ಸಿ.ಟಿ.ರವಿ ಮಾತುಗಳು ಸರಿಯೋ ತಪ್ಪೋ ಎಂದು ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿ: ಡಿ ಕೆ ಶಿವಕುಮಾರ್

1 year ago

ಬೆಂಗಳೂರು: ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ವಿರುದ್ಧ ಡಿಸಿಎಂ ಡಿ ಕೆ ಶಿವಕುಮಾರ್ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಸಿಟಿ ರವಿ ಅವರು ಕೇವಲ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಮಾತ್ರ ಹೀನವಾಗಿ ಮಾತನಾಡಿಲ್ಲ. ಸಿದ್ದರಾಮಯ್ಯ ಅವರ ಬಗ್ಗೆಯೂ ಹೀನವಾಗಿ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

ಸಿಟಿ ರವಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ  ಸದನದಲ್ಲಿ ‘ನಿತ್ಯ ಸುಮಂಗಲಿ’ ಎಂಬ ಪದ ಬಳಕೆ ಮಾಡಿದ್ದಾರೆ. ರವಿ ಅವರ ಮಾತುಗಳು ಸರಿಯೋ ತಪ್ಪೋ ಎಂದು ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರಿಗೆ ಅಪಮಾನ, ಹೀನ ಮಾತುಗಳೇ ನಮ್ಮ ಸಂಸ್ಕೃತಿ ಎಂದು ಬಿಜೆಪಿ ಒಪ್ಪಿಕೊಳ್ಳಲಿ. ನಾವು ತಕರಾರು ಮಾಡುವುದಿಲ್ಲ. ಚಿಕ್ಕಮಗಳೂರು ಜನ ಎಂದರೆ ಸುಸಂಸ್ಕೃತ ಜನ. ಅಂತಹವರ ನಡುವಿನಿಂದ ಇಂತಹ ವ್ಯಕ್ತಿ ಬಂದಿರುವುದು ದುರಂತ ಎಂದರು.

ನಮ್ಮ ಪಕ್ಷದ ಯಾವುದೇ ನಾಯಕರು ಈ ರೀತಿ ಮಾತನಾಡಿದ್ದರೆ ನಾನು ಖಂಡಿಸುತ್ತಿದ್ದೆ. ಆದರೆ, ಬಿಜೆಪಿ ನಾಯಕರು ತಮ್ಮ ಪಕ್ಷದ ನಾಯಕರ ರಕ್ಷಣೆಗೆ ನಿಂತಿದ್ದಾರೆ. ಮುನಿರತ್ನ ಪ್ರಕರಣದಲ್ಲಿ ಇದೇ ಆರ್.ಅಶೋಕ ಏನು ಹೇಳಿದ್ದರು? ಎಫ್ಎಸ್ಎಲ್ ವರದಿಯಲ್ಲಿ ಸತ್ಯಾಂಶ ಬಂದ ನಂತರ ಪಕ್ಷದಿಂದ ಹೊರಹಾಕುವುದಾಗಿ ಹೇಳಿದ್ದರು. ಈ ಪ್ರಕರಣದಲ್ಲಿ ಅವರು ಒಂದು ಭಾಗವಾಗಿದ್ದರೂ ಆತನನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದೇ ಅವರ ನಾಯಕತ್ವ ಎಂದರು.

ಸಿ.ಟಿ.ರವಿ ಅವರನ್ನು ರಾತ್ರಿಯಿಡೀ ಪೊಲೀಸರು ಸುತ್ತಾಡಿಸಿದರು ಎಂದು ನಿಮ್ಮ ವಿರುದ್ಧ ಬೆಟ್ಟು ಮಾಡಿ ತೋರುತ್ತಿದ್ದಾರೆ ಎಂದು ಪತ್ರಕರ್ತರು ಕೇಳಿದಾಗ, ಅವರ ಮನೆಯಲ್ಲಿ, ಪಕ್ಷದಲ್ಲಿ ಏನಾದರೂ ನಾನೇ ಕಾರಣ. ಹೊರಗಡೆ ಏನಾದರೂ ನಾನೇ ಕಾರಣ. ನನ್ನ ಸ್ಮರಿಸದಿದ್ದರೆ ಅವರಿಗೆ ನಿದ್ದೆ ಬರುವುದಿಲ್ಲ ಎಂದರು.

ನಿಂದನಾತ್ಮಕ ಮಾತು ಆಡಿಯಾಗಿದೆ. ಈಗ ಸರ್ಕಾರ ಹೇಗೆ ನ್ಯಾಯ ಕೊಡಿಸಲಿದೆ ಎಂಬ ಪ್ರಶ್ನೆಗೆ ಆತ್ಮಸಾಕ್ಷಿಯೇ ನ್ಯಾಯ ನೀಡುತ್ತದೆ ಎಂದರು.

ಇದಕ್ಕೆಲ್ಲ ಕೊನೆಯಾಡುತ್ತೇವೆ ಎಂಬ ಸಿ.ಟಿ. ರವಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇಂತಹ ಲೆಕ್ಕ ಚುಕ್ತಾಗಳನ್ನು ಬಹಳ ನೋಡಿದ್ದೇವೆ. ಬಹಳ ಸಂತೋಷ. ಅವರೊಬ್ಬರೇ ಲೆಕ್ಕ ಚುಕ್ತಾ ಮಾಡುತ್ತಾರಾ? ಎಲ್ಲರೂ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಲೆಕ್ಕ ಚುಕ್ತಾ ಮಾಡುತ್ತಾರೆ ಎಂದರು.

Leave a Reply