ಬೆಂಗಳೂರು: ರಾಜ್ಯದ ಎಲ್ಲಾ ಅಂಗಡಿಗಳು ಶಾಪಿಂಗ್ ಮಾಲ್ ವಾಣಿಜ್ಯ ಸಂಕೀರ್ಣಗಳ ನಾಮಫಲಕದಲ್ಲಿ ಕನ್ನಡ ಪ್ರಧಾನವಾಗಿ ಕಾಣುವುದನ್ನು ಕಡ್ಡಾಯಗೊಳಿಸಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ -2024 ವಿಧಾನ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರವಾಗಿದೆ.
ವಿಧಾನಸಭೆಯಲ್ಲಿ ವಿಧೇಯಕ ಕುರಿತು ಮಾತನಾಡಿದ ಸಚಿವ ಶಿವರಾಜ ತಂಗಡಗಿ, ವಿಧೇಯಕದ 17ನೆ ಪ್ರಕರಣದಲ್ಲಿ (06) ರಾಜ್ಯ ಸರ್ಕಾರದ ಇಲಾಖೆಗಳು, ಉದ್ಯಮಗಳು, ಸ್ವಾಯತ್ತ ಸಂಸ್ಥೆಗಳು, ಸಹಕಾರ ಮತ್ತು ಸಾರ್ವಜನಿಕ ಉದ್ಯಮಗಳು, ಬ್ಯಾಂಕುಗಳು, ಇತರ ಹಣಕಾಸು ಸಂಸ್ಥೆಗಳು, ಖಾಸಗಿ ಕೈಗಾರಿಕೆಗಳು ಮತ್ತು ವಿಶ್ವವಿದ್ಯಾಲಯಗಳ ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬಳಸಬೇಕು ಎಂಬ ಅಂಶ ಕಾಯಿದೆಯ ಪ್ರಮುಖ ಉದ್ದೇಶವಾಗಿದೆ ಎಂದರು.
ನಾಮಫಲಕಗಳ ಒಟ್ಟಾರೆ ವಿಸ್ತೀರ್ಣದಲ್ಲಿ ಕನ್ನಡ ಭಾಷೆಯನ್ನು ಮೇಲ್ಭಾಗದಲ್ಲಿ ಶೇ.60ರಷ್ಟು ಪ್ರದರ್ಶಿಸುವುದು ಕಡ್ಡಾಯ ಮಾಡಲಾಗಿದೆ. ಶೇ.40ರಷ್ಟು ಇತರ ಭಾಷೆಯನ್ನು ಕೆಳಭಾಗದಲ್ಲಿ ಬಳಸಬಹುದಾಗಿದೆ. ಈ ಹಿಂದೆ ಇದನ್ನು ಶೇ.50:50 ಎಂದು ಆದೇಶ ಹೊರಡಿಸಲಾಗಿತ್ತು ಎಂದರು.
ಇದಲ್ಲದೆ, ವಿಧೇಯಕದ 07 (02) ರಲ್ಲಿ ಜಾರಿ ಸಮಿತಿಯಲ್ಲಿ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರನ್ನು ಸಂಚಾಲಕರೆಂದು ಯೋಜಿಸಲಾಗಿತ್ತು. ಆದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಸಾಕಷ್ಟು ಹೊಣೆಗಾರಿಕೆಗಳಿದ್ದು, ಸಂಚಾಲಕರಾಗಿ ಕಾರ್ಯನಿರ್ವಹಿ ಸುವುದು ಕಷ್ಟವಾಗುವುದರಿಂದ ಅವರನ್ನು ಸದಸ್ಯರನ್ನಾಗಿ ಮಾಡಿ ಕಾರ್ಯದರ್ಶಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇವರನ್ನು ಸಂಚಾಲಕರನ್ನಾಗಿ ಪ್ರತಿಯೋಜಿಸ ಲಾಗುತ್ತಿದೆ ಎಂದರು.
ತಿದ್ದುಪಡಿ ವಿಧೇಯಕ ಬೆಂಬಲಿಸಿ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್, ನನಗೆ ಇರುವ ಆತಂಕವೇನೆಂದರೆ, ಬಹುರಾಷ್ಟ್ರೀಯ ಕಂಪನಿಗಳು, ದೊಡ್ಡ ದೊಡ್ಡ ಮಾಲ್ಗಳು ಇವನ್ನು ಪಾಲಿಸುತ್ತವೆಯೇ? ಎಂದರು.
ದೊಡ್ಡ ಮೊತ್ತದ ದಂಡ ಹಾಕಿದಾಗ ಮಾತ್ರ ಅವು ಹೆದರುತ್ತವೆಯೇ ಹೊರತು ನೋಟಿಸ್ಗಳಿಗೆ ಹೆದರುವುದಿಲ್ಲ. ಆದ್ದರಿಂದ ನಿಯಮ ರೂಪಿಸುವಾಗ ಈ ಆದೇಶವನ್ನು ಪಾಲಿಸದ ಸಂಸ್ಥೆಗಳಿಗೆ ದೊಡ್ಡ ಮೊತ್ತದ ದಂಡ ಹಾಕಬೇಕು. ಸಾಧ್ಯವಾದರೆ ಪೊಲೀಸ್ ಅಧಿಕಾರಿಗಳು ಸಮಿತಿಯಲ್ಲಿರಲಿ ಎಂಬುದನ್ನು ಗಮನದಲ್ಲಿರಿಸಿಕೊಳ್ಳಿ ಎಂದರು.
ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಮಾತನಾಡಿ, ಕನ್ನಡ ಭಾಷೆ ಬಳಕೆಗೆ ವಿಧೇಯಕ ಮಂಡನೆ ಸಂದರ್ಭ ಎದುರಾಗಿರುವುದು ಬೇಸರವುಂಟುಮಾಡಿದೆ. ನಮ್ಮ ಮನಸ್ಥಿತಿಗಳನ್ನು ಮೊದಲು ಬದಲಾಯಿಸಿಕೊಳ್ಳಬೇಕು. ಇತರ ಭಾಷಿಕರಿಗೆ ಬೆಂಗಳೂರಿನ ಬಗ್ಗೆ ಪ್ರೀತಿ ಇಲ್ಲ. ಆದರೆ, ವಾಸಿಸಲು ಮಾತ್ರ ಆಸೆ ಪಡುತ್ತಾರೆ. ಇಂತಹ ಮನಸ್ಥಿತಿ ಬದಲಾಗಬೇಕಿದೆ. ಇನ್ನು ಮುಂದಾದರೂ ಕನ್ನಡ ಭಾಷಾ ಅನುಷ್ಠಾನ ಸಮರ್ಪಕವಾಗಲಿ ಎಂದು ಹಾರೈಸಿದರು.
ಅರವಿಂದ ಬೆಲ್ಲದ ಹಾಗೂ ಮಾಜಿ ಸಚಿವ ಅರಗ ಜ್ಞಾನೇಂದ್ರ ಸಹ ತಿದ್ದುಪಡಿ ವಿಧೇಯಕ ಮಂಡನೆಯನ್ನು ಸ್ವಾಗತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಶಿವರಾಜ್ ತಂಗಡಗಿಯವರು ಸದನದಲ್ಲಿ ಶಾಸಕರು ವ್ಯಕ್ತಪಡಿಸಿದ ಎಲ್ಲಾ ಅಭಿಪ್ರಾಯಗಳನ್ನು ಗೌರವಿಸುತ್ತೇನೆ ಹಾಗೂ ಅವರ ಸಲಹೆಗಳನ್ನು ನಿಯಮ ರೂಪಿಸುವಾಗ ಅಳವಡಿಸಿಕೊಳ್ಳುತ್ತೇವೆ ಎಂದರು.
ನಾವು ಈಗಾಗಲೇ ನಿಯಮ ರೂಪಿಸಲು ಒಂದು ಸಮಿತಿ ರಚನೆ ಮಾಡಿ, ಹಲವು ಸುತ್ತಿನ ಚರ್ಚೆಗಳನ್ನು ಮಾಡಿದ್ದೇವೆ. ಒಂದು ಜಾರಿ ಘಟಕ ಮಾಡಲಾಗುತ್ತದೆ. ಜಾರಿ ಅಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳು ಇದರಲ್ಲಿರುತ್ತಾರೆ. ಇವರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಜೊತೆಗೆ ದೊಡ್ಡ ಮಟ್ಟದ ದಂಡ ವಿಧಿಸಲು ನಿಯಮಗಳಲ್ಲಿ ಅವಕಾಶ ಮಾಡಲಾಗುತ್ತಿದೆ. ಒಂದು ವೇಳೆ ಆದೇಶಕ್ಕೆ ಗೌರವ ನೀಡದೇ ಹೋದರೆ ಅಂತಹ ಸಂಸ್ಥೆಗಳ ಪರವಾನಗಿ ರದ್ದು ಮಾಡಲಾಗುತ್ತದೆ ಎಂದರು.




