ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನ

4 months ago

ಜವಾಹರ್ ಲಾಲ್ ನೆಹರು, ಲಾಲ್ ಬಹುದ್ದೂರ್ ಶಾಸ್ತ್ರಿ, ಶ್ರೀಮತಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಪಿ ವಿ ನರಸಿಂಹರಾವ್, ಡಾಕ್ಟರ್ ಮನಮೋಹನ್ ಸಿಂಗ್ ಹೀಗೆ ಆರು ಜನ ಪ್ರಧಾನ ಮಂತ್ರಿಗಳನ್ನು ದೇಶಕ್ಕೆ ನೀಡಿರುವುದು ಕಾಂಗ್ರೆಸ್ ಪಕ್ಷ.

ನೆಹರುರವರ ಕಾಲದಲ್ಲಿ ಪಂಚವಾರ್ಷಿಕ ಯೋಜನೆಗಳು, ಕೈಗಾರಿಕಾ ಕ್ರಾಂತಿ, ಅಣೆಕಟ್ಟುಗಳು, ವಿಶ್ವವಿದ್ಯಾನಿಲಯಗಳು, ಸಂಶೋಧನಾ ಸಂಸ್ಥೆಗಳು, ಇವುಗಳ ಮೂಲಕ ದೇಶದ ಪರಿಸ್ಥಿತಿಯನ್ನ ಬದಲಾಯಿಸಿ ಬಲಿಷ್ಠ ಮತ್ತು ಸಮೃದ್ಧ ಭಾರತದ ನಿರ್ಮಾಣಕ್ಕೆ ಅಡಿಪಾಯ ಹಾಕಿದವರು.

ಜೈ ಜವಾನ್, ಜೈ ಕಿಸಾನ್ ಘೋಷಣೆಯ ಮೂಲಕ ರೈತರಲ್ಲಿ ಮತ್ತು ಸೈನಿಕರಲ್ಲಿ ಆತ್ಮಸ್ಥೈರ್ಯವನ್ನು ತುಂಬಿದ ಕ್ಷೀರಕ್ರಾಂತಿಯ ಯೋಜನೆಗೆ ಕಾರಣಕರ್ತರಾದ ನಾಯಕರು ದೇಶ ಕಂಡ ಅತ್ಯಂತ ಪ್ರಾಮಾಣಿಕ ಪ್ರಧಾನಮಂತ್ರಿ ಲಾಹಲ್ ಬಹುದ್ದೂರ್ ಶಾಸ್ತ್ರಿ.

ಪಾಕಿಸ್ತಾನದ ವಿರುದ್ಧ ಯುದ್ಧವನ್ನು ಸಾರಿ ಬಾಂಗ್ಲಾದೇಶದ ರಚನೆಗೆ ಕಾರಣಕರ್ತರಾದವರು, ಹಸಿರು ಕ್ರಾಂತಿಯ ಮೂಲಕ ಆಹಾರ ಉತ್ಪಾದನೆಗೆ ಚಾಲನೆ ನೀಡಿದವರು, 20 ಅಂಶಗಳ ಕಾರ್ಯಕ್ರಮಗಳ ನೀಡಿ ಬಡಜನರ ಬದುಕನ್ನು ಬದಲಾಯಿಸಲು ಯೋಚನೆಯನ್ನು ಮಾಡಿದವರು, ಅಣು ಪರೀಕ್ಷೆಯನ್ನ ಮಾಡಿ ಜಗತ್ತಿಗೆ ಭಾರತದ ಶಕ್ತಿಯನ್ನ ಪ್ರದರ್ಶಿಸಿದವರು, ಉಳುವವನಿಗೆ ಭೂಮಿ ಯೋಜನೆಯ ಮೂಲಕ ಲಕ್ಷಾಂತರ ಕೃಷಿ ಕಾರ್ಮಿಕರನ್ನ ಭೂಮಿಯ ಮಾಲೀಕರನ್ನಾಗಿಸಿದ್ದು, ಜೀತ ಪದ್ಧತಿಯನ್ನು ನಿರ್ಮೂಲನ ಮಾಡಿದ್ದು, ಬಾಹ್ಯಾಕಾಶ ಸಂಸ್ಥೆಯ ಸ್ಥಾಪನೆಗೆ ಅಡಿಪಾಯ ಹಾಕಿದ್ದು, ಇವುಗಳು ಶ್ರೀಮತಿ ಇಂದಿರಾ ಗಾಂಧಿ ರವರ ಕೊಡುಗೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ನಾಂದಿ ಪುರುಷರು, ಅಧಿಕಾರ ವಿಕೇಂದ್ರೀಕರಣಕ್ಕಾಗಿ ಸಂವಿಧಾನದ ತಿದ್ದುಪಡಿಯನ್ನ ಮಾಡಿದವರು, 18 ವರ್ಷಕ್ಕೆ ಮತದಾನದ ಹಕ್ಕನ್ನು ನೀಡಿದವರು, ವೈಜ್ಞಾನಿಕ ಮತ್ತು ಆಧುನಿಕ ಶಿಕ್ಷಣಕ್ಕೆ ಒತ್ತು ನೀಡಿ ಪ್ರಥಮ ಬಾರಿಗೆ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದವರು ರಾಜೀವ್ ಗಾಂಧಿ ರವರು.

ಆರ್ಥಿಕ ಉದಾರೀಕರಣ ಮೂಲಕ ದೇಶದ ಆರ್ಥಿಕ ಪರಿಸ್ಥಿತಿಗೆ ಮದ್ದು ನೀಡಿದವರು ಪಿ ವಿ ನರಸಿಂಹರಾವ್.

ಅರ್ಥ ಸಚಿವರಾಗಿ ದೇಶದ ಆರ್ಥಿಕ ಸಮಸ್ಯೆಗೆ ನೂತನ ಆರ್ಥಿಕ ನೀತಿಯ ಮೂಲಕ ಪರಿಹಾರವನ್ನು ನೀಡಿದವರು, ಉಚಿತ ಶಿಕ್ಷಣ ಕಾಯ್ದೆ, ಆಹಾರ ಭದ್ರತೆ ಕಾಯ್ದೆ, ಆಧಾರ್ ಕಾರ್ಡ್, ನರೇಗಾ ಯೋಜನೆ, ಜನರಿಕ್ ಮೆಡಿಸನ್, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮೂಲಕ ಉದ್ಯೋಗ ಸೃಷ್ಟಿ, ಆರ್ಥಿಕವಾಗಿ ಭಾರತವನ್ನು ಬಲಿಷ್ಠವಾಗಿ ನಿರ್ಮಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿಯಾದ ಹೆಜ್ಜೆಗಳನ್ನು ಇಟ್ಟವರು, ಅಣು ಒಪ್ಪಂದದ ಮೂಲಕ ಅಣು ವಿದ್ಯುತ್ ಸ್ಥಾವರಗಳ ಸ್ಥಾಪನೆಗೆ ಕಾರಣಕರ್ತರಾಗಿರುವವರು ದೇಶ ಕಂಡ ಅತ್ಯಂತ ಮೇಧಾವಿ ಮತ್ತು ವಿದ್ಯಾವಂತ ಜಗತ್ತಿನಾದ್ಯಂತ ತಮ್ಮ ಪಾಂಡಿತ್ಯದಿಂದ ಗೌರವವನ್ನು ಮತ್ತು ಬಿರುದುಗಳನ್ನು ಪಡೆದುಕೊಂಡ ನಾಯಕರು ಡಾಕ್ಟರ್ ಮನಮೋಹನ್ ಸಿಂಗ್.

ಕಾಂಗ್ರೆಸ್ ಪಕ್ಷ1885ರಲ್ಲಿ ಎಂ ಜಿ ಹ್ಯೂಮ್ ಇವರಿಂದ ಸ್ಥಾಪಿಸಲ್ಪಟ್ಟು ಮುಂಬೈಯಲ್ಲಿ ನಡೆದ ಮೊದಲ ಸಭೆಯಲ್ಲಿ ಉಮೇಶ್ ಚಂದ್ರ ಬ್ಯಾನರ್ಜಿ ಇವರನ್ನು ಮೊದಲ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಈ ಸಭೆಗೆ 72 ಜನ ಪ್ರತಿನಿಧಿಗಳು ಹಾಜರಾಗಿದ್ದು ಇದರಲ್ಲಿ ವಕೀಲರು, ವೈದ್ಯರು, ಪತ್ರಕರ್ತರು, ವಿದ್ಯಾವಂತರು, ನ್ಯಾಯಾಧೀಶರುಗಳು ಹೀಗೆ ಸಮಾಜದ ವಿವಿಧ ಪ್ರತಿನಿಧಿಗಳು ಭಾಗವಹಿಸಿದ್ದರು.

1886 ರಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ದಾದಾಬಾಯಿ ನವರೋಜಿ ರವರು ಆಯ್ಕೆಯಾದರು, 139 ವರ್ಷದ ಅವಧಿಯಲ್ಲಿ ಮಹಾತ್ಮ ಗಾಂಧೀಜಿ ರವರು 1924ರಲ್ಲಿ ಸುಭಾಷ್ ಚಂದ್ರ ಬೋಸ್ ರವರು 1939 ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರಲ್ಲದೆ ಆಚಾರ್ಯ ಕೃಪಾಲಾನಿ, ಮೌಲಾನ ಅಬ್ದುಲ್ ಕಲಾಂ, ರಾಜಾಜಿ, ನೆಹರು, ಮುಂತಾದವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ, ಕರ್ನಾಟಕದಿಂದ 1968 ರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪನವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು 52 ವರ್ಷಗಳ ನಂತರ ಕರ್ನಾಟಕದ ಶ್ರೀ ಮಲ್ಲಿಕಾರ್ಜುನ ಖರ್ಗೆರವರಿಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಚುನಾವಣೆಯ ಮೂಲಕ ಆಯ್ಕೆಯಾಗಿರುತ್ತಾರೆ.

ಕಾಂಗ್ರೆಸ್ ಪಕ್ಷದ ನಿಜವಾದಂತಹ ಹೋರಾಟ ಆರಂಭವಾದದ್ದು 1905ರ ಅವಧಿಯಲ್ಲಿ ಬಾಲಗಂಗಾಧರ ತಿಲಕರು ಮತ್ತು ಗೋಪಾಲಕೃಷ್ಣ ಗೋಕುಲೆ ನಡುವೆ ಭಿನ್ನಾಭಿಪ್ರಾಯಗಳು ಬಂದು ಹೋರಾಟದ ದಿಕ್ಕುಗಳು ಬದಲಾದವು. ಗೋಪಾಲಕೃಷ್ಣ ಗೋಕುಲೆ ರವರು ದಕ್ಷಿಣ ಆಫ್ರಿಕಾದಲ್ಲಿ ಕಪ್ಪು ಜನರ ಮತ್ತು ಭಾರತೀಯರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದ ಮಹಾತ್ಮ ಗಾಂಧೀಜಿ ರವರನ್ನು ಅಲ್ಲಿನ ಹೋರಾಟದ ಯೋಜನೆಗಳು ಮುಗಿದ ನಂತರ ಭಾರತಕ್ಕೆ ಬಂದು ಕಾಂಗ್ರೆಸ್ ಪಕ್ಷದ ಹೋರಾಟಕ್ಕೆ ನೇತೃತ್ವವನ್ನ ವಹಿಸಿಕೊಳ್ಳಬೇಕೆಂದು ತಿಳಿಸಿದರು.

ಮಹಾತ್ಮ ಗಾಂಧೀಜಿ ರವರು 1915ರಲ್ಲಿ ಭಾರತಕ್ಕೆ ಬಂದು ಒಂದು ವರ್ಷಗಳ ಕಾಲ ರೈಲಿನಲ್ಲಿ ಸಾಮಾನ್ಯ ಪ್ರಜೆಯಾಗಿ ಪ್ರಯಾಣವನ್ನು ಮಾಡಿ ದೇಶದ ಸಾಮಾಜಿಕ ಮತ್ತು ಆರ್ಥಿಕ ಹಾಗೂ ಸಾಂಸ್ಕೃತಿಕ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ನಂತರ ಹೋರಾಟದ ಯೋಜನೆಗಳನ್ನು ರೂಪಿಸಿದರು.

ಮಹಾತ್ಮ ಗಾಂಧೀಜಿ ರವರು ನೇತೃತ್ವವನ್ನು ವಹಿಸಿಕೊಂಡ ಮೇಲೆ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ರೂಪ ಬಂದಿತು ಮತ್ತು ಸ್ಪಷ್ಟತೆ ಮೂಡಿತು. ಜನಪರವಾದಂತಹ ಮತ್ತು ರಚನಾತ್ಮಕವಾದ ಕಾರ್ಯಕ್ರಮಗಳ ಮೂಲಕ ಜನರನ್ನು ಸಂಘಟಿಸಿ ಹೋರಾಟಕ್ಕೆ ಮಾನಸಿಕವಾಗಿ ಸಿದ್ಧತೆಗೊಳಿಸಿದರು.

ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿ, ಕ್ವಿಟ್ ಇಂಡಿಯಾ ಚಳವಳಿ, ಮುಂತಾದವುಗಳು ಸ್ವಾತಂತ್ರ್ಯ ಹೋರಾಟದಲ್ಲಿ ನಿರ್ಣಾಯಕ ಪಾತ್ರವಾಯಿತು.

ಗಾಂಧಿ ದಲಿತರ ಸ್ವಾಭಿಮಾನದ ಬದುಕಿನ ಬಗ್ಗೆಯೂ ಮಾತನಾಡಿದರು, ಗ್ರಾಮೀಣ ಪ್ರದೇಶದ ಜನರ ಆರ್ಥಿಕತೆಯ ವಿಚಾರದಲ್ಲೂ ಯೋಜನೆಗಳನ್ನ ರೂಪಿಸಿದ್ದರು, ವಿದೇಶಿ ವಸ್ತುಗಳನ್ನ ಬಹಿಷ್ಕರಿಸಿ ಸ್ವದೇಶಿ ವಸ್ತುಗಳಿಗೆ ಉತ್ತೇಜನವನ್ನು ನೀಡಿದರು, ಸಾಮಾಜಿಕ ಸಮಸ್ಯೆಯಾದ ಅಸ್ಪೃಶ್ಯತೆಯ ನಿವಾರಣೆಗಾಗಿ ಬದ್ಧತೆಯನ್ನು ಹೊಂದಿದ್ದರು, ಗಾಂಧೀಜಿಯವರ ಒಂದು ಕರೆಗೆ ದೇಶದಾದ್ಯಂತ ಎಲ್ಲ ಸಂದರ್ಭದಲ್ಲಿ ಕೋಟ್ಯಾಂತರ ಭಾರತೀಯರು ಸ್ಪಂದಿಸಿ ಬ್ರಿಟಿಷರ ವಿರುದ್ಧ ಹೋರಾಟವನ್ನು ಮಾಡುತ್ತ ಸೆರೆಮನೆ ವಾಸಗಳನ್ನ ಅನುಭವಿಸಿದರು. ಗಾಂಧೀಜಿಯವರ ಸತ್ಯಾಗ್ರಹದ ಅಸ್ತ್ರ, ಅಹಿಂಸತ್ಮಕವಾದ ಚಳವಳಿ, ಬ್ರಿಟಿಷ್ ಸರ್ಕಾರವನ್ನ ನಿದ್ದೆ ಕೆಡಿಸಿತು. ಅನಿವಾರ್ಯವಾಗಿ ವಿಧಿ ಇಲ್ಲದೆ ದೇಶಕ್ಕೆ 1947ರ ಆಗಸ್ಟ್ 15 ರಂದು ಸ್ವಾತಂತ್ರವನ್ನು ನೀಡಿದರು.

ದೇಶಕ್ಕೆ ಸಂವಿಧಾನವನ್ನು ಕೊಟ್ಟವರು ಕಾಂಗ್ರೆಸ್ ಪಕ್ಷದವರು. ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನವನ್ನು ರಚಿಸಿದರು. ಇದಕ್ಕಾಗಿ ಸಂವಿಧಾನ ಸಮಿತಿ ಎರಡು ವರ್ಷ 11 ತಿಂಗಳ 18 ದಿನಗಳ ಕಾಲ ಕರ್ತವ್ಯವನ್ನು ನಿರ್ವಹಿಸಿದೆ.

ಬ್ರಿಟಿಷರ ವಿರುದ್ಧ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಹಲವಾರು ದಶಕಗಳ ಕಾಲ ಹೋರಾಟ ಮಾಡಿ ಈ ಸಂದರ್ಭದಲ್ಲಿ ಸೆರೆಮನೆ ವಾಸವನ್ನ ಅನುಭವಿಸಿ ಕೆಲವರು ಪ್ರಾಣವನ್ನು ಕಳೆದುಕೊಂಡರು ಹೋರಾಟಕ್ಕಾಗಿ ಅಪಾರವಾದ ತಮ್ಮ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿರುತ್ತಾರೆ.

ಪ್ರಪಂಚದಲ್ಲಿಯೇ ಅಹಿಂಸಾತ್ಮಕವಾದ ಹೋರಾಟದ ಮೂಲಕ ರಕ್ತಪಾತವಿಲ್ಲದೆ ದಬ್ಬಾಳಿಕೆ ದೌರ್ಜನ್ಯಗಳಿಲ್ಲದೆ ಸ್ವಾತಂತ್ರವನ್ನು ಪಡೆದದ್ದು ಭಾರತ ದೇಶ ಎಂಬ ಹೆಮ್ಮೆ ಇದೆ.

ಮಹಾತ್ಮ ಗಾಂಧೀಜಿ ರವರ ನಾಯಕತ್ವವನ್ನ ಮತ್ತು ಅವರ ಹೋರಾಟದ ಹಾದಿಯನ್ನು ವಿಶ್ವದ ಅನೇಕ ರಾಷ್ಟ್ರಗಳಲ್ಲಿನ ಸ್ವಾತಂತ್ರ ಹೋರಾಟಗಾರರು ಅನುಸರಿಸಿದರು.

1947ರಲ್ಲಿ ಏನೇನು ಇಲ್ಲದ ಭಾರತವನ್ನು ಹಲವಾರು ರೀತಿಯಲ್ಲಿ ಅಭಿವೃದ್ಧಿಯನ್ನು ಪಡಿಸಿ ಇಂದು ಜಗತ್ತಿನ ಮುಂದೆ ಭಾರತ ಸ್ವಾಭಿಮಾನದಿಂದ ತಲೆಯೆತ್ತಿ ನಿಲ್ಲುವಂತೆ ಪರಿಸ್ಥಿತಿ ನಿರ್ಮಾಣವಾಗಿದ್ದರೆ ಇದರ ಹಿಂದೆ ಕಾಂಗ್ರೆಸ್ ಪಕ್ಷದ ಕೊಡುಗೆ ಇದೆ ಕಾಂಗ್ರೆಸ್ ಪಕ್ಷದ ನಾಯಕರ ಶ್ರಮ ಮತ್ತು ಸೇವೆ ಇದೆ.

139 ವರ್ಷಗಳನ್ನು ಆಚರಿಸಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ದೇಶದಲ್ಲಿ ಬಿಜೆಪಿಗೆ ಪರ್ಯಾಯವಾದಂತಹ ಏಕೈಕ ರಾಷ್ಟ್ರೀಯ ಪಕ್ಷ.

1977 ರಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರವನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು ಆ ಸಂದರ್ಭದಲ್ಲಿ ಇಂದಿರಾಗಾಂಧಿರವರ ನಾಯಕತ್ವವನ್ನು ಮೆಚ್ಚಿ ಮತ್ತೆ 1980ರಲ್ಲಿ ಜನತೆ ಕಾಂಗ್ರೆಸ್ ಪಕ್ಷದ ಪರವಾಗಿ ಒಲವನ್ನ ತೋರಿಸಿದರು.

1996 ರಿಂದ 2004ರ ಅವಧಿಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸಂಕಷ್ಟದ ಮತ್ತು ಪರೀಕ್ಷೆಯ ಕಾಲವಾಗಿತ್ತು ಈ ಸಂದರ್ಭದಲ್ಲಿ 2002ರಲ್ಲಿ ಪಕ್ಷದ ಅಧ್ಯಕ್ಷರಾಗಿ ಶ್ರೀಮತಿ ಸೋನಿಯಾ ಗಾಂಧಿ ರವರು ತೋರಿಸಿದಂತಹ ಶ್ರದ್ದೆ ಮತ್ತು ಆಸಕ್ತಿ ಹಾಗೂ ಅವರ ಕಾಳಜಿಯಿಂದಾಗಿ 2004ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ 10 ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಲು ಸಾಧ್ಯವಾಯಿತು.

ಕೆಲವು ದುಷ್ಟ ಶಕ್ತಿಗಳು ಮತ್ತು ಕೆಟ್ಟ ಮನಸ್ಸಿನ ಜನಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಲ್ಪಿತ ವಾದಂತಹ ಆರೋಪಗಳನ್ನು ಮಾಡಿ ಜನರ ಮನಸ್ಸಿನಲ್ಲಿ ಕಾಂಗ್ರೆಸ್ ಬಗ್ಗೆ ಅಸಹನೆ ಉಂಟು ಮಾಡುವಂತೆ ಮಾಡುವಲ್ಲಿ ಮಾಧ್ಯಮಗಳನ್ನು ಚೆನ್ನಾಗಿ ಬಳಸಿಕೊಂಡರು.

ರಾಹುಲ್ ಗಾಂಧಿ ರವರು ಭಾರತದ ಅತ್ಯಂತ ಸಹಸ್ರಾರು ಕಿಲೋಮೀಟರ್ಗಳ ಪ್ರಯಾಣವನ್ನ ಮಾಡಿ ತಮ್ಮ ಪಾದಯಾತ್ರೆಯ ಮೂಲಕ ಭಾರತ್ ಜೋಡೋ ಅಭಿನಯಾನದ ಮೂಲಕ ಮತ್ತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹವನ್ನು ತುಂಬಿದರು .ಇದರ ಪರಿಣಾಮವಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದೇಶದ ಅನೇಕ ರಾಜ್ಯಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದರ ಮೂಲಕ ಲೋಕಸಭೆಯ ಅಧಿಕೃತ ವಿರೋಧ ಪಕ್ಷವಾಗಿ ಅವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನಿರಂತರವಾದ ಹೋರಾಟದ ಮೂಲಕ ಮತ್ತೆ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ದೇಶದಾದ್ಯಂತ ಪುಟ್ಟಿದೇಳುತ್ತದೆ ಎಂಬ ಭರವಸೆ ಮೂಡಿದೆ.

ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತು ಬೆಳವಣಿಗೆಯಲ್ಲಿ ಶ್ರೀಮತಿ ಇಂದಿರಾ ಗಾಂಧಿ ರವರ ಪಾತ್ರವನ್ನು ಯಾರು ಮರೆಯುವ ಹಾಗಿಲ್ಲ.

ಕಾಂಗ್ರೆಸ್ ಪಕ್ಷಕ್ಕೆ ಎಂತಹ ಸಂಕಷ್ಟದ ಸಮಯದಲ್ಲೂ ಸಹ ರಾಷ್ಟ್ರದ ಜನತೆ ಶೇಕಡ 21ರಷ್ಟು ಮತವನ್ನ ಲೋಕಸಭಾ ಚುನಾವಣೆಗಳಲ್ಲಿ ನೀಡಿದ್ದಾರೆ ಅದೇ ರೀತಿಯಲ್ಲಿ ದೇಶದ ಕಟ್ಟ ಕಡೆಯ ಹಳ್ಳಿಯಲ್ಲೂ ಸಹ ನಮ್ಮ ಪಕ್ಷದ ಬಾವುಟವನ್ನು ಹಿಡಿಯುವ ಕಾರ್ಯಕರ್ತರಿದ್ದಾರೆ. ಒಂದಲ್ಲ ಒಂದು ಹಂತದಲ್ಲಿ, ಒಂದಲ್ಲ ಒಂದು ರಾಜ್ಯದಲ್ಲಿ, ನಮ್ಮ ಪಕ್ಷದ ಚುನಾಯಿತ ಪ್ರತಿನಿಧಿಗಳಿದ್ದಾರೆ, ಹೀಗಾಗಿ ಯಾರು ಎಷ್ಟೇ ಕುತಂತ್ರಗಳನ್ನು ಮಾಡಿದರು ಕಾಂಗ್ರೆಸ್ ಪಕ್ಷದ ಬೇರುಗಳನ್ನು ಮನೆ, ಮನೆಗಳಲ್ಲಿ ಮತ್ತು ಜನರ ಮನದಲ್ಲಿ ಕಿತ್ತು ಹಾಕಲು ಯಾರಿಂದಲೂ ಸಾಧ್ಯವಿಲ್ಲ.

ಜಾತ್ಯಾತೀತತೆ, ಸಮಗ್ರತೆ, ಧರ್ಮ ಸಹಿಷ್ಣುತೆ, ಸರ್ವಧರ್ಮ ಸಮನ್ವಯ, ಸಾಮಾಜಿಕ ನ್ಯಾಯ, ಇವುಗಳನ್ನು ಉದ್ದೇಶವಾಗಿ ಹೊಂದಿರುವ ಕಾಂಗ್ರೆಸ್ ಪಕ್ಷ ತನ್ನ ವಿಚಾರಧಾರೆಗಳಿಗಾಗಿ ಎಂದೂ ಸಹ ಬದ್ಧರಾಗಿ ಮುನ್ನಡೆಯುತ್ತಲೇ ಸಾಗುತ್ತಿದೆ, ಇಂದಲ್ಲ ನಾಳೆ ಗುರಿ ತಲುಪುತ್ತೇವೆ ಕೆಂಪುಕೋಟೆಯ ಮೇಲೆ ಮತ್ತೆ ನಮ್ಮ ಬಾವುಟ ಹಾರಿಸುತ್ತೇವೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply