ಬೆಂಗಳೂರು: ಕೆಲವು ಪ್ರಯೋಗಗಳು ಮ್ಯೂಸಿಯಂ ಮಾದರಿಯಲ್ಲಿರುತ್ತವೆ. ಪ್ರಾದೇಶಿಕತೆ ತೋರಿಸುತ್ತೇವೆಂದು ಹೇಳಿ ಪ್ರಜ್ಞಾಪೂರ್ವಕವಾಗಿ ಕೆಲವರು ಹಳ್ಳಿ ಭಾಷೆಯನ್ನು ಬಳಸುವಂತಹ ಕವಿಗಳು, ಕಾದಂಬರಿಕಾರರು ನಮ್ಮಲ್ಲಿದ್ದಾರೆ ಎಂದು ಹಿರಿಯ ಸಾಹಿತಿ, ನಿರ್ದೇಶಕ, ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ನಗರದ ಜ್ಞಾನಭಾರತಿ ಆವರಣದ ವೆಂಕಟಗಿರಿಗೌಡ ಸ್ಮಾರಕ ಸಭಾಂಗಣದಲ್ಲಿ ಸಂಸ ಥಿಯೇಟರ್ ಬೆಂಗಳೂರು, ಜೋಳಿಗೆ ಪ್ರಕಾಶನ ಚಾಮರಾಜನಗರ, ರಾಮನಗರ ಸ್ನಾತಕೋತ್ತರ ಕೇಂದ್ರ ಬೆಂಗಳೂರು ವಿಶ್ವವಿದ್ಯಾಲಯ ಆಯೋಜಿಸಿದ್ದ ಹನೂರು ಚನ್ನಪ್ಪ ಅವರ ‘ಕಬ್ಬಿಣದ ಕುದುರೆಗಳು’ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹನೂರು ಚನ್ನಪ್ಪ ರಚಿಸಿರುವ ‘ಕಬ್ಬಿಣದ ಕುದುರೆಗಳು’ ಕಾದಂಬರಿಯು ಭಾಷಾ ವಿಜ್ಞಾನ ಮತ್ತು ಸಾಮಾಜಿಕ ನೆಲೆಯ ದೃಷ್ಟಿಯಿಂದ ಅಧ್ಯಯನಾಸಕ್ತರಿಗೆ ಪಠ್ಯವಾಗುವ ಪುಸ್ತಕವಾಗಿದೆ ಎಂದರು.
ಕನ್ನಡ ಕಥನ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯೋಗಗಳ ಒಂದು ಮಾದರಿಯಾಗಿ ಕೃತಿಯನ್ನು ನೋಡಬೇಕಾಗುತ್ತದೆ. ಕಾದಂಬರಿ ಕ್ಷೇತ್ರ ವೈವಿಧ್ಯಮಯವಾದದ್ದು ಎಂದರು.
ಅಭಿವ್ಯಕ್ತಿಯ ವಿನ್ಯಾಸದಲ್ಲಿ ನಿರೂಪಣೆ ತಂತ್ರ ಮತ್ತು ಭಾಷಾ ವೈವಿಧ್ಯತೆ ಸೇರಿರುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡ ಕಾದಂಬರಿ ಪ್ರಪಂಚ ಎಲ್ಲ ರೀತಿಯ ಮಾದರಿಗಳನ್ನು ತನ್ನಲ್ಲಿ ಅಂತರ್ಗತ ಮಾಡಿಕೊಂಡು ವಿಕಾಸಹೊಂದಿದ, ಬೆಳೆದಂತ, ಕೆಲವೊಮ್ಮೆ ಸ್ಥಿತ್ಯಂತರಕ್ಕೆ ಕಾರಣವಾದಂತ ಕ್ಷೇತ್ರವಾಗಿದೆ ಎಂದು ವಿಶ್ಲೇಷಿಸಿದರು.
ಎಲ್ಲಿ ಬದುಕು ಸ್ಥಗಿತವಾಗಿರುವುದನ್ನು ಹೇಳುತ್ತದೋ ಅಂತಹ ಕೃತಿಗಳು ಮ್ಯೂಸಿಯಂ ಮಾದರಿಯಲ್ಲಿರುತ್ತದೆ. ಎಲ್ಲಿ ಬದುಕಿನ ಚಲನಶೀಲತೆಯನ್ನು ಗ್ರಹಿಸಿ, ಆ ಬುದಕಿನ ಚಲನಶೀಲತೆಯನ್ನು ತನ್ನ ಆತ್ಮಶಕ್ತಿಯಾಗಿ ಪಡೆದುಕೊಂಡಿರುತ್ತದೊ, ಅಂತಹ ಕಾದಂಬರಿಗಳು ಪ್ರಯೋಗಗಳಾಗಿ ಮಾತ್ರ ಉಳಿಯುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಯಾವಾಗ ಶಕ್ತಿ ರಾಜಕಾರಣ ಸಾಹಿತ್ಯ ಕ್ಷೇತ್ರದ ವಿಮರ್ಶಾ ಮಾನದಂಡಗಳಾಗಿ ರೂಪುಗೊಳ್ಳುತ್ತದೊ ಅಂತಹ ಸಂದರ್ಭದಲ್ಲಿ ನಿಜವಾದ ಸಾಹಿತ್ಯ ಕೃತಿಗಳ ಬಗ್ಗೆ ನಡೆಯಬೇಕಾದ ಚರ್ಚೆ ಅದೆಲ್ಲವೂ ನಿರ್ಲಕ್ಷಕ್ಕೆ ಒಳಗಾಗುತ್ತದೆ ಎಂದರು.
ಪ್ರಯೋಗಗಳೇ ಪರಂಪರೆಯಾದಾಗ ಅದಕ್ಕೆ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಗಟ್ಟಿಯಾದ ನೆಲೆಯಿರುತ್ತದೆ. ಪ್ರಯೋಗ ಪ್ರಯೋಗಕ್ಕಷ್ಟೇ ಸೀಮಿತವಾದರೆ, ಅದು ತಾತ್ಕಾಲಿಕವಾಗಿರುತ್ತದೆ. ಆದರೆ ಅದಕ್ಕೆ ನಿರಂತರತೆ ಇರುವುದಿಲ್ಲ. ಆದರೆ ನಿಜವಾದ ಪ್ರಯೋಗಗಳು ಒಂದು ಪರಂಪರೆಯಾಗುವ ಶಕ್ತಿಯನ್ನು ಪಡೆದುಕೊಳ್ಳಬೇಕಾಗಿರುತ್ತದೆ. ಕನ್ನಡ ಕಾದಂಬರಿ ಕ್ಷೇತ್ರ ಎಷ್ಟು ಪ್ರಯೋಗ ಶೀಲವಾಗಿದೆ ಎಂದರೆ ಸರಳತೆಯಿಂದಲೇ ಸಂಕೀರ್ಣ ವಿಷಯಗಳನ್ನು ಹೇಳಿದ ಕಾದಂಬರಿಗಳು ನಮ್ಮಲ್ಲಿ ಇದ್ದಾವೆ ಎಂದರು.
ಚೆನ್ನಣ್ಣ ವಾಲೀಕಾರ ಅವರ ಬೆಳ್ಯ, ದೇವನೂರ ಮಹಾದೇವ ಅವರ ಕುಸುಮಬಾಲೆ ಕಾದಂಬರಿಗಳೊಂದಿಗೆ ಹನೂರು ಚೆನ್ನಪ್ಪ ಅವರ ಕಬ್ಬಿಣದ ಕುದುರೆಗಳು ಕಾದಂಬರಿಯನ್ನು ತೌಲನಿಕವಾಗಿ ವಿಶ್ಲೇಷಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಕೆ.ಎ.ದಯಾನಂದ, ಸ್ಥಳೀಯ ಭಾಷೆಯಲ್ಲಿ ರಚಿಸಲಾಗಿರುವ ಕೃತಿ ಕಬ್ಬಿಣದ ಕುದುರೆಗಳು ಮಹತ್ವದ ವಿಷಯಗಳನ್ನು ಒಳಗೊಂಡ ಮಹತ್ವದ ಕೃತಿ ಎಂದರು.
ಅಂಕಣಕಾರ ರಘುನಾಥ್ ಚ.ಹ., ಮಾತನಾಡಿ, ಪ್ರಾದೇಶಿಕ ಭಾಷೆಯಲ್ಲಿ ರಚಿಸಲಾಗಿರುವ ಕೃತಿಗಳು ಎಲ್ಲಾ ವಲಯಗಳಿಗೂ ವಿಸ್ತರಿಸುವ ಸವಾಲುಗಳನ್ನು ಒಳಗೊಂಡಿವೆ. ಈ ಹಿನ್ನೆಲೆಯಲ್ಲಿ ಕೃತಿ ರಚನಕಾರರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಸಾಹಿತ್ಯ ಅಕಾಡಮಿ ಅಧ್ಯಕ್ಷ ಪ್ರೊ.ಎಲ್.ಎನ್.ಮುಕುಂದರಾಜ್ ಮಾತನಾಡಿ, ದೇವನೂರು ಮಹಾದೇವ ಅವರ ಕುಸುಮಬಾಲೆ ಕಾದಂಬರಿಯನ್ನು ಕೇಳುವುದಕ್ಕೆ ಹಣ ಕೊಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಇಂಥ ಪರಿಸ್ಥಿತಿಯನ್ನು ನಿರ್ಮಿಸಿದವರು ಪ್ರೊ.ಕಿ.ರಂ.ನಾಗರಾಜ ಎಂದರು.
ಸಂವಿಧಾನ ಬಂದಿರುವ ಕಾರಣದಿಂದಾಗಿ ನಾನು ಕೆಲಸ ತೆಗೆದುಕೊಂಡಿದ್ದೇನೆ. ಇಲ್ಲವಾಗಿದ್ದಲ್ಲಿ ನಾನು ಯಾವುದೋ ಹೊಲದಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಇವತ್ತು ಸಂವಿಧಾನದಿಂದ ಲಾಭ ಪಡೆದ ಸಮುದಾಯದವರು ಸಂವಿಧಾನ ವಿರೋಧಿ ಶಕ್ತಿಗಳ ಜೊತೆಗೆ ಗುರುತಿಸಿಕೊಳ್ಳುವ ದೊಡ್ಡ ತಪ್ಪು ಮಾಡುತ್ತಿದ್ದಾರೆ. ಇದರಿಂದ ಎಲ್ಲರೂ ಹೊರಬರಬೇಕು ಎಂದು ಕರೆ ನೀಡಿದರು.
ಕೃತಿಕಾರ ಹನೂರು ಚನ್ನಪ್ಪ, ಜೋಳಿಗೆ ಪ್ರಕಾಶನದ ಮಂಜು ಕೋಡಿಉಗುನೆ ಸ್ವಾಗತಿಸಿದರು. ಸಂಶೋಧಕ ಡಾ. ಪ್ರದೀಪ್ ಮಾಲ್ಗುಡಿ ಕಾರ್ಯಕ್ರಮದ ನಿರೂಪಣೆಯನ್ನು ನಿರ್ವಹಣೆ ಮಾಡಿದರು.





