ಜಾತಿಯಿಲ್ಲದ ಕೋಮುಗಳು. ಆದರೆ ಪರಸ್ಪರವಾಗಿ ಮಾತ್ರ ಅವರೆಲ್ಲಾ ಜಾತಿಗಳೇ. ಮತ್ತೆ, ಮೇಲೆ ಹೆಸರಿಸಿದ ಐವರಲ್ಲಿ ಮೊದಲನೆಯ ನಾಲ್ಕು ಕೋಮುಗಳವರು ತಾವೇ ಬಾಗಿಲು ಹಾಕಿಕೊಂಡಲ್ಲಿ, ಪಾರಸಿಗಳು ನೇರವಾಗಿ ಹೊರಗುಳಿಯುತ್ತಾರೆ. ಹಾಗೂ ಪರ್ಯಾಯವಾಗಿ ಅವರು ಸಹ ತಮ್ಮೊಳಗೇ ಸೇರುತ್ತಾರೆ. ಸಾಂಕೇತಿಕವಾಗಿ ಹೇಳುವುದಿದ್ದರೆ. ‘ಎ’ ಗುಂಪು ಸ್ವಜಾತಿ ಮದುವೆಯನ್ನು ಮಾತ್ರ ಮಾಡಿಕೊಳ್ಳಲು ಬಯಸಿದರೆ ಪರಿಸ್ಥಿತಿಯ ಒತ್ತಡದಿಂದಾಗಿ ‘ಬಿ’ ಗುಂಪು ಕೂಡ ಹಾಗೇ ಆಗಬೇಕಾಗುತ್ತದೆ.
ಈಗ ಇದೇ ತರ್ಕವನ್ನು ಹಿಂದೂ ಸಮಾಜಕ್ಕೂ ಅನ್ವಯಿಸಿರಿ ಮತ್ತು ಅದರಲ್ಲಿ ಅಂತರ್ಗತವಾಗಿರುವ ತನಗೆ ತಾನೇ ಇಮ್ಮಡಿಯಾಗುವ ಗುಣದೊಂದಿಗೆ ಜಾತಿ ವಿಭಜಿಸುತ್ತಾ ಹೋಗುವ ಲಕ್ಷಣದ ಕುರಿತ ಇನ್ನೊಂದು ವಿವರಣೆಯೂ ನಿಮ್ಮ ಮುಂದಿರುತ್ತದೆ. ಜಾತಿಯ ನೈತಿಕ, ಧಾರ್ಮಿಕ, ಸಾಮಾಜಿಕ ಸಂಹಿತೆಯನ್ನು ಗಂಭೀರವಾಗಿ ವಿರೋಧಿಸುವ ಯಾವುದೇ ಹೊಸ ಬದಲಾವಣೆಯನ್ನು ಜಾತಿಯು ಸಹಿಸಲಾರದು; ಒಂದು ಜಾತಿಯಲ್ಲಿ ತನಗೆ ಮಣಿಯದಿರುವ ಸದಸ್ಯರನ್ನು ಜಾತಿಯಿಂದ ಹೊರಗೆ ಹಾಕುವ ಅಪಾಯವಿದೆ. ಅಂಥವರಿಗೆ ಬೇರೆ ಜಾತಿಗಳವರು ತಮ್ಮೊಳಗೆ ಸೇರಿಸಿಕೊಳ್ಳುವ ಅಥವಾ ಬರಮಾಡಿಕೊಳ್ಳುವ ಪರ್ಯಾಯ ವ್ಯವಸ್ಥೆಯಿಲ್ಲದೆ ಅವರ ಪಾಡಿಗೆ ಅವರನ್ನು ಬಿಟ್ಟುಬಿಡಲಾಗುವುದು. ಜಾತಿಯ ಕಟ್ಟುಪಾಡುಗಳು ಎಷ್ಟು ಕಠೋರವಾಗಿವೆಯೆಂದರೆ ಅಪರಾಧಗಳ ಸ್ವರೂಪದಲ್ಲಿರುವ ವ್ಯತ್ಯಾಸಗಳನ್ನು ಸಹ ಗುರುತಿಸಲಾಗುವುದಿಲ್ಲ. ಬದಲಾವಣೆ ಎಂಬುದು ಯಾವುದೇ ಸ್ವರೂಪದ್ದಾಗಿರಬಹುದು. ಆದರೆ ಅವೆಲ್ಲವೂ ಒಂದೇ ಬಗೆಯ ದಂಡಕ್ಕೆ ಗುರಿಯಾಗುತ್ತವೆ. ಹೊಸ ಬಗೆಯ ಜಾತಿಗೆ ಅಹಿತಕರವಾದ ಆಲೋಚನೆ ಮಾಡುವ, ಗೌರವದಿಂದ ಗುರು (ಪ್ರವಾದಿ) ಎಂದು ಕರೆಯಲ್ಪಡುವಾತನೂ, ಆನೈತಿಕ ಪ್ರೇಮದಲ್ಲಿ ತಪ್ಪಿತಸ್ಥರಾದವರೂ ಒಂದೇ ವಿಧಿಗೆ ಗುರಿಯಾಗುತ್ತಾರೆ. ಮೊದಲನೆಯಾತ ಹೊಸ ಧಾರ್ಮಿಕ ಪಂಗಡವನ್ನು ಸೃಷ್ಟಿ ಮಾಡಿದರೆ, ಎರಡನೆಯವರು ಮಿಶ್ರಜಾತಿಯೊಂದರ ನಿರ್ಮಾತೃಗಳಾಗುತ್ತಾರೆ. ಜಾತಿಯ ಸಂಹಿತೆಯನ್ನು ಉಲ್ಲಂಘಿಸುವ ಧೈರ್ಯಶಾಲಿ ತಪ್ಪಿತಸ್ಥನಿಗೆ ಜಾತಿಗಳು ದಯೆ ತೋರುವುದಿಲ್ಲ. ಅವನಿಗೆ ದಂಡನೆಯೆಂದರೆ ಬಹಿಷ್ಕಾರ ಹಾಕುವುದು. ಇದರ ಫಲಿತಾಂಶವೆಂದರೆ ಇನ್ನೊಂದು ಹೊಸ ಜಾತಿ. ಬಹಿಷ್ಕೃತರಾದವರು ತಾವೇ ಒಂದು ಜಾತಿಯಾಗಲು ಪ್ರೇರೇಪಿಸಿದ್ದು ಹಿಂದೂ ಮನೋಧರ್ಮ ಇಚ್ಛಿಸುವ ವಿಶಿಷ್ಟತೆ ಅಲ್ಲ. ಅದು ಅದಕ್ಕಿಂತಲೂ ದೂರವೇ ಇದೆ. ಇದಕ್ಕೆ ತದ್ವಿರುದ್ಧವಾಗಿ, ಬಹಿಷ್ಕರಿಸಲ್ಪಟ್ಟವರು ತಮ್ಮನ್ನು ಒಳಕ್ಕೆ ಬರಮಾಡಿಕೊಳ್ಳುವುದಕ್ಕೆ ಸಿದ್ಧವಿರುವ ಯಾವುದೇ (ಸಾಧ್ಯವಾದರೆ ಮೇಲುಮಟ್ಟದ) ಜಾತಿಯ ವಿನೀತ ಸದಸ್ಯರಾಗಿರಲು ಇಷ್ಟಪಡುತ್ತಾರೆ. ಆದರೆ ಜಾತಿಗಳು ಬೇಲಿ ಹಾಕಿಕೊಂಡ ಘಟಕಗಳು. ಆ ಜಾತಿಗಳ ತೀರ ಪ್ರಜ್ಞಾಪೂರ್ವಕವಾದ ಒಳಸಂಚೇ ಬಹಿಷ್ಕೃತರನ್ನು ಪ್ರತ್ಯೇಕವಾದ ಒಂದು ಜಾತಿಯಾಗುವಂತೆ ಒತ್ತಾಯಿಸುವುದು. ಈ ಹಠಮಾರಿತನದ ಪರಿಸ್ಥಿತಿಯ ಹಿಂದಿನ ತರ್ಕವು ನಿರ್ದಯವಾದುದು. ಈ ಒತ್ತಡಕ್ಕೆ ಮಣಿದು ತಾವೂ ಕೂಡ ತಮ್ಮ ಸುತ್ತಲೂ ಆವರಣ ಕಟ್ಟಿಕೊಂಡಿರುವುದು ಕೆಲವು ದುರದೃಷ್ಟದ ಗುಂಪುಗಳ ಗಮನಕ್ಕೆ ಬರುತ್ತದೆ. ಯಾಕೆಂದರೆ ಇತರರೂ ತಾವು ಬೇಲಿ ಕಟ್ಟಿಕೊಳ್ಳುವುದರ ಮೂಲಕ ಇವರನ್ನು ಹೊರಗಟ್ಟಿದ್ದರು. ಇದರ ಪರಿಣಾಮ ಹೊಸ ಗುಂಪುಗಳು (ಜಾತಿಕಟ್ಟಳೆಗೆ ವಿರುದ್ಧವಾದ ಯಾವುದೇ ಭಾವದಿಂದ ರಚಿತವಾಗಿದ್ದು) ಯಾಂತ್ರಿಕ ನಿಯಮಕ್ಕನುಗುಣವಾಗಿ ಜಾತಿಗಳನ್ನು ಕಂಗೆಡಿಸುವಷ್ಟು ಸಂಖ್ಯೆಯಲ್ಲಿ ವೃದ್ಧಿಸುತ್ತವೆ. ಭಾರತದ ಜಾತಿರಚನೆ ಪ್ರಕ್ರಿಯೆಯಲ್ಲಿ ಎರಡನೆಯ ಕಥೆಯನ್ನು ಹೀಗೆ ಹೇಳಲಾಗಿದೆ. (ಪುಟ 25)
ಈಗ ನನ್ನ ಪ್ರಬಂಧದ ಮುಖ್ಯಾಂಶಗಳನ್ನು ಕ್ರೋಢೀಕರಿಸಿ ಹೇಳಬೇಕಿದೆ. ಜಾತಿಯ ಅಭ್ಯಾಸಿಗಳಿಂದ ನಾನಾ ತಪ್ಪುಗಳಾಗಿವೆಯೆಂಬುದು ನನ್ನ ಅಭಿಪ್ರಾಯ. ಅವರ ಅನ್ವೇಷಣೆಯನ್ನು ಈ ತಪ್ಪುಗಳು ದಾರಿ ತಪ್ಪಿಸಿವೆ. ಜಾತಿಯ ಅಧ್ಯಯನ ನಿರತರಾದ ಯೂರೋಪಿನ ಅಭ್ಯಾಸಿಗಳು ಅನಗತ್ಯವಾಗಿ ಜಾತಿ ವ್ಯವಸ್ಥೆಯಲ್ಲಿ ವರ್ಣದ ಪಾತ್ರವನ್ನು ಒತ್ತು ಕೊಟ್ಟು ಹೇಳಿದ್ದಾರೆ. ಸ್ವತಃ ತಾವೇ ವರ್ಣದ ಪೂರ್ವಾಗ್ರಹಗಳಿಗೆ ಒಳಗಾದ ಅವರು ತುಂಬ ಸುಲಭವಾಗಿ ಜಾತಿಸಮಸ್ಯೆಗೆ ಅದೇ ಪ್ರಧಾನವಾದ ಅಂಶವೆಂದು ಊಹಿಸಿದರು. ಆದರೆ ಯಾವುದೂ ಸತ್ಯದಿಂದ ದೂರ ಉಳಿಯಲಾರದು. ಮತ್ತು ಡಾ.ಕೇತ್ಕರ್ ಅವರು ಸರಿಯಾಗಿಯೇ ಹೇಳಿದ್ದಾರೆ. “ಆರ್ಯವೆನ್ನುವ ಅಥವಾ ದ್ರಾವಿಡವೆನ್ನುವ ಯಾವುದೇ ಜನಾಂಗಕ್ಕೆ ಸೇರಿದವರಾಗಲೀ, ಎಲ್ಲ ರಾಜರೂ ಆರ್ಯರೇ ಆಗಿದ್ದರು. ವಿದೇಶಿ ವಿದ್ವಾಂಸರು ಬಂದು ವ್ಯತ್ಯಾಸದ ಗೆರೆಯನ್ನು ಎಳೆಯುವವರೆಗೂ ಒಂದು ಬುಡಕಟ್ಟು ಅಥವಾ ಒಂದು ಕುಟುಂಬ ಜನಾಂಗಿಕವಾಗಿ ಆರ್ಯವೋ ಅಥವಾ ದ್ರಾವಿಡವೋ ಎಂಬ ಪ್ರಶ್ನೆ ಭಾರತದ ಜನರನ್ನು ಎಂದೂ ಕಾಡಲಿಲ್ಲ. ಚರ್ಮದ ಬಣ್ಣ ಒಂದು ಮುಖ್ಯ ವಿಷಯವೆಂಬುದು ಎಂದೋ ಅಪ್ರಸ್ತುತವಾಗಿತ್ತು.” (ಹಿಸ್ಟರಿ ಆಫ್ ಕ್ಯಾಸ್ಟ್ಸ್, ಪುಟ ೮೨) ಅಲ್ಲದೆ, ಅವರು ಉಲ್ಲೇಖಗಳನ್ನು ಮೂಲ ವಿವರಣೆಗಳೆಂದು ತಪ್ಪಾಗಿ ಗ್ರಹಿಸಿದ್ದಾರೆ. ಕುಲಕಸುಬಿನ, ಧಾರ್ಮಿಕ ಮೊದಲಾದ ಜಾತಿಗಳಿವೆಯೆಂಬುದು ನಿಜ. ಆದರೆ ಅದನ್ನು ಹೇಳಿದ ಮಾತ್ರಕ್ಕೆ ಯಾವುದೇ ರೀತಿಯಿಂದ ಅದೇ ಜಾತಿಯ ಉಗಮದ ವಿವರಣೆಯಾಗುವುದಿಲ್ಲ. ಈ ಕುಲಕಸುಬಿನ ಗುಂಪುಗಳು ಯಾಕೆ ಜಾತಿಗಳೆಂಬುದನ್ನು ನಾವಿನ್ನೂ ಕಂಡುಕೊಳ್ಳಬೇಕಾಗಿದೆ. ಆದರೆ ಈ ಪ್ರಶ್ನೆಯನ್ನು ಯಾವಾಗಲೂ ಕೇಳಿಯೇ ಇಲ್ಲ. ಕಡೆಯದಾಗಿ, ಅವರು ಜಾತಿಯನ್ನು, ಅದನ್ನು ಒಂದು ಉಸಿರು ಸೃಷ್ಟಿ ಮಾಡಿತೋ ಎಂಬಂತೆ, ತುಂಬ ಲಘುವಾಗಿ ಪರಿಗಣಿಸಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ, ಆಗಲೇ ನಾನು ವಿವರಿಸಿರುವಂತೆ, ಜಾತಿಯ ಸಮಸ್ಯೆಯು ಅದು ಒಳಗೊಂಡಿರುವ ಭಯಾನಕವಾದ ಸಂಕಷ್ಟಗಳ ಕಾರಣದಿಂದ ಸಹಿಸಲಸಾಧ್ಯವಾದುದಾಗಿದೆ. ನಂಬಿಕೆಯ ಮೇಲೆ ಜಾತಿ ನಿಂತಿರುವುದೆಂಬುದು ನಿಜ, ಆದರೆ ನಂಬಿಕೆಯು ಒಂದು ಸಾಮಾಜಿಕ ಏರ್ಪಾಡಿನ ಬುನಾದಿಯಾಗುವುದಕ್ಕಿಂತಲೂ ಮುಂಚೆ ಸ್ವತಃ ಆ ಏರ್ಪಾಡೇ ಶಾಶ್ವತವಾಗಿರುವ ಮತ್ತು ಬಲಯುತವಾಗಿರುವ ಇಚ್ಛೆಯನ್ನು ಹೊಂದಿರುತ್ತದೆ. ಜಾತಿ ಸಮಸ್ಯೆಯನ್ನು ಕುರಿತ ನನ್ನ ಅಧ್ಯಯನದಲ್ಲಿ ನಾಲ್ಕು ಅಂಶಗಳಿವೆ : (೧) ಹಿಂದೂ ಜನಸಮುದಾಯ ಒಂದು ಸಂಕೀರ್ಣ ರಚನೆಯಾಗಿದ್ದರೂ ಅದರಲ್ಲೊಂದು ಆಳವಾದ ಸಾಂಸ್ಕೃತಿಕ ಏಕತೆಯಿದೆ; (೨) ವ್ಯಾಪಕವಾದ ಸಾಂಸ್ಕೃತಿಕ ಘಟಕದ ಪ್ರತಿಯೊಂದು ಭಾಗವನ್ನೂ ಜಾತಿಯು ಹೆಣೆದು ಕಟ್ಟಿದೆ; (೩) ಪ್ರಾರಂಭದಲ್ಲಿದ್ದುದು ಒಂದೇ ಜಾತಿ, ಮತ್ತು (೪) ಅನುಕರಣೆಯಿಂದಲೂ, ಬಹಿಷ್ಕಾರದ ಕಾರಣದಿಂದಲೂ ವರ್ಗಗಳೇ ಜಾತಿಗಳಾಗಿ ಪರಿವರ್ತನೆಗೊಂಡಿವೆ.
ಇಂದು ಭಾರತದಲ್ಲಿ ಜಾತಿ ಸಮಸ್ಯೆಗೆ ವಿಚಿತ್ರವಾದ ಹಿತಾಸಕ್ತಿಗಳು ತಳಕು ಹಾಕಿಕೊಂಡಿವೆ; ಈ ಅಸಹಜ ಸಾಮಾಜಿಕ ಏರ್ಪಾಡನ್ನು ತೊಡೆದು ಹಾಕಲು ನಿರಂತರವಾದ ಪ್ರಯತ್ನಗಳನ್ನೂ ಮಾಡಲಾಗಿದೆ. ಆದರೆ ಸುಧಾರಣೆಯ ಅಂಥ ಪ್ರಯತ್ನಗಳು ಸಹ ಜಾತಿಯ ಮೂಲವು ಒಂದು ಪರಮೋಚ್ಚ ಅಧಿಕಾರದ ಪ್ರಜ್ಞಾಪೂರ್ವಕ ಆದೇಶದಿಂದಾದುದೇ ಅಥವಾ ಮಾನವ ಸಮಾಜದ ಜೀವನದಲ್ಲಿ ವಿಚಿತ್ರವಾದ ಸನ್ನಿವೇಶಗಳಲ್ಲಾದ ಅಪ್ರಜ್ಞಾಪೂರ್ವಕವಾದ ಬೆಳವಣಿಗೆಯೆ ಎಂಬ ಜಾತಿಯ ಉಗಮದ ಬಗೆಗಿನ ಗಂಭೀರ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕಿವೆ. ಈ ಎರಡನೆಯ ಅಭಿಪ್ರಾಯವನ್ನು ಹೊಂದಿರುವವರು ಈ ಪ್ರಬಂಧದಲ್ಲಿ (ಪುಟ 26)
ತಳೆದಿರುವ ದೃಷ್ಟಿಕೋನದಿಂದ ಆಲೋಚನೆಗೆ ಸ್ವಲ್ಪ ಗ್ರಾಸವನ್ನು ಪಡೆಯುವರೆಂದು ನಾನು ಭಾವಿಸುತ್ತೇನೆ. ಪ್ರಾಯೋಗಿಕ ಮಹತ್ವದ ಹೊರತಾಗಿಯೂ ಜಾತಿ ಎಂಬ ವಿಷಯವು ಪೂರ್ಣ ತನ್ಮಯಗೊಳಿಸುವ ಸಮಸ್ಯೆಯಾಗಿದ್ದು ಅದರ ತಾತ್ವಿಕ ತಳಹದಿಯ ವಿಚಾರವಾಗಿ ನನ್ನಲ್ಲಿ ಮೂಡಿದ ಆಸಕ್ತಿಯು ನಿಮ್ಮ ಮುಂದೆ ಕೆಲವು ತೀರ್ಮಾನಗಳನ್ನು ಮಂಡಿಸಲು ಪ್ರಚೋದಿಸಿದೆ. ಅವು ಸುಭದ್ರವೂ, ಚೆನ್ನಾಗಿ ಬೆಂಬಲಿಸಲಾದ ತಳಹದಿಯ ಮೇಲೆ ನಿಂತಿರುವಂತಹುದೂ ಆಗಿವೆ. ಹಾಗಿದ್ದೂ, ಅವು ಒಂದು ವಿಷಯದ ಮೇಲಿನ ಸಂವಾದದ ಚಾಲನೆಗೆ ಬೇಕಾದ ಕೊಡುಗೆಗಿಂತ ಹೆಚ್ಚಿನದೆಂದೂ ಅಥವಾ ಅವೇ ಅಂತಿಮವಾದದ್ದೆಂದೂ ತಿಳಿಯುವ ಧಾರ್ಷ್ಟ್ಯ ನನಗಿಲ್ಲ. ವಾಹನವನ್ನು ತಪ್ಪು ಸಾಲಿನಲ್ಲಿ ನಿಲ್ಲಿಸಿರುವಂತೆಯೂ ನನಗೆ ತೋರುತ್ತದೆ. ಆದರೆ ಈ ಪ್ರಬಂಧದ ಪ್ರಧಾನ ಆಶಯವೆಂದರೆ ಸಂಶೋಧನೆಯ ಉಪಯುಕ್ತ ಸತ್ಯದ ಬಳಿಗೆ ಕರೆದೊಯ್ಯುವ ಸರಿಯಾದ ದಾರಿಯೆಂದು ನಾನು ಯಾವುದನ್ನು ತಿಳಿದಿದ್ದೇನೆಯೊ ಅದನ್ನು ಸೂಚಿಸುವುದು. ನಾವು ವಿಷಯವನ್ನು ಪೂರ್ವಾಗ್ರಹದಿಂದ ಸಮೀಪಿಸದಂತೆ ಎಚ್ಚರ ವಹಿಸಬೇಕು. ವಿಜ್ಞಾನದ ಜಗತ್ತಿನಿಂದ ಭಾವುಕತೆಯನ್ನು ಹೊರಹಾಕಬೇಕು. ವಸ್ತುನಿಷ್ಠವಾದ ದೃಷ್ಟಿಕೋನದಿಂದ ಸಂಗತಿಗಳನ್ನು ತೂಗಿ ನೋಡಬೇಕು. ನನ್ನ ಈ ಸಿದ್ಧಾಂತವನ್ನು ಗುಣಾತ್ಮಕವಾಗಿ ನಾಶಪಡಿಸಿದಾಗಲೂ, ಒಂದು ವಿಷಯದಲ್ಲಿರುವ ವೈಚಾರಿಕ ಭಿನ್ನಾಭಿಪ್ರಾಯದಂತೆ, ನಾನು ಅಷ್ಟೇ ಸಂತೋಷ ಪಡುತ್ತೇನೆ; ಇದು ಅನೇಕ ವಿದ್ವತ್ಪೂರ್ಣ ವ್ಯಾಖ್ಯಾನಗಳ ಹೊರತಾಗಿಯೂ ವಿವಾದಾಸ್ಪದವಾಗಿ ನಿರಂತರ ಉಳಿಯಲೂಬಹುದು. ಕಡೆಯದಾಗಿ ಒಂದು ಮಾತು, ಜಾತಿಯ ಒಂದು ಸಿದ್ಧಾಂತವನ್ನು ಪ್ರತಿಪಾದಿಸಲು ನಾನು ಮಹತ್ವಾಕಾಂಕ್ಷಿಯಾಗಿದ್ದರೂ ನನ್ನ ಸಿದ್ಧಾಂತವು ಅತಾರ್ಕಿಕವಾದುದೆಂದು ತೋರಿಸಿಕೊಟ್ಟರೆ ಅದನ್ನು ತೊರೆದುಬಿಡಲು ನಾನು ಸಿದ್ದನಿದ್ದೇನೆ. (ಪುಟ 27)
– ಡಾ.ಬಿ.ಆರ್.ಅಂಬೇಡ್ಕರ್
ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು, ಸಂಪುಟ – 1, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ,2015, ಪುಟ ಸಂಖ್ಯೆ 1 – 26




