ಕಳೆದ ಹತ್ತು ವರ್ಷದಲ್ಲಿ ದೇಶದ ಆರ್ಥಿಕತೆ ಸದೃಢವಾಗಿದೆ ಎಂಬ ಮಾತನ್ನು ಪದೇಪದೇ ಬಿಜೆಪಿ ನಾಯಕರು ಅದರಲ್ಲೂ ನಮ್ಮ ಪ್ರಧಾನ ಮಂತ್ರಿಗಳು ಎಲ್ಲ ವೇದಿಕೆಗಳಲ್ಲಿ ಹೇಳುತ್ತಲೇ ಇದ್ದಾರೆ. ಅದು ಸತ್ಯವಾದರೆ ಜನರಲ್ಲಿ ಇರುವ ಈ ಪ್ರಶ್ನೆಗಳಿಗೆ ಪತ್ರಿಕಾಗೋಷ್ಠಿಯಲ್ಲಿ ಉತ್ತರವನ್ನು ನೀಡಿದರೆ ನಿಮ್ಮ ಹೇಳಿಕೆಗಳಿಗೆ ಗೌರವ ಬರುತ್ತದೆ.
2014ರಲ್ಲಿ 55 ಲಕ್ಷ ಕೋಟಿ ರೂಪಾಯಿಗಳ ಸಾಲದ ಪ್ರಮಾಣ ಇಂದು ಸುಮಾರು 183 ಲಕ್ಷ ಕೋಟಿ ರೂಪಾಯಿಗಳ ತನಕ ಮುಟ್ಟುತ್ತಿದೆ ಎಂಬ ಅರ್ಥ ಸಚಿವರ ಹೇಳಿಕೆ ಸತ್ಯವಾದರೆ ಈ ಸಾಲವನ್ನು ಯಾವ ಕಾರಣಕ್ಕೆ ಮಾಡಿದ್ದೀರಿ? ಸಾಲ ಮಾಡಿದ ಹಣ ಯಾವ ಉದ್ದೇಶಗಳಿಗಾಗಿ ಬಳಕೆ ಮಾಡಿದ್ದೀರಿ ವಿವರಣೆಯನ್ನು ಕೊಡಬೇಕಲ್ಲವೇ?
2014 ರಿಂದ ಇತ್ತೀಚಿನ ತನಕ ಡಾಲರ್ ಎದುರು ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ಕುಸಿದು 84 ಅಂಚಿನಲ್ಲಿ ನಿಂತಿದೆ ಎಂಬ ಲೆಕ್ಕವಿದೆ. ಇದು ಸತ್ಯವಾದರೆ ಈ ರೀತಿ ಡಾಲರ್ ಎದುರು ರೂಪಾಯಿಯ ಮೌಲ್ಯ ಕುಸಿಯಲು ಕಾರಣವೇನು ಎಂಬುದನ್ನು ಹೇಳಬೇಕಲ್ಲವೇ?
ದೇಶದ ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಇದ್ದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಪದಾರ್ಥಗಳ ಬೆಲೆಗಳು ಇಳಿದಿದ್ದರೂ ಸಹ ಭಾರತ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ಅಡಿಗೆ ಅನಿಲದ ದರ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯನ್ನು ಮಾಡಿದ ಕಾರಣವಾದರೂ ಏನು? ಈಗ ಚುನಾವಣೆ ಬಂದಿತೆಂದು ಒಂದಷ್ಟು ಬೆಲೆಯನ್ನ ಕಡಿಮೆ ಮಾಡಿ ಆ ಮೂಲಕ ಪ್ರಚಾರವನ್ನು ಪಡೆದುಕೊಳ್ಳುತ್ತಿರುವ ತಾವುಗಳು ಬೆಲೆಗಳ ಏರಿಕೆಗೆ ಕಾರಣವನ್ನು ಹೇಳಬೇಕಲ್ಲವೇ?
ದೇಶದ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿದ್ದರೆ ರಾಜ್ಯಗಳಿಗೆ ಕೊಡಬೇಕಾದ ಪಾಲಿನ ಹಣವನ್ನು ಕೊಡಲು ರಾಜಕಾರಣ ಮಾಡುತ್ತಿರುವುದಾದರೂ ಏಕೆ? ಅಥವಾ ದೇಶದ ಖಜಾನೆಯಲ್ಲಿ ಹಣದ ಕೊರತೆ ಇದೆಯೇ ಇಲ್ಲವೇ ಕೊಡುವ ಮನಸ್ಸಿಲ್ಲವೇ ಅದನ್ನು ವಿವರಿಸಬೇಕಲ್ಲವೇ?
ದೇಶದ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿದ್ದರೆ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿದೆ. ಬಡವರು ಮತ್ತು ಮಧ್ಯಮ ವರ್ಗದವರು ಜೀವನ ನಡೆಸುವುದು ದುಸ್ತರವಾಗಿದೆ. ಈ ವಿಚಾರದಲ್ಲಿ ಬೆಲೆಗಳ ಏರಿಕೆಗೆ ಕಾರಣವೇನೆಂದು ಹೇಳಬೇಕಲ್ಲವೇ?
ಪ್ರತಿಯೊಂದು ಪದಾರ್ಥಗಳ ಮೇಲೆ ಜಿಎಸ್‌ಟಿ ಮೂಲಕ ತೆರಿಗೆಯನ್ನ ಸಂಗ್ರಹಿಸುತ್ತ ದೇಶದ ಖಜಾನೆಯನ್ನ ತುಂಬಿಸಿಕೊಂಡು ಜನರ ತೆರಿಗೆಯ ಹಣದಿಂದ ದೇಶ ಆರ್ಥಿಕತೆಯ ಪ್ರಮಾಣದಲ್ಲಿ ವಿಶ್ವಕ್ಕೆ ಮೂರನೇ ಸ್ಥಾನದಲ್ಲಿದೆ ಎಂದು ಹೇಳುವ ಕೇಂದ್ರ ಸರ್ಕಾರ ಆ ಹಣವನ್ನ ದೇಶದ ಜನರ ಕಲ್ಯಾಣಕ್ಕೆ ಬಳಸಿರುವ ವಿವರವನ್ನು ನೀಡಬೇಕಲ್ಲವೇ?
ದೇಶದ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿದ್ದರೆ ರೈತರು ಬರಗಾಲದಿಂದ ಸಂಕಷ್ಟಕ್ಕೆ ಗುರಿಯಾಗಿದ್ದು ಅವರು ಸಾಲಗಳನ್ನ ಪಾವತಿಸಲಾಗದೆ ಆತ್ಮಹತ್ಯೆಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಅನೇಕ ಹೋರಾಟಗಳನ್ನು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರ ಸಾಲವನ್ನ ಒಂದಷ್ಟು ಪ್ರಮಾಣದಲ್ಲಿ ಮನ್ನಾ ಮಾಡಿ ಅವರ ಬದುಕಿಗೆ ನೆರವಾಗಬಹುದಾಗಿತ್ತಲ್ಲವೇ? ಇದರ ಬದಲಿಗೆ ಸರಿಸುಮಾರು ಹತ್ತರಿಂದ ಹನ್ನೆರಡು ಲಕ್ಷ ಕೋಟಿ ರೂಪಾಯಿಗಳ ಶ್ರೀಮಂತರ ಸಾಲವನ್ನು ಮನ್ನಾ ಮಾಡುವ ಕೇಂದ್ರ ಸರ್ಕಾರದ ಉದ್ದೇಶವೇನೆಂಬುದನ್ನ ಜನರ ಮುಂದೆ ತಿಳಿಸಬೇಕಲ್ಲವೇ?
ದೇಶದ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿದ್ದರೆ ಬಡವರಿಗೆ ಮತ್ತಷ್ಟು ಯೋಜನೆಗಳನ್ನ ನೀಡಬಹುದಾಗಿತ್ತಲ್ಲವೇ? ಪ್ರತಿಯೊಂದು ಸಂದರ್ಭದಲ್ಲೂ ಬ್ಯಾಂಕುಗಳಲ್ಲಿ ಗ್ರಾಹಕರು ವ್ಯವಹಾರ ಮಾಡಿದ ಸಂದರ್ಭದಲ್ಲಿ ಪ್ರತಿಯೊಂದು ತೆರಿಗೆಯ ರೂಪದಲ್ಲಿ ಹಣವನ್ನ ಜನರಿಂದ ತೆಗೆದುಕೊಳ್ಳುತ್ತಿರುವುದು ಯಾವ ಉದ್ದೇಶಕ್ಕಾಗಿ ತಿಳಿಸಬೇಕಲ್ಲವೇ?
ದೇಶದ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿದೆ ಎಂದು 45 ಲಕ್ಷ ಕೋಟಿ ಮೀರಿದ ಮುಂಗಡಪತ್ರವನ್ನ ಮಂಡಿಸಿದಂತಹ ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಿರುವ ಪಾಲಿನ ವಿವರವನ್ನು ಹೇಳುವುದರ ಜೊತೆಗೆ ರಾಜ್ಯಗಳಿಂದ ಪ್ರತಿಯಾಗಿ ಕೇಂದ್ರ ಸರ್ಕಾರಕ್ಕೆ ಸಂದಾಯವಾಗಿರುವ ತೆರಿಗೆಯ ರೂಪದ ಮತ್ತು ವಿವಿಧ ರೂಪದ ಮೊತ್ತವನ್ನ ತಿಳಿಸಬೇಕಲ್ಲವೇ?
ಬಡವರ ಬದುಕು ಸುಧಾರಣೆಯಾಗಲಿಲ್ಲ, ರೈತರ ಬದುಕು ಹಸನಾಗಲಿಲ್ಲ, ಕಾರ್ಖಾನೆಗಳು ಸ್ಥಾಪನೆಯಾಗಲಿಲ್ಲ, ಉದ್ಯೋಗಗಳು ದೊರೆಯಲಿಲ್ಲ, ಆಹಾರ ಪದಾರ್ಥಗಳ ಬೆಲೆಗಳು ಇಳಿಯಲಿಲ್ಲ, ಸಾಲದ ಕಾರಣಕ್ಕೆ ಉದ್ಯಮಿಗಳು, ರೈತರು ಮತ್ತು ಸಾಮಾನ್ಯರು ಆತ್ಮಹತ್ಯೆ ಜೊತೆಗೆ ಸಾಮೂಹಿಕವಾದಂತಹ ಆತ್ಮಹತ್ಯೆ ಅಂತಹ ಕಠಿಣ ನಿರ್ಧಾರಗಳಿಗೆ ಗುರಿಯಾಗುತ್ತಿರುವ ಸಂದರ್ಭದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿದೆ ಎಂಬ ಸುಳ್ಳು ಮಾತುಗಳು ಇನ್ನೆಷ್ಟು ಬಾರಿ ಹೇಳಬೇಕು ನಾವುಗಳು ಇನ್ನೆಷ್ಟು ಬಾರಿ ಅದನ್ನು ಕೇಳಬೇಕು?
ಒಟ್ಟಿನಲ್ಲಿ ಚುನಾವಣೆ ಮುಗಿಯುವ ತನಕ ಇಂತಹ ಸುಳ್ಳಿನ ಕಂತೆಗಳು ಧಾರಾವಾಹಿ ರೀತಿಯಲ್ಲಿ ನಮ್ಮ ದೃಶ್ಯ ಮಾಧ್ಯಮಗಳ ಕೃಪಾಕಟಾಕ್ಷದಿಂದ ಪ್ರತಿದಿನವೂ ಹರಿದು ಬರುತ್ತಲೇ ಇರುತ್ತವೆ. ಯಾರಿಗೆ ಲಾಭವಾಯಿತೋ ಇಲ್ಲವೋ ಕೆಲವು ದೃಶ್ಯ ಮಾಧ್ಯಮಗಳ ಮಾಲೀಕರಿಗೆ ಮತ್ತು ಅಲ್ಲಿ ಕಥೆ ಹೇಳುವ ಕಥೆಗಾರರಿಗೆ ಸಾಕಷ್ಟು ಸಂಪತ್ತು ದೊರೆತಿದೆ. ಅವರುಗಳ ಸಂಸಾರಗಳು ಮಾತ್ರ ಸುಖದಿಂದ ಸಾಗಿವೆ.
– ಕೆ ಎಸ್ ನಾಗರಾಜ್, ಬೆಂಗಳೂರು




