ಮಂಗಳೂರಿನಲ್ಲಿ ಪ್ರತಿದಿನವೂ ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವಂತಹ ಘಟನೆಗಳನ್ನ ಗಮನಿಸಿದಾಗ ಆ ಜಿಲ್ಲೆಯ ಬಗ್ಗೆ ಇರುವಂತಹ ಹೆಮ್ಮೆ ಮತ್ತು ಆ ಜಿಲ್ಲೆಯನ್ನ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿಯನ್ನು ಮಾಡಿದಂತಹ ಹಿರಿಯ ಚೇತನಗಳ ಆತ್ಮಗಳಿಗೆ ಅದೆಷ್ಟು ನೋವು ಆಗಿರಬಹುದು?
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಕಾರ್ನಾಡ್ ಸದಾಶಿವರಾಯರ ಹೆಸರನ್ನು ಕರ್ನಾಟಕದ ಚರಿತ್ರೆಯಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ. ಅಂತಹ ಮಹಾನ್ ವ್ಯಕ್ತಿಯನ್ನು ನೀಡಿದಂತಹ ಪುಣ್ಯಭೂಮಿ ಅದು.
ಶಿವರಾಮ ಕಾರಂತ, ಕನ್ನಡ ನಾಡಿನ ಅತ್ಯಂತ ಹೆಮ್ಮೆಯ ಪುತ್ರರು ತಮ್ಮ ಸಾಧನೆಯ ಮೂಲಕ ಜಗತ್ತಿನ ಗಮನವನ್ನು ಸೆಳೆದ ಮಹಾನ್ ಸಾಧಕರನ್ನು ನೀಡಿದ ಪುಣ್ಯಭೂಮಿ.
ಶ್ರೀನಿವಾಸ ಮಲ್ಯರವರು ಆ ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಮತ್ತು ಕೈಗಾರಿಕೆ ಅಭಿವೃದ್ಧಿಗೆ ಒತ್ತನ್ನು ನೀಡಿದವರು. ಇಡಿ ಭಾರತ ದೇಶದಲ್ಲಿ ಅತಿ ಹೆಚ್ಚು ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳು, ಉನ್ನತ ಮಟ್ಟದ ವಸತಿ ಶಾಲೆಗಳು ಇವೆಲ್ಲವನ್ನೂ ಒಳಗೊಂಡು ನೂರಕ್ಕೆ ನೂರರಷ್ಟು ಸಾಕ್ಷರತೆಯನ್ನು ಹೊಂದಿರುವಂತಹ ಹೆಮ್ಮೆಯ ಜಿಲ್ಲೆಯ ಪರಿಸ್ಥಿತಿ ಗಮನಿಸಿದಾಗ ದುಃಖವಾಗುತ್ತದೆ.
ಟಿ ಏ ಪೈ ರಹಂತಹ ಮೇಧಾವಿ ನಾಯಕರನ್ನು ದೇಶಕ್ಕೆ ನೀಡಿದಂತಹ ಜಿಲ್ಲೆ ಇದಾಗಿದ್ದು, ಜನಾರ್ದನ ಪೂಜಾರಿ ಅಂತಹ ಪ್ರಾಮಾಣಿಕ ರಾಜಕಾರಣಿಗಳನ್ನು ಸಾರ್ವಜನಿಕ ಬದುಕಿಗೆ ನೀಡಿದಂತಹ ಜಿಲ್ಲೆಯು ಇದಾಗಿದೆ. ಈ ರೀತಿಯಲ್ಲಿ ಅನೇಕ ರಾಜಕಾರಣಿಗಳನ್ನು ಗುರುತಿಸಬಹುದಾಗಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಂತೂ ಭಾರತ ದೇಶದಲ್ಲಿ ಈ ಜಿಲ್ಲೆಗೆ ತನ್ನದೇ ಆದ ಮಹತ್ವವಿದೆ. ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ವಿಜಯ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಇವೆಲ್ಲವೂ ಸಹ ಸ್ಥಾಪಿಸಿದಂತಹ ಪುಣ್ಯಾತ್ಮರು ಈ ಭಾಗದವರು. ಇವರುಗಳಿಂದಾಗಿ ಕರ್ನಾಟಕ ರಾಜ್ಯದಲ್ಲಿ ಆರ್ಥಿಕ ಪ್ರಗತಿಗೆ ಸಾಕಷ್ಟು ನೆರವಾಯಿತು. ಆರ್ಥಿಕವಾಗಿ ಬಲಿಷ್ಠವಾದಂತ ಒಂದು ಜಿಲ್ಲೆ ಎಂಬ ಕೀರ್ತಿಯು ಇದಕ್ಕೆ ಲಭಿಸಿತ್ತು.
ಇನ್ನು ಪವಿತ್ರವಾದಂತಹ ದೇವಾಲಯಗಳ ಪಟ್ಟಿ ಹೇಳುತ್ತಾ ಹೋದರೆ ದೊಡ್ಡದಾಗಿ ಬೆಳೆಯುತ್ತದೆ. ಧರ್ಮಸ್ಥಳದ ಮಂಜುನಾಥ ಸ್ವಾಮಿ, ಕುಕ್ಕೆ ಸುಬ್ರಹ್ಮಣ್ಯ, ಉಡುಪಿ ಶ್ರೀ ಕೃಷ್ಣ ಮಠ ಹೀಗೆ ಅನೇಕ ಧಾರ್ಮಿಕ ಕ್ಷೇತ್ರಗಳು ವಿಶ್ವದ ಅನೇಕ ಜನರನ್ನ ಪ್ರತಿದಿನವೂ ಕೈ ಬಿಸಿ ಕರೆಯುತ್ತಿವೆ. ಭಕ್ತಾದಿಗಳು ತಮ್ಮ ಶ್ರದ್ಧೆ ಮತ್ತು ಭಕ್ತಿಯನ್ನು ಇಲ್ಲಿ ಸಲ್ಲಿಸುತ್ತಿದ್ದಾರೆ. ಇಲ್ಲಿನ ದೇವಾಲಯಗಳಿಗೆ ವಿಶೇಷವಾದ ಮಹತ್ವವಿದೆ. ಇಲ್ಲಿನ ಆಚರಣೆಗಳು ಸಹ ವಿಶೇಷವಾಗಿವೆ.
ಇನ್ನು ಯಕ್ಷಗಾನ ಕಲೆ. ಇವು ಸಹ ಜಗತ್ತಿನ ಶ್ರೇಷ್ಠ ಕಲೆಗಳಲ್ಲಿ ಒಂದಾಗಿದೆ. ಧಾರ್ಮಿಕ, ಸಾಂಸ್ಕೃತಿಕ, ಆಚರಣೆಗಳು ಇಲ್ಲಿನ ವಿಶೇಷತೆಗಳು ಇಷ್ಟೆಲ್ಲಾ ಹಿರಿಮೆ ಗರಿಮೆ ಹೆಮ್ಮೆ ಉಳ್ಳಂತಹ ಈ ನಾಡಿನಲ್ಲಿ ಕಳೆದ ಕೆಲವು ವರ್ಷಗಳಿಂದ ಧರ್ಮದ ಹೆಸರಿನಲ್ಲಿ ರಕ್ತ ಹರಿಯುತ್ತಿದೆ. ಮಾನವೀಯತೆ ಮರೆಯಾಗುತ್ತಿದೆ. ಧಾರ್ಮಿಕತೆಯ ಹೆಸರಿನಲ್ಲಿ ಹಿಂಸೆ ಮುಗಿಲು ಮುಟ್ಟುತ್ತಿದೆ.
ಅಮಾಯಕರನ್ನು ಪ್ರಚೋದಿಸಿ ಜನರನ್ನ ಪರಸ್ಪರ ಎತ್ತಿ ಕಟ್ಟುವ ಯಾವ ನಾಯಕರ ಮನೆಯವರು ಇಲ್ಲಿಯವರೆಗೂ ಯಾರು ಸಣ್ಣ ಗಾಯವನ್ನು ತಮ್ಮ ದೇಹದ ಮೇಲೆ ಆಗದಂತೆ ಎಚ್ಚರಿಕೆಯನ್ನು ವಹಿಸಿದ್ದಾರೆ. ಜೊತೆಗೆ ತಮ್ಮ ಕುಟುಂಬದವರಿಗೆ ಬೇರೆಬೇರೆ ಕಡೆಗಳಲ್ಲಿ ಶಿಕ್ಷಣವನ್ನ ಕೊಡಿಸಿ, ಅವರ ಬದುಕನ್ನು ಸುಂದರವಾಗಿಸಿ ಅವರು ಮಾತ್ರ ನೆಮ್ಮದಿಯಾಗಿರುವಂತೆ ಎಚ್ಚರಿಕೆಯನ್ನು ವಹಿಸಿದ್ದಾರೆ.
ಪ್ರಚೋದಿಸಿ ಮಾತನಾಡುವ ಜನರ ಮಾತುಗಳಿಗೆ ತಲೆಬಾಗಿ ಹಿಂಸೆಯ ಮಾರ್ಗವನ್ನು ಅನುಸರಿಸುತ್ತಿರುವುದು ಯಾರಿಗೂ ಶೋಭೆ ತರುವುದಿಲ್ಲ. ಈ ಜಿಲ್ಲೆಯ ಜನರು ತಮ್ಮಲ್ಲಿರುವ ಪ್ರಬುದ್ಧತೆ, ಶೈಕ್ಷಣಿಕ ಚಿಂತನೆ, ಇವುಗಳ ಹಿನ್ನೆಲೆಯಲ್ಲಿ ಮತ್ತೆ ಮತ್ತೆ ಆಲೋಚನೆಯನ್ನು ಮಾಡಿ ಇಂತಹ ಗಲಭೆಗಳಿಂದ ಯಾವ ಸಾಧನೆಯಾಗುವುದಿಲ್ಲ, ಜಿಲ್ಲೆಯ ಪ್ರಗತಿಗೆ ಇವೆಲ್ಲವೂ ಮಾರಕವಾಗುತ್ತದೆ, ಬಡತನ ಹೆಚ್ಚಾಗುತ್ತದೆ, ನಿರುದ್ಯೋಗ ಹೆಮ್ಮರವಾಗುತ್ತದೆ, ವ್ಯಾಪಾರ ವಹಿವಾಟುಗಳು ಹಾಳಾಗುತ್ತವೆ, ಒಟ್ಟಾರೆ ಜನರ ಬದುಕು ದುಸ್ತರವಾಗುತ್ತದೆ ಎಂಬ ಸಂಗತಿ ಅರಿತು, ಪ್ರಚೋದಿಸುವವರ ಮಾತುಗಳಿಗೆ ಇನ್ನು ಮುಂದಾದರು ಯಾರು ಮನ್ನಣೆಯನ್ನ ನೀಡಬೇಡಿ.
ರಾಜ್ಯ ಸರ್ಕಾರ ಕೂಡಲೇ ಕನಿಷ್ಠ ಒಂದು ವರ್ಷಗಳ ಕಾಲ ಈ ಜಿಲ್ಲೆಗೆ ಯಾವುದೇ ಧರ್ಮದ ಹೊರಗಿನ ವ್ಯಕ್ತಿಗಳು ಬಂದು ಭಾಷಣ ಮಾಡದಂತೆ ಮತ್ತು ಸಭೆಗಳನ್ನು ನಡೆಸದಂತೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕು. ಸಾಧ್ಯವಾಗುವುದಾದರೆ ಇಲ್ಲಿನ ಪರಿಸ್ಥಿತಿಯನ್ನು ನ್ಯಾಯಾಲಯಕ್ಕೆ ವಿವರಿಸಿ ನ್ಯಾಯಾಲಯದಿಂದಲೇ ಈ ಆದೇಶಕ್ಕೆ ಮತ್ತಷ್ಟು ಪುಷ್ಟಿ ನೀಡುವಂತೆ ಗಮನಹರಿಸಬೇಕು.
ಒಂದಷ್ಟು ತಿಂಗಳುಗಳ ಕಾಲ ಯಾವ ಬೆಂಕಿ ಹಚ್ಚುವ ವ್ಯಕ್ತಿಗಳು ಬೆಂಕಿ ಹಚ್ಚುವ ಮಾತುಗಳನ್ನಾಡುವ ನಾಯಕರುಗಳು ಈ ಜಿಲ್ಲೆಗೆ ಬಾರದಿದ್ದರೆ ಜಿಲ್ಲೆಯ ಜನತೆ ತಮ್ಮ ಪಾಡಿಗೆ ತಾವು ನೆಮ್ಮದಿಯಿಂದ ಬದುಕುತ್ತಾರೆ.
ಸತ್ತವರು ಯಾರದೋ ಮನೆಯವರು, ಮಗನನ್ನು ಕಳೆದುಕೊಂಡ ತಾಯಿ, ಪತಿಯನ್ನು ಕಳೆದುಕೊಂಡ ಪತ್ನಿ, ತಂದೆಯನ್ನು ಕಳೆದುಕೊಂಡ ಮಕ್ಕಳು ಇವರುಗಳೆಲ್ಲರೂ ಸುರಿಸುತ್ತಿರುವ ಕಣ್ಣೀರು ಯಾರಿಗೂ ಕಾಣುತ್ತಿಲ್ಲವೇ? ಕಣ್ಣೀರಿನಲ್ಲಿ ಧರ್ಮವನ್ನು ಹುಡುಕುವಂತಹ ಸಂಕುಚಿತ ಭಾವನೆಯ ನಾಯಕರುಗಳ ರಾಕ್ಷಸಿಯ ನಡವಳಿಕೆಗಳು ಮಾತುಗಳು ಜಿಲ್ಲೆಯ ಬದುಕನ್ನ ಹಾಳು ಮಾಡಿದೆ. ಸರ್ಕಾರ ಕೂಡಲೇ ಎಚ್ಚರಿಕೆಯ ನಡೆಗಳನ್ನ ಅನುಸರಿಸಬೇಕು, ಬೆಂಕಿ ಹಚ್ಚುವ ಮಾತುಗಳನ್ನಾಡುವ ಪ್ರಚೋದಿಸುವ ವ್ಯಕ್ತಿಗಳು ಎಷ್ಟೇ ದೊಡ್ಡವರಾಗಿರಲಿ ಯಾವುದೇ ಧರ್ಮದವರಾಗಿರಲಿ ಅವರುಗಳನ್ನ ಕೂಡಲೇ ಕಾನೂನಿನ ವ್ಯಾಪ್ತಿಗೆ ತಂದು ಕ್ರಮಗಳನ್ನ ಜರುಗಿಸಿ, ಯಾರದೋ ನಾಯಕತ್ವವನ್ನ ಪಡೆಯಲು ಮತ್ತೆ ಯಾರದೋ ಮನೆಯ ಹೆಣಗಳು ಉರುಳುವುದು ಬೇಡ.
ಇಲ್ಲಿಯ ಎಲ್ಲಾ ಪಕ್ಷದ ರಾಜಕಾರಣಿಗಳು ನಿಮ್ಮ ರಾಜಕೀಯ ನಡವಳಿಕೆಗಳನ್ನು ಮಾನವೀಯ ನೆಲೆಯಲ್ಲಿ ಕಂಡುಕೊಳ್ಳುವಂತಹ ಪ್ರಯತ್ನವನ್ನು ಮಾಡಿ. ನಿಮ್ಮ ಸ್ವಾರ್ಥಗಳಿಗೆ ಮುಗ್ಧ ಜನರನ್ನು ಬಲಿ ಕೊಡಬೇಡಿ, ಸಾಯುವವರು ಬಡವರ ಮನೆಯ ಮಕ್ಕಳು, ಕಂಡವರ ಮನೆಯ ಮಕ್ಕಳನ್ನು ಬಾವಿಗೆ ದೂಡುವ ನಾಯಕರ ಮನೆಯ ಮಕ್ಕಳು ಎಂದಾದರೂ ನಿಮ್ಮೊಂದಿಗೆ ಹೊಡೆದಾಟ ಬಡಿದಾಟಕ್ಕೆ ಜೊತೆಯಾಗಿದ್ದಾರೆ ಚಿಂತಿಸಿ ನೋಡಿ.
ಧರ್ಮ ಧರ್ಮಗಳ ಮೀರಿದ ವಿಚಾರಗಳಿದೆ, ಮಾನವೀಯತೆಯ ಹಿನ್ನೆಲೆಯಲ್ಲಿ ಮಾತ್ರವೇ ಎಲ್ಲರ ಮಾತುಗಳು ಮತ್ತು ನಡವಳಿಕೆಗಳು ಇರಲಿ, ತಪ್ಪು ಯಾವುದೇ ಧರ್ಮದವರು ಮಾಡಿದರು ಅದನ್ನು ಖಂಡಿಸಲೇಬೇಕು ಅಂತವರಿಗೆ ಶಿಕ್ಷೆಯಾಗಲೇಬೇಕು ಶಿಕ್ಷಿಸುವುದರಲ್ಲಿ ತಾರತಮ್ಯವೂ ಬೇಡ ರಕ್ಷಿಸುವುದರಲ್ಲಿಯೂ ತಾರತಮ್ಯ ಬೇಡ.
– ಕೆ ಎಸ್ ನಾಗರಾಜ್, ಬೆಂಗಳೂರು




