ಹೆಚ್ಎಸ್ ದೊರೆಸ್ವಾಮಿ ಎಂಬ ಹೋರಾಟಗಾರರು ಇದ್ದದ್ದು ಸರ್ಕಾರಕ್ಕೆ ನೆನಪಿದೆಯೇ?

1 year ago

ಬದುಕಿನ ಉದ್ದಕ್ಕೂ ತಮ್ಮ ಜೀವನವನ್ನು ಸಮಾಜಕ್ಕಾಗಿ, ದೇಶಕ್ಕಾಗಿ ಮೀಸಲಿಟ್ಟು ಸರ್ಕಾರಗಳಿಂದ ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೆ 104 ವರ್ಷಗಳ ಕಾಲ ಸಾರ್ಥಕ ಬದುಕನ್ನ ಸಾಗಿಸಿ ಬದುಕಿನ ಪಯಣವನ್ನು ಮುಗಿಸಿದ ಶ್ರೇಷ್ಠ ಹೋರಾಟಗಾರ ಪ್ರಾಮಾಣಿಕತೆಯ ಮತ್ತೊಂದು ವ್ಯಕ್ತಿತ್ವ ಕರ್ನಾಟಕ ನಾಡಿನ ಸಾಕ್ಷಿಪ್ರಜ್ಞೆಯಾಗಿದ್ದ ಹೆಚ್ಎಸ್ ದೊರೆಸ್ವಾಮಿ ರವರು ನಮ್ಮನ್ನು ಅಗಲಿ ನಾಲ್ಕು ವರ್ಷಗಳು ಕಳೆದಿವೆ. ಆದರೆ ಸರ್ಕಾರಗಳಿಗೆ ಇಂತಹ ಒಬ್ಬ ಹೋರಾಟಗಾರರು ನಮ್ಮ ನಾಡಿನಲ್ಲಿದ್ದರೂ ಎಂಬುದನ್ನ ಮರೆತಂತೆ ಭಾಸವಾಗುತ್ತಿದೆ.

ಸಾವಿರದ ಒಂಬೈನೂರ ಹದಿನೆಂಟರ ಏಪ್ರಿಲ್ ಹತ್ತರಂದು ಹುಟ್ಟಿದಂತಹ ಇವರು 2021ರ ಮೇ 26ರಂದು ನಿಧನರಾದರು.

2019ರಲ್ಲಿ ಇವರ ಧರ್ಮಪತ್ನಿ ಲಲಿತಮ್ಮನವರು ನಿಧನರಾದಾಗ ಇವರ ದೇಹವನ್ನು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ದಾನವನ್ನು ಮಾಡಿದರು. ಇವರ ದೇಹವನ್ನು ಸಹ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾನ ಮಾಡಿದ್ದರು. ಆದರೆ ಕರೋನ ಸೋಂಕಿನ ಹಿನ್ನೆಲೆಯಲ್ಲಿ ಇವರ ದೇಹವನ್ನು ಟಿಆರ್ ಮಿಲ್ಲಿನ ರುದ್ರಭೂಮಿಯಲ್ಲಿ ಅಗ್ನಿಸ್ಪರ್ಶ ಮಾಡಲಾಯಿತು.

1937ರಲ್ಲಿ ದೇಶ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡ ಇವರು, 1942ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಸೆರೆಮನೆ ವಾಸವನ್ನ ಅನುಭವಿಸಿದರು. ಬಾಂಬ್ ಸಿಡಿಸಿದ ಪ್ರಕರಣದಲ್ಲಿ ಹದಿನಾಲ್ಕು ತಿಂಗಳುಗಳ ಕಾಲ ಸೆರೆಮನೆ ವಾಸವನ್ನು ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಅನುಭವಿಸಿರುತ್ತಾರೆ.

ಇವರದೇ ಆದಂತಹ ಸಾಹಿತ್ಯ ಮಂದಿರ ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ವಿಶೇಷವಾಗಿ ದೇಶದ ಹೋರಾಟಕ್ಕೆ ಪೂರಕವಾದ ವಿಚಾರಗಳನ್ನು ಒಳಗೊಂಡ ಗ್ರಂಥಗಳನ್ನು ಪ್ರಕಟಿಸಿರುತ್ತಾರೆ. ಪೌರವಾಣಿ ಎನ್ನುವ ಪತ್ರಿಕೆಯನ್ನು ನಡೆಸಿರುತ್ತಾರೆ. ಇವರು ಒಬ್ಬ ಶ್ರೇಷ್ಠ ಬರಹಗಾರರಾಗಿದ್ದರು. ಹಲವಾರು ಅಂಕಣಗಳನ್ನು ನಾಡಿನ ಹಲವಾರು ಪತ್ರಿಕೆಗಳಿಗೆ ಬರೆದಿದ್ದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಇವರು ತಮ್ಮ ನಿಲುವನ್ನು ಮತ್ತು ಬದ್ಧತೆಯನ್ನು ಸ್ವಲ್ಪ ಸರಿಸಿದ್ದರೆ ಕೆಂಗಲ್ ಹನುಮಂತಯ್ಯನವರ ಕಾಲದಲ್ಲಿ ವಿಧಾನ ಪರಿಷತ್ತಿನ ಸದಸ್ಯರಾಗಿ, ನಂತರದ ಸರ್ಕಾರಗಳಲ್ಲಿ ಹಲವಾರು ರೀತಿಯ ರಾಜಕೀಯ ಸ್ಥಾನಮಾನವನ್ನು ಪಡೆಯಬಹುದಿತ್ತು. ಆದರೆ ತಾವು ನಂಬಿದ ವಿಚಾರಗಳು ಮತ್ತು ತಮ್ಮ ನಿಲುವುಗಳನ್ನು ಅಧಿಕಾರಕ್ಕಾಗಿ ಎಂದೂ ಬದಲಾಯಿಸಿಕೊಂಡವರಲ್ಲ. ಈ ಕಾರಣದಿಂದ ಇಷ್ಟು ದೊಡ್ಡ ಹೋರಾಟಗಾರರು ರಾಜಕಾರಣದಲ್ಲಿ ಯಾವುದೇ ಸರ್ಕಾರದಲ್ಲೂ, ಯಾವುದೇ ಸ್ಥಾನಮಾನವನ್ನ ಬಯಸಲಿಲ್ಲ.

ಬದುಕಿನಲ್ಲಿ ಎಷ್ಟೇ ಕಷ್ಟವಿದ್ದರೂ ಸರ್ಕಾರದ ಮುಲಾಜಿಗೆ ಎಂದೂ ಬಿದ್ದವರಲ್ಲ. ಸರ್ಕಾರಗಳೇ ಸಹಾಯ ಮಾಡಲು ಮುಂದೆ ಬಂದರು ಅವುಗಳನ್ನ ನಿಷ್ಟೂರವಾಗಿ ನಿರಾಕರಿಸಿದಂತಹ ವ್ಯಕ್ತಿತ್ವ ಇವರದು.

ಮೈಸೂರ್ ಚಲೋ ಚಳುವಳಿಯಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸಿದಂತ ಇವರು, ಕರ್ನಾಟಕದ ಏಕೀಕರಣದ ಸಂದರ್ಭದಲ್ಲಿ ಹಲವಾರು ನಿರ್ಣಾಯಕ ಸಂದರ್ಭದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಜೊತೆಗೆ ರಾಜ್ಯದಾದ್ಯಂತ ಏಕೀಕರಣದ ಮಹತ್ವವನ್ನ ಸಾರುವ ಸಲುವಾಗಿ ನಾಡಿನ ಸಾಹಿತಿ, ಕಲಾವಿದರ ಜೊತೆಯಲ್ಲಿ ನಾಡಿನಾದ್ಯಂತ ಸಂಚರಿಸಿದ್ದರು.

ಇವರು ಸರ್ವೋದಯ ಚಳವಳಿಯಲ್ಲಿಯೂ ಭಾಗವಹಿಸಿ, ವಿನೋಬಾ  ರವರ ಭೂದಾನ ಚಳುವಳಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ಉದ್ದಗಲಕ್ಕು ಸಂಚರಿಸಿದ್ದರು.

ಅಸ್ಪೃಶ್ಯತೆಯ ನಿವಾರಣೆಗಾಗಿ ಹಲವಾರು ಹೋರಾಟಗಳನ್ನ ಮಾಡಿದ್ದ ಇವರು, ಅಂಬೇಡ್ಕರ್ ರವರ ವಿಚಾರಧಾರೆಯಲ್ಲಿ ಅತ್ಯಂತ ಗೌರವವನ್ನು ಮತ್ತು ಪ್ರಾಮಾಣಿಕವಾದ ಬದ್ಧತೆಯನ್ನು ಹೊಂದಿದ್ದರು. ಮದ್ಯಪಾನ ವಿರೋಧಿ ಹೋರಾಟ ಇವರ ನೇತೃತ್ವದಲ್ಲಿ ನಡೆದಿದೆ.

ಹೇಳುತ್ತಾ ಹೊರಟರೆ ದೊರೆಸ್ವಾಮಿ ರವರ ಹೋರಾಟದ ವಿಚಾರಗಳಿಗೆ ಲೆಕ್ಕವೇ ಇಲ್ಲ. ಒಂದಲ್ಲ ಒಂದು ವಿಚಾರವನ್ನು ತೆಗೆದುಕೊಂಡು ಜನರ ಹಿತಕ್ಕಾಗಿ, ಬಡಜನರ ಕಲ್ಯಾಣಕ್ಕಾಗಿ, ಸರ್ಕಾರಗಳು ಯಾವುದೇ ಇರಲಿ ಯಾರ ಮುಲಾಜಿಗೂ ಬೀಳದೆ ನಿಷ್ಟೂರವಾಗಿ, ಸರ್ಕಾರಗಳ ಜನವಿರೋಧಿ ನೀತಿಗಳನ್ನ ಮತ್ತು ನಿರ್ಣಯಗಳನ್ನ ಖಂಡಿಸುತ್ತಿದ್ದರು, ಪ್ರತಿಭಟಗಳನ್ನ ನಡೆಸುತ್ತಿದ್ದರು.

ಮಂಡೂರಿನಲ್ಲಿ ಕಸದ ಸಮಸ್ಯೆ ಉದ್ಭವವಾಗಿ ಅಲ್ಲಿನ ಜನರಿಗೆ ತೊಂದರೆಯಾದಾಗ ದೊರೆಸ್ವಾಮಿ ರವರು ನೂರು ವರ್ಷದ ತಮ್ಮ ಬದುಕಿನ ಸಂದರ್ಭದಲ್ಲಿ ಆರೋಗ್ಯವನ್ನು ಲೆಕ್ಕಿಸದೆ ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಬೆಂಗಳೂರಿನ ನಗರದ ಜನತೆ ಇವರನ್ನು ಎಂದೂ ಮರೆವಂತಿಲ್ಲ. ಬೆಂಗಳೂರಿನ ಮತ್ತು ಸುತ್ತಮುತ್ತಲು ಸಾವಿರಾರು ಎಕರೆ ಸರ್ಕಾರಿ ಜಮೀನು ಭೂಗಳ್ಳರ ಪಾಲಾಗಿತ್ತು. ಇದರ ವಿರುದ್ಧ ವರದಿಯನ್ನು ನೀಡಲು ನೇಮಕಗೊಂಡಿದ್ದ ಎ ಟಿ ರಾಮಸ್ವಾಮಿ ರವರ ವರದಿಯನ್ನ ಜಾರಿಗೆ ತಂದು ಕಠಿಣವಾದ, ಕ್ರಮಗಳ ಮೂಲಕ ಭೂಗಳ್ಳರಿಂದ ಸರ್ಕಾರಿ ಜಮೀನನ್ನು ವಶಪಡಿಸಿಕೊಳ್ಳಬೇಕೆಂದು ನಿರಂತರವಾದ ಹೋರಾಟವನ್ನು ಮಾಡಿದಂತಹ ಪರಿಣಾಮವಾಗಿ, ಹತ್ತಾರು ಸಾವಿರ ಎಕರೆ, ಲಕ್ಷಾಂತರ ಕೋಟಿ ರೂಪಾಯಿಗಳ ಬೆಲೆಯ ಭೂಮಿ ಮತ್ತೆ ಸರ್ಕಾರದ ಪಾಲಾಯಿತು.

ಹೆಚ್ಎಸ್ ದೊರೆಸ್ವಾಮಿ ರವರು ಸುದೀರ್ಘವಾದ ತಮ್ಮ ಬದುಕಿನಲ್ಲಿ ಬಹಳಷ್ಟು ಕಾಲ ಆರೋಗ್ಯವಂತರಾಗಿ, ಕ್ರಿಯಾಶೀಲರಾಗಿ, ಹೋರಾಟಗಳಲ್ಲಿ ಪಾಲ್ಗೊಂಡು ಲವಲವಿಕೆಯಿಂದ ಇದ್ದದ್ದನ್ನು ಕಂಡಂತಹ ಜನರಿಗೆ ಅಚ್ಚರಿಯಾಗುತ್ತಿತ್ತು. ಅತಿ ಎತ್ತರದ ದೇಹ ಅಷ್ಟೇ ಎತ್ತರದ ವ್ಯಕ್ತಿತ್ವ.

ಹತ್ತು ಹಲವಾರು ರೀತಿಯಲ್ಲಿ ಜನ ಪರವಾದಂತಹ ಹೋರಾಟವನ್ನು ಮಾಡಿದಂತಹ, ಮಹಾತ್ಮ ಗಾಂಧೀಜಿ ರವರ ಆಶಯದಂತೆ ಶುದ್ಧವಾದ ಬದುಕನ್ನ ನಡೆಸಿದಂತಹ, ಯಾವುದೇ ರೀತಿಯ ಸಣ್ಣ ನೆರವನ್ನು ತಮ್ಮ ಮತ್ತು ತಮ್ಮ ಕುಟುಂಬದ ಸದಸ್ಯರಿಗೆ ಸರ್ಕಾರಗಳಿಂದ ಪಡೆದುಕೊಳ್ಳದೆ ನ್ಯಾಯ, ನಿಷ್ಟೂರತೆಯ ಬದುಕನ್ನ, ಸಾಗಿಸಿ ನಮ್ಮಿಂದ ದೂರವಾಗಿರುವ ಇವರ ವಿಚಾರದಲ್ಲಿ ಸರ್ಕಾರಗಳು ಯಾವುದೇ ರೀತಿಯಲ್ಲೂ ನೆನಪಿನಲ್ಲಿ ಉಳಿಸುವಂತಹ ಕಾರ್ಯಕ್ರಮವನ್ನು ರೂಪಿಸದಿರುವುದು ವಿಷಾದರ ಸಂಗತಿಯಾಗಿದೆ, ಸರ್ಕಾರಗಳಿಗೆ ಕೃತಜ್ಞತೆಯ ಅಭಾವವಿದೆ ಎಂದು ಅನಿಸುತ್ತದೆ.

ಇವರ ಮನೆಯ ಬಾಗಿಲು ಸದಾ ತೆರೆದಿರುತ್ತಿತ್ತು. ಯಾರು ಬೇಕಾದರೂ ಯಾವುದೇ ಸಂದರ್ಭದಲ್ಲಿ ಇವರನ್ನು ಭೇಟಿಯಾಗಿ ವಿಚಾರಗಳ ಬಗ್ಗೆ ಚರ್ಚಿಸಬಹುದಿತ್ತು. ಅದೇ ರೀತಿಯಲ್ಲಿ ಎಷ್ಟೇ ದೂರವಾಗಲಿ ಹೋರಾಟಕ್ಕೆ ಕರೆದರೆ ಸಮಯಕ್ಕೆ ಸರಿಯಾಗಿ ಹಾಜರಿರುತ್ತಿದ್ದರು.

ಕೈಗಾ ಅಣುಸ್ಥಾವರದ ವಿರುದ್ಧವು ಇವರು ಹೋರಾಟವನ್ನು ಮಾಡಿ ಉತ್ತರ ಕನ್ನಡ ಜಿಲ್ಲೆಯ ಜನರ ಬದುಕಿನ ಬಗ್ಗೆ ಚಿಂತನೆಯನ್ನು ನಡೆಸಿದರು. ಹೆಚ್ಎಸ್ ದೊರೆಸ್ವಾಮಿ ರವರ ವಿಚಾರದಲ್ಲಿ ಇಂದಿಗೂ ಸಹ ನಾಡಿನ ಸಹಸ್ರಾರು ಮಂದಿ ಗೌರವದಿಂದ ಅವರ ಹೋರಾಟಗಳನ್ನ ಸದಾಕಾಲ ನೆನೆಯುತ್ತಾ, ಅವರ ಬದುಕಿನ ಬಗ್ಗೆ ಅವರ ನಿಷ್ಟೂರ ನಡವಳಿಕೆಯ ಬಗ್ಗೆ ಮೆಲಕು ಹಾಕುತ್ತಲೇ ಇರುತ್ತಾರೆ.

ಕರ್ನಾಟಕ ರಾಜ್ಯದ ರಾಜಕಾರಣ, ಸಾಹಿತ್ಯ, ಸಂಸ್ಕೃತಿ, ದೇಶದ ಹೋರಾಟಗಳು, ಅಂತರರಾಷ್ಟ್ರೀಯ ವಿಚಾರಗಳು, ಎಲ್ಲದರ ಬಗ್ಗೆ ಜ್ಞಾನವಂತರಾಗಿದ್ದ  ಇವರು ತಮ್ಮ ಬಳಿಗೆ ಬಂದಂತಹ ಯುವ ಜನರಿಗೆ ಇವುಗಳ ಬಗ್ಗೆ ತಿಳಿಸುತ್ತಾ, ಹೋರಾಟದ ಹಾದಿಯಲ್ಲಿ ಸಾಗುವಂತೆ ಪ್ರೇರೇಪಿಸುತ್ತಿದ್ದರು.

ದುರಂತವೆಂದರೆ ಬಿಬಿಎಂಪಿಯಲ್ಲಿ ಅನೇಕರು ಸತ್ತ ಕೆಲವೇ ದಿನದಲ್ಲಿ ಅವರ ಹೆಸರನ್ನು ರಸ್ತೆಗಳಿಗೋ, ಅಥವಾ ವೃತ್ತಗಳಿಗೋ ನಾಮಕರಣ ಮಾಡುತ್ತಾರೆ. ಪುತ್ಥಳಿಗಳನ್ನು ಅನಾವರಣ ಮಾಡುತ್ತಾರೆ. ಆದರೆ ಇವರ ಹೆಸರನ್ನು ಬೆಂಗಳೂರು ನಗರದ ಸಣ್ಣದೊಂದು ಗಲ್ಲಿಗಾದರೂ ಇಡಬೇಕೆಂಬ ವಿಚಾರ ಯಾರಿಗೂ ನೆನಪಿಗೆ ಬಾರದೆ ಇರುವುದು ಮತ್ತೊಂದು ನೋವಿನ ಸಂಗತಿಯಾಗಿದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply