ಮುಡಾ ಅವ್ಯವಹಾರ ಪ್ರಕರಣ: ಸರ್ಕಾರದ ಪ್ರಮುಖರ ವಿಚಾರಣೆಗೆ ಸಿದ್ದತೆ

1 year ago

ಮೈಸೂರು: ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಕರ್ಮಕಾಂಡ ಆರೋಪ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ) ತನ್ನ ಕುಣಿಕೆಯನ್ನು ಮತ್ತಷ್ಟು ಬಿಗಿಗೊಳಿಸುತ್ತಿದೆ.

ಬೆಂಗಳೂರು ಮತ್ತು ಮೈಸೂರಿನಲ್ಲಿ ಹಲವು ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳು ಇದೀಗ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸರ್ಕಾರದ ಪ್ರಮುಖರ ವಿಚಾರಣೆಗೆ ಸಿದ್ದತೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಬಿಲ್ಡರ್ಗಳ  ಮನೆ, ಕಚೇರಿಗಳ ಮೇಲಿನ ದಾಳಿ ಮುಂದುವರೆಸಿರುವ ಅಧಿಕಾರಿಗಳು, ಮೈಸೂರಿನ ಇನಕಲ್ ನಲ್ಲಿರುವ ರಾಕೇಶ್ ಪಾಪಣ್ಣ ಹಾಗೂ ಅವರ ತಂದೆ ಪಾಪಣ್ಣ ಅವರನ್ನು ತನಿಖೆಗೆ ಒಳಪಡಿಸಿ, ಇಂದೂ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಮುಡಾದ 50:50 ಅನುಪಾತದಲ್ಲಿ 98 ಸಾವಿರ ಚದರ ಅಡಿ ಜಾಗವನ್ನು ಒಂದೇ ಬಾರಿ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ರಾಕೇಶ್ ಪಾಪಣ್ಣ ವಿರುದ್ಧ ಶಾಸಕ ಶ್ರೀವತ್ಸ ಆರೋಪ ಮಾಡಿ, ದಾಖಲೆ ಬಿಡುಗಡೆ ಮಾಡಿದ್ದರು. ಜೊತೆಗೆ ದೂರುದಾರ ಸ್ನೇಹಮಯಿ ಕೃಷ್ಣ ಈ ಸಂಬಂಧ ದಾಖಲಾತಿಗಳನ್ನು ಇಡಿಗೆ ನೀಡಿ, ತನಿಖೆ ನಡೆಸುವಂತೆ ಮನವಿ ಮಾಡಿದ್ದರು.

ಮುಡಾ ಹಗರಣದ ತನಿಖೆಯಲ್ಲಿ ಹಣಕಾಸು ವಹಿವಾಟಿನ ಬಗ್ಗೆ ಮಾಹಿತಿ ಪಡೆದು, ಇಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆಗೆ ಇಳಿದಿರುವ ಇಡಿ, ನಿನ್ನೆ ರಾತ್ರಿ 11 ಗಂಟೆಗೆ ಮೈಸೂರಿನ ನ್ಯೂ ಕಾಂತ್ ರಾಜ್ ಅರಸ್ ರಸ್ತೆಯಲ್ಲಿರುವ ಜಯರಾಮು ಎಂಬುವವರಿಗೆ ಸೇರಿದ ಕಚೇರಿ ಹಾಗೂ ಅವರ ಶ್ರೀರಾಂಪುರದಲ್ಲಿರುವ ಮನೆ ಮೇಲೆ ದಾಳಿ ಮುಂದುವರೆಸಿದ್ದು, ಇಂದು ಬೆಳಗಿನ ಜಾವ 3 ಗಂಟೆವರೆಗೆ ದಾಖಲೆ ಪರಿಶೀಲನೆ ನಡೆಸಿ ಮತ್ತೆ ಇಂದು ಬೆಳಗ್ಗೆ ಅವರ ಕಚೇರಿಯಲ್ಲಿ ಶೋಧ ಮುಂದುವರೆಸಿದ್ದಾರೆ.

ನಗರದ ಹಲವು ಬಿಲ್ಡರ್ ಗಳು, ಮಧ್ಯವರ್ತಿಗಳು, ರಾಜಕಾರಣಿಗಳ ಆಪ್ತರ ಬಗ್ಗೆ ಇಡಿಗೆ ಮುಡಾ ದಾಳಿ ಸಂದರ್ಭದಲ್ಲಿ ಪ್ರಮುಖ ದಾಖಲೆಗಳು ದೊರೆತಿವೆ ಎನ್ನಲಾಗಿದ್ದು, ಇದರ ಆಧಾರದ ಮೇಲೆ ಇಡಿ ಅಧಿಕಾರಿಗಳು ಮೈಸೂರಿನಲ್ಲಿ ತನಿಖೆ ಮುಂದುವರೆಸಿದ್ದು, ಇನ್ನೂ ಹಲವು ಬಿಲ್ಡರ್ ಕಚೇರಿಗಳು ಹಾಗೂ ಮನೆಗಳ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ.

Leave a Reply