ಮಹಾತ್ಮ ಗಾಂಧಿಯವರಿಂದ ಜಾತಿ ಪದ್ಧತಿಯ ಒಂದು ಸಮರ್ಥನೆ
ಅನುಬಂಧ-I
(ಹರಿಜನ ಪತ್ರಿಕೆಯಲ್ಲಿಯ ಅವರ ಲೇಖನದ ಪುನರ್ಮುದ್ರಣ) ಡಾ. ಅಂಬೇಡ್ಕರ್ ಅವರ ದೋಷಾರೋಪಣೆ
I
ಹೋದ ವರ್ಷದ ಮೇ ತಿಂಗಳಲ್ಲಿ ಲಾಹೋರದ ಜಾತ್-ಪತ್-ತೋಡಕ್ ಮಂಡಲದವರ ವಾರ್ಷಿಕಾಧಿವೇಶನವು ಡಾ. ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಬೇಕಿತ್ತೆಂಬುದನ್ನು ಓದುಗರು ನೆನಪಿಸಿಕೊಳ್ಳಬಹುದು. ಅವರ ಉಪನ್ಯಾಸ ಸ್ವಾಗತ ಸಮಿತಿಯವರಿಗೆ ಸಮ್ಮತವಾಗದಿದ್ದುದರಿಂದ ಅಧಿವೇಶನವನ್ನೇ ರದ್ದುಗೊಳಿಸಲಾಯಿತು. ತಾನೇ ಚುನಾಯಿಸಿದ ಅಧ್ಯಕ್ಷರನ್ನು, ಅವರ ಉಪನ್ಯಾಸ ಆಕ್ಷೇಪಾರ್ಹವೆಂಬ ಕಾರಣ ಒಡ್ಡಿ, ಸ್ವಾಗತ ಸಮಿತಿ ನಿರಾಕರಿಸುವುದು ಎಷ್ಟರ ಮಟ್ಟಿಗೆ ಸಮರ್ಥನೀಯವೆಂಬುದು ವಿವಾದಾಸ್ಪದದ ವಿಷಯ. ಜಾತಿಪದ್ಧತಿ ಮತ್ತು ಹಿಂದೂ ಧರ್ಮಗ್ರಂಥಗಳ ವಿಷಯವಾಗಿ ಡಾ. ಅಂಬೇಡ್ಕರ್ ಅವರ ಅಭಿಪ್ರಾಯಗಳೇನೆಂಬುದು ಸಮಿತಿಗೆ ಗೊತ್ತಿತ್ತು. ಹಿಂದೂ ಧರ್ಮವನ್ನು ತೊರೆದು ಹೋಗುವ ತಮ್ಮ ನಿರ್ಧಾರವನ್ನು ಡಾ. ಅಂಬೇಡ್ಕರ್ ಅವರ ನಿಸ್ಸಂದಿಗ್ಧವಾದ ಶಬ್ದಗಳಲ್ಲಿ ಹೇಳಿದ್ದನ್ನೂ ಅದು ಅರಿತಿತ್ತು. ಡಾ. ಅಂಬೇಡ್ಕರ್ ಅವರು ಸಿದ್ಧಪಡಿಸಿದ ಉಪನ್ಯಾಸದಲ್ಲಿ ಇದಕ್ಕಿಂತ ಭಿನ್ನವಾದುದನ್ನು ನಿರೀಕ್ಷಿಸುವಂತಿರಲಿಲ್ಲ. ಸಮಾಜದಲ್ಲಿ ತನಗೊಂದು ವಿಶಿಷ್ಟ ಸ್ಥಾನವನ್ನು ನಿರ್ಮಿಸಿಕೊಂಡ ವ್ಯಕ್ತಿಯ ಸ್ವತಂತ್ರ ವಿಚಾರಗಳನ್ನು ಕೇಳಿ ತಿಳಿದುಕೊಳ್ಳುವ ಅವಕಾಶ ಸಾರ್ವಜನಿಕರಿಗೆ ಇಲ್ಲದಂತೆ ಮಾಡಿತು ಈ ಸಮಿತಿ. ಇನ್ನು ಮುಂದೆ ಡಾ. ಅಂಬೇಡ್ಕರ್ ಅವರು ಯಾವ ಹಣೆಪಟ್ಟಿ ಹಚ್ಚಿಕೊಳ್ಳುವರೊ ಏನೋ, ಆದರೆ ಅವರು ತಮ್ಮನ್ನು ಮರೆಯಲು ಆಸ್ಪದ ಕೊಡದ ವ್ಯಕ್ತಿ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಡಾ.ಅಂಬೇಡ್ಕರ್ ಅವರು ಸ್ವಾಗತ ಸಮಿತಿಯಿಂದ ಘಾತಿಸಿಕೊಳ್ಳಲು ಬಿಡಲಿಲ್ಲ. ತಮ್ಮ ಸ್ವಂತ ಖರ್ಚಿನಿಂದ ಈ ಉಪನ್ಯಾಸವನ್ನು ಪ್ರಕಟಿಸಿ ಉತ್ತರ ಕೊಟ್ಟಿದ್ದಾರೆ. ಮುದ್ರಿತ ಪ್ರತಿಗೆ ಎಂಟು ಆಣೆ ಬೆಲೆ ನಿಗದಿ ಮಾಡಿದ್ದಾರೆ. ಅದನ್ನು ಎರಡಾಣೆಗೆ, ಇಲ್ಲವಾದರೆ ನಾಲ್ಕಾಣೆಗಾದರೂ ಇಳಿಸಬೇಕೆಂದು ನಾನು ಸೂಚಿಸಬಯಸುತ್ತೇನೆ.
ಈ ಉಪನ್ಯಾಸವನ್ನು ಯಾವ ಸುಧಾರಕನೂ ಉಪೇಕ್ಷಿಸಲಾಗದು. ಸಂಪ್ರದಾಯಪ್ರಿಯರೂ ಅದನ್ನೋದಿ ಪ್ರಯೋಜನ ಪಡೆಯಬಹುದು. ಹೀಗೆಂದಾಕ್ಷಣ ಉಪನ್ಯಾಸದಲ್ಲಿ ಆಕ್ಷೇಪಾರ್ಹವಾದುದೇನೂ ಇಲ್ಲವೆಂದಲ್ಲ. ಗಂಭೀರವಾದ ಆಕ್ಷೇಪಣೆಗಳಿಗೆ ಅದು ಆಸ್ಪದ ಕೊಡುವುದೆಂಬುದಕ್ಕಾಗಿಯಾದರೂ ಅದನ್ನು ಓದಲೇಬೇಕು. ಡಾ. ಅಂಬೇಡ್ಕರ್ ಅವರು ಹಿಂದೂಧರ್ಮಕ್ಕೆ ಒಂದು ಪಂಥಾಹ್ವಾನ. ಹಿಂದೂವಾಗಿ ಬೆಳೆದು, ಹಿಂದೂ ಪ್ರಭುವೊಬ್ಬನ ನೆರವಿನಿಂದ ಶಿಕ್ಷಣ ಪಡೆದು, ತಾನು ಮತ್ತು ತನ್ನ ಜನರು ಸವರ್ಣ ಹಿಂದೂಗಳ ಕೈಯಲ್ಲಿ ಅನುಭವಿಸಿದ ಕಿರುಕುಳದಿಂದ ಹತಾಶರಾಗಿ ಈಗ ಅವರನ್ನು ತ್ಯಜಿಸಲು ಮಾತ್ರವಲ್ಲ, ಅವರಿಗೂ ತನಗೂ (ಪುಟ 94)
ಸಮಾನವಾಗಿ ಪರಂಪರಾಗತವಾಗಿ ಬಂದ ಧರ್ಮವನ್ನು ಕೂಡ ತ್ಯಜಿಸಲು ನಿರ್ಧರಿಸಿದ್ದಾರೆ. ಧರ್ಮದ ಕೆಲವು ಪ್ರತಿಪಾದಕರ ಬಗೆಗೆ ಉಂಟಾದ ಜಿಗುಪ್ಸೆಯನ್ನು ಆತ ಆ ಧರ್ಮಕ್ಕೂ ವರ್ಗಾಯಿಸಿದ್ದಾರೆ.

ಆದರೆ ಇದರಲ್ಲಿ ಸೋಜಿಗವೇನೂ ಇಲ್ಲ. ಒಂದು ಪದ್ಧತಿ ಅಥವಾ ಸಂಸ್ಥೆ ಎಂತಹುದೆಂಬುದನ್ನು ಅದರ ಪ್ರತಿನಿಧಿಗಳ ನಡವಳಿಕೆಯಿಂದಲೇ ನಿರ್ಧರಿಸಬಹುದು. ಇಷ್ಟೇ ಅಲ್ಲ. ಸವರ್ಣ ಹಿಂದೂಗಳಲ್ಲಿ ಬಹುಸಂಖ್ಯಾತರು ತಮ್ಮ ಜೊತೆಯಲ್ಲಿ ಬದುಕುತ್ತಿರುವ ಕೆಲವು ಹಿಂದೂಗಳನ್ನು ಅಸ್ಪೃಶ್ಯರೆಂದು ಕರೆದು ಕ್ರೂರವಾಗಿ ನಡೆಸಿಕೊಂಡಿರುವುದಕ್ಕೆ ಧರ್ಮಗ್ರಂಥಗಳು ನೀಡಿದ ಅಧಿಕಾರವನ್ನು ಆಧಾರವಾಗಿಟ್ಟುಕೊಂಡಿದ್ದರೆಂದು ಡಾ. ಅಂಬೇಡ್ಕರ್ ಕಂಡುಕೊಂಡರು. ಈ ಬಗೆಯ ನಡವಳಿಕೆಗೆ ಕಾರಣಗಳನ್ನು ಶೋಧಿಸಿ ನೋಡಿದಾಗ ಅಸ್ಪೃಶ್ಯತೆಗೆ ಸಾಕಷ್ಟು ಪ್ರಮಾಣಗಳು ಅವರಿಗೆ ದೊರೆತವು. ನಿರ್ದಿಷ್ಟ ಅಧ್ಯಾಯ ಹಾಗೂ ಶ್ಲೋಕಗಳನ್ನು ಉದಾಹರಿಸುತ್ತಾ ಅವರು ಮೂರು ಬಗೆಯ ದೋಷಾರೋಪಣೆಗಳನ್ನು ಮಾಡಿದ್ದಾರೆ. ಸವರ್ಣ ಹಿಂದೂಗಳ ಅಮಾನುಷವಾದ ವರ್ತನೆ, ಅದಕ್ಕೆ ಅವರು ಕೊಡುವ ನಿರ್ಲಜ್ಜ ಸಮರ್ಥನೆ ಮತ್ತು ಧರ್ಮಗ್ರಂಥಗಳಲ್ಲಿ ಆ ಸಮರ್ಥನೆಗೆ ಇರುವ ಆಧಾರಗಳು.

ತನ್ನ ಜೀವನಕ್ಕಿಂತಲೂ ಹೆಚ್ಚಾಗಿ ಧರ್ಮವನ್ನು ಪ್ರೀತಿಸುವ ಯಾವ ಹಿಂದೂವಾದರೂ ಈ ದೋಷಾರೋಪಣೆಯ ಮಹತ್ವವನ್ನು ಉಪೇಕ್ಷಿಸಲಾರನು. ಈ ಬಗೆಯ ಜಿಗುಪ್ಸೆ ಹೊಂದಿದವರು ಡಾ. ಅಂಬೇಡ್ಕರ್ ಅವರು ಒಬ್ಬರೇ ಅಲ್ಲ. ಅಂತಹ ಜನರಲ್ಲಿ ಅತ್ಯಂತ ಹಠಮಾರಿ ಹಾಗೂ ಅತ್ಯಂತ ಸಮರ್ಥರಾದ ವ್ಯಕ್ತಿ ಡಾ. ಅಂಬೇಡ್ಕರ್ ಅವರು. ರಾಜಿ ಮಾಡಿಕೊಳ್ಳಲು ಅತ್ಯಂತ ಅಸಾಧ್ಯವಾದ ವ್ಯಕ್ತಿ. ಆ ಮುಂದಾಳುಗಳ ಮುಂಚೂಣಿಯಲ್ಲಿರುವವರು ಇವರೊಬ್ಬರೇ. ಆದರೆ ಇವರು ಅತ್ಯಂತ ಚಿಕ್ಕದಾದ ಒಂದು ಅಲ್ಪಸಂಖ್ಯಾತ ವರ್ಗಕ್ಕೆ ಪ್ರತಿನಿಧಿಯಾಗಿದ್ದಾರೆ. ಇವರು ಹೇಳಿದ ಮಾತುಗಳನ್ನೇ ಹೆಚ್ಚು ಅಥವಾ ಕಡಿಮೆ ಉಗ್ರತೆಯಿಂದ ದಲಿತವರ್ಗದ ಅನೇಕ ಮುಂದಾಳುಗಳು ಪ್ರತಿಧ್ವನಿಸುತ್ತಾರೆ. ಆದರೆ ಅವರಲ್ಲಿ ರಾವ್ ಬಹಾದ್ದೂರು ಎಂ.ಸಿ. ರಾಜಾ ಮತ್ತು ದಿವಾನ್ ಬಹಾದ್ದೂರ್ ಶ್ರೀನಿವಾಸನ್ ಅಂಥವರು ಹಿಂದೂ ಧರ್ಮವನ್ನು ತ್ಯಜಿಸುವುದಾಗಿ ಬೆದರಿಕೆ ಹಾಕುವುದಿಲ್ಲ. ಇಷ್ಟೇ ಅಲ್ಲ, ಹರಿಜನರನ್ನು ಕ್ರೂರವಾಗಿ, ನಿರ್ಲಜ್ಜವಾಗಿ ನಡೆಸಿಕೊಂಡರೂ ಇಲ್ಲಿ ಸಿಕ್ಕುವ ಬೆಚ್ಚನೆಯ ಪ್ರೀತಿಯನ್ನೇ ಸೂಕ್ತ ಪರಿಹಾರವೆಂದು ಗ್ರಹಿಸಿದ್ದಾರೆ.
ಆದರೆ ಅನೇಕ ಮುಂದಾಳುಗಳು ಹಿಂದೂ ಧರ್ಮದಲ್ಲಿ ಇನ್ನೂ ಉಳಿದುಕೊಂಡಿರುವರೆಂಬ ಮಾತ್ರಕ್ಕೆ ಡಾ. ಅಂಬೇಡ್ಕರ್ ಅವರ ವಾದವನ್ನು ಉಪೇಕ್ಷಿಸುವಂತಿಲ್ಲ. ಸವರ್ಣ ಹಿಂದೂಗಳು ತಮ್ಮ ನಂಬಿಕೆಯನ್ನೂ ನಡವಳಿಕೆಯನ್ನೂ ತಿದ್ದಿಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ, ವಿದ್ವಾಂಸರೂ ಪ್ರಭಾವಶಾಲಿಗಳೂ ಆದ ಸವರ್ಣ ಹಿಂದೂಗಳು ಧರ್ಮಶಾಸ್ತ್ರಗಳ ಅರ್ಥವನ್ನು ಸಮರ್ಪಕವಾಗಿ, ಅಧಿಕಾರಯುತವಾಗಿ ವಿವರಿಸಬೇಕು. ಡಾ. ಅಂಬೇಡ್ಕರ್ ಅವರ ದೋಷಾರೋಪಣೆಯಲ್ಲಿ ಅಡಕವಾದ ಪ್ರಶ್ನೆಗಳು ಹೀಗಿವೆ:-
೧. ಧರ್ಮಕ್ಕೆ ಆಧಾರವಾದ ಗ್ರಂಥಗಳಾವುವು?
೨. ಈಗ ಅಚ್ಚಾಗಿರುವ ಗ್ರಂಥಗಳೆಲ್ಲ ಮೂಲ ಪಾಠವೆಂದು ಪರಿಗಣಿಸಬೇಕೆ? ಅಥವಾ ಅದರಲ್ಲಿ ಪ್ರಕ್ಷಿಪ್ತವೆಂದು ಕೆಲಭಾಗವನ್ನು ತಿರಸ್ಕರಿಸಬೇಕೆ?
- ಹೀಗೆ ಪ್ರಕ್ಷಿಪ್ತ ಭಾಗವನ್ನು ತೆಗೆದು ಹಾಕಿದ ಮೇಲೆ ಉಳಿಯುವ ಮೂಲ ಪಾಠವಾದರೂ ಅಸ್ಪೃಶ್ಯತೆ, ಜಾತಿಪದ್ಧತಿ, ಸ್ಥಾನಮಾನದ ಸಮಾನತೆ, ಅಂತರ್ಜಾತೀಯ ಭೋಜನ ಹಾಗೂ ಅಂತರ್ಜಾತಿಯ ವಿವಾಹಗಳ ಪ್ರಶ್ನೆಗೆ ಕೊಡುವ ಉತ್ತರವೇನು?
(ಡಾ. ಅಂಬೇಡ್ಕರ್ ಅವರು ತಮ್ಮ ಉಪನ್ಯಾಸದಲ್ಲಿ ಇವೆಲ್ಲವನ್ನೂ ವಿವೇಚಿಸಿದ್ದಾರೆ) (ಪುಟ 95)
ಈ ಪ್ರಶ್ನೆಗಳಿಗೆ ನನ್ನ ಉತ್ತರವನ್ನೂ, ಡಾ. ಅಂಬೇಡ್ಕರ್ ಅವರ ವಾದದಲ್ಲಿರುವ (ಕೆಲವಾದರೂ) ದೋಷಗಳ ಬಗ್ಗೆ ನನ್ನ ಹೇಳಿಕೆಯನ್ನು ಮುಂದಿನ ಸಂಚಿಕೆಗೆ ಮೀಸಲಿಡಲಾಗಿದೆ.
(ಹರಿಜನ್, ಜುಲೈ ೧೧, ೧೯೩೬)
II
ವೇದಗಳು, ಉಪನಿಷತ್ತುಗಳು, ಸ್ಮೃತಿಗಳು ಮತ್ತು ರಾಮಾಯಣ, ಮಹಾಭಾರತ ಸಹಿತವಾದ ಪುರಾಣಗಳು ಹಿಂದೂಗಳಿಗೆ ಧರ್ಮಗ್ರಂಥಗಳು. ಅವುಗಳ ಯಾದಿ ಇಲ್ಲಿಗೇ ಮುಗಿಯವುದಿಲ್ಲ. ಪ್ರತಿಯೊಂದು ಯುಗ, ಪ್ರತಿಯೊಂದು ತಲೆಮಾರು ಯಾದಿಗೆ ಹೊಸ ಗ್ರಂಥಗಳನ್ನು ಸೇರಿಸುತ್ತಾ ಬಂದಿದೆ. ಆದುದರಿಂದ ಅಚ್ಚಾದ ಅಥವಾ ಹಸ್ತಲಿಖಿತ ಗ್ರಂಥಗಳೆಲ್ಲವೂ ಆಗಮಗಳಾಗುವುದಿಲ್ಲ. ಉದಾಹರಣಾರ್ಥವಾಗಿ ಸ್ಮೃತಿಗಳಲ್ಲಿ ನಿರೂಪಿತವಾದ ಅನೇಕ ಮಾತುಗಳನ್ನು ದೇವವಾಣಿಯೆಂದು ಸ್ವೀಕರಿಸಲಾಗುವುದಿಲ್ಲ. ಡಾ. ಅಂಬೇಡ್ಕರ್ ಅವರು ಉದಾಹರಿಸುವ ಸ್ಥಿತಿಗಳ ಶ್ಲೋಕಗಳು ಅಧಿಕೃತ ಪಾಠವಲ್ಲ. ಆಗಮ ಗ್ರಂಥಗಳೆಂಬ ಹೆಸರಿಗೆ ಯೋಗ್ಯವಾದ ಗ್ರಂಥಗಳು ಶಾಶ್ವತ ತತ್ವಗಳನ್ನು ಹೇಳುತ್ತವೆ, ಮತ್ತು ಅರಿವುಳ್ಳವರಿಗೆಲ್ಲ ವೇಧ್ಯವಾಗುತ್ತವೆ. ಯಾವುದು ಬುದ್ದಿಯ ಒರೆಗಲ್ಲಿಗೆ ನಿಲ್ಲಲಾರದೋ, ಅಥವಾ ಆಧ್ಯಾತ್ಮಿಕ ಅನುಭವಕ್ಕೆ ಒಳಪಡಲಾರದೋ ಅಂತಹುದನ್ನು ದೇವವಾಣಿಯೆಂದು ಸ್ವೀಕರಿಸಲಾಗುವುದಿಲ್ಲ. ಪ್ರಕ್ಷಿಪ್ತ ಅಂಶಗಳನ್ನು ತೆಗೆದುಹಾಕಿದ ಬಳಿಕ ಕೂಡ ಆಗಮಗ್ರಂಥಗಳನ್ನು ಸರಿಯಾಗಿ ವಿವರಿಸುವವರ ಅಗತ್ಯವಿದೆ. ಅತ್ಯಂತ ಸಮರ್ಪಕವಾಗಿ ವಿವರಿಸುವವರು ಯಾರು? ಪಂಡಿತರಂತೂ ಅಲ್ಲ. ಪಾಂಡಿತ್ಯ ಬೇಕೆಂಬುದೇನೊ ನಿಜ. ಆದರೆ ಧರ್ಮ ಅದರಿಂದಲೆ ಬಾಳುವುದಿಲ್ಲ. ಸಾಧುಗಳು ಹಾಗೂ ದ್ರಷ್ಟಾರರ ಅನುಭವದಲ್ಲಿ, ಅವನ ಜೀವನ ಹಾಗೂ ಉಕ್ತಿಗಳಲ್ಲಿ ಧರ್ಮ ಬಾಳುತ್ತದೆ. ಆಗಮಗಳ ವ್ಯಾಖ್ಯಾನಕಾರರೆಲ್ಲ ಮರೆತು ಹೋದರೂ ಕೂಡ, ಸಾಧುಸಂತರ ಒಟ್ಟು ಅನುಭವ ಉಳಿಯುತ್ತದೆ, ಮತ್ತು ಮುಂದಿನ ಯುಗಗಳಿಗೆ ಸ್ಫೂರ್ತಿಯೊದಗಿಸುತ್ತದೆ.
ಜಾತಿ ಪದ್ಧತಿಗೂ ಧರ್ಮಕ್ಕೂ ಸಂಬಂಧವೇ ಇಲ್ಲ. ಅದೊಂದು ರೂಢಿಯಾಗಿ ಬಂದಿದೆ. ಅದರ ಮೂಲವೇನೂ ನಾನು ಅರಿಯೆ, ಅರಿತುಕೊಳ್ಳುವ ಅವಶ್ಯಕತೆಯೂ ಇಲ್ಲ; ನನ್ನ ಆಧ್ಯಾತ್ಮಿಕ ಹಸಿವು ಹಿಂಗಿಸುವುದಕ್ಕೆ ಅದು ಬೇಕಾಗಿಲ್ಲ. ಆದರೆ ಆಧ್ಯಾತ್ಮಿಕ ಅಭಿವೃದ್ಧಿಗೂ ರಾಷ್ಟ್ರೀಯ ಅಭಿವೃದ್ಧಿಗೂ ಅದು ಅಪಾಯವೊಡ್ಡುತ್ತದೆಯೆಂಬುದನ್ನು ನಾನು ಬಲ್ಲೆ. ವರ್ಣ ಮತ್ತು ಆಶ್ರಮಗಳು ಜಾತಿಗೆ ಸಂಬಂಧಪಟ್ಟಿಲ್ಲ. ನಮ್ಮ ನಮ್ಮ ಸಾಂಪ್ರದಾಯಿಕ ವೃತ್ತಿಗಳನ್ನು ಅನುಸರಿಸಿ ನಾವು ಪ್ರತಿಯೊಬ್ಬರೂ ಉಪಜೀವನ ಸಾಗಿಸಬೇಕೆಂದು ವರ್ಣವ್ಯವಸ್ಥೆ ತಿಳಿಸುತ್ತದೆ. ಅದು ನಮ್ಮ ಕರ್ತವ್ಯಗಳನ್ನು ವ್ಯಾಖ್ಯೆ ಮಾಡಿ ತಿಳಿಸುತ್ತದಲ್ಲದೆ ಹಕ್ಕುಗಳನ್ನಲ್ಲ. ಮಾನವ ಕೋಟಿಯ ಕಲ್ಯಾಣಕ್ಕೆ ಅನುಕೂಲವಾದ ವೃತ್ತಿಗಳನ್ನು ಅದು ಹೇಳುತ್ತದೆ, ಬೇರೆ ವೃತ್ತಿಯನ್ನಲ್ಲ. ವೃತ್ತಿಗಳಲ್ಲಿ ಉಚ್ಚ-ನೀಚ ಭೇದವಿಲ್ಲವೆಂಬುದೂ ಇದರಿಂದ ತಿಳಿಯುತ್ತದೆ. ಎಲ್ಲಾ ವೃತ್ತಿಗಳೂ ಒಳ್ಳೆಯವು. ನ್ಯಾಯ ಸಮ್ಮತವಾದುವು ಮತ್ತು ಸ್ಥಾನಮಾನದ ದೃಷ್ಟಿಯಿಂದ ಸಂಪೂರ್ಣ ಸಮಾನವಾದುವು. ಬ್ರಾಹ್ಮಣನ (ಆಧ್ಯಾತ್ಮಿಕ ಗುರುವಿನ) ವೃತ್ತಿ ಹಾಗೂ ಜಾಡಮಾಲಿಯ ವೃತ್ತಿ ಎರಡೂ ಸರಿಸಮಾನವಾದವು. ಸಮರ್ಪಕವಾಗಿ ನೆರವೇರಿಸಿದಾಗ, ದೇವರ ದೃಷ್ಟಿಯಿಂದ. ಇವೆರಡೂ ವೃತ್ತಿಗಳಿಂದ ಬರುವ ಪುಣ್ಯವೂ ಸರಿಸಮಾನವೆ; ಒಂದು ಕಾಲದಲ್ಲಿ ಮಾನವರ ದೃಷ್ಟಿಯಿಂದ ಕೂಡ ಎರಡಕ್ಕೂ ಸಮಾನವಾದ ಬಹುಮಾನವಿತ್ತು. ಉಪಜೀವನಕ್ಕೆ ಮಾತ್ರ ವೃತ್ತಿಯಲ್ಲದೆ ಬೇರೇನೂ ಅಲ್ಲ. ಈ ಧರ್ಮದ ಆರೋಗ್ಯಕರವಾದ ಆಚರಣೆ ಇಂದಿಗೂ ಹಳ್ಳಿಗಳಲ್ಲಿ ಕಣ್ಣಿಗೆ ಬೀಳುತ್ತದೆ. ಆರುನೂರು ಜನಸಂಖ್ಯೆಯುಳ್ಳ ಸೇಗಾನ್ ಗ್ರಾಮದಲ್ಲಿ ನಾನು ಇದ್ದೆ. ಅಲ್ಲಿ (ಪುಟ 96)
ಬ್ರಾಹ್ಮಣರನ್ನೊಳಗೊಂಡು ಬೇರೆ ಬೇರೆ ವೃತ್ತಿಗಳವರ ಗಳಿಕೆಯಲ್ಲಿ ವಿಶೇಷ ವ್ಯತ್ಯಾಸವನ್ನೇನೂ ನಾನು ಕಂಡಿಲ್ಲ. ಜನರು ದಾನವಾಗಿ ಅರ್ಪಿಸುವುದನ್ನೇ ಸ್ವೀಕರಿಸಿ ತಮ್ಮ ಆಧ್ಯಾತ್ಮಿಕ ಸಂಪತ್ತನ್ನು ಜನರಿಗೆ ಉದಾರವಾಗಿ ನೀಡುತ್ತಾ ಬದುಕುವ ನಿಜವಾದ ಬ್ರಾಹ್ಮಣರು ಈಗಲೂ ಇದ್ದಾರೆಂದು ನಾನು ಕಂಡಿದ್ದೇನೆ. ಇವರಲ್ಲಿ ವರ್ಣಧರ್ಮವನ್ನು ಉಲ್ಲಂಘಿಸಿ ನಡೆಯುವ ಕೆಲ ಜನರಿರಬಹುದು. ವ್ಯಂಗ್ಯಚಿತ್ರಗಳಂತಿರುವ ಇವರನ್ನೇ ಆಧರಿಸಿ ವರ್ಣಧರ್ಮವನ್ನು ಬೆಲೆಗಟ್ಟಲಾಗದು. ಒಂದು ವರ್ಣ ಇನ್ನೊಂದು ವರ್ಣದ ಮೇಲೆ ಅತಿಕ್ರಮಣ ಮಾಡಿದರೆ ಅದು ಧರ್ಮವನ್ನು ಮೀರಿದಂತೆಯೇ ಸರಿ. ಅಸ್ಪೃಶ್ಯತೆಯ ನಂಬಿಕೆಗೆ ವರ್ಣಧರ್ಮದಲ್ಲಿ ಆಧಾರವೇ ಇಲ್ಲ. (ಹಿಂದೂ ಧರ್ಮದ ಸಾರದ ಪ್ರಕಾರ ಸತ್ಯಸ್ವರೂಪನಾದ ಒಬ್ಬನೇ ಒಬ್ಬ ದೇವರಿದ್ದಾನೆ ಮತ್ತು ಅಹಿಂಸೆಯನ್ನು ಮಾನವ ಕುಲದ ನಿಯಮವಾಗಿ ಸ್ವೀಕರಿಸಲಾಗಿದೆ).
ಹಿಂದೂ ಧರ್ಮದ ಬಗೆಗೆ ನಾನು ಮಾಡಿದ ಈ ವ್ಯಾಖ್ಯಾನವನ್ನು ಡಾ. ಅಂಬೇಡ್ಕರ್ ಅವರೊಬ್ಬರೇ ಅಲ್ಲದೆ, ಇನ್ನೂ ಅನೇಕರು ವಿರೋಧಿಸುವರೆಂದು ನಾನು ಬಲ್ಲೆ. ಅದರಿಂದ ನನ್ನ ನಿಲವೇನೂ ಬದಲಾಗದು. ಧರ್ಮದ ಅರ್ಥವನ್ನು ಈ ರೀತಿಯಲ್ಲಿ ತಿಳಿದುಕೊಂಡೆ, ಸುಮಾರು ಐವತ್ತು ವರ್ಷ ಬದುಕಿದ್ದೇನೆ ಮತ್ತು ಅದರನ್ವಯ ನನ್ನ ಜೀವನವನ್ನು ಕ್ರಮಗೊಳಿಸಲು ಸಾಧ್ಯವಿದ್ದ ಮಟ್ಟಿಗೆ ಪ್ರಯತ್ನಿಸಿದ್ದೇನೆ.
ಅಧಿಕೃತವೆಂದು ನಿಶ್ಚಿತವಾಗಿ ಒಪ್ಪಲಾಗದ ಗ್ರಂಥಗಳನ್ನು ಉದಾಹರಿಸಿ, ಹಿಂದೂಧರ್ಮದ ಯೋಗ್ಯ ಪ್ರತಿನಿಧಿಗಳಲ್ಲದಂತಹ ದುರಾಚರಣೆಯ ಜನರನ್ನು ಹಿಂದೂಗಳೆಂದು ಆಯ್ದುಕೊಂಡು, ಡಾ. ಅಂಬೇಡ್ಕರ್ ಅವರು ತಮ್ಮ ಉಪನ್ಯಾಸದಲ್ಲಿ ದೊಡ್ಡ ತಪ್ಪು ಮಾಡಿದ್ದಾರೆ. ಡಾ. ಅಂಬೇಡ್ಕರ್ ಅವರು ಹಿಡಿದುಕೊಂಡಿರುವ ಮಾನದಂಡದಿಂದ ಅಳೆಯ ಹೊರಟರೆ ಈಗ ಇರುವ ಪ್ರತಿಯೊಂದು ಧರ್ಮವೂ ಪತಿತವೆನಿಸೀತು.
ತಮ್ಮ ಸಮರ್ಥವಾದ ಉಪನ್ಯಾಸದಲ್ಲಿ ಪಂಡಿತರಾದ ಈ ಡಾಕ್ಟರರು ತಮ್ಮ ವಾದವನ್ನು ಅವಶ್ಯಕತೆಗಿಂತಲೂ ಹೆಚ್ಚಾಗಿ ಸಿದ್ಧಮಾಡಿದ್ದಾರೆ. ಚೈತನ್ಯ, ಜ್ಞಾನದೇವ, ತುಕಾರಾಮ, ತಿರುವಳ್ಳುವರ್, ರಾಮಕೃಷ್ಣ ಪರಮಹಂಸ, ರಾಜಾರಾಮ್ ಮೋಹನರಾಯ್, ಮಹರ್ಷಿ ದೇವೇಂದ್ರನಾಥ ಠಾಕೂರ್, ವಿವೇಕಾನಂದ ಮತ್ತು ಅನೇಕಾನೇಕರು ಒಪ್ಪಿಕೊಂಡ ಧರ್ಮವು ಡಾ. ಅಂಬೇಡ್ಕರ್ ಅವರು ಹೇಳುವಷ್ಟು ಗುಣಹೀನವಾಗಿರಬಲ್ಲುದೇ? ಧರ್ಮದ ಬೆಲೆಕಟ್ಟುವುದು ಆದರ ಕನಿಷ್ಠ ಮಾದರಿಗಳಿಂದಲ್ಲ, ಆ ಧರ್ಮದಲ್ಲಿ ಉದಿಸಿದ ಅತ್ಯುತ್ತಮ ಮಾದರಿಗಳಿಂದ. ಯಾಕೆಂದರೆ ಇಟ್ಟುಕೊಳ್ಳಬೇಕಾದ ಆದರ್ಶವೆಂದರೆ ಅದೊಂದೇ.
(ಹರಿಜನ, ಜುಲೈ ೧೮, ೧೯೩೬)
III
ವರ್ಣ ಮತ್ತು ಜಾತಿ
ಲಾಹೋರದ ಜಾತ್-ಪತ್-ತೋಡಕ್ ಮಂಡಲಕ್ಕೆ ಸೇರಿದ ಶ್ರೀ ಸಂತ ರಾಮ್‌ಜಿ ಈ ಕೆಳಗಿನ ಲೇಖನವನ್ನು ಪ್ರಕಟಿಸಬೇಕೆಂದು ನನ್ನೆಡೆಗೆ ಕಳುಹಿಸಿದ್ದಾರೆ:
“ಡಾ. ಅಂಬೇಡ್ಕರ್ ಅವರು ಹಾಗೂ ಲಾಹೋರದ ಜಾತ್-ಪತ್-ತೋಡಕ್ ಮಂಡಲದ ವಿಷಯವಾಗಿ ನೀವು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಓದಿದ್ದೇನೆ. ಈ ವಿಷಯವಾಗಿ ನಾನು ಕೆಲ ಮಾತುಗಳನ್ನು ಹೇಳಬಯಸುತ್ತೇನೆ. (ಪುಟ 97)
ಅಸ್ಪೃಶ್ಯ ವರ್ಗಕ್ಕೆ ಸೇರಿದವರೆಂಬ ಕಾರಣಕ್ಕೋಸ್ಕರ ಡಾ.ಅಂಬೇಡ್ಕರ್ ಅವರಿಗೆ ಅಧ್ಯಕ್ಷರಾಗಲು ನಾವು ಭಿನ್ನವಿಸಲಿಲ್ಲ. ಯಾಕೆಂದರೆ ನಾವು ಹಿಂದೂಗಳಲ್ಲಿ ಸ್ಪಶ್ಯ, ಅಸ್ಪೃಶ್ಯ ಭೇದವನ್ನು ಮಾಡುವುದಿಲ್ಲ. ತದ್ವಿರುದ್ಧವಾಗಿ, ಹಿಂದೂಧರ್ಮಕ್ಕೆ ಬಡಿದುಕೊಂಡ ಮಾರಕರೋಗವೇನೆಂದು ನಿರ್ಧರಿಸುವಲ್ಲಿ ನಮ್ಮ ಅಭಿಪ್ರಾಯವೇ ಅವರದ್ದಾಗಿದ್ದರಿಂದ ಹಿಂದೂಗಳ ಅವನತಿಗೆ ಜಾತಿಪದ್ಧತಿಯೇ ಕಾರಣವೆಂದು ಅವರು ಅಭಿಪ್ರಾಯಪಟ್ಟಿದುದರಿಂದ ನಾವು ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದೆವು. ತಮ್ಮ ಡಾಕ್ಟರೇಟ್ ಪ್ರಬಂಧಕ್ಕೆ ಜಾತಿಪದ್ಧತಿಯನ್ನೇ ಅವರು ವಿಷಯವಾಗಿ ಆಯ್ದುಕೊಂಡಿದ್ದರು. ಆದುದರಿಂದ ಆ ವಿಷಯವನ್ನು ಕೂಲಂಕಷವಾಗಿ ಅಭ್ಯಾಸ ಮಾಡಿದ್ದಾರೆ. ಜಾತಿ ನಿರ್ಮೂಲನೆ ಮಾಡಲು ಹಿಂದೂಗಳ ಮನವೊಲಿಸುವುದೇ ನಮ್ಮ ಸಮ್ಮೇಳನದ ಉದ್ದೇಶವಾಗಿತ್ತು. ಆದರೆ ಸಾಮಾಜಿಕ ಹಾಗೂ ಧಾರ್ಮಿಕ ವಿಷಯಗಳಲ್ಲಿ ಹಿಂದೂವಲ್ಲದ ವ್ಯಕ್ತಿ ಮಾಡುವ ಸಲಹೆ ಪರಿಣಾಮಕಾರಿಯಾಗಲಾರದು. ಉಪನ್ಯಾಸದ ಕೊನೆಕೊನೆಯ ಭಾಗದಲ್ಲಿ ಈ ಡಾಕ್ಟರ್ ಇದು ಹಿಂದೂವಾಗಿ ತಾವು ಮಾಡುವ ಅಂತಿಮ ಭಾಷಣವೆಂದು ಹೇಳಲು ಹಠ ಹಿಡಿದರು. ಸಮ್ಮೇಳನದ ಹಿತದೃಷ್ಟಿಯಿಂದ ಇದು ಅಪ್ರಕೃತವೂ, ಹಾನಿಕರವೂ ಅನ್ನಿಸಿತು. ಆದುದರಿಂದ ಈ ವಾಕ್ಯವನ್ನು ತೆಗೆದುಹಾಕಬೇಕೆಂದು ನಾವು ಪ್ರಾರ್ಥಿಸಿಕೊಂಡೆವು. ಆ ಮಾತನ್ನು ಇನ್ನೊಂದು ಸಂದರ್ಭ ಎಲ್ಲಾದರೂ ಅವರು ಹೇಳಬಹುದಾಗಿತ್ತು. ಆದರೆ ಅವರು ನಮ್ಮ ಬಿನ್ನಹವನ್ನು ಮನ್ನಿಸಲಿಲ್ಲ. ನಮ್ಮ ಸಮ್ಮೇಳನವು ಕೇವಲ ಒಂದು ಪ್ರದರ್ಶನವಾಗುವುದು ನಮಗೆ ಬೇಡವಾಯಿತು. ಇಷ್ಟೆಲ್ಲ ಇದ್ದರೂ ಅವರ ಉಪನ್ಯಾಸವನ್ನು ನಾನು ಹೊಗಳದೆ ಇರಲಾರೆ. ನನಗೆ ತಿಳಿದ ಮಟ್ಟಿಗೆ ಅವರ ಉಪನ್ಯಾಸವು ಆ ವಿಷಯವಾಗಿ ಅತ್ಯಂತ ಪಾಂಡಿತ್ಯಪೂರ್ಣವಾದ ಪ್ರಬಂಧವಾಗಿದ್ದು, ಭಾರತದ ಪ್ರತಿಯೊಂದು ಭಾಷೆಯಲ್ಲಿ ಅನುವಾದ ಯೋಗ್ಯವಾಗಿದೆ.
ಇದಲ್ಲದೆ ನಿಮ್ಮ ಗಮನಕ್ಕೆ ಇನ್ನೊಂದು ಮಾತನ್ನು ತರಬಯಸುತ್ತೇನೆ. ವರ್ಣ ಮತ್ತು ಜಾತಿ ಇವೆರಡರಲ್ಲಿ ನೀವು ತೋರಿದ ತಾತ್ವಿಕ ಭೇದವು ಸಾಮಾನ್ಯ ಜನರ ತಿಳಿವಳಿಕೆಗೆ ನಿಲುಕುವಂತಹದಲ್ಲ. ಏಕೆಂದರೆ ಪ್ರತ್ಯಕ್ಷ ವ್ಯವಹಾರದಲ್ಲಿ ವರ್ಣವೆಂದರೂ ಅದೇ, ಜಾತಿಯೆಂದರೂ ಅದೇ. ಅಂತರ್ಜಾತೀಯ ವಿವಾಹ ಮತ್ತು ಅಂತರ್ಜಾತೀಯ ಭೋಜನಗಳನ್ನು ನಿಷೇಧಿಸುವ ಎರಡರ ಕೆಲಸವೂ ಅದೇ. ನಿಮ್ಮ ವರ್ಣವ್ಯವಸ್ಥೆಯ ತತ್ವ ಈ ಕಾಲದಲ್ಲಿ ಆಚರಣೆ ಸಾಧ್ಯವಿಲ್ಲ. ಇನ್ನು ಮುಂದಿನ ಕಾಲದಲ್ಲಾದರೂ ಅದಕ್ಕೆ ಪುನರುದ್ಧಾರದ ಭರವಸೆಯಿಲ್ಲ. ಆದರೆ ಹಿಂದೂಗಳು ಜಾತಿಪದ್ಧತಿಯ ಗುಲಾಮರಾಗಿಬಿಟ್ಟಿದ್ದಾರೆ. ಜಾತಿಯನ್ನು ನಾಶ ಮಾಡಲು ಅವರು ಬಯಸುವುದಿಲ್ಲ. ಆದುದರಿಂದ ನೀವು ವರ್ಣವ್ಯವಸ್ಥೆಯ ಕಾಲ್ಪನಿಕ ಆದರ್ಶವನ್ನು ಪ್ರತಿಪಾದಿಸಿದಾಗ ಅವರು ತಮ್ಮ ಜಾತಿಪದ್ಧತಿಗೆ ಸಮರ್ಥನೆ ದೊರೆಯಿತೆಂದು ಪರಿಗಣಿಸುತ್ತಾರೆ. ಹೀಗೆ ವರ್ಣವ್ಯವಸ್ಥೆಯ ಕಾಲ್ಪನಿಕ ಲಾಭವನ್ನು ಪ್ರತಿಪಾದಿಸಿ ನೀವು ಸಾಮಾಜಿಕ ಸುಧಾರಣೆಗೆ ಮಹಾ ಅನ್ಯಾಯ ಮಾಡುತ್ತಿದ್ದೀರಿ. ಏಕೆಂದರೆ ಅದು ನಮ್ಮ ಹಾದಿಗೆ ಅಡ್ಡಗಾಲಾಗುತ್ತದೆ. ವರ್ಣವ್ಯವಸ್ಥೆಯನ್ನು ನಿರ್ಮೂಲಗೊಳಿಸದೆ ಅಸ್ಪೃಶ್ಯತಾ ನಿವಾರಣೆಗೆ ಪ್ರಯತ್ನಿಸುವುದೆಂದರೆ ರೋಗದ ಬಾಹ್ಯ ಲಕ್ಷಣಗಳಿಗೆ ಮಾತ್ರ ಚಿಕಿತ್ಸೆ ಮಾಡಿದಂತೆ. ನೀರಿನ ಮೆಲೆ ಗೆರೆಯೆಳೆಯಲು ಮಾಡಿದ ಪ್ರಯತ್ನದಂತೆ ಆಗುತ್ತದೆ. ಆಸ್ಪೃಶ್ಯರೆಂದು ಅಂಕಿತರಾದವರಿಗೆ ಹಾಗೂ ಶೂದ್ರರಿಗೆ ಸಮಾನವಾದ ಸಾಮಾಜಿಕ ಸ್ಥಾನಮಾನವನ್ನು ಕೊಡುವುದು ದ್ವಿಜರಿಗೆ ಇಷ್ಟವಾಗಿಲ್ಲ. ಆದ್ದರಿಂದ ಅವರು ಜಾತಿವಿನಾಶಕ್ಕೆ ಒಪ್ಪುವುದಿಲ್ಲ; ಅಸ್ಪೃಶ್ಯತಾ ನಿವಾರಣೆಗೆಂದು ಧಾರಾಳವಾಗಿ ಧನದಾನ ಮಾಡುತ್ತಾರೆ. ಮುಖ್ಯ ಸಮಸ್ಯೆಯಿಂದ ತಪ್ಪಿಸಿಕೊಳ್ಳುವುದೇ ಅವರ ಉದ್ದೇಶ. ಆಸ್ಪೃಶ್ಯತಾ ನಿವಾರಣೆಗೆ ಶಾಸ್ತ್ರಗಳಿಂದ ಸಹಾಯ ಪಡೆಯುವುದರಿಂದ ಕೆಸರಿನಿಂದ ಕೆಸರು ತೊಳೆದಂತೆಯೇ ಸರಿ.”
ಇದರಲ್ಲಿ ಕೊನೆಯ ಪರಿಚ್ಛೇದವು ನಿಶ್ಚಿತವಾಗಿ ಮೊದಲನೆಯ ಪರಿಚ್ಛೇದವನ್ನು ಅಲ್ಲಗಳೆಯುತ್ತದೆ. (ಪುಟ 98)
ಮಂಡಲದವರು ಶಾಸ್ತ್ರಗಳ ಸಹಾಯವನ್ನು ನಿರಾಕರಿಸುವುದಾದರೆ ಅವರೂ ಡಾ. ಅಂಬೇಡ್ಕರ್ ಅವರ ಹಾದಿ ಹಿಡಿಯುತ್ತಾರೆ; ಅಂದರೆ ಹಿಂದೂಗಳಾಗಿ ಉಳಿಯುವುದಿಲ್ಲ. ಹೀಗಿರುವಾಗ “ನಾನು ಹಿಂದೂವಾಗಿ ಕೊಡುವ ಉಪನ್ಯಾಸವಿದು” ಎಂದು ಹೇಳಿದ ಮಾತ್ರಕ್ಕೆ ಡಾ. ಅಂಬೇಡ್ಕರ್ ಅವರ ಉಪನ್ಯಾಸವನ್ನು ಇವರು ಅದು ಹೇಗೆ ಆಕ್ಷೇಪಿಸಬಲ್ಲರು? ಮಂಡಲದ ಪ್ರತಿನಿಧಿಯಾಗಿ ಮಾತಾಡುವ ಶ್ರೀ ಸಂತರಾಮರು ಡಾ. ಅಂಬೇಡ್ಕರ್ ಅವರ ಉಪನ್ಯಾಸವನ್ನೆಲ್ಲ ಮೆಚ್ಚಿ ಹೊಗಳುತ್ತಿರುವುದರಿಂದ ಅವರ ನಿಲುವು ಸಮರ್ಥನೀಯವೆನಿಸದು.
ಆದರೆ ಒಂದು ಪ್ರಶ್ನೆ ಕೇಳಬೇಕಾಗಿದೆ. ಶಾಸ್ತ್ರಗಳನ್ನು ನಿರಾಕರಿಸುವುದಾದರೆ ಈ ಮಂಡಲವು ನಂಬುವುದಾದರೂ ಯಾವುದನ್ನು? ಕುರಾನನ್ನು ನಿರಾಕರಿಸಿ ಮುಸ್ಲಿಮನು ಮುಸ್ಲಿಮನಾಗಿರಬಲ್ಲನೆ? ಬೈಬಲ್ಲನ್ನು ನಿರಾಕರಿಸಿದವನು ಕ್ರೈಸ್ತನಾಗಿ ಉಳಿಯಬಲ್ಲನೆ? ವರ್ಣ ಹಾಗೂ ಜಾತಿ ಎರಡೂ ಒಂದೇ ಆಗಿದ್ದ ಪಕ್ಷದಲ್ಲಿ ಮತ್ತು ವರ್ಣವು ಹಿಂದೂ ಧರ್ಮಶಾಸ್ತ್ರಗಳ ಅಖಂಡ ಭಾಗವಾಗಿದ್ದರೆ, ವರ್ಣ ಅಥವಾ ಜಾತಿಯನ್ನು ನಿರಾಕರಿಸುವವರು ತಮ್ಮನ್ನು ಹಿಂದೂಗಳೆಂದು ಅವರು ಹೇಗೆ ಕರೆದುಕೊಳ್ಳಬಲ್ಲರೋ ನಾನರಿಯೆ.
ಶ್ರೀ ಸಂತರಾಮರು ಶಾಸ್ತ್ರಗಳನ್ನು ಕೆಸರಿಗೆ ಹೋಲಿಸುತ್ತಾರೆ. ನನಗೆ ನೆನಪಿರುವ ಮಟ್ಟಿಗೆ ಡಾ. ಅಂಬೇಡ್ಕರ್ ಅವರು ಶಾಸ್ತ್ರಗಳಿಗೆ ಇಂತಹ ಚಿತ್ರನಾಮವನ್ನು ದಯಪಾಲಿಸಿಲ್ಲ. ಶಾಸ್ತ್ರಗಳು ಈಗಿನ ಅಸ್ಪೃಶ್ಯತೆಯನ್ನು ಸಮರ್ಥಿಸುವುದಾದರೆ ನಾನು ನನ್ನನ್ನು ಹಿಂದೂವೆಂದು ಕರೆದುಕೊಳ್ಳಲೊಲ್ಲೆ ಎಂದು ಹೇಳಿದ್ದೇನೆ. ಇದು ನನ್ನ ಮನಃಪೂರ್ವಕವಾದ ಖಚಿತ ಅಭಿಪ್ರಾಯ. ಅದೇ ಮೇರೆಗೆ ಅಸಹ್ಯವಾಗಿರುವ ಈಗಿನ ಜಾತಿಪದ್ಧತಿಯನ್ನು ಶಾಸ್ತ್ರಗಳು ಬೆಂಬಲಿಸುವುದು ನಿಜವಾದರೆ ನಾನು ಹಿಂದೂವಾಗಿ ಉಳಿಯಬಯಸುವುದಿಲ್ಲ. ಅಂತರ್ಜಾತೀಯ ಭೋಜನ ಹಾಗೂ ಅಂತರ್ಜಾತೀಯ ವಿವಾಹಗಳ ಬಗೆಗೆ ನನ್ನ ಆಕ್ಷೇಪವೇನೂ ಇಲ್ಲ. ಶಾಸ್ತ್ರಗಳ ಹಾಗೂ ಅವುಗಳ ಅರ್ಥವಿವರಣೆಯ ವಿಷಯವಾಗಿ ನನ್ನ ನಿಲುವೇನೆಂಬುದನ್ನು ನಾನು ಮತ್ತೊಮ್ಮೆ ಹೇಳುವ ಅವಶ್ಯಕತೆಯಿಲ್ಲ. ಬುದ್ಧಿಸಮ್ಮತವಾದ, ಸಮರ್ಪಕವಾದ, ನೈತಿಕವಾಗಿ ಸಮರ್ಥನೀಯವಾದ ನಿಲುವೆಂದರೆ ಅದೊಂದೇ ಎಂದೂ, ಹಿಂದೂ ಸಂಪ್ರದಾಯದಲ್ಲಿ ಅದಕ್ಕೆ ಹೇರಳವಾದ ಪ್ರಮಾಣವುಂಟೆಂದೂ ಶ್ರೀ ಸಂತರಾಮರಿಗೆ ನಾನು ಹೇಳಬಯಸುತ್ತೇನೆ.
(ಹರಿಜನ ಪತ್ರಿಕೆ. ಆಗಸ್ಟ್ ೧೫, ೧೯೩೬).
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು, ಸಂಪುಟ – 1, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ,2015, ಪುಟ ಸಂಖ್ಯೆ 94 – 99




