ಬೆಂಗಳೂರು: ನೆನೆಗುದಿಗೆ ಬಿದ್ದಿರುವ ಕಳಸಾ ಬಂಡೂರಿ ಯೋಜನೆ ಕಾಮಗಾರಿಗೆ ಅರಣ್ಯ ಇಲಾಖೆ ಅನುಮತಿ ದೊರಕಿಸಿ ಕೊಡುವ ಕುರಿತಂತೆ ಪ್ರಧಾನಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಕೇಂದ್ರ ಜಲಶಕ್ತಿ ಮಂತ್ರಿ ಸಿ.ಆರ್ ಪಾಟೀಲ್ ಭರವಸೆ ನೀಡಿದ್ದಾರೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ರಾಜ್ಯದ ಉನ್ನತ ಮಟ್ಟದ ನಿಯೋಗದೊಂದಿಗೆ ಅವರನ್ನು ಭೇಟಿಯಾದ ವೇಳೆ ತಮಗೆ ಈ ಭರವಸೆ ನೀಡಿದ್ದು ಕೇಂದ್ರ ಮಂತ್ರಿ ಪ್ರಹ್ಲಾದ ಜೋಶಿ ಅವರು ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮಗಾರಿ ಆರಂಭಕ್ಕೆ ಅಗತ್ಯವಿರುವ ಅನುಮತಿ ಕೊಡಿಸುವ ಸಂಬಂಧ ಜಲಶಕ್ತಿ ಮಂತ್ರಿಗಳು ಕೇಂದ್ರ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂಬ ಭರವಸೆ ನೀಡಿದ್ದಾರೆ ಎಂದರು.
ಕೃಷ್ಣ ಮೇಲ್ದಂಡೆ ಯೋಜನೆ ಐತೀರ್ಪನ್ನು ಅಧಿಸೂಚನೆಯ ಮೂಲಕ ಪ್ರಕಟಿಸುವಂತೆ ಮನವಿ ಮಾಡಿದ್ದೇವೆ. ಈ ಅಧಿಸೂಚನೆ ಹೊರಬೀಳುತ್ತಿದ್ದಂತೆ ಬಾಕಿ ಉಳಿದಿರುವ ಎಲ್ಲ ಕಾಮಗಾರಿಗಳನ್ನು ಒಂದೇ ಹಂತದಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗುವುದು. ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳ ಕಾಮಗಾರಿ ಕೂಡ ಆರಂಭಿಸಲಾಗುವುದು. ಇದಕ್ಕೆ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆಯನ್ನು ಒಂದೇ ಬಾರಿಗೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ ಎಂದರು.
ಈ ವೇಳೆ ರಾಜ್ಯದ11 ಸಾವಿರ ಕೋಟಿ ಮೊತ್ತದ ರಾಜ್ಯದ ವಿವಿಧ ನೀರಾವರಿ ಯೋಜನೆಗಳ ಜತೆಗೆ ಮೇಕೆದಾಟು ಯೋಜನೆ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವು ಸ್ಪಷ್ಟಪಡಿಸುವಂತೆ ಕೇಂದ್ರ ಜಲಶಕ್ತಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.
ಮೇಕೆದಾಟು ಯೋಜನೆ ವಿಚಾರವಾಗಿ ಕೇಂದ್ರ ಸರ್ಕಾರದ ನಿಲುವೇನು ಎಂದು ತಿಳಿಸುವಂತೆ ಕೇಳಿದ್ದೇವೆ. ಈ ವಿಚಾರದಲ್ಲಿ ಸಮಯವ್ಯರ್ಥ ಮಾಡುವುದು ಬೇಡ. ಈ ಯೋಜನೆ ಮಾಡಲು ನೀವು ಬದ್ಧರಾಗಿದ್ದೀರಾ ಅಥವಾ ಇಲ್ಲವೇ? ಕೇಂದ್ರ ಜಲಶಕ್ತಿ ಸಚಿವಾಲಯ ನ್ಯಾಯದ ಸ್ಥಾನದಲ್ಲಿ ಕೂತಿದ್ದು, ಈ ಯೋಜನೆ ಬಗ್ಗೆ ನಿಲುವೇನು ಎಂಬುದನ್ನು ಸ್ಪಷ್ಟಪಡಿಸುವಂತೆ ಕೇಳಿದ್ದೇವೆ. ಈ ಯೋಜನೆಯಿಂದ ಎರಡೂ ರಾಜ್ಯಗಳಿಗೆ ಉಪಯೋಗವಾಗಬೇಕು ಎಂದರು.
ಇನ್ನು ಪೆನ್ನಾರ್ ನದಿ ವಿಚಾರವಾಗಿ ಕರ್ನಾಟಕ ಹಾಗೂ ತಮಿಳುನಾಡು ನಡುವೆ ತಿಕ್ಕಾಟವಿದ್ದು, ಸಂಧಾನದ ಮೂಲಕ ಈ ಸಮಸ್ಯೆ ಬಗೆಹರಿಸಿಕೊಳ್ಳಬಹುದೇ ಎಂದು ಕೇಳಿದ್ದೇವೆ. ಕಳೆದ ವರ್ಷ 300 ಟಿಎಂಸಿ, ಅದಕ್ಕೂ ಹಿಂದಿನ ವರ್ಷ 400 ಟಿಎಂಸಿ ನೀರು ಸಮುದ್ರಕ್ಕೆ ಸೇರಿದೆ. ಇದನ್ನು ನಾವು ಬಳಸಿಕೊಳ್ಳಬೇಕು ಎಂದರು.
ಈ ಮಧ್ಯೆ ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಸುಮಾರು 30 ಟಿಎಂಸಿ ನೀರು ನಷ್ಟವಾಗುತ್ತಿದೆ. ಹೀಗಾಗಿ ನವಲಿ ಬಳಿ ಸಮಾನಾಂತರ ಅಣೆಕಟ್ಟು ನಿರ್ಮಾಣ ಮಾಡುವ ಯೋಜನೆ ಇದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ಸಚಿವರು ಹಾಗೂ ಅಧಿಕಾರಿಗಳ ಜತೆ ಪ್ರತ್ಯೇಕ ಸಭೆ ಮಾಡಲಾಯಿತು. ಅದನ್ನು ಕೇಂದ್ರ ಸಚಿವರ ಗಮನಕ್ಕೂ ತರಲಾಯಿತು. ಈ ಬಗ್ಗೆ ನೀವೆ ಕೂತು ಚರ್ಚೆ ಮಾಡಿ. ನೀವು ಒಮ್ಮತಕ್ಕೆ ಬಂದರೆ ನಮಗೂ ಒಪ್ಪಿಗೆ ಇದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಈ ವಿಚಾರವಾಗಿ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಪ್ರತ್ಯೇಕವಾಗಿ ಕರೆ ಮಾಡಿ ಮಾರ್ಚ್ ಮೊದಲ ವಾರದಲ್ಲಿ ಚರ್ಚೆ ಮಾಡಲು ಸಮಯಾವಕಾಶ ನೀಡಿ ಎಂದು ಕೇಳಿದ್ದೇವೆ. ಈ ಯೋಜನೆಗೆ ನಮ್ಮ ತಾಂತ್ರಿಕ ಸಲಹಾ ಸಮಿತಿಯು ಪರ್ಯಾಯ ಮಾರ್ಗವನ್ನು ಸೂಚಿಸಿದ್ದು, ಇದನ್ನು ಉಭಯ ರಾಜ್ಯಗಳ ಜತೆ ಚರ್ಚೆ ಮಾಡದೇ ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ ಎಂದರು.
ಉಳಿದಂತೆ ನದಿ ಜೋಡಣೆ ವಿಚಾರವಾಗಿ ಕೇಂದ್ರ ಸರ್ಕಾರದ ಮುಂದೆ ಅನೇಕ ಪ್ರಸ್ತಾಪಗಳಿದ್ದು, ನಾವು ನಮ್ಮ ಪಾಲಿನ ನೀರಿನ ಬಗ್ಗೆ ಪ್ರಸ್ತಾವನೆ ಮಾಡಿದ್ದೇವೆ. ಇದರ ಜತೆಗೆ ರಾಜ್ಯದ ಆಣೆಕಟ್ಟುಗಳ ಗೇಟ್ ಬದಲಾವಣೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ತಾಂತ್ರಿಕ ಸಮಿತಿ ನೇಮಿಸಲಾಗಿದೆ. ಇನ್ನು ಕಾಲುವೆಗಳ ನೀರು ಕೊನೆ ಭಾಗದವರೆಗೂ ತಲುಪಲು ಅಗತ್ಯ ಕ್ರಮ ಕೈಗೊಳ್ಳಲು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಯೋಜನೆ ರೂಪಿಸಲಾಗಿದೆ.ಮಾರ್ಚ್ 18ರ ಒಳಗಾಗಿ ಮತ್ತೆ ಭೇಟಿ ಮಾಡಿ ಸಭೆ ನಡೆಸಲು ಕೇಂದ್ರ ಸಚಿವರ ಬಳಿ ಕಾಲಾವಕಾಶ ಪಡೆಯಲಾಗಿದೆ ಎಂದರು.



