
ಬೆಂಗಳೂರು: “ಎಲ್‌ಪಿಜಿ ಗ್ಯಾಸ್ ಬೆಲೆ ಏರಿಸುವುದು ಕಂಪನಿಗಳೇ ಹೊರತು ಕೇಂದ್ರ ಸರ್ಕಾರವಲ್ಲ” ಎಂಬ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, “ದೇಶದ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕು ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿದೆ. ಗ್ಯಾಸ್ ದರ ಏರಿಕೆಯಿಂದ ಕುಟುಂಬಗಳ ಜೀವನವೇ ಅಸ್ತವ್ಯಸ್ತವಾಗುತ್ತಿದೆ. ಹೋಟೆಲ್‌ಗಳಲ್ಲಿ ಊಟದ ದರವೂ ಗಗನಕ್ಕೇರುತ್ತಿದೆ. ಇದು ಕೇವಲ ಆರ್ಥಿಕ ವೈಫಲ್ಯವಲ್ಲ, ಜನರ ದಿನನಿತ್ಯದ ಬದುಕಿನ ಮೇಲೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಡೆಸುತ್ತಿರುವ ನೇರ ದಾಳಿ” ಎಂದು ಆರೋಪಿಸಿದ್ದಾರೆ.
“ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಹಾಗೂ ಎಚ್‌ಪಿಸಿಎಲ್ ಮುಂತಾದ ಕಂಪನಿಗಳು ಸರ್ಕಾರದ ನಿಯಂತ್ರಣದಲ್ಲಿಲ್ಲವೇ? ಅವುಗಳ ಮಂಡಳಿ ನೇಮಕಾತಿ ಮತ್ತು ನೀತಿ ನಿರ್ಧಾರಗಳ ಮೇಲೆ ಕೇಂದ್ರ ಸರ್ಕಾರದ ಪ್ರಭಾವ ಇಲ್ಲವೇ?” ಎಂದು ಪ್ರಶ್ನಿಸಿರುವ ಹರಿಪ್ರಸಾದ್, ಎಲ್‌ಪಿಜಿ ದರ ನಿಗದಿಯಲ್ಲಿ ಎಕ್ಸೈಸ್ ಡ್ಯೂಟಿ ಹಾಗೂ ಸಬ್ಸಿಡಿ ಕಡಿತದಂತಹ ನಿರ್ಧಾರಗಳು ಕೇಂದ್ರ ಸರ್ಕಾರದ ಅಧೀನದಲ್ಲೇ ಬರುತ್ತವೆ ಎಂದು ಹೇಳಿದ್ದಾರೆ.
“ಸರ್ಕಾರಕ್ಕೆ ಅಧಿಕಾರವೇ ಇಲ್ಲ ಎಂದಾದರೆ ದೇಶದ ಆಡಳಿತ ಯಾರ ಕೈಯಲ್ಲಿದೆ? ಅದಾನಿ-ಅಂಬಾನಿ ಸೇರಿದಂತೆ ಕಾರ್ಪೊರೇಟ್ ವಲಯದ ಒತ್ತಡಕ್ಕೆ ಸರ್ಕಾರ ಮಣಿದಿದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಗ್ಯಾಸ್ ದರ ಏರಿಕೆ ನಿಯಂತ್ರಿತವಾಗಿತ್ತು. ಆದರೆ ಬಿಜೆಪಿ ಆಡಳಿತದಲ್ಲಿ ಗ್ಯಾಸ್, ಪೆಟ್ರೋಲ್ ಮತ್ತು ಡೀಸೆಲ್ ದರಗಳು ನಿರಂತರ ಏರಿಕೆಯಾಗುತ್ತಿವೆ ಎಂದು ಟೀಕಿಸಿರುವ ಅವರು, “ಪೆಟ್ರೋಲ್-ಡೀಸೆಲ್ ಬೆಲೆ ನೂರರ ಗಡಿ ದಾಟಿದೆ. ಗ್ಯಾಸ್ ಸಿಲಿಂಡರ್ ದರವೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವೂ ಜನರ ಮೇಲೆ ಹೊರೆ ಹೆಚ್ಚಿಸಿದೆ” ಎಂದು ಆರೋಪಿಸಿದರು.
ಪಂಚ ರಾಜ್ಯಗಳ ಚುನಾವಣೆ ಬಳಿಕ ಬೆಲೆ ಏರಿಕೆ ಸಂಭವಿಸಬಹುದು ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮುಂಚಿತವಾಗಿಯೇ ಎಚ್ಚರಿಸಿದ್ದರು ಎಂದು ಹೇಳಿದ ಹರಿಪ್ರಸಾದ್, “ಆದರೆ ಕೇಂದ್ರ ಸರ್ಕಾರ ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿಲ್ಲ. ಇಂದು ದೇಶದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ” ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
#bkhariprasad #PralhadJoshi #LPGhike #Bjp #Congress #talkwar #malgudinews #malgudiexpressnews
|Like|Share|Comment|Subscribe|




