ಹೆಚ್.ಆರ್.ಸ್ವಾಮಿ ಯಾರು ಅವರ ಸಾಧನೆಗಳೇನು ನಮ್ಮ ಗೆಳೆಯರ ಬಳಗದಲ್ಲೇ ಅನೇಕರಿಗೆ ತಿಳಿಯದು. ಹೆಚ್.ಆರ್. ಸ್ವಾಮಿ ಅರಸೀಕೆರೆಯಲ್ಲಿ ಪ್ರಾಧ್ಯಾಪಕರಾಗಿದ್ದವರು. ಪ್ರಾಂಶುಪಾಲರಾಗಿ ಈಗ ವಿಶ್ರಾಂತ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ನನಗೆ ಸ್ವಾಮಿಯ ಪರಿಚಯವಾದದ್ದು 1990ರ ಸುಮಾರಿಗೆ. ಅವರಾಗ ಸಾಕ್ಷರತಾ ಜಾಥಾದಲ್ಲಿದ್ದರು. ಬೀದಿ ನಾಟಕ ತಂಡದೊಂದಿಗೆ ನಮ್ಮೂರಿಗೆ ಬಂದಿದ್ದರು. ನಮ್ಮ ರಂಗ ತಂಡವೂ ಸಾಕ್ಷರತಾ ಆಂದೋಲನದಲ್ಲಿತ್ತು. “ಭೀಮಣ್ಣನ ಕಥಾಪ್ರಸಂಗ” ಎನ್ನುವ ಸರಣಿ ನಾಟಕವೊಂದನ್ನು ನಾನು ಬರೆದು ನಿರ್ದೇಶಿಸಿದ್ದೆ.
ಮೊನ್ನೆ ಸ್ವಾಮಿ ನೆನಪಿಸಿದಂತೆ ಅಂದು ಗಾಂಧಿ ಜಯಂತಿ. ಆ ದಿನ ರಾತ್ರಿ ನಮ್ಮ ರಕ್ಷಿದಿ ಶಾಲೆಯ ಅಂಗಳದಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಜನರು ನೆಲದಲ್ಲಿ ಒಣ ಹುಲ್ಲು ಹಾಸಿ ಕುಳಿತು ನಮ್ಮ ಎರಡೂ ತಂಡಗಳ ನಾಟಕ ನೋಡಿದರು. ಹಾಡು ಕೇಳಿದರು.
ಹೀಗೆ ಸ್ವಾಮಿಯ ಪರಿಚಯವಾಯಿತು. ನಂತರದ ದಿನಗಳಲ್ಲಿ ಹಾಸನ ಜಿಲ್ಲೆಗೆ ಅಧಿಕೃತ ಸಾಕ್ಷರತಾ ಆಂದೋಲನ ಬಂತು. ಅದಕ್ಕೆ ಅಕ್ಷರ ಅಭಿಷೇಕ ಎಂದು ಹೆಸರಿಡಲಾಗಿತ್ತು. ಅದರಲ್ಲಿ ನಾವು ಜೊತೆಯಾದೆವು. ನಮ್ಮ ತಾಲ್ಲೂಕಿನಿಂದ ನಾನು, ಹಡ್ಳಹಳ್ಳಿ ರಾಮಚಂದ್ರ, ಶೈಲೇಶ್ ಕುಮಾರ್ ಬಾಬು, ಓಬಳೇಶ ಗಟ್ಟಿ ಮುಂತಾದವರೆಲ್ಲ ಇದ್ದೆವು. ಆಗ ಜಿಲ್ಲಾ ಸಮಿತಿಯಲ್ಲಿ ಹೆಚ್.ಆರ್, ಸ್ವಾಮಿ, ಗ್ಯಾರಂಟಿ ರಾಮಣ್ಣ, ಅಪ್ಪಾಜಿಗೌಡ, ಶಾಡ್ರಾಕ್, ಸೌಭಾಗ್ಯ, ಅಂತೋಣಿ ಸ್ವಾಮಿ, ಎಲ್ಲ ಇದ್ದರು..
ಇವರಲ್ಲಿ ಸ್ವಾಮಿ, ಶಾಡ್ರಾಕ್, ಗ್ಯಾರಂಟಿ… ಮತ್ತು ನನ್ನ ಗೆಳೆತನ ಹಾಗೇ ಇಂದಿನ ವರೆಗೂ ಮುಂದುವರಿಯಿತು. ಬಹುವಚನದಿಂದ ಏಕ ವಚನದ ಸಲುಗೆ ಬೆಳೆಯಿತು..
ಸುಮಾರು ಹತ್ತು ವರ್ಷಗಳ ಕಾಲ ನನಗೆ ಸ್ವಾಮಿ ಯಾವ ಜಾತಿಗೆ ಸೇರಿದವರೆಂದೂ ತಿಳಿದಿರಲಿಲ್ಲ. ನಮ್ಮ ಈ ಗೆಳೆಯರ ಗುಂಪಿನಲ್ಲಿ ಹುಟ್ಟು ಎನ್ನುವುದು ಆಕಸ್ಮಿಕ ಎನ್ನುವುದು ಪ್ರತಿಯೊಬ್ಬರ ಅರಿವಾಗಿತ್ತು.
ನಂತರ ಬೇರೆ ಯಾರೊಬ್ಬರ ಮೂಲಕ ಸ್ವಾಮಿಯ ಜಾತಿ ತಿಳಿಯಿತು.. ಆಗಲೂ ನನಗೆ ಅದೇನು ಮಹತ್ವದ್ದಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಒಮ್ಮೆ ಇದೇ ತುಮರಿಯಲ್ಲಿ ನಾನು ಹೆಗ್ಗೋಡಿನ ಎಂ ಗಣೇಶ ಅವರ ಜನಮನದಾಟದ ಉಚಲ್ಯಾ ನಾಟಕ ನೋಡಿದೆ.
ನಾಟಕ ನೋಡಿ ನಾನು ತೀರ ಭಾವುಕನಾಗಿದ್ದೆ. ಕಣ್ಣುಗಳು ತುಂಬಿದ್ದವು. ಆಗ ತುಮರಿಯ ಶಿಬಿರ ನಡೆಸಿದ್ದ ಕೆ.ಜಿ.ಕೃಷ್ಣ ಮೂರ್ತಿ ನನ್ನನ್ನು ನೋಡಿ ಪ್ರಸಾದ್ ನಾಟಕದೊಳಕ್ಕೇ ಹೋಗಿದ್ದೀರಿ ಎಂದಿದ್ದರು.
ನನಗೆ ಆಗ ಕಣ್ಣಿಗೆ ಕಟ್ಟಿದ್ದು ಸ್ವಾಮಿ. ಈತ ಇದೇ ದುಃಖವನ್ನು ಸಂಕಟವನ್ನು ಎದೆಯಲ್ಲಿ ಇಟ್ಟುಕೊಂಡು ನಮ್ಮನ್ನು ದಿನಾ ನಗಿಸುತ್ತಾನಲ್ಲ! ಎಂದು.
ಸಾಕ್ಷರತಾ ಆಂದೋಲನದ ಸಮಯದಲ್ಲಿ ಸಾಕಷ್ಟು ಕೀಟಲೆ ತೆಗೆಯುತ್ತಿದ್ದ ನಮ್ಮಂತವರಿಗೆಲ್ಲ ಈ ಸ್ವಾಮಿಯೇ “ಗುರು ಸ್ವಾಮಿ” ಆದ್ದರಿಂದ ಸ್ವಾಮಿಗೆ ನಾವು ಹುಚ್ಚರ ಸ್ವಾಮಿ ಎಂದು ಕಿಚಾಯಿಸುತ್ತಿದ್ದೆವು.
ಸ್ವಾಮಿ ಅರಸೀಕೆರೆಯಲ್ಲಿ ರಂಗ ಚಟುವಟಿಕೆ ನಡೆಸಿದ ನೀನಾಸಂ ನಾಟಕ, ವ್ಯವಸ್ಥೆ ಮಾಡಿದ. ರಂಗ ಶಿಬಿರ ಮಾಡಿದ. ಜನ ವಿಜ್ಞಾನ ಜಾಥಾದ ಸಾರಥಿಯಾದ… ಮಕ್ಕಳಲ್ಲಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ತುಂಬುವ ಕೆಲಸ ಮಾಡಿದ… ಪರಿಸರ ಜಾಗೃತಿ ಮೂಡಿಸಿದ… ಸಾವಿರಾರು ಗಿಡ ನೆಟ್ಟ, ಬೇರೆಯವರು ನೆಡಲು ಕಾರಣನಾದ… ಇದಕ್ಕೆ ಪ್ರಚಾರ ಬಂದಿತೋ ಬಿಟ್ಟಿತೋ ತಲೆಕೆಡಿಸಿಕೊಳ್ಳದೆ ದುಡಿದ..
ವೈಯಕ್ತಿಕ ಬದುಕಿನಲ್ಲಿ ದುರಂತವನ್ನು ಎದುರಿಸಿದರೂ ತೋರಗೊಡದೆ ದುಡಿದ ( ಇನ್ಬೊಬ್ಬ ಗೆಳೆಯ ಗ್ಯಾರಂಟಿ ರಾಮಣ್ಣನ ಬದುಕೂ ಹೀಗೆಯೇ )
ಸ್ವಾಮಿ ಜಿಲ್ಲಾ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನೇರಿದ.. ಸ್ವಾಮಿ ಅಂದು ವೇದಿಕೆಯಲ್ಲಿ ತನ್ನನ್ನು ಪರಿಚಯಿಸಲು ನನ್ನನ್ನು ಆಯ್ಕೆ ಮಾಡಿಕೊಂಡಿದ್ದ.
ಅಂದು ವೇದಿಕೆಯಲ್ಲಿ ಪ್ರಾರ್ಥನೆಯನ್ನು ಪ್ರಾಕೃತ ಭಾಷೆಯಲ್ಲಿ ಮಾಡಿದಾಗ… ಸ್ವಾಮಿ ಈ ಪ್ರಾಕೃತ ಬುದ್ದನ ಕಾಲಕ್ಕೆ ಆಡುಭಾಷೆಯಾಗಿತ್ತು… ಆಗ ಅದು ಸರಿ. ಇಂದು ನಾವು ಜನರ ಭಾಷೆಯಾದ ಕನ್ನಡದಲ್ಲಿ ಪ್ರಾರ್ಥನೆ ಮಾಡುವುದೇ ಸರಿಯಾದ್ದು ಎಂದು ಹೇಳಿ ಹಲವರ ವಿರೋಧ ಕಟ್ಟಿಕೊಂಡರೂ… ನಾವು ವೈಜ್ಞಾನಿಕವಾಗಿ ಯೋಚಿಸಬೇಕು… ನನ್ನ ಮಾತು ಸರಿಯಾಗಿಯೇ ಇದೆ ಎಂದು ಗಟ್ಟಿಯಾಗಿ ನಿಂತ..
ಸ್ವಾಮಿಗೆ ಸಹಜವಾಗಿಯೇ ಗಾಂಧಿ ಬಗ್ಗೆ ತಕರಾರುಗಳಿವೆ. ಆದರೆ ಈ ತಕರಾರಿನ ನಡುವೆಯೇ ಸ್ವಾಮಿಯೊಳಗೊಬ್ಬ ಗಾಂಧಿ ಇದ್ದಾನೆ. ಅದು ಸ್ವಾಮಿಯ ಕ್ಷಮಾಗುಣ… ತನಗೆ ಕೇಡು ಮಾಡಿದವರನ್ನು ತಣ್ಣಗೆ ಕ್ಷಮಿಸುವ ಸ್ವಾಮಿಯ ಗುಣಕ್ಕೆ ನಾನು ಬೆಚ್ಚಿ ಬಿದ್ದಿದ್ದೇನೆ..
ಕಳೆದ ವರ್ಷ ತುಮರಿಗೆ ಅಂಬೇಡ್ಕರ್ ಬಗ್ಗೆ ಮಾತಾಡಲು ಸ್ವಾಮಿ ಸಾಕಷ್ಟು ಸಿದ್ದತೆ ಮಾಡಿಕೊಂಡು ಬಂದಿದ್ದ. ಸ್ವಾಮಿ ಮಾತನಾಡುವುದು ಕಡಿಮೆ, ಆಡಿದರೂ ಮದ್ಯದಲ್ಲೇ ಉದಾಸೀನಗೊಂಡವಂತೆ ನಿಲ್ಲಿದರೂ ನಿಲ್ಲಿಸಿದ… ಆದರೆ ಅಂದು ತುಮರಿಯಲ್ಲಿ ಸ್ವಾಮಿ ಸಿದ್ಧತೆ ಮಾಡಿಕೊಂಡ ವಿಷಯ ಬಿಟ್ಟು ಎದೆ ಬಗೆದು ಮಾತಾಡಿದ…
ಸ್ವಾಮಿ ಆ ಜನಾಂಗದ ಮೊದಲ ಪಿ ಎಚ್ ಡಿ…. ಕೊರಚರ ಬಗ್ಗೆ ಅವರ ಭಾಷೆಯ ಬಗ್ಗೆ ಸ್ವಾಮಿಯ ಅಧ್ಯಯನಪೂರ್ಣ ಗ್ರಂಥ ” ಕರ್ನಾಟಕದ ಕೊರಚರು”. ಹಾಗೆ ನೋಡಿದರೆ ಸ್ವಾಮಿ ಅಂಬೇಡ್ಕರ್ ಬಗ್ಗೆ ಮಾತನಾಡುವುದು ಕಡಿಮೆಯೇ.. ಆದರೆ ತನ್ನ ಇರುವಿಕೆಯಲ್ಲಿಯೇ ಸ್ವಾಮಿ ಅಲ್ಲಿ ಬಾಬಾ ಸಾಹೇಬರನ್ನು ಆವಾಹಿಸಿ ಬಿಡುತ್ತಾನೆ…
ಸ್ವಾಮಿಯ ಮೊದಲ ಆಯ್ಕೆ ವಿಜ್ಞಾನ ಮತ್ತು ಪರಿಸರ, ರಾಜ್ಯ ವಿಜ್ಞಾನ ಪರಿಷತ್ತಿನ ಪ್ರಕಟನಾ ಸಮಿತಿ ಅಧ್ಯಕ್ಷನಾಗಿಯೂ ಸ್ವಾಮಿ ಕಾರ್ಯ ನಿರ್ವಹಿದ್ದಾನೆ. ಇವೆಲ್ಲದರಿಂದ ಸ್ವಾಮಿಗೆ ನೆಹರೂವಿನ scientific temperament ಇಷ್ಟ, ಅದು ವೈಜ್ಞಾನಿಕ ದಮ್ಮ…
ಗಾಂಧಿ-ಅಂಬೇಡ್ಕರ್- ನೆಹರೂ ವಿಚಾರ ಗೋಷ್ಠಿಯಲ್ಲಿ ಸ್ವಾಮಿ ಸಮರ್ಥ ಆಯ್ಕೆ.. (ಇದೇ ವೇದಿಕೆಯಲ್ಲಿ ಮಾತನಾಡಬೇಕಿದ್ದ ಕವಿಸುಬ್ಬು ಹೊಲೆಯಾರ್ ಬರಲು ಸಾಧ್ಯವಾಗಲಿಲ್ಲ)
ಸ್ವಾಮಿ ಬರೆದದ್ದು ಕಡಿಮೆಯೇ ಸಂಪಾದಿಸಿದ ಹೊತ್ತಗೆಗಳು ಕೆಲವು. ಇವುಗಳಲ್ಲಿ ಮಾನವತೆಯ ತುಡಿತಗಳು, ಬುಡಕಟ್ಟು ಸಂಸ್ಕೃತಿ , ಆರೋಗ್ಯ ಮತ್ತು ಮೂಢನಂಬಿಕೆ ಮುಖ್ಯವಾದವು.. ( ಇನ್ನಾದರೂ ಸ್ವಾಮಿ ಹೆಚ್ಚು ಬರೆಯಬೇಕು)
ಸ್ವಾಮಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ. ಸಮಾಜ ಕಲ್ಯಾಣ ಇಲಾಖೆ ಡಾ. ಬಿ.ಆರ್ ಅಂಬೇಡ್ಕರ್ ಪ್ರಶಸ್ತಿ ಸಂದಿದೆ. ಜೊತೆಗೆ ಅರಸೀಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಹಾಸನ ಜಿಲ್ಲಾ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಕೂಡಾ.
ಸ್ವಾಮಿ ಪ್ರಚಾರ ಪ್ರಿಯನೂ ಅಲ್ಲ… ಬಾಲ ಹಿಡಿದು ಹೋಗುವವನೂ ಅಲ್ಲ…
ಈಗ ಸ್ವಾಮಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದ ಸುದ್ದಿ ಬಂದಿದೆ.. ಕಳೆದ ವರ್ಷ ಸುಬ್ಬುಹೊಲೆಯಾರ್ ಗೆ ಬಂದಿತ್ತು.. ಇವರೆಲ್ಲ ನನ್ನ ಗೆಳೆಯರು ಎನ್ನುವುದೇ ಒಂದು ಪ್ರಶಸ್ತಿ… ಸ್ವಾಮಿಗೆ ಒಂದಷ್ಟು ಜವಾಬ್ದಾರಿಯುತ ಸ್ಥಾನ ನೀಡಿ ದುಡಿಸಿಕೊಳ್ಳುವ ಪ್ರಜ್ಞೆ ಸರ್ಕಾರಕ್ಕೆ ಬರಲಿ.
– ಪ್ರಸಾದ್ ರಕ್ಷಿದಿ, ಹಿರಿಯ ರಂಗಕರ್ಮಿ




