ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡವನ್ನು ಕಡ್ಡಾಯಗೊಳಿಸುವ ಕನ್ನಡ ವಿಧೇಯಕಕ್ಕೆ ರಾಜ್ಯದ ವಿಧಾನಸಭೆ ಅಂಗೀಕಾರ ನೀಡಿದೆ. ದಶಕಗಳಿಂದ ಕನ್ನಡಿಗರು ಕೇಳುತ್ತ ಬಂದ ದಿನ ಕೊನೆಗೂ ಬಂದಿದೆ. ಕನ್ನಡಿಗರ ಧ್ವನಿಗೆ ಶಕ್ತಿ ಬಂದಿದೆ. ಇದಕ್ಕಾಗಿ ನಾಡಿನ ಏಳು ಕೋಟಿ ಕನ್ನಡಿಗರನ್ನು ಅಭಿನಂದಿಸುತ್ತೇನೆ.
ವಿಧಾನಸಭೆಯಲ್ಲಿ ವಿಧೇಯಕವನ್ನು ಮಂಡಿಸಿದ ರಾಜ್ಯ ಸರ್ಕಾರಕ್ಕೆ, ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ, ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ, ಮಾನ್ಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರಿಗೆ, ಸರ್ಕಾರದ ಸಚಿವ ಸಂಪುಟದ ಎಲ್ಲ ಸದಸ್ಯರಿಗೆ, ಆಡಳಿತ, ವಿರೋಧ ಪಕ್ಷದ ಎಲ್ಲ ಶಾಸಕರಿಗೆ ವಿಶೇಷ ಕೃತಜ್ಞತೆಗಳು.
ದಶಕಗಳ ಕನ್ನಡಿಗರ ಹಕ್ಕೊತ್ತಾಯ ಈಡೇರಿಕೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಕಳೆದ ಡಿಸೆಂಬರ್ 27ರಂದು ಬೆಂಗಳೂರಿನಲ್ಲಿ ಐತಿಹಾಸಿಕ ಚಳವಳಿ ಸಂಘಟಿಸಿ, ಸಾವಿರಾರು ಅನ್ಯಭಾಷೆಗಳ ನಾಮಫಲಕಗಳನ್ನು ತೆರವುಗೊಳಿಸಿತ್ತು. ಕರ್ನಾಟಕದ ಇತಿಹಾಸದಲ್ಲಿ ಇದೊಂದು ಅಪರೂಪದ ದಿನವಾಗಿತ್ತು.
ನಮ್ಮ ಚಳವಳಿಯಿಂದಾಗಿ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಸುಗ್ರೀವಾಜ್ಞೆಯನ್ನು ಹೊರಡಿಸಿ, ನಾಮಫಲಕಗಳಲ್ಲಿ ಕನ್ನಡ ಅನುಷ್ಠಾನವನ್ನು ಮಾಡುವುದಾಗಿ ಘೋಷಿಸಿತ್ತು. ಆದರೆ ವಿಧಾನಮಂಡಲದಲ್ಲಿ ವಿಧೇಯಕಕ್ಕೆ ಅಂಗೀಕಾರ ಪಡೆಯಲು ರಾಜ್ಯಪಾಲರು ಸೂಚಿಸಿದ್ದರಿಂದಾಗಿ ಸುಗ್ರೀವಾಜ್ಞೆ ಜಾರಿಯಾಗಿರಲಿಲ್ಲ. ಈಗ ಎಲ್ಲ ಅಡೆತಡೆಗಳು ನಿವಾರಣೆಯಾಗಿವೆ.
ಡಿ.27ರ ನಮ್ಮ ಚಳವಳಿಯ ಹಿನ್ನೆಲೆಯಲ್ಲಿ ನನ್ನ ಮೇಲೆ, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರ ಮೇಲೆ ಸರ್ಕಾರ ಹಲವಾರು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿಕೊಂಡು ನಮ್ಮನ್ನು ಜೈಲಿಗೆ ಕಳುಹಿಸಿತು. ಏನೇ ಕಷ್ಟ ಅನುಭವಿಸಿದರೂ ನಮ್ಮ ಹೋರಾಟ ಗುರಿ ಮುಟ್ಟಿದೆಯೆಂಬ ಸಂತಸ ನನ್ನದು.
ಇಂದು ನಡೆದ ವಿಧಾನಸಭೆ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು ಸರ್ಕಾರ, ಪೊಲೀಸ್ ಇಲಾಖೆ ನಮ್ಮನ್ನು ನಡೆಸಿಕೊಂಡ ರೀತಿಯ ಕುರಿತು ಮಾತನಾಡಿದ್ದಾರೆ. ಅವರಿಗೆ ವಿಶೇಷ ಕೃತಜ್ಞತೆಗಳು. ಕನ್ನಡಕ್ಕಾಗಿ ಎಷ್ಟು ಬೇಕಾದರೂ ಮೊಕದ್ದಮೆಗಳನ್ನು ಎದುರಿಸಲು ನಾವು ತಯಾರಾಗಿದ್ದೇವೆ. ಅದರಲ್ಲಿ ಯಾವ ಹಿಂಜರಿಕೆಯೂ ನಮಗಿಲ್ಲ.
ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿದಂತೆ ಫೆ.28ರೊಳಗೆ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡವನ್ನು ಕಡ್ಡಾಯಗೊಳಿಸುವ ವಿಧೇಯಕವನ್ನು ಸಂಪೂರ್ಣ ಜಾರಿಗೆ ತರಬೇಕು. ಜೊತೆಗೆ ವಿಧೇಯಕದಲ್ಲಿ ಹೇಳಲಾದ ಎಲ್ಲ ಅಂಶಗಳನ್ನೂ ಜಾರಿಗೊಳಿಸಬೇಕು. ಯಾರ, ಯಾವ ರೀತಿಯ ಒತ್ತಡಕ್ಕೂ ಮಣಿಯಕೂಡದು.
- ಟಿ.ಎ.ನಾರಾಯಣಗೌಡ, ರಾಜ್ಯಾಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ




