ಬಜೆಟ್ ತಯಾರಿ ಸಂದರ್ಭದಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ

1 year ago

ಪ್ರತಿ ವರ್ಷವೂ ಮುಂಗಡಪತ್ರ ತಯಾರಿಸುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅಧಿಕಾರಿಗಳು ಮತ್ತು ಸಮಾಜದ ವಿವಿಧ ಮುಖಂಡರ ಜೊತೆಯಲ್ಲಿ ಸಭೆಗಳನ್ನು ನಡೆಸಿ ಅವರ ಅಭಿಪ್ರಾಯಗಳನ್ನು ಆಲಿಸುತ್ತಿರುವುದು ಉತ್ತಮವಾದಂತಹ ನಡವಳಿಕೆ. ಇದರ ಜೊತೆಗೆ ಜನಸಾಮಾನ್ಯರ ಅನಿಸಿಕೆಗಳು ನಿರೀಕ್ಷೆಗಳು ಅಭಿಪ್ರಾಯಗಳನ್ನು ಕೇಳಿದಾಗ ಮುಂಗಡಪತ್ರಕ್ಕೆ ಮತ್ತಷ್ಟು ಮಹತ್ವವಿರುತ್ತದೆ.

ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಹಾಗೂ ಸಮಾಜದಲ್ಲಿ ಪ್ರಮುಖರು ಎನಿಸಿಕೊಂಡಂತಹ ಅನೇಕರಿಗೆ ತಿಳಿಯದಿರುವಂತಹ ಸಮಸ್ಯೆಗಳು ಜನಸಾಮಾನ್ಯರಿಗೆ ತಿಳಿದಿರುತ್ತದೆ. ಅಂತಹ ಸಮಸ್ಯೆಗಳಿಂದ ಬಳಲುತ್ತಿರುವ ಜನರ ಅಭಿಪ್ರಾಯವನ್ನು ಕೇಳಿದಾಗ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚು ಅರ್ಥ ಬರುತ್ತದೆ.

ಎಷ್ಟೋ ಸಮಸ್ಯೆಗಳು ನಾಗರೀಕರನ್ನ ಕಾಡುತ್ತಿವೆ. ಇಂತಹ ಸಮಸ್ಯೆಗಳ ಸ್ಪಷ್ಟವಾದ ಅರಿವು ಬಹಳಷ್ಟು ಜನರಿಗೆ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುಂಗಡಪತ್ರ ನಿಮ್ಮ ನಿರೀಕ್ಷೆ, ಎಂಬ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯದಾದ್ಯಂತ ನಾಗರಿಕರು ತಮ್ಮ ಅಭಿಪ್ರಾಯ, ನಿರೀಕ್ಷೆಗಳು, ಮತ್ತು ಸಲಹೆಗಳನ್ನು, ಸರ್ಕಾರಕ್ಕೆ ಕೊಡಲು ಒಂದು ವೆಬ್ಸೈಟ್ ಆರಂಭಿಸಿ.

ಒಂದು ಕಾಲಮಿತಿಯನ್ನು ನಿಗದಿಪಡಿಸಿ ಅಷ್ಟರ ಒಳಗಾಗಿ ಬರುವಂತಹ ನಾಗರೀಕರ ಎಲ್ಲ ಅಭಿಪ್ರಾಯಗಳನ್ನು ಸೂಕ್ಷ್ಮವಾಗಿ ಗಮನಿಸಿ ಸರ್ಕಾರ ಯೋಜನೆಗಳನ್ನು ರೂಪಿಸುವ ಸಂದರ್ಭದಲ್ಲಿ ಅನುಸರಿಸಬೇಕಾದಂತಹ ಮಾರ್ಗವನ್ನು ಮತ್ತು ಜನರ ನಿರೀಕ್ಷೆಗಳು ಏನಿದೆ ಎಂಬುದನ್ನು ತಿಳಿದುಕೊಂಡು ಮುಂಗಡಪತ್ರವನ್ನ ಸಿದ್ಧಪಡಿಸಿದರೆ ಇದಕ್ಕೆ ಅರ್ಥವಿರುತ್ತದೆ.

ಸರ್ಕಾರಗಳು ಪ್ರತಿ ವರ್ಷವೂ ಪ್ರತಿಯೊಂದು ಇಲಾಖೆಗೆ ಇಂತಿಷ್ಟು ಹಣವನ್ನ ನಿಗದಿಪಡಿಸುತ್ತವೆ. ಆದರೆ ವರ್ಷದ ಅಂತ್ಯದಲ್ಲಿ ನಿಗದಿತ ಹಣ ಸಂಪೂರ್ಣವಾಗಿ ಖರ್ಚಾಗಿರುವುದಿಲ್ಲ. ಯಾವುದೇ ಇಲಾಖೆ ಸಹ ನೂರಕ್ಕೆ ನೂರರಷ್ಟು ಪ್ರಗತಿಯನ್ನು ಸಾಧಿಸಿದಂತಹ ಉದಾಹರಣೆಗಳೇ ಇಲ್ಲ. ಆದುದರಿಂದ ಪ್ರತಿಯೊಂದು ಇಲಾಖೆಯಿಂದ ಮೊದಲು ಯೋಜನೆಗಳನ್ನ ಸಿದ್ಧಪಡಿಸಿ ಅದಕ್ಕೆ ಬೇಕಾದಂತ ಹಣಕಾಸಿನ ಮೊತ್ತವನ್ನ ನಿಗದಿಪಡಿಸಿ ಸರ್ಕಾರಕ್ಕೆ ಸಲ್ಲಿಸಲಿ, ತದನಂತರ ಹಣ ಬಿಡುಗಡೆ ಮಾಡಿ. ಇಲ್ಲದಿದ್ದರೆ ಹಣ ಬಂದ ಮೇಲೆ ಹಣ ಖರ್ಚು ಮಾಡಬೇಕೆಂಬ ಕಾರಣಕ್ಕಾಗಿಯೇ ಯೋಜನೆಗಳನ್ನ ತರಾತುರಿಯಲ್ಲಿ ಅನುಷ್ಠಾನಗೊಳಿಸುವುದು ಹೆಚ್ಚಿನ ಇಲಾಖೆಗಳಲ್ಲಿ ನಡೆಯುತ್ತಿದೆ. ಇದರಿಂದ ಯಾವ ಅನುಕೂಲವಾಗುವುದಿಲ್ಲ ಕೆಲವರ ಜೀವನ ಮಾತ್ರ ನಡೆಯುತ್ತದೆ.

ಪ್ರತಿ ವರ್ಷವೂ ರಾಜ್ಯ ಸರ್ಕಾರ ಮುಂಗಡಪತ್ರವನ್ನು ಒಂದು ವರ್ಷ ಶಿಕ್ಷಣಕ್ಕೆ ಒತ್ತು ನೀಡಿ, ಮತ್ತೊಂದು ವರ್ಷ ಆರೋಗ್ಯಕ್ಕೆ ಒತ್ತು ನೀಡಿ, ಮತ್ತೊಂದು ವರ್ಷ ಸಾರಿಗೆ ವ್ಯವಸ್ಥೆಗೆ ಒತ್ತು ನೀಡಿ, ಮತ್ತೊಂದು ವರ್ಷ ಸಂಪರ್ಕ ವ್ಯವಸ್ಥೆಗೆ ಒತ್ತು ನೀಡಿ, ಮತ್ತೊಂದು ವರ್ಷ ಪ್ರವಾಸೋದ್ಯಮಕ್ಕೆ ಆದ್ಯತೆಯನ್ನು ನೀಡಿ, ಮತ್ತೊಂದು ವರ್ಷ ಕೃಷಿ, ನೀರಾವರಿ ಮತ್ತು ರೈತರುಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಸ್ಪಷ್ಟವಾದ ಕಾರ್ಯಕ್ರಮಗಳು ಒಳಗೊಂಡಿರುವ ಮುಂಗಡಪತ್ರವನ್ನು ನೀಡಿ.

75 ವರ್ಷಗಳು ಸ್ವಾತಂತ್ರ್ಯ ಬಂದು ತಲುಪಿದ್ದರು ಸಹ ಇನ್ನೂ ಶಾಲೆಗಳಿಲ್ಲದ ಗ್ರಾಮ ಪಂಚಾಯಿತಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲದ ಹಳ್ಳಿಗಳು, ಬಸ್ ವ್ಯವಸ್ಥೆಯೇ ಕಾಣದ ಊರುಗಳು, ಕಾಂಕ್ರೀಟ್ ಅಥವಾ ತಾರು ರಸ್ತೆ ಕಾಣದ ಅನೇಕ ಗ್ರಾಮಗಳು, ಶುದ್ಧ ಕುಡಿಯುವ ನೀರು ಕಾಣದ ಮನೆಗಳು, ದೀಪದ ಬೆಳಕು ಕಾಣದ ವಸತಿಗಳು ಉಳಿದುಕೊಂಡಿರುವುದು ಗಮನಿಸಿದಾಗ, ಮುಂಗಡಪತ್ರದ ಮೂಲ ಆಶಯ ಜನರಿಗೆ ಮುಟ್ಟಿಸುವಲ್ಲಿ ವಿಫಲವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ಈ ಹಿನ್ನೆಲೆಯಲ್ಲಿ ಮುಂಗಡಪತ್ರಗಳು ಕೇವಲ ಘೋಷಣಾ ಪತ್ರವಾಗಬಾರದು, ಖರ್ಚು ಆದಾಯದ ಪುಸ್ತಕಗಳಾಗಬಾರದು. ಪ್ರತಿಯೊಂದು ವರ್ಷದ ಮುಂಗಡಪತ್ರ ರಾಜ್ಯದ ಪ್ರಗತಿಯ ಪವಿತ್ರ ಗ್ರಂಥವಾಗಬೇಕು.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply