ರಾನಡೆ, ಗಾಂಧಿ ಮತ್ತು ಜಿನ್ನಾ

5 months ago

ರಾನಡೆ, ಗಾಂಧಿ ಮತ್ತು ಜಿನ್ನಾ

[ಮಹದೇವ ಗೋವಿಂದ ರಾನಡೆಯವರ 101ನೆಯ  ಜನ್ಮದಿನದ ನಿಮಿತ್ತ ಜನವರಿ 18, 1943ರಂದು ಪುಣೆಯ ಗೋಖಲೆ ಸ್ಮಾರಕ ಭವನದಲ್ಲಿ ಜರುಗಿದ ಸಮಾರಂಭದಲ್ಲಿ ಮಾಡಲಾದ ಭಾಷಣ]

1

ಈ ಆಮಂತ್ರಣವು ನನಗೆ ಸಂತೋಷವನ್ನು ನೀಡಿಲ್ಲವೆಂದು ನಾನು ಹೇಳಬೇಕಾಗಿದೆ. ಈ ಸಂದರ್ಭಕ್ಕೆ ತಕ್ಕ ಕಾರ್ಯ ನನ್ನಿಂದಾಗಲಿಕ್ಕಿಲ್ಲ. ಒಂದು ವರ್ಷದ ಹಿಂದೆ ಮುಂಬಯಿಯಲ್ಲಿ ರಾನಡೆಯವರ ಶತಮಾನೋತ್ಸವವನ್ನು ಆಚರಿಸಿದಾಗ ಭಾಷಣ ಮಾಡಲು ರೈಟ್ ಆನರಬಲ್ ಶ್ರೀನಿವಾಸ ಶಾಸ್ತ್ರಿಯವರನ್ನು ಆಮಂತ್ರಿಸಲಾಗಿತ್ತು. ಅನೇಕ ಕಾರಣಗಳಿಂದಾಗಿ ಈ ಕರ್ತವ್ಯವನ್ನು ನಿರ್ವಹಿಸಲು ಅವರು ಸೂಕ್ತ ವ್ಯಕ್ತಿಯಾಗಿದ್ದರು. ಅವರ ಜೀವನದ ಹಲವು ಕಾಲ ಶ್ರೀನಿವಾಸ ಶಾಸ್ತ್ರಿಯವರು ರಾನಡೆಯವರ ಸಮಕಾಲೀನರಾಗಿದ್ದರು. ಅವರು ರಾನಡೆಯವರ ನಿಕಟವರ್ತಿಗಳಾಗಿದ್ದರಲ್ಲದೆ ರಾನಡೆಯವರು ಯಾವ ಕಾರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರೋ ಆ ಕಾರ್ಯವನ್ನು ಕಣ್ಣಾರೆ ಕಂಡವರು. ಅವರಿಗೆ ರಾನಡೆಯವರನ್ನು ಅವರ ಸಹಚರರೊಡನೆ ಹೋಲಿಸಿ ಅವರ ಕೆಲಸ ಮೌಲ್ಯಮಾಪನೆ ಮಾಡುವ ಅವಕಾಶವಿತ್ತು. ಶ್ರೀನಿವಾಸ ಶಾಸ್ತ್ರಿಯವರು ರಾನಡೆಯವರೊಡನೆ ಹೊಂದಿದ್ದ ಅತ್ಮೀಯ ಸಂಪರ್ಕದ ಕಾರಣ ಅವರ ಬಗ್ಗೆ ಆತ್ಮವಿಶ್ವಾಸದಿಂದ ತಮ್ಮ ಅಭಿಪ್ರಾಯಗಳನ್ನು ಹೇಳಬಲ್ಲವರಾಗಿದ್ದರು. ಅವರು ಸಾಂದರ್ಭಿವಾಗಿ ಕೆಲವು ಐತಿಹ್ಯಗಳನ್ನು ಹೇಳುವುದರ ಮೂಲಕ ಸಭಿಕರೆದುರು ರಾನಡೆಯವರ ವ್ಯಕ್ತಿತ್ವವನ್ನು ಪ್ರಜ್ವಲಿತಗೊಳಿಸಬಲ್ಲವರಾಗಿದ್ದರು. ನನ್ನಲ್ಲಿ ಈ ಯಾವ ಅರ್ಹತೆಗಳೂ ಇಲ್ಲ. ರಾನಡೆಯವರೊಡನೆ ನನಗಿದ್ದ ಸಂಬಂಧ ಅತಿ ವಿರಳ. ನಾನು ಅವರನ್ನು ನೋಡಿಯೂ ಇರಲಿಲ್ಲ. ಅವರ ಬಗ್ಗೆ ಎರಡು ಘಟನೆಗಳನ್ನು ಮಾತ್ರ ನಾನು ನೆನಪಿಸಿಕೊಳ್ಳಬಲ್ಲೆ. ಮೊದಲನೆಯದು ಅವರ ನಿಧನಕ್ಕೆ ಸಂಬಂಧಿಸಿದ್ದು. ನಾನು ಆಗ ತಾರಾ ಮಾಧ್ಯಮಿಕ ಶಾಲೆಯಲ್ಲಿ ಒಂದನೆಯ ತರಗತಿಯ ವಿದ್ಯಾರ್ಥಿಯಾಗಿದ್ದೆ. ೧೯೦೧ರ ಜನವರಿ ೧೬ರಂದು ಶಾಲೆಯನ್ನು ಮುಚ್ಚಲಾಗಿ ಹುಡುಗರಿಗೆ ರಜೆ ಸಿಕ್ಕಿತು. ಶಾಲೆಯನ್ನು ಏಕೆ ಮುಚ್ಚಲಾಯಿತು ಎಂದು ಕೇಳಿದಾಗ ರಾನಡೆಯವರು ನಿಧನರಾಗಿದ್ದಾರೆ ಎಂದು ನಮಗೆ ತಿಳಿಸಲಾಯಿತು. ಆಗ ನನಗೆ ೯ ವರ್ಷ. ರಾನಡೆಯವರು ಯಾರು, ಅವರು ಏನು ಮಾಡಿದ್ದಾರೆ ಎಂಬ ಯಾವ ವಿಷಯವೂ ನನಗೆ ಗೊತ್ತಿರಲಿಲ್ಲ. ಇತರ ಹುಡುಗರಂತೆ ನನಗೂ ರಜೆ ದೊರೆತದ್ದರಿಂದ ಸಂತೋಷವಾಯಿತು. ಯಾರು ನಿಧನರಾದರೆಂಬುದನ್ನು ತಿಳಿದುಕೊಳ್ಳುವ ಗೋಜಿಗೂ ಹೋಗಲಿಲ್ಲ. ರಾನಡೆಯವರ ಬಗ್ಗೆ ನನಗೆ ಜ್ಞಾಪಕಕ್ಕೆ ಬರುವ ಎರಡನೆಯ ಘಟನೆ ಮೊದಲನೆಯದಕ್ಕಿಂತ ಬಹಳ ಕಾಲದ ನಂತರದ್ದು. ಒಮ್ಮೆ ನಾನು ನನ್ನ ತಂದೆಯವರ ಹಳೆಯ ಕಾಗದಪತ್ರಗಳ ಗಂಟುಗಳನ್ನು ಪರಿಶೀಲಿಸುವಾಗ ಅದರಲ್ಲಿ ನನಗೆ ಸೈನ್ಯದಲ್ಲಿ ಮಹಾರ ಕೋಮಿನವರನ್ನು ಭರ್ತಿ ಮಾಡಬಾರದೆಂದು ಭಾರತ ಸರಕಾರದವರು ೧೮೯೨ರಲ್ಲಿ ಹೊರಡಿಸಿದ್ದ ಆಜ್ಞೆಯ ವಿರುದ್ಧ ಮಹಾರಕೋಮಿನ ನಿಯೋಜಿತ ಮತ್ತು ನಿಯೋಜಿತರಲ್ಲದ ಸೈನಿಕ ಅಧಿಕಾರಿಗಳು ಮಾಡಿಕೊಂಡಿದ್ದರೆಂದು ಹೇಳಲಾದ ವಿಜ್ಞಾಪನಾಪತ್ರ ದೊರಕಿತು. ವಿಚಾರಿಸಿದಾಗ ಇದು ಅನ್ಯಾಯಕ್ಕೊಳಗಾದ ಮಹಾರರ ಪರವಾಗಿ ರಾನಡೆಯವರು ಸಿದ್ಧಪಡಿಸಿದ ವಿಜ್ಞಾಪನಾ ಪತ್ರದ ನಕಲು ಎಂದು ತಿಳಿದು ಬಂದಿತು. ಇವೆರಡು ಸಂಗತಿಗಳನ್ನು ಬಿಟ್ಟರೆ ರಾನಡೆಯವರ ಬಗ್ಗೆ ಇನ್ನೇನನ್ನೂ ನಾನು (ಪು. 240)

ಜ್ಞಾಪಿಸಿಕೊಳ್ಳಲಾರೆ. ಅವರ ಬಗ್ಗೆ ನನ್ನ ಅರಿವು ಸಂಪೂರ್ಣ ಅಪರೋಕ್ಷ, ಅವರ ಕಾರ್ಯದ ಬಗ್ಗೆ ನಾನು ಓದಿ ತಿಳಿದುಕೊಂಡಿದ್ದೇನಲ್ಲದೆ ಇತರರು ಅವರ ಬಗ್ಗೆ ಹೇಳಿರುವುದನ್ನೂ ಕೇಳಿದ್ದೇನೆ. ಆದ್ದರಿಂದ ಅವರ ಬಗ್ಗೆ ನಿಮ್ಮ ಆಸಕ್ತಿಯನ್ನು ಹೆಚ್ಚಿಸುವ ಅಥವಾ ಮಾಹಿತಿಯನ್ನು ನೀಡುವಂತಹ ವೈಯಕ್ತಿಕ ವಿವರಗಳನ್ನು ನನ್ನಿಂದ ನೀವು ನಿರೀಕ್ಷಿಸಬಾರದು. ಆ ಕಾಲದ ಒಬ್ಬ ಸಾರ್ವಜನಿಕ ವ್ಯಕ್ತಿಯಾಗಿ ಮತ್ತು ಇಂದಿನ ರಾಜಕೀಯದಲ್ಲಿ ಅವರ ಸ್ಥಾನದ ಬಗ್ಗೆ ಮಾತ್ರ ನನ್ನ ವಿಚಾರಗಳನ್ನು ಮಂಡಿಸಲಿದ್ದೇನೆ.

2

ನಿಮಗೆಲ್ಲ ಚೆನ್ನಾಗಿ ತಿಳಿದಿರುವಂತೆ ರಾನಡೆಯವರನ್ನು ಒಬ್ಬ ಮಹಾಪುರುಷನೆಂದು ಬಣ್ಣಿಸುವ ಅವರ ಸ್ನೇಹಿತರಿದ್ದಾರೆ. ಇದನ್ನು ನಿರಾಕರಿಸುವವರೂ ಇದ್ದಾರೆ. ಆದರೆ ಸತ್ಯಸಂಗತಿ ಯಾವುದು? ಈ ಪ್ರಶ್ನೆಯ ಉತ್ತರ ಇನ್ನೊಂದು ಪ್ರಶ್ನೆಯ ಉತ್ತರವನ್ನವಲಂಬಿಸಿದೆ. ಅದೆಂದರೆ ಇತಿಹಾಸವು ಮಹಾಪುರುಷರ ಜೀವನ ವೃತ್ತಾಂತವಾಗಿದೆಯೇ? ಈ ಪ್ರಶ್ನೆ ಪ್ರಸ್ತುತವೂ ಮತ್ತು ಮಹತ್ವದ್ದೂ ಆಗಿದೆ. ಏಕೆಂದರೆ, ಮಹಾಪುರುಷರು ಇತಿಹಾಸ ನಿರ್ಮಾಪಕರಾಗಿರದಿದ್ದರೆ ನಾವು ಸಿನಿಮಾ ನಟರಿಗಿಂತ ಹೆಚ್ಚಾಗಿ ಅವರನ್ನು ಏಕೆ ಗಮನಿಸಬೇಕಾಗಿತ್ತು. ಭಿನ್ನಾಭಿಪ್ರಾಯ ಸಹಜ. ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವನಾಗಿರಲಿ ಅವನು ತನ್ನ ಯುಗದ ಶಿಶು ಎಂದು ಒತ್ತು ಕೊಟ್ಟು ಹೇಳುವವರಿದ್ದಾರೆ. ಅವರ ಪ್ರಕಾರ ಯುಗವು ಅವನಿಗೆ ಕರೆ ನೀಡಿತು. ಯುಗವೇ ಎಲ್ಲವನ್ನೂ ಮಾಡಿತು. ಅವನು ಏನನ್ನೂ ಮಾಡಿಲ್ಲ. ಈ ಅಭಿಪ್ರಾಯವನ್ನು ಹೊಂದಿರುವವರು ಇತಿಹಾಸಕ್ಕೆ ತಪ್ಪು ಅರ್ಥ ಕಲ್ಪಿಸುತ್ತಾರೆಂದೇ ನನ್ನ ಅಭಿಮತ, ಐತಿಹಾಸಿಕ ಬದಲಾವಣೆಗೆ ಮೂರು ವಿಭಿನ್ನ ಕಾರಣಗಳುಂಟು. ಆಗಸ್ಟಿನನು ಪ್ರತಿಪಾದಿಸಿದ ಇತಿಹಾಸದ ಸಿದ್ಧಾಂತ ಒಂದು ಉಂಟು. ಇದರ ಪ್ರಕಾರ ಇತಿಹಾಸವು ದೈವಿಕ ಯೋಜನೆಯ ಅರಳುವಿಕೆಯೇ ಆಗಿದೆ. ಈ ಯೋಜನೆಯ ಅಂಗವಾಗಿ ಮನುಕುಲವು ಯುದ್ಧ ಮತ್ತು ಯಾತನೆಗಳನ್ನು ಈ ದೈವಿಕ ಯೋಜನೆಯ ಅಂತಿಮ ಮಹಾವಿಚಾರಣೆಯ ದಿನದಂದು ಮುಕ್ತಾಯಗೊಳಿಸುವವರೆಗೂ ಅನುಭವಿಸುತ್ತಲೇ ಇರುತ್ತದೆ. ಇದೂ ಅಲ್ಲದೆ ಬಕಲ್‌ ರವರ ಸಿದ್ಧಾಂತದ ಪ್ರಕಾರ ಭೂಗೋಳಶಾಸ್ತ್ರ ಮತ್ತು ಭೌತಶಾಸ್ತ್ರಗಳು ಇತಿಹಾಸವನ್ನು ನಿರ್ಮಿಸಿವೆ. ಕಾರ್ಲ್‌ ಮಾರ್ಕ್ಸ್ ನು ಮೂರನೆಯ ಸಿದ್ದಾಂತವನ್ನು ಪ್ರತಿಪಾದಿಸಿದನು. ಅವನ ಪ್ರಕಾರ ಇತಿಹಾಸವು ಆರ್ಥಿಕ ಶಕ್ತಿಯ ಪರಿಣಾಮವೇ ಆಗಿದೆ. ಇತಿಹಾಸವು ಮಹಾಪುರುಷರ ಜೀವನ ವೃತ್ತಾಂತ ಎಂಬ ಅಭಿಪ್ರಾಯವನ್ನು ಈ ಮೂರು ಸಿದ್ಧಾಂತಗಳಲ್ಲಿ ಯಾವ ಸಿದ್ಧಾಂತವೂ ಒಪ್ಪುವುದಿಲ್ಲ. ನಿಜವಾಗಿಯೂ ಅವು ಇತಿಹಾಸ ನಿರ್ಮಾಣದಲ್ಲಿ ಮಾನವನಿಗೆ ಯಾವ ಸ್ಥಾನವನ್ನೂ ನೀಡಿಲ್ಲ. ಆಗಸ್ಟಿನನ ಸಿದ್ಧಾಂತವನ್ನು ವಿಧಿವಾದಿಗಳ ಹೊರತು ಇತರ ಯಾರೂ ಮಾನ್ಯ ಮಾಡುವುದಿಲ್ಲ. ಬಕಲ್ ಮತ್ತು ಮಾರ್ಕ್ಸ್ ರವರು ಹೇಳಿರುವುದರಲ್ಲಿ ಸ್ವಲ್ಪ ಸತ್ಯಾಂಶವಿದ್ದರೂ ಅವು ಸಂಪೂರ್ಣ ಸತ್ಯಗಳಾಗಿಲ್ಲ. ವ್ಯಕ್ತಿ ಸ್ವರೂಪವಲ್ಲದ ಶಕ್ತಿಗಳೇ ಪ್ರಮುಖ, ಮತ್ತು ಇತಿಹಾಸ ನಿರ್ಮಾಣದಲ್ಲಿ ಮಾನವನು ಒಂದು ಅಂಶವಾಗಿಲ್ಲವೆಂಬ ಅವರ ಅಭಿಪ್ರಾಯ ಸಂಪೂರ್ಣ ತಪ್ಪು. ವ್ಯಕ್ತಿ ಸ್ವರೂಪವಲ್ಲದ ಅಂಶಗಳು ನಿರ್ಣಾಯಕವಾಗಿರುತ್ತವೆ ಎಂಬುದನ್ನು ಸಂಪೂರ್ಣ ಅಲ್ಲಗಳೆಯಲಾಗದು. ಆದರೆ ವ್ಯಕ್ತಿ ಸ್ವರೂಪವಲ್ಲದ ಅಂಶಗಳ ಪ್ರಭಾವ ಮಾನವನನ್ನೇ ಅವಲಂಬಿಸಿದೆ ಎಂಬುದನ್ನು ಒಪ್ಪಲೇಬೇಕು. ಚಕಮಕಿ ಕಲ್ಲು ಎಲ್ಲಾ ಕಡೆ ಅಸ್ತಿತ್ವದಲ್ಲಿರಬಾರದು. ಆದರೆ ಅದು ಎಲ್ಲಿ ಲಭ್ಯವಿದೆಯೋ ಅಲ್ಲಿ ಒಂದು ಕಲ್ಲನ್ನು ಇನ್ನೊಂದರೊಡನೆ ಹೊಡೆದು ಬೆಂಕಿಯನ್ನು ಉತ್ಪಾದಿಸಲು ಮನುಷ್ಯ ಬೇಕಾಗುತ್ತಾನೆ. ಧಾನ್ಯಗಳು ಎಲ್ಲಾ (ಪು. 241)

ಕಡೆ ದೊರೆಯಲಿಕ್ಕಿಲ್ಲ. ಆದರೆ ಅವು ದೊರೆತಲ್ಲಿ ಅವುಗಳನ್ನು ಕುಟ್ಟಿ ಪುಡಿಮಾಡಿ ರುಚಿಕರ ಮತ್ತು ಪುಷ್ಟಿಕರ ಹಿಟ್ಟನ್ನು ತಯಾರಿಸಿ ಒಕ್ಕಲುತನಕ್ಕೆ ಅಸ್ತಿಭಾರ ಹಾಕಲು ಮನುಷ್ಯ ಬೇಕು. ಲೋಹ ದೊರೆಯದ ಅನೇಕ ಪ್ರದೇಶಗಳಿವೆ. ಆದರೆ ಲೋಹಗಳು ದೊರೆಯುವಲ್ಲಿ ನಾಗರಿಕತೆ ಮತ್ತು ಸಂಸ್ಕೃತಿಗಳ ಆಧಾರಗಳಾದ ಸಲಕರಣೆಗಳು ಮತ್ತು ಯಂತ್ರಗಳನ್ನು ನಿರ್ಮಿಸಲು ಮನುಷ್ಯನ ಆವಶ್ಯಕತೆ ಇದೆ.

ಸಾಮಾಜಿಕ ಸನ್ನಿವೇಶಗಳ ನಿದರ್ಶನವನ್ನೇ ತೆಗೆದುಕೊಳ್ಳೋಣ. ವಿವಿಧ ಬಗೆಯ ದುರಂತ ಪರಿಸ್ಥಿತಿಗಳು ಉದ್ಭವಿಸುತ್ತವೆ. ಅಂತಹ ಒಂದು ಪರಿಸ್ಥಿತಿಯನ್ನು ಥಾಯರ (Thayer)ನ್ನು ಬರೆದ ಥಿಯೋಡರ ರೂಸ್‌ವೆಸ್ಟರ ಜೀವನ ಚರಿತ್ರೆಯಲ್ಲಿ ವಿವರಿಸಿದ್ದಾನೆ. ಅವನು ಹೇಳುವಂತೆ:

“ಪ್ರತಿಯೊಂದು ಪಂಥ. ಪಕ್ಷ ಅಥವಾ ಸಂಸ್ಥೆಯಲ್ಲಿ ಅದರ ಬೆಳವಣಿಗೆ ನಿಂತುಹೋದ. ಅದರ ರಕ್ತನಾಳಗಳು ಗಡುಸಾಗುವ, ಅದರ ಕಿರಿಯರು ದೂರದೃಷ್ಟಿಯನ್ನು ಕಳೆದುಕೊಳ್ಳುವ, ವಯೋವೃದ್ಧರು ಯಾವ ಕನಸುಗಳನ್ನು ಕಾಣಲಾರದಂತಹ ಸನ್ನಿವೇಶ ಒದಗಿ ಬರುತ್ತದೆ; ಅದು ತನ್ನ ಗತಕಾಲವನ್ನೇ ಅವಲಂಬಿಸಿ ಜೀವಿಸುತ್ತದೆಯಲ್ಲದೆ ಆ ಗತಕಾಲವನ್ನೇ ಜೀವಂತವಾಗಿಡಲು ಹತಾಶ ಪ್ರಯತ್ನ ಮಾಡುತ್ತದೆ. ರಾಜಕೀಯದಲ್ಲಿ ಇಂತಹ ನಿಶ್ಚೇಷ್ಟಿತ ಪರಿಸ್ಥಿತಿ ಉಂಟಾದಾಗ ಅದನ್ನು ಪ್ರತಿಗಾಮಿತ್ವ ಎಂದು ಕರೆಯುತ್ತೇವೆ. ತಾನು ಜಡ್ಡುರೋಗಕ್ಕೆ ತುತ್ತಾಗಿರುವನೆಂಬುದರ ಪರಿವೆಯೇ ಇಲ್ಲದ, ಅವಶ್ಯಕತೆಯನ್ನು ಕಂಡುಕೊಳ್ಳದ ಶಮನದ ಸ್ಥಿತಿಯೇ ಪ್ರತಿಗಾಮಿತ್ವ. ಬದಲಾದ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಲಾರದ ಪ್ರತಿಗಾಮಿ ಮುದುಕ ಹಳೆಯ ಮುರಿದ ಕುರ್ಚಿಯಲ್ಲಿ ಕುಸಿಯುವಂತೆ ತನ್ನ ಗತಕಾಲವನ್ನೇ ಅವಲಂಬಿಸುತ್ತಾನೆ”

ಇನ್ನೊಂದು ವಿಧದ ಪರಿಸ್ಥಿತಿ ಅವನತಿ ಮಾತ್ರವಲ್ಲ, ವಿನಾಶಕಾರಿಯೂ ಆಗಿದೆ. ಇಂತಹ ಪರಿಸ್ಥಿತಿ ಬಿಕ್ಕಟ್ಟು ಉಂಟಾದಾಗಲೆಲ್ಲ ಉದ್ಭವಿಸುತ್ತದೆ. ಹಳೆಯ ವಿಧಾನಗಳು, ಹಳೆಯ ರೂಢಿಗಳು, ಹಳೆಯ ವಿಚಾರಗಳು ಸಮಾಜವನ್ನು ಮೇಲೆತ್ತಿ ಅದನ್ನು ಮುನ್ನಡೆಸುವಲ್ಲಿ ವಿಫಲವಾಗುತ್ತವೆ. ಹೊಸ ವಿಧಾನಗಳನ್ನು ಕಂಡುಕೊಳ್ಳದ ಹೊರತು ಉಳಿವಿನ ಸಾಧ್ಯತೆ ಇರುವುದಿಲ್ಲ. ಯಾವ ಸಮಾಜವೂ ಸರಳವಾಗಿ ಮುನ್ನಡೆಯಲಾರದು. ಪ್ರತಿಯೊಂದು ಸಮಾಜವೂ ಅವನತಿ ಮತ್ತು ವಿನಾಶದ ಸಾಧ್ಯತೆಯನ್ನು ಎದುರಿಸಲೇಬೇಕಾಗುತ್ತದೆ. ಕೆಲವು ಬದುಕುತ್ತವೆ. ಇನ್ನು ಕೆಲವು ನಾಶವಾಗುತ್ತವೆ. ಮತ್ತು ಇನ್ನು ಕೆಲವು ಅವನತಿ ಮತ್ತು ಜಡತ್ವವನ್ನು ಅನುಭವಿಸ್ತುವೆ. ಹೀಗೇಕೆ? ಕೆಲವು ಸಮಾಜಗಳ ಉಳಿವಿಗೆ ಕಾರಣಗಳೇನು? ಕಾರ್ಲೈಲನು ಇದಕ್ಕೆ ಉತ್ತರ ನೀಡಿದ್ದಾನೆ. ಅವನು ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಈ ರೀತಿ ಹೇಳುತ್ತಾನೆ:

“ಸಾಕಷ್ಟು ಒಳ್ಳೆಯ, ಬುದ್ಧಿವಂತ ಮತ್ತು ಶ್ರೇಷ್ಠ ವ್ಯಕ್ತಿಯನ್ನು ದೊರಕಿಸಿಕೊಂಡಿದ್ದೇ ಆದಲ್ಲಿ ಯಾವ ಕಾಲವೂ ವಿನಾಶವಾಗುತ್ತಿರಲಿಲ್ಲ. ಕಾಲದ ನಿಜವಾದ ಅವಶ್ಯಕತೆ ಏನೆಂಬುದನ್ನು ಅರಿತುಕೊಳ್ಳುವ ಬುದ್ದಿವಂತಿಕೆ, ಇಲ್ಲಿಂದ ಮುಂದೆ ಅದನ್ನೂ ಸರಿಯಾದ ಮಾರ್ಗದಲ್ಲಿ ನಡೆಸಿಕೊಂಡು ಹೋಗುವ ಶೌರ್ಯ, ಇವೇ ಎಲ್ಲಾ ಯುಗಕ್ಕೆ ಪರಿಹಾರಗಳು.”

ಇತಿಹಾಸ ನಿರ್ಮಾಣದಲ್ಲಿ ಮಾನವನ ಪಾತ್ರವನ್ನು ಅಲ್ಲಗಳೆಯುವವರಿಗೆ ಇದು ನಿರ್ಣಾಯಕ ಉತ್ತರ ಎಂದು ನನ್ನ ಭಾವನೆ. ಯಾವುದೇ ಬಿಕ್ಕಟ್ಟನ್ನು ಹೊಸ ವಿಧಾನಗಳ ಆವಿಷ್ಕಾರದ ಮೂಲಕ ಎದುರಿಸಬಹುದು. ಎಲ್ಲಿ ಹೊಸ ವಿಧಾನಗಳಿಲ್ಲವೋ ಅಂತಹ ಸಮಾಜ ವಿನಾಶವಾಗುತ್ತದೆ. ಕಾಲವೇ ಸಾಧ್ಯವಾದ ಹೊಸ ಮಾರ್ಗಗಳನ್ನು ಸೂಚಿಸುತ್ತದೆ. ಆದರೆ ಸರಿಯಾದ ಮಾರ್ಗವನ್ನನುಸರಿಸುವುದು ಕಾಲದ ಕೆಲಸವಲ್ಲ. ಅದು ಮಾನವನ ಕೆಲಸ. ಆದ್ದರಿಂದ ಮನುಷ್ಯ ಒಂದು ಅಂಶವಾಗಿದ್ದಾನೆ ಮಾತ್ರವಲ್ಲ, ವ್ಯಕ್ತಿ ಮೊದಲೋ, ಸಮಾಜ ಮೊದಲೋ ಎಂಬುದನ್ನು ಸನ್ನಿವೇಶವೇ ನಿರ್ಣಯಿಸುತ್ತದೆ. (ಪು. 242)

3

ಮಹಾಪುರುಷ ಅಥವಾ ಶ್ರೇಷ್ಠ ವ್ಯಕ್ತಿ ಎಂದು ಯಾರನ್ನು ಕರೆಯಬಹುದು? ಸಮರ ಶೂರರಾದ ಅಲೆಕ್ಸಾಂಡರ್, ಅಟ್ಟಿಲಾ, ಸೀಜರ್ ಮತ್ತು ತೈಮೂರಲಂಗರ ಬಗ್ಗೆ ಕೇಳಿದರೆ ಈ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟವಾಗಲಿಕ್ಕಿಲ್ಲ. ಸಮರ ಶೂರರು ಯುಗವನ್ನೇ ನಿರ್ಮಿಸುವುದರ ಮೂಲಕ ವ್ಯಾಪಕವಾದ ಪರಿವರ್ತನೆಯನ್ನುಂಟುಮಾಡುತ್ತಾರೆ. ತಮ್ಮ ಜನಜನಿತ ವಿಜಯಗಳಿಂದ ಅವರು ತಮ್ಮ ಸಮಕಾಲೀನರನ್ನು ಎದೆಗುಂದಿಸಿ ದಿಗ್ಭ್ರಮೆಗೊಳಿಸುತ್ತಾರೆ. ಬೇರೆಯವರು ಅವರನ್ನು ಶ್ರೇಷ್ಠ ಎಂದು ಕರೆಯುವ ಮುನ್ನವೇ ಅವರು ಶ್ರೇಷ್ಠ ಅಥವಾ ಮಹಾನ್ ಆಗಿಬಿಡುತ್ತಾರೆ. ಅವರು ಮಾನವರ ಮಧ್ಯದಲ್ಲಿ ಜಿಂಕೆಗಳೊಡನೆ ಸಿಂಹವಿದ್ದಂತೆ. ಆದರೆ ಇತಿಹಾಸದಲ್ಲಿ ಅವರ ಶಾಶ್ವತ ಪ್ರಭಾವ ಅತ್ಯಂತ ವಿರಳವೆಂಬುದು ಅಷ್ಟೇ ಸತ್ಯ. ಅವರ ಗೆಲುವುಗಳು ಕುಗ್ಗುತ್ತವೆ. ನೆಪೋಲಿಯನ್ನನಂತಹ ಮಹಾದಂಡನಾಯಕ ತನ್ನ ಎಲ್ಲಾ ಗೆಲುವುಗಳ ನಂತರ ಫ್ರಾನ್ಸ್, ದೇಶವನ್ನು ತಾನು ಪಡೆದುಕೊಂಡುದಕ್ಕಿಂತಲೂ ಚಿಕ್ಕದನ್ನಾಗಿಯೇ ಬಿಟ್ಟು ಹೋದ. ದೂರದಿಂದ ನೋಡಿದಾಗ ಇವರು ಪ್ರಪಂಚದ ಗತಿಯಲ್ಲಿ ಅವಶ್ಯ ಬಿದ್ದಾಗ ಬಂದು ಹೋಗುವವರಾಗಿದ್ದು, ತಾವು ಜೀವಿಸಿದ ಸಮಾಜದ ಮೇಲೆ ಯಾವುದೇ ಶಾಶ್ವತ ಗುರುತನ್ನು ಬಿಟ್ಟು ಹೋಗಲಾರರು. ಅವರ ಜೀವನದ ವಿವರಗಳು ಮತ್ತು ಅವುಗಳಿಂದ ದೊರೆಯುವ ಕಲಿಕೆ ಕುತೂಹಲಕಾರಿಯಾಗಿರಬಹುದು. ಆದರೆ ಅವು ಇಡೀ ಸಮಾಜದ ಪರಿವರ್ತನೆ ಮತ್ತು ಅದರ ಸುಧಾರಣೆಯ ದಿಶೆಯಲ್ಲಿ ವ್ಯಾಪಕ ಪ್ರಭಾವ ಬೀರಲಾರವು.

ಸೈನ್ಯದ ದಂಡಾಧಿಕಾರಿಯಲ್ಲದವರ ಬಗ್ಗೆ ಈ ಪ್ರಶ್ನೆ ಕೇಳಿದಾಗ ಉತ್ತರ ಕೊಡುವುದು ಕಷ್ಟವೆನಿಸುವುದು. ಏಕೆಂದರೆ ಆಗ ಅದು ಹಲವು ಪರೀಕ್ಷೆಗಳ ಪ್ರಶ್ನೆಯಾಗುವುದು. ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ಪರೀಕ್ಷಾಧಾರಗಳುಂಟು.

ವೀರಯುಗ ಆರಾಧಕನಾದ ಕಾರ್ಲೈಲನು ತನ್ನದೇ ಆದ ಪರೀಕ್ಷಾ ವಿಧಾನವನ್ನು ನಿರೂಪಿಸಿದ್ದಾನೆ:

”ಯಾವುದೇ ವ್ಯಕ್ತಿ, ಅದರಲ್ಲಿಯೂ ವಿಶೇಷವಾಗಿ, ಮಹಾಪುರುಷನೆನಿಸಿಕೊಳ್ಳುವವನು ಸತ್ಯಕ್ಕೆ ಹೊರತಾಗಿರುವೆನೆಂದರೆ ಅದು ನಂಬಲಾಗದ ಸಂಗತಿ ಎಂದು ನಾನು ಕಂಠೋಕ್ತವಾಗಿ ಹೇಳುತ್ತೇನೆ. ಅದೇ ಅವನ ಮೂಲ ಆಧಾರ ಎಂದು ನನಗನಿಸುತ್ತದೆ. ಏನೇ ಮಾಡಲು ಶಕ್ತನಾದ ವ್ಯಕ್ತಿ ಮೊದಲು ಅದರ ಬಗ್ಗೆ ನಿಷ್ಕಪಟಿಯಾಗಿರಬೇಕು. ಅಂಥವನನ್ನೇ ನಾನು ಸತ್ಯವಂತನೆಂದು ಕರೆಯುತ್ತೇನೆ. ಸತ್ಯಸಂಧತೆ ಅಥವಾ ಮನಃಪೂರ್ವಕವಾದ ನಿಷ್ಠೆ ಆಳವಾಗಿ ಮತ್ತು ಅಪ್ಪಟವಾಗಿರುವುದು ಶೂರರಲ್ಲಿರಬೇಕಾದ ಪ್ರಮುಖ ಲಕ್ಷಣ.”

ಕಾರ್ಲೈಲನು ನಿಷ್ಠೆ ಅಥವಾ ಸಾಚಾತನದ ಪರೀಕ್ಷೆಯನ್ನು ನಿರ್ದಿಷ್ಟವಾಗಿ ವಿವರಿಸಲು ಕಾತುರನಾಗಿದ್ದನು. ಮತ್ತು ಈ ವಿಷಯದಲ್ಲಿ ತನ್ನ ಸ್ಪಷ್ಟ ವಿಚಾರವನ್ನು ವಾಚಕರಿಗೆ ತಿಳಿಸಬಯಸಿದನು. ಮನಃಪೂರ್ವಕವಾದ ನಿಷ್ಠೆಯ ಬಗ್ಗೆ ಆತನ ವಿಚಾರ ಹೀಗಿದ್ದಿತು:

“ನಿಷ್ಠೆ ಎಂದು ಕರೆದುಕೊಳ್ಳುವುದು ನಿಷ್ಠೆಯಲ್ಲ, ನಿಜವಾಗಿಯೂ ಅದು ಒಂದು ನಿಕೃಷ್ಟ ವಿಷಯ. ಅದು ಒಂದು ಪೊಳ್ಳು, ಬಡಾಯಿಯ ಬುದ್ದಿಪೂರ್ವಕ ನಿಷ್ಠೆ. ಅದು ಮುಖ್ಯವಾಗಿ ಆತ್ಮವಂಚನೆಯದಾಗಿದೆ. ಮಹಾಪುರುಷನ ಶ್ರದ್ದೆ ತನಗೇ ಅವ್ಯಕ್ತ ಮತ್ತು ಅನಿರ್ವಚನೀಯವಾದದ್ದು. ಅಲ್ಲ, ಅವನಿಗೆ ಕಪಟಾಚರಣೆಯ ಅರಿವಿರುತ್ತದೆಯಲ್ಲದೆ, ನಿಷ್ಠೆಯ ಅರಿವಿರುವುದಿಲ್ಲ. ಏಕೆಂದರೆ, ಸತ್ಯಮಾರ್ಗದ ನಿಯಮಗಳಂತೆ ಮನುಷ್ಯ (ಪು. 243)

ಒಂದು ದಿನವಾದರೂ ನಡೆಯಬಲ್ಲನೇ? ಇಲ್ಲ. ಮಹಾಪುರುಷನಾದವನು ತನ್ನ ನಿಷ್ಠೆಯ ಬಗ್ಗೆ ಜಂಭಕೊಚ್ಚಿಕೊಳ್ಳುವುದಿಲ್ಲ. ಹಾಗೆ ಹೇಳಿಕೊಳ್ಳುವುದಂತೂ ದೂರ ಉಳಿಯಿತು. ಅವನು ತಾನು ಸತ್ಯಸಂಧನಾಗಿದ್ದೇನೆಯೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದಿಲ್ಲ. ಅವನ ಸತ್ಯಸಂಧತೆ ಅಥವಾ ನಿಷ್ಠೆ ಅವನನ್ನೇ ಅವಲಂಬಿಸಿರುವುದಿಲ್ಲ. ಅವನು ಸತ್ಯಸಂಧನಾಗದೇ ಬೇರೆ ಮಾರ್ಗವೇ ಇಲ್ಲ.”

ಎಷ್ಟು ದೊಡ್ಡ ದಂಡನಾಯಕವಾಗಿದ್ದನೋ ಅಷ್ಟೇ ಶ್ರೇಷ್ಠ ಆಡಳಿತಗಾರನಾಗಿದ್ದ ನೆಪೋಲಿಯನ್ನನ ಬಗ್ಗೆ ಪರಿಶೀಲಿಸುವಾಗ, ಮಹಾಪುರುಷರ ಬಗ್ಗೆ ಲಾರ್ಡ್ ರೋಸ್‌ಬೆರಿ ತನ್ನದೇ ಆದ ಪರೀಕ್ಷಾಧಾರವನ್ನು ಸೂಚಿಸಿದ್ದನು. ನೆಪೋಲಿಯನ್ ಮಹಾಪುರುಷನಾಗಿದ್ದನೇ? ಎಂಬ ಪ್ರಶ್ನೆಗೆ ಉತ್ತರಿಸುವಾಗ ರೋಸ್‌ ಬೆರಿ ಈ ರೀತಿ ಹೇಳಿದ್ದಾನೆ:

“ಮಹಾ” (ಶ್ರೇಷ್ಠ) ಎಂದರೆ ಬೌದ್ಧಿಕತೆ ಮತ್ತು ನೈತಿಕ ಗುಣಗಳ ಸಂಗಮವೆಂದಾದರೆ, ಅವನು (ನೆಪೋಲಿಯನನು) ನಿಜವಾಗಿಯೂ ಶ್ರೇಷ್ಠವಾಗಿರಲಿಲ್ಲ. ಆದರೆ ಅವನು ಅಸಾಮಾನ್ಯ ಮತ್ತು ಪರಮೋಚ್ಚನಾಗಿದ್ದನೆಂಬ ಕಾರಣದಿಂದ ಶ್ರೇಷ್ಠನಾಗಿದ್ದನೆಂಬುದರಲ್ಲಿ ಸಂದೇಹವಿಲ್ಲ. ಶ್ರೇಷ್ಠತೆಯು ಸಹಜ ಶಕ್ತಿ, ಪ್ರಬಲತೆ, ಮತ್ತು ಮಾನವೀಯತೆಯನ್ನೇ ದಾಟಿನಿಂತ ಮಾನವೀಯತೆಯ ಪ್ರತೀಕ ಎಂದಾದರೆ ನೆಪೋಲಿಯನ್ನನು ಖಂಡಿತವಾಗಿ ಶ್ರೇಷ್ಠನಾಗಿದ್ದನು. ನಾವು ಯಾವುದನ್ನು ಪ್ರತಿಭೆ ಎಂದು ಕರೆಯುತ್ತೇವೆಯೋ ಅಂತಹ ನಿರೂಪಿಸಲಾಗದಂತಹ ಕಿಡಿಯೂ ಅಲ್ಲದೆ, ಎಂದೂ ಯಾರೂ ಸರಿಸಮಾನಿಸಲಾರದ ಮತ್ತು ಮೀರಿಸಲಾರದಂತಹ ಕಿಡಿಯೂ ಅಲ್ಲದೆ, ಎಂದೂ ಯಾರೂ ಸರಿಸಮಾನಿಸಲಾರದ ಮತ್ತು ಮೀರಿಸಲಾರದಂತಹ ಬುದ್ದಿಮತ್ತೆ ಮತ್ತು ಚೇತನದ ಸಂಗಮದ ಪ್ರತೀಕ ಅವನಾಗಿದ್ದನು.”

ತತ್ವಜ್ಞಾನಿಗಳು ಅಥವಾ ಮಾನವನ ವ್ಯವಹಾರಗಳಲ್ಲಿ ದೈವಿಕ ಮಾರ್ಗದರ್ಶನವಿದೆ ಎಂದು ನಂಬುಗೆಯುಳ್ಳವರ ಪ್ರಕಾರ ಇನ್ನೊಂದು. ಮೂರನೆಯ ಪರೀಕ್ಷಾಧಾರವೂ ಉಂಟು. ಶ್ರೇಷ್ಠ ಪುರುಷ ಯಾರು ಎಂಬ ಬಗ್ಗೆ ಅವರು ವಿಭಿನ್ನವಾದ ಕಲ್ಪನೆಯನ್ನು ಹೊಂದಿದ್ದಾರೆ. ಅವರ ಅಭಿಪ್ರಾಯದ ಸಾರಾಂಶವನ್ನು ರೋಸ್‌ಬೆರಿ ಹೇಳಿದಂತೆ ಸಂಕ್ಷಿಪ್ತವಾಗಿ ಹೇಳುವುದಾದರೆ, ಒಬ್ಬ ಮಹಾಪುರುಷನನ್ನು ಮಹತ್ತರವಾದ ನೈಸರ್ಗಿಕ ಅಥವಾ ಅದ್ಭುತ ಶಕ್ತಿಯಿಂದಾಗಿ ಸಮಾಜದ ಜಾಡ್ಯವನ್ನು ನಿವಾರಿಸಿ ಅದನ್ನು ಸರಿಯಾದ ಮಾರ್ಗದಲ್ಲಿ ನಡೆಸಿಕೊಂಡು ಹೋಗಲು, ಮತ್ತು ಮುಖ್ಯವಾಗಿ ಸಮಾಜದ ಪುನರುತ್ಥಾನವನ್ನುಂಟುಮಾಡಲು ಶಕ್ತನಾದ ದುಷ್ಟರನ್ನು ಶಿಕ್ಷಿಸುವ ದೇವರ ಆಗ್ರಹ ಸ್ವರೂಪದ ವ್ಯಕ್ತಿ ಈ ಲೋಕದಲ್ಲಿ ಜನ್ಮ ತಾಳುತ್ತಾನೆ.

ಈ ಮೂರರಲ್ಲಿ ಯಾವುದು, ನಿಜವಾದ ಪರೀಕ್ಷೆ? ನನ್ನ ನಿರ್ಣಯದಲ್ಲಿ ಇವು ಏಕಪಕ್ಷೀಯವಾಗಿದ್ದು ಯಾವುವೂ ಸಮರ್ಪಕ ವಿವರಣೆಗಳಾಗಿಲ್ಲ. ಮನಃಪೂರ್ವಕವಾದ ಶ್ರದ್ದೆ ಮಹಾಪುರುಷತ್ವದ ಒರೆಗಲ್ಲು. ಕ್ಲಮೆನ್ನೂ (Clemencean) ಒಂದು ಕಡೆ ಹೇಳಿರುವಂತೆ ಬಹುತೇಕ ರಾಜಕೀಯ ಪ್ರಮುಖರು ಪಟಿಂಗರೇ ಆಗಿರುತ್ತಾರೆ. ರಾಜಕೀಯ ಪ್ರಮುಖರು ಅಥವಾ ನಾಯಕರು ಶ್ರೇಷ್ಠಪುರುಷರಾಗಿರಬೇಕಾಗಿಲ್ಲ. ಯಾರನ್ನು ನೋಡಿ ಕ್ಲಮೆನ್ನೂ ತನ್ನ ಅಭಿಪ್ರಾಯವನ್ನು ರೂಪಿಸಿಕೊಂಡನೋ ಅಂತಹವರಲ್ಲಿ ನಿಷ್ಠೆಯ ಅಭಾವವಿದ್ದಿರಬಹುದು. ಆದಾಗ್ಯೂ ನಿಷ್ಠೆಯೇ ಪ್ರಾಥಮಿಕ ಅಥವಾ ಏಕೈಕ ಒರೆಯಾಗಿದೆ ಎಂಬುದನ್ನೂ ಯಾರೂ ಒಪ್ಪುವುದಿಲ್ಲ. ನಿಷ್ಠೆ ಒಂದೇ ಸಾಲದು. ಮಹಾಪುರುಷನಲ್ಲಿ ನಿಷ್ಠೆ ಇರಲೇಬೇಕು. ಏಕೆಂದರೆ ಅದು ಎಲ್ಲಾ ನೈತಿಕ ಗುಣಗಳ ಸಮಷ್ಟಿ ಅದಿರದ ಹೊರತು ಯಾರನ್ನೂ ಮಹಾಪುರುಷನೆಂದು ಕರೆಯಲಾಗದು. ಆದರೆ ಒಬ್ಬ ವ್ಯಕ್ತಿ ಮಹಾಪುರುಷನಾಗಬೇಕಾದರೆ ನಿಷ್ಠೆಗಿಂತಲೂ ಹೆಚ್ಚಿನ ಅಂಶ ಅವನಲ್ಲಿರಬೇಕಾಗುತ್ತದೆ. ಒಬ್ಬ ಮನುಷ್ಯ ನಿಷ್ಠೆಯನ್ನು ಹೊಂದಿದ್ದರೂ ಅವನು ಮೂರ್ಖನಾಗಿರಬಹುದು. ಮೂರ್ಖನು ಮಹಾಮಾನವನ (ಪು. 244)

ವಿರೋಧಾಭಾಸವಾಗಿರುತ್ತಾನೆ. ಯಾವ ವ್ಯಕ್ತಿ ಸಮಾಜಕ್ಕೆ ಗಂಡಾಂತರ ಒದಗಿದಾಗ ಅದರ ಉಳಿವಿಗಾಗಿ ನಿವಾರಣೋಪಾಯವನ್ನು ನೀಡಬಲ್ಲನೋ ಅವನೇ ಮಹಾಪುರುಷ. ಆದರೆ ಅಂತಹ ಮಾರ್ಗವನ್ನು ಕಂಡುಹಿಡಿಯುವಲ್ಲಿ ಅವನಿಗೆ ಸಹಾಯ ಮಾಡುವುದು ಯಾವುದು? ಅವನು ತನ್ನ ಬುದ್ಧಿಮತ್ತೆಯಿಂದ ಮಾತ್ರ ನಿವಾರಣೋಪಾಯವನ್ನು ಕಂಡುಕೊಳ್ಳಬಲ್ಲ. ಇನ್ನೆಲ್ಲವೂ ನಿರರ್ಥಕ, ಆದ್ದರಿಂದ ನಿಷ್ಠೆ ಮತ್ತು ಬುದ್ದಿಮತ್ತೆಯ ಸಂಗಮವಾಗದ ಹೊರತು ಯಾವ ವ್ಯಕ್ತಿಯೂ ಮಹಾಪುರುಷನಾಗಲಾರ. ಮಹಾಪುರುಷನನ್ನು ಗುರುತಿಸಲು ಇಷ್ಟೇ ಸಾಕೇ? ಈ ಹಂತದಲ್ಲಿ ಪ್ರಖ್ಯಾತ ಪುರುಷ ಮತ್ತು ಮಹಾಪುರುಷರ ನಡುವೆ ಇರುವ ವ್ಯತ್ಯಾಸವನ್ನು ಪರಿಶೀಲಿಸಬೇಕೆಂದು ನನಗನಿಸುತ್ತದೆ. ಏಕೆಂದರೆ ಮಹಾಪುರುಷನು ಪ್ರಖ್ಯಾತಪುರುಷನಿಗಿಂತ ಅತ್ಯಂತ ಭಿನ್ನವಾಗಿರುವನೆಂದು ನನ್ನ ದೃಢ ನಂಬುಗೆ. ಬೇರೆಯವರೊಡನೆ ಹೋಲಿಸಿದಾಗ ನಿಷ್ಠೆ ಮತ್ತು ಬುದ್ಧಿಮತ್ತೆ ಇವೆರಡು ಪ್ರಖ್ಯಾತ ಪುರುಷನನ್ನು ಗುರುತಿಸಲು ಸಾಕು. ಆದರೆ ಅವನನ್ನು ಮಹಾಪುರುಷನ ಘನತೆಯ ಸ್ಥಾನಕ್ಕೆ ಏರಿಸಲು ಈ ಎರಡು ಗುಣಗಳೇ ಸಾಲವು. ಒಬ್ಬ ಮಹಾಪುರುಷನಲ್ಲಿ ಪ್ರಖ್ಯಾತ ಪುರುಷನಲ್ಲಿರುವ ಗುಣಗಳಿಗಿಂತಲೂ ಇನ್ನೂ ಹೆಚ್ಚಿನ ಅಂಶ ಬೇಕಾಗುತ್ತದೆ. ಅದು ಯಾವುದು? ಈ ಹಂತದಲ್ಲಿ ತತ್ವಜ್ಞಾನಿಯು ಮಹಾಪುರುಷನ ಬಗ್ಗೆ ನೀಡಿದ ವ್ಯಾಖ್ಯೆ ಮಹತ್ವವೆನಿಸುವುದು. ಮಹಾಪುರುಷನೆನಿಸಿಕೊಳ್ಳುವವನು ಸಾಮಾಜಿಕ ಉದ್ದೇಶದಿಂದ ಪ್ರೇರಿತನಾಗಿದ್ದು ಸಮಾಜದ ರಕ್ಷಕ ಮತ್ತು ಉದ್ಧಾರಕನಾಗಿ ಅದರಲ್ಲಿನ ಕೊಳೆಯನ್ನು ತೊಳೆಯುವವನಾಗಿರಬೇಕು. ಈ ಎಲ್ಲಾ ಅಂಶಗಳಿಂದಲೇ ಮಹಾಪುರುಷ ಮತ್ತು ಪ್ರಖ್ಯಾತ ಪುರುಷನ ನಡುವೆ ಇರುವ ವ್ಯತ್ಯಾಸವನ್ನು ಕಂಡುಕೊಳ್ಳಬಹುದು. ಅಂತಹ ವ್ಯಕ್ತಿಯೇ ಮಹಾಪುರುಷನ ಬಿರುದಿಗೆ ಪಾತ್ರನಾಗಿ ಎಲ್ಲರ ಗೌರವ ಮತ್ತು ಭಕ್ತಿಗೆ ಅರ್ಹನಾಗುತ್ತಾನೆ.

4

ರಾನಡೆಯವರು ಒಬ್ಬ ಮಹಾಪುರುಷರಾಗಿದ್ದರೇ? ಅವರು ದೇಹಗಾತ್ರದಲ್ಲೇನೋ ದೊಡ್ಡವರಾಗಿದ್ದರು. ಅವರ ವಿಶಾಲಕಾಯದಿಂದ ಅವರನ್ನು ಒಬ್ಬ ಐರಿಷ್ ಸೇವಕ ತನ್ನ ಸ್ವಾಮಿಯಾದ ಕಾರ್ಡಿನಲ್ ವೈಸ್‌ಮನನನ್ನು ‘ಪ್ರಖ್ಯಾತರಾದ ತಾವು’ ಎಂದು ಉಚ್ಚಾರ ಮಾಡಲು ಬಾರದೆ ‘ಅಪರಿಮಿತರಾದ ತಾವು’ ಎಂದು ಹೇಳಿದ ರೀತಿಯಲ್ಲಿ ರಾನಡೆಯವರು ಅಪರಿಮಿತರಾದ ವ್ಯಕ್ತಿಯಾಗಿದ್ದರು. ಅವರು ಉಜ್ವಲ ಮನೋಧರ್ಮದವರೂ, ಸ್ನೇಹಪರರೂ ಮತ್ತು ಬಹುಮುಖ ಸಾಮರ್ಥ್ಯವುಳ್ಳವರೂ ಆಗಿದ್ದರು. ಎಲ್ಲಾ ನೈತಿಕ ಗುಣಗಳ ಸಮ್ಮಿಳತವೇ ಆಗಿದ್ದಂತಹ ನಿಷ್ಠೆಯನ್ನು ಅವರು ಹೊಂದಿದ್ದರು. ಆ ನಿಷ್ಠೆ ಕಾರ್ಲೈಲನು ನಿಗದಿಪಡಿಸಿದಂತಹುದಾಗಿತ್ತು. ಅದು ಪೊಳ್ಳು ನಿಷ್ಠೆಯಾಗಿರಲಿಲ್ಲ. ಅದು ಸ್ವಾಭಾವಿಕವಾದ ನಿಷ್ಠೆಯಾಗಿದ್ದು, ಸ್ವಭಾವಜನ್ಯವಾಗಿತ್ತು. ಡಾಂಭಿಕವಾಗಿರಲಿಲ್ಲ. ಅವರು ದೊಡ್ಡ ದೇಹದವರೂ ಮತ್ತು ನಿಷ್ಠೆಯಲ್ಲಿಯೂ ದೊಡ್ಡವರಾಗಿದ್ದರಲ್ಲದೆ ಬುದ್ಧಿಮತ್ತೆಯಲ್ಲಿಯೂ ದೊಡ್ಡವರಾಗಿದ್ದರು. ರಾನಡೆಯವರು ಉನ್ನತಮಟ್ಟದ ಸಾಮರ್ಥ್ಯವನ್ನು ಹೊಂದಿದ್ದರೆಂಬುದನ್ನು ಯಾರೂ ಪ್ರಶ್ನಿಸಲಾರರು. ಅವರು ಉಚ್ಚನ್ಯಾಯಾಲಯದ ನ್ಯಾಯವಾದಿ ಮತ್ತು ನ್ಯಾಯಮೂರ್ತಿ ಮಾತ್ರವಾಗಿರಲಿಲ್ಲ. ಅವರು ಒಬ್ಬ ಪ್ರಥಮ ದರ್ಜೆಯ ಅರ್ಥಶಾಸ್ತ್ರಜ್ಞರೂ ಇತಿಹಾಸಕಾರರೂ ಶಿಕ್ಷಣವೇತ್ತರೂ ಮತ್ತು ದಿವ್ಯಜ್ಞಾನಿಗಳೂ ಆಗಿದ್ದರು. ಅವರು ರಾಜಕಾರಣಿಯಾಗಿರಲಿಲ್ಲ. ಅಬ್ರಹಾಂ ಲಿಂಕನ್ ಒಮ್ಮೆ ಹೇಳಿದಂತೆ: “ರಾಜಕಾರಣಿಗಳು ಜನತೆಯ ಹಿತಕ್ಕಿಂತ ಭಿನ್ನವಾದ ತಮ್ಮದೇ ಆದ ವಿಶಿಷ್ಟ ಹಿತವನ್ನು ಹೊಂದಿದವರಾಗಿರುತ್ತಾರೆ. ಒಟ್ಟಾರೆ ಹೇಳುವುದಾದರೆ ಅವರೆಲ್ಲರೂ ಸತ್ಯವಂತರ ಪಥದಿಂದ ಒಂದು (ಪು. 245)

ಹೆಜ್ಜೆ ದೂರವಿರುವವರೇ ಆಗಿರುತ್ತಾರೆ” ರಾನಡೆಯವರು ರಾಜಕಾರಣಿಯಾಗಿರದಿದ್ದರೂ, ರಾಜಕೀಯದಲ್ಲಿ ಅಗಾಧ ಆಸಕ್ತಿಯುಳ್ಳವರಾಗಿದ್ದರು. ಭಾರತದ ಇತಿಹಾಸದಲ್ಲಿ ರಾನಡೆಯವರಷ್ಟು ಅಗಾಧವಾದ ಪಾಂಡಿತ್ಯ ತೀಕ್ಷ್ಣಬುದ್ಧಿ ಮತ್ತು ದೂರದೃಷ್ಟಿಯುಳ್ಳ ಇನ್ನೊಬ್ಬ ವ್ಯಕ್ತಿಯನ್ನು ಕಾಣುವುದು ಅಸಾಧ್ಯ. ಅವರು ಅಧ್ಯಯನ ಮಾಡದ ಮತ್ತು ಅಗಾಧ ಪಾಂಡಿತ್ಯ ಪಡೆಯದ ವಿಷಯವೇ ಇರಲಿಲ್ಲ. ಅವರ ಅಧ್ಯಯನ ಅದ್ಭುತವಾಗಿತ್ತು. ಅವರು ಪರಿಪೂರ್ಣ ಪಂಡಿತರಾಗಿದ್ದರು. ಅವರು ತಮ್ಮ ಕಾಲದಲ್ಲಿ ಮಾತ್ರ ಶ್ರೇಷ್ಠರಾಗಿರಲಿಲ್ಲ. ಯಾವುದೇ ಮಾನದಂಡದಿಂದ ಪರೀಕ್ಷಿಸಿದರೂ ಅವರು ಸದಾ ಶ್ರೇಷ್ಠರಾಗಿದ್ದರು. ನಾನು ಈಗಾಗಲೇ ಹೇಳಿರುವಂತೆ ಶ್ರೇಷ್ಠತೆಯ ಪಟ್ಟಕ್ಕೆ ಕೇವಲ ನಿಷ್ಠೆ ಮತ್ತು ಬುದ್ಧಿಮತ್ತೆ ಒಟ್ಟಾರೆಯಾಗಿಯಾಗಲೀ ಅಥವಾ ಪ್ರತ್ಯೇಕವಾಗಿಯಾಗಲೀ ಸಮರ್ಪಕ ಆಧಾರಗಳಾಗಲಾರವು. ಈ ಎರಡು ಗುಣಗಳನ್ನಷ್ಟೇ ಹೊಂದಿದ್ದರೆ ರಾನಡೆಯವರನ್ನು ಮಹಾಪುರುಷರೆಂದು ಕರೆಯಲಾಗುತ್ತಿರಲಿಲ್ಲ. ತಾವು ಮಹಾಪುರುಷರೆಂದು ಕರೆಯಿಸಿಕೊಳ್ಳುವ ಹಕ್ಕು ರಾನಡೆಯವರು ಹೊಂದಿದ್ದ ಸಾಮಾಜಿಕ ಉದ್ದೇಶಗಳು ಮತ್ತು ಅವರು ಅವುಗಳನ್ನು ಸಾಧಿಸಿದ ರೀತಿಯನ್ನೇ ಅವಲಂಬಿಸಿದೆ. ಈ ಬಗ್ಗೆ ಸಂದೇಹವೇ ಇರಲಾರದು. ಇತಿಹಾಸಕಾರರು, ಅರ್ಥಶಾಸ್ತ್ರಜ್ಞರು ಅಥವಾ ಶಿಕ್ಷಣವೇತ್ತರು ಎನ್ನುವುದಕ್ಕಿಂತ ಹೆಚ್ಚಾಗಿ ರಾನಡೆಯವರು ಸಮಾಜ ಸುಧಾರಕರೆಂದೇ ಪ್ರಸಿದ್ಧರಾಗಿದ್ದಾರೆ. ಅವರ ಇಡೀ ಜೀವನ ಸಮಾಜಸುಧಾರಣೆಗಾಗಿ ನಡೆಸಿದ ಅವಿರತ ಹೋರಾಟವಾಗಿದೆ. ಅವರು ಸಮಾಜಸುಧಾರಕರಾಗಿದ್ದರಿಂದಲೇ ಅವರನ್ನು ಮಹಾಪುರುಷರೆಂದು ಮಾನ್ಯ ಮಾಡಲಾಗಿದೆ. ಒಬ್ಬ ಸುಧಾರಕನಲ್ಲಿರಬೇಕಾದ ದೂರದೃಷ್ಟಿ ಮತ್ತು ಧೈರ್ಯ ಈ ಎರಡೂ ಅಂಶಗಳು ರಾನಡೆಯವರಲ್ಲಿದ್ದವು. ಅವರು ಜನಿಸಿದ ವಾತಾವರಣದಲ್ಲಿ ಅವರ ಧೈರ್ಯಕ್ಕೆ ಹೋಲಿಸಿದಾಗ ಅವರ ದೂರದೃಷ್ಟಿ ಕಡಿಮೆಯ ಗುಣವಾಗಿರಲಿಲ್ಲ. ಅವರು ಒಬ್ಬ ಪ್ರವಾದಿಯ ದೂರದೃಷ್ಟಿಯನ್ನು ಬೆಳೆಸಿಕೊಂಡಿದ್ದರು. ಈ ಪದವನ್ನು ಯಹೂದಿಯ ಅರ್ಥದಲ್ಲಿ ಬಳಸಿದ್ದೇನೆ-ಎಂಬುದು ಅವರು ಹುಟ್ಟಿದ ಕಾಲವನ್ನು ಗಣನೆಗೆ ತೆಗೆದುಕೊಂಡಾಗ ಆಶ್ಚರ್ಯಕರವೇ ಸರಿ. ರಾನಡೆಯವರು ೧೮೪೨ರಲ್ಲಿ ಎಂದರೆ ಮರಾಠ ಚಕ್ರಾಧಿಪತ್ಯದ ಪತನಕ್ಕೆ ಕಾರಣವಾದ ಕರ್ಕಿಯ ಯುದ್ಧದ ೨೪ ವರುಷಗಳ ನಂತರ ಜನಿಸಿದರು. ಮರಾಠ ಚಕ್ರಾಧಿಪತ್ಯದ ಪತನದ ಬಗ್ಗೆ ಬೇರೆ ಬೇರೆ ಜನರಲ್ಲಿ ಬೇರೆ ಬೇರೆ ಪ್ರತಿಕ್ರಿಯೆ ವ್ಯಕ್ತವಾದವು. ನಾತುರಂತಹ ವ್ಯಕ್ತಿಗಳು ಘಟನೆಗಿಂತ ಮುಂಚೆಯೇ ಮತ್ತು ಇನ್ನು ಕೆಲವರು ಘಟನೆಯ ನಂತರ ಇದರಲ್ಲಿ ಶಾಮೀಲಾದರು. ಇವರೆಲ್ಲರೂ ಬ್ರಾಹ್ಮಣ ಪೇಶ್ವೆಯವರ ಕರಾಳ ಆಡಳಿತ ಕೊನೆಗೊಂಡಿತೆಂದು ಸಂತಸಪಟ್ಟರು. ಆದರೆ ಈ ಘಟನೆಯಿಂದ ಮಹಾರಾಷ್ಟ್ರದ ಅಸಂಖ್ಯಾತ ಜನರು ಸ್ತಂಭೀಭೂತರಾದುದು ನಿಸ್ಸಂದೇಹ ಸಂಗತಿ. ಇಡೀ ಭಾರತ ದೇಶ ಮುನ್ನುಗ್ಗಿ ಬರುತ್ತಿದ್ದ ವಿದೇಶಿ ದಳಗಳ ಅಧೀನಕ್ಕೊಳಗಾಗುತ್ತಿದ್ದ ಸಮಯದಲ್ಲಿ ಮಹಾರಾಷ್ಟ್ರದ ಒಂದು ಮೂಲೆಯಲ್ಲಿ ವಾಸಿಸುತ್ತಿದ್ದ ಹಾಗೂ ಸ್ವಾತಂತ್ರ್ಯದ ಅರ್ಥವನ್ನು ತಿಳಿದುಕೊಂಡಿದ್ದ ಕಟ್ಟುಮಸ್ತಾದ ಜನಾಂಗ ಭೂಭಾಗದ ಅಂಗುಲ ಅಂಗುಲಕ್ಕೂ ಹೋರಾಡಿ ಮೈಲು ಮೈಲುಗಟ್ಟಲೇ ಪ್ರದೇಶದ ಆಧಿಪತ್ಯ ಸ್ಥಾಪಿಸಿದ್ದಿತು. ಬ್ರಿಟಿಷರ ಗೆಲವಿನಿಂದಾಗಿ ಈ ಜನಾಂಗವು ತನ್ನ ಅತ್ಯಂತ ಅಮೂಲ್ಯ ವಸ್ತುವನ್ನು ಕಳೆದುಕೊಂಡಿತ್ತು. ಆಗ ಮಹಾರಾಷ್ಟ್ರದ ಉತ್ಕೃಷ್ಟ ಬುದ್ಧಿಮತ್ತೆ ಯಾವ ರೀತಿಯಲ್ಲಿ ದಿಗ್ಧಮೆಗೊಂಡಿತ್ತು ಮತ್ತು ತನ್ನ ಕ್ಷಿತಿಜದಲ್ಲಿ ಸಂಪೂರ್ಣ ಕತ್ತಲೆ ಆವರಿಸಿದ್ದನ್ನು ಕಂಡಿತ್ತು ಎಂಬುದನ್ನು ಯಾರಾದರೂ ಊಹಿಸಬಹುದು. ಇಂತಹ ಬೃಹತ್ ಪ್ರಮಾಣದ ವಿನಾಶಕ್ಕೆ ಸ್ವಾಭಾವಿಕ ಪ್ರತಿಕ್ರಿಯೆ ಏನಾಗಿರಬಹುದು? ಆತ್ಮಾರ್ಪಣೆ, ಸೋಲು ಮತ್ತು ಅನಿವಾರ್ಯಕ್ಕೆ ಶರಣಾಗದೇ ಮತ್ತೇನು ಸಾಧ್ಯ? ಈ ಸನ್ನಿವೇಶಕ್ಕೆ ರಾನಡೆಯವರು ಹೇಗೆ ಸ್ಪಂದಿಸಿದರು? ಅವರ ಸ್ಪಂದನ ಭಿನ್ನವಾಗಿಯೇ ಇತ್ತು. ಬಿದ್ದವನು ಏಳಲೇಬೇಕು ಎಂಬ ಆಶಾಭಾವನೆಯನ್ನು ಅವರು (ಪು. 246)

ಹೊಂದಿದ್ದರು. ಈ ಆಶಾಭಾವನೆಯ ಆಧಾರವಾಗಿ ಅವರು ಒಂದು ಹೊಸ ವಿಶ್ವಾಸವನ್ನು ಬೆಳೆಸಿಕೊಂಡರು.

ಅವರ ಮಾತಿನಲ್ಲಿಯೇ ಇದನ್ನು ಕೇಳುವ:

“ನನ್ನ ನಂಬಿಕೆಯ ಎರಡು ಅಂಶಗಳಲ್ಲಿ ನನಗೆ ಅಚಲ ವಿಶ್ವಾಸವಿದೆ. ನಮ್ಮ ಈ ದೇಶ ಉಜ್ವಲ ಭವಿಷ್ಯವುಳ್ಳ ನಾಡು. ಈ ನಮ್ಮ ಜನಾಂಗ ಆಯ್ದ ಉತ್ಕೃಷ್ಟ ಜನಾಂಗ”

ಅವರು ಭರವಸೆ ಮತ್ತು ಆತ್ಮವಿಶ್ವಾಸಗಳ ಹೊಸ ವೈವಿಧ್ಯಮಯ ಸುವಾರ್ತೆಯನ್ನು ನಿರೂಪಿಸುವುದರಿಂದಲೇ ಸಂತೃಪ್ತರಾಗಲಿಲ್ಲ. ಈ ಆಶೆಯನ್ನು ಈಡೇರಿಸಿಕೊಳ್ಳುವ ಬಗೆಯ ಪ್ರಶ್ನೆಗೆ ಉತ್ತರ ಹುಡುಕುವುದರಲ್ಲಿ ನಿರತರಾದರು. ಈ ಅಧಃಪತನದ ಕಾರಣಗಳ ನಿರ್ವಿಕಲ್ಪ ವಿಶ್ಲೇಷಣೆ ಈ ದಿಶೆಯಲ್ಲಿ ಮೊದಲನೆಯ ಅವಶ್ಯಕತೆಯಾಗಿತ್ತು. ಈ ಅಧಃಪತನವು ಹಿಂದೂ ಸಾಮಾಜಿಕ ವ್ಯವಸ್ಥೆಯಲ್ಲಿರುವ ಕೆಲವು ದೌರ್ಬಲ್ಯಗಳಿಂದುಂಟಾಗಿದ್ದು ಈ ದೌರ್ಬಲ್ಯಗಳನ್ನು ನಿವಾರಿಸುವವರೆಗೂ ನಮ್ಮ ಆಶೆಗಳು ಈಡೇರಲಾರವು. ಆದ್ದರಿಂದ ದಿವ್ಯ ಸಂದೇಶವು ಕರ್ತವ್ಯದ ಕರೆ ನೀಡುತ್ತದೆ. ಹಿಂದೂ ಸಮಾಜದ ಸುಧಾರಣೆಯೇ ಈ ಕರ್ತವ್ಯದ ಕರೆಯಾಗಿದೆ. ಹೀಗಾಗಿ ಸಮಾಜ ಸುಧಾರಣೆ ರಾನಡೆಯವರ ಜೀವನದ ಪ್ರಧಾನ ಉದ್ದೇಶವಾಯಿತು. ಅವರು ಸಮಾಜ ಸುಧಾರಣೆಯ ಬಗ್ಗೆ ಬಲವಾದ ಒತ್ತಾಸೆಯನ್ನು ಬೆಳೆಸಿಕೊಂಡರಲ್ಲದೆ ಸಮಾಜ ಸುಧಾರಣೆಗಾಗಿ ಅವರು ಮಾಡದ ಯಾವ ಕೆಲಸವೂ ಇರಲಿಲ್ಲ. ಸಭೆಗಳನ್ನು ನಡೆಸುವುದು. ನಿಯೋಗಗಳನ್ನು ಒಯ್ಯುವುದು. ಭಾಷಣಗಳನ್ನು ಮಾಡುವುದು, ಬೋಧನೆ, ಲೇಖನಗಳು, ಸಂದರ್ಶನಗಳು, ಪತ್ರಗಳನ್ನು ಬರೆಯುವುದು ಇವೆಲ್ಲವೂ ಅವರ ಸಾಧನಗಳಾಗಿದ್ದು ಇವೆಲ್ಲವನ್ನೂ ಅವಿರತ ಉತ್ಸಾಹದಿಂದ ನಿರ್ವಹಿಸುತ್ತಿದ್ದರು. ಅವರು ಅನೇಕ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿದರು. ಅನೇಕ ಪತ್ರಿಕೆಗಳನ್ನು ಆರಂಭಿಸಿದರು. ಇಷ್ಟರಿಂದಲೇ ಅವರಿಗೆ ತೃಪ್ತಿಯಾಗಲಿಲ್ಲ. ಸಮಾಜ ಸುಧಾರಣೆಯನ್ನು ಸಾಧಿಸಲು ಇದಕ್ಕಿಂತಲೂ ಹೆಚ್ಚು ಶಾಶ್ವತವಾದ, ವ್ಯವಸ್ಥಿತವಾದ ಏರ್ಪಾಡನ್ನು ಅವರು ಬಯಸಿದ್ದರು. ಆದ್ದರಿಂದ ಅವರು ಅಖಿಲ ಭಾರತ ಸಂಸ್ಥೆಯಾದ ‘ಸಾಮಾಜಿಕ ಸಮಾವೇಶ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಇದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC)ನ ಅಂಗಸಂಸ್ಥೆಯಾಗಿ ಕೆಲಸ ಮಾಡುತ್ತಿತ್ತು. ಪ್ರತಿ ವರ್ಷ ಸೇರುತ್ತಿದ್ದ ಈ ಸಮಾವೇಶದಲ್ಲಿ ಸಾಮಾಜಿಕ ಜಾಡ್ಯಗಳ ಬಗ್ಗೆ ಚರ್ಚಿಸಿ ಅವುಗಳ ನಿವಾರಣೋಪಾಯಗಳನ್ನು ಸೂಚಿಸುತ್ತಿತ್ತು. ಪ್ರತಿವರ್ಷ ರಾನಡೆಯವರು ಇದರ ಸಮ್ಮೇಳನಗಳಲ್ಲಿ ತಪ್ಪದೇ ಭಾಗವಹಿಸುತ್ತಿದ್ದರು. ಅವರಿಗೆ ಇದು ಸಮಾಜ ಸುಧಾರಣೆಗಾಗಿ ಮಾಡಲೇಬೇಕಾಗಿದ್ದ ಒಂದು ತೀರ್ಥಯಾತ್ರೆಯೂ ಆಗಿತ್ತು.

ಸಮಾಜ ಸುಧಾರಣೆ ಮಾಡುವಲ್ಲಿ ರಾನಡೆಯವರು ಅಮೋಘವಾದ ಧೈರ್ಯವನ್ನು ಪ್ರದರ್ಶಿಸಿದರು. ಈ ತಲೆಮಾರಿನ ಅನೇಕರು ಇದನ್ನು ಕೇಳಿ ನಗಬಹುದು. ಜೇಲಿಗೆ ಹೋಗುವುದು ಇಂದು ಭಾರತದಲ್ಲಿ ಹುತಾತ್ಮತೆಯ ದ್ಯೋತಕವಾಗಿದೆ. ಇದನ್ನು ದೇಶ ಪ್ರೇಮದ ಮತ್ತು ಧೈರ್ಯದ ಕೃತ್ಯವೆಂದು ಪರಿಗಣಿಸಲಾಗಿದೆ. ಅನ್ಯಥಾ ಯಾರ ಗಮನಕ್ಕೂ ಬರದಂತಹ ಜನ, ಯಾರು ಕೊನೆಯ ಮಾರ್ಗವಾಗಿ ಉಪಾಯವಿಲ್ಲದೇ ರಾಜಕೀಯಕ್ಕೆ ಇಳಿದು ಪಟಿಂಗರೆನಿಸಿಕೊಂಡಿದ್ದಾರೋ ಅವರು ಜೇಲಿಗೆ ಹೋಗಿ ಹುತಾತ್ಮರಾಗಿ ಹೆಸರು ಮತ್ತು ಪ್ರಸಿದ್ದಿಯನ್ನು ಗಳಿಸಿಕೊಂಡಿದ್ದಾರೆ. ಇದು ಆಘಾತಕರ. ಆದರೆ ಟಿಳಕ್ ಅವರು ಮತ್ತು ಅವರ ತಲೆಮಾರಿನ ಜನರು ಜೇಲಿನಲ್ಲಿ ಅನುಭವಿಸಿದ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿದ್ದರೆ ಹೀಗೆ ಹೇಳುವುದರಲ್ಲಿ ಸತ್ಯಾಂಶವಿದೆ. ಇಂದಿನ ಜೇಲು ಜೀವನದಲ್ಲಿ ಯಾವ ಭಯೋತ್ಪಾದಕತೆಯೂ ಉಳಿದಿಲ್ಲ. ಅದು ಕೇವಲ ಸ್ಥಾನಬದ್ಧತೆಯ ಕ್ರಮವಾಗಿದೆ. ರಾಜಕೀಯ ಬಂದಿಗಳನ್ನು ಅಪರಾಧಿ ಎಂದು ಪರಿಗಣಿಸುವ ಪ್ರಶ್ನೆಯೇ ಉಳಿದಿಲ್ಲ. ಅವರನ್ನು ಪ್ರತ್ಯೇಕ ವರ್ಗದಲ್ಲಿಡಲಾಗುವುದು. ಅವರು ಕಷ್ಟಗಳನ್ನು ಅನುಭವಿಸಬೇಕಾಗಿಲ್ಲ. (ಪು. 247)

ಹೆಸರು ಕೆಡಿಸಿಕೊಳ್ಳುವ ಪ್ರಮೇಯವೂ ಇಲ್ಲ ಮತ್ತು ಅಗಲಿಕೆಯ ಪ್ರಶ್ನೆಯೂ ಇಲ್ಲ. ಆದ್ದರಿಂದ ಇದರಲ್ಲಿ ಧೈರ್ಯ ಅಥವಾ ಎದೆಗಾರಿಕೆಯ ಯಾವ ಸಂಗತಿಯೂ ಇಲ್ಲ. ಆದರೂ ಟಿಳಕರ ಕಾಲದಲ್ಲಿದ್ದ ಹಾಗೆ ಜೇಲು ಜೀವನವು ಕಠಿಣ ತರವಾಗಿದ್ದರೂ ರಾಜಕೀಯ ಕೈದಿಗಳು ಸಮಾಜ ಸುಧಾರಕರಿಗಿಂತಲೂ ತಾವು ಹೆಚ್ಚು ಧೈರ್ಯಶಾಲಿಗಳು ಎಂದು ವಾದಿಸುವ ಗೋಜಿಗೆ ಅವರು ಹೋಗುತ್ತಿರಲಿಲ್ಲ. ಸರಕಾರಕ್ಕಿಂತಲೂ ಹೆಚ್ಚಾಗಿ ಸಮಾಜವು ಒಬ್ಬ ವ್ಯಕ್ತಿಯ ಮೇಲೆ ಹೆಚ್ಚಿನ ಪ್ರಮಾಣದ ದಬ್ಬಾಳಿಕೆ ಮತ್ತು ಹಿಂಸೆಯನ್ನು ಮಾಡಬಲ್ಲದೆಂಬ ಅಂಶವನ್ನು ಅನೇಕರು ತಿಳಿದುಕೊಳ್ಳುವುದಿಲ್ಲ. ಸಮಾಜವು ಉಪಯೋಗಿಸುವ ದಬ್ಬಾಳಿಕೆಯ ಸಾಧನಗಳು ಮತ್ತು ಅವುಗಳ ವ್ಯಾಪ್ತಿ ಸರಕಾರಕ್ಕೆ ಲಭ್ಯವಿರುವ ಸಾಧನಗಳಿಗಿಂತಲೂ ಹೆಚ್ಚು ವ್ಯಾಪಕವಾದವುಗಳಾಗಿವೆ. ತನ್ನ ವ್ಯಾಪ್ತಿಯಲ್ಲಿ ಪ್ರಮಾಣದಲ್ಲಿ ಮತ್ತು ಕಾಠಿಣ್ಯದಲ್ಲಿ ಬಹಿಷ್ಕಾರಕ್ಕೆ ಹೋಲಿಸಬಹುದಂತಹ ಯಾವ ಶಿಕ್ಷೆ ಭಾರತದ ದಂಡ ಸಂಹಿತೆಯಲ್ಲಿ ದೊರೆಯುತ್ತದೆ? ಸಮಾಜವನ್ನು ವಿರೋಧಿಸಿ ತನ್ನ ಮೇಲೆಯೇ ಬಹಿಷ್ಕಾರದ ಶಿಕ್ಷೆಯನ್ನು ತಂದುಕೊಳ್ಳುವ ಸಮಾಜ ಸುಧಾರಕ ಹೆಚ್ಚು ಧೈರ್ಯಶಾಲಿಯೋ ಅಥವಾ ಸರಕಾರವನ್ನು ವಿರೋಧಿಸಿ ಕೆಲವು ತಿಂಗಳು ಅಥವಾ ಕೆಲವು ವರ್ಷಗಳ ಜೇಲು ಶಿಕ್ಷೆಯನ್ನು ಪಡೆಯುವ ರಾಜಕೀಯ ಕೈದಿ ಹೆಚ್ಚು ಧೈರ್ಯಶಾಲಿಯೋ? ಸಮಾಜ ಸುಧಾರಕನ ಧೈರ್ಯಕ್ಕೂ ರಾಜಕೀಯ ದೇಶಭಕ್ತನ ಧೈರ್ಯಕ್ಕೂ ಇರುವ ವ್ಯತ್ಯಾಸವನ್ನು ಅಳೆಯುವಾಗ ನಾವು ಇನ್ನೊಂದು ಮುಖ್ಯ ಅಂಶವನ್ನು ಕಡೆಗಣಿಸುತ್ತೇವೆ. ಸಮಾಜ ಸುಧಾರಕನು ಸಮಾಜವನ್ನೇ ಧಿಕ್ಕರಿಸಿದಾಗ ಅವನನ್ನು ಹುತಾತ್ಮನೆಂದು ಯಾರೂ ಹೊಗಳುವುದಿಲ್ಲ. ಅವನ ಜೊತೆ ಸ್ನೇಹ ಬೆಳೆಸಲು ಯಾರೂ ಇರುವುದಿಲ್ಲ. ಅವನನ್ನು ತಿರಸ್ಕರಿಸಿ ದೂರವಿಡುತ್ತಾರೆ. ಆದರೆ ರಾಜಕೀಯ ದೇಶಭಕ್ತನು ಸರಕಾರವನ್ನು ಧಿಕ್ಕರಿಸಿದಾಗ ಅವನಿಗೆ ಇಡೀ ಸಮಾಜ ಬೆಂಬಲ ನೀಡುತ್ತದೆ. ಅವನನ್ನು ಉದ್ಧಾರಕನೆಂದು ಹಾಡಿ ಹೊಗಳುತ್ತದೆ. ಏಕಾಂಗಿಯಾಗಿ ಹೋರಾಡುವ ಸಮಾಜ ಸುಧಾರಕ ಹೆಚ್ಚಿನ ಧೈರ್ಯಶಾಲಿಯೋ ಅಥವಾ ಜನಸಾಮಾನ್ಯರ ಬೆಂಬಲದ ಶ್ರೀರಕ್ಷೆಯಲ್ಲಿ ಹೋರಾಡುವ ರಾಜಕಾರಣಿ ದೇಶಭಕ್ತನೋ? ಸಮಾಜ ಸುಧಾರಣೆಯಲ್ಲಿ ರಾನಡೆಯವರು ಧೈರ್ಯಶಾಲಿಯಾಗಿದ್ದರೆಂಬುದನ್ನು ಅಲ್ಲಗಳೆಯುವುದು ನಿರರ್ಥಕ. ಅವರು ನಿಜವಾಗಿಯೂ ಹೆಚ್ಚಿನ ಧೈರ್ಯವನ್ನು ತೋರಿದರು. ಸಾಮಾಜಿಕ ಮತ್ತು ಧಾರ್ಮಿಕ ರೂಢಿಗಳು ಎಷ್ಟೇ ಅನೀತಿ ಅಥವಾ ಅನ್ಯಾಯಪೂರಿತವಾದರೂ ಅವುಗಳ ಆಧಾರವನ್ನು ಪ್ರಶ್ನಿಸುವುದೂ ಕೂಡ ಅಸಂಪ್ರದಾಯ, ದೇವದೂಷಣೆ, ಮತ್ತು ಅಪವಿತ್ರಗೊಳಿಸುವಂತಹ ಕೃತ್ಯ ಎಂದು ಪರಿಗಣಿಸಲಾಗುತ್ತಿದ್ದ ಕಾಲದಲ್ಲಿ, ರಾನಡೆಯವರು ಜೀವಿಸಿದ್ದರೆಂಬುದನ್ನು ನಾವು ಮರೆಯಬಾರದು.

5

ರಾನಡೆಯವರ ಸಮಾಜ ಸುಧಾರಣೆಯ ಮಾರ್ಗ ಸುಗಮವಾಗಿರಲಿಲ್ಲ. ಅನೇಕ ಕಡೆಗಳಿಂದ ಅದಕ್ಕೆ ಅಡೆತಡೆಗಳಿದ್ದವು. ಯಾರ ಉದ್ಧಾರವನ್ನು ಅವರು ಬಯಸಿದ್ದರೋ ಅದೇ ಜನರ ಭಾವನೆಗಳು ಪುರಾತನ ಕಾಲದಲ್ಲಿ ಬೇರೂರಿದವುಗಳಾಗಿದ್ದವು. ತಮ್ಮ ಪೂರ್ವಜರು ಅತ್ಯಂತ ಬುದ್ದಿಶಾಲಿಗಳೂ, ಘನವಂತರೂ ಆಗಿದ್ದರೆಂಬುದು ಅವರ ವಿಶ್ವಾಸವಾಗಿತ್ತಲ್ಲದೆ ಅವರು ನಿಯೋಜಿಸಿದ ಸಮಾಜ ವ್ಯವಸ್ಥೆ ಅತ್ಯಂತ ಆದರ್ಶವಾದುದಾಗಿದೆ ಎಂಬುದು ಅವರ ಭಾವನೆಯಾಗಿತ್ತು. ರಾನಡೆಯವರು ಯಾವ ಹಿಂದೂ ಸಮಾಜದ ಕಟ್ಟಳೆಗಳನ್ನು ಅನ್ಯಾಯ ಮತ್ತು ಅವಹೇಳನಕರವೆಂದು ಪರಿಗಣಿಸಿದ್ದರೋ ಅವೆ ಈ ಜನರಿಗೆ ತಮ್ಮ ಧರ್ಮದ ಅತ್ಯಂತ ಪವಿತ್ರವಾದ ಕಟ್ಟಳೆಗಳಾಗಿದ್ದವು. ಇದು ಶ್ರೀಸಾಮಾನ್ಯನ ಭಾವನೆಯಾಗಿತ್ತು. (ಪು. 248)

ಬುದ್ಧಿಜೀವಿಗಳಲ್ಲಿ ಎರಡು ವಿಭಿನ್ನ ವಿಚಾರಧಾರೆಗಳಿದ್ದವು. ತನ್ನ ನಂಬುಗೆಯಲ್ಲಿ ಸಂಪೂರ್ಣ ಸಂಪ್ರದಾಯಬದ್ಧವಾದ ಮತ್ತು ರಾಜಕೀಯ ದೃಷ್ಟಿ ಇಲ್ಲದ ವಿಚಾರಧಾರೆ ಒಂದಾಗಿದ್ದರೆ, ಇನ್ನೊಂದು ಆಧುನಿಕ ದೃಷ್ಟಿಕೋನ ಹೊಂದಿದ್ದರೂ ತನ್ನ ಧೈಯೋದ್ದೇಶಗಳಲ್ಲಿ ಮೂಲತಃ ರಾಜಕೀಯ ದೃಷ್ಟಿ ಹೊಂದಿದ ವಿಚಾರಧಾರೆಯಾಗಿತ್ತು. ಚಿಪಳೂಣಕರ್ ಅವರು ಮೊದಲನೆಯ ಧಾರೆಯ ಪ್ರಮುಖರಾಗಿದ್ದರೆ, ಟಿಳಕರು ಎರಡನೆಯ ಧಾರೆಯ ಪ್ರಮುಖರಾಗಿದ್ದರು. ಇವರಿಬ್ಬರೂ ಒಂದಾಗಿ ರಾನಡೆಯವರಿಗೆ ತಮಗೆ ಸಾಧ್ಯವಾದ ಎಲ್ಲಾ ಅಡ್ಡಿ ಆತಂಕಗಳನ್ನುಂಟುಮಾಡಿದರು. ಅವರು ಸಮಾಜ ಸುಧಾರಣೆಗೆ ಸಾಕಷ್ಟು ಹಾನಿಯುಂಟುಮಾಡಿದ್ದಲ್ಲದೆ. ಇದುವರೆಗಿನ ಅನುಭವದಂತೆ ಭಾರತದ ರಾಜಕೀಯ ಸುಧಾರಣೆಗೂ ಅವರು ದೊಡ್ಡ ಹಾನಿಯನ್ನೆಸಗಿದರು. ಸಂಪ್ರದಾಯಬದ್ಧ ಮತ್ತು ರಾಜಕೀಯ ದೃಷ್ಟಿ ಇಲ್ಲದ ವಿಚಾರಧಾರೆಯವರು ಹೆಗಲ್‌ನ ತತ್ವವಾದ ಆದರ್ಶಧೇಯವನ್ನು ಸಾಧಿಸುವ ಮತ್ತು ವಾಸ್ತವಿಕತೆಯನ್ನು ಆದರ್ಶಿಕರಿಸುವುದರಲ್ಲಿ ನಂಬುಗೆ ಹೊಂದಿದ್ದರು. ಇದು ನನಗೆ ನಿವಾರಿಸಲಾರದ ಕಗ್ಗಂಟಾಗಿದೆ. ಹೀಗೆ ಮಾಡುವುದು ಘೋರ ಅನ್ಯಾಯವೇ ಸರಿ. ಹಿಂದೂ ಧಾರ್ಮಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಅದರ ಆದರ್ಶಕ್ಕೆ ವಾಸ್ತವಿಕತೆಯನ್ನು ಕೊಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅದರ ಆದರ್ಶವೇ ದೋಷಪೂರಿತವಾಗಿದೆ. ಅದೇ ರೀತಿ ವಾಸ್ತವಿಕತೆಗೆ ಆದರ್ಶದ ಸ್ಥಾನವನ್ನೂ ಕೊಡಲು ಬರುವುದಿಲ್ಲ. ಏಕೆಂದರೆ ವಾಸ್ತವಿಕತೆಯ ಸದ್ಯದ ಪರಿಸ್ಥಿತಿ ಕೀಳಿಗಿಂತಲೂ ಕೀಳುಮಟ್ಟದ್ದಾಗಿದೆ. ಇದೇನೂ ಉಪ್ಪೇಕ್ಷೆಯಲ್ಲ. ಹಿಂದೂ ಸಾಮಾಜಿಕ ಉಪಯುಕ್ತತೆ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಪರಿಶೀಲಿಸೋಣ. ಅದೇತಾನೇ ಟಂಕಸಾಲೆಯಲ್ಲಿ ಸೃಷ್ಟಿಯಾದಂತಹ ಹೊಸ ಧರ್ಮ ಒಳ್ಳೆಯದೆಂದು ಹೇಳಲಾಗುತ್ತದೆ. ಆದರೆ ಹಿಂದೂ ಧರ್ಮದ ಆರಂಭದಲ್ಲಿಯೇ ಖೊಟ್ಟಿ ನಾಣ್ಯವೆನಿಸಿದೆ. ಹಿಂದೂ ಧರ್ಮ ಸೃಷ್ಟಿಸಿದಂತಹ ಹಿಂದೂ ಸಮಾಜದ ಆದರ್ಶಗಳು ಆ ಸಮಾಜವನ್ನು ಹೀನಾಯವಾಗಿಸಿ ಭ್ರಷ್ಟಗೊಳಿಸಿದೆ. ಅದು ಸತ್ಯದಲ್ಲಿ ಮತ್ತು ರಚನೆಯಲ್ಲಿ ನೀಷೆಯ ತತ್ವವನ್ನೇ ಅವಲಂಬಿಸಿದೆ. ನೀಷೆಯು ಹುಟ್ಟುವುದಕ್ಕೆ ಬಹು ಮೊದಲೇ ಮನು, ನೀಷೆ ಬೋಧಿಸಲಿದ್ದ ಮತ ತತ್ವವನ್ನು ಸಾರಿದ್ದನು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವರಹಿತವಾದ ಧರ್ಮ ಅದಾಗಿತ್ತು. ಅದು ಹಿಂದೂ ಸಮಾಜದ ಇತರರೆಲ್ಲರೂ ಅದರ ಮಹಾಮಾನವನೆನಿಸಿದ ಬ್ರಾಹ್ಮಣನನ್ನು ಪೂಜಿಸುವ ತತ್ವದ ಘೋಷಣೆಯಾಗಿದ್ದಿತು. ಈ ಮಹಾಮಾನವನಾದ ಬ್ರಾಹ್ಮಣ ಮತ್ತು ಅವನ ವರ್ಗ ಮಾತ್ರ ಜೀವಿಸಲು ಮತ್ತು ಆಳಲು ಹುಟ್ಟಿದ್ದಾನೆ ಎಂಬ ತತ್ವವನ್ನು ಅದು ಪ್ರತಿಪಾದಿಸಿತು. ಇತರರು ಅವರ ಸೇವೆ ಮಾಡಲು ಮಾತ್ರ ಹುಟ್ಟಿದ್ದಾರೆಯೇ ಹೊರತು ಇನ್ನೇನೂ ಮಾಡಲಿಕ್ಕಾಗಿಯಲ್ಲ. ಇವರಿಗೆ ತಮ್ಮದೇ ಆದ ಜೀವನ ಎನ್ನುವುದು ಇಲ್ಲ. ತಮ್ಮದೇ ಆದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಹಕ್ಕೂ ಇವರಿಗಿಲ್ಲ. ಇದೇ ಹಿಂದೂ ಧರ್ಮದ ಸುವಾರ್ತೆ. ಹಿಂದೂ ದರ್ಶನವು. ಅದು ವೇದಾಂತವೇ ಆಗಿರಲಿ, ಸಾಂಖ್ಯವೇ ಆಗಿರಲಿ, ನ್ಯಾಯವೇ ಆಗಿರಲಿ, ವೈಶೇಷಿಕವೇ ಆಗಿರಲಿ, ಅದು ಹಿಂದೂ ಧರ್ಮವನ್ನು ಯಾವುದೇ ರೀತಿಯಲ್ಲಿ ಪ್ರಭಾವಿತಗೊಳಿಸದೆ ತನ್ನದೇ ಆದ ವರ್ತುಲದಲ್ಲಿ ಚಲಿಸಿದೆ. ಈ ತತ್ವವನ್ನು ಪ್ರಶ್ನಿಸುವ ಧೈರ್ಯ ಅದಕ್ಕಿರಲಿಲ್ಲ. ಎಲ್ಲವೂ ಬ್ರಹ್ಮ ಎಂಬ ಆ ಹಿಂದೂ ದರ್ಶನ ಕೇವಲ ಬೌದ್ಧಿಕ ವಿಚಾರವಾಗಿತ್ತು. ಎಂದಿಗೂ ಅದು ಸಮಾಜದರ್ಶನವಾಗಲೇ ಇಲ್ಲ. ಹಿಂದೂ ದಾರ್ಶನಿಕರು ತಮ್ಮ ದರ್ಶನ ಮತ್ತು ತಮ್ಮ ಮನು ಎರಡನ್ನೂ ಎರಡು ಕೈಗಳಲ್ಲಿ ಬೇರೆ ಬೇರೆಯಾಗಿ ತಮ್ಮ ಎಡಗೈಯಲ್ಲಿ ಏನಿದೆ ಎಂಬುದು ಬಲಗೈಗೆ ತಿಳಿಯದ ರೀತಿಯಲ್ಲಿ ಹಿಡಿದುಕೊಂಡಿದ್ದರು. ಇವುಗಳ ಅಸಂಬದ್ಧತೆ ಹಿಂದೂಗಳನ್ನು ಎಂದೂ ಬಾಧಿಸಲಿಲ್ಲ. ಇಂತಹ ಹಿಂದೂ ಸಾಮಾಜಿಕ ವ್ಯವಸ್ಥೆಗಿಂತ ಕೀಳಾದ ಯಾವುದಾದರೂ ಬೇರೆ ವ್ಯವಸ್ಥೆ ಇರಲು ಸಾಧ್ಯವೇ? (ಪು. 249)

ಜಾತಿ ಪದ್ಧತಿಯು ಹಿಂದೂಗಳ ಆದರ್ಶವೆನಿಸಿದ್ದು ಚಾತುರ್ವಣ್ಯ ಪದ್ಧತಿಯ ಹೀನ ರೂಪವಾಗಿದೆ. ಚಾತುರ್ವರ್ಣವು ಒಂದು ಆದರ್ಶ ಸಾಮಾಜಿಕ ವ್ಯವಸ್ಥೆ ಎಂದು ಹುಟ್ಟು ಮೂರ್ಖನಲ್ಲದ ಇನ್ನಾರಾದರೂ ಒಪ್ಪುವುದು ಸಾಧ್ಯವೆ? ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಅದು ಒಂದು ಅವಿವೇಕ ಮತ್ತು ಅಪರಾಧ. ಒಂದೇ ಒಂದು ವರ್ಗದವರು ಮಾತ್ರ ಶಿಕ್ಷಣ ಮತ್ತು ಅಧ್ಯಯನಕ್ಕೆ ಅರ್ಹರು. ಒಂದೇ ಒಂದು ವರ್ಗದವರು ಮಾತ್ರ ಶಸ್ತ್ರಾಸ್ತ್ರಗಳನ್ನು ಹಿಡಿಯಬಲ್ಲರು. ಒಂದೇ ಒಂದು ವರ್ಗ ಮಾತ್ರ ವಾಣಿಜ್ಯಕ್ಕೆ ಅರ್ಹರು. ಒಂದೇ ಒಂದು ವರ್ಗದವರು ಮಾತ್ರ ಸೇವಕರಾಗಿರಬೇಕು. ವ್ಯಕ್ತಿಯ ಮೇಲೆ ಇದರ ಪರಿಣಾಮಗಳು ಸ್ವಯಂವೇದ್ಯ. ತನ್ನ ಉಪಜೀವನಕ್ಕಾಗಿ ತನ್ನ ಶಿಕ್ಷಣದ ದುರುಪಯೋಗಪಡಿಸಿ ತನ್ನ ವಿದ್ಯೆಯ ಘನತೆಗೆ ಕುಂದು ತರದೇ ಇರುವಂತಹ ವ್ಯಕ್ತಿ ಇರಲು ಸಾಧ್ಯವೇ? ಶಿಕ್ಷಣ ಮತ್ತು ಸಂಸ್ಕೃತಿ ಇಲ್ಲದಂತಹ ಯೋಧ ತನ್ನ ಆಯುಧಗಳನ್ನು ವಿನಾಶಕ್ಕಾಗಿಯಲ್ಲದೇ ಸಂರಕ್ಷಣೆಗೆ ಬಳಸುವುದು ಸಾಧ್ಯವೇ? ಯಾವಾಗಲೂ ಗಳಿಕೆಯ ದೃಷ್ಟಿಯನ್ನೇ ಹೊಂದಿರುವ ವರ್ತಕನು ಪಶುವಿನ ಮಟ್ಟಕ್ಕೆ ಇಳಿಯದೇ ಇರುವುದು ಸಾಧ್ಯವೇ? ಶಿಕ್ಷಣವನ್ನು ಹೊಂದಲು ಅಧಿಕಾರವಿಲ್ಲದ, ಶಸ್ತ್ರಾಸ್ತ್ರಗಳನ್ನು ಹಿಡಿಯುವ ಅವಕಾಶವಿಲ್ಲದ, ಮತ್ತು ಇತರ ಯಾವುದೇ ರೀತಿಯ ಜೀವನಾಧಾರವಿಲ್ಲದ ಸೇವಕ ತನ್ನ ನಿಯಾಮಕನು ಇಚ್ಛಿಸಿದ ರೀತಿಯಲ್ಲಿ ಬದುಕಲು ಸಾಧ್ಯವೇ? ವ್ಯಕ್ತಿಗೇ ಇಷ್ಟು ವಿನಾಶಕಾರಿಯಾದ ವ್ಯವಸ್ಥೆ ಸಹಜವಾಗಿ ಸಮಾಜವನ್ನು ದುರ್ಬಲಗೊಳಿಸುತ್ತದೆ. ಸಾಮಾಜಿಕ ರಚನೆ ಸಾಮಾನ್ಯ ಪರಿಸ್ಥಿತಿಯಲ್ಲಿ ಚೆನ್ನಾಗಿದ್ದರೆ ಸಾಲದು. ಅದು ಎಂತಹ ಬಿರುಗಾಳಿಯನ್ನಾದರೂ ಎದುರಿಸುವ ಶಕ್ತಿ ಪಡೆದಿರಬೇಕು. ಹಿಂದೂಜಾತಿ ಪದ್ಧತಿಯು ಆಕ್ರಮಣದ ಬಿರುಗಾಳಿಯನ್ನು ಎದುರಿಸುವ ಸಾಮರ್ಥವನ್ನು ಹೊಂದಿದೆಯೇ? ಅದು ಎದುರಿಸಲಾರದು ಎಂಬುದು ಸತ್ಯಸಂಗತಿ. ಸ್ವ-ರಕ್ಷಣೆಗಾಗಲೀ ಅಥವಾ ಆಕ್ರಮಣ ಮಾಡುವುದಕ್ಕಾಗಲೀ ಒಂದು ಸಮಾಜವು ತನ್ನ ಶಕ್ತಿಯನ್ನು ಕ್ರೋಡೀಕರಿಸುವ ಸ್ಥಿತಿಯಲ್ಲಿರಬೇಕು. ಕಾರ್ಯಗಳನ್ನು ಮತ್ತು ಕರ್ತವ್ಯಗಳನ್ನು ಪ್ರತ್ಯೇಕಿಸಿ ಹಂಚಿ ಅವುಗಳನ್ನು ನಿರ್ವಿಕಲ್ಪವಾಗಿ ಶಾಶ್ವತವಾಗಿ ನಿಯೋಜಿಸಿದಂತಹ ಪರಿಸ್ಥಿತಿಯಲ್ಲಿ ಕ್ರೋಡೀಕರಿಸಲು ಉಳಿದಿರುವುದಾದರೂ ಏನು? ಹಿಂದೂ ಸಾಮಾಜಿಕ ವ್ಯವಸ್ಥೆಯಲ್ಲಿ ಶೇಕಡ ತೊಂಬತ್ತು ಹಿಂದೂಗಳು-ಬ್ರಾಹ್ಮಣರು, ವೈಶ್ಯರು, ಶೂದ್ರರು-ಶಸ್ತ್ರಾಸ್ತ್ರಗಳನ್ನು ಹಿಡಿಯುವಂತಿಲ್ಲ. ವಿಪತ್ತಿನ ಗಳಿಗೆಯಲ್ಲಿ ತನ್ನ ಸೈನ್ಯಬಲವನ್ನು ಹೆಚ್ಚಿಸಲಾರದಂತಹ ದೇಶ ತನ್ನ ರಕ್ಷಣೆಯನ್ನು ಹೇಗೆ ಮಾಡಿಕೊಳ್ಳಬಲ್ಲದು? ಆಗಿಂದಾಗ್ಗೆ ಕೇಳಿಬರುವ ದೂರಿನಂತೆ ಬುದ್ಧನು ತನ್ನ ಅಹಿಂಸಾ ತತ್ವದ ಬೋಧನೆಯ ಮೂಲಕ ಹಿಂದೂ ಸಮಾಜವನ್ನು ದುರ್ಬಲಗೊಳಿಸಲಿಲ್ಲ. ಬ್ರಾಹ್ಮಣ ಸಿದ್ಧಾಂತವಾದ ಚಾತುರ್ವರ್ಣ ಪದ್ಧತಿಯು ಹಿಂದೂ ಸಮಾಜದ ಸೋಲಿಗೆ ಮಾತ್ರವಲ್ಲ ಅದರ ಅಧಃಪತನಕ್ಕೂ ಕಾರಣವಾಗಿದೆ. ಹಿಂದೂ ಸಾಮಾಜಿಕ-ಧಾರ್ಮಿಕ ಸಿದ್ಧಾಂತಗಳು ಹಿಂದೂ ಸಮಾಜದ ಅವನತಿಗೆ ಹೇಗೆ ಕಾರಣವಾಗಿವೆ ಎಂದು ನಾನು ಹೇಳಿದ್ದನ್ನು ನಿಮ್ಮಲ್ಲಿ ಅನೇಕರು ಆಕ್ಷೇಪಿಸಬಹುದು. ಆದರೆ ಸತ್ಯಾಂಶವೇನು? ನಾನು ಮಾಡಿದ ಆರೋಪವನ್ನು ಅಲ್ಲಗಳೆಯಲು ಸಾಧ್ಯವೇ? ಯಾರ ಸಮೀಪವೂ ಬಾರಲಾರದಂತಹ, ತಮ್ಮ ನೆರಳು ಯಾರ ಮೇಲೂ ಬೀಳಲಾರದಂತಹ ಮತ್ತು ಯಾರೂ ನೋಡಲಾರದಂತಹ ವ್ಯಕ್ತಿಗಳಿರುವ ಸಮಾಜ ಪ್ರಪಂಚದಲ್ಲಿ ಎಲ್ಲಿಯಾದರೂ ಇದೆಯೇ? ತಮ್ಮ ಮೈಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳುವುದನ್ನೂ ತಿಳಿಯದಂತಹ ಕಾಡುಗಳಲ್ಲಿ ವಾಸಿಸುವ ಅನಾಗರಿಕ ಆದಿ ಜನಾಂಗಗಳಿರುವ ಸಮಾಜ ಎಲ್ಲಿಯಾದರೂ ಇದೆಯೇ? ಸಂಖ್ಯೆಯಲ್ಲಿ ಅವರೆಷ್ಟಿದ್ದಾರೆ? ಅವು ನೂರಾರೋ ಅಥವಾ ಸಾವಿರಾರೋ? ಅವರು ಹಲವೇ ಜನರಿದ್ದರೆ ಚೆನ್ನಾಗಿತ್ತು. ದುರಂತವೆಂದರೆ ಅವರ ಸಂಖ್ಯೆ ಅನೇಕ ದಶಲಕ್ಷಗಳಲ್ಲಿದೆ. ದಶದಶಲಕ್ಷಗಟ್ಟಲೆ ಅಸ್ಪೃಶ್ಯರು, ಅಪರಾಧಿ ಬುಡಕಟ್ಟಿನವರು ಮತ್ತು ಆದಿಜನಾಂಗದವರಿದ್ದಾರೆ. ಈ ಪರಿಸ್ಥಿತಿಯಲ್ಲಿ ಹಿಂದೂ (ಪು. 250)

ನಾಗರಿಕತೆ ಎಂಬುದು ನಾಗರಿಕತೆಯಾಗಿದೆಯೇ ಅಥವಾ ಹೇಯಸ್ಥಿತಿಯೇ ಎಂದು ಅಚ್ಚರಿಪಡಬೇಕಾಗಿದೆ. ಇದು ಆದರ್ಶದ ಪರಿಸ್ಥಿತಿ. ಇನ್ನು ರಾನಡೆಯವರು ಕಾರ್ಯನಿರತರಾದಾಗ ಇದ್ದ ವಸ್ತುಸ್ಥಿತಿಯನ್ನು ವೀಕ್ಷಿಸೋಣ. ಬ್ರಿಟಿಷರ ಆಗಮನದ ಕಾಲದಲ್ಲಿ ಮತ್ತು ರಾನಡೆಯವರಂತಹ ಸಮಾಜ ಸುಧಾರಕರು ಎದುರಿಸಿದಂತಹ ಪರಿಸ್ಥಿತಿಗಳನ್ನು ಈಗ ಊಹಿಸುವುದೂ ಸಹ ಅಸಾಧ್ಯ. ಮೊದಲು ನಾನು ಬುದ್ದಿಜೀವಿಗಳ ವರ್ಗದಿಂದಲೇ ಆರಂಭಿಸುವೆ. ನಾಗರಿಕತೆಯನ್ನು ಬೆಳೆಸಿಕೊಂಡು ಬರುವ ಮತ್ತು ಅದರ ಮಾರ್ಗದರ್ಶನ ಮಾಡುವ ಕಾರ್ಯ ಬುದ್ದಿಜೀವಿಗಳನ್ನೇ ಅವಲಂಬಿಸಿರುತ್ತದೆ. ಬ್ರಾಹ್ಮಣವರ್ಗವೇ ಇಲ್ಲಿ ಆ ಬುದ್ದಿಜೀವಿ. ಹಳೆಯ ಹಿಂದೂ ಕಾನೂನಿನ ಪ್ರಕಾರ ಬ್ರಾಹ್ಮಣರಿಗೆ ಪುರೋಹಿತರ ಸ್ಥಾನ ಮತ್ತು ಸವಲತ್ತುಗಳನ್ನು ನೀಡಲಾಗಿದ್ದು ಅವರನ್ನು ಕೊಲೆಯ ಅಪರಾಧಕ್ಕೂ ಮರಣದಂಡನೆಗೊಳಪಡಿಸುವಂತಿರಲಿಲ್ಲ. ಮತ್ತು ೧೮೧೭ರವರೆಗೆ ಈಸ್ಟ್ ಇಂಡಿಯಾ ಕಂಪನಿಯವರು ಈ ಸವಲತ್ತನ್ನು ನೀಡಿದರು. ಇದಕ್ಕೆ ಕಾರಣ ಬ್ರಾಹ್ಮಣರು ಬಲಿಷ್ಠರಾಗಿದ್ದರು. ಆದರೆ ಅವರಲ್ಲಿ ಏನಾದರೂ ಸತ್ವ ಉಳಿದಿತ್ತೇ? ಅವರ ಉದ್ಯೋಗವು ತನ್ನ ಘನತೆಯನ್ನು ಕಳೆದುಕೊಂಡಿತ್ತು. ಬ್ರಾಹ್ಮಣ ಉಪದ್ರವಿಯಾಗಿದ್ದ. ಅವನು ವ್ಯವಸ್ಥಿತವಾಗಿ ಸಮಾಜ ಭಕ್ಷಕನಾಗಿದ್ದು ಧರ್ಮದ ಹೆಸರಿನಲ್ಲಿ ಸ್ವಂತ ಲಾಭ ಮಾಡಿಕೊಳ್ಳುತ್ತಿದ್ದ. ತಾನೇ ಸಿದ್ದಪಡಿಸಿದ ಟನ್ನುಗಟ್ಟಲೆ ಪುರಾಣಗಳು, ಶಾಸ್ತ್ರಗಳು, ಬಡ ಅನಕ್ಷರಸ್ಥ, ಮೂಢನಂಬುಗೆಯ ಸಾಮಾನ್ಯ ಜನಸಮೂಹವನ್ನು ವಂಚಿಸುವ, ಮರುಳು ಮಾಡುವ, ಶೋಷಿಸುವ ಮತ್ತು ತಪ್ಪುದಾರಿಗೆಳೆಯುವುದಕ್ಕಾಗಿ ಬ್ರಾಹ್ಮಣರು ಬಳಸಿದ ತೀಕ್ಷ್ಣವಾದ ಆಚರಣೆಗಳ ಭಂಡಾರಗಳಾಗಿದ್ದವು. ಈ ಭಾಷಣದಲ್ಲಿ ಇವುಗಳಿಗೆ ಆಧಾರಗಳನ್ನೊದಗಿಸುವುದು ಅಸಾಧ್ಯ. ತಮ್ಮ ಹಕ್ಕುಗಳು ಮತ್ತು ವಿಶೇಷ ಸೌಲಭ್ಯಗಳ ರಕ್ಷಣೆಗಾಗಿ ಬ್ರಾಹ್ಮಣರು ಸಂಸ್ಕರಿಸಿದಂತಹ ಕೆಲವು ನಿರ್ಬಂಧಗಳನ್ನು ಮಾತ್ರ ಇಲ್ಲಿ ಹೇಳಬಯಸುತ್ತೇನೆ. ಈ ಬಗ್ಗೆ ಹೆಚ್ಚು ತಿಳಿದುಕೊಳ್ಳಬಯಸುವವರು ೧೭೮೬ರ XIIನೆಯ ಕಾನೂನನ್ನು ಓದಲಿ. ಅದರ ಪ್ರಕಾರ ಒಬ್ಬ ಬ್ರಾಹ್ಮಣನು ತಾನು ಬಯಸಿದ್ದನ್ನು ತನ್ನ ಜಾಲಕ್ಕೆ ಒಳಗಾಗದ ವ್ಯಕ್ತಿಯಿಂದ ಬಲಾತ್ಕಾರದಿಂದ ಪಡೆಯಬಹುದಾಗಿತ್ತು. ಉದಾಹರಣೆಗಾಗಿ, ತನ್ನ ಶರೀರವನ್ನು ಚಾಕು ಮತ್ತು ಚೂರಿಗಳಿಂದ ಸೀಳಿಕೊಳ್ಳುವುದು ಅಥವಾ ವಿಷ ಕುಡಿಯುವುದಾಗಿ ಹೆದರಿಸುವುದು ಮುಂತಾದ ಬೆದರಿಕೆಯ ತಂತ್ರಗಳನ್ನು ತನ್ನ ಲಾಭಕ್ಕಾಗಿ ಬಳಸುತ್ತಿದ್ದನು. ಹಿಂದೂಗಳನ್ನು ಬಲಾತ್ಕರಿಸಲು ಬ್ರಾಹ್ಮಣನು ಇನ್ನೂ ಅನೇಕ, ಎಷ್ಟು ಅಸಾಧರಣವಾಗಿದ್ದವೋ ಅಷ್ಟೇ ನಾಚಿಕೆಗೇಡಿನ, ತಂತ್ರಗಳನ್ನು ಬಳಸುತ್ತಿದ್ದನು. ಬ್ರಾಹ್ಮಣನು ತನ್ನ ತಂತ್ರಕ್ಕೆ ಮಣಿಯದ ವ್ಯಕ್ತಿಯ ಮನೆಯ ಮುಂದೆ ಒಂದು ವರ್ತುಳಾಕಾರದ ಬೇಲಿಯನ್ನು ರಚಿಸಿ ಅದರಲ್ಲಿ ಕಟ್ಟಿಗೆಯನ್ನು ತುಂಬಲಾಗುತ್ತಿತ್ತು. ಇದನ್ನು ಕೂರ್ (Koorh) ಎಂದು ಕರೆಯಲಾಗುತ್ತಿತ್ತು. ಇದರಲ್ಲಿ ಕಟ್ಟಿಗೆಗಳ ಮಧ್ಯೆ ಒಬ್ಬ ಮುದುಕಿಯನ್ನು ಕೂಡಿಸಿ ತನ್ನ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಆಕೆಯನ್ನು ಸುಟ್ಟು ಬಿಡುವುದಾಗಿ ಬೆದರಿಸಲಾಗುತ್ತಿತ್ತು. ಇದೇ ತರಹದ ಇನ್ನೊಂದು ತಂತ್ರವೆಂದರೆ ತನ್ನ ಹೆಂಡಿರು ಮಕ್ಕಳನ್ನು ಆ ವ್ಯಕ್ತಿಯ ಮನೆಯ ಮುಂದೆ ಕೂಡಿಸಿ ಅವರ ಶಿರಚ್ಛೇದನ ಮಾಡುವುದಾಗಿ ಬೆದರಿಸುವುದು. ಮೂರನೆಯ ವಿಧದ ತಂತ್ರವೆಂದರೆ ಆ ವ್ಯಕ್ತಿಯ ಬಾಗಿಲಲ್ಲಿ ಉಪವಾಸ ಕುಳಿತು ಧರಣಿ ಮಾಡುವುದು. ಈ ತಂತ್ರ ಏನೂ ಅಲ್ಲ. ಬ್ರಾಹ್ಮಣರು ಬ್ರಾಹ್ಮಣೇತರ ಕನ್ಯೆಯರ ಶೀಲ ಭಂಗ ಮಾಡುವ ಹಕ್ಕನ್ನು ಸಾಧಿಸತೊಡಗಿದ್ದರು. ಈ ಪದ್ಧತಿಯು ಕಲ್ಲಿಕೋಟೆಯ ಝಾಮೋರಿನವರ ಕುಟುಂಬದಲ್ಲಿ ಮತ್ತು ವೈಷ್ಣವರ ವಲ್ಲಭಾಚಾರಿ ಪಂಗಡಗಳಲ್ಲಿ ಆಚರಣೆಯಲ್ಲಿತ್ತು. ಬ್ರಾಹ್ಮಣರು ಯಾವ ಮಟ್ಟದ ಅಧೋಗತಿಗಿಳಿದಿದ್ದರೆಂಬುದು ಇದರಿಂದ ವ್ಯಕ್ತವಾಗುತ್ತವೆ. ಬೈಬಲ್ಲಿನಲ್ಲಿ ಹೇಳಿರುವಂತೆ ಉಪ್ಪು ತನ್ನ ರುಚಿಯನ್ನು ಕಳೆದುಕೊಂಡಾಗ ಆ ರುಚಿಯನ್ನು ಇನ್ನೆಲ್ಲಿಂದ ಮರಳಿಸಲು ಸಾಧ್ಯ? ಹಿಂದೂ ಸಮಾಜದ ನೈತಿಕ (ಪು. 251)

ಬಂಧಗಳು ಅಪಾಯಕಾರಿ ಘಟ್ಟ ತಲುಪಿದ್ದವೆಂಬುದರಲ್ಲಿ ಆಶ್ಚರ್ಯವೇನಿಲ್ಲ. ಈ ನೈತಿಕ ಅಂಧಃಪತನವನ್ನು ತಡೆಯುವ ಉದ್ದೇಶದಿಂದ ಈಸ್ಟ್ ಇಂಡಿಯಾ ಕಂಪೆನಿಯು ೧೮೧೯ರಲ್ಲಿ ಒಂದು ಕಾನೂನನ್ನು (೧೮೧೯ರ VIIನೆಯ) ಮಾಡಬೇಕಾಯಿತು. ಈ ಕಾನೂನಿನ ಪೀಠಿಕೆಯಲ್ಲಿ ಹೇಳಿದಂತೆ ಹೆಂಡತಿಯನ್ನು ಅಥವಾ ಹೆಣ್ಣುಮಕ್ಕಳನ್ನು ವೇಶ್ಯಾವೃತ್ತಿಯಲ್ಲಿ ತೊಡಗಿಸುವುದಕ್ಕಾಗಿ ಹೆಂಗಸರನ್ನು ನೇಮಕಮಾಡಿಕೊಳ್ಳಲಾಗುತ್ತಿತ್ತು. ಗಂಡಂದಿರು ಮತ್ತು ತಂದೆಯರಲ್ಲಿ ತಮ್ಮ ಕುಟುಂಬದವರನ್ನು ಮತ್ತು ಮಕ್ಕಳನ್ನು ತೊರೆಯುವುದು ಸಾಮಾನ್ಯ ಸಂಗತಿಯಾಗಿತ್ತು. ಸಾರ್ವಜನಿಕ ಸದ್ವಿವೇಚನೆ ಎಂಬುದೇ ಇರಲಿಲ್ಲ. ಅದಿಲ್ಲದಾಗ ಸಾಮಾಜಿಕ ಅನ್ಯಾಯಗಳ ವಿರುದ ನೈತಿಕ ಕ್ರೋಧವನ್ನು ನಿರೀಕ್ಷಿಸುವುದು ನಿರರ್ಥಕವಾಗಿತ್ತು. ಬ್ರಾಹ್ಮಣರು ಪ್ರತಿಯೊಂದು ಸಾಮಾಜಿಕ ಅನ್ಯಾಯವನ್ನು ಸಮರ್ಥಿಸಿಕೊಳ್ಳುವುದರಲ್ಲೇ ನಿರತರಾಗಿದ್ದರು. ಏಕೆಂದರೆ ಅವರು ತಮ್ಮ ಜೀವನೋಪಾಯಕ್ಕೆ ಅವುಗಳನ್ನೇ ಅವಲಂಬಿಸಿದ್ದರು. ಅವರು ಲಕ್ಷ ಲಕ್ಷಾಂತರ ಜನರನ್ನು ಗುಲಾಮರನ್ನಾಗಿಸಿದ ಅಸ್ಪೃಶ್ಯತೆಯ ಆಚರಣೆಯನ್ನು ಸಮರ್ಥಿಸಿಕೊಂಡರು. ಜಾತಿ ಪದ್ಧತಿಯನ್ನು ಸಮರ್ಥಿಸಿಕೊಂಡರು, ಮತ್ತು ಜಾತಿಪದ್ಧತಿಗೆ ಎರಡು ಆಧಾರಗಳಾದ ಬಾಲ್ಯವಿವಾಹ ಮತ್ತು ಬಲಾತ್ಕಾರದ ವೈಧವ್ಯಗಳನ್ನು ಸಮರ್ಥಿಸಿಕೊಂಡರು. ವಿಧವೆಯರ ದಹನವನ್ನು ಸಮರ್ಥಿಸಿಕೊಂಡರಲ್ಲದೆ ಬಹುಪತ್ನಿತ್ವ ಪದ್ಧತಿಯಿಂದ ರಜಪೂತರು ತಮಗೆ ಹುಟ್ಟಿದ ಸಹಸ್ರಾರು ಹೆಣ್ಣುಮಕ್ಕಳನ್ನು ಕೊಂದುಹಾಕುತ್ತಿದ್ದಂತಹ ವರ್ಗಿಕೃತ ಸಾಮಾಜಿಕ ವ್ಯವಸ್ಥೆಯನ್ನು ಸಮರ್ಥಿಸಿಕೊಂಡರು. ಎಂತಹ ನಾಚಿಗೆಗೇಡು, ಎಂತಹ ಅನ್ಯಾಯ. ಇಂತಹ ಸಮಾಜ ಬದುಕುವ ಆಸೆಯನ್ನು ಹೊಂದಬಹುದೇ? ರಾನಡೆಯವರು ಕೇಳಿದ ಪ್ರಶ್ನೆಗಳು ಇಂಥವು. ಆದ್ದರಿಂದಲೇ ಕಟ್ಟುನಿಟ್ಟಾದ ಮತ್ತು ಉಗ್ರ ಸಮಾಜ ಸುಧಾರಣೆಯ ಮುಖಾಂತರ ಮಾತ್ರ ಸಮಾಜವನ್ನು ರಕ್ಷಿಸಬಹುದಾಗಿದೆ ಎಂಬುದು ಅವರ ಸಿದ್ಧಾಂತವಾಗಿತ್ತು.

6

ಅವರು ಕಡುವಿರೋಧಿಗಳು ರಾಜಕೀಯ ಪಂಥದ ಬುದ್ದಿಜೀವಿ ವರ್ಗಕ್ಕೆ ಸೇರಿದವರಾಗಿದ್ದರು. ಇವರು ತಮ್ಮದೇ ಆದ ಹೊಸ ಸಿದ್ಧಾಂತವನ್ನು ನಿರೂಪಿಸಿದರು. ಸಿದ್ಧಾಂತದ ಪ್ರಕಾರ ರಾಜಕೀಯ ಸುಧಾರಣೆಗೆ ಸಾಮಾಜಿಕ ಸುಧಾರಣೆಗಿಂತ ಹೆಚ್ಚಿನ ಪ್ರಾಶಸ್ತ ವಿರಬೇಕು. ಈ ಸಿದ್ಧಾಂತವನ್ನು ಅನೇಕ ವೇದಿಕೆಗಳಿಂದ ಮಂಡಿಸಲಾಯಿತು. ಮುಂಬಯಿ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ತೆಲಂಗರಂತಹ ಪ್ರತಿಭಾಶಾಲಿಗಳು ತಮ್ಮ ನ್ಯಾಯವಾದಿಯ ತೀಕ್ಷ್ಮವಾದ ಬುದ್ದಿವಂತಿಕೆಯಿಂದ ಈ ವಾದವನ್ನು ಸಮರ್ಥಿಸಿಕೊಂಡರು. ಈ ಸಿದ್ದಾಂತವು ಜನರ ಗಮನವನ್ನು ಸೆಳೆಯಿತು. ಸಮಾಜ ಸುಧಾರಣೆಯ ಚಳವಳಿಗೆ ಏಕಮಾತ್ರ ಅಡ್ಡಿ ಯಾವುದಾದರೂ ಇದ್ದಿದ್ದರೆ ಅದು ರಾಜಕೀಯ ಸುಧಾರಣೆಯ ಕೂಗು. ಈ ಸಿದ್ಧಾಂತ ಅಸಮರ್ಥನೀಯ. ಈ ವಿಷಯದಲ್ಲಿ ರಾನಡೆಯವರ ವಿರೋಧಿಗಳು ತಪ್ಪು ಮಾಡಿದರಲ್ಲದೆ ಇದನ್ನು ಸಮರ್ಥಿಸಿಕೊಳ್ಳುವುದರ ಮೂಲಕ ಅವರು ದೇಶದ ಹಿತವನ್ನು ಕಡೆಗಣಿಸಿದರೆಂಬುದು ನಿಸ್ಸಂದೇಹ. ನ್ಯಾಯಮೂರ್ತಿ ಶ್ರೀ ತೆಲಂಗರವರು ರಾಜಕಾರಣಿಗಳ ಸಿದ್ಧಾಂತವನ್ನು ಸಮರ್ಥಿಸಿದ ಆಧಾರಗಳೇನೋ ತರ್ಕಬದ್ದವಾಗಿದ್ದವು. ಆದರೆ ಕೇವಲ ತರ್ಕ ನ್ಯಾಯಸಮ್ಮತವಲ್ಲ ಮತ್ತು ಸಾಮ್ಯವು ಪ್ರಮಾಣವಾಗಲಾರದೆಂಬುದನ್ನು ಅವರು ಸಂಪೂರ್ಣ ಮರೆತರು. ತೆಲಂಗರವರಿಗೆ ರಾನಡೆಯವರಿಗಿದ್ದ “ಸಾಮಾಜಿಕ” ಮತ್ತು “ರಾಜಕೀಯ”ಗಳ ನಡುವಣ ಅಂತಃಸಂಬಂಧದ ಬಗ್ಗೆ ಸರಿಯಾದ ಪರಿಕಲ್ಪನೆ ಇರಲಿಲ್ಲ. ಇನ್ನು ಅವರ ಸಿದ್ಧಾಂತದ ಆಧಾರಗಳನ್ನು ಪರಿಶೀಲಿಸೋಣ. ಅವರು ನೀಡಿದಂತಹ ಕಾರಣಗಳು ಅಥವಾ (ಪು. 252)

ಆಧಾರಗಳು ಅಷ್ಟು ಪ್ರಭಾವೀ ಕಾರಣಗಳಾಗಿರಲಿಲ್ಲ. ಆದರೆ ನಾನು ಅವರು ಹೇಳಿದ ಅತ್ಯಂತ ಪ್ರಭಾವಿ ಎನಿಸಿದ ತರ್ಕಗಳನ್ನು ಎದುರಿಸಲು ಸಿದ್ಧನಿದ್ದೇನೆ. ಆದಾಗ್ಯೂ ಅವರ ಸಿದ್ದಾಂತ ಅಸಮರ್ಥನೀಯ. ಈಗ ನಮೂದಿಸಲಾಗುವ ಆಧಾರಗಳು ಅತಿಪ್ರಮುಖವಾದವು ಎಂದು ನನಗನಿಸುತ್ತದೆ. ಮೊದಲನೆಯದಾಗಿ, ಜನತೆಯ ಹಕ್ಕುಗಳನ್ನು ಸಂರಕ್ಷಿಸುವುದಕ್ಕಾಗಿ ನನಗೆ ಮೊದಲು ರಾಜಕೀಯ ಅಧಿಕಾರದ ಅವಶ್ಯಕತೆ ಇದೆ ಎಂದು ಹೇಳಬಹುದು. ಈ ಉತ್ತರವು ಅಮೆರಿಕೆಯ ರಾಜಕೀಯ ಪಟು ಜೆಫರ್‌ಸನ್ ನೀಡಿದ ಅತಿ ಸೀಮಿತವಾದ ಸರಕಾರ ಸಿದ್ಧಾಂತವನ್ನು ಆಧರಿಸಿದೆ. ಜೆಫರಸನ್ ಅವರ ಪ್ರಕಾರ ರಾಜಕೀಯವು ಜನರ ಹಕ್ಕುಗಳನ್ನು ಅಬಾಧಿತವಾಗಿ ಉಳಿಸಿಕೊಂಡುಹೋಗುವ ರಾಜ್ಯದ ರಕ್ಷಕ ಕರ್ತವ್ಯ ಮಾತ್ರವೆನಿಸಿದೆ. ಈ ಸಿದ್ಧಾಂತವು ತರ್ಕಬದ್ಧವಾಗಿದೆ ಎಂದೇ ಇಟ್ಟುಕೊಳ್ಳೋಣ. ಆದರೆ ಹಕ್ಕುಗಳೇ ಇಲ್ಲದಿರುವಾಗ ರಾಜ್ಯಕ್ಕೆ ರಕ್ಷಿಸಲು ಉಳಿದಿರುವುದಾದರೂ ಏನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸಂರಕ್ಷಣೆಯ ಪ್ರಶ್ನೆ ಗಂಭೀರ ಸಂಗತಿಯಾಗಬೇಕಾದರೆ ಮೊದಲು ಹಕ್ಕುಗಳು ಲಭ್ಯವಿರಬೇಕು. ಸರಕಾರವು ವಿಶಿಷ್ಟ ಹಕ್ಕುಗಳನ್ನು ಹೊಂದಿರುವವರನ್ನು ಮಾತ್ರ ರಕ್ಷಿಸಬೇಕು ಮತ್ತು ಏನೂ ಇಲ್ಲದವರನ್ನು ಶಿಕ್ಷಿಸಬೇಕು ಎಂಬ ವಿಚಾರವನ್ನು ಮಾನ್ಯ ಮಾಡದೇ ಹೋದರೆ, ರಾಜಕೀಯ ಸುಧಾರಣೆ ಸಾಮಾಜಿಕ ಸುಧಾರಣೆಗಿಂತ ಮೊದಲಾಗಬೇಕೆಂಬ ಸಿದ್ಧಾಂತ ಅಸಂಬದ್ಧವಾಗುತ್ತದೆ. ಈ ಸಿದ್ದಾಂತದ ಪರವಾಗಿ ನೀಡಬಹುದಾದ ಎರಡನೆಯ ಆಧಾರವೆಂದರೆ ಪ್ರತಿಯೊಬ್ಬನಿಗೂ ಕಾನೂನಿನನ್ವಯ ಕೆಲ ಮೂಲಭೂತ ಹಕ್ಕುಗಳನ್ನು ನೀಡುವುದೇ ಆಗಿದೆ. ಮೊದಲು ರಾಜಕೀಯ ಅಧಿಕಾರವನ್ನು ಪಡೆಯದೇಹೋದರೆ ಅಂತಹ ಮೂಲಭೂತ ಹಕ್ಕುಗಳನ್ನು ನೀಡಲಾಗುವುದಿಲ್ಲ. ಇದೇನೋ ಬಹು ಸಮಂಜಸವೆನಿಸುತ್ತದೆ. ಆದರೆ ಈ ವಾದದಲ್ಲಿ ಏನಾದರೂ ತಿರುಳು ಇದೆಯೇ? ಅಮೆರಿಕೆಯ ಸಂವಿಧಾನದಲ್ಲಿ ಮತ್ತು ಕ್ರಾಂತಿಕಾರಿ ಫ್ರಾನ್ಸ್ ನ ಸಂವಿಧಾನದಲ್ಲಿ ಅವುಗಳನ್ನು ಅಳವಡಿಸಿದಾಗಿನಿಂದಲೂ ಮೂಲಭೂತ ಹಕ್ಕುಗಳ ವಿಚಾರ ಸುಪರಿಚಿತವಾಗಿದೆ. ಪ್ರತಿ ವ್ಯಕ್ತಿಗೂ ಮೂಲಭೂತ ಹಕ್ಕುಗಳ ವಿಚಾರ ಸುಪರಿಚಿತವಾಗಿದೆ. ಪ್ರತಿ ವ್ಯಕ್ತಿಗೂ ಮೂಲಭೂತ ಹಕ್ಕುಗಳನ್ನು ಉಡುಗೊರೆಯಾಗಿ ಕೊಡುವ ವಿಚಾರ ಪ್ರಶಂಸನೀಯವಾದದ್ದೆ. ಆದರೆ ಅವುಗಳನ್ನು ಪರಿಣಾಮಕಾರಿಯಾಗಿ ಮಾಡುವುದು ಹೇಗೆ ಎಂಬುದೇ ಪ್ರಶ್ನೆ. ಹಕ್ಕುಗಳನ್ನು ಒಮ್ಮೆ ಕಾನೂನಿನಲ್ಲಿ ವಿಧಿಸಿದರೆ ಅವುಗಳ ರಕ್ಷಣೆಯಾಗುವುದು ಎಂಬುದು ಪ್ರಚಲಿತ ಭಾವನೆ. ಇದೂ ಸಹ ಅಸಮರ್ಥನೀಯ ಪರಿಕಲ್ಪನೆ. ಹಕ್ಕುಗಳ ರಕ್ಷಣೆ ಕಾನೂನಿನಿಂದ ಆಗದೆ ಸಮಾಜದ ಸಾಮಾಜಿಕ ಮತ್ತು ನೈತಿಕ ಸದಸದ್ವಿವೇಕದಿಂದ ಮಾತ್ರ ಸಾಧ್ಯ. ಕಾನೂನು ವಿಧಿಸುವಂತಹ ಹಕ್ಕುಗಳನ್ನು ಸಾಮಾಜಿಕ ಸದಸದ್ವಿವೇಕವು ಮಾನ್ಯ ಮಾಡಲು ಸಿದ್ದವಿದ್ದರೆ ಹಕ್ಕುಗಳು ಸುರಕ್ಷಿತವಾಗಿರುತ್ತವೆ. ಆದರೆ ಮೂಲಭೂತ ಹಕ್ಕುಗಳನ್ನು ಸಮಾಜ ವಿರೋಧಿಸಿದ್ದಾದರೆ ಯಾವ ಕಾನೂನು, ಯಾವ ಸಂಸತ್ತೂ, ಯಾವ ನ್ಯಾಯಾಂಗವೂ ಕೂಡ ಅವುಗಳನ್ನು ನಿಜವಾದ ಸ್ವರೂಪದಲ್ಲಿ ರಕ್ಷಿಸಲಾರವು. ಅಮೆರಿಕಾದಲ್ಲಿ ಕಪ್ಪು ಜನಾಂಗದವರಿಗೆ ಜರ್ಮನಿಯಲ್ಲಿ ಯಹೂದಿಯರಿಗೆ, ಭಾರತದಲ್ಲಿ ಅಸ್ಪೃಶ್ಯರಿಗೆ ಮೂಲಭೂತ ಹಕ್ಕುಗಳಿಂದ ಆಗುವ ಪ್ರಯೋಜನವೇನು? ಬರ್ಕ್ ಹೇಳಿದಂತೆ ಇಡೀ ಜನಸ್ತೋಮವನ್ನು ದಂಡಿಸುವ ವಿಧಾನವೇ ಇಲ್ಲ. ಕಾನೂನು ಒಬ್ಬ, ಏಕೈಕ, ಅವಿಧೇಯ ಅಪರಾಧಿಯನ್ನು ಶಿಕ್ಷಿಸಬಲ್ಲದು. ಕಾನೂನನ್ನು ಮುರಿಯುವ ದೃಢ ನಿರ್ಧಾರಮಾಡಿದ ಇಡೀ ಜನಸಮೂಹದ ಮೇಲೆ ಅದು ಪರಿಣಾಮಕಾರಿಯಾಗಲಾರದು. ಕೊಲೆರಿಜ್‌ನ ಮಾತಿನಲ್ಲಿ ಹೇಳುವುದಾದರೆ ಸಾಮಾಜಿಕ ಸದಸದ್ವಿವೇಕ ಆತ್ಮದ ಶಾಂತ ಮತ್ತು ಭ್ರಷ್ಟಗೊಳಿಸಲಾಗದಂತಹ ವಿಧಾಯಕ ವಿರೋಧವನ್ನು ಒಡ್ಡಿದಾಗಲೇ ಮೂಲಭೂತ ಅಥವಾ ಇನ್ನಾವುದೇ ರೀತಿಯ ಹಕ್ಕುಗಳು ಸುರಕ್ಷಿತವಾಗುತ್ತವೆ. (ಪು. 253)

ರಾಜಕಾರಣಿಗಳ ಮೂರನೆಯ ತರ್ಕ ಸ್ವರಾಜ್ಯದ ಹಕ್ಕಿನ ಆಧಾರವನ್ನವಲಂಬಿಸಿದೆ. ಸ್ವರಾಜ್ಯವು ಸುರಾಜ್ಯಕ್ಕಿಂತ ಶ್ರೇಷ್ಠ ಎಂಬ ಕೂಗು ಸುಪರಿಚಿತ. ಒಂದು ಘೋಷಣೆಗೆ ಕೊಡುವುದಕ್ಕಿಂತ ಹೆಚ್ಚಿನ ಮಹತ್ವವನ್ನು ಈ ಮಾತಿಗೆ ಕೊಡಬೇಕಾಗಿಲ್ಲ. ಸ್ವರಾಜ್ಯವು ಸುರಾಜ್ಯವೂ ಆಗಿರಬೇಕೆಂಬುದೇ ಎಲ್ಲರ ಬಯಕೆ. ಮುತ್ಸದ್ದಿಗಳು ಒಳ್ಳೆಯ ಸರಕಾರ ಬಯಸಿದ್ದರೆಂಬುದರಲ್ಲಿ ಸಂದೇಹವಿಲ್ಲ. ಪ್ರಜಾಸತ್ತಾತ್ಮಕ ಸರಕಾರದ ರಚನೆಯೇ ಅವರ ಗುರಿಯಾಗಿತ್ತು. ಆದರೆ ಪ್ರಜಾಸತ್ತಾತ್ಮಕ ಪದ್ಧತಿಯ ಸರಕಾರದ ಸ್ಥಾಪನೆ ಸಾಧ್ಯವೇ? ಎಂದು ಅವರು ಯೋಚಿಸಲಿಲ್ಲ. ಅವರ ವಾದ ಅನೇಕ ತಪ್ಪುಗ್ರಹಿಕೆಗಳನ್ನು ಅವಲಂಬಿಸಿತ್ತು. ಸಾಮಾಜಿಕ ಪ್ರಜಾಸತ್ತೆ ಇಲ್ಲದೆ ಪ್ರಜಾಪ್ರಭುತ್ವದ ಕೇವಲ ಬಾಹ್ಯಾಕಾರವನ್ನು ಹೊಂದುವುದು ನಿಷ್ಪ್ರಯೋಜಕ. ಪ್ರಜಾಪ್ರಭುತ್ವ ಕೇವಲ ಸರಕಾರದ ಬಾಹ್ಯರೂಪವಲ್ಲ ಎಂಬುದನ್ನು ರಾಜಕಾರಣಿಗಳು ಅರಿತುಕೊಳ್ಳಲಿಲ್ಲ. ಅದು ಮೂಲತಃ ಸಮಾಜದ ಒಂದು ಪ್ರಕಾರ. ಪ್ರಜಾಸತ್ತಾತ್ಮಕ ಸಮಾಜವು ಒಕ್ಕಟ್ಟು, ಸಾಮೂಹಿಕ ಧೋರಣೆ, ಸಾರ್ವಜನಿಕ ಉದ್ದೇಶಗಳಿಗೆ ನಿಷ್ಠೆ ಮತ್ತು ಪರಸ್ಪರ ಸಹಾನುಭೂತಿ ಇವುಗಳನ್ನು ಹೊಂದಿರುವ ಅವಶ್ಯಕತೆ ಇಲ್ಲ. ಆದರೆ ಅದರಲ್ಲಿ ಅವಶ್ಯವಾಗಿ ಎರಡು ಅಂಶಗಳು ಅಡಕವಾಗಿವೆ. ಮೊದಲನೆಯದಾಗಿ, ಒಂದು ವಿಧದ ಮನೋಭಾವನೆ ತನ್ನ ಸಹಜೀವಿಗಳ ಬಗ್ಗೆ ಅದರ ಮತ್ತು ಸಮಾನತೆಯ ಮನೋಭಾವನೆ. ಎರಡನೆಯದಾಗಿ, ಕಠಿಣ ಸಾಮಾಜಿಕ ಅಡೆತಡೆಗಳಿಂದ ಮುಕ್ತವಾದ ಸಾಮಾಜಿಕ ವ್ಯವಸ್ಥೆ, ವಿಶೇಷಾಧಿಕಾರ ಉಳ್ಳವರು ಮತ್ತು ಇಲ್ಲದವರ ನಡುವೆ ಭಿನ್ನತೆ, ಪ್ರತ್ಯೇಕತೆ, ಬಹಿಷ್ಕಾರ ಮತ್ತು ಪ್ರಜಾಸತ್ತೆ ಇವು ಅಸಂಬದ್ದ. ರಾನಡೆಯವರ ವಿರೋಧಿಗಳು ಈ ಅಂಶದ ಸತ್ಯವನ್ನು ಅರ್ಥಮಾಡಿಕೊಳ್ಳದಿದ್ದುದು ದುರದೃಷ್ಟಕರ.

ಯಾವುದೇ ರೀತಿಯಲ್ಲಿ ಪರೀಕ್ಷೆ ಮಾಡಿದರೂ ಈ ವಿವಾದದಲ್ಲಿ ರಾನಡೆಯವರ ನಿಲುವು ಮತ್ತು ಅವರ ಯೋಜಿತ ಕಾರ್ಯಗಳು ಸೂಕ್ತವೂ ಮೂಲಭೂತವೂ ಆಗಿದ್ದವು. ಮಾನವನ ನೈತಿಕ ಪ್ರಜ್ಞೆಗೆ ನಿಲುಕುವಂತಹ ಯಾವುದೇ ರೀತಿಯ ಹಕ್ಕುಗಳು ಹಿಂದೂ ಸಮಾಜದಲ್ಲಿರಲಿಲ್ಲ. ಕೆಲವೇ ಜನರಿಗೆ ವಿಶೇಷ ಸೌಲಭ್ಯಗಳು ಮತ್ತು ಅನೇಕರಿಗೆ ನಿಷೇಧಗಳು ಮಾತ್ರ ಇದ್ದವು. ರಾನಡೆಯವರು ಹಕ್ಕುಗಳನ್ನು ಕಲ್ಪಿಸಿಕೊಡುವುದಕ್ಕಾಗಿ ಹೋರಾಡಿದರು. ಅವರು ಮರಣಾವಸ್ಥೆಯಲ್ಲಿದ್ದ ಹಿಂದೂ ಸಮಾಜದ ಅಂತಃಪ್ರಜ್ಞೆಯನ್ನು ಪುನಃಶ್ವೇತನಗೊಳಿಸಬಯಸಿದ್ದರು. ರಾನಡೆಯವರು ನಿಶ್ಚಿತವಾದ ಮತ್ತು ಸುಭದ್ರ ರಾಜಕೀಯಕ್ಕೆ ಅವಶ್ಯವೆನಿಸಿದ ನಿಜವಾದ ಸಾಮಾಜಿಕ ಪ್ರಜಾತಂತ್ರವನ್ನು ಸ್ಥಾಪಿಸುವ ಧ್ಯೇಯವನ್ನು ಹೊಂದಿದ್ದರು. ಒಂದು ರಾಷ್ಟ್ರದ ಉಳಿವಿಗೆ ರಾಜಕೀಯ ಸ್ವಾತಂತ್ರ್ಯ ಅವಶ್ಯವೋ ಅಥವಾ ಶಕ್ತಿಯುತ ನೈತಿಕ ಸತ್ಯ ಅವಶ್ಯವೋ ಎಂಬ ಎರಡು ಪರಸ್ಪರ ವಿರೋಧಿ ಅಭಿಪ್ರಾಯಗಳ ನಡುವೆ ಸಂಘರ್ಷಣೆಯುಂಟಾಗಿತ್ತು. ಇತಿಹಾಸದ ಜಾಗರೂಕ ಮತ್ತು ತುಲನಾತ್ಮಕ ಅಧ್ಯಯನದ ಫಲವಾಗಿ ಪ್ರಸಿದ್ಧ ಇತಿಹಾಸಕಾರ ಲೆಕಿ ತನ್ನ ಅಭಿಪ್ರಾಯವನ್ನು ಹೀಗೆ ವ್ಯಕ್ತಪಡಿಸಿದ್ದನು:

“ಒಂದು ರಾಷ್ಟ್ರದ ಬಲ ಮತ್ತು ಅಭಿವೃದ್ಧಿ ಅದರ ಶುದ್ಧಜೀವನ, ವ್ಯಾವಹಾರಿಕ ಪ್ರಾಮಾಣಿಕತೆ, ಉನ್ನತ ಮಟ್ಟದ ನೈತಿಕ ಸಾಮರ್ಥ್ಯ, ಸಾರ್ವತ್ರಿಕ ಅಂತಃಕರಣ, ಸರಳ ರೂಢಿಗಳು, ಧೈರ್ಯ, ಸತ್ಯಸಂಧತೆ ಮತ್ತು ಒಳ್ಳೆಯ ಗುಣ ಹಾಗೂ ಬುದ್ದಿಮತ್ತೆಯಿಂದ ಉಗಮಿಸುವ ಸರಿಯಾದ ಮತ್ತು ಸಮಾಧಾನದ ನಿರ್ಣಯಗಳನ್ನೇ ಅವಲಂಬಿಸಿರುತ್ತವೆ. ಒಂದು ರಾಷ್ಟ್ರದ ಭವಿಷ್ಯದ ಬಗ್ಗೆ ನೀವು ಬುದ್ಧಿವಂತಿಕೆಯ ನಿರ್ಣಯವನ್ನು ತೆಗೆದುಕೊಳ್ಳಬೇಕಾದರೆ, ಜನತೆಯಲ್ಲಿ ಸದ್ಗುಣಗಳು ಹೆಚ್ಚುತ್ತಿವೆಯೇ ಅಥವಾ ಕ್ಷೀಣವಾಗುತ್ತಿವೆಯೇ ಎಂಬುದನ್ನು ಎಚ್ಚರಿಕೆಯಿಂದ ಗಮನಿಸಿ ಮತ್ತು ಸಾರ್ವಜನಿಕ ಜೀವನದಲ್ಲಿ ಯಾವ ಗುಣಗಳು ಪ್ರಧಾನವಾಗಿವೆ ಎಂಬುದನ್ನು ಎಚ್ಚರಿಕೆಯಿಂದ ವೀಕ್ಷಿಸಿ. ಶೀಲದ ಮಹತ್ವ ಹೆಚ್ಚುತ್ತಿದೆಯೇ (ಪು. 254)

ಅಥವಾ ಕಡಿಮೆಯಾಗುತ್ತಿದೆಯೇ? ರಾಷ್ಟ್ರದಲ್ಲಿ ಅತ್ಯುನ್ನತ ಸ್ಥಾನಗಳನ್ನು ಪಡೆಯುವ ಜನರ ವಿಷಯವಾಗಿ ಖಾಸಗಿ ಜೀವನದಲ್ಲಿ ಪಕ್ಷಭೇದವಿಲ್ಲದ ಸಮರ್ಥ ಜನರು ಅತ್ಯಂತ ಜವಾಬ್ದಾರಿಯಿಂದ ಮಾತನಾಡುತ್ತಿದ್ದಾರೆಯೇ? ಆ ಜನರು ದೃಢ ನಂಬಿಕೆಗಳ ಸುಸಂಗತ ಜೀವನದ ಹಾಗೂ ನಿರ್ವಿವಾದವಾದ ಪ್ರಾಮಾಣಿಕತೆಯುಳ್ಳ ವ್ಯಕ್ತಿಗಳೇ? ಈ ವಿಚಾರಧಾರೆಯನ್ವಯವೇ ಒಂದು ರಾಷ್ಟ್ರದ ಜಾತಕವನ್ನು ನೀವು ರಚಿಸಬಹುದು.”

ರಾನಡೆಯವರು ಬುದ್ಧಿವಂತರಷ್ಟೇ ಅಲ್ಲ, ತರ್ಕಬದ್ದರೂ ಆಗಿದ್ದರು. ಅವರು ತಮ್ಮ ವಿರೋಧಿಗಳಿಗೆ ಏಕಕಾಲದಲ್ಲಿ ರಾಜಕೀಯ ತೀವ್ರಗಾಮಿಗಳು ಮತ್ತು ಸಾಮಾಜಿಕ ಸಂಪ್ರದಾಯವಾದಿಗಳಾಗಿರುವವರ ವಿರುದ್ಧ ಈ ಕೆಳಗಿನ ಸ್ಪಷ್ಟ ಮತ್ತು ತಪ್ಪು ಅಭಿಪ್ರಾಯಕ್ಕೆಡೆಯಾಗದ ಮಾತುಗಳಲ್ಲಿ ಎಚ್ಚರಿಸಿದರು:

“ನೀವು ಭಾಗಶಃ ಉದಾರವಾದಿಗಳಾಗಿರಲು ಸಾಧ್ಯವಿಲ್ಲ. ನೀವು ರಾಜಕೀಯದಲ್ಲಿ ಉದಾರವಾದಿಗಳಾಗಿದ್ದು ಧರ್ಮದಲ್ಲಿ ಸಂಪ್ರದಾಯವಾದಿಗಳಾಗಿರಲು ಆಗದು. ಬುದ್ದಿ-ಭಾವಗಳು ಜೊತೆಜೊತೆಯಾಗಿ ಸಾಗಬೇಕು. ಏಕಕಾಲದಲ್ಲಿ ನಿಮ್ಮ ಮನಸ್ಸನ್ನು ಸಂಕುಚಿತಗೊಳಿಸಿಕೊಂಡು ನಿಮ್ಮ ಬೌದ್ಧಿಕ ಬೆಳವಣಿಗೆಯನ್ನು ಬೆಳೆಸಿಕೊಳ್ಳಲಾರಿರಿ. ನಿಮ್ಮ ಮನಸ್ಸನ್ನು ಸಮೃದ್ಧಿಸಿಕೊಳ್ಳಲಾರಿರಿ. ನಿಮ್ಮ ರಾಜಕೀಯ ಹಕ್ಕುಗಳು ಮತ್ತು ಸವಲತ್ತುಗಳ ವ್ಯಾಪ್ತಿಯನ್ನು ವಿಶಾಲಗೊಳಿಸಿಕೊಳ್ಳಲಾರಿರಿ. ಯಾರು ತಮ್ಮ ಆಳರಸರಿಂದ ಹಕ್ಕುಗಳನ್ನು ಮತ್ತು ಸವಲತ್ತುಗಳನ್ನು ಪಡೆದುಕೊಳ್ಳಲು ಹೋರಾಡುತ್ತಿರುವರೋ ಅಂಥವರು ತಮ್ಮ ಮೂಢನಂಬಿಕೆಗಳು ಮತ್ತು ಸಾಮಾಜಿಕ ಅನಿಷ್ಟಗಳ ಸರಪಳಿಗಳಿಂದ ಬಂಧಿತರಾಗಿರಬೇಕೆಂಬುದು ನಿರರ್ಥಕ ಕನಸು. ಅನತಿದೂರದಲ್ಲಿ ಇಂತಹ ನಿರರ್ಥಕ ಕನಸುಗಳು ಹುಸಿಯಾಗಲಿವೆ.”

ರಾನಡೆಯವರ ಈ ಮಾತುಗಳು ಸತ್ಯ ಮಾತ್ರವಾಗಿರದೆ ಭವಿಷ್ಯವಾಣಿಯಂತಿದ್ದವು ಎಂಬುದು ಅನುಭವವೇದ್ಯವಾಗಿದೆ. ಈ ಮಾತನ್ನು ಅಲ್ಲಗಳೆಯುವವರು ಈ ಅಂಶಗಳನ್ನು ಪರಿಶೀಲಿಸಬೇಕು. ನಾವು ರಾಜಕೀಯದಲ್ಲಿ ಯಾವ ಸ್ಥಿತಿಯಲ್ಲಿದ್ದೇವೆ ಮತ್ತು ಅದಕ್ಕೆ ಕಾರಣಗಳೇನು? ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾಗಿ ೫೦ ವರ್ಷಗಳಾದವು. ಅದರ ನಾಯಕತ್ವದ ಹಸ್ತಾಂತರವಾಗಿದೆ. ಅದು ವಿವೇಕಿಗಳಿಂದ ಅವಿವೇಕಿಗಳ ಕೈಗೆ ಹೋಗಿದೆ. ಅಥವಾ ವಾಸ್ತವಿಕತಾವಾದಿಗಳ ಕೈಯಿಂದ ಆದರ್ಶವಾದಿಗಳ ಕೈಗೆ ಹೋಗಿದೆ ಎಂದು ನಾನು ಹೇಳುತ್ತಿಲ್ಲ. ಆದರೆ ಅದು ಸೌಮ್ಯವಾದಿಗಳಿಂದ ಉಗ್ರವಾದಿಗಳ ಕೈಗೆ ಹೋಗಿದೆ. ೫೦ ವರ್ಷಗಳ ರಾಜಕೀಯ ಮುನ್ನಡೆಯ ನಂತರ ದೇಶ ಯಾವ ಸ್ಥಿತಿಯಲ್ಲಿದೆ? ಈ ಬಿಕ್ಕಟ್ಟಿಗೆ ಕಾರಣವೇನು? ಉತ್ತರ ಸರಳವಾಗಿದೆ. ಕೋಮುವಾರು ಇತ್ಯರ್ಥವಿಲ್ಲದಿರುವುದೇ ಈ ಬಿಕ್ಕಟ್ಟಿಗೆ ಕಾರಣ. ರಾಜಕೀಯ ಇತ್ಯರ್ಥಕ್ಕೆ ಕೋಮುವಾರು ಇತ್ಯರ್ಥದ ಅವಶ್ಯಕತೆ ಏನಿದೆ ಎಂಬ ಪ್ರಶ್ನೆಯನ್ನು ನೀವು ಹಾಕಿಕೊಂಡಾಗ, ರಾನಡೆಯವರ ನಿಲುವಿನ ಮೂಲಭೂತ ಮಹತ್ವದ ಅರಿವು ಉಂಟಾಗುತ್ತದೆ. ಈ ಪ್ರಶ್ನೆಗೆ ಉತ್ತರ ನಮ್ಮ ಅಪ್ರಜಾಪ್ರಭುತ್ವವಾದಿ, ಪಟ್ಟಭದ್ರ ವರ್ಗಗಳ ಪರವಾದ ಮತ್ತು ಸಾಮಾನ್ಯ ಜನತೆಯ ವಿರೋಧಿ ವರ್ಗಪ್ರಜ್ಞೆ ಮತ್ತು ಕೋಮುವಾರು ಭಾವನೆಯ ದೋಷಪೂರ್ಣ ಸಾಮಾಜಿಕ ವ್ಯವಸ್ಥೆಯಲ್ಲಿ ಸಿಗುತ್ತದೆ. ಇಂತಹ ಅಡಿಪಾಯದ ಮೇಲೆ ಕಟ್ಟಲಾದ ರಾಜಕೀಯ ಪ್ರಜಾಪ್ರಭುತ್ವ ಸಂಪೂರ್ಣ ವಿಪರ್ಯಾಸವೆನಿಸುತ್ತದೆ. ಆದ್ದರಿಂದಲೇ ಸವರ್ಣಹಿಂದೂಗಳನ್ನು ಬಿಟ್ಟರೆ ಇನ್ನಾರೂ ಗಂಭೀರ ಹೊಂದಾಣಿಕೆಗಳ ವಿನಾ ರಾಜಕೀಯ ಪ್ರಜಾಪ್ರಭುತ್ವ ಸ್ಥಾಪನೆಗೆ ಒಪ್ಪುವುದಿಲ್ಲ. ಈ ಜಾತೀಯ ಬಿಕ್ಕಟ್ಟು, ಬ್ರಿಟಿಷ್ ಸರಕಾರದ ಸೃಷ್ಟಿ ಎಂದು ಕೆಲವರು ಸಮಾಧಾನ ಪಟ್ಟುಕೊಳ್ಳಬಹುದು. ಕೆಲವರು ತಮಗೆ ಆಪ್ಯಾಯಮಾನವಾದ ವಿಚಾರಗಳನ್ನಷ್ಟೇ ಮುಂದಿಟ್ಟು, ಜವಾಬ್ದಾರಿಯನ್ನು ಬೇರೆಯವರ ಮೇಲೆ ಹಾಕಬಹುದು. ಇದು ಪಲಾಯನ ಮನೋಭಾವ. ಆದರೆ ಜಾತೀಯ ಅಥವಾ ಕೋಮುವಾರು ಬಿಕ್ಕಟ್ಟು ನಮ್ಮ ಸಾಮಾಜಿಕ ವ್ಯವಸ್ಥೆಯ ದೋಷಗಳಿಂದ (ಪು. 255)

ಉದ್ಭವಿಸಿದ್ದೆಂದು ಮತ್ತು ಅದು ಭಾರತವು ರಾಜಕೀಯ ಅಧಿಕಾರ ಪಡೆಯುವ ಹಾದಿಯಲ್ಲಿ ಅಡ್ಡಿಯಾಗಿದೆಯೆಂಬ ಅಂಶವನ್ನು ಅಲ್ಲಗಳೆಯಲಾಗದು.

ರಾನಡೆಯವರ ಉದ್ದೇಶ ಹೊಸ ವ್ಯವಸ್ಥೆಯ ನಿರ್ಮಾಣವಾಗಿರದಿದ್ದರೂ, ಹಳೆಯ ವ್ಯವಸ್ಥೆಯನ್ನು ಸುಧಾರಿಸುವುದಾಗಿತ್ತು. ಹಿಂದೂ ಸಮಾಜದ ನೈತಿಕ ಬಲವನ್ನು ಹೆಚ್ಚಿಸುವುದಕ್ಕೆ ಅವರು ಒತ್ತು ಕೊಟ್ಟಿದ್ದರು. ಅವರ ಮಾತುಗಳನ್ನು ನಾವು ಕೇಳಿ ಪಾಲಿಸಿದ್ದ ಪಕ್ಷದಲ್ಲಿ ಈ ವ್ಯವಸ್ಥೆಯ ಪ್ರಖರತೆ ಮತ್ತು ಕಾಠಿಣ್ಯ ತುಸುವಾದರೂ ಕಡಿಮೆಯಾಗುತ್ತಿತ್ತು. ಅದು ಜಾತೀಯ ಬಿಕ್ಕಟ್ಟನ್ನು ನಿವಾರಿಸದೇ ಇದ್ದರೂ ಅದರ ನಿವಾರಣೆ ಸುಲಭವಾಗಬಹುದಿತ್ತು. ಎಷ್ಟೇ ಸೀಮಿತವಾಗಿದ್ದರೂ ಅದರ ಪ್ರಯತ್ನಗಳು ಪರಸ್ಪರ ವಿಶ್ವಾಸಕ್ಕೆ ದಾರಿಮಾಡಿಕೊಡುತ್ತಿದ್ದವು. ಆದರೆ ರಾಜಕೀಯ ಅಧಿಕಾರದಾಹ ರಾಜಕಾರಣಿಗಳನ್ನು ಇತರ ಯಾವ ವಿಷಯಕ್ಕೂ ಮನಸ್ಸು ಕೊಡಲಾರದಷ್ಟು ಕುರುಡರನ್ನಾಗಿ ಮಾಡಿತ್ತು. ರಾನಡೆಯವರು ತಮ್ಮ ಸೇಡು ತೀರಿಸಿಕೊಂಡರು. ರಾಜಕೀಯ ರಕ್ಷಣೆಯನ್ನು ಕೊಡಮಾಡಿದ್ದು ಸಾಮಾಜಿಕ ಸುಧಾರಣೆಯ ಅವಶ್ಯಕತೆಯನ್ನು ನಿರಾಕರಿಸಿದ್ದಕ್ಕಾಗಿ ತೆತ್ತ ದಂಡವಲ್ಲವೇ?

ರಾನಡೆಯವರು ಪ್ರಬಲವಾದ ಪಾತ್ರವನ್ನಾಡಿದ ಕ್ಷೇತ್ರದಲ್ಲಿ ಸಾಧಿಸಿದುದೆಷ್ಟು? ಒಂದು ಅರ್ಥದಲ್ಲಿ ಈ ಪ್ರಶ್ನೆಯೇ ಅಷ್ಟು ಪ್ರಧಾನವಲ್ಲ. ಸಾಧನೆ ಶ್ರೇಷ್ಠತೆಯ ಅಳತೆಗೋಲಲ್ಲ, ಕಾರ್ಲೈಲ್ ಹೇಳಿದಂತೆ:

“ಅಯ್ಯೋ! ಆದರ್ಶಗಳನ್ನು ಯಾವಾಗಲೂ ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಎಂಬುದನ್ನು ನಾವು ಬಲ್ಲೆವು. ಆದರ್ಶಗಳು ನಿಲುಕಲಾರದಷ್ಟು ದೂರವಿರಬೇಕು. ಸಾಧ್ಯವಿದ್ದಷ್ಟು ಅವುಗಳ ಸಮೀಪ ಹೋಗುವುದರಿಂದಲೇ ನಾವು ಕೃತಕೃತ್ಯ ತೃಪ್ತಿಹೊಂದಬೇಕು” ಫಿಲರ್ ಹೇಳಿರುವಂತೆ: ಈ ನಮ್ಮ ಬಡ ಪ್ರಪಂಚದಲ್ಲಿ ಸಿಟ್ಟಿನಿಂದ “ವಾಸ್ತವಿಕತೆಯ ಪರಿಣಾಮವನ್ನು ಪರಿಪೂರ್ಣತೆಯ ಆಳತೆಗೋಲಿನಿಂದ ಅಳೆಯದಿರಲಿ.” ಅಂತಹವರನ್ನು ನಾವು ಬುದ್ದಿವಂತನೆಂದು ಪರಿಗಣಿಸಲಾರೆವು. ಅವನನ್ನು ರೋಗಗ್ರಸ್ತ, ಅತೃಪ್ತ, ಮೂರ್ಖನೆಂದೇ ನಾವು ಪರಿಗಣಿಸುತ್ತೇವೆ. ಆದಾಗ್ಯೂ ರಾನಡೆಯವರ ಸಾಧನೆ ಮತ್ತು ಸಿದ್ದಿ ಸಂಪೂರ್ಣವಾಗಿ ಬರಿದಾಗಿರಲಿಲ್ಲ. ರಾಯ್ ಬಹಾದ್ದೂರ್ ಪಿ ಆನಂದಾಚಾರಿಯವರು ಸಮಾಜ ಸುಧಾರಣೆಯ ಬಗ್ಗೆ ತಯಾರಿಸಿದ ತಮ್ಮ ಹೇಳಿಕೆಯಲ್ಲಿ ಆಗ ಸಮಾಜಸುಧಾರಕರು ಎದುರಿಸಬೇಕಾಗಿದ್ದ ಈ ಐದು ಸಮಸ್ಯೆಗಳನ್ನು ಗುರುತಿಸಿದ್ದರು:

೧. ಬಾಲ್ಯವಿವಾಹ: ೨. ವಿಧವಾವಿವಾಹ; ೩. ನಮ್ಮ ದೇಶಬಾಂಧವರು ಪ್ರವಾಸ ಮಾಡಲು ಅಥವಾ ವಿದೇಶಗಳಲ್ಲಿ ವಾಸಮಾಡುವ ಸ್ವಾತಂತ್ರ್ಯ: ೪. ಸ್ತ್ರೀಯರಿಗೆ ಆಸ್ತಿ ಹಕ್ಕು ಮತ್ತು; ೫. ಸ್ತ್ರೀ ಶಿಕ್ಷಣ. ಈ ಕಾರ್ಯಕ್ರಮಗಳಲ್ಲಿ ಅವರು ಹೆಚ್ಚು ಭಾಗ ಸಾಧಿಸಿದ್ದರು. ಇವೆಲ್ಲವನ್ನು ಅವರು ಸಾಧಿಸಲಾಗದಿರುವುದಕ್ಕೆ ಅವರ ವಿರುದ್ಧ ಅನೇಕ ಅಡಚಣೆಗಳಿದ್ದವು ಎಂಬುದನ್ನು ಮರೆಯಬಾರದು. ಬುದ್ದಿಶಾಲಿ, ದೃಢನಿಶ್ಚಿತ ಮತ್ತು ಅಪ್ರಾಮಾಣಿಕ ಬುದ್ದಿಜೀವಿಗಳ ತಂಡ ಸಂಪ್ರದಾಯವನ್ನು ರಕ್ಷಿಸಲು ಮತ್ತು ರಾನಡೆಯವರನ್ನು ಪ್ರತಿಭಟಿಸಲು ಮುಂದಾಯಿತು. ಪರಿಸ್ಥಿತಿ ಯುದ್ಧಸಾದೃಶ ಘೋರ ರೂಪ ತಾಳಿತು. ಅದು ಯುದ್ಧವೇ ಆಗಿತ್ತು. ಈ ದೇಶದಲ್ಲಿ ಸಾಮಾಜಿಕ ಸುಧಾರಣೆಯ ವಿವಾದದ ಅಲೆ ಎದ್ದಾಗ ಉಂಟಾಗಿದ್ದ ಪರಿಸ್ಥಿತಿಯ ಕಲ್ಪನೆಯನ್ನೂ ಸಹ ಈಗ ಯಾರೂ ಮಾಡಲಾರರು, ಸಂಪ್ರದಾಯವಾದಿ ವರ್ಗ ಸಮಾಜಸುಧಾರಕರ ವಿರುದ್ದ ಆಗ ಉಪಯೋಗಿಸಿದ ಬೈಗಳು, ನಿಂದೆಗಳು, ಅಪವಾದಗಳನ್ನು ಸಭ್ಯತೆಯ ಕಾರಣ ಉಚ್ಚರಿಸಲಾಗದು. ಸಮ್ಮತಿಯ ವಯೋಮಸೂದೆ (Age of Consent Bill)ಯ ಪರವಾಗಿದ್ದ ಪುರೋಹಿತಶಾಹಿಯನ್ನು ಪುರಸ್ಕರಿಸಿ ಬರೆದಂತಹ ಲೇಖನಗಳನ್ನು ಓದಿದರೆ ಜನನಾಯಕರೆಂದು ಕರೆಸಿಕೊಂಡವರು ಯಾವ (ಪು. 256)

ಮಟ್ಟಕ್ಕೆ ಇಳಿದಿದ್ದರೆಂಬುದು ಅರ್ಥವಾಗುತ್ತದೆ. ಒಬ್ಬ ಗಂಡ ೧೨ ವರ್ಷ ತುಂಬದ ತನ್ನ ಹೆಂಡತಿಯೊಡನೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇ ಆದರೆ ಅವನನ್ನು ಶಿಕ್ಷಿಸುವುದು ಈ ಮಸೂದೆಯ ಉದ್ದೇಶವಾಗಿತ್ತು. ಬುದ್ದಿನೆಟ್ಟಗಿರುವ ಹುಚ್ಚು ಪುರೋಹಿತಶಾಹಿಯ ವಿರೋಧವನ್ನು ಎದುರಿಸಬೇಕಾಯಿತು. ರಾನಡೆಯವರು ಸಾಧಿಸಿದ್ದು ಸ್ವಲ್ಪ ಎಂದು ಒಪ್ಪಿಕೊಂಡರೂ, ಅವರು ಇನ್ನೂ ಹೆಚ್ಚು ಸಾಧಿಸಲಾರದ್ದಕ್ಕೆ ಯಾರು ಆನಂದ ಪಡಬೇಕು? ಆನಂದಪಡುವುದಕ್ಕೆ ಕಾರಣವಿರಲಿಲ್ಲ. ಸಮಾಜ ಸುಧಾರಣೆಯ ಅವನತಿ ಸಹಜವಾಗಿತ್ತು. ಸಮಾಜ ಸುಧಾರಣೆಯ ಬಗ್ಗೆ ದ್ವೇಷ ಅತಿ ಹೆಚ್ಚಾಗಿತ್ತು. ರಾಜಕೀಯ ಅಧಿಕಾರದ ಕರೆ ಅತ್ಯಂತ ಆಕರ್ಷಕವಾಗಿತ್ತು. ಇದರ ಪರಿಣಾಮವಾಗಿ ಸಮಾಜ ಸುಧಾರಣೆಗೆ ಅಂಟಿಕೊಂಡಿದ್ದವರು ಕೆಲವೇ ಜನರಿದ್ದರು. ಕಾಲಕ್ರಮೇಣ ಸಮಾಜ ಸುಧಾರಣಾ ಸಮಾವೇಶನವನ್ನು ತೊರೆದು ಜನತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಡೆ ಹೆಚ್ಚು ಸಂಖ್ಯೆಯಲ್ಲಿ ನುಗ್ಗತೊಡಗಿತು. ಸಮಾಜ ಸುಧಾರಕರ ಮೇಲೆ ರಾಜಕಾರಣಿಗಳು ಮೇಲ್ಗೈ ಸಾಧಿಸಿದರು. ಅವರ ಜಯ ಹೆಮ್ಮೆಯ ವಿಷಯವಾಗಿತ್ತೆಂದು ಯಾರೂ ಈಗ ಒಪ್ಪುವುದಿಲ್ಲವೆಂಬುದು ನನಗೆ ಗೊತ್ತು. ಅದು ನಿಜವಾಗಿಯೂ ವಿಷಾದಕರ ಸಂಗತಿ. ರಾನಡೆಯವರು ಸಂಪೂರ್ಣವಾಗಿ ಗೆಲುವಿನ ಪಕ್ಷದ ಕಡೆ ಇರಲಿಕ್ಕಿಲ್ಲ. ಆದರೆ ಅವರು ತಪ್ಪುದಾರಿಯಲ್ಲಿರಲಿಲ್ಲ. ಮತ್ತು ಅವರ ಕೆಲ ವಿರೋಧಿಗಳಂತೆ ಅವರು ಯಾವಾಗಲೂ ತಪ್ಪು ದಾರಿಯಲ್ಲಂತೂ ಇರಲಿಲ್ಲ.

8

ರಾನಡೆಯವರನ್ನು ಇತರರೊಡನೆ ಯಾವ ರೀತಿ ಹೋಲಿಸಬಹುದು? ಹೋಲಿಕೆಗಳು ಯಾವಾಗಲೂ ಜುಗುಪ್ಸೆ ಮತ್ತು ಅಹಿತಕರ. ಆದಾಗ್ಯೂ, ಹೋಲಿಕೆಗಿಂತ ಇನ್ನಾವುದೇ ವಿಧಾನ ಹೆಚ್ಚು ಬೆಳಕು ಚೆಲ್ಲಲಾರದು. ಆದರೆ ಅದು ಬೋಧಪ್ರದವೂ ಮತ್ತು ಕುತೂಹಲಕಾರಿಯಾಗಬೇಕಾದರೆ ಸದೃಶ ವ್ಯಕ್ತಿಗಳ ಹೋಲಿಕೆ ಮಾಡಬೇಕೆಂಬ ಅಂಶವನ್ನು ನೆನಪಿಡಬೇಕು. ರಾನಡೆಯವರು ಸಮಾಜ ಸುಧಾರಕರಾಗಿದ್ದರು. ಆದ್ದರಿಂದ ಅವರನ್ನು ಇತರ ಸಮಾಜ ಸುಧಾರಕರೊಡನೆ ಹೋಲಿಸುವುದು ಉಪಯುಕ್ತ. ರಾನಡೆಯವರನ್ನು ಜ್ಯೋತಿಬಾ ಫುಲೆಯವರೊಡನೆ ಹೋಲಿಸುವುದು ಅತ್ಯಂತ ಬೋಧಪ್ರದವೆನಿಸುವುದು. ಫುಲೆಯವರು ೧೮೨೭ರಲ್ಲಿ ಜನಿಸಿ ೧೮೯೦ರಲ್ಲಿ ನಿಧನರಾದರು. ರಾನಡೆಯವರು ೧೮೪೨ರಲ್ಲಿ ಜನಿಸಿ ೧೯೦೧ರಲ್ಲಿ ನಿಧನರಾದರು. ಆದ್ದರಿಂದ ಪುಲೆ ಮತ್ತು ರಾನಡೆಯವರು ಸಮಕಾಲೀನರಾಗಿದ್ದು, ಇಬ್ಬರೂ ಅಗ್ರಶ್ರೇಣಿಯ ಸಮಾಜ ಸುಧಾರಕರಾಗಿದ್ದರು. ರಾನಡೆಯವರು ರಾಜಕಾರಣಿಗಳಾಗಿರಲಿಲ್ಲವೆಂಬ ಕಾರಣಕ್ಕಾಗಿ ರಾನಡೆಯವರನ್ನು ಇತರ ರಾಜಕಾರಣಿಗಳೊಡನೆ ಹೋಲಿಸುವ ವಿಚಾರವನ್ನು ಕೆಲವರು ಆಕ್ಷೇಪಿಸಬಹುದು. ರಾನಡೆಯವರು ರಾಜಕಾರಣಿಗಳಾಗಿರಲಿಲ್ಲವೆಂದು ಹೇಳುವುದು ರಾಜಕಾರಣ ಪದಕ್ಕೆ ಅತ್ಯಂತ ಸೀಮಿತ ಮತ್ತು ಸಂಕುಚಿತವಾದ ಅರ್ಥವನ್ನು ಕೊಟ್ಟಂತಾಗುತ್ತದೆ. ರಾಜಕಾರಣಿಯಾದವನು ಕೇವಲ ರಾಜಕಾರಣದಲ್ಲಿ ಮಾತ್ರ ನಿರತನಾಗಿರುವುದಿಲ್ಲ. ಅವನು ರಾಜಕೀಯ ಪದ್ಧತಿ ಮತ್ತು ಅದು ಸೂಕ್ಷ್ಮಾರ್ಥದ ಮೇಲೆ ತನ್ನದೇ ಆದ ನಂಬುಗೆ, ವಿಶ್ವಾಸವನ್ನು ಹೊಂದಿದವನಾಗಿರುತ್ತಾನೆ. ರಾನಡೆಯವರು ತಮ್ಮದೇ ಆದ ವಿಧಾನ ಹಾಗೂ ಸೂಕ್ಷ್ಮಾರ್ಥದಲ್ಲಿ ವಿಶಿಷ್ಟವಾದಂತಹ ರಾಜಕೀಯ ಪ್ರಣಾಳಿಕೆಯ ಸಂಸ್ಥಾಪಕರಾಗಿದ್ದರು. ಈ ಅರ್ಥದಲ್ಲಿ ಅವರು ರಾಜಕಾರಣಿಗಳಾಗಿದ್ದರು. ಆದ್ದರಿಂದ ಅವರನ್ನು ಇತರ ರಾಜಕಾರಣಿಗಳೊಡನೆ ಹೋಲಿಸಬಹುದು. ಸಮಾಜ ಸುಧಾರಕರೊಡನೆ ಮತ್ತು ರಾಜಕಾರಣಿಗಳೊಡನೆ ಅವರ ಹೋಲಿಕೆ (ಪು. 257)

ಬೋಧಪ್ರದವಾಗಬಲ್ಲದು ಮತ್ತು ಅಂತಹ ಹೋಲಿಕೆಗಾಗಿ ಸಾಕಷ್ಟು ವಿಷಯಗಳಿವೆ. ಸಮಯ ಮತ್ತು ಅಭಿರುಚಿ ನಿಜವಾದ ಪ್ರಶ್ನೆಯಾಗಿದೆ. ರಾನಡೆಯವರನ್ನು ಸಮಾಜ ಸುಧಾರಕರು ಮತ್ತು ರಾಜಕಾರಣಿಗಳೊಡನೆ ವ್ಯಾಪಕವಾಗಿ ಹೋಲಿಕೆ ಮಾಡಲು ಸಮಯವಿಲ್ಲ. ಆದ್ದರಿಂದ ಅವರನ್ನು ಪ್ರತ್ಯೇಕವಾಗಿ ಸಮಾಜ ಸುಧಾರಕರೊಡನೆಯಾಗಲೀ ಅಥವಾ ರಾಜಕಾರಣಿಗಳೊಡನೆಯಾಗಲೀ ಹೋಲಿಸಬೇಕಾಗುತ್ತದೆ. ಇದು ಅಭಿರುಚಿಯ ವಿಷಯ. ನನ್ನ ಮಟ್ಟಿಗೆ ಹೇಳುವುದಾದರೆ ಈಗಿರುವ ಸಮಯದಲ್ಲಿ ರಾನಡೆಯವರನ್ನು ಫುಲೆಯವರೊಡನೆ ಹೋಲಿಸಬಯಸಿದ್ದೆ. ಏಕೆಂದರೆ ನನ್ನ ಅಭಿಪ್ರಾಯದಲ್ಲಿ ರಾಜಕೀಯ ಸುಧಾರಣೆಗಿಂತ ಸಮಾಜ ಸುಧಾರಣೆ ಹೆಚ್ಚು ಮೂಲಭೂತವಾದದ್ದು. ನನ್ನ ಅಭಿರುಚಿ ಮತ್ತು ಸಭಿಕರ ಅಭಿರುಚಿಗಳಲ್ಲಿ ಭಿನ್ನತೆ ಇರುವುದು ದುರದೃಷ್ಟಕರ. ಆದರೆ ಸಭಿಕರನ್ನು ಈ ಸಭೆಯಲ್ಲಿ ಕೂರಿಸಿಕೊಳ್ಳಲು ನನ್ನ ಬಯಕೆಗಿಂತ ಅವರ ಬೇಕು ಬೇಡಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಸಮಾಜ ಸುಧಾರಣೆಯ ಉಗ್ರತೆ ಈಗ ತಣ್ಣಗಾಗಿದೆ. ರಾಜಕೀಯದ ಹುಚ್ಚು ಭಾರತೀಯರನ್ನು ತನ್ನ ಮುಷ್ಟಿಯಲ್ಲಿ ಹಿಡಿದಿಟ್ಟಿದೆ. ರಾಜಕೀಯದ ಗೀಳು ಜನತೆಯನ್ನು ಅಂಟಿಕೊಂಡಿದ್ದು ಜನತೆ ಅದನ್ನು ಸವಿದಷ್ಟೂ ಅದರ ಹಂಬಲ ಹೆಚ್ಚುತ್ತಲೇಹೋಗುತ್ತದೆ. ನಾನು ಈಗ ಮಾಡಲಿರುವ ಕೆಲಸ ಅತ್ಯಂತ ಅಹಿತಕರವಾದದ್ದು. ಅದನ್ನು ಮಾಡಲು ನಾನು ಮುಂದಾಗಿರುವುದಕ್ಕೆ ಕಾರಣವೆಂದರೆ ರಾನಡೆಯವರ ರಾಜಕೀಯ ಸಿದ್ದಾಂತ ಮತ್ತು ಇಂದಿನ ರಾಜಕಾರಣಿಗಳಲ್ಲಿ ಅವರ ಸ್ಥಾನವನ್ನು ಪರಿಪೂರ್ಣವಾಗಿ ಪ್ರತಿಪಾದಿಸುವುದು ಮತ್ತು ಅದರ ಮಹತ್ವವನ್ನು ಜನತೆಗೆ ಸ್ಪಷ್ಟವಾಗಿ ತಿಳಿಸುವುದು ನನ್ನ ಕರ್ತವ್ಯವೆಂದು ನಾನು ಭಾವಿಸಿದ್ದೇನೆ.

ರಾನಡೆಯವರೊಡನೆ ಹೋಲಿಸಬೇಕಾದ ಇಂದಿನ ರಾಜಕಾರಣಿಗಳು ಯಾರು? ರಾನಡೆಯವರು ತಮ್ಮ ಕಾಲದ ಮಹಾನ್ ರಾಜಕಾರಣಿಗಳಾಗಿದ್ದರು. ಆದ್ದರಿಂದ ಅವರನ್ನು ಇಂದಿನ ಅತ್ಯಂತ ಶ್ರೇಷ್ಠ ರಾಜಕಾರಣಿಗಳೊಡನೆಯೇ ಹೋಲಿಸಬೇಕಾಗುತ್ತದೆ. ಭಾರತದಲ್ಲಿ ಕ್ಷಿತಿಜದಲ್ಲಿ ಇಂದು ಇಬ್ಬರು ಮಹಾನ್ ರಾಜಕಾರಣಿಗಳಿದ್ದಾರೆ. ಅವರು ಎಷ್ಟು ದೊಡ್ಡವರೆಂದರೆ ಹೆಸರಿಸದೇ ಅವರನ್ನು ಗುರುತಿಸಬಹುದು-ಅವರೇ ಗಾಂಧಿ ಮತ್ತು ಜಿನ್ನಾ. ಅವರು ಯಾವ ರೀತಿಯ ಇತಿಹಾಸವನ್ನು ನಿರ್ಮಿಸಲಿದ್ದಾರೆಂಬುದು ಮುಂದಿನ ತಲೆಮಾರುಗಳು ಹೇಳಬೇಕಾದ ವಿಷಯ. ನಮ್ಮ ಮಟ್ಟಿಗೆ, ಅವರು ಪತ್ರಿಕೆಗಳಲ್ಲಿ ಅಗ್ರಪಂಕ್ತಿಯಲ್ಲಿರುತ್ತಾರೆಂಬುದು ನಿರ್ವಿವಾದ. ಅವರು ಮುಂಚೂಣಿಯಲ್ಲಿದ್ದು, ಸೂತ್ರ ಅವರ ಕೈಯಲ್ಲಿದೆ. ಒಬ್ಬರು ಹಿಂದೂಗಳ ನಾಯಕರಾಗಿದ್ದರೆ, ಇನ್ನೊಬ್ಬರು ಮುಸಲ್ಮಾನರ ನಾಯಕರಾಗಿದ್ದಾರೆ. ಅವರು ಇಂದಿನ ವೀರರು ಮತ್ತು ದೇವತಾ ಸ್ವರೂಪರಾಗಿದ್ದಾರೆ. ಇವರನ್ನು ರಾನಡೆಯವರೊಡನೆ ಹೋಲಿಸಬಯಸುತ್ತೇನೆ. ಇವರು ರಾನಡೆಯವರೊಡನೆ ಯಾವ ರೀತಿ ಹೋಲುತ್ತಾರೆ? ಈಗಾಗಲೇ ನಮಗೆ ಸುಪರಿಚಿತವಾಗಿರುವ ಅವರ ಮನೋಧರ್ಮ ಮತ್ತು ವಿಧಾನಗಳ ವಿಷಯದಲ್ಲಿ ಎರಡು ಮಾತು ಹೇಳುವುದು ಅವಶ್ಯ. ಅವು ಉಪಯುಕ್ತವೇ ಇರಲಿ ಅಥವಾ ಇಲ್ಲದಿರಲಿ ಈ ವಿಷಯದಲ್ಲಿ ನನ್ನ ಅನಿಸಿಕೆಗಳನ್ನು ಮಾತ್ರ ಹೇಳಬಯಸುತ್ತೇನೆ. ಅವರ ಬಗ್ಗೆ ನನಗೆ ಹೊಳೆದ ಮೊಟ್ಟ ಮೊದಲನೆಯ ವಿಷಯವೆಂದರೆ: ಅವರಿಗೆ ತಮ್ಮ ಅಸಮಾನ್ಯ ಸ್ವಾಭಿಮಾನ ಮತ್ತು ಸ್ವಯಂ ಆಧಿಪತ್ಯವೇ ಸರ್ವಸ್ವವಾಗಿದ್ದು ದೇಶದ ಉದ್ದೇಶವನ್ನು ಕೇವಲ ಚದುರಂಗದಾಟವನ್ನಾಗಿಸಿಕೊಂಡಂತಹ ಇವರಿಬ್ಬರನ್ನು ಮೀರಿಸುವ ಇನ್ನೊಬ್ಬ ವ್ಯಕ್ತಿ ಸಿಗಲಾರ. ಇವರು ಭಾರತದ ರಾಜಕೀಯವನ್ನು ತಮ್ಮ ವೈಯಕ್ತಿಕ ವಿವಾದವನ್ನಾಗಿ ಮಾಡಿಕೊಂಡಿದ್ದಾರೆ. ಇದರ ದುಷ್ಪರಿಣಾಮದ ಅರಿವು ಅವರಿಗಿಲ್ಲ. ಅದು ಸಂಭವಿಸುವವರೆಗೂ ಇವರಿಗೆ ಅದರ ಅರಿವೇ ಉಂಟಾಗುವುದಿಲ್ಲ. ಪರಿಣಾಮಗಳು ಸಂಭವಿಸಿದಾಗ ಇವರಿಗೆ ಅದರ ಕಾರಣಗಳ ನೆನಪು (ಪು. 258)

ಉಂಟಾಗುವುದಿಲ್ಲ; ಉಂಟಾದಾಗ ಅದನ್ನು ಅವರು ಸಂತೃಪ್ತ ದೃಷ್ಟಿಯಿಂದ ಕಡೆಗಣಿಸುತ್ತಾರೆ. ಇದು ಅವರನ್ನು ಪಶ್ಚಾತ್ತಾಪದಿಂದ ಪಾರುಮಾಡುತ್ತದೆ. ಅವರು ಪ್ರತ್ಯೇಕತೆಯ ಭವ್ಯಪೀಠದ ಮೇಲೆ ನಿಂತಿದ್ದಾರೆ. ತಮ್ಮ ಸರಿಸಮಾನಸ್ಕರಿಂದ ತಾವೇ ಪ್ರತ್ಯೇಕತೆಯ ಗೋಡೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಅವರು ತಮಗಿಂತ ಕಡಿಮೆ ಮಟ್ಟದ ಜನರೊಡನೆ ಬೆರೆಯಲು ಬಯಸುತ್ತಾರೆ. ಟೀಕೆಯಿಂದ ಅಸಂತೋಷಗೊಳ್ಳುತ್ತಾರೆ. ಮತ್ತು ಅದನ್ನು ಸಹಿಸುವ ತಾಳ್ಮೆ ಅವರಿಗಿಲ್ಲ. ಅವರು ಹೊಗಳುಭಟ್ಟರ ಲಲ್ಲೆಯಿಂದ ಸಂತುಷ್ಟರಾಗುತ್ತಾರೆ. ಇಬ್ಬರಿಗೂ ಎಲ್ಲಿ ಹೋದರೂ ತಾವೇ ಮುಂದಿರುವಂತೆ ವ್ಯವಸ್ಥೆ ಮಾಡಿಕೊಳ್ಳುವ ತಂತ್ರ ಚೆನ್ನಾಗಿ ಗೊತ್ತು. ಇವರಿಬ್ಬರಲ್ಲಿ ಪ್ರತಿಯೊಬ್ಬರೂ ತಾನೇ ಶ್ರೇಷ್ಠ ಎಂದು ಕರೆದುಕೊಳ್ಳುತ್ತಾರೆ. ಶ್ರೇಷ್ಠತೆಯೊಂದೇ ಅವರ ವಾದವಾಗಿದ್ದರೆ ಅಷ್ಟೇನೂ ಆಶ್ಚರ್ಯವಾಗುತ್ತಿರಲಿಲ್ಲ. ಶ್ರೇಷ್ಠತೆಯೂ ಅಲ್ಲದೇ ತಾವು ಎಂದೂ ತಪ್ಪು ಮಾಡುವವರಲ್ಲ ಎಂಬ ಭಾವನೆಯನ್ನು ಇವರು ತಳೆದಿದ್ದಾರೆ. ಒಂಬತ್ತನೆಯ ಪೋಪ್ ಪಯಸ್‌ನ ಪವಿತ್ರ ಆಡಳಿತದ ಕಾಲದಲ್ಲಿ ತಪ್ಪಿಗವಕಾಶವಿಲ್ಲದ ಪೋಪನ ಗುಣಗಳ ಚರ್ಚೆ ನಡೆದಾಗ ಪೋಪ್ ಪಯಸ ಹೇಳಿದಂತೆ: “ನಾನು ಪೋಪ್ ಆಗುವ ಮುನ್ನ ನನಗೆ ಪೋಪನು ತಪ್ಪು ಮಾಡಲಾರ ಎಂಬ ನಂಬುಗೆ ಇತ್ತು. ಈಗ ನಾನು ಅದನ್ನು ಅನುಭವಿಸುತ್ತಿದ್ದೇನೆ.” ದೇವರು ಮೈಮರೆತ ಘಳಿಗೆಯಲ್ಲಿ ನಮ್ಮ ನಾಯಕರನ್ನಾಗಿ ನೇಮಿಸಿದ ಈ ಇಬ್ಬರು ಮಹಾಶಯರ ಮನೋಭಾವನೆಯೂ ಇದೇ ರೀತಿಯದಾಗಿದೆ. ಇವರ ಶ್ರೇಷ್ಠತೆಯ ಮತ್ತು ಎಂದೂ ತಪ್ಪು ಮಾಡಲಾರದ ಭಾವನೆಗೆ ಪತ್ರಿಕೆಗಳು ಪುಷ್ಟಿಕೊಟ್ಟಿವೆ. ಹೀಗೆ ಹೇಳದೇ ವಿಧಿಯಿಲ್ಲ. ನಾರ್ಥಕ್ಲಿಫ್ ಮಾದರಿಯ ಪತ್ರಿಕೋದ್ಯಮವನ್ನು ಕುರಿತು ಗಾರ್ಡಿನರ್ ಹೇಳಿದ ಮಾತುಗಳು, ನನ್ನ ಅಭಿಪ್ರಾಯದಲ್ಲಿ, ಭಾರತದ ಪತ್ರಿಕೋದ್ಯಮಕ್ಕೆ ಅತ್ಯಂತ ಸಮಂಜಸವೆನಿಸುತ್ತವೆ. ಭಾರತದಲ್ಲಿ ಒಮ್ಮೆ ಪತ್ರಿಕೋದ್ಯಮವು ಒಂದು ವೃತ್ತಿಯಾಗಿತ್ತು. ಈಗ ಅದು ವ್ಯಾಪಾರವಾಗಿದೆ. ಸಾಬೂನನ್ನು ಉತ್ಪಾದಿಸುವುದಕ್ಕಿಂತಲೂ ಹೆಚ್ಚಿನ ನೈತಿಕ ಹೊಣೆ ಅದಕ್ಕಿಲ್ಲ. ಅದು ತನ್ನನ್ನು ಸಾರ್ವಜನಿಕರಿಗೆ ಬೋಧನೆ ಮಾಡುವ ಜವಾಬ್ದಾರಿಯುತ ಸಾಧನ ಎಂದು ತಿಳಿದುಕೊಂಡೇ ಇಲ್ಲ. ನಿಷ್ಪಕ್ಷಪಾತವಾದ ಸುದ್ದಿಯನ್ನು ಕೊಡುವುದು, ಸಮಾಜದ ಹಿತದೃಷ್ಟಿಯಿಂದ ಸಾರ್ವಜನಿಕ ನೀತಿಯನ್ನು ಜನತೆಯ ಮುಂದೆ ಮಂಡಿಸುವುದು, ಎಷ್ಟೇ ದೊಡ್ಡವರಿದ್ದರೂ ತಪ್ಪು ಮಾರ್ಗದಲ್ಲಿ ಹೋಗುತ್ತಿರುವವರನ್ನು ನಿರ್ಭಯವಾಗಿ ಖಂಡಿಸುವುದು ಮುಂತಾದವುಗಳನ್ನು ತನ್ನ ಆದ್ಯ ಕರ್ತವ್ಯವೆಂದು ಭಾರತದ ಪತ್ರಿಕೋದ್ಯಮ ಅರಿತುಕೊಂಡಿಲ್ಲ. ಒಬ್ಬ ವ್ಯಕ್ತಿಯನ್ನು ಆಯ್ದುಕೊಂಡು ಅವನ ಮೂರ್ತಿಪೂಜೆ ಮಾಡುವುದೇ ತನ್ನ ಪ್ರಮುಖ ಕರ್ತವ್ಯವೆಂದು ಅದು ತಿಳಿದುಕೊಂಡಿದೆ. ಅದರಲ್ಲಿ ಸುದ್ದಿಯ ಬದಲು ಭಾವೋದ್ರೇಕದ ವಿಷಯಗಳಿರುತ್ತವೆ, ವಿಚಾರಪೂರಿತ ಅಭಿಪ್ರಾಯದ ಬದಲು ಅವೈಚಾರಿಕ ಉದ್ರೇಕವಿರುತ್ತದೆ. ಬೇಜಾವಾಬ್ದಾರಿ ಜನರ ಭಾವೋದ್ರೇಕವನ್ನು ಕೆರಳಿಸಲು ಜವಾಬ್ದಾರಿಯುತ ಜನರ ಭಾವನೆಗಳನ್ನು ಉದ್ರೇಕಿಸುವ ಪ್ರವೃತ್ತಿಯೇ ಕಂಡುಬರುತ್ತದೆ. ಈ ನಾರ್ಥ್‌ ಕ್ಲಿಫ್ ಮಾದರಿಯ ಪತ್ರಿಕೋದ್ಯಮವನ್ನು ಲಾರ್ಡ್‌ ಸ್ಯಾಲಿಸಓರಿಯವರು ಇದು ಕಚೇರಿಯ ಹುಡುಗರು ಕಚೇರಿಯ ಹುಡುಗರಿಗಾಗಿ ಬರೆದ ಪತ್ರಿಕೋದ್ಯಮ ಎಂದು ಕರೆದರು. ಭಾರತದ ಪತ್ರಿಕೋದ್ಯಮ ಇದೇ ರೀತಿಯದಾಗಿದ್ದು ಅದರಲ್ಲಿ ಇನ್ನೂ ಹೆಚ್ಚಿನ ಸಂಗತಿಯೊಂದಿದೆ. ಅದೇನೆಂದರೆ, ತಮ್ಮ ನಾಯಕರ ಜಯಜಯಕಾರಮಾಡಲು ತಮಟೆಬಾರಿಸುವ ಹುಡುಗರು ಅದರಲ್ಲಿ ಬರೆಯುತ್ತಾರೆ. ನಾಯಕ ಪೂಜೆಗಾಗಿಯೇ ದೇಶದ ಹಿತವನ್ನು ಹಿಂದೆಂದೂ ಇಷ್ಟು ಅವಿವೇಕತನದಿಂದ ಕಡೆಗಣಿಸಲಾಗಿರಲಿಲ್ಲ. ಭಾರತದಲ್ಲಿ ನಾಯಕಪೂಜೆಯನ್ನು ಇಂದು ಕಾಣುವಷ್ಟು ಕುರುಡಾಗಿ ಎಂದೂ ಆಚರಿಸಿರಲಿಲ್ಲ. ಇದಕ್ಕೆ ಕೆಲವು ಗೌರವಯುತ ಅಪವಾದಗಳಿರುವುದು ಸಂತೋಷದ ಸಂಗತಿ. ಆದರೆ ಅಂತಹವರು ಕೆಲವೇ ಜನರಿದ್ದು (ಪು. 259)

ಅವರನ್ನು ಯಾರೂ ಕೇಳುವವರಿಲ್ಲ. ಪತ್ರಿಕೆಗಳ ಪ್ರಶಂಸೆ ಮತ್ತು ಜಯಘೋಷಗಳಲ್ಲಿ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡಿರುವ ಈ ಇಬ್ಬರು ಮಹನೀಯರು ಪ್ರದರ್ಶಿಸುತ್ತಿರುವ ಪ್ರಾಬಲ್ಯದ ಭಾವನೆ ಮಿತಿಮೀರಿದೆ. ತಮ್ಮ ಪ್ರಾಬಲ್ಯದಿಂದ ಅವರು ತಮ್ಮ ಅನುಯಾಯಿಗಳನ್ನು ಮತ್ತು ರಾಜಕೀಯವನ್ನು ಭ್ರಷ್ಟಗೊಳಿಸಿದ್ದಾರೆ. ತಮ್ಮ ವರ್ತನೆಯಿಂದ ಅವರು ಅರ್ಧದಷ್ಟು ಅನುಯಾಯಿಗಳನ್ನು ಮೂರ್ಖರನ್ನಾಗಿ ಮಾಡಿದ್ದಾರೆ. ಇನ್ನರ್ಧ ಜನರನ್ನು ಕಪಟಿಗಳನ್ನಾಗಿಸಿದ್ದಾರೆ. ತಮ್ಮ ಅಧಿಕ್ಯವನ್ನು ಸ್ಥಾಪಿಸಿಕೊಳ್ಳುವಲ್ಲಿ ಅವರು ಹಣವಂತರ ಮತ್ತು ಬೃಹತ್ ವ್ಯಾಪಾರಿಗಳ ಸಹಾಯ ಪಡೆದಿದ್ದಾರೆ. ಪ್ರಪ್ರಥಮವಾಗಿ ನಮ್ಮ ದೇಶದಲ್ಲಿ ಹಣವು, ವ್ಯವಸ್ಥಿತ ಅಧಿಕಾರದ ಸ್ಥಾನ ಪಡೆದಿದೆ. ಅಮೆರಿಕದ ಅಧ್ಯಕ್ಷ ರೂಸ್‌ವೆಲ್ಟರು ತಮ್ಮ ದೇಶದ ಸಾರ್ವಜನಿಕರೆದುರು ಮಂಡಿಸಿದ ಪ್ರಶ್ನೆಗಳು ಈಗಾಗಲೇ ಉದ್ಭವಿಸಿರದಿದ್ದಲ್ಲಿ ಇನ್ನಾದರೂ ಇಲ್ಲಿಯೂ ಉದ್ಭವಿಸುತ್ತವೆ; ಯಾರು ಆಳತಕ್ಕದ್ದು – ಸಂಪತ್ತೋ ಅಥವಾ ವ್ಯಕ್ತಿಯೋ? ಯಾವುದು ಮುನ್ನಡೆಸತಕ್ಕದ್ದು-ಹಣವೋ ಅಥವಾ ಬುದ್ಧಿಯೋ? ಸಾರ್ವಜನಿಕ ಅಧಿಕಾರಸ್ಥಾನಗಳನ್ನು ಯಾರು ಅಲಂಕರಿಸತಕ್ಕದ್ದು-ಸುಶಿಕ್ಷಿತ, ದೇಶಭಕ್ತ, ಸ್ವತಂತ್ರ ವ್ಯಕ್ತಿಗಳೋ ಅಥವಾ ವ್ಯಕ್ತಿರೂಪ ಸಾಂಸ್ಥಿಕ ಬಂಡವಾಳದ ಊಳಿಗಮಾನ್ಯ ಜೀತದಾಳೋ? ಸದ್ಯದ ಪರಿಸ್ಥಿತಿಯಲ್ಲಿ ಭಾರತದ ರಾಜಕೀಯವು ಅದರಲ್ಲಿಯೂ ಹಿಂದೂಗಳ ರಾಜಕೀಯವು ಆಧ್ಯಾತ್ಮಿಕಗೊಳ್ಳುವುದರ ಬದಲು ಸಂಪೂರ್ಣವಾಗಿ ವ್ಯಾಪಾರೀ ಮನೋಭಾವ ಬೆಳೆಸಿಕೊಂಡಿದೆ. ಅದು ಎಲ್ಲಿಯವರೆಗೆ ಹೋಗಿದೆ ಎಂದರೆ ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರಾಗಿದೆ. ಸುಸಂಸ್ಕೃತರಾದ ಅನೇಕ ವ್ಯಕ್ತಿಗಳು ಈ ಹೊಲಸಿನೊಡನೆ ಸಂಪರ್ಕವನ್ನು ಹೊಂದಲು ನಿರಾಕರಿಸಿದ್ದಾರೆ. ರಾಜಕೀಯವು ಒಂದು ಚರಂಡಿಯಾಗಿದ್ದು ಅದು ಅಸಹ್ಯ ಮತ್ತು ಅನಾರೋಗ್ಯಕರವಾಗಿದೆ. ರಾಜಕಾರಣಿಯಾಗುವುದೆಂದರೆ ಕೊಳಚೆಯಲ್ಲಿ ಕೆಲಸಮಾಡಲು ಹೋದಂತೆ. ಈ ಇಬ್ಬರು ಮಹನೀಯರ ಕೈಯಲ್ಲಿ ರಾಜಕಾರಣವು ಅತಿರೇಕದ ಸ್ಪರ್ಧೆಯಾಗಿದೆ. ಶ್ರೀಯುತ ಗಾಂಧಿ ಮಹಾತ್ಮನೆಂದು ಕರೆಸಿಕೊಂಡರೆ, ಶ್ರೀಯುತ ಜಿನ್ನಾ ಅವರನ್ನು ಖಾಯಿದೆ ಆಝಮ್ ಎಂದು ಕರೆಯಬೇಕು. ಗಾಂಧಿಯವರ ಕೈಯಲ್ಲಿ ಕಾಂಗ್ರೆಸ್ ಇದ್ದರೆ, ಜಿನ್ನಾರವರಿಗೆ ಮುಸ್ಲಿಂ ಲೀಗ್ ಇದೆ. ಕಾಂಗ್ರೆಸ್‌ನಲ್ಲಿ ಕಾರ್ಯಕಾರಿ ಸಮಿತಿ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಇದ್ದರೆ, ಮುಸ್ಲಿಂ ಲೀಗ್‌ನಲ್ಲೂ ಕಾರ್ಯಕಾರಿಣಿ ಮತ್ತು ಅದರ ಸಮಿತಿ ಇರಬೇಕು. ಕಾಂಗ್ರೆಸ್ ಅಧಿವೇಶನದ ನಂತರ ಲೀಗ್ ಸಹ ಅದನ್ನನುಸರಿಸಿ ತನ್ನ ಹೇಳಿಕೆ ನೀಡಬೇಕು. ಕಾಂಗ್ರೆಸ್ ೧೭,೦೦೦ ಪದಗಳ ಠರಾವನ್ನು ಪಾಸು ಮಾಡಿದರೆ, ಮುಸ್ಲಿಂ ಲೀಗಿನ ಠರಾವು ಇದಕ್ಕಿಂತ ಕೊನೆಪಕ್ಷ ಒಂದು ಸಾವಿರ ಪದಗಳಷ್ಟು ಹೆಚ್ಚಿರಬೇಕು. ಕಾಂಗ್ರೆಸ್ ಅಧ್ಯಕ್ಷರು ಪತ್ರಿಕಾ ಗೋಷ್ಠಿಯನ್ನು ಕರೆದರೆ, ಮುಸ್ಲಿಂ ಲೀಗಿನ ಅಧ್ಯಕ್ಷರೂ ಕರೆಯಬೇಕು. ಕಾಂಗ್ರೆಸ್ ಸಂಯುಕ್ತ ರಾಷ್ಟ್ರಸಂಘಕ್ಕೆ ಮನವಿಯನ್ನು ಕಳುಹಿಸಿದರೆ, ಲೀಗ್ ಹಿಂದೆ ಬೀಳಬಾರದು. ಇದಕ್ಕೆಲ್ಲಾ ಕೊನೆ ಎಂದು? ಒಪ್ಪಂದ ಯಾವಾಗ? ಸದ್ಯದ ಭವಿಷ್ಯತ್ತಿನಲ್ಲಿ ಒಪ್ಪಂದದ ಸಾಧ್ಯತೆ ಇಲ್ಲ. ಕೆಲವು ಅಸಂಬದ್ಧ ಕರಾರುಗಳಿಲ್ಲದೆ ಅವರು ಭೆಟ್ಟಿಯಾಗುವುದಿಲ್ಲ. ಗಾಂಧಿ ತಾನು ಹಿಂದೂ ಎಂಬುದನ್ನು ಒಪ್ಪಿಕೊಳ್ಳಬೇಕೆಂದು ಜಿನ್ನಾ ಒತ್ತಾಯಪಡಿಸುತ್ತಾರೆ. ಜಿನ್ನಾ ತಾನು ಮುಸಲ್ಮಾನ ಮುಖಂಡರಲ್ಲೊಬ್ಬ ಎಂಬುದನ್ನು ಒಪ್ಪಿಕೊಳ್ಳಬೇಕೆಂದು ಗಾಂಧಿ ಒತ್ತಾಯಪಡಿಸುತ್ತಾರೆ. ಭಾರತದ ಈ ಇಬ್ಬರು ಮುಖಂಡರುಗಳಲ್ಲಿ ಕಂಡುಬರುವಂತಹ ರಾಜಕೀಯ ದಿವಾಳಿತನ ಎಂದೆಂದೂ ಕಂಡುಬಂದಿರಲಿಲ್ಲ. ಪ್ರತಿಯೊಂದನ್ನೂ ವಿರೋಧಿಸುವುದನ್ನೇ ತಮ್ಮ ಕಸುಬನ್ನಾಗಿ ಮಾಡಿಕೊಂಡಿರುವ ಯಾವುದನ್ನೂ ಒಪ್ಪಿಕೊಳ್ಳದ ಮತ್ತು ಸಮಯಕ್ಕೆ ತಕ್ಕಂತೆ ಮಾತನಾಡುವ ವಕೀಲರುಗಳಂತೆ, ಇವರಿಬ್ಬರೂ ದೀರ್ಘವಾದ; ಕೊನೆಯಿಲ್ಲದ ಉಪನ್ಯಾಸಗಳನ್ನು ಮಾಡುತ್ತಿದ್ದಾರೆ. ಬಿಕ್ಕಟ್ಟಿನ ನಿವಾರಣೆಗೆ ಯಾವುದೇ (ಪು. 260)

ಸೂಚನೆ ಮಾಡಿದ್ದರೂ ಅವರ ಶಾಶ್ವತವಾದ ‘ನಕಾರ’ ಉತ್ತರ ದೊರೆಯುವುದು. ಇಬ್ಬರಲ್ಲಿ ಯಾರೊಬ್ಬರೂ ಸಮಸ್ಯೆಗಳಿಗೆ ಯಾವುದೇ ಶಾಶ್ವತವಾದ ಸಲಹೆಯನ್ನು ಪರಿಶೀಲಿಸುವುದಿಲ್ಲ. ಇವರಿಬ್ಬರ ನಡುವೆ ಭಾರತದ ರಾಜಕೀಯವು, ಬ್ಯಾಂಕುಗಳಲ್ಲಿ, ಪ್ರಚಲಿತವಿರುವ ಮಾತಿನಲ್ಲಿ ಹೇಳುವುದಾದರೆ, ‘ಹೆಪ್ಪುಕಟ್ಟಿಕೊಂಡಿದೆ’ ಆದ್ದರಿಂದ ಯಾವ ರಾಜಕೀಯ ಕ್ರಿಯೆಯೂ ಸಾಧ್ಯವಿಲ್ಲ.

ಇವರಿಬ್ಬರೊಡನೆ ಹೋಲಿಸಿದಾಗ ರಾನಡೆಯವರು ಯಾವ ರೀತಿ ಕಾಣುತ್ತಾರೆ? ಆ ಕುರಿತು ಹೇಳಲು ನನ್ನ ಮೇಲೆ ಯಾವುದೇ ರೀತಿಯ ಪ್ರಭಾವವನ್ನೂ ಅವರು ಬೀರಿಲ್ಲ. ಬೇರೆಯವರು ಅವರ ಬಗ್ಗೆ ಬರೆದಿರುವುದನ್ನು ಓದಿ, ಅವರು ಹೇಗಿದ್ದಿರಬಹುದೆಂದು ಹೇಳಬಲ್ಲೆ. ಅವರಲ್ಲಿ ದುರಭಿಮಾನ ಎಳ್ಳಷ್ಟೂ ಇರಲಿಲ್ಲ. ತಮ್ಮ ಅಗಾಧ ಬೌದ್ಧಿಕ ಸಾಧನೆಗಳಿಂದ ಅವರು ಹೆಮ್ಮೆಪಡಬಹುದಾಗಿತ್ತು. ಅಷ್ಟೇ ಏಕೆ ದುರಹಂಕಾರಿಯೂ ಆಗಬಹುದಾಗಿತ್ತು. ಆದರೆ ಅವರು ಅತ್ಯಂತ ವಿನಯಶೀಲರೂ, ನಿಗರ್ವಿಗಳೂ ಆಗಿದ್ದರು. ಶ್ರದ್ಧಾಳುಗಳಾದ ಯುವಕರು ಅವರ ಪಾಂಡಿತ್ಯ ಮತ್ತು ಸ್ನೇಹಸ್ವಭಾವಗಳಿಗೆ ಮಾರುಹೋಗಿದ್ದರು. ಈ ಗೌರವಾನ್ವಿತ ಗುರುವಿನ ಉದಾತ್ತ ಪ್ರಭಾವಕ್ಕೊಳಗಾದ ಯುವಕರು ತಮ್ಮ ಇಡೀ ಜೀವನವನ್ನು ರೂಪಿಸಿಕೊಂಡರು. ಅವರು ಮೂರ್ಖರ ಹೊಗಳಿಕೆಗಳಿಂದ ತೃಪ್ತರಾಗಲಿಲ್ಲ. ತಮ್ಮ ಸರಿಸಮಾನಸ್ಕರ ಮಧ್ಯದಲ್ಲಿ ನಿರ್ಭಯರಾಗಿ ಒಡನಾಡುತ್ತಿದ್ದರು ಮತ್ತು ಅದರನ್ವಯ ಕೊಡಕೊಳ್ಳುವ ತತ್ವವನು ಪರಿಪಾಲಿಸುತ್ತಿದ್ದರು. ತಾವು ಅಂತರ್ವಾಣಿಯಿಂದ ಮಾರ್ಗದರ್ಶನ ಪಡೆಯುವ ಯೋಗಿ ಅಥವಾ ಆಧ್ಯಾತ್ಮಿ ಎಂದು ಎಂದೂ ಹೇಳಿಕೊಳ್ಳಲಿಲ್ಲ. ಅವರು ತಮ್ಮ ವಿಚಾರಗಳನ್ನು ವೈಚಾರಿಕತೆ ಮತ್ತು ಅನುಭವಗಳ ಒರೆಗೆ ಹಚ್ಚಿಕೊಳ್ಳಲು ಸದಾ ಸಿದ್ಧರಾದ ವೈಚಾರಿಕರಾಗಿದ್ದರು. ಅವರ ಶ್ರೇಷ್ಠತೆ ಸಹಜವಾದುದಾಗಿತ್ತು. ಯಾವುದೇ ರಂಗಭೂಮಿ ಅಥವಾ ವಿಲಕ್ಷಣವಾದ ಯಾವುದೇ ತಂತ್ರ ಅಥವಾ ದೇಣಿಗೆ ಪಡೆಯುವ ಪತ್ರಿಕೆಗಳ ಅವಶ್ಯಕತೆ ಅವರಿಗಿರಲಿಲ್ಲ. ನಾನು ಈಗಾಗಲೇ ಹೇಳಿರುವಂತೆ ರಾನಡೆಯವರು ಮೂಲತಃ ಒಬ್ಬ ಸಮಾಜಸುಧಾರಕರಾಗಿದ್ದರು. ಅವರದ್ದು ರಾಜಕೀಯದಲ್ಲಿ ವ್ಯವಹಾರ ಕುದುರಿಸಿಕೊಳ್ಳುವ ಪ್ರವೃತ್ತಿಯಾಗಿರಲಿಲ್ಲ. ಆದರೆ, ಅವರು ಭಾರತದ ರಾಜಕೀಯ ಪ್ರಗತಿಯಲ್ಲಿ ಸಾಕಷ್ಟು ಮಹತ್ವದ ಪಾತ್ರವನ್ನು ನಿಭಾಯಿಸಿದರು. ಕೆಲವು ರಾಜಕಾರಣಿಗಳಿಗೆ ಅವರು ಗುರುವಾಗಿದ್ದರು. ಅಂತಹ ರಾಜಕಾರಣಿಗಳು ತಮ್ಮ ವಿರೋಧಿಗಳನ್ನು ತಮ್ಮ ಪ್ರತಿಭೆ ಮತ್ತು ಸಾಧನೆಗಳಿಂದ ಚಕಿತಗೊಳಿಸಿದರು. ಇನ್ನೂ ಕೆಲವರಿಗೆ ಅವರು ಮಾರ್ಗದರ್ಶಕರಾಗಿದ್ದರು. ಆದರೆ ಎಲ್ಲರಿಗೂ ಅವರು ಒಬ್ಬ ದಾರ್ಶನಿಕರಾಗಿದ್ದರು.

ರಾನಡೆಯವರ ರಾಜಕೀಯ ಸಿದ್ಧಾಂತವೇನು? ಅವುಗಳನ್ನು ಮೂರು ತತ್ವಗಳಲ್ಲಿ ನಿರೂಪಿಸಬಹುದು:

(೧) ಕಾಲ್ಪನಿಕವಾದ ವಿಚಾರಗಳನ್ನು ತಮ್ಮ ಆದರ್ಶಗಳನ್ನಾಗಿ ಇಟ್ಟುಕೊಳ್ಳಬಾರದು. ಆದರ್ಶಗಳು ಸಾಧಿಸಲು ಸಾಧ್ಯ ಎಂಬ ಭರವಸೆಯನ್ನು ನೀಡುವಂತಹವುಗಳಾಗಿರಬೇಕು.

(೨) ರಾಜಕೀಯದಲ್ಲಿ ಬುದ್ಧಿಮತ್ತೆ ಮತ್ತು ಸಿದ್ಧಾಂತಗಳಿಗಿಂತ ಜನತೆಯ ಭಾವನೆಗಳು ಮತ್ತು ದೃಷ್ಟಿಕೋನ ಹೆಚ್ಚು ಪ್ರಾಧಾನ್ಯತೆ ಹೊಂದಿರುತ್ತವೆ. ಅದರಲ್ಲಿಯೂ ಮುಖ್ಯವಾಗಿ ಸಂವಿಧಾನ ರಚನೆಯಲ್ಲಿ ಇದು ಸತ್ಯ. ಉಡುಗೆ ತೊಡುಗೆಗಳಂತೆ ಸಂವಿಧಾನವೂ ಅಭಿರುಚಿಯ ವಿಷಯವಾಗಿದೆ. ಎರಡೂ ಸರಿಯಾಗಿ ಹೊಂದಬೇಕು ಮತ್ತು ಆಹ್ಲಾದಕರವಾಗಿರಬೇಕು.

(೩) ರಾಜಕೀಯ ಸಂಧಾನಗಳಲ್ಲಿ ಸಾಧ್ಯತೆ ಮೂಲ ನಿಯಮವಾಗಿರಬೇಕು. ಯಾವುದನ್ನು ನೀಡಲಾಗಿದೆಯೋ ಅದನ್ನೇ ಒಪ್ಪಿಕೊಳ್ಳಬೇಕೆಂದು ಇದರ ಅರ್ಥವಲ್ಲ. ಅಲ್ಲವೇ ಅಲ್ಲ. ನಿಮ್ಮ ಎದುರಾಳಿಯು ಕೊಡಮಾಡಿದ್ದಕ್ಕಿಂತಲೂ ಹೆಚ್ಚಿನದನ್ನು ಕೊಡುವಂತೆ ಮಾಡಲು (ಪು. 261)

ನಿಮ್ಮಲ್ಲಿ ಹೆಚ್ಚಿನ ಸಾಧನಗಳು ಇಲ್ಲದೇ ಹೋದಾಗ ಮಾತ್ರ ಕೊಟ್ಟದ್ದನ್ನು ನಿರಾಕರಿಸಬಾರದೆಂಬುದು ಇದರ ಅರ್ಥ.

ಈ ಮೂರು ರಾನಡೆಯವರ ರಾಜಕೀಯ ಸಿದ್ಧಾಂತಗಳಾಗಿದ್ದವು. ಅವರ ಬರೆಹಗಳು ಮತ್ತು ಭಾಷಣಗಳಿಂದ ಆಯ್ದ ಸೂಕ್ತ ಉಕ್ತಿಗಳಿಂದ ಇವುಗಳನ್ನು ವಿವರಿಸುವುದು ಸುಲಭ. ಆದರೆ ಇದಕ್ಕೆ ಈಗ ಸಮಯವೂ ಇಲ್ಲ ಮತ್ತು ಅದರ ಅವಶ್ಯಕತೆಯೂ ಇಲ್ಲ. ಏಕೆಂದರೆ ರಾನಡೆಯವರ ಬರೆಹಗಳ ಮತ್ತು ಭಾಷಣಗಳ ಪರಿಚಯವಿರುವ ಎಲ್ಲರಿಗೂ ಇದು ಸುಸ್ಪಷ್ಟ. ರಾನಡೆಯವರ ಈ ಮೂರು ಸಿದ್ಧಾಂತಗಳನ್ನು ಯಾರು ಪ್ರಶ್ನಿಸಲು ಸಾಧ್ಯ? ಸಾಧ್ಯವಿದ್ದರೂ ಯಾವ ಸಿದ್ಧಾಂತದ ಬಗ್ಗೆ? ಮೊದಲನೆಯದನ್ನು ಕೇವಲ ಭಾವನಾ ಪ್ರಪಂಚಿಯಾದವನು ಪ್ರಶ್ನಿಸಬಲ್ಲ. ಅಂತಹವರನ್ನು ನಾವು ಗಮನಿಸಬೇಕಾಗಿಲ್ಲ. ಎರಡನೆಯ ಸಿದ್ಧಾಂತ ಎಷ್ಟು ಸ್ಪಷ್ಟ ಮತ್ತು ಪ್ರಮುಖವಾಗಿದೆ ಎಂದರೆ ಅದನ್ನು ಕಡೆಗಣಿಸುವುದೆಂದರೆ ನಮ್ಮ ವಿನಾಶವೆಂದೇ ಹೇಳಬಹುದು. ಮೂರನೆಯ ಸಿದ್ಧಾಂತದ ಮೇಲೆ ಭಿನ್ನಾಭಿಪ್ರಾಯ ಸಾಧ್ಯ. ಸತ್ಯಾಂಶವೆಂದರೆ ಈ ಸಿದ್ಧಾಂತವೇ ಉದಾರವಾದಿಗಳನ್ನು ಕಾಂಗ್ರೆಸ್ಸಿಗರಿಂದ ಪ್ರತ್ಯೇಕಿಸಿದ್ದು, ನಾನೇನೂ ಉದಾರವಾದಿಯಲ್ಲ. ಆದರೆ ರಾನಡೆಯವರ ಸಿದ್ಧಾಂತ ಸರಿಯಾಗಿತ್ತೆಂದು ನನ್ನ ಖಚಿತ ಅಭಿಪ್ರಾಯ, ತತ್ವದ ಬಗ್ಗೆ ಹೊಂದಾಣಿಕೆ ಆಗಬಾರದು. ಒಮ್ಮೆ ತತ್ವವನ್ನು ಒಪ್ಪಿಕೊಂಡ ಮೇಲೆ ಅದನ್ನು ಹಂತ ಹಂತವಾಗಿ ಸಾಧಿಸಲು ಯಾವ ಅಭ್ಯಂತರವೂ ಇರಬಾರದು. ರಾಜಕೀಯದಲ್ಲಿ ಕ್ರಮೇಣತೆ ಅನಿವಾರ್ಯ. ಒಮ್ಮೆ ತತ್ವವನ್ನು ಮಾನ್ಯಮಾಡಿದಾಗ ಅದರಿಂದ ಯಾವುದೇ ಹಾನಿಯುಂಟಾಗುವಂತಿರಲಿ. ಅದರಿಂದ ಹೆಚ್ಚು ಅನುಕೂಲಗಳುಂಟು. ಮೂರನೆಯ ಸಿದ್ಧಾಂತದ ಮೇಲೆ ರಾನಡೆ ಮತ್ತು ಟಿಳಕರ ನಡುವೆ ಈ ಕೆಳಗಿನ ಒಂದು ಅಂಶದ ಹೊರತು ಯಾವ ಭಿನ್ನಾಭಿಪ್ರಾಯವೂ ಇರಲಿಲ್ಲ. ಅದೆಂದರೆ: ಟಿಳಕರು ಸಾಧ್ಯವಾದುದನ್ನು ನಿರ್ಬಂಧಗಳ ಮೂಲಕ ಗರಿಷ್ಠಗೊಳಿಸಲು ಬಯಸಿದರು. ರಾನಡೆಯವರು ಈ ನಿರ್ಬಂಧಗಳನ್ನು ಸಂಶಯದಿಂದ ನೋಡಿದರು. ಇದೊಂದೇ ವ್ಯತ್ಯಾಸ. ಉಳಿದ ವಿಷಯಗಳಲ್ಲಿ ಅವರು ಏಕಾಭಿಪ್ರಾಯ ಹೊಂದಿದ್ದರು. ರಾನಡೆಯವರ ರಾಜಕೀಯ ಸಿದ್ಧಾಂತದಲ್ಲಿ ನಿರ್ಬಂಧಗಳಿಲ್ಲದಿರುವ ಕಾರಣದಿಂದಲೇ ಅದರ ಮಹತ್ವ ಕಡಿಮೆಯಾಗುವುದಿಲ್ಲ. ನಮಗೆ ಯಾವ ನ್ಯಾಯ ನಿರ್ಬಂಧಗಳು ಲಭ್ಯವಿದೆ ಎಂಬುದು ನಮಗೆಲ್ಲರಿಗೂ ಗೊತ್ತಿರುವ ಸಂಗತಿ. ಹಳೆಯವು, ಹೊಸವು ಎಲ್ಲವನ್ನೂ ನಾವು ಪ್ರಯೋಗಿಸಿ ನೋಡಿದ್ದೇವೆ. ಅವುಗಳ ಪರಿಣಾಮಗಳನ್ನು ನಾನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

9

ರಾನಡೆಯವರ ಜನ್ಮದಿನವನ್ನು ಆಚರಿಸುವಾಗ ಅವರ ವಿರೋಧಿಗಳು ಮತ್ತು ವಿಮರ್ಶಕರು ಏನು ಹೇಳಬಹುದೆಂಬುದನ್ನು ನಾವು ಕಡೆಗಣಿಸಲಾಗದು. ರಾನಡೆಯವರ ಜನ್ಮದಿನವನ್ನು ಏಕೆ ಆಚರಿಸಬೇಕೆಂದು ಅವರು ಕೇಳಬಹುದು. ವ್ಯಕ್ತಿಪೂಜೆಯ ಕಾಲ ಎಂದೋ ಮುಗಿದುಹೋಗಿದೆ ಎಂದೂ ಅವರು ತರ್ಕಿಸಬಹುದು. ನಾನು ಶ್ರೀ ಗಾಂಧಿ ಮತ್ತು ಶ್ರೀ ಜಿನ್ನಾರವರ ಸಂಬಂಧದಲ್ಲಿ ಮೂರ್ತಿಪೂಜೆಯನ್ನು ಖಂಡಿಸಿ, ರಾನಡೆಯವರ ಮೂರ್ತಿಪೂಜೆಯನ್ನು ಹೇಗೆ ಸಮರ್ಥಿಸುವೆ ಎಂದು ವಿರೋಧಿಗಳು ಕೇಳಬಹುದು. ಇವು ಸೂಕ್ತವಾದ ಪ್ರಶ್ನೆಗಳೇ, ವ್ಯಕ್ತಿಪೂಜೆ ನಶಿಸುತ್ತಿದೆ ಎಂಬುದೇನೋ ನಿಜ. ಅದರ ಬಗ್ಗೆ ಸಂಶಯವಿಲ್ಲ. ತನ್ನ ಯುಗವನ್ನು ದೂಷಿಸಿದ ಕಾರ್ಲೈಲನ ಕಾಲದಲ್ಲಿಯೂ ಅದು ನಶಿಸುತ್ತಿತ್ತು. ಕಾರ್ಲೈಲನ ಮಾತುಗಳಲ್ಲಿಯೇ ಹೇಳುವುದಾದರೆ: (ಪು. 262)

“ಇದು ಮಹಾಪುರುಷರ ಅಸ್ತಿತ್ವವನ್ನೇ ಅಲ್ಲಗಳೆಯುವ ಯುಗ: ಮಹಾಪುರುಷರ ಅನಿವಾರ್ಯತೆಯನ್ನೂ ಅಲ್ಲಗಳೆಯುವ ಯುಗವೂ ಇದಾಗಿದೆ.”

ಕಾರ್ಲೈಲ್ ಮುಂದುವರಿದು ಹೇಳಿದ್ದೇನೆಂದರೆ: “ನಮ್ಮ ಟೀಕಾಕಾರರಿಗೆ ಒಬ್ಬ ಮಹಾಪುರುಷನನ್ನು ತೋರಿಸಿ ಅವರು ಅವನ ಬಗ್ಗೆ ವಿವರ ನೀಡಬಲ್ಲರು. ಇದು ಅವನನ್ನು ಅಳೆಯುವುದಕ್ಕಾಗಿಯೋ ಹೊರತು ಅವನನ್ನು ಪೂಜಿಸಲಿಕ್ಕಲ್ಲ.’

ಆದರೆ ಭಾರತದಲ್ಲಿ ವ್ಯಕ್ತಿ ಪೂಜೆ ಅವನತಿಗೊಂಡಿಲ್ಲ. ಇಂದಿಗೂ ಭಾರತವು ವಿಗ್ರಹಾರಾಧನೆಯ ಪರಮೋಚ್ಚ ಭೂಮಿಯಾಗಿದೆ. ಧರ್ಮದಲ್ಲಿ ಮೂರ್ತಿಪೂಜೆ ಇದೆ. ರಾಜಕೀಯದಲ್ಲಿ ವ್ಯಕ್ತಿಪೂಜೆ ಇದೆ. ಭಾರತದ ರಾಜಕೀಯ ಜೀವನದಲ್ಲಿ ವ್ಯಕ್ತಿ ಪೂಜೆ ಒಂದು ಸತ್ಯಸಂಗತಿಯಾಗಿರುವುದು ದುರದೃಷ್ಟಕರ. ವ್ಯಕ್ತಿ ಪೂಜೆ, ಪೂಜಕರನ್ನು ಭ್ರಷ್ಟಗೊಳಿಸುವುದಲ್ಲದೆ ದೇಶಕ್ಕೆ ಅಪಾಯಕಾರಿಯಾಗಿದೆ. ನೀವು ಪೂಜಿಸುವ ಮುನ್ನ ಆತನು ನಿಜವಾಗಿಯೂ ಶ್ರೇಷ್ಠನಾಗಿದ್ದಾನೆಯೇ ಎಂದು ತಿಳಿದುಕೊಳ್ಳುವ ಬಗ್ಗೆ ನೀಡಲಾಗಿರುವ ಎಚ್ಚರಿಕೆಯನ್ನು ನಾನು ಸ್ವಾಗತಿಸುತ್ತೇನೆ. ಆದರೆ ದುರದೃಷ್ಟವೆಂದರೆ ಇದು ಸುಲಭದ ಕೆಲಸವಲ್ಲ. ಏಕೆಂದರೆ ಇಂದಿನ ದಿನಗಳಲ್ಲಿ ಪತ್ರಿಕೆಗಳನ್ನು ತಮ್ಮ ಕೈಯಲ್ಲಿಟ್ಟುಕೊಂಡು ಮಹಾಪುರುಷರನ್ನು ಕಾರ್ಖಾನೆಗಳಲ್ಲಿ ಮಾಡಿದಂತೆ ತಯಾರು ಮಾಡುವುದು ಸುಲಭ. ಕಾರ್ಲೈಲನು ಇತಿಹಾಸದಲ್ಲಿ ಆಗಿಹೋದ ಅನೇಕ ಮಹಾಪುರುಷರನ್ನು ‘ಬ್ಯಾಂಕು ನೋಟು’ಗಳೆಂದು ವರ್ಣಿಸಿರುವುದು ಸೂಕ್ತವಾಗಿದೆ. ಬ್ಯಾಂಕು ನೋಟುಗಳಂತೆ ಅವರೂ ಚಿನ್ನದ ಪ್ರತೀಕಗಳು. ಅವು ಖೋಟಾ ನೋಟುಗಳಲ್ಲವೆಂಬ ಅಂಶವನ್ನು ನಾವು ಖಾತ್ರಿ ಮಾಡಿಕೊಳ್ಳಬೇಕು. ಮಹಾಪುರುಷರನ್ನು ಪೂಜಿಸುವಾಗ ನಾವು ಹೆಚ್ಚು ಜಾಗರೂಕರಾಗಿರಬೇಕೆಂಬುದನ್ನು ನಾನು ಒಪ್ಪುತ್ತೇನೆ. ಏಕೆಂದರೆ ಆ ದೇಶದಲ್ಲಿ ಇಂದು “ಕಿಸೆಗಳ್ಳರಿಂದ ಎಚ್ಚರಿಕೆ” ಎಂಬ ಫಲಕದೊಂದಿಗೆ “ಮಹಾಪುರುಷರಿಂದ ಎಚ್ಚರಿಕೆ” ಎಂಬ ಫಲಕವನ್ನೂ ಹಾಕುವ ಪರಿಸ್ಥಿತಿ ಉಂಟಾಗಿದೆ. ವ್ಯಕ್ತಿಪೂಜೆಯನ್ನು ಸಮರ್ಥಿಸಿಕೊಂಡ ಕಾರ್ಲೈಲನೂ ಕೂಡ ತನ್ನ ಓದುಗರನ್ನು ಹೀಗೆ ಎಚ್ಚರಿಸಿದ್ದನು:

“ಹುಸಿ ಮತ್ತು ಸ್ವಾರ್ಥ ವ್ಯಕ್ತಿಗಳ ಸಮೂಹವೇ ಇತಿಹಾಸದಲ್ಲಿ ಮಹಾಪುರುಷರಾಗಿ ಮೆರೆದು ಹೋಗಿದೆ.” ಪ್ರಪಂಚದ ಗೌರವಾಕರ್ಷಣೆಯನ್ನು ಈ ಮಹಾಪುರುಷರೆನಿಸಿಕೊಂಡವರು ಸ್ವೀಕರಿಸಿರುವವರಾದರೂ, ಪ್ರಪಂಚದ ಕಾರ್ಯ ಮಾತ್ರ ಆಗಿಲ್ಲ. ವೀರ ಪುರುಷರು ನಿರ್ಗಮಿಸಿದ್ದಾರೆ. ಆದರೆ ಡಂಭಾಚಾರಿಗಳು ಆಗಮಿಸಿದ್ದಾರೆ.”

ಭಾರತದ ಇಂದಿನ ಮಹಾಪುರುಷರು ಪಡೆಯಲಿರುವ ಪರಮಪದದ ಗೌರವಗಳನ್ನು ರಾನಡೆಯವರು ಎಂದೂ ಪಡೆಯಲಿಲ್ಲ. ಅದು ಹೇಗೆ ಸಾಧ್ಯ? ಅವರು ಶಹನಾಯಿಯಿಂದ ಯಾವುದೇ ತಾಜಾ ಸಂದೇಶವನ್ನು ತರಲಿಲ್ಲ. ಅವರು ಯಾವ ಚಮತ್ಕಾರಗಳನ್ನೂ ಮಾಡಲಿಲ್ಲ ಮತ್ತು ಯಾವುದೇ ಭವ್ಯತೆಯನ್ನು ಶೀಘ್ರವಾಗಿ ತಂದುಕೊಡುವ ವಾಗ್ದಾನವನ್ನೂ ನೀಡಲಿಲ್ಲ. ಅವರು ಅಸಾಧಾರಣ ಪ್ರತಿಭಾಶಾಲಿಯಾಗಿರಲಿಲ್ಲ ಮತ್ತು ಯಾವುದೇ ಅತಿಮಾನವ ಗುಣಗಳನ್ನೂ ಹೊಂದಿರಲಿಲ್ಲ. ಆದರೆ ಇದಕ್ಕೆ ಪರಿಹಾರಗಳುಂಟು. ರಾನಡೆಯವರು ಭವ್ಯತೆ ಮತ್ತು ಆಧಿಪತ್ಯವನ್ನು ತೋರಿಸದಿದ್ದರೂ ಅವರು ಯಾವುದೇ ರೀತಿಯ ಅನಾಹುತವನ್ನುಂಟು ಮಾಡಲಿಲ್ಲ. ಭಾರತದ ಸೇವೆಯಲ್ಲಿ ತೊಡಗಿಸಲು ಅವರಲ್ಲಿ ಯಾವುದೇ ಅತಿಮಾನವ ಗುಣಗಳಿರದಿದ್ದರೆ ಭಾರತವನ್ನು ಅವುಗಳ ದುರುಪಯೋಗದ ಅನಾಹುತದಿಂದಲಾದರೂ ತಪ್ಪಿಸಿದಂತಾಯಿತು. ಅವರು ಮೇಧಾವಿಯಾಗಿರದಿದ್ದರೂ, ಅವರು ದೇಶದ ಸಮಸ್ಯೆಯ ಪರಿಹಾರಕ್ಕೆ ಅಡ್ಡಿ ಉಂಟುಮಾಡುವಂತಹ ಮೂಲಭೂತ ಅಪ್ರಾಮಾಣಿಕವಾದ ಅತಿ ಬುದ್ದಿವಂತಿಕೆಯ ಮಾನಸಿಕ ಪ್ರವೃತ್ತಿಯನ್ನು ಪ್ರದರ್ಶಿಸಲಿಲ್ಲ. (ಪು. 263)

ರಾನಡೆಯವರಲ್ಲಿ ಅಲಂಕಾರಾತಿಶಯವಾದ ಅಥವಾ ವೈಪರೀತ್ಯದ ಯಾವ ಅಂಶಗಳೂ ಇರಲಿಲ್ಲ. ಉಗ್ರಗಾಮಿಯ ಪಾತ್ರವನ್ನಾಡಿ ಕುಪ್ರಸಿದ್ದಿಯನ್ನು ಪಡೆಯುವ ಗೀಳಿಗೆ ಅವರು ಬೀಳಲಿಲ್ಲ. ಜನತೆಯ ದೇಶಭಕ್ತಿ ಭಾವನೆಗಳ ದುರುಪಯೋಗದ ಮೂಲಕ ಜನರನ್ನು ತಪ್ಪುದಾರಿಗೆಳೆಯಲು ಅವರು ನಿರಾಕರಿಸಿದರು. ದೇಶದ ಅತ್ಯಂತ ಶ್ರದ್ಧಾಳು ಮತ್ತು ನಿಸ್ವಾರ್ಥ ಸೇವಕರ ಪ್ರಯತ್ನಗಳಿಗೆ ಅಡ್ಡಿಯುಂಟುಮಾಡುವಂತಹ ಮತ್ತು ಅಂತಹ ದೇಶಭಕ್ತರ ಬೆನ್ನು ಮುರಿಯುವಂತಹ ಯಾವುದೇ ವಿಧಾನಗಳಿಗೆ ಅವರು ಸಮ್ಮತಿಸಲಿಲ್ಲ. ಆ ವಿಧಾನಗಳು ಗಾತ್ರದಲ್ಲಿ ದೊಡ್ಡದಾಗಿದ್ದರೂ ಅವು ಪರಿಣಾಮಕಾರಿ ಮತ್ತು ತಪ್ಪಾಗಲಾರದಂತಹ, ಮೋಸ ಹೋಗದಂತಹ ವಿಧಾನಗಳಾಗಿರಲಿಲ್ಲ. ಸಂಕ್ಷಿಪ್ತದಲ್ಲಿ, ರಾನಡೆಯವರು ಸಮುದ್ರ ಮಧ್ಯೆ ತನ್ನ ಹಡಗಿನೊಡನೆ ಕೈಚಳಕ ಪ್ರದರ್ಶನ ಮಾಡುವುದರ ಬದಲು ಅದನ್ನು ಸುರಕ್ಷಿತವಾಗಿ ನೆಲೆ ಮುಟ್ಟಿಸುವ ಬುದ್ದಿವಂತ ನಾವಿಕನೋಪಾದಿಯಲ್ಲಿದ್ದರು. ಸಂಕ್ಷಿಪ್ತದಲ್ಲಿ, ರಾನಡೆಯವರು ಬ್ಯಾಂಕಿನ ಖೋಟಾ ನೋಟಾಗಿರಲಿಲ್ಲ. ಅವರನ್ನು ಪೂಜಿಸುವಾಗ ನಾವು ಒಬ್ಬ ಹುಸಿ ವ್ಯಕ್ತಿಗೆ ತಲೆಬಾಗಿ ನಮಿಸುತ್ತಿರುವ ಭಾವನೆ ನಮ್ಮಲ್ಲಿ ಉಂಟಾಗುವುದಿಲ್ಲ.

ಎರಡನೆಯದಾಗಿ, ರಾನಡೆಯವರ ಈ ಜನ್ಮ ದಿನಾಚರಣೆ ವ್ಯಕ್ತಿ ಪೂಜೆಯ ಕಾರ್ಯವಲ್ಲ, ಅಪಾರವಾದ ನಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುವ ಅರ್ಥದಲ್ಲಿ ವ್ಯಕ್ತಿಪೂಜೆ ಒಂದು ವಿಧಾನ. ಆದರೆ ನಾಯಕನ ಆಜ್ಞೆಗಳನ್ನು ಕುರುಡಾಗಿ ಪಾಲಿಸುವುದು ಅತ್ಯಂತ ಭಿನ್ನರೀತಿಯ ವ್ಯಕ್ತಿಪೂಜೆ. ಮೊದಲನೆಯ ರೀತಿಯ ವ್ಯಕ್ತಿಪೂಜೆಯಲ್ಲಿ ಏನೂ ತಪ್ಪಿಲ್ಲ; ಆದರೆ ಎರಡನೆ ರೀತಿಯ ವ್ಯಕ್ತಿಪೂಜೆ ಅತ್ಯಂತ ಹೇಯವಾದದ್ದು. ಮೊದಲನೆ ವಿಧಾನವು ಎಲ್ಲಾ ರೀತಿಯಲ್ಲಿಯೂ ಶ್ರೇಷ್ಠವಾದ ಗುಣಗಳ ಬಗ್ಗೆ ನಮ್ಮ ಗೌರವವನ್ನು ಸೂಚಿಸುವುದಾಗಿದ್ದು, ಮಹಾಪುರುಷನಾದವನು ಈ ಗುಣಗಳ ಪ್ರತೀಕ ಮಾತ್ರ. ಆದರೆ ಎರಡನೆಯ ವಿಧಾನವು ಒಬ್ಬ ಗುಲಾಮ ತನ್ನ ಮಾಲೀಕನಿಗೆ ತೋರಿಸುವ ದಾಸ್ಯಪ್ರವೃತ್ತಿಯಾಗಿದೆ. ಮೊದಲನೆಯ ವಿಧಾನವು ಗೌರವಪೂರ್ವಕವಾಗಿದ್ದರೆ, ಎರಡನೆಯದು ಅಧಃಪತನದ ದ್ಯೋತಕ. ಮೊದಲನೆಯ ವಿಧಾನದಲ್ಲಿ ವ್ಯಕ್ತಿಯ ವಿಚಾರಶಕ್ತಿ ಮತ್ತು ಸ್ವಾತಂತ್ರ್ಯಹರಣವಾಗುವುದಿಲ್ಲ. ಆದರೆ ಎರಡನೆಯ ವಿಧಾನದಲ್ಲಿ ವ್ಯಕ್ತಿ ಸಂಪೂರ್ಣ ಮೂರ್ಖನಾಗುತ್ತಾನೆ. ಮೊದಲನೆಯ ವಿಧಾನದಲ್ಲಿ ರಾಜ್ಯಕ್ಕೆ ಯಾವ ಅಪಾಯವೂ ಒದಗುವುದಿಲ್ಲ. ಆದರೆ ಎರಡನೆಯ ವಿಧಾನವು ರಾಜ್ಯಕ್ಕೆ ಅಪಾಯವುಂಟುಮಾಡುವ ಮೂಲವೆನಿಸುವುದು. ರಾನಡೆಯವರ ಜನ್ಮ ದಿನಾಚರಣೆಯಲ್ಲಿ ನಾವು ಯಾರಿಂದಲೂ ಚುನಾಯಿತನಾಗಿರದ, ಯಾರಿಗೂ ಹೊಣೆಗಾರನಾಗಿರದ ಯಾರಿಂದಲೂ ವಜಾ ಮಾಡಲಾಗದಂತಹ ಯಜಮಾನನ ಪೂಜೆ ಮಾಡುತ್ತಿಲ್ಲ. ಆದರೆ ಜನತೆಗೆ ನಿಜವಾದ ನಾಯಕತ್ವ ನೀಡಿದ ಮತ್ತು ಕಪಟ ಹಾಗೂ ಹಿಂಸಾಮಾರ್ಗದ ಮೂಲಕ ತನ್ನದೇ ವಿಚಾರಗಳನ್ನು ಅವರ ಮೇಲೆ ಹೇರದೆ ಜನತೆಯ ನಿರ್ಣಯಗಳನ್ನು ಕಾರ್ಯಗತಗೊಳಿಸಿದಂತಹ ವ್ಯಕ್ತಿಗೆ ನಮ್ಮ ಮೆಚ್ಚುಗೆ ಮತ್ತು ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇವೆ.

ಮೂರನೆಯದಾಗಿ, ವ್ಯಕ್ತಿ ಪೂಜೆ ಮಾಡಲು ನಾವು ಇಲ್ಲಿ ಸೇರಿಲ್ಲ. ಇದು ರಾನಡೆಯವರ ರಾಜಕೀಯ ತತ್ವಗಳನ್ನು ನೆನೆಯುವ ಸಂದರ್ಭ. ಕಾಲಕಾಲಕ್ಕೆ ಅವರ ತತ್ವಗಳನ್ನು ನೆನೆಯುವುದು ಅವಶ್ಯವೆಂದು ನನಗನಿಸುತ್ತದೆ. ಏಕೆಂದರೆ, ಅವರ ರಾಜಕೀಯ ತತ್ವಪ್ರಣಾಳಿಕೆ ಕ್ಷೇಮಕರ ಮತ್ತು ಅರ್ಥಪೂರ್ಣವಾಗಿದೆ. ಅದು ಮಂದಗತಿಯದಾದರೂ, ಹೊಳೆಯದಿದ್ದರೂ ಅದು ಚಿನ್ನವೇ. ಈ ಬಗ್ಗೆ ಯಾರಿಗಾದರೂ ಸಂಶಯವೇ? ಸಂಶಯವಿದ್ದರೆ ಅವರು ಬಿಸ್ಮಾರ್ಕ್, ಬ್ಯಾಲ್‌ಫೇರ್ ಮತ್ತು ಮೋರೆಯವರ (ಪು. 264)

ಈ ಕೆಳಗಿನ ಮಾತುಗಳ ಮನನ ಮಾಡಲಿ. ಜರ್ಮನಿಯ ಮಹಾನ್ ರಾಜಕೀಯ ಪಟು ಹಾಗೂ ಮುಖಂಡ ಬಿಸ್ಮಾರ್ಕ್ ಹೇಳಿದ ಹಾಗೆ:

“ರಾಜಕೀಯವು ಸಾಧ್ಯತೆಯ ಒಂದು ಜೂಜಾಟ”,

ವಾಲ್ಟರ್ ಬೇಗ್‌ ಹಾಟನ ಸುಪ್ರಸಿದ್ಧ ಗ್ರಂಥ ‘ಇಂಗ್ಲಿಶ್ ಸಂವಿಧಾನ’ದ ಮುನ್ನುಡಿಯಲ್ಲಿ ಬ್ಯಾಲ್‌ಫೋ‌ರ್ ಹೇಳಿದ ಮಾತುಗಳಿವು:

“ಹೆಚ್ಚಿಗೆ ವಿನಾಶಮಾಡದೆ ವ್ಯಾಪಕ ಬದಲಾವಣೆಯನ್ನುಂಟುಮಾಡಿದ ಮಧ್ಯಕಾಲೀನ ರಾಜಪ್ರಭುತ್ವವನ್ನು ಆಧುನಿಕ ಪ್ರಜಾಪ್ರಭುತ್ವಕ್ಕೆ ಕ್ರಮೇಣವಾಗಿ ಪರಿವರ್ತಿಸಿದ ಸುದೀರ್ಘ ಪ್ರಕ್ರಿಯೆಯ ಮೂಲಾಧಾರವನ್ನು ಕಂಡುಕೊಂಡಾಗ, ಬುದ್ಧಿಮತ್ತೆ ಮತ್ತು ಸಿದ್ದಾಂತಗಳ ಬದಲು ಮನೋಭಾವನೆ ಮತ್ತು ಚಾರಿತ್ರ್ಯದ ಅಧ್ಯಯನ ಅವಶ್ಯ ಎಂಬ ಅರಿವು ನಮ್ಮಲ್ಲಿ ಉಂಟಾಗುತ್ತದೆ. ಬ್ರಿಟಿಷ್ ಸಂಸ್ಥೆಗಳನ್ನು ಅಪರಿಚಿತ ದೇಶಗಳಲ್ಲಿ ಒಟ್ಟಾಗಿ ಸ್ಥಾಪಿಸಬೇಕೆಂದು ಶಿಫಾರಸ್ಸು ಮಾಡುವವರು ಈ ಸತ್ಯವನ್ನು ಅರಿತುಕೊಳ್ಳುವುದು ಉಪಯುಕ್ತ. ಅಂತಹ ಪ್ರಯೋಗದಲ್ಲಿ ಅಪಾಯವಿಲ್ಲದಿರಲಾರದು. ಸಂವಿಧಾನಗಳನ್ನು ನಕಲು ಮಾಡುವುದು ಸುಲಭ, ಆದರೆ ಮನೋಭಾವನೆಗಳ ನಕಲು ಮಾಡುವುದು ಸುಲಭವಲ್ಲ. ಇದೇನಾದರೂ ಸಂಭವಿಸಿ, ಸ್ಥಳೀಯ ಮನೋಭಾವನೆಗಳೂ ಮತ್ತು ಸಂವಿಧಾನಗಳ ನಡುವೆ ಹೊಂದಾಣಿಕೆಯಾಗದೇಹೋದಲ್ಲಿ ಅದರ ಪರಿಣಾಮ ಗಂಭೀರವೆನಿಸುವುದು. ಜನತೆಯಲ್ಲಿ ಈ ಪ್ರಮುಖ ವಿಷಯದಲ್ಲಿ ಈ ಕೊರತೆ ಇದ್ದರೆ ಅವರಲ್ಲಿ ಬೇರೆ ಯಾವುದೇ ಪ್ರತಿಭೆಗಳಿದ್ದರೂ ಅವು ಮಹತ್ವವೆನಿಸುವುದಿಲ್ಲ. ಉದಾಹರಣೆಗಾಗಿ ಅವರಲ್ಲಿ ತಮ್ಮ ನಿಷ್ಠೆಯ ಮಟ್ಟವನ್ನು ನಿರ್ಣಯಿಸುವ ಶಕ್ತಿ ಇಲ್ಲದಿದ್ದರೆ, ಸ್ವಾತಂತ್ರ್ಯವನ್ನು ಕುರಿತು ಸಹಜ ಪ್ರವೃತ್ತಿ ಮತ್ತು ಕಾನೂನಿನ ಪ್ರತಿ ಸಹಜವಾದ ಗೌರವವಿಲ್ಲದಿದ್ದರೆ, ಅವರಲ್ಲಿ ಹಾಸ್ಯ ಪ್ರವೃತ್ತಿ ಹಾಗೂ ಸುಪ್ರಸನ್ನತೆ ಇಲ್ಲದಿದ್ದರೆ ಹಾಗೂ ಅನ್ಯಾಯ, ಮೋಸವನ್ನು ಸಹಿಸಿಕೊಳ್ಳುವುದಾದರೆ; ಹೇಗೆ ಮತ್ತು ಯಾವಾಗ ಹೊಂದಾಣಿಕೆ ಮಾಡಿಕೊಳ್ಳಬೇಕೆಂಬ ಅರಿವಿಲ್ಲದಿದ್ದರೆ; ಒಮ್ಮೊಮ್ಮೆ ತರ್ಕದ ಅಭಾವದ ಹೆಸರಿನಲ್ಲಿ ಮಾಡಲಾದ ಪರಮಾಧಿ ನಿರ್ಣಯಗಳನ್ನು ನಂಬದಂತಹ ಪ್ರವೃತ್ತಿ ಇಲ್ಲದಿದ್ದರೆ, ಭ್ರಷ್ಟಾಚಾರ ಅವರನ್ನು ರೊಚ್ಚಿಗೇಳಿಸದಿದ್ದರೆ, ಮತ್ತು ಅವರನ್ನು ವಿಭಜಿಸುವ ಅಂಶಗಳು ಅನೇಕ ಅಥವಾ ಗಹನವಾದವುಗಳಾಗಿದ್ದರೆ ಅಂತಹ ಪರಿಸ್ಥಿತಿಯಲ್ಲಿ ಬ್ರಿಟಿಷ್ ಸಂಸ್ಥೆಗಳು ಯಶಸ್ವಿಯಾಗುವುದು ಕಷ್ಟ ಅಥವಾ ಅಸಾಧ್ಯವೆನಿಸುವುದು. ಎಲ್ಲಿ ಸಂಸದೀಯ ಪದ್ಧತಿಯಲ್ಲಿ ನಂಬುಗೆ ಮತ್ತು ಪಕ್ಷಗಳ ವ್ಯವಹಾರಗಳನ್ನು ನಡೆಸಿಕೊಂಡು ಹೋಗುವ ನೈಪುಣ್ಯತೆ ಪರಿಪೂರ್ಣತೆಯ ಪರಾಕಾಷ್ಟವನ್ನು ಮುಟ್ಟಿವೆಯೋ ಅಲ್ಲಿಸಹ ಅದರ ಸಂಭವ ಕಡಿಮೆ ಎಂದೇ ಹೇಳಬಹುದು.”

ಮೋರ್ಲೆ ಈ ರೀತಿ ಹೇಳಿದ್ದಾರೆ:

“ರಾಜಕಾರಣಿಗಳು ವ್ಯವಹರಿಸಬೇಕಾದ ಸಾಮಾಜಿಕ ಸಂರಚನೆಗಳ ಆಂಶಗಳಲ್ಲಿ, ತಾರ್ಕಿಕ ಪರಿಪೂರ್ಣತೆ ಬಯಸಿದರೆ ಆ ಕುರಿತು ಅವರಿಗಿರುವ ಅವಜ್ಞೆಯನ್ನು ಮಾತ್ರ ತೋರಿಸಿದಂತಾಗುತ್ತದೆ. ಇನ್ನಾವುದೇ ಸಂಗತಿಯನ್ನು ಒಪ್ಪಿಕೊಳ್ಳುವುದು ತಿಳಿಗೇಡಿತನ ಎನಿಸುವುದು. ಸಾಧ್ಯವೆನಿಸಿದರೂ ಕೂಡ ಅಂತಹ ಬದಲಾವಣೆಗಳನ್ನು ಪದೇ ಪದೇ ಮಾಡಬಯಸುವುದು ಮೂರ್ಖತನ. ಸಣ್ಣಪುಟ್ಟ ಸುಧಾರಣೆಗಳು ದೊಡ್ಡ ಸುಧಾರಣೆಗಳ ಕಡು ವೈರಿಗಳು ಎಂಬ ಫ್ರೆಂಚ್ ಅಪಾಯಕಾರಿ ಹೇಳಿಕೆ ಸಾಧಾರಣವಾಗಿ ಹೇಳುವ ಅರ್ಥದಲ್ಲಿ ಸಾಮಾಜಿಕ ವಿನಾಶದ ಸೂತ್ರವಾಗಿದೆ.”

ರಾಜಕೀಯದಲ್ಲಿ ಯಶಸ್ಸು ಈ ತತ್ವಗಳನ್ನೇ ಅವಲಂಬಿಸುತ್ತದೆ. ರಾನಡೆಯವರು ಪ್ರತಿಪಾದಿಸಿದ ತತ್ವಗಳಿಂದ ಇವು ಭಿನ್ನವಾಗಿವೆಯೇ? ಬಿಸ್ಮಾರ್ಕ್, ಬ್ಯಾಲಫೋರ್ ಮತ್ತು ಮೋರೆಯವರು (ಪು. 265)

ಪ್ರತಿಪಾದಿಸುವುದಕ್ಕಿಂತ ಅನೇಕ ವರ್ಷಗಳ ಮೊದಲೇ ರಾನಡೆಯವರು ಈ ತತ್ವಗಳನ್ನು ಪ್ರತಿಪಾದಿಸಿರುವುದು ಅವರ ಮಹತ್ವವನ್ನು ಒತ್ತಿ ಹೇಳುತ್ತದೆ.

ರಾನಡೆಯವರು ಯಾವ ಪೀಳಿಗೆಯ ಸೇವೆ ಮಾಡಿದರೋ ಆ ಪೀಳಿಗೆಯವರು ಇವರನ್ನು ತಮ್ಮ ರಾಜಕೀಯ ಮಾರ್ಗದರ್ಶಕ, ದಾರ್ಶನಿಕ ಮತ್ತು ಸ್ನೇಹಿತನೆಂದು ಅಂಗೀಕರಿಸುವುದರಲ್ಲಿ ತಮ್ಮ ಬುದ್ದಿವಂತಿಕೆಯನ್ನು ಪ್ರದರ್ಶಿಸಿದ್ದಾರೆ. ಅವರು ಸದ್ಯದ ಪೀಳಿಗೆಯವರಿಗಷ್ಟೇ ಅಲ್ಲದೆ ಮುಂದಿನ ಪೀಳಿಗೆಯವರಿಗೂ ಮಾರ್ಗದರ್ಶಕ, ದಾರ್ಶನಿಕ ಮತ್ತು ಸ್ನೇಹಿತರಾಗಬಲ್ಲರೆಂಬುದರಲ್ಲಿ ಅವರ ಶ್ರೇಷ್ಠತೆ ಮತ್ತು ಮಹತ್ವ ಅಡಗಿದೆ.

ರಾನಡೆಯವರ ವಿರುದ್ಧ ಪದೇ ಪದೇ ಮಾಡಲಾಗುತ್ತಿರುವ ಒಂದು ಆಪಾದನೆಯನ್ನು ಪರಿಶೀಲಿಸಬೇಕೆಂದು ನನಗನಿಸುತ್ತದೆ. ಬ್ರಿಟಿಷರು ಭಾರತವನ್ನು ಗೆದ್ದದ್ದು ದೈವನಿಯಾಮಕ, ಅದು ಭಾರತೀಯರ ಹಿತದೃಷ್ಟಿಯಿಂದ ಒಳಿತೇ, ಮತ್ತು ಭಾರತವು ಬ್ರಿಟಿಷ್ ಚಕ್ರಾಧಿಪತ್ಯದ ಅಧೀನದಲ್ಲಿರುವುದರಲ್ಲಿಯೇ ದೇಶದ ಹಿತದೃಷ್ಟಿ ಅಡಕವಾಗಿದೆ ಎಂದು ರಾನಡೆಯವರ ನಂಬುಗೆಯಾಗಿತ್ತೆಂದು ಹೇಳಲಾಗುತ್ತಿದೆ. ಸಂಕ್ಷಿಪ್ತದಲ್ಲಿ, ರಾನಡೆಯವರು ಭಾರತದ ಸ್ವಾತಂತ್ರ್ಯದ ವಿರೋಧಿಯಾಗಿದ್ದರು ಎಂದು ಆಪಾದಿಸಲಾಗಿದೆ.

ರಾನಡೆಯವರ ಕೆಳಗಿನ ಹೇಳಿಕೆಗಳ ಆಧಾರದ ಮೇಲೆ ಬಹುಶಃ ಈ ಆಪಾದನೆ ಮಾಡಲಾಗಿದೆ:

“ಭಾರತದಲ್ಲಿ ಶತಶತಮಾನಗಳಿಂದ ವಾಸಿಸುತ್ತಿರುವ ಈ ವಿಶಾಲ ಜನಸ್ತೋಮವನ್ನು ಪರಕೀಯ ಆಧಿಪತ್ಯದ ಪ್ರಭಾವ ಮತ್ತು ಹಿಡಿತದಲ್ಲಿಡುವುದು ದೈವನಿಯಾಮಕವೆಂದು ಹೇಳುವುದು, ಅಂತಹ ಪ್ರಭಾವ ಮತ್ತು ಹಿಡಿತಗಳು ಭಾರತೀಯ ಜನಾಂಗಗಳಲ್ಲಿದ್ದ ಅಭಾವಗಳನ್ನು ನಿವಾರಿಸಿ ಅವರ ಬಲವರ್ಧನೆಗೆ ಸಹಾಯಕವಾಗುವುದಕ್ಕಾಗಿಯೇ ಎಂಬ ನಂಬುಗೆಯ ಆಧಾರದ ಮೇಲೆ ಸಾಧ್ಯ. ಆದರೆ ಒಂದು ಮಾತು ನಿಜ. ಆದೇನೆಂದರೆ, ಐದುನೂರು ವರ್ಷಗಳ ಅಸ್ತಿತ್ವದ ನಂತರ ಮೊಘಲ್ ಸಾಮ್ರಾಜ್ಯ ಪಂಜಾಬಿನಲ್ಲಿ ಸ್ಥಳೀಯ ಜನಾಂಗಗಳ ಪುನ‌ರ್ ಸ್ಥಾಪನೆಗೆ ಎಡೆಮಾಡಿಕೊಟ್ಟಿತಲ್ಲದೆ ಮಧ್ಯ ಮತ್ತು ದಕ್ಷಿಣ ಹಿಂದೂಸ್ಥಾನದಾದ್ಯಂತ ಮಹಮ್ಮದೀಯರ ವಿಜಯಗಳಿಗೆ ಮೊದಲು ಶರಣಾಗತರಾದವರಿಗಿಂತಲೂ ಸುಭದ್ರ ಅಡಿಪಾಯ ಹಾಕಲು ಅವಕಾಶ ಉಂಟಾಯಿತು.  

“ಹಿಂದೂಗಳು ಮತ್ತು ಮಹಮ್ಮದೀಯರಲ್ಲಿ ಶಿಸ್ತು ಮತ್ತು ನಿಯೋಜಿತ ಅಧಿಕಾರದ ಅಭಾವವಿದೆ. ಸ್ಥಾನಿಕ ಸ್ವಾತಂತ್ರ್ಯ ಪ್ರೇಮ, ನಾಗರಿಕ ಜೀವನಕ್ಕೆ ಅವಶ್ಯವೆನಿಸಿದ ಗುಣಗಳಲ್ಲಿ ಮತ್ತು ತಾಂತ್ರಿಕ ನೈಪುಣ್ಯತೆಯಲ್ಲಿ ವಿಜ್ಞಾನ ಮತ್ತು ಸಂಶೋಧನೆಗಳಲ್ಲಿ, ಸಾಹಸಮಯ ಆವಿಷ್ಕಾರಗಳಲ್ಲಿ, ಕಷ್ಟಗಳನ್ನು ಎದುರಿಸುವ ದೃಢತೆಯಲ್ಲಿ ಮತ್ತು ಸ್ತ್ರೀಯರ ಬಗೆಗೆ ಗೌರವ ತೋರಿಸುವ ಪ್ರವೃತ್ತಿಯಲ್ಲಿ ಇವರಿಬ್ಬರಿಗೂ ನಂಬುಗೆ ಇಲ್ಲ. ಪಾಶ್ಚಿಮಾತ್ಯ ಯುರೋಪಿನ ಮಟ್ಟಕ್ಕೆ ಭಾರತೀಯ ಜನಾಂಗಗಳನ್ನು ತರುವಂತಹ ಗುಣಗಳು ಹಳೆಯ ಕಾಲದ ಹಿಂದೂಗಳಲ್ಲಾಗಲೀ ಅಥವಾ ಮಹಮ್ಮದೀಯರಲ್ಲಾಗಲೀ ಕಾಣಬರುವುದಿಲ್ಲ. ಆದ್ದರಿಂದ ಶಿಕ್ಷಣವನ್ನು ನವೀಕರಿಸಬೇಕಾಯಿತು. ಆ ಕೆಲಸ ಈಗ ಕಳೆದ ಒಂದು ಶತಮಾನದಿಂದ ಸಾಗಿದೆ. ಅದರಲ್ಲಿಯೂ ಬ್ರಿಟಿಷ್ ಚಕ್ರಾಧಿಪತ್ಯದಲ್ಲಿ ಅದು ಹೆಚ್ಚಿನ ಪ್ರಮಾಣದಲ್ಲಿ ಸಾಗಿದೆ. ಇದರ ಪರಿಣಾಮಗಳನ್ನು ನಾವೆಲ್ಲರೂ ನೋಡುತ್ತಿದ್ದೇವೆ.”

ರಾನಡೆಯವರ ಈ ಹೇಳಿಕೆಗಳನ್ನು ಅವಲೋಕಿಸಿದಾಗ ಅವರ ಮೇಲೆ ಮಾಡಲಾದ ಆಪಾದನೆ ತಪ್ಪು ಗ್ರಹಿಕೆಯಿಂದ ಕೂಡಿದುದಾಗಿರುವುದು ಸ್ಪಷ್ಟವಾಗುವುದು. ಈ ಹೇಳಿಕೆಗಳು ಸ್ಪಷ್ಟ ಮತ್ತು ಸರಳವಾದುವುಗಳಾಗಿದ್ದು, ಊಹಾಪೂರ್ವಕವಾಗಿಯೂ ಕೂಡ ಈ ಹೇಳಿಕೆಗಳ ಆಧಾರದ ಮೇಲೆ (ಪು. 266)

ರಾನಡೆಯವರು ಭಾರತದ ಸ್ವಾತಂತ್ರ್ಯದ ವಿರೋಧಿಗಳಾಗಿದ್ದರೆಂದು ಹೇಳಲು ಬರುವುದಿಲ್ಲ. ಈ ಅರ್ಥದಲ್ಲಿ ಅವರ ಮೇಲೆ ಮಾಡಲಾದ ಆಪಾದನೆ ಸುಳ್ಳು ಮತ್ತು ಆಧಾರರಹಿತವಾಗಿದೆ.

ಈ ಹೇಳಿಕೆಗಳು ರಾನಡೆಯವರ ಆತ್ಮಗೌರವಕ್ಕೆ ಅಪಚಾರ ಬಗೆಯುವುದಂತಿರಲಿ, ಇವು ಅವರ ಬುದ್ಧಿವಂತಿಕೆ ಮತ್ತು ವಿವೇಚನಾಶಕ್ತಿಯ ಪ್ರಮಾಣವಾಗಿವೆ. ಈ ಹೇಳಿಕೆಗಳ ಮೂಲಕ ರಾನಡೆಯವರು ತಿಳಿಸಬಯಸಿದ್ದೇನು? ನನಗೆ ತಿಳಿದಮಟ್ಟಿಗೆ ರಾನಡೆಯವರು ಎರಡು ವಿಷಯಗಳನ್ನು ಹೇಳಬಯಸಿದ್ದರು. ಅವರು ತಿಳಿಸಬಯಸಿದ ಮೊದಲನೆಯ ವಿಷಯವೆಂದರೆ, ಭಾರತದ ಮೇಲೆ ಬ್ರಿಟನ್ನಿನ ವಿಜಯ ಭಾರತಕ್ಕೆ ತನ್ನ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಪುನರಚಿಸಿಕೊಳ್ಳಲು ಮತ್ತು ಸರಿಪಡಿಸಿಕೊಳ್ಳಲು, ತಾನು ಸ್ವತಂತ್ರವಾದ ನಂತರ ತನ್ನ ಮೇಲೆ ಸಂಭವಿಸಬಹುದಾದ ಯಾವುದೇ ರೀತಿಯ ವಿದೇಶೀ ಆಕ್ರಮಣವನ್ನು ಎದುರಿಸಲು ಸಮರ್ಥವಾಗಲು ಅವಶ್ಯವೆನಿಸಿದ ಆಶ್ರಯ, ಸಮಯ ಮತ್ತು ಅವಕಾಶ ಒದಗಿಸಿಕೊಟ್ಟಿದೆ. ರಾನಡೆಯವರು ತಿಳಿಸಬಯಸಿದ ಎರಡನೆಯ ಸಂಗತಿ ಎಂದರೆ, ಭಾರತವು ಒಂದು ಏಕೀಕೃತ ರಾಷ್ಟ್ರವಾಗುವ ಮೊದಲು ತನ್ನ ಭಾವನೆಗಳಲ್ಲಿ, ವಿಚಾರಗಳಲ್ಲಿ ಏಕತೆಯನ್ನು ಸಾಧಿಸಿಕೊಳ್ಳದೆ ಮತ್ತು ಸರ್ವಸಮ್ಮತವಾದ ಗುರಿಯನ್ನು ನಿಗದಿಗೊಳಿಸಿಕೊಳ್ಳುವ ಮೊದಲೇ ಬ್ರಿಟಿಷ್ ಚಕ್ರಾಧಿಪತ್ಯದಿಂದ ಹೊರಗೆ ಹೋಗುವುದೆಂದರೆ ಸ್ವಾತಂತ್ರ್ಯದ ಹೆಸರಿನಲ್ಲಿ ಅನಾಹುತ ಮತ್ತು ವಿನಾಶವನ್ನು ಆಹ್ವಾನಿಸಿದಂತೆಯೇ ಸರಿ.

ಈ ಸತ್ಯಾಂಶಗಳು ಎಷ್ಟು ಮಹತ್ವದವುಗಳಾಗಿವೆ? ಮುಂದುವರಿಯ ಬಯಸುವ ಯಾವುದೇ ಸಮಾಜದಲ್ಲಿ ಅನಿವಾರ್ಯವೆನಿಸಿದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಂಘರ್ಷಗಳನ್ನು ನಿವಾರಿಸಿಕೊಳ್ಳುವುದರಲ್ಲಿ ಆಶ್ರಯ, ರಕ್ಷಣೆಯ ಮಹತ್ವದ ಅರಿವು ನಮ್ಮ ಜನತೆಯಲ್ಲಿಲ್ಲ. ಇಂಗ್ಲೆಂಡಿನಲ್ಲಿ ಯಶಸ್ವಿಯಾದ ಸಂಸದೀಯ ಸಂಸ್ಥೆಗಳು ಯೂರೋಪಿನ ಯಶಸ್ವಿಯಾಗದಿರುವುದಕ್ಕೆ ಕಾರಣಗಳನ್ನು ವಿವರಿಸುವಂತೆ ಒಮ್ಮೆ ಪ್ರೊಫೆಸರ್ ಮೇಟ್‌ ಲ್ಯಾಂಡರನ್ನು ಕೇಳಲಾಯಿತು. ಈ ಪ್ರಶ್ನೆಗೆ ಅವರು ನೀಡಿದ ಉತ್ತರದಿಂದ ರಕ್ಷಣೆಯ ಮಹತ್ವದ ಅರಿವಾಗುತ್ತದೆ. ಈ ವ್ಯತ್ಯಾಸಕ್ಕೆ ಇಂಗ್ಲಿಸ್ ಕಾಲುವೆ ಕಾರಣ ಎಂದು ಅವರು ಉತ್ತರಿಸಿದರು. ಈ ಉತ್ತರದ ಮೂಲಕ ಅವರು ತಿಳಿಸಬಯಸಿದ್ದೇನೆಂದರೆ, ಇಂಗ್ಲಿಷ್ ಕಾಲುವೆ ವಿದೇಶೀ ಆಕ್ರಮಣದಿಂದ ರಕ್ಷಣೆ ಒದಗಿಸಿರುವ ಮೂಲಕ ಇಂಗ್ಲೆಂಡಿಗೆ ತನ್ನ ರಾಜಕೀಯ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಲು ಅವಕಾಶಮಾಡಿಕೊಟ್ಟಿತು. ಆದ್ದರಿಂದ ಇಂಗ್ಲೆಂಡಿನ ಜನತೆ ತಮ್ಮ ಸ್ವಾತಂತ್ರ್ಯ ನೀಡಲು ಇಂಗ್ಲೆಂಡ್ ಸುರಕ್ಷಿತವಾಯಿತು. ಆಶ್ರಯದ ಮಹತ್ವವನ್ನು ಅಬ್ರಹಾಂ ಲಿಂಕನ್ ಕೂಡ ಒತ್ತಿ ಹೇಳಿದರು. ಅಮೆರಿಕದ ರಾಜಕೀಯ ಸಂಸ್ಥೆಗಳು ಶಾಶ್ವತವಾಗಲು ಕಾರಣಗಳನ್ನು ವಿವರಿಸುತ್ತಾ ಅಬ್ರಹಾಂ ಲಿಂಕನ್ ಹೀಗೆ ಹೇಳಿದರು:

“ಬೋನಾಪಾರ್ಟಿಯನ್ನು ದಂಡನಾಯಕನನ್ನಾಗಿ ಹೊಂದಿದ್ದು” ಯುರೋಪ್, ಏಶಿಯಾ ಮತ್ತು ಆಫ್ರಿಕಾ ದೇಶಗಳ ಸಂಯುಕ್ತ ಸೈನ್ಯಗಳು ಬಲಪ್ರಯೋಗದಿಂದ ಓಹೈಯೋದಿಂದ ಒಂದು ಗುಟುಕುನೀರನ್ನೂ ಕುಡಿಯಲಾಗಲಿಲ್ಲ, ಅಥವಾ ಸಾವಿರಾರು ವರ್ಷಗಳ ಪ್ರಯತ್ನದಿಂದ ಬ್ಲೂರಿಡ್ಜ್ (Blue Ridge) ಮೇಲೆ ಒಂದು ರೇಖೆಯನ್ನೂ ಎಳೆಯಲಾಗಲಿಲ್ಲ”.

ಈ ತನ್ನ ಹೇಳಿಕೆಯಲ್ಲಿ ಲಿಂಕನ್ನನು ಸಾಮಾಜಿಕ ಪುನಾರಚನೆಯಲ್ಲಿಯೂ ಕೂಡ ಆಶ್ರಯದ (ರಕ್ಷಣೆ) ಮಹತ್ವ ಮತ್ತು ಅವಶ್ಯಕತೆಯನ್ನು ಒತ್ತಿ ಹೇಳಿದ್ದಾನೆ. ಇಂಗ್ಲೆಂಡ್ ಮತ್ತು ಅಮೆರಿಕಾಗಳಂತೆ ಭಾರತ ಸುರಕ್ಷಿತ ದೇಶವಲ್ಲ. ಭಾರತವು ಭೂಮಾರ್ಗ, ಜಲಮಾರ್ಗ ಮತ್ತು ವಾಯುಮಾರ್ಗಗಳ ಉದ್ದಗಲಗಳಲ್ಲಿದೆ. ಭಾರತಕ್ಕೆ ರಕ್ಷಣೆ ಇಲ್ಲದೇ ಇರುವುದರಿಂದ ತಾನು ಪುನರಚನೆಯ ಕಾರ್ಯದಲ್ಲಿ (ಪು. 267)

ತೊಡಗಿರುವಾಗ ಹೊರಗಿನಿಂದ ಆಕ್ರಮಣ ಸಂಭವಿಸಿದರೆ ದೇಶ ಛಿದ್ರವಾಗುವ ಭಯವಿದೆ. ಪುನರಚನೆಯ ಅವಧಿಯಲ್ಲಿ ಭಾರತಕ್ಕೆ ಒಣ ಬಂದರಿನ ಅವಶ್ಯಕತೆ ಇದೆ. ಬ್ರಿಟಿಷ್ ಚಕ್ರಾಧಿಪತ್ಯ ಭಾರತಕ್ಕೆ ಇಂತಹ ಹಡಗುಕಟ್ಟೆಯೋಪಾದಿಯಲ್ಲಿದೆ. ಭಾರತಕ್ಕೆ ಅತ್ಯವಶ್ಯವಾದ ಬ್ರಿಟಿಷ್ ಚಕ್ರಾಧಿಪತ್ಯ ನೀಡಲಿರುವ ರಕ್ಷಣೆಯ ಮಹತ್ವವನ್ನು ಅರಿತುಕೊಳ್ಳುವಂತೆ ತಮ್ಮ ದೇಶಬಾಂಧವರನ್ನು ಕೇಳಿಕೊಂಡ ರಾನಡೆಯವರ ಜಾಣ್ಮೆಯನ್ನು ಯಾರಾದರೂ ಪ್ರಶ್ನಿಸಲು ಸಾಧ್ಯವೇ?

ಒಂದು ಅಧೀನ ರಾಷ್ಟ್ರ ತನ್ನ ಆಧಿಪತ್ಯ ರಾಷ್ಟ್ರದಿಂದ ಸಂಬಂಧ ಕಡಿದುಕೊಂಡು ತನ್ನ ಸ್ವಾತಂತ್ರ್ಯವನ್ನು ಘೋಷಿಸಿಕೊಳ್ಳಲು ಸದಾ ಕಾತುರವಾಗಿರುತ್ತದೆ. ಆದರೆ ತನ್ನ ಮೇಲೆ ಆ ಸ್ವಾತಂತ್ರ್ಯದ ಪರಿಣಾಮವೇನಾಗಬಹುದೆಂದು ಅದು ಕ್ಷಣಕಾಲವೂ ಯೋಚಿಸುವುದಿಲ್ಲ. ಅಧೀನ ರಾಷ್ಟ್ರ ಮತ್ತು ಆಧಪತ್ಯ ರಾಷ್ಟ್ರಗಳ ನಡುವಣ ಬಾಂಧವ್ಯ ಆಧಿಪತ್ಯ ರಾಷ್ಟ್ರಕ್ಕಿಂತ ಅಧೀನ ರಾಷ್ಟ್ರಕ್ಕೇ ಹೆಚ್ಚು ಅವಶ್ಯಕ ಎಂಬ ಅಂಶವನ್ನು ಸಾಮಾನ್ಯವಾಗಿ ಅರಿತುಕೊಳ್ಳುವುದಿಲ್ಲ. ಇದು ಅಧೀನ ರಾಷ್ಟ್ರದ ಆಂತರಿಕ ಪರಿಸ್ಥಿತಿಯನ್ನವಲಂಬಿಸಿದೆ. ಅಧೀನ ರಾಷ್ಟ್ರ ಅಖಂಡವಾಗಿರಬಹುದು. ಅಥವಾ ಅದು ಅನೇಕ ಭಾಗಗಳಲ್ಲಿರಬಹುದು. ಆ ಭಾಗಗಳು ಯಾವಾಗಲೂ ಒಂದುಗೂಡದ ಸ್ಥಿತಿಯಲ್ಲಿರಬಹುದು. ಅಥವಾ ಭಾಗಗಳು ಸದ್ಯ ಒಂದಾಗದೇ ಇರಬಹುದಾದರೂ ದೀರ್ಘಕಾಲ ಒಟ್ಟಾಗಿದ್ದಾದರೆ ಒಂದಾಗುವ ಸಾಧ್ಯತೆ ಇರಬಹುದು. ಬಾಂಧವ್ಯವನ್ನು ಕಡಿದುಕೊಳ್ಳುವುದರಿಂದ ಉಂಟಾಗುವ ಪರಿಣಾಮಗಳು ಅಧೀನರಾಷ್ಟ್ರದ ಆಂತರಿಕ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತವೆ. ಅಖಂಡವಾದ ಅಧೀನ ರಾಷ್ಟ್ರಕ್ಕೆ ಬಾಂಧವ್ಯವನ್ನು ಪಡೆದುಕೊಳ್ಳುವುದರಿಂದ ಆ ರಾಷ್ಟ್ರಕ್ಕೆ ಹಿತಕಾರಿ ಎನಿಸಬಹುದು. ಆದರೆ ಎಂದೂ ಒಂದಾಗಲಾರದಂತಹ ಭಾಗಗಳಿಂದ ಕೂಡಿರುವ ರಾಷ್ಟ್ರಕ್ಕೆ ಬಾಂಧವ್ಯವನ್ನು ಕಡಿದುಕೊಳ್ಳುವುದರಿಂದ ಆಗಬಹುದಾದ ಹಿತಾಹಿತ ನಾವು ನೋಡುವ ದೃಷ್ಟಿಯನ್ನವಲಂಬಿಸಿದೆ. ಆದರೆ ಈ ಮೂರನೆಯ ಸಂಗತಿಯಲ್ಲಿ ಒಂದು ನಿಶ್ಚಿತ ಅಪಾಯವಿದೆ. ಕಾಲ ಅಪಕ್ವವಿರುವಾಗ ಬಾಂಧವ್ಯವನ್ನು ಕಡಿದುಕೊಂಡರೆ ಎಲ್ಲಿ ಏಕತೆ ಅಪೇಕ್ಷಣೀಯ ಮತ್ತು ಸಾಧ್ಯವಿದೆಯೋ ಅಲ್ಲಿ ವಿಚ್ಛಿದ್ರತೆಗೆಡೆಮಾಡಿದಂತಾಗುತ್ತದೆ. ಅದು ಬುದ್ಧ್ಯಾಪೂರ್ವಕ ಕೃತಿಯಾಗುತ್ತದೆ. ಈ ಎರಡನೆಯ ಅಪಾಯದ ವಿರುದ್ಧ ರಾನಡೆಯವರು ತಮ್ಮ ದೇಶಬಾಂಧವರನ್ನು ಎಚ್ಚರಗೊಳಿಸಬಯಸಿದ್ದರು.

ಇಂತಹ ಎಚ್ಚರಿಕೆಯನ್ನು ನೀಡುವ ರಾನಡೆಯವರ ಜಾಣ್ಮೆಯನ್ನು ಯಾರು ಪ್ರಶ್ನಿಸಲು ಸಾಧ್ಯ? ಇದರ ಅವಶ್ಯಕತೆಯನ್ನು ಪ್ರಶ್ನಿಸುವ ಮನೋಭಾವ ಉಳ್ಳವರು ಚೀನಾದ ಕಡೆಗೆ ನೋಡಲಿ. ಚೀನೀಕ್ರಾಂತಿ ಸಂಭವಿಸಿ ೩೦ ವರ್ಷ ಕಳೆದಿದೆ. ಚೀನೀಯರು ನೆಲೆಕಂಡಿದ್ದಾರೆಯೇ? ಇಲ್ಲ. “ಚೀನೀ ಕ್ರಾಂತಿಯ ಚಲನೆ ಯಾವಾಗ ನಿಲ್ಲಲಿದೆ” ಎಂದು ಜನ ಈಗಲೂ ಕೇಳುತ್ತಿದ್ದಾರೆ. ಮತ್ತು ಚೀನಾದೇಶದ ಪರಿಸ್ಥಿತಿಯನ್ನು ಬಲ್ಲವರಿಗೆ ಅದು “ಬಹುಶಃ ಮೂರು ವರ್ಷ ತೆಗೆದುಕೊಳ್ಳುವುದು” ಎಂದು ಹೇಳದೇ ವಿಧಿ ಇಲ್ಲ. ಚೀನಾದಲ್ಲಿ ಎಲ್ಲಾ ಜನರ ಸ್ವಾಮಿನಿಷ್ಠೆಯನ್ನು ಪಡೆದಂತಹ ಸುಭದ್ರ ಸರಕಾರವನ್ನು ಸ್ಥಾಪಿಸಲು ಸಾಧ್ಯವಾಗಿದೆಯೇ? ಆದಂತೂ ದೂರ ಉಳಿಯಿತು. ನಿಜ ಹೇಳಬೇಕಾದರೆ. ಚೀನಾದಲ್ಲಿ ಇಂದು ಕ್ರಾಂತಿಗಿಂತ ಮೊದಲಿದ್ದಕ್ಕಿಂತಲೂ ಹೆಚ್ಚಿನ ಒಡಕು ಮತ್ತು ಶಿಥಿಲತೆ ಇದೆ. ಕ್ರಾಂತಿಯಿಂದ ಉಂಟಾಗಿರುವ ಅನಾಹುತ ಎಷ್ಟು ಬೃಹತಮಾಣದ್ದಾಗಿದೆ ಎಂದರೆ ಚೀನಾದ ಸ್ವಾತಂತ್ರ್ಯವೇ ಗಂಡಾಂತರದಲ್ಲಿದೆ. ಚೀನಾ ತನ್ನ ಸ್ವಾತಂತ್ರ್ಯವನ್ನು ಕ್ರಾಂತಿಯ ಪರಿಣಾಮವಾಗಿ ಕಳೆದುಕೊಂಡಿಲ್ಲ. ಆದರೆ ತನಗಿದ್ದ ಅನೇಕ ಶತ್ರುಗಳಲ್ಲಿ ಅದನ್ನು ಯಾರು ಕಬಳಿಸಬೇಕೆಂಬ ವಿಷಯದಲ್ಲಿದ್ದ ಭಿನ್ನಾಭಿಪ್ರಾಯದಿಂದಾಗಿ ಕಳೆದುಕೊಂಡಿತು ಎಂಬ ಅಂಶ ಅನೇಕ ಭಾರತೀಯರಿಗೆ ತಿಳಿದಿಲ್ಲ. ಚೀನಾದ ಕ್ರಾಂತಿ ಒಂದು ದೊಡ್ಡ ತಪ್ಪಾಗಿತ್ತು. ಇದು ಯೂನ್-ಫಿನ್-ಕಾಯ್ ಅವರ ಅಭಿಪ್ರಾಯವಾಗಿತ್ತು. (ಪು. 268)

“ಸದ್ಯದ ಪರಿಸ್ಥಿತಿಯಲ್ಲಿ ಚೀನಾದ ಜನತೆ ಗಣರಾಜ್ಯ ಸ್ಥಾಪನೆಗೆ ಪಕ್ವವಾಗಿದ್ದಾರೆಯೇ ಅಥವಾ ಗಣರಾಜ್ಯವು ಚೀನಾದ ಜನತೆಗೆ ಬಗ್ಗುವಂತಹುದಾಗಿದೆಯೋ ಎಂಬ ವಿಷಯದಲ್ಲಿ ನನಗೆ ಸಂಶಯವಿದೆ…. ಚೀನಾದ ಜನತೆಗೆ ಅಥವಾ ಅಲ್ಲಿನ ಇಂದಿನ ಪರಿಸ್ಥಿತಿಗೆ ಒಗ್ಗದಂತಹ ಯಾವುದೇ ವಿಧದ ಸರಕಾರದ ಪ್ರಯೋಗದ ಮುಖಾಂತರ ಸಾಧಿಸಲಾಗದ ಭದ್ರತೆ ಮತ್ತು ಸಾಮಾನ್ಯಸ್ಥಿತಿಯನ್ನು ಸೀಮಿತ ರೂಪದ ರಾಜಪ್ರಭುತ್ವವನ್ನು ಸ್ಥಾಪಿಸುವುದರ ಮೂಲಕ ಸಾಧಿಸಲು ಸಾಧ್ಯ…. ಸದ್ಯ ಚಕ್ರವರ್ತಿಯನ್ನು ಉಳಿಸಿಕೊಂಡು ಹೋಗಬೇಕೆಂಬುದಕ್ಕೆ ಒಂದೇ ಒಂದು ಕಾರಣವೆಂದರೆ ಸಂವೈಧಾನಿಕ ರಾಜಪ್ರಭುತ್ವದಲ್ಲಿ ನನಗಿರುವ ನಂಬುಗೆ. ಅಂತಹ ಸರಕಾರ ಪದ್ಧತಿಯನ್ನು ಹೊಂದಿದ್ದಾದರೆ ಆ ಸ್ಥಾನಕ್ಕೆ ಜನತೆ ಒಪ್ಪುವಂತಹ ಇನ್ನಾರೂ ಈ ಗಂಡಾಂತರ ಸಮಯದಲ್ಲಿ ಚೀನಾವನ್ನು ವಿನಾಶ ಮತ್ತು ಅದರಿಂದ ಸಂಭವಿಸಬಹುದಾದ ಅನೇಕ ಕೆಡುಕುಗಳಿಂದ ರಕ್ಷಿಸುವುದೇ ನನ್ನ ಏಕೈಕ ಉದ್ದೇಶವಾಗಿದೆ”.

ಭಾರತೀಯರಿಗೆ ಚೀನಾ ಒಂದು ಉದಾಹರಣೆಯಾಗದೆ ಎಚ್ಚರಿಕೆಯಾಗಬೇಕೆಂದು ಯೋಚಿಸುವವರು ರಾನಡೆಯವರು ಸ್ವಾತಂತ್ರ್ಯ ವಿರೋಧಿ ಎಂದು ಆಪಾದಿಸುವ ಬದಲು, ತನ್ನ ದೇಶ ಬಾಂಧವರನ್ನು ಅಪಕ್ವ ಕಾಲದ ಕ್ರಾಂತಿಯ ಕೇಡುಗಳ ವಿರುದ್ಧ ಎಚ್ಚರಿಸಿದ್ದಕ್ಕಾಗಿ ಸಂತೋಷಪಡುವರು.

10

ಮಹಾಪುರುಷರ ಕೊನೆಯ ಮಾತುಗಳು ಮತ್ತು ಅವರ ಕೊನೆಯ ವಿಷಾದ ಅಥವಾ ಪಶ್ಚಾತ್ತಾಪಗಳ ಕುರಿತು ಮುಂದಿನ ತಲೆಮಾರಿನವರಿಗೆ ಯಾವಾಗಲೂ ಹೆಚ್ಚು ಆಸಕ್ತಿ. ಮಹಾಪುರುಷರ ಕೊನೆಯ ಮಾತುಗಳು ಈ ಪ್ರಪಂಚದ ತಮ್ಮ ಅನುಭವಗಳ ಅಥವಾ ಮುಂದಿನ ಪ್ರಪಂಚದ ದೃಷ್ಟಿಯ ಸೂಚಕಗಳಾಗಿರಲಿಲ್ಲ. ಉದಾಹರಣೆಗೆ, ಸಾಕ್ರಟಿಸನು ಕ್ರಿಟೊನನ್ನು ಕರೆದು ಹೇಳಿದ ಕೊನೆಯ ವಿಚಾರಗಳೇನೆಂದರೆ, “ನಾವು ಎಸ್ಕೂಲೇಪಿಯಸ್‌ನಿಗೆ ಒಂದು ಹುಂಜವನ್ನು ಕೊಡಬೇಕಾಗಿದೆ. ಆ ಋಣವನ್ನು ತೀರಿಸು. ಯಾವ ಕಾರಣದಿಂದಲೂ ಬಿಡಬೇಡ”. ಆದರೆ ಅವರ ಕಟ್ಟಕಡೆಯ ಪಶ್ಚಾತ್ತಾಪಗಳು ಅತ್ಯಂತ ಅರ್ಥಪೂಣವಾದವುಗಳಾಗಿದ್ದು ನಮ್ಮ ಚಿಂತನೆಗೆ ಯೋಗ್ಯವಾಗಿರುತ್ತವೆ. ನೆಪೋಲಿಯನ್ನನ ದೃಷ್ಟಾಂತವನ್ನೇ ತೆಗೆದುಕೊಳ್ಳೋಣ. ಸೇಂಟ್ ಹೆಲೆನಾದಲ್ಲಿ ನೆಪೋಲಿಯನ್ನನ ಮರಣದ ಮುಂಚೆ ಆತನ ಕೊನೆಯ ಪಶ್ಚಾತ್ತಾಪಗಳೆನ್ನಬಹುದಾದ ಮೂರು ಮೂಲ ಸಂಗತಿಗಳ ಬಗ್ಗೆ ಅವನು ಚಡಪಡಿಸುತ್ತಿದ್ದುದಾಗಿ ಪ್ರಮಾಣವಿದೆ. ಅವು ಯಾವುವೆಂದರೆ: ತಾನು ತನ್ನ ಜೀವನದ ಇನ್ನಾವುದೇ ಅತ್ಯುನ್ನತ ಘಳಿಗೆಯಲ್ಲಿ ಸಾಯಲು ಸಾಧ್ಯವಿರಲಿಲ್ಲ; ತಾನು ತನ್ನ ಈಜಿಪ್ತನ್ನು ತೊರೆದು ಪೌರ್ವಾತ್ಯಪ್ರದೇಶದ ತನ್ನ ಮಹಾದಾಕಾಂಕ್ಷೆಯನ್ನು ಬಿಟ್ಟದ್ದು. ಮತ್ತು ಕೊನೆಯದಾದರೂ ಯಾವ ರೀತಿಯಲ್ಲಿಯೂ ಕನಿಷ್ಠವಲ್ಲದ ವಾಟರ್‌ಲೂನಲ್ಲಿ ತನ್ನ ಪರಾಭವ. ರಾನಡೆಯವರು ಯಾವುದಾದರೂ ಅತ್ಯುನ್ನತ ಪಶ್ಚಾತ್ತಾಪಗಳನ್ನು ಹೊಂದಿದ್ದರೇ? ಒಂದು ಮಾತಂತೂ ನಿಜ. ರಾನಡೆಯವರಿಗೆ ಯಾವುದೇ ಪಶ್ಚಾತ್ತಾಪಗಳಿದ್ದರೂ, ನೆಪೋಲಿಯನ್ನನ ಮನಃಶಾಂತಿಯನ್ನು ಕದಡಿದಂತಹ ಪಶ್ಚಾತ್ತಾಪಗಳು ಅವರಿಗಿರಲಿಲ್ಲ. ರಾನಡೆಯವರು ಸೇವೆಗಾಗಿ ಬದುಕಿದ್ದರೇ ಹೊರತು ಕೇವಲ ಪ್ರತಿಷ್ಠೆ ಅಥವಾ ಹೊಗಳಿಕೆಗಾಗಿಯಲ್ಲ. ತಮ್ಮ ಮರಣದ ಘಳಿಗೆ ಅತಿಶಯ ಕೀರ್ತಿಮಯವಾಗುವುದೋ ಇಲ್ಲವೋ ಅಥವಾ ತಾವು ಮಹಾಪುರುಷನಾಗಿ ಸಾವನ್ನಪ್ಪುವರೋ ಅಥವಾ ಒಡೆಯನಾಗಿ ಮರಣಹೊಂದುವರೋ ಅಥವಾ ಸಾಧಾರಣ ಶೀತವ್ಯಾಧಿಯಿಂದ ಮರಣಹೊಂದಿದ ಒಬ್ಬ ಸಾಮಾನ್ಯ ವ್ಯಕ್ತಿಯಾಗಿಯೋ ಎಂಬ ಬಗ್ಗೆ ಅವರು ಚಿಂತಿಸಲಿಲ್ಲ. ವಾಸ್ತವಿಕವಾಗಿ (ಪು. 269)

ರಾನಡೆಯವರಿಗೆ ಯಾವ ಪಶ್ಚಾತ್ತಾಪಗಳ ಚಿಂತೆಯೂ ಇರಲಿಲ್ಲ. ಅವರಿಗೆ ಪಶ್ಚಾತ್ತಾಪಪಡುವಂತಹ ಯಾವುದೇ ಕೃತ್ಯ ಅಥವಾ ಘಟನೆಯ ಅರಿವು ಇರಲಿಲ್ಲವೆಂಬುದು ಸ್ಪಷ್ಟವಿದೆ. ಅವರು ಸುಖಮಯ ಮತ್ತು ಶಾಂತಿಯುತ ಮರಣವನ್ನು ಅಪ್ಪಿದರು. ಈಗ ಅವರು ಹುಟ್ಟಿ ಬಂದರೆ ಅವರು ಯಾವುದೇ ವಿಷಯದ ಬಗ್ಗೆ ಪಶ್ಚಾತ್ತಾಪ ಪಡಬಹುದೇ ಎಂಬ ಪ್ರಶ್ನೆ ಔಚಿತ್ಯಪೂರ್ಣವೆನಿಸುವುದು. ಒಂದು ವಿಷಯದಲ್ಲಿ ಮಾತ್ರ ಅವರು ಅತ್ಯಂತ ದುಃಖಿತರಾಗುವರೆಂಬ ಸಂಪೂರ್ಣ ಭರವಸೆ ನನಗಿದೆ. ಅದಾವುದೆಂದರೆ ಇಂದು ಭಾರತದಲ್ಲಿ ಉದಾರವಾದಿ ಪಕ್ಷದ ಪರಿಸ್ಥಿತಿ.

ಭಾರತದಲ್ಲಿ ಇಂದು ಉದಾರವಾದಿ ಪಕ್ಷದ ಸ್ಥಿತಿ ಏನಾಗಿದೆ? ಅದು ಅಶಕ್ತವಾಗಿದೆ ಎಂದರೆ ಅತ್ಯಂತ ಸೌಮ್ಯ ವಿವರಣೆ ಎನಿಸುವುದು. ಉದಾರವಾದಿಗಳು ಭಾರತದ ರಾಜಕೀಯದ ಅತ್ಯಂತ ಹೀನರಾಗಿದ್ದಾರೆ. ನಾರ್ಟನ್ನನು ಇನ್ನೊಂದು ಸಂದರ್ಭದಲ್ಲಿ ಹೇಳಿದ ಮಾತುಗಳನ್ನು ಬಳಸುವುದಾದರೆ, ಇವರು ಜನತೆಯಿಂದ ತಿರಸ್ಕಾರಕ್ಕೆ ಒಳಗಾಗಿದ್ದು, ಸರಕಾರದಲ್ಲೂ ಮಾನ್ಯತೆ ಪಡೆದಿಲ್ಲ. ಇವೆರಡರ ಗುಣಗಳನ್ನು ಹೊಂದಿರುವುದಂತಿರಲಿ, ಇವರು ಈ ಎರಡು ಕಡೆಯ ದುರ್ಗುಣಗಳನ್ನು ಅಳವಡಿಸಿಕೊಂಡಿದ್ದಾರೆ. ಉದಾರವಾದಿ ಪಕ್ಷವು ಕಾಂಗ್ರೆಸ್ ಪಕ್ಷದ ಎದುರಾಳಿಯಾಗಿದ್ದ ಕಾಲ ಒಂದಿತ್ತು. ಆದರೆ ಇಂದು ಉದಾರವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳ ನಡುವಣ ಸಂಬಂಧ ಯಜಮಾನ ಮತ್ತು ಆತನ ನಾಯಿಯ ಸಂಬಂಧದಂತಿದೆ. ಆಗಾಗ್ಗೆ ನಾಯಿ ತನ್ನ ಯಜಮಾನನಿಗೆ ಬೊಗಳುತ್ತದೆ. ಆದರೆ ತನ್ನ ಜೀವನದ ಹೆಚ್ಚುಕಾಲ ಯಜಮಾನನನ್ನು ಹಿಂಬಾಲಿಸುವುದರಲ್ಲಿಯೇ ತೃಪ್ತಿಯಾಗುತ್ತದೆ. ಉದಾರವಾದಿ ಪಕ್ಷ ಕಾಂಗ್ರೆಸ್ ಪಕ್ಷದ ಬಾಲವಲ್ಲದೆ ಇನ್ನೇನು? ಉದಾರವಾದಿಗಳು ಕಾಂಗ್ರೆಸ್‌ನಲ್ಲಿ ಏಕೆ ವಿಲೀನವಾಗಬಾರದೆಂದು ಕೆಲವರು ಕೇಳುವಷ್ಟು ಅದರ ಅಸ್ತಿತ್ವ ನಿಕೃಷ್ಟವಾಗಿದೆ. ರಾನಡೆಯವರು ಉದಾರ ಪಕ್ಷದ ಅವಸಾನದ ಬಗ್ಗೆ ಪಶ್ಚಾತ್ತಾಪಪಡದೇ ಇರಲು ಹೇಗೆ ಸಾಧ್ಯ? ಯಾವುದೇ ಭಾರತೀಯನಾದರೂ ಪಶ್ಚಾತ್ತಾಪಪಡದಿರುವುದು ಹೇಗೆ ಸಾಧ್ಯ?

ಉದಾರವಾದಿ ಪಕ್ಷದ ಪತನ ಉದಾರವಾದಿಗಳ ದುರಂತ. ಆದರೆ ಅದು ನಿಜವಾಗಿಯೂ ದೇಶದ ದುರ್ದೈವ. ಪ್ರಜಾಸರಕಾರಕ್ಕೆ ಪಕ್ಷದ ಆವಶ್ಯಕತೆ ಎಷ್ಟಿದೆ ಎಂದರೆ ಅದಿಲ್ಲದೆ ಅಂತಹ ಸರಕಾರವನ್ನು ನಡೆಸಿಕೊಂಡು ಹೋಗುವುದು ಊಹಿಸಲು ಅಸಾಧ್ಯ ಅಮೆರಿಕದ ಒಬ್ಬ ಪ್ರಖ್ಯಾತ ಇತಿಹಾಸಕಾರ ಹೇಳುವಂತೆ:

“ನಮ್ಮ ಸಂವಿಧಾನ ರಚನೆಯ ಯಾವುದೇ ಅಂಗವನ್ನು ನಾಶಗೊಳಿಸುವುದನ್ನಾಗಲಿ, ಸಂವಿಧಾನವು ವಿವರಿಸಿದ ಬಹುತೇಕ ಭಾಗಗಳನ್ನು ಮುಳುಗಿಸುವುದನ್ನು ಊಹಿಸುವುದು ರಾಜಕೀಯ ಸಂಯೋಜನೆಯಿಲ್ಲದೆ ನಾವು ವ್ಯವಹರಿಸಬಲ್ಲೆವೆಂದು ಊಹಿಸುವುದಕ್ಕಿಂತ ಸುಲಭ, ಏಕೆಂದರೆ ಅವು ನಮ್ಮ ಸತ್ವಯುತವಾದ ಸಂಸ್ಥೆಗಳು”

ಒಂದು ದೇಶದ ಮತದಾರ ಸಮೂಹ ಒಂದು ಪಕ್ಷದ ಶಿಸ್ತು ಮತ್ತು ನಿಯಂತ್ರಣವಿಲ್ಲದೆ ದೇಶವನ್ನು ಆಳುವುದೆಂದರೆ, ಜೇಮ್ಸ್ ಬ್ರಾಯಿಸ್‌ ಹೇಳಿದಂತೆ:

“ಒಂದು ರೈಲು-ಮಂಡಳಿಯ ವ್ಯವಹಾರಗಳನ್ನು ಸಮವಸ್ತ್ರಧರಿಸಿದ ಪಾಲುದಾರರ ಮತಗಳಿಂದ, ಅಥವಾ ಒಂದು ಹಡಿಗಿನ ಯಾನದ ಮಾರ್ಗವನ್ನು ಪ್ರಯಾಣಿಕರ ಮತಗಳಿಂದ ನಿರ್ಧರಿಸುವ ಪ್ರಯತ್ನದಂತಾಗುತ್ತದೆ”.

ಒಂದು ರಾಜಕೀಯ ಪಕ್ಷವು ಪ್ರಜಾಸರಕಾರದ ಅವಿಭಾಜ್ಯ ಅಂಗ ಎಂಬುದನ್ನು ಅಲ್ಲಗಳೆಯಲಾಗದು. ಆದರೆ ಏಕಪಕ್ಷದ ಆಡಳಿತ ಪ್ರಜಾಸರಕಾರಕ್ಕೆ ಮಾರಕ ಎಂಬ ಅಂಶವನ್ನೂ ಅಲ್ಲಗಳೆಯಲು ಆಗದು. (ಪು. 270)

ವಾಸ್ತವಿಕವಾಗಿ ಅದು ಪ್ರಜಾಸರಕಾರಕ್ಕೆ ವಿರೋಧವೆನಿಸುವುದು. ಈ ಸಂಗತಿಗೆ ಜರ್ಮನಿ ಮತ್ತು ಇಟಲಿ ಅತ್ಯಂತ ಸುಸಂಗತವಾದ ಪ್ರಮಾಣವಾಗಿದೆ. ಸರ್ವಾಧಿಕಾರಿ ರಾಷ್ಟ್ರಗಳಿಂದ ಜಾಗೃತರಾಗುವುದರ ಬದಲು ನಾವು ಅವುಗಳನ್ನು ಅನುಕರಿಸುವಂತಹ ಮಾದರಿಗಳನ್ನಾಗಿ ತೆಗೆದುಕೊಳ್ಳುತ್ತಿದ್ದೇವೆ. ಈ ರೀತಿ ಮಾಡುತ್ತಿರುವವರು ಏಕಪಕ್ಷ ಸರಕಾರದಿಂದುಂಟಾಗಬಹುದಾದ ಸರ್ವಾಧಿಕಾರ ಮತ್ತು ಸಾರ್ವಜಿಕ ವ್ಯವಹಾರಗಳನ್ನು ತಪ್ಪುದಾರಿ ಹಿಡಿಸುವ ಸಾಧ್ಯತೆಯನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಏಕ ಪಕ್ಷ ಪ್ರಜಾ ಸರಕಾರವೆಂದರೆ ಪ್ರಜಾಪ್ರಭುತ್ವದ ಹೆಸರಿನಲ್ಲಿ ತೆರೆಮರೆಯಲ್ಲಿ ನಿರಂಕುಶಾಡಳಿತವೆನಿಸುವುದು. ಏಕಪಕ್ಷ ಸರಕಾರ ಪದ್ಧತಿಯಲ್ಲಿ ಬಹುಸಂಖ್ಯಾತರ ದಬ್ಬಾಳಿಕೆ ಕೇವಲ ಅರ್ಥರಹಿತ ಪದವಾಗಿರದೆ ಅದು ಹೇಗೆ ನಿಜವಾಗಿಯೂ ಅನಾಹುತಕಾರಿಯಾಗಬಲ್ಲವೆಂಬುದು ಭಾರತದಲ್ಲಿ ಕಾಂಗ್ರೆಸ್ ಆಡಳಿತದಿಂದ ನಮ್ಮ ಅನುಭವಕ್ಕೆ ಬಂದಿದೆ.

ಬ್ರಿಟಿಷರ ಆಡಳಿತದಲ್ಲಿ ಅವಶ್ಯವೆನಿಸಿದ್ದ ಕಾರ್ಯಾಂಗ ಮತ್ತು ನ್ಯಾಯಾಂಗಗಳ ಪ್ರತ್ಯೇಕತೆ ಈಗ ಅವಶ್ಯವಿಲ್ಲ ಎಂದು ಶ್ರೀ ರಾಜಗೋಪಾಲಚಾರಿಯವರು ಹೇಳಿದ್ದನ್ನು ನಾವು ಕೇಳಿಲ್ಲವೆ? ಒಬ್ಬ ನಿರಂಕುಶಾಧಿಕಾರಿಯ ರಕ್ತ ದಾಹವನ್ನು ಇದು ತೋರಿಸುವುದಿಲ್ಲವೇ? ಚುನಾಯಿತವಾದ ಮಾತ್ರಕ್ಕೆ ಅದು ನಿರಂಕುಶಾಧಿಕಾರವಾಗದೇ ಇರದು. ಅದೇ ರೀತಿ ನಿರಂಕುಶಾಧಿಕಾರಿಗಳು ನಮ್ಮವರೇ ಆದ ಮಾತ್ರಕ್ಕೆ ಅದು ಸಮ್ಮತವಾಗಲಾರದು. ಚುನಾಯಿತ ನಿರಂಕುಶಾಧಿಕಾರವನ್ನು ಸ್ಥಾಪಿಸುವುದರ ಮೂಲಕ ದಬ್ಬಾಳಿಕೆಯ ವಿರುದ್ಧ ರಕ್ಷಣೆ ಒದಗಿಸುವುದು ಸಾಧ್ಯವಿಲ್ಲ. ನಿರಂಕುಶಾಡಳಿತದ ವಿರುದ್ಧ ಒದಗಿಸಬಹುದಾದ ನಿಜವಾದ ರಕ್ಷಣೆ ಎಂದರೆ ಅದನ್ನು ಪದಚ್ಯುತಗೊಳಿಸುವ ಸಾಧ್ಯತೆ, ಅದನ್ನು ದುರ್ಬಲಗೊಳಿಸುವ ಮತ್ತು ಅದರ ಸ್ಥಾನವನ್ನು ವಿರೋಧಿ ಪಕ್ಷಗಳು ಪಡೆಯುವ ಸಾಧ್ಯತೆಯಲ್ಲಿ ಅಡಗಿದೆ. ಪ್ರತಿಯೊಂದು ಸರಕಾರವು ತನ್ನ ನಿರ್ಣಯಗಳಲ್ಲಿ ಎಡವಬಹುದು. ಅನೇಕ ಸರಕಾರಗಳು ದುರಾಡಳಿತ ಮಾಡಬಹುದು. ಮತ್ತು ಹಲವು ಸರಕಾರಗಳು ಭ್ರಷ್ಟಾಚಾರ, ಅನ್ಯಾಯ, ದಬ್ಬಾಳಿಕೆ ಮತ್ತು ದುರುದ್ದೇಶದಿಂದ ಕೂಡಿರಬಹುದು. ಯಾವ ಸರಕಾರವೂ ಟೀಕೆಗೆ ಹೊರತಾಗಿರಬಾರದು. ಆದರೆ ಸರಕಾರವನ್ನು ಯಾರು ಟೀಕಿಸಬಲ್ಲರು? ಅದು ವ್ಯಕ್ತಿಗಳಿಂದ ಎಂದೂ ಆಗಲಾರದು. ತನ್ನ ಶತ್ರುಗಳೊಡನೆ ಹೇಗೆ ವ್ಯವಹರಿಸಬೇಕೆಂಬ ಬಗ್ಗೆ ಸರ್ ಟೋಬಿ ಯವರು ತಮ್ಮ ಉಪದೇಶವನ್ನು ಬಿಟ್ಟುಹೋಗಿದ್ದಾರೆ. ಅವರು ಹೇಳಿದಂತೆ: “ಅವನನ್ನು ನೋಡಿದ ತತ್‌ಕ್ಷಣವೇ ಕತ್ತಿಯನ್ನು ಎಳೆ ಎಳೆಯುತ್ತಿದ್ದಂತೆಯೇ ಕರಾಳವನ್ನುಂಟುಮಾಡು”. ಆದರೆ ಸರಕಾರದ ವಿರುದ್ಧ ನಿಲ್ಲಬಯಸುವ ವ್ಯಕ್ತಿಗೆ ಇದು ಸಾಧ್ಯವಾಗದು. ಯಶಸ್ವಿಯಾಗಿ ಈ ಪಾತ್ರ ನಿರ್ವಹಿಸುವ ವ್ಯಕ್ತಿಗಳ ವಿರುದ್ಧ ಅನೇಕ ಆತಂಕಗಳಿವೆ. ಮೊದಲನೆಯದಾಗಿ, ಬೈಸ್ ಹೇಳಿದಂತೆ ವಿಧಿವಾದದಲ್ಲಿ ಜನಸಮೂಹದ ನಂಬುಗೆ, ಈ ನಂಬುಗೆಯಿಂದಾಗಿ ಜನರಲ್ಲಿ ಸ್ವಪ್ರಯತ್ನದಲ್ಲಿ ವಿಶ್ವಾಸವೇ ಇಲ್ಲದಂತಾಗಿದೆ. ಮಾನವರ ಎಲ್ಲಾ ಆಗುಹೋಗುಗಳು ವ್ಯಕ್ತಿಪ್ರಯತ್ನದಿಂದ ಪ್ರಭಾವಿತವಾಗಲು ಸಾಧ್ಯವಿಲ್ಲ ಎಂಬ ಅವರ ಭಾವನೆ ಅಸಹಾಯಕತೆಯ ಭಾವನೆಗೆ ದಾರಿ ಮಾಡಿದೆ. ಎರಡನೆಯದಾಗಿ, ಬಹು ಸಂಖ್ಯಾತರ ದಬ್ಬಾಳಿಕೆ. ತಮ್ಮ ಮಾತನ್ನು ಕೇಳದವರ ಮೇಲೆ ದಂಡ ಮತ್ತು ಬಹಿಷ್ಕಾರ ಹಾಕುವ ಹಾಗೂ ಇತರ ಸಾಮಾಜಿಕ ಅನಾನುಕೂಲತೆಗಳನ್ನುಂಟುಮಾಡುವ ಸಾಧ್ಯತೆ ನಮ್ಮಲ್ಲಿ ಕೆಲವರಿಗೆ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಇದರ ಅನುಭವ ಆಗಿದೆ. ಮೂರನೆಯದಾಗಿ, ತನಿಖಾ ವಿಭಾಗದ ಭಯ. ಸರಕಾರದ ಅಧೀನದಲ್ಲಿರುವ ಗೆಸ್ಟ್ಪೋ (Gestapo) ಮತ್ತು ಇತರ ಸಾಧನಗಳ ಮೂಲಕ ಟೀಕಿಸುವವರನ್ನು ಹಿಂಬಾಲಿಸಿ ಅವರ ಬಾಯಿ ಮುಚ್ಚಿಸಲಾಗುವುದು.

ಧೈರ್ಯವೇ ಸ್ವಾಂತ್ರ್ಯದ ತಳಹದಿಯಾಗಿದೆ. ಅಂತಹ ದೈರ್ಯ ವ್ಯಕ್ತಿಗಳು ಸಂಘಟಿತರಾಗುವುದರಲ್ಲಿ ಜನಿಸುವುದು. ಸರಕಾರವನ್ನು ನಡೆಸಲು ಪಕ್ಷದ ಅವಶ್ಯಕತೆ ಇದೆ. ಆದರೆ ಸರಕಾರದಲ್ಲಿ ದಬ್ಬಾಳಿಕೆ (ಪು. 271)

ನಡೆಯದಂತೆ ನೋಡಿಕೊಳ್ಳಲು ಎರಡು ಪಕ್ಷಗಳು ಅವಶ್ಯ. ಪ್ರಜಾಸತ್ತಾತ್ಮಕ ಸರಕಾರ ಎರಡು ಪಕ್ಷಗಳ ಮೂಲಕ ಕೆಲಸ ಮಾಡಿದಾಗಲೇ ಅದು ಪ್ರಜಾಸತ್ತಾತ್ಮಕವಾಗಬಲ್ಲದು. ಅಂದರೆ ಒಂದು ಪಕ್ಷ ಅಧಿಕಾರದಲ್ಲಿದ್ದಾಗ ಇನ್ನೊಂದು ವಿರೋಧಿ ಪಕ್ಷವಾಗಿರಬೇಕು. ಜೆನ್ನಿಂಗ್ಸ್‌ ಹೇಳಿರುವಂತೆ:

“ವಿರೋಧಿ ಪಕ್ಷವಿಲ್ಲದೆ ಪ್ರಜಾಪ್ರಭುತ್ವವಿರಲಾರದು. ‘ಮಹಾಪ್ರಭುವಿನ ಪ್ರತಿ ಪಕ್ಷ’ ಅರ್ಥರಹಿತವಾದ ಮಾತಲ್ಲ, ಮಹಾಪ್ರಭುವಿಗೆ ಪ್ರತಿ ಪಕ್ಷವೂ ಬೇಕು, ಸರಕಾರವೂ ಬೇಕು”.

ಈ ಎಲ್ಲಾ ವಿಷಯಗಳನ್ನು ಪರಿಶೀಲಿಸಿದಾಗ, ಭಾರತದಲ್ಲಿ ಉದಾರವಾದಿ ಪಕ್ಷದ ಪತನ ಮಹಾದುರಂತವಲ್ಲ ಎಂದು ಯಾರು ಹೇಳಲು ಸಾಧ್ಯ? ಉದಾರವಾದಿ ಪಕ್ಷದ ಪುನರುಜ್ಜಿವನವಾಗದೆ ಅಥವಾ ಇನ್ನೊಂದು ಪಕ್ಷವನ್ನು ರಚಿಸದೆ ಸ್ವಾತಂತ್ರ್ಯ ಹೋರಾಟ ಮಾಡಿದರೆ ಸ್ವಾತಂತ್ರ್ಯದ ಬದಲು ದಬ್ಬಾಳಿಕೆ ಸ್ಥಾಪಿತವಾಗುವುದು. ದಬ್ಬಾಳಿಕೆಯು ಅದು ದೇಶೀಯವೇ ಆಗಿರಲಿ, ವಿದೇಶೀಯೇ ಆಗಿರಲಿ ಸ್ವಾತಂತ್ರ್ಯದ ವಿರೋಧಾಭಾಸವೆನಿಸುವುದು. ಭಾರತೀಯರು ಈ ಸಂಗತಿಯನ್ನು ಅರಿತುಕೊಳ್ಳದೇ ಇರುವುದು ದುರ್ದೈವದ ಸಂಗತಿ. ಕಾಂಗ್ರೆಸ್ ಪಕ್ಷ ಒಂದೇ ಮತ್ತು ಕಾಂಗ್ರೆಸ್ ಎಂದರೆ ರಾಷ್ಟ್ರ ಎಂದು ಹಾಡುತ್ತಿರುವವರು ತಮ್ಮ ನಿರ್ಣಯಕ್ಕಾಗಿ ಪಶ್ಚಾತಾಪಪಡುವ ಕಾಲ ಬರುವುದೆಂಬುದರಲ್ಲಿ ನನಗೆ ಸಂಶಯವಿಲ್ಲ.

ಉದಾರವಾದಿ ಪಕ್ಷ ಏಕೆ ಬಿದ್ದು ಹೋಯಿತು? ರಾನಡೆಯವರ ಸಿದ್ಧಾಂತದಲ್ಲಿ ಏನಾದರೂ ದೋಷವಿದೆಯೇ? ಆ ಪಕ್ಷದಲ್ಲಿರುವ ವ್ಯಕ್ತಿಗಳಲ್ಲಿ ಏನಾದರೂ ದೋಷಗಳಿವೆಯೇ? ಅಥವಾ ಆ ಪಕ್ಷದ ಕಾರ್ಯ ವಿಧಾನದಲ್ಲಿ ಏನಾದರೂ ತಪ್ಪುಗಳಿವೆಯೇ? ನನ್ನ ಮಟ್ಟಿಗೆ ಹೇಳುವುದಾದರೆ ರಾನಡೆಯವರ ಸಿದ್ಧಾಂತದಲ್ಲಿ ಮೂಲಭೂತವಾದ ಯಾವ ನ್ಯೂನತೆಯೂ ಇರಲಿಲ್ಲ. ಅಥವಾ ಈ ಎರಡು ಪಕ್ಷಗಳಲ್ಲಿ ಕಾಂಗ್ರೆಸ್‌ನ ಗುರಿ ಶ್ರೇಷ್ಠವಾಗಿತ್ತು ಮತ್ತು ಉದಾರವಾದಿ ಪಕ್ಷ ಶ್ರೇಷ್ಠ ಪುರುಷರಿಂದ ಕೂಡಿತ್ತು ಎಂದು ಹೇಳಲೂ ಆಗದು. ಉದಾರವಾದಿ ಪಕ್ಷದಲ್ಲಿ ಎರಡೂ ಇದ್ದವು. ಉದಾರವಾದಿ ಪಕ್ಷದ ಪತನ ಅಂಗರಚನೆಯ ಅಭಾವದಿಂದಾಗಿದೆ ಎಂದು ನನಗನಿಸುತ್ತದೆ.

ಉದಾರವಾದಿ ಪಕ್ಷದ ರಚನೆಯಲ್ಲಿನ ದೋಷಗಳನ್ನು ಮತ್ತು ನ್ಯೂನತೆಗಳನ್ನು ಬಯಲಿಗೆಳೆಯುವುದು ಉಪಯುಕ್ತವೆನಿಸದಿರಲಾರದು.

ಪೆಂಡಲ್‌ ಟನ್ ಹೆರಿಂಗ್‌ಟನ್ ತನ್ನ ‘ಪೋಟಿಸ್ ಆಫ್ ಡೆಮಾಕ್ರಸಿ’ ಎಂಬ ಗ್ರಂಥದಲ್ಲಿ ಹೇಳಿರುವಂತೆ ಒಂದು ಪಕ್ಷದ ರಚನೆ ಮೂರು ಸಮಾನ ಕೇಂದ್ರದ ವರ್ತುಲಗಳಲ್ಲಿ ಪಸರಿಸಿರುತ್ತದೆ. ಮಧ್ಯ ವರ್ತುಲ ಪಕ್ಷದ ರಚನೆ ನಿಯಂತ್ರಿಸುವ ಹೈಕಮಾಂಡ್ ಎಂಬ ಕರೆಯಲಾಗುವ ಕೆಲವೇ ಪ್ರಮುಖರಿಂದ ಕೂಡಿರುತ್ತದೆ. ಪಕ್ಷದ ಸಂಘಟನೆಯಲ್ಲಿ ಪಕ್ಷದ ಅಧಿಕಾರಿಗಳಾಗಿ ಅಥವಾ ಇತರ ಸಾರ್ವಜನಿಕ ಸ್ಥಾನಗಳಲ್ಲಿದ್ದುಕೊಂಡು ತಮ್ಮ ಜೀವನ ಸಾಗಿಸುವಂತಹ ಕಾರ್ಯಕರ್ತರುಗಳು ಇದರೊಡನೆ ಸಂಬಂಧವಿಟ್ಟುಕೊಂಡಿರುತ್ತಾರೆ. ಇವರು ವೃತ್ತಿಪರ ರಾಜಕಾರಣಿಗಳಾಗಿದ್ದು ಪಕ್ಷದ ರಚನೆಯ ಅಂಗವಾಗಿರುತ್ತಾರೆ. ಹೈಕಮಾಂಡ್ ಮತ್ತು ಪಕ್ಷದ ಅಂಗರಚನೆಯಿಂದ ಕೂಡಿದ ಈ ಒಳಗಣ ಗುಂಪಿನ ಸುತ್ತ ಪಕ್ಷಕ್ಕೆ ಪಾರಂಪರಿಕ ಭಾವನಾತ್ಮಕ ನಿಷ್ಠೆಯನ್ನು ಹೊಂದಿರುವಂತಹ ವ್ಯಕ್ತಿಗಳ ಒಂದು ದೊಡ್ಡ ಸಮೂಹವಿರುತ್ತದೆ. ಪಕ್ಷದ ವೃತ್ತಿಪರ ಕಾರ್ಯಕರ್ತರು ಮತ್ತು ಮುಖಂಡರುಗಳಿಗಿಂತಲೂ ಹೆಚ್ಚಿನ ರೀತಿಯಲ್ಲಿ ಇವರು ಪಕ್ಷದ ಧ್ಯೇಯಾದರ್ಶಗಳು ಮತ್ತು ಚಿನ್ನೆಗಳ ಬಗ್ಗೆ ಆಸ್ಥೆಯುಳ್ಳವರಾಗಿರುತ್ತಾರೆ. ಇವರು ಪಕ್ಷದ ಆದರ್ಶಗಳಿಗೆ ಮತ ನೀಡುತ್ತಾರೆಯೇ ವಿನಾ ಅದರ ಕೃತಿಗಳಿಗಲ್ಲ. ಈ ಎರಡನೆಯ ವರ್ತುಲದ ಹೊರಗಡೆ ಯಾವುದೇ ಪಕ್ಷಕ್ಕೆ ಸಂಬಂಧಪಡದ ವಿಶಾಲ ಜನಸಮೂಹವಿರುತ್ತದೆ. ಇದು ಚರಜನಸಂಖ್ಯೆ ಇದ್ದಂತೆ, ಇವರು ಯಾವುದೇ ಪಕ್ಷದೊಡನೆ (ಪು. 272)

ಸಂಬಂಧವಿಟ್ಟುಕೊಳ್ಳದಿರುವುದಕ್ಕೆ ಕಾರಣವೆಂದರೆ, ಅವರಲ್ಲಿ ಯಾವುದೇ ಧ್ಯೇಯ ಧೋರಣೆ ಇಲ್ಲದಿರುವುದು. ವಿಚಾರಗಳಿಲ್ಲದಿರುವುದು, ಅಥವಾ ಯಾವ ಪಕ್ಷಪ್ರಣಾಳಿಕೆಯಲ್ಲಿ ಸೇರದಿರುವಂತಹ ಅವರ ವಿಶಿಷ್ಟ ಹಿತಾಸಕ್ತಿಗಳು ಎರಡನೆಯ ವರ್ತುಲದ ಹೊರಗಿರುವವರು ರಾಜಕೀಯ ಪಕ್ಷದ ಕಾರ್ಯಾಚರಣೆಯಲ್ಲಿ ಪ್ರಮುಖ ಅಂಶವಾಗಿರುತ್ತಾರೆ. ಅವರು ಒಂದು ರಾಜಕೀಯ ಪಕ್ಷ ಗೆಲ್ಲಲೇಬೇಕಾದಂತಹ ಬಹುಮಾನ. ಈ ಬಹುಮಾನವನ್ನು ಗೆಲ್ಲಲು ಕೇವಲ ನೀತಿ ನಿರೂಪಣೆ, ತತ್ವಗಳ ಪ್ರತಿಪಾದನೆ ಸಾಲದು. ಕಾರ್ಯಸಾಧನೆಯಲ್ಲಿ ಆಸಕ್ತಿ. ಆದ್ದರಿಂದ ಒಂದು ರಾಜಕೀಯ ಪಕ್ಷ ಸಂಘಟಿತ ಕಾರ್ಯಾಚರಣೆಯಲ್ಲಿ ತೊಡಗಬೇಕು. ಪ್ರೆಸಿಡೆಂಟ್ ವುಡ್ರೋ ವಿಲ್ಸನ್ನರ ಮಾತಿನಲ್ಲಿ ಹೇಳುವುದಾದರೆ, ಬಹುಮತ ಆಳ್ವಿಕೆಯ ಸ್ವರಾಜ್ಯದಲ್ಲಿ ವೈಯಕ್ತಿಕ ಅಭಿಪ್ರಾಯಕ್ಕಿಂತ ಸಂಘಟಿತ ಕಾರ್ಯದ ಮುಖಾಂತರ ಹೆಚ್ಚಿನದನ್ನು ಸಾಧಿಸಬಹುದು. ಸಂಘಟಿತ ಕಾರ್ಯಕ್ಕಾಗಿ ವೈಯಕ್ತಿಕ ಅಭಿಪ್ರಾಯದ ಬೆಂಬಲವನ್ನು ಒದಗಿಸಿಕೊಡುವ ಕಾರ್ಯ ರಾಜಕೀಯ ಪಕ್ಷದ ಪ್ರಮುಖ ಕರ್ತವ್ಯವೆನಿಸುವುದು. ಸೈದ್ಧಾಂತಿಕವಾಗಿ ರಾಜಕೀಯ ಪಕ್ಷಗಳು ಸಾರ್ವಜನಿಕ ಅಭಿಪ್ರಾಯದ ಅಭಿವ್ಯಕ್ತಿ ಮತ್ತು ಅದನ್ನು ಕಾರ್ಯಗತಗೊಳಿಸುವ ಸಾಧನಗಳು, ಅದನ್ನು ನಿರ್ದೇಶಿಸುತ್ತವೆ, ಅದರ ಮೇಲೆ ಪ್ರಭಾವ ಬೀರುತ್ತವೆ ಮತ್ತು ಅದನ್ನು ನಿಯಂತ್ರಿಸುತ್ತವೆ. ನಿಜವಾಗಿಯೂ ಇದು ರಾಜಕೀಯ ಪಕ್ಷದ ಪ್ರಮುಖ ಕಾರ್ಯ. ಇದಕ್ಕಾಗಿ ಪಕ್ಷಗಳು ಎರಡು ಕೆಲಸಗಳನ್ನು ಮಾಡಬೇಕು. ಮೊದಲನೆಯದಾಗಿ, ಪಕ್ಷವು ಜನಸಮೂಹದೊಡನೆ ಸಂಬಂಧ ಇಟ್ಟುಕೊಳ್ಳಬೇಕು. ಅದು ತನ್ನ ತತ್ವಗಳು ನೀತಿಗಳು, ವಿಚಾರಗಳು ಮತ್ತು ಅಭ್ಯರ್ಥಿಗಳೊಡನೆ ಜನಸಮೂಹದ ಮಧ್ಯೆ ಹೋಗಬೇಕು. ಎರಡನೆಯದಾಗಿ, ತನ್ನ ಕಾರ್ಯಕ್ರಮಗಳ ಬಗ್ಗೆ ಜನತೆಗೆ ಪ್ರಚಾರ ಮಾಡಬೇಕು. ಅದು ಜನತೆಯನ್ನು ಚೇತನಗೊಳಿಸಬೇಕು ಮತ್ತು ಅವರಲ್ಲಿ ತಿಳುವಳಿಕೆಯನ್ನುಂಟುಮಾಡಬೇಕು. ಪುನಃ ಬೈಸನ ಮಾತುಗಳಲ್ಲಿಯೇ ಹೇಳುವುದಾದರೆ, “ಮತದಾರರು ತೀರ್ಮಾನಿಸಬೇಕಾದ ರಾಜಕೀಯ ಸಮಸ್ಯೆಗಳ ಬಗ್ಗೆ ಅವರಿಗೆ ಅವಶ್ಯವಾದ ಮಾಹಿತಿ ನೀಡಿರಿ, ಅವರ ನಾಯಕರ ಬಗ್ಗೆ ಮತ್ತು ಎದುರಾಳಿಗಳ ಅಪರಾಧಗಳ ಬಗ್ಗೆ ತಿಳಿಸಿ ಹೇಳಿರಿ.” ಈ ಮೂಲಭೂತ ಸಂಗತಿಗಳಿಂದಲೇ ಸಂಘಟಿತ ಕಾರ್ಯ ಸಾಧ್ಯ. ಸಂಘಟಿತ ಕಾರ್ಯವನ್ನು ಕೈಕೊಳ್ಳಲಾರದ ರಾಜಕೀಯ ಪಕ್ಷ ತನ್ನನ್ನು ಒಂದು ಪಕ್ಷವೆಂದು ಕರೆದುಕೊಳ್ಳುವ ಹಕ್ಕನ್ನು ಕಳೆದುಕೊಳ್ಳುತ್ತದೆ.

ಒಂದು ಸಂಘಟನೆಯೋಪಾದಿಯಲ್ಲಿ ಉದಾರವಾದಿ ಪಕ್ಷವು ಇವುಗಳಲ್ಲಿ ಯಾವುದನ್ನು ಮಾಡಿದೆ? ಉದಾರವಾದಿ ಪಕ್ಷದಲ್ಲಿ ಹೈಕಮಾಂಡ್ ಮಾತ್ರ ಇದೆ. ಇದಕ್ಕೆ ತನ್ನದೇ ಆದ ಆಡಳಿತ ಯಂತ್ರವಿಲ್ಲ. ಆಡಳಿತ ಯಂತ್ರವಿಲ್ಲದ ಹೈಕಮಾಂಡ್ ಕೇವಲ ನೆರಳಿನಂತೆ. ಅದರ ಬೆಂಬಲಿಗರು ಎರಡನೆಯ ಸಮಾನ ಕೇಂದ್ರದ ವರ್ತುಲದಲ್ಲಿರುವವರಿಗೆ ಸೀಮಿತವಾಗಿದ್ದು ಅವರು ಪರಂಪರಾಗತ ಸಂಬಂಧ ಹೊಂದಿದವರಾಗಿರುತ್ತಾರೆ. ಮುಖಂಡರು ಭಾವನಾತ್ಮಕ ನಿಷ್ಠೆಯನ್ನು ಪ್ರಚೋದಿಸಲಾರರು. ಜನಸಮೂಹವನ್ನು ಕಲೆಹಾಕುವಂತಹ ಘೋಷಣೆ ಅವರಲ್ಲಿರುವುದಿಲ್ಲ. ಉದಾರವಾದಿ ಪಕ್ಷಕ್ಕೆ ಜನಸಮೂಹದೊಡನೆ ಸಂಬಂಧ ಬೆಳೆಸಿಕೊಳ್ಳುವುದರಲ್ಲಿ ವಿಶ್ವಾಸವಿಲ್ಲ. ಜನಸಮೂಹದಿಂದ ಇಷ್ಟೊಂದು ಪ್ರತ್ಯೇಕವಾಗಿರುವ ಪಕ್ಷವನ್ನು ಊಹಿಸುವುದೂ ಕಷ್ಟ. ಮತಾಂತರದಲ್ಲಿಯೂ ಅದಕ್ಕೆ ನಂಬಿಕೆ ಇಲ್ಲ. ಅದಕ್ಕೆ ಬೋಧಿಸಲು ತನ್ನದೇ ಆದ ಸುವಾರ್ತೆ ಇಲ್ಲವೆಂದಲ್ಲ. ಆದರೆ ಹಿಂದೂ ಧರ್ಮದಂತೆ ಅದು ಮತಾಂತರವಿಲ್ಲದ ಧರ್ಮ, ಅದು ನೀತಿ ಮತ್ತು ತತ್ವಗಳನ್ನು ನಿರೂಪಿಸುವುದರಲ್ಲಿ ವಿಶ್ವಾಸವಿಟ್ಟಿದೆ. ಆದರೆ ಅವುಗಳನ್ನು ಕಾರ್ಯಗತಗೊಳಿಸಲು ಅದು ಕೆಲಸ ಮಾಡುವುದಿಲ್ಲ. ಪ್ರಚಾರ ಮತ್ತು ಸಂಘಟಿತ ಕಾರ್ಯ ಉದಾರವಾದಿ ಪಕ್ಷಕ್ಕೆ ಶಾಪದಂತೆ (ಪು. 273)

ಅಗ್ರಾಹ್ಯ. ಅದರ ರಾಜಕೀಯ ಚಟುವಟಿಕೆಗಳು ವೈಯಕ್ತಿಕ ಅಭಿಪ್ರಾಯಗಳನ್ನು ಆಹ್ವಾನಿಸಬೇಕೆಂದಾಗ ಅದಕ್ಕಾಗಿ ಹಾತೊರೆಯುವುದಕ್ಕೆ ಮಾತ್ರ ಸೀಮಿತವಾಗಿವೆ.

ಹೀಗಿದ್ದಾಗ, ಉದಾರವಾದಿ ಪಕ್ಷ ಅಪಕೀರ್ತಿಗೊಳಗಾಗಿರುವುದರಲ್ಲಿ ಏನು ಆಶ್ಚರ್ಯ? ಉದಾರವಾದಿ ಪಕ್ಷವು ಯಾವುದೇ ಗುರಿ ಸಾಧಿಸಲು. ಅದರಲ್ಲಿಯೂ ರಾಜಕೀಯ ಮೂಲಾಂಶಗಳನ್ನು ಒಂದುಗೂಡಿಸಿ ಕಾರ್ಯಗತಗೊಳಿಸುವುದರಲ್ಲಿ ಒಂದು ಸಂಘಟನೆಯ ಅವಶ್ಯಕತೆಯಂತಹ ಪ್ರಾಥಮಿಕ ಸಂಗತಿಯನ್ನು ಮರೆತಿದೆ.

ಭಾರತದಲ್ಲಿ ಉದಾರವಾದಿ ಪಕ್ಷದ ಅವಸಾನಕ್ಕೆ ಯಾರು ಜವಾಬ್ದಾರರು? ಎಷ್ಟೇ ವಿಷಾದದಿಂದಲಾದರೂ ಈ ಅನಾಹುತಕ್ಕೆ ರಾನಡೆಯವರೂ ಕೆಲಮಟ್ಟಿಗೆ ಜವಾಬ್ದಾರರು ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ. ರಾನಡೆಯವರು ಉನ್ನತ ವರ್ಗಕ್ಕೆ ಸೇರಿದವರಾಗಿದ್ದರು. ಆ ವರ್ಗದಲ್ಲಿಯೇ ಜನಿಸಿ ಅದರಲ್ಲಿಯೇ ಬೆಳೆದವರು. ಎಂದೂ ಅವರು ಸಾಮಾನ್ಯ ಜನತೆಯ ವ್ಯಕ್ತಿಯಾಗಲಿಲ್ಲ. ಉದಾರವಾದಿ ಪಕ್ಷಕ್ಕೆ ಸಂಘಟನೆ ಇರಲಿಲ್ಲ. ಏಕೆಂದರೆ ಅದಕ್ಕೆ ಜನತಾ ಸಂಪರ್ಕದಲ್ಲಿ ವಿಶ್ವಾಸವಿರಲಿಲ್ಲ. ಪಕ್ಷಕ್ಕೆ ಜನಸಂಪರ್ಕದ ಬಗ್ಗೆ ಅನಾಸಕ್ತಿ ರಾನಡೆಯವರು ಬಳುವಳಿ. ಜನತೆಯೊಡನೆ ಸಂಬಂಧವಿಟ್ಟುಕೊಳ್ಳದ ನೀತಿಯನ್ನನುಸರಿಸುವಲ್ಲಿ ಪಕ್ಷವು ರಾನಡೆಯವರು ಬಿಟ್ಟುಹೋಗಿರುವ ಪರಂಪರೆಯನ್ನನುಸರಿಸುತ್ತಿದೆ. ರಾನಡೆಯವರು ಉದಾರವಾದಿ ಪಕ್ಷಕ್ಕೆ ಬಿಟ್ಟುಹೋಗಿರುವ ಇನ್ನೊಂದು ಪರಂಪರೆ ಇದೆ. ತತ್ವಗಳು ಮತ್ತು ನೀತಿಗಳಲ್ಲಿ ಕುರುಡ ಬಿಟ್ಟುಹೋಗಿರುವ ಇನ್ನೊಂದು ಪರಂಪರೆ. ಮ್ಯಾಝಿನಿ ಒಮ್ಮೆ ಹೇಳಿದಂತೆ: “ನೀವು ಮನುಷ್ಯರನ್ನು ಕೊಲ್ಲಬಹುದು. ಆದರೆ ಒಂದು ಶ್ರೇಷ್ಠವಿಚಾರವನ್ನು ಕೊಲ್ಲಲಾರಿರಿ.” ನನ್ನ ಅಭಿಪ್ರಾಯದಲ್ಲಿ ಇದು ಅತ್ಯಂತ ತಪ್ಪು ತಿಳುವಳಿಕೆಯ ವಿಚಾರವಾಗಿದೆ. ಮನುಷ್ಯರು ಸಾಯುತ್ತಾರೆ. ಅದೇ ರೀತಿ ವಿಚಾರಗಳೂ ಕೂಡ. ಒಂದು ವಿಚಾರ ಅಥವಾ ಭಾವನೆ ತನ್ನಷ್ಟಕ್ಕೆ ತಾನೇ ಬೇರು ಬಿಡುವುದೆಂದು ಭಾವಿಸುವುದು ಸರಿಯಲ್ಲ. ಗಿಡಕ್ಕೆ ನೀರೆರೆಯಬೇಕಾದಂತೆ, ವಿಚಾರಕ್ಕೂ ಪ್ರಚಾರದ ಆವಶ್ಯಕತೆ ಇದೆ. ಇಲ್ಲವಾದಲ್ಲಿ ಎರಡೂ ಬಾಡಿ ಸತ್ತುಹೋಗುತ್ತವೆ. ರಾನಡೆಯವರು ಮ್ಯಾಝಿನಿಯ ವಿಚಾರವನ್ನು ಒಪ್ಪಿಕೊಂಡಿದ್ದರು. ಮತ್ತು ಭಾವನೆಗೆ ಸತತ ಪೋಷಣೆ ಮತ್ತು ರಕ್ಷಣೆ ಬೇಕೆಂಬ ವಿಚಾರವನ್ನು ಅವರು ಅರಿತುಕೊಳ್ಳಲಿಲ್ಲ. ಉದಾರವಾದಿ ಪಕ್ಷ ಕೇವಲ ತತ್ವಗಳು ಮತ್ತು ನೀತಿನಿರೂಪಣೆಯಿಂದ ತೃಪ್ತಿಯಾದುದಕ್ಕೆ ರಾನಡೆಯವರ ಈ ಪರಂಪರೆಯ ಪ್ರಭಾವವೇ ಕಾರಣ.

ಎಲ್ಲಾ ಉದಾರವಾದಿಗಳು ತಮ್ಮ ನಾಯಕನನ್ನು ಹಿಂಬಾಲಿಸುವುದೇ ತಮ್ಮ ಕರ್ತವ್ಯವೆಂದು ಹೇಳುವರೆಂದು ನನಗೆ ಗೊತ್ತು. ಹಾಗಾದರೆ ಒಂದು ಭಕ್ತಿಯುತ ಅನುಯಾಯಿಗಳ ಸಮೂಹದ ಧೋರಣೆ ಇನ್ನೇನಿರಲಿಕ್ಕೆ ಸಾಧ್ಯ? ಇದಕ್ಕಿಂತ ತಪ್ಪು ಮತ್ತು ವಿಮರ್ಶನಾರಹಿತ ಅಭಿಪ್ರಾಯ ಸಾಧ್ಯವೇ? ಇಂತಹ ಮನೋಭಾವನೆಯಲ್ಲಿ ಎರಡು ಸಂಗತಿಗಳು ಅಡಗಿವೆ. ಒಬ್ಬ ಮಹಾಪುರುಷ ತನ್ನ ಅನುಯಾಯಿಗಳ ಮೇಲೆ ತನ್ನ ತತ್ವಗಳನ್ನೇ ಹೇರುವುದರ ಮೂಲಕ ಕೆಲಸ ಮಾಡುತ್ತಾನೆ. ಅನುಯಾಯಿಗಳು ತಮ್ಮ ಗುರುವಿಗಿಂತ ಹೆಚ್ಚು ಜಾಣರಾಗಬಾರದೆಂಬುದು ಇದರ ಅರ್ಥ. ಈ ಎರಡು ವಿಚಾರಗಳೂ ತಪ್ಪು. ಇವು ಗುರುವಿಗೇ ಅನ್ಯಾಯ ಮಾಡಿದಂತೆ. ಯಾವ ಮಹಾಪುರುಷನೂ ತನ್ನ ಅನುಯಾಯಿಗಳ ಮೇಲೆ ತನ್ನ ವಿಚಾರಗಳನ್ನು ನಿರ್ಣಯಗಳನ್ನೂ ಹೇರಿ ಅವರ ಸ್ವಾತಂತ್ರ್ಯವನ್ನು ಕುಂಠಿತಗೊಳಿಸುವ ಮೂಲಕ ಕಾರ್ಯನಿರ್ವಹಿಸುವುದಿಲ್ಲ. ಯಾವ ಮಹಾಪುರುಷನೂ ತನ್ನ ಅನುಯಾಯಿಗಳ ಮೇಲೆ ತನ್ನ ವಿಚಾರಗಳನ್ನು ಹೇರುವುದಿಲ್ಲ. ಅವನು ತನ್ನ ಅನುಯಾಯಿಗಳಲ್ಲಿರುವ ಸುಪ್ತಚೇತನವನ್ನು ಉದ್ದೀಪನಗೊಳಿಸಿ ಅವುಗಳ (ಪು. 274)

ವಿಕಾಸಕ್ಕೆ ನೆರವಾಗುತ್ತಾನೆ. ಶಿಷ್ಯನಾದವನು ತನ್ನ ಗುರುವಿನಿಂದ ಮಾರ್ಗದರ್ಶನ ಪಡೆಯುತ್ತಾನೆ. ಅವನು ತನ್ನ ಗುರುವಿನ ಸಿದ್ಧಾಂತಗಳನ್ನು ಮತ್ತು ನಿರ್ಣಯಗಳನ್ನು ಸ್ವೀಕರಿಸಬೇಕಾಗಿಲ್ಲ. ಇದರಲ್ಲಿ ಗುರುವಿನ ಬಗ್ಗೆ ಶಿಷ್ಯನ ಕೃತಜ್ಞತೆ ಇಲ್ಲವೆಂದಲ್ಲ. ಗುರುವಿನ ತತ್ವಗಳನ್ನು ನಿರಾಕರಿಸುವಾಗಲೂ ಸಹ ಶಿಷ್ಯ ತನ್ನ ಗುರುವಿನ ಬಗ್ಗೆ ತನ್ನ ಆಳವಾದ ಗೌರವವನ್ನು ಹೀಗೆ ವ್ಯಕ್ತಪಡಿಸುತ್ತಾನೆ: “ನೀವು ನನ್ನನ್ನು ಜಾಗೃತಗೊಳಿಸಿದ್ದೀರಿ. ಅದಕ್ಕೆ ನಿಮಗೆ ನನ್ನ ಧನ್ಯವಾದಗಳು” ಗುರುವಿಗೆ ಇದಕ್ಕಿಂತ ಕಡಮೆ ಅಥವಾ ಶಿಷ್ಯನಿಗೆ ಇದಕ್ಕಿಂತ ಹೆಚ್ಚಿಗೆ ನೀಡುವ ಪ್ರಶ್ನೆ ಏಳುವುದಿಲ್ಲ.

ಆದ್ದರಿಂದ ತನ್ನ ಗುರುವಿನ ತತ್ವಗಳು, ನಿರ್ಣಯಗಳಿಂದ ಶಿಷ್ಯ ಬಂಧಿತನಾಗುವುದು ಗುರು ಮತ್ತು ಶಿಷ್ಯ ಇಬ್ಬರಿಗೂ ಹಿತವಲ್ಲ. ತನ್ನ ಗುರುವಿನ ತತ್ವಗಳನ್ನು ತಿಳಿದುಕೊಳ್ಳುವುದು ಶಿಷ್ಯನ ಕರ್ತವ್ಯ ಅವುಗಳ ಮಹತ್ವ ಮತ್ತು ಶ್ರೇಷ್ಠತೆಯ ಬಗ್ಗೆ ಅವನಿಗೆ ಮನದಟ್ಟಾದರೆ ಮಾತ್ರ ಅವುಗಳ ಪ್ರಸಾರ ಮಾಡಬೇಕು. ಇದೇ ಪ್ರತಿಯೊಬ್ಬ ಗುರುವಿನ ಬಯಕೆ. ಯೇಸು ಮತ್ತು ಬುದ್ದ ಇದನ್ನೇ ಬಯಸಿದ್ದರು. ರಾನಡೆಯವರ ಬಯಕೆಯೂ ಇದೇ ಆಗಿತ್ತೆಂದು ನನಗೆ ಖಾತ್ರಿ ಇದೆ. ಉದಾರವಾದಿಗಳು ರಾನಡೆಯವರ ಬಗ್ಗೆ ವಿಶ್ವಾಸ, ಗೌರವ ಮತ್ತು ಪ್ರೀತಿಯನ್ನು ಹೊಂದಿದ್ದೇ ಆದರೆ, ತಾವು ಒಂದೆಡೆ ಸೇರಿ ಅವರ ಗುಣಗಾನ ಮಾಡುವುದರಲ್ಲಿಯೇ ನಿರತರಾಗುವ ಬದಲು ರಾನಡೆಯವರ ಸುವಾರ್ತೆ ಅಥವಾ ಮಹಾಮಂತ್ರದ ಪ್ರಸಾರ ಮಾಡಲು ಉದ್ಯುಕ್ತರಾಗುವುದು ಅವರ ಸವೋಚ್ಚ ಕರ್ತವ್ಯವಾಗಬೇಕು.

ಈ ಕರ್ತವ್ಯವವನ್ನು ನಿರ್ವಹಿಸಲು ಉದಾರವಾದಿಗಳು ಮುಂದಾಗುವರೆಂಬುದಕ್ಕೆ ಯಾವ ಭರವಸೆ ಇದೆ? ಪರಿಸ್ಥಿತಿ ನಿರಾಶಾದಾಯಕವಾಗಿದೆ. ಉದಾರವಾದಿಗಳು ಇತ್ತೀಚಿನ ಚುನಾವಣೆಗಳಲ್ಲಿ ಸ್ಪರ್ಧಿಸಲೂ ಇಲ್ಲ. ಇದು ಆಶ್ಚರ್ಯಕರ. ಆದರೆ ಉದಾರವಾದಿ ಪಕ್ಷದ ಪ್ರಮುಖ ಪ್ರಜೆ ಎನಿಸಿಕೊಂಡಿರುವ ರೈಟ್ ಆನರಬಲ್ ಶ್ರೀನಿವಾಸ ಶಾಸ್ತ್ರಿಯವರ ಹಾರೈಕೆಯಾಗಿತ್ತು. ಕೌರವರ ಆಶ್ರಯದಲ್ಲಿದ್ದುಕೊಂಡು ಅವರ ಶತ್ರುಗಳಾದ ಪಾಂಡವರ ಯಶಸ್ಸನ್ನೇ ಬಯಸುತ್ತಾ ಅದಕ್ಕಾಗಿ ಶ್ರಮಿಸಿದ ಭೀಷ್ಮನ ರಾಜದ್ರೋಹ ಮತ್ತು ವಿಶ್ವಾಸಘಾತ ಕೃತ್ಯ ಒಂದನ್ನು ಬಿಟ್ಟರೆ ಇದಕ್ಕೆ ಸರಿಸಮಾನವಾದ ಸಂಗತಿ ಇನ್ನೊಂದು ಇರಲಿಕ್ಕಿಲ್ಲ. ಉದಾರವಾದಿಗಳೂ ಕೂಡ ರಾನಡೆಯವರ ಸಂದೇಶದಲ್ಲಿ ವಿಶ್ವಾಸ ಕಳೆದುಕೊಂಡಿದ್ದರೆಂದು ಇದು ತೋರಿಸುತ್ತದೆ. ಇದು ಉದಾರವಾದಿ ಪಕ್ಷದ ಸ್ವಾಸ್ಥ್ಯ ಮತ್ತು ಪರಿಸ್ಥಿತಿಯಾಗಿದ್ದರೆ ಆ ಪಕ್ಷ ಸಾಯುವುದೇ ಲೇಸು. ಇದರಿಂದ ಒಂದು ಹೊಸ ಧೋರಣೆಯ ನಿರೂಪಣೆಗೆ ದಾರಿಯಾಗುವುದಲ್ಲದೇ ನಮಗೆ ಉದಾರವಾದ ಮತ್ತು ಉದಾರವಾದಿಗಳ ವ್ಯರ್ಥ ಆಲಾಪದಿಂದ ಮುಕ್ತಿ ದೊರೆಯುವುದು. ಇಂತಹ ಒಂದು ಘಟನೆಯಿಂದ ರಾನಡೆಯವರೂ ಸಹ ತಮ್ಮ ಸಮಾಧಿಯಲ್ಲಿಯೇ ತೃಪ್ತಿ ಹೊಂದಬಹುದು. (ಪು. 275)

-ಡಾ.ಬಿ.ಆರ್.ಅಂಬೇಡ್ಕರ್

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು, ಸಂಪುಟ – 1, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ,2015, ಪುಟ ಸಂಖ್ಯೆ 240 – 275

Leave a Reply