ಭೂಹಳ್ಳಿ ಪುಟ್ಟಸ್ವಾಮಿಯವರೊಂದಿಗಿನ ಒಡನಾಟ ಹಂಚಿಕೊಂಡಿದ್ದಾರೆ ಯೋಗೇಶ್ ಮಾಸ್ಟರ್
ಇತ್ತೀಚೆಗೆ ನಿಧನರಾದ ಭೂಹಳ್ಳಿ ಪುಟ್ಟಸ್ವಾಮಿ ಮತ್ತು ನಾವು ಸೇರಿದಾಗೆಲ್ಲಾ ಯಾವಾಗಲೂ ಗಹಗಹಿಸಿ ನಗುವಂತೆಯೇ ಅವರು ಮಾಡುತ್ತಿದ್ದದ್ದು. ಒಮ್ಮೆ ನಾನು ಮತ್ತು ಅವರು ಜಾನಪದ ಲೋಕದಲ್ಲಿ ತಂಬೂರಿ ರಾಜಮ್ಮನ ತತ್ವಪದಗಳನ್ನು ಕೇಳುತ್ತಿದ್ದೆವು. ಅದನ್ನು ಜಾನಪದ ತಜ್ಞರೊಬ್ಬರು ಬಹಳ ವಿವರವಾಗಿ ಅದರ ಮರ್ಮವನ್ನು ತಿಳಿಸುತ್ತಿದ್ದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ನಾನೆಂದೆ, “ಹದಿನೈದು ನಿಮಿಷಗಳಿಂದ ಪ್ರಯತ್ನ ಪಟ್ಟಿದ್ದೀನಿ. ಅವರು ಹೇಳ್ತಾರೋದು ಚೂರೂ ಅರ್ಥವಾಗ್ತಿಲ್ಲ.”
“ಏನ್ರೀ ಯೋಗೇಶ್ ನೀವು? ಅಂಥಾ ಮಹಾನ್ ಜಾನಪದ ತಜ್ಞರನ್ನು ಹದಿನೈದು ನಿಮಿಷ ಕೇಳಿ ಅರ್ಥವಾಗಲಿಲ್ಲಾಂದ್ರೆ ಏನ್ರೀ ಅರ್ಥ?” ಅಂತ ಪುಟ್ಟಸ್ವಾಮಿ ಹೇಳಿದಾಗ ನಾನು ಕೊಂಚ ವಿಚಲಿತನಾದೆ.
ಪುಟ್ಟಸ್ವಾಮಿ ಮುಂದುವರಿಸಿದರು, “ನಾನು ಹದಿನೈದು ವರ್ಷಗಳಿಂದ ಕೇಳ್ತಿದ್ದೀನಿ. ನನಗೇ ಅರ್ಥವಾಗಿಲ್ಲ. ಇಲ್ಲಿರುವ ಯಾರನ್ನಾದರೂ ಕೇಳಿ, ಯಾರಿಗಾದರೂ ಅರ್ಥವಾಗ್ತಿದೆಯಾ ಅಂತ! ನಿಮಗೆ ಮಾತ್ರ ಅರ್ಥ ಆಗಿಬಿಡಬೇಕಂತೆ! ಅದೂ ಹದಿನೈದೇ ನಿಮಿಷಕ್ಕೆ!”
ಆ ಜಾನಪದ ತಜ್ಞರು ಯಾರು ಎಂದು ಹೇಳುವುದಿಲ್ಲ. ಪಾಪ ಅವರು ನೊಂದ್ಕೊತಾರೆ.
*
ಮತ್ತೊಮ್ಮೆ ಪುಟ್ಟಸ್ವಾಮಿ ನನ್ನ ಬುದ್ದೇಶ್ವರನ ಕೆತ್ತಿಸುತ್ತಿರುವ ಕಡೆಗೆ ಕರೆದುಕೊಂಡು ಹೋಗಿದ್ದರು. ಅವರಿಗೆ ಏಷಿಯಾದ ಬೆಳಕಾದ ಬುದ್ಧನನ್ನೂ ಮತ್ತು ದ್ರಾವಿಡರ ಆಧ್ಯಾತ್ಮಿಕ ಪ್ರತಿಮೆಯಾದ ಶಿವನನ್ನೂ ಸಮೀಕರಿಸುವ ಒಲವು ಇತ್ತು.
“ಬುದ್ಧನಲ್ಲಿ ಶಿವನನ್ನು, ಶಿವನಲ್ಲಿ ಬುದ್ಧನನ್ನು ಕಾಣುವುದು ತಪ್ಪೇನಾದರೂ ಆಗುತ್ತದೆಯೇ?” ಎಂದು ಕೇಳಿದರು.
“ಬುದ್ಧನೂ ಧ್ಯಾನಿ, ಶಿವನೂ ಧ್ಯಾನಿ. ಬುದ್ಧನೂ ವಿರಾಗಿ, ಶಿವನೂ ವಿರಾಗಿ. ಬುದ್ಧನೂ ನಿರಹಂಕಾರಿ, ಶಿವನೂ ನಿರಹಂಕಾರಿ, ಬುದ್ಧನೂ ಮನೋನಿಗ್ರಹಿ, ಶಿವನೂ ಮನೋನಿಗ್ರಹಿ; ಇಬ್ಬರೂ ಒಂದೇ ಅಲ್ಲದಿದ್ದರೂ ತಾತ್ವಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸಾಮ್ಯಗೊಳಿಸಲು ಸಾಧ್ಯವಿದೆ” ಎಂದೆ. ಅದಕ್ಕೆ ಅವರು ಬುದ್ದ ಮತ್ತು ಶಿವನ ಐಕ್ಯ ಪ್ರತಿಮೆಯಾದ ಬುದ್ದೇಶ್ವರನ ತಾತ್ವಿಕ ಚಿಂತನೆಗಳಂತೆ ಒಂದಷ್ಟು ವಾಕ್ಯಗಳನ್ನು ಬರೆದುಕೊಡಲು ಕೇಳಿದರು. ನಾನು ಬುದ್ಧನ ಮತ್ತು ಶಿವನ ಸಾದೃಶ್ಯವಿರುವಂತಹ ಅನೇಕಾನೇಕ ತಾತ್ವಿಕ ಅಂಶಗಳನ್ನು ಕ್ರೋಢೀಕರಿಸಿ ಅವುಗಳನ್ನು ಬರೆದು ಕೊಟ್ಟೆ. ಅದು ಸ್ನೇಹಪೂರ್ವಕವಾಗಿ ಮತ್ತು ತಾತ್ವಿಕಬದ್ಧತೆಯಿಂದ ಮಾತ್ರವೇ ಆಗಿತ್ತು. ನಾನು ಅವರಿಗೆ ಅವನ್ನು ಕೊಡುವಾಗ ಯಾವ ರೀತಿಯ ಪ್ರತಿಫಲಾಪೇಕ್ಷೆಯನ್ನೂ ಹೊಂದಿರಲಿಲ್ಲ. ಆದರೆ ನಾನು ಕಾರು ಹತ್ತುವಾಗ ನನ್ನ ಕೈಗೊಂದು ಕವರ್ ತುರುಕಿದರು. “ನಾನು ಇದೇನಿದು?” ಎಂದು ಕೇಳಿದೆ. “ಇರಲಿ, ಇಟ್ಕೊಳ್ಳಿ, ಇದು ನಿಮಗಲ್ಲ. ನಿಮ್ಮಂತವರನ್ನು ಕಟ್ಟಿಕೊಂಡು ಹೆಣಗಾಡುತ್ತಿರುವ ಗಂಗಮ್ಮನಿಗೆ” ಎಂದು ವಾಪಸ್ಸು ಕೊಡಲು ಯತ್ನಿಸಿದ ನನ್ನ ಕೈಗೇ ಮರಳಿ ತುರುಕಿದ್ದರು. ನಾನು ಕಾರಿನಲ್ಲಿಯೇ ಅದನ್ನು ತೆಗೆದು ನೋಡಿದಾಗ ಅದರಲ್ಲಿ ಇಪ್ಪತ್ತು ಸಾವಿರ ರೂಪಾಯಿಗಳಿದ್ದವು.
ಆ ತಾತ್ವಿಕ ಸಾಲುಗಳನ್ನು ಬುದ್ದೇಶ್ವರನ ವನದಲ್ಲಿ ಅಲ್ಲಲ್ಲಿ ಕಲ್ಲಿನ ಮೇಲೆ ಕೆತ್ತಿಸುವೆ ಎನ್ನುತ್ತಿದ್ದರು. ಆದರೆ ಅದು ಈಡೇರಿದಂತೆ ಕಾಣಲಿಲ್ಲ.
*
ಚನ್ನಪಟ್ಟಣದ ಸರ್ಕಾರಿ ಕಾಲೇಜಿನಲ್ಲಿ ಯಾವುದೋ ಕಾರ್ಯಕ್ರಮದಲ್ಲಿ ಪುಟ್ಟಸ್ವಾಮಿ ನನ್ನ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದರು. ಅಲ್ಲಿನ ಸರ್ಕಲ್ ಇನ್ಸ್’ಪೆಕ್ಟರ್ ಮತ್ತು ನಾನು ಮುಖ್ಯ ಅತಿಥಿಗಳು. ಪುಟ್ಟಸ್ವಾಮಿ ಇನ್ಸ್’ಪೆಕ್ಟರಿಗೆ ನನ್ನ ಪರಿಚಯಿಸುವಾಗ, “ನೀವು ಯೂನಿಫಾರಂನಲ್ಲಿ ಅದೇನು ಕೆಲಸ ಮಾಡ್ತೀರೋ ಇಲ್ವೋ. ಇವರು ಯೂನಿಫಾರಂ ಇಲ್ಲದೇ ಅದೇ ಕೆಲಸ ಮಾಡ್ತಾರೆ” ಎಂದರು. ವೇದಿಕೆಯ ಮೇಲೆ ಕುಳಿತಿರುವಾಗ ಇನ್ಸ್’ಪೆಕ್ಟರ್ ನನ್ನ ಕೇಳಿದರು, “ನೀವು ಸಿಓಡಿನಾ?” ಎಂದು. ಪುಟ್ಟಸ್ವಾಮಿ ತಕ್ಷಣ, “ಖಾಸಗಿ ಪತ್ತೇದಾರ. ನಿಮ್ಮದು ನರರದು, ಇವರದು ಸುರರದು” ಎಂದರು. ಆ ಇನ್ಸಪೆಕ್ಟರಿಗೆ ಏನೂ ಅರ್ಥವಾಗಲಿಲ್ಲ. ನಾನು ಮತ್ತು ಪುಟ್ಟಸ್ವಾಮಿ ಪರಸ್ಪರ ನೋಡಿಕೊಂಡು ನಕ್ಕೆವು. ನನ್ನ ವಿವಾದದ ಹಿನ್ನೆಲೆ ಆ ಇನ್ಸ್’ಪೆಕ್ಟರಿಗೆ ತಿಳಿದಿರಲಿಲ್ಲ.
*
ಮಂಡ್ಯದಲ್ಲಿ ಮಾದೇಗೌಡರ ಕಾಲೇಜಿನಲ್ಲಿ ಕಾರ್ಯಕ್ರಮವೊಂದರಲ್ಲಿ ಎಲ್ ಎನ್ ಮುಕುಂದರಾಜ್ ಮತ್ತು ಭೂಹಳ್ಳಿ ಪುಟ್ಟಸ್ವಾಮಿ ಅತಿಥಿಗಳಾಗಿದ್ದರು. ಮುಕುಂದರಾಜ್ ಅವರ ಜೊತೆ ನಾನೂ ಹೋಗಿದ್ದೆ. ಅಲ್ಲಿಂದ ಮುಂದೆ ನಾವು ಗೋರೂರಿಗೆ ಹೋಗುವ ಕಾರ್ಯಕ್ರಮವಿತ್ತು. ಕಾರ್ಯಕ್ರಮದಲ್ಲಿ ರವಿಕಾಂತೇ ಗೌಡರೂ ಇದ್ದರು. ಪುಟ್ಟಸ್ವಾಮಿ ವೇದಿಕೆಯ ಮೇಲೆ ಒಳಗಿನ ಮತ್ತು ಹೊರಗಿನ ಮುಖಗಳು ಎಂದೇನೇನೋ ಕವನ ಓದುವಾಗ ಹೇಳಿದರು. ಕೆಳಗಿಳಿದ ಮೇಲೆ ನಾನು ಹೇಳಿದೆ.
“ನೀವು ಕೊಟ್ಟ ರೂಪಕಗಳು ತುಂಬಾ ಚೆನ್ನಾಗಿದ್ದವು. ಮನುಷ್ಯನ ಮನಸ್ಥಿತಿ ಮತ್ತು ಪರಿಸ್ಥಿತಿಗಳನ್ನು ರೂಪಕದಲ್ಲಿ ಹೇಳಿದಿರಿ” ಎಂದೆ. ಜೋರಾಗಿ ನಕ್ಕ ಪುಟ್ಟಸ್ವಾಮಿ, “ಒಳಗಿನದು ಕಾಚ, ಹೊರಗಿನದು ಪಂಚೆ. ಒಳಗಿನದು ಬ್ರಾ, ಹೊರಗಿನದು ಬ್ಲೌಸು” ಎಂದು, “ಕೈ ತಪ್ಪಿ ಕ್ಯಾನ್ವಾಸ್ ಮೇಲೆ ಪೇಂಟ್ ಚೆಲ್ಲಿ ಸರಬರ ಅಂತ ಅಳಿಸಿಬಿಟ್ಟರೆ, ನೀವು ಅದೊಂದು ನವ್ಯ ಕಲಾಕೃತಿ, ಅಮೂರ್ತ ಚಿತ್ರ ಅಂತ ಗಂಟೆಗಟ್ಟಲೆ ಹೇಳ್ತೀರ” ಎಂದು ಹಾಸ್ಯ ಮಾಡುತ್ತಿದ್ದರು.
*
ಚನ್ನಪಟ್ಟಣದಲ್ಲಿ ಅಬಕಾರಿ ನಿರೀಕ್ಷಕರಾಗಿದ್ದ ನಾರಾಯಣ ತಿರುಮಲಾಪುರ ಮತ್ತು ಭೂಹಳ್ಳಿ ಪುಟ್ಟಸ್ವಾಮಿ ಅನೇಕಬಾರಿ ಚನ್ನಪಟ್ಟಣದ ಮೇಲೆ ಹಾದುಹೋಗುವಾಗ ಅನೇಕ ಬಾರಿ ನಿಂತು ಕಂಡೇ ಹೋಗುತ್ತಿದ್ದೆ. ಪ್ರತಿಸಲ ಸಿಕ್ಕಾಗಲೂ ಏನೇನೋ ಮಾತುಕತೆ, ಹರಟೆ, ನಗು ಇದ್ದೇ ಇರುತ್ತಿತ್ತು. ಯಾವಾಗಲೂ ಮನೆಗೆ ಹೋಗಿರಲಿಲ್ಲ. ಅವರು ನಮ್ಮನ್ನು ಯಾವುದಾದರೂ ಹೋಟೆಲ್ಲಿಗೇ ಕರೆದುಕೊಂಡು ಹೋಗುತ್ತಿದ್ದರು. ಅವರ ಕುಟುಂಬದ ಬಗ್ಗೆಯಾಗಲಿ ಅಥವಾ ವ್ಯಕ್ತಿಗತವಾದ ಭಾವನೆಗಳ ಬಗ್ಗೆಯಾಗಲಿ ಯಾವತ್ತೂ ನನ್ನ ಬಳಿ ಹೇಳಿಕೊಂಡಿರಲಿಲ್ಲ. ಆದರೆ ಒಂದಿಷ್ಟು ಅವರಿವರಿಂದ ತಿಳಿದಿದ್ದೆ. ಹಾಗಾಗಿ ಏನನ್ನೂ ಕೆದಕದೇ ಇರುವಷ್ಟು ಹೊತ್ತು ಖುಷಿಖುಷಿಯಾಗಿ ಅವರೊಂದಿಗೆ ಇರುತ್ತಿದ್ದೆ.
ಗಂಗಾ ಜೊತೆಗೂ ಕೂಡಾ ತಮ್ಮ ಮನೆಯ ಹೆಣ್ಣುಮಗಳ ಜೊತೆ ಮಾತಾಡುವಂತೆ ಬಹಳ ಆಪ್ತವಾಗಿಯೂ, ಸಲುಗೆಯಿಂದಲೂ, ಹಾಸ್ಯ ಮಾಡುತ್ತಾ ಮಾತಾಡುತ್ತಿದ್ದರು. ಮೈಸೂರಿಗೆ ಹೋಗುವಾಗ ಚನ್ನಪಟ್ಟಣ ಹಾದು ಹೋಗುವಾಗೆಲ್ಲಾ ಫೋನಾಯಿಸಿ ಅಲ್ಲೇ ಸಿಗುವಂತಿದ್ದರೆ ನಿಂತು ತಿಂಡಿ ಕಾಫಿ ಮಾಡಿಕೊಂಡೇ ಹೋಗುತ್ತಿದ್ದದ್ದು. ಅದೊಂದು ಸಂಪ್ರದಾಯವಾಗಿತ್ತು. ಗೌರಿಬಿದನೂರಿಗೆ ಬಂದಾಗಿಂದ ನಾವು ಒಬ್ಬರಿಗೊಬ್ಬರು ನೋಡಲಾಗಲಿಲ್ಲ.
ಅವರ ಅವಸಾನ ಮತ್ತು ಅಂತ್ಯಕ್ರಿಯೆಯ ಸಮಯದಲ್ಲಿ ನಾನೊಂದು ಕಾರ್ಯಕ್ರಮ ನಿಯೋಜನೆ ಮಾಡುತ್ತಿದ್ದು ಇಡೀ ಜವಾಬ್ದಾರಿ ನನ್ನ ಹೆಗಲ ಮೇಲಿದ್ದು, ನನಗೆ ಹೋಗಲಾಗಲೇ ಇಲ್ಲ. ಕೊನೆಯ ಮುಖ ಸಿಗಲಿಲ್ಲ. ಅದೊಂದು ಕೊರಗಾಗಿ ಉಳಿದು ಬಿಟ್ಟಿತು.
– ಯೋಗೇಶ್ ಮಾಸ್ಟರ್, ಹಿರಿಯ ರಂಗಕರ್ಮಿ




