ಗಾಂಧೀಜಿ ಅವರ ನೈಜ ಅನುಯಾಯಿ ಆಚಾರ್ಯ ವಿನೋಭಾ ಭಾವೆ

2 years ago

ಪ್ರತಿದಿನವೂ ಪತ್ರಿಕೆಗಳಲ್ಲಿ ನಾಯಕರುಗಳ ಭೂಮಿಯ ಮೇಲಿನ ಪ್ರೀತಿಯ ಮತ್ತು ದಾಹದ ವಿಚಾರವನ್ನೇ ಹಲವಾರು ದಶಕಗಳಿಂದ ಕೇಳುತ್ತಲೇ ಇದ್ದೇವೆ. ಇಂತಹ ಸಂದರ್ಭದಲ್ಲಿ ಲಕ್ಷಾಂತರ ಜನರ ಬದುಕಿಗಾಗಿ ದೇಶದಾದ್ಯಂತ ಸಂಚಾರವನ್ನು ಮಾಡಿ ಲಕ್ಷಾಂತರ ಮಂದಿಯನ್ನು ಭೂಮಿಯ ಮಾಲೀಕರನ್ನಾಗಿಸಿದ ಭೂದಾನ ಚಳುವಳಿಯ ನೇತಾರ ಆಚಾರ್ಯ ವಿನೋಭಾ ಭಾವೆ ವ್ಯಕ್ತಿತ್ವ ಭಿನ್ನವಾಗಿ ಕಾಣುತ್ತದೆ.

ಮಹಾತ್ಮ ಗಾಂಧೀಜಿ ಅವರ ರೀತಿಯಲ್ಲಿ ಅತ್ಯಂತ ಸರಳವಾದ ಬದುಕನ್ನ ನಡೆಸಿದಂತಹ ಕೆಲವೇ ಕೆಲವರಲ್ಲಿ ವಿನೋಬಾ ಅವರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಇವರು ಗಾಂಧೀಜಿಯಂತೆ ತುಂಡು ಬಟ್ಟೆಯಲ್ಲಿ ಇಡೀ ತಮ್ಮ ಬದುಕನ್ನ ಕಳೆದಿರುತ್ತಾರೆ.

14 ವರ್ಷಗಳ ಕಾಲ ಭಾರತದ ದೇಶದ ಉದ್ದಗಲಕ್ಕು ಪಾದಯಾತ್ರೆ ಮಾಡಿ 42 ಲಕ್ಷ ಎಕರೆ ಭೂಮಿಯನ್ನ ಸಹಸ್ರಾರು ಮಂದಿ ಭೂ ಮಾಲೀಕರಿಂದ ದಾನವಾಗಿ ಪಡೆದು ಲಕ್ಷಾಂತರ ಮಂದಿಯನ್ನು ಭೂಮಿಯ ಮಾಲೀಕರನ್ನಾಗಿಸಿದಂತಹ ಜಗತ್ತಿನಲ್ಲಿಯೇ ಎಲ್ಲಿಯೂ ನಡೆಯದ ಪವಾಡವನ್ನು ಮಾಡಿದಂತಹ ಸಂತ ವಿನೋಭಾಜಿ.

ಆಂಧ್ರಪ್ರದೇಶದಲ್ಲಿ ಭೂರಹಿತರು ಭೂಮಿಯ ಮಾಲೀಕರನ್ನ ಕೊಲ್ಲುವಂತಹ ಘಟನೆಗಳು ನಡೆದ ಸಂದರ್ಭದಲ್ಲಿ ದೇಶದಲ್ಲಿ ಭೂದಾನ ಚಳುವಳಿಯನ್ನ ಮಾಡುವುದರ ಮೂಲಕ ಶ್ರೀಮಂತರ ಮನಸ್ಸನ್ನು ಪರಿವರ್ತಿಸಿ ಅವರಿಂದ ಭೂಮಿಯನ್ನು ದಾನವನ್ನಾಗಿ ಪಡೆದು ಬಡವರಿಗೆ ಹಂಚುವಂತಹ ಕಾರ್ಯಕ್ಕೆ ಇವರು ಪ್ರಯತ್ನಿಸಿದಾಗ ಅನೇಕರು ಇವರ ಈ ಕಾರ್ಯವನ್ನು ಲಘುವಾಗಿ ಪರಿಗಣಿಸಿದರು. ಅಪಹಾಸ್ಯವನ್ನು ಮಾಡಿದರು. ಆದರೆ ದಿನದಿಂದ ದಿನಕ್ಕೆ ಇವರ ಪಾದಯಾತ್ರೆಯ ಪ್ರಭಾವ ಜನರ ಮೇಲೆ ಆಗುತ್ತಿದ್ದನ್ನು ಕಂಡಂತಹ ಅನೇಕರು ನಂತರ ಇವರ ಅನುಯಾಯಿಗಳಾದರು. ಲೋಕನಾಯಕ ಜಯಪ್ರಕಾಶ್ ನಾರಾಯಣ್ ರವರು ಆರಂಭದಲ್ಲಿ ಇದು ಸಾಧ್ಯವೇ ಎನ್ನುವ ಅನುಮಾನವನ್ನ ವ್ಯಕ್ತಪಡಿಸಿದ್ದರು. ಆದರೆ ಪಾದಯಾತ್ರೆಯ ಪ್ರಭಾವ ಮನಃಪರಿವರ್ತನೆಯ ಕಾರ್ಯ ಇದನ್ನು ಕಂಡು ತಾವು ಸಹ ಇವರೊಂದಿಗೆ ಭೂದಾನ ಚಳುವಳಿಯಲ್ಲಿ ತಮ್ಮನ್ನ ತೊಡಗಿಸಿಕೊಂಡರು.

ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಅನೇಕ ಬಾರಿ ಸೆರೆಮನೆ ವಾಸವನ್ನ ಅನುಭವಿಸಿದ ಇವರು ಈ ಸಂದರ್ಭದಲ್ಲಿ ಭಗವದ್ಗೀತೆಯನ್ನು ಹಲವಾರು ಭಾಷೆಗಳಿಗೆ ಭಾಷಾಂತರಿಸಿ ಅದರ ವಿಚಾರವನ್ನು ಎಲ್ಲರಿಗೂ ಸಾಹಿತ್ಯದ ಮೂಲಕ ತಿಳಿಸಿಕೊಟ್ಟಿರುತ್ತಾರೆ. ಕನ್ನಡವೂ ಸೇರಿದಂತೆ ಹಲವಾರು ಭಾಷೆಗಳನ್ನು ಬಲ್ಲವರಾಗಿದ್ದ ಇವರು ಮಹಾರಾಷ್ಟ್ರದವರಾಗಿದ್ದಾರೆ.

ಮಹಾತ್ಮ ಗಾಂಧೀಜಿ ಅವರ ಪ್ರಭಾವ ಇವರ ಮೇಲೆ ಹೆಚ್ಚಿನ ರೀತಿಯಲ್ಲಿ ಬೀರಿದ ಕಾರಣದಿಂದ ಇವರು ಸಹ ತುಂಡು ಬಟ್ಟೆಯಲ್ಲಿ ತಮ್ಮ ಬದುಕನ್ನ ಸರಳವಾಗಿ ನಡೆಸಿ ಬ್ರಹ್ಮಚಾರಿಯಾಗಿ ಬದುಕಿದ್ದರು. ಆಶ್ರಮವನ್ನು ಸ್ಥಾಪಿಸಿ ಅಲ್ಲಿ ರಚನಾತ್ಮಕ ವಾದಂತಹ ಚಟುವಟಿಕೆಗಳನ್ನು ನಡೆಸುತ್ತಿದ್ದರು.

ಭೂದಾನ ಚಳುವಳಿಯ ಜೊತೆಗೆ ಇವರು ಡಕಾಯಿತರ ಮನಸ್ಸನ್ನು ಪರಿವರ್ತಿಸುವಂತಹ ಕಾರ್ಯಕ್ಕೆ ಮುಂದಾದರು. ಆದರೆ ಆ ಸಂದರ್ಭದಲ್ಲಿ ಸರ್ಕಾರಗಳಿಂದ ಸರಿಯಾದ ಸ್ಪಂದನೆ ದೊರೆಯದ ಕಾರಣದಿಂದ ಆ ವಿಚಾರವನ್ನು ಕೈಬಿಟ್ಟರು. ಮುಂದೆ ಇವರ ಮಾರ್ಗದರ್ಶನದಲ್ಲಿ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು, ಚಂಬಲ್ ಕಣಿವೆಯಲ್ಲಿ ನೂರಾರು ಡಕಾಯಿತರನ್ನು ಮನಃಪರಿವರ್ತನೆ ಮಾಡಿ ಅವರಲ್ಲಿದ್ದ ರಾಕ್ಷಸತ್ವವನ್ನ ಹೋಗಲಾಡಿಸಿ ಅವರನ್ನು ಮುಖ್ಯವಾಹಿನಿಗೆ ತಂದರು.

ವಿನೋಬಾ ಅವರ ಕರ್ನಾಟಕದ ಸಂಬಂಧ ಪ್ರಮುಖವಾದದ್ದು ರಾಮಕೃಷ್ಣ ಹೆಗಡೆಯವರು ಇವರ ಮಾರ್ಗದರ್ಶನದಲ್ಲಿ ತಮ್ಮ ಬದುಕನ್ನ ನಡೆಸಿರುತ್ತಾರೆ. ರಾಮಕೃಷ್ಣ ಹೆಗಡೆಯವರ ಅಕ್ಕ ಮಹದೇವಿ ತಾಯಿ ಹೆಗಡೆಯವರು ವಿನೋಬಾ ಅವರ ಶಿಷ್ಯೆಯಾಗಿ ಅಂತಿಮವಾಗಿ ವಿನೋಬಾರವರ ದೇಹಕ್ಕೆ ಅಗ್ನಿಸ್ಪರ್ಶವನ್ನು ಸಹ ಮಾಡುತ್ತಾರೆ. ಹೆಗಡೆಯವರನ್ನ ಮಹದೇವ ತಾಯಿ ಹೆಗಡೆಯವರು ವಿನೋಬಾ ಅವರ ಆಶ್ರಮಕ್ಕೆ ಕರೆದುಕೊಂಡು ಹೋಗಿ ಅವರಿಗೊಂದು ವ್ಯಕ್ತಿತ್ವವನ್ನ ರೂಪಿಸಿಕೊಟ್ಟಿರುತ್ತಾರೆ.

ಕರ್ನಾಟಕ ರಾಜ್ಯದಲ್ಲಿ ಭೂದಾನ ಚಳುವಳಿಯಲ್ಲಿ ಸರ್ವೋದಯ ನಾಯಕರುಗಳಾಗಿ ಎಚ್ಎಸ್ ದೊರೆಸ್ವಾಮಿ, ಎಂ ಚಂದ್ರಶೇಖರ್, ಗರುಡ ಶರ್ಮಾ, ವೆಂಕೋಬರಾವ್ ಮೊದಲಾದವರು ಭೂದಾನ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕರ್ನಾಟಕ ರಾಜ್ಯದಲ್ಲೂ ಸಹ ಇವರ ಪ್ರಭಾವ ಸಾಕಾಷ್ಟು ಬೀರಿತು. ಮುಂದೆ ಅವರು ತಮ್ಮ ಹೋರಾಟಕ್ಕೆ ಭೂದಾನ ಚಳುವಳಿಯು ಸ್ಪೂರ್ತಿಯಾಯಿತು. ಕರ್ನಾಟಕ ರಾಜ್ಯದಲ್ಲಿ ಶಾಂತವೇರಿ ಗೋಪಾಲಗೌಡರು  ಹೋರಾಟವನ್ನು ಭೂ ಮಾಲೀಕತ್ವವನ್ನು ಕೊಡಿಸುವ ಸಲುವಾಗಿ ಮಾಡಿದರು. ಮುಂದೆ ದೇವರಾಜ ಅರಸುರವರು ಉಳುವವನಿಗೆ ಭೂಮಿ ಎನ್ನುವ ಕಾನೂನನ್ನು ಮಾಡಲು ಸಹ ಇವೆಲ್ಲವೂ ಕಾರಣಗಳಾಯಿತು.

ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಅಪಾರವಾದ ತ್ಯಾಗವನ್ನು ಮಾಡಿ ಸಾಸಿವೆ ಕಾಳಿನಷ್ಟು ಪ್ರತಿಯಾಗಿ ಏನನ್ನು ಪಡೆಯದೆ ಪ್ರಾಮಾಣಿಕವಾದ ಅತ್ಯಂತ ಶುದ್ಧವಾದ ಸರಳವಾದ ಬದುಕನ್ನ ನಡೆಸಿದಂತಹ ಕೆಲವೇ ಕೆಲವು ತ್ಯಾಗ ಜೀವಿಗಳಲ್ಲಿ ವಿನೋಬಾರವರು ಒಬ್ಬರಾಗಿರುತ್ತಾರೆ. ಗಾಂಧೀಜಿ ಅವರ ನೈಜ ಅನುಯಾಯಿ ಎಂದರೆ ಆಚಾರ್ಯ ವಿನೋಭಾ ಎನ್ನುವ ಮಾತು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಭೂದಾನ ಚಳುವಳಿ ಮತ್ತು ವಿನೋಬಾರವರ ಹೋರಾಟ ರಚನಾತ್ಮಕವಾದಂತ ಚಟುವಟಿಕೆಗಳು ಇವುಗಳನ್ನ ನೆನಪು ಮಾಡಿಕೊಂಡಾಗ ಇಂಥವರು ಈ ಭೂಮಿಯ ಮೇಲೆ ಇದ್ದರೆ? ಎನ್ನುವ ಅನುಮಾನ ಬರುತ್ತದೆ. ಏಕೆಂದರೆ ಇವತ್ತಿನ ಪರಿಸ್ಥಿತಿಯಲ್ಲಿ ನಾವು ನೋಡುತ್ತಿರುವ ನಾಯಕರುಗಳ ನಡವಳಿಕೆ, ವ್ಯಕ್ತಿತ್ವವನ್ನು ಕಂಡಾಗ ಆ ರೀತಿ ಪ್ರಶ್ನೆಗಳು ಮೂಡುವುದು ಸಹಜವೇ ಆಗಿರುತ್ತದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply