ವಾಜಪೇಯಿರವರು ಪಾರ್ಲಿಮೆಂಟ್ ಮೇಲೆ ಉಗ್ರರ ದಾಳಿಯ ಸಂಚು ನಡೆದ ಸಂದರ್ಭದಲ್ಲಿ ಪ್ರಧಾನಮಂತ್ರಿಗಳಾಗಿದ್ದ ಅವರು ಕೂಡಲೇ ಅಂದಿನ ವಿರೋಧ ಪಕ್ಷದ ನಾಯಕಿ ಸೋನಿಯಾ ಗಾಂಧಿಯವರಿಗೆ ಮೊದಲುಗೊಂಡು ಎಲ್ಲಾ ನಾಯಕರುಗಳಿಗೆ ದೂರವಾಣಿಯನ್ನು ಮಾಡಿ ಅವರ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಘಟನೆಯ ಬಗ್ಗೆ ಬಹಳ ನೊಂದುಕೊಂಡರು. ಅವರ ದೊಡ್ಡತನಕ್ಕೆ ಇಡೀ ವಿರೋಧಪಕ್ಷ ಈ ಸಂದರ್ಭದಲ್ಲಿ ಸರ್ಕಾರದ ಬೆಂಬಲಕ್ಕೆ ನಿಂತು ದೇಶದ ಹಿತದೃಷ್ಟಿಯಿಂದ ಒಗ್ಗಟ್ಟನ್ನು ಪ್ರದರ್ಶಿಸಿದರು.
ಆದರೆ ಈ ರೀತಿಯ ನಡವಳಿಕೆ ಪ್ರಧಾನಮಂತ್ರಿ ಮೋದಿರವರಿಂದ ಮತ್ತು ಗೃಹ ಸಚಿವ ಅಮಿತ್ ಶಾ ರವರಿಂದ ಕಳೆದ ಹತ್ತು ವರ್ಷದ ಅವಧಿಯಲ್ಲಿ ನಿರೀಕ್ಷಿಸಿಲು ಸಾಧ್ಯವಾಗಿಲ್ಲ. ಪುಲ್ವಾಮಾ ದಾಳಿಯಲ್ಲಿ ನಮ್ಮ ದೇಶದ ಸೈನಿಕರು ತಮ್ಮ ಪ್ರಾಣವನ್ನು ಕಳೆದುಕೊಂಡ ಸಂದರ್ಭದಲ್ಲೂ ಸಹ ದೇಶದ ಜನರ ಕ್ಷಮೆಯನ್ನು ಕೇಳಲಿಲ್ಲ ಕಡೆಯಪಕ್ಷ ವಿಷಾದವನ್ನು ವ್ಯಕ್ತಪಡಿಸಲಿಲ್ಲ.
ಈಗ ಪಾರ್ಲಿಮೆಂಟ್ ಸಂಭಾಂಗಣಕ್ಕೆ ಪ್ರೇಕ್ಷಕರ ಗ್ಯಾಲರಿಯಿಂದ ಹಾರಿಬಂದು ಆತಂಕವನ್ನು ಸೃಷ್ಟಿಸಿದ ಘಟನೆಯೂ ನಡೆದಿದೆ. ಈ ಸಂದರ್ಭದಲ್ಲಾದರೂ ಪ್ರಧಾನಮಮಂತ್ರಿಗಳು ಮತ್ತು ಗೃಹ ಸಚಿವರು ಕೂಡಲೇ ಪಾರ್ಲಿಮೆಂಟ್ ಗೆ ಬಂದು ವಿಶ್ವಾಸವನ್ನು ತುಂಬುವ ಮಾತುಗಳನ್ನಾಡಿ ದೇಶದ ಜನರ ಮುಂದೆ ಭದ್ರತೆಯ ಲೋಪದ ಕಾರಣಕ್ಕಾಗಿ ಕ್ಷಮೆಯನ್ನು ಕೇಳಬೇಕಿತ್ತು. ಈ ಕೆಲಸವನ್ನು ಮಾಡಲಿಲ್ಲ.
ಕಡೆಯಪಕ್ಷ ಪತ್ರಿಕಾ ಹೇಳಿಕೆಯನ್ನಾದರೂ ಬಿಡುಗಡೆ ಮಾಡಿ ಕ್ಷಮೆಯನ್ನು ಕೇಳಬೇಕಾಗಿತ್ತು. ಏಕೆಂದರೆ ಪತ್ರಿಕಾಗೋಷ್ಠಿ ಮಾಡಿ ಇವರಿಗೆ ಅಭ್ಯಾಸವೇ ಇಲ್ಲ. ಇಷ್ಟೆಲ್ಲ ಘಟನೆಗಳು ನಡೆದ ನಂತರವೂ ಇನ್ನು ಮಾತನಾಡದೇ ಮೌನವಾಗಿರುವುದು ಅರ್ಥವಾಗದ ಸಂಗತಿಯಾಗಿದೆ. ಯಾವುದೋ ದೇಶದಲ್ಲಿ, ಯಾವುದೋ ಘಟನೆಗಳು ನಡೆದರೆ ಕೂಡಲೇ ಪ್ರತಿಕ್ರಿಯಿಸುವ ನಮ್ಮ ಪ್ರಧಾನಿಗಳಿಗೆ ನಮ್ಮ ಪಾರ್ಲಿಮೆಂಟ್‌ನಲ್ಲಿ ನಡೆದ ನಾಚಿಕೆಗೇಡಿನ ಸಂಗತಿಯ ಬಗ್ಗೆ ಪ್ರತಿಕ್ರಿಯಿಸಲು ಸಮಯವೇ ಸಿಗುತ್ತಿಲ್ಲ. ಹೀಗೆ ಇವರು ಅನೇಕ ಗಂಭಿರವಾದ ವಿಚಾರದಲ್ಲಿ ಮತ್ತು ತಮ್ಮ ಸರ್ಕಾರದ ನೀತಿ, ನಿಲುವುಗಳಿಂದಾಗಿ ತೊಂದರೆಗಳಾದಾಗ ಪ್ರತಿಕ್ರಿಯಿಸುವುದೇ ಇಲ್ಲ.
ಇವರಿಗೆ ಮಣಿಪುರದ ವಿಚಾರದಲ್ಲಿ ಮಾತನಾಡಲು ಸಮಯವಿರುವುದಿಲ್ಲ. ಆದರೆ ಕರ್ನಾಟಕ ರಾಜ್ಯದಲ್ಲಿ ಬೆಳಗಾವಿಯಲ್ಲಿ ರಾಕ್ಷಸ ಮನಸ್ಸಿನ ಕ್ರೂರಿಗಳಿಂದ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿದ ಘಟನೆಯ ಬಗ್ಗೆ ಅಧ್ಯಕ್ಷರು ಮತ್ತು ನಾಯಕರುಗಳು ಪ್ರತಿಕ್ರಿಯಿಸುತ್ತಾರೆ. ಕಾರಣ ಇಲ್ಲಿ ಕಾಂಗ್ರೆಸ್ ಸರ್ಕಾರವಿರುವುದರಿಂದ ಇದನ್ನು ರಾಜಕಾರಣದ ವಿಚಾರವನ್ನಾಗಿಸಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ಅರ್ಥವಾಗುವ ಸಂಗತಿಯಾಗಿದೆ.
ಇದೇ ರೀತಿಯಲ್ಲಿ ದೆಹಲಿಯಲ್ಲಿ ಸುಮಾರು 700ಕ್ಕೂ ಹೆಚ್ಚು ರೈತರು ಸತ್ಯಾಗ್ರಹದಲ್ಲಿ ಪ್ರಾಣವನ್ನು ಕಳೆದುಕೊಂಡಾಗಲು ಮಾತನಾಡಲಿಲ್ಲ. ಮಹಿಳಾ ಕುಸ್ತಿಪಟುಗಳ ಮೇಲೆ ತರಬೇತುದಾರರಿಂದ ಮತ್ತು ಬಿಜೆಪಿ ಸಂಸದರು ಆದ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯದ ವಿಚಾರಗಳು ಪ್ರಸ್ತಾಪವಾದರೂ ಮಾತನಾಡುವುದಿಲ್ಲ. ಇವರು ಮಾತನಾಡಬೇಕೆಂದರೆ ಇವರ ತಪ್ಪುಗಳ ಬಗ್ಗೆ ಅಲ್ಲ, ವಿರೋಧಪಕ್ಷದ ಸರ್ಕಾರವಿರುವ ರಾಜ್ಯಗಳಲ್ಲಿ ತಪ್ಪುಗಳಾದರೇ, ಅನಾಹುತಗಳಾದರೇ ಮಾತ್ರ ಇವರ ಧ್ವನಿ ತೆಗೆಯುತ್ತಾರೆ. ಅನ್ಯರ ತಪ್ಪುಗಳ ಬಗ್ಗೆ ಆರ್ಭಟಿಸುವ ಪ್ರಧಾನಿಗಳು ಮತ್ತು ಗೃಹ ಸಚಿವರು, ತಮ್ಮ ಸರ್ಕಾರದ ವೈಫಲ್ಯತೆಯ ಬಗ್ಗೆ ಬಹಿರಂಗವಾಗಿ ಒಪ್ಪಿಕೊಳ್ಳುವ ಹಿರಿತನವನ್ನು ಪ್ರದರ್ಶಿಸುವುದು ಎಂದು?
– ಕೆ.ಎಸ್. ನಾಗರಾಜ್, ಬೆಂಗಳೂರು




