ಬಹಳಷ್ಟು ಮಂದಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಒಂದಲ್ಲ ಒಂದು ರೀತಿಯ ರಾಜಕೀಯ ಸ್ಥಾನಮಾನವನ್ನು ಪಡೆದುಕೊಂಡು ಸಾಕಷ್ಟು ಅಧಿಕಾರವನ್ನು ಅನುಭವಿಸಿ ತಮ್ಮ ಸೇವೆಗೆ ಪ್ರತಿಯಾಗಿ ಒಂದಷ್ಟು ಸೌಕರ್ಯ ಸೌಲಭ್ಯಗಳನ್ನು ಪಡೆದುಕೊಂಡವರೇ ಇರುವಾಗ ಇವರ ನಡುವೆ ದೇಶಕ್ಕಾಗಿ ತಮ್ಮ ಸುಧೀರ್ಘವಾದ ಬದುಕನ್ನ ಮೀಸಲಿಟ್ಟು ಸ್ವಾತಂತ್ರ್ಯ ನಂತರ ಸಾಮಾಜಿಕ ಮತ್ತು ರಚನಾತ್ಮಕ ಚಟುವಟಿಕೆಗಳ ಜೊತೆಗೆ ಗಟ್ಟಿಯಾದ ಜನಪರ ಕಾಳಜಿಯ ಹೋರಾಟಗಳನ್ನ ಮಾಡುತ್ತಾ ಸಾಸಿವೆ ಕಾಳಿನಷ್ಟು ಸರ್ಕಾರಗಳಿಂದ ನಿರೀಕ್ಷಿಸದೆ ಶುದ್ಧವಾದ ಮತ್ತು ಪ್ರಮಾಣಿಕವಾದ ಸಾರ್ವಜನಿಕ ಜೀವನವನ್ನು ಹೋರಾಟದ ಹಾದಿಯಲ್ಲಿ ಅಪ್ಪಟ ಗಾಂಧಿ ವಾದಿಯಾಗಿ ನುಡಿದಂತೆ ಬದುಕಿದವರು ಕರ್ನಾಟಕ ರಾಜ್ಯದ ಸಾಕ್ಷಿ ಪ್ರಜ್ಞೆಯಂತಿದ್ದ ಹೆಚ್ಎಸ್ ದೊರೆಸ್ವಾಮಿ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಎತ್ತರದ ದೇಹ ಆಲೋಚನೆಗಳು ಸಹ ಅಷ್ಟೇ ಎತ್ತರದಿಂದ ಕೂಡಿತ್ತು. ಇವರು ಜನರ ಪರವಾಗಿ ಹೋರಾಟವನ್ನು ಮಾಡುವ ಸಂದರ್ಭದಲ್ಲಿ ಸ್ನೇಹ, ಪಕ್ಷ, ಪಂಗಡ ಯಾವುದನ್ನು ಪರಿಗಣಿಸುತ್ತಿರಲಿಲ್ಲ. ಇವರ ಹಿತ ಕೇವಲ ಜನರ ಬದುಕು ಆಗಿರುತ್ತಿತ್ತು. ಈ ಕಾರಣದಿಂದ ಇವರು ಕೆಲವರ ಪಾಲಿಗೆ ನಿರವಾದಿಯಾಗಿದ್ದರು.
ಸಿಕ್ಕಸಿಕ್ಕವರನ್ನು ಅದರಲ್ಲೂ ಅಧಿಕಾರದಲ್ಲಿ ಇರುವವರನ್ನು ಹಾಡಿ ಹೊಗಳುವ ಜಾಯಮಾನ ಇವರದಾಗಿರಲಿಲ್ಲ. ಎಷ್ಟೇ ದೊಡ್ಡವರಾದರೂ ಸರಿಯೇ ಅವರು ತಪ್ಪು ಮಾಡಿದ್ದಾರೆ ಎಂದು ಅನಿಸಿದರೆ ವೇದಿಕೆಗಳ ಮೇಲೆ ನಿಂತು ಯಾವುದೇ ಮುಲಾಜಿಲ್ಲದೆ ಅವರ ತಪ್ಪುಗಳನ್ನ ಪ್ರಸ್ತಾಪಿಸುತ್ತಾ ಅವರಿಗೆ ಎಚ್ಚರಿಕೆಯನ್ನು ನೀಡುತ್ತಿದ್ದರು.
ಕನಕಪುರದ ಹಾರೋಹಳ್ಳಿಯಲ್ಲಿ ಹುಟ್ಟಿದಂತಹ ಇವರು ಪದವಿ ಶಿಕ್ಷಣವನ್ನ ಪಡೆದು ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಸೆರೆಮನೆ ವಾಸವನ್ನ ಅನುಭವಿಸಿ ಕೆಲವು ಕ್ರಾಂತಿಕಾರಿ ಹೋರಾಟದ ಮಾರ್ಗಗಳನ್ನು ಅನುಸರಿಸಿ ಕಠಿಣ ಶಿಕ್ಷೆಗೆ ಗುರಿಯಾಗಿದ್ದರು.
ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಗೆ ಪ್ರಭಾವಿತರಾಗಿದ್ದ ಇವರು ಅವರಂತೆ ಸರಳವಾದ ಪ್ರಾಮಾಣಿಕವಾದ ಮತ್ತು ಬದ್ಧತೆಯ ಬದುಕನ್ನ ಕೊನೆಯ ಕ್ಷಣದ ತನಕ ನಡೆಸಿದ ಅಪ್ಪಟ ಗಾಂಧಿ ವಾದಿ.
ಪತ್ರಿಕಾ ಕ್ಷೇತ್ರದಲ್ಲಿ ಸಾಕಷ್ಟು ಸೇವೆಯನ್ನು ಮಾಡಿದ ಇವರು ತಮ್ಮದೇ ಆದ ಪತ್ರಿಕೆಯನ್ನು ಸಹ ಆರಂಭಿಸಿದ್ದರು. ಜೊತೆಗೆ ನಾಡಿನ ಅನೇಕ ಪತ್ರಿಕೆಗಳಿಗೆ ಲೇಖನಗಳನ್ನು ಮೇಲಿಂದ ಮೇಲೆ ಬರೆಯುತ್ತಿದ್ದರು. ಇವರು ಬರೆಯುತ್ತಿದ್ದ ಲೇಖನಗಳು ಮತ್ತು ಸರ್ಕಾರಕ್ಕೆ ಇವರು ಬರೆಯುತ್ತಿದ್ದ ಪತ್ರಗಳು ಅನೇಕ ರೀತಿಯ ರಾಜಕೀಯ ನಿರ್ಧಾರಗಳಿಗೆ ಕಾರಣಗಳಾಗಿದೆ. ಸರ್ಕಾರದ ಮಟ್ಟದಲ್ಲಿ ಹೆಚ್ ಎಸ್ ದೊರೆಸ್ವಾಮಿ ಪತ್ರವೆಂದರೆ ಅಧಿಕಾರಿಗಳ ವಲಯದಲ್ಲಿ ಮತ್ತು ಅಧಿಕಾರದಲ್ಲಿರುವ ರಾಜಕಾರಣಿಗಳಿಗೆ ಒಂದು ರೀತಿಯ ಆತಂಕ ಇರುತ್ತಿತ್ತು ಕಾರಣ ಸರ್ಕಾರದ ತಪ್ಪುಗಳನ್ನ ಸರ್ಕಾರದ ನೀತಿಗಳಿಂದ ಜನರಿಗೆ ಆಗುವ ಅನ್ಯಾಯಗಳನ್ನ ಎತ್ತಿ ತೋರಿಸುತ್ತಿದ್ದರು. ಇವುಗಳಲ್ಲಿ ಬದಲಾವಣೆಯಾಗದಿದ್ದರೆ ಹೋರಾಟದ ಎಚ್ಚರಿಕೆಯನ್ನು ನೀಡುತ್ತಿದ್ದರು
ಮದ್ಯಪಾನ ವಿರೋಧಿ ಹೋರಾಟ, ಅಸ್ಪೃಶ್ಯತೆಯ ನಿರ್ಮೂಲನೆಗಾಗಿ ರಚನಾತ್ಮಕ ಕಾರ್ಯಕ್ರಮ, ಭ್ರಷ್ಟಾಚಾರದ ವಿರುದ್ಧ ಹೋರಾಟ ಹೀಗೆ ಇವರ ಹೋರಾಟದ ದಾರಿ ಹತ್ತು ಹಲವಾರು. ವಿಶೇಷವಾಗಿ ಮಂಡೂರಿನಲ್ಲಿ ಅಲ್ಲಿನ ಜನತೆ ಅನುಭವಿಸುತ್ತಿದ್ದ ಕಸದ ಸಮಸ್ಯೆಯ ವಿರುದ್ಧ ಸರ್ಕಾರವನ್ನು ಎಚ್ಚರಿಸಲು ಇವರು ನಿರಂತರ ಹೋರಾಟ ನಡೆಸಿದರು.
ಕರ್ನಾಟಕ ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಸರ್ಕಾರಿ ಭೂಮಿಯನ್ನು ಕಬಳಿಸಿದಂತಹ ಭೂಗಳ್ಳರ ವಿರುದ್ಧ ಇವರ ಹೋರಾಟ ಐತಿಹಾಸಿಕವಾದದ್ದು ನಿರಂತರವಾದಂತಹ ಹೋರಾಟ ಮತ್ತು ಎ ಟಿ ರಾಮಸ್ವಾಮಿ ಅವರ ವರದಿಯ ಅನುಷ್ಠಾನ ವರದಿಯಲ್ಲಿ ಇರುವ ಅಂಶಗಳ ಆಧಾರದ ಮೇಲೆ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳು ಸಕಾಲದಲ್ಲಿ ಸಾಧ್ಯವಾಗದೆ ಸರ್ಕಾರ ವಿಳಂಬ ನೀತಿಯನ್ನ ಅನುಸರಿಸಿದಾಗ ಬೆಂಗಳೂರಿನ ದೌನ್ಹಾಲ್ ಮುಂಭಾಗದಲ್ಲಿ ಹಲವಾರು ದಿನಗಳ ಕಾಲ ಇವರು ನಡೆಸಿದ ಹೋರಾಟ ಸರ್ಕಾರದ ಗಮನವನ್ನು ಸೆಳೆಯಿತು. ಇವರ ಹೋರಾಟದ ಕಾರಣದಿಂದಾಗಿ ಬೆಂಗಳೂರು ನಗರದಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ ಮೌಲ್ಯದ ಸರ್ಕಾರದ ಆಸ್ತಿ ಭೂಗಳ್ಳರಿಂದ ಮತ್ತೆ ಸರ್ಕಾರದ ಪಾಲಿಗೆ ಬರುವಂತಾಯಿತು.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರವೂ ಮೈಸೂರ್ ಸಂಸ್ಥಾನ ದೇಶದ ಸರ್ಕಾರದ ವ್ಯಾಪ್ತಿಗೆ ಬರಲು ಒಪ್ಪದಿದ್ದ ಸಂದರ್ಭದಲ್ಲಿ ನಡೆದ ಮೈಸೂರ್ ಚಲೋ ಚಳುವಳಿಯಲ್ಲಿ ಭಾಗವಹಿಸಿ ಮತ್ತೆ ಸೆರೆಮನೆ ವಾಸವನ್ನ ಅನುಭವಿಸುತ್ತಾರೆ. 1975 ರಲ್ಲಿ ಲೋಕ ನಾಯಕ ಜೈಪ್ರಕಾಶ್ ನಾರಾಯಣ್ ಅವರ ಸಂಪೂರ್ಣ ಕ್ರಾಂತಿಯ ಹೋರಾಟದಲ್ಲಿ ಭಾಗವಹಿಸಿ ಮತ್ತೆ ಸೆರೆಮನೆ ವಾಸವನ್ನ ಅನುಭವಿಸಿದ್ದಾರೆ.
ಕರ್ನಾಟಕದ ಏಕೀಕರಣದ ವಿಚಾರದಲ್ಲಿ ಇವರ ಪಾತ್ರ ಬಹಳ ಮುಖ್ಯವಾದದ್ದು ಇವರು ಸಹ ಏಕೀಕರಣಕ್ಕಾಗಿ ರಾಜ್ಯದಾದ್ಯಂತ ಪ್ರವಾಸವನ್ನ ಮಾಡಿ ಜನರಲ್ಲಿ ಜಾಗೃತಿಯನ್ನು ಉಂಟುಮಾಡುವ ಕಾಯಕದಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದರು. ಏಕೀಕರಣ ವಿಚಾರದಲ್ಲಿ ಕೇಂದ್ರ ಸರ್ಕಾರ ಆಸಕ್ತಿಯನ್ನು ತೋರದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಗಮನವನ್ನು ಸೆಳೆಯಲು ಕಾಂಗ್ರೆಸ್ ಅಧಿವೇಶನದಲ್ಲಿ ವಿಚಾರವನ್ನು ಪ್ರಸ್ತಾಪವಾಗುವಂತೆ ಮಾಡುವಲ್ಲಿ ಇವರ ಪಾತ್ರವೂ ಇದೆ.
ಅಣ್ಣ ಹಜಾರೆ ನಡೆಸಿದಂತಹ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಕರ್ನಾಟಕದಲ್ಲಿ ಚಳವಳಿಯನ್ನ ಜೀವಂತವಾಗಿ ಇಡುವಂತಹ ಕೆಲಸವನ್ನು ಇವರು ಮಾಡಿರುತ್ತಾರೆ.
ಇವರದು ಅತ್ಯಂತ ಪರಿಶುದ್ಧವಾದ ಬದುಕು. ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು ಇವರಿಗೆ ಯಾವುದೇ ರೀತಿಯ ಸಹಾಯವನ್ನು ಮಾಡಲು ಸದಾ ಸಿದ್ದರಿರುತ್ತಿದ್ದರು. ಆದರೆ ದೊರೆಸ್ವಾಮಿ ರವರು ಎಂದು ಸಹ ತಮ್ಮ ಸ್ವಾರ್ಥಕ್ಕೆ ಯಾರ ಸ್ನೇಹವನ್ನು ಬಳಸಿಕೊಳ್ಳಲಿಲ್ಲ. ವಿಶೇಷವಾಗಿ ಕೆಂಗಲ್ ಹನುಮಂತಯ್ಯ ನವರು ಇವರನ್ನು ವಿಧಾನಪರಿಷತ್ತಿಗೆ ನಾಮಕರಣ ಮಾಡಲು ಸಿದ್ದರಿದ್ದರು. ಆದರೆ ಕೆಂಗಲ್ ಹನುಮಂತಯ್ಯ ನವರು ವಿಧಿಸಿದ ಕೆಲವು ಹೊಂದಾಣಿಕೆಯ ಸೂತ್ರಗಳು ಇವರ ಮನಸ್ಸಿಗೆ ಒಪ್ಪಿತ ವಾಗದ ಕಾರಣದಿಂದ ವಿಧಾನ ಪರಿಷತ್ತಿನ ಸದಸ್ಯರಾಗಲು ಸಾಧ್ಯವಾಗಲಿಲ್ಲ. ಇವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತುಂಬಾ ಆತ್ಮೀಯರಾಗಿದ್ದರು. ಸಿದ್ದರಾಮಯ್ಯನವರಿಗೆ ದೊರೆಸ್ವಾಮಿಯವರನ್ನ ಕಂಡರೆ ಅಪಾರವಾದ ಪ್ರೀತಿ ಮತ್ತು ಗೌರವ ಆದರೂ ಸಹ ಅವರಿಂದ ಸಾಸಿವೆ ಕಾಳಿನಷ್ಟು ಸಹಾಯವನ್ನು ತಮ್ಮ ಕುಟುಂಬಕ್ಕೆ ಪಡೆದುಕೊಳ್ಳಲಿಲ್ಲ. ಆರ್ಥಿಕವಾಗಿ ಅನೇಕ ರೀತಿಯ ಸಂಕಷ್ಟಗಳನ್ನು ಎದುರಿಸಿದಂತಹ ದೊರೆಸ್ವಾಮಿ ರವರು ತಮ್ಮ ಸ್ವಾಭಿಮಾನಕ್ಕೆ ಎಂದೂ ಸಹ ಧಕ್ಕೆ ಯಾಗದ ರೀತಿಯಲ್ಲಿ ಬದುಕಿರುತ್ತಾರೆ.
ಇವರ ಧರ್ಮಪತ್ನಿಯವರ ದೇಹವನ್ನ ಆಸ್ಪತ್ರೆಗೆ ದಾನ ಮಾಡಿದ ಇವರು ತಮ್ಮ ದೇಹವನ್ನು ಸಹ ಸಾವಿನ ನಂತರ ದಾನ ಮಾಡಲು ತಿಳಿಸಿದ್ದರೂ. ಆದರೆ ಕರೋನಾ ಸಂದರ್ಭದಲ್ಲಿ ಇವರ ಸಾವು ಸಂಭವಿಸಿದ ಕಾರಣದಿಂದ ಇವರ ದೇಹವನ್ನು ಸುಡಲಾಯಿತು. ಇಷ್ಟೆಲ್ಲ ಸೇವೆ ಮಾಡಿದ ಇವರಿಗೆ ಸಾವಿನ ಸಂದರ್ಭದಲ್ಲಿ, ಸರ್ಕಾರ ತೋರಿಸಿದಂತಹ ಅಸಡ್ಡೆ ಅತ್ಯಂತ ನೋವಿನ ಸಂಗತಿಯಾಗಿದೆ.
ಇವರ ಪ್ರಾಮಾಣಿಕತೆಯನ್ನು ಮತ್ತು ಇವರ ಹೋರಾಟವನ್ನು ಕೆಲವು ಸಣ್ಣ ಮನುಷ್ಯ ವ್ಯಕ್ತಿಗಳು ವ್ಯಂಗ್ಯದಿಂದ ಮಾತನಾಡಿ ಇವರ ಮನಸ್ಸಿಗೆ ನೋವನ್ನು ಉಂಟುಮಾಡಿದರು ಆದರೂ ಸಹ ದೊರೆಸ್ವಾಮಿ ಅವರು ಅಂಜಲಿಲ್ಲ ತಮ್ಮ ಜಾತ್ಯತೀತ ನಿಲುವು ಹಾಗೂ ಕೋಮುವಾದದ ವಿರುದ್ಧದ ಹೋರಾಟವನ್ನು ನಿಲ್ಲಿಸಲಿಲ್ಲ. ತಮ್ಮ ಮಾತಿನ ಹರಿತವನ್ನು ಸಡಿಲ ಮಾಡಿಕೊಳ್ಳಲಿಲ್ಲ.
1918ರ ಏಪ್ರಿಲ್ ಹತ್ತರಂದು ಹುಟ್ಟಿದಂತಹ ಇವರು ತಮ್ಮ ಒಂದುನೂರ ಮೂರನೇ ವಯಸ್ಸಿನಲ್ಲಿ 2021 ರಲ್ಲಿ ನಿಧನರಾಗಿರುತ್ತಾರೆ.
ಯಾವುದೇ ತ್ಯಾಗ ಮಾಡದ, ಹೋರಾಟದ ಬದುಕು ಇಲ್ಲದ, ಪ್ರಾಮಾಣಿಕತೆಯ ಲವ ಶೇಷವು ಇಲ್ಲದ ಅನೇಕರ ಸಾವಿನ ನಂತರ ಅವರುಗಳ ಹೆಸರಿನಲ್ಲಿ ಸರ್ಕಾರದಲ್ಲಿ ದೊಡ್ಡ ದೊಡ್ಡ ವ್ಯವಸ್ಥೆಗಳು ಅವರ ನೆನಪಿಗಾಗಿ ಆಗುತ್ತವೆ. ಆದರೆ ಶುದ್ಧವಾದ ಪ್ರಾಮಾಣಿಕವಾದ ಜನಪರ ಕಾಳಜಿಯ ಹೋರಾಟದ ಬದುಕಿನ ದೊರೆಸ್ವಾಮಿ ರವರ ಹೆಸರಿನಲ್ಲಿ ಸರ್ಕಾರಗಳಿಗೆ ಯಾವುದೇ ಯೋಜನೆಯ ರೂಪಿಸಲು ಅಥವಾ ಕಟ್ಟಡಗಳನ್ನು ನಿರ್ಮಿಸಲು ಮನಸ್ಸಿಲ್ಲ. ಇವರ ವಿಚಾರದಲ್ಲಿ ಸರ್ಕಾರ ಈಗಲಾದರೂ ಗಂಭೀರವಾಗಿ ಆಲೋಚಿಸಿ ಇವರ ವಿಚಾರಧಾರೆಗೆ ಅನುಗುಣವಾಗಿ ನೆನಪಿನಲ್ಲಿ ಉಳಿಯುವ ಕಾರ್ಯವನ್ನ ಕೂಡಲೇ ಅನುಷ್ಠಾನಗೊಳಿಸಬೇಕೆಂದು ಕೋರಿಕೊಳ್ಳುತ್ತೇನೆ.
ಜಯನಗರದಲ್ಲಿದ್ದ ಇವರ ಮನೆಯ ಬಾಗಿಲು ಸದಾ ತೆರೆದಿರುತ್ತಿತ್ತು. ಯಾವುದೇ ರೀತಿಯ ಅಂಜಿಕೆಯು ಇವರಿಗೆ ಇರಲಿಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಗಿತ್ತು.
ಇವರು ಮತ್ತು ಇವರ ಧರ್ಮಪತ್ನಿ ಎಲ್ಲ ಸಂದರ್ಭದಲ್ಲಿ ಅನಾರೋಗ್ಯವಾದ ವೇಳೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರವೇ ಚಿಕಿತ್ಸೆಯನ್ನ ಪಡೆದುಕೊಂಡು ಜನಸಾಮಾನ್ಯರಂತೆ ಬದುಕುತ್ತಿದ್ದರು.
100 ವಯಸ್ಸು ದಾಟಿದ್ದರೂ ಇವರ ಕಣ್ಣಿನ ಹೊಳಪು ಕಡಿಮೆಯಾಗಿರಲಿಲ್ಲ. ಇವರ ಧ್ವನಿ ಕ್ಷೀಣಿಸಿರಲಿಲ್ಲ. ಆಲೋಚನೆಯ ಕ್ರಮ ಸ್ಪಷ್ಟವಾಗಿತ್ತು. ನಿಲುವುಗಳು ಗಟ್ಟಿಯಾಗಿತ್ತು. ಆರೋಗ್ಯಪೂರ್ಣವಾದ ಇವರ ದೇಹ ಸದಾ ಕಾಲ ಚಟುವಟಿಕೆಯಿಂದ ಕೂಡಿರುತ್ತಿತ್ತು. ಇದೊಂದು ದೊಡ್ಡ ವರದಾನವೇ ಇವರ ಪಾಲಿಗಾಗಿತ್ತು. ಸಮಯದ ಅರಿವೇ ಇಲ್ಲದೆ ಹೋರಾಟದಲ್ಲಿ ಸದಾಕಾಲ ತಮ್ಮನ್ನು ತೊಡಗಿಸಿಕೊಂಡಿದ್ದರು. ಒಟ್ಟಾರೆಯಾಗಿ ದೊರೆಸ್ವಾಮಿ ನಾಡು ಕಂಡ ದೊಡ್ಡ ಹೋರಾಟಗಾರರು.
-ಕೆ.ಎಸ್ ನಾಗರಾಜ್, ಹಿರಿಯ ಚಿಂತಕರು




