ಕಲಬುರ್ಗಿ ಲೋಕಸಭೆ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ವಿರುದ್ಧ ಕೋಟ್ಯಾಂತರ ರೂಪಾಯಿ ಅಕ್ರಮದ ಆರೋಪ

2 years ago

ಬೆಂಗಳೂರು/ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಎರಡನೆಯ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭಗೊಂಡಿರುವ ಬೆನ್ನಲ್ಲೇ ಕಲಬುರ್ಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ವಿರುದ್ಧ ಕೋಟ್ಯಾಂತರ ರೂಪಾಯಿ ಅಕ್ರಮದ ಆರೋಪ ಕೇಳಿಬಂದಿದೆ.

ವೈದ್ಯಕೀಯ ದಂತ ವೈದ್ಯಕೀಯ ಸೇರಿದಂತೆ ಉನ್ನತ ಶಿಕ್ಷಣ ಪ್ರವೇಶದ ಹೆಸರಿನಲ್ಲಿ ರಾಧಾಕೃಷ್ಣ ದೊಡ್ಡಮನಿ ಅವರು ಭಾರಿ ಪ್ರಮಾಣದ ಗೋಲ್ ಮಾಲ್  ನಡೆಸಿದ್ದಾರೆ ಎಂದು ಬಿಜೆಪಿ ಮುಖಂಡ ಎನ್ ಆರ್ ರಮೇಶ್ ಆರೋಪಿಸಿ ಸಿಬಿಐಗೆ ದೂರು ಸಲ್ಲಿಸಿದ್ದಾರೆ.

ಬಿ.ಆರ್‌.ಅಂಬೇಡ್ಕರ್‌ ಮೆಡಿಕಲ್‌ ಕಾಲೇಜು, ಅಂಬೇಡ್ಕರ್‌ ದಂತ ವೈದ್ಯಕೀಯ ಕಾಲೇಜು, ಮಾತೃಶ್ರೀ ರಮಾಬಾಯಿ ನರ್ಸಿಂಗ್‌ ಕಾಲೇಜು ಸೇರಿದಂತೆ ಮತ್ತಿತರ ಉನ್ನತ ಶೈಕ್ಷಣಿಕ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶ ಹಾಗೂ ಪರೀಕ್ಷೆಗಳಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ದೂರಿದ್ದಾರೆ.

ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ರಾಧಾಕಷ್ಣ ದೊಡ್ಡಮನಿ, ಗುರಪ್ಪಾಜಿ, ಹೆಚ್‌.ಎಸ್‌‍.ಮಹದೇವ ಪ್ರಸಾದ್, ಡಾ.ಎನ್‌. ಟಿ. ಮುರಳಿ ಮೋಹನ್‌, ವಿ. ಎಸ್‌‍. ಕುಬೇರ್‌ ಮತ್ತು ಅಮಾನುಲ್ಲಾ ಖಾನ್‌ ಅವರುಗಳ ವಿರುದ್ಧ ಸಿಬಿಐ ಮತ್ತು ಲೋಕಾಯುಕ್ತ ತನಿಖಾ ಸಂಸ್ಥೆಗಳಲ್ಲಿ ಎನ್‌.ಆರ್‌.ರಮೇಶ್‌ ದೂರು ದಾಖಲಿಸಿದ್ದಾರೆ.

ನಾಲ್ಕನೇ ದರ್ಜೆ ನೌಕರನಾಗಿದ್ದ ಅಮಾನುಲ್ಲಾ ಖಾನ್‌ ಎಂಬ ವ್ಯಕ್ತಿಯನ್ನು ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ನೇಮಿಸಲಾಗಿದೆ. 2008 ರಿಂದ ಇದುವರೆಗೂ ಮ್ಯಾನೇಜ್ ಮೆಂಟ್‌ ಕೋಟಾ ಅಡಿಯಲ್ಲಿ ಸಾವಿರಾರು ಅಕ್ರಮ ನಡೆದಿದೆ. ಅನುತ್ತೀರ್ಣ ಮತ್ತು ಅನರ್ಹ ವಿದ್ಯಾರ್ಥಿಗಳಿಂದ 1-2 ಕೋಟಿ ರೂ. ಹಣ ಪಡೆದು, ಸರ್ಕಾರದ ಅನುಮೋದನೆ ಪಡೆಯದ ನಕಲಿ ಕಾಲೇಜುಗಳಿಂದ ಪ್ರಮಾಣ ಪತ್ರ ಕೊಡಿಸಿ, ವೈದ್ಯಕೀಯ ಸೀಟು ಮಾರಿಕೊಳ್ಳಲಾಗಿದೆ ಎಂದು ಎನ್‌.ಆರ್‌. ರಮೇಶ್‌ ಆರೋಪಿಸಿದ್ದಾರೆ.

ರಾಜ್ಯ ಮತ್ತು ದೇಶದ ವಿವಿಧೆಡೆಗಳಿಂದ ಶ್ರೀಮಂತ ಕುಟುಂಬಗಳ ದ್ವಿತೀಯ ಪಿಯುಸಿ ಅನುತ್ತೀರ್ಣ ಹಾಗೂ ಪ್ರವೇಶ ಪರೀಕ್ಷೆಯಲ್ಲಿ ಅನರ್ಹಗೊಂಡ ವಿದ್ಯಾರ್ಥಿಗಳನ್ನು ಹುಡುಕಿ ತಂದು ಎಂಬಿಬಿಎಸ್‌‍ ಹಾಗೂ ಬಿಡಿಎಸ್‌‍ ಪದವಿ ತರಗತಿಗಳಿಗೆ ಪ್ರವೇಶ ಕೊಡಿಸುವ ವಂಚನೆ ಕಾರ್ಯಗಳಲ್ಲಿ ಅಮಾನುಲ್ಲಾ ಖಾನ್‌ ತೊಡಗಿದ್ದಾನೆ. ಮಾತ್ರವಲ್ಲ ತಮಿಳುನಾಡಿನ ಕೃಷ್ಣಗಿರಿಯಲ್ಲಿ ಸ್ವಂತ ಮೆಡಿಕಲ್‌ ಕಾಲೇಜ್‌ ಹೊಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಜೊತೆಗೆ, ಇಂಟರ್ನಲ್ ಅಂಕಗಳನ್ನು ನೀಡಲು ಲಕ್ಷಾಂತರ ರೂ. ಲಂಚ ಪಡೆಯಲಾಗುತ್ತಿದೆ. ಅಲ್ಲದೇ ಕಾಮೆಡ್‌ -ಕೆ, ಮತ್ತಿತರ ಪರೀಕ್ಷೆಗಳನ್ನು ಬರೆದಂತೆ ದಾಖಲೆ ಸೃಷ್ಟಿಸಿ ನೂರಾರು ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಗಿದೆ. ಈ ಬಗ್ಗೆ ಹಲವು ರಾಜ್ಯಪಾಲರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಎನ್‌.ಆರ್‌. ರಮೇಶ್‌ ದೂರಿದ್ದಾರೆ.

Leave a Reply