ಬಿಪಿಎಲ್ ಕಾರ್ಡುದಾರರ ಆದಾಯ ಮೊತ್ತವನ್ನು ಕನಿಷ್ಠ ಮೂರು ಲಕ್ಷಗಳಿಗೆ ನಿಗದಿಪಡಿಸಿ

1 year ago

ಬಿಪಿಎಲ್ ಕಾಡುಗಳನ್ನು ಹೊಂದಲು ಮತ್ತು ಇತರೆ ಸೌಲಭ್ಯಗಳನ್ನು ಪಡೆಯಲು ರಾಜ್ಯ ಸರ್ಕಾರ ನಾಗರೀಕರಿಗೆ 1,20,000ಗಳ ವಾರ್ಷಿಕ ಆದಾಯವನ್ನು ಮಾನದಂಡವನ್ನಾಗಿ ನಿಗದಿಪಡಿಸಿದೆ. ಈ ಮಾನದಂಡದ ಆಧಾರದ ಮೇಲೆ ಬಿಪಿಎಲ್ ಕಾರ್ಡುಗಳನ್ನು ವಿತರಿಸುತ್ತ ಇತರೆ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತಿದೆ.

ಕೇಂದ್ರ ಸರ್ಕಾರ ಆದಾಯದ ಮಿತಿಯನ್ನು 12 ಲಕ್ಷಕ್ಕೆ ಏರಿಕೆ ಮಾಡಿ, 12 ಲಕ್ಷ ಆದಾಯ ಇರುವವರಿಗೆ ಆದಾಯ ತೆರಿಗೆಯಿಂದ ವಿನಾಯಿತಿಯನ್ನು ನೀಡಿದೆ. ಯಾವುದೇ ಒಬ್ಬ ನಾಗರಿಕರು ಪ್ರತಿ ತಿಂಗಳು ಕೇವಲ ಹತ್ತು ಸಾವಿರ ರೂಪಾಯಿಗಳಲ್ಲಿ ತಮ್ಮ ಸಂಸಾರವನ್ನು ನಡೆಸುತ್ತಾರೆ ಎನ್ನುವುದು ಸಂಪೂರ್ಣವಾಗಿ ಸತ್ಯವಲ್ಲ. ಗ್ರಾಮೀಣ ಪ್ರದೇಶದಲ್ಲಿ ಕೆಲವು ಪ್ರಸಂಗಗಳಲ್ಲಿ ಇದು ಸತ್ಯವಿರಬಹುದು. ಆದರೆ ನಗರ ಪ್ರದೇಶ ಮತ್ತು ಪಟ್ಟಣ ಪ್ರದೇಶಗಳಲ್ಲಿ 10 ಸಾವಿರ ರೂಪಾಯಿಗಳ ಮಾಸಿಕ ಆದಾಯದಲ್ಲಿ ಜೀವನ ನಡೆಸಲು ಖಂಡಿತ ಸಾಧ್ಯವಿಲ್ಲ. ಆ ರೀತಿಯ ಪ್ರಮಾಣ ಪತ್ರಗಳು ಸುಳ್ಳಿನ ಕಂತೆಯಾಗಿರುತ್ತದೆ.

ಇಂದು ಸರ್ಕಾರವೇ ಅಸಂಘಟಿತ ಕಾರ್ಮಿಕರಿಗೆ ನಿಗದಿಪಡಿಸಿರುವ ದಿನಗೂಲಿ ಮತ್ತು ಇತರೆ ಶ್ರಮದ ಬದುಕು ನಡೆಸುವ ಜನರ ದಿನದ ಸಂಪಾದನೆ ಕನಿಷ್ಠವೆಂದರು 1000 ಇರುತ್ತದೆ. ಹೀಗಿದ್ದ ಮೇಲೆ ಕೇವಲ ಹತ್ತು ಸಾವಿರ ರೂಪಾಯಿಗಳ ವಾರ್ಷಿಕ ಆದಾಯ ಹೇಗೆ ತಾನೇ ಸತ್ಯವೆಂದು ಒಪ್ಪಲು ಸಾಧ್ಯವಿದೆ? ಆದುದರಿಂದ ರಾಜ್ಯ ಸರ್ಕಾರ ತನ್ನ ಮುಂಗಡಪತ್ರದಲ್ಲಿ ಬಿಪಿಎಲ್ ಕಾಡುದಾರರಿಗೆ ಮತ್ತು ಇತರೆ ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಪಡೆಯುವವರಿಗೆ ವಾರ್ಷಿಕ 3 ಲಕ್ಷ ರೂಪಾಯಿಗಳ ಆದಾಯದ ಮಿತಿಯನ್ನು ಮಾನದಂಡವನ್ನಾಗಿಸಿ ಆದೇಶವನ್ನು ಮಾರ್ಪಡಿಸಿ.

ಇಂತಹ ಆದೇಶಗಳು ದೇಶದ ಇತರ ರಾಜ್ಯಗಳಿಗೂ ಮಾದರಿಯಾಗುತ್ತದೆ. ಮಧ್ಯಮವರ್ಗದ ಮತ್ತು ಕೆಳ ಮಧ್ಯಮ ವರ್ಗದ ಜನರು ಹಾಲಿ ಇರುವ ಮಾನದಂಡದಿಂದ ಯಾವುದೇ ರೀತಿಯ ಸೌಕರ್ಯವನ್ನು ಪಡೆದುಕೊಳ್ಳಲಾಗದೆ ಸಂಕಷ್ಟದಲ್ಲಿದ್ದಾರೆ.

ವಾಸ್ತವಕ್ಕೆ ಹತ್ತಿರವಾದಂತಹ ಸಂಗತಿಗಳು ಸರ್ಕಾರದ ಆದೇಶಗಳಿಗೆ ಪೂರಕವಾಗಿರಬೇಕು. ಇಲ್ಲದಿದ್ದರೆ ಆದೇಶಗಳು ಜನರ ಬದುಕಿಗೆ ಪೂರಕವಾಗುವುದರ ಬದಲಿಗೆ ಮಾರಕವಾಗುತ್ತದೆ. ಆದುದರಿಂದ ರಾಜ್ಯ ಸರ್ಕಾರ ಈ ವಿಚಾರದಲ್ಲೂ ಗಂಭೀರವಾಗಿ ಚಿಂತನೆಯನ್ನು ನಡೆಸಬೇಕು. ಜೊತೆಗೆ ಹಾಲಿ ನೀಡುತ್ತಿರುವ ಹಿರಿಯ ನಾಗರಿಕರ ಪಿಂಚಣಿ, ವಿಧವಾ ಪಿಂಚಣಿ, ಅಂಗವಿಕಲರ ಪಿಂಚಣಿ, ಮೊತ್ತ ಸದ್ಯದ ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ತುಂಬಾ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಇದರ ಮೊತ್ತವನ್ನು ಸಹ ಏರಿಕೆ ಮಾಡಬೇಕಾಗಿದೆ.

ಬೇರೆ ಬೇರೆ ಸಂಸ್ಥೆಯವರು, ರಾಜ್ಯ ಸರಕಾರಿ ನೌಕರರು, ಮತ್ತು ಸಂಘಟಿತ ವಲಯದವರು, ಹೋರಾಟಗಳನ್ನ ಮಾಡಿ ಒತ್ತಡವನ್ನು ಹಾಕುತ್ತಾರೆ. ಆಗ ಅವರ ಸಂಬಳ ಇತರ ಸೌಲಭ್ಯಗಳನ್ನು ಹೆಚ್ಚಿಸುತ್ತೀರಿ. ಆದರೆ ಹಿರಿಯ ನಾಗರಿಕರು, ವಿಧವೆಯರು, ಅಂಗವಿಕಲರು, ಸಂಘಟಿತರಾಗಿ ಧರಣಿ ನಡೆಸಲು ಸಾಧ್ಯವಾಗುವುದಿಲ್ಲ. ಹೋರಾಟವನ್ನು ಮಾಡಲು ಸಾಧ್ಯವಾಗುವುದಿಲ್ಲ. ಆ ಹಿನ್ನೆಲೆಯಲ್ಲಿ ಅವರ ಧ್ವನಿಗಳು ಸರ್ಕಾರಕ್ಕೆ ಮುಟ್ಟುವುದಿಲ್ಲ. ಇದನ್ನು ಅರ್ಥ ಮಾಡಿಕೊಂಡು ಅವರ ಬಗ್ಗೆಯೂ ಸ್ವಲ್ಪ ಮಾನವೀಯತೆಯಿಂದ ನೆರವು ನೀಡಿ.

– ಕೆ ಎಸ್ ನಾಗರಾಜ್ ಬೆಂಗಳೂರು

Leave a Reply