
ಬೆಳಗಾವಿ: ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿಯನ್ನು ಬೆಳಗಾವಿ ಕ್ಯಾಂಪ್ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯಕ್ಕೆ ಮೊಬೈಲ್ ಮೂಲಕ ಬೆಟ್ಟಿಂಗ್ ಪಡೆಯುತ್ತಿದ್ದ ವೇಳೆ, ಬೆಳಗಾವಿಯ ಶಾಸ್ತ್ರಿ ನಗರದ ನಿವಾಸಿ ಸಾಹೀಲ್ ಪಾಟೀಲ್ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನಿಂದ ಒಂದು ಮೊಬೈಲ್ ಫೋನ್ ಹಾಗೂ ₹12,900 ನಗದು ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಮೊಬೈಲ್ ಮೂಲಕ ಪ್ರತಿ ಕ್ಷಣದ ಆಟದ ಬೆಳವಣಿಗೆಗಳ ಆಧಾರದಲ್ಲಿ ಬೆಟ್ಟಿಂಗ್ ನಡೆಸಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.


