ಡಾ. ಅಂಬೇಡ್ಕರ್ ಅವರಿಂದ ಮಹಾತ್ಮರಿಗೆ ಒಂದು ಪ್ರತ್ಯುತ್ತರ

12 months ago

ಡಾ. ಅಂಬೇಡ್ಕರ್ ಅವರಿಂದ ಮಹಾತ್ಮರಿಗೆ ಒಂದು ಪ್ರತ್ಯುತ್ತರ
ಅನುಬಂಧ-II
I
ಜಾತ್-ಪತ್‌-ತೋಡಕ್ ಮಂಡಲಕ್ಕಾಗಿ ನಾನು ಸಿದ್ಧಪಡಿಸಿದ ಜಾತಿ ವಿಷಯದ ಉಪನ್ಯಾಸವನ್ನು ಗಮನಿಸಿ ತಮ್ಮ ಹರಿಜನ ಪತ್ರಿಕೆಯಲ್ಲಿ ಉಲ್ಲೇಖಿಸುವ ಮೂಲಕ ಮಹಾತ್ಮರು ನನ್ನನ್ನು ಗೌರವಿಸಿದ್ದಾರೆ. ಇದನ್ನು ನಾನು ತುಂಬ ಮೆಚ್ಚುತ್ತೇನೆ. ಅವರು ಮಾಡಿದ ನನ್ನ ಉಪನ್ಯಾಸದ ವಿಮರ್ಶೆಯನ್ನು ನೋಡಿದರೆ ಜಾತಿಯ ಬಗೆಗೆ ನಾನು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಮಹಾತ್ಮಾಜಿ ಸಂಪೂರ್ಣವಾಗಿ ವಿರೋಧಿಸುತ್ತಾರೆಂಬುದು ಸ್ಪಷ್ಟವಾಗುತ್ತದೆ. ವಿರೋಧಿಗಳೊಡನೆ ವಾದಕ್ಕೆ ನಿಲ್ಲುವುದು ನನ್ನ ಪದ್ಧತಿಯಲ್ಲ. ನಾನು ವಾದಿಸಲೇಬೇಕೆಂಬಂತಹ ವಿಶೇಷ ಕಾರಣಗಳಿದ್ದರೆ ಆ ಮಾತು ಬೇರೆ. ನನ್ನ ವಿರೋಧಿ ಯಾವನೋ ಒಬ್ಬ ಸಾಮಾನ್ಯ ಮನುಷ್ಯನಾಗಿದ್ದರೆ ನಾನು ಅವನ ಗೋಜಿಗೆ ಹೋಗುತ್ತಿರಲಿಲ್ಲ. ಆದರೆ ನನ್ನನ್ನು ವಿರೋಧಿಸಿ ನಿಂತವರು ಮಹಾತ್ಮರಾಗಿರುವುದರಿಂದ ಅವರ ವಾದವನ್ನು ನಾನು ವಿಮರ್ಶಿಸಿ ಉತ್ತರಿಸಬೇಕಾಗಿದೆ. ನನ್ನನ್ನು ಗೌರವಿಸಿದ್ದಕ್ಕಾಗಿ ಅವರನ್ನು ಮೆಚ್ಚುತ್ತೇನೆ. ಆದರೆ ವೇದಿಕೆಯಿಂದ ವ್ಯಕ್ತಮಾಡಲಾಗದ ಉಪನ್ಯಾಸವನ್ನು ನಾನು ಮುದ್ರಿಸಿದ್ದು ನನ್ನನ್ನು ಜನ ಮರೆಯಕೂಡದೆಂಬ ಉದ್ದೇಶದಿಂದ ಎಂದು ಸೂಚಿಸಿ ಪ್ರಚಾರಕ್ಕಾಗಿ ನಾನು ಆತುರಪಡುತ್ತಿದ್ದೇನೆಂದು ಆರೋಪಿಸಲಾಗಿದೆ. ಇಂತಹ ದೋಷಾರೋಪಣೆಗೆ ಸ್ವತಃ ಮಹಾತ್ಮರು ಕೈಯಿಕ್ಕಿದುದನ್ನು ಕಂಡು ನನಗೆ ವಿಸ್ಮಯವಾಗಿದೆ. ಮಹಾತ್ಮರು ಏನೇ ಹೇಳಲಿ, ಹಿಂದೂಗಳನ್ನು ಕೆಣಕಿ ಅವರು ತಮ್ಮ ಸ್ಥಿತಿಯನ್ನು ಸರಿಯಾಗಿ ಅರಿತುಕೊಳ್ಳಲೆಂದು ಪ್ರೇರೇಪಿಸುವ ಉದ್ದೇಶದಿಂದ ಮಾತ್ರ ನಾನು ಆ ಉಪನ್ಯಾಸವನ್ನು ಮುದ್ರಿಸಿ ಪ್ರಕಟಿಸಿದೆನು. ಪ್ರಚಾರಕ್ಕಾಗಿ ನಾನು ಎಂದೂ ಹಾತೊರೆದವನಲ್ಲ. ಹಾಗೆ ನೋಡಿದರೆ ನನಗೆ ಅವಶ್ಯಕವಾದುದಕ್ಕಿಂತ ಹೆಚ್ಚಾಗಿಯೇ ಅದು ನನಗೆ ದೊರೆತಿದೆ. ಒಂದು ವೇಳೆ ಪ್ರಚಾರಾಪೇಕ್ಷೆಯಿಂದಲೆ ನಾನು ಅದನ್ನು ಪ್ರಕಟಿಸಿದೆನೆಂದು ಇಟ್ಟುಕೊಳ್ಳಿ. ಆಗ ನನ್ನ ಮೇಲೆ ಕಲ್ಲು ಒಗೆಯುವವರು ಯಾರು? ಮಹಾತ್ಮರಂತೆ ಗಾಜಿನ ಮನೆಯಲ್ಲಿ ಇರುವವರಂತೂ ಹಾಗೆ ಮಾಡಕೂಡದು.


II
ನನ್ನ ಉದ್ದೇಶದ ಮಾತು ಹೋಗಲಿ. ಉಪನ್ಯಾಸದಲ್ಲಿ ನಾನು ಎತ್ತಿದ ಪ್ರಶ್ನೆಗಳಿಗೆ ಮಹಾತ್ಮರೇನು ಹೇಳುತ್ತಾರೆ? ನಾನು ಎತ್ತಿದ ಪ್ರಶ್ನೆಗಳನ್ನು ಅವರು ಮುಟ್ಟಿಯೇ ಇಲ್ಲ, ಮತ್ತು ಹಿಂದೂಗಳ ಮೇಲೆ ದೋಷಾರೋಪಣೆಯೆಂದು ಅವರು ಮಂಡಿಸಿದ ವಿಷಯಗಳು ನನ್ನ ಉಪನ್ಯಾಸದಲ್ಲಿ ಎಲ್ಲಿಯೂ ಇಲ್ಲ. ನನ್ನ ಉಪನ್ಯಾಸವನ್ನು ಓದಿ ನೋಡಿದರೆ ಯಾರಿಗಾದರೂ ಇದು ಸ್ಪಷ್ಟವಾಗುತ್ತದೆ. ನನ್ನ ಉಪನ್ಯಾಸದಲ್ಲಿ ನಾನು ಮಂಡಿಸಿದ್ದ ಮುಖ್ಯ ಅಂಶಗಳು ಈ ಕೆಳಗಿನಂತೆ ಇವೆ: ೧. ಜಾತಿಪದ್ಧತಿ ಹಿಂದೂಗಳನ್ನು ಹಾಳುಗೆಡಹಿದೆ. ೨. ಚಾತುರ್ವಣ್ಯದ ಮೇರೆಗೆ ಹಿಂದೂ ಸಮಾಜವನ್ನು ಪುನಃ ನಿರ್ಮಿಸುವುದು ಅಸಾಧ್ಯ, (ಪುಟ 100)
ಯಾಕೆಂದರೆ ವರ್ಣ ವ್ಯವಸ್ಥೆಯೊಂದು ಸೋರುವ ಪಾತ್ರೆಯಿದ್ದಂತೆ. ಉಳಿದುಕೊಳ್ಳುವಂಥ ಅಂತಸ್ಥ ಬಲ ಅದಕ್ಕಿಲ್ಲ. ಯಾರಾದರೂ ವರ್ಣವನ್ನು ಅತಿಕ್ರಮಿಸಿದರೆ ಅವರನ್ನು ಶಿಕ್ಷೆಗೆ ಗುರಿ ಮಾಡುವಂತಹ ಶಾಸನಾಧಿಕಾರ ಅದಕ್ಕೆ ಅಗತ್ಯ. ಆ ಅಧಿಕಾರವಿಲ್ಲದೆ ಹೋದರೆ ವರ್ಣವ್ಯವಸ್ಥೆಯು ಜಾತಿವ್ಯವಸ್ಥೆಯ ಅವಸ್ಥೆಗೆ ಇಳಿಯುವ ಸಂಭವವಿದೆ. ೩. ಚಾತುರ್ವಣ್ಯದ ಮೇರೆಗೆ ಹಿಂದೂ ಸಮಾಜವನ್ನು ಪುನರೂಪಿಸುವುದು ಅಪಾಯಕಾರಿಯಾಗುತ್ತದೆ. ಯಾಕೆಂದರೆ ವರ್ಣವ್ಯವಸ್ಥೆ ಸಾಮಾನ್ಯ ಜನಸಮೂಹಕ್ಕೆ ಜ್ಞಾನ ಸಂಪಾದನೆ ಹಾಗೂ ಶಸ್ತ್ರಾಭ್ಯಾಸದ ಅವಕಾಶವನ್ನು ನಿರಾಕರಿಸುವುದರಿಂದ ಜನಸಾಮಾನ್ಯರ ಅವನತಿಗೆ ಕಾರಣವಾಗುತ್ತದೆ. ೪. ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವ ತತ್ವಗಳನ್ನೊಳಗೊಂಡ ಧರ್ಮವನ್ನು ಆಧರಿಸಿಯೇ ಹಿಂದೂ ಸಮಾಜದ ಪುನರ್ನಿರ್ಮಾಣವಾಗತಕ್ಕದ್ದು. ೫. ಈ ಗುರಿಯನ್ನು ಸಾಧಿಸಬೇಕಾದರೆ ಜಾತಿ ಮತ್ತು ವರ್ಣಗಳ ಬಗೆಗಿರುವ ಗೌರವಭಾವನೆ ನಷ್ಟವಾಗತಕ್ಕದ್ದು. ೬. ಶಾಸ್ತ್ರಗಳು ದೇವವಾಣಿಯೆಂಬ ಭಾವನೆಯನ್ನು ನಾಶಗೊಳಿಸುವುದರಿಂದ ಮಾತ್ರ ಜಾತಿ, ವರ್ಣಗಳ ಮೇಲಿನ ಗೌರವ ನಾಶವಾಗಬಲ್ಲದು. ಮಹಾತ್ಮರು ಎತ್ತಿದ ಪ್ರಶ್ನೆಗಳು ನನ್ನ ವಾದಕ್ಕೆ ಸಂಪೂರ್ಣವಾಗಿ ಅಪ್ರಕೃತವಾಗಿದ್ದು, ನನ್ನ ಉಪನ್ಯಾಸದಿಂದ ಅವರೇನೂ ತಿಳಿದುಕೊಂಡಿಲ್ಲವೆಂಬುದು ಸ್ಪಷ್ಟ.


III
ಇನ್ನು ಮಹಾತ್ಮರು ಹೇಳಿದ್ದೇನೆಂಬುದನ್ನು ಪರೀಕ್ಷಿಸೋಣ. ಅವರು ಹೇಳಿದ ಮೊದಲನೆಯ ಮಾತೆಂದರೆ ನಾನು ಉದಾಹರಿಸಿದ ಗ್ರಂಥಗಳು ಅಧಿಕೃತವಲ್ಲ ಎಂಬುದು. ಈ ವಿಷಯದಲ್ಲಿ ನಾನು ಅಧಿಕಾರಯುಕ್ತನಲ್ಲವೆಂದು ಒಪ್ಪುತ್ತೇನೆ. ಆದರೆ ಸಂಸ್ಕೃತ ಭಾಷೆ ಮತ್ತು ಹಿಂದೂಶಾಸ್ತ್ರಗಳ ಬಗೆಗೆ ಅಧಿಕಾರವಾಣಿಯಿಂದ ನುಡಿಯಬಲ್ಲವರಾಗಿದ್ದ ಶ್ರೀ ತಿಲಕರ ಲೇಖನಗಳಿಂದ ನಾನು ಆ ಉದಾಹರಣೆಗಳನ್ನು ಆಯ್ದುಕೊಂಡಿದ್ದೇನೆಂದು ಹೇಳಬಯಸುತ್ತೇನೆ. ಅವರು ಹೇಳುವ ಎರಡನೆಯ ಮಾತೆಂದರೆ, ಶಾಸ್ತ್ರಗಳ ಅರ್ಥವನ್ನು ಸರಿಯಾಗಿ ವಿವರಿಸಬಲ್ಲವರು ಸಾಧುಸಂತರಲ್ಲದೆ ವಿದ್ವಾಂಸರಲ್ಲ, ಮತ್ತು ಜಾತಿಪದ್ಧತಿ ಹಾಗೂ ಅಸ್ಪೃಶ್ಯತೆಯನ್ನು ಶಾಸ್ತ್ರಗಳು ಒಪ್ಪುವುದಿಲ್ಲವೆಂದು ಸಾಧುಸಂತರು ಹೇಳುತ್ತಾರೆ. ಮೊದಲನೆಯದಾಗಿ ನಾನು ಮಹಾತ್ಮರಿಗೆ ಈ ಪ್ರಶ್ನೆ ಕೇಳುತ್ತೇನೆ, ಶಾಸ್ತ್ರಗಳಲ್ಲಿ ಪ್ರಕ್ಷಿಪ್ತ ಭಾಗಗಳಿದ್ದರೆ ಹಾಗೂ ಸಾಧುಸಂತರು ಅವುಗಳನ್ನು ಬೇರೆ ರೀತಿಯಿಂದ ಅರ್ಥ ಮಾಡಿ ವಿವರಿಸಿದ್ದರೆ ಯಾರಿಗೆ ಏನು ಪ್ರಯೋಜನ? ಶಾಸ್ತ್ರಗಳು ಅಧಿಕೃತವೋ ಅಥವಾ ಮೂಲವೋ ಪ್ರಕ್ಷಿಪ್ತವೋ ಎಂಬ ಭೇದವನ್ನು ಜನಸಾಮಾನ್ಯರು ಗಮನಿಸುವುದಿಲ್ಲ. ಶಾಸ್ತ್ರಗಳ ಪಾಠವೇ ಜನಸಾಮಾನ್ಯರಿಗೆ ಗೊತ್ತಿರುವುದಿಲ್ಲ. ಅವುಗಳಲ್ಲಿ ಇರುವುದೇನೆಂದು ತಿಳಿಯಲಾರದಷ್ಟು ಜನ ನಿರಕ್ಷರಿಗಳಾಗಿದ್ದಾರೆ. ಹೇಳಿದ್ದನ್ನೆಲ್ಲ ಕೇಳಿ ನಂಬಿದವರು ಅವರು. ಜಾತಿಪದ್ಧತಿಯನ್ನೂ, ಅಸ್ಪೃಶ್ಯತೆಯನ್ನೂ ಶಾಸ್ತ್ರಗಳು ವಿಧಿಸಿವೆಯೆಂದು ಅವರಿಗೆ ಹೇಳುತ್ತಾ ಬರಲಾಗಿದೆ.

ಇನ್ನು ಸಾಧುಸಂತರ ಮಾತು. ವಿದ್ವಾಂಸರ ಬೋಧನೆಗಿಂತ ಸಾಧುಸಂತರ ಬೋಧನೆ ಎಷ್ಟೇ ಭಿನ್ನವಾಗಿ, ಎಷ್ಟೇ ಉನ್ನತವಾಗಿ ಇದ್ದರೂ ಆ ಬೋಧನೆಯ ಪರಿಣಾಮ ಮಾತ್ರ ಸೊನ್ನೆಯೆ ಆಗಿದೆಯೆಂಬುದು ಶೋಚನೀಯ. ಇದಕ್ಕೆ ಕಾರಣಗಳು ಎರಡು. ಮೊದಲನೆಯದಾಗಿ ಸಾಧುಸಂತರಲ್ಲಿ ಒಬ್ಬರೂ ಜಾತಿಪದ್ಧತಿಯ ಮೇಲೆ ದಾಳಿ ಮಾಡಲಿಲ್ಲ. ತದ್ವಿರುದ್ಧವಾಗಿ ಜಾತಿಪದ್ಧತಿಗೆ ಅವರು ಪರಮನಿಷ್ಠರಾಗಿದ್ದರು. ಅವರಲ್ಲಿ ಬಹುಪಾಲು ಜನ ತಮ್ಮ ತಮ್ಮ ಜಾತಿಗಳ ಸದಸ್ಯರಾಗಿಯೇ ಬದುಕಿದರು. ಹಾಗೂ ಆಯಾ ಜಾತಿಯವರಾಗಿಯೇ (ಪುಟ 101)
ಸತ್ತರು. ಜ್ಞಾನದೇವನಿಗೆ ತಾನು ಬ್ರಾಹ್ಮಣನೆಂಬ ಅಭಿಮಾನ ಎಷ್ಟು ತೀವ್ರವಾಗಿತ್ತು ಗೊತ್ತೆ? ಪೈಠಣದ ಬ್ರಾಹ್ಮಣರು ಆತನನ್ನು ತಮ್ಮಲ್ಲಿ ಸೇರಿಸಿಕೊಳ್ಳಲು ಒಪ್ಪದಿದ್ದಾಗ ಆ ಬ್ರಾಹ್ಮಣ ಸಮಾಜವು ತನ್ನನ್ನು ಬ್ರಾಹ್ಮಣನೆಂದು ಪರಿಗಣಿಸುವಂತೆ ಮಾಡಲು ಅವನು ವಿಶ್ವ ಪ್ರಯತ್ನ ಮಾಡಿದನು. ಸಂತ ಏಕನಾಥನು ಅಸ್ವಸ್ಥರನ್ನು ಮುಟ್ಟುವುದಲ್ಲದೆ ಅವರೊಡನೆ ಊಟ ಮಾಡುವ ಧೈರ್ಯವನ್ನೂ ತೋರಿದನು. ಆ ಧೈರ್ಯ ತೋರಿದ್ದು ಏಕೆ ಗೊತ್ತೆ? ಹಾಗೆ ಮಾಡಿದಾಗ ಅಂಟಿಕೊಂಡ ಮೈಲಿಗೆ ಒಂದು ಗಂಗಾಸ್ನಾನದಿಂದ ತೊಳೆದುಹೋಗುವುದೆಂದು ಅವನಿಗೆ ವಿಶ್ವಾಸವಿತ್ತು. (ಅಂತ್ಯಜಾಚಾ ವಿಟಾಳ ಹ್ಯಾಸೀಖ ಗಂಗಾಸ್ನಾನೇ ಶುದ್ಧ ತ್ವಾಸೀ ॥ ಏಕನಾಥೀ ಭಾಗವತ ೨೮-೧೯೧) ಸಂತರು ಜಾತಿ ಮತ್ತು ಅಸ್ಪೃಶ್ಯತೆಯ ವಿರುದ್ಧವಾಗಿ ಎಂದೂ ಅಂದೋಲನ ನಡೆಸಲಿಲ್ಲವೆಂದು ನನ್ನ ವ್ಯಾಸಂಗದಿಂದ ಅರಿತುಕೊಂಡಿದ್ದೇನೆ. ಜೀವಾತ್ಮ-ಪರಮಾತ್ಮರ ಸಮಬಂಧವೇ ಅವರಿಗೆ ಮುಖ್ಯವಾಗಿತ್ತು. ಮನುಷ್ಯರೆಲ್ಲಾ ಸಮಾನರೆಂದು ಅವರು ಬೋಧಿಸಲಿಲ್ಲ. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರೆಂದು ಮಾತ್ರ ಹೇಳಿದರು. ಇದು ತುಂಬ ನಿರುಪದ್ರವಕಾರಿ ಹೇಳಿಕೆ. ಯಾರಾದರೂ ಹೇಳಬಹುದಾದ ಮಾತು. ಸಾಧುಸಂತರ ಬೋಧನೆ ಪರಿಣಾಮಕಾರಿಯಾಗದೆ ಹೋದುದಕ್ಕೆ ಇನ್ನೂ ಒಂದು ಕಾರಣವಿದೆ. ಸಾಧುಸಂತರು ಜಾತಿಯನ್ನು ಮೀರಬಹುದಾದರೂ ಜನಸಾಮಾನ್ಯರು ಮಾತ್ರ ಮೀರಲಾಗದೆಂದು ವಿಧಿಸುತ್ತ ಬರಲಾಗಿದೆ. ಆದುದರಿಂದ ಸಾಧುಸಂತರು ಅನುಕರಣೀಯ ವ್ಯಕ್ತಿಗಳಲ್ಲ. ಅವರು ಗೌರವಾರ್ಹರಾದ ಪುಣ್ಯವ್ಯಕ್ತಿಗಳೆಂದಷ್ಟೆ ಪರಿಗಣಿತರಾದವರು. ಹೀಗಾಗಿ ಅವರ ಜೀವನವಾಗಲಿ, ಬೋಧನೆಗಳಾಗಲಿ ಜನರ ಭಾವನೆಯ ಮೇಲೆ ಪ್ರಭಾವ ಬೀರಲಿಲ್ಲ. ವಿದ್ವಾಂಸರ ವಿವರಣೆಗಿಂತ ಸಾಧುಸಂತರು ಕೊಡುವ ಶಾಸ್ತ್ರಾರ್ಥ ವಿವರಣೆ ಬೇರೆಯೆಂಬುದರಿಂದ ಲಾಭವೇನೂ ಆಗಲಿಲ್ಲ. ಶಾಸ್ತ್ರಗಳ ಬಗೆಗೆ ಜನಸಾಮಾನ್ಯರ ಅಭಿಪ್ರಾಯ ಅವರಿಂದ ಸಂಪೂರ್ಣ ಭಿನ್ನವಾಗಿದೆಯೆಂಬುದು ವಸ್ತುಸ್ಥಿತಿ. ಇದನ್ನು ನಾವು ಮುಖ್ಯವಾಗಿ ಲಕ್ಷ್ಯದಲ್ಲಿಡತಕ್ಕದ್ದು. ಶಾಸ್ತ್ರಗಳ ಅಧಿಕಾರವನ್ನು ನಿರಾಕರಿಸದೆ ಈ ಸಮಸ್ಯೆಯನ್ನು ನಿರಾಕರಿಸುವುದು ಹೇಗೆ? ಮಹಾತ್ಮಾಜಿ ಈ ಪ್ರಶ್ನೆಯನ್ನು ಯೋಚಿಸಿಲ್ಲ. ಮಹಾತ್ಮಾಜಿ ಮಂಡಿಸುವ ಯೋಜನೆ ಏನೇ ಇರಲಿ, ಒಳ್ಳೆಯ ಸಾಧುವೊಬ್ಬನ ಪುಣ್ಯಮಯವಾದ ಬದುಕು ಉನ್ನತವಾಗಿರಬಹುದು. ಅಂಥವರಿಂದ ಅವರಿಗೆ ಒಳ್ಳೆಯದಾಗಿರಬಹುದು. ಸಾಧುಸಂತರೂ, ಮಹಾತ್ಮರೂ ಭಾರತದಲ್ಲಿ ಗೌರವಾರ್ಹ ವ್ಯಕ್ತಿಗಳಾಗಿದ್ದಾರೆ. ಆದರೆ ಅನುಕರಣೀಯ ವ್ಯಕ್ತಿಗಳಲ್ಲ ಎಂಬುದು ಜನಸಾಮಾನ್ಯರ ಮನೋಭಾವ. ಹೀಗಿರುವಾಗ ನಮ್ಮ ಸಮಸ್ಯೆಗೆ ಸಾಧುಸಂತರಿಂದೇನೂ ಫಲವಾಗಿಲ್ಲ. ಇದನ್ನು ಗಾಂಧೀಜಿ ಒಪ್ಪಬೇಕಾಗುತ್ತದೆ.


IV
ಚೈತನ್ಯ, ಜ್ಞಾನದೇವ, ತುಕಾರಾಮ, ತಿರುವಳ್ಳುವರ್, ರಾಮಕೃಷ್ಣ ಪರಮಹಂಸ ಮುಂತಾದವರು ತಮ್ಮದೆಂದು ಒಪ್ಪಿಕೊಂಡ ಧರ್ಮ ಯೋಗ್ಯತೆಯಿಲ್ಲದುದಲ್ಲವೆಂಬುದೂ, ಧರ್ಮದ ಯೋಗ್ಯತೆಯನ್ನು ಅಳೆಯಬೇಕಾದದ್ದು ಅದರ ಆಯೋಗ್ಯ ಮಾದರಿಗಳಿಂದ ಅಲ್ಲ ಅತ್ಯುತ್ತಮ ಮಾದರಿಗಳಿಂದ ಎಂಬುದೂ ಮಹಾತ್ಮರು ಹೇಳುವ ಮೂರನೆಯ ಮಾತು. ಅವರ ಈ ಹೇಳಿಕೆಯ ಪ್ರತಿಯೊಂದು ಶಬ್ದವನ್ನೂ ನಾನು ಒಪ್ಪುತ್ತೇನೆ. ಆದರೆ ಇದರಿಂದ ಮಹಾತ್ಮರು ಏನನ್ನು ಸಿದ್ಧ ಮಾಡಬಯಸುತ್ತಾರೋ ನನಗೆ ತಿಳಿಯದು. (ಪುಟ 102)
ಧರ್ಮವನ್ನು ಅದರ ಅತ್ಯುನ್ನತ ವ್ಯಕ್ತಿಗಳಿಂದ ಬೆಲೆಗಟ್ಟಬೇಕೆಂಬುದೇನೊ ನಿಜ. ಆದರೆ ಅಷ್ಟರಿಂದ ಎಲ್ಲಾ ಮುಗಿದಂತಾಯಿತೆ? ಮುಗಿಯಲಿಲ್ಲವೆಂದೇ ಹೇಳುತ್ತೇನೆ. ಆಯೋಗ್ಯ ಅಥವಾ ಕೀಳು ಮಾದರಿಗಳೇ ಇಷ್ಟೊಂದು ಹೆಚ್ಚಾಗಿ, ಉತ್ತಮ ಮಾದರಿ ಇಷ್ಟು ವಿರಳವಾದುದೇಕೆ? ಈ ಪ್ರಶ್ನೆ ನಿಂತುಕೊಂಡಿದೆ. ಈ ಪ್ರಶ್ನೆಗೆ ಎರಡು ಉತ್ತರಗಳನ್ನು ಕಲ್ಪಿಸಬಹುದು. (೧) ಕೀಳು ಮಾದರಿಗಳಾಗಿರುವವರು ಜನ್ಮಜಾತವಾದ ಯಾವುದೋ ಒಂದು ವಿಕ್ಷಿಪ್ತತೆಯ ಕಾರಣ ನೈತಿಕ ಶಿಕ್ಷಣವನ್ನು ಅರಗಿಸಿಕೊಳ್ಳಲಾರದವರಾಗಿರುತ್ತಾರೆ, ಅದರಿಂದಾಗಿ ಧಾರ್ಮಿಕ ಆದರ್ಶದತ್ತ ಒಂದು ಹೆಜ್ಜೆಯನ್ನಾದರೂ ಇಡಲು ಅವರು ಅಸಮರ್ಥರಿರುತ್ತಾರೆ. ಅಥವಾ ೨) ಧಾರ್ಮಿಕ ಆದರ್ಶವೇ ಸಂಪೂರ್ಣವಾಗಿ ಯುಕ್ತವಲ್ಲದ ಆದರ್ಶವಾಗಿದ್ದು, ಅನೇಕರ ಬದುಕಿಗೆ ಅಯೋಗ್ಯವಾದ ನೈತಿಕ ತಿರುವನ್ನು ಒದಗಿಸಿರಬೇಕು. ಕೆಲವರು ಅತ್ಯುತ್ತಮ ವ್ಯಕ್ತಿಗಳಾಗಿ ಉಳಿದಿದ್ದರೆ ಆ ಅಯೋಗ್ಯ ನೈತಿಕ ತಿರುವನ್ನು ಸರಿಪಡಿಸಿ, ಯೋಗ್ಯಪಥಕ್ಕೆ ಹೊರಳಿಸಿಕೊಂಡಿರಬೇಕು. ಇವೆರಡು ಸಂಭಾವ್ಯ ಕಾರಣಗಳಲ್ಲಿ ಮೊದಲನೆಯದನ್ನು ನಾನು ಸ್ವೀಕರಿಸಲಾರೆ; ಮಹಾತ್ಮರು ಕೂಡ ಇದನ್ನು ಸ್ವೀಕರಿಸಲಾರರು. ನನ್ನ ಅಭಿಪ್ರಾಯದಲ್ಲಿ ಎರಡನೆಯ ಕಾರಣವೇ ಯುಕ್ತಾಯುಕ್ತವಾಗಿ ತೋರುತ್ತದೆ. ಇನ್ನು ಮೂರನೆಯ ಕಾರಣವೊಂದು ಮಹಾತ್ಮರಿಗೆ ಹೊಳೆದರೆ ಆ ಮಾತು ಬೇರೆ. ಹೀಗಿರುವುದರಿಂದ ಅತ್ಯುತ್ತಮ ಮಾದರಿಗಳಿಂದಲೇ ಧರ್ಮದ ಯೋಗ್ಯತೆಯನ್ನು ಅಳೆಯಬೇಕೆಂಬ ಮಹಾತ್ಮರ ವಾದ ನಿಷ್ಪಲವಾಗುತ್ತದೆ. ಅಯೋಗ್ಯ ಆದರ್ಶವನ್ನು ಪೂಜಿಸುತ್ತ ಅಡ್ಡದಾರಿ ಹಿಡಿದ ಬಹುಸಂಖ್ಯಾತ ಜನರನ್ನು ಕಂಡು ಅಯ್ಯೋ ಪಾಪ ಎನ್ನುವುದಕ್ಕಿಂತ ಹೆಚ್ಚಿಗೇನೂ ಮಾಡಿದಂತಾಗುವುದಿಲ್ಲ.
V
ಸಾಧುಸಂತರ ಮೇಲ್ಪಂಕ್ತಿಯನ್ನು ಅನುಸರಿಸಿದ ಪಕ್ಷದಲ್ಲಿ ಹಿಂದೂಧರ್ಮ ಸಹನೀಯವಾಗಬಹುದೆಂಬ ಮಹಾತ್ಮರ ವಾದ ತಪ್ಪೆಂಬುದಕ್ಕೆ ಇನ್ನೂ ಒಂದು ಕಾರಣವಿದೆ. (ಎಪ್ರಿಲ್ ತಿಂಗಳ ಆರ್ಯನ್ ಪಾತ್ ಪತ್ರಿಕೆಯಲ್ಲಿ ಶ್ರೀ ಹೆಚ್.ಎನ್. ಬ್ರೇಲ್ ಪಢ್ ಅವರು ಬರೆದಿರುವ ‘ನೀತಿ ಮತ್ತು ಸಮಾಜ ಸ್ವರೂಪ’ ಎಂಬ ಉಜ್ವಲ ಲೇಖನವನ್ನು ಈ ಸಂದರ್ಭದಲ್ಲಿ ನೋಡಬಹುದು.)ಚೈತನ್ಯ ಮೊದಲಾದ ಪ್ರಖ್ಯಾತರ ಉದಾಹರಣೆಯಿಂದ ಮಹಾತ್ಮರು ಸೂಚಿಸಬಯಸುವುದೇನು? ಉಚ್ಚಜಾತಿಯ ಜನರೆಲ್ಲರೂ ಕೀಳುಜಾತಿಯ ಜನರೊಡನೆ ಉತ್ತಮ ನೀತಿ ಮಟ್ಟದಲ್ಲಿ ನಡೆದುಕೊಂಡರೆ ಯಾವ ಬದಲಾವಣೆಯೂ ಅವಶ್ಯವಾಗದೆ ಈಗಿರುವ ಸ್ವರೂಪದಲ್ಲಿಯೇ ಹಿಂದೂ ಸಮಾಜವು ಸಹನೀಯವಾಗಬಲ್ಲುದು ಎಂಬುದು ಅವರ ಉದ್ದೇಶ. ಈ ಬಗೆಯ ವಿಚಾರ ಸರಣಿಗೆ ನಾನು ಸಂಪೂರ್ಣ ವಿರೋಧಿಯಾಗಿದ್ದೇನೆ. ತಮ್ಮ ಜೀವನದಲ್ಲಿ ಉನ್ನತವಾದ ಸಾಮಾಜಿಕ ಆದರ್ಶವನ್ನು ಸಾಧಿಸುತ್ತಿರುವ ಮೇಲುಜಾತಿಯ ಹಿಂದೂಗಳನ್ನು ನಾನು ಗೌರವಿಸಬಲ್ಲೆನು. ಇಂತಹ ವ್ಯಕ್ತಿಗಳಿಲ್ಲದೆ ಹೋದರೆ ಭಾರತ ದೇಶದ ಬದುಕು ಇನ್ನಷ್ಟು ಕಷ್ಟಕರವೂ ಅಸಹ್ಯವೂ ಆದೀತು. ಆದರೆ ವೈಯಕ್ತಿಕ ಚಾರಿತ್ರ್ಯ ಸುಧಾರಣೆಯಿಂದಲೇ ಜಾತಿವಂತ ಹಿಂದೂಗಳನ್ನೆಲ್ಲ ಉತ್ತಮ ವ್ಯಕ್ತಿಗಳಾಗಿ ಪರಿವರ್ತಿಸುವ ಪ್ರಯತ್ನವು ಶ್ರಮದ ಅಪವ್ಯಯವಾಗುತ್ತದೆ. ಭ್ರಾಂತಿಗೆ ಜೋತುಬಿದ್ದಂತೆ ಆಗುತ್ತದೆ. ಆಯುಧಗಳನ್ನು ನಿರ್ಮಿಸುವ ಒಬ್ಬ ಮನುಷ್ಯನಿದ್ದಾನೆಂದು ಇಟ್ಟುಕೊಳ್ಳಿ, ವೈಯಕ್ತಿಕವಾಗಿ ಉತ್ತಮ ಚಾರಿತ್ರ್ಯವಂತನಾದರೆ ಆತನು ಒಳ್ಳೆಯ ಮನುಷ್ಯನಾಗುವನೆ? ಸಿಡಿಯದಂಥ ಮದ್ದುಗುಂಡುಗಳನ್ನೂ, (ಪುಟ 103)
ವಿಷ ಹರಡದಂತಹ ಗ್ಯಾಸನ್ನೂ ನಿರ್ಮಿಸುವನೆ? ಅದು ಸಾಧ್ಯವಿಲ್ಲ. ಅದರಂತೆ, ಜಾತಿಪ್ರಜ್ಞೆ ಜಾಗೃತವಾಗಿರುವ ಮನುಷ್ಯನ ಚಾರಿತ್ರ್ಯ ಒಳ್ಳೆಯದಾದರೆ ಅವನು ಒಳ್ಳೆಯ ಮನುಷ್ಯನಾಗುವನೆ? ಅಂದರೆ ತನ್ನ ನೆರೆಹೊರೆಯವನ್ನೆಲ್ಲ ತನ್ನ ಮಿತ್ರರೆಂದೂ ಸಮಾನರೆಂದೂ ನಡೆಸಿಕೊಳ್ಳುವನೆ? ತನ್ನ ಸ್ಥಿತಿಗನುಸಾರವಾಗಿ ಅವರಿಗಿಂತ ಮೇಲಿನವನೆಂದೂ ಕೆಳಗಿನವನೆಂದೂ ಅವನು ನಡೆದುಕೊಳ್ಳಬೇಕಾಗುತ್ತದೆ. ಅಂದರೆ ತನ್ನ ಜಾತಿಯವರೊಡನೆ ನಡೆದುಕೊಂಡಂತೆ ಇತರರೊಡನೆ ನಡೆದುಕೊಳ್ಳಲಾಗುವುದಿಲ್ಲ. ಎಲ್ಲರನ್ನೂ ತನ್ನ ಬಂಧುಗಳೆಂದು, ಸಮಾನರೆಂದು ಅವನು ಕಾಣಲಾರನು. ವಾಸ್ತವವಾಗಿ ನೋಡಿದರೆ ತನ್ನ ಜಾತಿಯವರಲ್ಲದ ಜನರೊಡನೆ ಅವರಾರೋ ಪರಕೀಯರೆಂಬಂತೆ ಹಿಂದೂವು ವ್ಯವಹರಿಸುತ್ತಾನೆ. ಏನು ಮಾಡಿದರೂ ಭಯವಿಲ್ಲ, ಎಂತಹ ವಂಚನೆ ಮಾಡಿದರೂ ನಾಚಬೇಕಾಗಿಲ್ಲ ಎಂಬ ಮನೋವೃತ್ತಿ ಅವನ ನಡವಳಿಕೆಯಲ್ಲಿ ಕಾಣುತ್ತದೆ. ಇತರರಿಗಿಂತ ಉತ್ತಮವಾದ ಹಿಂದೂ ಇರಬಹುದು. ಇತರರಿಗಿಂತ ಕೀಳಾದ ಹಿಂದೂ ಇರಬಹುದು; ಆದರೆ ಒಳ್ಳೆಯ ಹಿಂದೂ ಇರಲಾರನು. ಅವನ ವೈಯಕ್ತಿಕ ಸ್ವಭಾವ ಅದಕ್ಕೆ ಕಾರಣವಲ್ಲ. ತನ್ನ ದೇಶಬಾಂಧವರೊಡನೆ ಅವನಿಟ್ಟುಕೊಂಡಿರುವ ಸಂಬಂಧದ ಮೂಲಾಧಾರವೇ ತಪ್ಪಾಗಿದೆ. ಈ ಸಂಬಂಧ ತಪ್ಪಾಗಿದ್ದರೆ ಎಂತಹ ಉತ್ತಮ ಮನುಷ್ಯನೂ ನೀತಿವಂತನಾಗಿ ಉಳಿಯಲಾರನು. ಗುಲಾಮರನ್ನು ಇಟ್ಟುಕೊಂಡಿರುವವನು ಇತರರಿಗಿಂತ ಉತ್ತಮನಾಗಿರಬಹುದು, ಅಥವಾ ಕೀಳಾಗಿರಬಹುದು; ಆದರೆ ಗುಲಾಮನಿಗೆ ಒಳ್ಳೆಯ ಒಡೆಯನಿರುವುದಿಲ್ಲ. ಒಳ್ಳೆಯ ಮನುಷ್ಯನು ಒಡೆಯನಾಗಿರಲಾರ ಮತ್ತು ಒಡೆಯನು ಒಳ್ಳೆಯ ಮನುಷ್ಯನಾಗಿರಲಾರ. ಮೇಲುಜಾತಿ ಹಾಗೂ ಕೆಳಜಾತಿಗಳ ಸಂಬಂಧಕ್ಕೂ ಇದೇ ಮಾತು ಅನ್ವಯಿಸುತ್ತದೆ. ಮೇಲುಜಾತಿಯವನು ಒಳ್ಳೆಯ ಮನುಷ್ಯನಾಗಿ ಇರಲಾರ. ಏಕೆಂದರೆ ತಾನು ಮೇಲುಜಾತಿಯವನಾಗಿ ಉಳಿಯಬೇಕಾಗಿದ್ದರೆ ಕೆಳಜಾತಿಯೊಂದು ಇದ್ದೇ ಇರಬೇಕಲ್ಲವೆ? ತನ್ನ ಮೇಲೊಬ್ಬನು ಮೇಲುಜಾತಿಯವನಿದ್ದಾನೆಂಬ ಪ್ರಜ್ಞೆ ಕೆಳಜಾತಿಯವನಿಗೆ ಒಳ್ಳೆಯದಲ್ಲ. ವರ್ಣ ಅಥವಾ ಜಾತಿಪದ್ಧತಿಯನ್ನು ಆಧರಿಸಿದ ಸಮಾಜವು ತಪ್ಪು ಸಂಬಂಧವನ್ನೇ ಆಧರಿಸಿದೆ ಎಂದು ನಾನು ನನ್ನ ಉಪನ್ಯಾಸದಲ್ಲಿ ವಾದಿಸಿದ್ದೇನೆ. ಮಹಾತ್ಮರು ನನ್ನ ವಾದವನ್ನು ಧ್ವಂಸಗೊಳಿಸುವರೆಂದು ನಾನು ನಿರೀಕ್ಷಿಸಿದ್ದೆ. ಅದಕ್ಕೆ ಬದಲಾಗಿ ಅವರು ಚಾತುರ್ವಣ್ಯದಲ್ಲಿ ತಮ್ಮ ನಿಷ್ಠೆಯನ್ನು ಮತ್ತೆ ಮತ್ತೆ ಹೇಳಿದರು, ಅಷ್ಟೆ, ಆದರೆ ಅದಕ್ಕೆ ಆಧಾರವನ್ನು ಕೊಡಲಿಲ್ಲ.
VII
ಬ್ರಾಹ್ಮಣನು ಕೊನೆವರೆಗೆ ಬ್ರಾಹ್ಮಣನಾಗಿಯೇ ಉಳಿಯುವುದು ಉತ್ಕೃಷ್ಟವೆಂದು ಮಹಾತ್ಮರಿಗೆ ತೋರಿದೆ. ಜೀವನಾಂತ್ಯದವರೆಗೆ ಬ್ರಾಹ್ಮಣರಾಗಿಯೇ ಉಳಿಯಲು ಬಯಸದಂತಹ ಬ್ರಾಹ್ಮಣರು ಅನೇಕರಿದ್ದಾರೆಂಬುದು ವಸ್ತುಸ್ಥಿತಿ. ಆ ಮಾತು ಹಾಗಿರಲಿ. ತಮ್ಮ ಕುಲಪರಂಪರಾಗತ ವೃತ್ತಿಯಾದ ಪೌರೋಹಿತ್ಯ ಅಥವಾ ಪೂಜಾರಿತನಕ್ಕೆ ಗಟ್ಟಿಯಾಗಿ ಅಂಟಿಕೊಂಡಿರುವ ಬ್ರಾಹ್ಮಣರ ವಿಷಯವಾಗಿ ಏನನ್ನೋಣ? ಇದು ಪ್ರಾಚೀನ ಕಾಲದಿಂದ ನಡೆದುಬಂದ ತಮ್ಮ ಕುಲವೃತ್ತಿಯೆಂಬ ಶ್ರದ್ದೆಯಿಂದ ಅದನ್ನು ಅವರು ನಡೆಸುವರೆ? ಅಥವಾ ಧನಲಾಭದ ದುರಾಸೆಯಿಂದ ಆ ವೃತ್ತಿಗೆ ಅಂಟಿಕೊಂಡಿರುವರೇ? ಇಂತಹ ಪ್ರಶ್ನೆಗಳನ್ನು ಮಹಾತ್ಮರು ವಿಚಾರಿಸುವುದಕ್ಕೆ ಹೋಗುವುದಿಲ್ಲ. ಧಾರಾಳವಾಗಿ ಕೊಟ್ಟ ದಾನದಿಂದ ಜೀವಿಸುತ್ತಾ ತಮ್ಮ ಆಧ್ಯಾತ್ಮಿಕ ಸಂಪತ್ತನ್ನು ಜನಕ್ಕೆ ಬೀರುತ್ತಾ ಇರುವ ನಿಜವಾದ ಬ್ರಾಹ್ಮಣರು ಇದ್ದಾರೆಂಬುದು ಮಹಾತ್ಮರಿಗೆ ತೃಪ್ತಿಕರವಾಗಿದೆ. (ಪುಟ 104)
ಜನಕ್ಕೆ ಆಧ್ಯಾತ್ಮಿಕ ಸಂಪತ್ತನ್ನು ಒಯ್ದು ಮುಟ್ಟಿಸುವ ಕಾರ್ಯದಲ್ಲಿ ಸಂಪ್ರದಾಯಸ್ಥ ಬ್ರಾಹ್ಮಣನ ಇನ್ನೊಂದು ಚಿತ್ರಣವನ್ನು ನಾವು ಕೊಡಬಲ್ಲೆವು. ಬ್ರಾಹ್ಮಣನು ಪ್ರೇಮದೇವತೆಯಾದ ವಿಷ್ಣುವಿಗೆ ಪೂಜಾರಿಯಾಗಬಲ್ಲನು. ಪ್ರಳಯದೇವತೆಯಾದ ಶಂಕರನಿಗೂ ಅವನು ಪೂಜಾರಿಯಾಗಬಲ್ಲನು. ಜಗತ್ತಿಗೆ ಪ್ರೇಮದ ಸಂದೇಶವನ್ನು ಬೀರಿದ ಮಹಾಗುರು ಬುದ್ಧನಿಗೂ ಅವನು ಪೂಜಾರಿಯಾಗಬಲ್ಲನು. ಪ್ರತಿದಿನ ಪಶುಬಲಿಯನ್ನು ಬೇಡುವ ಕಾಳಿದೇವಿಗೂ ಅವನು ಪೂಜಾರಿ. ಕ್ಷತ್ರಿಯ ದೇವನಾದ ರಾಮನಿಗೆ ಅವನು ಪೂಜಾರಿ, ಕ್ಷತ್ರಿಯರ ನಾಶಕ್ಕೆ ಅವತಾರವೆತ್ತಿದ ಪರಶುರಾಮನಿಗೂ ಅವನು ಪೂಜಾರಿ. ಸೃಷ್ಟಿಕರ್ತನಾದ ಬ್ರಹ್ಮದೇವರಿಗೂ ಅವನು ಪೂಜಾರಿಯಾಗುತ್ತಾನೆ. ಬ್ರಹ್ಮನಿಗೆ ವಿರೋಧಿಯಾದ ಅಲ್ಲಾ ದೇವರಿಗೆ ಕೂಡ ಇವನು ಪೂಜಾರಿಯಾಗಬಲ್ಲನು. ಇದು ಸತ್ಯದ ಚಿತ್ರಣವಲ್ಲವೆಂದು ಯಾರೂ ಹೇಳಲಾರರು. ಪರಸ್ಪರ ವಿರುದ್ಧ ಗುಣಗಳುಳ್ಳ ವಿವಿಧ ದೇವತೆಗಳಿಗೆಲ್ಲಾ ನಿಷ್ಠೆ ತೋರುವವನಾದರೆ ಆ ಮನುಷ್ಯ ಪ್ರಾಮಾಣಿಕ ಭಕ್ತನೆಂದು ಹೇಳಲಾಗದು. ಇದು ತಮ್ಮ ಧರ್ಮದಲ್ಲಿರುವ ಔದಾರ್ಯ ಭಾವನೆಗೆ ಸಹಿಷ್ಣುತಾ ಭಾವಕ್ಕೆ ಸಾಕ್ಷಿಯೆಂದು ಹಿಂದೂಗಳು ನಂಬುತ್ತಾರೆ. ಇದು ಸಹಿಷ್ಣುತೆಯಾಗಿರದೆ ಎಲ್ಲ ದೇವರ ಬಗೆಗೆ ತಾಳಿರುವ ಉಪೇಕ್ಷೆ ಅಥವಾ ಅಶಕ್ತನು ತೋರುವ ಉದಾಸೀನ ಪ್ರವೃತ್ತಿ ಆಗಿರಬಹುದು. ಈ ಎರಡು ಮನೋವೃತ್ತಿಗಳು ಹೊರನೋಟಕ್ಕೆ ಒಂದೇ ಎಂಬಂತೆ ತೋರಬಹುದು. ಆದರೆ ಪರೀಕ್ಷಿಸಿ ನೋಡಿದಾಗ ಅವೆರಡರಲ್ಲಿ ಮೂಲಭೂತವಾದ ಭೇದವನ್ನು ಕಾಣಬಹುದು. ಅನೇಕ ದೇವತೆಗಳಿಗೆ ಪೂಜೆ ಸಲ್ಲಿಸುವುದು ಸಹಿಷ್ಣುತೆಗೆ ಅಥವಾ ಉದಾರ ಭಾವನೆಗೆ ನಿದರ್ಶನವೆಂದು ಹೇಳಲಾಗುತ್ತದೆ. ಸಂದರ್ಭಕ್ಕೆ ತಕ್ಕಂತೆ ಅನುಕೂಲಸಿಂಧುವನ್ನಾಶ್ರಯಿಸುವ ವಂಚಕ ವೃತ್ತಿಗೂ ಇದು ನಿದರ್ಶನವಾಗಬಹುದಲ್ಲವೆ? ಈ ಸಹಿಷ್ಣುತೆ ಕೇವಲ ಕಪಟಾಚರಣೆಯೆಂದು ನನಗೆ ಖಾತ್ರಿಯಾಗಿದೆ. ತನಗೆ ಲಾಭಕರವಾಗುವಂತಿದ್ದರೆ ಯಾವ ದೇವರನ್ನಾದರೂ ಪೂಜಿಸಲು, ಯಾವ ದೇವರಿಗಾದರೂ ಭಕ್ತನಾಗಲು ಸಿದ್ಧನಾಗುವಂತಹ ಮನುಷ್ಯನಲ್ಲಿ ಅದೆಂತಹ ಆಧ್ಯಾತ್ಮಿಕ ಸಂಪತ್ತು ತುಂಬಿದ್ದೀತು? ಇಂತಹವರಲ್ಲಿ ಆಧ್ಯಾತ್ಮಿಕ ಸಂಪತ್ತಿಲ್ಲವೆಂಬುದಷ್ಟೇ ಅಲ್ಲ, ಶ್ರದ್ದೆಯಿಲ್ಲದೆ, ನಿಷ್ಠೆಯಿಲ್ಲದೆ, ತಂದೆಯಿಂದ ಮಗನಿಗೆ ಪರಂಪರಾಗತವಾಗಿ ಬಂದ ಯಾಂತ್ರಿಕ ವೃತ್ತಿಯೆಂದು ಅದನ್ನು ಪಾಲಿಸುತ್ತಾ ಬರುವುದು ಸದ್ಗುಣವಲ್ಲ, ಸಚ್ಚಾರಿತ್ರವೂ ಅಲ್ಲ; ಧರ್ಮದ ಸೇವೆಯಾಗಿರುವ ಒಂದು ಉದಾತ್ತ ವೃತ್ತಿಯ ದುರುಪಯೋಗವೇ ಆಗಿದೆ ನಿಜವಾಗಿ.
VIII
ಪ್ರತಿಯೊಬ್ಬನೂ ತನ್ನ ಪರಂಪರಾಗತ ಕುಲವೃತ್ತಿಯನ್ನೇ ಪಾಲಿಸಿಕೊಂಡು ಬರಬೇಕೆಂಬ ತತ್ವಕ್ಕೆ ಮಹಾತ್ಮರು ಅದೇಕೆ ಅಂಟಿಕೊಳ್ಳುತ್ತಾರೆ? ಅದಕ್ಕೆ ಎಲ್ಲಿಯೂ ಅವರು ಕಾರಣಗಳನ್ನು ವಿವರಿಸಿಲ್ಲ. ಅವರು ಹೇಳದಿದ್ದರೂ ಅದಕ್ಕೆ ಏನೋ ಕಾರಣವಿದ್ದಿರಲೇಬೇಕು. ಕೆಲವರ್ಷಗಳ ಹಿಂದೆ ತಮ್ಮ ಯಂಗ್ ಇಂಡಿಯಾ ಪತ್ರಿಕೆಯಲ್ಲಿ ‘ಜಾತಿ ಮತ್ತು ವರ್ಗ’ ಎಂಬ ವಿಷಯವಾಗಿ ಬರೆಯುತ್ತಾ, ಸಾಮಾಜಿಕ ಭದ್ರತೆಯ ದೃಷ್ಟಿಯಿಂದ ವರ್ಗಕ್ಕಿಂತ ಜಾತಿಯೇ ಹೆಚ್ಚು ಸಮರ್ಪಕವಾಗಿ ಹೊಂದಾಣಿಕೆ ಮಾಡಬಲ್ಲದಾದುದರಿಂದ ವರ್ಗಕ್ಕಿಂತ ಜಾತಿಯೇ ಮೇಲೆಂದು ಅವರು ವಾದಿಸಿದ್ದರು. ಕುಲವೃತ್ತಿಯನ್ನೇ ಪಾಲಿಸಬೇಕೆಂಬ ಅವರ ವಾದಕ್ಕೆ ಇದೇ ಕಾರಣವಾಗಿದ್ದರೆ, ಸಾಮಾಜಿಕ ಜೀವನದ ಬಗೆಗೆ ಅವರ ಅಭಿಪ್ರಾಯ ತಪ್ಪೆಂದು ಹೇಳಬೇಕಾಗುತ್ತದೆ. ಸಾಮಾಜಿಕ ಭದ್ರತೆಯನ್ನು ಎಲ್ಲರೂ ಅಪೇಕ್ಷಿಸುತ್ತಾರೆ; ಭದ್ರತೆ ಬೇಕಾದರೆ ವ್ಯಕ್ತಿವ್ಯಕ್ತಿಗಳ ನಡುವೆ ಮತ್ತು ವರ್ಗವರ್ಗಗಳ ನಡುವೆ ಇರುವ ಸಂಬಂಧಗಳಲ್ಲಿ ಅಷ್ಟಿಷ್ಟು ಹೊಂದಾಣಿಕೆಯನ್ನು ಸಾಧಿಸಲೇಬೇಕಾಗುತ್ತದೆ. (ಪುಟ 105)
ಆದರೆ ಪ್ರತಿಯೊಬ್ಬರಿಗೂ ಬೇಡವಾದ ಎರಡು ಅಂಶಗಳಿವೆ. ಮೊದಲನೆಯದಾಗಿ, ಬದಲಾವಣೆ ಮಾಡಲಾಗದಂತೆ ಎಲ್ಲಾ ಕಾಲಕ್ಕೂ ಸ್ಥಿರವಾಗಿ ಆಚಲವಾಗಿರುವಂತಹ ಸಂಬಂಧ ಬೇಡವಾಗಿದೆ. ಭದ್ರತೆ ಬೇಕು, ಆದರೆ ಬದಲಾವಣೆ ಅವಶ್ಯಕವಾದಾಗಲೂ ಅದಕ್ಕೆ ಆಸ್ಪದವೀಯದಂತಹ ವ್ಯವಸ್ಥೆಯಿಂದ ಆದಾಗುವುದಾದರೆ ಬೇಡ. ಎರಡನೆಯದಾಗಿ, ಕೇವಲ ಹೊಂದಾಣಿಕೆ ಯಾರಿಗೂ ಬೇಡವಾಗಿದೆ. ಹೊಂದಾಣಿಕೆ ಬೇಕು, ಆದರೆ ಅದರಿಂದ ಸಾಮಾಜಿಕ ನ್ಯಾಯಕ್ಕೆ ಚ್ಯುತಿಯಾಗಕೂಡದು. ಜಾತಿಪದ್ಧತಿಯಿಂದ ಎಂದರೆ ಪರಂಪರಾಗತ ಕುಲವೃತ್ತಿಯ ಪಾಲನೆಯಿಂದ ಸಾಮಾಜಿಕ ಸಂಬಂಧದ ಹೊಂದಾಣಿಕೆ ಮಾಡಹೊರಟರೆ ಈ ಎರಡು ಅನಿಷ್ಟಗಳನ್ನು ತಪ್ಪಿಸಲಾದೀತೆ? ಆಗದೆಂದೇ ನನಗೆ ಮನವರಿಕೆ. ಸಾಮಾಜಿಕ ಹೊಂದಾಣಿಕೆಯ ಮುಖ್ಯ ತತ್ವಗಳಾದ ಸಮಾನತೆ ಹಾಗೂ ಪರಿವರ್ತನಶೀಲತೆ ಇವೆರಡಕ್ಕೂ ವಿರೋಧವೊಡ್ಡುವುದಾದ್ದರಿಂದ ಇದು ಹೊಂದಾಣಿಕೆಯ ಉತ್ತಮ ಉಪಾಯವಾಗುವುದಿಲ್ಲ, ಬದಲಿಗೆ ಅತ್ಯಂತ ಕೆಟ್ಟ ಉಪಾಯವಾಗುತ್ತದೆ.
IX
ಜಾತಿಯನ್ನು ಅಲ್ಲಗಳೆದು ವರ್ಣದಲ್ಲಿ ಮಾತ್ರ ಶ್ರದ್ದೆ ತಾಳಿರುವುದರಿಂದ ಮಹಾತ್ಮರು ಪ್ರಗತಿ ಸಾಧಿಸಿದ್ದಾರೆಂದು ತೋರಬಹುದು. ಒಂದು ಕಾಲಕ್ಕೆ ಈ ಮಹಾತ್ಮರು ಕಟ್ಟಾ ಸನಾತನಿ ಹಿಂದೂವಾಗಿದ್ದರೆಂಬುದು ಸತ್ಯ. ವೇದ, ಉಪನಿಷತ್ತು, ಪುರಾಣಗಳು, ಹೀಗೆ ಹಿಂದೂ ಧರ್ಮಗ್ರಂಥಗಳೆಂದು ಯಾವಯಾವುದಕ್ಕೆ ಹೆಸರಿದೆಯೊ ಅಂತಹ ಎಲ್ಲವುಗಳಲ್ಲಿಯೂ ಅವರಿಗೆ ನಂಬಿಕೆಯಿತ್ತು. ಅದರಿಂದಾಗಿ ಅವತಾರಗಳನ್ನೂ, ಪುನರ್ಜನ್ಮಗಳನ್ನೂ ಅವರು ನಂಬಿದ್ದರು. ಜಾತಿಪದ್ಧತಿಯಲ್ಲಿ ಶ್ರದ್ಧೆಯಿಟ್ಟುಕೊಂಡು ಸಂಪ್ರದಾಯಶೀಲರಂತೆ ಜೋರಾಗಿ ಅದನ್ನು ಸಮರ್ಥಿಸುತ್ತಿದ್ದರು. ಬೇರೆ ಜಾತಿಯವರೊಡನೆ ಊಟ, ಜಲಪಾನ, ಮದುವೆಗಳ ಬೇಡಿಕೆಗಳನ್ನು ಖಂಡಿಸುತ್ತಿದ್ದರು. ಅಂತರ್ಜಾತೀಯ ಭೋಜನ ನಿಷೇಧವು ‘ಸಂಕಲ್ಪ ಬಲದ ಸಂವರ್ಧನೆಗೂ ಕೆಲವು ಸಾಮಾಜಿಕ ಸದ್ಗುಣ ರಕ್ಷಣೆಗೂ ಸಹಾಯಕಾರಿ’ಯೆಂದು ವಾದಿಸುತ್ತಿದ್ದರು. ಈ ಡಂಭಾಚಾರದ ಹುಚ್ಚು ವಿವರಗಳನ್ನೆಲ್ಲ ಈಗ ಅವರು ಖಂಡಿಸಿರುವುದು ಒಳ್ಳೆಯದು. ಜಾತಿಪದ್ಧತಿಯು ಆಧ್ಯಾತ್ಮಿಕ ಹಾಗೂ ರಾಷ್ಟ್ರೀಯ ಅಭಿವೃದ್ಧಿಗೆ ಆತಂಕಕಾರಿಯೆಂದು ಅವರು ಒಪ್ಪಿರುವುದೂ ಒಳ್ಳೆಯದೆ. ಅವರ ಮಗ ಅಂತರ್ಜಾತೀಯ ವಿವಾಹ ಮಾಡಿಕೊಂಡಿದ್ದು ಈ ಪರಿವರ್ತನೆಗೆ ಸಂಬಂಧಿಸಿಯೋ ಏನೋ. ಆದರೆ ಮಹಾತ್ಮರು ನಿಜವಾಗಿಯೂ ಪ್ರಗತಿ ಹೊಂದಿದ್ದಾರೆಯೇ? ಮಹಾತ್ಮರು ಎತ್ತಿ ಹಿಡಿಯುವ ಈ ವರ್ಣವೆಂತಹುದು? ಸ್ವಾಮಿ ದಯಾನಂದ ಸರಸ್ವತಿ ಹಾಗೂ ಅವರ ಅನುಯಾಯಿಗಳಾದ ಆರ್ಯ ಸಮಾಜಿಗಳು ಬೋಧಿಸುವ ವೈದಿಕ ವರ್ಣವೆ? ವ್ಯಕ್ತಿಯ ನೈಸರ್ಗಿಕ ಪ್ರವೃತ್ತಿ ಅಥವಾ ಸಾಮರ್ಥ್ಯಕ್ಕೆ ಅನುಗುಣವಾದ ವೃತ್ತಿಯನ್ನು ಅನುಸರಿಸಬೇಕೆಂಬುದು ವೈದಿಕ ವರ್ಣದ ಮುಖ್ಯ ತತ್ವ. ನೈಸರ್ಗಿಕ ಪ್ರವೃತ್ತಿಗೆ ಅನುಕೂಲವಾಗಲಿ ಬಿಡಲಿ, ಪರಂಪರಾಗತವಾದ ಕುಲವೃತ್ತಿಯನ್ನೇ ಅನುಸರಿಸಬೇಕೆಂಬುದು ಮಹಾತ್ಮರ ವರ್ಣಕ್ಕಿರುವ ಮುಖ್ಯ ತತ್ವ. ಮಹಾತ್ಮರ ಮೇರೆಗೆ ವರ್ಣ ಮತ್ತು ಜಾತಿ ಇವೆರಡರ ಅಂತರವೇನು? ಏನೂ ಇದ್ದಂತೆ ತೋರುವುದಿಲ್ಲ. ಮಹಾತ್ಮರು ನೀಡುವ ವ್ಯಾಖ್ಯೆಯ ಮೇರೆಗೆ ವರ್ಣವೆಂಬುದು ಜಾತಿಯ ಇನ್ನೊಂದು ಹೆಸರಾಗುತ್ತದೆ. ಹೀಗಿರುವುದರಿಂದ ಮಹಾತ್ಮರು ಪ್ರಗತಿ ಹೊಂದುವುದಕ್ಕೆ ಬದಲಾಗಿ ಹಿಂಚಲನೆಯನ್ನು ಹೊಂದಿದ್ದಾರೆ. ವೈದಿಕ ವರ್ಣಕ್ಕೆ ಇದ್ದ ಉದಾತ್ತ ಕಲ್ಪನೆಯನ್ನು ವಿದ್ರೂಪಗೊಳಿಸಿ ಮಹಾತ್ಮರು ತಮ್ಮ ಅರ್ಥವಿವರಣೆಯಿಂದ ಅದನ್ನು ಹಾಸ್ಯಾಸ್ಪದವಾಗುವಂತೆ ಮಾಡಿದ್ದಾರೆ. ವರ್ಣವ್ಯವಸ್ಥೆಯನ್ನು ನಾನು ತಿರಸ್ಕರಿಸುತ್ತಿದ್ದು ಅದಕ್ಕೆ ಕಾರಣಗಳೇನೆಂದು ನನ್ನ ಉಪನ್ಯಾಸದಲ್ಲಿ (ಪುಟ 106)
ವಿವರಿಸಿದ್ದೇನೆ. ಹಾಗಿದ್ದರೂ ಕೂಡ, ಸ್ವಾಮಿ ದಯಾನಂದರೇ ಮೊದಲಾದವರು ವೈದಿಕ ವರ್ಣಕ್ಕೆ ನೀಡುವ ಅರ್ಥ ವಿವರಣೆ ಸಮಂಜಸವೂ ಆಕ್ಷೇಪರಹಿತವೂ ಆಗಿದೆಯೆಂದು ನಾನು ಒಪ್ಪಲೇಬೇಕು. ಸಮಾಜದಲ್ಲಿ ವ್ಯಕ್ತಿಯ ಸ್ಥಾನವನ್ನು ಗೊತ್ತುಪಡಿಸುವಾಗ ಅವನ ಜನ್ಮವನ್ನೇ ಆಧಾರವಾಗಿ ಹಿಡಿಯಲು ಅದು ಅವಕಾಶವೀಯುತ್ತಿರಲಿಲ್ಲ. ವ್ಯಕ್ತಿಯ ಯೋಗ್ಯತೆಯನ್ನಷ್ಟೆ ಅದು ಮನ್ನಿಸುತ್ತಿತ್ತು. ಮಹಾತ್ಮರು ವರ್ಣಕ್ಕೆ ಕೊಡುವ ಅರ್ಥವಿವರಣೆ ವೈದಿಕ ವರ್ಣದ ವಿಪರ್ಯಾಸವಾಗಿದ್ದು ಅಸಹ್ಯವೂ ಆಗಿದೆ. ವರ್ಣ ಮತ್ತು ಜಾತಿ ಎರಡೂ ಸಂಪೂರ್ಣವಾಗಿ ಭಿನ್ನ ಪರಿಕಲ್ಪನೆಗಳು. ವರ್ಣವು ವ್ಯಕ್ತಿಯ ಯೋಗ್ಯತೆಯನ್ನು ಆಧಾರವಾಗಿಟ್ಟುಕೊಳ್ಳುತ್ತದೆ. ಜಾತಿಯು ವ್ಯಕ್ತಿಯ ಜನ್ಮವನ್ನು ಆಧರಿಸುತ್ತದೆ. ಇವೆರಡೂ ಭಿನ್ನವೆಂಬುದಷ್ಟೇ ಅಲ್ಲ, ಪರಸ್ಪರ ವಿರುದ್ಧವೂ ಆಗಿದೆ. ಪ್ರತಿಯೊಬ್ಬರೂ ತಮ್ಮತಮ್ಮ ಕುಲವೃತ್ತಿಯನ್ನು ಅನುಸರಿಸಬೇಕೆಂಬುದರಲ್ಲಿ ಮಹಾತ್ಮರಿಗೆ ನಂಬಿಕೆಯಿರುವುದಾದರೆ ಅವರು ಜಾತಿ ಪದ್ಧತಿಯ ಪ್ರಚಾರವನ್ನೇ ಮಾಡುತ್ತಿದ್ದಾರೆಂದಾಯಿತು. ಮತ್ತು ಅದನ್ನು ವರ್ಣವ್ಯವಸ್ಥೆಯೆಂದು ಅವರು ಹೇಳುತ್ತಿರುವುದು ಸುಳ್ಳು ಮಾತ್ರವಲ್ಲದೆ, ಗೊಂದಲಗೆಟ್ಟ ವಿಚಾರವನ್ನು ಇನ್ನಷ್ಟು ಗೊಂದಲಗೆಡಿಸಿದಂತಾಗಿದೆ. ಅವರ ಈ ಗೊಂದಲಗೆಟ್ಟ ವಿಚಾರಕ್ಕೆ ಕಾರಣವೇನೆಂದರೆ ವರ್ಣ ಯಾವುದು ಹಾಗೂ ಜಾತಿ ಯಾವುದು ಎಂಬುದರ ಸ್ಪಷ್ಟ ಹಾಗೂ ಖಚಿತ ಜ್ಞಾನ ಅವರಿಗಿಲ್ಲ; ಹಿಂದೂಧರ್ಮದ ರಕ್ಷಣೆಗೆ ಅವುಗಳಲ್ಲಿ ಯಾವುದು ಅವಶ್ಯಕವೆಂಬ ನಿಶ್ಚಿತ ಅರಿವು ಅವರಲ್ಲಿಲ್ಲ. ಜಾತಿ ಹಿಂದೂಧರ್ಮದ ತತ್ವವಲ್ಲವೆಂದು ಅವರು ಹೇಳಿದ್ದಾರೆ. (ಈ ಅಭಿಪ್ರಾಯವನ್ನು ಕೂಡ ಬದಲಿಸುವುದಕ್ಕೆ ಒಂದು ರಹಸ್ಯ ಕಾರಣ ಅವರಿಗೆ ಕಂಡುಬರಲಿಕ್ಕಿಲ್ಲವೆಂದು ಹಾರೈಸೋಣ). ಹಾಗಾದರೆ ವರ್ಣವೆಂಬುದು ಹಿಂದೂಧರ್ಮದ ಮೂಲ ತತ್ವವೇ? ಇದಕ್ಕೆ ಸ್ಪಷ್ಟ ಉತ್ತರ ಸಾಧ್ಯವಿಲ್ಲ. ‘ಡಾಕ್ಟರ್ ಅಂಬೇಡ್ಕರ್ ಅವರ ದೋಷಾರೋಪಣೆ’ ಎಂಬ ಅವರ ಲೇಖನವನ್ನೋದಿದವರು ‘ಇಲ್ಲ’ ಎಂದೇ ಉತ್ತರಿಸುವರು. ವರ್ಣವು ಹಿಂದೂ ಧರ್ಮದ ಸಾರಭೂತವಾದ ಅಂಗವೆಂದು ಈ ಲೇಖನದಲ್ಲಿ ಅವರು ಹೇಳಿಲ್ಲ. ಅದಕ್ಕೆ ಬದಲಾಗಿ ಅವರು ಹೇಳಿರುವುದು ಹೀಗೆ : “ಹಿಂದೂಧರ್ಮದ ಮೂಲ ತತ್ವವೆಂದರೆ ಸತ್ಯಸ್ವರೂಪನಾದ ಒಬ್ಬನೇ ಒಬ್ಬ ದೇವರಿದ್ದಾನೆ ಎಂಬುದು ಮತ್ತು ಮಾನವ ಕುಟುಂಬದ ಧರ್ಮ ಅಹಿಂಸೆಯೆಂಬುದು”. ಆದರೆ ಶ್ರೀ ಸಂತರಾಮರಿಗೆ ಉತ್ತರವಾಗಿ ಬರೆದ ಲೇಖನವನ್ನು ಓದಿದವರು ‘ಹೌದು’ ಎನ್ನುವರು. ಆ ಲೇಖನದಲ್ಲಿ ಅವರು ಹೀಗೆಂದಿದ್ದಾರೆ : “ಕುರಾನ್‌ನನ್ನು ಒಪ್ಪದವನು ಮುಸಲ್ಮಾನನಾಗಿ ಉಳಿಯುವುದು ಸಾಧ್ಯವೆ? ಬೈಬಲ್ಲನ್ನು ನಿರಾಕರಿಸಿದವನು ಕ್ರೈಸ್ತನಾಗಿ ಉಳಿಯುವುದು ಸಾಧ್ಯವೆ? ವರ್ಣ ಹಾಗೂ ಜಾತಿ ಎರಡೂ ಒಂದೇ ಆಗಿದ್ದ ಪಕ್ಷದಲ್ಲಿ ಮತ್ತು ವರ್ಣವು ಹಿಂದೂ ಧರ್ಮಶಾಸ್ತ್ರಗಳ ಅಖಂಡ ಭಾಗವಾಗಿದ್ದರೆ, ವರ್ಣ ಅಥವಾ ಜಾತಿಯನ್ನು ನಿರಾಕರಿಸುವವರು ತಮ್ಮನ್ನು ಹಿಂದೂಗಳೆಂದು ಅವರು ಹೇಗೆ ಕರೆದುಕೊಳ್ಳಬಲ್ಲರೋ ನಾನರಿಯೆ”. ನುಣುಚಿಕೊಳ್ಳುವಂತೆ ಈ ಬಗೆಯ ಸಂದಿಗ್ಧ ಮಾತುಗಳೇಕೆ? ಮಹಾತ್ಮರು ಯಾರ ಕೈಗೂ ಸಿಕ್ಕದಂತೆ ಪ್ರಯತ್ನಿಸುವುದೇಕೆ? ಯಾರನ್ನು ಮೆಚ್ಚಿಸಬಯಸುತ್ತಾರೆ? ಈ ಸಂತರಿಗೆ ಸತ್ಯ ಹೊಳೆದಿಲ್ಲವೆ? ಅಥವಾ ಸಂತನ ಕಾಣ್ಕೆಗೆ ರಾಜಕಾರಣಿ ಅಡ್ಡವಾಗಿ ನಿಂತಿದ್ದಾನೆಯೆ? ಮಹಾತ್ಮರಿಗೆ ಉಂಟಾಗಿರುವ ಈ ಗೊಂದಲಗೇಡು ಬಹುಶಃ ಎರಡು ಕಾರಣಗಳಿಂದ ಎಂದು ತೋರುತ್ತದೆ. ಮೊದಲನೆಯದು ಮಹಾತ್ಮರ ಸ್ವಭಾವ. ಪ್ರತಿಯೊಂದು ವಿಷಯದಲ್ಲಿ ಅವರಿಗೆ ಮಗುವಿನ ಮುಗ್ಧತೆಯಿರುತ್ತದೆ; ಆತ್ಮವಂಚನೆ ಮಾಡಿಕೊಳ್ಳುವ ಮಗುವಿನ ಸ್ವಭಾವ ಇರುತ್ತದೆ. ಮಗುವಿನಂತೆ ಅವರು ತಮಗೆ ನಂಬಬೇಕೆಂದು ಅನ್ನಿಸಿದ್ದನ್ನು ನಂಬಿಬಿಡುತ್ತಾರೆ. ಜಾತಿಯಲ್ಲಿಯ ನಂಬಿಕೆಯನ್ನು ಬಿಟ್ಟಂತೆ ವರ್ಣದಲ್ಲಿಯ ನಂಬಿಕೆಯನ್ನು ಬಿಡಬೇಕೆಂದು ಅನ್ನಿಸುವವರೆಗೆ ಮಹಾತ್ಮರು ಅದನ್ನು ತೊರೆಯಲಾರರು. ಅಲ್ಲಿಯವರೆಗೆ ನಾವು ಕಾಯಬೇಕು. ಎರಡನೆಯ ಕಾರಣವೆಂದರೆ (ಪುಟ 107)
ಮಹಾತ್ಮರು ಆಡಬಯಸಿದ ದ್ವಿಪಾತ್ರ. ಮಹಾತ್ಮಾ ಮತ್ತು ರಾಜಕಾರಣಿ ಎರಡೂ ಆಗಬೇಕೆನ್ನುತ್ತಾರೆ. ಮಹಾತ್ಮರಾಗಿ ನಿಂತು ರಾಜಕಾರಣಿಯನ್ನು ಆಧ್ಯಾತ್ಮಿಕ ಪ್ರಭಾವಕ್ಕೆ ಒಳಪಡಿಸಲು ಅವರು ಪ್ರಯತ್ನಿಸುತ್ತಾ ಇರಬಹುದು. ಅದರಲ್ಲಿ ಅವರಿಗೆ ಸಿದ್ದಿಯಾಗಿದೆಯೋ ಇಲ್ಲವೋ ತಿಳಿಯದು. ಆದರೆ ರಾಜಕಾರಣ ಅವರನ್ನು ನಿಶ್ಚಿತವಾಗಿಯೂ ವ್ಯವಹಾರ ಕುಶಲಿಯಾಗಿ ಮಾರ್ಪಡಿಸಿದೆ. ಸಮಾಜವು ಸಮಗ್ರ ಸತ್ಯವನ್ನು ನುಡಿಯಲಾಗದು. ಸಮಗ್ರ ಸತ್ಯವನ್ನು ಆಡುತ್ತಿದ್ದರೆ ತನ್ನ ರಾಜಕಾರಣಕ್ಕೆ ಅದು ಲೇಸಲ್ಲ. ರಾಜಕಾರಣಿ ಇದನ್ನು ಚೆನ್ನಾಗಿ ಅರಿತುಕೊಂಡಿರಬೇಕು. ಜಾತಿ, ವರ್ಣವನ್ನು ಮಹಾತ್ಮರು ಯವಾಗಲೂ ಸಮರ್ಥಿಸುವುದೇಕೆಂದು ಈಗ ತಿಳಿಯಿತಲ್ಲವೆ? ಅವುಗಳನ್ನು ವಿರೋಧಿಸಿದರೆ ರಾಜಕಾರಣದಲ್ಲಿ ತಮಗೆ ಸ್ಥಾನ ಉಳಿಯದು. ಅದೇನೇ ಇರಲಿ. ವರ್ಣದ ಹೆಸರಿನಿಂದ ಜಾತಿಯನ್ನು ಸಮರ್ಥಿಸುವಲ್ಲಿ ಆತ್ಮವಂಚನೆಯ ಜೊತೆಗೆ ಪರಮವಂಚನೆಯನ್ನೂ ಮಾಡುತ್ತಿದ್ದೀರೆಂದು ಮಹಾತ್ಮರಿಗೆ ನಾವು ಹೇಳಲೇಬೇಕಾಗಿದೆ.
X
ಹಿಂದೂಗಳು ಹಾಗೂ ಹಿಂದೂಧರ್ಮ ಇವೆರಡಕ್ಕೂ ನಾನು ಅನ್ವಯಿಸಿದ ಅಳತೆಗೋಲು ತೀರ ಕಠೋರವೆಂದೂ, ಆ ಮಾಪಕದಿಂದ ಅಳೆಯ ಹೊರಟರೆ ಈಗಿರುವ ಯಾವ ಧರ್ಮವೂ ಸಮರ್ಪಕವಾಗಲಾರದೆಂದೂ ಮಹಾತ್ಮರು ಹೇಳುತ್ತಾರೆ. ನಾನು ಬಳಸಿದ ಮಾನದಂಡ ಉನ್ನತವೆಂಬುದು ನಿಜವಾಗಿರಬಹುದು. ಆದರೆ ಅದು ದೊಡ್ಡದೋ ಚಿಕ್ಕದೋ ಎಂಬುದು ಪ್ರಶ್ನೆಯಲ್ಲ. ಆ ಮಾಪಕಗಳು ಯೋಗ್ಯವೇ ಅಲ್ಲವೇ ಎಂಬುದು ಮುಖ್ಯ ಪ್ರಶ್ನೆ, ಒಂದು ಜನತೆ ಮತ್ತು ಅವರ ಧರ್ಮ ಇವೆರಡನ್ನು ಸಾಮಾಜಿಕ ನೀತಿಯನ್ನಾಧರಿಸಿದ ಸಾಮಾಜಿಕ ಮಟ್ಟದಿಂದಲೇ ಬೆಲೆ ಕಟ್ಟಬೇಕಾಗಿತ್ತದೆ. ಜನರ ಕಲ್ಯಾಣಜೀವನಕ್ಕೆ ಧರ್ಮವೊಂದು ಅವಶ್ಯಕ ಘಟಕವಾಗಿದ್ದರೆ ಇದನ್ನು ಬಿಟ್ಟು ಬೇರೆ ಯಾವ ಪ್ರಮಾಣವೂ ಅಗತ್ಯವಾಗದು. ಹಿಂದೂಗಳು ಹಾಗೂ ಹಿಂದೂಧರ್ಮ ಇವೆರಡರ ಯೋಗ್ಯತೆಯನ್ನು ಆಳೆಯಲು ನಾನು ಉಪಯೋಗಿಸಿದ ಮಾನದಂಡ ಅತ್ಯಂತ ಸಮರ್ಪಕವೆಂದೇ ನಾನು ಸಾಧಿಸುತ್ತೇನೆ. ಅದಕ್ಕಿಂತ ಉತ್ತಮವಾದುದು ನನಗೆ ಗೊತ್ತಿಲ್ಲ. ನನ್ನ ಮಾನದಂಡದಿಂದ ಅಳೆದರೆ ಗೊತ್ತಿರುವ ಪ್ರತಿಯೊಂದು ಧರ್ಮವೂ ಅದಕ್ಕೆ ನಿಲುಕದೆ ಸೋತು ಹೋಗುವುದೆಂಬುದು ನಿಜವಾಗಿರಬಹುದು. ಆದರೆ ಹಿಂದೂಗಳ ಹಾಗೂ ಹಿಂದೂಧರ್ಮದ ಮುಂದಾಳಾಗಿ ನಿಂತ ಮಹಾತ್ಮರಿಗೆ ಇದು ನೆಮ್ಮದಿಯ ಕಾರಣವಾಗಕೂಡದು. ಇನ್ನೊಬ್ಬ ಹುಚ್ಚನಿದ್ದಾನೆಂದು ಹುಚ್ಚನಿಗೆ ಸಮಾಧಾನವೆ? ಹಿಂದೂಗಳ ಹಾಗೂ ಹಿಂದೂಧರ್ಮ ಇವೆರಡೂ ಸಮರ್ಪಕವಾದ ಮಟ್ಟದಲ್ಲಿ ಇಲ್ಲವೆಂಬ ಒಂದೇ ಒಂದು ಕಾರಣದಿಂದ ಜಿಗುಪ್ಸೆ ಮತ್ತು ತಿರಸ್ಕಾರ (ಇವೆರಡೂ ನನ್ನಲ್ಲಿವೆ ಎಂದೇ ಆರೋಪಿಸಲಾಗಿದೆ) ಹುಟ್ಟಲಿಲ್ಲ. ಈ ಮಾತನ್ನು ಮಹಾತ್ಮರಿಗೆ ನಾನು ಖಂಡಿತವಾಗಿ ಹೇಳಬಯಸುತ್ತೇನೆ. ಜಗತ್ತು ತುಂಬ ದೋಷಯುಕ್ತವಾಗಿದೆಯೆಂದೂ, ಅದರಲ್ಲಿ ಇರಬಯಸುವವರು ಆ ಎಲ್ಲಾ ದೋಷಗಳನ್ನು ಸಹಿಸಿಕೊಳ್ಳಬೇಕೆಂದೂ ನಾನು ಅರಿತಿದ್ದೇನೆ. ನಾನು ಇರಬೇಕಾಗಿ ಬಂದ ಸಮಾಜದಲ್ಲಿ ಅದರ ದೋಷಗಳನ್ನು ನ್ಯೂನತೆಗಳನ್ನು ಸಹಿಸಲು ಸಿದ್ಧನಾಗಿದ್ದೇನೆ. ಆದರೆ ತಪ್ಪು ಆದರ್ಶಗಳನ್ನೇ ಎತ್ತಿ ಹಿಡಿಯುವ ಅಥವಾ ಸರಿಯಾದ ಆದರ್ಶಗಳನ್ನಿಟ್ಟುಕೊಂಡು ಕೂಡ ಅದಕ್ಕೆ ಅನುಗುಣವಾಗಿ ತನ್ನ ಜೀವನವನ್ನು ತಿದ್ದಿಕೊಳ್ಳಲೊಲ್ಲದ ಸಮಾಜದಲ್ಲಿ ಬದುಕಲು ನಾನು ಒಪ್ಪಲಾರೆ. ಹಿಂದೂಗಳೂ ಹಾಗೂ ಹಿಂದೂಧರ್ಮ ಇವೆರಡರ ಬಗೆಗೂ ನಾನು ಜಿಗುಪ್ಸೆ ಹೊಂದಿದ್ದರೆ ಅವುಗಳು ತಪ್ಪು ಆದರ್ಶಗಳನ್ನಿಟ್ಟುಕೊಂಡು ಆಯೋಗ್ಯವಾದ ಸಾಮಾಜಿಕ (ಪುಟ 108)
ಜೀವನವನ್ನು ನಡೆಸುತ್ತಿರುವುದೇ ಅದಕ್ಕೆ ಕಾರಣವಾಗಿದೆ. ಹಿಂದೂಗಳು ಹಾಗೂ ಹಿಂದೂಧರ್ಮದ ಜೊತೆಗಿರುವ ನನ್ನ ಜಗಳಕ್ಕೆ ಅವುಗಳ ಸಾಮಾಜಿಕ ನಡವಳಿಕೆಯ ನ್ಯೂನತೆ ಕಾರಣವಲ್ಲ. ಇನ್ನೂ ಆಳವಾದ ಮೂಲಭೂತ ಕಾರಣವಿದೆ. ಅದು ಅವರ ಆದರ್ಶಗಳ ವಿಚಾರಕ್ಕೆ ಸೇರಿದ್ದು.
XI
ಹಿಂದೂ ಸಮಾಜಕ್ಕೆ ನೈತಿಕ ಪುನರ್ಜನ್ಮ ಈಗ ಅತ್ಯಂತ ಅವಶ್ಯಕವೆಂದು ನನಗೆ ತೋರುತ್ತದೆ. ಇದನ್ನು ಈಗಲೇ ಸಾಧಿಸದೆ ಮುಂದೂಡುವುದು ಅಪಾಯಕಾರಿಯಾದೀತು. ಈ ಪುನರ್ಜನ್ಮ ಅಥವಾ ಪುನರುದ್ಧಾರವನ್ನು ನಿರ್ಧರಿಸುವವರು ಹಾಗೂ ನಿಯಂತ್ರಿಸುವವರು ಯಾರು ಎಂಬುದು ಪ್ರಶ್ನೆ. ಬೌದ್ಧಿಕ ಪುನರ್ಜನ್ಮವನ್ನು ಪಡೆದು, ಬೌದ್ಧಿಕ ಧೈರ್ಯ ತೋರುವ ಪ್ರಾಮಾಣಿಕತೆ ಇದ್ದವರು ಈ ಕಾರ್ಯ ಮಾಡಬಲ್ಲರು. ಈ ಮಾನದಂಡದಿಂದ ಅಳೆದು ನೋಡಿದಾಗ ಈಗ ಹಿಂದೂ ಮುಂದಾಳುಗಳೆನಿಸಿಕೊಂಡವರು ಈ ಮಹಾಕಾರ್ಯಕ್ಕೆ ಅನರ್ಹರೆಂದು ನನ್ನ ಅಭಿಪ್ರಾಯ. ಪೂರ್ವಭಾವಿಯಾಗಿ ಹೊಂದಿರಬೇಕಾದ ಬೌದ್ಧಿಕ ಪುನರ್ಜನ್ಮವನ್ನು ಅವರು ಹೊಂದಿಲ್ಲ. ಹಾಗೆ ಹೊಂದಿದವರೇ ಆಗಿದ್ದ ಪಕ್ಷದಲ್ಲಿ ಅಶಿಕ್ಷಿತ ಜನಸಮೂಹದಂತೆ ತಾವೇ ಮೋಸ ಮಾಡಿಕೊಳ್ಳುತ್ತಿರಲಿಲ್ಲ, ಮತ್ತು ಈಗ ಅವರು ಮಾಡುತ್ತಿರುವಂತೆ ಜನತೆಯ ಅಜ್ಞಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಲೂ ಇರಲಿಲ್ಲ. ಹಿಂದೂ ಸಮಾಜ ಅಭದ್ರವಾಗಿ ಮುರಿದುಬೀಳುತ್ತಿದ್ದರೂ ಈ ಮುಂದಾಳುಗಳು ಪ್ರಸಕ್ತ ಕಾಲಕ್ಕೆ ಸಂಬಂಧವಿಲ್ಲದ ಪ್ರಾಚೀನ ಆದರ್ಶಗಳನ್ನೇ ಬೋಧಿಸುತ್ತಲಿದ್ದಾರೆ. ಸಮಾಜದ ಬುನಾದಿಯೇನೆಂದು ಪರೀಕ್ಷಿಸುವುದಕ್ಕೆ ಅವರು ಬಲ್ಲರು. ಆದರೆ ಅದನ್ನು ವಿರೋಧಿಸುತ್ತಾರೆ. ಹಿಂದೂ ಜನಸಮೂಹ ತನ್ನ ನಂಬಿಕೆಗಳ ಬಗೆಗೆ ಅತ್ಯಂತ ಅಜಾಗರೂಕವಾಗಿದೆ. ಮುಂದಾಳುಗಳೂ ಹಾಗೆಯೇ ಇದ್ದಾರೆ. ಆದರೆ ಈ ನಂಬಿಕೆಗಳನ್ನು ಅಲ್ಲಗಳೆಯುವುದಕ್ಕೆ ಯಾರಾದರೂ ಪ್ರಯತ್ನಿಸಿದರೆ ಮಾತ್ರ ಈ ಮುಂದಾಳುಗಳು ಆ ನಂಬಿಕೆಗಳ ಬಗೆಗೆ ಆವೇಶ ತಾಳುತ್ತಾರೆ. ಮಹಾತ್ಮಾಜಿ ಕೂಡ ಇದಕ್ಕೆ ಅಪವಾದವಾಗಿಲ್ಲ. ಸ್ವತಂತ್ರ ವಿಚಾರದಲ್ಲಿ ಅವರಿಗೆ ನಂಬಿಕೆಯಿದ್ದಂತೆ ತೋರುವುದಿಲ್ಲ. ಸಾಧುಸಂತರನ್ನು ಅನುಸರಿಸುವುದೇ ಮೇಲೆಂದು ಅವರಿಗೆ ತೋರುತ್ತದೆ. ಪವಿತ್ರವಾದ ಕೆಲವು ಕಲ್ಪನೆಗಳನ್ನು ಗೌರವಿಸುತ್ತ ಬಂದ ಸಂಪ್ರದಾಯವಾದಿಯಂತಿರುವ ಈ ಮಹಾತ್ಮರು ವಿಚಾರ ಮಾಡಲು ತೊಡಗಿದರೆ ಅವರು ಈವರೆಗೆ ಪಾಲಿಸಿಕೊಂಡು ಬಂದಿರುವ ಅನೇಕ ಆದರ್ಶಗಳಿಗೂ ವ್ಯವಸ್ಥೆಗಳಿಗೂ ಸಮಾಧಿ ಆಗುವುದಲ್ಲವೆ? ಅವರು ಮರುಕಕ್ಕೆ ಪಾತ್ರರಾಗಿದ್ದಾರೆ. ಸ್ವತಂತ್ರ ವಿಚಾರದ ಪ್ರತಿಯೊಂದು ಕ್ರಿಯೆಯೂ ಜಗತ್ತಿನ ಸುಭದ್ರವಾದ ಸ್ಥಿತಿ ಎನ್ನುವುದಕ್ಕೆ ಆಪತ್ತನ್ನು ಒದಗಿಸುತ್ತದೆ. ಸಾಧುಸಂತರನ್ನು ನಂಬಿಕೊಂಡು ಕುಳಿತರೆ ನಾವು ಸತ್ಯದ ಬಳಿಗೆ ಸಾಗಲಾರೆವು. ಸಾಧುಸಂತರು ಕೂಡ ಮನುಷ್ಯ ಮಾತ್ರರು. ಲಾರ್ಡ್ ಬಲ್ ಫೂರ್ ಹೇಳುವ ಹಾಗೆ, “ಸತ್ಯ ಶೋಧನೆಗೆ ಮನುಷ್ಯನ ಮನಸ್ಸು ಹಂದಿಯ ಮೂತಿಯಷ್ಟೂ ಒಳ್ಳೆಯ ಸಾಧನವಲ್ಲ”. ಮಹಾತ್ಮರು ವಿಚಾರ ಮಾಡುತ್ತಲೇ ಇದ್ದಲ್ಲಿ, ಪುರಾತನ ಸಮಾಜದ ಸ್ವರೂಪವನ್ನು ಸಮರ್ಥಿಸುವುದಲ್ಲಿ ಅವರು ತಮ್ಮ ಬುದ್ಧಿಯ ದುರುಪಯೋಗವನ್ನು ಮಾಡುತ್ತಿದ್ದಾರೆಂದು ತೋರುತ್ತದೆ. ಪ್ರಭಾವಶಾಲಿ ಪ್ರತಿಪಾದಕರಾಗಿರುವುದಕ್ಕೇ ಅವರು ಹಿಂದೂಗಳ ಪರಮ ಶತ್ರುಗಳು.

ಈ ಮಹಾತ್ಮರಲ್ಲದೆ ಇನ್ನೂ ಕೆಲವು ಮುಖಂಡರಿದ್ದಾರೆ. ಸುಮ್ಮನೆ ಕಣ್ಣಮುಚ್ಚಿ ನಂಬಿಕೆಯಿಂದ ಅನುಸರಿಸಿಕೊಂಡು ಹೋಗುವವರಲ್ಲ ಇವರು. ವಿಚಾರ ಮಾಡುವ ಧೈರ್ಯವುಳ್ಳವರು. ವಿಚಾರದಿಂದ (ಪುಟ 109)
ಕಂಡುಕೊಂಡ ಮಾರ್ಗದಲ್ಲಿ ಮುನ್ನಡೆಯುವವರು. ಆದರೆ ಜನಸಾಮಾನ್ಯರಿಗೆ ಮಾರ್ಗದರ್ಶನದ ಪ್ರಸಂಗ ಬಂದಾಗ ಮಾತ್ರ ಇವರು ಅಪ್ರಮಾಣಿಕರಾಗುತ್ತಾರೆ, ಅಥವಾ ಉದಾಸೀನರಾಗುತ್ತಾರೆ. ಇದು ದುರ್ದೈವದ ಸಂಗತಿ. ಬಹುಶಃ ಪ್ರತಿಯೊಬ್ಬ ಬ್ರಾಹ್ಮಣನೂ ಜಾತಿಯ ನಿಯಮವನ್ನು ಉಲ್ಲಂಘಿಸಿದ್ದಾನೆ. ಪೌರೋಹಿತ್ಯ ನಡೆಸದ ಬ್ರಾಹ್ಮಣರ ಸಂಖ್ಯೆ ತೀರ ದೊಡ್ಡದಾಗಿದೆ. ತಮ್ಮ ಕುಲವೃತ್ತಿಯಾದ ಪೂಜೆ ಪೌರೋಹಿತ್ಯಗಳನ್ನು ಬಿಟ್ಟಿದ್ದಾರೆಂಬುದಷ್ಟೆ ಅಲ್ಲದೆ ಬ್ರಾಹ್ಮಣರು ಶಾಸ್ತ್ರಗಳಲ್ಲಿ ನಿಷಿದ್ದವೆಂದು ಹೇಳಿದ ವೃತ್ತಿಗಳನ್ನು ಕೂಡ ಕೈಗೊಂಡು ನಡೆಸುತ್ತಾ ಇದ್ದಾರೆ. ಹೀಗೆ ಪ್ರತಿದಿನ ಜಾತಿ ನಿಯಮವನ್ನು ಮುರಿಯುತ್ತಿರುವ ಬ್ರಾಹ್ಮಣರಲ್ಲಿ ಎಷ್ಟು ಜನ ಜಾತಿಯನ್ನು ಹಾಗೂ ಶಾಸ್ತ್ರಗಳನ್ನು ತೊರೆಯಲು ಬೋಧಿಸುತ್ತಾರೆ. ಜಾತಿ ಶಾಸ್ತ್ರಗಳನ್ನು ವಿರೋಧಿಸಿ ಮಾತನಾಡುವ ಒಬ್ಬ ಪ್ರಾಮಾಣಿಕ ಬ್ರಾಹ್ಮಣನಿದ್ದರೆ, ಪ್ರತಿದಿನ ಜಾತಿಯನ್ನು ಮೀರಿ ಶಾಸ್ತ್ರಗಳನ್ನು ಮೆಟ್ಟುತ್ತಲೇ ಅವೆರಡನ್ನು ಆವೇಶದಿಂದ ಸಮರ್ಥಿಸಿ ಎತ್ತಿ ಹಿಡಿಯುವ ಬ್ರಾಹ್ಮಣರು ನೂರಾರು ಜನ ಇದ್ದಾರೆ. ಈ ದ್ವಿಮುಖ ಕಪಟಾಚರಣೆಯೇತಕ್ಕೆ? ಜನಸಾಮಾನ್ಯರು ಜಾತಿಯ ಹಿಡಿತದಿಂದ ಮುಕ್ತರಾದ ಪಕ್ಷದಲ್ಲಿ ಬ್ರಾಹ್ಮಣ ವರ್ಗದ ಅಧಿಕಾರ, ಗೌರವಗಳಿಗೆ ಅವರು ಆಸ್ಪದ ಕೊಡಲಾರರೆಂಬ ಭಯ ಬ್ರಾಹ್ಮಣರಿಗಿದೆ. ಬುದ್ದಿವಂತ ವರ್ಗವಾದ ಬ್ರಾಹ್ಮಣರ ಈ ಅಪ್ರಾಮಾಣಿಕತೆ ಅತ್ಯಂತ ಲಜ್ಜಾಸ್ಪದವಾಗಿದೆ. ಮ್ಯಾಥ್ಯೂ ಆರ್ನಾಲ್ಡ್ ಹೇಳುವಂತೆ, “ಹಿಂದೂಗಳು ಸತ್ತುಹೋದ ಒಂದು ಜಗತ್ತು ಮತ್ತು ಜನ್ಮ ತಳೆಯಲು ಶಕ್ತಿಯಿಲ್ಲದ ಇನ್ನೊಂದು ಜಗತ್ತು ಇವೆರಡರ ನಡುವೆ ಎಡತಾಕುತ್ತಿದ್ದಾರೆ”. ಅವರೇನು ಮಾಡಬೇಕು? ಮಹಾತ್ಮರಿಗೆ ಅವರು ಮೊರೆಯಿಡುತ್ತಾರೆ. ಮಹಾತ್ಮರಿಗೆ ವಿಚಾರ ಮಾಡುವುದರಲ್ಲಿ ನಂಬಿಕೆಯಿಲ್ಲ. ಆದುದರಿಂದ ಪ್ರತ್ಯಕ್ಷಾನುಭವದ ಒರೆಗಲ್ಲಿಗೆ ನಿಲ್ಲಬಲ್ಲಂಥ ಮಾರ್ಗದರ್ಶನವನ್ನು ಅವರು ನೀಡಲಾರರು. ತಮಗೆ ಮಾರ್ಗದರ್ಶನ ಮಾಡಬಲ್ಲರೆಂದು ಜನಸಾಮಾನ್ಯರು ಬುದ್ಧಿವಂತ ವರ್ಗವನ್ನು ನಂಬಿ ನಿರೀಕ್ಷಿಸುವರು. ಆದರೆ ಈ ಮಹನೀಯರು ತುಂಬ ಅಪ್ರಾಮಾಣಿಕರಾಗುತ್ತಾರೆ. ಅಥವಾ ತೀರಾ ಉಪೇಕ್ಷೆ ತಾಳುತ್ತಾರೆ. ಒಂದು ಮಹಾ ದುರಂತಕ್ಕೆ ನಾವು ಸಾಕ್ಷಿಗಳಾಗಿ ನಿಂತಿದ್ದೇವೆ. ಈ ದುರಂತದ ಸಮ್ಮುಖದಲ್ಲಿ ನಾವು. “ಇಂಥವರು ನಿಮ್ಮ ಮುಂದಾಳುಗಳು, ಓ ಹಿಂದೂಗಳೇ!” ಎಂದು ಶೋಕಿಸಬಹುದಷ್ಟೆ. (ಪುಟ 110)

  • ಡಾ.ಬಿ.ಆರ್.ಅಂಬೇಡ್ಕರ್

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು, ಸಂಪುಟ – 1, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ,2015, ಪುಟ ಸಂಖ್ಯೆ 100 – 110

Leave a Reply