ಮೈಸೂರು: ಅಂಬಾ ವಿಲಾಸ ಅರಮನೆ ಅಂಗಳದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಡೆದ ವೈವಿಧ್ಯಮಯ ಸಂಗೀತ ಕಾರ್ಯಕ್ರಮಗಳು ಸಂಗೀತ ಪ್ರಿಯರ ಮೆಚ್ಚುಗೆಗೆ ಪಾತ್ರವಾಯಿತು.
ಬೆಳಿಗ್ಗೆ 10 ರಿಂದ 10:45 ರವರೆಗೆ ನಡೆದ ಚಾಮರಾಜನಗರದ ರಂಗವಾಹಿನಿ ಕಲಾವಿದ ಸಿ.ಎಂ.ನರಸಿಂಹಮೂರ್ತಿ ನೇತೃತ್ವದಲ್ಲಿ ನಡೆಸಿಕೊಟ್ಟ ಜಾನಪದ ಝೇಂಕಾರ ಕಾರ್ಯಕ್ರಮವು ಬಿರು ಬಿಸಿಲಿನಲ್ಲಿಯೂ ಮೋಡಿ ಮಾಡಿತು.

ಸಾರ್ವಜನಿಕರು ಮತ್ತು ಶಾಲಾ ಕಾಲೇಜಿನ ಮಕ್ಕಳು ಸೋಲಿಸಬೇಡ ಗೆಲ್ಲಿಸಯ್ಯ, ತಿಂಗಳು ಮುಳುಗಿದವು, ಹಾಡಿರಿ ರಾಗಗಳ, ಬಿಳಿಗಿರಿರಂಗನ ತಂದನ್ನ ತಾನನ ಹಾಡಿಗೆ ತಲೆದೂಗಿದರು.
ಅಂತರರಾಷ್ಟ್ರೀಯ ಜಾನಪದ ಗಾಯಕ ಸಿ.ಎಂ. ನರಸಿಂಹಮೂರ್ತಿ, ಶಂಕರ್ ಭಾರತಿಪುರ, ಅರುಣ್ ಕುಮಾರ್, ರವಿರಾಜ್, ಮೇಘಶ್ರೀ, ತಬಲಾದಲ್ಲಿ ರಘುನಾಥ್, ಕೀಬೋರ್ಡ್ ನಲ್ಲಿ ನಾಗಲಿಂಗಚಾರ್, ರಿದಂ ಪ್ಯಾಡ್ ನಲ್ಲಿ ವಿನ್ಸೆಂಟ್ ಭಾಗವಹಿಸಿದ್ದರು.




