ಕುಂಭಮೇಳದ ಕಾಲ್ತುಳಿತ: ಬಿಜೆಪಿಯ ರಿವ್ಯೂ’ ಮತ್ತುರೆಕಾರ್ಡ್’ ಖಯಾಲಿಗೆ ಬಲಿಯಾದರೇ ಭಕ್ತರು? 

1 year ago

ಈ ಜನರಿಗೆ ಬುದ್ದಿ ಇಲ್ಲವಾ? ಇಲ್ಲದ ದೇವರನ್ನು ಹುಡುಕಿಕೊಂಡು ಹೋಗಿ ಹೀಗೆ ನೂಕುನುಗ್ಗಲಿನಲ್ಲಿ ಸಾಯೋದಾ? ದೇವರು ಇರೋದೇ ನಿಜವಾಗಿದ್ರೆ, ತನ್ನ ಭಕ್ತರನ್ನು ಹೀಗೆ ಸಾಯಲು ಬಿಡ್ತಿದ್ದನಾ? ಕೆಲವರು ಕೇಳ್ತಿರುವ ಈ ಪ್ರಶ್ನೆಗಳಲ್ಲಿ ನಿಜಕ್ಕೂ ಅರ್ಥವಿದೆ. ಕೇಳಲೇಬೇಕಾದ ಪ್ರಶ್ನೆಗಳಿವು; ಎಚ್ಚರಿಸಲೇಬೇಕಾದ ವಿಚಾರಗಳಿವು. ಆದರೆ ಅದಕ್ಕೆ ಇದು ಸಮಯವಲ್ಲ! ಹಸಿದವನ ಮುಂದೆ ಅಧ್ಯಾತ್ಮ ಹೇಗೆ ನಿರರ್ಥಕವೋ, ಸಂತಾಪದ ಮನೆಯಲ್ಲಿ ವಿಚಾರವಾದವೂ ಅಷ್ಟೇ ಅನುಪಯುಕ್ತ. ಆ ಕ್ಷಣಕ್ಕೆ ಬೇಕಾಗಿರೋದು ಸಾಂತ್ವನ, ನೊಂದವರಿಗೆ ಧೈರ್ಯ. ಅವರ ಅವಿವೇಕತನದ ಮಾಪನವಲ್ಲ. ಅದು ನೊಂದವರನ್ನು ಮತ್ತಷ್ಟು ನೋಯಿಸುತ್ತದೆ ಹಾಗೂ ನಮ್ಮಿಂದ, ಅರ್ಥಾತ್ ನಮ್ಮ ವಿಚಾರವಾದಗಳಿಂದಲೇ ವಿಮುಖವಾಗಿಸುವ ಅಪಾಯವೂ ಇರುತ್ತದೆ. ಹೇಳುವವರು ಮತ್ತು ಕೇಳಿಸಿಕೊಳ್ಳುವವರ ನಡುವೆ ವಿಶ್ವಾಸದ ಸೇತು ತುಂಬಾ ಮುಖ್ಯ. ಅದಿಲ್ಲದೆ ಹೋದರೆ ಎಲ್ಲವೂ ನಿರರ್ಥಕ.

ಕಾಲ್ತುಳಿತದ ಸಂಗತಿಗೆ ಬರುವುದಾದರೆ, ಲಕ್ಷಾಂತರ ಭಕ್ತರು ಕಿಕ್ಕಿರಿದು ನೆರೆಯುವ ಕುಂಭಮೇಳ ದಿಢೀರ್‍‌ ಆಯೋಜನೆಯಾದದ್ದೇನಲ್ಲ. ತಯಾರಿಗೆ ಸಾಕಷ್ಟು ಸಮಯವಿತ್ತು. ಇನ್‌ಫ್ಯಾಕ್ಟ್‌, ಧರ್ಮದ ಐಡೆಂಟಿಟಿಯ ಮೇಲೆ ರಾಜಕಾರಣ ಮಾಡುವ ಬಿಜೆಪಿ ಈ ಕುಂಭಮೇಳದ ಯಶಸ್ಸನ್ನು ತನ್ನ ಬತ್ತಳಿಕೆಗೆ ಬರಸೆಳೆದುಕೊಳ್ಳಲು ಸಾಕಷ್ಟು ಕಸರತ್ತು ಮಾಡಿತ್ತು. ಯಾಕೆಂದರೆ ಕೇಂದ್ರದಲ್ಲಿರುವ ಮೋದಿ ಸರ್ಕಾರ ಮಾತ್ರವಲ್ಲದೆ ಉತ್ತರಪ್ರದೇಶದಲ್ಲಿರೋದು ಕೂಡಾ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ.  ಹಾಗಾಗಿ ಕುಂಭಮೇಳದ ಗ್ಯ್ರಾಂಡ್ ಸಕ್ಸಸ್‌ಗೆ ಕಳೆದ ಐದಾರು ತಿಂಗಳಿನಿಂದಲೇ ಭರ್ಜರಿ ತಯಾರಿ ನಡೆದಿತ್ತು. ಒಟ್ಟಿನಲ್ಲಿ ಕೋಟ್ಯಂತರ ಜನ ನೆರೆದ ಕುಂಭಮೇಳವನ್ನು ಯಶಸ್ವಿಯಾಗಿ ಆಯೋಜಿಸಿದ ಕ್ರೆಡಿಟ್ಟಿನೊಂದಿಗೆ ಹಿಂದೂ ಚಾಂಪಿಯನ್‌ ಪಟ್ಟ ಗಟ್ಟಿಮಾಡಿಕೊಳ್ಳುವ ಮತ್ತು ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಕುಸಿದಿರುವ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳುವ ಇರಾದೆ ಬಿಜೆಪಿಯದ್ದಾಗಿತ್ತು.

ಅಷ್ಟಾದರೂ ಈ ಅನಾಹುತ ಸಂಭವಿಸಿದ್ದೇಗೆ? ಈ ಪ್ರಶ್ನೆಗೆ ಮೇಲಿನ ಪ್ಯಾರಾದಲ್ಲಿಯೇ ಉತ್ತರವಿದೆ. ಯೋಗಿ ಆದಿತ್ಯನಾಥರ ಬಿಜೆಪಿ ಸರ್ಕಾರ ಕುಂಭಮೇಳದ ಕಾರ್ಯಕ್ರಮವನ್ನು ಒಂದು ಬೃಹತ್‌ ಧಾರ್ಮಿಕ ಸಮಾಗಮವೆಂದು ಪರಿಗಣಿಸಿದ್ದಿದ್ದರೆ, ತಾನು ಮಾಡಿಕೊಂಡ ಅಷ್ಟು ತಯಾರಿಗಳಲ್ಲಿ ಇಂತಹ ಯಾವ ಅನಾಹುತವೂ ನಡೆಯದಂತೆ ಸಂಭಾಳಿಸಬಹುದಿತ್ತು. ಆದರೆ ಕುಂಭಮೇಳವನ್ನು ತಮ್ಮ ಯಶಸ್ಸಿನ ಪಿ.ಆರ್‍‌. ಮಾಡಿಕೊಳ್ಳಲು ಮುಂದಾದದ್ದೇ ಈ ಅನಾಹುತಕ್ಕೆ ಕಾರಣ.

ಪಿ.ಆರ್‍‌, ಅಂದ್ರೆ ಪ್ರಚಾರದ ದೃಷ್ಟಿಯಲ್ಲಿ ನಿಮಗೆ ಮೈಲೇಜ್‌ ಸಿಗೋದು ಅತಿಹೆಚ್ಚು ಜನರು ಸೇರಿದ ವಿಶ್ವದಾಖಲೆಯಾದಾಗ ಮತ್ತು ಅಲ್ಲಿಗೆ ಹೋಗಿಬಂದವರು ಮೆಚ್ಚುಗೆಯ ರಿವ್ಯೂಗಳನ್ನು ಕೊಟ್ಟಾಗ. ಹೆಚ್ಚು ಜನರು ನೆರೆದಿರೋದನ್ನು ಎಸ್ಟಾಬ್ಲಿಷ್‌ ಮಾಡಲಿಕ್ಕೆ ಸಾಮಾನ್ಯ ಜನರ ಜನಸಂದಣಿ ಕಾಣಬೇಕು. ಆದರೆ ಅನಿಸಿಕೆಯ ವಿಚಾರಕ್ಕೆ ಬಂದಾಗ, ಸಾಮಾನ್ಯ ಜನರ ಅನಿಸಿಕೆಗಳನ್ನು ಪಿ.ಆರ್‍‌. ವಲಯ ಕೇರ್‍‌ ಮಾಡಲ್ಲ. ಗಣ್ಯಾತಿಗಣ್ಯರು, ಸಿನಿಮಾ ನಟನಟಿಯರು, ವಿದೇಶಿ ಆಹ್ವಾನಿತರು, ದೊಡ್ಡದೊಡ್ಡ ಉದ್ಯಮಪತಿಗಳು ಎಂತಹ ಅನುಭವ ಹಂಚಿಕೊಳ್ತಾರೆ ಅನ್ನೋದನ್ನಷ್ಟೆ ಪರಿಗಣಿಸಲಾಗುತ್ತೆ. ಹಾಗಾಗಿ ಯೋಗಿ ಸರ್ಕಾರ ತನ್ನ ತಯಾರಿಯ ಆದ್ಯತೆಗಳನ್ನು ಸ್ಪಷ್ಟವಾಗಿ ವಿಂಗಡಿಸಿಕೊಂಡಿತ್ತು. ಜನಸಾಮಾನ್ಯರ ವಿಭಾಗದಲ್ಲಿ ದಟ್ಟ ಜನಸಂದಣಿ ಕಾಣುವಂತೆಯೂ, ವಿವಿಐಪಿಗಳಿಗೆ ಬಹಳ ಸುಗಮವಾದ ಸೌಲಭ್ಯಗಳು ಲಭಿಸುವಂತೆಯೂ ವ್ಯವಸ್ಥೆಗಳನ್ನು ಅಸಮಾನವಾಗಿ ಹಂಚಿಕೆ ಮಾಡಲಾಗಿತ್ತು.

ಉದಾಹರಣೆಗೆ ನೋಡೋದಾದ್ರೆ, ಕೆಲವೊಂದು ನಿರ್ದಿಷ್ಟ ಘಾಟ್‌ಗಳಲ್ಲಿ ಸ್ನಾನ ಮಾಡುವುದಕ್ಕೋಸ್ಕರ ಗಂಗಾನದಿಯನ್ನು ದಾಟಿಹೋಗಲು 28 ಪೆಂಟೂನ್‌ ಬ್ರಿಡ್ಜ್‌ಗಳನ್ನು, ಅಂದರೆ ತಾತ್ಕಾಲಿಕ ತೇಲುಸೇತುವೆಗಳನ್ನು ನಿರ್ಮಾಣ ಮಾಡಲಾಗಿತ್ತು. ವಾಸ್ತವದಲ್ಲಿ ಇಂತಹ 30 ಸೇತುವೆಗಳನ್ನು ನಿರ್ಮಾಣ ಮಾಡಬೇಕೆಂದು ಅಂದಾಜಿಸಲಾಗಿತ್ತು. ಆದರೆ ನಿಗದಿತ ಸಮಯದಲ್ಲಿ ಯೋಗಿ ಸರ್ಕಾರಕ್ಕೆ ನಿರ್ಮಿಸಲು ಸಾಧ್ಯವಾದದ್ದು 28 ಸೇತುವೆಗಳನ್ನು ಮಾತ್ರ. ಈ ಒಂದೊಂದು ಸೇತುವೆಯೂ ಒಮ್ಮೆಗೆ 5 ಟನ್‌ ತೂಕವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿವೆ. ಹಾಗಾಗಿ ಅಷ್ಟು ಜನಸಂಖ್ಯೆಯನ್ನು ನಿಭಾಯಿಸಲು ಸಾಕಾಗಿದ್ದವು.

ಆದ್ರೆ, ಜನರ ಉಪಯೋಗಕ್ಕೆ ಈ ಪೆಂಟೂನ್‌ ಬ್ರಿಡ್ಜ್‌ಗಳನ್ನು ಹಂಚಿಕೆ ಮಾಡುವಾಗ ಯೋಗಿ ಸರ್ಕಾರ ಎಂಥಾ ಯಡವಟ್ಟು ಮಾಡಿತೆಂದರೆ ಸಾಮಾನ್ಯ ಭಕ್ತರ ಬಳಕೆಗೆಂದು ಅದು ನೀಡಿದ್ದು ಕೇವಲ 1 ಬ್ರಿಡ್ಜ್‌ ಮಾತ್ರ. ಇನ್ನುಳಿದ ಇಪ್ಪತ್ತೇಳು ಸೇತುವೆಗಳನ್ನು ವಿವಿಐಪಿಗಳ ಓಡಾಟಕ್ಕೆ ಮೀಸಲಿಟ್ಟಿತು. ಜನಸಾಮಾನ್ಯರು ಕಿಕ್ಕಿರಿದು, ಸಂಕಷ್ಟ ಅನುಭವಿಸಿ ದಾಖಲೆಯ ಸಂಖ್ಯೆಗೆ ರುಜುವಾತಾಗಬೇಕು; ವಿವಿಐಪಿಗಳು ಸುಖಕರವಾದ ರಿವ್ಯೂ ಕೊಡಬೇಕು. ಅವೆರಡೂ ದಾಖಲೆಗಳನ್ನು ತಮ್ಮ ಜೋಳಿಗೆಗೆ ತುಂಬಿಸಿಕೊಂಡು ಚಾಂಪಿಯನ್‌ಗಳಂತೆ ವಿಜೃಂಭಿಸಬೇಕು. ಈ ಅವ್ಯವಸ್ಥೆಯೇ ಕುಂಭಮೇಳದ ಕಾಲ್ತುಳಿತಕ್ಕೆ ಕಾರಣ.

ದಿ ವೈರ್‍‌ ಪತ್ರಿಕೆ ಪ್ರತ್ಯಕ್ಷದರ್ಶಿ ಹೆಣ್ಣುಮಗಳೊಬ್ಬಳು ಹೀಗೆ ಹೇಳಿಕೆ ನೀಡಿದ್ದಾಳೆ, “ಅವರಿಗೆ ಎಐ ಕ್ಯಾಮೆರಾಗಳಲ್ಲಿ ಜನದಟ್ಟಣೆ ದಾಖಲಾಗುವುದು ಬೇಕಾಗಿತ್ತು. ಆಗಲ್ಲವೇ, ಅವರು 44 ಕೋಟಿ ಜನ ಕುಂಭಮೇಳದಲ್ಲಿ ಭಾಗವಹಿಸಿದ್ದರು ಅಂತ ಫೇಕ್‌ ನಂಬರ್‍‌ಗಳನ್ನು ನೀಡಿ ವಿಜೃಂಭಿಸಲು ಸಾಧ್ಯ. ಅದಕ್ಕಾಗಿ ನಮ್ಮ ಜೀವ ಬಲಿಕೊಡಬೇಕೆ?”  (“They wanted the AI cameras to capture a massive crowd so they could justify the fake numbers – ‘44 crore attendees’ and ‘10 crore for Mauni Amavasya.’ But at what cost?” she fumed.)

ದುರ್ಘಟನೆ ಸಂಭವಿಸಿದ್ದು ಜನವರಿ 29ರ ನಸುಕಿನ ವೇಳೆ. ಆದರೆ ಅದಕ್ಕು ಮೊದಲೇ ಎರಡು-ಮೂರು ದಿನಗಳಿಂದ ಇಲ್ಲಿನ ಭಕ್ತಾದಿಗಳು ವಿವಿಐಪಿ ವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಹೆಚ್ಚು ಜನರಿರುವ ನಮಗೇಕೆ ಒಂದೇ ಸೇತುವೆ? ಕಡಿಮೆ ಸಂಖ್ಯೆ ಮಂತ್ರಿಗಳು, ರಾಜಕಾರಣಿಗಳೇಕೆ ಇಪ್ಪತ್ತೇಳು ಸೇತುವೆ? ನಮಗೂ ಇನ್ನೊಂದಷ್ಟು ಸೇತುವೆ ಬಿಟ್ಟುಕೊಡಿ ಎಂಬುದು ಅವರ ಒತ್ತಾಯವಿತ್ತು. ಆದರೆ ಯೋಗಿ ಸರ್ಕಾರ ಅದಕ್ಕೆ ಕಿವಿಗೊಡಲಿಲ್ಲ. ಮೌನಿ ಅಮವಾಸ್ಯೆಯ ಪುಣ್ಯಸ್ನಾನಕ್ಕೆ ಹಿಂದಿನ ದಿನ ರಾತ್ರಿಯಿಂದಲೇ ಜನಸಾಗರ ಹರಿದುಬಂದಿತ್ತು. ಬೆಳಗಿನ ಜಾವದಲ್ಲಿ ಸ್ನಾನ ಮಾಡಿದರೆ ಸೂಕ್ತ ಎಂಬ ನಂಬಿಕೆಯಲ್ಲಿ ಅವರೆಲ್ಲ, ಆ ಒಂದೇ ಸೇತುವೆಯ ಬಳಿಯಿದ್ದ ರಸ್ತೆಯ ಆಜುಬಾಜಿನಲ್ಲೆ ಮಲಗಿಕೊಂಡಿದ್ದರು. ಆದರೆ, ಮಧ್ಯರಾತ್ರಿ 1.30 ಸುಮಾರಿಗೆ ಮೈಕ್‌ಗಳಲ್ಲಿ “ಮೌನಿ ಅಮಾವಾಸ್ಯೆ ಸ್ನಾನಕ್ಕೆ ಹೋಗುವವರು ಈಗಿಂದಲೇ ಹೋಗಲು ಸೇತುವೆ ಬಳಿ ಬರಬೇಕು” ಎಂದು ಅನೌನ್ಸ್‌ ಮಾಡಲಾಯ್ತು. ಜನಸಾಗರ ಒಮ್ಮೆಲೇ ಆ ಏಕಮಾತ್ರ ಸೇತುವೆಯತ್ತ ನುಗ್ಗಿ ಅಲ್ಲೋಲಕಲ್ಲೋಲವಾಯ್ತು. ಈ ಮೊದಲೇ ಅಲ್ಲಿ ಮಲಗಿದ್ದವರ ಮೇಲೆಲ್ಲ ಜನ ನುಗ್ಗಾಡಲು ಶುರು ಮಾಡಿದರು. ನೋಡನೋಡುತ್ತಿದ್ದಂತೆಯೇ ಮಾರಣಹೋಮ ನಡೆದೇಹೋಯ್ತು. ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎನ್ನುವಂತೆ, ಈಗ ವಿವಿಐಪಿ ಆದ್ಯತೆಯನ್ನು ರದ್ದು ಮಾಡಲಾಗಿದೆ. ಆದರೆ ಹೋದ ಜೀವಗಳು ಮರಳಿ ಬರುವವೇ?

ಈ ಇಡೀ ಅನಾಹುತ ಆಡಳಿತ ವೈಫಲ್ಯದ ಪ್ರತಿಫಲ ಅನ್ನೋದರಲ್ಲಿ ಅನುಮಾನವೇ ಇಲ್ಲ. ಇನ್ನೊಂದಷ್ಟು ಸೇತುವೆಗಳನ್ನು, ರಸ್ತೆಗಳನ್ನು ಸಾಮಾನ್ಯ ಭಕ್ತಾದಿಗಳಿಗೂ ಮುಕ್ತಗೊಳಿಸಿದ್ದರೆ ಈ ಕಾಲ್ತುಳಿತ ಸಂಭವಿಸುತ್ತಿರಲಿಲ್ಲ. ಆದರೆ, ವಿವಿಐಪಿಗಳನ್ನು ಖುಷಿಪಡಿಸಿ, ಅವರ ಸುಖಕರ ರಿವ್ಯೂಗಳನ್ನು ಪಡೆಯಲು; ಜನಸಂದಣಿಯ ಅಗಾಧತೆಯನ್ನು ಎಐ ಕ್ಯಾಮೆರಾಗಳಲ್ಲಿ ದಾಖಲಿಸಿ, ಬಿತ್ತರಿಸಿ `ವಿಶ್ವದಾಖಲೆ’ ಹೆಗಲಿಗೇರಿಸಿಕೊಳ್ಳಲು ಅಲ್ಲಿನ ಸರ್ಕಾರವೇ ನಡೆಸಿದ ಮಾರಣಹೋಮ ಇದು ಎಂದರೂ ತಪ್ಪಲ್ಲ.

ನಿರೀಕ್ಷಿಸಿದಂತೆ, ಈ ಅವ್ಯವಸ್ಥೆಯ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಬಿಜೆಪಿ ಕೀಳುಮಟ್ಟದ ಯತ್ನಕ್ಕೆ ಮುಂದಾಗಿದೆ. ಉತ್ತರಪ್ರದೇಶದ ಸಚಿವ ಸಂಜಯ್‌ ನಿಶಾದ್ ಅವರ “ದೊಡ್ಡ ಕಾರ್ಯಕ್ರಮಗಳಲ್ಲಿ ಇಂಥಾ ಸಣ್ಣಪುಟ್ಟ ಘಟನೆಗಳು ಸಂಭವಿಸುತ್ತವೆ” ಹೇಳಿಕೆಯೇ ಇದಕ್ಕೆ ಸಾಕ್ಷಿ. ಗೆಲುವು ನನ್ನದು, ಸೋಲು ಪರರದು ಎಂಬ ನುಣುಚು ತಂತ್ರದ ಬಿಜೆಪಿಯಿಂದ ಇದಕ್ಕಿಂತಲೂ ಹೊಣೆಗಾರಿಕೆಯನ್ನು ನಿರೀಕ್ಷಿಸಲು ಸಾಧ್ಯವೇ? ಪ್ರಶ್ನೆ ಅದಲ್ಲ; ಒಂದುವೇಳೆ, ಕಾಂಗ್ರೆಸ್‌ ಅಥವಾ ಬೇರಾವುದೇ ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಇಂತದ್ದೊಂದು ದುರಂತ ಸಂಭವಿಸಿದ್ದರೆ ಇಷ್ಟೊತ್ತಿಗೆ ಬಿಜೆಪಿ ಹೇಗೆಲ್ಲಾ ಅಬ್ಬರಿಸುತ್ತಿತ್ತು!

– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು

Leave a Reply