ಪಾರ್ಲಿಮೆಂಟ್ ಭವನದ ಶಂಕುಸ್ಥಾಪನೆ ಮತ್ತು ಉದ್ಘಾಟನೆಗೆ ರಾಷ್ಟ್ರಪತಿಗಳನ್ನು ಏಕೆ ಕರೆಯಲಿಲ್ಲ?

1 year ago

ರಾಷ್ಟ್ರಪತಿಗಳ ಬಗ್ಗೆ ಅಪಾರವಾದ ಗೌರವ ಇರುವ ರೀತಿಯಲ್ಲಿ, ಅಬ್ಬರಿಸಿ ಮಾತನಾಡುವ ಬಿಜೆಪಿಯ ನಾಯಕರುಗಳು ರಾಮ ಮಂದಿರದ ಭೂಮಿ ಪೂಜೆಯ ಸಂದರ್ಭದಲ್ಲಿ ಮತ್ತು ನೂತನ ಪಾರ್ಲಿಮೆಂಟ್ ಭವನದ ಶಂಕುಸ್ಥಾಪನೆಯ ಸಂದರ್ಭದಲ್ಲಿ ಶ್ರೀ ರಾಮನಾಥ ಕೋವಿಂದ್ ರವರನ್ನು ಯಾವ ಕಾರಣಕ್ಕಾಗಿ ಕರೆಯಲಿಲ್ಲ? ಅದೇ ರೀತಿಯಲ್ಲಿ ಪಾರ್ಲಿಮೆಂಟಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಮತ್ತು ಅಯೋಧ್ಯೆಯಲ್ಲಿ ರಾಮಮಂದಿರದ ಲೋಕಾರ್ಪಣ ಸಮಾರಂಭಕ್ಕೆ ಹಾಲಿ ರಾಷ್ಟ್ರಪತಿಗಳಾಗಿರುವ ಶ್ರೀಮತಿ ದ್ರೌಪದಿ ಮುರ್ಮುರವರನ್ನು ಯಾವ ಕಾರಣಕ್ಕಾಗಿ ಆಹ್ವಾನಿಸಲಿಲ್ಲ? ಎಂಬ ಪ್ರಶ್ನೆಗೆ ಇಲ್ಲಿಯವರೆಗೂ ದೇಶದ ನಾಗರಿಕರಿಗೆ ಉತ್ತರಿಸಿಲ್ಲ.

ಭಾರತ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿಗಳು. ಭಾರತದ ಪಾರ್ಲಿಮೆಂಟ್ ಭವನದ ಶಂಕುಸ್ಥಾಪನೆ ಮತ್ತು ಉದ್ಘಾಟನೆ ರಾಷ್ಟ್ರಪತಿಯವರಿಂದ ಆಗಬೇಕಾದದ್ದು ಅತ್ಯಂತ ಸೂಕ್ತವಾದಂತಹ ವಿಚಾರವಾಗಿರುತ್ತದೆ. ಆದರೆ ಇವರನ್ನು ಯಾವ ಕಾರಣದಿಂದ ಈ ಸಮಾರಂಭದಿಂದ ದೂರ ಇಡಲಾಯಿತು? ಇದರ ಹಿಂದೆ ಇರುವ ಕಾರಣವಾದರೂ ಏನು? ಈ ರೀತಿಯಲ್ಲಿ ದೇಶದ ಪ್ರಥಮ ಪ್ರಜೆಯನ್ನೇ ಪಾರ್ಲಿಮೆಂಟ್ ಭವನದ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಆಹ್ವಾನಿಸದೆ ಆ ಹುದ್ದೆಗೆ ಅವಮಾನ ಮಾಡಿದವರಿಂದ ಈಗ ಉಪದೇಶದ ಮಾತುಗಳನ್ನು ಕೇಳಬೇಕೆ?

ಭಾರತ ದೇಶದಲ್ಲಿ ಮೊದಲ ಬಾರಿಗೆ ಶೋಷಿತ ಸಮಾಜಕ್ಕೆ ಸೇರಿದ ಅತ್ಯಂತ ಮೇಧಾವಿ ಕೆ ಆರ್ ನಾರಾಯಣನ್. ಇವರನ್ನು ರಾಷ್ಟ್ರಪತಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಬಾಬು ಜಗಜೀವನ್ ರಾಮ್ ರವರ ಸುಪುತ್ರಿ ಶ್ರೀಮತಿ ಮೀರಾ ಕುಮಾರಿ ಇವರನ್ನು ಪ್ರಥಮ ಬಾರಿಗೆ ಲೋಕಸಭೆಯಲ್ಲಿ ಅಧ್ಯಕ್ಷ ಸ್ಥಾನವನ್ನ ಕೊಟ್ಟು ಗೌರವಿಸಿದ್ದು ಕಾಂಗ್ರೆಸ್ ಪಕ್ಷ. ಶ್ರೀಮತಿ ಪ್ರತಿಭಾ ಪಾಟೀಲ್ ಇವರನ್ನು ದೇಶದ ರಾಷ್ಟ್ರಪತಿಯನ್ನಾಗಿಸಿ ಮಹಿಳೆಯರಿಗೆ ಗೌರವವನ್ನು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. 1960ರ ದಶಕದಲ್ಲಿಯೇ ಬಿಹಾರದ ರಾಜ್ಯದಲ್ಲಿ ಶ್ರೀಮತಿ ಸುಚೇತಾ ಕೃಪಲಾನಿ ಇವರನ್ನು ಮುಖ್ಯಮಂತ್ರಿಯನ್ನಾಗಿಸಿ ಮಹಿಳೆಯರಿಗೆ ಆದ್ಯತೆಯನ್ನು ಕೊಟ್ಟವರು ಕಾಂಗ್ರೆಸ್ಸಿನವರು.

ಈ ರೀತಿಯಲ್ಲಿ ದೆಹಲಿಯಲ್ಲಿ 15 ವರ್ಷಗಳ ಕಾಲ ಶ್ರೀಮತಿ ಶೀಲಾ ದೀಕ್ಷಿತ್ ರವರು ಮುಖ್ಯಮಂತ್ರಿ ಆಗಿದ್ದರು. ಈ ಅವಕಾಶವನ್ನು ಕೊಟ್ಟಿದ್ದು ಕಾಂಗ್ರೆಸ್ಸಿನವರು. ಪಂಜಾಬಿನಲ್ಲಿ ಮತ್ತು ಇತರೆ ರಾಜ್ಯಗಳಲ್ಲಿ ಮಹಿಳೆಯರಿಗೆ ಮುಖ್ಯಮಂತ್ರಿ ಸ್ಥಾನವನ್ನು ಕಲ್ಪಿಸಿಕೊಟ್ಟವರು ಕಾಂಗ್ರೆಸ್ಸಿನವರು.

ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇಕಡ 33 ರಷ್ಟು ಮೀಸಲಾತಿಯನ್ನು ನೀಡಬೇಕೆಂದು ಪ್ರಥಮ ಬಾರಿಗೆ ಮಸೂದೆಯನ್ನ ಮಂಡಿಸಿ ಅದಕ್ಕೆ ರಾಜ್ಯಸಭೆಯಲ್ಲಿ ಅನುಮೋದನೆಯನ್ನ ಪಡೆದುಕೊಳ್ಳುವಂತೆ ಶ್ರದ್ದೆಯಿಂದ ಹೋರಾಟ ಮಾಡಿದ್ದು ಕಾಂಗ್ರೆಸ್ಸಿನವರು.

ಈ ದೇಶದಲ್ಲಿ ಅನೇಕ ರಾಜ್ಯಗಳಲ್ಲಿ ದಲಿತರನ್ನ ಮುಖ್ಯಮಂತ್ರಿಗಳನ್ನಾಗಿಸಿ ಅವರಿಗೆ ರಾಜ್ಯದ ಚುಕ್ಕಾಣಿಯ ಜವಾಬ್ದಾರಿಯನ್ನ ನೀಡಿದ್ದು ಕಾಂಗ್ರೆಸ್ಸಿನವರು.

ದಲಿತರ ಬಗ್ಗೆ ವಿಶೇಷವಾದ ಕಾಳಜಿಯಿಂದಾಗಿ ಅನೇಕ ರೀತಿಯ ಕಾನೂನುಗಳನ್ನ ಜಾರಿಗೆ ತಂದು, ರಾಜಕೀಯವಾಗಿ, ಸಾಮಾಜಿಕವಾಗಿ, ಅವರನ್ನು ಪ್ರಗತಿಯ ಹಾದಿಯಲ್ಲಿ ಸಾಗುವಂತೆ ಮಾಡಿದವರು ಕಾಂಗ್ರೆಸ್ಸಿನವರು. ಈ ರೀತಿಯಲ್ಲಿ ಮಹಿಳೆಯರು ದಲಿತರ ಬಗ್ಗೆ ಅಪಾರವಾದಂತಹ ಕಾಳಜಿ ಮತ್ತು ಪ್ರೀತಿಯಿಂದ ರಾಜಕೀಯ ನಿರ್ಧಾರಗಳನ್ನು ಕೈಗೊಂಡ ಕಾಂಗ್ರೆಸ್ ಪಕ್ಷದ ಬದ್ಧತೆ ಬಗ್ಗೆ ಮಾತನಾಡುವ ಯಾವ ನೈತಿಕತೆಯು ಬಿಜೆಪಿಯವರಿಗೆ ಇಲ್ಲ.

ಶ್ರೀಮತಿ ಸೋನಿಯಾ ಗಾಂಧಿಯವರು ಯಾವುದೇ ರೀತಿಯ ಪೂರ್ವಗ್ರಹ ಪೀಡಿತ ಅಲ್ಲದೆ ಮತ್ತು ಯಾವ ಕೆಟ್ಟ ಭಾವನೆ ಇಲ್ಲದೆ ಕೇವಲ ಒಬ್ಬ ಮಹಿಳೆಯಾಗಿ ಮತ್ತೊಬ್ಬ ಮಹಿಳೆ ವಿಚಾರದಲ್ಲಿ ಕಾಳಜಿಯಿಂದ ಮಾತನಾಡಿದ ಮಾತುಗಳನ್ನ ರಾಜಕಾರಣ ಮಾಡುತ್ತ, ಬೇರೆಬೇರೆ ಅರ್ಥಗಳನ್ನು ಕಲ್ಪಿಸುತ್ತಾ ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದು ಬಿಜೆಪಿಯವರ ರಾಜಕಾರಣದ ನಡವಳಿಕೆಯಷ್ಟೆ.

ಬಿಜೆಪಿಯವರು ರಾಷ್ಟ್ರಪತಿಗಳ ಬಗ್ಗೆ ಮಾತನಾಡುವ ಮೊದಲು ಯಾವ ಕಾರಣಕ್ಕಾಗಿ ದೇಶದ ಎರಡು ಪ್ರಮುಖ ಸಂದರ್ಭಗಳಲ್ಲಿ ರಾಷ್ಟ್ರಪತಿಗಳನ್ನ ಆಹ್ವಾನಿಸಲಿಲ್ಲ ಎಂಬುದನ್ನ ಸ್ಪಷ್ಟವಾದ ಕಾರಣಗಳೊಂದಿಗೆ ವಿವರಿಸಿ, ನಂತರ ತಮ್ಮ ತೋರಿಕೆಯ ಭಕ್ತಿ ಮತ್ತು ಪ್ರೀತಿಯ ಬಗ್ಗೆ ಮಾತನಾಡಲಿ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply