ನೂತನ ಸಂಸತ್ ಭವನದ ಪ್ರಥಮ ದಿನದ ಕಲಾಪದ ವೇಳೆಯಲ್ಲಿ ರಾಷ್ಟ್ರಪತಿಯವರು ಇರಬೇಕಾಗಿತ್ತು
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿ.ಜೆ.ಪಿ.ಯ ನಾಯಕರುಗಳಿಗೆ ದಲಿತರು ಮತ್ತು ಮಹಿಳೆಯರ ಮೇಲೆ ಇರುವಂತಹ ಪ್ರೀತಿಯಲ್ಲವೂ ಕೇವಲ ತೋರಿಕೆಯದು ಮತ್ತು ಮತಗಳಿಕೆಯ ಉದ್ದೇಶದಿಂದ ಮಾತ್ರವೇ ಆಗಿರುತ್ತದೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿದೆ. ಈ ಹಿಂದೆ ರಾಷ್ಟ್ರಪತಿಗಳಾಗಿದ್ದ ರಾಮನಾಥ ಕೋವಿಂದ್ ಅವರನ್ನು ನೂತನ ಸಂಸತ್ ಭವನದ ಶಂಕುಸ್ಥಾಪನೆಯ ಸಮಾರಂಭಕ್ಕೂ ಮತ್ತು ರಾಮಮಂದಿರದ ಶಿಲಾನ್ಯಾಸದ ಸಮಾರಂಭಕ್ಕೂ ಆಹ್ವಾನಿಸಲಿಲ್ಲ.
ದೇಶದ ಸಂವಿಧಾನದ ದೇಗುಲವಾಗಿರುವ ಸಂಸತ್ ಭವನದ ಶಂಕುಸ್ಥಾಪನೆ ದೇಶದ ಪ್ರಥಮ ಪ್ರಜೆಗಳಾದ ಮತ್ತು ಸಂವಿಧಾನದ ಅಧಿಪತಿಗಳಾದಂತಹ ರಾಷ್ಟ್ರಪತಿಳಿಂದಲೇ ಆಗಬೇಕಿತ್ತು. ತದನಂತರದಲ್ಲಿ ನೂತನ ಸಂಸತ್ ಭವನದ ಉದ್ಘಾಟನೆಯನ್ನೂ ಸಹ ರಾಷ್ಟ್ರಪತಿಗಳಾಗಿರುವ ದೌಪದಿ ಮುರ್ಮು ಅವರನ್ನು ಆಹ್ವಾನಿಸದೆ ನೆರವೇರಿಸಿದರು.
ಈಗ ನೂತನ ಸಂಸತ್ ಭವನದಲ್ಲಿ ರಾಷ್ಟ್ರಪತಿಗಳಿಂದ ಜಂಟಿ ಅಧಿವೇಶನದ ಮಾತುಗಳನ್ನಾಡಿಸಿ ಅವರ ಸಮ್ಮುಖದಲ್ಲಿಯೇ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಬೇಕಿತ್ತು. ನೂತನವಾದ ಸಂಸತ್ ಭವನದ ಪ್ರಥಮ ದಿನದ ಕಲಾಪದಲ್ಲಿಯೇ ರಾಷ್ಟ್ರಪತಿಯವರನ್ನು ಆಹ್ವಾನಿಸದಿರುವುದು ಯಾವ ಕಾರಣಕೋ ತಿಳಿಯುತ್ತಿಲ್ಲ.
ಹಿಂದಿನ ರಾಷ್ಟ್ರಪತಿಗಳು ಮತ್ತು ಹಾಲಿ ರಾಷ್ಟ್ರಪತಿಗಳು ಶೋಷಿತ ಸಮಾಜಕ್ಕೆ ಸೇರಿದವರೆಂಬ ಕಾರಣವಿರಬಹುದೇನೋ. ದೇಶದ ಚಲನಚಿತ್ರ ನಟ, ನಟಿಯರು ಕಲಾಪದಲ್ಲಿ ಭಾಗವಹಿಸುವುದಾದರೆ ರಾಷ್ಟ್ರಪತಿಯವನರನ್ನೇಕೆ ಆಹ್ವಾನಿಸಲಿಲ್ಲ ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.
ಒಟ್ಟಾರೆಯಾಗಿ ಕೇಂದ್ರದ ಬಿ.ಜೆ.ಪಿ. ನಾಯಕರಿಗೆ ಮಾತಿಗೂ ಮತ್ತು ಕೃತಿಗೂ ಇರುವಂತಹ ಅಂತರವನ್ನು ಸೂಚಿಸುತ್ತದೆ. 2029ರ ನಂತರ ಮಹಿಳಾ ಮಸೂದೆ ಅನುಷ್ಠಾನವಾಗುವುದಾದರೆ ಈಗಲೇ ಇದರ ಅನುಮೋದನೆ ಅಗತ್ಯವಿರಲಿಲ್ಲ. ನಿಜಕ್ಕೂ ಮಹಿಳಾ ಮೀಸಲಾತಿಯ ಬಗ್ಗೆ ನಿಜವಾದ ಕಾಳಜಿ ಇದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತು ಸದ್ಯದಲ್ಲಿಯೇ ಬರುವ ವಿಧಾನಸಭಾ ಚುನಾವಣೆಗಳಲ್ಲಿ ಹಾಲಿ ಇರುವ ಸ್ಥಾನಗಳಿಗೆ ಶೇಕಡಾ 33ರ ಮೀಸಲಾತಿಯನ್ನು ನಿಗದಿಪಡಿಸಲು ಇರುವಂತಹ ತೊಂದರೆಯಾದರೂ ಏನಿದೇ ಎನ್ನುವುದು ಅರ್ಥವಾಗುತ್ತಿಲ್ಲ.
– ಕೆ.ಎಸ್. ನಾಗರಾಜ್, ಬೆಂಗಳೂರು




