ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು: ಸಿದ್ದರಾಮಯ್ಯ

12 months ago

ಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿಯ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಚರ್ಚೆ ನಡೆಸಲು ಸಂಪುಟ ಸಭೆ ಕರೆಯಲಾಗಿತ್ತು. ಆದರೆ ವರದಿಗೆ ಪೂರಕವಾದ ಇನ್ನೂ ಹಲವಾರು ತಾಂತ್ರಿಕ ಅಂಶಗಳನ್ನು ಆಯೋಗ ನೀಡಲು ಸಮಯ ಕೇಳಿದೆ ಹೀಗಾಗಿ ನಿಗದಿಯಾಗಿದ್ದ ಸಭೆಯನ್ನು ಮೇ 9 ಕ್ಕೆ ಮುಂದೂಡಲಾಗಿದೆ ಎಂದರು.

ಈಗಾಗಲೇ ವರದಿಯನ್ನು ಸಂಪುಟ ಸಭೆಯಲ್ಲಿ ಮಂಡಿಸಲಾಗಿದ್ದು ಅದರ ಬಗ್ಗೆ  ಸಚಿವರ ಅಭಿಪ್ರಾಯ ಕೇಳಿದ್ದೇವೆ, ಸಚಿವರ ವರದಿಯನ್ನು ಆಧರಿಸಿ ಮೇ 9ರಂದು ನಡೆಯುವ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಆ ನಿರ್ಧಾರವನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು‌ ಎಂದರು.

ಕೇಂದ್ರ ಸರ್ಕಾರ ಜಾತಿ ಗಣತಿ ಮಾಡುವುದರಿಂದ ಕಾಂತರಾಜು ವರದಿ ಮೇಲಿನ ಪರಿಣಾಮದ ಬಗ್ಗೆ ಮುಂದಿನ ಸಂಪುಟದಲ್ಲಿ ಚರ್ಚೆ ಮಾಡಲಾಗುವುದು. ಎಲ್ಲಾ ಸಚಿವರಿಂದಲೂ ಲಿಖಿತ ಅಭಿಪ್ರಾಯ ಕೇಳಿದ್ದೇವೆ. ಅದನ್ನು ಪಡೆದ ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಜಾತಿ ಜನಗಣತಿ ಮಾಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇಲ್ಲ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಬಿಹಾರದಲ್ಲಿ ಬಿಜೆಪಿಯ ಜೊತೆ ಸರ್ಕಾರ ರಚನೆಯಲ್ಲಿ ಮಿತ್ರ ಪಕ್ಷವಾಗಿರುವ ಜೆಡಿಯು ಜಾತಿ ಗಣತಿ ಮಾಡಿಲ್ಲವೇ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರಗಳಿಗೆ ಅಧಿಕಾರ ಇಲ್ಲ ಎಂದು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ, ಮೀಸಲಾತಿಯನ್ನು ಹೆಚ್ಚಿಸಬೇಕು.ನಾವು ಮಾಡಿರುವುದು ಜಾತಿ ಗಣತಿ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯೂ ಜಾತಿ ಗಣತಿಯಾಗಿದೆ. ಅದನ್ನು ಮುಂದಿಟ್ಟುಕೊಂಡು ಮೀಸಲಾತಿಯನ್ನು ಹೆಚ್ಚಿಸಲು ನಾವು ಸಿದ್ಧರಿದ್ದೇವೆ. ಮೀಸಲಾತಿ ಶೇ.50ರಷ್ಟರ ಮಿತಿಯಲ್ಲಿರಬೇಕು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ ಹೀಗಿದ್ದರೂ ಶೇ.10ರಷ್ಟು ಇಡಬ್ಲ್ಯೂಎಸ್ ಜಾರಿಗೆ ತರಲಾಗಿದೆ. ತಮಿಳುನಾಡಿನಲ್ಲಿ ಶೇ.69ರಷ್ಟು, ಜಾರ್ಖಂಡ್ ನಲ್ಲಿ ಶೇ.77ರಷ್ಟು ಮೀಸಲಾತಿಯಿದೆ.ಇದನ್ನು ಗಮನಿಸಿ ಕೇಂದ್ರ ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಬಡತನ, ಸಾಮಾಜಿಕ ಪರಿಸ್ಥಿತಿ ಆಧರಿಸಿ ಮೀಸಲಾತಿ ನೀಡಬೇಕು ಎಂದರು.

ಕೇಂದ್ರದ ಜಾತಿ ಗಣತಿಯಿಂದ ನಮ್ಮ ವರದಿಯ ಪಾವಿತ್ರ್ಯತೆ ಕಡಿಮೆಯಾಗುವುದಿಲ್ಲ. ಸಮೀಕ್ಷೆ ಸಮಯದಲ್ಲಿ ರಾಜ್ಯದಲ್ಲಿ 6 ಕೋಟಿ ಜನರಿದ್ದರು, ಶೇ.95ರಷ್ಟು ಸಮೀಕ್ಷೆಯಾಗಿದೆ. ಯಾವುದೇ ಸಮೀಕ್ಷೆ ಶೇ.100ರಷ್ಟು ನಡೆಯಲು ಸಾಧ್ಯವಿಲ್ಲ ಎಂದರು.

ಕಳೆದ 2015ರಲ್ಲೇ 192 ಕೋಟಿ ಖರ್ಚು ಮಾಡಿ ಸಮೀಕ್ಷೆ ನಡೆಸಿದೆ. ವರದಿ ಸಿದ್ದವಾಗಿದ್ದರೂ ಹಿಂದೆ  ಮುಖ್ಯಮಂತ್ರಿಗಳಾಗಿದ್ದ ಹೆಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ವರದಿ ಪಡೆದುಕೊಳ್ಳಲಿಲ್ಲ. ಯಡಿಯೂರಪ್ಪ ಆಯೋಗಕ್ಕೆ ಜಯಪ್ರಕಾಶ್ ಹೆಗ್ಡೆ ಅವರನ್ನು ಹೊಸ ಅಧ್ಯಕ್ಷರನ್ನಾಗಿ ನೇಮಿಸಿದರು. ಅವರಿಂದಲೇ ನಮ್ಮ ಸರ್ಕಾರ ವರದಿ ಪಡೆದುಕೊಂಡಿದೆ ಎಂದರು.

ಕೇಂದ್ರ ಸರ್ಕಾರ ಯಾವ ದಿನಾಂಕದಿಂದ ಜನಗಣತಿ ಮತ್ತು ಜಾತಿ ಗಣತಿ ಮಾಡುತ್ತೇವೆ ಎಂಬುದನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

Leave a Reply