ನಾಯಕ ಮತ್ತು ನಾಯಕಾರಾಧನೆ

6 months ago

ನಾಯಕ ಮತ್ತು ನಾಯಕಾರಾಧನೆ

ರಾನಡೆ, ಗಾಂಧಿ ಮತ್ತು ಜಿನ್ನಾ

[ಮಹದೇವ ಗೋವಿಂದ ರಾನಡೆಯವರ 101ನೆಯ  ಜನ್ಮದಿನದ ನಿಮಿತ್ತ ಜನವರಿ 18, 1943ರಂದು ಪುಣೆಯ ಗೋಖಲೆ ಸ್ಮಾರಕ ಭವನದಲ್ಲಿ ಜರುಗಿದ ಸಮಾರಂಭದಲ್ಲಿ ಮಾಡಲಾದ ಭಾಷಣ]

ಪ್ರಸ್ತಾವನೆ

ಪುಣೆಯ ಡೆಕ್ಕನ್ ಸಭಾದವರು ದಿವಂಗತ ನ್ಯಾಯಮೂರ್ತಿ ಮಹದೇವ ಗೋವಿಂದ ರಾನಡೆಯವರ ೧೦೧ನೆಯ ಜನ್ಮದಿನವನ್ನು ಜನವರಿ ೧೮, ೧೯೪೦ರಂದು ಆಚರಿಸುವ ಸಂದರ್ಭದಲ್ಲಿ ಉಪನ್ಯಾಸ ನೀಡಲು ನನ್ನನ್ನು ಆಮಂತ್ರಿಸಿದ್ದರು. ಆಮಂತ್ರಣವನ್ನು ಸ್ವೀಕರಿಸುವುದು ನನಗೆ ಅಷ್ಟೇನೂ ಪ್ರಿಯವಾದುದಾಗಿರಲಿಲ್ಲ. ಏಕೆಂದರೆ, ರಾನಡೆಯವರನ್ನು ಕುರಿತು ಮಾತನಾಡುವಾಗ ಅನಿವಾರ್ಯವಾಗಿ ಚರ್ಚಿಸಲೇಬೇಕಾಗಿದ್ದ ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳ ಕುರಿತ ನನ್ನ ವಿಚಾರಗಳು ಸಭಿಕರಿಗೂ ಮತ್ತು ಡೆಕ್ಕನ್ ಸಭಾದ ಸದಸ್ಯರಿಗೂ ಅಪ್ಯಾಯಮಾನವಾಗಲಾರದೆಂಬುದು ನನಗೆ ಗೊತ್ತಿದ್ದಿತು. ಆದಾಗ್ಯೂ ಅವರ ಆಮಂತ್ರಣವನ್ನು ಸ್ವೀಕರಿಸಿದೆ. ನಾನು ಉಪನ್ಯಾಸ ನೀಡುವಾಗ ಅದನ್ನು ಪ್ರಕಟಿಸುವ ಉದ್ದೇಶ ನನಗಿರಲಿಲ್ಲ. ದೊಡ್ಡ ವ್ಯಕ್ತಿಗಳ ವಾರ್ಷಿಕ ಸಮಾರಂಭಗಳಲ್ಲಿ ಮಾಡಲಾದ ಭಾಷಣಗಳು ಪ್ರಾಸಂಗಿಕವಾದವುಗಳಾಗಿರುತ್ತವೆ. ಅವುಗಳು ಶಾಶ್ವತ ಮೌಲ್ಯವನ್ನು ಹೊಂದಿರುವುದಿಲ್ಲ. ನನ್ನ ಭಾಷಣ ಇದಕ್ಕೆ ಹೊರತಾದದ್ದು ಎಂದು ನನಗೆ ಅನಿಸಿರಲಿಲ್ಲ. ಆದರೆ ಇಡೀ ಭಾಷಣವನ್ನು ಮುದ್ರಿಸಬೇಕೆಂದು ಬಯಸುವ ನನ್ನ ಅನೇಕ ಹಟಮಾರಿ ಸ್ನೇಹಿತರು ನನ್ನನ್ನು ಒತ್ತಾಯಿಸುತ್ತಿದ್ದಾರೆ. ನಾನು ಈ ವಿಷಯದಲ್ಲಿ ತಟಸ್ಥನಾಗಿದ್ದೇನೆ. ಈ ಭಾಷಣಕ್ಕೆ ದೊರೆತ ಪ್ರಚಾರದಿಂದ ನನಗೆ ತೃಪ್ತಿಯಾಗಿದೆ. ಇದಕ್ಕೂ ಹೆಚ್ಚು ಪ್ರಚಾರ ಪಡೆಯುವ ಆಶೆ ನನಗಿಲ್ಲ. ಆದಾಗ್ಯೂ ಇದನ್ನು ಮೂಲೆಗುಂಪಾಗಗೊಡಬಾರದೆಂದು ಯೋಚಿಸುವವರಿದ್ದರೆ ಅವರನ್ನು ನಿರಾಶೆಗೊಳಿಸುವ ಕಾರಣವಿಲ್ಲವೆಂದು ನನಗನಿಸುತ್ತದೆ.

ಪ್ರಕಟಿತವಾದ ಭಾಷಣಕ್ಕೂ, ಅಂದು ಮಾಡಿದ ಭಾಷಣಕ್ಕೂ ಎರಡು ಅಂಶಗಳಲ್ಲಿ ವ್ಯತ್ಯಾಸವಿದೆ. ಭಾಷಣದ ೧೦ನೆಯ ವಿಭಾಗವನ್ನು ಭಾಷಣವು ಅತಿ ದೀರ್ಘಕಾಲ ಬೆಳೆಯಬಾರದೆಂಬ ಕಾರಣದಿಂದ ಕೈಬಿಡಲಾಗಿತ್ತು. ಈ ವಿಭಾಗವನ್ನು ಕೈಬಿಟ್ಟರೂ ಭಾಷಣ ಒಂದು ಗಂಟೆ ಮೂವತ್ತು ನಿಮಿಷಗಳವರೆಗೆ ಬೆಳೆಯಿತು. ಇದು ಮೊದಲ ವ್ಯತ್ಯಾಸ. ಎರಡನೆಯ ವ್ಯತ್ಯಾಸವೆಂದರೆ, ರಾನಡೆ ಮತ್ತು ಪುಲೆಯವರನ್ನು ಹೋಲಿಸಿದ ೮ನೆಯ ವಿಭಾಗದ ಬಹಳಷ್ಟು ಭಾಗವನ್ನು ಕೈಬಿಟ್ಟಿರುವುದು. ಇದನ್ನು ಕೈಬಿಡಲು ಎರಡು ಕಾರಣಗಳುಂಟು. ಮೊದಲನೆಯದಾಗಿ ಈ ಇಬ್ಬರು ವ್ಯಕ್ತಿಗಳ ನಡುವಣ ಹೋಲಿಕೆ ಇವರಿಗೆ ಅಪಚಾರವಾಗದಷ್ಟು ಪೂರ್ಣ ಮತ್ತು ವಿವರವಾಗಿರಲಿಲ್ಲ. ಎರಡನೆಯದಾಗಿ, ಸಾಕಷ್ಟು ಪ್ರಮಾಣದಲ್ಲಿ ಕಾಗದ ದೊರಕಿಸಿಕೊಳ್ಳುವಲ್ಲಿ ಕಷ್ಟವಾದಾಗ ಭಾಷಣದ ಕೆಲವು ಭಾಗಗಳನ್ನು ಕೈಬಿಡುವುದೇ ಸೂಕ್ತವಾಗಿತ್ತು.

ಈ ಭಾಷಣದ ಪ್ರಕಟಣೆ ವಿಚಿತ್ರ ಪರಿಸ್ಥಿತಿಯಲ್ಲಾಗುತ್ತಿದೆ. ಸಾಮಾನ್ಯವಾಗಿ ಪ್ರಕಟಣೆಯ ನಂತರ ವಿಮರ್ಶೆಗಳು ಬರುತ್ತವೆ. ಈ ಸಂಗತಿಯಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಇನ್ನೂ ಹೆಚ್ಚು ಕೆಡುಕಿನ ಸಂಗತಿ ಎಂದರೆ ಭಾಷಣದ ಮೇಲಣ ವಿಮರ್ಶೆಗಳು ಭಾಷಣವನ್ನು ಕಟುವಾಗಿ ಟೀಕಿಸಿವೆ. ಇದರ ಬಗ್ಗೆ ಪ್ರಕಾಶಕರು ಚಿಂತಿಸಬೇಕಾಗಿತ್ತು. ಈ ಪ್ರಕಟಣೆಯಲ್ಲಿರುವ ಅಪಾಯವನ್ನು ಅರಿತೂ ಅವರು ಪ್ರಕಟಿಸಲು ಮುಂದೆ  (ಪು. 237)

ಬಂದಿರುವುದು ಸಂತೋಷದ ಸಂಗತಿ. ಈ ಭಾಷಣದಲ್ಲಿ ಶಾಶ್ವತ ಮೌಲ್ಯದ ಅಂಶಗಳಿವೆ ಎಂಬ ನನ್ನ ಸ್ನೇಹಿತರ ವಿಚಾರವನ್ನು ಈ ಸಂಗತಿ ಪುಷ್ಟಿಕರಿಸುತ್ತದೆ. ಇದಕ್ಕೆ ಹೆಚ್ಚೇನನ್ನೂ ಹೇಳಬೇಕಾಗಿಲ್ಲ. ನನ್ನ ಮಟ್ಟಿಗೆ ಹೇಳಬೇಕಾದರೆ, ಪತ್ರಿಕೆಯವರು ನನ್ನ ಭಾಷಣವನ್ನು ಟೀಕಿಸಿರುವುದರಿಂದ ನನಗೇನೂ ವ್ಯಥೆಯಾಗಿಲ್ಲ. ಆದರೆ ಅವರ ಟೀಕೆಗಳಿಗೆ ಆಧಾರವೇನು? ಮತ್ತು ಭಾಷಣವನ್ನು ನಿಂದಿಸಲು ಮುಂದೆ ಬಂದಿರುವವರು ಯಾರು?

ಭಾರತದ ರಾಜಕೀಯದಲ್ಲಿ ಶ್ರೀಯುತ ಗಾಂಧಿ ಮತ್ತು ಜಿನ್ನಾರವರು ಉಂಟುಮಾಡಿದ ಗೊಂದಲಕ್ಕಾಗಿ ನಾನು ಅವರನ್ನು ಖಂಡಿಸಿರುವುದೇ ನನ್ನ ದೂಷಣೆಗೆ ಕಾರಣ ಮತ್ತು ಹೀಗೆ ಖಂಡಿಸುವಲ್ಲಿ ಅವರೀರ್ವರ ಬಗ್ಗೆ ದ್ವೇಷ ಮತ್ತು ಅಗೌರವ ತೋರಿಸಿದ್ದೇನೆ ಎಂದೂ ಆಪಾದಿಸಲಾಗಿದೆ. ಈ ಆಪಾದನೆಗೆ ಉತ್ತರವಾಗಿ ನಾನು ಇಷ್ಟೇ ಹೇಳಬಲ್ಲೆ; ನಾನು ಯಾವಾಗಲೂ ವಿಮರ್ಶಕನಾಗಿದ್ದೇನೆ ಮತ್ತು ವಿಮರ್ಶಕನಾಗಿಯೇ ಇರಬಯಸುವೆ. ನಾನು ತಪ್ಪುಗಳನ್ನು ಮಾಡುತ್ತಿರಬಹುದು. ಆದರೆ ಬೇರೆಯವರ ಮಾರ್ಗದರ್ಶನ ಮತ್ತು ನಿರ್ದೇಶನಗಳಿಗಾಗಿ ಕಾಯುವುದಕ್ಕಿಂತ ಅಥವಾ ಸುಮ್ಮನೆ ಕುಳಿತುಕೊಂಡು ಪರಿಸ್ಥಿತಿ ಹದಗೆಡುವುದಕ್ಕೆ ದಾರಿಮಾಡುವುದಕ್ಕಿಂತ ತಪ್ಪುಗಳನ್ನು ಮಾಡುವುದು ಒಳ್ಳೆಯದು. ನಾನು ದ್ವೇಷದಿಂದ ಪ್ರೇರಿತನಾಗಿದ್ದೇನೆಂದು ನನ್ನನ್ನು ದೂಷಿಸುವವರು ಎರಡು ಅಂಶಗಳನ್ನು ಮರೆಯುತ್ತಾರೆ. ಮೊದಲನೆಯದಾಗಿ, ಈ ಆಪಾದಿತ ದ್ವೇಷ ನನ್ನ ಯಾವುದೇ ವೈಯಕ್ತಿಕ ಕಾರಣದಿಂದ ಹುಟ್ಟಿಲ್ಲ. ನಾನು ಅವರ (ಗಾಂಧಿ, ಜಿನ್ನಾ) ವಿರುದ್ಧವಿರುವ ಕಾರಣ ನಾನು ಅವರೊಡನೆ ಒಂದು ತೀರ್ಮಾನಕ್ಕೆ ಬರಬೇಕೆಂದಿದ್ದೇನೆ. ಯಾವುದಾದರೂ ಒಂದು ರೀತಿಯ ತೀರ್ಮಾನಕ್ಕೆ ಬರಬೇಕೆಂಬುದೇ ನನ್ನ ಇಚ್ಛೆ. ಆದರ್ಶಪ್ರಾಯವಾದಂತಹ ತೀರ್ಮಾನಕ್ಕಾಗಿ ಕಾಯಲು ನಾನು ಸಿದ್ಧನಿಲ್ಲ. ಅಂತೆಯೇ ನಾನು ಯಾವುದೇ ವೈಭವೋಪೇತ ವ್ಯಕ್ತಿಯ ಇಚ್ಛೆ ಮತ್ತು ಒಪ್ಪಿಗೆಯನ್ನು ಅವಲಂಬಿಸುವಂತಹ ತೀರ್ಮಾನವನ್ನೂ ಸಹಿಸಲಾರೆ. ಎರಡನೆಯದಾಗಿ, ತನ್ನ ಪ್ರೀತಿ ಮತ್ತು ದ್ವೇಷದಲ್ಲಿ ಬಲವಾಗಿಲ್ಲದ ಯಾವುದೇ ವ್ಯಕ್ತಿ ಉದಾತ್ತ ತತ್ವಗಳು ಮತ್ತು ತಾನು ಹೋರಾಡುತ್ತಿರುವ ಉದ್ದೇಶಗಳಿಗೆ ಪುಷ್ಟಿಯನ್ನು ನೀಡಲಾರ ಮತ್ತು ತನ್ನ ಯುಗದ ಮೇಲೆ ಪ್ರಭಾವ ಬೀರಲಾರ. ನಾನು ಅನ್ಯಾಯ, ದಬ್ಬಾಳಿಕೆ, ಆಡಂಬರ ಮತ್ತು ಆಷಾಢಭೂತಿತನವನ್ನು ದ್ವೇಷಿಸುತ್ತೇನೆ ಮತ್ತು ನನ್ನ ದ್ವೇಷದಲ್ಲಿ ಈ ಎಲ್ಲಾ ವಿಧದ ಅಪರಾಧಿಗಳು ಸೇರಿರುತ್ತಾರೆ. ನನ್ನ ದ್ವೇಷದ ಭಾವನೆಗಳೇ ನನ್ನ ನಿಜವಾದ ಬಲ ಎಂದು ನನ್ನ ಟೀಕಾಕಾರರಿಗೆ ತಿಳಿಸಬಯಸುತ್ತೇನೆ. ಈ ದ್ವೇಷ ನಾನು ನಂಬಿರುವ ಗುರಿಗಳ ಬಗ್ಗೆ ಇರುವ ನನ್ನ ಒಲವಿನ ಪ್ರತಿಕ್ರಿಯೆಯೇ ಆಗಿದ್ದು ಇದಕ್ಕಾಗಿ ನಾನು ನಾಚಬೇಕಾಗಿಲ್ಲ. ಈ ಕಾರಣಗಳಿಂದಾಗಿ ಭಾರತದ ರಾಜಕೀಯ ಪ್ರಗತಿಯ ನಿಲುಗಡೆಗೆ ಕಾರಣರಾಗಿರುವ ಶ್ರೀ ಗಾಂಧಿ ಮತ್ತು ಶ್ರೀ ಜಿನ್ನಾರವರನ್ನು ಟೀಕಿಸಿದುದಕ್ಕಾಗಿ ನಾನು ಕ್ಷಮೆ ಕೇಳಬೇಕಾಗಿಲ್ಲ.

ಕಾಂಗ್ರೆಸ್ ಪತ್ರಿಕೆಗಳು ನನ್ನನ್ನು ದೂಷಿಸಿವೆ. ಕಾಂಗ್ರೆಸ್ ಪತ್ರಿಕೆಗಳನ್ನು ನಾನು ಚೆನ್ನಾಗಿ ಬಲ್ಲೆ. ಅವರ ಟೀಕೆಗಳಿಗೆ ನಾನು ಯಾವ ಬೆಲೆಯನ್ನೂ ಕೊಡುವುದಿಲ್ಲ. ಅವು ನನ್ನ ತರ್ಕಗಳು ಅಸಮರ್ಪಕವಾದುವುಗಳೆಂದು ಯಾವತ್ತೂ ನಿರೂಪಿಸಿಲ್ಲ. ನನ್ನನ್ನು ಪ್ರತಿಯೊಂದಕ್ಕೂ ಟೀಕಿಸುವ, ಬಯ್ಯುವ ಮತ್ತು ದೂಷಿಸುವ ಹಾಗೂ ನಾನು ಹೇಳಿದ್ದನ್ನೆಲ್ಲಾ ತಪ್ಪಾಗಿ ವರದಿ ಮಾಡುವ, ತಪ್ಪಾಗಿ ನಿರೂಪಿಸುವ ಮತ್ತು ಅಪಾರ್ಥ ಉಂಟು ಮಾಡುವ ಕಾಯಕ ಮಾತ್ರ ಅವುಗಳಿಗೆ ಗೊತ್ತು. ನಾನು ಮಾಡುವ ಯಾವುದೇ ಕೆಲಸ ಕಾಂಗ್ರೆಸ್ ಪತ್ರಿಕೆಗಳಿಗೆ ಸಂತೋಷವನ್ನುಂಟುಮಾಡುವುದಿಲ್ಲ. ನನ್ನ ಬಗ್ಗೆ ಕಾಂಗ್ರೆಸ್ ಪತ್ರಿಕೆಗಳು ಹೊಂದಿರುವ ಈ ದ್ವೇಷೋದ್ರೇಕ, ನನ್ನ ಅಭಿಪ್ರಾಯದಲ್ಲಿ, ಹಿಂದೂಗಳು ಅಸ್ಪೃಶ್ಯರ ಬಗ್ಗೆ ಹೊಂದಿರುವ ದ್ವೇಷದ  (ಪು. 238)

ಪ್ರತಿರೂಪವೇ ಆಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಕಳೆದ ಅನೇಕ ವರ್ಷಗಳಿಂದ ಕಾಂಗ್ರೆಸ್‌ ಟೀಕೆಗೆ ಗುರಿಯಾಗಿರುವ ಶ್ರೀ ಜಿನ್ನಾರವರನ್ನು ನಾನು ಟೀಕಿಸಿರುವುದೇ ಕಾಂಗ್ರೆಸ್ ಪತ್ರಿಕೆಗಳು ಕೆರಳಲು ಕಾರಣ. ಆದ್ದರಿಂದಲೇ ನನ್ನ ಬಗೆಗಿನ ಅವರ ದ್ವೇಷೋದ್ರೇಕವು ವೈಯಕ್ತಿಕವಾಗಿ ಪರಿಣಮಿಸಿದೆ.

ಕಾಂಗ್ರೆಸ್ ಪತ್ರಿಕೆಗಳು ಎಷ್ಟೇ ಕಠೋರ ಮತ್ತು ಅವಾಚ್ಯ ಬೈಗಳನ್ನು ನನ್ನ ಮೇಲೆರೆಚಿದರೂ ನಾನು ನನ್ನ ಕರ್ತವ್ಯವನ್ನು ಮಾಡಲೇಬೇಕು. ನಾನು ಮೂರ್ತಿ ಪೂಜಕನಲ್ಲ. ನಾನು ಅವುಗಳನ್ನು ಒಡೆದುಹಾಕುವುದರಲ್ಲಿ ನಂಬಿಗೆಯುಳ್ಳವನು. ನಾನು ಶ್ರೀ ಗಾಂಧಿ ಮತ್ತು ಶ್ರೀ ಜಿನ್ನಾರನ್ನು ದ್ವೇಷಿಸುತ್ತಿದ್ದರೆ ಅವರು ನನಗೆ ಸೇರುವುದಿಲ್ಲವೇ ಹೊರತು ಅವರನ್ನು ದ್ವೇಷಿಸುವುದಿಲ್ಲ ಅದಕ್ಕೆ ಕಾರಣ ನಾನು ಭಾರತವನ್ನು ಹೆಚ್ಚಾಗಿ ಪ್ರೀತಿಸುತ್ತೇನೆ. ಇದೇ ನಿಜವಾದ ರಾಷ್ಟ್ರೀಯನ ನಂಬುಗೆ. ವ್ಯಕ್ತಿಗಳಿಗಿಂತ ದೇಶ ದೊಡ್ಡದು. ಮತ್ತು ಶ್ರೀಯುತ ಗಾಂಧಿ ಮತ್ತು ಶ್ರೀಯುತ ಜಿನ್ನಾರವರನ್ನು ಪೂಜಿಸುವುದು ಮತ್ತು ಭಾರತದ ಸೇವೆ ಎರಡೂ ಬೇರೆಯಾಗಿವೆಯಷ್ಟೇ ಅಲ್ಲ ಅವುಗಳಲ್ಲಿ ವಿರೋಧಾಭಾಸವಿದೆ ಎಂಬ ಅಂಶವನ್ನು ನನ್ನ ದೇಶಬಾಂಧವರು ಎಂದಾದರೂ ಒಂದು ದಿನ ಅರಿತುಕೊಳ್ಳುವರೆಂದು ನಾನು ಆಶಿಸುತ್ತೇನೆ.

– ಡಾ.ಬಿ.ಆರ್.ಅಂಬೇಡ್ಕರ್

೨೨, ಪೃಥ್ವಿರಾಜ್ ರಸ್ತೆ, ನವದೆಹಲಿ, ೧೫ ಮಾರ್ಚ್, ೧೯೪೩  (ಪು. 239)

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು, ಸಂಪುಟ – 1, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ,2015, ಪುಟ ಸಂಖ್ಯೆ 237 – 239

Leave a Reply