ಶೀಘ್ರದಲ್ಲೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಲಕ್ಷ್ಮೀ ಹೆಬ್ಬಾಳ್ಕರ್‌

9 months ago

ಬೆಳಗಾವಿ: ಸದೃಢ ಸಮಾಜ, ದೇಶದ ಭವಿಷ್ಯವನ್ನು ಉಜ್ವಲಗೊಳಿಸುವ ಸಲುವಾಗಿ ಪೋಷಣ್‌ ಅಭಿಯಾನ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಮಕ್ಕಳಿಗೆ ಪೌಷ್ಠಿಕಾಂಶ ನೀಡುವ ಮೂಲಕ ದೇಶದ ಭವಿಷ್ಯಕ್ಕೆ ಭದ್ರ ಬುನಾದಿ ಹಾಕೋಣ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ನಗರ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೋಷಣ್ ಮಾಸಾಚರಣೆ- 2025 ರ ಅಂಗವಾಡಿ ಅನ್ನಪ್ರಾಶನ, ಅಕ್ಷರ ಅಭ್ಯಾಸ, ಗರ್ಭಿಣಿಯರಿಗೆ ಸೀಮಂತ, ಮಕ್ಕಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ ಮತ್ತು ವಿಕಲಚೇತನ ಫಲಾನುಭವಿಗಳಿಗೆ ಯಂತ್ರಚಾಲಿತ ವಾಹನಗಳ ವಿತರಣೆ ಮೊದಲಾದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಪೋಷಣ್‌ ಅಭಿಯಾನವನ್ನು ಈ ತಿಂಗಳು ಪೂರ್ತಿ ಪ್ರತಿ ಜಿಲ್ಲೆಯಲ್ಲೂ ಮಾಡಲಾಗುವುದು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಗೃಹಲಕ್ಷ್ಮೀ ಯೋಜನೆಯನ್ನು ರಾಜ್ಯಾದ್ಯಂತ ನೀಡಲಾಗುತ್ತಿದೆ. ಇಂಥ ಯೋಜನೆಯನ್ನು ಜಾರಿಗೆ ತರುವ ಅದೃಷ್ಟ ನನಗೆ ಒಲಿಯಿತು. ವಾರ್ಷಿಕ 30 ಸಾವಿರ ಕೋಟಿ ರೂಪಾಯಿಯ ಯೋಜನೆಯಾದ ಗೃಹಲಕ್ಷ್ಮೀ ಯೋಜನೆ ಯಶಸ್ವಿಯಾಗಲು ಅಂಗನವಾಡಿ ಕಾರ್ಯಕರ್ತರೇ ಕಾರಣ. ಸ್ವತಃ ಮುಖ್ಯಮಂತ್ರಿಗಳೇ ಎಷ್ಟೋ ಬಾರಿ ನನ್ನ ಬಳಿ ಇದನ್ನು ಹೇಳಿದ್ದಾರೆ ಎಂದರು.

ನಾನು ಇಲಾಖೆಯ ಸಚಿವೆಯಾಗಿ ಬರುವುದಕ್ಕೂ ಮುನ್ನ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಆಯ್ಕೆ ವೇಳೆ ವಿಧವೆಯರಿಗೆ ಕೇವಲ ಶೇಕಡ 5 ರಷ್ಟು ಮೀಸಲಾತಿ ನೀಡಲಾಗುತ್ತಿತ್ತು. ಇದೀಗ ವಿಧವೆಯರಿಗೆ ಯಾವುದೇ ನಿರ್ಬಂಧ ಇಲ್ಲದೇ ನೇರ ನೇಮಕಾತಿಗೆ ಅವಕಾಶ ನೀಡಲಾಗಿದೆ. ನೊಂದ ಮಹಿಳೆಯರಿಗೆ ಅನುಕೂಲ ಮಾಡುವ ಸಲುವಾಗಿ ಈ ನಿರ್ಧಾರ ಕೈಗೊಂಡಿರುವೆ ಎಂದರು.

ಇಲಾಖೆಯ ನೌಕರರ ವೈಯಕ್ತಿಕ ಹಾಗೂ ಸಂಬಂಧಿಕರ ಕೆಲಸ ಕಾರ್ಯಗಳನ್ನು ನಾನು ಮಾಡಿಕೊಡುವೆ. ಅದು ಗ್ರಾಮ ಪಂಚಾಯಿತಿಯಿಂದ ಹಿಡಿದು ಜಿಲ್ಲಾಧಿಕಾರಿಗಳ ಕಚೇರಿಯೇ ಆಗಿರಲಿ. ಅದನ್ನು ಮಾಡಿಕೊಡುವ ಜವಾಬ್ದಾರಿ ನನ್ನದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಂದರೆ ನಂಬರ್‌ 12, 14ನೇ ಸ್ಥಾನ ಎನ್ನುವ ಮಾತಿತ್ತು. ನಾನು ನಮ್ಮ ಇಲಾಖೆಯನ್ನು ಉತ್ತಮ ಸ್ಥಾನಕ್ಕೇರಿಸುವ ಕೆಲಸ ಮಾಡುತ್ತಿದ್ದೇನೆ. ಈಗ ಇಲಾಖೆಗೆ ಎಲ್ಲಿಲ್ಲದ ಮಹತ್ವ ಬಂದಿದೆ ಎಂದರು.

ಇಲಾಖೆಯ ನೌಕರರ ಮೇಲೆ ದೌರ್ಜನ್ಯವಾದರೆ ನನಗೆ ನೇರವಾಗಿ ಫೋನ್‌ ಮಾಡಿ, ದೂರು ನೀಡಬಹುದು. ದೌರ್ಜನ್ಯ ಎಂಬುದನ್ನು ಇಲಾಖೆಯಿಂದ ಬೇರು ಸಮೇತ ಕಿತ್ತು ಹಾಕೋಣ. ವೃತ್ತಿ ಹಾಗೂ ವೈಯಕ್ತಿಕ ಕಷ್ಟದಲ್ಲೂ ನಿಮ್ಮ ಜೊತೆ ಇರುತ್ತೇನೆ ಎಂದ ಸಚಿವರು, ಇದರ ಜೊತೆಗೆ ಬಾಲ್ಯ ವಿವಾಹ ಮುಕ್ತ ಗ್ರಾಮ ಪಂಚಾಯಿತಿಗೆ ನಮ್ಮ ಇಲಾಖೆಯಿಂದ 25 ಸಾವಿರ ರೂಪಾಯಿ ಬಹುಮಾನವನ್ನು ಘೋಷಿಸಲಾಗಿದೆ ಎಂದರು.

ಇಲಾಖೆಯಲ್ಲಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನೌಕರರಿಗೆ ಬಡ್ತಿಯನ್ನು ನೀಡಲಾಗಿದೆ. ಮೇಲ್ವಿಚಾರಕರ ಹುದ್ದೆಯಿಂದ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಎಸಿಡಿಪಿಒ) ಹುದ್ದೆಗೆ ಬಡ್ತಿ ನೀಡಲಾಗುತ್ತಿದೆ. ಈ ಸಂಬಂಧ ಈಗಾಗಲೇ ಇಲಾಖೆಯ ನಿರ್ದೇಶಕರು, ಕಾರ್ಯದರ್ಶಿಗಳಿಗೆ ಸೂಚನೆಯನ್ನು ನೀಡಿದ್ದು, ಅದಷ್ಟು ಬೇಗ ಇದರ ಪ್ರಕ್ರಿಯೆ ನಡೆಯಲಿದೆ ಎಂದರು.‌

ಜೊತೆಗೆ ಪದವಿ ಪಡೆದಿರುವ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಬೇರೆ ಬೇರೆ ಹಂತದಲ್ಲಿರುವ ಸಿಬ್ಬಂದಿಗೆ ಒಂದು ಬಾರಿ ಬಡ್ತಿ ನಿಯಮದಡಿ ಮೇಲ್ವಿಚಾರಕ ಹುದ್ದೆಗೆ ಬಡ್ತಿ ನೀಡಲಾಗುವುದು. ಇದಕ್ಕಾಗಿ 400 ಜನರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಮುಂದಿನ ತಿಂಗಳು ನಡೆಯಲಿರುವ ನನ್ನ ಮೊಮ್ಮಗನ ನಾಮಕಾರಣಕ್ಕೆ ಎಲ್ಲರೂ ತಪ್ಪದೇ ಬರಬೇಕು ಎಂದು ಸಚಿವರು ಸಮಾರಂಭದಲ್ಲಿ ಹಾಜರಿದ್ದವರಿಗೆಲ್ಲ ಇದೇ ವೇಳೆ ಆಹ್ವಾನ ನೀಡಿದರು.

ನಿಮ್ಮ ಸಹೋದರಿಯಾಗಿ ನನ್ನ ಮೊಮ್ಮಗನ ನಾಮಕರಣಕ್ಕೆ ಎಲ್ಲರನ್ನೂ ಆಹ್ವಾನಿಸುತ್ತೇನೆ, ಎಲ್ಲರೂ ತಪ್ಪದೇ ಆಗಮಿಸಬೇಕು ಎಂದು ಕೋರಿದರು.

ಸಮಾರಂಭಕ್ಕೆ ಆಗಮಿಸಿದ ಸಚಿವರನ್ನು ಆಯೋಜಕರು ಮೆರವಣಿಗೆ ಮೂಲಕ ವೇದಿಕೆಗೆ ಕರೆತಂದರು. ಜನರಿಂದ ತುಂಬಿ ತುಳುಕುತ್ತಿದ್ದ ಗಾಂಧಿ ಭವನ ಸಭಾಂಗಣಕ್ಕೆ ಸಚಿವರ ಆಗಮಿಸಿದ ಬೆನ್ನಲ್ಲೇ ಹರ್ಷೋದ್ಘಾರ ಮುಗಿಲುಮುಟ್ಟಿತು. ಇಡೀ ಕಾರ್ಯಕ್ರಮ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ದೊಡ್ಡ ಹಬ್ಬದ ರೀತಿಯಲ್ಲಿ ನಡೆಯಿತು.

ವೇದಿಕೆ ಕಾರ್ಯಕ್ರಮದ ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅನ್ನಪ್ರಾಶನ, ಅಕ್ಷರಾಭ್ಯಾಸ, ಸೀಮಂತ, ಮಕ್ಕಳ ಫ್ಯಾಷನ್‌ ಶೋ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು. ಜೊತೆಗೆ ಇಲಾಖೆಯ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರೊಬೆಷನರಿ ಐಎಎಸ್‌ ಅಧಿಕಾರಿ ಅಭಿನವ್‌ ಜೈನ್‌, ಇಲಾಖೆಯ ಉಪ ನಿರ್ದೇಶಕ ಚೇತನಕುಮಾರ್ ಎಂ.ಎನ್, ಇಲಾಖೆಯ ನಿರೂಪಣಾಕಾಧಿಕಾರಿ ಅನಿಲ್‌ ಕುಮಾರ ಹೆಗಡೆ, ಡಿಸಿಪಿಒ ಪರ್ವಿನ್ ಕೌಸರ್, ಮಹಿಳಾ ಕಲ್ಯಾಣ ಅಧಿಕಾರಿ ಕಾಂಚನಾ ಅಮರೆ, ನಾಮದೇವ ಬಿಲ್ಕರ್, ಮಾಜಿ ತಾಲೂಕಾ ಪಂಚಾಯತ್ ಅಧ್ಯಕ್ಷ ಶಂಕರಗೌಡ ಪಾಟೀಲ,  ಎಲ್ಲ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಬಾಲವಿಕಾಸ ಸಲಹಾ ಸದಸ್ಯರು, ಅಂಗವಾಡಿಯ ಕಾರ್ಯಕರ್ತೆಯರು, ಸಹಾಯಕಿಯರು, ವಿಕಲಚೇತನ ಫಲಾನುಭವಿಗಳು, ಎಪಿಎಂಸಿ ಮಾಜಿ ಅಧ್ಯಕ್ಷ ಯುವರಾಜ ಕದಂ, ಗರ್ಭಿಣಿಯರು ಸೇರಿದಂತೆ ಅನೇಕರು ಹಾಜರಿದ್ದರು.

Leave a Reply