ಪ್ರಾಮಾಣಿಕ ಬದುಕಿನ ಪ್ರೊಫೆಸರ್ ಮಧುದಂಡವತೆ

2 years ago

#MadhuDandavate #ksnagaraj #memory #tribute

ದಿನಾಂಕ: 26-11-2023ರಂದು ಬೆಂಗಳೂರಿನ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಕರ್ನಾಟಕ ಸಮಾಜವಾದಿ ಒಕ್ಕೂಟ ಕರ್ಪೂರಿ ಠಾಕೂ‌ರ್ ಮತ್ತು ಪ್ರೊಫೆಸರ್ ಮಧುದಂಡವತೆರವರ ಜನ್ಮ ಶತಮಾನೊತ್ಸವವನ್ನು ಬೆಳಿಗ್ಗೆ 10-30ಕ್ಕೆ ಸಂಘಟಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಈ ಲೇಖನ.

ಒಬ್ಬ ವ್ಯಕ್ತಿಗೆ ಅಧಿಕಾರ ಸಿಕ್ಕಾಗ ತಾನು ನಂಬಿದ ವಿಚಾರಧಾರೆಗಳಿಗೆ ಪೂರಕವಾದಂತಹ ಯೋಜನೆಗಳನ್ನು ರೂಪಿಸಬಹುದು ಎಂಬುದನ್ನು ಈ ದೇಶದಲ್ಲಿ ಪ್ರಥಮ ಬಾರಿಗೆ ತೋರಿಸಿಕೊಟ್ಟವರು ಪ್ರೊಫೆಸರ್ ಮಧುದಂಡವತೆರವರು.

ಇವರು 1977ರಲ್ಲಿ ಮುರಾರ್ಜಿ ದೇಸಾಯಿರವರ ಸಂಪುಟದಲ್ಲಿ ರೈಲ್ವೇ ಸಚಿವರಾಗುತ್ತಾರೆ. ಈ ಸಂದರ್ಭದಲ್ಲಿ ಸಮಸಮಾಜದ ಕಲ್ಪನೆಯ ಸಮಾನತೆಯ ಯೋಜನೆಯನ್ನು ಕಾರ್ಯಕ್ರಮವೊಂದರ ಮೂಲಕ ದೇಶದ ಜನರಿಗೆ ಪರಿಚಯಿಸುತ್ತಾರೆ.

ರೈಲ್ಲಿನಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಯಾಣ ಮಾಡುವ ಜನರಿಗೆ ಮೆತ್ತನೆಯ ಕುಷನ್ ಆಸನಗಳಿದ್ದವು. ಎರಡನೇ ದರ್ಜೆಯ ಬೋಗಿಯಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಮರದ ಹಲಗೆಯ ಮೇಲೆ ಕುಳಿತು ಇಲ್ಲವೇ ಮಲಗಿ ಪ್ರಯಾಣವನ್ನು ಮಾಡಬೇಕಾಗಿತ್ತು. ಹಲವಾರು ಗಂಟೆಗಳ ಪ್ರಯಾಣದ ನಂತರ ಪ್ರಯಾಣಿಕರ ಬದುಕು ಸಾಕಾಗಿ ಹೋಗಿರುತ್ತಿತ್ತು. ಇದನ್ನು ಮನಗಂಡಂತಹ ಮಧುದಂಡವತೆರವರು ಎರಡನೇ ದರ್ಜೆಯ ಪ್ರಯಾಣಿಕರಿಗೂ ಸಹ ಮೆತ್ತನೆಯ ಕುಷನ್ ಆಸನದ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟರು.

ಈ ವಿಚಾರವಾಗಿ ಅನೇಕ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಣೆಗೊಂಡಿತ್ತು. ಎರಡು ಇಂಚಿನ ಫೋಮ್ ಎಂಬ ಲೇಖನ ಮಧುದಂಡವತೆರವರ ನಿಧನದ ಸಂದರ್ಭದಲ್ಲಿ ದೇಶದ ಹಿರಿಯ ಚರಿತ್ರೆಕಾರರಾದ ರಾಮಚಂದ್ರ ಗುಹಾರವರು ಬರೆದು ಇವರ ಸೇವೆಯನ್ನು ಸ್ಮರಿಸಿದರು.

ಇದಲ್ಲದೆ ಪ್ರಥಮ ಬಾರಿಗೆ ಸೀಟುಗಳ ಕಾಯ್ದಿರಿಸುವಿಕೆಯಲ್ಲಿ ಕಂಪ್ಯೂಟರ್ ವ್ಯವಸ್ಥೆಯನ್ನು ತಂದರು. ಐದು ಸಾವಿರ ಕಿಲೋಮೀಟರ್‌ಗಳ ರೈಲ್ವೇ ಹಳಿಗಳ ದುರಸ್ತಿ ಮತ್ತು ಆಧುನಿಕರಣಕ್ಕೆ ಚಾಲನೆ ನೀಡಿದರು. ಪ್ರಯಾಣಿಕರಿಗೆ ಊಟ ಮತ್ತು ತಿಂಡಿಯನ್ನು ತಿನ್ನಲು ಡೈನಿಂಗ್ ಟೇಬಲ್ ಮಾದರಿಯ ವ್ಯವಸ್ಥೆಯನ್ನು ಮಾಡಿಕೊಟ್ಟರು. ಕೊಂಕಣ ರೈಲು ಮಾರ್ಗದ ಪ್ರಥಮ ಹಂತದ ಯೋಜನೆಗೆ ಚಾಲನೆಯನ್ನು ನೀಡಿದರು. ವಿ.ಪಿ.ಸಿಂಗ್‌ರವರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ತದನಂತರ 1990ರಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಮತ್ತೆ 1996ರಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.

ಪ್ರೊಫೆಸರ್ ಮಧುದಂಡವತೆರವರು 21-01-1924ರಲ್ಲಿ ಮುಂಬೈ ಪ್ರದೇಶದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸುತ್ತಾರೆ. ಭೌತಶಾಸ್ತ್ರದಲ್ಲಿ ಉನ್ನತ ಪದವಿಯನ್ನು ಪಡೆದು ಕಾಲೇಜಿನ ಉಪನ್ಯಾಸಕರಾಗಿ ಭೌತಶಾಸ್ತ್ರ ವಿಭಾಗದ ಪ್ರಮುಖರಾಗಿ ಸೇವೆಯನ್ನು ಸಲ್ಲಿಸುತ್ತಾರೆ.

ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 1948ರ ಅವಧಿಯಲ್ಲಿ ಲೋಕನಾಯಕ ಜಯಪ್ರಕಾಶ್ ನಾರಾಯಣ್ ರವರ ಅನುಯಾಯಿಯಾಗಿ ಪ್ರಜಾ ಸೋಷಿಯಲಿಸ್ಟ್ ಪಕ್ಷದ ಅನೇಕ ಹಂತದ ಹುದ್ದೆಗಳನ್ನು ಅಲಂಕರಿಸಿ ಸಮಾಜವಾದಿ ಹೋರಾಟಗಾರರಾಗಿ ರೂಪುಗೊಳ್ಳುತ್ತಾರೆ.

ಇವರು 1970ರ ಅವಧಿಯಲ್ಲಿ ವಿಧಾನಪರಿಷತ್ತಿನ ಸದಸ್ಯರಾಗಿ ತದನಂತರ 1971 ರಿಂದ 1991ರ ತನಕ ಸತತವಾಗಿ ಐದು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ. ವಿರೋಧಪಕ್ಷದ ಸ್ಥಾನದಲ್ಲಿ ನಿಂತು ಸರ್ಕಾರದ ತಪ್ಪುಗಳನ್ನು ಖಂಡಿಸುವುದರ ಜೊತೆಗೆ ಸಮಯೋಚಿತ ಸಲಹೆಗಳನ್ನು ನೀಡಿರುತ್ತಾರೆ.

1985ರಲ್ಲಿ ಇವರು ಪಕ್ಷಾಂತರ ನಿಷೇಧ ಕಾಯ್ದೆಯ ಮಸೂದೆಯ ಮೇಲೆ ಮಾಡಿರುವ ಭಾಷಣ ಪಕ್ಷಾಂತರ ನಿಷೇಧ ಕಾಯ್ದೆಯ ರೂಪುಗೊಳ್ಳಲು ಸಹಕಾರಿಯಾಗಿರುತ್ತದೆ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿರವರ ಕಾಲದಲ್ಲಿ ವಿರೋಧಪಕ್ಷದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು.

ಅತ್ಯಂತ ಉತ್ತಮ ಸಂಸದೀಯಪಟುಗಳ ಸಾಲಿನಲ್ಲಿ ಗುರುತಿಸಲ್ಪಟ್ಟಿರುವ ಇವರು ತಮ್ಮ ಮಾತಿನಲ್ಲಿ ವ್ಯಂಗ್ಯ ಮತ್ತು ಹಾಸ್ಯವನ್ನು ತುಂಬಿಸುತ್ತಿದ್ದರು. ಇವರ ಮಾತುಗಳು ಕೇಳುಗರಿಗೆ ಒಂದು ರೀತಿಯ ಉಪನ್ಯಾಸವಾಗಿರುತ್ತಿತ್ತು. ರೈಲ್ವೇ ಮುಂಗಡ ಪತ್ರ ಮತ್ತು ಸಾಮಾನ್ಯ ಮುಂಗಡ ಪತ್ರ ಇವುಗಳ ಬಗ್ಗೆ ಸದನದಲ್ಲಿ ಗಂಭೀರವಾಗಿ ಚರ್ಚಿಸುತ್ತಿದ್ದರು.

ತುರ್ತುಪರಿಸ್ಥಿತಿಯ ದಿನಗಳಲ್ಲಿ ಹೋರಾಟವನ್ನು ಮಾಡಿದ ಕಾರಣಕ್ಕೆ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಅನೇಕ ರಾಷ್ಟ್ರ ನಾಯಕರ ಜೊತೆಯಲ್ಲಿ ಇವರು ಬಂಧಿಯಾಗಿದ್ದರು. ಈ ಸಂದರ್ಭದಲ್ಲಿ ಇವರ ಪತ್ನಿ ಪ್ರಮೀಳಾ ದಂಡವತರವರು ಯರವಾಡ ಜೈಲಿನಲ್ಲಿದ್ದರು. ತಮ್ಮ ಪತ್ನಿಗೆ ದೇಶದ ಪ್ರಚಲಿತ ವಿಚಾರಗಳ ಬಗ್ಗೆ ಇನ್ನೂರಕ್ಕೂ ಹೆಚ್ಚು ಪತ್ರಗಳನ್ನು ಬರೆದಿರುತ್ತಾರೆ. ಅತ್ಯುತ್ತಮ ಬರಹಗಾರರಾದ ದಂಡವತೆರವರು ಹಲವಾರು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಬರೆದಿದ್ದಾರೆ. ಲೇಖನಗಳ ಸಂಖ್ಯೆಯಂತೂ ಲೆಕ್ಕವಿಲ್ಲ. ಇವರ ಸಾಧನೆಯ ಹಿಂದೆ ಇವರ ಪತ್ನಿ ಪ್ರಮೀಳಾ ದಂಡವತೆರವರ ಪಾತ್ರವು ಇದೆ. ಸರಳವಾದ ಪತಿಯ ಬದುಕಿನ ಆಸೆಯಂತೆ ತಾವು ಸಹ ಅಷ್ಟೇ ಶುದ್ಧವಾದ ಸಾರ್ವಜನಿಕ ಬದುಕನ್ನು ನಡೆಸಿರುತ್ತಾರೆ.

ಸಮಾಜವಾದದಲ್ಲಿ ನಂಬಿಕೆ ಇಟ್ಟು ಸಮಾಜವಾದಿಯಾಗಿ ಅನೇಕ ಹೋರಾಟಗಳಲ್ಲಿ ಪಾಲ್ಗೊಂಡು ಲಾಠಿ ಏಟು ತಿಂದಿರುತ್ತಾರೆ. ಒಂದು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಇವರು ಮಹಿಳೆಯರ ಹಕ್ಕುಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ಇವರ ಪುತ್ರ ಉದಯ್ ದಂಡವತೆರವರು ಫ್ಯಾಷನ್ ಡಿಸೈನ್ ವಿಭಾಗದಲ್ಲಿ ಉನ್ನತ ಶಿಕ್ಷಣವನ್ನು ಪಡೆದು ಸಂಸ್ಥೆಯನ್ನು ನಡೆಸುತ್ತಿದ್ದರು. ಇವರು ಸಹ ಉತ್ತಮ ಬರಹಗಾರರು. ಮಧುದಂಡವತೆರವರು ಸಾವಿನಲ್ಲೂ ಸಹ ಸಾರ್ಥಕತೆಯನ್ನು ಮೆರೆದಿರುತ್ತಾರೆ. ನವೆಂಬರ್ 12, 2005ರಲ್ಲಿ ನಿಧನರಾದ ಇವರು ತಮ್ಮ ದೇಹವನ್ನು ದಾನ ಮಾಡಿ ಸಮಾಜವಾದಿಗಳಿಗೆ ಮತ್ತು ದೇಶಪ್ರೇಮಿಗಳಿಗೆ ಮಾದರಿಯಾಗಿರುತ್ತಾರೆ.

ಸುದೀರ್ಘವಾದ ರಾಜಕೀಯ ಬದುಕಿನಲ್ಲಿ ಯಾವುದೇ ಕಳಂಕವನ್ನು ಆಂಟಿಸಿಕೊಳ್ಳದೇ ಶುದ್ಧವಾದ, ಪ್ರಾಮಾಣಿಕವಾದ ಸಾರ್ವಜನಿಕ ಬದುಕನ್ನು ನಡೆಸಿದ್ದಾರೆ. ಅಪ್ಪಟ ಸಮಾಜವಾದಿಯಾಗಿ ಬದುಕಿನ ಅಂತ್ಯದ ತನಕ ಉಳಿದುಕೊಂಡಿದ್ದರು. ಕರ್ನಾಟಕ ರಾಜ್ಯದಲ್ಲಿ ಇವರ ನಂಟು ಬಹಳಷ್ಟಿತ್ತು. ಜೆ.ಹೆಚ್. ಪಟೇಲ್, ರಾಮಕೃಷ್ಣ ಹೆಗಡೆ, ಬೊಮ್ಮಾಯಿ, ದೇವೇಗೌಡರು ಎಲ್ಲರೂ ಇವರಿಗೆ ಆತ್ಮೀಯರು, ಕರ್ನಾಟಕದ ಅನೇಕ ನಾಯಕರುಗಳು ಇವರ ಸಂರ್ಪಕದಲ್ಲಿದ್ದರು.

ಕರ್ನಾಟಕದಲ್ಲಿ 1983 ಮತ್ತು 1994ರಲ್ಲಿ ಸ್ಥಾಪನೆಯಾದ ಜನತಾ ಪಕ್ಷದ ಮತ್ತು ಜನತಾದಳದ ಸರ್ಕಾರಗಳಲ್ಲಿ ರಾಜಕೀಯವಾಗಿ ಸಮಸ್ಯೆಗಳು ಬಂದರೆ ಅವುಗಳನ್ನು ತಣಿಸಲು ರಾಯಭಾರಿಯಾಗಿ ಅತಿ ಹೆಚ್ಚು ಬಾರಿ ಬರುತ್ತಿದ್ದವರೇ ಇವರು. ಎಲ್ಲರನ್ನೂ ವಿಶ್ವಾಸದಿಂದ ಜೊತೆಯಲ್ಲಿ ತೆಗದುಕೊಂಡು ಹೋಗುವ ಗುಣ ಇವರಲ್ಲಿದ್ದ ಕಾರಣದಿಂದ ಇವರ ಮಾತಿಗೆ ಮನ್ನಣೆ ಇರುತ್ತಿತ್ತು.

– ಕೆ.ಎಸ್. ನಾಗರಾಜ್, ಬೆಂಗಳೂರು

Leave a Reply