ತಿರುಪತಿ ತಿಮ್ಮಪ್ಪನ ದರ್ಶನ ಭೇಟಿ ನಿಯಮ ಬದಲಾವಣೆ

4 years ago

ಹೈದರಾಬಾದ್: ಕೋವಿಡ್ ಸಾಂಕ್ರಮಿಕದ ಕಾರಣದಿಂದಾಗಿ ಎರಡು ವರ್ಷಗಳ ಕಾಲ ತಿರುಪತಿ ತಿಮ್ಮಪ್ಪನ ದರ್ಶನ ಮಾಡದ ಭಕ್ತರು ಇದೀಗ ಏಳು ಬೆಟ್ಟ ದಾಟಿ ದರ್ಶನಕ್ಕೆ ಸಾಗರೋಪಾದಿಯಲ್ಲಿ ತಿರುಪತಿ ತಿರುಮಲಕ್ಕೆ ಭೇಟಿ ನೀಡುತ್ತಿದ್ದಾರೆ.

ಕಳೆದ ಮೂರು ತಿಂಗಳ ಅವಧಿಯಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡುವಲ್ಲಿ ಟಿಟಿಡಿ ಆಡಳಿತ ಮಂಡಳಿ ಹೈರಾಣವಾಗಿದೆ. ಪ್ರತಿನಿತ್ಯ ಭಕ್ತರು ದರ್ಶನದ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ನಿವಾರಿಸುವ ದೃಷ್ಟಿಯಿಂದ ಆಡಳಿತ ಮಂಡಳಿ ನಾಳೆಯಿಂದ  ತಿರುಮಲ ತಿರುಪತಿ ದೇವಸ್ಥಾನ ದರ್ಶನದ ನಿಯಮಗಳಲ್ಲಿ ಬದಲಾವಣೆ ಮಾಡಿದೆ.

ಪ್ರತಿದಿನ ಮಧ್ಯಾಹ್ನದ ಒಳಗೆ ವಿಐಪಿ ದರ್ಶನ ಪೂರ್ಣಗೊಳಿಸಲು ಟಿಟಿಡಿ ಯೋಜನೆ ರೂಪಿಸಿದೆ. ಸಾಮಾನ್ಯ ದರ್ಶನಕ್ಕೆ ಬರುವ ಭಕ್ತರಿಗೆ ಹೆಚ್ಚಿನ ಸಮಯವನ್ನು ನೀಡಲಿದೆ. ಟಿಟಿಡಿ ಸರ್ವದರ್ಶನದಲ್ಲಿಯೂ ಕೆಲವು ಬದಲಾವಣೆ ಮಾಡಲು ಯೋಜಿಸುತ್ತಿದೆ.

ತಿರುಪತಿ ವೆಂಕಟೇಶ್ವರನ ವಿಐಪಿ ದರ್ಶನದ ನಿಯಮದಲ್ಲಿ ಬದಲಾವಣೆ ತಂದಿದ್ದು, ವಿಐಪಿ ದರ್ಶನ ಮತ್ತು ಸಾಮಾನ್ಯ ದರ್ಶನದ ಸಮಯ ಒಂದೇ ಆಗಿದ್ದರಿಂದ ಭಕ್ತರಿಗೆ ತೊಂದರೆ ಆಗುತ್ತಿತ್ತು. ಉಚಿತ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲ ಮಾಡಿಕೊಡಲು ಈ ಬದಲಾವಣೆ ಮಾಡಲಾಗುತ್ತಿದೆ ಎಂದು ಟಿಟಿಡಿ ತಿಳಿಸಿದೆ.

ನವೆಂಬರ್ 1ರಿಂದ ಬೆಳಗ್ಗೆ 10ರಿಂದ ಮಧ್ಯಾಹ್ನ 12 ಗಂಟೆವರೆಗೆ ವಿಐಪಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಸ್ತುತ ಮುಂಜಾನೆ 2.30ರಿಂದ ಬೆಳಗ್ಗೆ 8ರ ತನಕ ವಿಐಪಿ ದರ್ಶನವಿದೆ. ಆದರೆ ಇದು ಕೆಲವೊಮ್ಮೆ  10 ಗಂಟೆಯ ತನಕವೂ ಸಾಗುತ್ತಿತ್ತು. ಇದರಿಂದಾಗಿ ಉಚಿತ ದರ್ಶನಕ್ಕೆ ಬರುವ ಭಕ್ತರು ತುಂಬಾ ಹೊತ್ತು ಕಾಯಬೇಕಿತ್ತು. ವಿಐಪಿ ದರ್ಶನ ಮುಗಿಯುವ ತನಕ ವೈಕುಂಠಂ ಕ್ಯೂ ಕಾಂಪ್ಲೆಕ್ಸ್‍ನಲ್ಲಿರುವ ಉಚಿತ ದರ್ಶನದ ಭಕ್ತರು ತಾಸುಗಟ್ಟಲೇ ಕಾಯಬೇಕಿತ್ತು.

ಅಲ್ಲದೇ ಅರ್ಜಿತ ಸೇವೆ ವೀಕ್ಷಿಸಲು ಸಹ ಸಾಧ್ಯವಾಗುತ್ತಿರಲಿಲ್ಲ. ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಟಿಟಿಡಿ ಪ್ರಾಯೋಗಿಕ ಬದಲಾವಣೆ ಮಾಡುತ್ತಿದೆ. ಈಗ ಉಚಿತ ದರ್ಶನಕ್ಕೆ ಬರುವ ಭಕ್ತರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ವಿಐಪಿ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಪ್ರಾಯೋಗಿಕವಾಗಿ ಈ ಬದಲಾವಣೆ ಮಾಡಿ, ಬಳಿಕ ಮುಂದುವರೆಸುವ ಕುರಿತು ತೀರ್ಮಾನ ಮಾಡಲಾಗುತ್ತದೆ ಎಂದು ಟಿಟಿಡಿ ಹೇಳಿದೆ.

Leave a Reply