ಕೋಮುವಾದದ ಹಿಂದೆ ಧರ್ಮಕ್ಕಿಂತ ವ್ಯಾಪಾರದ ಪಾತ್ರವೇ ದೊಡ್ಡದು

11 months ago

ದಕ್ಷಿಣ ಕನ್ನಡದ ಕೋಮುವಾದದ ಬಗ್ಗೆ ಬರೆದು ಬರೆದು ಸುಸ್ತಾಗಿರುವ ಕಾರಣ ಮನಸ್ಸು ಮಾತ್ರವಲ್ಲ, ಈಗ ಬರೆಯಲು ಹೊರಟರೆ ಬೆರಳುಗಳೂ ಮರಗಟ್ಟಿಹೋಗುತ್ತವೆ. ಬೀದಿಯಲ್ಲಿ ರಕ್ತ ಹರಿಯುತ್ತಿರುವಾಗ ಸುಮ್ಮನಿರಲೂ ಆಗುತ್ತಿಲ್ಲ.

ದಕ್ಷಿಣ ಕನ್ನಡದ ಕೋಮುವಾದದ ಹಿಂದೆ ಧರ್ಮದ ಪಾತ್ರಕ್ಕಿಂತಲೂ ದೊಡ್ಡ ಪಾತ್ರ ವ್ಯಾಪಾರದ್ದು. (ಇದನ್ನು ನೂರು ಬಾರಿ ವಿವರವಾಗಿ ಹೇಳಿದ್ದೇನೆ)  ಈ ವ್ಯಾಪಾರಿಗಳಿಗೆ ಜಾತಿಯೂ ಇಲ್ಲ, ಧರ್ಮವೂ ಇಲ್ಲ. ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ, ರಿಯಲ್ ಎಸ್ಟೇಟ್ ನಲ್ಲಿ ತೊಡಗಿಸಿಕೊಂಡಿರುವ ಮುಂಡಾಸುಧಾರಿ ಹಿಂದು ಮತ್ತು ಮುಸ್ಲಿಮರೆಲ್ಲರದ್ದು ಒಂದೇ ಜಾತಿ. ಹಿಂದೂ ಮುಂಡಾಸುಧಾರಿಗಳು ಕಮ್ಯುನಲ್ ಗಳಿಗೆ, ಮುಸ್ಲಿಮ್ ಮುಂಡಾಸುಧಾರಿಗಳು ಸೆಕ್ಯುಲರ್ ಗಳಿಗೆ ಪ್ರೀತಿಪಾತ್ರರು.

ಸತ್ಯ ಸಂಗತಿ ಏನೆಂದರೆ ಅಂತರಂಗದಲ್ಲಿ ಹಿಂದೂ ಮತ್ತು ಮುಸ್ಲಿಮ್ ಮುಂಡಾಸುಧಾರಿಗಳು ಹಾಗೂ ಪಕ್ಷಾತೀತವಾಗಿ ರಾಜಕಾರಣಿಗಳು ಭಾಯಿಭಾಯಿ. (ನಳಿನ್ ಕುಮಾರ್ ಕಟೀಲ್ ಭಾಷಣ ಕೇಳಿದ್ದಿರಲ್ಲಾ?) ಈ ಎರಡು  ಗುಂಪಿನ ಮುಂಡಾಸುಧಾರಿಗಳು ಪರಸ್ಪರ ಸಹಕಾರದಿಂದ ತಮ್ಮ ಬಿಸಿನೆಸ್ ನಡೆಸುತ್ತಾ ಬಂದಿದ್ದಾರೆ.
ಮಂಗಳೂರಿನ ಬೃಹತ್ ಸಿಟಿ ಮಾಲ್ ನ ಮಾಲೀಕರು ಮುಸ್ಲಿಮ್ ಮುಂಡಾಸುಧಾರಿಗಳು, ಅಲ್ಲಿನ ಸೆಕ್ಯುರಿಟಿ ಏಜನ್ಸಿ ಬಜರಂಗ ದಳದ ಶರಣ್ ಪಂಪ್ ವೆಲ್ ನದ್ದು. ಈತನ ಮುಸ್ಲಿಮ್ ದ್ವೇಷದ ಕೊಳಕು ಭಾಷಣ ಕೇಳಿದ ನಂತರವೂ ಮಾಲ್ ನ ಮುಂಡಾಸುಧಾರಿಗಳಿಗೆ ಏನು ಅನಿಸುವುದಿಲ್ಲ.  ಮುಸ್ಲಿಮರೆಂದರೆ ಫೂತ್ಕರಿಸುವ ಹರೀಶ್ ಪೂಂಜಾ ಕ್ಷೇತ್ರದಲ್ಲಿ ಕಾಮಗಾರಿ ಗುತ್ತಿಗೆಗಳಲ್ಲಿ ಮುಸ್ಲಿಮ್ ಗುತ್ತಿಗೆದಾರರದ್ದೇ ದೊಡ್ಡ ಪಾಲು. ಯಾಕೆಂದರೆ ಧರ್ಮ ಬೇರೆ, ಬಿಸಿನೆಸ್ ಬೇರೆ.

ಯಾವ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರುತ್ತೋ ಅವರು ಇವರಿಗೆ, ಇವರು ಅವರಿಗೆ ಸಹಕಾರ ಕೊಡುತ್ತಿರುವ ಕಾರಣ ಈ  ಮರಳು, ಮಣ್ಣು, ಜಲ್ಲಿ, ಕಲ್ಲುಗಳ ಅಕ್ರಮ ವ್ಯಾಪಾರ-ವ್ಯವಹಾರ’’ ಗಳೆಲ್ಲ ಯಾವ ಅಡೆ ತಡೆ ಇಲ್ಲದೆ ರಾಜಾರೋಷವಾಗಿ ನಡೆಯುತ್ತಾ ಇರುತ್ತದೆ. ಎರಡೂ ಜಿಲ್ಲೆಗಳ ಪಶ್ಚಿಮಾಭಿಮುಖಿ ನದಿಗಳ ಮರಳು ಬರಿದಾಗಿ ತಳ ಪಾತಾಳಕ್ಕೆ ಹೋಗುತ್ತಿದೆ.  ಊರಿನ ನನ್ನ ಮನೆ ಎದುರಿನ ಶಾಂಭವಿ ನದಿಯ ಅರ್ಧದಷ್ಟು ನಡೆದುಕೊಂಡು ಹೋಗಿ ಉಳಿದರ್ಧ ಈಜಿ ಆ ದಡಕ್ಕೆಹೋಗುತ್ತಿದ್ದವನು ಈಗ ನಮ್ಮ ತೋಟದಿಂದ ಕೆಳಗಿಳಿದು ಕಾಲಿಟ್ಟಕೂಡಲೇ ಮುಳುಗಿಹೋಗುವಷ್ಟು ನದಿ ಆಳವಾಗಿ ಹೋಗಿದೆ.

ಈ ಅಕ್ರಮ ವ್ಯಾಪಾರದಲ್ಲಿಯೂ ದುಡ್ಡು ಮಾಡುತ್ತಿರುವವರು  ಮುಂಡಾಸುಧಾರಿಗಳು ಮತ್ತು ಅಧಿಕಾರಿಗಳು. ಇದರಲ್ಲಿ ಕಾಲಾಳುಗಳಾಗಿ ದುಡಿಯುತ್ತಿರುವವರು ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸಾವಿರಾರು ಬಡಕುಟುಂಬದ ಯುವಕರು. ಇವರಿಗೆ ಸಂಜೆ ಪಾರ್ಟಿಗೆ,ಶೋಕಿಗೆ ಒಂದಷ್ಟು ದುಡ್ಡು, ಕೊನೆಗೆ ಕೇಸ್, ಮಾರಾಮಾರಿ, ಕೊಲೆ ಅಂತಿಮವಾಗಿ ಜೈಲು. ಇತ್ತೀಚೆಗೆ ಸತ್ತವರ ಮತ್ತು ಸಾಯಿಸಿದವರ ಹಿನ್ನೆಲೆ ನೋಡಿ, ಎಲ್ಲ ಮರಳು ಮಾಫಿಯಾದ ಕಾಲಾಳುಗಳು.

ಈ ಮರಳು, ಮಣ್ಣು, ಕಲ್ಲು ಕ್ವಾಯರಿಗಳ ಅಕ್ರಮ ವ್ಯಾಪಾರಕ್ಕೆ ಕಡಿವಾಣ ಹಾಕಿದರೆ ಅರ್ಧಕ್ಕೆ ಅರ್ಧದಷ್ಟು ಕೋಮುವಾದದ ಅಬ್ಬರ ಕಡಿಮೆಯಾಗುತ್ತದೆ.  ಆದರೆ ಇದು ಕಷ್ಟ, ಕಷ್ಟ, ಕಷ್ಟ. 

ಪೊಲೀಸರು ಇದನ್ನೇನಾದರೂ ನಿಯಂತ್ರಿಸಲು ಹೊರಟರೆ ಅವರು ಅಲ್ಲಿಂದ ಎತ್ತಂಗಡಿ ಆಗುತ್ತಾರೆ. ಹಿಂದಿನ ಕಾಂಗ್ರೆಸ್  ಸರ್ಕಾರದ ಅವಧಿಯಲ್ಲಿ ಮಧುಕರ್ ಶೆಟ್ಟಿಯವರನ್ನು ಅಲ್ಲಿಗೆ ಪೊಲೀಸ್ ಕಮಿಷನರ್ ಮಾಡಬಹುದು ಎಂದುಹೇಳಿದರೆ ಅಧಿಕಾರ ರೂಢ ಪಕ್ಷದವರೇ ಆಸಕ್ತಿ ತೋರಿಸಲಿಲ್ಲ. ಬಿಜೆಪಿ ಸರ್ಕಾರದ ಕಾಲದಲ್ಲಿಯೇ ಡಾ.ಸುಬ್ರಹ್ಮಣ್ಯೇಶ್ವರ್ ರಾವ್ ಅವರಂತಹ ಕಡಕ್ ಅಧಿಕಾರಿಗಳು ದಕ್ಷಿಣಕನ್ನಡವನ್ನು ನಿಯಂತ್ರಣದಲ್ಲಿಟ್ಟುಬಿಟ್ಟಿದ್ದರು. ಇದು ಒಂದು ಉದಾಹರಣೆ ಅಷ್ಟೆ.

ಕೊನೆಯದಾಗಿ, ಪ್ರತಿನಿತ್ಯ ಕರಾವಳಿಯ ಎರಡು ಜಿಲ್ಲೆಗಳ ಜನರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ  ಉಗಿದು ಉಪ್ಪು ಹಾಕುತ್ತಿರುವ ಸ್ನೇಹಿತರಲ್ಲಿ ನನ್ನದೊಂದು ವಿನಂತಿ:

ಒಂದಷ್ಟು ದಿನ ನೀವೂ  ಧರ್ಮಸ್ಥಳ, ಉಡುಪಿ, ಕೊಲ್ಲೂರು ಕ್ಷೇತ್ರಗಳಿಗೆ ಭೇಟಿ ನೀಡುವುದನ್ನು ನಿಲ್ಲಿಸಿ, ನಿಜಕ್ಕೂ ಅಲ್ಲಿ ದೇವರಿಲ್ಲ, ಆತ ಇದ್ದಿದ್ದರೆ ಬೀದಿಗಳಲ್ಲಿ ರಕ್ತ ಹರಿಯುತ್ತಿರಲಿಲ್ಲ.

ಮೂಡಬಿದರೆಯ ನುಡಿಸಿರಿ, ಧರ್ಮಸ್ಥಳದ ಸರ್ವಧರ್ಮ ಸಮ್ಮೇಳನಗಳಿಗೆ ಹೋಗದೆ ಕನಿಷ್ಠ ನಿಮ್ಮ ಪ್ರತಿರೋಧವನ್ನಾದರೂ ದಾಖಲಿಸಿ ಎಂದು ಹೇಳಿದರೆ  ‘’ ಅಲ್ಲಿ ಹೋಗಿ ನಮ್ಮ ಅಭಿಪ್ರಾಯ ಹೇಳಿ ಅಲ್ಲಿಯವರ ಮಂಡೆ ತಿರುಗಿಸುತ್ತೇವೆ….’ ಎಂದು ಕೊಚ್ಚಿಕೊಂಡ ಸಾಹಿತಿ, ಚಿಂತಕರೇ , ಈಗ ನಮ್ಮೂರಲ್ಲಿ ನಡೆಯುತ್ತಿರುವ ರಕ್ತಪಾತಕ್ಕೆ ನಿಮ್ಮ ಈ ಸ್ವಾರ್ಥದ ಕೊಡುಗೆಯೂ ಇದೆ ಎನ್ನುವುದು ನೆನಪಿರಲಿ.

– ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತರು

Leave a Reply