ಜಾತಿ ನಿರ್ಮೂಲನೆ: ಡಾ.ಬಿ.ಆರ್.ಅಂಬೇಡ್ಕರ್

1 year ago

ಸಿದ್ಧಪಡಿಸಿದ ಭಾಷಣ ಡಾ. ಬಿ.ಆರ್.ಅಂಬೇಡ್ಕರ್

ಜಾತ್-ಪತ್-ತೋಡಕ್ ಮಂಡಲ, ಲಾಹೋರ್ ಅವರ 1936ರ ವಾರ್ಷಿಕ ಅಧಿವೇಶನಕ್ಕೆ ಈ ಭಾಷಣ ರಚಿತವಾಯಿತು. ಆದರೆ ಭಾಷಣದಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಸ್ವಾಗತ ಸಮಿತಿಗೆ ಸಹನೀಯವೆನಿಸದ ಕಾರಣ ಸಮ್ಮೇಳನವೇ ರದ್ದುಗೊಂಡು ವೇದಿಕೆಯಿಂದ ಓದಲಿಲ್ಲ.

1936ರ ಜಾತ್-ಪತ್-ತೋಡಕ್ ಮಂಡಲ, ಲಾಹೋರ್ ಇದರ ವಾರ್ಷಿಕ ಸಮ್ಮೇಳನಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಸಿದ್ಧಪಡಿಸಿದ ಲಿಖಿತ ಭಾಷಣ

ಮಿತ್ರರೆ,

ಈ ಸಮ್ಮೇಳನದ ಅಧ್ಯಕ್ಷ ಪದವಿಯನ್ನು ನನಗೆ ದಯಪಾಲಿಸಿರುವ ಜಾತ್-ಪತ್-ತೋಡಕ್ ಮಂಡಲದ ಸದಸ್ಯರಿಗಾಗಿ ನಾನು ನಿಜವಾಗಿಯೂ ವಿಷಾದಿಸುತ್ತೇನೆ. ನನ್ನನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿದ್ದರಿಂದ ಅವರು ಅನೇಕ ಪ್ರಶ್ನೆಗಳಿಗೆ ಗುರಿಯಾಗುವರೆಂದು ನಾನು ಬಲ್ಲೆ. ಲಾಹೋರದಲ್ಲಿ ನಡೆಯುವ ಸಮಾರಂಭಕ್ಕೆ ಅಧ್ಯಕ್ಷನಾಗಲು ಮುಂಬಯಿಯಿಂದ ಒಬ್ಬ ಮನುಷ್ಯನನ್ನು ಕರೆತರುವಂತಹ ಅಗತ್ಯವೇನಿತ್ತು ಎಂಬ ಪ್ರಶ್ನೆಗಳಿಗೆ ಅವರು ವಿವರಣೆ ನೀಡಬೇಕಾಗುತ್ತದೆ. ನನಗಿಂತ ಉತ್ತಮರಾದವರನ್ನು ಈ ಪದವಿಗೆ ಆಯ್ಕೆ ಮಾಡುವುದು ಮಂಡಲಕ್ಕೆ ಅಷ್ಟೇನೂ ಕಷ್ಟವಾಗುತ್ತಿರಲಿಲ್ಲ. ನಾನೆಂತಹವನೆಂದು ನೋಡಿ. ಹಿಂದೂಗಳನ್ನು ಟೀಕಿಸಿದವನು ನಾನು. ಅವರಿಗೆಲ್ಲ ಗೌರವಾಸ್ಪದರೆನಿಸಿದ ಮಹಾತ್ಮರ ಅಧಿಕಾರವನ್ನೇ ಪ್ರಶ್ನಿಸಿದವನು ನಾನು. ಹಿಂದೂಗಳು ನನ್ನನ್ನು ದ್ವೇಷಿಸುತ್ತಾರೆ. ಅವರ ದೃಷ್ಟಿಯಿಂದ ನಂದನದಲ್ಲಿ ಹೊಕ್ಕ ದುಷ್ಟ ಸರ್ಪ ನಾನು. ಈ ಗೌರವ ಸ್ಥಾನವನ್ನು ಅಲಂಕರಿಸುವುದಕ್ಕೆ ನನ್ನನ್ನು ಏಕೆ ಆರಿಸಲಾಯಿತೆಂದು ರಾಜಕೀಯ ಒಲವಿನ ಹಿಂದೂಗಳು ಮಂಡಲವನ್ನು ನಿಶ್ಚಿತವಾಗಿ ಪ್ರಶ್ನಿಸುವರು. ಇದೊಂದು ಮಹಾ ಸಾಹಸದ ಕೆಲಸ. ಇದು ತಮಗೊಂದು ಅಪಮಾನವೆಂದು ರಾಜಕೀಯ ಹಿಂದೂಗಳು ಭಾವಿಸಿದರೆ ನನಗೆ ಆಶ್ಚರ್ಯವಾಗದು. ಸಾಧಾರಣ ಧಾರ್ಮಿಕ ಭಾವನೆಯ ಹಿಂದೂಗಳಿಗೂ ಕೂಡ ನನ್ನ ಆಯ್ಕೆ ಮೆಚ್ಚಿಗೆಯಾಗಲಾರದೆಂದು ನನಗೆ ಖಾತ್ರಿಯಾಗಿದೆ. ಅಧ್ಯಕ್ಷನ ಆಯ್ಕೆಯಲ್ಲಿ ಮಂಡಲವು ಶಾಸ್ತ್ರದ ಆದೇಶವನ್ನೇಕೆ ಪಾಲಿಸಲಿಲ್ಲವೆಂಬುದಕ್ಕೆ ವಿವರಣೆ ಕೊಡಬೇಕಾದೀತು. ಶಾಸ್ತ್ರಗಳ ಮೇರೆಗೆ ಇತರ ಮೂರು ವರ್ಣಗಳಿಗೆ ಬ್ರಾಹ್ಮಣನೇ ಗುರುವಾಗಿರತಕ್ಕದ್ದು. ‘ವರ್ಣಾನಾಂ ಬ್ರಾಹ್ಮನೋ ಗುರುಃ’ ಎಂದು ಶಾಸ್ತ್ರಗಳಲ್ಲಿ ವಿಧಿಸಲಾಗಿದೆ. ಯಾರಿಂದ ಉಪದೇಶ ಪಡೆಯಬೇಕು ಮತ್ತು ಯಾರಿಂದ ಉಪದೇಶ ಪಡೆಯಬಾರದು ಎಂಬುದು ಮಂಡಲಕ್ಕೆ ಗೊತ್ತಿದೆ. ಬಲ್ಲವನಾಗಿದ್ದಾನೆಂಬ ಕಾರಣದಿಂದ ಯಾವನೋ ಒಬ್ಬನನ್ನು ಗುರುವಾಗಿ ಆಯ್ಕೆ ಮಾಡಲು ಶಾಸ್ತ್ರಗಳು ಹಿಂದೂವಿಗೆ ಅಧಿಕಾರ ಕೊಟ್ಟಿಲ್ಲ. ಹಿಂದೂ ರಾಜ್ಯಸ್ಥಾಪನೆಗೆ ಪ್ರೇರಕನಾದನೆಂದು ಭಾವಿಸಲಾದ ರಾಮದಾಸನೆಂಬ ಒಬ್ಬ ಬ್ರಾಹ್ಮಣ ಇದನ್ನು ಸ್ಪಷ್ಟವಾಗಿ ತಿಳಿಸಿದ್ದಾನೆ. ದಾಸಬೋಧವೆಂಬ ಆತನ ಮರಾಠಿ ಪದ್ಯಕೃತಿ ಸಾಮಾಜಿಕ, ಧಾರ್ಮಿಕ, ರಾಜಕೀಯ ವಿಷಯಗಳನ್ನು ಅಳವಡಿಸಿಕೊಂಡಿದೆ. ಅದರಲ್ಲಿ ಒಂದು ಕಡೆ ರಾಮದಾಸ ಹಿಂದೂಗಳನ್ನು ಹೀಗೆ ಕೇಳುತ್ತಾನೆ. “ಪಂಡಿತನಾದಾಕ್ಷಣಕ್ಕೆ ಒಬ್ಬ ಅಂತ್ಯಜನನ್ನು ಗುರುವೆಂದು ಒಪ್ಪಿಕೊಳ್ಳಹುದೆ?” ಅದಕ್ಕೆ ಅವನ ಉತ್ತರ, ‘ಸರ್ವಥಾ ಕೂಡದು’ ಎಂದು. ಹೀಗೆ ತನಗೆ ಬರಬಹುದಾದ ಪ್ರಶ್ನೆಗಳಿಗೆಲ್ಲ ಏನೆಂದು ಉತ್ತರ ಕೊಡಬೇಕೋ ಅದು ಮಂಡಲಕ್ಕೆ ಸೇರಿದ ವಿಷಯ. ಅಧ್ಯಕ್ಷನ ಆಯ್ಕೆಗಾಗಿ ಮುಂಬಯಿಯವರೆಗೆ ಪ್ರವಾಸ ಮಾಡಿ. ಹಿಂದೂಗಳಿಗೆ ಇಷ್ಟೊಂದು ಆಪ್ರಿಯನಾದ ಮನುಷ್ಯನನ್ನು ಗೊತ್ತುಮಾಡಿಕೊಂಡು, ಸವರ್ಣ ಹಿಂದೂಗಳ ಸಭೆಯನ್ನು ಉದ್ದೇಶಿಸಿ ಮಾತನಾಡಲು ಅಂತ್ಯಜನೂ, ಅಸ್ಪೃಶ್ಯನೂ ಆದವನೊಬ್ಬನನ್ನು ಕರೆದು ತರುವ ಹೀನಸ್ಥಿತಿಗೆ ತಾನೇಕೆ ಇಳಿದು ಬಂದಿತೋ ಏನೋ ಇದರ ಕಾರಣವನ್ನು ಮಂಡಲವೇ ಸರಿಯಾಗಿ ಬಲ್ಲದು. ನನ್ನ ಮಟ್ಟಿಗೆ ಹೇಳುವುದಾದರೆ ಈ ಆಮಂತ್ರಣವನ್ನು ನಾನು ನನ್ನ ಇಷ್ಟಕ್ಕೆ ವಿರುದ್ಧವಾಗಿ ಮತ್ತು ನನ್ನ ಸಂಗಾತಿಗಳಾದ ಅಸ್ಪೃಶ್ಯರ ಇಷ್ಟಕ್ಕೆ ಕೂಡ ವಿರುದ್ಧವಾಗಿ ಒಪ್ಪಿಕೊಂಡಿದ್ದೇನೆ. ಹಿಂದೂಗಳಿಗೆ ನನ್ನನ್ನು ಕಂಡರಾಗುವುದಿಲ್ಲವೆಂದು ನಾನು ಬಲ್ಲೆ. ಅವರಿಗೆ ನಾನು ಆದರಣೀಯ ವ್ಯಕ್ತಿಯಲ್ಲ. ಇದನ್ನೆಲ್ಲ ತಿಳಿದವನಾದ್ದರಿಂದ ಪ್ರಯತ್ನಪೂರ್ವಕವಾಗಿ ನಾನು ಅವರಿಂದ ದೂರವೇ ಉಳಿದಿದ್ದೇನೆ. ಅವರ ಮೇಲೆ ನನ್ನ ಅಭಿಪ್ರಾಯಗಳನ್ನು ಹೇರಲು ಪ್ರಯತ್ನಿಸಿಲ್ಲ. ನನ್ನ ಅಭಿಪ್ರಾಯಗಳನ್ನು ಮಂಡಿಸುವುದಾದರೆ ನನ್ನದೇ ಆದ ಬೇರೆ ವೇದಿಕೆಗಳನ್ನು (ಪುಟ 47)

ನಾನು ಬಳಸಿಕೊಂಡಿದ್ದೇನೆ. ಇದು ಸಾಕಷ್ಟು ಹೊಟ್ಟೆಯುರಿಯನ್ನೂ, ಮನೋಕ್ಷೋಭೆಯನ್ನೂ ಕೆರಳಿಸಿದೆ. ತಮ್ಮ ಕಿವಿಯಳವಿಯಲ್ಲೇ ನಾನು ಮಾಡುತ್ತಾ ಬಂದಿರುವುದನ್ನು ತಮ್ಮ ಕಣ್ಣೆದುರಿಗೇ ಮಾಡುವುದಕ್ಕಾಗಿ ಹಿಂದೂಗಳ ವೇದಿಕೆಯನ್ನೇರಲು ನಾನು ಬಯಸುವುದಿಲ್ಲ. ನಾನು ಇಲ್ಲಿಗೆ ಬಂದಿರುವುದು ನಿಮ್ಮ ಆಯ್ಕೆಯಿಂದಲೇ ಹೊರತು ನನ್ನ ಇಚ್ಛೆಯಿಂದಲ್ಲ. ಸಾಮಾಜಿಕ ಸುಧಾರಣೆಗೆ ನೀವು ಹೆಗಲು ಕೊಟ್ಟಿದ್ದೀರಿ. ಆ ಸುಧಾರಣೆಯ ವಿಷಯ ನನ್ನ ಮನಸ್ಸಿಗೆ ಯಾವಾಗಲೂ ಪ್ರಿಯವಾದದ್ದು. ಆದುದರಿಂದ ಇಂತಹ ಒಂದು ಸುಧಾರಕ ಕಾರ್ಯಕ್ಕೆ ಒಲಿದು, ಅದರಲ್ಲಿಯೂ ವಿಶೇಷವಾಗಿ ನಾನು ನೆರವಾಗಬಲ್ಲೆನೆಂದು ನೀವು ಭಾವಿಸಿರುವಾಗ, ಈ ಸುಸಂಧಿಯನ್ನು ಕಳೆದುಕೊಳ್ಳಬಾರದೆಂದು ನಾನು ನಿಮ್ಮ ಆಮಂತ್ರಣಕ್ಕೆ ಒಪ್ಪಿಕೊಂಡು ಬಂದೆ. ನೀವು ಪರಿಹರಿಸಲೆಂದು ಎತ್ತಿಕೊಂಡ ಸಮಸ್ಯೆಗೆ ಈ ದಿನ ನಾನಾಡುವ ಮಾತು ಎಷ್ಟರ ಮಟ್ಟಿಗೆ ಸಹಾಯಕವಾದೀತೆಂಬುದನ್ನು ನಿರ್ಧರಿಸಲು ನಿಮಗೆ ಬಿಡುತ್ತೇನೆ. ಆ ಸಮಸ್ಯೆಯನ್ನು ಕುರಿತ ನನ್ನ ಅಭಿಪ್ರಾಯಗಳನ್ನು ನಿಮ್ಮೆದುರಿಗೆ ಇಡುವುದಷ್ಟೆ ನನ್ನ ಕೆಲಸ.

II

ಸಮಾಜ ಸುಧಾರಣೆಯ ಹಾದಿ, ಮೋಕ್ಷದ ಹಾದಿಯಂತೆ, ವಿಶೇಷತಃ ಭಾರತದಲ್ಲಿ ಅಡೆತಡೆಗಳಿಂದ ತುಂಬಿದೆ. ಸಮಾಜ ಸುಧಾರಣೆಗೆ ಭಾರತದಲ್ಲಿ ಕೆಲವೇ ಮಿತ್ರರು. ಆದರೆ ಅನೇಕ ಟೀಕಾಕಾರರು ಇದ್ದಾರೆ. ಇಂತಹ ಟೀಕಾಕಾರರಲ್ಲಿ ಎರಡು ವರ್ಗಗಳಿವೆ. ಮೊದಲನೆಯದು ರಾಜಕೀಯ ಸುಧಾರಕರ ವರ್ಗ. ಎರಡನೆಯದು ಸಮಾಜವಾದಿಗಳ ವರ್ಗ.

ಸಾಮಾಜಿಕ ಕಾರ್ಯದಕ್ಷತೆಯಿಲ್ಲದೆ ಯಾವ ಇತರ ಕಾರ್ಯಕ್ಷೇತ್ರದಲ್ಲೂ ಪ್ರಗತಿ ಸಾಧ್ಯವಿಲ್ಲ. ಅನಿಷ್ಟ ಪದ್ಧತಿಗಳ ಪರಿಣಾಮವಾಗಿ ಹಿಂದೂ ಸಮಾಜ ಪ್ರಗತಿಯ ಪರಿಸ್ಥಿತಿಯಲ್ಲಿಲ್ಲ. ಆದುದರಿಂದ ಈ ಅನಿಷ್ಟಗಳನ್ನು ನಿರ್ಮೂಲಗೊಳಿಸಲು ಅವಿರತ ಪ್ರಯತ್ನ ಮಾಡುವುದು ಅವಶ್ಯವಾಗಿದೆ. ಈ ಮಾತಿನ ಸತ್ಯತೆಯನ್ನು ಅರಿತುಕೊಂಡದ್ದರಿಂದಲೇ ರಾಷ್ಟ್ರೀಯ ಕಾಂಗ್ರೆಸ್ಸಿನೊಡನೆ ಸಾಮಾಜಿಕ ಪರಿಷತ್ತಿನ ಸ್ಥಾಪನೆಯೂ ಆಯಿತು. ದೇಶದೊಳಗಿನ ರಾಜಕೀಯ ಸಂಘಟನೆಯ ದೋಷಗಳನ್ನು, ದೌರ್ಬಲ್ಯಗಳನ್ನು ವ್ಯಾಖ್ಯಾನಿಸುವುದರಲ್ಲಿ ಕಾಂಗ್ರೆಸ್ಸು ತೊಡಗಿತು; ಹಿಂದೂ ಸಮಾಜದ ಸಾಮಾಜಿಕ ಸಂಘಟನೆಯ ದೋಷಗಳನ್ನು ನಿವಾರಿಸುವ ಕಾರ್ಯದಲ್ಲಿ ಸಾಮಾಜಿಕ ಪರಿಷತ್ತು ನಿರತವಾಯಿತು. ಕೆಲ ಕಾಲದವರೆಗೆ ಈ ಎರಡೂ ಸಂಸ್ಥೆಗಳು ಒಂದೇ ಸಂಸ್ಥೆಯ ಎರಡು ವಿಭಾಗಗಳಂತೆ ಕೆಲಸ ಮಾಡುತ್ತಿದ್ದವು. ಒಂದೇ ಮಂಟಪದಲ್ಲಿ ಅವೆರಡೂ ತಮ್ಮ ವಾರ್ಷಿಕ ಅಧಿವೇಶನಗಳನ್ನು ನಡೆಸುತ್ತಿದ್ದವು. ಆದರೆ ಬಲು ಬೇಗನೆ ಅವೆರಡೂ ಬಲಿತು ಭಿನ್ನ ಭಿನ್ನ ಪಕ್ಷಗಳಾದವು. ಒಂದು ರಾಜಕೀಯ ಸುಧಾರಣಾ ಪಕ್ಷವಾಯಿತು. ಇನ್ನೊಂದು ಸಾಮಾಜಿಕ ಸುಧಾರಣಾ ಪಕ್ಷವಾಯಿತು. ಇವೆರಡರ ನಡುವೆ ಉಗ್ರವಾದ ಪೈಪೋಟಿಯೂ ನಡೆಯಿತು. ರಾಜಕೀಯ ಸುಧಾರಣಾ ಪಕ್ಷವು ರಾಷ್ಟ್ರೀಯ ಕಾಂಗ್ರೆಸ್ಸನ್ನು ಬೆಂಬಲಿಸಿತು. ಸಮಾಜ ಸುಧಾರಣಾ ಪಕ್ಷವು ಸಾಮಾಜಿಕ ಸಮ್ಮೇಳನದ ಬೆನ್ನು ತಟ್ಟಿತು. ಹೀಗೆ ಈ ಎರಡು ಪಕ್ಷಗಳು ಪರಸ್ಪರ ಶತ್ರುಗಳಾದವು. ರಾಜಕೀಯ ಸುಧಾರಣೆ ಮೊದಲೋ, ಸಮಾಜ ಸುಧಾರಣೆ ಮೊದಲೋ ಎಂಬುದು ಅವರ ಜಗಳಕ್ಕೆ ಮೂಲ ವಿಷಯ. ಒಂದು ದಶಕದವರೆಗೆ ಉಭಯ ಪಕ್ಷಗಳ ಬಲ ಸಮಸಮವಾಗಿಯೇ ಇತ್ತು; ಹೋರಾಟ ನಡೆಯುತ್ತಲೇ ಇದ್ದವು. ಗೆಲವು ಯಾರಿಗೂ ಸಿಕ್ಕಲಿಲ್ಲ. ಆದರೆ ಸಾಮಾಜಿಕ ಸಮ್ಮೇಳನದ ಭವಿಷ್ಯ ಉಜ್ವಲವಾಗಿಲ್ಲವೆಂದು ಸ್ಪಷ್ಟವಾಗಿತ್ತು. (ಪುಟ 48)

ಸುಶಿಕ್ಷಿತ ಹಿಂದೂಗಳಲ್ಲಿ ಬಹುಸಂಖ್ಯಾತರು ರಾಜಕೀಯ ಪ್ರಗತಿಗೆ ಅನುಕೂಲವಾಗಿದ್ದು ಸಾಮಾಜಿಕ ಸುಧಾರಣೆಯ ಬಗೆಗೆ ಆಸಕ್ತಿ ತೋರುತ್ತಾ ಇಲ್ಲವೆಂದೂ, ಕಾಂಗ್ರೆಸ್ಸಿಗೆ ಹಾಜರಾಗುವ ಜನರ ಸಂಖ್ಯೆ ತುಂಬ ದೊಡ್ಡದಾಗಿದ್ದು ಹಾಜರಾಗದಿದ್ದರೂ ಅದಕ್ಕೆ ಸಹಾನುಭೂತಿಯುಳ್ಳವರ ಸಂಖ್ಯೆ ಇದಕ್ಕಿಂತ ದೊಡ್ಡದೆಂದೂ, ಸಾಮಾಜಿಕ ಸಮ್ಮೇಳನಕ್ಕೆ ಹಾಜರಾಗುವವರ ಸಂಖ್ಯೆ ತೀರ ಸಣ್ಣದೆಂದೂ ಸಾಮಾಜಿಕ ಪರಿಷತ್ತಿನ ಅಧಿವೇಶನಾಧ್ಯಕ್ಷರು ಗೋಗರೆಯುತ್ತಿದ್ದರು. ಈ ಉಪೇಕ್ಷೆ ಹಾಗೂ ಬೆಂಬಲಿಗರ ಸಂಖ್ಯೆಯಲ್ಲುಂಟಾದ ಈ ಹಾನಿ ಆ ಕಾಲದಲ್ಲಿ ರಾಜಕಾರಣಿಗಳ ಪ್ರತ್ಯಕ್ಷ ಶತ್ರುತ್ವವನ್ನೇ ಬರಮಾಡಿಕೊಂಡಿತು. ಈವರೆಗೆ ಕಾಂಗ್ರೆಸ್ಸು ತನ್ನ ಅಧಿವೇಶನ ಮಂಟಪವನ್ನು ಸಾಮಾಜಿಕ ಸಮ್ಮೇಳನದ ಅಧಿವೇಶನಕ್ಕೆ ಕೊಡುತ್ತಿತ್ತು. ದಿವಂಗತ ತಿಲಕರ ಮುಂದಾಳ್ತನದಲ್ಲಿ ಈ ಸೌಜನ್ಯವೂ ಲುಪ್ತವಾಯಿತು. ಇಷ್ಟೇ ಅಲ್ಲ, ಸಾಮಾಜಿಕ ಪರಿಷತ್ತಿನವರು ತಮ್ಮದೇ ಆದ ಒಂದು ಮಂಟಪವನ್ನು ನಿರ್ಮಿಸುವೆವೆಂದಾಗ ಅದನ್ನು ಸುಟ್ಟು ಬೂದಿ ಮಾಡುವೆವೆಂಬ ಬೆದರಿಕೆ ಕೂಡ ವ್ಯಕ್ತವಾಯಿತು. ಶತ್ರುತ್ವದ ಕಾವು ಆ ಮಟ್ಟಕ್ಕೆ ಏರಿತು. ಹೀಗೆ ಕಾಲಗತಿಯಲ್ಲೇ ರಾಜಕೀಯ ಸುಧಾರಣಾ ಪಕ್ಷ ಮೇಲ್ಗೈಯಾಗಿ ನಿಂತಿತು. ಸಾಮಾಜಿಕ ಪರಿಷತ್ತು ಕಣ್ಮರೆಯಾಗಿ ಮರೆತುಹೋಯಿತು. ೧೮೯೨ರಲ್ಲಿ ಶ್ರೀ ಡಬ್ಲ್ಯೂಸಿ.ಬ್ಯಾನರ್ಜಿಯವರ ಅಧ್ಯಕ್ಷತೆಯಲ್ಲಿ ನಡೆದ ಅಲಹಾಬಾದ್ ಕಾಂಗ್ರೆಸ್ ಅಧಿವೇಶನದಲ್ಲಿ ಅವರು ಮಾಡಿದ ಭಾಷಣವು ಸಾಮಾಜಿಕ ಸಮ್ಮೇಳನದ ಸ್ಮಶಾನಯಾತ್ರೆಯಲ್ಲಿ ಮಾಡಿದ ಚರಮ ಭಾಷಣದಂತೆ ಇತ್ತು. ಅದು ಕಾಂಗ್ರೆಸ್ ಧೋರಣೆಯ ಅನನ್ಯ ಧಾಟಿಯಾದುದರಿಂದ ಆದರೊಳಗಿನ ಕೆಲಭಾಗವನ್ನು ಇಲ್ಲಿ ಉದ್ಧರಿಸಲು ಬಯಸುತ್ತೇನೆ. ಶ್ರೀ ಬ್ಯಾನರ್ಜಿಯವರು ಹೀಗೆ ನುಡಿದರು.

“ನಮ್ಮ ಸಮಾಜಪದ್ಧತಿಯನ್ನು ಸುಧಾರಿಸುವವರೆಗೆ ನಾವು ರಾಜಕೀಯ ಸುಧಾರಣೆಗೆ ತಕ್ಕವರಾಗುವುದಿಲ್ಲವಂತೆ. ಹೀಗೆ ವಾದಿಸುವವರನ್ನು ಕಂಡರೆ ನನಗೆ ಆಗುವುದಿಲ್ಲ. ಇವೆರಡು ಸುಧಾರಣೆಗಳ ನಡುವೆ ಯಾವ ಸಂಬಂಧವೂ ನನಗೆ ಕಾಣದು… ನಮ್ಮ ವಿಧವೆಯವರು ಪುನರ್ವಿವಾಹವಾಗಿಲ್ಲ ಮತ್ತು ನಮ್ಮಲ್ಲಿ ಬಾಲ್ಯವಿವಾಹ ಜಾರಿಯಲ್ಲಿದೆ ಎಂದ ಮಾತ್ರಕ್ಕೆ ನಾವು ರಾಜಕೀಯ ಸುಧಾರಣೆಗೆ ತಕ್ಕವರಲ್ಲವೇನು? ಯಾಕೆ ತಕ್ಕವರಲ್ಲ? ನಮ್ಮ ಪತ್ನಿಯರೂ ಪುತ್ರಿಯರೂ ನಮ್ಮೊಡನೆ ಗಾಡಿಗಳಲ್ಲಿ ಸವಾರಿ ಮಾಡುತ್ತಾ ನಮ್ಮ ಮಿತ್ರರ ಭೇಟಿಗೆ ಹೋಗುವುದಿಲ್ಲವೆಂದೇ? ನಮ್ಮ ಪುತ್ರಿಯರನ್ನು ಆಕ್ಸ್‌ಫರ್ಡ್, ಕೇಂಬ್ರಿಡ್ಜ್‌ಗಳಿಗೆ ಕಳಿಸುವುದಿಲ್ಲವೆಂದೇ?” (ಹರ್ಷೋದ್ಗಾರಗಳು).

ರಾಜಕೀಯ ಸುಧಾರಣೆಯ ನಿಲುವನ್ನು ಶ್ರೀ ಬ್ಯಾನರ್ಜಿಯವರ ಮಾತಿನಲ್ಲೇ ಹೇಳಿದ್ದೇನೆ. ಉಭಯ ಪಕ್ಷಗಳ ಹೋರಾಟದಲ್ಲಿ ಕಾಂಗ್ರೆಸ್ಸಿಗೆ ಗೆಲುವಾಯಿತೆಂದು ಹಿಗ್ಗಿದವರು ಹಲವಾರು ಜನ. ಆದರೆ ಸಮಾಜ ಸುಧಾರಣೆಯ ಮಹತ್ವವನ್ನು ಅರಿತವರು ಪ್ರಶ್ನೆಯೆತ್ತಬಹುದು. ಶ್ರೀ ಬ್ಯಾನರ್ಜಿಯವರಂಥವರ ವಾದವೆ ಅಂತಿಮವಾದುದೆ? ಗೆಲುವು ನ್ಯಾಯವಾದ ಪಕ್ಷಕ್ಕೇ ಹೋಯಿತೆಂದು ಅದು ಸಿದ್ದಪಡಿಸುವುದೇ? ರಾಜಕೀಯ ಸುಧಾರಣೆಗೆ ಸಮಾಜ ಸುಧಾರಣೆ ಏನೂ ಸಂಬಂಧವಿಲ್ಲದ್ದೆಂದು ಅದು ಸಮರ್ಪಕವಾಗಿ ಸಿದ್ಧಮಾಡುವುದೆ? ಈ ಸಮಸ್ಯೆಯ ಇನ್ನೊಂದು ಮಗ್ಗುಲನ್ನು ನಿಮಗೆ ನಾನು ತೋರಿಸುವೆನು. ಆಗ ವಿಷಯವನ್ನು ಆರಿತುಕೊಳ್ಳಲು ನಿಮಗೆ ಅನುಕೂಲವಾದೀತು. ವಾಸ್ತವಿಕ ಘಟನೆಗಳ ನಿರೂಪಣೆಗಾಗಿ ನಾನು ಅಸ್ಪೃಶ್ಯರ ಅನುಭವಗಳನ್ನು ಆದರಿಸುತ್ತೇನೆ.

ಮರಾಠಾ ದೇಶದಲ್ಲಿ ಪೇಶ್ವೆಗಳು ಆಳುತ್ತಿದ್ದ ಕಾಲದಲ್ಲಿ ಹಿಂದೂವೊಬ್ಬನು ಸಾರ್ವಜನಿಕ ರಸ್ತೆಯಲ್ಲಿ ಬರುತ್ತಿದ್ದರೆ ಅಸ್ಪೃಶ್ಯನು ಆ ಹಾದಿಯಲ್ಲಿ ಕಾಲಿಡಕೂಡದು. ಇವನ ಹೊಲೆ ನೆರಳು ಬಿದ್ದರೆ ಆ ಹಿಂದೂವಿಗೆ ಮೈಲಿಗೆಯಾಗುತ್ತಿತ್ತು. ಅಸ್ಪೃಶ್ಯನಾದವನು ತನ್ನ ಮುಂಗೈಯ ಮೇಲಾಗಲಿ, ಕೊರಳಲ್ಲಾಗಲಿ ಒಂದು ಕರಿಯ (ಪುಟ 49)

ದಾರವನ್ನು ಕಟ್ಟಿಕೊಳ್ಳಲೇಬೇಕಾಗಿತ್ತು. ಹಿಂದೂಗಳು ಅರಿಯದೆ ಅಸ್ಪೃಶ್ಯನನ್ನು ಮುಟ್ಟಿ ಮೈಲಿಗೆಗೆ ಗುರಿಯಾಗಬಾರದೆಂದು ಹೀಗೆ ವಿಧಿಸಲಾಗಿತ್ತು. ಪೇಶ್ವೆಗಳ ರಾಜಧಾನಿಯಾದ ಪುಣೆಯಲ್ಲಿ ಆಸ್ಪೃಶ್ಯನು ತನ್ನ ಸೊಂಟಕ್ಕೊಂದು ಕಸಪೊರಕೆಯನ್ನು ಕಟ್ಟಿಕೊಂಡು ಹೊರಬೀಳಬೇಕಾಗಿತ್ತು. ತಾನು ನಡೆದು ಹೋದಂತೆಲ್ಲ ಹಿಂದಿನಿಂದ ಈ ಪೊರಕೆಯಿಂದ ಗುಡಿಸುತ್ತ ಅವನು ಹೋಗಬೇಕು. ಇಲ್ಲದೆ ಹೋದರೆ ಆತನು ಮೆಟ್ಟಿಹೋದ ಹೊಲೆಧೂಳು ಯಾರಾದರೊಬ್ಬ ಹಿಂದೂವಿನ ಪಾದಗಳಿಗೆ ಮೈಲಿಗೆ ತಗುಲಿಸಲಿಕ್ಕಿಲ್ಲವೆ? ಅದೇ ಪುಣೆಯಲ್ಲಿ ಅಸ್ಪೃಶ್ಯನು ಎಲ್ಲಿಗೇ ಹೋಗಲಿ ತನ್ನ ಕೊರಳಿಗೊಂದು ಮಣ್ಣಿನ ಮಡಕೆಯನ್ನು ಕಟ್ಟಿಕೊಂಡಿರಬೇಕು. ಉಗುಳುವುದಾದರೆ ಆ ಮಡಿಕೆಯಲ್ಲಿಯೇ ಅವನು ಉಗುಳಿಕೊಳ್ಳಬೇಕು. ಹೀಗೆ ಮಾಡದೆ ಬೀದಿಯಲ್ಲಿ ಆತನು ಉಗುಳಿಬಿಟ್ಟರೆ ಆ ಉಗುಳು ಬಿದ್ದು ಆ ಪವಿತ್ರವಾದ ನೆಲದ ಮೇಲೆ, ಪಾಪ, ಯಾವನಾದರೂ ಹಿಂದೂ ಅರಿಯದೆ ಹೆಜ್ಜೆಯಿಟ್ಟು ಮಲಿನಗೊಂಡಾನು. ಈ ಹಳೆಯ ಸಂಗತಿ ಹೋಗಲಿ, ತೀರ ಈಚೆಗಿನ ವಸ್ತುಸ್ಥಿತಿಯನ್ನು ಹೇಳುತ್ತೇನೆ. ಈಗ ಮಧ್ಯಭಾರತದಲ್ಲಿರುವ ಬಲಾಯಿ ಎಂಬ ಅಸ್ಪೃಶ್ಯರ ಮೇಲೆ ನಡೆಸಿದ ಕ್ರೂರ ದಬ್ಬಾಳಿಕೆಯನ್ನು ಹೇಳಿದರೆ ಸಾಕು. ೧೯೨೮ ಜನವರಿ ೪ನೆಯ ದಿನಾಂಕದ ಟೈಮ್ಸ್ ಆಫ್ ಇಂಡಿಯಾದಲ್ಲಿ ಇದರ ವರದಿ ಪ್ರಕಟವಾಗಿದೆ. ಆ ಪತ್ರಿಕೆಯ ವರದಿಗಾರನು ದಾಖಲಿಸಿರುವಂತೆ ಇಂದೂರು ಸಂಸ್ಥಾನದ ಇಂದೂರು ಜಿಲ್ಲೆಯ, ಕನರಿಯ, ಬಿಚೋಲಿ-ಹಪ್ಪಿ, ಬಿಚೋಲಿ-ಮರ್ದಾನಾ ಮತ್ತು ಆ ಜಿಲ್ಲೆಯ ಇತರ ೧೫ ಹಳ್ಳಿಗಳ ಪಟೇಲ, ಪಟವಾರಿಗಳನ್ನೊಳಗೊಂಡ ಕಲೋತ, ರಾಜಪುತ್ರ, ಮತ್ತು ಬ್ರಾಹ್ಮಣರೆಂಬ ಉಚ್ಚಜಾತಿಯ ಹಿಂದೂಗಳು ತಂತಮ್ಮ ಹಳ್ಳಿಯ ಬಲಾಯಿಗಳಿಗೆ ಸಾರಿದ್ದೇನೆಂದರೆ ನೀವು ನಮ್ಮಲ್ಲಿ ಇರುವುದಾದರೆ ಈ ಕೆಳಗಿನ ವಿಧಿಗಳನ್ನು ಪಾಲಿಸತಕ್ಕದ್ದು :

1. ಬಲಾಯಿಗಳು ಚಿನ್ನದ ಜರಿಯುಳ್ಳ ಪಗಡಿ ಧರಿಸಕೂಡದು.

2. ಬಣ್ಣದ ಅಥವಾ ಅಲಂಕಾರದ ಅಂಚಿನ ಧೋತ್ರಗಳನ್ನು ಉಡಕೂಡದು.

3. ಹಿಂದೂವೊಬ್ಬನು ಸತ್ತರೆ ಆತನ (ಆಕೆಯ) ಸಂಬಂಧಿಕರು ಎಷ್ಟೇ ದೂರದಲ್ಲಿ ವಾಸವಿದ್ದರೂ ಅವರಿಗೆ ಬಲಾಯಿಗಳು ಹೋಗಿ ಸುದ್ದಿ ಮುಟ್ಟಿಸತಕ್ಕದ್ದು.

4. ಹಿಂದೂಗಳ ಎಲ್ಲಾ ಮದುವೆಗಳಲ್ಲಿ ಬಲಾಯಿಗಳು ಮೆರವಣಿಗೆಯ ಮುಂದೆ ಹಾಗೂ ಮದುವೆಯ ಸಮಯದಲ್ಲಿ ಕೂಡ ವಾದ್ಯಗಳನ್ನು ನುಡಿಸತಕ್ಕದ್ದು.

5. ಬಲಾಯಿ ಹೆಂಗಸರು ಚಿನ್ನದ ಅಥವಾ ಬೆಳ್ಳಿಯ ಆಭರಣಗಳನ್ನು ಧರಿಸಕೂಡದು. ಅಲಂಕಾರದ ಕುಪ್ಪಸಗಳನ್ನಾಗಲೀ ಮೇಲುಡುಪನ್ನಾಗಲೀ ಧರಿಸತಕ್ಕದ್ದಲ್ಲ.

6. ಹಿಂದೂ ಸ್ತ್ರೀಯರಿಗೆಲ್ಲ ಬಲಾಯಿ ಹೆಂಗಸರು ಸೂಲಗಿತ್ತಿ ಸೇವೆ ಸಲ್ಲಿಸಬೇಕು.

7. ಬಲಾಯಿಗಳು ಪ್ರತಿಫಲವನ್ನು ಬೇಡದೆ ಸೇವೆ ಸಲ್ಲಿಸತಕ್ಕದ್ದು. ಮತ್ತು ಹಿಂದೂಗಳು ಏನು ಕೊಟ್ಟರೂ ಸ್ವೀಕರಿಸತಕ್ಕದ್ದು.

8. ಈ ಕರಾರುಗಳಿಗೆ ಒಪ್ಪುವುದಿಲ್ಲವಾದರೆ ಬಲಾಯಿಗಳು ಹಳ್ಳಿಯನ್ನು ಬಿಟ್ಟು ಹೊರಟು ಹೋಗಬೇಕು.

ಬಲಾಯಿಗಳು ಈ ಕರಾರುಗಳಿಗೆ ಒಪ್ಪಲಿಲ್ಲ. ಹಿಂದೂಗಳು ಅವರನ್ನು ಎದುರಿಸಿ ನಿಂತರು. ಬಲಾಯಿಗಳಿಗೆ ಹಳ್ಳಿಯ ಬಾವಿಗಳಿಂದ ನೀರು ತರಗೊಡಲಿಲ್ಲ, ಅವರ ದನಗಳನ್ನು ಮೇಯಗೊಡಲಿಲ್ಲ. ಹಿಂದೂಗಳ ಹೊಲಗಳಲ್ಲಿ ದಾಟಿ ಹೋಗದಂತೆ ಬಲಾಯಿಗಳಿಗೆ ನಿರ್ಬಂಧಪಡಿಸಲಾಯಿತು. ಸುತ್ತಲೂ ಹಿಂದೂಗಳ ಹೊಲಗಳಿದ್ದರೆ ನಡುವಿದ್ದ ತನ್ನ ಹೊಲಕ್ಕೆ ಬಲಾಯಿ ಜಾತಿಯವನು ಹೋಗುವಂತಿಲ್ಲ. (ಪುಟ 50)

ಹಿಂದೂಗಳು ತಮ್ಮ ದನಗಳನ್ನು ತಂದು ಬಲಾಯಿಗಳ ಹೊಲಗಳನ್ನೆಲ್ಲ ಮೇಯಿಸಿಬಿಟ್ಟರು. ಈ ಅನ್ಯಾಯವನ್ನು ಪ್ರತಿಭಟಿಸಿ ಬಲಾಯಿಗಳು ದರ್ಬಾರಕ್ಕೆ ಅರ್ಜಿ ಸಲ್ಲಿಸಿದರು. ಆದರೆ ಸಕಾಲಿಕವಾದ ಪರಿಹಾರ ದೊರೆಯಲಿಲ್ಲ. ಹಿಂದೂಗಳ ದಬ್ಬಾಳಿಕೆ ಮುಂದುವರಿಯಿತು. ಇದರಿಂದ ಬೇಸತ್ತುಹೋದ ನೂರಾರು ಬಲಾಯಿ ಕುಟುಂಬಗಳು ತಲೆತಲಾಂತರವಾಗಿ ತಮ್ಮ ಹಿರಿಯರು ವಾಸ ಮಾಡುತ್ತ ಬಂದಿದ್ದ ತಮ್ಮ ಮನೆಗಳನ್ನು ತೊರೆದು. ಹೆಂಡಿರುಮಕ್ಕಳನ್ನು ಕಟ್ಟಿಕೊಂಡು, ಭೂಪಾಲ್, ಗ್ವಾಲಿಯರ್ ಮುಂತಾದ ಅನ್ಯರಾಜ್ಯಗಳಲ್ಲಿಯ ಧಾರ, ದೇವಾಸ, ಬಗಲಿ ಹಳ್ಳಿಗಳಿಗೆ ಗುಳೆಯೆತ್ತಿ ಹೋದರು. ಅವರು ಹುಡಿಕಿಕೊಂಡು ಹೋದ ಈ ಹೊಸ ನೆಲೆಗಳಲ್ಲಿ ಅವರ ಗತಿ ಏನಾಯಿತೆಂಬುದು ಸದ್ಯಕ್ಕೆ ಅಪ್ರಸ್ತುತ. ಗುಜರಾತ್ ರಾಜ್ಯದ ಕವಿಠಾ ಗ್ರಾಮದಲ್ಲಿ ಹೋದ ವರ್ಷವೆ ಒಂದು ಘಟನೆ ನಡೆಯಿತು. ಆ ಊರಲ್ಲೊಂದು ಸರಕಾರಿ ಶಾಲೆಯಿತ್ತು. ಸರ್ವರಿಗೂ ಸಮಾನಾವಕಾಶವುಳ್ಳ ಈ ಶಾಲೆಗೆ ನಮ್ಮ ಮಕ್ಕಳನ್ನು ಸೇರಿಸಿಕೊಳ್ಳಬೇಕೆಂದು ಹಟಹಿಡಿಯಕೂಡದು ಎಂಬುದಾಗಿ ಆ ಹಳ್ಳಿಯ ಹಿಂದೂಗಳು ಆಸ್ಪೃಶ್ಯರಿಗೆ ಆಜ್ಞಾಪಿಸಿದರು. ತಮಗಿರುವ ಹಕ್ಕನ್ನು ಹಿಂದೂಗಳ ಅಪೇಕ್ಷೆಗೆ ವಿರುದ್ಧವಾಗಿ ಚಲಾಯಿಸುವ ಧೈರ್ಯ ಮಾಡಿದುದಕ್ಕಾಗಿ ಕವಿಠಾ ಗ್ರಾಮದ ಅಸ್ಪೃಶ್ಯರು ಎಂತಹ ಕಷ್ಟಗಳಿಗೆ ಗುರಿಯಾದರೆಂಬುದು ಸರ್ವವಿದಿತವಾಗಿರುವುದರಿಂದ ಅದನ್ನು ವಿವರಿಸಬೇಕಾಗಿಲ್ಲ. ಗುಜರಾತ್‌ನ ಅಹಮ್ಮದಾಬಾದ್ ಜಿಲ್ಲೆಯ ಹಳ್ಳಿಯಾದ ಜನುವಿನಲ್ಲಿ ಇನ್ನೊಂದು ಪ್ರಕರಣ ಜರುಗಿತು. ೧೯೩೫ನೆಯ ನವೆಂಬರ್ ತಿಂಗಳಲ್ಲಿ ಅನುಕೂಲಸ್ಥರಾದ ಅಸ್ಪಶ್ಯ ಸ್ತ್ರೀಯರು ಕೆಲವರು ತಾಮ್ರ, ಹಿತ್ತಾಳೆ ಮೊದಲಾದ ಲೋಹದ ಕೊಡಗಳಲ್ಲಿ ನೀರು ತರುವುದಕ್ಕೆ ಆರಂಭಿಸಿದರು. ಇದು ತಮ್ಮ ಪ್ರತಿಷ್ಠೆಗೊಂದು ಅವಮಾನವೆಂದು ಹಿಂದೂಗಳು ಭಾವಿಸಿದರು. ಆ ಅಸ್ಪೃಶ್ಯ ಸ್ತ್ರೀಯರ ಉದ್ಧಟತನಕ್ಕೆ ಶಾಸ್ತಿ ಮಾಡಲೆಂದು ಅವರನ್ನು ಹಿಡಿದು ಬಡಿದರು. ತೀರ ಇತ್ತೀಚಿನ ಪ್ರಸಂಗವೊಂದು ಜಯಪುರ ಸಂಸ್ಥಾನದ ಚಕ್ವಾರಾ ಗ್ರಾಮದಿಂದ ವರದಿಯಾಗಿದೆ. ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳಿಂದ ತಿಳಿದುಬರುವುದು ಇಷ್ಟು- ಚಕ್ವಾರಾದ ಅಸ್ಪೃಶ್ಯನೊಬ್ಬನು ತೀರ್ಥಯಾತ್ರೆ ಮುಗಿಸಿಕೊಂಡು ಬಂದು ಪುಣ್ಯಯಾತ್ರೆಯ ಅಂಗವಾಗಿ ಹಳ್ಳಿಯಲ್ಲಿಯ ತನ್ನ ಅಸ್ಪೃಶ್ಯ ಬಂಧುಗಳಿಗೆ ಔತಣಕೂಟವನ್ನು ಏರ್ಪಡಿಸಿದನು. ತನ್ನ ಅತಿಥಿಗಳಿಗೆ ಸಮೃದ್ಧ ಭೋಜನ ಮಾಡಿಸಬೇಕೆಂದು ಆತ ಬಡಿಸಿದ ಊಟದಲ್ಲಿ ತುಪ್ಪವನ್ನು ಸೇರಿಸಿದ್ದನು. ಅಸ್ಪಶ್ಯರೆಲ್ಲ ಈ ಕೂಟದಲ್ಲಿ ಊಟ ಮಾಡುತ್ತಿರುವಾಗ ನೂರಾರು ಹಿಂದೂಗಳು ಕೋಲುಬಡಿಗೆಗಳನ್ನು ಹಿಡಿದು ಅಲ್ಲಿಗೆ ನುಗ್ಗಿ, ಆಹಾರವನ್ನೆಲ್ಲ ಚಿಲ್ಲಾಪಿಲ್ಲಿ ಮಾಡಿ, ಊಟಕ್ಕೆ ಕುಳಿತವರನ್ನು ಚೆನ್ನಾಗಿ ಥಳಿಸಿದರು. ಜೀವವುಳಿದರೆ ಸಾಕೆಂದು ಅತಿಥಿಗಳು ಊಟ ಬಿಟ್ಟು ಓಡಿ ಹೋದರು. ಅರಕ್ಷಿತ ಅಸ್ಪೃಶ್ಯರ ಮೇಲೆ ಈ ಮಾರಕ ದಾಳಿಯನ್ನು ಏಕೆ ಮಾಡಲಾಯಿತು? ಹಿಂದೂಗಳು ಕೊಟ್ಟ ಕಾರಣ ಇದು – ಅಸ್ಪೃಶ್ಯ ಗೃಹಸ್ಥನು ತುಪ್ಪದೂಟ ಬಡಿಸುವ ಧಾರ್ಷ್ಟ್ಯವನ್ನು ತೋರಿಸಿದ್ದನು ಮತ್ತು ಅಸ್ಪಶ್ಯ ಅತಿಥಿಗಳು ಅದನ್ನು ಉಣ್ಣುವ ಮೂರ್ಖತನ ಮಾಡಿದ್ದರು. ತುಪ್ಪವನ್ನು ಸೇವಿಸುವುದು ಉನ್ನತವಾದ ಸಾಮಾಜಿಕ ದರ್ಜೆಯ ಚಿಹ್ನೆಯೆಂದು ಯಾರೂ ಭಾವಿಸಲಾರರು. ಆದರೆ ಚಕ್ವಾರಾ ಹಿಂದೂಗಳ ವಿಚಾರಸರಣಿ ಬೇರೆಯಾಗಿತ್ತು. ಊಟಕ್ಕೆ ತುಪ್ಪ ಬಡಿಸಿಕೊಂಡು ಅಸ್ಪೃಶ್ಯರು ತಮಗೆ ಅಪಮಾನ ಮಾಡಿದರು ಎಂದು ಅವರು ಭಾವಿಸಿದರು. ಹಿಂದೂಗಳು ತುಪ್ಪ ತಿನ್ನುವುದು ಸಹಜವಾದುದು. ತಮಗೆ ಅದು ಸಲ್ಲದೆಂದು ಅಸ್ಪೃಶ್ಯರು ತಿಳಿಯಬೇಡವೆ? ಅಸ್ಪೃಶ್ಯನಾದವನು ತುಪ್ಪವನ್ನು ಕೊಂಡು ತರಬಲ್ಲವನಾಗಿದ್ದರೂ ಕೂಡ ಅವನು ತಿನ್ನಕೂಡದು, ತಿಂದರೆ ಹಿಂದೂಗಳಿಗೆ ಉದ್ದಟತನ ತೋರಿದಂತೆಯೆ! ಇದು ಈ ಘಟನೆಯ ಅಂತರಾರ್ಥ. ಇದು ೧೯೩೬ರ ಏಪ್ರಿಲ್ ಒಂದನೆಯ ದಿನಾಂಕ ಅಥವಾ ಅದರ ಸಮೀಪದ ದಿನ ನಡೆದ ಘಟನೆ. (ಪುಟ 51)

ಹೀಗೆ ವಾಸ್ತವ ಘಟನೆಗಳನ್ನು ತಿಳಿಸಿದ ಬಳಿಕ ಈಗ ಸಮಾಜ ಸುಧಾರಣೆಯ ವಿಷಯಕ್ಕೆ ಮತ್ತೆ ಬರುತ್ತೇನೆ. ಬ್ಯಾನರ್ಜಿಯವರನ್ನು ಸಾಧ್ಯವಿದ್ದ ಮಟ್ಟಗೆ ಅನುಕರಿಸಿ, ರಾಜಕೀಯ ಪ್ರವೃತ್ತಿಯ ಹಿಂದೂಗಳನ್ನು ನಾನು ಹೀಗೆ ಪ್ರಶ್ನಿಸುತ್ತೇನೆ. “ನಿಮ್ಮ ದೇಶ ಬಾಂಧವರೇ ಆದ ಅಸ್ಪೃಶ್ಯರ ದೊಡ್ಡ ವರ್ಗದವರಿಗೆ ಸಾರ್ವಜನಿಕ ಶಾಲೆಯಲ್ಲಿ ಪ್ರವೇಶವನ್ನು ನಿರಾಕರಿಸುತ್ತಿರುವ ನೀವು ರಾಜಕೀಯ ಪ್ರಭುತ್ವಕ್ಕೆ ತಕ್ಕವರಾಗಿದ್ದೀರಾ? ಸಾರ್ವಜನಿಕ ಬಾವಿಗಳಿಂದ ನೀರು ತರಲಿಕ್ಕೆ ಕೂಡ ಅವರಿಗೆ ಅವಕಾಶ ಕೊಡದೆ ನೀವು ರಾಜಕೀಯ ಅಧಿಕಾರಕ್ಕೆ ತಕ್ಕವರಾಗಿದ್ದೀರಾ? ಸಾರ್ವಜನಿಕ ರಸ್ತೆಗಳನ್ನು ಬಳಸಲೂ ಅವರಿಗೆ ಅಡ್ಡಿ ಮಾಡುವ ನೀವು ರಾಜಕೀಯ ಅಧಿಕಾರಕ್ಕೆ ತಕ್ಕವರಾಗಿದ್ದೀರಾ? ತಮಗೆ ಇಷ್ಟವಾದ ವೇಷಭೂಷಣಗಳನ್ನು ತೊಡಲು ಅವರಿಗೆ ಆಸ್ಪದ ಕೊಡದ ನೀವು ರಾಜಕೀಯ ಅಧಿಕಾರಕ್ಕೆ ತಕ್ಕವರಾಗಿದ್ದೀರಾ? ತಮಗೆ ಬೇಕೆನಿಸಿದ್ದನ್ನು ತಿಂದುಂಬುವುದಕ್ಕೆ ಆ ಜನರಿಗೆ ಸ್ವಾತಂತ್ರ್ಯವೀಯದ ನೀವು ರಾಜಕೀಯ ಅಧಿಕಾರಕ್ಕೆ ಯೋಗ್ಯರಾಗಿದ್ದೀರಾ?” ಹನುಮನ ಬಾಲದಂತೆ ಇಂತಹ ಪ್ರಶ್ನೆಗಳ ಸಾಲನ್ನು ನಾನು ಇನ್ನೂ ಬೆಳೆಸಬಹುದು. ಆದರೆ ಇಷ್ಟು ಸಾಕು. ಈ ಪ್ರಶ್ನೆಗಳಿಗೆ ಶ್ರೀ ಬ್ಯಾನರ್ಜಿ ಏನೆಂದು ಉತ್ತರಿಸುತ್ತಿದ್ದರೋ ನಾನರಿಯೆ. ವಿಚಾರವಂತರಾರೂ ಈ ಪ್ರಶ್ನೆಗಳಿಗೆ ಹೌದೆಂದು ಉತ್ತರ ಕೊಡುವ ಧೈರ್ಯ ಮಾಡಲಾರರೆಂದು ನನಗನ್ನಿಸುತ್ತದೆ. ಒಂದು ದೇಶವನ್ನು ಆಳಲು ಇನ್ನೊಂದು ದೇಶಕ್ಕೆ ಅಧಿಕಾರವಿಲ್ಲ ಎಂಬ ಮಿಲ್ ಸಾಹೇಬರ ಸೂತ್ರವನ್ನು ಪಠಿಸುತ್ತಿರುವ ಪ್ರತಿಯೊಬ್ಬ ಕಾಂಗ್ರೆಸ್ ಸದಸ್ಯನು ಒಂದು ವರ್ಗವನ್ನು ಆಳಲು ಇನ್ನೊಂದು ವರ್ಗಕ್ಕೆ ಅಧಿಕಾರವಿಲ್ಲ ಎಂದು ಒಪ್ಪಲೇಬೇಕು.

ಹಾಗಾದರೆ ಸಾಮಾಜಿಕ ಸುಧಾರಣಾ ಪಕ್ಷವು ನಾಶವಾಗಿ ಹೋದುದೇಕೆ? ಈ ಸುಧಾರಕರು ಎಂತಹ ಸಾಮಾಜಿಕ ಸುಧಾರಣೆಗಾಗಿ ಚಳುವಳಿ ಮಾಡುತ್ತಿದ್ದರೆಂಬುದನ್ನು ಮೊದಲು ಅರಿತುಕೊಂಡರೆ ಇದಕ್ಕೆ ಉತ್ತರ ದೊರೆಯುವುದು. ಈ ಸಮಯದಲ್ಲೇ ಸಮಾಜ ಅರಿತುಕೊಂಡರೆ ಅದಕ್ಕೂ ಉತ್ತರ ದೊರೆಯುವುದು. ಈಗ ಸಮಾಜ ಸುಧಾರಣೆಯ ಎರಡು ವರ್ಗಗಳಲ್ಲಿಯ ವ್ಯತ್ಯಾಸವನ್ನು ನಾವು ಸ್ಪಷ್ಟವಾಗಿ ತಿಳಿಯಬೇಕು. ಹಿಂದೂ ಕುಟುಂಬದ ಸುಧಾರಣೆಗೆ ಸೀಮಿತವಾದ ಸಮಾಜ ಸುಧಾರಣೆ ಒಂದು ವರ್ಗದ್ದು. ಸಮಗ್ರ ಹಿಂದೂ ಸಮಾಜದ ವಿಘಟನೆ ಹಾಗೂ ಪುನರ್‌ ವ್ಯವಸ್ಥೆಯನ್ನು ಗುರಿಯಾಗಿಟ್ಟುಕೊಂಡ ಸಮಾಜ ಸುಧಾರಣೆ ಇನ್ನೊಂದು ವರ್ಗದ್ದು, ವಿಧವಾ ಪುನರ್ವಿವಾಹದ ಪ್ರತಿಪಾದನೆ, ಬಾಲ್ಯವಿವಾಹದ ವಿರೋಧ ಮುಂತಾದವು ಮೊದಲನೆಯ ವರ್ಗದ ವಿಷಯಗಳು. ಜಾತಿಪದ್ಧತಿಯ ನಿರ್ಮೂಲನೆ ಎರಡನೆಯ ವರ್ಗದ ವಿಷಯ. ಸಾಮಾಜಿಕ ಪರಿಷತ್ತು ಸವರ್ಣ ಹಿಂದೂ ಕುಟುಂಬದ ಸುಧಾರಣೆಯೊಂದನ್ನೇ ಮುಖ್ಯವಾಗಿ ಯೋಚಿಸುತ್ತಿತ್ತು. ಅದರ ಸದಸ್ಯರು ಹೆಚ್ಚಾಗಿ ಉಚ್ಚ ಜಾತಿಯ ಹಿಂದೂಗಳೇ ಆಗಿದ್ದರು. ಜಾತಿ ನಿರ್ಮೂಲನೆಯ ಅಗತ್ಯ ಅವರಿಗೆ ತಿಳಿದಿರಲಿಲ್ಲ. ಅಥವಾ ಅದರ ಬಗೆಗೆ ಚಳವಳಿ ನಡೆಸುವ ಧೈರ್ಯ ಅವರಿಗಿರಲಿಲ್ಲ. ಒತ್ತಾಯದ ವೈಧ್ಯವ್ಯ ಪದ್ಧತಿ, ಬಾಲ್ಯವಿವಾಹ ಮೊದಲಾದ ಅನಿಷ್ಟಗಳ ಪರಿಣಾಮಗಳನ್ನು ಅವರು ಸ್ವತಃ ಅನುಭವಿಸುತ್ತಿದ್ದರು. ಆದುದರಿಂದ ಆ ಪಿಡುಗುಗಳ ಪರಿಣಾಮದಿಂದ ಅವರು ಬೇಸತ್ತುದು ಸಹಜವೆ. ಸಮಗ್ರ ಹಿಂದೂ ಸಮಾಜದ ಸುಧಾರಣೆಗೆ ಅವರು ಹೊರಡಲಿಲ್ಲ. ಜಾತಿ ಪದ್ಧತಿಯ ನಾಶಕ್ಕೆ ಅವರು ಪ್ರಯತ್ನಿಸಲಿಲ್ಲ. ಅದರ ಬಗೆಗೆ ವಿಚಾರ ಕೂಡ ಮಾಡಲಿಲ್ಲ. ಹೀಗಾಗಿ ಸಾಮಾಜಿಕ ಸುಧಾರಣಾ ಪಕ್ಷ ಸೋತುಹೋಯಿತು.

ಈ ವಾದವೇನೇ ಇದ್ದರೂ, ರಾಜಕೀಯ ಸುಧಾರಣೆ ಮೇಲ್ಗೈಯಾಯಿತೆಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ಆದರೆ ಅದರ ಗೆಲುವು ಎಷ್ಟು ಸೀಮಿತವಾದುದೆಂದು ಈ ವಾದ ತಿಳಿಸುತ್ತದೆ. (ಪುಟ 52)

‘ಕುಟುಂಬ ಸುಧಾರಣೆ’ ಎನ್ನುವ ಸಂಕುಚಿತ ಅರ್ಥದಲ್ಲಿ ಈ ಸುಧಾರಣೆಯನ್ನು ಗ್ರಹಿಸುವುದಾದರೆ ರಾಜಕೀಯ ಸುಧಾರಣೆಗೆ ಮುನ್ನ ಅದೇನೂ ನಡೆಯಬೇಕಾಗಿಲ್ಲವೆನ್ನಬಹುದು. ಆದರೆ ಸಮಗ್ರ ಸಮಾಜದ ಪುನರ್ನಿರ್ಮಾಣ ಎಂದರ್ಥದಲ್ಲಿ ಸಮಾಜ ಸುಧಾರಣೆಯನ್ನು ಗ್ರಹಿಸಿದರೆ ರಾಜಕೀಯ ಸುಧಾರಣೆಗೆ ಆದ್ಯತೆ ದೊರೆಯಲಾರದು. ರಾಜಕೀಯ ಸಂವಿಧಾನಗಳನ್ನು ರೂಪಿಸುವವರು ಸಾಮಾಜಿಕ ಶಕ್ತಿಗಳನ್ನು ಗಮನಿಸಲೇಬೇಕು. ಈ ಅಂಶವನ್ನು ಹೇಳಿದವರು ಬೇರಾರೂ ಅಲ್ಲ, ಕಾರ್ಲ್‌ಮಾರ್ಕ್ಸನ ಸಹೋದ್ಯೋಗಿಯೂ ಮಿತ್ರನೂ ಆಗಿದ್ದ ಫರ್ಡಿನಾಂಡ್ ಲಾಸಲ್.

ಪರ್ಶಿಯಾದ ಒಂದು ಸಭೆಯಲ್ಲಿ ಮಾತಾಡುತ್ತಾ ಲಾಸಲ್ ಹೀಗೆಂದರು, “ಸಂವಿಧಾನಾತ್ಮಕ ಪ್ರಶ್ನೆಗಳು ಮುಖ್ಯವಾಗಿ ಹಕ್ಕಿನ ಪ್ರಶ್ನೆಗಳಾಗಿರದೆ ಶಕ್ತಿಯ ಪ್ರಶ್ನೆಗಳಾಗಿರುತ್ತವೆ. ಪ್ರತ್ಯಕ್ಷವಾದ ಶಕ್ತಿಯಿದ್ದರೆ ಮಾತ್ರ ದೇಶದ ಸಂವಿಧಾನ ಬದುಕಬಲ್ಲದು. ಆದುದರಿಂದ ಒಂದು ಸಮಾಜದಲ್ಲಿ ಇರುವ ಶಕ್ತಿಗಳನ್ನು ಸಮರ್ಪಕವಾಗಿ ವ್ಯಕ್ತಪಡಿಸಿದಲ್ಲಿ ಮಾತ್ರ ರಾಜಕೀಯ ಸಂವಿಧಾನಕ್ಕೆ ಮೌಲ್ಯ ಮತ್ತು ಸ್ಥಿರತೆ ಇರುತ್ತದೆ.”

ಈ ಮಾತನ್ನು ಆರಿಯಲು ನಾವು ಪರ್ಶಿಯಾಕ್ಕೆ ಹೋಗಬೇಕಿಲ್ಲ. ನಮ್ಮ ದೇಶದಲ್ಲಿಯೇ ಅದಕ್ಕೆ ಪುರಾವೆಯಿದೆ. ಬೇರೆ ಬೇರೆ ವರ್ಗಗಳಿಗೆ ಹಾಗೂ ಜಾತಿಗಳಿಗೆ ಇಂತಿಷ್ಟು ಎಂದು ನಿಗದಿಪಡಿಸಿ ರಾಜಕೀಯ ಅಧಿಕಾರ ಕೊಟ್ಟ ಜಾತಿವಾರು ಐತೀರ್ಪಿನ (Communal Awardನ) ಅರ್ಥವೇನು? ರಾಜಕೀಯ ಸಂವಿಧಾನ ಸಾಮಾಜಿಕ ಸ್ವರೂಪವನ್ನು ಗಮನಿಸಲೇಬೇಕು. ಇದು ಆ ಐತೀರ್ಪಿನ ಅರ್ಥವೆಂದು ನಾನು ಭಾವಿಸಿದ್ದೇನೆ. ಭಾರತದಲ್ಲಿ ಸಾಮಾಜಿಕ ಸಮಸ್ಯೆಗೂ ರಾಜಕೀಯ ಸಮಸ್ಯೆಗೂ ಏನೂ ಸಂಬಂಧವಿಲ್ಲವೆಂದು ವಾದಿಸುತ್ತಿದ್ದ ರಾಜಕಾರಣಿಗಳು ದೇಶದ ಸಂವಿಧಾನವನ್ನು ನಿರ್ಮಿಸುವಾಗ ಸಾಮಾಜಿಕ ಸಮಸ್ಯೆಯನ್ನು ಪರಿಗಣಿಸಲೇಬೇಕಾಯಿತು. ಸಮಾಜ ಸುಧಾರಣೆಯನ್ನು ಎಷ್ಟೋ ಕಾಲದಿಂದ ಉಪೇಕ್ಷೆಗೆ ಗುರಿ ಮಾಡಲಾಗಿತ್ತು. ಆ ಅನ್ಯಾಯಕ್ಕೆ ಪ್ರಾಯಶ್ಚಿತ್ತರೂಪವಾಗಿಯೆ ಜಾತಿವಾರು ಐತೀರ್ಪು ಬಂದಿತೆನ್ನಬಹುದು. ಸಮಾಜ ಸುಧಾರಣಾ ಪಕ್ಷಕ್ಕೆ ಇದೊಂದು ಗೆಲುವು. ಆದರೆ ಈ ಅಭಿಪ್ರಾಯವನ್ನು ಅನೇಕರು ಒಪ್ಪುವುದಿಲ್ಲವೆಂದು ನಾನು ಬಲ್ಲೆ. ಜಾತಿವಾರು ಐತೀರ್ಪು ಅಸ್ವಾಭಾವಿಕವೆಂದೂ, ಅಲ್ಪಸಂಖ್ಯಾತ ವರ್ಗಗಳೊಡನೆ ಸರಕಾರ ದುಷ್ಟ ಒಪ್ಪಂದ ಮಾಡಿಕೊಂಡು ಇದನ್ನು ನಿರ್ಮಿಸಿದೆಯೆಂದೂ ಪ್ರಚಲಿತ ಅಭಿಪ್ರಾಯವಾಗಿದೆ. ನನ್ನ ವಾದಕ್ಕೆ ಈ ಐತೀರ್ಪನ್ನು ನಾನು ಆಧರಿಸುವುದಿಲ್ಲ. ಐರ್ಲೆಂಡ್‌ ನತ್ತ ಸ್ವಲ್ಪ ದೃಷ್ಟಿ ಹೊರಳಿಸೋಣ. ಐರ್ಲೆಂಡಿನ ಹೋಂರೂಲ್ ಇತಿಹಾಸ ಏನು ತಿಳಿಸುತ್ತದೆ? ದಕ್ಷಿಣ ಐರ್ಲೆಂಡಿನ ಪ್ರತಿನಿಧಿಯಾದ ರೆಡ್ಮಂಡ್ ಅವರು ಸಮಗ್ರ ಐರ್ಲೆ೦ಡಿಗೆ ಅನ್ವಯಿಸುವ ಹೋಂರೂಲ್ ಸಂವಿಧಾನದಲ್ಲಿ ಅಲ್‌ಸ್ಟರ್ ಪ್ರದೇಶವನ್ನು ಅಳವಡಿಸಬೇಕೆಂದು ಎರಡೂ ಪ್ರದೇಶಗಳಲ್ಲಿ ಸಂಧಾನ ನಡೆಸುತ್ತಾ ಇದ್ದ ಅಲ್ ಸ್ಟರ್ ಪ್ರತಿನಿಧಿಗಳಿಗೆ ಹೀಗೆ ನುಡಿದರು. “ನಿಮಗೆ ಯಾವ ರಾಜಕೀಯ ರಕ್ಷಣೆ ಬೇಕಾದರೂ ಕೇಳಿ ಕೊಡುವೆವು.” ಅದಕ್ಕೆ ಅಲ್‌ಸ್ಟರ್‌ರು ಕೊಟ್ಟ ಉತ್ತರವೇನು ಗೊತ್ತೆ? “ನಿಮ್ಮ ರಕ್ಷಣೆ ಹಾಳಾಗಲಿ, ಯಾವುದೇ ರೀತಿಯಾದ ನಿಮ್ಮ ಆಳ್ವಿಕೆಗೆ ಒಳಪಡಲು ನಾವು ಬಯಸುವುದಿಲ್ಲ”. ಅಲ್‌ಸ್ಟರ್‌ನವರಂತೆ ಭಾರತದಲ್ಲಿಯ ಅನೇಕ ಅಲ್ಪಸಂಖ್ಯಾತ ವರ್ಗಗಳೂ ನಿಲುವು ತಾಳಿದ್ದರೆ ಬಹುಸಂಖ್ಯಾತರ ರಾಜಕೀಯ ಆಕಾಂಕ್ಷೆಗಳ ಗತಿ ಏನಾಗುತ್ತಿತ್ತು? ಅಲ್ಪಸಂಖ್ಯಾತರನ್ನು ದೂರುವ ಜನರು ಇದನ್ನು ಆಲೋಚಿಸಬೇಕು. ಅದು ಹೋಗಲಿ, ಆಲ್‌ಸ್ಟರ್ ಈ ನಿಲುವೇಕೆ ತಾಳಿತು? ಇದು ಮುಖ್ಯ ಪ್ರಶ್ನೆ. ಅಲ್‌ಸ್ಟರ್ ಮತ್ತು ದಕ್ಷಿಣ ಐರ್ಲೆಂಡ್‌ಗಳ ನಡುವೆ ಒಂದು ಸಾಮಾಜಿಕ ಸಮಸ್ಯೆಯಿತ್ತು. ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟಂಟ್ ಪಂಗಡಗಳ ಸಮಸ್ಯೆ. ಅಂದರೆ ಒಂದರ್ಥದಲ್ಲಿ ಜಾತಿಯದೇ ಸಮಸ್ಯೆ. (ಪುಟ 53)

ಇದು ಉದ್ಭವವಾಗಿ ಕ್ಯಾಥೋಲಿಕ್ ಹಾಗೂ ಪ್ರೋಟೆಸ್ಟಂಟ್ ಈ ಎರಡು ಜಾತಿಗಳ ಸಮಸ್ಯೆ ರಾಜಕೀಯ ಪರಿಹಾರಕ್ಕೆ ಅಡ್ಡಿಯಾಯಿತು. ಇದನ್ನು ಅಲ್ಲಗಳೆಯುವವರೂ ಇದ್ದಾರೆ. ಅಲ್ಲಿ ಕೂಡ ಸಾಮ್ರಾಜ್ಯವಾದಿಗಳ ಕೈವಾಡವಿತ್ತೆಂದು ಹೇಳುವುದುಂಟು. ಆದರೆ ನನ್ನ ಪುರಾವೆಗಳಿನ್ನೂ ಮುಗಿದಿಲ್ಲ. ರೋಮ್‌ನ ಇತಿಹಾಸವನ್ನು ನೋಡೋಣ. ಇಲ್ಲಿ ಯಾವುದೊ ಒಂದು ದುಷ್ಟ ಶಕ್ತಿಯ ಕೈವಾಡವಿದ್ದಿತೆಂದು ಯಾರೂ ಹೇಳಲಾರರು. ರೋಮ್‌ ನ ರಿಪಬ್ಲಿಕ್ ಸಂವಿಧಾನದಲ್ಲಿ ಜಾತಿವಾರು ಐತೀರ್ಪನ್ನು ಹೋಲುವ ಅಂಶಗಳಿದ್ದವು. ರೋಮ್ ಚರಿತ್ರೆಯನ್ನು ಅಭ್ಯಾಸ ಮಾಡಿದವರಿಗೆ ಇದು ತಿಳಿಯುವುದು. ರೋಮ್‌ನಲ್ಲಿ ಅರಸೊತ್ತಿಗೆಯನ್ನು ರದ್ದುಪಡಿಸಿದ ಮೇಲೆ ಕಾನ್ಸ್ಯೂಲರು ಹಾಗೂ ಧರ್ಮಾಧ್ಯಕ್ಷ ಇವರಿಬ್ಬರಲ್ಲಿ ರಾಜಾಧಿಕಾರವು ಹಂಚಿಹೋಯಿತು. ಧರ್ಮಾಧ್ಯಕ್ಷರು ರಾಜನ ಧರ್ಮಾಧಿಕಾರಕ್ಕೆ ಬಾಧ್ಯಸ್ಥರಾದರು, ಕಾನ್ಸ್ಯೂಲರು ಇತರ ಆಡಳಿತಗಳ ಸೂತ್ರ ವಹಿಸಿದರು. ಅಧಿಕಾರ ನಡೆಸುವವರು ಇಬ್ಬರು ಕಾನ್ಸ್ಯೂಲರು. ಅವರಲ್ಲಿ ಒಬ್ಬ ಪ್ಯಾಟ್ರಿಶಿಯನ್ ಮತ್ತೊಬ್ಬ ಪ್ಲೆಬಿಯನ್ ಆಗಿರಬೇಕೆಂದು ರಿಪಬ್ಲಿಕ್ ಸಂವಿಧಾನ ವಿಧಿಸಿತು. ಅದೇ ಮೇರೆಗೆ, ಧರ್ಮಾಧಿಕಾರಿಯ ಕೈಕೆಳಗಿರುವ ಅರ್ಧದಷ್ಟು ಜನ ಪ್ಲೇಬಿಯನ್ನರೂ, ಇನ್ನರ್ಧದಷ್ಟು ಪ್ಯಾಟ್ರಿಶಿಯನ್ನರೂ ಇರಬೇಕೆಂದು ವಿಧಿಸಲಾಗಿತ್ತು. ಜಾತಿವಾರು ಐತೀರ್ಪನ್ನು ಬಹುಮಟ್ಟಿಗೆ ಹೋಲುವ ಈ ಬಗೆಯ ವಿಧಿಗಳನ್ನು ರೋಮ್‌ನ ರಿಪಬ್ಲಿಕ್‌ ಸಂವಿಧಾನದಲ್ಲಿ ಯಾಕೆ ಅಳವಡಿಸಲಾಗಿತ್ತು? ಪ್ಯಾಟ್ರಶಿಯನ್ನರೂ ಹಾಗೂ ಪ್ಲೇಬಿಯನ್ನರು ಎರಡು ಪ್ರತ್ಯೇಕ ಜಾತಿಗಳವರಾಗಿದ್ದುದರಿಂದ ಈ ಎರಡು ವರ್ಗಗಳ ನಡುವಿನ ಸಾಮಾಜಿಕ ಭೇದವನ್ನು ಸಂವಿಧಾನ ಪರಿಗಣಿಸಬೇಕಾಯಿತು. ಇದಲ್ಲದೆ ಬೇರೆ ಯಾವ ವಿವರಣೆಯೂ ಸಾಧ್ಯವಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ, ರಾಜಕೀಯ ಸುಧಾರಕರು ಎತ್ತ ನೋಡಿದರೂ ಕೂಡ, ಸಂವಿಧಾನವನ್ನು ರಚಿಸುವಾಗ ಸಾಮಾಜಿಕ ಸ್ಥಿತಿಯಿಂದ ಉದ್ಭವವಾಗಿರುವ ಸಮಸ್ಯೆಯನ್ನು ಕಡೆಗಣಿಸಲಾಗದು ಎಂಬುದು ತಿಳಿಯುತ್ತದೆ.

ಸಾಮಾಜಿಕ ಹಾಗೂ ಧಾರ್ಮಿಕ ಸಮಸ್ಯೆಗಳು ರಾಜಕೀಯ ಸಂವಿಧಾನದ ಮೇಲೆ ಪ್ರಭಾವ ಬೀರುತ್ತದೆ ಎಂಬುದಕ್ಕೆ ನಾನು ಆಯ್ದುಕೊಂಡ ಉದಾಹರಣೆಗಳು ತೀರಾ ನಿರ್ದಿಷ್ಟ ಸ್ವರೂಪದವುಗಳೆಂದು ತೋರಬಹುದು. ಇರಬಹುದು, ಆದರೆ ಈ ಪ್ರಭಾವ ಅಥವಾ ಪರಸ್ಪರ ಸಂಬಂಧ ಸೀಮಿತವೆಂದು ತಿಳಿಯಬಾರದು. ತದ್ವಿರುದ್ಧವಾಗಿ ರಾಜಕೀಯ ಕ್ರಾಂತಿಗಳು ನಡೆದಿದ್ದುವೆಂದು ಇತಿಹಾಸ ದೃಢೀಕರಿಸುತ್ತದೆ. ಲೂಥರ್ ಆರಂಭಿಸಿದ ಧಾರ್ಮಿಕ ಸುಧಾರಣಾ ಪಂಥವು ಯೂರೋಪಿಯನ್ನರ ರಾಜಕೀಯ ವಿಮೋಚನೆಯ ಮುನ್ಸೂಚಿಯಾಯಿತು. ಇಂಗ್ಲೆಂಡಿನಲ್ಲಿ ಪ್ಯುರಿಟನ್ ಪಂಥವೇ ರಾಜಕೀಯ ಸ್ವಾಂತತ್ರ್ಯಕ್ಕೆ ಅಡಿಗಲ್ಲನ್ನಿಟ್ಟಿತು. ಅಮೇರಿಕಾದ ಸ್ವಾತಂತ್ರ್ಯ ಯುದ್ಧವನ್ನು ಗೆದ್ದದ್ದೂ ಪ್ಯುರಿಟನ್ ಪಂಥವೇ. ಪ್ಯುರಿಟ್ ಪಂಥವೆಂಬುದು ಧಾರ್ಮಿಕ ಆಂದೋಲನವಾಗಿತ್ತು. ಮುಸ್ಲಿಂ ಸಾಮ್ರಾಜ್ಯದ ಕಥೆಯೂ ಇದೇ. ಅರಬರು ಒಂದು ರಾಜಕೀಯ ಶಕ್ತಿಯಾಗುವುದಕ್ಕೆ ಮೊದಲು ಪೈಗಂಬರ ಮಹಮ್ಮದರಿಂದ ಆರಂಭವಾದ ಒಂದು ಸಮಗ್ರ ಧಾರ್ಮಿಕ ಕ್ರಾಂತಿಯಲ್ಲಿ ಅವರು ಹಾಯ್ದು ಬಂದಿದ್ದರು. ಭಾರತೀಯ ಇತಿಹಾಸವು ಕೂಡ ಇದೇ ನಿರ್ಣಯವನ್ನು ಬೆಂಬಲಿಸುತ್ತದೆ. ಚಂದ್ರಗುಪ್ತನು ನಡೆಸಿದ ರಾಜಕೀಯ ಕ್ರಾಂತಿಗೆ ಮುನ್ನ ಬುದ್ಧನಿಂದ ಧಾರ್ಮಿಕವಾಗಿ ಹಾಗೂ ಸಾಮಾಜಿಕ ಕ್ರಾಂತಿಯೊಂದು ನಡೆದುಹೋಗಿತ್ತು. ಮಹಾರಾಷ್ಟ್ರದ ಸಾಧುಸಂತರು ಸಾಧಿಸಿದ ಧಾರ್ಮಿಕ ಸಾಮಾಜಿಕ ಸುಧಾರಣೆಯ ತರುವಾಯವೇ ಶಿವಾಜಿಯ ರಾಜಕೀಯ ಕ್ರಾಂತಿ ಉದ್ಭವಿಸಿತು. ಸಿಕ್ಖರ ರಾಜಕೀಯ ಕ್ರಾಂತಿಗೆ ಪೂರ್ವಭಾವಿಯಾಗಿ ಗುರುನಾನಕರ ನೇತೃತ್ವದಲ್ಲಿ ಧಾರ್ಮಿಕ, ಸಾಮಾಜಿಕ ಕ್ರಾಂತಿ ನಡೆದಿತ್ತು. ಇನ್ನು ಉದಾಹರಣೆಗಳನ್ನು ಬೆಳೆಸುತ್ತಾ ಹೋಗುವ ಅಗತ್ಯವಿಲ್ಲ. ಒಂದು ಜನಾಂಗದ ರಾಜಕೀಯ ವಿಕಾಸ (ಪುಟ 54)

ಸಾಧ್ಯವಾಗಬೇಕಾದರೆ ಅದಕ್ಕೆ ಮುನ್ನ ಆ ಜನರ ಮನಸ್ಸು ಹಾಗೂ ಆತ್ಮಗಳು ದಾಸ್ಯದಿಂದ ಬಿಡುಗಡೆ ಹೊಂದಲೇಬೇಕು. ಇದನ್ನು ಈ ಮೇಲಿನ ನಿದರ್ಶನಗಳು ಸಾಬೀತುಗೊಳಿಸುತ್ತವೆ.

III

ಈಗ ನಾನು ಸಮಾಜವಾದಿಗಳ ವಿಷಯಕ್ಕೆ ಬರುತ್ತೇನೆ. ಸಾಮಾಜಿಕ ವ್ಯವಸ್ಥೆಯಿಂದ ಉತ್ಪನ್ನವಾದ ಸಮಸ್ಯೆಯನ್ನು ಸಮಾಜವಾದಿಗಳು ಉಪೇಕ್ಷಿಸಬಲ್ಲರೆ? ಭಾರತೀಯ ಸಮಾಜವಾದಿಗಳು ಯೂರೋಪ್‌ನಲ್ಲಿಯ ತಮ್ಮ ವೈಚಾರಿಕ ಬಾಂಧವರನ್ನು ಅನುಕರಿಸುತ್ತಾರೆ. ಭಾರತದಲ್ಲಿರುವ ವಸ್ತುಸ್ಥಿತಿಯನ್ನು ಅರಿತುಕೊಳ್ಳದೆ. ಇತಿಹಾಸವನ್ನು ಆರ್ಥಿಕ ದೃಷ್ಟಿಯಿಂದಲೇ ಅರ್ಥೈಸಲು ಹೆಣಗುತ್ತಾರೆ. ಮನುಷ್ಯ ಆರ್ಥಿಕ ಜೀವಿ, ಅವನ ಆಶೋತ್ತರಗಳು ಕೆಲಸಕಾರ್ಯಗಳೂ ಆರ್ಥಿಕ ವಾಸ್ತವವನ್ನು ಅವಲಂಬಿಸಿರುತ್ತದೆ, ಶಕ್ತಿಯ ಏಕಮೇವ ಮೂಲವೆಂದರೆ ಆಸ್ತಿ, ಇದು ಅವರ ವಾದ. ಆದುದರಿಂದ ಅವರು ಹೇಳುವುದೇನೆಂದರೆ ರಾಜಕೀಯ ಹಾಗೂ ಸಾಮಾಜಿಕ ಸುಧಾರಣೆಗಳು ಅದ್ಭುತವಾದ ಭ್ರಾಂತಿಗಳು. ಇತರ ಯಾವುದೇ ಸುಧಾರಣೆಗೆ ಮುನ್ನ ಆಸ್ತಿಯನ್ನು ಸರ್ವರಲ್ಲಿ ಸಮಾನವಾಗಿ ಹಂಚಿ ಆರ್ಥಿಕ ಸುಧಾರಣೆ ಮಾಡುವುದು ಅತ್ಯವಶ್ಯ. ಸಮಾಜವಾದಿಗಳ ಈ ವಾದದ ಪ್ರತಿಯೊಂದು ಅಂಶವನ್ನೂ ಅದರ ಆಧಾರವನ್ನೂ ಪ್ರಶ್ನಿಸಬೇಕಾಗುತ್ತದೆ. ಮನುಷ್ಯನ ಚಟುವಟಿಕೆಗಳಿಗೆಲ್ಲ ಆರ್ಥಿಕ ಉದ್ದೇಶವೊಂದೇ ಪ್ರೇರಕವೆಂಬುದನ್ನು ನಾವು ಅಂಗೀಕರಿಸಲಾಗುವುದಿಲ್ಲ. ಆರ್ಥಿಕ ಶಕ್ತಿಯೊಂದೇ ಶಕ್ತಿ, ಬೇರಾವುದೂ ಶಕ್ತಿಯಲ್ಲ ಎಂಬುದನ್ನು ಮಾನವ ಸಮಾಜದ ಅಭ್ಯಾಸ ಎಂದೂ ಒಪ್ಪಿಕೊಳ್ಳಲಾರದು. ಮನುಷ್ಯನಿಗಿರುವ ಸಾಮಾಜಿಕ ದರ್ಜೆ ಅಥವಾ ಸ್ಥಾನವೇ ಎಷ್ಟೋ ಸಲ ಶಕ್ತಿಯ ಹಾಗೂ ಅಧಿಕಾರದ ಮೂಲವಾಗಿರುತ್ತದೆ. ಜನಸಾಮಾನ್ಯರ ಮೇಲೆ ಅನೇಕ ಮಹಾತ್ಮರು ಪ್ರಭಾವ ಬೀರಿದ್ದು ಹೀಗೆಯೇ. ಭಾರತದಲ್ಲಿನ ಲಕ್ಷಾಧೀಶರು ಎಂದೋ ನಿಧನರಾದ ಸಾಧು ಫಕೀರರಿಗೆ ವಿಧೇಯರಾಗುವುದೇಕೆ? ತಮ್ಮ ಸರ್ವಸ್ವವಾದ ಒಡವೆ ವಸ್ತುಗಳನ್ನು ಮಾರಿ ವಾರಣಾಸಿಗೋ, ಮೆಕ್ಕಾ ಯಾತ್ರೆಗೋ ಲಕ್ಷ ಲಕ್ಷ ಸಂಖ್ಯೆಯ ಬಡವರು ಹೋಗುತ್ತಾರಲ್ಲ, ಅದೇಕೆ? ಧರ್ಮವೆಂಬುದು ಶಕ್ತಿಮೂಲವೆಂದು ಭಾರತದಲ್ಲಿ ಇತಿಹಾಸ ನಿದರ್ಶಿಸುತ್ತದೆ. ಯಾವ ನ್ಯಾಯಾಧೀಶನಿಗಿಂತಲೂ ಹೆಚ್ಚಿನ ಅಧಿಕಾರವನ್ನು ಧರ್ಮಗುರು ಜನಸಾಮಾನ್ಯರ ಮೇಲೆ ಚಲಾಯಿಸುತ್ತಾನೆ. ಮುಷ್ಕರಗಳು, ಚುನಾವಣೆಗಳಂತಹ ವಿಷಯಗಳೂ ಕೂಡ ಧಾರ್ಮಿಕ ಅಂಶಗಳಾಗಿ ಪರಿವರ್ತನೆ ಹೊಂದುತ್ತವೆ. ಧರ್ಮದ ಅಥವಾ ಮತೀಯ ಅಂಶವೇ ಮೇಲ್ಗೈಯಾಗುತ್ತದೆ. ಮನುಷ್ಯನ ಮೇಲೆ ಧರ್ಮ ಪ್ರಭಾವವನ್ನು ತಿಳಿಯಲು ಇನ್ನೊಂದು ನಿದರ್ಶನವಾಗಿ ರೋಮ್‌ನ ಪ್ಲೇಬಿಯನ್ನರ ಪ್ರಕರಣವನ್ನೇ ನೋಡಬಹುದು. ರೋಮ್ ರಿಪಬ್ಲಿಕ್‌ನ ಅತ್ಯುನ್ನತ ಅಧಿಕಾರದಲ್ಲಿ ತಮಗೆ ಪಾಲು ಬೇಕೆಂದು ಹೋರಾಡಿ ಫೆಬಿಯನ್ನರು ತಮ್ಮ ಸಂಘವಾದ ಕಮಿಟಿಯಾ ಸೆಂಚುರಿಯಟಾದಿಂದ ಪ್ರತ್ಯೇಕವಾಗಿ ನಿರ್ಮಿಸಲ್ಪಟ್ಟ ಮತದಾರ ಕ್ಷೇತ್ರದಿಂದ ಒಬ್ಬ ಫೆಬಿಯನ್ ಕಾನ್ಸ್ಯೂಲ್‌ನನ್ನು ನಿಯಮಿಸುವುದರಲ್ಲಿ ಜಯಶಾಲಿಯಾಗಿದ್ದರು. ಅವರಿಗೆ ತಮ್ಮವನೇ ಒಬ್ಬ ಕಾನ್ಸ್ಯೂಲ್‌ನಾಗುವುದು ಬೇಕಾಗಿತ್ತು. ಏಕೆಂದರೆ ಪ್ಯಾಟ್ರಿಶಿಯನ್ ಕಾನ್ಸ್ಯೂಲ್‌ಗಳು ಆಡಳಿತದಲ್ಲಿ ಪ್ಲೇಬಿಯನ್ನರಿಗೆ ಭೇದಭಾವ ತೋರುತ್ತಾರೆಂದು ಅವರಿಗೆ ಅನ್ನಿಸಿತ್ತು. ಅವರು ಗಳಿಸಿದ್ದು ದೊಡ್ಡ ವಿಜಯ, ಯಾಕೆಂದರೆ ರೋಮ್‌ನ ರಿಪಬ್ಲಿಕ್‌ನ ಸಂವಿಧಾನದ ಮೇರೆಗೆ ಒಬ್ಬ ಕಾನ್ಸ್ಯೂಲ್ ಮಾಡಿದ್ದನ್ನು ನಿರಾಕರಿಸುವುದಕ್ಕೆ ಇನ್ನೊಬ್ಬ ಕಾನ್ಸೂಲ್‌ನಿಗೆ ಅಧಿಕಾರವಿತ್ತು. ಆದರೆ ವಸ್ತುತಃ ಇದರಿಂದ ಪ್ಲೇಬಿಯನ್ನರಿಗೆ ಲಾಭವಾಯಿತೆ? ಎಂದೂ ಆಗಲಿಲ್ಲ. ಪ್ಯಾಟ್ರಶಿಯನ್ ಕಾನ್ಸ್ಯೂಲ್‌ನನ್ನು (ಪುಟ 55)

ಬಿಟ್ಟು ಸ್ವತಂತ್ರವಾಗಿ ವರ್ತಿಸಬಲ್ಲಂಥ ಬಲಿಷ್ಠ ಪ್ಲೆಬಿಯನ್ ಕಾನ್ಸ್ಯೂಲ್ ಆ ಜನಕ್ಕೆ ಎಂದೂ ದೊರೆಯಲಿಲ್ಲ. ಪ್ರತ್ಯೇಕವಾದ ಮತದಾರ ಕ್ಷೇತ್ರವಿದ್ದುದರಿಂದ ತಮ್ಮವನೇ ಆದೊಬ್ಬ ಬಲಿಷ್ಠ ಕಾನ್ಸ್ಯೂಲ್‌ನನ್ನು ಅವರು ಆಯ್ಕೆ ಮಾಡಬಹುದಾಗಿತ್ತು. ಆದರೆ ಹಾಗೆ ಮಾಡಲು ಅವರಿಗೆ ಏಕೆ ಸಾಧ್ಯವಾಗಲಿಲ್ಲ? ಮನುಷ್ಯರ ಮನಸ್ಸಿನ ಮೇಲೆ ಧರ್ಮವು ಸ್ಥಾಪಿಸಿಕೊಂಡು ಬಂದಿರುವ ಪ್ರಭುತ್ವವೆಂಥದೆಂಬುದನ್ನು ಈ ಪ್ರಶ್ನೆಯ ಉತ್ತರ ಪ್ರಕಟಿಸುತ್ತದೆ. ಡೆಲ್ಪಿಯ ದೈವವಾಣಿ ಯಾರನ್ನು ದೇವಿಗೆ ಸಮ್ಮತವೆಂದು ಸಾರುತ್ತಿತ್ತೊ ಅಂತಹವರು ಮಾತ್ರ ಅಧಿಕಾರಿಯಾಗಿ ಆಡಳಿತವನ್ನು ಕೈಕೊಳ್ಳಬಹುದಿತ್ತಲ್ಲದೆ, ಬೇರೆ ಯಾರಿಗೂ ಹಾಗೆ ಮಾಡಲು ಸಾಧ್ಯವಿರಲಿಲ್ಲ. ಇದು ಸಮಸ್ತ ರೋಮ್‌ನ ಜನತೆಯಲ್ಲಿ ರೂಢಿಯಲ್ಲಿದ್ದ ನಂಬಿಕೆ. ಡೆಲ್ಲಿ ದೇವಸ್ಥಾನದ ಸೂತ್ರಧಾರಿಗಳಾಗಿದ್ದವರೆಲ್ಲ ಪ್ಯಾಟ್ರಿಶಿಯನ್ನರೇ ಆಗಿದ್ದರು. ಡೆಲ್ಲಿ ಹೀಗಿದ್ದುದರಿಂದ ಪ್ಲೇಬಿಯನ್ನರು ಬಲಿಷ್ಠನಾದೊಬ್ಬ ತಮ್ಮವನನ್ನು ಕಾನ್ಸ್ಯೂಲ್‌ನೆಂದು ಆಯ್ಕೆ ಮಾಡಿದಾಗಲೆಲ್ಲ ಅವನು ಪ್ಯಾಟ್ರಿಶಿಯನ್ನರಿಗೆ ವಿರೋಧಿಯೆಂದು ತಿಳಿದು ದೇವಿಗೆ ಈತನು ಸಮ್ಮತನಾಗಲಿಲ್ಲವೆಂದು ದೇವವಾಣಿ ಸಾರುತ್ತಿತ್ತು. ಈ ಕಾರಣದಿಂದ ಪ್ಲೇಬಿಯನ್ನರಿಗೆ ತನ್ನ ಹಕ್ಕನ್ನು ಚಲಾಯಿಸಲಾಗಲೇ ಇಲ್ಲ. ಆದರೆ ಇದರಲ್ಲಿ ಗಮನಿಸಬೇಕಾದ ಒಂದಂಶವೆಂದರೆ ಪ್ಲೇಬಿಯನ್ನರು ಈ ಮೋಸಕ್ಕೆ ಒಳಗಾಗಲು ಸಮ್ಮತಿಸುತ್ತಲೇ ಬಂದರೆಂಬುದು. ಪ್ಯಾಟ್ರಿಶಿಯನ್ನರಂತೆ ಪ್ಲೇಬಿಯನ್ನರು ಕೂಡ ದೇವವಾಣಿಯ ಅಧಿಕಾರಕ್ಕೆ ತೆಪ್ಪಗೆ ತಲೆ ಬಾಗುತ್ತಿದ್ದರು. ಜನತೆ ಆಯ್ಕೆ ಮಾಡಿದರೆ ಸಾಲದು. ದೇವತೆ ಒಪ್ಪುವುದು ಅದಕ್ಕಿಂತ ಮುಖ್ಯವೆಂದು ಅವರು ನಂಬಿದ್ದರು. ಈ ನಂಬಿಕೆಯನ್ನು ಅಲ್ಲಗಳೆದು ಆಯ್ಕೆಯೇ ಮುಖ್ಯವೆಂದು ಒತ್ತಾಯ ಮಾಡಿದ್ದರೆ ತಾವು ಗಳಿಸಿದ್ದ ರಾಜಕೀಯ ಹಕ್ಕಿನಿಂದ ಅವರು ಸಂಪೂರ್ಣ ಲಾಭಪಡೆಯಬಹುದಾಗಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಆದರೆ ಅವರು ತಮಗೆ ಅಷ್ಟು ಒಪ್ಪಿಗೆಯಲ್ಲದವನಾದರೂ ದೇವಿಗೆ ಸಮ್ಮತನಾದ ಎಂದರೆ ಪ್ಯಾಟ್ರಿಶಿಯನ್ನರಿಗೆ ಅನುಕೂಲಕರನಾದ ಇನ್ನೊಬ್ಬನನ್ನು ಆಯ್ಕೆ ಮಾಡಲು ಒಪ್ಪುತ್ತಿದ್ದರು. ಯಾವ ರಾಜಕೀಯ ಹಕ್ಕಿಗಾಗಿ ನಿಖರವಾಗಿ ಹೋರಾಡಿ ಜಯ ಪಡೆದಿದ್ದರೋ ಅದನ್ನು ಕೂಡ ಪರಿತ್ಯಜಿಸಲು ಅವರು ಸಿದ್ದರಾದರು, ಆದರೆ ತಮ್ಮ ಧರ್ಮವನ್ನು ಮಾತ್ರ ಬಿಡಲೊಪ್ಪಲಿಲ್ಲ. ಈ ನಿದರ್ಶನ ಏನು ಹೇಳುತ್ತದೆ? ಧರ್ಮವು ಧನಕ್ಕಿಂತ ಹೆಚ್ಚಲ್ಲದಿದ್ದರೂ ಸಹ ಧನದಷ್ಟೇ ಶಕ್ತಿಯ ಮೂಲವಾಗಿರಬಹುದು. ಆದರೆ ಪ್ರಸಕ್ತ ಸಂದರ್ಭದ ಯುರೋಪಿಗೆ ಅನ್ವಯವಾಗುವ ಶಕ್ತಿಮೂಲದ ಸತ್ಯ ಇಂದಿನ ಭಾರತಕ್ಕೂ ಅನ್ವಯಿಸುತ್ತದೆ ಎಂದಾಗಲೀ ಅಥವಾ ಇಂದಿನ ಯೂರೋಪಿಗೂ ಅನ್ವಯಿಸುತ್ತದೆ ಎಂದಾಗಲೀ ಭಾವಿಸಿದರೆ ಅದು ಸಮಾಜವಾದಿಗಳ ತಪ್ಪು ಕಲ್ಪನೆಯೇ ಸರಿ. ಒಬ್ಬ ಮನುಷ್ಯನಿಗೆ ಇನ್ನೊಬ್ಬನ ಸ್ವಾತಂತ್ರ್ಯವನ್ನು ನಿಯಂತ್ರಿಸುವ ಶಕ್ತಿ ಅಥವಾ ಅಧಿಕಾರ ಒದಗುವುದು ಧರ್ಮದಿಂದ, ಸಾಮಾಜಿಕ ಸ್ಥಾನಮಾನದಿಂದ ಹಾಗೂ ಆಸ್ತಿಯಿಂದ. ಈ ಮೂರರಲ್ಲಿ ಒಂದು ಕಾಲದಲ್ಲಿ ಒಂದು ಪ್ರಧಾನವಾಗಿದ್ದರೆ, ಇನ್ನೊಂದು ಕಾಲದಲ್ಲಿ ಇನ್ನೊಂದು ಪ್ರಧಾನವಾಗುತ್ತದೆ. ಅಷ್ಟೇ ವ್ಯತ್ಯಾಸ. ಸ್ವಾತಂತ್ರ್ಯವೇ ಆದರ್ಶವಾಗಿದ್ದ ಪಕ್ಷದಲ್ಲಿ. ಒಬ್ಬನು ಇನ್ನೊಬ್ಬನ ಮೇಲೆ ಅಧಿಕಾರ ನಡೆಸಲು ಆಸ್ಪದವಿಲ್ಲದಂತೆ ಮಾಡುವುದೇ ಸ್ವಾತಂತ್ರ್ಯವೆಂದು ಅರ್ಥವಿರುವುದಾದರೆ, ಆರ್ಥಿಕ ಸುಧಾರಣೆಯೊಂದೇ ನಾವು ಸಾಧಿಸಬೇಕಾದ ಗುರಿಯೆಂದು ಹೇಳಲಾಗದು. ಯಾವುದೇ ನಿರ್ದಿಷ್ಟ ಕಾಲದಲ್ಲಿ ಅಥವಾ ನಿರ್ದಿಷ್ಟ ಸಮಾಜದಲ್ಲಿ ಶಕ್ತಿಯ ಅಥವಾ ಅಧಿಕಾರದ ಮೂಲವು ಸಾಮಾಜಿಕ ಮತ್ತು ಧಾರ್ಮಿಕವಾಗಿದ್ದರೆ, ಆಗ ಅಂಥ ಪ್ರಸಕ್ತಿಯಲ್ಲಿ ಅಗತ್ಯ ನಡೆಯಬೇಕಾದುದು ಸಾಮಾಜಿಕ ಹಾಗೂ ಧಾರ್ಮಿಕ ಸುಧಾರಣೆಯೆಂದು ನಾವು ಒಪ್ಪಿಕೊಳ್ಳಬೇಕಾಗುತ್ತದೆ.

ಭಾರತೀಯ ಸಮಾಜವಾದಿಗಳು ಇತಿಹಾಸವನ್ನು ಆರ್ಥಿಕ ದೃಷ್ಟಿಯಿಂದಲೇ ವಿವರಿಸುತ್ತಾರೆ. ಇದಕ್ಕೆ ಪ್ರತಿಯಾಗಿಯೂ ವಾದಿಸಬಹುದು. ಆಸ್ತಿ ಸರ್ವರಿಗೂ ಸಮಪಾಲಾಗಿರುವಂತೆ ಮಾಡುವುದು ನಿಜವಾದ (ಪುಟ 56)

ಏಕೈಕ ಸುಧಾರಣೆಯೆಂದು. ಉಳಿದವುಕ್ಕಿಂತಲೂ ಮುಂಚೆ ಇದನ್ನು ಸಾಧಿಸಲೇಬೇಕೆಂದು ಹೇಳುವ ಸಮಾಜವಾದಿಗಳ ವಾದಕ್ಕೆ ಇತಿಹಾಸದ ಆರ್ಥಿಕ ವಿವರಣೆ ಅವಶ್ಯಕವಾಗಿಲ್ಲ. ಆದರೆ ಸಮಾಜವಾದಿಗಳಿಗೆ ನಾನು ಹೀಗೆ ಕೇಳಬಯಸುತ್ತೇನೆ: ಸಾಮಾಜಿಕ ವ್ಯವಸ್ಥೆಯಲ್ಲಿ ಸುಧಾರಣೆ ಮಾಡದೆ ನೀವು ಆರ್ಥಿಕ ಸುಧಾರಣೆಯನ್ನು ಸಾಧಿಸಬಲ್ಲಿರಾ? ಭಾರತೀಯ ಸಮಾಜವಾದಿಗಳಿಗೆ ಈ ಪ್ರಶ್ನೆ ಹೊಳೆದಂತೆ ತೋರುವುದಿಲ್ಲ. ಅವರಿಗೆ ಅನ್ಯಾಯ ಬಗೆಯುವ ಮನಸ್ಸು ನನಗಿಲ್ಲ. ಕೆಲದಿನಗಳ ಹಿಂದೆ ನನ್ನ ಮಿತ್ರನೊಬ್ಬನಿಗೆ ಪ್ರಮುಖ ಸಮಾಜವಾದಿಯೊಬ್ಬನು ಬರೆದ ಪತ್ರದಿಂದ ಒಂದೆರಡು ವಾಕ್ಯಗಳನ್ನು ಇಲ್ಲಿ ಉದ್ದರಿಸುತ್ತಿದ್ದೇನೆ. “ಒಂದು ವರ್ಗದವರು ಇನ್ನೊಂದು ವರ್ಗದವರನ್ನು ದಬ್ಬಾಳಿಕೆಯಿಂದ ನಡೆಸಿಕೊಳ್ಳುತ್ತಿರುವುದು ಸಂಪೂರ್ಣವಾಗಿ ನಿರ್ನಾಮವಾಗುವವರೆಗೆ ಭಾರತದಲ್ಲಿ ನಾವು ಸ್ವತಂತ್ರ ಸಮಾಜವನ್ನು ನಿರ್ಮಿಸಲಾರೆವು. ಸಮಾಜವಾದಿ ಆದರ್ಶವನ್ನು ನಾನು ನಂಬಿದವನು, ಆದುದರಿಂದ ಸಮನಾಗಿ ನಡೆಸಿಕೊಳ್ಳಬೇಕೆಂಬ ತತ್ವದಲ್ಲಿಯೂ ನನಗೆ ನಂಬಿಕೆಯಿದೆ. ಇತರ ಅನೇಕ ಸಮಸ್ಯೆಗಳಂತೆ ಈ ಸಮಸ್ಯೆಗೆ ಕೂಡ ಸಮಾಜವಾದವೊಂದೇ ಪರಿಹಾರವನ್ನು ಒದಗಿಸಬಲ್ಲದೆಂದು ನಾನು ಭಾವಿಸುತ್ತೇನೆ”. ಈಗ ಇನ್ನೊಂದು ಪ್ರಶ್ನೆಯನ್ನು ನಾನು ಕೇಳಬಯಸುತ್ತೇನೆ. ವಿವಿಧ ವರ್ಗಗಳನ್ನು ಸಮನಾಗಿ ನಡೆಸಿಕೊಳ್ಳುವ ತತ್ವದಲ್ಲಿ ನನಗೆ ನಂಬಿಕೆಯಿದೆ ಎಂದು ಹೇಳಿದರೆ ಸಮಾಜವಾದದ ರಹಸ್ಯವೆ ಅವರಿಗೆ ಅರ್ಥವಾಗಿಲ್ಲ ಎಂಬುದು ಸ್ಪಷ್ಟ. ಸಮಾಜವಾದವೆಂಬುದು ಎಲ್ಲಿಯೋ ದೂರದಲ್ಲಿರುವ ಒಂದು ಆದರ್ಶ ಮಾತ್ರವಾಗಿರದೆ ಅದೊಂದು ಕೃತಿಗೆ ಇಳಿಸಬಲ್ಲ ಕಾರ್ಯಕ್ರಮ. ಸಮಾಜವಾದ ಕೇವಲ ಆದರ್ಶವಾಗಿರದೆ ಅನುಷ್ಠಾನಕ್ಕೆ ತರುವ ಕಾರ್ಯಕ್ರಮವಾಗಿರುವುದಾದರೆ ಸಮಾಜವಾದಿಗೆ ಸಮಾನತೆಯಲ್ಲಿ ನಂಬುಗೆಯಿರುವುದೇ ಇಲ್ಲವೇ ಎಂಬುದು ಪ್ರಶ್ನೆಯಾಗುವುದಿಲ್ಲ. ತತ್ವವೆಂದೂ ಸಂಪ್ರದಾಯವೆಂದೂ ಒಂದು ವರ್ಗ ಇನ್ನೊಂದನ್ನು ದಬ್ಬಾಳಿಕೆಯಿಂದ ಕೆಳಮೆಟ್ಟುವುದಕ್ಕೆ, ಈ ಅನ್ಯಾಯ ಮುಂದುವರಿಯುವುದಕ್ಕೆ ಹೀಗೆಯೇ ಅವಕಾಶವಿರಬೇಕೆ? ಇದನ್ನು ಸಮಾಜವಾದಿ ಸರಿಯೆಂದು ಒಪ್ಪಿಕೊಳ್ಳುತ್ತಾನೆಯೇ? ನನ್ನ ವಾದವನ್ನು ವಿವರಿಸುವುದಕ್ಕಾಗಿ ಈಗ ಸಮಾಜವಾದದ ಮುಖ್ಯ ಘಟಕಾಂಶಗಳನ್ನು ವಿಶ್ಲೇಷಿಸಬೇಕಾಗಿದೆ. ಒಂದು ಕ್ರಾಂತಿಯಾಗಿ ಅಧಿಕಾರ ಸೂತ್ರವನ್ನೆಲ್ಲ ತಮ್ಮ ಕೈಗೆ ವಶಪಡಿಸಿಕೊಳ್ಳದೆ ಸಮಾಜವಾದಿಗಳು ತಮ್ಮ ಆರ್ಥಿಕ ಸುಧಾರಣೆಯನ್ನು ಸಾಧಿಸಲಾರರು. ಈ ಅಧಿಕಾರವನ್ನು ಕೂಡ ದಲಿತವರ್ಗ ಅಥವಾ ಶ್ರಮಜೀವಿ ವರ್ಗವೇ ವಶಪಡಿಸಿಕೊಳ್ಳಬೇಕು. ಈಗ ನಾನು ಕೇಳುವ ಮೊದಲನೆಯ ಪ್ರಶ್ನೆ ಇದು. ಭಾರತದಲ್ಲಿಯ ಶ್ರಮಜೀವಿಗಳೆಲ್ಲರೂ ಈ ಕ್ರಾಂತಿಗಾಗಿ ಒಗ್ಗೂಡುವರೆ? ಇಂತಹ ಒಂದು ಮಹಾಕಾರ್ಯಕ್ಕೆ ಇರುವ ಪ್ರೇರಣೆ ಯಾವುದು? ತನ್ನೊಡನೆ ಇಂತಹದೊಂದು ಕಾರ್ಯಕ್ಕೆ ಮುಂದೆ ಬಂದವರಲ್ಲಿ ಸಮಾನತೆ, ಭ್ರಾತೃತ್ವಭಾವ ಮತ್ತು ಎಲ್ಲಕ್ಕೂ ಪ್ರಧಾನವಾಗಿ ನ್ಯಾಯಬುದ್ಧಿ ನಿಶ್ಚಿತವಾಗಿ ಉಂಟು ಎಂದು ನಂಬಿಕೆಯಾದಾಗಲೇ ಮನುಷ್ಯನು ಕಾರ್ಯಕ್ಕೆ ತೊಡಗುತ್ತಾನೆ. ಕ್ರಾಂತಿ ಸಫಲವಾದ ಮೇಲೆ ನಮ್ಮೆಲ್ಲರನ್ನು ಸಮನಾಗಿ ನಡೆಸಿಕೊಳ್ಳುವರೆಂದು ಜಾತಿಮತಗಳ ಭೇದಭಾವ ಇರುವುದಿಲ್ಲವೆಂದು ಭರವಸೆಯಿಲ್ಲದೆ ಹೋದರೆ ಜನರು ಕ್ರಾಂತಿ ಕಾರ್ಯಕ್ಕೆ ಸೇರಲಾರರು. ಕ್ರಾಂತಿಯ ಮುಂದಾಳಾದ ಸಮಾಜವಾದಿ ತನಗೆ ಜಾತಿಭೇದದಲ್ಲಿ ನಂಬಿಕೆಯಿಲ್ಲ ಎಂದು ಆಶ್ವಾಸನೆ ಕೊಟ್ಟರೆ ಸಾಲದು. ಈ ಆಶ್ವಾಸನೆ ಇನ್ನೂ ಆಳದ ಸ್ತರವಾದ ಅಡಿಗಟ್ಟಿನಿಂದ ಎಂದರೆ ಕ್ರಾಂತಿಕಾರ್ಯಕ್ಕೆ ಹೊರಟ ಎಲ್ಲರ ಅಂತಃಕರಣದಿಂದ ಬರಬೇಕು. ತಾವೆಲ್ಲ ಸಮಾನರು, ಸೋದರರು ಎಂಬ ಭಾವನೆ ಅವರಲ್ಲಿ ದೃಢವಾಗಿ ನೆಲಸಿರಬೇಕು. ಭಾರತದ ಶ್ರಮಜೀವಿ ವರ್ಗ ಬಡತನದಲ್ಲಿದೆ ನಿಜ. ಆದರೆ ತಮ್ಮ ಸಮಾಜದಲ್ಲಿ ಶ್ರೀಮಂತ-ದರಿದ್ರ ಎಂಬ ಭೇದವಲ್ಲದೆ ಬೇರಾವ ಭೇದಗಳೂ ಇಲ್ಲವೆಂದು ಅದು ಒಪ್ಪುವುದೆ? ಜಾತಿಜಾತಿಗಳ ಭೇದವನ್ನಾಗಲಿ, ಉಚ್ಚ-ನೀಚ (ಪುಟ 57)

ಭೇದವನ್ನಾಗಲಿ ತಾವು ಪರಿಗಣಿಸುವುದಿಲ್ಲವೆಂದು ಭಾರತದ ಬಡಜನರು ಹೇಳಬಲ್ಲರೆ? ಇಂತಹ ತಾರತಮ್ಯಗಳನ್ನು ಅವರು ಪರಿಗಣಿಸುತ್ತಲೇ ಇದ್ದಾರೆಂಬುದು ವಸ್ತುಸ್ಥಿತಿ. ಹೀಗಿರುವಾಗ ಇಂತಹ ಜನರು ಶ್ರೀಮಂತ ವಿರುದ್ಧವಾದ ದಂಗೆಯಲ್ಲಿ ಒಗ್ಗೂಡುವರೆಂಬ ನಂಬುಗೆಯೆಲ್ಲಿ? ಶ್ರಮಜೀವಿಗಳೆಲ್ಲ ಒಗ್ಗೂಡದೆ ಹೋದ ಪಕ್ಷದಲ್ಲಿ ಕ್ರಾಂತಿ ನಡೆಯಿತೆಂದೂ ಸಮಾಜವಾದಿಗಳಿಗೆ ಅಧಿಕಾರ ದೊರೆಯಿತೆಂದೂ ತರ್ಕಕ್ಕಾಗಿ ಭಾವಿಸೋಣ. ಹಾಗಾದಾಗ ಭಾರತದಲ್ಲಿರುವ ವಿಶಿಷ್ಟ ಸಾಮಾಜಿಕ ಪರಿಸ್ಥಿತಿಯಿಂದಲೆ ಉದ್ಭವದಾದ ಸಮಸ್ಯೆಗಳನ್ನು ಸಮಾಜವಾದಿಗಳು ಬಿಡಿಸಬೇಕಾಗುವುದು. ಉಚ್ಚ-ನೀಚ, ಸ್ಪರ್ಶ-ಅಸ್ಪರ್ಶ ಮೊದಲಾದ ಭೇದಗಳನ್ನು ಪಾಲಿಸುತ್ತಾ ಬಂದಿರುವ ಜನರ ಸಮಸ್ಯೆಗಳನ್ನು ಬಗೆಹರಿಸದೆ ಸಮಾಜವಾದ ಭಾರತದಲ್ಲಿ ಒಂದು ಸೆಕೆಂಡಿನಷ್ಟು ಕಾಲ ಆಡಳಿತ ನಡೆಸಲಾರದು. ಬಣ್ಣದ ಮಾತಾಡುವುದರಲ್ಲಿಯೇ ತೃಪ್ತಿ ಪಡದೆ, ಸಮಾಜವಾದ ವಸ್ತುತಃ ಕಾರ್ಯರೂಪದಲ್ಲಿ ಬರಬೇಕೆಂದು ಸಮಾಜವಾದಿಗಳು ಬಯಸುವುದಾದರೆ ಸಮಾಜಸುಧಾರಣೆಯ ಸಮಸ್ಯೆ ಮೂಲಭೂತವಾದುದೆಂದೂ, ಸಾಮಾಜಿಕ ವ್ಯವಸ್ಥೆಯನ್ನು ಸುಧಾರಿಸದೆ ಕ್ರಾಂತಿ ಸಾಧ್ಯವಾಗದು ಎಂದೂ ತಿಳಿಯಬೇಕು. ಕ್ರಾಂತಿಗೆ ಯಶಸ್ಸು ಸಿಗದಿದ್ದರೂ ಜಾತಿಯ ಸಮಸ್ಯೆಯನ್ನು ಸಮಾಜವಾದಿ ಬಿಡಿಸಲೇಬೇಕಾಗುತ್ತದೆ. ಹಾಗಾದರೆ ಒಟ್ಟು ಅಂತರಾರ್ಥವೇನು? ನೀವು ಯಾವ ಹಾದಿಗಾದರೂ ಹೋಗಿ ಜಾತಿಯೆಂಬ ರಾಕ್ಷಸ ನಿಮ್ಮನ್ನು ಅಡ್ಡಗಟ್ಟುತ್ತಾನೆ. ಈ ರಾಕ್ಷಸನನ್ನು ಸಂಹರಿಸದ ಹೊರತು ನಿಮಗೆ ರಾಜಕೀಯ ಸುಧಾರಣೆಯಿಲ್ಲ, ಆರ್ಥಿಕ ಸುಧಾರಣೆಯೂ ಇಲ್ಲ.

IV

ಈಗಿನ ಕಾಲದಲ್ಲೂ ಕೂಡ ಜಾತಿಪದ್ಧತಿಯನ್ನು ಸಮರ್ಥಿಸುವವರು ಇರುವುದು ಬೇಸರದ ಸಂಗತಿ. ಅವರು ಕೊಡುವ ಸಮರ್ಥನೆಗಳು ಹಲವಾರು. ಜಾತಿಪದ್ಧತಿಯೆಂಬುದು ಶ್ರಮ ವಿಭಜನೆಯ ಪದ್ಧತಿಗೆ ಇನ್ನೊಂದು ಹೆಸರೆಂದೂ, ಶ್ರಮ ವಿಭಾಗವು ಪ್ರತಿಯೊಂದು ಸುಧಾರಿತ ಸಮಾಜದ ಅವಶ್ಯ ಲಕ್ಷಣವಾಗಿರುವಾಗ ಜಾತಿಪದ್ಧತಿಯಿದ್ದರೇನೂ ದೋಷವಿಲ್ಲವೆಂದೂ ಕೆಲವರು ವಾದಿಸುತ್ತಾರೆ. ಈ ವಾದಕ್ಕೆ ಪ್ರತಿಕೂಲವಾದ ಮೊದಲನೆಯ ಮಾತೆಂದರೆ- ಜಾತಿಪದ್ಧತಿ ಕೇವಲ ಶ್ರಮ ವಿಭಜನೆಯಾಗಿರದೆ ಶ್ರಮ ಜೀವಿಗಳ ವಿಭಾಗವೂ ಆಗಿದೆ. ಸುಧಾರಿತ ಸಮಾಜಕ್ಕೆ ಶ್ರಮವಿಭಜನೆ ಅವಶ್ಯಕವೆಂಬುದು ನಿರ್ವಿವಾದ. ಆದರೆ ಶ್ರಮವಿಭಜನೆಯಲ್ಲಿ ವಿವಿಧ ಶ್ರಮಿಕವರ್ಗಗಳು ಒಂದನ್ನೊಂದು ಸೇರದಂತೆ ಪ್ರತ್ಯೇಕವಾಗಿ ವಿಭಜನೆಗೊಂಡಿರುವುದು ಯಾವ ಸುಧಾರಿತ ಸಮಾಜದಲ್ಲಿಯೂ ಕಾಣದು. ಜಾತಿಪದ್ಧತಿ ಶ್ರಮಿಕರ ವಿಭಾಗ ಮಾತ್ರವಲ್ಲ. ಅದರಲ್ಲಿ ವಿಭಾಗಗೊಂಡ ವರ್ಗಗಳು ಮೇಲುವರ್ಗ, ಕೆಳವರ್ಗ, ಅದಕ್ಕೂ ಕೆಳಗಿನ ವರ್ಗ ಹೀಗೆ ಒಂದು ನೀಚೋಚ್ಚಶ್ರೇಣಿಯನ್ನು ಹೊಂದಿದೆ. ಇಂತಹ ಉಚ್ಚ-ನೀಚ ವರ್ಗೀಕರಣ ಬೇರೆ ಯಾವ ದೇಶದಲ್ಲಿಯೂ ಶ್ರಮವಿಭಾಗದ ಅಂಗವಾಗಿಲ್ಲ. ಇನ್ನೂ ಒಂದು ಮಾತಿದೆ. ಈ ಶ್ರಮವಿಭಜನೆ ಸಹಜವಾದುದಲ್ಲ. ವ್ಯಕ್ತಿಗಳ ಸಾಮರ್ಥ್ಯ ಅಥವಾ ಯೋಗ್ಯತೆಯನ್ನು ಅದು ಆಧರಿಸಿಲ್ಲ. ವ್ಯಕ್ತಿಯು ತನ್ನ ಯೋಗ್ಯತೆಗೆ ತಕ್ಕ ಕೆಲಸವನ್ನು ಆಯ್ದುಕೊಂಡು ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದಲು ಅವಕಾಶವೊದಗಿಸಿದರೆ ಮಾತ್ರ ಸಮಾಜದ ಕಾರ್ಯದಕ್ಷತೆ ಸಾಧ್ಯವಾಗುತ್ತದೆ. ಜಾತಿಪದ್ಧತಿಯಲ್ಲಿ ಈ ತತ್ವ ಇಲ್ಲವಾಗಿದೆ. ವ್ಯಕ್ತಿಯ ಅಭಿರುಚಿ ಸಾಮರ್ಥ್ಯಗಳನ್ನು ಗಮನಿಸುವ ಬದಲಾಗಿ ಆತನ ತಂದೆತಾಯಿಗಳ ಸಾಮಾಜಿಕ ಸ್ಥಾನಮಾನಕ್ಕೆ ಅನುಸಾರವಾಗಿ ಅವನಿಗೆ ಇಂತಹ ಕೆಲಸ ಎಂದು ನಿಗದಿಪಡಿಸಲಾಗುತ್ತದೆ. ಜಾತಿಪದ್ಧತಿಯಿಂದಾದ ಈ ವೃತ್ತಿ ವಿಭಜನೆ ಅಥವಾ ಕೆಲಸಗಳ ನೇಮಕವು ಖಂಡಿತವಾಗಿ (ಪುಟ 58)

ವಿನಾಶಕಾರಿಯಾಗಿದೆ. ಉದ್ಯಮ ಎಂದೂ ನಿಂತ ನೀರಲ್ಲ. ಅದರಲ್ಲಿ ತೀವ್ರವಾದ ಹಾಗೂ ಆಕಸ್ಮಿಕವಾದ ಬದಲಾವಣೆಗಳಾಗುತ್ತಲೇ ಇರುತ್ತವೆ. ಹೀಗೆ ಬದಲಾವಣೆಗಳಾಗುತ್ತಿರುವಾಗ ವ್ಯಕ್ತಿಗೆ ತನ್ನ ವೃತ್ತಿಯನ್ನು ಬದಲಾಯಿಸುವ ಸ್ವಾತಂತ್ರ್ಯ ಅನಿವಾರ್ಯವಾಗುತ್ತದೆ. ಬದಲಾಗುವ ಪರಿಸ್ಥಿತಿಗೆ ಹೊಂದಿಕೊಳ್ಳುವ ಸ್ವಾತಂತ್ರ್ಯವಿಲ್ಲದಿದ್ದರೆ ಅವನಿಗೆ ಜೀವನೋಪಾಯವೇ ಅಸಾಧ್ಯವಾಗುವುದು. ಜಾತಿಪದ್ಧತಿಯಲ್ಲಿ ಇಂತಹ ಸ್ವಾತಂತ್ರ್ಯವಿಲ್ಲ. ತನ್ನ ಜಾತಿಗೆ ಹೊಸದಾದ ವೃತ್ತಿಯನ್ನು ಕೈಗೊಳ್ಳುವ ಬದಲಾಗಿ ಉಪವಾಸ ಬೀಳುವುದೇ ಹಿಂದೂವಿನ ಗತಿಯಾಗಿದ್ದರೆ ಅದಕ್ಕೆ ಮೂಲಕಾರಣ ಜಾತಿಯೇ ಆಗಿದೆ. ವೃತ್ತಿಗಳನ್ನು ವ್ಯಕ್ತಿಗಳಿಗೆ ಅವರ ಸಾಮರ್ಥ್ಯಕ್ಕನುಸಾರವಾಗಿ ಹೊಂದಿಸುವುದಕ್ಕೆ ಜಾತಿ ಆಸ್ಪದ ಕೊಡುವುದಿಲ್ಲ. ದೇಶದಲ್ಲಿ ನಾವು ಕಾಣುವ ನಿರುದ್ಯೋಗಕ್ಕೆ ಬಹುಮಟ್ಟಿಗೆ ಜಾತಿಯೇ ಕಾರಣವಾಗಿದೆ. ಇದಲ್ಲದೆ ಇನ್ನೂ ಒಂದು ದೋಷವಿದೆ. ಜಾತಿಯಿಂದ ಉಂಟಾದ ಶ್ರಮವಿಭಾಗ ಶ್ರಮಿಕರ ಆಯ್ಕೆಯಿಂದ ಆದುದಲ್ಲ. ವೈಯಕ್ತಿಕ ಭಾವನೆಗಾಗಲೀ ಅಥವಾ ವೈಯಕ್ತಿಕವಾಗಿ ಈ ಕೆಲಸಕ್ಕೆ ಯಾರು ಹೆಚ್ಚು ಯೋಗ್ಯರೆಂಬ ವಿವೇಚನೆಗಾಗಲೀ ಅಲ್ಲಿ ಆಸ್ಪದವೇ ಇಲ್ಲ. ಪೂರ್ವಕರ್ಮದ ಫಲವೆಂಬ ತತ್ವವೇ ಮುಖ್ಯ ಆಧಾರವಾಗುತ್ತದೆ. ಸಾಮಾಜಿಕ ಕಾರ್ಯ ಸಾಮರ್ಥ್ಯದ ದೃಷ್ಟಿಯಿಂದ ನೋಡಿದಾಗ ಔದ್ಯಮಿಕ ಪದ್ಧತಿಯ ಅತ್ಯಂತ ಭೀಕರ ಅನಿಷ್ಟ ಯಾವುದು? ಬಡತನವಲ್ಲ, ಬಡತನದಿಂದ ಉಂಟಾದ ದುಃಖ ಪರಂಪರೆಯೂ ಅಲ್ಲ; ಆದರೆ ಕೆಲಸ ಮಾಡುತ್ತಿರುವ ಇಷ್ಟೊಂದು ಜನರಿಗೆ ತಾವು ಮಾಡುವ ಕೆಲಸ ಯಾವ ಮನಃಸಂತೋಷವನ್ನೂ ಒದಗಿಸುತ್ತಿಲ್ಲವೆಂಬುದು ಸತ್ಯ. ವಸ್ತುಸ್ಥಿತಿಯ ಈ ಅನಿಷ್ಟ ಇಂತಹ ಕೆಲಸ ಅಥವಾ ವೃತ್ತಿಗಳು ಕೆಲಸಗಾರರಲ್ಲಿ ಉಪೇಕ್ಷೆಯನ್ನೂ, ದ್ವೇಷವನ್ನೂ, ಹೊಣೆಯಿಂದ ತಪ್ಪಿಸಿಕೊಳ್ಳುವ ಮನೋವೃತ್ತಿಯನ್ನೂ ಕೆರಳಿಸುತ್ತವೆ. ಭಾರತದಲ್ಲಿ ಹಿಂದೂಗಳು ಹೀನವೆಂದು ಪರಿಗಣಿಸುವ ಅನೇಕ ವೃತ್ತಿಗಳಿವೆ. ಅವು ಹೀನವೆಂಬ ಭಾವನೆಯಿರುವುದರಿಂದ ಅವುಗಳಲ್ಲಿ ತೊಡಗಿರುವ ಕೆಲಸಗಾರರು ಕೂಡ ತಮ್ಮ ಕೆಲಸವನ್ನು ಹೀನವೆಂದು ಕಾಣುತ್ತಾರೆ. ಈ ವೃತ್ತಿಗಳಿಂದ ತಪ್ಪಿಸಿಕೊಳ್ಳುವ ಬಯಕೆ ಅವರಿಗೆ ಸತತವಾಗಿರುತ್ತದೆ. ಅವುಗಳಲ್ಲಿ ತೊಡಗಿರುವ ಇತರರಲ್ಲಿಯೂ ಅದನ್ನು ಅವರು ಪ್ರೇರೇಪಿಸುತ್ತಾರೆ. ಹಿಂದೂಧರ್ಮ ಈ ವೃತ್ತಿಗಳಿಗೆ ಆರೋಪಿಸಿದ ತಿರಸ್ಕಾರ ಹಾಗೂ ಕಳಂಕ ಇದಕ್ಕೆ ಕಾರಣವಾಗಿದೆ. ತಮ್ಮ ಕೆಲಸದಲ್ಲಿ ಜನರಿಗೆ ಮನಸ್ಸೇ ಇಲ್ಲದಿರುವ ಪದ್ಧತಿಯಿದ್ದರೆ ಕಾರ್ಯ ಸಮರ್ಪಕವಾದೀತೆ? ಮನುಷ್ಯನ ಸ್ವಾಭಾವಿಕ ಅಭಿರುಚಿ ಹಾಗೂ ಸಾಮರ್ಥ್ಯಗಳನ್ನು ಕಡೆಗಣಿಸಿ ಸಮಾಜದ ಸಾಂಪ್ರದಾಯಿಕ ನಿಯಮಗಳಿಗೇ ಅಂಟಿಕೊಳ್ಳುವುದು ಜಾತಿಯ ಕಾರ್ಯವಾಗಿದೆ. ಹೀಗಿರುವುದರಿಂದ ಆರ್ಥಿಕ ವ್ಯವಸ್ಥೆಯ ದೃಷ್ಟಿಯಿಂದ ಜಾತಿಪದ್ಧತಿ ಅಪಾಯಕರ ಪದ್ಧತಿಯಾಗಿದೆ.

V

ಜಾತಿಪದ್ಧತಿಯ ಸಮರ್ಥನೆಗಾಗಿ ಕೆಲವರು ವಂಶಶುದ್ದಿಯ ತತ್ವವನ್ನು ಬಳಸಿಕೊಂಡಿದ್ದಾರೆ. ಒಂದು ಜನಾಂಗದ ಅಥವಾ ವಂಶದ ಶುದ್ಧತೆಯನ್ನು ಕಾಪಾಡುವುದೇ ಜಾತಿಯ ಉದ್ದೇಶವೆಂದು ವಾದಿಸಲಾಗುತ್ತದೆ. ವಂಶಶಾಸ್ತ್ರಜ್ಞರ ಮೇರೆಗೆ ಜಗತ್ತಿನಲ್ಲಿ ಈಗ ಎಲ್ಲಿಯೂ ಶುದ್ಧವಂಶವೆಂಬುದು ಉಳಿದಿಲ್ಲ. ಎಲ್ಲ ಕಡೆಯೂ ವಂಶಗಳು ಸಂಕರವಾಗಿ ಹೋಗಿವೆ. ಭಾರತದಲ್ಲಿ ಈ ಸಂಕರ ವಿಶೇಷವಾಗಿ ನಡೆದಿದೆ. ‘ಹಿಂದೂ ಜನತೆಯಲ್ಲಿ ಪರಕೀಯ ಅಂಶಗಳು’ ಎಂಬ ತಮ್ಮ ಲೇಖನದಲ್ಲಿ ಶ್ರೀ ಡಿ.ಆರ್.ಭಂಡಾ‌ಕರ್ ಅವರು ಹೀಗೆ ಹೇಳಿದ್ದಾರೆ. “ಪರಕೀಯ ಅಂಶ ಬೆರೆಯದಂತಹ ಒಂದು ವರ್ಗವಾಗಲಿ, ಜಾತಿಯಾಗಲಿ ಭಾರತದಲ್ಲಿ ಉಳಿದಿಲ್ಲ. (ಪುಟ 59)

ರಜಪೂತ, ಮರಾಠ ಮೊದಲಾದ ಕ್ಷತ್ರಿಯ ವರ್ಗಗಳಲ್ಲಿ ಮಾತ್ರವಲ್ಲ ತಾವು ಸಂಪೂರ್ಣ ಶುದ್ದರೆಂದು ಭ್ರಮಿಸಿಕೊಂಡಿರುವ ಬ್ರಾಹ್ಮಣರಲ್ಲೂ ಕೂಡ ಪರಕೀಯ ರಕ್ತಸಂಕರವಾಗಿದೆ”, ವಂಶ ಸಂಕರವನ್ನು ತಡೆಯುವ ಅಥವಾ ರಕ್ತಶುದ್ಧಿಯನ್ನು ರಕ್ಷಿಸಿಕೊಳ್ಳುವ ಮಾರ್ಗವಾಗಿಯೇ ಜಾತಿಪದ್ಧತಿ ಬೆಳೆಯಿತೆಂದು ಹೇಳಲಾಗದು.

ವಾಸ್ತವವಾಗಿ ನೋಡಿದರೆ ಭಾರತದ ವಿವಿಧ ಜನಾಂಗಗಳಲ್ಲಿ ಪರಸ್ಪರ ರಕ್ತಸಂಬಂಧ ಹಾಗೂ ಸಂಸ್ಕೃತಿ ಸಮನ್ವಯ ನಡೆದುಹೋಗಿ ಎಷ್ಟೋ ಕಾಲದ ನಂತರ ಜಾತಿಪದ್ಧತಿ ಹುಟ್ಟಿಕೊಂಡಿತು. ಜಾತಿಭೇದಗಳನ್ನು ಜನಾಂಗ ಭೇದಗಳೆಂದು ಭ್ರಮಿಸಿ ಹಾಗೆ ನಡೆದುಕೊಳ್ಳುವುದೆಂದರೆ ವಸ್ತುಸ್ಥಿತಿಯ ವಿಪರ್ಯಾಸ. ಪಂಜಾಬ್ ಬ್ರಾಹ್ಮಣನಿಗೂ ಮದ್ರಾಸಿ ಬ್ರಾಹ್ಮಣನಿಗೂ ನಡುವೆ ಯಾವ ವಂಶ ಸಂಬಂಧವಿದೆ? ಬಂಗಾಳದ ಅಸ್ಪಶ್ಯನಿಗೆ ಮದ್ರಾಸಿ ಅಸ್ಪೃಶ್ಯನೊಡನೆ ಯಾವ ವಂಶೀಯ ಸಂಬಂಧವಿದೆ? ಪಂಜಾಬದ ಬ್ರಾಹ್ಮಣನಿಗೂ ಪಂಜಾಬದ ಚಮ್ಮಾರನಿಗೂ ಯಾವ ವಂಶೀಯ ಭೇದವಿದೆ? ಮದ್ರಾಸಿ ಬ್ರಾಹ್ಮಣನಿಗೂ ಮದ್ರಾಸಿ ಚಂಡಾಲನಿಗೂ ಯಾವ ವಂಶಭೇದವಿದೆ? ಪಂಜಾಬದ ಬ್ರಾಹ್ಮಣ ಹಾಗೂ ಚಮ್ಮಾರ ಇಬ್ಬರೂ ಒಂದೇ ವಂಶಕ್ಕೆ ಸೇರಿದವರು. ಇದೇ ಮಾತು ಮದ್ರಾಸಿಗಳಿಗೂ ಅನ್ವಯಿಸುತ್ತದೆ. ಜಾತಿಪದ್ಧತಿ ವಂಶಭೇದವನ್ನು ಗುರುತಿಸುವುದಿಲ್ಲ. ಒಂದೇ ವಂಶದವರಲ್ಲಿ ಸಾಮಾಜಿಕ ಭೇದಗಳನ್ನು ಮಾತ್ರ ಜಾತಿಪದ್ಧತಿ ಉಂಟುಮಾಡಿದೆ. ಒಂದು ವೇಳೆ ಜಾತಿಭೇದ ವಂಶಭೇದವೆಂದೇ ಇದ್ದಿತೆಂದು ಭಾವಿಸೋಣ. ಹಾಗಿದ್ದಾಗ ಅಂತರ್ಜಾತೀಯ ವಿವಾಹಗಳ ಮೂಲಕ ವಂಶಗಳು ಸಂಕರವಾದರೆ ತಪ್ಪೇನಾಯಿತು? ಮನುಷ್ಯರಿಗೂ ಇತರ ಪ್ರಾಣಿಗಳಿಗೂ ಇರುವ ಅಂತರ ತುಂಬ ದೊಡ್ಡದು. ಆದುದರಿಂದ ವಿಜ್ಞಾನಿಗಳು ಮನುಷ್ಯರನ್ನು ಹಾಗೂ ಪ್ರಾಣಿಗಳನ್ನು ಎರಡು ಪ್ರತ್ಯೇಕ ವರ್ಗಗಳಾಗಿ ವಿಂಗಡಿಸಿದ್ದಾರೆ. ಜನಾಂಗಭೇದವು ಜೀವಿಗಳ ವರ್ಗಭೇದವೆಂದು ವಿಜ್ಞಾನಿಗಳು ಒಪ್ಪುವುದಿಲ್ಲ. ವಿವಿಧ ಜನಾಂಗಗಳು ಒಂದೇ ವರ್ಗದ ವಿವಿಧ ಶಾಖೆಗಳು ಮಾತ್ರ ಹೀಗಿರುವುದರಿಂದ ಈ ವಿವಿಧ ಜನಾಂಗಗಳು ರಕ್ತಸಂಬಂಧ ಮಾಡಿದ್ದಲ್ಲಿ ಹುಟ್ಟುವ ಜೀವಿಗಳು ವಂಶಾಭಿವೃದ್ಧಿಗೆ ಸಮರ್ಥವಾಗಿ ಇರುವುವಲ್ಲದೆ ನಪುಂಸಕವಾಗಲಾರವು. ಜಾತಿಪದ್ಧತಿಯನ್ನು ಸಮರ್ಥಿಸುವುದಕ್ಕಾಗಿ ವಂಶಪರಂಪರೆ, ಉತ್ತಮ ಸಂತಾನ ಮುಂತಾಗಿ ಹೇರಳವಾದ ಹುಚ್ಚು ಮಾತುಗಳನ್ನು ಆಡಲಾಗುತ್ತಿದೆ. ಜಾತಿಪದ್ಧತಿ ಉತ್ತಮ ಸಂತಾನ ತತ್ವಕ್ಕೆ ಬದ್ಧವಾಗಿಯೇ ಇದ್ದ ಪಕ್ಷದಲ್ಲಿ ಅದನ್ನು ಯಾರೂ ವಿರೋಧಿಸಲಾರರು. ಆದರೆ ಜಾತಿಪದ್ಧತಿ ಉತ್ತಮ ಗಂಡು ಹಾಗೂ ಉತ್ತಮ ಹೆಣ್ಣುಗಳ ದಾಂಪತ್ಯಕ್ಕೆ ಸಹಾಯಕವಾಗಿದೆಯೆ? ಜಾತಿಪದ್ಧತಿ ನಿಷೇಧಾತ್ಮಕವಾಗಿದೆ. ಅಂತರ್ಜಾತಿಯ ದಾಂಪತ್ಯವನ್ನು ಅದು ಪ್ರತಿಬಂಧಿಸುತ್ತದೆ. ಜಾತಿಯೆಂಬುದು ಉತ್ತಮ ಸಂತಾನ ದೃಷ್ಟಿಯಿಂದ ಹುಟ್ಟಿದ್ದಲ್ಲ. ಜಾತಿ ಜನಾಂಗವೆಂದಾದರೆ, ಉಪಜಾತಿಗಳು ಜನಾಂಗಭೇದಗಳಾಗವು; ಏಕೆಂದರೆ ಒಂದೇ ಜನಾಂಗದ ಉಪಭೇದಗಳಾದುದರಿಂದ ಅದು ಅದೇ ಜನಾಂಗಕ್ಕೆ ಸೇರಿರುತ್ತದೆ. ಹೀಗಿರುವುದರಿಂದ ಅಂತರ್ಜಾತೀಯ ವಿವಾಹಕ್ಕೆ ಹಾಗೂ ಅಂತರ್ಜಾತೀಯ ಭೋಜನಕ್ಕೆ ಪ್ರತಿಬಂಧವೇಕೆ? ಜನಾಂಗದ ಅಥವಾ ವಂಶದ ಶುದ್ದಿಯನ್ನು ಕಾಪಾಡುವುದು ಇದರ ಉದ್ದೇಶವಲ್ಲ ಎಂದಾಯಿತು. ಜಾತಿ ಉಪಜಾತಿಗಳ ಸಹಭೋಜನವನ್ನು ಪ್ರತಿಬಂಧಿಸುವ ಉದ್ದೇಶವೇನು? ಸಹಭೋಜನದಿಂದ ವಂಶ ಹಾಳಾಗಲಾರದು. ಉತ್ತಮವೂ ಆಗಲಾರದು. ಇದನ್ನೆಲ್ಲ ನೋಡಿದಾಗ ಜಾತಿಭೇದ ವೈಜ್ಞಾನಿಕವಲ್ಲವೆಂದು ಸಿದ್ಧವಾಗುತ್ತದೆ. ಉತ್ತಮ ಸಂತಾನ ತತ್ವವನ್ನು ಬಳಸಿಕೊಂಡು ಜಾತಿಯನ್ನು ಸಮರ್ಥಿಸುವುದೆಂದರೆ ಅವೈಜ್ಞಾನಿಕ ವಿಷಯಕ್ಕೆ ವೈಜ್ಞಾನಿಕ ಸಮರ್ಥನೆಯನ್ನು ನೀಡಿದಂತೆಯೇ ಸರಿ. ವಂಶದಲ್ಲಿ ಪಿತ್ರಾರ್ಜಿತ ಅಂಶ ಯಾವ ನಿಯಮಗಳನ್ನು ಅನುಸರಿಸುತ್ತದೆಂಬುದು ನಿಖರವಾಗಿ ನಮಗೆ ಇನ್ನೂ ತಿಳಿದಿಲ್ಲ. ಆದುದರಿಂದ ಉತ್ತಮ ಸಂತಾನದ ಯೋಜನೆ ವ್ಯವಹಾರ ಯೋಗ್ಯವೆಂದು ಹೇಳಲಾಗದು. (ಪುಟ 60)

‘ಮಂಡಲ್ಲನ ಆನುವಂಶಿಕಾ ತತ್ವಗಳು’ ಎಂಬ ಗ್ರಂಥವನ್ನು ಕುರಿತು ಬೇಟ್ಸನ್ ಹೀಗೆನ್ನುತ್ತಾರೆ. “ಉಚ್ಚ ತರಗತಿಯ ಮಾನಸಿಕ ಗುಣಗಳು ಅನುವಂಶಿಕವಾಗಿ ಬಂದರೆ ಅವು ಯಾವುದೇ ಒಂದು ನಿಯಮಕ್ಕೆ, ಅರ್ಥಕ್ಕೆ, ಕ್ರಮಕ್ಕೆ ಒಳಪಟ್ಟು ಬರುತ್ತವೆ ಎಂದು ತೋರುವುದಿಲ್ಲ. ದೈಹಿಕ ವೈಶಿಷ್ಟ್ಯಗಳೂ ಮಾನಸಿಕ ಗುಣಗಳೂ ಅನೇಕ ಘಟಕಗಳ ಯೋಗಾಯೋಗದಿಂದ ಉತ್ಪನ್ನವಾಗುವುದೇ ಹೊರತಾಗಿ, ಒಂದು ನಿರ್ದಿಷ್ಟ ಸಂತಾನ ಮೂಲದಿಂದಲೇ ಆದುವೆಂದು ಹೇಳಲಾಗದು”. ಜಾತಿಪದ್ಧತಿ ಉತ್ತಮ ಸಂತಾನಶಾಸ್ತ್ರ ದೃಷ್ಟಿಯಿಂದ ನಿರ್ಮಿತವಾಯಿತೆಂದು ಹೇಳಿದರೆ ಇಂದಿನ ವಿಜ್ಞಾನಿಗಳಿಗೆ ಕೂಡ ಇಲ್ಲದ ಜ್ಞಾನವನ್ನು ಈಗಿನ ಹಿಂದೂಗಳ ಪೂರ್ವಜರು ಪಡೆದಿದ್ದರೆಂದು ಹೇಳಿದಂತಾಗುತ್ತದೆ. ಹಣ್ಣುಗಳನ್ನು ನೋಡಿ ಮರದ ಬೆಲೆ ಕಟ್ಟಬೇಕು. ಸಂತಾನಶಾಸ್ತ್ರಕ್ಕನುಸಾರವಾಗಿ ಜಾತಿಪದ್ಧತಿ ಇರುವುದಾಗಿದ್ದರೆ ಅದು ಎಂತಹ ಉತ್ಕೃಷ್ಟ ಜನಾಂಗವನ್ನು ಹುಟ್ಟಿಸಬೇಕಾಗಿತ್ತು? ವಾಸ್ತವಿಕವಾಗಿ ನೋಡಿದರೆ ಹಿಂದೂಗಳು ಸಿ3 ವರ್ಗಕ್ಕೆ ಸೇರಿದ ಜನರು. ಮೈಕಟ್ಟಿನಲ್ಲಿ ದುರ್ಬಲರಾದ ಮತ್ತು ದೈಹಿಕವಾಗಿ ತ್ರಾಣವಿಲ್ಲದ ಕುಬ್ಬರ ವರ್ಗಕ್ಕೆ ಇವರು ಸೇರಿದ್ದಾರೆ. ನೂರಕ್ಕೆ ತೊಂಬತ್ತರಷ್ಟು ಮಂದಿ ಸೈನಿಕ ಸೇವೆಗೆ ಅನರ್ಹರಾದ ಜನರ ರಾಷ್ಟ್ರ ನಮ್ಮದು. ಹೀಗಾದರೆ ಉತ್ತಮ ಸಂತಾನ ತತ್ವ ಎಲ್ಲಿ ಬಂದಿತು? ಸ್ವಾರ್ಥಿಗಳೂ ದುರಹಂಕಾರಿಗಳೂ ಆದ ಕೆಲವರು ಹಿಂದೂಗಳು ತಮ್ಮ ಸಾಮಾಜಿಕ ಸ್ಥಾನಬಲದಿಂದ ಈ ಜಾತಿಭೇದಗಳನ್ನು ನಿರ್ಮಿಸಿ ದುರ್ಬಲ ವರ್ಗಗಳ ಮೇಲೆ ಅವುಗಳನ್ನು ಒತ್ತಾಯದಿಂದ ಹೇರಿದರು.

VI

ಜಾತಿಯಿಂದ ಆರ್ಥಿಕ ಕಾರ್ಯಸಾಮರ್ಥ್ಯ ಉತ್ತಮವಾಗುವುದಿಲ್ಲ. ಜಾತಿ ಜನಾಂಗವನ್ನು ಉತ್ತಮಗೊಳಿಸಿಲ್ಲ, ಉತ್ತಮಗೊಳಿಸಲು ಅದಕ್ಕೆ ಸಾಧ್ಯವೂ ಇಲ್ಲ. ಆದರೆ ಅದು ಒಂದನ್ನು ಮಾತ್ರ ಸಾಧಿಸಿದೆ. ಜಾತಿಯು ಹಿಂದೂಗಳನ್ನು ಪ್ರತ್ಯೇಕ ಗುಂಪುಗಳಾಗಿ ವಿಂಗಡಿಸಿ ನೀತಿಗೆಡಿಸಿದೆ.

‘ಹಿಂದೂ ಸಮಾಜ’ವೆಂಬುದು ಮಿಥ್ಯ ಪದ. ಇದು ಎಲ್ಲಕ್ಕಿಂತ ಮುಂಚೆ ಒಪ್ಪಿಕೊಳ್ಳಬೇಕಾದ ಮಾತು. ಹಿಂದೂ ಎಂಬ ಈ ಹೆಸರೇ ವಿದೇಶೀಯವಾಗಿದೆ. ಹೊರಗಿನಿಂದ ಬಂದ ಮಹಮ್ಮದೀಯರು ತಮ್ಮಿಂದ ಬೇರೆಯಾದ ಇಲ್ಲಿಯ ನಿವಾಸಿಗಳನ್ನು ಈ ಹೆಸರಿನಿಂದ ಗುರುತಿಸಿದರು. ಮಹಮ್ಮದೀಯ ದಾಳಿಗಳಿಗೆ ಮುಂಚಿನ ಯಾವ ಸಂಸ್ಕೃತ ಗ್ರಂಥದಲ್ಲಿಯೂ ಈ ಪದದ ಉಲ್ಲೇಖವಿಲ್ಲ. ಎಲ್ಲ ಜನರಿಗೂ ಸಾಮಾನ್ಯವಾದೊಂದು ಹೆಸರಿನ ಅಗತ್ಯವಿದೆಯೆಂದು ಹಿಂದೂಗಳಿಗೆ ಅನ್ನಿಸಲಿಲ್ಲ. ಏಕೆಂದರೆ ಒಂದು ಸುಸಂಘಟಿತ ಸಮುದಾಯದ ಕಲ್ಪನೆಯೇ ಅವರಿಗೆ ಇರಲಿಲ್ಲ. ಹಿಂದೂ ಸಮಾಜ ಎಂಬುದು ಅಸ್ತಿತ್ವದಲ್ಲಿಲ್ಲ. ಅದು ಅನೇಕ ಜಾತಿಗಳ ಒಂದು ಸಮೂಹ. ಪ್ರತಿಯೊಂದು ಜಾತಿಗೂ ತನ್ನ ಅಸ್ತಿತ್ವದ ಎಚ್ಚರವಿದೆ. ತಾನು ಉಳಿಯಬೇಕು. ಇಷ್ಟೇ ಅದರ ಸರ್ವಸ್ವ. ಈ ಜಾತಿಗಳು ಒಂದು ಸಂಯುಕ್ತ ಪದ್ಧತಿಯ ಸಂಘಟನೆಯನ್ನೂ ಮಾಡಿಕೊಂಡಿಲ್ಲ. ಹಿಂದೂ-ಮುಸ್ಲಿಂ ದಂಗೆಯಾದ ಪ್ರಸಂಗವನ್ನು ಬಿಟ್ಟರೆ, ಉಳಿದ ಯಾವ ಕಾಲದಲ್ಲಿ ಆದರೂ ಒಂದು ಜಾತಿಗೂ ಇನ್ನೊಂದು ಜಾತಿಗೂ ಏನೂ ಸಂಬಂಧವಿದ್ದಂತೆ ತೋರುವುದಿಲ್ಲ. ಇತರ ಜಾತಿಗಳಿಗಿಂತ ತಾನು ಬೇರೆಯೆಂದೂ, ವಿಶಿಷ್ಟವೆಂದೂ ತೋರಿಸಿಕೊಳ್ಳಲು ಪ್ರತಿಯೊಂದು ಜಾತಿ ಪ್ರಯತ್ನಿಸುತ್ತದೆ. ಸಹಭೋಜನವಾಗಲೀ, ಮದುವೆಯಾಗಲೀ ಒಂದು ಜಾತಿಯವರು ತಮ್ಮ ಜಾತಿಯವರೊಡನೆ ಮಾತ್ರ ಮಾಡತಕ್ಕದ್ದು, ಇಷ್ಟೇ ಅಲ್ಲ, ತಮ್ಮ ಜಾತಿಗೆ ಇಂತಹದೇ ಉಡುಗೆ ತೊಡುಗೆಯೆಂಬ ನಿರ್ಬಂಧ ಕೂಡ (ಪುಟ 61)

ಇದೆ. ವಿದೇಶಿ ಪ್ರವಾಸಿಗರಿಗೆ ವಿನೋದವನ್ನೊದಗಿಸುವಂತೆ ಅಸಂಖ್ಯವಾದ ಉಡುಗೆ ತೊಡುಗೆಗಳು ಭಾರತದಲ್ಲಿ ಕಂಡುಬರುವುದಕ್ಕೆ ಇದಕ್ಕಿಂತ ಬೇರೆ ಕಾರಣವೇನಿದೆ? ಆದರ್ಶ ಹಿಂದೂವೆಂಬುವನು ಹೊರಗಿನ ಯಾರ ಸಂಪರ್ಕವೂ ಇಲ್ಲವೆಂದು ತನ್ನ ಬಿಲದೊಳಗೆ ಹುದುಗಿಕೊಂಡಿರುವ ಒಂದು ಇಲಿಯಾಗಿರಬೇಕು. ಸಮಾಜಶಾಸ್ತ್ರಜ್ಞರು ಹೇಳುವ ಸ್ವಸಮುದಾಯ ಪ್ರಜ್ಞೆ ಹಿಂದೂಗಳಲ್ಲಿ ಒಂದಿಷ್ಟೂ ಇಲ್ಲ. ಪ್ರತಿಯೊಬ್ಬ ಹಿಂದೂವಿನಲ್ಲಿ ಇರುವ ಪ್ರಜ್ಞೆ ಒಂದೇ, ಅದು ತನ್ನ ಜಾತಿಯ ಪ್ರಜ್ಞೆ. ಆದುದರಿಂದ, ಹಿಂದೂಗಳದೇ ಒಂದು ಸಮಾಜವಾಗಲಿ, ರಾಷ್ಟ್ರವಾಗಲಿ ಸಾಧ್ಯವಾಗಿಲ್ಲ. ಭಾರತೀಯರು ಒಂದು ರಾಷ್ಟ್ರವಲ್ಲವೆಂಬ ಮಾತನ್ನು ಒಪ್ಪುವುದಕ್ಕೆ ಎಷ್ಟೋ ಜನರ ದೇಶಾಭಿಮಾನ ಅಡ್ಡ ಬರುತ್ತದೆ. ಹೊರಗೆ ತೋರುವ ಈ ವೈವಿಧ್ಯದ ಒಡಲಲ್ಲಿ ಮೂಲಭೂತವಾದ ಒಂದು ಐಕ್ಯತೆಯಿದ್ದು ಹಿಂದೂಗಳೆಲ್ಲ ಒಂದಾಗಿದ್ದಾರೆಂದು ಅವರು ವಾದಿಸುತ್ತಾರೆ. ಸಂಪ್ರದಾಯಗಳಲ್ಲಿ, ನಂಬಿಕೆಗಳಲ್ಲಿ, ವಿಚಾರಗಳಲ್ಲಿ ಸಮಗ್ರ ಭರತಖಂಡದಲ್ಲೆಲ್ಲ ಸಾಮ್ಯತೆ ಕಾಣುವುದೆಂದು ಹೇಳುತ್ತಾರೆ. ಈ ಸಾಮ್ಯತೆ ಇರುವುದೇನೋ ನಿಜವೆ, ಆದರೆ ಇಷ್ಟರಿಂದಲೇ ಹಿಂದೂಗಳು ಒಂದು ಸಮಾಜವೆಂಬ ನಿರ್ಣಯ ಮಾಡುವುದು ಸರಿಯಲ್ಲ. ಹೀಗೆ ನಿರ್ಣಯಿಸುವವರಿಗೆ ಸಮಾಜದ ಅರ್ಥವೇ ತಿಳಿಯದು. ಒಂದು ಪ್ರದೇಶದಲ್ಲಿ ಹತ್ತಿರ ಹತ್ತಿರ ಇರುವುದರಿಂದಲೇ ಜನರು ಒಂದು ಸಮಾಜವಾಗಿ ಮಾರ್ಪಡುವುದಿಲ್ಲ. ಅದರಂತೆ, ಉಳಿದವರಿಂದ ನೂರಾರು ಮೈಲು ದೂರ ಇರುವುದರಿಂದಲೇ ಸಮಾಜಕ್ಕೆ ಹೊರತಾಗುವುದಿಲ್ಲ. ಎರಡನೆಯದಾಗಿ, ರೂಢಿ, ಸಂಪ್ರದಾಯ, ನಂಬಿಕೆ, ವಿಚಾರ ಮೊದಲಾದವುಗಳಲ್ಲಿ ಸಾಮ್ಯತೆಯೊಂದರಿಂದ ಸಮಾಜ ರೂಪುಗೊಳ್ಳುವುದಿಲ್ಲ. ಇಟ್ಟಿಗೆಗಳಂತೆ ವಿಷಯಗಳನ್ನು ಒಬ್ಬರಿಂದೊಬ್ಬರಿಗೆ ಸಾಗಿಸಬಹುದು. ಅದೇ ರೀತಿಯಾಗಿ ಒಂದು ಗುಂಪಿನ ಸಂಪ್ರದಾಯ, ವಿಚಾರ, ಶ್ರದ್ದೆಗಳು ಕೂಡ ಇನ್ನೊಂದು ಗುಂಪಿಗೆ ಸಾಗಿ ಇವೆರಡರಲ್ಲಿ ಸಾಮ್ಯತೆ ತೋರಬಹುದು. ಸಂಸ್ಕೃತಿ ಹೀಗೆ ಪ್ರಸಾರವಾಗುತ್ತದೆ. ಅದರ ಪರಿಣಾಮವಾಗಿ ಸಾಮ್ಯತೆ ಕಂಡುಬರುತ್ತದೆ. ಈ ಸಾಮ್ಯತೆಯ ಆಧಾರದಿಂದ ಆ ಪ್ರಾಚೀನ ಬುಡಕಟ್ಟುಗಳೆಲ್ಲ ಒಂದೇ ಸಮಾಜವಾಗಿದ್ದವೆಂದು ಯಾರೂ ಹೇಳಲಾರರು. ಮನುಷ್ಯರು ಸಮಾಜವಾಗಿ ಸಂಘಟಿತವಾಗಬೇಕಾದರೆ ಸಮಾನಾಧಿಕಾರದ ಕೆಲವಂಶವನ್ನು ಅವರು ಪಡೆದಿರಬೇಕು. ಸಮಾನ ವಸ್ತುಗಳನ್ನು ಅಥವಾ ವಿಷಯಗಳನ್ನು ಹೊಂದಿರುವುದು ಬೇರೆ. ಇತರರೊಡನೆ ಕೆಲವಂಶಗಳನ್ನು ಸಮಾನವಾಗಿ ಹಂಚಿಕೊಳ್ಳಲು ಸಾಧ್ಯವಾಗುವುದು ಪರಸ್ಪರ ಸಂಪರ್ಕದಿಂದಲೇ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಸಮಾಜ ಮುಂದುವರಿಯುವುದು ಅದರ ಸದಸ್ಯರಲ್ಲಿರುವ ಪರಸ್ಪರ ನಿಕಟ ಸಂಪರ್ಕದ ಮೂಲಕವೇ ಎಂದಾಯಿತು. ಆದರೆ ಸದೃಶವಾಗಿರುವುದೊಂದೇ ಸಾಲದು. ಉದಾಹರಣೆಗಾಗಿ ನೋಡಿ. ಹಿಂದೂಗಳ ವಿವಿಧ ಜಾತಿಗಳು ಆಚರಿಸುವ ಹಬ್ಬಗಳು ಒಂದೇ, ಭಿನ್ನ ಭಿನ್ನವಾಗಿಲ್ಲ. ಹೀಗೆ ಒಂದೇ ರೀತಿಯ ಹಬ್ಬಗಳನ್ನು ಆಚರಿಸುತ್ತಲಿದ್ದರೂ ಈ ಜಾತಿಗಳೆಲ್ಲ ಒಂದು ಪರಿಪೂರ್ಣ ಅಂಗಗಳಾಗಿಲ್ಲ, ಎಲ್ಲಾ ಬಿಡಿಬಿಡಿಯಾಗಿಯೆ ಉಳಿದಿವೆ. ಸಮಾನವಾದ ಚಟುವಟಿಕೆಯೊಂದರಲ್ಲಿ ಭಾಗವಹಿಸುವಾಗ ಪ್ರತಿಯೊಬ್ಬನಲ್ಲಿಯೂ ಸಮಾನ ಭಾವನೆ ಇರುವುದು ಅವಶ್ಯಕ. ಈ ಸರ್ವಸಮಾನವಾದ ಕಾರ್ಯದ ಯಶಸ್ಸು ನನ್ನ ಯಶಸ್ಸು. ಇದರ ಸೋಲು ನನ್ನ ಸೋಲು ಎಂಬ ಭಾವನೆ ಪ್ರತಿಯೊಬ್ಬನಲ್ಲಿ ಇದ್ದರೆ ಮಾತ್ರ ಆ ಜನರೆಲ್ಲ ಒಂದು ಸಮಾಜವಾಗಿ ಸಂಘಟಿತರಾಗುತ್ತಾರೆ. ಹೀಗೆ ಸಮಾನ ಭಾವನೆಯಿಂದ ಒಗ್ಗೂಡುವುದನ್ನು ಜಾತಿಪದ್ಧತಿ ಪ್ರತಿಬಂಧಿಸುತ್ತದೆ. ಹೀಗಾಗಿ ಹಿಂದೂಗಳೆಲ್ಲ ಕೂಡಿ ಸಮಾಜವಾಗುವುದನ್ನು ಅದು ತಪ್ಪಿಸಿದೆ. (ಪುಟ 62)

VII

ಒಂದು ಗುಂಪು ಅಥವಾ ವರ್ಗ ತಾನು ವಿಶಿಷ್ಟವೆಂಬಂತೆ ಇತರರಿಂದ ಸಿಡಿದು ಪ್ರತ್ಯೇಕವಾಗಿ ನಿಲ್ಲುತ್ತದೆ ಎಂದೂ, ಇದು ಸಮಾಜವಿರೋಧಿ ಭಾವನೆಯೆಂದೂ ಹಿಂದೂಗಳು ಆಗಾಗ ದೂರುತ್ತಾರೆ. ಆದರೆ ಈ ಸಮಾಜವಿರೋಧಿ ಮನೋವೃತ್ತಿಯು ಜಾತಿಪದ್ಧತಿಯ ಅತ್ಯಂತ ದುಷ್ಟವಾದ ಅನನ್ಯ ಲಕ್ಷಣವಾಗಿದೆಯೆಂಬ ಮಾತನ್ನು ಅವರು ಸುಲಭವಾಗಿ ಮರೆಯುತ್ತಾರೆ. ಜಾಗತಿಕ ಯುದ್ಧ ಕಾಲದಲ್ಲಿ ಇಂಗ್ಲಿಷರ ವಿರುದ್ಧವಾಗಿ ಜರ್ಮನರು ದ್ವೇಷಗೀತೆಯನ್ನು ಹಾಡುತ್ತಿದ್ದಂತೆ ಇಲ್ಲಿ ಒಂದು ಜಾತಿ ಇನ್ನೊಂದು ಜಾತಿಯ ವಿರುದ್ಧವಾಗಿ ದ್ವೇಷಗೀತೆ ಹಾಡಿ ಸಂತೋಷ ಪಡುತ್ತದೆ. ಹಿಂದೂಗಳ ಸಾಹಿತ್ಯದಲ್ಲಿ ಮನುಷ್ಯರ ವಂಶಾವಳಿಗಳು ತುಂಬಿವೆ. ಈ ವಂಶಾವಳಿಗಳು ಒಂದು ಜಾತಿಗೆ ಉತ್ಕಷ್ಟ ಮೂಲವನ್ನೂ, ಇತರ ಜಾತಿಗಳಿಗೆ ಹೀನ ಮೂಲವನ್ನೂ ತಿಳಿಸುತ್ತವೆ. ಈ ಬಗೆಯ ವಿರೋಧಿ ಮನೋವೃತ್ತಿ ಜಾತಿಗಳಿಗಷ್ಟೇ ಸೀಮಿತವಾಗಿಲ್ಲ. ಈ ವಿಷ ಇನ್ನೂ ಆಳವಾಗಿ ಒಳಸೇರಿ ಉಪಜಾತಿಗಳಲ್ಲಿ ಕೂಡ ಪರಸ್ಪರ ಸಂಬಂಧ ಕೆಡುವಂತೆ ಮಾಡಿದೆ. ನನ್ನ ಪ್ರಾಂತದಲ್ಲಿ ಗೋಲಕ ಬ್ರಾಹ್ಮಣರು, ದೇವರುಖ ಬ್ರಾಹ್ಮಣರು, ಕರಾಡಾ ಬ್ರಾಹ್ಮಣರು, ಪಲಶೇ ಬ್ರಾಹ್ಮಣರು ಮತ್ತು ಚಿತ್ಪಾವನ ಬ್ರಾಹ್ಮಣರು ಇವರೆಲ್ಲ ತಾವು ಬ್ರಾಹ್ಮಣ ಜಾತಿಯ ಉಪವರ್ಗಗಳೆಂದು ಹೇಳಿಕೊಳ್ಳುತ್ತಾರೆ. ಬ್ರಾಹ್ಮಣ ಜಾತಿಯ ಈ ಉಪವರ್ಗಗಳಲ್ಲಿ ಕಂಡುಬರುವ ಸಮಾಜ ವಿರೋಧಿ ಪ್ರವೃತ್ತಿಯು ಬ್ರಾಹ್ಮಣ ಮತ್ತು ಬ್ರಾಹ್ಮಣೇತರರ ನಡುವೆ ಇರುವ ದ್ವೇಷದಷ್ಟೇ ತೀವ್ರವಾಗಿದೆ. ಇಂತಹ ತೀವ್ರವಾದ ಭೇದಭಾವವಿರುವುದರಿಂದ ಜಾತಿ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಪ್ರಸಂಗ ಬಂದಾಗ ಸಮಾಜವಿರೋಧಿ ಪ್ರವೃತ್ತಿ ಕಂಡುಬರುತ್ತದೆ. ಈ ಪ್ರವೃತ್ತಿ ಇತರ ಗುಂಪುಗಳ ನಡುವೆ ಸಂಪೂರ್ಣವಾಗಿ ವ್ಯವಹಾರವನ್ನು ಸ್ಥಗಿತಗೊಳಿಸುತ್ತದೆ. ಇತರ ವರ್ಗಗಳನ್ನು ತನ್ನಿಂದ ದೂರವಿಡುವ ಪ್ರವೃತ್ತಿ ಜಾಗೃತವಾಗುತ್ತದೆ. ತನಗೆ ದೊರಕಿದುದನ್ನು ಸಂರಕ್ಷಣೆ ಮಾಡುವುದೇ ಈ ಪ್ರವ್ರತ್ತಿಯ ಉದ್ದೇಶ. ರಾಷ್ಟ್ರಗಳು ತಮ್ಮ ಪ್ರತ್ಯೇಕ ಅಸ್ತಿತ್ವಕ್ಕಾಗಿ ಹೇಗೆ ಹೋರಾಡುತ್ತವೆಯೋ ಹಾಗೆ ಪ್ರತಿಯೊಂದು ಜಾತಿ ತನ್ನ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಸಮಾಜವಿರೋಧಿ ಮನೋವೃತ್ತಿಯನ್ನು ತಾಳುತ್ತದೆ. ಬ್ರಾಹ್ಮಣೇತರರಿಂದ ತಮ್ಮ ಸ್ವಂತ ಹಿತಾಸಕ್ತಿಗೆ ಹಾನಿಯಾಗದಂತೆ ನೋಡಿಕೊಳ್ಳುವುದೇ ಬ್ರಾಹ್ಮಣರಿಗೆ ಮುಖ್ಯವಾಗುತ್ತದೆ. ಅದರಂತೆ ಬ್ರಾಹ್ಮಣರಿಂದ ತಮ್ಮ ಹಿತಾಸಕ್ತಿ ಹಾಳಾಗಬಾರದು ಎಂಬುದೇ ಅಬ್ರಾಹ್ಮಣರಿಗೆ ಮುಖ್ಯವಾಗುತ್ತದೆ. ಹೀಗಾಗಿರುವುದರಿಂದ ಹಿಂದೂಗಳು ಭಿನ್ನಭಿನ್ನ ಜಾತಿಗಳ ಒಂದು ಕಲಸುಮೇಲೋಗರವಾಗಿದ್ದಾರೆಂಬುದಷ್ಟೇ ಅಲ್ಲ, ಸ್ವಾರ್ಥ ಸಾಧನೆಯೇ ಪ್ರಾಮುಖ್ಯವೆಂದುಕೊಂಡು ಹಲವಾರು ಪರಸ್ಪರ ವಿರೋಧಿ ಗುಂಪುಗಳಾಗಿ ಹೋರಾಡುತ್ತಾ ನಿಂತಿದ್ದಾರೆ. ಪ್ರತಿಯೊಂದು ಗುಂಪೂ ತನ್ನ ಸ್ವಾರ್ಥ ಸಾಧನೆಗಾಗಿ ಹೋರಾಡುತ್ತದೆ. ಈಗಿನ ಇಂಗ್ಲಿಷ್ ಜನತೆಯ ಪೂರ್ವಜರು ಗುಲಾಬಿ ಯುದ್ಧಗಳಲ್ಲಿ ಹಾಗೂ ಕ್ರಾಮ್‌ ವೆಲ್ ಯುದ್ಧದಲ್ಲಿ ಒಂದು ಪಕ್ಷವನ್ನೋ ಇನ್ನೊಂದು ಪಕ್ಷವನ್ನೋ ವಹಿಸಿ ಪರಸ್ಪರವಾಗಿ ಹೊಡೆದಾಡಿದರು. ಆದರೆ ಒಂದು ಪಕ್ಷದವರ ವಂಶದವರು ಇನ್ನೊಂದು ಪಕ್ಷದವರ ವಂಶದವರನ್ನು ದ್ವೇಷಿಸುವುದಿಲ್ಲ. ಸೇಡಿನ ಮನೋಭಾವನೆಯ ಪೂರ್ವಕಾಲದ ಜಗಳ ಮರೆತುಹೋಗಿದೆ. ಆದರೆ ಭಾರತದಲ್ಲಿ ನಡೆದುದೇ ಬೇರೆ. ಬ್ರಾಹ್ಮಣರು ಶಿವಾಜಿಗೆ ಅಪಮಾನ ಮಾಡಿದರೆಂಬುದನ್ನು ನೆನಪಿಟ್ಟುಕೊಂಡು ಈಗಿನ ಬ್ರಾಹ್ಮಣೇತರರು ಈಗಿನ ಬ್ರಾಹ್ಮಣರನ್ನು ಕ್ಷಮಿಸಲಾರರು. ಹಿಂದೊಂದು ಕಾಲದಲ್ಲಿ ಕಾಯಸ್ಥರನ್ನು ಕುಖ್ಯಾತಿಗೆ ಈಡು ಮಾಡಿರುವುದರಿಂದ ಇಂದಿನ ಕಾಯಸ್ಥರು ಇಂದಿನ ಬ್ರಾಹ್ಮಣರನ್ನು ಕ್ಷಮಿಸಲಾರರು. ಇದೆಲ್ಲ ಆದದ್ದು ಯಾತರಿಂದ? ಖಂಡಿತವಾಗಿ ಜಾತಿಪದ್ಧತಿಯಿಂದಲೇ (ಪುಟ 63)

ಆಯಿತು. ಜಾತಿಪ್ರಜ್ಞೆ ಬಲಿಷ್ಠವಾಗಿ ಉಳಿದುಬಂದಿರುವುದರಿಂದ ಪೂರ್ವಕಾಲದ ಜಾತಿಕಲಹಗಳ ನೆನಪು ಅಚ್ಚಳಿಯದೆ ಉಳಿದು ಐಕ್ಯವನ್ನು ಪ್ರತಿಬಂಧಿಸಿದೆ.

VIII

ಸಮಾಜದಲ್ಲಿ ಗಣನೆಗೆ ತೆಗೆದುಕೊಂಡಿರದ ಅಥವಾ ಆಂಶಿಕವಾಗಿ ಮಾತ್ರ ಬಳಸಿಕೊಂಡಿರುವ ಪ್ರದೇಶದ ಬಗ್ಗೆ ಇತ್ತೀಚೆಗೆ ನಡೆದಿರುವ ಚರ್ಚೆಯಿಂದ ಭಾರತದಲ್ಲಿರುವ ಮೂಲನಿವಾಸಿ ಬುಡಕಟ್ಟುಗಳ ಬಗೆಗೆ ಜನರ ಗಮನ ಹರಿದಿದೆ. ಈ ಜನರ ಸಂಖ್ಯೆ ಸುಮಾರು ೧೩ ದಶಲಕ್ಷವಾಗಿದೆ. ಹೊಸ ಸಂವಿಧಾನದಲ್ಲಿ ಈ ಜನರನ್ನು ಸೇರಿಸದೆ ಬಿಟ್ಟಿರುವುದು ಸರಿಯೋ ತಪ್ಪೋ, ಆ ಮಾತು ಹಾಗಿರಲಿ, ಸಹಸ್ರಾರು ವರ್ಷಗಳ ನಾಗರಿಕತೆಯುಳ್ಳದ್ದೆಂದು ಜಂಬ ಕೊಚ್ಚಿಕೊಳ್ಳುವ ದೇಶದಲ್ಲಿಯೇ ಈ ಆದಿವಾಸಿ ಬುಡಕಟ್ಟುಗಳ ಜನರು ತಮ್ಮ ಪ್ರಾಚೀನ ಪದ್ಧತಿಯ ಅನಾಗರಿಕ ಅವಸ್ಥೆಯಲ್ಲಿ ಬದುಕುತ್ತಾ ಬಂದಿದ್ದಾರೆಂಬುದು ವಸ್ತುಸ್ಥಿತಿ. ಇವರು ಅನಾಗರಿಕರಾಗಿ ಉಳಿದಿರುವುದಷ್ಟೇ ಅಲ್ಲ, ಇವರಲ್ಲಿ ಕೆಲವರು ಪರಂಪರಾಗತವಾಗಿ ನಡೆಸುವ ವ್ಯವಹಾರಗಳ ಮೂಲಕ ಅಪರಾಧಿಗಳೆಂದೂ ಪರಿಗಣಿತರಾಗಿದ್ದಾರೆ. ನಾಗರಿಕ ದೇಶದಲ್ಲಿ ೧೩ ದಶಲಕ್ಷ ಜನರು ಅನಾಗರಿಕರಾಗಿ, ವಂಶಪರಂಪರೆಯ ಅಪರಾಧಿಗಳಾಗಿ ಬದುಕುತ್ತಿದ್ದಾರೆಂದರೆ ಏನರ್ಥ? ಇದನ್ನು ಕಂಡು ಹಿಂದೂಗಳಿಗೆ ಎಂದೂ ನಾಚಿಕೆಯಾಗಲಿಲ್ಲ. ಇಂತಹ ವಿಚಿತ್ರ ಘಟನೆ ಬೇರೆಲ್ಲಿಯೂ ಕಾಣಲಾಗದು. ಆದರೆ ಈ ಲಜ್ಜಾಸ್ಪದವಾದ ವಸ್ತುಸ್ಥಿತಿಗೆ ಕಾರಣವೇನು? ಈ ಆದಿವಾಸಿ ಬುಡಕಟ್ಟುಗಳ ಜನರಿಗೆ ನಾಗರಿಕತೆಯನ್ನು ಒದಗಿಸಿ, ಗೌರವಾಸ್ಪದವಾದ ರೀತಿಯಲ್ಲಿ ಅವರು ಬದುಕುವಂತೆ ಯಾಕೆ ಪ್ರಯತ್ನ ನಡೆಯಲಿಲ್ಲ? ಈ ಜನರ ಅನಾಗರಿಕ ಅವಸ್ಥೆಗೆ ಅವರ ಅನುವಂಶಿಕ ಮೂರ್ಖತನವೇ ಕಾರಣವೆಂದು ಬಹುಶಃ ಹಿಂದೂಗಳು ಹೇಳಬಹುದು. ಈ ದುರ್ದೈವಿಗಳಿಗೆ ನಾಗರಿಕತೆಯನ್ನು ಒದಗಿಸಬೇಕಾಗಿತ್ತು. ಇದನ್ನೆಲ್ಲ ತಾವೇ ಮಾಡಬೇಕಾಗಿದ್ದು, ಮಾಡದೇ ಹೋದೆವು ಎಂದು ಹಿಂದೂಗಳು ಬಹುಶಃ ಒಪ್ಪಿಕೊಳ್ಳಲಿಕ್ಕಿಲ್ಲ. ಈಗ ಕ್ರೈಸ್ತ ಧರ್ಮ ಪ್ರಚಾರಕರು ಈ ಜನರಿಗಾಗಿ ಏನು ಮಾಡುತ್ತಿರುವರೋ ಅದನ್ನು ಒಬ್ಬ ಹಿಂದೂವೂ ಮಾಡಬಯಸುವನೆಂದು ಭಾವಿಸೋಣ. ಅವನಿಂದ ಹಾಗೆ ಮಾಡುವುದು ಸಾಧ್ಯವೇ? ಅಸಾಧ್ಯವೆಂದೇ ನಾನು ಹೇಳುತ್ತೇನೆ. ಪ್ರಾಚೀನ ಪದ್ಧತಿಯ ಕಾಡು ಜನರನ್ನು ನಾಗರಿಕರಾಗಿ ಪರಿವರ್ತಿಸಬೇಕೆಂದರೆ ಏನು ಮಾಡಬೇಕು? ಅವರನ್ನು ನಿಮ್ಮವರೆಂದು ಒಪ್ಪಿ ಒಳಸೇರಿಸಿಕೊಳ್ಳಬೇಕು. ಅವರ ಮಧ್ಯದಲ್ಲಿ ಬದುಕಬೇಕು. ಭ್ರಾತೃತ್ವ ಭಾವನೆಯನ್ನು ಬೆಳಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ, ಅವರನ್ನು ಪ್ರೀತಿಸಬೇಕು. ಹಿಂದೂವಿಗೆ ಇದು ಹೇಗೆ ಸಾಧ್ಯ? ತನ್ನ ಜಾತಿಯನ್ನು ಕಾಪಾಡಿಕೊಳ್ಳುವುದಕ್ಕೆ ಅವನು ಇಡೀ ಜೀವಮಾನವನ್ನು ಮುಡಿಪಾಗಿಡುತ್ತಾನೆ. ಶತಾಯಗತಾಯ ರಕ್ಷಿಸಿಕೊಳ್ಳಲೇಬೇಕಾದ ಅನರ್ಘ್ಯ ಆಸ್ತಿಯಾಗಿದೆ ಅವನ ಜಾತಿ. ವೈದಿಕ ಕಾಲದಲ್ಲಿ ಅನಾರ್ಯರೆನಿಸಿಕೊಂಡವರ ವಂಶದಲ್ಲಿ ಹುಟ್ಟಿ ಬಂದಿರುವ ಈ ಅನಾಗರಿಕರೊಡನೆ ಸಂಪರ್ಕ ಬೆಳೆಸಿದರೆ ತನ್ನ ಜಾತಿ ಕೆಟ್ಟುಹೋದೀತೆಂದು ಅವನು ದೂರವೇ ಉಳಿಯುತ್ತಾನೆ. ಪತಿತರನ್ನು ಉದ್ದರಿಸುವ ಮಾನವೀಯ ಕರ್ತವ್ಯಕ್ಕೆ ಹಿಂದೂವೂ ಸಿದ್ದನಾಗಲಾರನೆಂದಲ್ಲ. ಆದರೆ ತನ್ನ ಜಾತಿ ರಕ್ಷಣೆಯನ್ನು ಮೀರಿ ಅವನ ಮಾನವೀಯ ಕರ್ತವ್ಯಬುದ್ದಿ ಕೆಲಸ ಮಾಡಲಾರದು. ಈ ಆದಿವಾಸಿಗಳು ಅನಾಗರಿಕ ಸ್ಥಿತಿಯಲ್ಲಿ ಉಳಿಯಲು ಹಿಂದೂವಿನ ಜಾತಿಯೊಂದೇ ಕಾರಣ. ತಮ್ಮ ನಾಗರಿಕತೆಯ ಮಧ್ಯದಲ್ಲಿ ಇವರನ್ನು ಅನಾಗರಿಕ ಸ್ಥಿತಿಯಲ್ಲಿಡಲು ಹಿಂದೂಗಳಿಗೆ ನಾಚಿಕೆಯಾಗಲೀ, ಪಶ್ಚಾತ್ತಾಪವಾಗಲೀ ಇಲ್ಲವೇ ಇಲ್ಲ. ಹಿಂದೂಗಳಿಗೆ (ಪುಟ 64)

ಈ ಆದಿವಾಸಿಗಳ ಅನಾಗರಿಕ ಜನಸಮುದಾಯ ಯಾವತ್ತೂ ಅಪಾಯಕಾರಿ ಎಂದು ಕಂಡುಬಂದಿಲ್ಲ. ಅವರನ್ನು ತಮ್ಮೊಳಗೆ ಸೇರಿಸಿಕೊಂಡ ಪಕ್ಷದಲ್ಲಿ ಹಿರದೂಗಳ ಶತ್ರುಸಂಖ್ಯೆ ಇನ್ನಷ್ಟು ಹೆಚ್ಚುತ್ತದೆ. ಹಾಗೇನಾದರೂ ನಡೆದುಹೋದರೆ ಆ ದುರ್ದೈವಕ್ಕೆ ಹಿಂದೂವೇ ಹೊಣೆ, ಅವನ ಜಾತಿಪದ್ಧತಿಯೇ ಹೊಣೆ.

IX

ಅನಾಗರಿಕ ಬುಡಕಟ್ಟಿನವರನ್ನು ಉದ್ಧರಿಸುವ ಮಾನವೀಯ ಕಾರ್ಯಕ್ಕೆ ಹಿಂದೂಗಳು ಪ್ರಯತ್ನಿಸಲಿಲ್ಲವೆಂಬುದಷ್ಟೇ ಅಲ್ಲ. ಹಿಂದೂಗಳಲ್ಲಿ ಮೇಲು ಜಾತಿಯೆನಿಸಿಕೊಂಡವರು ತಮ್ಮಲ್ಲಿಯೇ ಇರುವ ಕೆಳಜಾತಿಯವನನ್ನು ಸಾಂಸ್ಕೃತಿಕವಾಗಿ ತಮ್ಮ ಮಟ್ಟಕ್ಕೆ ಏರಗೊಡಲಿಲ್ಲ. ನಾನು ಇದಕ್ಕೆ ಎರಡು ನಿದರ್ಶನಗಳನ್ನು ಕೊಡುತ್ತೇನೆ. ಒಂದು ಸೋನಾರರದ್ದು, ಇನ್ನೊಂದು ಪಠರೇ ಪ್ರಭುಗಳದ್ದು. ಇವೆರಡು ಮಹಾರಾಷ್ಟ್ರದಲ್ಲಿ ಸುಪರಿಚಿತವಾದ ಎರಡು ಜಾತಿಗಳು. ತಮ್ಮ ದರ್ಜೆಯನ್ನು ಎತ್ತರಿಸಿಕೊಳ್ಳಬೇಕೆಂದು ಇತರ ಜಾತಿಗಳಂತೆ ಈ ಎರಡು ಜಾತಿಗಳೂ ಅದೇ ಪ್ರಯತ್ನದಲ್ಲಿ ಬ್ರಾಹ್ಮಣರ ಕೆಲ ಪದ್ಧತಿಗಳನ್ನು ಒಂದೊಮ್ಮೆ ಆಚರಿಸಲು ಪ್ರಯತ್ನಿಸುತ್ತಿದ್ದವು. ಸೋನಾರರು ತಮ್ಮನ್ನು ದೈವಜ್ಞ ಬ್ರಾಹ್ಮಣರೆಂದು ಕರೆದುಕೊಂಡು ಬ್ರಾಹ್ಮಣರಂತೆ ನೆರಿಗೆ ಹಾಕಿ ಧೋತ್ರ ಉಡತೊಡಗಿದರು. ಹಾಗೂ ನಮಸ್ಕಾರ ಎಂದು ಒಬ್ಬರನ್ನೊಬ್ಬರು ಗೌರವಿಸತೊಡಗಿದರು. ನೆರಿಗೆಯ ಧೋತ್ರ ಹಾಗೂ ನಮಸ್ಕಾರವೆಂಬ ಮಾತು ಎರಡೂ ಬ್ರಾಹ್ಮಣರಿಗೆ ವಿಶಿಷ್ಟವಾದವು. ಸೋನಾರರು ಹೀಗೆ ತಮ್ಮನ್ನು ಅನುಕರಿಸುವುದು ಅಥವಾ ಸರಿಗಟ್ಟುವುದು ಬ್ರಾಹ್ಮಣರಿಗೆ ಸೇರಲಿಲ್ಲ. ಪೇಶ್ವೆಯವರ ಆಡಳಿತದಲ್ಲಿ ಬ್ರಾಹ್ಮಣರೇ ಸೋನಾರರ ಈ ಪ್ರಯತ್ನವನ್ನು ಬಗ್ಗುಬಡಿದುಬಿಟ್ಟರು. ಮುಂಬಯಿಯಲ್ಲಿದ್ದ ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತಾಧಿಕಾರಿಗಳಿಂದ ಕೂಡ ಮುಂಬಯಿ ನಿವಾಸಿಗಳಾದ ಸೋನಾರರಿಗೆ ಅಂತಹದೊಂದು ಪ್ರತಿಬಂಧಕಾಜ್ಞೆಯನ್ನು ಹೊರಡಿಸಿದರು. ಒಂದು ಕಾಲದಲ್ಲಿ ಪಠರೇ ಪ್ರಭುಗಳ ಜಾತಿಯಲ್ಲಿ ಪುನರ್ವಿವಾಹ ಒಂದು ಸಮ್ಮತ ಸಂಪ್ರದಾಯವಾಗಿತ್ತು. ಬ್ರಾಹ್ಮಣರಲ್ಲಿ ಇದು ಇಲ್ಲವೆಂಬುದನ್ನು ಕಂಡು ಕೆಲವರು ಇದನ್ನು ಕಲಂಕಪ್ರಾಯವೆಂದು ಭಾವಿಸಿದರೆ, ತಮ್ಮ ಜಾತಿಯ ದರ್ಜೆಯನ್ನು ಉತ್ತಮಪಡಿಸಿಕೊಳ್ಳುವ ದೃಷ್ಟಿಯಿಂದ ಪಠಾರೇ ಪ್ರಭುಗಳಲ್ಲಿ ಕೆಲವರು ಪುನರ್ವಿವಾಹ ಪದ್ಧತಿಯನ್ನು ತಡೆಯಲು ಪ್ರಯತ್ನಿಸಿದರು. ಇದರಿಂದ ಪುನರ್ವಿವಾಹಕ್ಕೆ ಪರ ಹಾಗೂ ವಿರೋಧಿಗಳಾದ ಎರಡು ಬಣಗಳುಂಟಾದವು. ಪೇಶ್ವೆಗಳು ಪರಂಪರಾವಾದಿಗಳ ಪಕ್ಷವನ್ನೇ ಎತ್ತಿಹಿಡಿದರು. ಹೀಗೆ ಬ್ರಾಹ್ಮಣರನ್ನು ಅನುಕರಿಸ ಹೊರಟವರನ್ನು ನಿರ್ಬಂಧಿಸಿದರು. ಮುಸಲ್ಮಾನರು ಖಡ್ಗಬಲದಿಂದ ತಮ್ಮ ಧರ್ಮವನ್ನು ವಿಸ್ತರಿಸಿಕೊಂಡರೆಂದು ಹಿಂದೂಗಳು ಟೀಕಿಸುವುದುಂಟು. ಕ್ರಿಸ್ತಮತವನ್ನು ಅವರು ಹೀಗೆಯೇ ಹಳಿಯುತ್ತಾರೆ. ಮಹಮ್ಮದೀಯರೇ ಆಗಲಿ, ಕ್ರೈಸ್ತರೇ ಆಗಲಿ ಆತ್ಮೋದ್ಧಾರಕ್ಕೆ ಅವಶ್ಯಕವಾದುದೆಂದು ತಾವು ಯಾವುದನ್ನು ನಂಬಿದ್ದರೋ ಅದನ್ನು ಒಪ್ಪದೇ ಇರುವವರ ಗಂಟಲಲ್ಲಿ ತುರುಕಿದಾಗ ಹಿಂದೂಗಳು ಏನು ಮಾಡಿದರು? ತಮ್ಮ ಜ್ಞಾನವನ್ನು ಇತರರಿಗೆ ಕೊಡಲೊಪ್ಪಲಿಲ್ಲ. ಇತರರನ್ನು ಅಜ್ಞಾನದಲ್ಲಿಯೇ ಇರಿಸಲು ಪ್ರಯತ್ನಿಸಿದರು. ತಮ್ಮ ಬೌದ್ಧಿಕ ಹಾಗೂ ಸಾಮಾಜಿಕ ಸಂಪತ್ತನ್ನು ಪಡೆಯಲು ಸಿದ್ಧರಾದ ಇತರರೊಡನೆ ಹಂಚಿಕೊಳ್ಳಲು ಒಪ್ಪಲಿಲ್ಲ. ಹೀಗಿರುವಾಗ ಈ ಮೂವರಲ್ಲಿ ನಮಗೆ ಹೆಚ್ಚು ಗೌರವಾಸ್ಪದರು ಯಾರು? ಅನುಮಾನವಿಲ್ಲದೆ ನಾನು ಹೇಳುತ್ತೇನೆ – ಮಹಮ್ಮದೀಯನು ಕ್ರೂರನಾಗಿದ್ದರೆ, ಹಿಂದೂವು ನೀಚನಾಗಿದ್ದಾನೆ. ನೀಚತನ ಕ್ರೌರ್ಯಕ್ಕಿಂತ ಕೆಟ್ಟದ್ದು. (ಪುಟ 65)

X

ಹಿಂದೂಧರ್ಮವು ಪ್ರಚಾರಕ ಧರ್ಮವಾಗಿತ್ತೇ ಅಥವಾ ಇಲ್ಲವೆ ಎಂಬುದು ವಾದಗ್ರಸ್ತ ವಿಷಯ. ಅದು ಎಂದೂ ಪ್ರಚಾರಕ ಧರ್ಮವಾಗಿರಲಿಲ್ಲವೆಂದು ಕೆಲವರೂ, ಪ್ರಚಾರಕವಾಗಿತ್ತೆಂದು ಇತರರೂ ವಾದಿಸುತ್ತಾರೆ. ಒಂದು ಕಾಲಕ್ಕೆ ಹಿಂದೂಧರ್ಮ ಪ್ರಚಾರಕವಾಗಿತ್ತೆಂದು ಒಪ್ಪಬೇಕಾಗುತ್ತದೆ. ಪ್ರಚಾರಕ ಧರ್ಮವಾಗಿಲ್ಲದಿದ್ದರೆ ಅದು ಭಾರತದಲ್ಲೆಲ್ಲ ಹಬ್ಬುತ್ತಿರಲಿಲ್ಲ. ಈಗಿನ ಕಾಲದಲ್ಲಿ ಅದು ಪ್ರಚಾರಕ ಧರ್ಮವಾಗಿಲ್ಲ ಎಂದುದೂ ಅಷ್ಟೇ ಸತ್ಯವಾದ ವಿಷಯ. ಆದುದರಿಂದ ಹಿಂದೂಧರ್ಮ ಪ್ರಚಾರಕವಾಗಿತ್ತೆ ಇಲ್ಲವೇ ಎಂಬುದಕ್ಕಿಂತ ನಿಜವಾದ ಪ್ರಶ್ನೆಯೆಂದರೆ ಹಿಂದೂಧರ್ಮ ಪ್ರಚಾರಕವಾಗಿ ಏಕೆ ಮುಂದುವರಿಯಲಿಲ್ಲ ಎಂಬುದಾಗಿದೆ. ಇದಕ್ಕೆ ನನ್ನ ಉತ್ತರ ಹೀಗಿದೆ : ಹಿಂದೂಗಳಲ್ಲಿ ಜಾತಿಪದ್ಧತಿ ಬೆಳೆದುದರಿಂದ ಹಿಂದೂಧರ್ಮದ ಪ್ರಚಾರ ನಿಂತುಹೋಯಿತು. ಮತಾಂತರವನ್ನು ಜಾತಿ ಒಪ್ಪುವುದಿಲ್ಲ. ಮತಾಂತರದಲ್ಲಿ ನಂಬಿಕೆಗಳನ್ನೂ ತತ್ವಗಳನ್ನೂ ಬೋಧಿಸುವುದಷ್ಟೇ ಸಮಸ್ಯೆಯಲ್ಲ. ಧರ್ಮಾಂತರಗೊಂಡು ಒಳಸೇರುವ ವ್ಯಕ್ತಿಗೆ ಜಾತಿಯ ಸಾಮಾಜಿಕ ಜೀವನದಲ್ಲಿ ಸ್ಥಾನ ನೀಡಬೇಕಲ್ಲವೆ? ಇದರಿಂದ ತುಂಬ ಕಠಿಣವಾದ ಸಮಸ್ಯೆ ಹುಟ್ಟಿಕೊಳ್ಳುತ್ತದೆ. ಈ ಹೊಸಬನನ್ನು ಯಾವ ಜಾತಿಗೆ ಸೇರಿಸಿಕೊಳ್ಳಬೇಕು? ಪರಕೀಯರನ್ನು ಮತಾಂತರಗೊಳಿಸಿ ತಮ್ಮೊಳಗೆ ಸೇರಿಸಿಕೊಳ್ಳಬೇಕೆಂಬ ಹಿಂದೂಗಳಿಗೆ ಇದು ತಲೆ ತಿನ್ನುವ ಸಮಸ್ಯೆಯೇ ಸರಿ. ಕ್ಲಬ್ಬಿನ ಸದಸ್ಯತ್ವದಂತೆ ಜಾತಿಯ ಸದಸ್ಯತ್ವವನ್ನು ಯಾರಿಗೆ ಬೇಕಾದರೂ ಕೊಡುವಂತಹುದಲ್ಲ. ಜಾತಿಯಲ್ಲಿ ಹುಟ್ಟಿದವರಿಗೆ ಮಾತ್ರ ಜಾತಿಯ ಸದಸ್ಯತ್ವ ಸಿಕ್ಕುತ್ತದೆ. ಜಾತಿಗಳು ಸ್ವಾಯತ್ತಾಧಿಕಾರಿಗಳುಳ್ಳ ಸಂಸ್ಥೆಗಳು. ಹೊಸಬರನ್ನು ಸೇರಿಸಿಕೊಳ್ಳಿ ಎಂದು ಒತ್ತಾಯ ಮಾಡುವ ಅಧಿಕಾರ ಯಾರಿಗೂ ಇಲ್ಲ. ಹಿಂದೂ ಸಮಾಜ ಜಾತಿಗಳ ಒಂದು ಸಮುದಾಯವಾಗಿಬಹುದು, ಪ್ರತಿಯೊಂದು ಜಾತಿಯೂ ಸ್ವಾಯತ್ತ ಸಂಸ್ಥೆಯಂತೆ ಇರುವುದರಿಂದ ಮತಾಂತರ ಹೊಂದಿ ಬರಬೇಕೆನ್ನುವವರಿಗೆ ಅದರಲ್ಲಿ ಸ್ಥಾನವಿಲ್ಲ. ಹಿಂದುಗಳು ತಮ್ಮ ಧರ್ಮವನ್ನು ವಿಸ್ತರಿಸುವುದಕ್ಕೂ ಇತರ ಧರ್ಮದವರನ್ನು ತಮ್ಮಲ್ಲಿ ಸೇರಿಸಿಕೊಳ್ಳುವುದಕ್ಕೂ ಅವರ ಜಾತಿಯೇ ಅಡ್ಡ ಬಂದಿದೆ. ಜಾತಿಗಳು ಇರುವವರೆಗೆ ಹಿಂದೂಧರ್ಮ ಪ್ರಚಾರಕ ಧರ್ಮವಾಗಲಾರದು ಮತ್ತು ‘ಶುದ್ಧಿ’ ಎನ್ನುವುದು ಕೇವಲ ಅವಿವೇಕದ ಹಾಗೂ ನಿರರ್ಥಕ ಪರಿಕಲ್ಪನೆಯಾಗುತ್ತದೆ.

XI

ಶುದ್ದಿ ಎನ್ನುವುದು ಹಿಂದೂ ಸಮಾಜದ ಸಂಘಟನೆಗೆ ವಿರುದ್ಧವಾಗಿ ಕೆಲಸ ಮಾಡುತ್ತದೆ. ಮಹಮ್ಮದೀಯರಿಂದ ಹಾಗೂ ಸಿಖ್ಖರಿಂದ ಹಿಂದೂವು ಭಿನ್ನವಾಗಿರುವುದು ತನ್ನ ಅಂಜುಗುಳಿತನ ಅಥವಾ ಹೇಡಿತನದಿಂದ, ಅವನ ಮನಸ್ಸಿನಿಂದ ಈ ಭಾವನೆಯನ್ನು ನಿವಾರಿಸುವುದೇ ಸಂಘಟನೆಯ ಮುಖ್ಯ ತತ್ವವಾಗಿದೆ. ಹಿಂದೂವು ಆತ್ಮರಕ್ಷಣೆಗಾಗಿ ಠಕ್ಕುತನವನ್ನೂ, ದ್ರೋಹವನ್ನೂ ಮಾಡುತ್ತಾನೆ. ಸಿಖ್ಖನಿಗಾಗಲಿ ಮಹಮ್ಮದೀಯನಿಗಾಗಲಿ ನಿರ್ಭಯತೆಯನ್ನು ತಂದುಕೊಟ್ಟ ಬಲ ಯಾವುದು? ಶಾರೀರಕ ಬಲ, ಆಹಾರ, ವ್ಯಾಯಾಮ ಮುಂತಾದವುಗಳಿಂದ ಅವರಿಗೆ ಆ ಅಧಿಕ ಧೈರ್ಯ ಬಂದಿರಲಾರದೆಂಬುದು ನಿಶ್ಚಿತ. ಈ ವಿಷಯಗಳಲ್ಲಿ ಹಿಂದೂವಿಗೂ ಅವರಿಗೂ ಭೇದವಿಲ್ಲ. ಈ ಬಲ ಬಂದಿರುವುದು ಅವರ ಸಹಧರ್ಮಿಗಳ ಬೆಂಬಲ ವಿಶ್ವಾಸದಿಂದ. ಒಬ್ಬ ಸಿಬ್ಬನು ಅಪಾಯಕ್ಕೆ ಸಿಲುಕಿದರೆ ಎಲ್ಲ ಸಿಖ್ಖರೂ ತನ್ನ ಬೆಂಬಲಕ್ಕೆ (ಪುಟ 66)

ಬರುವರೆಂಬ ನಂಬಿಕೆ ಅವನಿಗಿದೆ. ಒಬ್ಬ ಮಹಮ್ಮದೀಯನು ದಾಳಿಗೆ ಒಳಗಾದಾಗ ಎಲ್ಲ ಮಹಮ್ಮದೀಯರು ತನ್ನನ್ನು ಪಾರುಮಾಡಲು ಬರುವರೆಂಬ ವಿಶ್ವಾಸ ಅವನಿಗಿದೆ. ಹಿಂದೂವಿಗೆ ಇಂತಹ ಯಾವ ಬಲವೂ ಇಲ್ಲ. ತನ್ನವರು ನೆರವಿಗೆ ಬಂದಾರೆಂಬ ನಂಬಿಕೆ ಹಿಂದೂವಿಗೆ ಎಲ್ಲಿದೆ? ಹೀಗೆ ಹಿಂದೂವು ಏಕಾಕಿತನದಿಂದ ಶಕ್ತಿಹೀನನಾಗಿ ಅಂಜುಬುರುಕನಾಗುತ್ತಾನೆ. ಹೊಡೆದಾಟವಾದರೆ ಎದುರಾಳಿಗೆ ಶರಣಾಗುತ್ತಾನೆ. ಇಲ್ಲವೆ ಓಡಿ ಹೋಗುತ್ತಾನೆ. ಸಿಖ್ಖನಾಗಲಿ, ಮಹಮ್ಮದೀಯನಾಗಲಿ ಇಂತಹ ಪ್ರಸಂಗ ಬಂದರೆ ನಿರ್ಭಯನಾಗಿ ಹೋರಾಡುತ್ತಾನೆ. ಯಾಕೆಂದರೆ ತನ್ನ ಹಿಂದೆ ಅನೇಕರ ಬಲವಿದೆಯೆಂದು ಅವನು ಅರಿತಿರುತ್ತಾನೆ. ಹಿಂದೂವಿಗೆ ತನ್ನವರು ಬೆಂಬಲವಾದಾರೆಂಬ ನಂಬಿಕೆಯೇ ಇಲ್ಲ. ಸಿಖ್ಖನಿಗೆ ಹಾಗೂ ಮಹಮ್ಮದೀಯನಿಗೆ ಆ ನಂಬಿಕೆ ಏಕೆ ಉಂಟು? ಇದಕ್ಕೆ ಕಾರಣ ಅವರು ಇಟ್ಟುಕೊಂಡಿರುವ ಸಾಮಾಜಿಕ ಸಂಬಂಧದ ರೀತಿಗಳು. ಸಿಖ್ಖರಾಗಲಿ, ಮಹಮ್ಮದೀಯರಾಗಲಿ ತಮ್ಮ ತಮ್ಮಲ್ಲಿ ಭಾತೃತ್ವಭಾವನೆಯಿಂದ ನಡೆದುಕೊಳ್ಳುತ್ತಾರೆ. ಹಿಂದೂಗಳು ಪರಸ್ಪರವಾಗಿ ಆ ಭಾವನೆಯಿಟ್ಟುಕೊಂಡು ಬಾಳುವುದಿಲ್ಲ. ಒಬ್ಬ ಹಿಂದೂ ಇನ್ನೊಬ್ಬ ಹಿಂದೂವನ್ನು ಭಾಯಿ ಎಂದು ಪರಿಗಣಿಸುವುದಿಲ್ಲ. ಸಿಖ್ಖರು ಭಾವಿಸುವುದು ತಮ್ಮಲ್ಲಿರುವ ಸೋದರತೆಯ ವಿಶ್ವಾಸದಿಂದ. ಹಿಂದೂಗಳಲ್ಲಿ ಈ ಭಾವನೆ ಬಾರದೆ ಇರುವುದಕ್ಕೆ ಅವರ ಜಾತಿ ಕಾರಣವಾಗಿದೆ. ಜಾತಿ ಇರುವವರೆಗೆ ಸಂಘಟನೆ ಸಾಧ್ಯವಿಲ್ಲ. ಸಂಘಟನೆಯಾಗುವವರೆಗೆ ಹಿಂದೂ ಕೈಸಾಗದವನಾಗಿ ಕುಗ್ಗಿಯೇ ನಡೆಯಬೇಕಾಗುವುದು. ಹಿಂದೂಗಳು ತಾವು ತುಂಬ ತಾಳ್ಮೆಯುಳ್ಳವರೆಂದು ಹೇಳಿಕೊಳ್ಳುತ್ತಾರೆ. ಇದು ನಿಜವಲ್ಲವೆಂದು ನಾನು ತಿಳಿಯುತ್ತೇನೆ. ಅನೇಕ ಪ್ರಸಂಗಗಲ್ಲಿ ಅವರು ತಾಳ್ಮೆಗೆಡಬಲ್ಲರು. ಕೆಲ ಪ್ರಸಂಗಗಳಲ್ಲಿ ಅವರು ತಾಳ್ಮೆ ತೋರಿದರೆ ಆಗ ವಿರೋಧಿಸುವ ಬಲ ಅವರಲ್ಲಿ ಇರುವುದಿಲ್ಲ. ಅಥವಾ ವಿರೋಧಿಸುವುದಾದರೂ ಏನೆಂದು ಉಪೇಕ್ಷೆಯಿರಬೇಕು. ಈ ಉಪೇಕ್ಷೆ ಹಿಂದೂಗಳ ಸ್ವಭಾವದಲ್ಲಿ ಒಂದಂಶವಾಗಿಹೋಗಿದೆ. ಎಷ್ಟರ ಮಟ್ಟಗೆ ಎಂದರೆ ಅಪಮಾನವಾಗಲಿ, ಅನ್ಯಾಯವೇ ಆಗಲಿ ಅದನ್ನು ಕೂಡ ಅವರು ತೆಪ್ಪಗೆ ನುಂಗಿಕೊಳ್ಳುತ್ತಾರೆ. ಹಿಂದೂಗಳು, ಮಾರಿಸ್ ಕವಿಯ ಕಾವ್ಯದ ಭಾವದಂತೆ. “ದೊಡ್ಡವರು ಚಿಕ್ಕವರನ್ನು ಕೆಳಗಟ್ಟುವರು. ಬಲಿಷ್ಠರು ಬಲಹೀನರನ್ನು ಸದೆಬಡಿಯುವರು, ಕ್ರೂರರಿಗೆ ನಿರ್ಭೀತಿ, ದಯಾವಂತರಿಗೆ ಧೈರ್ಯಹೀನತೆ, ಬುದ್ದಿವಂತರಿಗೆ ಇದೆಲ್ಲದರ ಉಪೇಕ್ಷೆ”. ಯಾರಿಗೆ ಏನಾದರೇನು, ನಮಗೇಕೆ ಅದರ ಗೋಜು ಎಂಬ ಉಪೇಕ್ಷಾ ಮನೋವೃತ್ತಿ ಒಂದು ಮಹಾರೋಗ, ಹಿಂದೂಗಳಿಗೆ ಈ ರೋಗ ಏಕೆ ಬಡಿದುಕೊಂಡಿತು? ಸಂಘಟನೆಗೂ ಸಹಕಾರಕ್ಕೂ ಬಾಧಕವಾಗಿ ನಿಂತ ಜಾತೀಯತೆಯೇ ಈ ರೋಗದ ಮೂಲ.

XII

ಸಾಮೂಹಿಕ ಸಂಪ್ರದಾಯ, ಅಧಿಕಾರ ಮತ್ತು ಹಿತಗಳನ್ನು ಮೀರಿ ತನ್ನ ಸ್ವಂತ ಅಭಿಪ್ರಾಯ ಮತ್ತು ನಂಬಿಕೆಗಳನ್ನು ಸ್ವತಂತ್ರವಾಗಿ ಒಬ್ಬ ವ್ಯಕ್ತಿ ಹೇಳತೊಡಗುವುದೇ ಎಲ್ಲಾ ಬಗೆಯ ಸುಧಾರಣೆಗಳ ಆರಂಭ. ಈ ಸುಧಾರಣೆ ಮುಂದುವರಿಯುವುದೋ ಇಲ್ಲವೋ ಎನ್ನುವುದು ಆ ಸಮೂಹ ಆತನಿಗೆ ಒದಗಿಸುವ ಅವಕಾಶವನ್ನು ಅವಲಂಬಿಸುತ್ತದೆ. ಸಮೂಹ ಅಥವಾ ಸಮಾಜ ತಾಳ್ಮೆಯಿಂದ ನ್ಯಾಯಬುದ್ಧಿಯಿಂದ ಇಂತಹ ವ್ಯಕ್ತಿಗಳನ್ನು ನೋಡಿಕೊಂಡರೆ ಆ ವ್ಯಕ್ತಿಗಳು ತಮ್ಮ ಅಭಿಪ್ರಾಯಗಳನ್ನು ಮುಂದುವರಿಸುತ್ತಾ ಸಾಗಿ, ಕೊನೆಗೆ ಅವರನ್ನೆಲ್ಲ ಮನವೊಲಿಸಿ ತಮ್ಮ ಹೊಸ ವಿಚಾರಗಳಿಗೆ ಒಪ್ಪಿಸುವುದೂ ಸಾಧ್ಯ. ಸಮೂಹಕ್ಕೆ (ಪುಟ 67)

ಬೇಡವಾದರೆ ಆ ವ್ಯಕ್ತಿಗಳನ್ನು ಹತ್ತಿಕ್ಕಬಹುದು. ಹಾಗಾದಾಗ ಸುಧಾರಣೆಯ ಪ್ರಯತ್ನ ಸತ್ತು ಹೋಗುತ್ತದೆ. ಜಾತಿಯ ಕೈಯಲ್ಲಿ ಬಹಿಷ್ಕಾರವೆಂಬುದೊಂದು ಬಲಿಷ್ಠವಾದ ಹಕ್ಕು ಇದೆ. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಜಾತಿಯ ನಿಯಮಗಳನ್ನು ಮೀರಿದವನಿಗೆ ಕೊಡುವ ತೀವ್ರತರವಾದ ಶಿಕ್ಷೆಯೆಂದರೆ ಈ ಬಹಿಷ್ಕಾರ. ಬಹಿಷ್ಕೃತ ವ್ಯಕ್ತಿ ತನ್ನ ಜಾತಿಯ ಯಾವನೊಂದಿಗೂ ಸಂಬಂಧವಿಟ್ಟುಕೊಳ್ಳುವಂತಿಲ್ಲ. ಹೀಗೆ ಎಲ್ಲರಿಗೂ ಬೇಡವಾಗಿ ಬದುಕುವುದೆಂದರೆ ಸತ್ತಂತೆಯೇ ಸರಿ. ಈ ಬಹಿಷ್ಕಾರದ ಭಯ ಬಲವಾಗಿರುವುದರಿಂದ ಯಾವ ಹಿಂದೂವಾದರೂ ಜಾತಿ ನಿಯಮಕ್ಕೆ ವಿರೋಧವಾಗಿ ತನ್ನ ಸ್ವಂತ ಅಭಿಪ್ರಾಯಗಳನ್ನು ಹೇಳುವ ಧೈರ್ಯ ಮಾಡಲಾರನು. ಸಮಾಜವನ್ನು ಬಿಟ್ಟು ಮನುಷ್ಯ ಬದುಕಲಾರ. ತಾನು ಹೇಳಿದಂತೆ ಅದು ಕೇಳದಿದ್ದರೆ, ಅದು ಹೇಳಿದಂತೆ ತಾನು ಕೇಳಬೇಕು. ಸಂಪೂರ್ಣವಾಗಿ ಅದಕ್ಕೆ ಶರಣಾಗುವ ಪ್ರಸಂಗ ಬಂದರೂ ಪರವಾಗಿಲ್ಲ. ವ್ಯಕ್ತಿಯ ಈ ದೌರ್ಬಲ್ಯದ ಲಾಭ ಪಡೆದುಕೊಳ್ಳಲು ಜಾತಿ ಯಾವಾಗಲೂ ಸಿದ್ಧವಾಗಿರುತ್ತದೆ. ಸುಧಾರಕನ ಜೀವನವನ್ನೊಂದು ನರಕವಾಗಿಸಬಲ್ಲ ಕುತಂತ್ರ ಜಾತಿಯಿಂದ ನಡೆಯಬಹುದು. ಕುತಂತ್ರ ಒಂದು ಅಪರಾಧವಾಗಿದ್ದ ಪಕ್ಷದಲ್ಲಿ ಧೈರ್ಯಶಾಲಿಯೊಬ್ಬನು ಜಾತಿಗೆ ವಿರೋಧವಾಗಿ ನಿಂತನೆಂದು ಅವನನ್ನು ಬಹಿಷ್ಕರಿಸುವ ಈ ದುಷ್ಟಕೃತ್ಯವನ್ನು ಕಾನೂನು ರೀತಿಯಲ್ಲಿ ಶಿಕ್ಷಾರ್ಹವೆಂದು ಏಕೆ ಪರಿಗಣಿಸಬಾರದೋ ನಾನರಿಯೆ. ಆದರೆ ಕಾನೂನು ಆಯಾ ಜಾತಿಗೆ ಅದರದರ ನಿಯಮಗಳ ಸ್ವಾತಂತ್ರ್ಯವಿತ್ತಿದೆ; ತಪ್ಪಿತಸ್ಥರಿಗೆ ಬಹಿಷ್ಕಾರ ಹಾಕುವ ಸ್ವಾತಂತ್ರ್ಯವನ್ನು ಪ್ರಶ್ನಿಸುವುದಿಲ್ಲ. ಸಂಪ್ರದಾಯಬದ್ಧ ಜನರ ಕೈಯಲ್ಲಿ ಜಾತಿ ಒಂದು ಬಲಿಷ್ಟ ಆಯುಧವಾಗಿದ್ದು, ಅದರಿಂದ ಸುಧಾರಕನನ್ನೂ ಸುಧಾರಣೆಗಳನ್ನೂ ಅದು ನಿರ್ಮೂಲನೆಗೊಳಿಸಬಲ್ಲದು.

XIII

ಜಾತಿಯಿಂದಾಗಿ ಹಿಂದೂಗಳ ನೈತಿಕತೆ ಶೋಚನೀಯ ಅವಸ್ಥೆಗೆ ಮುಟ್ಟಿದೆ. ಜಾತಿ ಸಾರ್ವಜನಿಕ ಭಾವನೆಯನ್ನು ನಾಶಗೊಳಿಸಿ, ಹೃದಯ ವೈಶಾಲ್ಯವನ್ನು ಹಾಳುಮಾಡಿದೆ; ಸಾರ್ವಜನಿಕ ಅಭಿಪ್ರಾಯಗಳಿಗೆ ಅವಕಾಶವಿಲ್ಲದಂತೆ ಮಾಡಿದೆ. ಹಿಂದೂವಿನ ಸಮಾಜ ಹಾಗೂ ಹೊಣೆಗಾರಿಕೆ ಅವನ ಜಾತಿಗೆ ಸೀಮಿತವಾದುದು. ಅವನ ನಿಷ್ಠೆ ಜಾತಿಗೆ ಪರಿಮಿತವಾಗಿದೆ. ಸದ್ಗುಣ ಹಾಗೂ ನೀತಿ ಎರಡೂ ಜಾತೀಯತೆಯ ಮುಷ್ಟಿಯಲ್ಲಿ ಸಿಕ್ಕಿಕೊಂಡಿದೆ. ಸಹಾನುಭೂತಿ ಯಾರಿಗೆ ಅವಶ್ಯಕವೋ ಅವನಿಗೆ ಅದು ಸಿಕ್ಕುತ್ತಿಲ್ಲ. ಶ್ಲಾಘ್ಯತೆ ದೊರೆಯಬೇಕಾದವರಿಗೆ ಅದು ದೊರೆಯುತ್ತಿಲ್ಲ. ದಾನಧರ್ಮ ಬೇಡುವವರಿದ್ದಾರೆ. ಅವರಿಗೆ ಕೊಡುವವರು ಇಲ್ಲ, ಸಂಕಷ್ಟಗಳನ್ನು ಕೇಳುವವರಿಲ್ಲ. ದಯೆದಾನ ಇಲ್ಲವೆಂದೇನೂ ಅಲ್ಲ. ಆದರೆ ಅದು ಜಾತಿಯನ್ನು ದಾಟಿ ಹೋಗಲಾರದು. ಸಹಾನುಭೂತಿ ತಮ್ಮ ಜಾತಿಯವರಿಗೆ ಮಾತ್ರ ಉಂಟು, ಇತರರಿಗೆ ಇಲ್ಲ. ಸದ್ಗುಣಿಯಾದ ಮಹಾಪುರುಷನು ನೇಕಾರನಾಗಿ ಬಂದರೆ ಹಿಂದೂವು ಅವನನ್ನು ಅನುಸರಿಸುವನೆ? ಆತನು ಮಹಾತ್ಮನೇ ಆಗಲಿ, ಅವನನ್ನು ಮುಂದಾಳೆಂದು ಒಪ್ಪಿಕೊಳ್ಳಬೇಕಾದರೆ ಅವನು ತಮ್ಮ ಜಾತಿಯವನೇ ಆಗಿರತಕ್ಕದ್ದು. ಮುಂದಾಳು ಬ್ರಾಹ್ಮಣನಾಗಿದ್ದರೆ ಮಾತ್ರ ಬ್ರಾಹ್ಮಣರು ಅವನ ಅನುಯಾಯಿಯಾಗುತ್ತಾರೆ. ಕ್ಷತ್ರಿಯರು ಮುಂದಾಳಾದರೆ ಮಾತ್ರ ಕ್ಷತ್ರಿಯರು ಅವನ ಅನುಯಾಯಿಗಳಾಗುತ್ತಾರೆ. ಇತರ ಜಾತಿಗಳಿಗೂ ಈ ಮಾತು ಹೀಗೆಯೇ ಅನ್ವಯಿಸುತ್ತದೆ. ಒಬ್ಬ ಮನುಷ್ಯನ ಜಾತಿ ಯಾವುದೇ ಇರಲಿ ಅವನ ಯೋಗ್ಯತೆಯನ್ನು ಪರಿಗಣಿಸಬೇಕೆಂಬ ಬುದ್ಧಿ ಅಥವಾ ಹಾಗೆ ಮಾಡುವ ಧೈರ್ಯ ಹಿಂದೂವಿಗೆ ಇಲ್ಲ. ತಮ್ಮ ಜಾತಿಯವನಾದರೆ (ಪುಟ 68)

ಮಾತ್ರ ಅವನನ್ನು ಪರಿಗಣಿಸುತ್ತಾನೆ. ಅನಾಗರಿಕ ಜನರ ಗುಂಪಿನ ನೀತಿ ಎಷ್ಟು ಸಂಕುಚಿತವೋ ಅಷ್ಟು ಸಂಕುಚಿತವಾಗಿದೆ ಜಾತಿಯ ನೀತಿ. ಸರಿಯಿರಲಿ, ತಪ್ಪಿರಲಿ ತನ್ನ ಜಾತಿ ಮುಖ್ಯ. ಸಜ್ಜನನಿರಲಿ, ದುರ್ಜನನಿರಲಿ ತಮ್ಮ ಜಾತಿಯವನೆನ್ನುವುದೇ ಮುಖ್ಯ. ಹೀಗೆ ತಮ್ಮ ತಮ್ಮ ಜಾತಿಯ ಹಿತವನ್ನೇ ನೋಡಿಕೊಳ್ಳುತ್ತ ಹಿಂದೂಗಳು ದೇಶಕ್ಕೆ ದ್ರೋಹ ಬಗೆದಿಲ್ಲವೆ?

XIV

ಜಾತಿಯ ದುಷ್ಪರಿಣಾಮಗಳನ್ನು ಕುರಿತ ಈ ಸುದೀರ್ಘ ವಿವರಣೆಯನ್ನು ಕೇಳಿ ನಿಮ್ಮಲ್ಲಿ ಕೆಲವರಿಗೆ ಬೇಸರವಾಗಿದ್ದರೆ ಸೋಜಿಗವಲ್ಲ. ಇದರಲ್ಲಿ ಹೊಸದೇನೂ ಇಲ್ಲ. ಆದುದರಿಂದ ಈ ಸಮಸ್ಯೆಯ ರಚನಾತ್ಮಕ ಪಾರ್ಶ್ವದೆಡೆಗೆ ಈಗ ಹೊರಳುತ್ತೇನೆ. ಜಾತಿ ಬೇಡವೆಂದರೆ ನೀವು ಕಲ್ಪಿಸುವ ಆದರ್ಶ ಸಮಾಜ ಯಾವುದು? ಈ ಪ್ರಶ್ನೆ ಅನಿವಾರ್ಯವಾಗುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ ಈ ಹೊಸ ಸಮಾಜವು ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವಗಳ ಆಧಾರದ ಮೇಲೆ ನಿರ್ಮಾಣವಾಗಬೇಕು. ಯಾಕೆ ಬೇಡ? ಭ್ರಾತೃತ್ವಕ್ಕೆ ಯಾಕೆ ಆಕ್ಷೇಪಗಳಿರಬೇಕು? ನನಗೆ ಒಂದೂ ಹೊಳೆಯುವುದಿಲ್ಲ. ಆದರ್ಶ ಸಮಾಜದಲ್ಲಿ ಚಲನಶೀಲ ಸ್ವಾತಂತ್ರ್ಯ, ಅಂದರೆ ಬದಲಾಗುವವರಿಗೆ ಮುಕ್ತ ಅವಕಾಶಗಳು, ಇರಬೇಕು. ಒಂದು ಭಾಗದಲ್ಲುಂಟಾದ ಪರಿವರ್ತನೆಯನ್ನು ಇತರ ಭಾಗಗಳಿಗೆ ಸಾಗಿಸುವುದಕ್ಕೆ ಹೇರಳವಾದ ಮಾರ್ಗಗಳಿರಬೇಕು. ಆದರ್ಶ ಸಮಾಜದಲ್ಲಿ ಪರಸ್ಪರ ತಿಳಿದುಕೊಂಡು ಪಾಲ್ಗೊಳ್ಳುವಂತಹ ಹಿತಾಸಕ್ತಿ ಅನೇಕವಾಗಿರಬೇಕು. ಸಂಪರ್ಕಕ್ಕೆ ಬಹುವಿಧವಾದ ಹಾಗೂ ಸಂಪೂರ್ಣ ಮುಕ್ತವಾದ ಸಾಧನಗಳೂ, ಸದವಕಾಶಗಳೂ ಇರಬೇಕು. ಬೇರೆ ಮಾತುಗಳಲ್ಲಿ ಹೇಳುವುದಾದರೆ ಸಾಮಾಜಿಕ ಒಳಸೇರ್ಪಡೆ ಇರಬೇಕು. ಇದೇ ಭ್ರಾತೃತ್ವ, ಪ್ರಜಾಪ್ರಭುತ್ವದ ಇನ್ನೊಂದು ಹೆಸರೇ ಇದು. ಪ್ರಜಾಪ್ರಭುತ್ವ ಒಂದು ಬಗೆಯ ಆಡಳಿತ ವಿಧಾನ ಮಾತ್ರವಲ್ಲ. ಅದೊಂದು ಸಾಮಾಜಿಕ ಜೀವನಪದ್ಧತಿ; ಸಂಯುಕ್ತ ಸಂಪರ್ಕವುಳ್ಳ ಅನುಭವ. ದೇಶಬಾಂಧವರಲ್ಲಿ ಪರಸ್ಪರರನ್ನು ಗೌರವದಿಂದ ಕಾಣುವ ಮನೋವೃತ್ತಿ ಪ್ರಜಾಪ್ರಭುತ್ವದ ಮೂಲ ಲಕ್ಷಣವಾಗಿದೆ. ಸ್ವಾತಂತ್ರ್ಯಕ್ಕೇನಾದರೂ ಆಕ್ಷೇಪಣೆಗಳಿವೆಯೇ? ಜೀವಕ್ಕೆ ಮತ್ತು ಅವಯವಗಳಿಗೆ ಇರುವ ಹಕ್ಕುಗಳಿಗೆ, ನಿರ್ಬಂಧಗಳಿಲ್ಲದೆ ಸಂಚರಿಸುವ ಹಕ್ಕುಗಳಿಗೆ ಯಾವ ಆಕ್ಷೇಪಣೆಯೂ ಇಲ್ಲ. ಉದರ ನಿರ್ವಹಣೆಗಾಗಿ ಅವಶ್ಯಕವಾದ ಆಸ್ತಿಯ ಹಕ್ಕು, ಸಾಧನ ಸಾಮಾಗ್ರಿಗಳ ಹಕ್ಕು, ಆರೋಗ್ಯ ರಕ್ಷಣೆಯ ಹಕ್ಕು, ಈ ದೃಷ್ಟಿಯಿಂದಲೂ ಆಕ್ಷೇಪಣೆಯಿಲ್ಲ. ಹಾಗಾದರೆ ಒಬ್ಬ ವ್ಯಕ್ತಿಯ ಶಕ್ತಿಗಳ ಲಾಭವನ್ನು ಸಮರ್ಪಕವಾಗಿ ಮತ್ತು ದಕ್ಷ ರೀತಿಯಲ್ಲಿ ಯೋಜಿಸಿ ನಡೆದುಕೊಳ್ಳುವುದಕ್ಕೆ ಸ್ವಾತಂತ್ರ್ಯವೇಕಿರಬಾರದು? ಜಾತಿಯನ್ನು ಬೆಂಬಲಿಸುವ ಜನ ಈ ಒಂದು ಸ್ವಾತಂತ್ರ್ಯವನ್ನು ಒಪ್ಪಲಾರದು; ಯಾಕೆಂದರೆ ಅದರಿಂದಾಗಿ ಜನರು ತಮಗೆ ಬೇಕಾದ ವೃತ್ತಿಯನ್ನು ಆಯ್ದುಕೊಳ್ಳಲು ಸ್ವಾತಂತ್ರ್ಯವಿತ್ತಂತಾಗುತ್ತದೆ. ಆದರೆ ಈ ಸ್ವಾತಂತ್ರ್ಯವನ್ನು ಅಲ್ಲಗೆಳೆಯುವುದೆಂದರೆ ನಿರಂತರ ಗುಲಾಮಗಿರಿಯನ್ನು ಒಪ್ಪಿಕೊಂಡಂತೆ. ಗುಲಾಮಗಿರಿಯೆಂದರೆ ಕಾನೂನಿನ ಕ್ರಮದಿಂದ ಒಬ್ಬನನ್ನೋ, ಹಲವರನ್ನೋ ಅಧೀನದಲ್ಲಿಟ್ಟುಕೊಳ್ಳವುದೆಂದಷ್ಟೆ ಅರ್ಥವಲ್ಲ. ತಮ್ಮ ನಡವಳಿಕೆಗೆ ನಿರ್ದಿಷ್ಟವಾದ ಉದ್ದೇಶಗಳನ್ನು ಹೆರವರು ತಮ್ಮ ಮೇಲೆ ಹೇರುವಂತಹ ಸ್ಥಿತಿ ಕೆಲವರಿಗೆ ಇದ್ದರೆ ಆ ಸಮಾಜದ ಸ್ಥಿತಿಯೂ ಗುಲಾಮಗಿರಿಯೇ ಆಗುತ್ತದೆ. ಕಾನೂನಿನ ಅರ್ಥದಲ್ಲಿ ಗುಲಾಮಗಿರಿ ಇಲ್ಲದಂತಹ ಪ್ರದೇಶದಲ್ಲಿ ಕೂಡ ಈ ಸ್ಥಿತಿ ಇರುತ್ತದೆ. ಜಾತಿಪದ್ಧತಿ ಮೇರೆಗೆ ಕೆಲವರು ತಮ್ಮ ಇಷ್ಟಕ್ಕೆ ವಿರುದ್ಧವಾದ ವೃತ್ತಿಗಳನ್ನು ಕೈಗೊಳ್ಳಲೇಬೇಕಾಗುತ್ತದೆ. ಅವರ (ಪುಟ 69)

ಮೇಲೆ ಆ ವೃತ್ತಿಗಳನ್ನು ಹೇರಲಾಗುತ್ತದೆ. ಇನ್ನು ಸಮಾನತೆಗೆ ಆಕ್ಷೇಪಣೆಗಳಿವೆಯೆ? ಫ್ರೆಂಚ್ ಕ್ರಾಂತಿಯ ಧ್ಯೇಯವಾಕ್ಯದಲ್ಲಿ ಈ ಪದವೇ ವಿವಾದಾಸ್ಪದವಾಗಿದೆ. ಸಮಾನತೆಯನ್ನು ಆಕ್ಷೇಪಿಸುವುದು ಸರಿಯಾಗಿರಬಹುದು. ಎಲ್ಲರೂ ಸಮಾನರಲ್ಲ ಎಂಬುದನ್ನು ನಾನು ಒಪ್ಪಬೇಕಾದೀತು. ಸಮಾನತೆ ಕೇವಲ ಒಂದು ಭ್ರಾಂತಿಯಾಗಿರಬಹುದು. ಆದರೆ ಆದೇನಿದ್ದರೂ ವ್ಯವಹಾರದ ದೃಷ್ಟಿಯಿಂದ ಸಮಾನತೆಯನ್ನು ಸ್ವೀಕರಿಸಲೇಬೇಕಾಗುತ್ತದೆ. ಮನುಷ್ಯನ ಶಕ್ತಿ ಅವಲಂಬಿಸುವುದು ಈ ಕೆಳಗಿನ ಮೂರನ್ನು : ೧) ದೈಹಿಕ ಅನುವಂಶೀಯತೆ, ೨) ತಾಯ್ತಂದೆಯರ ಆರೈಕೆ, ಶಿಕ್ಷಣ, ವೈಜ್ಞಾನಿಕ ಸಂಪತ್ತಿನ ಲಾಭ ಇತ್ಯಾದಿಯಾಗಿ ಅನಾಗರಿಕನಿಗಿಂತ ಹೆಚ್ಚು ಚೆನ್ನಾಗಿ ಬದುಕಲು ಸಹಾಯಕವಾದ ಎಲ್ಲ ಸಾಧನ ಸಂಪತ್ತುಗಳ ರೂಪವಾಗಿ ದೊರೆತ ಸಾಮಾಜಿಕ ಬಳುವಳಿ. ಮತ್ತು ಕೊನೆಯದಾಗಿ ೩) ಆ ವ್ಯಕ್ತಿಯ ಸ್ವಂತ ಪ್ರಯತ್ನಗಳು. ಈ ಮೂರು ವಿಷಯಗಳಲ್ಲಿ ಮನುಷ್ಯರು ಸಮಾನರಾಗಿರುವುದಿಲ್ಲ. ಆದರೆ ಈಗಿರುವ ಪ್ರಶ್ನೆಯೆಂದರೆ ಮನುಷ್ಯರೆಲ್ಲ ಅಸಮಾನರಾಗಿರುವುದರಿಂದ ಅವರನ್ನು ಅಸಮರೆಂದೇ ನಡೆಸಿಕೊಳ್ಳಬೇಕೆ? ವೈಯಕ್ತಿಕ ದೃಷ್ಟಿಯಿಂದ ವಿಚಾರಿಸಿದರೆ, ಪ್ರತಿಯೊಬ್ಬ ವ್ಯಕ್ತಿಯ ಪ್ರಯತ್ನವೂ ಬೇರೆಯಾಗಿರುವುದರಿಂದ ಎಲ್ಲರನ್ನೂ ಒಂದೇ ಸಮ ಎನ್ನಲಾಗದು. ವ್ಯಕ್ತಿಯ ಅಂತರ್‌ಶಕ್ತಿಗಳ ಸಂಪೂರ್ಣ ವಿಕಾಸಕ್ಕೆ ಸಂಪೂರ್ಣ ಪ್ರೋತ್ಸಾಹವೊದಗಿಸುವುದು ಅಪೇಕ್ಷಣೀಯ. ಆದರೆ ಮೊದಲೆರಡರ ದೃಷ್ಟಿಯಿಂದ ಮನುಷ್ಯರನ್ನು ಅಸಮರೆಂದು ಪರಿಗಣಿಸಿದರೆ ಆಗುವ ಪರಿಣಾಮವೇನು? ಜನ್ಮ, ಶಿಕ್ಷಣ, ಮನೆತನದ ಹೆಸರು, ವ್ಯವಹಾರ, ಉದ್ಯೋಗಗಳ ಸಂಬಂಧ. ಪೂವಾರ್ಜಿತ ಶ್ರೀಮಂತಿಕೆ ಇವುಗಳನ್ನೆಲ್ಲಾ ಪಡೆದವರು ಸಹಜವಾಗಿ ಮೇಲ್ಗೈಯಾಗುತ್ತಾರೆ. ಆದರೆ ಇಂತಹ ಸ್ಥಿತಿಯಲ್ಲಿ ಆಯ್ಕೆಯು ಅರ್ಹತೆಯ ಆಯ್ಕೆಯಾಗುವುದಿಲ್ಲ; ಅದು ಅನುಕೂಲತೆಯುಳ್ಳವರ ಆಯ್ಕೆಯಾಗುತ್ತದೆ. ಆದುದರಿಂದ ಇಲ್ಲಿ ಸಾಧ್ಯವಿದ್ದ ಮಟ್ಟಿಗೆ ಎಲ್ಲರೂ ಸಮಾನರೆಂದೇ ಪರಿಗಣಿಸಬೇಕಾಗುತ್ತದೆ. ಸಮಾಜ ತನ್ನ ಸದಸ್ಯರಿಂದ ಅತ್ಯಧಿಕ ಲಾಭ ಪಡೆಯಬೇಕೆಂದಿದ್ದರೆ ಸದಸ್ಯರೆಲ್ಲರನ್ನೂ ಸಮಾನವಾಗಿ ಪರಿಗಣಿಸುವುದು ಅಗತ್ಯವಾಗುತ್ತದೆ. ಸಮಾನತೆಯು ಅನಿವಾರ್ಯವೆಂಬುದಕ್ಕೆ ಇನ್ನೊಂದು ಕಾರಣವೂ ಇದೆ. ಮುತ್ಸದ್ದಿಯೊಬ್ಬ ಏಕಕಾಲದಲ್ಲಿ ಹಲವರ ಬಗ್ಗೆ ಕಾಳಜಿ ವಹಿಸಬೇಕಿರುತ್ತದೆ. ಪ್ರತಿಯೊಬ್ಬನ ವಿಶಿಷ್ಟತೆಯನ್ನು ನ್ಯಾಯೋಚಿತವಾಗಿ ನೋಡಿ ಅಗತ್ಯಕ್ಕೆ ತಕ್ಕಂತೆ ಅಥವಾ ಅರ್ಹತೆಗೆ ತಕ್ಕಂತೆ ವರ್ಗೀಕರಣ ಮಾಡಲು ಆತನಿಗೆ ಸಮಯವಾಗಲೀ ತಿಳುವಳಿಕೆಯಾಗಲೀ ಇರುವುದಿಲ್ಲ. ಎಷ್ಟೇ ಅಗತ್ಯವಿದ್ದರೂ ಈ ರೀತಿ ಮನುಷ್ಯರನ್ನು ವಿಂಗಡಿಸಿ ವರ್ಗಿಕರಿಸುವುದು ಅಸಾಧ್ಯವಾದುದು. ಆದುದರಿಂದ ರಾಜಕೀಯ ಮುತ್ಸದ್ದಿ ಯಾವುದೋ ಒಂದು ಸ್ಕೂಲ ನಿಯಮವನ್ನು ಅನುಸರಿಸಬೇಕು. ಆ ಸ್ಥೂಲ ನಿಯಮವೆಂದರೆ ಇದೇ, ಎಲ್ಲರನ್ನೂ ಸಮಾನರೆಂದು ಪರಿಗಣಿಸುವುದು. ಹೀಗೆ ಪರಿಗಣಿಸುವುದು ಅವರೆಲ್ಲರೂ ಒಂದೇ ಬಗೆಯಾಗಿರುವರೆಂಬ ಕಾರಣಕ್ಕಾಗಿ ಅಲ್ಲ. ಅವರೆಲ್ಲರ ವಿಂಗಡಣೆ ಮತ್ತು ವರ್ಗೀಕರಣ ಅಸಾಧ್ಯವೆಂಬ ಕಾರಣಕ್ಕಾಗಿ. ಸಮಾನತೆ ತಾತ್ವಿಕವಾಗಿ ತಪ್ಪಾಗಿದ್ದರೂ ವ್ಯಾವಹಾರಿಕವಾಗಿ ಅವಶ್ಯಕವಾಗುತ್ತದೆ. ರಾಜಕಾರಣಿಯು ರಾಜಕೀಯದಲ್ಲಿ ಮುಂದುವರಿಯುವುದು ಇದೊಂದೇ ಹಾದಿಯಿಂದ. ತೀಕ್ಷ್ಣ ಪ್ರಾಯೋಗಿಕ ಪರೀಕ್ಷೆಯೂ ಅಗತ್ಯವಿರುವ ಅತ್ಯಂತ ಪ್ರಾಯೋಗಿಕವಾದ ಮಾರ್ಗ ಇದು.

XV

ಇನ್ನೊಂದು ಸುಧಾರಕರ ಗುಂಪಿದೆ, ಅವರ ಆದರ್ಶವೇ ಬೇರೆ. ತಾವು ಆರ್ಯ ಸಮಾಜದವರೆಂದು (ಪುಟ 70)

ಹೇಳಿಕೊಳ್ಳುವ ಅವರ ಆದರ್ಶವೆಂದರೆ ಸಮಾಜಕ್ಕೆ ಚಾತುರ್ವರ್ಣ್ಯವೇ ಚೌಕಟ್ಟು; ಅಂದರೆ ಈಗ ಭಾರತದಲ್ಲಿರುವ ನಾಲ್ಕು ಸಾವಿರ ಜಾತಿಗಳಿಗೆ ಬದಲಾಗಿ ನಾಲ್ಕೇ ವರ್ಗಗಳಲ್ಲಿ ಸಮಾಜವನ್ನು ವಿಭಾಗಿಸುವುದು ಅವರ ಯೋಜನೆ. ತಮ್ಮ ಈ ಯೋಜನೆ ಹೆಚ್ಚು ಆಕರ್ಷಕವಾಗಿ ತೋರಲೆಂದು ಹಾಗೂ ಆಕ್ಷೇಪಣೆಗಳಿಗೆ ಅವಕಾಶವಿರಬಾರದೆಂದು ಅವರೇನು ಹೇಳುತ್ತಾರೆಂದರೆ ಈ ಚಾತುರ್ವರ್ಣ್ಯದ ಆಧಾರ ಜನ್ಮವಲ್ಲ, ಗುಣ (ಯೋಗ್ಯತೆ). ಮೊದಲೇ ಹೇಳಿಬಿಡುತ್ತೇನೆ ಈ ಆದರ್ಶವನ್ನು ನಾನು ಒಪ್ಪಲಾರೆನೆಂದು. ಮೊದಲನೆಯದಾಗಿ ಆರ್ಯ ಸಮಾಜದವರ ಈ ಚಾತುರ್ವರ್ಣ್ಯದ ಮೇರೆಗೆ ಹಿಂದೂ ಸಮಾಜದಲ್ಲಿ ಯೋಗ್ಯತೆಗೆ ಅನುಗುಣವಾಗಿಯೇ ವ್ಯಕ್ತಿಯ ಸ್ಥಾನ ನಿಗದಿಯಾವುದಿದ್ದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ಹಣೆಪಟ್ಟಿಗಳಿಂದ ಮನುಷ್ಯರನ್ನು ಗುರುತಿಸುವುದೇಕೆಂದು ನನಗೆ ತಿಳಿಯದು. ವಿದ್ವಾಂಸನನ್ನು ಬ್ರಾಹ್ಮಣನೆಂದು ಕರೆಯದೆ ಗುರುತಿಸಬಹುದು. ಯೋಧನನ್ನು ಕ್ಷತ್ರಿಯನೆಂದು ನಿರ್ದೇಶಿಸದೆ ಕೂಡ ಗೌರವಿಸಬಹುದು. ಯೂರೋಪಿಯನ್ ಸಮಾಜದಲ್ಲಿ ಇಂತಹ ಖಾಯಂ ವರ್ಗನಾಮವಿಲ್ಲದೆ ವಿದ್ವಾಂಸರೂ, ಯೋಧರೂ ಗೌರವಿಸಲ್ಪಡುತ್ತಿರುವಾಗ ಹಿಂದೂ ಸಮಾಜದಲ್ಲಿ ಈ ಹಣೆ ಪಟ್ಟಿಯೇಕೆ ಬಂತು? ಆರ್ಯ ಸಮಾಜದವರು ಈ ಪ್ರಶ್ನೆಯನ್ನು ವಿಚಾರಿಸಲು ಹೋಗಿಲ್ಲ. ಬ್ರಾಹ್ಮಣ ಕ್ಷತ್ರಿಯಾದಿ ಹೆಸರುಗಳನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಇನ್ನೊಂದು ಆಕ್ಷೇಪಣೆಯಿದೆ. ಸುಧಾರಣೆಯೆಂದಮೇಲೆ ಯಾವುದೇ ಇರಲಿ, ವಸ್ತುವಿಷಯಗಳ ಹಾಗೂ ಜನರ ಬಗೆಗೆ ನಾವು ತಾಳುವ ಭಾವನೆ ಮತ್ತು ಮನೋವೃತ್ತಿಯಲ್ಲಿ ವ್ಯತ್ಯಾಸವನ್ನುಂಟುಮಾಡುತ್ತದೆ. ಕೆಲಕೆಲವು ಹೆಸರುಗಳು ತಮ್ಮ ಸುತ್ತಲೂ ನಿರ್ದಿಷ್ಟವಾದ ಕಲ್ಪನೆ ವಿಚಾರಗಳನ್ನು, ವಿಶಿಷ್ಟ ಭಾವನೆಗಳನ್ನು ಕಟ್ಟಿಕೊಂಡು ಬಂದಿವೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ಈ ಹೆಸರುಗಳು ಪ್ರತಿಯೊಬ್ಬ ಹಿಂದೂವಿನ ಮನಸ್ಸಿನಲ್ಲಿ ನಿರ್ದಿಷ್ಟವಾದ ಹಾಗೂ ಸ್ಥಿರವಾದ ಚಿತ್ರವನ್ನು ನಿರ್ಮಿಸಿಕೊಟ್ಟಿದೆ. ಜನ್ಮಸಿದ್ಧವಾಗಿ ಒಂದು ಮೇಲು ಇನ್ನೊಂದು ಅದಕ್ಕಿಂತ ಕೆಳಗೆ, ಮತ್ತೊಂದು ಇನ್ನೂ ಕೆಳಗೆ, ಹೀಗೆ ಒಂದು ತಾರತಮ್ಯದ ಶ್ರೇಣೀಕರಣದ ಮನೋಭಾವವನ್ನು ನೆಲೆಗೊಳಿಸಿದೆ. ಈ ಹೆಸರುಗಳನ್ನು ಮುಂದುವರಿಸಿದರೆ ಈ ಮನೋಭಾವವನ್ನು ಮುಂದುವರಿಸಿದಂತೆಯೆ ಸರಿ. ಈ ಮೇಲು-ಕೀಳಿನ ಮನೋಭಾವವನ್ನು ಹಿಂದೂಗಳ ಮನಸ್ಸಿನಿಂದ ಕಿತ್ತು ಹಾಕಬೇಕು. ಹೊಸ ಮನೋವೃತ್ತಿಯನ್ನು ಉಂಟುಮಾಡಬೇಕಾದರೆ ಹೊಸ ಹೆಸರುಗಳೇ ಬೇಕು. ಬ್ರಾಹ್ಮಣಾದಿಯಾಗಿ ಹೆಸರುಗಳುಳ್ಳ ಚಾತುರ್ವರ್ಣ್ಯ ಒಂದು ಮೋಸದ ಬಲೆ.

XVI

ಹಳೆಯ ಹೆಸರಿನ ಪಟ್ಟಿಯನ್ನೊಳಗೊಂಡ ಈ ಚಾತುರ್ವರ್ಣ್ಯ ತೀರ ಪ್ರತಿಗಾಮಿಯಾಗಿದೆ. ಈ ಹೆಸರು ಕೇಳಿದರೆ ನನ್ನ ರಕ್ತ ಕುದಿಯುತ್ತದೆ. ಕಾರಣ ನಾನು ಇದನ್ನು ಮನಃಪೂರ್ವಕವಾಗಿ ವಿರೋಧಿಸುತ್ತೇನೆ. ನನ್ನ ವಿರೋಧ ಕೇವಲ ಭಾವನಾತ್ಮಕವಾಗಿಲ್ಲ. ಅದಕ್ಕೆ ಬಲವಾದ ಕಾರಣಗಳಿವೆ. ಸೂಕ್ಷ್ಮವಾಗಿ ಪರಿಶೀಲಿಸಿ ನೋಡಿದಾಗ ಸಾಮಾಜಿಕ ಸಂಘಟನೆಯ ದೃಷ್ಟಿಯಿಂದ ಚಾತುರ್ವರ್ಣ್ಯ ಅವ್ಯವಹಾರ್ಯವೂ, ಹಾನಿಕರವೂ ಹಾಗೂ ವ್ಯರ್ಥವೂ ಎಂದು ನನಗೆ ಮನವರಿಕೆಯಾಗಿದೆ. ವ್ಯವಹಾರ ದೃಷ್ಟಿಯಿಂದ ಚಾತುರ್ವರ್ಣ್ಯ ಪದ್ಧತಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಅದರ ಪ್ರತಿಪಾದಕರು ಯೋಚಿಸಿಲ್ಲ. ವರ್ಣದ ತತ್ವ ಬೇರೆ, ಜಾತಿಯ ತತ್ವ ಬೇರೆ. ಅವೆರಡು ಮೂಲತಃ ಬೇರೆಬೇರೆಯಾಗಿರುವುದೊಂದೇ ಅಲ್ಲದೆ ಪರಸ್ಪರ ವಿರುದ್ಧವೂ ಆಗಿವೆ. ವರ್ಣವು ಯೋಗ್ಯತೆಯಿಂದ ನಿರ್ಣಯಿಸಲ್ಪಡುತ್ತದೆ. ಕೆಲವು ಜನರು ಯೋಗ್ಯತೆಯಿಲ್ಲದಿದ್ದರೂ (ಪುಟ 71) 

ತಮ್ಮ ಜನ್ಮಬಲದಿಂದ ಮೇಲುಜಾತಿಗೆ ಸೇರಿದವರಾಗಿದ್ದಾರೆ. ಅಂದರೆ ಸಮಾಜದಲ್ಲಿ ಅವರಿಗೆ ಮೇಲಿನ ಸ್ಥಾನಮಾನಗಳಿವೆ. ಇನ್ನು ಕೆಲವರು ಯೋಗ್ಯತೆ ಹೆಚ್ಚಿದ್ದರೂ ಕೆಳಜಾತಿಯಲ್ಲಿ ಹುಟ್ಟಿದವರಾದ್ದರಿಂದ ಸಮಾಜದಲ್ಲಿ ಕೆಳಗಿನ ಸ್ಥಾನದಲ್ಲಿದ್ದಾರೆ. ಹೀಗಿರುವಾಗ ಯೋಗ್ಯತೆಯ ಮಾನದಂಡದಿಂದ ವರ್ಗ ವಿಭಾಗ ಮಾಡುವುದಕ್ಕೆ ಹೊರಟರೆ ಮೇಲಿನವನ್ನು ಕೆಳಗೆ ಇಳಿಸಲು ಅಥವಾ ಕೆಳಗಿನವನ್ನು ಮೇಲೇರಿಸಲು ನಿಮಗೆ ಹೇಗೆ ಸಾಧ್ಯವಾಗುತ್ತದೆ? ವರ್ಣ ಪದ್ಧತಿಯನ್ನು ಜಾರಿಮಾಡಬೇಕೆಂದರೆ ಮೊದಲು ಜಾತಿಪದ್ಧತಿಯನ್ನು ನಾಶಮಾಡಬೇಕು. ಜನ್ಮದಿಂದ ಸಿದ್ಧವಾಗುವ ನಾಲ್ಕು ಸಾವಿರ ಜಾತಿಗಳನ್ನು ಕರಗಿಸಿ, ಯೋಗ್ಯತಾನುಸಾರವಾಗಿ ಸ್ಥಾನವೀಯುವ ಚಾತುರ್ವರ್ಣ್ಯವನ್ನು ನೀವು ಹೇಗೆ ನಿರ್ಮಿಸುವಿರಿ? ಇದು ಮೊದಲನೆಯ ಸಮಸ್ಯೆಯಾಯಿತು.

ಇನ್ನೂ ಒಂದು ಸಮಸ್ಯೆ ಇದೆ. ಜನರನ್ನು ನಾಲ್ಕು ವರ್ಗಗಳಾಗಿ ವಿಭಾಗಿಸಬಹುದು ಎಂದು ಚಾತುರ್ವರ್ಣ್ಯ ಪೂರ್ವಗ್ರಹೀತವನ್ನು ಇಟ್ಟುಕೊಂಡಿದೆ. ಇದು ಸಾಧ್ಯವೇ? ಈ ವಿಷಯದಲ್ಲಿ ಅದು ಪ್ಲೇಟೋನಿಕ್ ಆದರ್ಶದಂತೆಯೇ ಇದೆ. ಪ್ಲೇಟೊ ಮಹಾಶಯನ ದೃಷ್ಟಿಯಲ್ಲಿ ಮನುಷ್ಯರು ಸ್ವಾಭಾವಿಕವಾಗಿ ಮೂರು ವರ್ಗಗಳು. ಕೆಲವು ಜನರಲ್ಲಿ ಹಸಿವೆ, ಬಯಕೆಗಳೇ ಪ್ರಧಾನವಾಗಿರುತ್ತವೆ. ಇವರನ್ನು ಶ್ರಮಿಕರು ಹಾಗೂ ವ್ಯಾಪಾರ ವರ್ಗಕ್ಕೆ ಅವನು ಸೇರಿಸಿದನು. ಇನ್ನು ಕೆಲವರು ಹಸಿವು, ಬಯಕೆಗಳಿಗಿಂತ ಹೆಚ್ಚಾಗಿ ಧೈರ್ಯಸ್ವಭಾವ ಪ್ರಧಾನರಾಗಿರುತ್ತಾರೆ. ಇವರನ್ನು ಯುದ್ಧ ಹಾಗೂ ಆಂತರಿಕ ಕ್ರಾಂತಿ ಹಾಗೂ ರಕ್ಷಣೆಗೆ ಮೀಸಲಾದ ವರ್ಗಕ್ಕೆ ಅವನು ಸೇರಿಸಿದನು. ಉಳಿದವರು ಸರ್ವ ವಸ್ತುವಿಷಯಗಳ ಒಳಗಿರುವ ತತ್ವವಿಚಾರ ಸಮರ್ಥರು. ಪ್ಲೇಟೊ ಇವರನ್ನು ಜನತೆಗೆ ವಿಧಿನಿಷೇಧಗಳನ್ನು ಒದಗಿಸುವವರ ವರ್ಗಕ್ಕೆ ಸೇರಿಸಿದನು. ಪ್ಲೇಟೊನ ರಿಪಬ್ಲಿಕ್ ಯಾವ ಟೀಕೆಗೆ ಒಳಗಾಗಿದೆಯೋ ಅದೇ ಟೀಕೆಗೆ ಚಾತುರ್ವರ್ಣ್ಯವೂ ಈಡಾಗುತ್ತದೆ. ವ್ಯಕ್ತಿಗಳನ್ನು ಹೆಡೆಮುರಿ ಕಟ್ಟಿದಂತೆ ಮೂರು ವರ್ಗಗಳಲ್ಲಿ ಸೇರಿಸಿಬಿಡುವುದೆಂದರೇನು? ಮನುಷ್ಯನ ಶಕ್ತಿಗಳ ಪರಿಜ್ಞಾನವಿದ್ದವನು ಹೀಗೆ ಮಾಡಲಾರನು. ಪ್ರತಿಯೊಬ್ಬ ವ್ಯಕ್ತಿ ವಿಶಿಷ್ಟವಾಗಿರುತ್ತಾನೆ. ಇತರರಂತೆ ಅವನನ್ನು ಅಳೆಯಲಾಗದು. ಒಬ್ಬೊಬ್ಬ ವ್ಯಕ್ತಿಯೂ ಒಂದು ಬೇರೆ ವರ್ಗವೇ ಆಗಿರುತ್ತಾನೆ. ಇದು ಪ್ಲೇಟೊಗೆ ತಿಳಿದಿರಲಿಲ್ಲ. ಪ್ಲೇಟೊ ಮಾಡಿದ ವಿಭಾಗ ಅವೈಜ್ಞಾನಿಕವಾಗಿದೆ. ಪ್ಲೇಟೊನ ರಿಪಬ್ಲಿಕ್‌ದಂತೆ ಚಾತುರ್ವರ್ಣ್ಯವೂ ಆಯಶಸ್ವಿಯಾಗುತ್ತದೆ. ಮನುಷ್ಯರನ್ನು ನಾಲ್ಕು ವರ್ಗಗಳಲ್ಲಿ ನಿರ್ದಿಷ್ಟವಾಗಿ ವಿಭಾಗಿಸುವುದು ಸಾಧ್ಯವಿಲ್ಲ. ಪೂರ್ವದಲ್ಲಿ ಮಾಡಿದ ನಾಲ್ಕು ವರ್ಣಗಳು ನಾಲ್ಕು ಸಾವಿರ ಜಾತಿಗಳಾಗಿ ಪರಿವರ್ತನೆ ಹೊಂದಿರುವುದೇ ಇದಕ್ಕೆ ಪ್ರಬಲವಾದ ಸಾಕ್ಷಿ.

ಇನ್ನು ಮೂರನೆಯ ಸಮಸ್ಯೆಯನ್ನು ಚಾತುರ್ವರ್ಣ್ಯ ಎದುರಿಸಬೇಕಾಗಿದೆ. ಒಂದು ವೇಳೆ ನೀವು ಚಾತುರ್ವರ್ಣ್ಯ ಪದ್ಧತಿಯನ್ನು ಸ್ಥಾಪಿಸಿದ್ದೀರಿ ಎಂದೇ ಇಟ್ಟುಕೊಳ್ಳೋಣ. ಅದನ್ನು ನೀವು ಕಾಯ್ದುಕೊಳ್ಳುವುದು ಹೇಗೆ? ಚಾತುರ್ವರ್ಣ್ಯ ಯಶಸ್ವಿಯಾಗಿ ನಡೆಯಬೇಕಾದರೆ ನಿಯಮಕ್ಕೆ ತಪ್ಪಿದವರನ್ನು ಶಿಕ್ಷಿಸದೆ ಹೋದರೆ ಜನರು ತಮ್ಮತಮ್ಮ ವರ್ಣಗಳಲ್ಲಿ ಉಳಿಯಲಾರರು. ಮನುಷ್ಯ ಸ್ವಭಾವಕ್ಕೆ ವ್ಯತಿರಿಕ್ತವಾಗಿರುವುದರಿಂದ ಚಾತುರ್ವರ್ಣ್ಯ ಪದ್ಧತಿ ಮುರಿದುಬೀಳುವುದು. ಆಂತರಿಕ ಸಜ್ಜನಿಕೆಯಿಂದ ಅದು ಬದುಕಲಾರದು. ಕಾನೂನಿನಿಂದಲೇ ಅದನ್ನು ನಿರ್ಬಂಧಿಸಬೇಕಾಗುವುದು. ರಾಮಾಯಣದಲ್ಲಿ ರಾಮನು ಶಂಬೂಕನನ್ನು ಕೊಂದ ಪ್ರಸಂಗವೇ ಇದಕ್ಕೆ ಸಾಕ್ಷಿ. ರಾಮನ ಈ ಕೃತಿಯನ್ನು ಆಕ್ಷೇಪಿಸುವವರುಂಟು. ಆದರೆ ಹಾಗೆ ಟೀಕಿಸುವವರಿಗೆ ಆ ಪ್ರಸಂಗದ ಅರ್ಥವೇ ಆಗಿಲ್ಲ. ರಾಮರಾಜ್ಯವು ಚಾತುರ್ವರ್ಣ್ಯ ತತ್ವವನ್ನು ಆಧರಿಸಿದ ರಾಜ್ಯ. ರಾಮನು ರಾಜನಾಗಿ ಚಾತುರ್ವರ್ಣ್ಯವನ್ನು ರಕ್ಷಿಸಲೇಬೇಕಾಗಿತ್ತು. ಶಂಬೂಕನು ತನ್ನ ಶೂದ್ರವರ್ಣವನ್ನು ತೊರೆದು ಬ್ರಾಹ್ಮಣನಾಗಲು ಹೊರಟನು. ಆದುದರಿಂದ ಅವನನ್ನು ಕೊಲ್ಲುವುದು ರಾಮನ ಕರ್ತವ್ಯವೇ (ಪುಟ 72)

ಆಗಿತ್ತು. ಇದರಿಂದ ಶಿಕ್ಷಾವಿಧಾನ ಅವಶ್ಯಕವೆಂದು ಸಿದ್ಧವಾಗುತ್ತದೆ. ಇಷ್ಟೇ ಅಲ್ಲ, ವರ್ಣವನ್ನು ಅತಿಕ್ರಮಿಸುವವರಿಗೆ ಶಿಕ್ಷೆ ಅಗತ್ಯವೆಂದು ಸಿದ್ಧವಾಗುತ್ತದೆ. ವೇದವನ್ನು ಕೇಳುವ ಅಥವಾ ಓದುವ ಶೂದ್ರನಿಗೆ ನಾಲಗೆ ಕತ್ತರಿಸುವ ಅಥವಾ ಕಿವಿಗಳಲ್ಲಿ ಕರಗಿದ ಸೀಸವನ್ನು ಹೊಯ್ಯುವ ಶಿಕ್ಷೆ ಕೊಡಬೇಕೆಂದು ಮನುಸ್ಮೃತಿ ವಿಧಿಸುವುದು ಇದೇ ಕಾರಣದಿಂದ. ಮನುಷ್ಯರನ್ನು ನಾಲ್ಕು ವರ್ಣಗಳಾಗಿ ಸಂಘಟಿಸಬಲ್ಲೆವೆಂದೂ, ೨೦ನೆಯ ಶತಮಾನದ ಸಮಾಜವನ್ನು ಮನುಸ್ಮೃತಿಯಲ್ಲಿ ನಿರೂಪಿಸಿದಂತಹ ಶಿಕ್ಷೆಗಳಿಗೆ ಒಪ್ಪಿಗೆ ನೀಡುವಂತೆ ಮನವೊಲಿಸಬಲ್ಲೆವೆಂದೂ ಚಾತುರ್ವರ್ಣ್ಯದ ಬೆಂಬಲಿಗರು ಆಶ್ವಾಸನೆ ಕೊಡಬೇಕು.

ತಮ್ಮ ಈ ಪದ್ಧತಿಯಲ್ಲಿ ಸ್ತ್ರೀಯರ ಸ್ಥಾನಮಾನವೇನೆಂಬುದನ್ನು ಚಾತುರ್ವರ್ಣ್ಯದ ಬೆಂಬಲಿಗರು ಯೋಚಿಸಿದಂತಿಲ್ಲ. ಸ್ತ್ರೀಯರು ನಾಲ್ಕು ವರ್ಣಗಳಲ್ಲಿ ಹಂಚಿಕೊಳ್ಳತಕ್ಕದ್ದೇ? ಅಥವಾ ತಮ್ಮ ತಮ್ಮ ಗಂಡಂದಿರ ವರ್ಣಕ್ಕೆ ಸೇರತಕ್ಕದ್ದೇ? ಮದುವೆಯಿಂದಲೇ ಹೆಣ್ಣಿನ ಸ್ಥಾನ ನಿರ್ಣಯವಾಗುವುದಾದರೆ ಯೋಗ್ಯತಾನುಸಾರ ವರ್ಣವೆಂಬ ಚಾತುರ್ವರ್ಣ್ಯದ ತತ್ವವೆಲ್ಲಿ ಉಳಿಯಿತು? ಯೋಗ್ಯತಾನುಗುಣವಾಗಿಯೇ ಅವರ ವರ್ಣವನ್ನು ನಿರ್ಣಯಿಸುವುದಾದರೆ ಆ ವರ್ಗೀಕರಣ ನಾಮಮಾತ್ರವೇ ಅಥವಾ ನಿಜವಾದದ್ದೇ? ನಾಮಮಾತ್ರ ಎಂದಾದರೆ ಅದು ನಿಷ್ಟ್ರಯೋಜಕವಾಗುತ್ತದೆ. ಮತ್ತು ಚಾತುರ್ವರ್ಣ್ಯವು ಸ್ತ್ರೀಯರಿಗೆ ಅನ್ವಯಿಸುವುದಿಲ್ಲವೆಂದು ಒಪ್ಪಬೇಕಾಗುತ್ತದೆ. ಅದು ನಿಜವಾದ ವರ್ಗೀಕರಣವೆಂದ ಪಕ್ಷದಲ್ಲಿ, ನಿಯಮಕ್ಕನುಸಾರವಾಗಿ ಸ್ತ್ರೀಯರನ್ನು ಯೋಧರನ್ನಾಗಿ, ಪುರೋಹಿತರನ್ನಾಗಿ ಒಪ್ಪಿಕೊಳ್ಳುವಿರಾ? ಹಿಂದೂ ಸಮಾಜದಲ್ಲಿ ಉಪಧ್ಯಾಯಿನಿಯರುಂಟು; ಸ್ತ್ರೀ ಬ್ಯಾರಿಸ್ಟರುಗಳು ಉಂಟು. ಹೆಂಡ ತಯಾರಿಸುವ, ಕಸಾಯಿಖಾನೆ ನಡೆಸುವ ಸ್ತ್ರೀಯರನ್ನು ನಮ್ಮ ಸಮಾಜ ಒಪ್ಪಿಕೊಂಡಿತು. ಚಾತುರ್ವರ್ಣ್ಯವನ್ನು ಸ್ತ್ರೀಯರಿಗೆ ಅನ್ವಯಿಸುವುದರಿಂದಲೇ ಹೀಗಾಗುವುದೆಂದು ಹೇಳುವುದು ಸಾಹಸದ ಮಾತು. ಈ ಬಗೆಯ ಕಷ್ಟಗಳಿರುವುದರಿಂದ ಚಾತುರ್ವರ್ಣ್ಯ ಪದ್ಧತಿಯ ಪುನರುಜ್ಜಿವನ ಸಾಧ್ಯವೆಂದು ಯಾವ ಬುದ್ದಿವಂತನೂ ನಂಬಲಾರನು.

XVII

ಚಾತುರ್ವರ್ಣ್ಯವು ಪ್ರಯೋಗಸಾಧ್ಯವೆಂದು ಗ್ರಹಿಸಿದರೂ ಕೂಡ ಅದು ತುಂಬ ದುಷ್ಟ ಪದ್ಧತಿಯೆಂದು ನಾನು ವಿರೋಧಿಸುತ್ತೇನೆ. ಬ್ರಾಹ್ಮಣರು ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು, ಕ್ಷತ್ರಿಯರು ಯುದ್ಧಕ್ಕೆ ಸಿದ್ದರಾಗಿರಬೇಕು, ವೈಶ್ಯರು ವ್ಯಾಪಾರ ಮಾಡಬೇಕು, ಶೂದ್ರರು ಸೇವಕರಾಗಿರಬೇಕು ಎಂಬುದು ಶ್ರಮವಿಭಾಗ ಪದ್ಧತಿಯಂತೆ ತೋರುತ್ತದೆ. ಶೂದ್ರರು ಸೇವೆಯನ್ನಲ್ಲದೆ ಇತರ ಕೆಲಸಗಳನ್ನು ಮಾಡುವ ಅವಶ್ಯಕತೆಯಿಲ್ಲವೇ ಅಥವಾ ಇದು ಇತರ ಕೆಲಸಗಳನ್ನು ಮಾಡಕೂಡದು ಎಂಬ ನಿಷೇಧವೇ? ಮೂರು ವರ್ಣಗಳು ದ್ರವ್ಯ ಸಂಪಾದನೆ ಮಾಡಿ ಎಲ್ಲರನ್ನೂ ಸಲಹುವುದರಿಂದ ಶೂದ್ರರು ಸೇವೆ ಮಾಡಿಕೊಂಡಿದ್ದರೆ ಸಾಕು ಎನ್ನುವುದು ಚಾತುರ್ವರ್ಣ್ಯ ಪ್ರತಿಪಾದಕರ ವಾದ. ಬ್ರಾಹ್ಮಣರು ಜ್ಞಾನ ಸಂಪಾದಕರಾಗಿರುವುದರಿಂದ ಶೂದ್ರನು ಅವರಿಂದ ತನಗೆ ಬೇಕಾದುದನ್ನು ಕೇಳಿ ತಿಳಿಯಬಹುದು. ಅಂದರೆ ಅವನಿಗೆ ಶಿಕ್ಷಣ ಯಾಕೆ ಬೇಕು? ರಕ್ಷಣೆ ಮಾಡಲು ಕ್ಷತ್ರಿಯರು ಸಿದ್ಧರಾಗಿರುವುದರಿಂದ ಶೂದ್ರನು ಶಸ್ತ್ರ ಹಿಡಿಯಬೇಕಾಗಿಲ್ಲ. ಈ ವಾದದ ಮೇರೆಗೆ ಮೇಲಿನ ಮೂರು ವರ್ಣಗಳು ಪಾಲಕರು ಮತ್ತು ಶೂದ್ರ ಅವರ ಪಾಲನೆಯಲ್ಲಿವಾತ ಎಂದಾಗುತ್ತದೆ. ಹೀಗೆ ಈ ವಾದ ಸರಳ ಮತ್ತು ಆಕರ್ಷಕವಾಗಿ ಗೋಚರಿಸುತ್ತದೆ. ಆದರೆ ಇದು ಮೋಸಕ್ಕೆ ಅಥವಾ ಅನ್ಯಾಯ, ಪ್ರಮಾದಗಳಿಗೆ ಅವಕಾಶ ಕೊಡಲಾರದೆಂದು ನನಗೆ ತೋರದು. ಬ್ರಾಹ್ಮಣರು, ಕ್ಷತ್ರಿಯರು ಹಾಗೂ ವೈಶ್ಯರು (ಪುಟ 73)

ತಮತಮಗೆ ಒಪ್ಪಿಸಿದ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೇ ಹೋದರೆ ಏನು ಗತಿ? ತದ್ವಿರುದ್ದವಾಗಿ ಅವರು ತಮ್ಮತಮ್ಮ ವರ್ಣದ ಕೆಲಸಗಳನ್ನು ಸರಿಯಾಗಿ ನಿರ್ವಹಿಸುತ್ತಿದ್ದು ಪರಸ್ಪರರ ಬಗೆಗೆ ಅಥವಾ ಶೂದ್ರರ ಬಗೆಗೆ ತಮ್ಮ ಕರ್ತವ್ಯಗಳನ್ನು ಕಡೆಗಣಿಸಿದರೆ ಏನು ಮಾಡುವುದು? ಮೊದಲ ಮೂರು ವರ್ಣಗಳು ಶೂದ್ರನನ್ನು ನ್ಯಾಯವಾಗಿ ನಡೆಸಿಕೊಳ್ಳದಿದ್ದರೆ, ಅಥವಾ ಒಗ್ಗಟ್ಟಿನಿಂದ ಅವನನ್ನು ಕೆಳಮೆಟ್ಟಿದರೆ ಅವನಿಗೇನು ಹಾದಿ? ಇತರ ಮೂರು ವರ್ಣಗಳು ಆಜ್ಞಾನಿಗಳೆಂಬುದನ್ನು ಅರಿತು ಅದರಿಂದ ದುರ್ಲಾಭ ಪಡೆಯುವುದಕ್ಕೆ ಬ್ರಾಹ್ಮಣನು ನಿಂತರೆ ಕ್ಷತ್ರಿಯ, ವೈಶ್ಯ, ಶೂದ್ರ ಈ ಮೂರು ವರ್ಣಗಳನ್ನು ರಕ್ಷಿಸುವವರು ಯಾರು? ಕ್ಷತ್ರಿಯನು ರಕ್ಷಣೆಗೆ ಬದಲಾಗಿ ಲೂಟಿಗೆ ನಿಂತಲ್ಲಿ ಇತರ ಮೂರು ವರ್ಣಗಳಿಗೆ, ವಿಶೇಷವಾಗಿ ಶೂದ್ರನಿಗೆ ಸ್ವಾತಂತ್ರ್ಯವೆಲ್ಲಿ ಉಳಿದೀತು? ಈ ವರ್ಣಗಳು ಪರಸ್ಪರ ಅವಲಂಬಿಗಳಾಗಿರುವುದು ಅನಿವಾರ್ಯ. ಆದರೆ ಪ್ರತಿಯೊಬ್ಬನಿಗೆ ಜೀವನಾವಶ್ಯಕವಾದ ವಿಷಯದಲ್ಲಿ ಕೂಡ ಪರವಾಲಂಬನೆ ಬೇಕೇ? ಶಿಕ್ಷಣ ಪ್ರತಿಯೊಬ್ಬನಿಗೂ ಅವಶ್ಯಕ. ಆತ್ಮರಕ್ಷಣೆಯ ಸಾಧನೋಪಾಯ ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯ. ತನಗೆ ಶಿಕ್ಷಣವಿಲ್ಲದಿದ್ದರೂ ಪರವಾಗಿಲ್ಲ, ಆಯುಧಗಳಿಲ್ಲದಿದ್ದರೂ ಅಡ್ಡಿಯಿಲ್ಲ. ನೆರೆಯವನಿಗೆ ಅವೆರೆಡೂ ಇವೆಯಲ್ಲ; ಹೀಗೆ ತೆಪ್ಪಗೆ ಕುಳಿತರೆ ನೆರೆಯವನು ಯಾವಾಗಲೂ ಸಹಾಯಕ್ಕೆ ಬಂದಾನೆಂಬ ನೆಚ್ಚಿಕೆಯೇನು? ಈ ವಿಚಾರಸರಣಿಯೇ ಅಬದ್ಧವಾಗಿದೆ. ಈ ಪದ್ಧತಿಯ ಬೆಂಬಲಿಗರು ಇಂತಹ ಪ್ರಶ್ನೆಗಳನ್ನು ವಿಚಾರಿಸುವುದೇ ಇಲ್ಲ. ಆದರೆ ಇವು ಅಗತ್ಯದ ಪ್ರಶ್ನೆಗಳಾಗಿವೆ. ಚಾತುರ್ವರ್ಣ್ಯದ ತತ್ವದ ಮೇರೆಗೆ ಮೊದಲ ಮೂರು ವರ್ಣಗಳು ಪಾಲಕರಾಗಿಯೂ ಶೂದ್ರ ವರ್ಣ ಪೋಷಿತರಾಗಿಯೂ ವರ್ತಿಸುವರೆಂದು ಭಾವಿಸಿದರೂ ಕೂಡ ಪಾಲಕರ ಕರ್ತವ್ಯಚ್ಯುತಿ ಅಥವಾ ಪ್ರಯತ್ನಪೂರ್ವಕ ಅನ್ಯಾಯಗಳಿಂದ ಪೋಷಿತ ವರ್ಗವನ್ನು ರಕ್ಷಿಸುವ ವಿಧಾನವೆಲ್ಲಿದೆ? ವರ್ಣಗಳ ಪರಸ್ಪರ ಸಂಬಂಧ ಮೂಲತಃ ಪಾಲಕ-ಪೋಷಿತರಂತೆ ಇರಬೇಕೆಂಬುದು ತತ್ವವಾಗಿರಬಹುದು. ಆದರೆ ಪ್ರತ್ಯಕ್ಷ ನಡವಳಿಕೆಯಲ್ಲಿ ಅದು ಒಡೆಯ-ಆಳು ಎಂಬ ಸಂಬಂಧವಾಗಿಯೇ ಬಂದಿದೆ. ಬ್ರಾಹ್ಮಣ, ಕ್ಷತ್ರಿಯ ಹಾಗೂ ವೈಶ್ಯ ಈ ಮೂರು ವರ್ಣಗಳು ತಮ್ಮ ಪರಸ್ಪರ ಸ್ಥಾನಮಾನಗಳ ವಿಷಯದಲ್ಲಿ ಸಂತುಷ್ಟರಾಗಿರದಿದ್ದರೂ ಏನೋ ಒಂದು ರೀತಿಯ ಹೊಂದಾಣಿಕೆ ಮಾಡಿಕೊಂಡವು. ಬ್ರಾಹ್ಮಣನು ಕ್ಷತ್ರಿಯನನ್ನು ಹೊಗಳಿ ಉಬ್ಬಿಸಿದನು. ಇಬ್ಬರು ಕೂಡಿ ವೈಶ್ಯನನ್ನು ತಮಗೆ ಅಧೀನ ಪಡಿಸಿಕೊಂಡರು. ಆ ಮೇಲೆ ಮೂವರೂ ಕೂಡಿ ಶೂದ್ರನನ್ನು ಕೆಳಮೆಟ್ಟಲು ನಿರ್ಧರಿಸಿದರು. ಶೂದ್ರನಿಗೆ ದ್ರವ್ಯ ಸಂಪಾದನೆಯ ಅವಕಾಶವನ್ನು ನಿರಾಕರಿಸಿದರು. ಅವನು ಇತರ ವರ್ಣಗಳನ್ನು ಮೀರಿ ಸ್ವಾತಂತ್ರ್ಯ ಹೊಂದಬಾರದಲ್ಲವೆ? ತನ್ನ ಹಿತಾಸಕ್ತಿಗಳನ್ನು ಎಚ್ಚರಿಕೆಯಿಂದ ನೋಡಿಕೊಂಡಾನೆಂಬ ಭಯದಿಂದ ಅವನಿಗೆ ಜ್ಞಾನಾರ್ಜನೆಯನ್ನು ನಿರಾಕರಿಸಿದರು. ತಮ್ಮ ಅಧಿಕಾರವನ್ನು ವಿರೋಧಿಸಿ ದಂಗೆಯೆದ್ದಾನೆಂದು ಅವನಿಗೆ ಆಯುಧಗಳು ದೊರೆಯದಂತೆ ಮಾಡಿದರು. ಶೂದ್ರನನ್ನು ತ್ರೈವರ್ಣಿಕರು ಹೀಗೆ ನಡೆಸಿಕೊಂಡರೆಂಬುದನ್ನು ಮನುಸ್ಮೃತಿಯ ವಿಧಿನಿಷೇಧಗಳು ಸಿದ್ಧಪಡಿಸುತ್ತವೆ. ಮನುವಿನ ವಿಧಿಗಳಿಗಿಂತ ಹೆಚ್ಚು ಕುಖ್ಯಾತವಾದ ವಿಧಿಗಳು ಇನ್ನೆಲ್ಲಿಯೂ ಇಲ್ಲ. ಜಗತ್ತಿನಲ್ಲಿ ಯಾವುದೇ ಭಾಗದಲ್ಲಿ ನಡೆದ ಸಾಮಾಜಿಕ ಅನ್ಯಾಯವಾದರೂ ಈ ಅನ್ಯಾಯದ ಮುಂದೆ ಪೇಲವವಾಗಿ ಕಂಡೀತು. ಮಹಾ ಜನಸಮೂಹ ಈ ಸಾಮಾಜಿಕ ಅನಿಷ್ಟಗಳನ್ನು ಯಾಕೆ ತೆಪ್ಪಗೆ ಸಹಿಸುತ್ತಾ ಬಂದಿದೆ? ಜಗತ್ತಿನ ಬೇರೆ ಬೇರೆ ಪ್ರದೇಶಗಳಲ್ಲಿ ಸಾಮಾಜಿಕ ಕ್ರಾಂತಿಗಳಾಗಿವೆ. ಭಾರತದಲ್ಲಿ ಸಾಮಾಜಿಕ ಕ್ರಾಂತಿಗಳು ಯಾಕೆ ನಡೆಯಲಿಲ್ಲ? ಇದು ನನ್ನನ್ನು ಸದಾ ಕಾಡುತ್ತಿರುವ ಪ್ರಶ್ನೆ. ಈ ಪ್ರಶ್ನೆಗೆ ಇರುವುದು ಒಂದೇ ಉತ್ತರ. ಅದೇನೆಂದರೆ ಚಾತುರ್ವರ್ಣ್ಯದ ಪದ್ಧತಿಯ ಪರಿಣಾಮವಾಗಿ ಹಿಂದೂ ಸಮಾಜದ ಕೆಳವರ್ಗಗಳು ದಂಗೆಯೇಳಲಾರದಷ್ಟು ದುರ್ಬಲಗೊಳಿಸಲ್ಪಟ್ಟಿವೆ. ಆಯುಧಧಾರಣೆ ಅವರಿಗೆ ನಿರಾಕೃತವಾಗಿತ್ತು. ಆಯುಧಗಳಿಲ್ಲದೆ ದಂಗೆಯೇಳುವುದು (ಪುಟ 74)

ಹೇಗೆ? ಅವರೆಲ್ಲ ಬೇಸಾಯಗಾರರಾಗಿದ್ದರು. ಆಥವಾ ಬೇಸಾಯದ ವೃತ್ತಿಯನ್ನು ಅವರ ಮೇಲೆ ಒತ್ತಾಯದಿಂದ ಹೇರಲಾಗಿತ್ತು. ನೇಗಿಲ ಮೊನೆಗಳನ್ನು ಖಡ್ಗಗಳಾಗಿ ಪರಿವರ್ತಿಸಲು ಅವರಿಗೆ ಅವಕಾಶವಿರಲಿಲ್ಲ. ಅವರ ಕೈಯಲ್ಲಿ ಖಡ್ಗವಿರಲಿಲ್ಲ. ಆದ್ದರಿಂದ ಯಾರು ಬೇಕಾದರೂ ಬಂದು ಅವರ ತಲೆಯ ಮೇಲೆ ಕುಳಿತುಕೊಳ್ಳಬಹುದಾಗಿತ್ತು. ಚಾತುರ್ವರ್ಣ್ಯದ ಪರಿಣಾಮವಾಗಿ ಅವರಿಗೆ ಶಿಕ್ಷಣ ದೊರೆಯಲಿಲ್ಲ. ತಮ್ಮ ವಿಮೋಚನೆಯ ಹಾದಿಯೇನೆಂದು ವಿಚಾರ ಮಾಡುವ ಶಕ್ತಿಯಿರಲಿಲ್ಲ. ಅಧಮಸ್ಥಾನವೇ ಅವರಿಗೆ ಸ್ಥಿರವಾಯಿತು. ವಿಮೋಚನೆಯ ಹಾದಿ ತಿಳಿಯದೆ. ವಿಮೋಚನೆಗೆ ಆಸ್ಪದವೂ ಇಲ್ಲದೆ ಹೋದುದರಿಂದ ಅವರು ಶಾಶ್ವತವಾಗಿ ಗುಲಾಮಗಿರಿಗೆ ಹೊಂದಿಕೊಂಡರು. ಅದೇ ತಮ್ಮ ಹಣೆಬರಹವೆಂದು ಸುಮ್ಮನಾದರು. ಯೂರೋಪ್ ಖಂಡದಲ್ಲಿ ಕೂಡ ಬಲಿಷ್ಠರು ಬಲಹೀನರನ್ನು ಕೆಳಕ್ಕೆ ಮೆಟ್ಟಿ ಹಾಳುಮಾಡದೆ ಇಲ್ಲ. ಆದರೆ ಭಾರತದಲ್ಲಿಯಂತಹ ಲಜ್ಜಾಸ್ಪದ ದುರ್ಬಲತೆಗೆ ಅವರು ದಲಿತರನ್ನು ಗುರಿಮಾಡಲಿಲ್ಲ. ಬಲಿಷ್ಠರ ಮತ್ತು ಬಲಹೀನರ ನಡುವೆ ಸಾಮಾಜಿಕ ಹೋರಾಟ ಯೂರೋಪಿನಲ್ಲಿ ಉಗ್ರವಾಗಿ ನಡೆದುದುಂಟು. ಆದರೆ ಅಲ್ಲಿಯ ದುರ್ಬಲವರ್ಗಕ್ಕೆ ದೈಹಿಕ ಆಯುಧದಿಂದ ರಕ್ಷಣೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ರಾಜಕೀಯ ಆಯುಧವಿದೆ. ನೈತಿಕ ಆಯುಧವೂ ಇದೆ. ಯೂರೋಪಿನಲ್ಲಿ ಬಲಿಷ್ಠರು ಬಲಹೀನರಿಗೆ ಈ ಮೂರು ಆಯುಧಗಳನ್ನು ಎಂದೂ ನಿರಾಕರಿಸಲಿಲ್ಲ. ಚಾತುರ್ವರ್ಣ್ಯದ ಭಾರತದಲ್ಲಿ ಮಾತ್ರ ಜನಕ್ಕೆ ಈ ಮೂರೂ ನಿರಾಕೃತವಾದವು. ಜನರನ್ನು ನಿಸ್ಸತ್ವಗೊಳಿಸಿ. ನಿಷ್ಕ್ರಿಯಗೊಳಿಸಿ, ಅಸಹಾಯಕ ಸ್ಥಿತಿಗೆ ಇಳಿಸುವ ಈ ಪದ್ಧತಿಗಿಂತ ಹೀನವಾದುದು ಇನ್ನೊಂದು ಇರಬಾರದು. ಇದೇನು ಅತಿಶಯೋಕ್ತಿಯಲ್ಲ. ಇತಿಹಾಸ ಹೇರಳವಾದ ಸಾಕ್ಷಿಗಳನ್ನು ಒದಗಿಸುತ್ತದೆ. ಸ್ವಾತಂತ್ರ್ಯ, ಗೌರವ ಮತ್ತು ಕೀರ್ತಿಗೆ ಆಸ್ಪದವಾಗಿದ್ದ ಒಂದೇ ಒಂದು ಕಾಲಾವಧಿ ಭಾರತೀಯ ಚರಿತ್ರೆಯಲ್ಲಿದೆ. ಅದು ಮೌರ್ಯಸಾಮ್ರಾಜ್ಯದ ಕಾಲಾವಧಿ. ಮಿಕ್ಕೆಲ್ಲ ಕಾಲಗಳಲ್ಲಿ ಭಾರತ ಅಪಜಯ, ಅಂಧಕಾರಗಳಲ್ಲಿಯೇ ನರಳಿತು. ಆದರೆ ಮೌರ್ಯರ ಕಾಲದಲ್ಲಿ ಚಾತುರ್ವರ್ಣ್ಯ ಸಂಪೂರ್ಣವಾಗಿ ನಾಶವಾಗಿತ್ತು. ಬಹುಜನ ಸಮಾಜವಾಗಿದ್ದ ಶೂದ್ರರು ವಿಕಾಸವಾಗಿ ದೇಶದ ಪ್ರಭುಗಳಾದರು. ಚಾತುರ್ವರ್ಣ್ಯದ ಅಧಿಕಾರವಿದ್ದ ಕಾಲ ಅಪಜಯ, ಅಂಧಕಾರಗಳ ಕಾಲ. ದೇಶದ ಜನರಲ್ಲಿ ಬಹುಭಾಗವನ್ನು ಅದು ಹೀನಸ್ಥಿತಿಗೆ ದೂಡಿತು.

XVIII

ಚಾತುರ್ವರ್ಣ್ಯ ಹೊಸದಲ್ಲ. ಅದು ವೇದಗಳಷ್ಟೇ ಪ್ರಾಚೀನವಾದುದು. ಆದುದರಿಂದಲೇ ಅದರ ಬಗ್ಗೆ ಯೋಚಿಸಬೇಕೆಂದು ಆರ್ಯ ಸಮಾಜಗಳು ಹೇಳುತ್ತಿವೆ. ಸಾಮಾಜಿಕ ಸಂಘಟನೆಯ ದೃಷ್ಟಿಯಿಂದ ಹಿಂದೆಯೇ ಅದನ್ನು ಪ್ರಯೋಗಿಸಿ ನೋಡಿ, ಅದು ಅಯಶಸ್ವಿಯೆಂದು ಕಂಡೂ ಆಗಿದೆ. ಕ್ಷತ್ರಿಯರನ್ನು ನಿರ್ವಂಶಗೊಳಿಸಲು ಎಷ್ಟೋ ಸಲ ಬ್ರಾಹ್ಮಣರು ಯತ್ನಿಸಿದರು. ಬ್ರಾಹ್ಮಣರ ನಿರ್ಮೂಲನೆಗೆ ಕ್ಷತ್ರಿಯರು ಎಷ್ಟು ಬಾರಿ ಯತ್ನಿಸಿದರು. ಬ್ರಾಹ್ಮಣ-ಕ್ಷತ್ರಿಯರ ಹೋರಾಟದ ಪ್ರಸಂಗಗಳು ಮಹಾಭಾರತ ಹಾಗೂ ಪುರಾಣಗಳಲ್ಲಿ ತುಂಬಾ ಇವೆ. ಬ್ರಾಹ್ಮಣನೂ ಕ್ಷತ್ರಿಯನೂ ಬೀದಿಯಲ್ಲಿ ಎದುರಾದರೆ ಮೊದಲು ನಮಸ್ಕರಿಸಬೇಕಾದವನು ಯಾರು, ಯಾರು ಯಾರಿಗೆ ಹಾದಿ ಬಿಡಬೇಕು ಎಂಬಂತಹ ಕ್ಷುಲ್ಲಕ ವಿಷಯಗಳಲ್ಲಿ ಕೂಡ ಅವರು ಜಗಳವಾಡಿದರು. ಬ್ರಾಹ್ಮಣನು ಕ್ಷತ್ರಿಯನಿಗೆ ಕಣ್ಕಿಸುರು, ಕ್ಷತ್ರಿಯನು ಬ್ರಾಹ್ಮಣನಿಗೆ ಕಣ್ಣುರಿ ಆಗಿದ್ದುದಷ್ಟೇ ಅಲ್ಲ; ಕ್ಷತ್ರಿಯರು ನಿರಂಕುಶಾಧಿಕಾರಿಗಳಾಗಿ ಜನಸಾಮಾನ್ಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಂತೆಯೂ ತೋರುತ್ತದೆ. ಚಾತುರ್ವರ್ಣ್ಯದ ಮೇರೆಗೆ ಆಯುಧಹೀನರಾದ ಇತರ ಮೂರು (ಪುಟ 75)

ವರ್ಣಗಳವರು ಅಸಹಾಯಕರಾಗಿ ದೇವರಿಗೆ ಮೊರೆಯಿಡುತ್ತಿದ್ದಿರಬೇಕು. ಕ್ಷತ್ರಿಯರ ನಿರ್ಮೂಲನಕ್ಕಾಗಿಯೇ ಕೃಷ್ಣನ ಅವತಾರವಾಯಿತೆಂದು ಭಾಗವತ ಸ್ಪಷ್ಟವಾಗಿ ಹೇಳುತ್ತದೆ. ಹೀಗೆ ವರ್ಣಗಳಲ್ಲಿ ಪರಸ್ಪರ ದ್ವೇಷ-ವೈರಗಳ ನಿದರ್ಶನಗಳು ಇಷ್ಟೊಂದು ಇರುವಾಗ ಚಾತುರ್ವರ್ಣ್ಯ ನಮಗೆ ಆದರ್ಶವಾಗಬಲ್ಲದೆ? ಹಿಂದೂ ಸಮಾಜವನ್ನು ಆ ಮಾದರಿಯಲ್ಲಿ ನಿರ್ಮಿಸಲು ಯಾರು ಬಯಸಿಯಾರು?

XIX

ನಿಮ್ಮೊಂದಿಗೆ ಇರದ ಹಾಗೂ ನಿಮ್ಮ ಆದರ್ಶಕ್ಕೆ ವಿರೋಧಿಗಳಾದವರ ಮಾತನ್ನು ಇಲ್ಲಿಯವರೆಗೆ ಹೇಳಿದೆ. ನಿಮ್ಮೊಂದಿಗೆ ಇದ್ದೂ ನಿಮ್ಮ ಪರವಾಗಿ ಇಲ್ಲ ಎಂಬಂತೆ ಕೆಲವರಿದ್ದಾರೆ. ಅವರ ದೃಷ್ಟಿಕೋನವನ್ನು ನಿಮ್ಮೆದುರಿಗೆ ಇಡಬೇಕೋ ಬೇಡವೋ ಎಂದು ನಾನು ಅನುಮಾನಿಸುತ್ತಿದ್ದೆ. ವಿಚಾರ ಮಾಡಿ ಮಾಡಿದ ಮೇಲೆ ಅದನ್ನು ನಿಮ್ಮೆದುರು ಮಂಡಿಸಲೇಬೇಕೆಂದು ನಿರ್ಧರಿಸಿದೆ. ಅದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ, ಜಾತಿಸಮಸ್ಯೆಯ ವಿಷಯವಾಗಿ ಅವರ ಮನೋವೃತ್ತಿ ತಟಸ್ಥವಾಗಿದೆ. ಎರಡನೆಯದಾಗಿ, ಅವರ ಸಂಖ್ಯೆ ಗಮನಾರ್ಹವೆನಿಸುವಷ್ಟು ದೊಡ್ಡದಾಗಿದೆ. ಇವರಲ್ಲಿಯ ಒಂದು ಗುಂಪಿಗೆ ಹಿಂದೂಗಳ ಜಾತಿಪದ್ಧತಿಯಲ್ಲಿ ವೈಶಿಷ್ಟ್ಯವಾಗಲಿ, ಜಿಗುಪ್ಸಕರವಾದ ಅಂಶವಾಗಲಿ ತೋರುವುದಿಲ್ಲ. ಮುಸ್ಲಿಮರಲ್ಲಿ, ಸಿಖ್ಖರಲ್ಲಿ, ಕ್ರೈಸ್ತರಲ್ಲಿ ಕೂಡ ಜಾತಿಗಳಿವೆಯೆಂದು ತೋರಿ ಅವರು ಸಮಾಧಾನ ಪಡುತ್ತಾರೆ. ಈ ಪ್ರಶ್ನೆಯನ್ನು ವಿಚಾರಿಸುವಾಗ ನೀವು ಮೊದಲಿಗೆ ಒಂದು ಮಾತನ್ನು ನೆನಪಿಡಬೇಕು. ಏನೆಂದರೆ ಮಾನವನ ಸಮಾಜ ಎಲ್ಲಿಯೂ ಒಂದು ಅಖಂಡತೆಯನ್ನು ಪಡೆದಿರುವುದಿಲ್ಲ. ಅದರಲ್ಲಿ ಅನೇಕತೆಯಿರುತ್ತದೆ. ಕ್ರಿಯಾಪ್ರಪಂಚದಲ್ಲಿ ವ್ಯಕ್ತಿ ಒಂದು ತುದಿಯಾದರೆ ಸಮಾಜ ಇನ್ನೊಂದು ತುದಿ. ಇವೆರಡರ ನಡುವೆ ಸಾಂಘಿಕ ವ್ಯವಸ್ಥೆಗಳು ಅಂದರೆ ಕುಟುಂಬಗಳು, ಸ್ನೇಹಿತರು, ಸಹಕಾರಿ ಸಂಘಗಳು, ವ್ಯವಹಾರ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಕಳ್ಳಕಾಕರ ಗುಂಪುಗಳು ಮುಂತಾದ ಚಿಕ್ಕದೊಡ್ಡ ವ್ಯಾಪ್ತಿಗಳಿರುವ ಏರ್ಪಾಡುಗಳಿರುತ್ತವೆ. ಚಿಕ್ಕ ಗುಂಪುಗಳು ಸಾಮಾನ್ಯವಾಗಿ ನಿಖರವಾಗಿ ಹೊಂದಿಕೊಂಡಿದ್ದು ಜಾತಿಗಳಂತೆ ಪ್ರತ್ಯೇಕವಾಗಿರುತ್ತವೆ. ಅವು ಅನುಸರಿಸುವ ಕಟ್ಟುಪಾಡು ಸಂಕುಚಿತವಾಗಿದ್ದು ಅನೇಕ ಸಲ ಸಮಾಜವಿರೋಧಿಯೂ ಆಗಿರುವುದುಂಟು. ಈ ಮಾತು ಏಷ್ಯ ಖಂಡದ ಸಮಾಜಕ್ಕೆ ಹೇಗೊ ಹಾಗೆ ಯೂರೋಪಿನ ಸಮಾಜಕ್ಕೂ ಅನ್ವಯಿಸುತ್ತದೆ. ಆದುದರಿಂದ ಆದರ್ಶ ಸಮಾಜವನ್ನು ರೂಪಿಸಲು ಕೇಳಬೇಕಾದುದು ಆ ಸಮಾಜದಲ್ಲಿ ಒಳಗುಂಪುಗಳು ಇವೆಯೋ ಇಲ್ಲವೋ ಎಂಬುದಲ್ಲ. ಯಾಕೆಂದರೆ ಗುಂಪುಗಳು ಎಲ್ಲ ಸಮಾಜಗಳಲ್ಲಿಯೂ ಇರುತ್ತವೆ. ಕಾರಣ ಕೇಳಬೇಕಾದ ಪ್ರಶ್ನೆಗಳು ಹೀಗಿವೆ : ಈ ಒಳಗಿನ ಗುಂಪುಗಳು ಎಷ್ಟು ಸಂಖ್ಯೆಯಲ್ಲಿವೆ ಮತ್ತು ಅರಿತುಕೊಂಡು ಪಾಲುಗೊಳ್ಳುವ ಹಿತಾಸಕ್ತಿಗಳು ಎಷ್ಟು ವಿಧವಾಗಿವೆ? ವಿವಿಧ ಗುಂಪುಗಳ ನಡುವಿನ ಸಂಪರ್ಕ ಎಷ್ಟು ಪೂರ್ಣ ಹಾಗೂ ಸ್ವತಂತ್ರವಾಗಿದೆ? ಗುಂಪುಗಳನ್ನು ಪ್ರತ್ಯೇಕಿಸುವ ಶಕ್ತಿಗಳು, ಅವುಗಳನ್ನು ಕೂಡಿಸುವ ಶಕ್ತಿಗಳಿಗಿಂತ ಹೆಚ್ಚಾಗಿವೆಯೆ? ಈ ಗುಂಪಿನ ಜೀವನಕ್ಕೆ ಇರುವ ಸಾಮಾಜಿಕ ಮಹತ್ವವೇನು? ಗುಂಪು ಇತರರಿಂದ ಪ್ರತ್ಯೇಕವಾಗಿರುವುದಕ್ಕೆ ಸಂಪ್ರದಾಯ ಅಥವಾ ಸೌಲಭ್ಯದ ದೃಷ್ಟಿ ಕಾರಣವೊ ಅಥವಾ ಧರ್ಮ ಕಾರಣವೋ? ಈ ಪ್ರಶ್ನೆಗಳಿಗೆ ಬರುವ ಉತ್ತರಗಳನ್ನು ನೋಡಿ. ಆಮೇಲೆ ಹಿಂದೂಗಳಲ್ಲದವರ ಜಾತಿಭೇದಗಳೂ ಹಿಂದೂಗಳ ಜಾತಿಭೇದಗಳೂ ಒಂದೇ ಬಗೆಯವೋ ಅಲ್ಲವೋ ಎಂಬುದನ್ನು ನಿರ್ಧರಿಸಬಹುದು. ಮಹಮ್ಮದೀಯರಲ್ಲಿ, ಸಿಖ್ಖರಲ್ಲಿ ಹಾಗೂ ಕ್ರೈಸ್ತರಲ್ಲಿರುವ ಒಳಜಾತಿಗಳು ಹಿಂದೂಗಳಲ್ಲಿಯ (ಪುಟ 76)

ಜಾತಿಗಳಿಗಿಂತ ಸಂಪೂರ್ಣ ಬೇರೆ ಆಗಿವೆ. ಮೊದಲನೆಯದಾಗಿ ಹಿಂದೂ ಜಾತಿಗಳಲ್ಲಿ ಐಕ್ಯವನ್ನುಂಟುಮಾಡುವಂತಹ ಪರಸ್ಪರ ಸಂಬಂಧಗಳು ಇಲ್ಲವೇ ಇಲ್ಲ; ಹಿಂದೂಗಳಲ್ಲದವರಲ್ಲಿ ಅವು ಅನೇಕವಾಗಿವೆ. ಭಿನ್ನಭಿನ್ನ ಗುಂಪುಗಳಲ್ಲಿ ಪರಸ್ಪರ ಸಂಪರ್ಕ ಹಾಗೂ ಪರಸ್ಪರ ಕೊಡುಕೊಳ್ಳುವಿಕೆ ಎಷ್ಟರ ಮಟ್ಟಿಗೆ ಇರುವುದೋ ಅಷ್ಟರಮಟ್ಟಿಗೆ ಆ ಸಮಾಜ ಬಲಿಷ್ಟವಾಗಿರುತ್ತದೆ. ಇವುಗಳನ್ನು ಕಾರ್ಲೈಲನು ‘ಜೈವಿಕ ತಂತುಗಳು’ ಅಂದರೆ ಪ್ರತ್ಯೇಕವಾಗಿರುವ ಅಂಗಗಳನ್ನು ಪುನಃ ಎಳೆದು ಕೂಡಿಸುವಂತಹ ಸ್ಥಿತಿಸ್ಥಾಪಕರ ತಂತುಗಳು ಎಂದು ಕರೆಯುತ್ತಾರೆ. ಜಾತಿಪದ್ಧತಿಯಿಂದ ಪ್ರತ್ಯೇಕಿತವಾದ ಗುಂಪುಗಳನ್ನು ಪುನಃ ಕೂಡಿಸಿಕೊಡುವ ಶಕ್ತಿ ಹಿಂದೂಗಳಲ್ಲಿ ಇಲ್ಲ. ಹಿಂದೂಗಳಲ್ಲದವರಲ್ಲಿ ಇಂತಹ ಜೈವಿಕ ಸೂತ್ರಗಳು ಅನೇಕವಾಗಿವೆ. ಹಿಂದೂಗಳಲ್ಲಿದ್ದಂತೆ ಇತರರಲ್ಲಿ ಕೂಡ ಜಾತಿಗಳಿದ್ದರೂ, ಹಿಂದೂಗಳಲ್ಲಿ ಜಾತಿಗಿರುವ ಮಹತ್ವ ಇತರರಲ್ಲಿ ಇಲ್ಲ. ಒಬ್ಬ ಮಹಮ್ಮದೀಯನನ್ನೋ, ಸಿಖ್ಖನನ್ನೋ, “ನೀನು ಯಾರು?” ಎಂದು ಕೇಳಿ, ತಾನು ಮಹಮ್ಮದೀಯನೆಂದೂ, ಸಿಖ್ಖನೆಂದೂ ಹೇಳುತ್ತಾರೆ. ತನಗೆ ಒಳಜಾತಿಯೊಂದಿದ್ದರೂ ಅದನ್ನು ಅವನು ತಿಳಿಸುವುದಿಲ್ಲ. ತಾನು ಮುಸ್ಲಿಮನೆಂದು ಅವನು ಹೇಳಿದರೆ, “ನೀನು ಶಿಯಾ ಅಥವಾ ಸುನ್ನಿ, ಶೇಖ್ ಅಥವಾ ಸೈಯದ್, ಖಟಕ್ ಅಥವಾ ಪಿಂಜಾರ ಇವುಗಳಲ್ಲಿ ಯಾವುದಕ್ಕೆ ಸೇರಿದವನು?” ಎಂದು ಕೇಳುವುದಿಲ್ಲ. ತಾನು ಸಿಖ್ಖನೆಂದು ಹೇಳಿದರೆ. “ಜಾಟ್, ರೋಡ್, ಮಜಬಿ, ರಾಮದಾಸಿ ಇವುಗಳಲ್ಲಿ ನೀನು ಯಾವ ಪಂಗಡಕ್ಕೆ ಸೇರಿದವನು?” ಎಂದು ನೀವು ಕೇಳುವುದಿಲ್ಲ. ಆದರೆ ಅದೇ ಒಬ್ಬನು ತಾನು “ಹಿಂದು” ಎಂದಿಷ್ಟೆ ಹೇಳಿದರೆ ನಿಮಗೆ ಸಾಲದು, ಯಾವ ಜಾತಿಯೆಂದು ಕೇಳದೆ ಬಿಡುವುದಿಲ್ಲ. ಅದೇಕೆ? ಹಿಂದೂಗಳಲ್ಲಿ ಜಾತಿ ಅಷ್ಟು ಮುಖ್ಯವಾಗಿದೆ. ಅದು ತಿಳಿಯದೇ ಆ ಮನುಷ್ಯ ಎಂಥವನೆಂದು ನಿಮಗೆ ತಿಳಿಯಲಾರದು. ಜಾತಿಯ ಅರ್ಥ ಹಿಂದೂಗಳಲ್ಲಿ ಬೇರೆ ಇತರರಲ್ಲಿ ಬೇರೆಯೆಂಬುದು ನಿಮಗೆ ಸ್ಪಷ್ಟವಾಗಬೇಕಾದರೆ ಹಿಂದೂಗಳಲ್ಲಿ ಜಾತಿಯ ಕಟ್ಟುಗಳನ್ನು ಮೀರಿದವರಿಗೆ ಏನಾಗುವುದೆಂಬುದನ್ನು ಗಮನಿಸಬೇಕು. ಮುಸ್ಲಿಮರಲ್ಲಾಗಲಿ ಸಿಖ್ಖರಲ್ಲಾಗಲಿ ಜಾತಿಭಂಗ ಮಾಡಿದವನಿಗೆ ಬಹಿಷ್ಕಾರ ಹಾಕುವುದಿಲ್ಲ. ‘ಬಹಿಷ್ಕಾರ’ವೆಂಬ ಕಲ್ಪನೆ ಕೂಡ ಅವರಲ್ಲಿ ಇಲ್ಲ. ಹಿಂದೂಗಳಲ್ಲಿ ಅದು ನಿಶ್ಚಿತ ಶಿಕ್ಷೆ. ಜಾತಿ ವಿಷಯದಲ್ಲಿ ಹಿಂದೂ ಹಾಗೂ ಇತರರಲ್ಲಿರುವ ಎರಡನೆಯ ಭೇದವಿದು. ಇನ್ನು ಮೂರನೆಯ ಭೇದವೊಂದಿದೆ; ಅದು ಹೆಚ್ಚು ಮಹತ್ವದ್ದೂ ಆಗಿದೆ. ಹಿಂದೂಗಳಲ್ಲಿ ಇದ್ದಂತೆ ಇತರರಲ್ಲಿ ಜಾತಿಗೆ ಧಾರ್ಮಿಕ ಪ್ರತಿಷ್ಠೆಯಿಲ್ಲ. ಇತರರಲ್ಲಿ ಜಾತಿಯೆಂಬುದು ಒಂದು ವ್ಯವಹಾರ ಅಥವಾ ರೂಢಿಮಾತ್ರ. ಅದೊಂದು ಪಾವನವಾದ ಏರ್ಪಾಡಲ್ಲ. ಅದನ್ನು ಅವರೇ ನಿರ್ಮಿಸಲಿಲ್ಲ. ಹೇಗೂ ಹಿಂದಿನಿಂದ ಉಳಿದುಕೊಂಡು ಬಂದ ಒಂದು ಅಂಶವದು. ಅದನ್ನೊಂದು ಧಾರ್ಮಿಕ ವಿಧಿಯೆಂದು ಅವರು ಪರಿಗಣಿಸುವುದಿಲ್ಲ. ಹಿಂದೂಗಳಲ್ಲಾದರೆ ಜಾತಿಜಾತಿಗಳನ್ನು ಪ್ರತ್ಯೇಕವಾಗಿರಿಸುವಂತೆ ಧರ್ಮ ವಿಧಿಸುತ್ತದೆ. ಅದೊಂದು ಸದಾಚಾರವೆಂದು ಹೇಳುತ್ತದೆ. ಹಿಂದೂಗಳಲ್ಲಿ ಜಾತಿಯನ್ನು ಮೀರಿದರೆ ಧರ್ಮವನ್ನು ಮೀರಿದಂತೆಯೇ. ಇತರರಲ್ಲಿ ಹಾಗೇನೂ ಅಲ್ಲ. “ಇತರರಲ್ಲಿಯೂ ಜಾತಿಗಳಿರುವುದರಿಂದ ನಮ್ಮಲ್ಲಿ ಜಾತಿಗಳಿರುವುದೇನು ಮಹಾ” ಎಂದುಕೊಳ್ಳುವುದು ಅಪಾಯಕರವಾದ ಭ್ರಾಂತಿ. ಹಿಂದೂಗಳು ಈ ಭ್ರಾಂತಿಯಿಂದ ಎಷ್ಟು ಬೇಗನೆ ಮುಕ್ತರಾಗುವವರೋ ಅಷ್ಟು ಒಳ್ಳೆಯದು.

ಇನ್ನೂ ಕೆಲವರಿದ್ದಾರೆ ಅವರ ಅಭಿಪ್ರಾಯದಲ್ಲಿ ‘ಜಾತಿ’ಯ ಪ್ರಶ್ನೆಗೆ ಮಹತ್ವವೇ ಇಲ್ಲ. ಇಷ್ಟೆಲ್ಲ ಜಾತಿಗಳಿದ್ದರೂ ಹಿಂದೂ ಧರ್ಮ ಇನ್ನೂ ಉಳಿದಿಲ್ಲವೇ? ಇನ್ನು ಮುಂದೆ ಕೂಡ ಉಳಿಯುವುದಕ್ಕೆ ಅದು ಸಮರ್ಥವಾಗಿದೆಯೆಂಬುದಕ್ಕೆ ಅದರ ಈವರೆಗಿನ ಇತಿಹಾಸವೇ ಸಾಕ್ಷಿ ಎಂದು ಅವರು ವಾದಿಸುತ್ತಾರೆ. ಈ ಅಭಿಪ್ರಾಯವನ್ನು ಪ್ರೊ. ಎಸ್. ರಾಧಾಕೃಷ್ಣನ್ ಅವರು ತಮ್ಮ ಹಿಂದೂ ಜೀವನ ದೃಷ್ಟಿಯೆಂಬ ಗ್ರಂಥದಲ್ಲಿ (ಪುಟ 77)

ಹೀಗೆ ತಿಳಿಸಿದ್ದಾರೆ. “ಈ ನಾಗರಿಕತೆ ಬಾಳಿಬಂದ ಅವಧಿ ಅಲ್ಪವಾಗಿಲ್ಲ. ನಾಲ್ಕು ಸಾವಿರ ವರ್ಷಗಳಷ್ಟು ಪೂರ್ವದಲ್ಲಿಯೂ ಇದು ಇತ್ತೆಂದು ಐತಿಹಾಸಿಕ ದಾಖಲೆಗಳಿವೆ. ಆ ಕಾಲಕ್ಕೆ ಇದು ಒಂದು ಪರಿಣತಿಯನ್ನು ಪಡೆದಿದ್ದು, ನಡುನಡುವೆ ಸ್ವಲ್ಪ ನಿಧಾನ ಹಾಗೂ ನಿಶ್ಚಲವೆನಿಸಿದ್ದರೂ ಇಂದಿನವರೆಗೆ ಅವಿಚ್ಛಿನ್ನವಾಗಿ ನಡೆದುಬಂದಿದೆ. ನಾಲೈದು ಸಾವಿರ ವರ್ಷಗಳ ಆಧ್ಯಾತ್ಮಿಕ ಚಿಂತನ ಹಾಗೂ ಅನುಭವಗಳ ಒತ್ತಡವನ್ನು ಅದು ತಾಳಿಕೊಂಡಿದೆ. ಇತಿಹಾಸದ ಆರಂಭ ಕಾಲದಿಂದ ವಿವಿಧ ಜನಾಂಗ ಹಾಗೂ ಸಂಸ್ಕೃತಿಗಳಿಗೆ ಸೇರಿದ ಜನರು ಭಾರತದೊಳಗೆ ಸಾಲುಸಾಲಾಗಿ ಬರುತ್ತಲೇ ಇದ್ದರೂ ಹಿಂದೂತ್ವ ತನ್ನ ಉನ್ನತ ಸ್ಥಾನವನ್ನು ಸಮರ್ಥವಾಗಿ ಕಾಯ್ದುಕೊಂಡಿದೆ. ರಾಜಕೀಯ ಬೆಂಬಲದಿಂದ ಜನರನ್ನು ಮತಾಂತರಗೊಳಿಸಿ ತಮ್ಮೊಳಗೆ ಸೇರಿಸಿಕೊಳ್ಳುವ ಮತಗಳು ಕೂಡ ಬಹುಸಂಖ್ಯಾತ ಹಿಂದೂಗಳನ್ನು ಬಲಾತ್ಕರಿಸಲಾರದೆ ಹೋದವು. ಹಿಂದೂ ಸಂಸ್ಕೃತಿಯಲ್ಲಿ ಅನನ್ಯವಾದೊಂದು ಜೀವಸತ್ವವಿದೆ. ಗಿಡದಲ್ಲಿ ಜೀವರಸವಿದೆಯೊ ಇಲ್ಲವೊ ಎಂಬುದನ್ನು ಕಾಣಲು ಗಿಡವನ್ನು ಸೀಳಿ ನೋಡಬೇಕಾಗಿಲ್ಲ; ಆದರಂತೆ ಹಿಂದೂ ಸಂಸ್ಕೃತಿಯ ಅಂತಃಸತ್ವವನ್ನು ಕಾಣಲು ಅದನ್ನು ಪೃಥಕ್ಕರಿಸಿ ಪರೀಕ್ಷಿಸಬೇಕಾಗಿಲ್ಲ”. ಪ್ರೊ. ಎಸ್. ರಾಧಾಕೃಷ್ಣನ್ ಅವರು ಘನವಾದ ಪಾಂಡಿತ್ಯವುಳ್ಳವರೆಂದು ಪ್ರಸಿದ್ದರಾಗಿದ್ದಾರೆ. ಆದುದರಿಂದ ಅವರು ಹೇಳಿದ್ದೆಲ್ಲ ಆಳವಾದ ಚಿಂತನದಿಂದ ಬಂದುದೆಂದು ಭಾವಿಸಿ ಓದುಗರು ಅದರಿಂದ ಪ್ರಭಾವಿತರಾಗುತ್ತಾರೆ. ಆದರೆ ನನ್ನ ಅಭಿಪ್ರಾಯವನ್ನು ಹೇಳಲು ನಾನು ಅನುಮಾನಿಸುವುದಿಲ್ಲ. ಅವರ ಹೇಳಿಕೆ ಒಂದು ದುಷ್ಟ ತರ್ಕಕ್ಕೆ ಆಧಾರವಾದೀತೆಂದು ಅನ್ನಿಸುತ್ತದೆ. ‘ಉಳಿದುಕೊಂಡು ಬಂದಿದೆ’ ಎಂದರೆ ಉಳಿದುಕೊಳ್ಳಲು ಯೋಗ್ಯವಾಗಿದೆಯೆ ಎಂದರ್ಥವೇ? ಒಂದು ಸಮಾಜ ಬದುಕುವುದೋ ಇಲ್ಲವೋ ಎಂಬುದು ಪ್ರಶ್ನೆಯಲ್ಲ, ಯಾವ ಸ್ಥಿತಿಯಲ್ಲಿ ಅದು ಬದುಕುತ್ತಿದೆಯೆಂಬುದು ಪ್ರಶ್ನೆ. ಸಾಯದೆ ಉಳಿದುಕೊಳ್ಳುವ ರೀತಿಗಳು ಅನೇಕವಾಗಿವೆ. ಆದರೆ ಅದೆಲ್ಲವೂ ಗೌರವಾರ್ಹವಾಗಿಲ್ಲ. ವ್ಯಕ್ತಿಗೇ ಆಗಲಿ, ಸಮಾಜಕ್ಕೇ ಆಗಲಿ ಬದುಕುವುದು ಮತ್ತು ಗೌರವದಿಂದ ಬದುಕುವುದು ಇವೆರಡರ ಮಧ್ಯೆ ದೊಡ್ಡ ಅಂತರವಿದೆ. ಯುದ್ಧದಲ್ಲಿ ಹೋರಾಡಿ ಗೆದ್ದು ಬದುಕುವುದು ಒಂದು ರೀತಿ. ಹಿಮ್ಮೆಟ್ಟಿ, ಸೋಲೊಪ್ಪಿ ಸೆರೆಯಾಳಾಗಿ ಬದುಕುವುದು ಇನ್ನೊಂದು ರೀತಿ. ಎರಡೂ ಬದುಕಿ ‘ಉಳಿಯುವ ರೀತಿಗಳೆ’, ‘ನಾನೂ, ನಮ್ಮ ಜನರೂ ಈವರೆಗೆ ಉಳಿದುಕೊಂಡು ಬಂದಿದ್ದೇವೆ’ ಎಂದು ಹಿಂದೂವು ಸಮಾಧಾನಪಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ. ನಾವು ಬದುಕಿ ಉಳಿದಿದ್ದೇವೆ ಎನ್ನುವುದಕ್ಕಿಂತ ಮುಖ್ಯವಾಗಿ ಯಾವ ಸ್ಥಿತಿಯಲ್ಲಿ ಉಳಿದಿದ್ದೇವೆ ಎಂಬುದನ್ನು ಯೋಚಿಸಬೇಕು. ಹಿಂದೂವಿನ ಜೀವನ ಸತತ ಪರಾಜಯದ ಜೀವನವಾಗಿಯೇ ಬಂದಿದೆ. ಅವನು ಶಾಶ್ವತವೆಂದು ಭ್ರಮಿಸಿದ್ದು ಶಾಶ್ವತವಾಗಿ ಕ್ಷಯಿಸುತ್ತ ಬಂದಿದೆ. ಹೀಗೆ ಉಳಿದು ಬಂದಿರುವ ರೀತಿ ವಿವೇಕಶಾಲಿ ಹಿಂದೂವಿಗೆ ನಿಜವಾಗಿ ಲಜ್ಜಾಸ್ಪದವೆಂದೇ ಅನ್ನಿಸುತ್ತದೆ.

XX

ನಿಮ್ಮ ಸಾಮಾಜಿಕ ಸ್ವರೂಪವನ್ನು ಬದಲು ಮಾಡದೆ ಹೋದರೆ ನೀವೇನೂ ಪ್ರಗತಿಯನ್ನು ಸಾಧಿಸಲಾರಿರಿ ಎಂದು ನಾನು ನಿಸ್ಸಂಶಯವಾಗಿ ಹೇಳುತ್ತೇನೆ. ರಕ್ಷಣೆಗಾಗಲಿ ದಾಳಿಗಾಗಲಿ ನೀವು ಜನಬಲವನ್ನು ಸಿದ್ಧಗೊಳಿಸಲಾರಿರಿ. ಜಾತಿಯ ಅಡಿಪಾಯದ ಮೇಲೆ ನೀವೇನನ್ನೂ ಕಟ್ಟಲಾರಿರಿ. ರಾಷ್ಟ್ರವನ್ನು ನಿರ್ಮಿಸಲಾರಿರಿ. ನೀತಿಯನ್ನು ಮೌಲೀಕರಣಗೊಳಿಸಲಾರಿರಿ. ಜಾತಿಯ ಆಧಾರದ ಮೇಲೆ ಕಟ್ಟಿದುದು ಏನೇ ಆಗಿರಲಿ ಅದು ಬಿರುಕು ಬಿಡುವುದು, ಅಖಂಡವಾಗಿ ಉಳಿಯಲಾರದು. (ಪುಟ 78)

ಈಗ ಯೋಚಿಸಬೇಕಾದ ಪ್ರಶ್ನೆಯೊಂದು ಉಳಿದಿದೆ. ಹಿಂದೂ ಸಮಾಜ ವ್ಯವಸ್ಥೆಯಲ್ಲಿ ಸುಧಾರಣೆ ಮಾಡುವುದು ಹೇಗೆ? ಜಾತಿಯನ್ನು ನಾಶಗೊಳಿಸುವುದು ಹೇಗೆ? ಇದು ಅತ್ಯಂತ ಮಹತ್ವದ ಪ್ರಶ್ನೆಯಾಗಿದೆ. ಜಾತಿಸುಧಾರಣೆಯ ವಿಷಯದಲ್ಲಿ ಮೊದಲ ಹೆಜ್ಜೆಯಾಗಿ ಒಳಜಾತಿಗಳನ್ನು ನಿರ್ಮೂಲನ ಮಾಡಬೇಕೆಂಬ ಒಂದು ಅಭಿಪ್ರಾಯ ವ್ಯಕ್ತವಾಗಿದೆ. ಜಾತಿ ಜಾತಿಗಳ ನಡುವೆ ಇರುವ ಸಮಾನತೆ ಹಾಗೂ ಸಾದೃಶ್ಯಕ್ಕಿಂತ ಹೆಚ್ಚಿನ ಸಮಾನತೆ ಹಾಗೂ ಸಾದೃಶ್ಯ ಒಳಜಾತಿಗಳ ನಡುವೆ ಇವೆಯೆಂಬ ಗ್ರಹಿಕೆ ಈ ಅಭಿಪ್ರಾಯಕ್ಕೆ ಆಧಾರವಾಗಿದೆ. ಇದು ತಪ್ಪುಕಲ್ಪನೆ. ದಕ್ಷಿಣ ಭಾರತದ ಬ್ರಾಹ್ಮಣರೊಡನೆ ಹೋಲಿಸಿ ನೋಡಿದಾಗ ಮಧ್ಯ ಹಾಗೂ ಉತ್ತರ ಭಾರತದ ಬ್ರಾಹ್ಮಣರ ಸಾಮಾಜಿಕ ಸ್ಥಾನ ಕೆಳಮಟ್ಟಿದ್ದಾಗಿದೆ. ಉತ್ತರಾಪಥದ ಬ್ರಾಹ್ಮಣರಿಗೆ ಅಡುಗೆ ಭಟ್ಟರಾಗುವ ಅಥವಾ ನೀರು ಹೊರುವ ಸ್ಥಿತಿಗಿಂತ ಹೆಚ್ಚಿನ ವರಮಾನವಿಲ್ಲ. ದಕ್ಷಿಣಾಪಥದ ಬ್ರಾಹ್ಮಣರಿಗೆ ಸಾಮಾಜಿಕವಾಗಿ ಹೆಚ್ಚಿನ ಗೌರವ ದೊರೆಯುತ್ತಿದೆ. ಉತ್ತರ ಭಾರತದ ವೈಶ್ಯರೂ, ಕಾಯಸ್ಥರೂ ಬೌದ್ಧಿಕ ಹಾಗೂ ಸಾಮಾಜಿಕ ಮಾನದಿಂದ ದಕ್ಷಿಣ ಭಾರತದ ಬ್ರಾಹ್ಮಣರಿಗೆ ಸರಿಸಮಾನರಾಗಿದ್ದಾರೆ. ಆಹಾರದ ವಿಷಯದಲ್ಲಿಯೂ ವ್ಯತ್ಯಾಸಗಳಿವೆ. ಡೆಕ್ಕನ್ ಮತ್ತು ದಕ್ಷಿಣದ ಬ್ರಾಹ್ಮಣರು ಶುದ್ಧ ಸಸ್ಯಾಹಾರಿಗಳು, ಕಾಶ್ಮೀರದ ಹಾಗೂ ಬಂಗಾಳದ ಬ್ರಾಹ್ಮಣರು ಸತ್ಯೇತರ ಆಹಾರವನ್ನು ಸೇವಿಸುತ್ತಾರೆ. ಡೆಕ್ಕನ್ ಮತ್ತು ದಕ್ಷಿಣದ ಬ್ರಾಹ್ಮಣರು ಆಹಾರ ವಿಷಯದಲ್ಲಿ ಗುಜರಾಥಿಗಳು, ಮಾರವಾಡಿಗಳು, ಬನಿಯಾಗಳು ಮತ್ತು ಜೈನರು ಮುಂತಾದ ಬ್ರಾಹ್ಮಣೇತರರೊಡನೆ ಬೆರೆಯುವುದು ಹೆಚ್ಚು ವ್ಯವಹಾರ್ಯವಾದೀತು. ಒಳಜಾತಿಗಳನ್ನೆಲ್ಲ ಒಂದುಗೂಡಿಸಲು ಸಾಧ್ಯವಾದೀತೆಂದು ಭಾವಿಸೋಣ. ಒಳಜಾತಿಗಳ ನಾಶ ಜಾತಿಗಳ ಒಟ್ಟು ನಿರ್ಮೂಲನೆಗೆ ದಾರಿ ಮಾಡಿಕೊಟ್ಟಿತೆಂಬ ಭರವಸೆಯೆಲ್ಲಿದೆ? ತದ್ವಿರುದ್ಧವಾಗಿ ಒಳಜಾತಿಗಳ ನಿರ್ಮೂಲನೆಯೊಡನೆ ಆ ಕ್ರಮ ನಿಂತುಹೋಗಬಹುದು. ಹಾಗಾದ ಪಕ್ಷದಲ್ಲಿ ಒಳಜಾತಿಗಳ ನಿರ್ಮೂಲನದಿಂದ ಜಾತಿಗಳು ಇನ್ನಷ್ಟು ಬಲಿಷ್ಠವಾಗಿ ಇನ್ನಷ್ಟು ಉಪದ್ರವಕಾರಿಗಳಾಗಬಹುದು. ಆದುದರಿಂದ ಈ ಉಪಾಯ ಪ್ರಾಯೋಗಿಕವೂ ಅಲ್ಲ, ಪರಿಣಾಮಕಾರಿಯೂ ಅಲ್ಲ; ಬಹುಶಃ ಈ ಉಪಾಯ ತಪ್ಪೆಂದೂ ಸಾಬೀತಾಗಬಹುದು. ಅಂತರ್ಜಾತೀಯ ಸಹಭೋಜನದಿಂದ ಜಾತಿ ನಿರ್ಮೂಲನೆಯನ್ನು ಸಾಧಿಸಬೇಕೆಂಬ ಇನ್ನೊಂದು ಯೋಜನೆಯನ್ನು ಸೂಚಿಸಲಾಗುತ್ತದೆ. ಇದು ಕೂಡ ಅಸಮರ್ಪಕ ಉಪಾಯವೆಂದು ನಾನು ಪರಿಗಣಿಸುತ್ತೇನೆ. ಅಂತರ್ಜಾತೀಯ ಸಹಭೋಜನಕ್ಕೆ ಅವಕಾಶಕೊಡುವಂತಹ ಜಾತಿಗಳು ಅನೇಕ ಇವೆ. ಅನೇಕ ಜಾತಿಯವರು ಕೂಡಿ ಊಟ ಮಾಡುವುದರಿಂದ ಜಾತಿ ಭಾವನೆಯೇನೂ ನಷ್ಟವಾಗಿಲ್ಲ, ಜಾತಿಪ್ರಜ್ಞೆಯೂ ಅಳಿದಿಲ್ಲ. ಅಂತರ್ಜಾತೀಯ ವಿವಾಹವೇ ಸರಿಯಾದ ಉಪಾಯವೆಂದು ನನಗೆ ಮನವರಿಕೆಯಾಗಿದೆ. ತಾವು ತಮ್ಮವರೆಂಬ ಆತ್ಮೀಯ ಭಾವನೆ ರಕ್ತ ಸಂಬಂಧದಿಂದಲೇ ಬರಬಲ್ಲದು. ಈ ಆತ್ಮೀಯತೆಯ ಮಮತೆಯ ಭಾವನೆ ಹುಟ್ಟದೆಹೋದರೆ ಜಾತಿಪದ್ಧತಿಯಿಂದ ಬೆಳೆದುಬಂದ ಪ್ರತ್ಯೇಕತಾಭಾವನೆ ಅಳಿಯಲಾರದು. ಹಿಂದೂಗಳಲ್ಲದವರ ಜೀವನದಲ್ಲಿ ಅಂತರ್ಜಾತೀಯ ವಿವಾಹಕ್ಕೆ ಅಷ್ಟು ಮಹತ್ವವಿರಲಿಕ್ಕಿಲ್ಲ. ಹಿಂದೂಗಳಲ್ಲಿ ಮಾತ್ರ ಅದು ನಿಶ್ಚಿತವಾಗಿ ಮಹತ್ವದ ಘಟಕವಾಗುತ್ತದೆ. ಇತರ ಸಂಬಂಧಗಳಿಂದ ಸಮಾಜ ಸುಸಂಘಟಿತವಾಗಿರುವಾಗ ಮದುವೆಯೆಂಬುದು ಜೀವನದಲ್ಲಿ ಒಂದು ಸಾಮಾನ್ಯ ಘಟನೆಯೆನ್ನಿಸುತ್ತದೆ. ಆದರೆ ಸಮಾಜ ಭಿನ್ನವಿಚ್ಛಿನ್ನವಾಗಿದ್ದಾಗ ಸಂಯೋಜಕ ಶಕ್ತಿಯಾಗಿ ಬರುವ ವಿವಾಹ ಸಂಬಂಧ ಅಗತ್ಯದ ವಿಷಯವಾಗುತ್ತದೆ. ಜಾತಿ ನಿರ್ಮೂಲನೆಯ ಉಪಾಯವೆಂದರೆ ಅಂತರ್ಜಾತಿಯ ವಿವಾಹವೇ. ಬೇರೆ ಯಾವುದರಿಂದಲೂ ಜಾತಿ ಸಮಸ್ಯೆ ಪರಿಹಾರವಾಗುವುದಿಲ್ಲ. ನಿಮ್ಮ ಜಾತ್-ಪತ್-ತೋಡಕ್ ಮಂಡಲವು ಈ ಮಾರ್ಗವನ್ನೇ ಕೈಗೊಂಡಿದೆ. ನೀವು ನೇರವಾಗಿ ಎದುರಿಂದಲೇ ದಾಳಿ ಮಾಡಿದ್ದೀರಿ. ಸಮಸ್ಯೆಯನ್ನು ಸಮರ್ಪಕವಾಗಿ (ಪುಟ 79)

ಅರಿತುಕೊಂಡಿದುದಕ್ಕಾಗಿ, ಅದಕ್ಕಿಂತ ಹೆಚ್ಚಾಗಿ ಹಿಂದೂಗಳಿಗೆ ಅವರ ತಪ್ಪನ್ನು ಎತ್ತಿ ತೋರಿಸುವ ಧೈರ್ಯ ಮಾಡಿದ್ದಕ್ಕಾಗಿ, ನಿಮ್ಮನ್ನು ನಾನು ಅಭಿನಂದಿಸುತ್ತೇನೆ. ಸಾಮಾಜಿಕ ದಬ್ಬಾಳಿಕೆಯ ಮುಂದೆ ರಾಜಕೀಯ ದಬ್ಬಾಳಿಕೆ ತೀರ ಅಲ್ಪವೆನಿಸುತ್ತದೆ. ಸರಕಾರವನ್ನು ಧಿಕ್ಕರಿಸುವ ರಾಜಕಾರಣಿಗಿಂತಲೂ ಸಮಾಜವನ್ನು ಧಿಕ್ಕರಿಸಿ ನಿಲ್ಲುವ ಸುಧಾರಕನು ಹೆಚ್ಚಿನ ಧೈರ್ಯಶಾಲಿಯಾಗಿರುತ್ತಾನೆ. ಅಂತರ್ಜಾತೀಯ ಸಹಭೋಜನ ಹಾಗೂ ಅಂತರ್ಜಾತೀಯ ವಿವಾಹಗಳು ತೀರ ಸಾಮಾನ್ಯ ವ್ಯವಹಾರಗಳೆಂಬ ಸ್ಥಿತಿ ಉಂಟಾದಾಗಲೆ ಜಾತಿ ತನ್ನ ಬಲವನ್ನು ಕಳೆದುಕೊಳ್ಳುವುದು. ಈ ನಿಮ್ಮ ಅಭಿಪ್ರಾಯ ಸರಿಯಾಗಿದೆ. ಈ ರೋಗನಿದಾನವನ್ನು ಸರಿಯಾಗಿ ಮಾಡಿದ್ದೀರಿ. ಆದರೆ ರೋಗಕ್ಕೆ ನೀವು ಸೂಚಿಸಿದ ಚಿಕಿತ್ಸೆ ಸರಿಯಾದುದೆ? ಈಗ ನೀವೇ ಈ ಮುಂದಿನ ಪ್ರಶ್ನೆಯನ್ನು ಕೇಳಿಕೊಳ್ಳಿ. ಅಂತರ್ಜಾತಿಯ ಸಹಭೋಜನ ಹಾಗೂ ಅಂತರ್ಜಾತಿಯ ವಿವಾಹಗಳಿಗೆ ಬಹುಸಂಖ್ಯಾತ ಹಿಂದೂಗಳು ಏಕೆ ಒಪ್ಪುತ್ತಿಲ್ಲ? ನಿಮ್ಮ ಯೋಜನೆ ಏಕೆ ಜನಪ್ರಿಯವಾಗಿಲ್ಲ? ಇದಕ್ಕೆ ಸಾಧ್ಯವಿರುವ ಉತ್ತರ ಒಂದೇ ಒಂದು. ಅದೇನೆಂದರೆ ಅಂತರ್ಜಾತೀಯ ಭೋಜನ, ವಿವಾಹಗಳು ಹಿಂದೂಗಳ ದೃಷ್ಟಿಯಲ್ಲಿ ಪಾವಿತ್ರ್ಯಭಂಗವೆನಿಸುತ್ತವೆ; ಅವರ ನಂಬಿಕೆ ಹಾಗೂ ತತ್ವಗಳು ಹಾಗಿವೆ. ಜಾತಿಯೆಂಬುದು ಇಟ್ಟಿಗೆಗಳ ಒಂದು ಗೋಡೆಯಲ್ಲ ಅಥವಾ ಮುಳ್ಳುತಂತಿಯ ಬೇಲಿಯಲ್ಲ. ಆದುದರಿಂದ ಅದನ್ನು ಕೈಯಿಂದ ಕಿತ್ತುಹಾಕುವಂತಿಲ್ಲ. ಜಾತಿ ಒಂದು ಮನೋಭಾವ. ಜಾತಿನಾಶವೆಂದರೆ ಅದೊಂದು ಭೌತಿಕ ವಸ್ತುವಿನ ನಾಶವಲ್ಲ, ಮನೋವೃತ್ತಿಯ ಪರಿವರ್ತನೆಯಾಗಬೇಕು. ಜಾತಿ ಕೆಟ್ಟದಿರಬಹುದು. ಹಿಂದೂಗಳೂ ಜಾತಿಯನ್ನು ಪಾಲಿಸುವರೆಂದಾಕ್ಷಣಕ್ಕೆ ಅವರು ರಾಕ್ಷಸರೆಂದಾಗಲಿ ತಲೆತಿರುಕರೆಂದಾಗಲಿ ಅರ್ಥವಲ್ಲ. ಜಾತಿಪಾಲನೆಗೆ ಅವರ ಧರ್ಮಕರ್ಮಠತೆಯೂ ಕಾರಣವಾಗಿದೆ. ಜಾತಿ ಪರಿಪಾಲನೆ ಜನರ ತಪ್ಪಲ್ಲ. ನಿಜವಾಗಿ ತಪ್ಪಿರುವುದು ಜಾತಿಯ ಬಗೆಗೆ ಧರ್ಮವುಂಟುಮಾಡಿದ ಕಲ್ಪನೆಯಲ್ಲಿ. ಈ ಮಾತು ಸರಿಯಾದರೆ, ನೀವು ಎದುರಿಸಬೇಕಾದ ವೈರಿ ಜಾತಿನಿಷ್ಠ ಜನರಲ್ಲ; ಅವರಿಗೆ ಈ ಧರ್ಮವನ್ನು ಬೋಧಿಸಿದ ಶಾಸ್ತ್ರಗಳೇ ಶತ್ರು, ಅಂತರ್ಜಾತೀಯ ಭೋಜನ ವಿವಾಹಗಳನ್ನೇಕೆ ಮಾಡುವುದಿಲ್ಲವೆಂದು ಜನರನ್ನು ಟೀಕಿಸುವುದರಿಂದ ಅಥವಾ ಆಗೀಗ ಅಂತರ್ಜಾತೀಯ ಭೋಜನ ವಿವಾಹಗಳನ್ನು ಏರ್ಪಡಿಸುವುದರಿಂದ ನಿಮ್ಮ ಉದ್ದೇಶ ಈಡೇರಲಾರದು. ಶಾಸ್ತ್ರಗಳಲ್ಲಿ ಜನರಿಗಿರುವ ನಿಷ್ಠೆಯನ್ನು ನಾಶಪಡಿಸುವುದೇ ನಿಜವಾದ ಮಾರ್ಗ. ಶಾಸ್ತ್ರಗಳು ಜನರಲ್ಲಿ ನಂಬಿಕೆಗಳನ್ನೂ ಅಭಿಪ್ರಾಯಗಳನ್ನೂ ರೂಪಿಸುತ್ತ ಮುಂದುವರಿಯುವುದಾದರೆ ನಿಮಗೆ ಗೆಲುವಿನ ನಿರೀಕ್ಷೆಯೆಲ್ಲಿ? ಶಾಸ್ತ್ರಗಳ ಅಧಿಕಾರವನ್ನು ನೀವು ಪ್ರಶ್ನಿಸುವುದಿಲ್ಲ. ಶಾಸ್ತ್ರಗಳನ್ನು ಗೌರವಿಸಿ ನಂಬುವುದಕ್ಕೂ ಅವಕಾಶ ಕೊಡುತ್ತೀರಿ, ಶಾಸ್ತ್ರಗಳ ವಿಧಿನಿಷೇಧಗಳನ್ನು ಅವರು ನಂಬಲು ಅಡ್ಡಿ ಮಾಡಿಲ್ಲ. ಇಷ್ಟೆಲ್ಲ ಇದ್ದು ಆ ಜನರನ್ನು ಅವಿವೇಕಿಗಳೆಂದೂ ನಿರ್ದಯರೆಂದೂ ಟೀಕಿಸುವುದು ಅಸಂಬದ್ಧವಲ್ಲವೆ? ಇದು ಸಮಾಜ ಸುಧಾರಣೆಯ ಮಾರ್ಗವೇ? ಜನರ ನಡವಳಿಕೆಗೆ ಶಾಸ್ತ್ರಗಳಲ್ಲಿರುವ ಅವರ ನಂಬಿಕೆ ಕಾರಣ. ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡುತ್ತಿರುವ ಸುಧಾರಕರು, ಶ್ರೀ ಗಾಂಧಿಯವರು ಸಹ, ಈ ಮಾತನ್ನು ಅರಿತಂತೆ ತೋರುವುದಿಲ್ಲ. ಅವರ ಪ್ರಯತ್ನಗಳು ಆಯಶಸ್ವಿಯಾಗುವುದರಲ್ಲಿ ಸೋಜಿಗವೇನೂ ಇಲ್ಲ. ನೀವು ಕೂಡ ಅದೇ ತಪ್ಪನ್ನು ಮಾಡುತ್ತ ಇದ್ದೀರೆಂದು ತೋರುತ್ತದೆ. ಅಂತರ್ಜಾತೀಯ ಭೋಜನ ಮತ್ತು ಅಂತರ್ಜಾತೀಯ ವಿವಾಹಗಳಿಗಾಗಿ ಆಂದೋಲನ ನಡೆಸುವುದು ಮತ್ತು ಅವುಗಳನ್ನು ಏರ್ಪಡಿಸುವುದು ಎಂದರೆ ಕೃತ್ರಿಮವಾದ ರೀತಿಯಲ್ಲಿ ಒತ್ತಾಯದಿಂದ ಉಣಿಸಿದಂತೆಯೇ ಸರಿ. ಶಾಸ್ತ್ರಗಳ ಬಂಧನದಿಂದ ಪ್ರತಿಯೊಬ್ಬ ಸ್ತ್ರೀಪುರುಷರನ್ನು ಮುಕ್ತಗೊಳಿಸಿರಿ. ಶಾಸ್ತ್ರಾಧಾರದಿಂದ ತುಂಬಿಕೊಂಡಿರುವ ಹಾನಿಕಾರಕವಾದ (ಪುಟ 80)

ಕಲ್ಪನೆ ಹಾಗೂ ವಿಚಾರಗಳ ಕೊಳೆಯನ್ನು ತೆಗೆದುಹಾಕಿ ಅವರ ಮನಸ್ಸುಗಳನ್ನು ಶುದ್ದಿಗೊಳಿಸಿ. ಹಾಗೆ ಮಾಡಿದ ಪಕ್ಷದಲ್ಲಿ ಅವರ ಅಂತರ್ಜಾತೀಯ ಭೋಜನವನ್ನೂ ಅಂತರ್ಜಾತೀಯ ವಿವಾಹವನ್ನೂ ತಾವೇ ಕೈಗೊಳ್ಳುವರು. ನೀವು ಹೇಳುವ ಅವಶ್ಯಕತೆ ಉಳಿಯುವುದಿಲ್ಲ.

ದ್ವಂದ್ವಾರ್ಥಗಳಿಗೆ ಶರಣು ಹೋಗುವುದರಿಂದ ಏನು ಪ್ರಯೋಜನ? ಶಾಸ್ತ್ರಗಳು ಹಾಗೆ ಹೇಳಿವೆ ಹೀಗೆ ಹೇಳಿವೆಯೆಂದು ಭಾವಿಸುವುದು ಸರಿಯಲ್ಲವೆಂದೂ, ವ್ಯಾಕರಣಾನುಸಾರವಾಗಿ ಓದಿ ಅರ್ಥ ಮಾಡಿಕೊಂಡರೆ ಅದರ ವಿವರಣೆಯೇ ಬೇರೆಯಾಗುವುದೆಂದೂ ವಾದಿಸುವುದರಿಂದ ಏನೂ ಪ್ರಯೋಜನವಿಲ್ಲ. ಜನರು ಶಾಸ್ತ್ರಗಳನ್ನು ಹೇಗೆ ಅರ್ಥ ಮಾಡಿಕೊಂಡಿದ್ದಾರೆ ಎಂಬುದು ಮುಖ್ಯ ಬುದ್ಧನು ತಾಳಿದ ನಿಲುವನ್ನೇ ನೀವು ತಾಳಬೇಕು. ಗುರುನಾನಕರು ತಾಳಿದ ನಿಲುವನ್ನೇ ನೀವು ತಾಳಬೇಕು. ಅವರಿಬ್ಬರಂತೆ ನೀವು ಕೂಡ ಶಾಸ್ತ್ರಗಳನ್ನು ಕಿತ್ತೊಗೆಯಬೇಕು. ಇಷ್ಟೇ ಅಲ್ಲ, ಅವುಗಳ ಅಧಿಕಾರವನ್ನು ಧಿಕ್ಕರಿಸಬೇಕು. ಜಾತಿ ಬಹಳ ಪವಿತ್ರವೆಂಬ ಭ್ರಾಂತಿ ಹುಟ್ಟಿದ್ದು ನಿಮ್ಮ ಧರ್ಮದಿಂದ ಎಂಬ ಮಾತನ್ನು ಹಿಂದೂಗಳಿಗೆ ಹೇಳುವ ಧೈರ್ಯ ನಿಮ್ಮಲ್ಲಿ ಬರಬೇಕು.

XXI

ನಿಮ್ಮ ಯಶಸ್ಸಿನ ಸಾಧ್ಯತೆ ಎಷ್ಟು? ಸಾಮಾಜಿಕ ಸುಧಾರಣೆಗಳಲ್ಲಿ ವಿವಿಧ ಮಾರ್ಗಗಳಿವೆ. ಒಂದು ವಿಧದ ಸುಧಾರಣೆ ಇದೆ. ಜನರ ಧಾರ್ಮಿಕ ವಿಚಾರಗಳು ಅದಕ್ಕೆ ಸಂಬಂಧಪಟ್ಟವಲ್ಲ, ಆದರೆ ಅದು ಜಾತ್ಯತೀತ ಲಕ್ಷಣವನ್ನು ಹೊಂದಿದೆ. ಈ ವರ್ಗದಲ್ಲಿ ಎರಡು ಉಪವರ್ಗಗಳಿವೆ. ಮೊದಲನೆಯದು ಧರ್ಮತತ್ವಗಳನ್ನು ಶಿರಸಾ ವಹಿಸುತ್ತದೆ; ಧರ್ಮವನ್ನು ಬಿಟ್ಟುಹೋದವರಿಗೆ ಮರಳಿ ಬನ್ನಿರೆಂದೂ ಆ ತತ್ವಗಳನ್ನು ಪಾಲಿಸಿರೆಂದೂ ಆಮಂತ್ರಿಸುತ್ತದೆ. ಎರಡನೆಯ ಉಪವರ್ಗ ಇದಕ್ಕೆ ವಿರುದ್ಧವಾಗಿ ವರ್ತಿಸುತ್ತದೆ. ಧರ್ಮದ ತತ್ವಗಳನ್ನು ಉಲ್ಲೇಖಿಸಿದರೂ, ಅವುಗಳನ್ನು ಧಿಕ್ಕರಿಸಿ ಸಂಪೂರ್ಣ ವಿರುದ್ಧ ಮಾರ್ಗದಲ್ಲಿ ನಡೆಯಿರೆಂದು ಜನರಿಗೆ ಬೋಧಿಸುತ್ತದೆ. ಅಲೌಕಿಕ ಜ್ಞಾನಸಂಪನ್ನರು ದೇವಾನುಗ್ರಹದಿಂದ ನಿರೂಪಿಸಿದ ವಿಧಿನಿಷೇಧಗಳು ಶಾಸ್ತ್ರಗಳಲ್ಲಿವೆ. ಆದುದರಿಂದ ಅವುಗಳನ್ನು ಮೀರುವುದು ಪಾಪ; ಈ ಮೊದಲಾದ ಧಾರ್ಮಿಕ ನಂಬಿಕೆಗಳ ಪ್ರಭಾವದಿಂದ ಜಾತಿ ಹುಟ್ಟಿತು. ಜಾತಿಯನ್ನೇ ನಾಶಗೊಳಿಸುವ ಸುಧಾರಣೆ ಮೂರನೆಯ ವರ್ಗಕ್ಕೆ ಸೇರುತ್ತದೆ. ಜನರಿಗೆ ಜಾತಿಯನ್ನು ತೊರೆಯಿರೆಂದು ಹೇಳಿದರೆ ಮೂಲಭೂತವಾಗಿ ಅವರ ಧಾರ್ಮಿಕ ಕಲ್ಪನೆಗಳಿಗೇ ವಿರುದ್ಧವಾಗಿ ನಡೆಯಲು ಹೇಳಿದಂತಾಗುತ್ತದೆ. ಮೊದಲಿನ ಎರಡು ಬಗೆಯ ಸುಧಾರಣೆಗಳು ಸುಲಭವೆಂಬುದು ಸ್ಪಷ್ಟ, ಮೂರನೆಯ ಬಗೆಯ ಸುಧಾರಣೆ ತುಂಬ ಕಷ್ಟಕರವಾದುದು. ಬಹುಶಃ ಅಸಾಧ್ಯವೆನಿಸುವಂತಹುದು. ಸಮಾಜ ವ್ಯವಸ್ಥೆ ಹಿಂದೂಗಳಿಗೆ ಪಾವಿತ್ರ್ಯದ ವಿಷಯ. ಜಾತಿ ದೈವಮೂಲವಾದುದು. ಜಾತಿಗೆ ಅಂಟಿಕೊಂಡಿರುವ ಈ ದೈವಾಂಶವನ್ನೂ ಪಾವಿತ್ರ್ಯ ಭಾವನೆಯನ್ನೂ ಮೊದಲು ನಾಶಪಡಿಸಬೇಕು. ಅಂದರೆ, ಶಾಸ್ತ್ರಗಳ ಹಾಗೂ ವೇದಗಳ ಅಧಿಕಾರವನ್ನು ನೀವು ಸಂಪೂರ್ಣವಾಗಿ ನಿರಸನಗೊಳಿಸಬೇಕು ಎಂದರ್ಥ.

ಜಾತಿ ನಿರ್ಮೂಲನಕ್ಕಿರುವ ಮಾರ್ಗಗಳನ್ನು ನಾನು ಒತ್ತಿ ಹೇಳಿದ್ದೇನೆ. ಯಾಕೆಂದರೆ ಆದರ್ಶವನ್ನು ಅರಿತುಕೊಳ್ಳುವುದಕ್ಕಿಂತ ಅದರ ಸಾಧನೆಯ ಮಾರ್ಗಗಳನ್ನು ಅರಿತುಕೊಳ್ಳುವುದು ಹೆಚ್ಚು ಮಹತ್ವದ್ದು. ಸರಿಯಾದ ಮಾರ್ಗಜ್ಞಾನವಿಲ್ಲದಿದ್ದರೆ ನಿಮ್ಮ ಪ್ರಯತ್ನಗಳೆಲ್ಲ ಗುರಿ ತಪ್ಪುವುದು ನಿಶ್ಚಿತ. ನನ್ನ ವಿಶ್ಲೇಷಣೆ (ಪುಟ 81)

ಸರಿಯಾಗಿದ್ದ ಪಕ್ಷದಲ್ಲಿ ನಿಮ್ಮ ಸಾಹಸ ಹಿಮಾಲಯವನ್ನು ಹೊತ್ತು ನಿಲ್ಲುವಂತಹುದು. ಅದು ನಿಮಗೆ ಸಾಧ್ಯವೋ ಅಲ್ಲವೋ ಎಂಬುದನ್ನು ನೀವೇ ಹೇಳಬಲ್ಲಿರಿ.

ನನ್ನ ಮಟ್ಟಿಗೆ ಹೇಳುವುದಾದರೆ ಇದು ಬಹುಶಃ ಅಸಾಧ್ಯವೆಂದೇ ತೋರುತ್ತದೆ. ಯಾಕೆಂದು ನೀವು ಕೇಳಬಹುದು. ನಾನು ಕಂಡುಕೊಂಡ ಅನೇಕ ಕಾರಣಗಳಲ್ಲಿ ಮಹತ್ವದ ಕೆಲವನ್ನು ಇಲ್ಲಿ ಹೇಳುತ್ತೇನೆ. ಈ ಪ್ರಶ್ನೆಯನ್ನು ಕುರಿತು ಬ್ರಾಹ್ಮಣರು ಹೊಂದಿರುವ ದ್ವೇಷ ಮನೋವೃತ್ತಿ ಮೊದಲನೆಯ ಕಾರಣ. ರಾಜಕೀಯ ಸುಧಾರಣೆಯ ಹಾಗೂ ಕೆಲವೆಡೆ ಆರ್ಥಿಕ ಸುಧಾರಣೆಯ ಧುರೀಣರು ಬ್ರಾಹ್ಮಣರೇ ಆಗಿದ್ದಾರೆ. ಆದರೆ ಜಾತಿ ನಿರ್ಮೂಲನೆಗೆ ಹೊರಟ ಜನಸಮೂಹದಲ್ಲಿ ಒಬ್ಬನೂ ಬ್ರಾಹ್ಮಣ ಇಲ್ಲ. ಇನ್ನು ಮುಂದಾದರೂ ಈ ವಿಷಯದಲ್ಲಿ ಬ್ರಾಹ್ಮಣರು ಮುಂದಾಳುಗಳಾದಾರೆಂಬ ಭರವಸೆಯುಂಟೆ? ಇಲ್ಲವೆಂದು ನಾನು ಹೇಳುತ್ತೇನೆ. ಅದೇಕೆಂದು ನೀವು ಕೇಳಬಹುದು. ಬ್ರಾಹ್ಮಣರು ಸಾಮಾಜಿಕ ಸುಧಾರಣೆಗೆ ವಿಮುಖರಾಗಿ ಉಳಿಯುವುದಕ್ಕೆ ಕಾರಣವೇನೂ ಇಲ್ಲವೆಂದು ನೀವು ವಾದಿಸಬಹುದು. ಹಿಂದೂ ಸಮಾಜಕ್ಕೆ ಜಾತಿ ಒಂದು ಶಾಪವೆಂದು ಬ್ರಾಹ್ಮಣರು ಬಲ್ಲರೆಂದೂ, ಜಾಗೃತವಾದ ಬುದ್ದಿವಂತ ವರ್ಗಕ್ಕೆ ಸೇರಿದ ಅವರು ಅದನ್ನು ಉಪೇಕ್ಷಿಸಲಾರರೆಂದೂ ನೀವು ವಾದಿಸಬಹುದು. ಬ್ರಾಹ್ಮಣರಲ್ಲಿ ವೈದಿಕರಂತಹ ಕರ್ಮಠರು ಇರುವಂತೆ ಲೌಕಿಕ ಅಥವಾ ಪ್ರಾಪಂಚಿಕರಂತಹ ವ್ಯಾವಹಾರಿಕರೂ ಇದ್ದಾರೆಂದೂ, ಜಾತಿ ನಿರ್ಮೂಲನೆಗೆ ಮೊದಲ ವರ್ಗದವರು ಮುಂದಾಗದಿದ್ದರೆ ಎರಡನೆಯ ವರ್ಗದವರು ಮುಂದೆ ಬಂದೇ ಬರುವರೆಂದೂ ನೀವು ವಾದ ಮಾಡಬಹುದು. ಹೀಗೆಲ್ಲ ವಾದಿಸುವಾಗ ನೀವು ಒಂದು ಮುಖ್ಯವಾದ ಮಾತನ್ನು ಮರೆಯುತ್ತೀರಿ. ಏನೆಂದರೆ, ಜಾತಿಪದ್ದತಿಯ ನಿರ್ಮೂಲನೆಯಿಂದ ಬ್ರಾಹ್ಮಣ ಜಾತಿಗೆ ಪೆಟ್ಟು ಬೀಳಲೇಬೇಕಷ್ಟೆ? ತಮ್ಮ ಪ್ರತಿಷ್ಠೆ ಹಾಗೂ ಅಧಿಕಾರಗಳಿಗೆ ಕತ್ತರಿ ಹಾಕುವಂಥ ಈ ಆಂದೋಲನಕ್ಕೆ ಬ್ರಾಹ್ಮಣರು ಎಂದಾದರೂ ಮುಂದಾಗಬಹುದೆ? ವೈದಿಕ ವರ್ಗಕ್ಕೆ ವಿರುದ್ಧವಾದ ಆಂದೋಲನದಲ್ಲಿ ಲೌಕಿಕ ಬ್ರಾಹ್ಮಣರು ಭಾಗವಹಿಸುವ ಸಂಭವವುಂಟೆ? ನನ್ನನ್ನು ಕೇಳಿದರೆ ಬ್ರಾಹ್ಮಣರಲ್ಲಿ ವೈದಿಕರು, ಲೌಕಿಕರು ಎಂದು ವರ್ಗ ಮಾಡುವುದೇ ತಪ್ಪು. ಅವೆರಡೂ ಒಂದೇ ಬಳಗಕ್ಕೆ ಸೇರಿದವು. ಒಂದು ದೇಹದ ಎರಡು ತೋಳುಗಳು; ಒಂದರ ರಕ್ಷಣೆಗೆ ಇನ್ನೊಂದು ಬರುತ್ತದೆ. ಈ ಸಂದರ್ಭದಲ್ಲಿ ಪ್ರೊ. ಡೈಸಿಯವರ ‘ಇಂಗ್ಲಿಷ್ ಕಾನ್ಸ್ಟಿಟ್ಯೂಶನ್’ ಎಂಬ ಗ್ರಂಥದಲ್ಲಿಯ ಕೆಲವು ಅರ್ಥಗರ್ಭಿತ ಮಾತುಗಳು ನನಗೆ ನೆನಪಾಗುತ್ತವೆ. ಶಾಸನಾಧಿಕಾರ ವಿಷಯದಲ್ಲಿ ಪಾರ್ಲಿಮೆಂಟಿಗಿರುವ ಪರಿಮಿತಿಯನ್ನು ವಿವೇಚಿಸುತ್ತ ಪ್ರೊ. ಡೈಸಿ ಹೀಗೆನ್ನುತ್ತಾರೆ. “ಸಾರ್ವಭೌಮನ ಅಥವಾ ಪಾರ್ಲಿಮೆಂಟಿನ ನಿಜವಾದ ಅಧಿಕಾರ ಚಲಾವಣೆಯ ಶಕ್ತಿ ಎರಡು ಮಿತಿಗಳಿಗೆ ಬದ್ಧವಾಗಿರುತ್ತದೆ. ಅವುಗಳಲ್ಲಿ ಒಂದು ಬಾಹ್ಯ. ಇನ್ನೊಂದು ಆಂತರಿಕ. ಪ್ರಜೆಗಳೆಲ್ಲರೂ ಅಥವಾ ಅವರಲ್ಲಿ ಬಹುಸಂಖ್ಯಾತರು ತನ್ನ ಶಾಸನವನ್ನು ಉಲ್ಲಂಘಿಸುವ ಅಥವಾ ಪ್ರತಿಭಟಿಸುವ ಸಾಧ್ಯತೆಯು ಸಾರ್ವಭೌಮತೆ ನೀಡಿರುವ ಅಧಿಕಾರಕ್ಕೆ ಒಂದು ಮಿತಿಯಾಗಿರುತ್ತದೆ. ಸಾರ್ವಭೌಮಾಧಿಕಾರಿ ಕೂಡ ತನ್ನ ಸ್ವಭಾವಕ್ಕೆ ಅನುಸಾರವಾಗಿಯೇ ಅಧಿಕಾರ ನಡೆಸುತ್ತಾನೆ. ಅವನ ಸಮಾಜ, ಆ ಕಾಲದ ನೈತಿಕ ಭಾವನೆ ಮೊದಲಾದವುಗಳು ಅವನ ಸ್ವಭಾವಕ್ಕೆ ಕಾರಣವಾಗಿರುತ್ತವೆ. ಸುಲ್ತಾನನು ತನ್ನ ಇಷ್ಟಾನುಸಾರವಾಗಿ ಮಹಮ್ಮದೀಯ ಜಗತ್ತಿನ ಧರ್ಮವನ್ನು ಬದಲಿಸಲಾರನು. ಒಂದು ವೇಳೆ ಅವನು ಬದಲಿಸುವುದು ಸಾಧ್ಯವಾದರೂ ಮಹಮ್ಮದೀಯ ಗುರುವರ್ಗ ಮಹಮ್ಮದನ ಧರ್ಮವನ್ನು ಬಿಡಲೊಪ್ಪುವುದು ಅಸಾಧ್ಯ. ಸುಲ್ತಾನನ ಅಧಿಕಾರಕ್ಕೆ ಬಾಹ್ಯಮಿತಿ ಎಷ್ಟು ಪ್ರಬಲವೋ ಆಂತರಿಕ ಮಿತಿಯೂ ಅಷ್ಟೇ ಪ್ರಬಲವಾಗಿರುತ್ತದೆ. ಈ ಸುಧಾರಣೆಯನ್ನು ಪೋಪ್ ಯಾಕೆ ಆರಂಭಿಸಿಲ್ಲ ಎಂದು ಜನ ಸುಮ್ಮನೆ ಕೇಳುತ್ತಾರೆ. ಇದಕ್ಕೆ ನಿಜವಾದ ಉತ್ತರ ಏನೆಂದರೆ ಧರ್ಮಗುರುವಾಗುವಾತ ಕ್ರಾಂತಿಕಾರನಲ್ಲ, (ಪುಟ 82)

ಧರ್ಮಗುರುವಾಗಿರುವ ಮನುಷ್ಯ ಕ್ರಾಂತಿಕಾರನಾಗಲು ಬಯಸುವುದಿಲ್ಲ”. ಈ ಮಾತುಗಳು ಭಾರತೀಯ ಬ್ರಾಹ್ಮಣರಿಗೂ ಅನ್ವಯಿಸುವುದೆಂದು ನನಗನಿಸುತ್ತದೆ. ಬ್ರಾಹ್ಮಣನಾಗಿ ಹುಟ್ಟಿದವನಿಗೆ ಕ್ರಾಂತಿಕಾರಿಯಾಗುವ ಬಯಕೆಯಿರಲಾರದು. “ನೀಲಿ ಕಣ್ಣುಗಳುಳ್ಳ ಕೂಸುಗಳನ್ನೆಲ್ಲ ಕೊಂದುಬಿಡಬೇಕೆಂದು ಬ್ರಿಟಿಷ್ ಪಾರ್ಲಿಮೆಂಟು ಶಾಸನ ಮಾಡೀತೆ?” ಎಂದು ಕೇಳಿದ್ದರು ಲೆಸ್ಲಿ ಸ್ಟೀಫೆನ್. ಹಾಗೆ ನಿರೀಕ್ಷಿಸುವುದು ನಿರಾಧಾರ. ಸಾಮಾಜಿಕ ಸುಧಾರಣೆಯ ವಿಷಯದಲ್ಲಿ ಬ್ರಾಹ್ಮಣನು ಕ್ರಾಂತಿಕಾರಿಯಾದಾನೆಂದು ನಿರೀಕ್ಷಿಸುವುದು ಅಷ್ಟೇ ನಿರಾಧಾರವಾದುದು.

ಜಾತಿ ವಿರೋಧದ ಚಳುವಳಿಯಲ್ಲಿ ಬ್ರಾಹ್ಮಣರು ಮುಂದಾಳಾಗುವುದು ಅಥವಾ ಬಿಡುವುದು ಮಹತ್ವದ ವಿಷಯವಲ್ಲ ಎಂದು ನಿಮ್ಮಲ್ಲಿ ಕೆಲವರು ಹೇಳಬಹುದು, ಈ ಅಭಿಪ್ರಾಯ ತಪ್ಪು. ಸಮಾಜದಲ್ಲಿ ಬುದ್ಧಿವಂತ ವರ್ಗದ ಪಾತ್ರವನ್ನು ಉಪೇಕ್ಷಿಸಲಾಗುವುದಿಲ್ಲ. ಒಬ್ಬ ಯುಗಪುರುಷನಿಂದ ದೇಶದ ಚರಿತ್ರೆ ನಿರ್ಮಾಣವಾಗುತ್ತದೆಯೆಂಬ ವಾದವನ್ನು ನೀವು ಒಪ್ಪಿ ಅಥವಾ ಬಿಡಿ, ಆದರೆ ಪ್ರತಿಯೊಂದು ದೇಶದಲ್ಲಿ ಬುದ್ದಿವಂತರ ವರ್ಗ ಆಳುವ ವರ್ಗವಲ್ಲವಾದರೂ ಅತ್ಯಂತ ಪ್ರಭಾವಿ ವರ್ಗವೆಂಬುದನ್ನು ನೀವು ಒಪ್ಪಲೇಬೇಕಾಗುತ್ತದೆ. ಭವಿಷ್ಯತ್ತಿನ ಆಗುಹೋಗುಗಳನ್ನು ಮುಂಗಾಣುವ ವರ್ಗವೆಂದರೆ ಪ್ರಜ್ಞಾವಂತ ವರ್ಗವೇ; ಮುಂದಾಳಾಗಿ ಸಲಹೆ ಕೊಡಬಲ್ಲ ವರ್ಗವೂ ಅದೇ. ಯಾವ ದೇಶದಲ್ಲಿಯೇ ಆದರೂ ಬಹುಸಂಖ್ಯಾತರಾದ ಜನಸಾಮಾನ್ಯರು ಸ್ವಂತ ಬುದ್ಧಿಶಕ್ತಿಯಿಂದ ವಿಚಾರ ಮಾಡುವ ಅಥವಾ ಮುನ್ನಡೆಯುವ ಯೋಗ್ಯತೆಯನ್ನು ಹೊಂದಿರುವುದಿಲ್ಲ. ಜನಸಾಮಾನ್ಯರು ಯಾವಾಗಲೂ ಬುದ್ಧಿವಂತ ವರ್ಗದವರನ್ನು ಅವಲಂಬಿಸಿರುತ್ತಾರೆಂದರೆ ಅತಿಶಯೋಕ್ತಿಯಲ್ಲ. ಈ ಬುದ್ದಿವಂತ ವರ್ಗ ಪ್ರಾಮಾಣಿಕವೂ ಸ್ವತಂತ್ರವೂ, ನಿಸ್ಪೃಹವೂ ಆಗಿದ್ದ ಪಕ್ಷದಲ್ಲಿ ಅದು ತಾನೇ ಮುಂದಾಳ್ತನವನ್ನು ವಹಿಸಿ ದೇಶವನ್ನು ಸಂಕಟದಿಂದ ಪಾರು ಮಾಡಬಲ್ಲದು. ಬುದ್ದಿಶಕ್ತಿಯೇ ಪರಮ ಗುಣವೆಂದಲ್ಲ, ಕಾರ್ಯನಿರ್ವಹಣೆಗೆ ಅದೊಂದು ಸಾಧನ ಮಾತ್ರ. ಸಾಧಿಸಬೇಕಾದ ಗುರಿಯನ್ನು ನೋಡಿ ಅದಕ್ಕೆ ತಕ್ಕಂತೆ ವಿಧಾನವನ್ನುಪಯೋಗಿಸುವುದು ಬುದ್ದಿವಂತನ ಲಕ್ಷಣ. ಬುದ್ಧಿಶಕ್ತಿಯುಳ್ಳವನು ಸಜ್ಜನನಾಗಿರಬಲ್ಲನು, ದುರ್ಜನನೂ ಆಗಿರಬಲ್ಲನು. ಅದೇ ಮೇರೆಗೆ ಬುದ್ದಿವಂತರ ವರ್ಗವು ಉದಾರ ಹೃದಯದ ಒಂದು ಸಂಘವಾಗಿದ್ದು ಹಾದಿ ತಪ್ಪಿದ ಜನತೆಯನ್ನು ಉದ್ದರಿಸಿ ಸರಿದಾರಿಗೆ ಒಯ್ಯುವುದಕ್ಕೆ, ಸಹಾಯ ಮಾಡುವುದಕ್ಕೆ ಸದಾ ಸಿದ್ಧವಾಗಿರಬಹುದು, ಅಥವಾ ತನ್ನ ಸ್ವಾರ್ಥಕ್ಕಾಗಿ ಒಂದು ಸಂಕುಚಿತ ಕೂಟವನ್ನು ಸ್ಥಾಪಿಸಿ ಜನರನ್ನು ಅದರೊಳಗೆ ಸೆಳೆದುಕೊಳ್ಳುವ ವಂಚಕರ ಗುಂಪೂ ಆಗಿರಬಹುದು. ಬುದ್ದಿವಂತ ವರ್ಗದ ಇನ್ನೊಂದು ಹೆಸರೇ ಬ್ರಾಹ್ಮಣ ಜಾತಿಯೆಂದರೆ ನಿಮಗೆ ವ್ಯಥೆಯಾಗಬಹುದು. ಸಮಸ್ತ ದೇಶದ ಹಿತರಕ್ಷಣೆಗೆ ನಿಲ್ಲುವ ಬದಲಾಗಿ ತಮ್ಮ ಒಂದು ಜಾತಿಯ ಹಿತಾಸಕ್ತಿಯನ್ನೇ ಈ ಬುದ್ಧಿವಂತ ವರ್ಗ ನೋಡಿಕೊಳ್ಳುತ್ತ ಬಂದಿದೆಯೆಂದು ನೊಂದುಕೊಳ್ಳಬಹುದು. ಆದರೆ ಹಿಂದೂಗಳಲ್ಲಿ ಬುದ್ಧಿವಂತ ವರ್ಗವೆಂದರೆ ಬ್ರಾಹ್ಮಣರೇ ಎಂಬುದು ವಸ್ತುಸ್ಥಿತಿಯಾಗಿದೆ. ಅದು ಬುದ್ದಿವಂತ ವರ್ಗವಾಗಿರುವುದೊಂದೇ ಅದರ ಹಿರಿಮೆಯಲ್ಲ; ಇತರ ಹಿಂದೂಗಳಿಗೆಲ್ಲ ಪರಮ ಪೂಜ್ಯವೆನಿಸಿದ ವರ್ಗವಾಗಿದೆ. ಅವರನ್ನು ಭೂಸುರರೆಂದು ಪರಿಗಣಿಸಲಾಗಿದೆ. ಬ್ರಾಹ್ಮಣನೇ ಗುರುವೆಂದು ವಿಧಿಸಲಾಗಿದೆ. ‘ವರ್ಣಾನಾಂ ಬ್ರಾಹ್ಮಣೋ ಗುರುಃ’ ಎಂದಿದೆ. ಮನು ಹೀಗೆನ್ನುತ್ತಾನೆ. “ನಿರ್ದಿಷ್ಟವಾಗಿ ವಿಧಿಸದೆ ಇರುವ ಧರ್ಮಾಚರಣೆಯ ಕೆಲವು ವಿಷಯಗಳು ಬಂದಾಗ ನಾವು ಹೇಗೆ ವರ್ತಿಸಬೇಕೆಂಬ ಪ್ರಶ್ನೆ ಏಳಬಹುದು. ಇಂತಹ ಪ್ರಸಂಗಗಳಲ್ಲಿ ಶಿಷ್ಟರಾದ ಬ್ರಾಹ್ಮಣರು ಹೇಳಿದ್ದೇ ಪ್ರಮಾಣವಾಗುತ್ತದೆ.” (ಪುಟ 83)

ಅನಾಮ್ನತೇಷು ಧರ್ಮೇಷು ಕಥಂ ಸ್ವಾದಿತಿ ಚೇದ್ಭವೇತ್ |

ಯಂ ಶಿಷ್ಟಾ ಬ್ರಾಹ್ಮಣಾ ಬ್ರೂಯುಃ ಸಧರ್ಮಃ ಸ್ಯಾದಶಂಕಿತಃ ॥

ಹೀಗೆ ಸಮಾಜವನ್ನು ತನ್ನ ಅಂಕೆಯಲ್ಲಿಟ್ಟುಕೊಂಡಿರುವ ಬುದ್ಧಿವಂತ ವರ್ಗವು ಜಾತಿ ಸುಧಾರಣೆಗೆ ವಿರೋಧವೊಡ್ಡುತ್ತಿರುವಾಗ ಜಾತಿ ನಿರ್ಮೂಲನೆಯ ಆಂದೋಲನ ಯಶಸ್ವಿಯಾಗುವ ಸಂಭವ ತೀರ ಕಡಿಮೆಯೆಂದು ನನಗೆ ತೋರುತ್ತದೆ.

ಈ ಕಾರ್ಯ ಅಸಾಧ್ಯವೆಂಬುದಕ್ಕೆ ನಾನು ಕೊಡುವ ಎರಡನೆಯ ಕಾರಣ ನಿಮಗೆ ಸ್ಪಷ್ಟವಾಗಬೇಕಾದರೆ ಜಾತಿಪದ್ಧತಿಗೆ ಎರಡು ಪಾರ್ಶ್ವಗಳಿವೆಯೆಂಬುದನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ಜನರನ್ನು ಬಿಡಿಬಿಡಿ ಗುಂಪುಗಳಾಗಿ ಅದು ಒಡೆದುಹಾಕುವುದು ಒಂದು ಮುಖ. ಈ ಗುಂಪುಗಳನ್ನು ಸಾಮಾಜಿಕವಾಗಿ ತಾರತಮ್ಯಭಾವದಿಂದ ಒಂದು ಶ್ರೇಣಿಗೆ ಜೋಡಿಸುವುದು ಇನ್ನೊಂದು ಮುಖ. ಜಾತಿಗಳ ಶ್ರೇಣಿಯಲ್ಲಿ ತಾನು ಇನ್ನೊಂದು ಜಾತಿಗಿಂತ ಮೇಲೆಯೇ ಇದ್ದೇನೆಂದು ಪ್ರತಿಯೊಂದು ಜಾತಿಯೂ ಹೆಮ್ಮೆ ಪಟ್ಟುಕೊಳ್ಳುತ್ತದೆ. ಈ ಶ್ರೇಣಿಯ ಬಾಹ್ಯಲಕ್ಷಣವಾಗಿ ಸಾಮಾಜಿಕ ಹಾಗೂ ಧಾರ್ಮಿಕ ಹಕ್ಕುಗಳ ಶ್ರೇಣಿಯೂ ಇರುತ್ತದೆ. ಈ ಹಕ್ಕುಗಳಿಗೆ ಅಷ್ಟಾಧಿಕಾರಗಳು ಮತ್ತು ಸಂಸ್ಕಾರಗಳು ಎಂದು ಹೆಸರು. ಜಾತಿಯ ಮಟ್ಟ ಹೆಚ್ಚುಹೆಚ್ಚಾದಂತೆ ಈ ಹಕ್ಕುಗಳ ಸಂಖ್ಯೆ ಹೆಚ್ಚಾಗುತ್ತದೆ. ಮಟ್ಟ ಕಡಿಮೆಯಾದಂತೆ ಅವುಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. ಹೀಗೆ ತಾರತಮ್ಯ ಭಾವದ ಶ್ರೇಣಿಯನ್ನು ಹೊಂದಿರುವುದೇ ಮುಖ್ಯ ತೊಡರು. ಜಾತಿಪದ್ಧತಿಯ ಮೇಲೆ ದಾಳಿ ಮಾಡಲು ‘ಸಮಾನರ ಕೂಟ’ ಸಾಧ್ಯವಾಗುವುದಿಲ್ಲ. ತನಗಿಂತ ಮೇಲು ಜಾತಿಯವರೊಡನೆ ಊಟ ಮಾಡುವ ಮತ್ತು ರಕ್ತಸಂಬಂಧ ಏರ್ಪಡಿಸುವ ಹಕ್ಕು ತನಗಿದೆಯೆಂದು ಯಾವುದಾದರೂ ಜಾತಿ ಹೊರಟಿತೆನ್ನಿ, ಆಗ ಕ್ಷುದ್ರ ಕಿಡಿಗೇಡಿಗಳು ಕೂಡಲೇ ಅದನ್ನು ಸ್ತಬ್ಧಗೊಳಿಸಬಲ್ಲರು. ನಮ್ಮೊಡನೆ ನೀವು ರಕ್ತಸಂಬಂಧಾದಿಗಳನ್ನು ಮಾಡಬಯಸುವಿರಾದರೆ ನಿಮಗಿಂತ ಕೆಳಜಾತಿಯವರೊಡನೆಯೂ ಸಹಭೋಜನ ಹಾಗೂ ರಕ್ತಸಂಬಂಧ ನಿಮಗೆ ಆಗಬೇಕಲ್ಲವೆ ಎಂದು ಹೇಳಿಬಿಡುತ್ತಾರೆ. ಎಲ್ಲರೂ ಜಾತಿ ಪದ್ಧತಿಯ ಗುಲಾಮರೇ. ಆದರೆ ಎಲ್ಲ ಗುಲಾಮರ ಸ್ಥಾನಮಾನ ಒಂದೇ ಆಗಿಲ್ಲ. ಆರ್ಥಿಕ ಕ್ರಾಂತಿಗೆ ಜನರನ್ನು ಹುರಿದುಂಬಿಸುತ್ತ ಕಾರ್ಲ್‌ ಮಾರ್ಕ್ಸ್ ಹೇಳಿದರು, “ನಿಮ್ಮ ಸಂಕೋಲೆಗಳನ್ನಲ್ಲದೆ ಬೇರೇನನ್ನೂ ನೀವು ಕಳೆದುಕೊಳ್ಳಬೇಕಾಗಿಲ್ಲ”. ಆದರೆ ಸಾಮಾಜಿಕ ಹಾಗೂ ಧಾರ್ಮಿಕ ಹಕ್ಕುಗಳನ್ನು ಹೆಚ್ಚುಕಡಿಮೆ ಪ್ರಮಾಣದಲ್ಲಿ ಹಂಚಿ ಹಾಕಿರುವ ಕುತಂತ್ರದ ಜಾತಿಪದ್ಧತಿಯಲ್ಲಿ ಸಿಕ್ಕಿಕೊಂಡ ಹಿಂದೂಗಳ ಮುಂದೆ ಕಾರ್ಲ್‌ ಮಾರ್ಕ್ಸ್ ನ ಧ್ಯೇಯವಾಕ್ಯ ಅರಣ್ಯರೋದನವಾಗುತ್ತದೆ. ಜಾತಿಪದ್ಧತಿಯೆಲ್ಲ ನಾಶವಾಗುವುದಾದರೆ ಕೆಲವರು ಬಹಳಷ್ಟು ಪ್ರತಿಷ್ಠೆಯನ್ನೂ ಅಧಿಕಾರವನ್ನೂ ಕಳೆದುಕೊಳ್ಳಬೇಕಾದೀತು. ಆದುದರಿಂದ ನೀವು ಹಿಂದೂಗಳನ್ನು ಸಂಘಟಿಸಿ ಜಾತಿ ನಿರ್ಮೂಲನಕ್ಕೆ ಅಣಿಗೊಳಿಸಲಾರಿರಿ.

XXII

ಹಿಂದೂಗಳನ್ನು ತರ್ಕದಿಂದ ಮನವೊಲಿಸಿ, ತರ್ಕವಿರುದ್ಧವಾದ ಕಾರಣ ಜಾತಿಪದ್ಧತಿಯನ್ನು ತೊರೆಯಲು ಹೇಳಬಲ್ಲಿರಾ? ಇಲ್ಲಿ ಇನ್ನೊಂದು ಪ್ರಶ್ನೆ ಹುಟ್ಟುತ್ತದೆ. ತರ್ಕ ಮಾಡುವ ಸ್ವಾತಂತ್ರ್ಯ ಹಿಂದೂವಿಗೆ ಇದೆಯೆ? ಆಚಾರ ವಿಷಯದಲ್ಲಿ ಪಾಲಿಸಬೇಕಾದರೆ ಮೂರು ಶಾಸನಗಳನ್ನು ಮನುಸ್ಮೃತಿ ವಿಧಿಸಿದೆ. “ವೇದ, ಸ್ಮೃತಿ, ಸದಾಚಾರಃ ಸ್ವಸ್ಯಚಃ ಪ್ರಿಯಮಾತ್ಮಾನಃ”. ತರ್ಕ ಮಾಡುವ ಬುದ್ದಿಗೆ ಇಲ್ಲಿ ಆಸ್ಪದವೇ ಇಲ್ಲ. ವೇದ, ಸ್ಮೃತಿ, (ಪುಟ 84)

ಸದಾಚಾರ ಇವುಗಳನ್ನುಳಿದ ಬೇರೆ ಯಾವುದನ್ನೂ ಹಿಂದೂವು ಅನುಸರಿಸಕೂಡದು. ಮೊದಲನೆಯದಾಗಿ, ವೇದಗಳಲ್ಲಿ ಅಥವಾ ಸ್ಮೃತಿಗಳಲ್ಲಿ ಹೇಳಿರುವ ಮಾತುಗಳನ್ನು ಅರ್ಥ ಮಾಡುವಾಗ ಸಂಶಯ ಹುಟ್ಟಿಕೊಂಡರೆ ಹೇಗೆ? ಈ ವಿಷಯದಲ್ಲಿ ಮನುವಿನ ಅಭಿಪ್ರಾಯ ಸ್ಪಷ್ಟವಾಗಿದೆ. ಮನು ಹೇಳುತ್ತಾನೆ.

ಯೋ ವ ಮನ್ನೇತ ತೇ ಮೂಲೇ ಹೇತು ಶಾಸ್ತ್ರಾಶ್ರ ಯಾದ್ವಿಜಃ ।

ಸ ಸಾಧುಭಿರ್ಬಹಿಷ್ಕಾರ್ಯೊ ನಾಸ್ತಿಕೋ ವೇದನಿಂದಕಃ |

ಈ ವಿಧಿಯ ಮೇರೆಗೆ ವೇದ, ಸ್ಮೃತಿಗಳ ಅರ್ಥ ವಿವರಣೆಯಲ್ಲಿ ಸ್ವತಂತ್ರ ಬುದ್ದಿಯಿಂದ ತರ್ಕ ಹೂಡುವುದು ನಿಷಿದ್ಧ. ಹೀಗಿರುವುದರಿಂದ ವೇದಗಳಲ್ಲಿ, ಕೃತಿಗಳಲ್ಲಿ ಹೇಳಿರುವ ವಿಷಯಕ್ಕೆ ಸುಮ್ಮನೆ ತಲೆದೂಗಬೇಕು; ತರ್ಕಿಸಕೂಡದು. ವೇದಗಳ ಉಕ್ತಿಗೂ ಸ್ಮೃತಿಗಳ ಉಕ್ತಿಗೂ ಪರಸ್ಪರ ವಿರೋಧ ಕಂಡುಬಂದಿತೆನ್ನಿ, ಆ ಪ್ರಸಂಗದಲ್ಲಿ ಕೂಡ ಸ್ವಂತ ಬುದ್ದಿಯಿಂದ ವಿಚಾರ ಮಾಡುವಂತಿಲ್ಲ. ಎರಡು ಸ್ಮೃತಿಗಳ ಪರಸ್ಪರ ವಿರೋಧವಾದ ಮಾತುಗಳನ್ನು ಹೇಳಿದ್ದರೆ ಅವೆರಡೂ ಸಮಾನವಾದ ಶಾಸನಗಳೇ. ಅವೆರಡರಲ್ಲಿ ಯಾವುದನ್ನು ಅನುಸರಿಸಿದರೂ ದೋಷವಿಲ್ಲ. ಬುದ್ಧಿಶಕ್ತಿಯಿಂದ ತೂಗಿನೋಡಿ ಯಾವುದು ಸರಿಯೆಂದು ನಿರ್ಧರಿಸುವ ಪ್ರಯತ್ನ ಮಾಡಕೂಡದು. ಮನು ಸ್ಪಷ್ಟವಾಗಿ ಸಾರುತ್ತಾನೆ.

ಶ್ರುತಿಧಂ ತು ಯತ್ರ ಸ್ಯಾತ್ತತ್ರ ಧರ್ಮಾವುಬೌ ಸ್ಮೃತೌ ।

ಶ್ರುತಿ ಹಾಗೂ ಸ್ಮೃತಿ ಇವೆರಡರಲ್ಲಿ ಪರಸ್ಪರ ವಿರೋಧ ಕಂಡರೆ ಶ್ರುತಿಯ ಮಾತೇ ಪ್ರಮಾಣ. ಆದರೆ ಇಲ್ಲಿ ಕೂಡ ಇವೆರಡರಲ್ಲಿ ಯಾವುದು ಬುದ್ಧಿಸಮ್ಮತವೆಂದು ನೋಡಲು ಪ್ರಯತ್ನಿಸಕೂಡದು. ಇದನ್ನು ಮನುವೇ ಹೀಗೆ ಹೇಳಿದ್ದಾರೆ,

ಯಾ ವೇದಬಾಹ್ಯಾಃ ಸ್ಮೃತಯೋ ಯಾಶ್ಚ ಕಾಶ್ಚ ಕುದೃಷ್ಟಃ ।

ಸರ್ವಾಸ್ತಾ ನಿಷ್ಪಲಾಃ ಪ್ರೇತ್ಯ ತಮೋನಿಷ್ಟಾ ಹಿ ತಂ ಸ್ಮೃತಾಃ ॥

ಎರಡು ಸ್ಮೃತಿಗಳಲ್ಲಿ ವಿರೋಧ ಕಂಡರೆ ಮನುಸ್ಮೃತಿಯೇ ಪ್ರಮಾಣ. ಇಲ್ಲಿ ಕೂಡ ಸ್ವತಂತ್ರವಾಗಿ ತರ್ಕಿಸಕೂಡದು. ಬೃಹಸ್ಪತಿ ಈ ಕೆಳಗಿನಂತೆ ಹೇಳಿದ್ದಾನೆ.

ವೇದಾಯತ್ವೋಪನಿಬಂಧೃತ್ವಾತ್ ಪ್ರಮಾಣ್ಯಂ ಹಿ ಮನೋಃಸ್ಕೃತಂ ।

ಮರ್ನ್ವಥವಿಪರೀತಾ ತು ಯಾ ಸ್ಮೃತಿಃ ಸಾರ ನ ಶಸ್ಯತೇ ॥

ಶ್ರುತಿ ಮತ್ತು ಸ್ಮೃತಿಗಳು ಹೇಳಿ ಬಿಟ್ಟ ಮೇಲೆ ಮುಗಿದು ಹೋಯಿತು. ಹಿಂದೂವಾದವನು ತನ್ನ ಬುದ್ಧಿಶಕ್ತಿಯನ್ನು ಅದಕ್ಕೆ ಬಳಸಿಕೊಳ್ಳಬೇಕಾಗಿಲ್ಲ. ಮಹಾಭಾರತದಲ್ಲಿ ಕೂಡ ಇದೇ ಮಾತನ್ನು ಹೇಳಲಾಗಿದೆ, (ಪುಟ 85)

ಪುರಾಣಂ ಮಾನವೋ ಧರ್ಮಃ ಸಾಂಗೋ ವೇದಶ್ಚಿಕಿತ್ಸಿತಂ ।

ಆಜ್ಞಾಸಿದ್ದಾನಿ ಚತ್ವಾತಿ ನ ಹಂತವ್ಯಾನಿ ಹೇತುಭಿಃ ।

ಜಾತಿ ಮತ್ತು ವರ್ಣ ಇವೆರಡನ್ನೂ ಕುರಿತು ವೇದಗಳಲ್ಲಿಯೂ ಸ್ಮೃತಿಗಳಲ್ಲಿಯೂ ವಿಧಿನಿಷೇಧಗಳನ್ನು ಹೇಳಿರುವುದರಿಂದ ಹಿಂದೂವಾದವನಿಗೆ ಸ್ವತಂತ್ರ ವಿಚಾರಶಕ್ತಿಯ ಅವಕಾಶವೇ ಇಲ್ಲ. ರೈಲ್ವೆ ಪ್ರವಾಸ ಮತ್ತು ವಿದೇಶ ಯಾತ್ರೆಗಳಂತಹ ಪ್ರಸಂಗಗಳಲ್ಲಿ ಜಾತಿ ನಿಯಮಗಳನ್ನು ಮುರಿಯಬೇಕಾಗಿಬಂದರೂ, ಮತ್ತೆ ಜಾತಿ ನಿಯಮಗಳಿಗೆ ನಿಷ್ಠೆ ತೋರುವ ಹಿಂದೂಗಳನ್ನು ಕಂಡು ಹಿಂದೂಗಳಲ್ಲದವರು ನಗುತ್ತಿರಬಹುದು. ಹಿಂದೂಗಳ ವಿಚಾರಶಕ್ತಿಗೆ ತೊಡಿಸಿದ ಇನ್ನೊಂದು ಸಂಕೋಲೆಯನ್ನು ಈ ಸಂಗತಿ ಪ್ರಕಟಿಸುತ್ತದೆ. ಮನುಷ್ಯನ ಜೀವನ ಕೇವಲ ಅಭ್ಯಾಸಬಲದಿಂದ, ವಿಚಾರ ಮಾಡುವ ಅವಶ್ಯಕತೆಯಿಲ್ಲದೆಯೆ ಸಾಮಾನ್ಯವಾಗಿ ಸಾಗುತ್ತದೆ. ಯಾವುದೋ ಒಂದು ನಿರ್ದಿಷ್ಟವಾದ ನಂಬಿಕೆ ಅಥವಾ ತಿಳುವಳಿಕೆ ಸರಿಯೊ ತಪ್ಪೋ ಎಂಬುದನ್ನು ಸಾಧಕಬಾಧಕ ಪ್ರಮಾಣಗಳಿಂದ ಪರಿಶೀಲಿಸಿ ನೋಡಿ, ಆಳವಾಗಿ ಚಿಂತಿಸಿ ನಿರ್ಣಯಕ್ಕೆ ಬರುವ ಪ್ರಸಂಗ ತೀರ ಅಪರೂಪ. ಒಂದು ಸಂಕಟಕಾಲ ಅಥವಾ ಸಂದಿಗ್ಧ ಪರಿಸ್ಥಿತಿ ಉಂಟಾದಾಗ ಮಾತ್ರ ವಿಚಾರಶಕ್ತಿ ಈ ಕ್ರಿಯೆಯಲ್ಲಿ ತೊಡಗಬಹುದು. ರೈಲ್ವೆ ಪ್ರವಾಸವಾಗಲಿ, ವಿದೇಶ ಪ್ರಯಾಣವಾಗಲಿ ಹಿಂದೂವಿನ ಜೀವನದಲ್ಲಿ ಒಂದು ದಿವ್ಯ ಪರೀಕ್ಷೆಯ ಸಂದರ್ಭವೇ ಆಗುತ್ತದೆ; ಎಲ್ಲಾ ಕಾಲದಲ್ಲಿ ಪಾಲಿಸಲಾಗದಿದ್ದರೆ ಜಾತಿ ನಿಯಮಗಳನ್ನು ಪಾಲಿಸುವುದಾದರೂ ಯಾತಕ್ಕೆ ಎಂಬ ಪ್ರಶ್ನೆ ಹಿಂದೂವಿಗೆ ಬರಬೇಕಷ್ಟೆ, ಆದರೆ ಆ ಪ್ರಶ್ನೆ ಅವನಿಗೆ ಬರುವುದೇ ಇಲ್ಲ. ಒಂದು ಹೆಜ್ಜೆಯಲ್ಲಿ ಜಾತಿಯನ್ನು ಉಲ್ಲಂಘಿಸುತ್ತಾನೆ. ಮುಂದಿನ ಹೆಜ್ಜೆಯಲ್ಲಿ ಏನೂ ಆಗಿಲ್ಲವೆಂಬಂತೆ ಜಾತಿಯ ನಿಯಮವನ್ನು ಪಾಲಿಸುತ್ತಾನೆ. ಈ ವಿಚಿತ್ರವಾದ ನಡವಳಿಕೆಗೆ ಉತ್ತರ ಶಾಸ್ತ್ರಗಳ ಶಾಸನದಲ್ಲಿದೆ. “ಸಾಧ್ಯವಾದಷ್ಟು ಮಟ್ಟಿಗೆ ಜಾತಿ ನಿಯಮಗಳನ್ನು ಪಾಲಿಸು, ಮೀರಬೇಕಾಗಿ ಬಂದರೆ ಪ್ರಾಯಶ್ಚಿತ್ತದಿಂದ ಶುದ್ದಿ ಮಾಡಿಕೊ” ಎಂದು ಶಾಸ್ತ್ರಗಳು ಹೇಳುತ್ತವೆ. ಈ ಪ್ರಾಯಶ್ಚಿತ್ತ ವಿಧಾನದಿಂದ ಜಾತಿ ಪದ್ಧತಿ ನಿರಾತಂಕವಾಗಿ ಮುಂದುವರಿಯಲು ಅನುಕೂಲವಾಗಿದೆ. ವಿಚಾರ ಮಾಡುವ ಅವಕಾಶವನ್ನು ತಪ್ಪಿಸಿ ಜಾತಿ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲಾಗಿದೆ.

ಜಾತಿ ಹಾಗೂ ಅಸ್ಪೃಶ್ಯತೆಗಳ ನಿರ್ಮೂಲನೆಗಾಗಿ ಹಲವಾರು ಜನರು ಈ ಮೊದಲೇ ಪ್ರಯತ್ನಿಸಿದ್ದುಂಟು. ಇಂಥವರಲ್ಲಿ ರಾಮಾನುಜ, ಕಬೀರ ಮೊದಲಾದವರನ್ನು ಮುಖ್ಯವಾಗಿ ಹೆಸರಿಸಬಹುದು. ಈ ಸುಧಾರಕರ ಪ್ರಯತ್ನಗಳನ್ನು ವಿವರಿಸಿ, ಅವರನ್ನು ಅನುಸರಿಸಿರೆಂದು ಹಿಂದೂಗಳಿಗೆ ಹೇಳಬಲ್ಲಿರಾ? ಶ್ರುತಿ, ಸ್ಮೃತಿಗಳ ಜೊತೆಗೆ ಸದಾಚಾರವೆಂಬುದನ್ನೂ ಶಾಸನಗಳ ಸಾಲಿನಲ್ಲಿ ಮನು ಸೇರಿಸಿದ್ದಾನೆ. ಶಾಸ್ತ್ರಗಳಿಗಿಂತ ಸದಾಚಾರವೇ ಹೆಚ್ಚಿನದೆಂದೂ ಹೇಳಲಾಗಿದೆ.

ಯದ್ಯದಾಚರ್ಯತೇ ಯೇನ ಧರ್ಮಂ ವಾ ಧರ್ಮ್ಯಮೇವ ವಾ ।

ದೇಶಸ್ಯಾಚರಣಂ ನಿತ್ಯಂ ಚರಿತ್ರಂ ತದ್ಧಿ ಕೀರ್ತಿತಮ್ ||

ಈ ಮಾತಿನ ಮೇರೆಗೆ, ಧರ್ಮವಾಗಿರಲಿ, ಅಧರ್ಮವಾಗಿರಲಿ, ಶಾಸ್ತಾನುಸಾರವಾಗಿರಲಿ, ಶಾಸ್ತ್ರ ವಿರುದ್ಧವೇ ಆಗಿರಲಿ, ಸದಾಚಾರವನ್ನೇ ಪಾಲಿಸತಕ್ಕದ್ದು. ಆದರೆ ಸದಾಚಾರವೆಂದರೇನು? ಒಳ್ಳೆಯ ನಡತೆ, ಸರಿಯಾದ ನಡತೆಯೆಂದಾಗಲೀ ಸಜ್ಜನರ ನಡತೆಯೆಂದಾಗಲೀ ಭಾವಿಸಿದರೆ ತಪ್ಪು. ಸದಾಚಾರದ ಅರ್ಥ (ಪುಟ 86)

ಹಾಗಲ್ಲ. ಒಳ್ಳೆಯದೂ, ಪುರಾತನ ಕಾಲದಿಂದ ನಡೆದುಬಂದ ಆಚಾರವೇ ಸದಾಚಾರ. ಕೆಳಗಿನ ಶ್ಲೋಕ ಇದನ್ನು ಸ್ಪಷ್ಟಪಡಿಸುತ್ತದೆ :

ಯಸ್ಮನ್ ದೇಶೇ ಯ ಆಚಾರಃ ಪಾರಂಪರ್ಯ ಕ್ರಮಾಗತಃ |

ವರ್ಣಾನಾಂ ಕಿಲ ಸರ್ವೇಷಾಂ ಸ ಸದಾಚಾರ ಉಚ್ಯತೇ |

ಸದಾಚಾರವೆಂದರೆ ಒಳ್ಳೆಯ ಆಚಾರವೆಂಬ ಅಥವಾ ಸಜ್ಜನರ ಆಚಾರವೆಂಬ ಗ್ರಹಿಕೆಯಿಂದ, ಸಜ್ಜನರನ್ನೇ ಅನುಕರಿಸಿಯಾರೆಂಬ ಭೀತಿಯಿಂದಲೋ ಏನೋ ಸ್ಮೃತಿಗಳು ಸ್ಪಷ್ಟವಾಗಿ ಹೀಗೆ ವಿಧಿಸುತ್ತವೆ “ಶ್ರುತಿ, ಸ್ಮೃತಿ, ಸದಾಚಾರಗಳಿಗೆ ವ್ಯತಿರಿಕ್ತವಾದ ನಡತೆ ದೇವತೆಗಳಿಂದಾದರೂ ಅದು ಆಚರಣೆ ಯೋಗ್ಯವಲ್ಲ”. ಇದು ಅತಿ ವಿಚಿತ್ರವೆನಿಸಬಹುದು, ಅಬದ್ಧ ಎನಿಸಬಹುದು. ಆದರೆ ವಸ್ತುಸ್ಥಿತಿ ಹಾಗಿದೆ. ‘ನ ದೇವಚರಿತಂ ಚರೇತ್’ ಎಂಬುದು ಶಾಸ್ತ್ರಗಳು ವಿಧಿಸಿದ ಶಾಸನ. ಬುದ್ಧಿಶಕ್ತಿ ಮತ್ತು ನೀತಿ ಇವೆರಡು ಸುಧಾರಕನ ಬತ್ತಳಿಕೆಯಲ್ಲಿರುವ ಮಹಾಸ್ತ್ರಗಳು. ಇವೆರಡನ್ನೂ ಕಿತ್ತುಕೊಂಡುಬಿಟ್ಟರೆ ಅವನೇನು ಮಾಡಬಲ್ಲ? ಬುದ್ಧಿಯ ಉಪಯೋಗ ಮಾಡಲು ಜನರಿಗೆ ಸ್ವಾತಂತ್ರ್ಯವೇ ಇಲ್ಲವೆಂದರೆ ನೀವು ಜಾತಿಯನ್ನು ನಾಶ ಪಡಿಸುವುದು ಹೇಗೆ? ಜಾತಿಯೆಂಬುದು ನೀತಿ ಸಮ್ಮತವೋ ಅಲ್ಲವೋ ಎನ್ನುವುದನ್ನು ವಿಚಾರಿಸುವ ಸ್ವಾತಂತ್ರ್ಯ ಜನರಿಗೆ ಇಲ್ಲವೆಂದರೆ ನೀವು ಜಾತಿಯನ್ನು ಉಚ್ಛಾಟಿಸುವುದೆಂತು? ಜಾತಿ ಕಟ್ಟಿಕೊಂಡ ಕೋಟೆ ದುರ್ಭೇದ್ಯವಾಗಿದೆ. ಬುದ್ದಿ ಮತ್ತು ನೀತಿಗಳು ಅದನ್ನು ಭೇದಿಸಲಾರವು. ಇನ್ನೂ ಒಂದು ಮಾತನ್ನು ನೆನಪಿಡಿ. ಈ ದುರ್ಗದ ಒಳಗಡೆ ಬುದ್ದಿವಂತ ವರ್ಗವಾದ ಬ್ರಾಹ್ಮಣರ ಸೈನ್ಯ ಸನ್ನದ್ಧವಾಗಿ ನಿಂತಿದೆ. ಇದು ಸಂಬಳಕ್ಕಾಗಿ ದುಡಿಯುವ ಸೈನ್ಯವಲ್ಲ. ತನ್ನ ಮಾತೃಭೂಮಿಯನ್ನು ರಕ್ಷಿಸಲು ನಿಂತ ಸೈನ್ಯವಾಗಿದೆ. ಹೀಗಿರುವುದರಿಂದಲೇ ನಾನು ಹೇಳುತ್ತೇನೆ ಹಿಂದೂಗಳಲ್ಲಿಯ ಜಾತಿಗಳನ್ನು ಹೊಡೆದಟ್ಟುವುದು ಅಸಾಧ್ಯವಾದುದು. ಈ ಕೋಟೆಯಲ್ಲಿ ಒಂದು ತೂತು ಮಾಡುವುದಕ್ಕೆ ಒಂದು ಸುದೀರ್ಘ ಯುಗವೇ ಬೇಕಾದೀತು. ಈ ಕಾರ್ಯಕ್ಕೆ ದೀರ್ಘಾವಧಿಯೇ ಬೇಕಾಗಲಿ, ಅಲ್ಪಾವಧಿಯೇ ಸಾಕಾಗಲಿ ನೀವು ಮರೆಯದಿರಬೇಕಾದ ಒಂದು ಮಾತಿದೆ. ವೈಚಾರಿಕತೆಯನ್ನು ನಿರಾಕರಿಸುವ ವೇದಗಳನ್ನು ಹಾಗೂ ಶಾಸ್ತ್ರಗಳನ್ನು, ನೀತಿಗೂ ಬುದ್ದಿಗೂ ಅವಕಾಶವೀಯದಿರುವ ವೇದಗಳನ್ನು ಹಾಗೂ ಶಾಸ್ತ್ರಗಳನ್ನು ನೀವು ಸಿಡಿಮದ್ದನ್ನಿಟ್ಟು ಉಡಾಯಿಸಬೇಕು. ಶ್ರುತಿ ಮತ್ತು ಸ್ಮೃತಿಗಳ ಧರ್ಮವನ್ನು ನಾಶಮಾಡಬೇಕು. ಬೇರೆ ಉಪಾಯವೇ ಇಲ್ಲ. ಇದು ಈ ವಿಷಯದಲ್ಲಿ ನನ್ನ ಖಚಿತವಾದ ಅಭಿಪ್ರಾಯ.

XXIII

ಧರ್ಮನಾಶವೆಂದರೆ ಅದಕ್ಕೆ ನನ್ನ ಅರ್ಥವೇನೆಂದು ಕೆಲವರಿಗೆ ತಿಳಿಯಲಿಕ್ಕಿಲ್ಲ. ನನ್ನ ಈ ವಿಚಾರವೇ ಕೆಲವರಿಗೆ ಜಿಗುಪ್ಪೆ ಉಂಟುಮಾಡಿರಬಹುದು. ಕೆಲವರಿಗೆ ಅದು ಕ್ರಾಂತಿಕಾರಿಯೆಂದೂ ಅನ್ನಿಸೀತು. ಆದುದರಿಂದ ನನ್ನ ಅಭಿಪ್ರಾಯವನ್ನು ಇಲ್ಲಿ ತಿಳಿಸಿ ಸ್ಪಷ್ಟಪಡಿಸುತ್ತೇನೆ. ತತ್ವಗಳು ಬೇರೆ, ನಿಯಮಗಳು ಬೇರೆ. ಇದನ್ನು ನೀವು ಒಪ್ಪುತ್ತೀರೋ ಇಲ್ಲವೋ ನಾನಂತೂ ಒಪ್ಪುತ್ತೇನೆ. ನಿಯಮಗಳು ವ್ಯಾವಹಾರಿಕ; ವಿಧಿಸಿದ ರೀತಿಯಲ್ಲಿ ನಡೆದುಕೊಳ್ಳುವ ರೂಢಿಯ ಕ್ರಮಗಳು. ಆದರೆ ತತ್ವಗಳು ಬೌದ್ಧಿಕವಾಗಿರುತ್ತವೆ. ಸಾರಾಸಾರ ವಿವೇಚನೆಯಿಂದ (ಪುಟ 87)

ನಿರ್ಣಯಿಸುವ ಸಾಧನಗಳವು. ಈ ಕ್ರಮದಲ್ಲಿ ಹೋಗೆಂದು ತಿಳಿಸುವುದು ನಿಯಮಗಳ ರೀತಿ, ತತ್ವಗಳು ನಿರ್ದಿಷ್ಟ ಕ್ರಮವನ್ನು ಹೇಳುವುದಿಲ್ಲ. ನಿಯಮಗಳು ಪಾಕಶಾಸ್ತ್ರದ ಕ್ರಮಸೂಚನೆಯಂತೆ ಏನನ್ನು ಮಾಡಬೇಕು ಹೇಗೆ ಮಾಡಬೇಕು ಎಂದು ಹೇಳುತ್ತವೆ. ನ್ಯಾಯದಂತಹ ಒಂದು ತತ್ವ ಬೌದ್ಧಿಕ ಹಾಗೂ ಭಾವನಾತ್ಮಕ ಗುಣವನ್ನು ಒದಗಿಸುತ್ತದೆ. ಅದರಿಂದ ವ್ಯಕ್ತಿ ತನ್ನ ಬಯಕೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುತ್ತಾನೆ. ಯಾವುದನ್ನು ಮುಖ್ಯವಾಗಿ ಗಮನಿಸಬೇಕೆಂಬುದಕ್ಕೆ ಅವನಿಗೆ ಅದು ಮಾರ್ಗದರ್ಶಿಯಾಗುತ್ತದೆ. ನಿಯಮಗಳು ಹಾಗೂ ತತ್ವಗಳಿಗೆ ಇರುವ ಈ ಭೇದದ ಮೂಲಕ ಅವುಗಳನ್ನು ಅನುಸರಿಸಿ ಮಾಡುವ ಕಾರ್ಯಗಳೂ ಭಿನ್ನವಾಗುತ್ತವೆ. ನಿಯಮಗಳು ಒಳ್ಳೆಯದೆಂದು ಹೇಳಿದ್ದನ್ನು ಮಾಡುವುದು ಬೇರೆ, ತತ್ವದೃಷ್ಟಿಯಿಂದ ಒಳ್ಳೆಯದೆಂದು ತಿಳಿದಿದ್ದನ್ನು ಮಾಡುವುದು ಬೇರೆ. ತತ್ವ ತಪ್ಪಿರಬಹುದು. ಆದರೆ ಕೃತಿ ಪ್ರಜ್ಞಾಪೂರ್ವಕವಾಗಿದ್ದು ಹೊಣೆಗಾರಿಕೆಯನ್ನು ಹೊಂದಿರುತ್ತದೆ. ನಿಯಮ ಸರಿಯಾಗಿರಬಹುದು ಅದನ್ನನುಸರಿಸಿ ಕೃತಿ ಯಾಂತ್ರಿಕವಾಗಿರುತ್ತದೆ. ಧಾರ್ಮಿಕ ಕ್ರಿಯೆ ಕೆಲವೊಮ್ಮೆ ಸರಿಯಾದ ಕ್ರಿಯೆಯಾಗದಿರಬಹುದು, ಆದರೆ ಹೊಣೆಗಾರಿಕೆಯ ಧರ್ಮ ಮುಖ್ಯವಾಗಿ ತತ್ವಗಳ ಮಾತೇ ಆಗತಕ್ಕದ್ದು. ಅದು ನಿಯಮಗಳ ಮಾತಲ್ಲ. ಧರ್ಮ ಕೇವಲ ನಿಯಮಗಳೆಂಬ ಅವಸ್ಥೆಗೆ ಇಳಿದಾಕ್ಷಣ ಅದು ಧರ್ಮವಾಗಿ ಉಳಿಯದು. ಏಕೆಂದರೆ ಧರ್ಮದ ಸಾರವಾದ ಹೊಣೆಗಾರಿಕೆಯು ಆಗ ನಾಶವಾಗುತ್ತದೆ. ಈ ಹಿಂದೂ ಧರ್ಮವೆಂದರೇನು? ಅದೊಂದು ತತ್ವಗಳ ಕಟ್ಟೋ ಅಥವಾ ನಿಯಮಾವಳಿಯೋ? ವೇದ, ಸ್ಮೃತಿಗಳಲ್ಲಿ ಉಕ್ತವಾದ ಹಿಂದೂ ಧರ್ಮವೆಂದರೆ ಯಾಜ್ಞಿಕ, ಸಾಮಾಜಿಕ, ರಾಜಕೀಯ ಮತ್ತು ಆರೋಗ್ಯ ರಕ್ಷಣಾತ್ಮಕ ನಿಯಮಗಳ ಒಂದು ಕಲಸುಮೇಲೋಗರವಾಗಿದೆ. ಹಿಂದೂಗಳು ಧರ್ಮವೆಂದು ಯಾವುದನ್ನು ಕರೆಯುತ್ತಾರೋ ಅದು ವಿಧಿನಿಷೇಧಗಳ ಒಂದು ಸಂಚಯವೇ ಹೊರತು ಬೇರೇನೂ ಅಲ್ಲ. ನಿಜವಾಗಿಯೂ ವಿಶ್ವಾಸಾತ್ಮಕವಾದ ಎಲ್ಲ ದೇಶಗಳಿಗೂ ಎಲ್ಲ ಜನಾಂಗಗಳಿಗೂ ಎಲ್ಲ ಕಾಲಕ್ಕೂ ಅನ್ವಯಿಸುವಂತಹ ತತ್ವಗಳನ್ನುಳ್ಳದ್ದು ಎಂಬರ್ಥದಲ್ಲಿ ಅದು ಧರ್ಮವೇ ಅಲ್ಲ. ವಿಧಿನಿಷೇಧಗಳೇ ಧರ್ಮವೆಂಬರ್ಥ ಬರುವಂತೆ ವೇದ, ಸ್ಮೃತಿಗಳಲ್ಲೂ ಧರ್ಮ ಎಂಬ ಪದವನ್ನು ಬಳಸಲಾಗಿದೆ. ವೇದದಲ್ಲಿ ಧರ್ಮವೆಂಬ ಪದವನ್ನು ಆಚಾರ ಶಾಸನಗಳೆಂಬರ್ಥದಲ್ಲಿ ಅನೇಕ ಸಲ ಬಳಸಲಾಗಿದೆ. ಜೈಮಿನಿ ತನ್ನ ಪೂರ್ವ ಮೀಮಾಂಸೆಯಲ್ಲಿ ಆಗಮಗಳಲ್ಲಿ ಉಕ್ತವಾದ ಶ್ರೇಯವೇ ಧರ್ಮವೆಂದು ವ್ಯಾಖ್ಯಾನಿಸಿದ್ದಾನೆ. ಸರಳವಾದ ಮಾತುಗಳಲ್ಲಿ ಹೇಳುವುದಾದರೆ ಹಿಂದೂಗಳು ಹೇಳುವ ಧರ್ಮವೆಂದರೆ ಕಾನೂನು ಅಥವಾ ಕಾನೂನಿನ ಕ್ರಮಕ್ಕೆ ಒಳಪಡಿಸಿದ ವರ್ಗನೀತಿ. ಇದು ಧರ್ಮವೆಂದು ನಾನು ಒಪ್ಪಲಾರೆ. ಕಟ್ಟುನಿಟ್ಟಾದ ನಿಯಮಾವಳಿಗಳೇ ಧರ್ಮವೆಂದು ಬಳಸಲ್ಪಡುವುದರಿಂದ ನೈತಿಕ ಸ್ವಾತಂತ್ರ್ಯ ನಾಶವಾಗುತ್ತದೆ. ಮನಃಪೂರ್ವಕವಾದ ನಡವಳಿಕೆಗೆ ಬದಲಾಗಿ ಹೊರಗಿನಿಂದ ಹೇರಿದ ನಿಯಮಗಳನ್ನು ಗುಲಾಮರಾಗಿ ಜನ ಪಾಲಿಸಬೇಕಾಗುತ್ತದೆ. ಈ ವಿಧಿನಿಷೇಧಗಳ ಅತ್ಯಂತ ದುಷ್ಟ ಅಂಶವೆಂದರೆ ಅವು ಸರ್ವ ಕಾಲಕ್ಕೂ ಇದ್ದಂತೆಯೇ ಪಾಲಿಸಲ್ಪಡಬೇಕೆಂಬುದು. ಎಲ್ಲಾ ವರ್ಗಗಳಿಗೆ ಅವು ಸಮಾನವಾಗಿಯೂ ಇಲ್ಲ. ಒಂದೊಂದಕ್ಕೆ ಒಂದೊಂದು ಬಗೆಯಾಗಿವೆ. ಅವು ಸಾರ್ವಕಾಲಿಕವೆಂದು ಹೇಳಿರುವುದರಿಂದ ಈ ಅಸಮಾನತೆಯೂ ಶಾಶ್ವತವಾಗಿದೆ. ಈ ಶಾಸನಗಳನ್ನು ವಿಧಿಸಿದವರು ಇಂತಿಂತಹ ದ್ರಷ್ಟಾರರೆಂದು ನಾವು ಅವುಗಳನ್ನು ವಿರೋಧಿಸುವುದಲ್ಲ, ಇವು ಸಿದ್ಧಾಂತವೆಂಬಂತೆ ಸ್ಥಿರೀಕೃತವಾಗಿರುವುದಕ್ಕೆ ಮಾತ್ರ ನಮ್ಮ ಆಕ್ಷೇಪವಿದೆ. ಮನುಷ್ಯ ಸುಖ ಆತನ ಪರಿಸ್ಥಿತಿಗೆ ಅನುಸಾರವಾಗಿ ಬದಲಾಗುತ್ತದೆ. ಹೀಗಿರುವಾಗ ಈ ಬಗೆಯ ಶಾಶ್ವತವಾದ ನಿಯಮ ಅಥವಾ ಶಾಸನಗಳನ್ನು ಜನತೆ ಅವ್ಯಾಹತ ಹೇಗೆ ಸಹಿಸಿಕೊಳ್ಳಬಲ್ಲದು? ಆದುದರಿಂದ ಇಂತಹ ಧರ್ಮವನ್ನು ನಾಶಪಡಿಸಿದರೆ ಅದು ಯಾವ ರೀತಿಯಿಂದಲೂ ಅಧರ್ಮವಲ್ಲವೆಂದು (ಪುಟ 88)

ಹೇಳುತ್ತೇನೆ. ಆ ಧರ್ಮದ ಮುಖಕ್ಕೆ ತೊಡಿಸಿದ ಈ ಮುಸುಕನ್ನು ಕಿತ್ತುಹಾಕಿ ಶಾಸನವನ್ನು ಧರ್ಮವೆಂದು ರೂಢಿಗೊಳಿಸಿದ ಅನ್ಯಾಯವನ್ನು ದೂರಗೊಳಿಸುವುದು ನಿಮ್ಮ ಅನಿವಾರ್ಯ ಕರ್ತವ್ಯ. ಇದು ನನ್ನ ಅಭಿಪ್ರಾಯ. ಧರ್ಮದ ಬಗೆಗೆ ಉಂಟಾಗಿರುವ ಈ ತಪ್ಪು ಕಲ್ಪನೆಯನ್ನು ಜನರ ಮನಸ್ಸಿನಿಂದ ಹೊರಗೆ ತಳ್ಳಿಬಿಡಿ. ಅವರು ಪಾಲಿಸುತ್ತಿರುವುದು ಧರ್ಮವಲ್ಲ, ಒಂದು ಶಾಸನ ಎಂದು ಮನವರಿಕೆ ಮಾಡಿಬಿಡಿ. ಹಾಗೆ ಮಾಡುವಲ್ಲಿ ನೀವು ಜಯಶಾಲಿಗಳಾದ ಪಕ್ಷದಲ್ಲಿ ಆ ಧರ್ಮವನ್ನು ತಿದ್ದುವುದಕ್ಕೆ ಅಥವಾ ನಾಶಗೊಳಿಸುವುದಕ್ಕೆ ನಿಮಗೆ ಸಾಧ್ಯವಾಗುವುದು, ಎಲ್ಲಿಯವರೆಗೆ ಜನರು ಅದನ್ನು ಧರ್ಮವೆಂದು ಪರಿಗಣಿಸುವುರೋ ಅಲ್ಲಿಯವರೆಗೆ ಅವರು ಅದರ ಬದಲಾವಣೆಗೆ ಸಿದ್ದರಾಗುವುದಿಲ್ಲ. ಯಾಕೆಂದರೆ ಧರ್ಮದಲ್ಲಿ ಬದಲಾವಣೆಯ ಕಲ್ಪನೆಯಿಲ್ಲ, ಆದರೆ ಶಾಸನ ಅಥವಾ ಕಾನೂನು ತಿದ್ದುವಿಕೆಗೆ ಒಳಗಾಗಬಲ್ಲದೆಂದು ಅವರು ಒಪ್ಪುತ್ತಾರೆ. ತಾವು ಧರ್ಮವೆಂದು ಭ್ರಮಿಸಿದ್ದು ನಿಜವಾಗಿಯೂ ಪ್ರಾಚೀನ ಕಾಲದ ಶಾಸನ ಅಥವಾ ಕಾನೂನು ಎಂದು ಅರಿತಾಗ ಅದನ್ನು ಬದಲಿಸಲು ಅವರು ಸಿದ್ಧರಾಗುವರು. ಕಾನೂನನ್ನು ಬದಲಿಸಬಹುದೆಂದು ಜನ ಆಗ ಒಪ್ಪುತ್ತಾರೆ.

XXIV

ವಿಧಿನಿಷೇಧಗಳ ಧರ್ಮವನ್ನು ನಾನು ಖಂಡಿಸುತ್ತಿದ್ದೇನೆ ಅಂದ ಕೂಡಲೇ ಧರ್ಮವೇ ಬೇಡವೆಂಬುದು ನನ್ನ ಅಭಿಪ್ರಾಯವಲ್ಲ. ತದ್ವಿರುದ್ದವಾಗಿ ಬರ್ಕ್ ಹೇಳಿದ ಮಾತಿಗೆ ನಾನು ದನಿಗೂಡಿಸುತ್ತೇನೆ, “ನಿಜವಾದ ಧರ್ಮವು ಸಮಾಜಕ್ಕೆ ಆಧಾರವಾಗಿರುತ್ತದೆ, ನಿಜವಾದ ನಾಗರಿಕ ಸರಕಾರಕ್ಕೂ ಅದೇ ಅಡಿಗಲ್ಲು”. ಆದುದರಿಂದ ಈ ವಿಧಿನಿಷೇಧಗಳನ್ನು ರದ್ದುಪಡಿಸಿದಾಗ ಅವುಗಳ ಜಾಗದಲ್ಲಿ ತತ್ವಗಳ ಧರ್ಮ ನೆಲಸಬೇಕೆಂದು ನಾನು ಬಯಸುತ್ತೇನೆ. ಧರ್ಮ ಅಗತ್ಯವೆಂದು ನನಗೆ ಮನವರಿಕೆಯಾಗಿದೆ. ಈ ಧರ್ಮದಲ್ಲಿ ಸುಧಾರಣೆಗಳಾಗಬೇಕು. ಅವು ಯಾವುವೆಂಬುದರ ರೂಪುರೇಷೆಗಳನ್ನು ನಿಮಗೆ ಒದಗಿಸಬೇಕಾಗಿದೆ. ಸುಧಾರಿತ ಧರ್ಮದಲ್ಲಿ ಈ ಮುಂದೆ ಹೇಳುವ ಅಂಶಗಳು ಪ್ರಧಾನವಾಗಿರಬೇಕು : (೧) ಸಮಸ್ತ ಹಿಂದೂಗಳಿಗೆ ಅನ್ವಯಿಸುವ ಹಾಗೂ ಸಮಸ್ತ ಹಿಂದೂಗಳಿಗೆ ಸಮ್ಮತವಾದ ಒಂದೇ ಒಂದು ಪ್ರಮಾಣಭೂತವಾದ ಧರ್ಮಗ್ರಂಥವಿರಬೇಕು. ಅಂದರೆ ಧರ್ಮಗ್ರಂಥಗಳೆಂದು ಈವರೆಗೆ ಭಾವಿಸಲಾದ ವೇದಗಳು, ಶಾಸ್ತ್ರಗಳು, ಪುರಾಣಗಳು ಧರ್ಮಗ್ರಂಥಗಳಲ್ಲವೆಂದು ಕಾನೂನಿಂದ ರದ್ದುಪಡಿಸಬೇಕು. ಮತ್ತು ಈ ಗ್ರಂಥಗಳ ಆಧಾರದಿಂದ ಯಾವುದೇ ಆಚಾರ, ತತ್ವ, ವ್ರತ ಮೊದಲಾದವುಗಳನ್ನು ಯಾರಾದರೂ ಬೋಧಿಸಿದರೆ ಅದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಬೇಕು. (೨) ಹಿಂದೂಗಳಲ್ಲಿರುವ ಪೌರೋಹಿತ್ಯ ಅಥವಾ ಧರ್ಮಾಧಿಪತ್ಯವನ್ನು ರದ್ದುಪಡಿಸುವುದು ಲೇಸು. ಆದರೆ ಇದು ಅಸಾಧ್ಯವೆಂದು ತೋರುವುದರಿಂದ ಕನಿಷ್ಠಪಕ್ಷ ಅದು ಅನುವಂಶಿಕವಾಗಿರುವುದನ್ನಾದರೂ ನಿಷೇಧಿಸಬೇಕು. ಪುರೋಹಿತ ಅಥವಾ ಧರ್ಮಾಧಿಪತಿಯಾಗಲು ಪ್ರತಿಯೊಬ್ಬ ಹಿಂದೂವಿಗೂ ಸಮಾನವಾದ ಹಕ್ಕು ಇರತಕ್ಕದ್ದು. ಸರಕಾರವು ಗೊತ್ತುಪಡಿಸುವ ಒಂದು ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸರಕಾರದಿಂದ ಸನ್ನದು ಪಡೆಯದೇ ಇದ್ದವರು ನಡೆಸುವ ಧಾರ್ಮಿಕ ಕಾರ್ಯ ಶಾಸನಬದ್ದವಲ್ಲವೆಂದು ಸಾರಿ ಸರಕಾರವು ಅಂಥ ಜನರನ್ನು ದಂಡಿಸತಕ್ಕದ್ದು. (೪) ಧರ್ಮಾಧಿಪತಿಯು ಸರಕಾರಿ ಸೇವಕನಾಗಬೇಕು ಮತ್ತು ಇತರ ಪ್ರಜೆಗಳಂತೆ ದೇಶದ ಕಾನೂನುಗಳಿಗೆ ಬದ್ಧನಾಗಿರಬೇಕು. ನೀತಿ, ನಂಬಿಕೆಗಳು, ಪೂಜೆ ಮೊದಲಾದ ವಿಷಯಗಳಲ್ಲಿ ಸರಕಾರ ಅವನನ್ನು ವಿಚಾರಿಸಿ ಶಿಸ್ತಿನ ಕ್ರಮ ಕೈಗೊಳ್ಳಲು ಸಂಪೂರ್ಣ ಅವಕಾಶವಿರತಕ್ಕದ್ದು. (ಪುಟ 89)

(೫) ಐ.ಸಿ.ಎಸ್ ಅಧಿಕಾರಿಗಳ ಸಂಖ್ಯೆಯನ್ನು ನಿಯಂತ್ರಿಸುವ ರೀತಿಯಲ್ಲೇ ಪುರೋಹಿತರ ಸಂಖ್ಯೆಯನ್ನು ಅವಶ್ಯಕತೆಗೆ ಅನುಗುಣವಾಗಿ ಒಂದು ಮಿತಿಯೊಳಗೆ ಇಟ್ಟುಕೊಳ್ಳಬೇಕು. ಇದು ತುಂಬ ತೀವ್ರವಾದ ಬದಲಾವಣೆಯೆನ್ನಿಸಬಹುದು. ಆದರೆ ನನ್ನ ದೃಷ್ಟಿಯಿಂದ ಇದರಲ್ಲಿ ಕ್ರಾಂತಿಕಾರಕವಾದುದೇನೂ ಇಲ್ಲ. ದೇಶದಲ್ಲಿ ಪ್ರತಿಯೊಂದು ವೃತ್ತಿಗೂ ಕ್ರಮಬದ್ಧತೆಯಿದೆ. ಎಂಜಿನಿಯರುಗಳು ನಿರ್ದಿಷ್ಟ ಪ್ರಾವಿಣ್ಯವನ್ನು ತೋರಲೇಬೇಕು, ಡಾಕ್ಟರು ಪ್ರಾವೀಣ್ಯವನ್ನು ತೋರಲೇಬೇಕು, ವಕೀಲರು ಪ್ರಾವಿಣ್ಯವನ್ನು ತೋರಲೇಬೇಕು. ಹೀಗೆ ಖಚಿತಪಡಿಸಿಕೊಂಡ ಮೇಲೆಯೇ ಇವರೆಲ್ಲರಿಗೆ ತಮ್ಮತಮ್ಮ ವೃತ್ತಿಗಳನ್ನು ಆರಂಭಿಸಲು ಅನುಮತಿ ದೊರೆಯುತ್ತದೆ. ತಮ್ಮ ವೃತ್ತಿಯನ್ನು ನಡೆಸಿಕೊಂಡು ಹೋಗುವ ಕಾಲದಲ್ಲೆಲ್ಲ ಈ ಜನರು ದೇಶದ ಕಾನೂನುಗಳನ್ನು ಪಾಲಿಸತಕ್ಕದ್ದು ಮತ್ತು ತಮ್ಮತಮ್ಮ ವೃತ್ತಿಗಳು ವಿಧಿಸುವ ನೀತಿನಿಯಮಾವಳಿಯನ್ನೂ ಪಾಲಿಸತಕ್ಕದ್ದು. ನಿರ್ದಿಷ್ಟ ಪ್ರಾವೀಣ್ಯವನ್ನು ಪಡೆಯದೆಲೆ ಕೈಗೊಳ್ಳಬಹುದಾದ ಏಕೈಕ ವೃತ್ತಿಯೆಂದರೆ ಧರ್ಮಗುರುವಿನ ಅಥವಾ ಪುರೋಹಿತನ ವೃತ್ತಿ. ಈ ಕಸುಬಿಗೆ ನಿಗದಿಪಡಿಸಿದ ಒಂದು ನಿಯಮಾವಳಿಯಿಲ್ಲ. ಈ ವೃತ್ತಿಯನ್ನು ನಡೆಸುವ ವ್ಯಕ್ತಿ ಮಾನಸಿಕವಾಗಿ ಪೆದ್ದನಾಗಿರಬಹುದು, ದೈಹಿಕವಾಗಿ ಗುಹ್ಯರೋಗಗಳಿಂದ ಬಳಲುತ್ತಿರಬಹುದು, ನೈತಿಕವಾಗಿ ಪಾಪಿಯೂ ಆಗಿರಬಹುದು. ಹೀಗಿದ್ದರೂ ಧಾರ್ಮಿಕ ಉತ್ಸವಾದಿಗಳಲ್ಲಿ ಅಧಿಕಾರಿಯಾಗಿ ಭಾಗವಹಿಸಲು, ಹಿಂದೂ ದೇವಸ್ಥಾನಗಳ ಪವಿತ್ರತಮ ಗರ್ಭಗುಡಿಯನ್ನು ಪ್ರವೇಶಿಸಲು, ದೇವರನ್ನು ಮುಟ್ಟಿ ಪೂಜಿಸಲು ಅವನು ಯೋಗ್ಯನೆಂದು ಪರಿಗಣಿಸಲ್ಪಡುತ್ತಾನೆ. ಪುರೋಹಿತ ವರ್ಗದಲ್ಲಿ ಹುಟ್ಟಿದರೆ ಸಾಕು ಅವನಿಗೆ ಪೌರೋಹಿತ್ಯದ ಯೋಗ್ಯತೆ ತಾನಾಗಿ ಬಂದುಬಿಟ್ಟಿರುತ್ತದೆಯೆಂಬ ರೂಢಿ ಹಿಂದೂಗಳಲ್ಲಿ ಇದೆ. ಹಿಂದೂಗಳಲ್ಲಿರುವ ಈ ಪುರೋಹಿತ ವರ್ಗ ಕಾನೂನಿಗಾಗಲೀ ನೀತಿನಿಯಮಕ್ಕಾಗಲೀ ಒಳಪಟ್ಟಿಲ್ಲ. ಅದಕ್ಕೆ ಹಕ್ಕುಗಳುಂಟು ಕರ್ತವ್ಯಗಳಿಲ್ಲ. ನಾನು ಈ ಮೊದಲು ಸೂಚಿಸಿದಂತೆ ಈ ವರ್ಗವನ್ನು ಕಾನೂನುಗಳಿಂದ ಅಗತ್ಯವಾಗಿ ನಿಗ್ರಹಿಸತಕ್ಕದ್ದು. ಹೀಗೆ ಮಾಡಿದರೆ ಜನರನ್ನು ತಪ್ಪುದಾರಿಗೆಳೆಯುವ ಅವರ ಕುಚೇಷ್ಟೆಗೆ ತಡೆಯುಂಟಾಗುವುದು. ಎಲ್ಲರಿಗೂ ಧರ್ಮಾಧಿಪತ್ಯದ ಹಕ್ಕು ಸಮಾನವಾದಲ್ಲಿ ಅದು ಪ್ರಜಾಪ್ರಭುತ್ವಕ್ಕೆ ಅನುಗುಣವಾಗುವುದು. ಇದರಿಂದ ನಿಶ್ಚಿತವಾಗಿಯೂ ಬ್ರಾಹ್ಮಣತ್ವ ನಾಶವಾಗುವುದು ಮತ್ತು ಜಾತಿನಾಶಕ್ಕೂ ಹಾದಿಯಾಗುವುದು. ಯಾಕೆಂದರೆ ಜಾತಿಯೆಂಬುದು ಬ್ರಾಹ್ಮಣತ್ವದ ಒಂದು ವಿಷವಾಗಿ ಹಿಂದೂತ್ವವನ್ನು ಆವರಿಸಿದೆ. ಬ್ರಾಹ್ಮಣತ್ವವನ್ನು ನಾಶ ಮಾಡಿದರೆ ಹಿಂದೂತ್ವ ಬದುಕಿ ಉಳಿದೀತು. ಈ ಸುಧಾರಣೆಗೆ ಯಾರಿಂದಲೂ ವಿರೋಧ ಬರಬೇಕಾಗಿಲ್ಲ. ಆರ್ಯಸಮಾಜಗಳು ಕೂಡ ಇದನ್ನು ಸ್ವಾಗತಿಸಬೇಕು. ಏಕೆಂದರೆ ಅವರು ಪ್ರತಿಪಾದಿಸುವ ಗುಣಕರ್ಮ ತತ್ವವೇ ಇಲ್ಲಿ ಅನ್ವಯವಾಗುತ್ತದೆ.

ನೀವು ಅದನ್ನು ಮಾಡಿ ಅಥವಾ ಬಿಡಿ, ಆದರೆ ಧರ್ಮಕ್ಕೆ ಒಂದು ತಾತ್ವಿಕ ತಳಹದಿಯನ್ನು ಒದಗಿಸತಕ್ಕದ್ದು, ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವಗಳಿಗೆ ಸಮ್ಮತವಾದ ಅಂದರೆ ಪ್ರಜಾಪ್ರಭುತ್ವಕ್ಕನುಗುಣವಾದ ಅಡಿಪಾಯ ಅವಶ್ಯವಾಗಿದೆ. ಈ ವಿಷಯದಲ್ಲಿ ನಾನು ಅಧಿಕಾರವಾಣಿಯಿಂದ ಮಾತಾಡಲಾರೆ. ಆದರೆ ಇಂತಹ ತಳಹದಿಗಾಗಿ ನೀವು ವಿದೇಶಿ ಮೂಲಗಳಿಂದ ಕೈಗಡ ತರಬೇಕಾಗಿಲ್ಲ, ಉಪನಿಷತ್ತುಗಳಿಂದ ಇಂತಹ ತತ್ವಗಳನ್ನು ನೀವು ಪಡೆಯಬಹುದು, ಉಪನಿಷತ್ತುಗಳಲ್ಲಿ ಅನುಪಯುಕ್ತವಾದ ಅಂಶಗಳನ್ನು ಬಿಟ್ಟು ಬೆಲೆಯುಳ್ಳದ್ದನ್ನು ಎತ್ತಿಕೊಂಡು ಹೊಸದೊಂದು ತಾತ್ವಿಕ ಅಡಿಪಾಯವನ್ನು ನೀವು ನಿರ್ಮಿಸಬಲ್ಲಿರೋ ಏನೋ ನಾನು ಹೇಳಲಾರೆ; ಇಷ್ಟು ಮಾತ್ರ ನಿಜ, ಜೀವನದ ಮೂಲಭೂತ ಗ್ರಹಿಕೆಯಲ್ಲಿ ಪರಿವರ್ತನೆಯಾಗಬೇಕು. ಜೀವನ ಮೌಲ್ಯಗಳು ಸಂಪೂರ್ಣವಾಗಿ ಬದಲಾಗಬೇಕು. ಜೀವನ ಪೂರ್ತಿಯಾಗಿ ಹೊಸದಾಗಬೇಕು. ಮಾನವನ ಮತ್ತು ವಿಷಯಗಳ ಬಗೆಗಿನ ದೃಷ್ಟಿಕೋನವೇ ಅಮೂಲಾಗ್ರವಾಗಿ ಬದಲಾಗಬೇಕು. ಆದರೆ ಹೊಸ ಜೀವ ಮೃತ (ಪುಟ 90)

ದೇಹವನ್ನು ಪ್ರವೇಶಿಸದು. ಹೊಸ ಜೀವಕ್ಕೆ ಹೊಸ ದೇಹವೇ ಬೇಕು. ಹೊಸ ದೇಹ ತಾಳುವುದಕ್ಕೆ ಮುನ್ನ ಹಳೆಯ ದೇಹ ಬಿಟ್ಟು ಹೋಗಲೇಬೇಕು. ಹೊಸ ಜೀವ ಅಸ್ತಿತ್ವಕ್ಕೆ ಬರುವ ಮುನ್ನ ಹಳೆಯ ದೇಹ ನಾಶವಾಗಿಹೋಗಬೇಕು. ಶಾಸ್ತ್ರಗಳ ಅಧಿಕಾರವನ್ನೂ, ಶಾಸ್ತ್ರಾಧಾರದ ಧರ್ಮವನ್ನೂ ನಾಶಗೊಳಿಸಬೇಕೆಂದು ನಾನು ಹೇಳುವಾಗ ಅದಕ್ಕೆ ಈ ಮೇಲೆ ವಿವರಿಸಿದ ಅರ್ಥವೇ ಇದೆ.

XXV

ತುಂಬ ದೀರ್ಘಕಾಲದ ವರೆಗೆ ಮಾತಾಡಿದ್ದೇನೆ. ಇನ್ನು ಈ ಉಪನ್ಯಾಸವನ್ನು ಮುಗಿಸಬೇಕು. ನಾನು ಇಲ್ಲಿಗೇ ಉಪನ್ಯಾಸವನ್ನು ಮುಗಿಸಬಹುದಾಗಿತ್ತು. ಆದರೆ ಹಿಂದೂಗಳಿಗೆ ಅತ್ಯಂತ ಮುಖ್ಯವಾದ ವಿಷಯದ ಕುರಿತು ಹಿಂದೂ ಶೋತೃಗಳೆದುರಿಗೆ ಬಹುಶಃ ಇದು ನನ್ನ ಕೊನೆಯ ಉಪನ್ಯಾಸವಾಗಿದೆ. ಆದುದರಿಂದ ಮುಗಿಸುವ ಮುನ್ನ ಹಿಂದೂಗಳ ಅನುಮತಿಯನ್ನು ಬೇಡಿ ಅವರಿಗೆ ಈ ಕೆಲವು ಮಹತ್ವದ ಪ್ರಶ್ನೆಗಳನ್ನು ಮನನ ಮಾಡಲು ನೀಡಿರುತ್ತೇನೆ.

ಹಿಂದೂಗಳಲ್ಲಿ ಮಾತ್ರವಲ್ಲ, ಜಗತ್ತಿನ ವಿವಿಧ ಪ್ರದೇಶಗಳ ಜನರಲ್ಲಿ ನಂಬಿಕೆಗಳು, ರೂಢಿಗಳು, ನೀತಿನಿಯಮಗಳು, ಜೀವನದೃಷ್ಟಿಗಳು ಇದ್ದೇ ಇರುತ್ತವೆ ಎಂದು ಮಾನವಶಾಸ್ತ್ರಾಭ್ಯಾಸಿಯಂತೆ ನಿರ್ವಿಕಾರವಾಗಿ ನೋಡಿ ಸುಮ್ಮನಿದ್ದುಬಿಡುವಿರಾ? ಅಥವಾ ಯಾವ ನೀತಿನಿಯಮ, ನಂಬಿಕೆ, ರೂಢಿ ದೃಷ್ಟಿಕೋನಗಳ ಮೂಲಕ ಕೆಲವೇ ಕೆಲವು ಜನಕ್ಕೆ ಅಭ್ಯುದಯವುಂಟಾಯಿತು, ಜಗತ್ತನ್ನು ತುಂಬುವುದಕ್ಕೆ ಆಳುವುದಕ್ಕೆ ಸಾಮರ್ಥ್ಯವೊದಗಿತು ಎಂದು ಯೋಚನೆ ಮಾಡುವಿರಾ? ಪ್ರೊ. ಕಾರ್ವರ್ ಹೇಳುವಂತೆ, “ಆತ್ಮರಕ್ಷಣೆಯ ಸಾಧನಗಳಾದ ಹಲ್ಲು, ಉಗುರು, ಕೊಂಬು, ಪಂಜ, ತುಪ್ಪುಳು, ಗರಿಗಳು ಜೀವನದ ಹೋರಾಟಕ್ಕೆ ಹೇಗೆ ಅವಶ್ಯಕವೋ ಹಾಗೆಯೇ ನೀತಿಧರ್ಮಗಳೂ ಅಗತ್ಯವೆಂದು ಪರಿಗಣಿಸಬೇಕಾಗಿದೆ. ಯಾವುದಾದರೂ ಒಂದು ಸಾಮಾಜಿಕ ಗುಂಪು, ಬಣ, ಬುಡಕಟ್ಟು ಅಥವಾ ರಾಷ್ಟ್ರ ವ್ಯವಹಾರಯೋಗ್ಯವಲ್ಲದ ಅನೈತಿಕ ವ್ಯವಸ್ಥೆಯನ್ನು ಪೋಷಿಸುತ್ತದೆಯೋ, ತನ್ಮೂಲಕ ತನ್ನನ್ನೇ ದುರ್ಬಲಗೊಳಿಸಿಕೊಳ್ಳುವಂತೆ ಮಾಡುವ ಸಾಮಾಜಿಕ ಕೃತಿಗಳಿಗೆ ಸಮ್ಮತಿಯನ್ನು ನೀಡುತ್ತಾ ಅಭ್ಯುದಯಕ್ಕೆ ಕಾರಣವಾಗುವ ಕೆಲಸಗಳಿಗೆ ಒಪ್ಪಿಗೆಯನ್ನು ನಿರಾಕರಿಸುತ್ತಾ ಹೋಗುತ್ತದೋ ಇಂತಹ ಸಮಾಜ ನಿರ್ಮೂಲನೆಗೊಳ್ಳುತ್ತದೆ. ಈ ಬಗೆಯ ಸಮ್ಮತಿ ಅಥವಾ ಅಸಮ್ಮತಿಯ ಸಂಪ್ರದಾಯಗಳು (ಇವುಗಳು ಧರ್ಮ ಮತ್ತು ನೀತಿಗಳ ಪರಿಣಾಮಗಳಾಗಿರುತ್ತವೆ) ಒಂದು ಊನವಾಗಿ ಪರಿಣಮಿಸುತ್ತವೆ; ನೊಣಗಳಿಗೆ ಒಂದು ಮಗ್ಗುಲಿಗೆ ಎರಡು ರೆಕ್ಕೆಗಳಿದ್ದು ಇನ್ನೊಂದು ಮಗ್ಗುಲಿಗೆ ಏನೂ ಇಲ್ಲದೆ ಹೋದರೆ ಆಗುವ ತರಹವಿದು. ಒಂದು ವ್ಯವಸ್ಥೆ ಇನ್ನೊಂದರಷ್ಟೇ ಒಳ್ಳೆಯದೆಂದು ವಾದಿಸುವುದು ವ್ಯರ್ಥ” ನೀತಿ ಮತ್ತು ಧರ್ಮ ಎಂಬುದು ಕೇವಲ ಇಷ್ಟ ಅಥವಾ ಅನಿಷ್ಟವೆಂಬ ವಿಷಯಗಳಲ್ಲ. ಒಂದು ಬಗೆಯ ನೀತಿವ್ಯವಸ್ಥೆ ನಿಮಗೆ ಸಮರ್ಪಕವಾಗಿ ಕಾಣಲಾರದು. ಆದರೆ ದೇಶದೊಳಗೆ ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದರಿಂದ ಆ ರಾಷ್ಟ್ರವು ಜಗತ್ತಿನಲ್ಲಿಯೇ ಅತ್ಯಂತ ಬಲಿಷ್ಠವಾಗಬಹುದು. ಅದೇ ರೀತಿ ಒಂದು ನೀತಿವ್ಯವಸ್ಥೆಯನ್ನು ಮತ್ತು ನ್ಯಾಯದ ಆದರ್ಶವನ್ನು ನೀವು ಇಷ್ಟವೆಂದುಕೊಳ್ಳಬಹುದು. ಆದರೆ ಅವುಗಳನ್ನು ದೇಶಾದ್ಯಂತ ಆಚರಣೆಯಲ್ಲಿ ತಂದಾಗ ಆ ದೇಶ ಇತರ ದೇಶಗಳೊಡನೆ ಸ್ಪರ್ಧಿಸಿ ಗೆಲ್ಲದೇ ಹೋಗಬಹುದು. ನಿಮ್ಮ ಮೆಚ್ಚುಗೆ, ಗೌರವಗಳು ಎಷ್ಟೇ ಇದ್ದರೂ ಇಂತಹ ರಾಷ್ಟ್ರ ಕೊನೆಗೆ (ಪುಟ 91)

ಅಸ್ತಿತ್ವವನ್ನು ಕಳೆದುಕೊಳ್ಳಬಹುದು. ಆದುದರಿಂದ. ಹಿಂದೂಗಳು ತಮ್ಮ ಧರ್ಮವನ್ನು ಇದು ನಮ್ಮನ್ನು ಚೆನ್ನಾಗಿ ಬದುಕಿ ಉಳಿಯಗೊಡುವುದೇ ಎಂಬ ದೃಷ್ಟಿಯಿಂದ ಪರಿಶೀಲಿಸಬೇಕಾಗಿದೆ.

ಎರಡನೆಯದಾಗಿ, ಅನುವಂಶಿಕವಾಗಿ ತಮಗೆ ಬಂದ ಸಾಮಾಜಿಕ ಪರಂಪರೆಯನ್ನು ಅಖಂಡವಾಗಿ ರಕ್ಷಿಸಿಕೊಂಡು ಹೋಗಬೇಕೇ ಅಥವಾ ಉಪಯುಕ್ತವಾದ ಅಂಶವನ್ನು ಮಾತ್ರ ಆಯ್ದುಕೊಂಡು ಅದನ್ನಷ್ಟೇ ಮುಂದಿನ ಪೀಳಿಗೆಯವರಿಗೆ ಉಳಿಸಿಕೊಡಬೇಕೇ ಎಂಬುದನ್ನು ಹಿಂದೂಗಳು ಯೋಚಿಸತಕ್ಕದ್ದು. ನನ್ನ ಗುರುಗಳಾದ ಜಾನ್ ಡ್ಯೂಯಿಯವರು ಹೀಗೆ ಹೇಳಿದ್ದಾರೆ. “ಪ್ರತಿಯೊಂದು ಸಮಾಜವೂ ಬಳುವಳಿಯಾಗಿ ಪಡೆದುಕೊಂಡುಬಂದ ಕ್ಷುಲ್ಲಕ ಹಾಗೂ ನಿರುಪಯುಕ್ತ ಅಂಶಗಳಿಂದ ಆತಂಕ ಪಡುತ್ತಿರುತ್ತದೆ. ಸಮಾಜ ಎಚ್ಚೆತ್ತುಕೊಂಡಾಗ ಈ ಪೂರ್ವಾರ್ಜಿತವನ್ನು ಸಮಗ್ರವಾಗಿ ಉಳಿಸಿಕೊಂಡು ಹೋಗದೆ ಸಮಾಜದ ಉನ್ನತಿಗೆ ಉಪಯುಕ್ತವಾದವುಗಳನ್ನು ಮಾತ್ರ ರಕ್ಷಿಸುವುದು ತನ್ನ ಹೊಣೆಗಾರಿಕೆಯೆಂದು ಅರಿತುಕೊಳ್ಳುತ್ತದೆ”. ಫ್ರೆಂಚ್ ಕ್ರಾಂತಿಯ ಬದಲಾವಣೆಯ ತತ್ವವನ್ನು ಉಗ್ರವಾಗಿ ಖಂಡಿಸಿದ ಬರ್ಕ್ ಕೂಡ, “ಬದಲಾವಣೆಯ ಮಾರ್ಗವಿಲ್ಲದೆ ರಾಷ್ಟ್ರಕ್ಕೆ ತನ್ನನ್ನು ಉಳಿಸಿಕೊಳ್ಳುವ ಬೇರೆ ದಾರಿ ಇಲ್ಲ. ಇಂತಹ ಮಾರ್ಗ ಅಥವಾ ಅನುಕೂಲತೆಯಿಲ್ಲದೆ ಹೋದರೆ ತಾನು ರಕ್ಷಿಸಿಕೊಳ್ಳಲೇಬೇಕೆಂಬ ಸಂವಿಧಾನದ ಅಂಶವನ್ನು ಕೂಡ ಅದು ಕಳೆದುಕೊಳ್ಳುವ ಭಯವಿದೆ” ಎಂದು ಒಪ್ಪಿಕೊಳ್ಳಬೇಕಾಯಿತು. ಈತ ರಾಷ್ಟ್ರಕ್ಕೆ ಅನ್ವಯಿಸಿ ಹೇಳಿದ ಮಾತು ಅಷ್ಟೇ ಸಮರ್ಪಕವಾಗಿ ಸಮಾಜಕ್ಕೂ ಅನ್ವಯಿಸುತ್ತದೆ.

ಮೂರನೆಯದಾಗಿ, ತಮಗೆ ಆದರ್ಶಗಳನ್ನು ಪೂರೈಸುತ್ತಿದೆಯೆಂದು ಪ್ರಾಚೀನ ಕಾಲವನ್ನು ಪೂಜಿಸುವುದನ್ನು ಯಾಕೆ ನಿಲ್ಲಿಸಬಾರದು ಎಂಬುದನ್ನು ಹಿಂದೂಗಳು ಪರಿಶೀಲಿಸತಕ್ಕದ್ದು.. ಭೂತಕಾಲದ ಪೂಜೆಯಿಂದಾಗುವ ಅನಿಷ್ಟ ಪರಿಣಾಮವನ್ನು ಪ್ರೊ. ಡ್ಯೂಯಿಯವರು ಹೀಗೆ ಸಂಕ್ಷೇಪಿಸಿ ಹೇಳುತ್ತಾರೆ. “ವ್ಯಕ್ತಿ ವರ್ತಮಾನದಲ್ಲಿ ಮಾತ್ರ ಬಾಳಬಲ್ಲನು. ವರ್ತಮಾನವೆಂದರೆ ಕೇವಲ ಪೂರ್ವಕಾಲದ ನಂತರ ಬಂದದ್ದು ಮಾತ್ರವಲ್ಲ, ಅದರಿಂದ ಹುಟ್ಟಿದ್ದಂತೂ ಅಲ್ಲವೇ ಅಲ್ಲ. ಜೀವನ ಹಳೆಯದನ್ನು ಕಳಚಿಕೊಂಡು ಮುಂದುವರಿಯುತ್ತದೆ. ಭೂತಕಾಲದ ಉತ್ಪನ್ನಗಳ ಅಧ್ಯಯನ ವರ್ತಮಾನವನ್ನು ತಿಳಿದುಕೊಳ್ಳುವುದಕ್ಕೆ ಸಹಾಯಕವಲ್ಲ. ವರ್ತಮಾನದ ಅಗತ್ಯಕ್ಕೆ ಸಂಬಂಧಿಸಿದಂತಿದ್ದರೆ ಮಾತ್ರ ಪ್ರಾಚೀನ ಕಾಲದ ಮತ್ತು ಪರಂಪರೆಯ ಬಗೆಗಿನ ಜ್ಞಾನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಪ್ರಾಚೀನ ಕಾಲದ ದಾಖಲೆಗಳೂ ಅವಶೇಷಗಳೂ ಶಿಕ್ಷಣದ ವಿಷಯವಾಗಿರುವುದರಿಂದ ಏನು ತಪ್ಪಾಗಿದೆ ಗೊತ್ತೇ? ಪೂರ್ವಕಾಲವು ವರ್ತಮಾನಕ್ಕೆ ಒಂದು ಪ್ರತಿಸ್ಪರ್ಧಿಯೆಂದೂ, ವರ್ತಮಾನವು ಭೂತಕಾಲದ ಅಸಮರ್ಥ ಅನುಕರಣೆಯೆಂದೂ ತೋರುವ ಸಂಭವವಿದೆ”. ವರ್ತಮಾನವು ಜೀವನ ಹಾಗೂ ಅಭಿವೃದ್ಧಿಯನ್ನು ಕಡೆಗಣಿಸುವುದಾದರೆ ಈಗಿನ ಜೀವನ ಶೂನ್ಯ ಹಾಗೂ ಭವಿಷ್ಯ ಎಲ್ಲೋ ದೂರದ ಮಾತು ಎಂಬಂತಾಗುತ್ತದೆ. ಇಂತಹ ತತ್ವ ಪ್ರಗತಿಗೆ ವೈರಿಯಾಗುತ್ತದೆ. ಪ್ರಬಲವಾದ ಹಾಗೂ ಸ್ಥಿರವಾದ ಜೀವನ ಪ್ರವಾಹಕ್ಕೆ ತೊಡಕಾಗುತ್ತದೆ.

ನಾಲ್ಕನೆಯದಾಗಿ, ಶಾಶ್ವತವಾದ, ಸ್ಥಾಯಿಯಾದ, ಸನಾತನವಾದ ಯಾವುದೂ ಇಲ್ಲ. ಎಲ್ಲವೂ ಬದಲಾಗುತ್ತಿರುತ್ತವೆ. ಬದಲಾವಣೆ ವ್ಯಕ್ತಿಯ ಹಾಗೂ ಸಮಾಜದ ನಿಯಮ ಎಂದು ಅರಿತುಕೊಳ್ಳುವ ಕಾಲ ಈಗ ಸನ್ನಿಹಿತವಾಗಿಲ್ಲವೇ ಎಂದು ಹಿಂದೂಗಳು ಯೋಚಿಸಬೇಕು. ಬದಲಾಗುತ್ತಿರುವ ಸಮಾಜದಲ್ಲಿ ಹಳೆಯ ಮೌಲ್ಯಗಳು ಸತತವಾದ ಮಾರ್ಪಾಡಿಗೆ ಒಡ್ಡಿಕೊಳ್ಳುತ್ತವೆ. ಮನುಷ್ಯರ ಕೃತಿಗಳನ್ನು ಬೆಲೆಗಟ್ಟುವುದಕ್ಕೆ ಮಾನದಂಡಗಳಿರಬೇಕು; ಅಗತ್ಯವಿದ್ದಾಗ ಆ ಮಾನದಂಡಗಳನ್ನು ಪುನರ್ವಿಮರ್ಶೆಗೆ ಒಳಪಡಿಸಬೇಕು. ತಿದ್ದಲೂ ಸನ್ನದ್ಧರಾಗಿರಬೇಕು ಎಂಬುದನ್ನು ಹಿಂದೂಗಳು ಅರಿತುಕೊಳ್ಳಬೇಕು. (ಪುಟ 92)

XXVI

ಈ ಉಪನ್ಯಾಸ ಅತಿ ದೀರ್ಘವಾಯಿತೆಂದು ನಾನು ಒಪ್ಪಿಕೊಳ್ಳಲೇಬೇಕು. ಇಷ್ಟುದ್ದ ಆಗಿದ್ದೂ ಅದರಲ್ಲೇನಾದರೂ ಹುರುಳಿದೆಯೇ ಇಲ್ಲವೇ ಎಂಬುದನ್ನು ನೀವು ನಿರ್ಧರಿಸಬೇಕು. ನನ್ನ ಅನಿಸಿಕೆಗಳನ್ನು ಸ್ಪಷ್ಟವಾಗಿ ತಿಳಿಸಿದ್ದೇನೆಂದು ಮಾತ್ರ ಹೇಳಬಲ್ಲೆ, ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ವ್ಯಕ್ತಿ ಯಾವ ಅಧಿಕಾರದ ಹಸ್ತಕನೂ ಅಲ್ಲ. ಯಾವ ದೊಡ್ಡಸ್ತಿಕೆಯ ಸ್ತುತಿಕಾರನೂ ಅಲ್ಲವೆಂದು ಹೇಳಬಯಸುತ್ತೇನೆ. ಬಡವರ ಹಾಗೂ ದಬ್ಬಾಳಿಕೆಗೆ ಈಡಾದವರ ವಿಮೋಚನೆಗಾಗಿ ನನ್ನ ಸಾರ್ವಜನಿಕ ಜೀವನವೆಲ್ಲ ಮೀಸಲಾಗಿದೆ. ಇದಕ್ಕಾಗಿ ನನಗೆ ದೊರೆತ ಪ್ರತಿಫಲವೇನು? ರಾಷ್ಟ್ರೀಯ ಧುರೀಣರೂ, ರಾಷ್ಟ್ರೀಯ ಪತ್ರಿಕೆಗಳೂ ನನ್ನನ್ನೂ ಹಳಿದು ಅಪಮಾನಗೊಳಿಸಿವೆ. ಇದಕ್ಕೆ ಇರುವ ಕಾರಣವನ್ನೂ ಹೇಳುತ್ತೇನೆ. ಶ್ರೀಮಂತರ ಧನದಿಂದ ಬಡವರ ಉದ್ಧಾರವನ್ನೂ, ಪ್ರಜಾಹಿಂಸಕರ ಚಿನ್ನದಿಂದ ದಲಿತರ ವಿಮೋಚನೆಯನ್ನೂ ಸಾಧಿಸುವ ಪವಾಡಕ್ಕೆ – ತಂತ್ರವೆಂದು ಹೇಳಲಾರೆ – ನಾನು ಸಮ್ಮತಿಸಲಿಲ್ಲ ಎಂಬುದೊಂದೇ ಕಾರಣ. ನನ್ನ ಅಭಿಪ್ರಾಯಗಳಿಗೆ ಇವು ಸಮರ್ಥ ಶ್ಲಾಘನೆಯಾಗಲಾರದು. ಅದರಿಂದ ನಿಮ್ಮ ಅಭಿಪ್ರಾಯಗಳೂ ಬದಲಾಗಲಾರವು. ಆಗಲಿ ಬಿಡಲಿ ಅದರ ಪೂರ್ಣ ಜವಾಬ್ದಾರಿ ನಿಮಗೆ ಮಾತ್ರ ಸೇರಿದ್ದು, ನನ್ನ ರೀತಿಯಲ್ಲಿ ಬೇಡವಾದರೆ ನಿಮ್ಮ ರೀತಿಯಲ್ಲಾದರೂ ಜಾತಿ ನಿರ್ಮೂಲನೆಗೆ ನೀವು ಪ್ರಯತ್ನಿಸಲೇಬೇಕು. ಕ್ಷಮಿಸಿ, ನಾನು ಇನ್ನು ಮುಂದೆ ನಿಮ್ಮೊಂದಿಗೆ ಇರಲಾರೆ. ನಾನು ಬದಲಾಗಲು ನಿರ್ಧರಿಸಿದ್ದೇನೆ. ಕಾರಣಗಳನ್ನು ಕೊಡುವುದಕ್ಕೆ ಇದು ಜಾಗವಲ್ಲ. ನಿಮ್ಮನ್ನು ಬಿಟ್ಟು ಹೊರಗೆ ಹೋದಮೇಲೆ ಕೂಡ ಸಕ್ರಿಯ ಸಹಾನುಭೂತಿಯಿಂದ ನಿಮ್ಮ ಆಂದೋಲನವನ್ನು ಗಮನಿಸುತ್ತಿರುತ್ತೇನೆ. ಅಗತ್ಯವಿರುವ ಸಹಾಯ ಮಾಡಲೂ ಸಿದ್ದನಾಗಿರುತ್ತೇನೆ. ನಿಮ್ಮದು ರಾಷ್ಟ್ರೀಯ ಉದ್ದೇಶದ ಕಾರ್ಯ, ಜಾತಿಪದ್ಧತಿ ಹಿಂದೂಗಳಿಗೆ ಜೀವನದುಸಿರಾಗಿದೆ. ಆದರೆ ಹಿಂದೂಗಳು ಎಲ್ಲೆಡೆ ವಾತಾವರಣವನ್ನು ಕೆಡಿಸಿದ್ದಾರೆ: ಸಿಖ್ಖ್, ಮುಸ್ಲಿಂ, ಕ್ರೈಸ್ತ, ಹೀಗೆ ಎಲ್ಲರನ್ನೂ ಅಸ್ವಸ್ಥಗೊಳಿಸಿದ್ದಾರೆ.. ಇನ್ನೊಂದು ರಾಷ್ಟ್ರೀಯ ಧ್ಯೇಯವಾದ ಸ್ವರಾಜ್ಯಕ್ಕಿಂತಲೂ ನಿಮ್ಮದು ಹೆಚ್ಚು ಕಷ್ಟಸಾಧ್ಯವಾದ ಆಶಯ. ಸ್ವರಾಜ್ಯದ ಹೋರಾಟದಲ್ಲಿ ಸಮಗ್ರ ದೇಶ ನಿಮ್ಮ ಜೊತೆಗಿರುತ್ತದೆ. ಆದರೆ ಇಲ್ಲಿ ನೀವು ಇಡೀ ದೇಶದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ. ಅದೂ ನಿಮ್ಮದೇ ದೇಶದ ವಿರುದ್ಧ, ಆದರೆ ಇದು ಸ್ವರಾಜ್ಯಕ್ಕಿಂತ ಹೆಚ್ಚು ಮಹತ್ವದ್ದು. ರಕ್ಷಿಸಿಕೊಳ್ಳುವ ಸಾಮರ್ಥ್ಯವಿಲ್ಲದೆ ಸ್ವರಾಜ್ಯವನ್ನು ಗಳಿಸಿಕೊಂಡೇನು ಪ್ರಯೋಜನ? ಸ್ವರಾಜ್ಯವನ್ನು ರಕ್ಷಿಸುವುದಕ್ಕಿಂತ ಸ್ವರಾಜ್ಯದಲ್ಲಿ ಹಿಂದೂಗಳನ್ನು ರಕ್ಷಿಸುವುದು ಹೆಚ್ಚು ಮಹತ್ವದ್ದಾಗುತ್ತದೆ. ನನ್ನ ಅನಿಸಿಕೆಯಂತೆ ಜಾತಿಪದ್ಧತಿ ನಾಶವಾದರೆ ಮಾತ್ರ ಹಿಂದೂ ಸಮಾಜ ಆತ್ಮರಕ್ಷಣೆಗೆ ಸಮರ್ಥವಾಗಬಲ್ಲದು. ಇಂಥ ಆಂತರಿಕ ಶಕ್ತಿಯಿಲ್ಲದೆ ಹೋದರೆ ಸ್ವರಾಜ್ಯವೆಂಬುದು ಹಿಂದೂಗಳ ಪಾಲಿಗೆ ಗುಲಾಮಗಿರಿಯತ್ತ ಇಡುವ ಇನ್ನೊಂದು ಹೆಜ್ಜೆಯೇ ಆದೀತು. ಶುಭವಾಗಲಿ, ನಿಮಗೆ ಯಶಸ್ಸು ದೊರೆಯಲೆಂದು ಹಾರೈಸುತ್ತೇನೆ.

– ಡಾ.ಬಿ.ಆರ್.ಅಂಬೇಡ್ಕರ್

(ಪುಟ 93)

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು, ಸಂಪುಟ – 1, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, 2015, ಪುಟ ಸಂಖ್ಯೆ 47 – 93

Leave a Reply