ಭೋಪಾಲ್: 2003 ರಿಂದ 2018ರ ನಂತರ 15 ತಿಂಗಳ ಅವಧಿಯನ್ನು ಹೊರತುಪಡಿಸಿ ಮಧ್ಯಪ್ರದೇಶದಲ್ಲಿ ಆಡಳಿತ ನಡೆಸಿ, ಆಡಳಿತ ವಿರೋಧಿ ಅಲೆಯನ್ನು ಎದುರಿಸಿಯೂ ಬಿಜೆಪಿ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದೆ. ಆದರೆ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಈಗ ಎಲ್ಲೆಡೆ ಕೇಳಿಬರುತ್ತಿದೆ.
ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಸಿಎಂ ಎಂದು ಬಿಂಬಿಸದೆ ಚುನಾವಣೆ ಎದುರಿಸಿದ ಬಿಜೆಪಿ ರಾಜ್ಯದ 230 ಸ್ಥಾನಗಳ ಪೈಕಿ ಬಿಜೆಪಿ 163 ಸ್ಥಾನಗಳನ್ನು ಗೆದ್ದು ಬೀಗಿದೆ. ಇದರ ಶ್ರೇಯವನ್ನು ಪ್ರಧಾನಿ ಮೋದಿ ಮತ್ತು ಸಾಮೂಹಿಕ ನಾಯಕತ್ವ ಎಂದು ಬಿಂಬಿಸುವ ಯತ್ನ ಒಂದೆಡೆ ನಡೆದರೆ, ಇನ್ನೊಂದೆಡೆ ಗೆಲುವಿನಲ್ಲಿ ತಮ್ಮ ಪಾತ್ರವಿದೆ ಎಂದು ಸಾಬೀತುಗೊಳಿಸಲು ಶಿವರಾಜ್ ಸಿಂಗ್ ಚೌಹಾಣ್ ಯತ್ನಿಸುತ್ತಿದ್ದಾರೆ.
ಮೂರು ಕೇಂದ್ರ ಸಚಿವರು ಸೇರಿದಂತೆ ಏಳು ಸಂಸದರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಸಮಯದಲ್ಲೇ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಬದಿಗೊತ್ತುವುದು ನಿಶ್ಚಿತ ಎನ್ನಲಾಗಿತ್ತು. ಆದರೆ ರಾಜ್ಯ ಬಿಜೆಪಿ ಇತಿಹಾಸದಲ್ಲೇ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದ ಸಾಧನೆ ಮಾಡಿರುವ ಶಿವರಾಜ್ ಸಿಂಗ್ ಅವರನ್ನು ಇದೀಗ ಹುದ್ದೆಯಿಂದ ಬಿಡುಗಡೆಗೊಳಿಸುವ ಸಾಧ್ಯತೆ ಇದೆ.
ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಮತ್ತು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಹೆಸರುಗಳು ಇದೀಗ ಸಿಎಂ ರೇಸ್ ನಲ್ಲಿ ಪ್ರಮುಖ ಹೆಸರುಗಳಾಗಿ ಚಾಲ್ತಿಯಲ್ಲಿವೆ. ರಾಜ್ಯಾಧ್ಯಕ್ಷ ಮೊದಲ ಬಾರಿ ಸಂಸದರಾಗಿರುವ ವಿಡಿ ಶರ್ಮಾ, ಐದನೇ ಬಾರಿಗೆ ಶಾಸಕ ಮತ್ತು ರಾಜ್ಯ ಕ್ಯಾಬಿನೆಟ್ ಸಚಿವ ರಾಜೇಂದ್ರ ಶುಕ್ಲಾ ಅವರ ಹೆಸರುಗಳೂ ಕೇಳಿಬರುತ್ತಿವೆ.
ರಾಜ್ಯ ಘಟಕದ ಬಹುತೇಕರು ಶಿವರಾಜ್ ಸಿಂಗ್ ಚೌಹಾಣ್ ಮುಂದಿನ ಲೋಕಸಭೆ ಚುನಾವಣೆವರೆಗೂ ಸಿಎಂ ಪಟ್ಟದಲ್ಲಿ ಮುಂದುವರೆಯಬಹುದು ಎಂದು ನಂಬಿದ್ದಾರೆ. ಎಲ್ಲ ಬೆಳವಣಿಗೆಗಳ ನಡುವೆ ಪ್ರತಿಕ್ರಿಯೆ ನೀಡಿರುವ ಶಿವರಾಜ್ ಸಿಂಗ್ ಚೌಹಾಣ್, ನಾವು ಯಾರೂ ನಮ್ಮ ಬಗ್ಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ನಾವು ದೊಡ್ಡ ಮಿಷನ್ನ ಭಾಗವಾಗಿದ್ದೇವೆ. ನಾವು ಕಾರ್ಯಕರ್ತರು. ಪಕ್ಷ ಏನು ನಿರ್ಧರಿಸುತ್ತದೆಯೋ ಅದನ್ನು ಮಾಡುತ್ತೇವೆ ಎಂದಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ವಿಜಯವರ್ಗಿಯಾ, ಮಧ್ಯಪ್ರದೇಶದಲ್ಲಿ ಪಕ್ಷದ ಗೆಲುವಿನಲ್ಲಿ ಚೌಹಾಣ್ ಅವರ ಲಾಡ್ಲಿ ಬೆಹ್ನಾ ಯೋಜನೆ ಪಾತ್ರ ವಹಿಸುತ್ತಿದೆ ಎಂಬುದರ ಕುರಿತು ತಕರಾರು ತೆಗೆದಿದ್ದು, ರಾಜ್ಯ, ಛತ್ತೀಸ್ಗಢ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಗೆಲುವಿನ ಹಿಂದಿನ ಏಕೈಕ ಅಂಶವೆಂದರೆ ‘ಮೋದಿ ಮ್ಯಾಜಿಕ್’ ಎಂದು ಗೆಲುವಿನ ಶ್ರೇಯಸ್ಸನ್ನು ಮೋದಿಯವರ ಹೆಗಲಿಗೆ ಕಟ್ಟಲು ಮುಂದಾಗಿದ್ದಾರೆ.
ಛತ್ತೀಸ್ಗಢ ಮತ್ತು ರಾಜಸ್ಥಾನದಲ್ಲಿ ಲಾಡ್ಲಿ ಬೆಹನಾ ಯೋಜನೆ ಇದೆಯೇ? ನಿಮ್ಮಲ್ಲಿ ಕೆಲ ಪತ್ರಕರ್ತರು ನರೇಷನ್ ನಿರೂಪಿಸಲು ಪ್ರಯತ್ನಿಸುತ್ತಿದ್ದಾರೆ. ಮೂರು ಸ್ಥಳಗಳಲ್ಲಿ ಮೋದಿಜಿ ನಾಯಕತ್ವ ಸಾಮಾನ್ಯವಾಗಿತ್ತು. ಬಿಜೆಪಿ ನಾಯಕತ್ವದಿಂದಾಗಿ ರಾಜಸ್ಥಾನ ಮತ್ತು ಛತ್ತೀಸ್ಗಢ ಚುನಾವಣೆಯಲ್ಲಿ ಗೆದ್ದಿದೆ. ಗೆಲುವಿನ ಶ್ರೇಯ ಪ್ರಧಾನಿ ಮೋದಿಯವರದು ಎಂದರು.
ಸಿಎಂ ರೇಸ್ ನಲ್ಲಿರುವ ಇಬ್ಬರು ಒಬಿಸಿ ನಾಯಕರ ಪೈಕಿ, ಬುಂದೇಲ್ಖಂಡ್, ಮಹಾಕೋಶಲ್, ಕೇಂದ್ರ ಸಂಸದ ಮತ್ತು ಗ್ವಾಲಿಯರ್-ಚಂಬಲ್ ಪ್ರದೇಶದಲ್ಲಿ ಪಕ್ಷದ ಯಶಸ್ಸಿಗೆ ವ್ಯಾಪಕವಾಗಿ ಶ್ರಮ ಹಾಕಿದ ಪ್ರಹ್ಲಾದ್ ಸಿಂಗ್ ಪಟೇಲ್ ಹಳೆಯ ತಲೆ. ಲೋಧಿ ಜಾತಿಯ ನಾಯಕನನ್ನು ಆಯ್ಕೆ ಮಾಡುವುದು ಪಕ್ಕದ ಉತ್ತರ ಪ್ರದೇಶದ ಬುಂದೇಲ್ಖಂಡ್ ಮತ್ತು ರೋಹಿಲ್ಖಂಡ್ ಪ್ರದೇಶಗಳಲ್ಲಿ ಪಕ್ಷಕ್ಕೆ ಲಾಭಕರವಾಗಬಹುದು ಎಂಬ ಲೆಕ್ಕಾಚಾರದಲ್ಲಿ ಹೈಕಮಾಂಡ್ ಇದೆ.
ಜ್ಯೋತಿರಾದಿತ್ಯ ಸಿಂಧಿಯಾ ಅವರು ಗ್ವಾಲಿಯರ್-ಚಂಬಲ್ ಪ್ರದೇಶದಲ್ಲಿ ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2018 ರಲ್ಲಿ 7ರಲ್ಲಿ ಗೆದ್ದಿತ್ತು, ಇದೀಗ 18 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಜೊತೆಗೆ 2020ರಲ್ಲಿ ಸಿಂಧಿಯಾ ಬಂಡಾಯವೇ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕಾರಣವಾಗಿತ್ತು. ಇದು ರಾಜ್ಯದಲ್ಲಿ ಬಿಜೆಪಿ ಹಿಂಬಾಗಿಲ ಮೂಲಕ ಮತ್ತೊಮ್ಮೆ ಅಧಿಕಾರ ಹಿಡಿಯಲು ದಾರಿ ಮಾಡಿಕೊಟ್ಟಿತು.
ಆದರೆ, ಬಿಜೆಪಿ ಸೇರಿರುವ ಸಿಂದಿಯಾ ಪಕ್ಷದಲ್ಲಿ ಕೇವಲ ಮೂರೂವರೆ ವರ್ಷ ಕಳೆದಿದ್ದಾರೆ. ಅವರನ್ನು ಮುಖ್ಯಮಂತ್ರಿಯನ್ನಾಗಿಸುವುರಿಂದ ಪಕ್ಷದ ಹಳೆಯ ತಲೆಗಳ ನಡುವೆ ವಿರೋಧ ವ್ಯಕ್ತವಾಗಬಹುದು. ಮುಂಬರುವ ಲೋಕಸಭೆ ಚುನಾವಣೆ ವೇಳೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಚಿಂತನೆಯಲ್ಲಿ ಪಕ್ಷವಿದೆ. ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ಕುತೂಹಲ ಮೂಡಿದೆ.



