ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಅಕ್ರಮ ಆರೋಪ ತನಿಖೆಯನ್ನು ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮೈಸೂರು ಬೆಂಗಳೂರಿನ ಹಲವೆಡೆಗಳಲ್ಲಿ ದಾಳಿ ನಡೆಸಿದ್ದಾರೆ.
- ಎಲ್ಇಡಿ ಬೀದಿ ದೀಪ ಯೋಜನೆ ಅನುಷ್ಠಾನಗೊಂಡರೆ ಶೇ.61.01 ರಷ್ಟು ವಿದ್ಯುತ್ ಉಳಿತಾಯ: ಕೃಷ್ಣ ಬೈರೇಗೌಡ
- ಋಗ್ವೇದದ ಮಹತ್ವ ಮತ್ತು ಅಪೌರುಷೇಯ ತತ್ವದ ವಿಶ್ಲೇಷಣೆ
- ಸುರೇಶ್ ಕುಮಾರ್ ರಿಂದ ಕಾಂಗ್ರೆಸ್ ವಿರುದ್ದ ‘ಸಂವಿಧಾನಿಕ’ ಪೊಳ್ಳು ವಾದ !
- ಬುದ್ಧಿಜೀವಿ ನಟ ಎಂದು ಕರೆಯಲ್ಪಡುವ ಅನಂತನಾಗ್ ಅವರೊಂದಿಗಿನ ಒಂದು ಪ್ರಸಂಗ
- ಆರ್ಎಸ್ಎಸ್ ಮುಖ್ಯಸ್ಥರ ಪ್ರಕಾರ ಹಿಂದೂಗಳ ವಿಧಗಳು
ಬೆಂಗಳೂರು ಮತ್ತು ಮೈಸೂರಿನ 9 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದು, ಕೆಲವು ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ. ನಿವೇಶನ ಹಂಚಿಕೆಯ ದಾಖಲೆ ಪತ್ರಗಳನ್ನು ಜಪ್ತಿ ಮಾಡಿ ಪರಿಶೀಲನೆ ಕೈಗೊಂಡಿದ್ದಾರೆ.
ನಗರದ ಡಾಲರ್ಸ್ ಕಾಲೋನಿ, ಸ್ಯಾಂಕಿ ರಸ್ತೆಯ ಬಿಲ್ಡರ್ಸ್ ನಿವಾಸದ ಮೇಲೆ ಹಾಗೂ ಜೆಪಿ ನಗರದಲ್ಲಿನ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿವಾಸಿಗಳು ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಈ ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ದಿನೇಶ್ ಕುಮಾರ್ ತಮ್ಮ ಮನೆಯ ಸಮೀಪ ಬೆಳಗಿನ ವಾಯು ವಿಹಾರ ಮಾಡುತ್ತಿದ್ದರು. ಅಲ್ಲಿ ಅವರಿಗೆ ತಮ್ಮ ಮನೆಯ ಮೇಲೆ ಇ ಡಿ ದಾಳಿ ಮಾಡಿರುವ ವಿಷಯ ತಿಳಿದ ತಕ್ಷಣವೇ ಪರಾರಿಯಾಗಿದ್ದಾರೆ.
2022ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಜಿ.ಟಿ.ದಿನೇಶ್ ಕುಮಾರ್ ಅಧಿಕಾರ ಸ್ವೀಕರಿಸಿದ್ದರು. ದಿನೇಶ್ ಕುಮಾರ್ ವಿರುದ್ಧ ಮುಡಾದಲ್ಲಿ 50:50 ಅನುಪಾತದಡಿ ಸೈಟ್ ಹಂಚಿಕೆಯಲ್ಲಿ ಅಕ್ರಮ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ಅವರನ್ನು ವರ್ಗಾವಣೆ ಮಾಡಿತ್ತು. ಯಾವುದೇ ಸ್ಥಳ ತೋರಿಸದೇ ದಿನೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದ ಸರ್ಕಾರ ನಂತರ ಹಾವೇರಿ ವಿವಿ ಕುಲಸಚಿವ ಹುದ್ದೆ ನೀಡಿತ್ತು. ಕುಲಸಚಿವ ಹುದ್ದೆ ನೀಡಿದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸರ್ಕಾರ ಕೊನೆಗೆ ಆ ಆದೇಶವನ್ನೇ ರದ್ದು ಮಾಡಿತ್ತು.
ಹಲವು ಗಂಟೆಗಳ ಕಾಲ ಅಧಿಕಾರಿಗಳು ಗುತ್ತಿಗೆದಾರರ ನಿವಾಸದ ಮೇಲೆ ದಾಳಿ ನಡೆಸಿ, ದಾಖಲೆ ಪತ್ರ ಪರಿಶೀಲನೆ ನಡೆಸಿರುವ ಇಡಿ ಅಧಿಕಾರಿಗಳು ಕೆಲ ಮಹತ್ವದ ದಾಖಲೆಗಳನ್ನು ಪಡೆದುಕೊಂಡಿದ್ದು, ಅವುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಳೆದ ಅಕ್ಟೋಬರ್ 18ರಂದು ಮೈಸೂರು ಕಚೇರಿ ಮೇಲೆ ಎರಡು ದಿನಗಳ ಕಾಲ ದಾಳಿ ನಡೆಸಿದ್ದ ಅಧಿಕಾರಿಗಳು ಹಲವು ಕಡತಗಳನ್ನು ಜಪ್ತಿ ಮಾಡಿ ಅವುಗಳನ್ನು ಪರಿಶೀಲನೆ ನಡೆಸಿದ್ದು, ಅದರಲ್ಲಿ ಕಾಣೆಯಾಗಿರುವ ಹಾಗೂ ವೈಟ್ನರ್ ಹಚ್ಚಿರುವ ದಾಖಲೆ ಪತ್ರಗಳ ಮೂಲವನ್ನು ಪತ್ತೆಹಚ್ಚಲು ತನಿಖೆ ಚುರುಕುಗೊಳಿಸಿದ್ದಾರೆ.
ಮುಡಾ ಹಗರಣ ಸಂಬಂಧ ಇಡಿ ಸ್ನೇಹಮಯಿ ಕೃಷ್ಣ ಅವರಿಗೆ ಸಮ್ಸನ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಹೇಳಿತ್ತು. ಅದರಂತೆ ಸ್ನೇಹಮಯಿ ಕೃಷ್ಣ ಶಾಂತಿನಗರದ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಅಲ್ಲದೇ ಹಗರಣ ಸಂಬಂಧ 500 ಪುಟಗಳ ದಾಖಲೆಯನ್ನು ಇಡಿಗೆ ನೀಡಿದ್ದರು.
ದಾಖಲೆಗಳ ಆಧಾರದ ಮೇಲೆ ಇಡಿ ಇಸಿಐಆರ್ ದಾಖಲಿಸಿ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದೆ. ಹಗರಣದಲ್ಲಿ ಎ4 ಆಗಿರುವ ಭೂ ಮಾಲೀಕ ಕೆಂಗೇರಿಯಲ್ಲಿರುವ ದೇವರಾಜು ನಿವಾಸದಲ್ಲಿ ಇಡಿ ಅಧಿಕಾರಿಗಳು ದಾಖಲೆ ಪರಿಶೀಲಿಸಿದ್ದರು.
ಈ ನಡುವೆ ಮುಡಾದಲ್ಲಿ 14 ಬದಲಿ ನಿವೇಶನಗಳ ದಾಖಲೆ ನಾಪತ್ತೆ ಬಗ್ಗೆ ದೂರು ನೀಡಿದ್ದ ಆರ್ಟಿಐ ಕಾರ್ಯಕರ್ತ ಗಂಗರಾಜು ಅವರನ್ನು ನೋಟೀಸ್ ಜಾರಿಗೊಳಿಸಿ ಇಂದು ನಗರದ ಕಚೇರಿಗೆ ಕರೆಸಿಕೊಂಡ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ 20 ಗುಂಟೆ ಜಾಗ ಖರೀದಿ ವಿಚಾರವಾಗಿ ದಾಖಲೆ ಪತ್ರಗಳನ್ನು ಗಂಗರಾಜು ಒದಗಿಸಿದ್ದಾರೆ ಎಂದು ತಿಳಿದುಬಂದಿದೆ. ಹಿನಕಲ್ ನಿವೇಶನ ಹಂಚಿಕೆ ಅಕ್ರಮ ಸೇರಿದಂತೆ ಹಲವು ದೂರು ನೀಡಿದ್ದು, ಅದರಂತೆ ಇಡಿ ಅಧಿಕಾರಿಗಳು ಕೇಳಿದ ದಾಖಲೆಗಳನ್ನು ಒದಗಿಸಿ ಸಂಪೂರ್ಣ ಮಾಹಿತಿ ನೀಡಿದ್ದೇನೆ ಎಂದು ಗಂಗರಾಜು ತಿಳಿಸಿದ್ದಾರೆ.




