ತೆರಿಗೆ ಹಂಚಿಕೆ, ಬರ ಪರಿಹಾರ, ರಾಜ್ಯ ನೀರಾವರಿ ಯೋಜನೆ ಸೇರಿದಂತೆ ರಾಜ್ಯಕ್ಕೆ ಅನ್ಯಾಯ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಬೆಂಗಳೂರು: ಜಿಎಸ್‌ಟಿ ತೆರಿಗೆ ಪದ್ಧತಿ ಜಾರಿಯಾದ ನಂತರ ರಾಜ್ಯಕ್ಕೆ ತೆರಿಗೆ ಹಂಚಿಕೆ ವಿಚಾರದಲ್ಲಿ ನಿರಂತರ ಅನ್ಯಾಯವಾಗುತ್ತಿದೆ. ಇದಲ್ಲದೆ, ಬರ ಪರಿಹಾರ ಹಾಗೂ ರಾಜ್ಯದ ನೀರಾವರಿ ಯೋಜನೆಗಳು ಸೇರಿದಂತೆ ಎಲ್ಲಾ ವಿಚಾರದಲ್ಲೂ ರಾಜ್ಯಕ್ಕೆ ಮೋಸವಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಸಮಾಧಾನ ಹೊರಹಾಕಿದರು.

ತೆರಿಗೆ ಹಂಚಿಕೆ ವಿಚಾರದಲ್ಲಿ ಉಂಟಾಗಿರುವ ಗೊಂದಲವನ್ನು ಬಗೆಹರಿಸುವ ಸಲುವಾಗಿ ಜಾಗೃತ ಕರ್ನಾಟಕ ಹಾಗೂ ರಾಜ್ಯ ರೈತ ಸಂಘ ಆಯೋಜಿಸಿದ್ದ “ಜಿಎಸ್‌ಟಿ ಸೆಸ್, ತೆರಿಗೆ ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ” ಬಹಿರಂಗ ಚರ್ಚೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಆಹ್ವಾನಿಸಲಾಗಿತ್ತು. ನಿರ್ಮಲಾ ಸೀತಾರಾಮನ್ ಅವರು ಈ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ.

ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, “ನನ್ನ ಹಾಗೂ ಸೀತಾರಾಮನ್ ನಡುವೆ ಯಾವುದೇ ತಕರಾರು ಇಲ್ಲ. ಅವರ ಬಗ್ಗೆ ನನಗೆ ವ್ಯಯಕ್ತಿಕ ಗೌರವ ಇದೆ. ಆದರೆ, ಕೇಂದ್ರ ಸರ್ಕಾರದಿಂದ ಕಳೆದ 10 ವರ್ಷದಿಂದ ನಿರಂತರವಾಗಿ ಅನ್ಯಾಯವಾಗುತ್ತಿದೆ. ನಮ್ಮ ಅವಶ್ಯಕತೆಗೆ ತಕ್ಕ ತೆರಿಗೆ ಪಾಲು ಸಿಗುತ್ತಿಲ್ಲ. ಆದರೆ, ಅದಕ್ಕೆ ಪರಿಹಾರ ನೀಡುವ ಬದಲು ನಮ್ಮ ಹಕ್ಕು ಕೇಳಿದರೆ ನಮ್ಮನ್ನೇ ಅವಮಾನಿಸಲಾಗುತ್ತಿದೆ. ಅಲ್ಲದೆ, ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರು ರಾಜ್ಯಕ್ಕೆ ಬಂದು ಮತ್ತದೇ ಸುಳ್ಳಿನ ಜುಮ್ಲಾ ಭಾಷಣ ಮಾಡುವುದು ಎಷ್ಟು ಸರಿ?” ಎಂದು ಅಸಮಾಧಾನ ಹೊರಹಾಕಿದರು.

ರಾಜ್ಯಕ್ಕಾಗುತ್ತಿರುವ ಜಿಎಸ್‌ಟಿ ಮೋಸ: ಜಿಎಸ್‌ಟಿ ಜಾರಿಯಾಗುವ ಮೊದಲು ಮೌಲ್ಯವರ್ದಿತ ತೆರಿಗೆ ಜಾರಿಯಲ್ಲಿತ್ತು. ರಾಜ್ಯಕ್ಕೆ ಸ್ವಾಯತ್ತತೆ ಇತ್ತು. ಆದರೆ ಪ್ರಸ್ತುತ ರಾಜ್ಯಗಳಿಗೆ ತೆರಿಗೆ ಸ್ವಾಯತ್ತತೆ ಇಲ್ಲದಂತಾಗಿದೆ. ಕರ್ನಾಟಕಕ್ಕೆ ಪ್ರತಿ ವರ್ಷ ಶೇ.15 ರಷ್ಟು ಹೆಚ್ಚುವರಿ ತೆರಿಗೆ ಸಂಗ್ರಹದ ಸಾಮರ್ಥ್ಯ ಇತ್ತು. ಆದರೆ, ಜಿಎಸ್‌ಟಿ ಜಾರಿಯಾದ ಮೇಲೆ ನಮ್ಮಂತ ರಾಜ್ಯಗಳ ತೆರಿಗೆ ಕಡಿಮೆಯಾಗುತ್ತಿದೆ ಎಂದು ಹೇಳಿದ್ದಾರೆ.

ಜಿಎಸ್‌ಟಿ ಜಾರಿಯಾದ ನಂತರ 2019-20ರಲ್ಲಿ ರಾಜ್ಯದ ತೆರಿಗೆ ಆದಾಯದಲ್ಲಿ ರೂ.18,897 ಕೋಟಿ ಖೋತಾ ಆಗಿದೆ. 2023-24ರಲ್ಲಿ ರೂ.34,570 ಕೋಟಿ ನಷ್ಟವಾಗಿದೆ. ರಾಜ್ಯದ ಆದಾಯದಲ್ಲಿ ಪ್ರತಿ ವರ್ಷ 30 ರಿಂದ 32 ಸಾವಿರ ಕೋಟಿ ರಾಜ್ಯಕ್ಕೆ ನಷ್ಟವಾಗುತ್ತಿದೆ. ಇದೇ ಕಾರಣಕ್ಕೆ ಜಿಎಸ್‌ಟಿ ಪರಿಹಾರವನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ತುಂಬಿ ಕೊಡಬೇಕು ಎಂದು ಹಣಕಾಸು ಆಯೋಗ ಸ್ಪಷ್ಟವಾಗಿ ನಿರ್ದೇಶನ ನೀಡಿದೆ ಎಂದರು.

2020-21 ರಲ್ಲಿ ರಾಜ್ಯಕ್ಕೆ ರೂ.5495 ಕೋಟಿ ಹಾಗೂ 2021-26ರ ಅವಧಿಯಲ್ಲಿ ರೂ.6000 ಕೋಟಿ ಪರಿಹಾರ ನೀಡಬೇಕು ಎಂದು 15ನೇ ಹಣಕಾಸು ಆಯೋಗ ತನ್ನ ಅಂತಿಮ ವರದಿಯಲ್ಲಿ ತಿಳಿಸಿದೆ. ಆದರೆ, ಕೇಂದ್ರ ಸರ್ಕಾರ ಈವರೆಗೆ ಈ ಹಣ ಬಿಡುಗಡೆ ಮಾಡಿಲ್ಲ. ಅಲ್ಲದೆ, ಈ ವರ್ಷದಿಂದ ಒಂದು ನಯಾಪೈಸೆಯೂ ಜಿಎಸ್‌ಟಿ ಪರಿಹಾರ ನೀಡುವಂತಿಲ್ಲ ಎಂದು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಹೀಗಾಗಿ ಜಿಎಸ್‌ಟಿ ಪರಿಹಾರ ಮುಂದುವರೆಸಲು ಮನವಿ ಮಾಡಿದ್ದೆವು. ಆದರೆ, ಸೀತಾರಾಮನ್ ಅದನ್ನು ನಿರಾಕರಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಈ ಹಿಂದೆ ಕೇಂದ್ರ ತೆರಿಗೆಯಲ್ಲಿ ರಾಜ್ಯಕ್ಕೆ ಶೇ.4.713 ರಷ್ಟು ತೆರಿಗೆ ಪಾಲು ಇತ್ತು. ಆದರೆ, 15ನೇ ಹಣಕಾಸು ಆಯೋಗ ಈ ಪ್ರಮಾಣವನ್ನು 3.617 ಕ್ಕೆ ಇಳಿಸಿದೆ. ಇದರಿಂದ ರಾಜ್ಯಕ್ಕೆ ಶೇ.23 ರಷ್ಟು ಹಣ ಕಡಿಮೆಯಾಗಿದೆ. ಅಂದ್ರೆ ಪ್ರತಿ ವರ್ಷ 6 ರಿಂದ 13 ಸಾವಿರ ಕೋಟಿ ನಷ್ಟ. ಇದರಿಂದ ರಾಜ್ಯಕ್ಕೆ ಈವರೆಗೆ ಒಟ್ಟಾಗಿ ರೂ.62,098 ಕೋಟಿ ನಷ್ಟ ಉಂಟಾಗಿದೆ. ದೇಶದ 31 ರಾಜ್ಯಕ್ಕಿಂತ ಕರ್ನಾಟಕಕ್ಕೆ ಮಾತ್ರ ಇಷ್ಟು ಕಡಿಮೆ ಪ್ರಮಾಣದ ತೆರಿಗೆ ಹಂಚಿಕೆ ಮೋಸ ಏಕೆ? ಹೆಚ್ಚು ತೆರಿಗೆ ಕಟ್ಟುವ ಕರ್ನಾಟಕಕ್ಕೆ ಇದು ಕೇಂದ್ರ ಸರ್ಕಾರ ನೀಡುವ ಉಡುಗೊರೆಯಾ? ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಸಂಗ್ರಹಿಸುವ ಸೆಸ್ ಸರ್ಚಾರ್ಜ್ ನಲ್ಲೂ ರಾಜ್ಯಕ್ಕೆ ಪಾಲು ನೀಡಬೇಕು. ಆದರೆ, 2020 ರಲ್ಲಿ ರಾಜ್ಯಗಳಿಗೆ ಪಾಲು ಕೊಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಸಂವಿಧಾನದಲ್ಲಿ ತಿದ್ದುಮಾಡಿ ಮಾಡಿದೆ. ಹೀಗಾಗಿ ಈ ವಿಚಾರದಲ್ಲೂ ರಾಜ್ಯ ಸರ್ಕಾರಕ್ಕೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸಿದರೆ ರಾಜ್ಯಗಳಿಗೆ ಪಾಲು ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಅದನ್ನು ಸೆಸ್ ಸರ್ಚಾರ್ಜ್ ಗೆ ಸೇರಿಸಿದೆ. 2017-18 ರಲ್ಲಿ ಪೆಟ್ರೋಲಿಯಂ ಉತ್ಪನ್ನಗಳಿಂದ ರೂ.2,18,553 ಕೋಟಿ ತೆರಿಗೆ ಹಣ ಕೇಂದ್ರದ ಪಾಲಾಗಿದ್ದರೆ, 2022-23 ರಲ್ಲಿ ರೂ. 5,52,789 ಕೋಟಿ ಹಣ ಸಂಗ್ರಹಿಸಲಾಗಿದೆ. ಆದರೆ, ಇದರಲ್ಲಿ ರಾಜ್ಯಗಳಿಗೆ ನಯಾಪೈಸೆಯೂ ಪಾಲಿಲ್ಲ ಎಂದು ಹೇಳಿದ್ದಾರೆ.

ಅಲ್ಲದೆ, ಕೇಂದ್ರ ಸರ್ಕಾರ ಆದಾಯ ತೆರಿಗೆಯ ಹಲವು ವಿಭಾಗಗಳನ್ನು ಸೆಸ್ ಸರ್ಚಾರ್ಜ್ ಗೆ ಸೇರ್ಪಡೆ ಮಾಡಿದ್ದು, 2014-2024ರ ಅವಧಿಯಲ್ಲಿ ಈ ವಿಭಾಗದಲ್ಲಿ 34 ಲಕ್ಷ ಕೋಟಿ ಹಣ ಸಂಗ್ರಹಿಸಿದೆ. ಆದರೆ, ರಾಜ್ಯ ಸರ್ಕಾರಗಳಿಗೆ ಇದರಲ್ಲಿ ಎಳ್ಳಷ್ಟೂ ಪಾಲಿಲ್ಲ. ಪರಿಣಾಮ ಈ ವಿಭಾಗದಲ್ಲಿ ರಾಜ್ಯಕ್ಕೆ ಒಟ್ಟಾರೆ ರೂ.1,85,468 ಕೋಟಿ ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಪುರಸ್ಕೃತ ಯೋಜನೆಯಲ್ಲೂ ಮೋಸ: ಕೇಂದ್ರ ಪುರಸ್ಕೃತ ಯೋಜನೆಯಲ್ಲೂ ಹೆಚ್ಚು ಹಣ ಹೂಡುವುದು ರಾಜ್ಯ ಸರ್ಕಾರವೇ. ಆದರೆ, ಈ ಯೋಜನೆಗಳ ಹೆಸರು ಮಾತ್ರ ಕೇಂದ್ರ ಸರ್ಕಾರದ್ದು ಎಂದು ಅಸಮಾಧಾನ ಹೊರಹಾಕಿದ ಸಚಿವರು ಉದಾಹರಣೆಯೊಂದಿಗೆ ವಿವರಿಸಿದರು.
ಕೇಂದ್ರ ಸರ್ಕಾರದ ಗರೀಬ್ ಕಲ್ಯಾಣ್ ಅನ್ನ ಯೋಜನೆಯಲ್ಲಿ ಶೇ.52.33, ಜಲಜೀವನ್ ಮಿಷನ್ ಯೋಜನೆಯಲ್ಲಿ ಶೇ.58.03, ಪಿಎಂ ಆವಾಸ್ ಯೋಜನೆಯಲ್ಲಿ ಶೇ.63.41, ಪಿಎಂ ಜನ ಆರೋಗ್ಯ ಯೋಜನೆಯಲ್ಲಿ ಶೇ.77.96, ಪಿಎಂ ಫಸಲ್ ಭೀಮಾ ಯೋಜನೆಯಲ್ಲಿ ಶೇ.50.72 ರಷ್ಟು ಹಣ ರಾಜ್ಯ ಸರ್ಕಾರದ್ದು. ಹಾಗೆ ನೋಡಿದರೆ ನಮ್ಮ ತೆರಿಗೆ ಪಡೆಯುವ ಕೇಂದ್ರ ಸರ್ಕಾರ ಅದಕ್ಕೆ ಪ್ರತಿಯಾಗಿ ನಮಗೆ ನೀಡಿದ ಕೊಡುಗೆ ಏನು? ಎಂದು ಪ್ರಶ್ನಿಸಿದರು.
ಅಲ್ಲದೆ, 2014ರಲ್ಲಿ ಕೇಂದ್ರದ ಬಜೆಟ್ 17 ಲಕ್ಷ ಕೋಟಿ ಇತ್ತು. ಈಗ ಕೇಂದ್ರದ ಬಜೆಟ್ ಗಾತ್ರ 45 ಲಕ್ಷ ಕೋಟಿಗೆ ಏರಿಕೆಯಾಗಿದೆ. ಆದರೆ, ಈ ಬಜೆಟ್‌ನಲ್ಲಿ ರಾಜ್ಯ ಸರ್ಕಾರದ ಪಾಲು ಮಾತ್ರ ಕಳೆದ 10 ವರ್ಷದಿಂದ ಒಂದು ರೂಪಾಯಿಯೂ ಏರಿಕೆಯಾಗಿಲ್ಲ. ತೆರಿಗೆ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ರೂಪದಲ್ಲಿ ಶೇ.23.2 ರಷ್ಟು ಹಣ ಕೇಂದ್ರದಿಂದ ಬರುತ್ತಿತ್ತು. ಈಗ ಅದೂ ಸಹ ಕಾಲಕ್ರಮೇಣ ಶೇ. 13.94 ಕ್ಕೆ ಇಳಿದಿದೆ ಎಂದು ಅಸಮಾಧಾನ ಹೊರಹಾಕಿದರು.
ನಾವು ನೂರು ರೂಪಾಯಿ ಕಟ್ಟಿದ್ರೆ 13 ರಿಂದ 14 ರೂ ಮಾತ್ರ ವಾಪಸ್ ಬರುತ್ತೆ. ಆದರೆ, ಉತ್ತರಪ್ರದೇಶಕ್ಕೆ 333.2 ರೂ, ಮಧ್ಯಪ್ರದೇಶಕ್ಕೆ 279.1 ರೂ, ಬಿಹಾರಕ್ಕೆ 922.4 ರೂ ಹೋಗುತ್ತಿದೆ. ನಮ್ಮಲ್ಲೂ ಪ್ರಾದೇಶಿಕ ಅಸಮಾನತೆ ಇದೆ. ಹೀಗಾಗಿ ನಮ್ಮ ಅವಶ್ಯಕತೆಗೆ ತಕ್ಕಂತೆ ನಮಗೆ ಅನುದಾನ ಕೊಡದಿದ್ದರೆ ನಮ್ಮ ಅವಶ್ಯಕತೆಗಳನ್ನು ನಾವು ಹೇಗೆ ಪೂರೈಸುವುದು. ನಮ್ಮ ಅಭಿವೃದ್ಧಿ ಹೇಗೆ ಸಾಧ್ಯ. ಮಹಾರಾಷ್ಟ್ರಕ್ಕಿಂತ ನಮ್ಮ ತಲಾ ಆದಾಯ ಹೆಚ್ಚಿದೆ. ನಮ್ಮ ನೀರಾವರಿ ಯೋಜನೆ ಹಿಂದುಳಿದ ಬಾಗಗಳ ಅಭಿವೃದ್ಧಿಗೆ ಹಣ ಬೇಕು. ಕರ್ನಾಟಕ ಇಡೀ ದೇಶಕ್ಕೆ ಬೆನ್ನೆಲುಬು ಹೀಗಾಗಿ ಕೇಂದ್ರ ನಮಗೆ ಬೆಂಬಲ ನೀಡಬೇಕೆ ಹೊರತು ಚಿನ್ನದ ಮೊಟ್ಟೆ ಇಡುವ ಕೋಳಿಯನ್ನ ಕತ್ತರಿಸಬಾರದು ಎಂದು ಅವರು ಮನವಿ ಮಾಡಿದರು.
ಅಮಿತ್ ಶಾ ಸುಳ್ಳಿಗೆ ಪ್ರತ್ಯುತ್ತರ: ಅಕ್ಟೋಬರ್ 31ಕ್ಕೆ ಬರಗಾಲ ಘೋಷಣೆ ಮಾಡಬೇಕು. ಬರಗಾಲ ತೀವ್ರವಾಗಿದ್ದರೆ ಅದಕ್ಕೂ ಮುನ್ನವೇ ಬರಗಾಲ ಘೋಷಣೆ ಮಾಡಬಹುದು. ಆದರೆ, ನಾವು ಒಂದುವರೆ ತಿಂಗಳ ಮೊದಲೇ ಸೆ.13ರಂದು ಬರ ಘೋಷಿಸಿದ್ದೇವೆ. ಸೆ.22ರಂದು ಕೇಂದ್ರಕ್ಕೆ ಪರಿಹಾರಕ್ಕೆ ಮನವಿ ಸಲ್ಲಿಸಿದ್ದೇವೆ (ಮೆಮೊರಾಂಡಂ). ನಿರ್ಮಲಾ ಅಕ್ಟೋಬರ್ 4 ರಿಂದ 9 ರ ಅವಧಿಯಲ್ಲಿ ಕೇಂದ್ರ ತಂಡ ಬಂದು ಪ್ರವಾಸ ಮಾಡಿ ಬರ ಅಧ್ಯಯನ ನಡೆಸಿ ಹೋಗಿದ್ದಾರೆ. ಅಕ್ಟೋಬರ್ 20ಕ್ಕೆ ಈ ತಂಡ ವರದಿಯನ್ನೂ ಸಲ್ಲಿಸಿದೆ. ಕೇಂದ್ರ ಸರ್ಕಾರದ ಕೃಷಿ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ಈ ವರದಿ ಪರಿಶೀಲಿಸಿ ಶೀಫಾರಸು ಮಾಡಬೇಕು ಎಂದರು.
ಬರ ಪರಿಹಾರ ನೀಡುವ ಸಂಬಂಧ ಒಂದು ತಿಂಗಳಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು. ಕೇಂದ್ರ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಯಬೇಕು. ಆದರೆ, ಈವರೆಗೆ ಸಭೆ ನಡೆದಿಲ್ಲ. ಎಲ್ಲಾ ಕೆಲಸವೂ ಆಗೋಗಿದೆ. ಆದರೆ, ನಮ್ಮ ಬರ ಪರಿಹಾರದ ವರದಿ ಅಮಿತ್ ಶಾ ಅವರ ಟೇಬಲ್ ಮೇಲೆ ಧೂಳು ಹಿಡಿಯುತ್ತಿದೆ. ಸ್ವತ ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಆದರೆ, ಇದೇ ಬಿಜೆಪಿ ನಾಯಕರು ಚುನಾವಣಾ ಸಂದರ್ಭದಲ್ಲಿ ಕರ್ನಾಟಕಕ್ಕೆ ಬಂದು ಸುಳ್ಳಿನ ಜುಮ್ಲಾ ಭಾಷಣ ಮಾಡುತ್ತಿದ್ದಾರೆ, ಇದು ಕನ್ನಡಿಗರಿಗೆ ಮಾಡಿರುವ ಅವಮಾನ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯದ ನೀರಾವರಿ ಯೋಜನೆಗಳಿಗೂ ಇಲ್ಲ ಕೇಂದ್ರದ ಬಲ: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ರೂ 5,300 ಕೋಟಿ ಬಜೆಟ್‌ನಲ್ಲಿ ಹಣ ಘೋಷಿಸಲಾಗಿತ್ತು. ಆದರೆ ಈವರೆಗೆ ಒಂದು ರೂಪಾಯಿಯೂ ಬಂದಿಲ್ಲ. ನೀರಾವರಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಪತ್ರ ಬರೆದು ಮನವಿ ಮಾಡಿದ್ದಾರೆ. ಕೇಂದ್ರ ನಾಯಕರನ್ನು ಖುದ್ದು ಭೇಟಿಯಾಗಿದ್ದಾರೆ. ಆದರೆ, ಈವರೆಗೆ ನಯಾಪೈಸೆಯೂ ಬಂದಿಲ್ಲ. ಬಿಜೆಪಿ ನಾಯಕರು ಬಜೆಟ್‌ನಲ್ಲಿ ಘೋಷಣೆ ಮಾಡಿ ಕರ್ನಾಟಕಕ್ಕೆ ಮೂರು ನಾಮ ಹಾಕ್ತಾರೆ ಎಂದರು.
ಮಹದಾಯಿಯಲ್ಲಿ ಕರ್ನಾಟಕ 7.25 ಟಿಎಂಸಿ ಕುಡಿಯುವ ನೀರನ್ನು ಬಳಸಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿ ನಾಲ್ಕು ವರ್ಷಗಳಾಗಿವೆ. ಈ ನೀರನ್ನು ಗದಗ ಧಾರವಾಡ ಬೆಳಗಾಂ ಜಿಲ್ಲೆಗಳಿಗೆ ಕುಡಿಯುವ ನೀರಿಗೆ ಪೂರೈಸುವುದು ರಾಜ್ಯ ಸರ್ಕಾರದ ಯೋಜನೆ. ಈ ವಿಚಾರದಲ್ಲಿ ಅಂತಾರಾಜ್ಯ ನದಿ ವಿವಾದ ಗೊಂದಲವೂ ಇಲ್ಲ. ಆದರೆ, ಕೇಂದ್ರ ಪರಿಸರ ಇಲಾಖೆಯಿಂದ ಇದಕ್ಕೆ ಒಂದೇ ಒಂದು ಅನುಮತಿ ಕೊಡಿಸಲು ಕೇಂದ್ರ ಸರ್ಕಾರ ಹಿಂದೇಟು ಹಾಕಿದೆ. ಈ ಹೋರಾಟದಲ್ಲಿ ರೈತರು ಕೇಸ್ ಹಾಕಿಸಿಕೊಂಡು ಜೈಲು ಪಾಲಾದ್ದಾರೆ. ಹಲವರು ಮೃತಪಟ್ಟಿದ್ದಾರೆ. ಅವರ ಸಾವಿಗೆ ಒಂದು ಬೆಳೆ ಇಲ್ವ?ಕರ್ನಾಟಕ್ಕೆ ಯಾಕೆ ಅನ್ಯಾಯ? ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಮೇಲೂ ಅದನ್ನು ಅನುಸರಿಸಲು ಕೇಂದ್ರಕ್ಕೆ ಸಮಸ್ಯೆ ಏನು ಎಂದು ಪ್ರಶ್ನಿಸಿದರು.
ಮೇಕೆದಾಟು ವಿಚಾರದಲ್ಲೂ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ತ.ನಾಡಿಗೆ ನೀಡಬೇಕಾದ 192 ಟಿಎಂಸಿ ನೀರು ಕೊಡಬೇಕು. ಆದರೆ , ಕೆಲವೊಮ್ಮೆ ಉತ್ತಮ ಮಳೆಯಾದಾಗ 100 ರಿಂದ 120 ಟಿಎಂಸಿ ನೀರು ಹೆಚ್ಚುವರಿಯಾಗಿ ಹೋಗುತ್ತದೆ. ಈ ನೀರನ್ನು ರಾಜ್ಯವೇ ಬಳಸಿಕೊಳ್ಳುವ ನಿಟ್ಟಿನಲ್ಲಿ 2016ರಲ್ಲಿ ಮೇಕೆದಾಟು ಪ್ರಾಜೆಕ್ಟ್ ಮಾಡಿ ಕೇಂದ್ರಕ್ಕೆ ವರದಿ ಕೊಟ್ಟಿದ್ದೇವೆ. ಆದರೆ, ಇಲ್ಲಿವರೆಗೆ ಒಪ್ಪಿಗೆ ಕೊಟ್ಟಿಲ್ಲ ಎಂದರು.
ಕಾವೇರಿ ಟ್ರಿಬ್ಯುನಲ್ ಪ್ರಕಾರ ತ.ನಾಡಿಗೆ ಬಿಡಬೇಕಾದ ನೀರು ಬಿಟ್ಟು ಉಳಿದ ನೀರನ್ನು ಏನುಬೇಕಾದ್ರು ಮಾಡಬಹುದು ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ. ಅಲ್ಲದೆ, ಕೇಂದ್ರ ಸರ್ಕಾರ ಈ ಯೋಜನೆಗೆ ಒಪ್ಪಿಗೆ ಕೊಡಬಹುದು ಅಂತಲೂ ಹೇಳಿದೆ. ಆದರೂ, ಏಕೆ ಒಪ್ಪಿಗೆ ನೀಡಿಲ್ಲ? ಮಹಾದಾಯಿ, ಭದ್ರಾ ಮೇಲ್ದಂಡೆ, ಮೇಕೆದಾಟುಗೂ ವಿಚಾರದಲ್ಲೂ ನಮಗೆ ಏಕಿಷ್ಟು ಅನ್ಯಾಯ? ಎಂದು ಅಸಮಾಧಾನ ಹೊರಹಾಕಿದರು.
ಅಲ್ಲದೆ, ನಮಗೆ ಸಂಘರ್ಷದಲ್ಲಿ ಆಸಕ್ತಿ ಇಲ್ಲ. ಈ ಹಿಂದೆ ಬ್ರಿಟೀಷರು ಸ್ವಾತಂತ್ರ ಕೇಳಿದಾಗ ನಮ್ಮವರ ಮೇಲೆ ದೇಶದ್ರೋಹದ ಕೇಸು ಹಾಕಿದಂತೆ ಈಗ ನಮ್ಮ ತೆರಿಗೆ ಹಕ್ಕು ಕೇಳಿದ್ರೆ ಕೇಂದ್ರ ಸರ್ಕಾರ ನಮ್ಮನ್ನೇ ದೇಶದ್ರೋಹಿ ಎಂದು ಅವಮಾನಿಸುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.




