ಈಜಲು ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು

3 months ago

ಕಪಿಲೇಶ್ವರ ಹೊಂಡದಲ್ಲಿ ದುರಂತ

ಬೆಳಗಾವಿ: ನಗರದ ಪ್ರಸಿದ್ಧ ಕಪಿಲೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಹೊಂಡದಲ್ಲಿ ಈಜಲು ಹೋಗಿದ್ದ ಇಬ್ಬರು ಅಪ್ರಾಪ್ತ ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಮೃತ ಬಾಲಕರನ್ನು ಶಿವಂ ಪರಶುರಾಮ ಸುಂದಿಕರ್ (7) ಮತ್ತು ಪರಶುರಾಮ ರಾಜು ನಿಲಜ್ಕರ್ (11) ಎಂದು ಗುರುತಿಸಲಾಗಿದೆ. ಇಬ್ಬರೂ ಶಿವಾಜಿ ನಗರ ಪ್ರದೇಶದ ನಿವಾಸಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.

ಬೇಸಿಗೆಯ ತಾಪದಿಂದ ತಪ್ಪಿಸಿಕೊಳ್ಳಲು ಸ್ನೇಹಿತರ ಗುಂಪಿನೊಂದಿಗೆ ಹೊಂಡಕ್ಕೆ ಈಜಲು ಬಂದಿದ್ದ ಬಾಲಕರು, ನೀರಿನ ಆಳದ ಅರಿವಿಲ್ಲದೆ ಹೊಂಡದೊಳಗೆ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಬಾಲಕರು ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಾಯದಿಂದ ಅವರನ್ನು ಹೊರತೆಗೆದರು. ಆದರೆ ಅಷ್ಟರಲ್ಲಾಗಲೇ ಇಬ್ಬರೂ ಮೃತಪಟ್ಟಿದ್ದರು.

ಘಟನೆ ಬಳಿಕ ಸ್ಥಳೀಯರು ಹಾಗೂ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಪಿಲೇಶ್ವರ ಹೊಂಡ ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾಗಿದೆ ಎಂದು ಆರೋಪಿಸಿದ್ದಾರೆ. ಹೊಂಡದ ಸುತ್ತ ಯಾವುದೇ ಸುರಕ್ಷತಾ ಬೇಲಿ, ಎಚ್ಚರಿಕೆ ಫಲಕ ಅಥವಾ ಮುನ್ನೆಚ್ಚರಿಕಾ ಕ್ರಮಗಳಿಲ್ಲದಿರುವುದೇ ಇಂತಹ ಅವಘಡಗಳಿಗೆ ಕಾರಣವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಕೂಡ ಇದೇ ಹೊಂಡದಲ್ಲಿ ಜೋಡಿ ಶವಗಳು ಪತ್ತೆಯಾಗಿದ್ದ ಘಟನೆ ನಡೆದಿತ್ತು. ಆದರೂ ಸಂಬಂಧಪಟ್ಟ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಘಟನಾ ಸ್ಥಳಕ್ಕೆ ಖಡೇಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply