ಹೈದರಾಬಾದ್: ತೆಲಂಗಾಣದಲ್ಲಿ ಸ್ಪಷ್ಟ ಬಹುಮತ ಪಡೆದಿರುವ ಕಾಂಗ್ರೆಸ್ ಎರಡು ದಿನ ಕಳೆದರೂ ಮುಖ್ಯಮಂತ್ರಿ ಆಯ್ಕೆ ಮಾಡುವಲ್ಲಿ ವಿಫಲವಾಗಿದೆ. ಇದುವರೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ. ಸೋಮವಾರ ಸಂಜೆ ರಾಜಭವನದಲ್ಲಿ ಯೋಜಿಸಿದಂತೆ ಪ್ರಮಾಣವಚನ ಸಮಾರಂಭ ನಡೆಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ.
ಮೊದಲಿನ ಚಿಂತನೆಯಂತೆ ರಾಜಭವನದಲ್ಲಿ ಸೋಮವಾರ ಸಂಜೆಯೇ ಪ್ರಮಾಣ ವಚನಕ್ಕೆ ಸಕಲ ಸಿದ್ಧತೆಗಳಾಗಿದ್ದವು. ಕೆಂಪು ಹಾಸು ಹಾಸಲಾಗಿತ್ತು. ಸ್ಥಳದಲ್ಲಿ ಕುರ್ಚಿಗಳನ್ನು ಬಿಳಿ ಬಣ್ಣದಲ್ಲಿ ಸುತ್ತಿಡಲಾಗಿತ್ತು. ಧ್ವನಿ ವ್ಯವಸ್ಥೆ ಮತ್ತು ಉಪಕರಣಗಳನ್ನು ಸಜ್ಜುಗೊಳಿಸಲಾಗಿತ್ತು. ಹೂವುಗಳನ್ನು ಸಹ ತರಲು ಸಿದ್ಧತೆಯಾಗಿತ್ತು. ಆದರೆ ಕಡೆಯ ಕ್ಷಣದಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿಲ್ಲ ಎಂದು ವರದಿಯಾಗಿದೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ಗೆಲುವಿನಲ್ಲಿ ಪ್ರಮುಖ ವ್ಯಕ್ತಿ ಎಂದು ಸ್ಪಷ್ಟವಾಗಿದೆ. ಆದರೆ ಇವರನ್ನೇ ಸಿಎಂ ಮಾಡಲು ಪಕ್ಷದಲ್ಲಿ ಕೆಲವರು ಅಸಮಾಧಾನ ಹೊಂದಿದ್ದಾರೆ. ರೇವಂತ್ ರೆಡ್ಡಿ ಅವರು ಪ್ರಚಾರದ ಮುಖ ಮತ್ತು ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಜೊತೆಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಬೆಂಬಲದಿಂದ ಬಲಶಾಲಿಯಾಗಿರುವಂತೆ ಕಂಡುಬಂದಿದ್ದಾರೆ.
ದೇಶದ ಅತ್ಯಂತ ಹಿರಿಯ ಪಕ್ಷವಾಗಿರುವ ಕಾಂಗ್ರೆಸ್ ನಲ್ಲಿ ಎಲ್ಲವೂ ತಕ್ಷಣಕ್ಕೆ ನಿರ್ಧಾರವಾಗುವುದಿಲ್ಲ. ಮುಂಚೂಣಿಯಲ್ಲಿಯೇ ಇಲ್ಲದವರು ಕೂಡ ಸಿಎಂ ಆಗಿರುವ ಸಾಕಷ್ಟು ಉದಾಹರಣೆಗಳಿವೆ. ಪಕ್ಷದ ಇತಿಹಾಸ ಮತ್ತು ಆಕಾಂಕ್ಷಿಗಳ ಸಂಖ್ಯೆಯನ್ನು ಪರಿಗಣಿಸಿದರೆ ಸಿಎಂ ಆಯ್ಕೆ ಸರಳವಾಗಿಲ್ಲ.
ರೇವಂತ್ ರೆಡ್ಡಿ ಜನಪ್ರಿಯ ಆಯ್ಕೆಯಾಗಿದ್ದು, ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಮತ್ತು ಇತರ ಹಿರಿಯ ನಾಯಕರನ್ನು ಉಪಮುಖ್ಯಮಂತ್ರಿ ಅಥವಾ ಪ್ರಮುಖ ಖಾತೆಗಳೊಂದಿಗೆ ಸಚಿವರನ್ನಾಗಿ ಮಾಡಲು ರಾಜಿ ಸೂತ್ರಗಳನ್ನು ರೂಪಿಸಲಾಗುತ್ತಿದೆ. ಆದರೆ, 61 ವರ್ಷ ವಯಸ್ಸಿನ ಉತ್ತಮ್ ಕುಮಾರ್, 63ರ ಹಿರಿಯ ಭಟ್ಟಿ ವಿಕ್ರಮಾರ್ಕ, 58ರ ಹರೆಯದ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಮೊದಲಾದವರು ಕೂಡ ಸಿಎಂ ಹುದ್ದೆಯತ್ತ ಆಸೆ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಆಯ್ಕೆ ಕಾಂಗ್ರೆಸ್ ಹೈಕಮಾಂಡ್ ಗೆ ತಲೆನೋವಾಗಿ ಪರಿಣಮಿಸಿದೆ.




