ಬೆಂಗಳೂರು: ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಾಡಿನ ಪ್ರಾತಃಸ್ಮರಣೀಯರು. ಅವರ ಪ್ರಗತಿಪರ ಆಡಳಿತವನ್ನು ಕಂಡು ಮಹಾತ್ಮಾ ಗಾಂಧೀಜಿಯವರು ನಾಲ್ವಡಿ ಅವರನ್ನು ‘ರಾಜರ್ಷಿ’ ಎಂದು ಕರೆದರು. ಮೈಸೂರು ಸಂಸ್ಥಾನವನ್ನು ‘ರಾಮರಾಜ್ಯ’ಎಂದಿದ್ದರು. ಅವರ ಆಳ್ವಿಕೆಯ ಅವಧಿಯಲ್ಲಿಯೇ ಆಗಿರುವ ಸಮಾಜ ಮುಖಿ ಕಾರ್ಯಗಳು ಇಂದಿಗೂ ಪ್ರಶಸ್ತವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಡಾ. ಮಹೇಶ ಜೋಶಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಂಡ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರದಾನ ಹಾಗೂ ವಿಶ್ರಾಂತ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ. ಶಿವಲಿಂಗೇಗೌಡ ಅನುವಾದಿಸಿದ ಮೂಲ ʻಖಲ್ಹೀಲ್ ಗಿಬ್ರಾನ್ʼ ಅವರ ಕೃತಿ ʻಮುರಿದ ರೆಕ್ಕೆಗಳುʼ ಪುಸ್ತಕ ಬಿಡುಗೆಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರ ಹೆಮ್ಮೆಯ ವಿಶ್ವಾಸಾರ್ಹ ಸಂಸ್ಥೆ. ಕನ್ನಡಿಗರ ವಿಶ್ವಾಸದ ಪ್ರತೀಕವಾಗಿ ನಮ್ಮಲ್ಲಿ ಇಂದು ೨೧೦೦ಕ್ಕೂ ಹೆಚ್ಚು ದತ್ತಿ ಪ್ರಶಸ್ತಿಗಳನ್ನು ಜನರು ನಂಬಿಕೆಯಿಂದ ಇಟ್ಟಿದ್ದಾರೆ. ಅದನ್ನು ಕನ್ನಡ ಸಾಹಿತ್ಯ ಪರಿಷತ್ತು ಯೋಗ್ಯ ರೀತಿಯಲ್ಲಿ ಪ್ರದಾನ ಆಡುತ್ತ ಬಂದಿದೆ. ಒಂದು ಸಂಸ್ಥೆ ನಿತ್ಯ ನಿರಂತರವಾಗಿರಬೇಕು ಎನ್ನುವುದು ನಾಲ್ವಡಿ ಅವರ ಸಾಮಾಜಿಕ ಕಾಳಜಿಯಾಗಿತ್ತು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಶಾಸಕ ಡಿ.ಆರ್.ಪಾಟೀಲ್ ಮಾತನಾಡಿ, ನಮ್ಮ ದೇಶದಲ್ಲಿ ಸಾಕ್ಷರರು ಆತ್ಮವಿಶ್ವಾಸ ಕಳೆದುಕೊಂಡು ದಾರಿತಪ್ಪುತ್ತಿದ್ದಾರೆ. ಅನಕ್ಷರಸ್ಥರು ವಿಶಾಲ ಹೃದಯದವರಿದ್ದಾರೆ. ನಮ್ಮ ತಪ್ಪನ್ನು ತಿಳಿಸುವ ಕೆಲಸ ಶಿಕ್ಷಣದಲ್ಲಿ ಆಗಬೇಕಿದೆ. ಶಿಕ್ಷಣದಲ್ಲಿ ನಮ್ಮತನವನ್ನು ಕಲಿಸುವ ಜೊತೆಗೆ ಸಮಾಜದ ಮೇಲಿನ ನಂಬಿಕೆ ವಿಶ್ವಾಸ ತಿಳಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
೨೦೨೩ನೆಯ ಸಾಲಿನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಆಂಧ್ರಪ್ರದೇಶ, ವಿಜಯನಗರಂನ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ತೇಜಸ್ವಿ ವೆಂಕಪ್ಪ ಕಟ್ಟೀಮನಿ, ಇಂದು ಪಠ್ಯಕ್ರಮದಲ್ಲಿ ಹಳ್ಳಿಗಳು, ನಮ್ಮ ಮೂಲ ಸಂಸ್ಕೃತಿಗಳು, ಆಚಾರ ವಿಚಾರಗಳು ನಾಪತ್ತೆಯಾಗಿವೆ. ಕನ್ನಡ ಅನ್ನದ ಭಾಷೆಯಾಗಬೇಕು. ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿ ಆದಾಗ ಮಾತ್ರ ನಮ್ಮ ಭಾಷೆ ಅನ್ನದ ಭಾಷೆಯಾಗುತ್ತದೆ. ದೇಶದಲ್ಲಿಯ ಬಹುತೇಕ ಪ್ರಾದೇಶಿಕ ಭಾಷೆಗಳು ನಾಪತ್ತೆಯಾಗುತ್ತಿವೆ. ನಮ್ಮ ಅನ್ನವನ್ನು ನಾವು ಕಂಡುಕೊಳ್ಳಬೇಕು ಎಂದರೆ ಕನ್ನಡ ಕೊಳ್ಳುವ ಹಾಗೂ ಮಾರುವ ಭಾಷೆಯಾಗಿ ರೂಪಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾತಾಡಿದ ನಿವೃತ್ತ ಪೋಲೀಸ್ ಮಹಾ ನಿರ್ದೇಶಕ ಡಾ.ಅಜಯ್ ಕುಮಾರ್ ಸಿಂಗ್, ಖಲೀಲ್ ಗಿಬ್ರಾನ್ ಮಧ್ಯ ಪ್ರಾಚ್ಯ ಭಾಗಕ್ಕೆ ಆಧುನಿಕತೆಯನ್ನು ತಂದವನು. ಅಧ್ಯಾತ್ಮದ ಉನ್ನತೀಕರಣವನ್ನು ಅವನು ಬರಹದ ಮೂಲಕ ಸಾಧಿಸಿದವನು, ಉತ್ತಮ ಚಿತ್ರಕಾರ ಕೂಡ ಆಗಿದ್ದ ಎಂದರು.
‘ಮುರಿದ ರೆಕ್ಕೆ’ಗಳು ಕಾದಂಬರಿಯ ಮೂಲ 1912ರಲ್ಲಿ ಅರೆಬಿಕ್ ಭಾಷೆಯಲ್ಲಿ ರೂಪುಗೊಂಡ ‘ಬ್ರೂಕನ್ ವಿಂಗ್ಸ್’ಜಗತ್ತಿನ ಮೂವತ್ತಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿದ್ದು ಚಲನಚಿತ್ರ ರೂಪವನ್ನೂ ಕೂಡ ಪಡೆದಿದೆ. ಇಂತಹ ಮಹತ್ವದ ಕೃತಿಯನ್ನು ಕೆ.ಎಂ.ಶಿವಲಿಂಗೇ ಗೌಡರು ಮೂಲದ ಸತ್ವಕ್ಕೆ ಭಂಗಬಾರದಂತೆ ಪರಿಣಾಮಕಾರಿಯಾಗಿ ಅನುವಾದಿಸಿದ್ದಾರೆ ಎಂದರು.
ಕೃತಿ ಮೇಲ್ನೋಟಕ್ಕೆ ದುರಂತ ಪ್ರೇಮ ಕಥನವನ್ನು ಹೊಂದಿದೆ ಎನ್ನಿಸಿದರೂ ಮಾನವೀಯ ಸಂಬಂಧಗಳ ಸೂಕ್ಷ್ಮತೆಯನ್ನು, ಏಕಾಂಗಿತನದ ಸ್ವರೂಪವನ್ನು, ಸಮಾಜದ ಹಿಡಿತವನ್ನು ಹಿಡಿದಿಟ್ಟಿದೆ. ಇದರ ಭಾಷೆ ಗದ್ಯ ಮತ್ತು ಪದ್ಯದ ನಡುವಿನ ಸೊಬಗಿನ ಹಾದಿಯದಾಗಿದ್ದು ಶಿವಲಿಂಗೇ ಗೌಡರು ಅದನ್ನು ಸಮರ್ಥವಾಗಿ ತಂದಿದ್ದಾರೆ ಎಂದರು.
ಕನ್ನಡಕ್ಕೆ ಇಂತಹ ಮಹತ್ವದ ಕೃತಿಯನ್ನು ನೀಡಿದ ಅವರನ್ನು ಮತ್ತು ಇಂತಹ ಪ್ರಮುಖ ಕೃತಿಯನ್ನು ಪ್ರಕಟಿಸಿದ ಕನ್ನಡ ಸಾಹಿತ್ಯ ಪರಿಷತ್ತನ್ನು ಅವರು ಅಭಿನಂದಿಸಬೇಕು ಎಂದದರು.
‘ಮುರಿದ ರೆಕ್ಕೆಗಳು’ಕೃತಿಯ ಅನುವಾದಕ ಕೆ.ಎಂ.ಶಿವಲಿಂಗೇ ಗೌಡ ಮಾತನಾಡಿ, ಭಾವನಾತ್ಮಕವಾಗಿ ಬದುಕಿನ ಸ್ಥಾಯಿ ಕ್ಷಣಗಳನ್ನು ಹಿಡಿದಿಟ್ಟ ಕೃತಿ ತಮ್ಮ ಮನಸ್ಸಿಗೆ ತೀರಾ ಹತ್ತಿರ ಎನ್ನಿಸಿತು. ಜೀವನದ ಪ್ರತಿ ಕ್ಷಣದ ಅರ್ಥವನ್ನು ಶೋಧಿಸುವ ಕೃತಿಯು ಬದುಕನ್ನು ತನ್ನದೇ ಆದ ರೀತಿಯಲ್ಲಿ ವಿಸ್ತರಿಸುತ್ತದೆ. ಬರಹದಲ್ಲಿ ಇಂತಹ ಅನುಭವ ತನಗಾಗಿದ್ದು ಓದುವಿಕೆಯ ಮೂಲಕ ಅಂತಹ ಅನುಭವ ನಿಮ್ಮದೂ ಆಗಲಿ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ, ಪರಿಷತ್ತಿನ ಗೌರವ ಕೋಶಾಧ್ಯಕ್ಷ ಡಾ. ಬಿ.ಎಮ್.ಪಟೇಲ್ ಪಾಂಡು, ಪರಿಷತ್ತಿನ ಪ್ರಕಟಣಾ ವಿಭಾಗದ ಮುಖ್ಯಸ್ಥ ಪ್ರೊ. ಎನ್.ಎಸ್.ಶ್ರೀಧರ ಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಮೊದಲಾದವರು ಹಾಜರಿದ್ದರು.


