ಅನುದಾನ ಬಿಡಗಡೆಗೆ ಪತ್ರಮುಖೇನ ಒತ್ತಾಯ
ಬೆಂಗಳೂರು: ಕನ್ನಡ ವಿಶ್ವವಿದ್ಯಾಲಯದ ವಿವಾದಿತ ಸಮಸ್ಯೆಗಳನ್ನು ಪರಿಹರಿಸಿ, ಕೂಡಲೇ ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕು ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಕನ್ನಡ ವಿಶ್ವವಿದ್ಯಾಲಯ ನೇಮಕಾತಿ ಸೇರಿದಂತೆ ಹಲವು ವಿಷಯಗಳ ಕುರಿತು ವಿವಾದಗಳು ಎದ್ದಿದ್ದವು. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಅವರಿಗೆ ಬಹಿರಂಗ ಪತ್ರ ಬರೆದಿರುವ ಬರಗೂರು ರಾಮಚಂದ್ರಪ್ಪ, ಇತ್ತೀಚಿನ ದಿನಗಳಲ್ಲಿ ಕನ್ನಡ ವಿಶ್ವವಿದ್ಯಾಲಯವು ವಿವಾದಗಳಿಂದ ಹೆಚ್ಚು ಸುದ್ದಿಯಾಗುತ್ತಿದೆ. ಇದು ಕನ್ನಡ ಸಾಂಸ್ಕೃತಿಕ ಲೋಕವು ತಲೆತಗ್ಗಿಸುವಂತೆ ಮಾಡುತ್ತಿದೆ. ವೈಯಕ್ತಿಕ ಮತ್ತು ಸಾಂಸ್ಥಿಕ ವಿವಾದಗಳು ಒಂದು ಕಡೆಗಾದರೆ, ಬಹುಮುಖ್ಯವಾಗಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನದ ಕೊರತೆಯುಂಟಾಗಿ ಬೋಧಕರು, ಬೋಧಕೇತರರು, ಸಂಶೋಧನಾ ವಿದ್ಯಾರ್ಥಿಗಳು ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದಿದ್ದಾರೆ.
ಬೇರೆ ಸಾಮಾನ್ಯ ವಿಶ್ವವಿದ್ಯಾಲಯಗಳಿಗೆ ವಿದ್ಯಾರ್ಥಿಗಳ ಪ್ರವೇಶ ಶುಲ್ಕದಿಂದ ಸಾಕಷ್ಟು ಆರ್ಥಿಕ ಬಲ ಬರುತ್ತದೆ. ಕನ್ನಡ ವಿಶ್ವವಿದ್ಯಾಲಯವು ಪ್ರಧಾನವಾಗಿ ಸಂಶೋಧನಾ ವಿಶ್ವವಿದ್ಯಾಲಯವಾದ್ದರಿಂದ ಸರ್ಕಾರವು ನೀಡುವ ಅನುದಾನವನ್ನೇ ಅವಲಂಬಿಸಬೇಕಾಗುತ್ತದೆ. ಈ ಅನುದಾನವು ಪೂರ್ಣ ಪ್ರಮಾಣದಲ್ಲಿ ವಿಶ್ವವಿದ್ಯಾಲಯಕ್ಕೆ ಲಭ್ಯವಾಗಿಲ್ಲವೆಂದು ಹೇಳಲಾಗಿದ್ದು ಸಂಶೋಧನಾ ವಿದ್ಯಾರ್ಥಿಗಳಿಗೆ 36 ತಿಂಗಳಿಂದ ಶಿಷ್ಯವೇತನ ನೀಡಿಲ್ಲವೆಂದು ತಿಳಿದುಬಂದಿದೆ. ಜೊತೆಗೆ ಬೋಧಕ ಮತ್ತು ಬೋಧಕೇತರರಿಗೂ ಕೆಲವು ತಿಂಗಳ ಸಂಬಳ ನೀಡಿಲ್ಲವೆಂದು ಹೇಳಲಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕನ್ನಡದ ಮೂಲಕ ಸ್ಥಳೀಯ ಹಾಗೂ ಜಾಗತಿಕ ಜ್ಞಾನವನ್ನು ನೀಡುವ ಮಹದೋದ್ದೇಶದಿಂದ ಆರಂಭವಾದ ಕನ್ನಡ ವಿಶ್ವವಿದ್ಯಾಲಯಕ್ಕೆ ಇಂಥ ಆರ್ಥಿಕ ದುಃಸ್ಥಿತಿ ಬರಬಾರದು. ಇದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿ ಕೂಡಲೇ ಅಗತ್ಯವಾದ ಪೂರ್ಣ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಪೂರ್ವಕವಾಗಿ ವಿನಂತಿಸುತ್ತೇನೆ. ಈ ಕುರಿತು ಕೂಡಲೇ ಕ್ರಮಕೈಗೊಳ್ಳದಿದ್ದರೆ ಸರ್ಕಾರದ ಕನ್ನಡಪರ ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತದೆ ಮತ್ತು ಪ್ರಶ್ನಾರ್ಹವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಅನುದಾನ ಬಿಡುಗಡೆ ಮಾಡುವುದರ ಜೊತೆಗೆ, ನಿತ್ಯ ವಿವಾದದಿಂದ ಕೆಟ್ಟ ಹೆಸರಿಗೆ ಕಾರಣವಾಗುತ್ತಿರುವ ಕನ್ನಡ ವಿಶ್ವವಿದ್ಯಾಲಯದ ಘನತೆಯನ್ನು ಕಾಪಾಡುವ ಸಲುವಾಗಿ ಸೂಕ್ತ ಸಮಿತಿಯನ್ನು ನೇಮಿಸಿ ವಿವಾದಿತ ವಿದ್ಯಮಾನಗಳನ್ನು ಪರಿಶೀಲಿಸಿ ಪರಿಹಾರ ಸೂಚಿಸಲು ಕ್ರಮಕೈಗೊಳ್ಳಬೇಕೆಂದು ಕಳಕಳಿಯಿಂದ ವಿನಂತಿಸುತ್ತೇನೆ ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.




