ಯುವಜನತೆಯ ಸಬಲೀಕರಣ ಹಾಗೂ ಕ್ರೀಡಾ ಬೆಳವಣಿಗೆಗೆ ಯುವನೀತಿ  ಜಾರಿಗೆ ಕ್ರಮ: ಬೊಮ್ಮಾಯಿ

3 years ago

ಬೆಂಗಳೂರು: ರಾಜಭವನದ ಗಾಜಿನ ಮನೆಯಲ್ಲಿ ನಡೆದ ಏಕಲವ್ಯ ಕ್ರೀಡಾ ಪ್ರಶಸ್ತಿ ಹಾಗೂ ಇತರ ಕ್ರೀಡಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕ್ರೀಡಾಪಟುಗಳನ್ನು ಅಭಿನಂದಿಸಿ  ಮಾತನಾಡಿದ ಬಸವರಾಜ ಬೊಮ್ಮಾಯಿ ಯುವ ಕ್ರೀಡಾ ಪ್ರತಿಭೆಗಳು ದೇಶದ ಆಸ್ತಿ. ಏಕಾಗ್ರತೆ, ಹಾಗೂ ಪರಿಶ್ರಮದಿಂದ ಸಾಧನೆ ಮಾಡಿದರೆ ಯಶಸ್ಸು ಖಂಡಿತ ಲಭಿಸುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರೀಡೆಗೆ ಮಹತ್ವವನ್ನು ನೀಡಿದೆ. ಕ್ರೀಡೆ ಹವ್ಯಾಸವಾಗಿ ಪ್ರಾರಂಭವಾಗಿ ರಾಷ್ಟ್ರೀಯ ಸಂಕೇತವಾಗಿ ಇತ್ತೀಚೆಗೆ ಪರಿಗಣಿಸಲಾಗುತ್ತಿದೆ ಎಂದರು.

ಒಂದು ರಾಷ್ಟ್ರವನ್ನು ಅದರ ಕ್ರೀಡಾ ಸಾಧನೆಯ ಮೇಲೆ ಗುರುತಿಸಲಾಗುತ್ತಿದೆ. ಭಾರತದಂತಹ ರಾಷ್ಟ್ರದಲ್ಲಿ ಕ್ರೀಡೆಯನ್ನು ಮುಖ್ಯವಾಹಿನಿಗೆ ತರಲು ಪ್ರಧಾನಿ ಮೋದಿಯವರು ಯಶಸ್ವಿ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಖೇಲೋ ಇಂಡಿಯಾ, ಫಿಟ್ ಇಂಡಿಯಾ, ಜೀತೋ ಇಂಡಿಯಾ ಎಂಬ ಕಾರ್ಯಕ್ರಮಗಳ ಮೂಲಕ ಕ್ರೀಡೆಗಳ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಕಳೆದ ಒಲಂಪಿಕ್ಸ್ ನಲ್ಲಿ ಭಾರತ ಹೆಚ್ಚಿನ ಪದಕಗಳನ್ನು ಗೆದ್ದಿದೆ. ಪ್ಯಾರಾ ಒಲಂಪಿಕ್ಸ್ ನಲ್ಲಿಯೂ ಭಾರತ ಮಹತ್ತರ ಸಾಧನೆಗಳನ್ನು ಮಾಡಿದೆ. ಇದಕ್ಕಾಗಿ ಎಲ್ಲ ಕ್ರೀಡಾಸಾಧಕರನ್ನು ಅಭಿನಂದಿಸುತ್ತೇನೆ ಎಂದರು.

ಮುಂದಿನ ದಿನಗಳಲ್ಲಿ ಯುವನೀತಿಯನ್ನು ತರಲಾಗುವುದು. ಯುವಜನತೆಯ ಸಬಲೀಕರಣ ಹಾಗೂ ಕ್ರೀಡಾ ಬೆಳವಣಿಗೆ ಪ್ರಮುಖವಾಗಿದ್ದು, ಇವೆರಡಕ್ಕೂ ಸಮಾನ ಮಹತ್ವವನ್ನು ನೀಡುವಂತಹ ನೀತಿಯನ್ನು ರೂಪಿಸಲಾಗುತ್ತಿದೆ. ಕ್ರೀಡೆಯನ್ನು  ದೇಹ ಹಾಗೂ ಮನಸ್ಸಿನ ಆರೋಗ್ಯದ ಜೊತೆಗೆ ಗೆಲ್ಲಬೇಕೆಂದು ಆಡುವುದು ಬಹಳ ಮುಖ್ಯ. ಕೇವಲ ಸೋಲಬಾರದು ಎಂದು ಆಡುವ ಭಾವನೆ ಕ್ರೀಡಾಪಟುಗಳಲ್ಲಿರಬಾರದು. ಗೆಲ್ಲಲೇಬೇಕೆಂಬ ಸಕಾರಾತ್ಮಕ ಭಾವನೆಯಿಂದ ಆಡಿದರೆ ಗೆಲುವು ನಿಮ್ಮದಾಗುತ್ತದೆ. ರಾಜ್ಯ ಸರ್ಕಾರ ಕ್ರೀಡೆಗಳಿಗೆ, ಕ್ರೀಡಾಪಟುಗಳಿಗೆ ಬಹಳ ಮಹತ್ವ ನೀಡುತ್ತಿದೆ. ಗೃಹ ಇಲಾಖೆಯ ಉದ್ಯೋಗಗಳಲ್ಲಿ ಕ್ರೀಡಾಪಟುಗಳಿಗೆ ಶೇ.2 ರ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರದಲ್ಲಿ ಕ್ರೀಡೆಗಳಿಗೆ ಪ್ರಾಶಸ್ತ್ಯ ನೀಡುವ ನಾಯಕರು, ಆಡಳಿತಗಾರರು ನಮ್ಮಲ್ಲಿದ್ದಾರೆ. ಇದರಿಂದಾಗಿ ಕ್ರೀಡೆಗೆ ಉತ್ತೇಜನ ನೀಡುವಂತಹ ನೀತಿಗಳನ್ನು ಜಾರಿಗೆ ತರಲು ಸಾಧ್ಯವಾಗಿದೆ ಎಂದು ಹೇಳಿದರು.

Leave a Reply