ಪಿ.ಎಸ್.ಐ. ಪರೀಕ್ಷಾ ದಿನಾಂಕ ಮುಂದೂಡುವಂತೆ ಅಭಿಯಾನ

2 years ago

#Campaign #postpone #PSI #exam #date

ಬೆಂಗಳೂರು: ಪಿಎಸ್ಐ ಪರೀಕ್ಷೆ ದಿನಾಂಕ ಮುಂದೂಡಬೇಕೆಂದು ಅಭ್ಯರ್ಥಿಗಳು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ ಅವರೊಂದಿಗೆ ದೂರವಾಣಿ ಕರೆ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ನೂರಾರು ಅಭ್ಯರ್ಥಿಗಳು ರಣದೀಪ್ ಸಿಂಗ್ ಸುರ್ಜೆವಾಲ ಅವರೊಂದಿಗೆ ಮೊಬೈಲ್ನಲ್ಲಿ ಮಾತನಾಡಿ, ತಮ್ಮ ನೆರವಿಗೆ ಧಾವಿಸುವಂತೆ ಮನವಿ ಮಾಡಿದ್ದಾರೆ. ಅಭ್ಯರ್ಥಿಗಳ ಮನವಿಗಳನ್ನು ಸಹನೆ ಯಿಂದ ಕೇಳಿದ ಸುರ್ಜೆವಾಲ, ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಬಳಿ ನಿಯೋಗ ಕೊಂಡೊಯ್ಯುವಂತೆ ಸಲಹೆ ನೀಡಿದ್ದಾರೆ.

ಈ ವೇಳೆ ಅಭ್ಯರ್ಥಿಗಳು ತಾವು ಗೃಹಸಚಿವರ ಬಳಿಗೆ ಹೋಗಿ ಮಾತುಕತೆ ನಡೆಸಿದ್ದೇವೆ ಎಂದು ಹೇಳಿದ ಸಮಯದಲ್ಲಿ, ಪ್ರತಿಕ್ರಿಯಿಸಿರುವ ಸುರ್ಜೆವಾಲ, ಅವರ ಜೊತೆ ಮಾತನಾಡುವುದಕ್ಕಿಂತಲೂ ಸಿಎಂ, ಡಿಸಿಎಂ ಜೊತೆ ಸಮಾಲೋಚನೆ ಮಾಡಿ ಎಂದು ಸಲಹೆ ಕೊಟ್ಟಿದ್ದಾರೆ.

ಇದರ ನಡುವೆ ಪರೀಕ್ಷಾ ದಿನಾಂಕ ಮುಂದೂಡುವಂತೆ ಸಿಎಂ ಸಿದ್ಧರಾಮಯ್ಯ, ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿಗೆ ಪತ್ರ ಬರೆದು ಇಬ್ಬರು ಶಾಸಕರು ಆಗ್ರಹಿಸಿರುವ ಘಟನೆ ನಡೆದಿದೆ. ಸಿದ್ಧರಾಮಯ್ಯ, ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿ ಸೇರಿದಂತೆ ಹಲವರಿಗೆ ಶಾಸಕರಾದ ಎಸ್.ಶರಣಗೌಡ ಪಾಟೀಲ್, ಬಸನಗೌಡ ತುರುವಿಹಾಳ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಡಿ.23ರಂದು 545 ಪಿಎಸ್ಐ ನೇಮಕಾತಿಗಾಗಿ ಮರು ಪರೀಕ್ಷೆ ನಿಗದಿಪಡಿಸಲಾಗಿದೆ. ಪರೀಕ್ಷೆಗೆ ತಯಾರಿ ಆಗಲು ಕೇವಲ 20 ದಿನಗಳಿವೆ. ತುಂಬಾ ಕಡಿಮೆ ಅವಧಿಯಲ್ಲಿ ಪರೀಕ್ಷೆ ನಿಗದಿಪಡಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ, ಕೇವಲ 20 ದಿನಗಳಲ್ಲಿ ಓದಿ ಪಿಎಸ್ಐ ಪರೀಕ್ಷೆ ಎದುರಿಸುವುದು ಅಭ್ಯರ್ಥಿಗಳಿಗೆ ಕಷ್ಟವಾಗಲಿದೆ. ಕನಿಷ್ಠ ಮೂರು ತಿಂಗಳು ಪರೀಕ್ಷೆ ಮುಂದೂಡುವಂತೆ ಶಾಸಕರು ಮನವಿ ಮಾಡಿದ್ದಾರೆ. ಡಿ.23ರಂದು 545 ಪಿಎಸ್ಐ ನೇಮಕಾತಿಗೆ ಮರು ಪರೀಕ್ಷೆಗೆ ವೇಳಾಪಟ್ಟಿಯನ್ನು ಈಗಾಗಲೇ ನಿಗದಿಗೊಳಿಸಲಾಗಿದೆ.

Leave a Reply