ನಾನು ನಟ ದುನಿಯಾ ವಿಜಯ್’ರನ್ನು unconditionally ಇಷ್ಟಪಡುವೆ

2 years ago

ಮಣಭಾರ ಅನ್ನಿಸುವ ಬೌದ್ಧಿಕ ತೂಕದ ಪದಗಳನ್ನು ಹೆಚ್ಚು ಬಳಸಲಾರೆ. ಕೆಲವರನ್ನು unconditionally ಇಷ್ಟಪಡಬೇಕು, ಪ್ರೀತಿಸಬೇಕು ಅನ್ನಿಸುತ್ತದೆ. ಕೆಲವರ ಶಕ್ತಿ, ದೌರ್ಬಲ್ಯ, ಅತಿ, ಮಿತಿ… ಎಲ್ಲವುಗಳನ್ನು ಒಳಗೊಂಡೋ ಸಹಿಸಿಕೊಂಡೋ ಇಷ್ಟಪಡಬೇಕು ಅನ್ನಿಸುತ್ತದೆ. ಅಂಥವರಲ್ಲಿ ಈ ದುನಿಯಾ ವಿಜಯ್ ಒಬ್ಬರು. ತಮ್ಮ ಖಾಸಗಿ ಬದುಕಿನ ಹತ್ತಾರು ಅತಿರೇಕಗಳ ನಡುವೆಯೂ ನನಗೆ ನಟ ವಿಜಯ್ ಸೇಡುಕೇಡಿಲ್ಲದ ಅಪ್ಪಟ ಮನುಷ್ಯಪ್ರೀತಿಯ ಮನುಷ್ಯ ಅನ್ನಿಸುತ್ತಾರೆ.

ಒಮ್ಮೆ ಶೂಟಿಂಗ್ ಕಾರಣಕ್ಕೆ  ಮೈಸೂರಿನ ಸೆಂಟ್ರಲ್ ಜೈಲಿಗೆ ಹೋಗಿದ್ದಾಗ ಅಲ್ಲಿ ಜುಲ್ಮಾನೆಯ ದಂಡ ಕಟ್ಟಲಾಗದೆ 62 ಜೈಲುಖೈದಿಗಳು ಅವಧಿ ಮೀರಿ ಜೈಲಿನಲ್ಲೇ ಇರುವ ವಿಚಾರ ನಟ ವಿಜಯ್ ಅವರಿಗೆ ಜೈಲರೊಬ್ಬರಿಂದ ಹೇಗೋ ತಿಳಿಯಿತು. ತಕ್ಷಣವೇ ಜುಲ್ಮಾನೆಯ ಒಟ್ಟು ಹಣ ಪಾವತಿಸಿ 62 ಮಂದಿ ಖೈದಿಗಳ ಬಿಡುಗಡೆಯ ಹೊಸಬದುಕಿಗೆ ದಾರಿ ತೋರಿದವರು ಇದೇ ವಿಜಯ್. ವಿಚಿತ್ರವೆಂದರೆ, ಈ ಸಂಗತಿ ಬೆಳಕಿಗೆ ಬಂದದ್ದು ಕೂಡ ಇದೇ ವಿಜಯ್ ಕ್ಷುಲ್ಲಕ ಘಟನೆಯೊಂದರಲ್ಲಿ ಸಿಲುಕಿ ಆರೋಪಿಯಾಗಿ ಜೈಲು ಸೇರಿದಾಗಲೇ. ಹಾಗೇ ಬಿಡುಗಡೆಯ ಭಾಗ್ಯ ಕಂಡ ಒಬ್ಬ ಖೈದಿ ನಟ ವಿಜಯ್ ಜೈಲು ಸೇರಿದ ಸುದ್ದಿ ತಿಳಿದು ನೊಂದು ದುಃಖಿತರಾಗಿ ಅನಿವಾರ್ಯವಾಗಿ ಟಿವಿ ಕ್ಯಾಮೆರಾಗಳ ಮುಂದೆ ಬಂದು ತನ್ನ ನಿಜಕತೆ ಹೇಳಿಕೊಂಡ ಮೇಲೆಯೇ ಎಲ್ಲರಿಗೂ ವಿಜಯ್ ಬದುಕಿನ ಅಂತಃಕರಣದ ಆ ಮುಖ ತಿಳಿದದ್ದು.

ವಿಜಯ್’ಗೆ ದುನಿಯಾ ಅನ್ನುವ ಖ್ಯಾತಿ ತಂದುಕೊಟ್ಟ ‘ದುನಿಯಾ’ ಮತ್ತು ‘ಸ್ಲಮ್ ಬಾಲಾ’ ಎಂಬೆರಡು ಸಿನಿಮಾ ಬಿಟ್ಟು ನನಗೆ ಅವರ ಮತ್ತೊಂದು ಸಿನಿಮಾ ನೋಡಲು ಇನ್ನೂ ಆಗಿಲ್ಲ.

ತೀರಾ ಮೊನ್ನೆ ಮೊನ್ನೆ ‘ಸೋದರಿ ಸೌಜನ್ಯಳಿಗೆ ನ್ಯಾಯ ಸಿಗುವತನಕ ಧರ್ಮಸ್ಥಳಕ್ಕೆ ಕಾಲಿಡಲಾರೆ’ ಅಂದದ್ದು ಇದೇ ವಿಜಯ್. ಅದೂ ನಾನು ಕಟುವಾಗಿ ಟೀಕಿಸುವ ಕನ್ನಡ ಚಿತ್ರರಂಗದಿಂದ ಬಂದ ಒಂದು ದಿಟ್ಟದನಿ. ಇಂತಹ ಹತ್ತಾರು ಕಾರಣಗಳಿಗಾಗಿ ನಾನು ನಟ ದುನಿಯಾ ವಿಜಯ್’ರನ್ನು unconditionally ಇಷ್ಟಪಡುವೆ.

– ಕೆ.ಎಲ್.ಚಂದ್ರಶೇಖರ್ ಐಜೂರು, ಅಧ್ಯಾಪಕರು

Leave a Reply