ಒಂದು ಕಾಲಕ್ಕೆ ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ, ಅವರಿಲ್ಲದೆ ಹೋದರೆ ಬಿಜೆಪಿಗೆ ಅಸ್ತಿತ್ವವೇ ಇಲ್ಲ ಎನ್ನುವಂತಿದ್ದ ಯಡಿಯೂರಪ್ಪನವರನ್ನು ಇವತ್ತು ಅದೇ ಬಿಜೆಪಿ ಹೀನಾಯವಾಗಿ ನಡೆಸಿಕೊಳ್ಳುತ್ತಿದೆ. ೮೮ ವರ್ಷ ವಯಸ್ಸಿನ ಮೆಟ್ರೋ ಮ್ಯಾನ್ ಇ ಶ್ರೀಧರನ್ ಅವರನ್ನು ಕೇರಳ ಚುನಾವಣೆ ಸಂದರ್ಭದಲ್ಲಿ ತನ್ನ ಸಿಎಂ ಅಭ್ಯರ್ಥಿಯಾಗಿ ಘೋಷಿಸುವ ಬಿಜೆಪಿ, ಕರ್ನಾಟಕದಲ್ಲಿ ಮಾತ್ರ ಕೇವಲ ೭೫ ವರ್ಷ ವಯಸ್ಸಾಯ್ತು ಅಂತ ನೆಪ ಹೇಳಿ ಯಡಿಯೂರಪ್ಪನವರನ್ನು ಸಿಎಂ ಕುರ್ಚಿಯಿಂದಲೇ ಕೆಳಗಿಳಿಸುತ್ತದೆ ಎಂದರೆ, ಇದಕ್ಕಿಂತ ದ್ವಂದ್ವ ಬೇಕೆ!

ಬಿ.ಎಲ್. ಸಂತೋಷ್ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ನಂತರ ಯಡಿಯೂರಪ್ಪನವರಿಗೆ ನೀಡಲಾಗುತ್ತಿರುವ ಕಿರುಕುಳ ಇನ್ನಿಲ್ಲದಂತೆ ಹೆಚ್ಚಾಗಿದೆ. ಅವರ ಕುಮ್ಮಕ್ಕಿನಿಂದಲೇ ಯತ್ನಾಳ್ ಥರದವರು ಕೂಡಾ ಯಡಿಯೂರಪ್ಪನವರನ್ನು ಬಾಯಿಗೆ ಬಂದಂತೆ ಟೀಕಿಸುತ್ತಿದ್ದಾರೆ. ಇದೀಗ, ಬಿಜೆಪಿಯ ಮತ್ತೋರ್ವ ಪ್ರಧಾನ ಕಾರ್ಯದರ್ಶಿಯಾದ, ಯಡಿಯೂರಪ್ಪನವರ ನೆರಳಿನಲ್ಲೇ ರಾಜಕೀಯ ಬದುಕು ಕಟ್ಟಿಕೊಂಡ ಸಿ.ಟಿ.ರವಿ ಯಡಿಯೂರಪ್ಪನವರನ್ನು ‘ಕಿಚನ್ ಕೋಣೆ’ಗೆ ಹೋಲಿಸುವ ಮೂಲಕ ಪಕ್ಷದೊಳಗೆ ಅವರು ತಲುಪಿರುವ ಹೀನಾಯ ಸ್ಥಿತಿಯನ್ನು ಜಗಜ್ಜಾಹೀರು ಮಾಡಿದ್ದಾರೆ.

ಇತ್ತೀಚೆಗೆ ವಿಜಯಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವಯಂ ಪ್ರೇರಣೆಯಿಂದ ಶಿಕಾರಿಪುರದಲ್ಲಿ ಬಿ.ವೈ. ವಿಜಯೇಂದ್ರರಿಗೆ ಟಿಕೆಟ್ ನೀಡುವ ವಿಚಾರವನ್ನು ಪ್ರಸ್ತಾಪಿಸಿದ ಸಿ.ಟಿ.ರವಿ “ಟಿಕೆಟ್ ಕೊಡುವ ವಿಚಾರದಲ್ಲಿ ಪಕ್ಷದ ಸಂಸದೀಯ ಮಂಡಳಿಯಲ್ಲಿ ತೀರ್ಮಾನವಾಗುತ್ತೆ. ಕಿಚನ್ ಕೋಣೆಯಲ್ಲಿ ತೀರ್ಮಾನವಾಗುವ ಪರಿಪಾಟ ನಮ್ಮ ಪಕ್ಷದಲ್ಲಿಲ್ಲ. ನಾಯಕರ ಮಕ್ಕಳೆಂದ ಕಾರಣಕ್ಕೆ ಅವರಿಗೆ ಟಿಕೆಟ್ ಸಿಕ್ಕಲ್ಲ ಎಂದು ಹೇಳಿದ್ದಾರೆ.
ನೆನಪಿರಬಹುದು, ಯಡಿಯೂರಪ್ಪನವರು ರಾಜಕೀಯ ನಿವೃತ್ತಿಯನ್ನು ಘೋಷಿಸುವಾಗಲೇ, ತಾನು ಪ್ರತಿನಿಧಿಸುವ ಶಿಕಾರಿಪುರ ಕ್ಷೇತ್ರವನ್ನು ಇನ್ನು ಮುಂದೆ ಮಗ ಬಿ.ವೈ. ವಿಜಯೇಂದ್ರ ಪ್ರತಿನಿಧಿಸಲಿದ್ದು, ಈ ಚುನಾವಣೆಯಲ್ಲಿ ಅವರೇ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆ ಹೇಳಿಕೆಯ ವಿರುದ್ಧ ಕೂಡಲೇ ಅವರ ಮೇಲೆ ಬಿ.ಎಲ್. ಸಂತೋಷ್ ಪಾಳೆಯದಿಂದ ಅಪಸ್ವರ ಕೇಳಿಬಂತು. ಸಿಎಂ ಕುರ್ಚಿಯನ್ನೇ ಬಿಟ್ಟುಕೊಡಬೇಕಾದಷ್ಟು ಹೈರಾಣಾಗಿರುವ ಯಡಿಯೂರಪ್ಪನವರು, ಬಿಎಲ್ ಟೀಮಿನ ಒತ್ತಡಕ್ಕೆ ಮಣಿದು ಮಾರನೇ ದಿನವೇ ’ನನ್ನ ಮಗ ನನ್ನ ಕ್ಷೇತ್ರದಿಂದ ಸ್ಪರ್ಧಿಸಬೇಕೆನ್ನುವುದು ನನ್ನ ಆಸೆ ಮಾತ್ರ. ಅದು ಪಕ್ಷಕ್ಕೆ ಬಿಟ್ಟದ್ದು’ ಎಂದು ತುಂಬಾ ನೊಂದ ದನಿಯಲ್ಲಿ ಸ್ಪಷ್ಟೀಕರಣ ನೀಡಿದ್ದರು.
ಇದೀಗ ಎಲೆಕ್ಷನ್ ಸನಿಹವಾಗುತ್ತಿರುವ ಸಮಯದಲ್ಲಿ, ಶಿಕಾರಿಪುರದ ಟಿಕೆಟ್ ವಿಚಾರವನ್ನು ಮತ್ತೆ ಎಳೆದುತಂದಿರುವ ಸಿಟಿ ರವಿ, ’ಶಿಕಾರಿಪುರದಿಂದ ನನ್ನ ಮಗನೇ ಸ್ಪರ್ಧಿಸುತ್ತಾನೆ’ ಎಂದು ಘೋಷಿಸಿದ್ದ ಯಡಿಯೂರಪ್ಪನವರ ತೀರ್ಮಾನವನ್ನು ‘ಕಿಚನ್‌ನಲ್ಲಿ ತೆಗೆದುಕೊಂಡ ತೀರ್ಮಾನ’ ಎನ್ನುವರ್ಥದಲ್ಲಿ ಲೇವಡಿ ಮಾಡಿದ್ದಾರೆ.
ವಿಚಿತ್ರದ ಸಂಗತಿಯೆಂದರೆ, ಅವತ್ತಿನ ಪತ್ರಿಕಾಗೋಷ್ಠಿಯಲ್ಲಿ ನೆರೆದಿದ್ದ ಪತ್ರಕರ್ತರ‍್ಯಾರೂ ಬಿ.ವೈ. ವಿಜಯೇಂದ್ರ ಟಿಕೆಟ್ ವಿಚಾರವಾಗಿ ಪ್ರಶ್ನೆಯನ್ನೇ ಕೇಳಿರಲಿಲ್ಲ! ತಲೆಗೆ ಹಳದಿ ಪೇಟ ಸುತ್ತಿಕೊಂಡು ಠಾಕುಠೀಕಾಗಿ ಕೂತಿದ್ದ ಸಿಟಿ ರವಿಯವರು ತಾನೇ ಸ್ವಯಂಪ್ರೇರಿತನಾಗಿ, ವಿಜಯೇಂದ್ರ ಹೆಸರನ್ನು ಪ್ರಸ್ತಾಪಿಸಿ, “ನೀವೆಲ್ಲ ವಿಜಯೇಂದ್ರಗೆ ಟಿಕೆಟ್ ನೀಡುವ ಬಗ್ಗೆ ಕೇಳುತ್ತಿದ್ದೀರಿ” ಎಂದು ಪೀಠಿಕೆ ಹಾಕಲು ಹೋದಾಗ, ಪತ್ರಕರ್ತರೆಲ್ಲ “ನಾವ್ಯಾರು ವಿಜಯೇಂದ್ರ ಕುರಿತು ಪ್ರಶ್ನೆಯನ್ನೆ ಕೇಳಿಲ್ಲವಲ್ಲ ಎಂದು ಮರುತ್ತರ ನೀಡಿದ್ದರು. ಆಗ ತಡವರಿಸುವ ಸಿಟಿ ರವಿಯವರು, “ಹೌದು..ಆ… ಇಲ್ಲಿ ಕೇಳದೆ ಇರಬಹುದು, ಬೇರೆ ಕಡೆ ಈ ಬಗ್ಗೆ ಚರ್ಚೆಯಾಗುತ್ತಿದೆಯಲ್ಲವಾ…” ಎಂದು ಉದ್ದೇಶಪೂರ್ವಕವಾಗಿ ಯಡಿಯೂರಪ್ಪನವರನ್ನು ಲೇವಡಿ ಮಾಡಲು ಸಂದರ್ಭವನ್ನು ಬಳಸಿಕೊಂಡಿದ್ದಾರೆ.

ದುರಂತವೇನೆಂದರೆ, ಸಿಟಿ ರವಿಯವರು ಯಡಿಯೂರಪ್ಪನವರ ಬಗ್ಗೆ ಇಷ್ಟೆಲ್ಲ ಹಗುರವಾಗಿ ಮಾತನಾಡುತ್ತಿರುವಾಗ, ತಾನೂ ತಲೆಗೆ ಹಳದಿ ಪೇಟ ಸುತ್ತಿಕೊಂಡು ಪಕ್ಕದಲ್ಲೇ ಕುಳಿತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಮೌನ ಸಮ್ಮತಿಯ ಮೂಲಕ ಯಡಿಯೂರಪ್ಪನವರ ಅವಮಾನಕ್ಕೆ ಸಾಥ್ ನೀಡಿದ್ದರು! ಮುಂದುವರೆದು, “ಈಗಾಗಲೇ ಲಿಂಗಾಯತರು ಬಿಜೆಪಿಯಿಂದ ವಿಮುಖರಾಗಿರುವುದರಿಂದ, ಇನ್ಮುಂದೆ ಪಕ್ಷದೊಳಗೆ ಲಿಂಗಾಯತ ಲೀಡರು ಅಂತ ಯಾರಿಗೂ ಪ್ರಾಮುಖ್ಯತೆ ಕೊಡುವುದು ಬೇಕಾಗಿಲ್ಲ ಎಂದು ಸಿಟಿ ರವಿಯವರು ಅದೇ ಸಂದರ್ಭದಲ್ಲಿ ಹೇಳಿದ್ದು ಕೂಡಾ ವರದಿಯಾಗಿದೆ.
ಒಟ್ಟಿನಲ್ಲಿ, ಬಿಜೆಪಿ ಪಕ್ಷ ಯಡಿಯೂರಪ್ಪನವರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿರುವುದು ಮಾತ್ರ ಇದರಿಂದ ಸಾಬೀತಾಗಿದೆ. ಬಿಎಲ್ ಸಂತೋಷ್ ನೇತೃತ್ವದಲ್ಲೆ ಸಿಟಿ ರವಿ, ಯತ್ನಾಳ್ ತರದವರು ಇಷ್ಟೆಲ್ಲ ಧೈರ್ಯ ತೋರುತ್ತಿದ್ದಾರೆ ಎಂಬ ಮಾತುಗಳು ಬಿಜೆಪಿ ಪಾಳೆಯದಲ್ಲಿ ಜೋರಾಗಿ ಕೇಳಿಬರುತ್ತಿವೆ.
– ಮಾಲ್ಗುಡಿ ಎಕ್ಸ್ ಪ್ರೆಸ್ ನ್ಯೂಸ್ ಡೆಸ್ಕ್




