ವಿಶ್ವ ಪಾರಂಪರಿಕ ಹೊಯ್ಸಳ ದೇವಸ್ಥಾನ, ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ದೇವಾಲಯ ಮಾದರಿ ಸೇರಿದಂತೆ 49 ಸ್ತಬ್ಧಚಿತ್ರಗಳು
ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಯನ್ನು ಒಳಗೊಂಡ 750 ಕೆ ಜಿ ತೂಕದ ಚಿನ್ನದ ಅಂಬಾರಿ ಹೊರಲಿದ್ದಾನೆ ಅಭಿಮನ್ಯು
ಮಧ್ಯಾಹ್ನ 1:46 ರಿಂದ 2.08 ರವರೆಗೆ ನಂದಿ ಧ್ವಜ ಪೂಜೆ ನೆರವೇರಿಸಲಿದ್ದಾರೆ ಸಿಎಂ
ಸಂಜೆ 4:40 ರಿಂದ ಐದರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ವಿಜಯದಶಮಿ ಮೆರವಣಿಗೆಗೆ ಚಾಲನೆ
ಗೊರವರ ಕುಣಿತ, ಪಟಕುಣಿತ, ಕರಡಿ ಕುಣಿತ, ಗಾರುಡಿ ಗೊಂಬೆ ಸೇರಿದಂತೆ 10 ಹಲವು ಜಾನಪದ ಕಲಾತಂಡಗಳ ಮೆರವಣಿಗೆ
ಜಂಬೂಸವಾರಿಯ ಮೆರವಣಿಗೆಯಲ್ಲಿ ಇದೇ ಪ್ರಥಮ ಬಾರಿಗೆ ರಾಜರ ಕಾಲದ ಗತವೈಭವ ಮರುಕಳಿಸಲಿದೆ
ಅಭಿಮನ್ಯು ಸುತ್ತ ರಾಜ ಪೋಷಾಕು ಧರಿಸಿದ 200 ಮಂದಿ ಮೆರವಣಿಗೆಯಲ್ಲಿ ಸಾಗಿ ಬರಲಿದ್ದಾರೆ
ಮೈಸೂರು: ನಾಡಹಬ್ಬ ಮೈಸೂರು ದಸರಾ ಹಾಗೂ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಮಧುವಣಗಿತ್ತಿಯಂತೆ ಸಾಂಸ್ಕೃತಿಕ ಕ ನಗರಿ ಶೃಂಗಾರಗೊಂಡಿದೆ.
ಈ ಬಾರಿ ಹೊರರಾಜ್ಯಗಳ ವಾಹನಗಳಿಗೆ ತೆರಿಗೆ ವಿನಾಯ್ತಿ ನೀಡಿರುವ ಹಿನ್ನಲೆಯಲ್ಲಿ ತಮಿಳುನಾಡು, ಕೇರಳದಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಅದರಲ್ಲೂ ವಿದ್ಯುತ್ ದೀಪಾಲಂಕಾರ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಕುಪ್ಪಣ್ಣ ಪಾರ್ಕ್ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಸೋಮವಾರ ನಡೆದ ಏರ್ ಶೋ ಜನಾಕರ್ಷಣೆ ಗಿಟ್ಟಿಸಿತು.
ಜಂಬೂಸವಾರಿ: ಜಗದ್ವಿಖ್ಯಾತ ಜಂಬೂ ಸವಾರಿ ಕ್ಷಣಗಣನೆ ಆರಂಭವಾಗಿದ್ದು, ಸಾಂಸ್ಕೃತಿಕ ನಗರಿ ಸಜ್ಜಾಗಿದ್ದು, ಮನಮೋಹಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ನಾಳೆ ಮಧ್ಯಾಹ್ನ 1:46 ರಿಂದ 2.08 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜ ಪೂಜೆಯನ್ನು ಅರಮನೆಯ ಬಲದ್ವಾರದ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ನಂತರ ಅರಮನೆಯ ಆವರಣದಲ್ಲಿ ಸಂಜೆ 4:40 ರಿಂದ ಐದರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
750 ಕೆ ಜಿ ತೂಕದ ಚಿನ್ನದ ಅಂಬಾರಿ ಹೊತ್ತ ಕ್ಯಾಪ್ಟನ್ ಅಭಿಮನ್ಯು ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಬನ್ನಿಮಂಟಪದ ಪಂಜಿನ ಕವಾಯತು ಮೈದಾನ ತಲುಪಲಿದೆ. ಈ ಅದ್ಭುತ ಮೆರವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯ ಅತಿಥಿಗಳಾಗಿ ಮೈಸೂರು ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಚಿವರಾದ ಮಹದೇವಪ್ಪ, ವೆಂಕಟೇಶ್, ಶಿವರಾಜ್ ತಂಗಡಗಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ಸಂಜೆ ಮೈಸೂರಿನ ಬನ್ನಿಮಂಟಪದಲ್ಲಿ ಮೈನವಿರೇಳಿಸುವ ಪಂಜಿನ ಕವಾಯತು ನಡೆಯಲಿದೆ. ಸಂಜೆ 7:30ಕ್ಕೆ ನಡೆಯುವ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ ಅವರು ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಲಿದ್ದಾರೆ
ಜಂಬೂ ಸವಾರಿ ಮೆರವಣಿಗೆಯಲ್ಲಿ ಯುನೆಸ್ಕೋ ದಿಂದ ಗುರುತಿಸಲ್ಪಟ್ಟ ವಿಶ್ವ ಪಾರಂಪರಿಕ ಹೊಯ್ಸಳ ದೇವಸ್ಥಾನ, ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ದೇವಾಲಯ ಮಾದರಿ ಸೇರಿದಂತೆ 49 ಸ್ತಬ್ಧಚಿತ್ರಗಳು ಸಾಗಿ ಬರಲಿವೆ. ಸ್ತಬ್ಧ ಚಿತ್ರದೊಂದಿಗೆ ಗೊರವರ ಕುಣಿತ, ಪಟಕುಣಿತ, ಕರಡಿ ಕುಣಿತ, ಗಾರುಡಿ ಗೊಂಬೆ ಸೇರಿದಂತೆ 10 ಹಲವು ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿ ಜನಮನ ಸೂರೆಗೊಳ್ಳಲಿವೆ. ಈ ಬಾರಿಯ ಜಂಬೂಸವಾರಿಯ ಮೆರವಣಿಗೆಯಲ್ಲಿ ರಾಜರ ಕಾಲದ ಗತವೈಭವ ಮರುಕಳಿಸಲಿದೆ. ಅಂಬಾರಿ ಹೊತ್ತ ಕ್ಯಾಪ್ಟನ್ ಅಭಿಮನ್ಯು ಸುತ್ತ ರಾಜ ಪೋಷಾಕು ಧರಿಸಿದ 200 ಮಂದಿ ಮೆರವಣಿಗೆಯಲ್ಲಿ ಸಾಗಿ ಬರಲಿದ್ದಾರೆ.
ರಾಜರ ಕಾಲದ ಸೈನಿಕರು ವಿವಿಧ ಲಾಂಛನ ಹಿಡಿದು ಬರುತ್ತಿದ್ದ ಹಾಗೆ ಈ ಬಾರಿಯ ದಸರಾ ಮೆರವಣಿಗೆಯಲ್ಲಿ ವಿವಿಧ ಲಾಂಛನಗಳನ್ನು ನೋಡುವ ಭಾಗ್ಯ ನಮ್ಮದಾಗಲಿದೆ. ಮೆರವಣಿಗೆಯಲ್ಲಿ ಸಾಗಲು ಸೂರ್ಯ, ನೀರು, ವರಾಹ, ಚಂದ್ರ ಮಂಡಲ, ಗರುಡ, ಮಾರುತಿ, ತ್ರಿಶೂಲ ಸೇರಿದಂತೆ ಇನ್ನೂ ಹತ್ತು ಹಲವು ಲಾಂಛನಗಳನ್ನು ಸಿದ್ಧಪಡಿಸಲಾಗಿದೆ. ಇವುಗಳನ್ನು ಹಿಡಿದು ರಾಜರ ಕಾಲದಲ್ಲಿ ಹೊತ್ತು ಬರುವ ಮಾದರಿಯಲ್ಲಿ ಈ ಬಾರಿ ಮೆರವಣಿಗೆಯಲ್ಲಿ ಸಾಗಿ ಬರುವುದು ವಿಶೇಷವಾಗಿದೆ. ಗತಕಾಲದ ದಸರಾ ಮೆರವಣಿಗೆಯನ್ನು ನೆನಪಿಸಲಿದೆ.




