ಭಕ್ತಿ ಪರಂಪರೆ ಮತ್ತು ಡಾ.ರಾಜಕುಮಾರ್

2 years ago

“ಸರ್, ನೀವು ಅಣ್ಣಾವ್ರ ಅಭಿಮಾನಿಯಾಗಿ ಹೀಗೆಲ್ಲ ಬರೆಯಬೇಡಿ” ಅಂತ ಬಹಳಷ್ಟು ಜನ ನನಗೆ ಕಾಲ್ ಮಾಡಿ ಹೇಳುತ್ತಾರೆ, ಮೆಸೇಜ್ ಮಾಡುತ್ತಾರೆ, ಇನ್ನೊಂದಷ್ಟು ಜನ ಹೀನಾಮಾನವಾಗಿ ಬೈದು ಕಾಮೆಂಟ್ ಮಾಡುವುದೂ ಉಂಟು!

ಹೌದು ನಾನೊಬ್ಬ ನಾಸ್ತಿಕ. ನನಗೆ ದೇವರು-ಧರ್ಮಗಳಲ್ಲಿ ನಂಬಿಕೆ ಇಲ್ಲ. ಆ ಹೆಸರಿನಲ್ಲಿ ಮುಗ್ಧ ಜನರನ್ನು ನಂಬಿಸಿ, ಆ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ವಂಚಿಸುವವರ ಬಗ್ಗೆ ನನಗೆ ಸಿಟ್ಟಿದೆ, ಆ ಮೋಸವನ್ನು ಬಿಡಿಸಿ ಹೇಳಿದರೂ ಅದನ್ನು ಅರ್ಥಮಾಡಿಕೊಳ್ಳದೇ ನಮ್ಮಂಥವರನ್ನೇ ಬೈಯುವ ಆ ಶೋಷಿತ ಮುಗ್ಧರ ಬಗ್ಗೆ ಅನುಕಂಪವೂ ಇದೆ!!

ಭಕ್ತಿ ಅನ್ನುವುದು ತಪ್ಪೂ ಅಲ್ಲ, ಅಪರಾಧವೂ ಅಲ್ಲ; ನಿಜ ಆದರೆ ಆ ಭಕ್ತಿ ಅನ್ನುವುದು ಬರೀ ಭಕ್ತಿಯಲ್ಲ. ಅದು ಒಂದು ವರ್ಗದ ಜನರ ಅಸ್ತ್ರ. ಅದೂ ಎಲ್ಲಾ ಕಾಲದಲ್ಲು ಇದ್ದದ್ದೆ, ಮನುಷ್ಯ ವಿದ್ಯಾವಂತನಾದಂತೆ ಅವನಿಗೆ ತಿಳಿವಳಿಕೆ ಬರುತ್ತದೆ ಮೌಢ್ಯ ನಿಧಾನವಾಗಿ ತೊಲಗುತ್ತದೆ ಅನ್ನುವ ಆಶಾಭಾವನೆ ಇತ್ತು. ಆದರೆ ಇವತ್ತಿನ ಸಂದರ್ಭಗಳನ್ನು ನೋಡಿದರೆ ವಿದ್ಯಾವಂತರೆ ಅತೀ ಹೆಚ್ಚು ಮೌಢ್ಯತೆಗೆ ಒಳಗಾಗುತ್ತಿರುವುದು ಗೋಚರಿಸುತ್ತಿದೆ. ಆದ್ದರಿಂದ ದೇಶದ ಭವಿಷ್ಯದ ಬಗ್ಗೆ ಆತಂಕವಾಗುತ್ತದೆ. ದೇವರು-ಧರ್ಮ ಅನ್ನುವುದು ಬದುಕಿನ ಒಂದು ಭಾಗವಾದರೆ ತೊಂದರೆ ಇಲ್ಲ, ಅದೇ ಬದುಕಾಗಿಬಿಟ್ಟರೆ? ಹಲವಾರು ಮುಸ್ಲಿಂ ರಾಷ್ಟ್ರಗಳು ಆ ಕಾರಣಕ್ಕೆ ಹಾಳಾಗಿಬಿಟ್ಟಿವೆ. ನಮ್ಮ ದೇಶದ ಸ್ಥಿತಿಯೂ ಆ ಕಡೆಯೇ ಚಲಿಸುತ್ತಿರುವಂತೆ ಸೂಚನೆಗಳು ಸಿಗುತ್ತಿವೆ. ಹಾಗಾಗಬಾರದು ಅನ್ನುವುದು ನನ್ನಂತವರ ಆತಂಕ.

ಭಕ್ತಿ-ಧರ್ಮ ಹೇಗಿರಬೇಕು ಅಂದರೆ ಅದು “ಬೇಡರ ಕಣ್ಣಪ್ಪ” ನಂತಿರಬೇಕು. ಅರ್ಥಾತ್ ಡಾ.ರಾಜಕುಮಾರ್ ಅವರಂತಿರಬೇಕು. ಅವರು “ಭಕ್ತ ಚೇತ” ನ ಭಕ್ತಿಯನ್ನೂ ಅಭಿವ್ಯಕ್ತಿಸುತ್ತಾರೆ. ಕುಂಬಾರ, ಕಬೀರ, ಕನಕ,ಪುರಂದರ, ಕೈವಾರ ತಾತಯ್ಯ ಹಾಗೆಯೇ ರಾಘವೇಂದ್ರನ ಪರಂಪರೆಯನ್ನೂ ಅಭಿವ್ಯಕ್ತಿಸುತ್ತಾರೆ. ಇವೆಲ್ಲ ಭಕ್ತಿಯ ಬೇರೆ ಬೇರೆ ಮಜಲುಗಳು. ಈ ಭಕ್ತಿಗಳಲ್ಲಿ ಸೇಡಿಲ್ಲ, ಅಸಹನೆ ಇಲ್ಲ, ಇನ್ನೊಂದು ಧರ್ಮದ ಬಗ್ಗೆ ದ್ವೇಷವಿಲ್ಲ. ಎಲ್ಲಾ ದೇವರು-ಧರ್ಮಗಳನ್ನು ಸಮಾನವಾಗಿ ಕಾಣುವ, ಎಲ್ಲವನ್ನೂ ಗೌರವಿಸುವ ಭಕ್ತಿ ಪರಂಪರೆ ಡಾ.ರಾಜಕುಮಾರ್ ಅವರದಾಗಿತ್ತು.

ಅವರು “ಗುರಿ” ಚಿತ್ರದಲ್ಲಿ “ಅಲ್ಲಾ ಅಲ್ಲಾ ನೀನೇ ಎಲ್ಲಾ, ನಿನ್ನನು ಬಿಟ್ಟರೆ ಗತಿ ಯಾರಿಲ್ಲ, ನಿನ್ನದೆ ಜಗವಿಲ್ಲ” ಅನ್ನುವ ಹಾಡನ್ನೂ ಹಾಡಿದ್ದಾರೆ. ನೀವೇ ಊಹಿಸಿ ಇವತ್ತಿನ ಸಂದರ್ಭವಾಗಿದ್ದರೆ ಆ ಹಾಡಿಗೆ “ಭಕ್ತ”ರ ಪ್ರತಿಕ್ರಿಯೆ ಹೇಗಿರುತ್ತಿತ್ತು? ಯಾವುದು ನಿಜವಾದ ಭಾರತ? ಎಲ್ಲಾ ಜಾತಿ, ಧರ್ಮ, ದೇವರೂ ಒಂದೇ ಅನ್ನುವ ವಿಶಾಲ ಹೃದಯಿ ಭಾರತ ಇಂದು ಏನಾಗಿದೆ? ರಾಜಕುಮಾರ್ ಭಕ್ತಿ ಎಂಥದ್ದು ಇವತ್ತಿನ “ಭಕ್ತ”ರ “ಭಕ್ತಿ” ಎಂತದ್ದು? ನಮ್ಮಂಥವರ ವಿರೋಧ ಬಸವಣ್ಣ, ಗಾಂಧಿ, ರಾಜಕುಮಾರ್ ಅವರ ಭಕ್ತಿ ಪರಂಪರೆಯ ಮೇಲಲ್ಲ. ಇವತ್ತಿನ ದ್ವೇಷಪೂರಿತ ಭಕ್ತಿಯ ಮೇಲೆ.

ಇನ್ನೊಂದು ವಿಷಯ ಇತ್ತೀಚೆಗೆ ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಅಂತ ರಾಜಕೀಯ ಕಾರಣಕ್ಕಾಗಿ ಘೋಷಿಸಿತು. ನಿಜವಾಗಿಯೂ ಬಸವಣ್ಣ “ವಿಶ್ವಗುರು” ಅನ್ನುವ ಸ್ಥಾನಕ್ಕೆ ಯೋಗ್ಯರು. ಕರ್ನಾಟಕದ ವೈಚಾರಿಕ ನಾಯಕರು ಕುವೆಂಪು. ಕರ್ನಾಟಕದ ಸಾಂಸ್ಕೃತಿಕ ನಾಯಕರು ಡಾ.ರಾಜಕುಮಾರ್ ಅಂತಾಗಬೇಕು ಅನ್ನುವುದು ನನ್ನ ಅಭಿಪ್ರಾಯ! ನನ್ನ ಹಿರಿಯ ಗೆಳೆಯರೂ, ವಿದ್ವಾಂಸರೂ ಆದ ಎಲ್.ಎನ್.ಮುಕುಂದರಾಜ್ ಅವರಿಗೂ ನನಗೂ ಯಾವಾಗಲೂ ಒಂದು ವಾಗ್ವಾದ ನಡೆಯುತ್ತಲೇ ಇರುತ್ತದೆ. ಅವರ ಪ್ರಕಾರ ರಾಜಕುಮಾರ್ ಅವರು ಅಯ್ಯಪ್ಪ ಸ್ವಾಮಿ ಮತ್ತು ರಾಘವೇಂದ್ರ ಸ್ವಾಮಿಗಳ ಬಗ್ಗೆ ಹಾಡೀ ಹಾಡೀ ಪ್ರಚಾರಕೊಟ್ಟು ಕರ್ನಾಟಕದ ಶೂದ್ರ-ದಲಿತ ಸಮುದಾಯಗಳನ್ನು ಮೌಢ್ಯಕ್ಕೆ ದೂಡಿದರು. ಕುವೆಂಪು-ಲಂಕೇಶ್ ಕಟ್ಟಲು ಯತ್ನಿಸುತ್ತಿದ್ದ ವೈಚಾರಿಕ ಕರ್ನಾಟಕಕ್ಕೆ ಅಡ್ಡಗಾಲಾದರು ಅನ್ನುವುದು ಅವರ ವಾದ. ಆ ಪ್ರಕಾರದಲ್ಲಿ ತೂಗಿದರೆ ಕನಕದಾಸರನ್ನೂ ಸಹ ಅದೇ ಗುಂಪಿಗೆ ಸೇರಿಸಬೇಕಾಗುತ್ತದೆ. ಕುಲ ಕುಲ ಕುಲವೆಂದು ಹೊಡೆದಾಡದಿರಿ ಅನ್ನುವ ವೈಚಾರಿಕ ಮಾತುಗಳನ್ನಾಡಿದ ಅದೇ ದಾಸರು ಶ್ರೀಕೃಷ್ಣನ ಬಗ್ಗೆ ಹಲವಾರು ಗೀತೆಗಳನ್ನು ರಚಿಸಿ ಹಾಡಿದ್ದಾರಲ್ಲವೆ? ಆಗ ಭಕ್ತಿ ಅನ್ನುವುದು ಜನರನ್ನು ಸರಿದಾರಿಗೆ ತರುವ ಒಂದು ಮಾರ್ಗವಾಗಿತ್ತು ಆದ್ದರಿಂದ ಅದು ಸರಿಯಾಗಿತ್ತು ಈಗ ಅದೇ ಭಕ್ತಿ ಜನರನ್ನು ಒಡೆಯುವ ಅಸ್ತ್ರವಾಗಿದೆ. ಆದ್ದರಿಂದ ಹಲವರ ವಿರೋಧಕ್ಕೆ ಕಾರಣವಾಗಿದೆ ಅಷ್ಟೇ.

ಎಲ್ಲಾ ದೇವರು ಒಂದೇ ಅನ್ನುವ ನಿಜವಾದ ಭಕ್ತರಿಂದಾಗಲೀ, ದೇವರು ಅನ್ನವುದೇ ಸುಳ್ಳು ಅನ್ನುವ ನಾಸ್ತಿಕರಿಂದಾಗಲೀ ಈ ಜಗತ್ತಿಗೆ ಏನೂ ತೊಂದರೆ ಇಲ್ಲ. ತೊಂದರೆ ಇರುವುದು “ನನ್ನ ದೇವರು ಮಾತ್ರ ಸತ್ಯ, ನಿನ್ನ ದೇವರು ಸುಳ್ಳು. ನನ್ನ ಧರ್ಮ ಶ್ರೇಷ್ಠ, ನಿನ್ನ ಧರ್ಮ ಕನಿಷ್ಠ ಅನ್ನುವ ಅಂಧ “ಭಕ್ತ”ರಿಂದ ಅನ್ನುವುದು ಈ ಬರವಣಿಗೆಯ ಸಾರಾಂಶ…

  • ಪ್ರಕಾಶರಾಜ್ ಮೇಹು, ಸಾಹಿತಿ, ಚಲನಚಿತ್ರ ನಿರ್ದೇಶಕ

Leave a Reply