ಪ್ರಲ್ಹಾದ್ ಜೋಷಿ ಸೋದರ ಗೋಪಾಲ ಜೋಷಿ ಬಿಡುಗಡೆ ಮಾಡುವಂತೆ ಕೋರ್ಟ್ ಆದೇಶ

2 years ago

ಬೆಂಗಳೂರು: ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರ ಸೋದರ ಗೋಪಾಲ ಜೋಷಿ ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಪ್ರಕರಣದಲ್ಲಿ ಗೋಪಾಲ ಜೋಷಿ ಅವರನ್ನು ಬಂಧಿಸಲಾಗಿದ್ದು, ಅವರನ್ನು ಬಿಡುಗಡೆ ಮಾಡುವಂತೆ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಆದೇಶಿಸಿದೆ.

ಕಳೆದ ಲೋಕಸಭೆ ಚುನಾವಣೆ ಸಮಯದಲ್ಲಿ ವಿಜಯಪುರ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ದೇವಾನಂದ ಚೌಹಾಣ್ ಅವರನ್ನು ಸಂಪರ್ಕಿಸಿದ ಗೋಪಾಲ ಜೋಷಿ ಅವರು 20 ಕೋಟಿ ರೂಪಾಯಿ ಕೊಡುವುದಾದರೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿದ್ದರು. ಆನಂತರ ಈ ಬಗ್ಗೆ ಮಾತುಕತೆ ನಡೆದು ಟಿಕೆಟ್ ಕೊಡಿಸುವುದಾಗಿ ತಿಳಿಸಿದ್ದರು. ಇದಕ್ಕೆ ಒಪ್ಪಿ ನಾವು 25 ಲಕ್ಷ ರೂಪಾಯಿ ಮುಂಗಡ ನೀಡಿದ್ದೆವು. ಆದರೆ ಆನಂತರ ಅವರು ಟಿಕೆಟ್ ಕೊಡಿಸಲಿಲ್ಲ. ಹಣವನ್ನು ಹಿಂತಿರುಗಿಸಿಲ್ಲ ಎಂದು ಆರೋಪಿಸಿ ದೇವಾನಂದ ಚೌಹಾಣ್ ಪತ್ನಿ ಸುನಿತಾ ಚೌಹಾಣ್ ದೂರು ನೀಡಿದ್ದಾರೆ.

ಈ ದೂರಿನ ತನಿಖೆ ನಡೆಸಿದ ಪೊಲೀಸರು ಗೋಪಾಲ ಜೋಷಿ ಮತ್ತು ಅವರ ಪುತ್ರನನ್ನು ಬಂಧಿಸಿದ್ದಾರೆ. ಇದನ್ನು ಪ್ರಶ್ನಿಸಿ ಬಂಧಿತರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಪ್ರಕರಣದ ತನಿಖೆಗೆ ಮದ್ಯಂತರ ತಡೆ ನೀಡಿದೆ.

Leave a Reply