ಕಳೆದ ನಾಲ್ಕೈದು ದಿನಗಳ ಹಿಂದೆ, ದಿನೇಶ್ ಅಮೀನ್ ಮಟ್ಟು ಹಂಚಿಕೊಂಡಿದ್ದ ತನ್ನೂರಿನ ಕುರಿತ ಹಳೆಯ ಪೋಸ್ಟ್ ಒಂದಕ್ಕೆ ಈ ಕೆಳಗಿನ ರೀತಿ ಪ್ರತಿಕ್ರಿಯಿಸಿದ್ದೆ. ಇದನ್ನು ಬರೆದ ಎರಡು ದಿನಗಳ ನಂತರ, ಮಂಡ್ಯ-ಕೊಪ್ಪ ಮುಖ್ಯರಸ್ತೆಯ ನಡುವೆ ಸಿಗುವ ಕೆರಗೂಡಿನಲ್ಲಿ ನಡೆದ ಘಟನೆ ಈಗ ರಾಜ್ಯಾದ್ಯಂತ ಸುದ್ದಿಯಾಗಿದೆ.
1974ರಲ್ಲಿ ಮಂಡ್ಯ ನಗರದಲ್ಲಿ ನಡೆದ ಕೋಮುಗಲಭೆ ಮತ್ತು 1990ರಲ್ಲಿ ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನಲ್ಲಿ ನಡೆದ ಗಲಭೆ ಹೊರತು ಪಡಿಸಿದರೆ, ಇಡೀ ಮಂಡ್ಯ ಜಿಲ್ಲೆ ಇಲ್ಲಿಯವರೆಗೆ ತಣ್ಣಗಿತ್ತು. ಇನ್ನು ಮುಂದೆ ಇದನ್ನು ನಿರೀಕ್ಷಿಸುವುದು ತಪ್ಪು.
ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಮೋದಿ, ಅಮಿತ್ ಶಾ, ಆದಿತ್ಯನಾಥ ಮಂಡ್ಯಕ್ಕೆ ಬಂದು ರೋಡ್ ಶೋ ನಡೆಸಿ, ಅಬ್ಬರದ ಪ್ರಚಾರ ನಡೆಸಿದರೂ ಸಹ ಕೋಮುವಾದದ ಬೆಳೆ ಬೆಂದಿರಲಿಲ್ಲ. ಈಗ, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುಬೇಕು ಎಂಬ ಗಾದೆಯಂತೆ ಪ್ರಕ್ರಿಯೆ ಆರಂಭಗೊಂಡಿದೆ.
ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ನಿಷ್ಕ್ರಿಯಗೊಂಡಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಶೂನ್ಯ ಎಂದು ಹೇಳಬಹುದು. ಕಳೆದ ವಿಧಾನಸಭೆಯಲ್ಲಿ ಗೆದ್ದಿರುವ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ತನ್ನ ಜನಪ್ರಿಯತೆ ಅಥವಾ ಸಿದ್ಧಾಂತಗಳಿಂದ ಜಯಗಳಿಸಿಲ್ಲ. ಈ ಐದು ಕ್ಷೇತ್ರಗಳಲ್ಲಿಯೂ ಸಹ ಬಿ.ಜೆ.ಪಿ. ಅಭ್ಯರ್ಥಿಗಳು ಹದಿನೈದು ಸಾವಿರದಿಂದ ಇಪ್ಪತ್ತೈದು ಸಾವಿರ ಮತಗಳನ್ನು ಪಡೆದರು. ಇವು ಬಹುತೇಕ ಜೆ.ಡಿ.ಎಸ್. ಮತಗಳಾಗಿದ್ದವು. ಇದರ ಪರಿಣಾಮ ಕಾಂಗ್ರೆಸ್ ಅಭ್ಯರ್ಥಿಗಳು ಅಲ್ಪ ಮತಗಳ ಅಂತರದಲ್ಲಿ ಜಯಗಳಿಸಿದರು.
ಇನ್ನುಮುಂದೆ, ಮಂಡ್ಯ ಜಿಲ್ಲೆ, ಭವಿಷ್ಯದ ದಕ್ಷಿಣ ಕನ್ನಡದ ಜಿಲ್ಲೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ನನ್ನೊಳಗೆ ಉಳಿದುಕೊಂಡಿರುವುದು ನಾನು ಹುಟ್ಟಿ ಬೆಳೆದ ಇಪ್ಪತ್ತನೆಯ ಶತಮಾನದ ಮಂಡ್ಯವೇ ಹೊರತು, ಇಪ್ಪತ್ತೊಂದನೆಯ ಶತಮಾನದ ಮಂಡ್ಯವಲ್ಲ.
ಈ ಕಾರಣಕ್ಕಾಗಿ ಮೂರು ವರ್ಷದ ಹಿಂದೆ ಮಂಡ್ಯ ನಗರಲ್ಲಿ ನನ್ನ ಮಗ ನಿರ್ಮಿಸಿಕೊಟ್ಟ ಮನೆಗೆ ನಾನು ಹೋಗಲು ಇಷ್ಟಪಡಲಿಲ್ಲ. ಮೈಸೂರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೀನಿ. ವರ್ತಮಾನದ ನನ್ನ ನೆಲದ ಬಗ್ಗೆ ಯಾವ ಮೋಹ, ಪ್ರೀತಿಯೂ ಉಳಿದಿಲ್ಲ. ನನ್ನ ನೆನಪಿನಲ್ಲಿ ಇರುವುದು ನಾನು ಹುಟ್ಟಿ ಬೆಳೆದ ಮಂಡ್ಯವೇ ಹೊರತು, ಈಗಿನ ಇಂಡಿಯಾ ಆಗಿರುವ ಮಂಡ್ಯವಲ್ಲ.
ದಿನೇಶ್ ಅವರಿಗೆ ಬರೆದಿದ್ದ ಪ್ರತಿಕ್ರಿಯೆ: ದಿನೇಶ್, ಈಗ ಇದು ನನ್ನ ಮಂಡ್ಯ ಜಿಲ್ಲೆಯಲ್ಲಿ ಆರಂಭವಾಗಿದೆ. ಶ್ರೀರಂಗಪಟ್ಟಣದ ಬಳಿಯ ಪಾಲಳ್ಳಿ ಎಂಬ ಹಳ್ಳಿಯ ಅನಾಮಿಕ ಒಕ್ಕಲಿಗ ಯುವಕನನ್ನು ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷನನ್ನಾಗಿ ನೇಮಕ ಮಾಡಿ ಆತನ ಮೂಲಕ ಶ್ರೀರಂಗಪಟ್ಟಣ ಟಿಪ್ಪು ಮಸೀದಿ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಒಂದು ವರ್ಷದಿಂದ ಜಿಲ್ಲೆಯಾದ್ಯಂತ ಪಿಯುಸಿ ಹಾಗೂ ಡಿಗ್ರಿ ಓದಿರುವ ಸಾವಿರಾರು ನಿರುದ್ಯೋಗಿ ಯುವಕರಿಗೆ ತಿಂಗಳಿಗೆ ಹತ್ತು ಸಾವಿರದಿಂದ ಹದಿನೈದು ಸಾವಿರ ಪಾವತಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಏನೇ ನಡೆದರೂ ಅಲ್ಲಿನ ಪ್ರಬಲ ಒಕ್ಕಲಿಗ ಸಮುದಾಯದ ಹುಡುಗರ ಅಥವಾ ಜಾತಿಯ ನಡುವೆ ಘರ್ಷಣೆ ಅಥವಾ ಹೊಡೆದಾಟ ನಡೆಯಬೇಕು. ಅಂತಹ ವ್ಯವಸ್ಥೆಯನ್ನು ರೂಪಿಸಲಾಗಿದೆ.
ನನ್ನೂರು ಕೊಪ್ಪದಲ್ಲಿ ಹರಿಜನ ಕೇರಿಯಲ್ಲಿ ಒಂದು ರಾಮಮಂದಿರ ಇತ್ತು. ನನ್ನ ಬಾಲ್ಯದಲ್ಲೇ ಅದು ಮುಚ್ಚಿ ಹೋಗಿತ್ತು. ನನ್ನೂರಿನಲ್ಲಿ 12 ಸಾವಿರ ಜನಸಂಖ್ಯೆಯಲ್ಲಿ ಒಬ್ಬನೇ ಒಬ್ಬ ಬಿ.ಜೆ.ಪಿ. ಕಾರ್ಯಕರ್ತ ಇರಲಿಲ್ಲ. ಈಗ ಕಳೆದ ವರ್ಷದಿಂದ ನೂರಾರು ಮಂದಿ ಹುಟ್ಟಿಕೊಂಡಿದ್ದಾರೆ. ನಿನ್ನೆ ಊರಿನಲ್ಲಿ ಕೇಸರಿ ಬಾವುಟ ಹಾರಿಸಿ, ಪಟಾಕಿ ಸಿಡಿಸಿದ ಸುದ್ದಿಯನ್ನು ರಾತ್ರಿ ನನ್ನ ಪತ್ನಿ ನನಗೆ ಹೇಳಿದಳು.
ಒಂದು ವರ್ಷದ ಹಿಂದೆ ಮಂಡ್ಯ ಜಿಲ್ಲೆಗೆ ಹಿಂದುತ್ವವನ್ನು ಕಾಲಿಡಲು ಬಿಡುವುದಿಲ್ಲ ಎಂದು ಸಾರ್ವಜನಿಕವಾಗಿ ಎದೆ ತಟ್ಟಿಕೊಂಡು ಹೇಳುತ್ತಿದ್ದೆ. ಈಗ ಆ ಧೈರ್ಯ ನನಗೆ ಇಲ್ಲವಾಗಿದೆ. ಇನ್ನು ಐದು ವರ್ಷ ಈ ಸಾಂಕ್ರಾಮಿಕ ಪಿಡುಗು ಅಥವಾ ರೋಗವನ್ನು ನಾವು ತಡೆದುಕೊಳ್ಳುವುದು ಅನಿವಾರ್ಯ. ಆ ಕಾಲಕ್ಕೆ ನಾವು ಕಾಯಬೇಕಿದೆ.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




